Tag: Lucknow Super Giants

  • IPL 2023: ಮಾರ್ಕ್‌ ಮಾರಕ ಬೌಲಿಂಗ್‌, ಡೆಲ್ಲಿಗೆ ಡಿಚ್ಚಿ ಕೊಟ್ಟ ಲಕ್ನೋ – ರಾಹುಲ್‌ ಸೈನ್ಯಕ್ಕೆ 50 ರನ್‌ಗಳ ಭರ್ಜರಿ ಜಯ

    IPL 2023: ಮಾರ್ಕ್‌ ಮಾರಕ ಬೌಲಿಂಗ್‌, ಡೆಲ್ಲಿಗೆ ಡಿಚ್ಚಿ ಕೊಟ್ಟ ಲಕ್ನೋ – ರಾಹುಲ್‌ ಸೈನ್ಯಕ್ಕೆ 50 ರನ್‌ಗಳ ಭರ್ಜರಿ ಜಯ

    ಲಕ್ನೋ: ಕೇಲ್‌ ಮೇಯರ್ಸ್‌ ಬೆಂಕಿ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capital) ವಿರುದ್ಧ 50 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, 16ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2023) ಶುಭಾರಂಭ ಪಡೆದುಕೊಂಡಿದೆ.

    ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆ.ಎಲ್‌.ರಾಹುಲ್‌ (KL Rahul) ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 193 ರನ್‌ ಸಿಡಿಸಿತ್ತು. 194 ರನ್‌ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಚೇಸಿಂಗ್‌ ಆರಂಭಿಸಿದ ಡೆಲ್ಲಿ ತಂಡ ಉತ್ತಮ ಶುಭಾರಂಭ ಪಡೆದುಕೊಂಡಿತ್ತು. ಮೊದಲ ವಿಕೆಟ್‌ ಪತನಕ್ಕೆ 4.3 ಓವರ್‌ಗಳಲ್ಲಿ 41 ರನ್‌ ಕಲೆಹಾಕಿತ್ತು. ಆ ನಂತರ ತಂಡದ ಒಂದೊಂದೇ ವಿಕೆಟ್‌ ಪತನಗೊಂಡಿತು.

    ಡೆಲ್ಲಿ ತಂಡದಲ್ಲಿ ನಾಯಕ ಡೇವಿಡ್‌ ವಾರ್ನರ್‌ (David Warner) ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾದರು. ಡೇವಿಡ್‌ ವಾರ್ನರ್‌ 48 ಎಸೆತಗಳಲ್ಲಿ 56 ರನ್‌ (7 ಬೌಂಡರಿ), ರಿಲೀ ರೋಸೌವ್ 20 ಎಸೆತಗಳಲ್ಲಿ 30 ರನ್‌ ಗಳಿಸಿದ್ದು ಬಿಟ್ಟರೆ, ಯಾರೊಬ್ಬರು ಹೆಚ್ಚುವರಿ ರನ್‌ ಕೊಡುಗೆ ನೀಡಲಿಲ್ಲ. ಇದರಿಂದ ತಂಡ ಹೀನಾಯ ಸೋಲಿಗೆ ಗುರಿಯಾಯಿತು.

    ಪೃಥ್ವಿ ಶಾ 12 ರನ್‌, ಸರ್ಫರಾಜ್‌ ಖಾನ್‌ 4 ರನ್‌, ರೋಮ್ನನ್‌ ಪೋವೆಲ್‌ 1 ರನ್‌, ಅಮಮಾನ್‌ ಹಕೀಮ್‌ ಖಾನ್‌ 4 ರನ್‌ ಗಳಿಸಿದರೆ, ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಮಿಚೆಲ್‌ ಮಾರ್ಚ್‌ (Mitchell Marsh) ಶೂನ್ಯಕ್ಕೆ ಔಟಾಗಿ ಕೈಕೊಟ್ಟರು. ಕೊನೆಯಲ್ಲಿ ಅಕ್ಷರ್‌ ಪಟೇಲ್‌ 16 ರನ್‌, ಚೇತನ್‌ ಸಕಾರಿಯಾ 4 ರನ್‌ ಗಳಿಸಿ ಔಟಾದರು. ಕುಲ್‌ದೀಪ್‌ ಯಾದವ್‌ 6 ರನ್‌, ಮುಕೇಶ್‌ ಕುಮಾರ್‌ ಯಾವುದೇ ರನ್‌ ಗಳಿಸದೇ ಕ್ರೀಸ್‌ನಲ್ಲಿ ಉಳಿದರು.

    ಮಿಂಚಿದ ಮಾರ್ಕ್‌:
    16ನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲೇ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮಾರ್ಕ್‌ ವುಡ್‌ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಗೆಲುವಿಗೆ ಕಾರಣರಾದರು. ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರ ಮಾರ್ಕ್‌ ವುಡ್‌ (Mark Wood) 5 ವಿಕೆಟ್‌ ಕಿತ್ತರೆ, ಅವೇಶ್‌ ಖಾನ್‌, ರವಿ ಬಿಷ್ಣೋಯ್ ತಲಾ 2 ವಿಕೆಟ್‌ ಕಿತ್ತು ಮಿಂಚಿದರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಕೇಲ್ ಮೇಯರ್ಸ್ ಸ್ಫೋಟಕ ಪ್ರದರ್ಶನ ನೀಡಿ ಮಿಂಚಿದರು. ಆರಂಭದಲ್ಲಿ ಕೆ.ಎಲ್‌ ರಾಹುಲ್‌ ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿತ್ತು. ಆ ನಂತರ ಕೇಲ್ ಮೇಯರ್ಸ್ ಅಬ್ಬರ ಶುರುವಾಯಿತು.

    ಆರಂಭಿಕ ಆಟಗಾರ ಕೇಲ್ ಮೇಯರ್ಸ್ (Kyle Mayers) ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗ ಬೆಂಡೆತ್ತಿದರು. 2ನೇ ವಿಕೆಟ್‌ಗೆ ದೀಪಕ್ ಹೂಡಾ ಅವರೊಂದಿಗೆ ಭರ್ಜರಿ 79 ರನ್‌ಗಳ ಜೊತೆಯಾಟ ಆಡಿದರು. ಈ ನಡುವೆ ದೀಪಕ್‌ ಹೂಡಾ 17 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಮೇಯರ್ಸ್‌ ಸಹ 38 ಎಸೆತಗಳಲ್ಲಿ 73 ರನ್ (7 ಸಿಕ್ಸರ್‌, 3 ಬೌಂಡರಿ) ಚಚ್ಚಿ ಔಟಾದರು.

    ಕೊನೆಯ ಹಂತದಲ್ಲಿ ನಿಕೋಲಸ್‌ ಪೂರನ್ ಕೂಡ ಅದ್ಭುತ ಪ್ರದರ್ಶನ ನೀಡಿದ್ದು 36 ರನ್‌ಗಳ ಕೊಡುಗೆ ನೀಡಿದರು. ಯುವ ಆಟಗಾರ ಆಯುಷ್ ಬದೋನಿ ಕೂಡ ಸ್ಫೋಟಕ ಬ್ಯಾಟಿಂಗ್‌ ನಡೆಸಿ, ತಂಡದ ಮೊತ್ತ 193ಕ್ಕೆ ತಂದು ನಿಲ್ಲಿಸಿದರು. ಆಯುಷ್ ಬದೋನಿ 2 ಭರ್ಜರಿ ಸಿಕ್ಸರ್‌, 1 ಬೌಂಡರಿಯೊಂದಿಗೆ 7 ಎಸೆತಗಳಲ್ಲಿ 18 ರನ್‌ಗಳಿಸಿದರು.

    ಡೆಲ್ಲಿ ಪರ ಖಲೀಲ್‌ ಅಹ್ಮದ್‌, ಚೇತನ್‌ ಸಕಾರಿಯಾ ತಲಾ 2 ವಿಕೆಟ್‌ ಪಡೆದರೆ, ಅಕ್ಷರ್‌ ಪಟೇಲ್‌, ಕುಲ್‌ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ರಿಷಭ್ ಪಂತ್ ತಂಡದ ಹೃದಯ, ಆತ್ಮವಿದ್ದಂತೆ: ಪಾಂಟಿಂಗ್

    ರಿಷಭ್ ಪಂತ್ ತಂಡದ ಹೃದಯ, ಆತ್ಮವಿದ್ದಂತೆ: ಪಾಂಟಿಂಗ್

    ನವದೆಹಲಿ: ರಿಷಭ್ ಪಂತ್ (Rishabh Pant) ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ಹೃದಯ ಮತ್ತು ಆತ್ಮವಿದ್ದಂತೆ ಎಂದು ಕೋಚ್ ರಿಕ್ಕಿ ಪಾಂಟಿಂಗ್ (Ricky Ponting) ಹೇಳಿದ್ದಾರೆ.

    ಪಂತ್ ಅವರನ್ನು ನೆನಪಿಸಿಕೊಂಡ ಪಾಂಟಿಂಗ್, ಪ್ರತಿ ಪಂದ್ಯದಲ್ಲಿಯೂ ಡಗೌಟ್‍ನಲ್ಲಿ ನನ್ನ ಬಳಿಯೇ ಪಂತ್ ಕುಳಿತುಕೊಳ್ಳುತ್ತಿದ್ದರು. ಆದರೆ ಅದು ಈಗ ಸಾಧ್ಯವಾಗುತ್ತಿಲ್ಲ. ಅವರನ್ನು ಸಾಧ್ಯವಾದಷ್ಟು ರೀತಿಯಲ್ಲಿ ತಂಡದ ಭಾಗವಾಗಿ ಮಾಡಲು ಬಯಸುತ್ತೇವೆ. ನಾವು ಅವರ ಸಂಖ್ಯೆಯನ್ನು ಜೆರ್ಸಿ ಅಥವಾ ಕ್ಯಾಪ್‍ಗಳ ಮೇಲೆ ಇರಲಿದೆ. ಅವರ ಅನುಪಸ್ಥಿತಿಯಲ್ಲಿಯೂ ಅವರು ನಮ್ಮ ನಾಯಕರಾಗಿತ್ತಾರೆ ಎಂದಿದ್ದಾರೆ. ಇದನ್ನೂ ಓದಿ: IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?

    ಅಪಘಾತದಿಂದಾಗಿ ತೀವ್ರ ಗಾಯಗೊಂಡಿದ್ದ ಕ್ಯಾಪ್ಟನ್ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿದ್ದು ಈ ಬಾರಿಯ ಐಪಿಎಲ್‍ನಲ್ಲಿ ಆಡುತ್ತಿಲ್ಲ. ಪಂತ್ ಗೈರಿನಲ್ಲಿ ತಂಡವನ್ನು ಡೆವಿಡ್ ವಾರ್ನರ್ (David Warner) ಮುನ್ನಡೆಸಲಿದ್ದಾರೆ. ಆದರೆ ವಾರ್ನರ್ ನಾಯಕತ್ವ ವಿಚಾರ ಇನ್ನೂ ಅಂತಿಮಗೊಳಿಸಿಲ್ಲ

    ಕಳೆದ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ 14 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಸಾಧಿಸಿ, ಐದನೇ ಸ್ಥಾನವನ್ನು ಪಡೆದಿತ್ತು. ಏ.1ರಂದು ಲಕ್ನೋದಲ್ಲಿ ನಡೆಯಲಿರುವ ಆರಂಭಿಕ ಐಪಿಎಲ್ (IPL) ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ( Lucknow Super Giants) ವಿರುದ್ಧ ಸೆಣಸಲಿದೆ. ಇದನ್ನೂ ಓದಿ: ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ

     

     

  • ಹೊಸ ಜೆರ್ಸಿ ಅನಾವರಣಗೊಳಿಸಿದ ಲಕ್ನೋ ಸೂಪರ್ ಜೈಂಟ್ಸ್

    ಹೊಸ ಜೆರ್ಸಿ ಅನಾವರಣಗೊಳಿಸಿದ ಲಕ್ನೋ ಸೂಪರ್ ಜೈಂಟ್ಸ್

    ಬೆಂಗಳೂರು: ಮಾರ್ಚ್ 31ರಿಂದ 16ನೇ ಐಪಿಎಲ್ (IPL 2023) ಆವೃತ್ತಿ ಆರಂಭವಾಗುತ್ತಿದ್ದು, ಕೆಲವೇ ದಿನಗಳು ಬಾಕಿಯಿದ್ದು, ಭರ್ಜರಿ ತಾಲೀಮು ಶುರು ಮಾಡಿರುವ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡವು ಹೊಸ ಸಮವಸ್ತ್ರದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.

    ತನ್ನ 2ನೇ ಆವೃತ್ತಿಯಲ್ಲೇ ತಿಳಿ ಹಸಿರು ಬಣ್ಣಕ್ಕೆ ಗುಡ್‌ಬೈ ಹೇಳಿರುವ ಲಕ್ನೋ ತಂಡ ಈ ಬಾರಿ ಗಾಢ ನೀಲಿ (ಡಾರ್ಕ್ ಬ್ಲೂ) ಬಣ್ಣದ ಜೆರ್ಸಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಎಲ್‌ಎಸ್‌ಜಿ ಫ್ರಾಂಚೈಸಿ ಮಾಲೀಕರಾದ ಸಂಜೀವ್ ಗೋಯೆಂಕಾ, ನಾಯಕ ಕೆ.ಎಲ್ ರಾಹುಲ್ (KL Rahul), ಮೆಂಟರ್ ಗೌತಮ್ ಗಂಭೀರ್ (Goutam Gambhir) ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಹೊಸ ಬಣ್ಣದ ಜೆರ್ಸೆಯನ್ನ ಅನಾವರಣಗೊಳಿಸಿದ್ದಾರೆ.

    2022ರ 15ನೇ ಆವೃತ್ತಿಯೊಂದಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಲಕ್ನೋ ತಂಡ 2ನೇ ಆವೃತ್ತಿಗೆ ಜೆರ್ಸಿಯ ಬಣ್ಣ ಬದಲಿಸಿದೆ. ಇದನ್ನು ಕಂಡ ಅಭಿಮಾನಿಗಳು ಇದು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಸಮವಸ್ತ್ರವಿದ್ದಂತೆ ಕಾಣ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕೊಹ್ಲಿ ಪರಂಪರೆ ಮುಂದುವರಿಸಿದ ಮಂದಾನ – ಹೀನಾಯ ಸೋಲಿನ ಬೆನ್ನಲ್ಲೇ ಅಭಿಮಾನಿಗಳಿಂದ ಕಿಡಿ

    ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡ ಮೊದಲ ಆವೃತ್ತಿಯಲ್ಲೇ ಪ್ಲೇ ಆಫ್ ಪ್ರವೇಶಿಸಿತ್ತು. 14 ಲೀಗ್ ಪಂದ್ಯಗಳ ಪೈಕಿ 9 ರಲ್ಲಿ ಜಯ ಸಾಧಿಸಿತ್ತು. ಆದರೆ ಆರ್‌ಸಿಬಿ (RCB) ಎದುರು ಸೋತು ಹೊರನಡೆದಿತ್ತು. ಈ ಬಾರಿ ಉತ್ತಮ ಕಂಬ್ಯಾಕ್ ಆಗಲು ಸಜ್ಜಾಗಿದೆ. ಇದನ್ನೂ ಓದಿ: 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿರುವ ಪ್ಯಾಟ್ – ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್ ಸಾರಥ್ಯ

    2013ರ ಐಪಿಎಲ್‌ಗೆ ಲಕ್ನೋ ತಂಡ: ಕೆಎಲ್ ರಾಹುಲ್ (ನಾಯಕ), ಆಯುಷ್ ಬದೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ’ಕಾಕ್, ಮಾರ್ಕಸ್ ಸ್ಟೊಯ್ನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡ, ಕೈಲ್ ಮೇಯರ್ಸ್, ಕೃಣಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ನಿಕೋಲಸ್ ಪೂರನ್, ನಿಕೋಲಸ್ ಪೂರನ್, ಜಯದೇವ್ ಉನಾದ್ಕತ್, ಯಶ್ ಠಾಕೂರ್, ರೊಮಾರಿಯೋ ಶೆಫರ್ಡ್, ಡೇನಿಯಲ್ ಸ್ಯಾಮ್ಸ್, ಅಮಿತ್ ಮಿಶ್ರಾ, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ನವೀನ್ ಉಲ್ ಹಕ್, ಯಧುವೀರ್ ಚರಕ್.

  • ಆರ್‌ಸಿಬಿಗಾಗಿ ಮದುವೆಯನ್ನೇ ಮುಂದೂಡಿದ್ದ ರಜತ್ ಪಾಟಿದಾರ್

    ಆರ್‌ಸಿಬಿಗಾಗಿ ಮದುವೆಯನ್ನೇ ಮುಂದೂಡಿದ್ದ ರಜತ್ ಪಾಟಿದಾರ್

    ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ಆರ್‌ಸಿಬಿ ತಂಡದ ರಜತ್ ಪಾಟಿದಾರ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

    IPL 2022 RCB (3)

    ಹೌದು ಆರ್‌ಸಿಬಿ ತಂಡದಲ್ಲಿ ಪಾಟಿದಾರ್ ಎಂಬ ಆಟಗಾರ ಇದ್ದಾರೆ ಎಂಬುದೇ ಗೊತ್ತಿರಲಿಲ್ಲ. ಆದರೆ, ಲಕ್ನೋ ವಿರುದ್ಧದ ಪಂದ್ಯದಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಲಕ್ಷಾಂತರ ಕ್ರೀಡಾಭಿಮಾನಿಗಳ ಮನದಲ್ಲಿ ಉಳಿಯುವಂತೆ ಮಾಡಿದೆ. ಇದನ್ನೂ ಓದಿ: ಸೋಲಿನ ಬಳಿಕ ನಾಯಕ ರಾಹುಲ್‌ನನ್ನು ದಿಟ್ಟಿಸಿದ ಗಂಭೀರ್ – ನೆಟ್ಟಿಗರಿಂದ ಟ್ರೋಲ್

    ಪಾಟಿದಾರ್ ಅವರ ಅದ್ಭುತ ಬ್ಯಾಟಿಂಗ್‌ನಿಂದ ಆರ್‌ಸಿಬಿ ರಾಜಾಸ್ಥಾನ್ ರಾಯಲ್ಸ್ ವಿರುದ್ಧ 2ನೇ ಕ್ವಾಲಿಫೈಯರ್‌ಗೆ ಲಗ್ಗೆಯಿಟ್ಟಿದೆ. ಲುವ್ನಿತ್ ಸಿಸೋಡಿಯಾ ಅವರು ಗಾಯಗೊಂಡಿದ್ದರಿಂದಾಗಿ ಅವರ ಬದಲಾಗಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ರಜತ್ ಆರ್‌ಸಿಬಿಗಾಗಿ ಆಡಲು ತನ್ನ ಮದುವೆಯನ್ನೇ ಮುಂದೂಡಿದ್ದಾರೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ನಾವು ಸೋಲಲು ಇದೇ ಕಾರಣ – ಬೇಸರ ವ್ಯಕ್ತಪಡಿಸಿದ ಕೆ.ಎಲ್ ರಾಹುಲ್

    IPL 2022 RCB (3)

    ಇದೇ ತಿಂಗಳ ಮೇ 9ರಂದು ಪಾಟಿದಾರ್ ಮದುವೆ ನಿಗದಿಯಾಗಿತ್ತು. ಸಣ್ಣ ಸಮಾರಂಭದಲ್ಲಿ ಮದುವೆ ಮಾಡಿಕೊಳ್ಳುವುದಕ್ಕಾಗಿ ಇಂಧೋರ್‌ನಲ್ಲಿ ಹೋಟೆಲ್ ಸಹ ಕಾಯ್ದಿರಿಸಲಾಗಿತ್ತು. ಈಗ ಆರ್‌ಸಿಬಿಗಾಗಿ ಆಡಲು ಮುಂದಾಗಿರುವ ರಜತ್ ಮುಂದಿನ ಜೂನ್ ತಿಂಗಳಲ್ಲಿ ರಜತ್ ಮದುವೆಯಾಗಲಿದ್ದಾರೆ ಎಂದು ರಜತ್ ತಂದೆ ಮನೋಹತ್ ಪಾಟಿದಾರ್ ಹೇಳಿದ್ದಾರೆ.

  • ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ಕೋಲ್ಕತ್ತಾ: ಬ್ಯಾಟ್ಸ್‌ಮ್ಯಾನ್‌ಗಳ ಮೇಲಾಟಕ್ಕೆ ಸಾಕ್ಷಿಯಾದ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಆರ್‌ಸಿಬಿ 14 ರನ್‍ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ 2ನೇ ಎಲಿಮಿನೇಟರ್ ಪಂದ್ಯಕ್ಕೆ ಲಗ್ಗೆ ಇಟ್ಟರೆ, ಲಕ್ನೋ ಈ ಸೋಲಿನೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

    ಕೋಲ್ಕತ್ತಾದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿದರೆ, ಪಂದ್ಯ ಆರಂಭದ ಬಳಿಕ ರನ್ ಮಳೆ ಸುರಿಯಿತು.ಆರ್‌ಸಿಬಿ ನೀಡಿದ 208 ರನ್‍ಗಳ ಬೃಹತ್ ಮೊತ್ತ ಗುರಿ ಬೆನ್ನಟ್ಟಿದ ಲಕ್ನೋ ತಂಡಕ್ಕೆ ನಾಯಕ ಕೆ.ಎಲ್ ರಾಹುಲ್ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಆರಂಭದಿಂದಲೂ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ರಾಹುಲ್ ಕೊನೆಯಲ್ಲಿ ತಾಳ್ಮೆ ಕಳೆದುಕೊಂಡು 79 ರನ್ (58 ಎಸೆತ, 3 ಬೌಂಡರಿ, 5 ಸಿಕ್ಸ್) ಬಾರಿಸಿ ಔಟ್ ಆದರು. ಇತ್ತ ಕೊನೆಯ ಎರಡು ಓವರ್‌ಗಳಲ್ಲಿ ಕಂಬ್ಯಾಕ್ ಮಾಡಿದ ಆರ್‌ಸಿಬಿ ಬೌಲರ್‌ಗಳು ಅನಿರೀಕ್ಷಿತ ಜಯ ತಂದುಕೊಟ್ಟು ಈ ಸಲ ಕಪ್ ನಮ್ದೇ ಆಸೆಗೆ ಜೀವ ತುಂಬಿದ್ದಾರೆ. ಈ ಗೆಲುವಿನೊಂದಿಗೆ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡ ರಾಜಸ್ಥಾನವನ್ನು ಎದುರಿಸಲಿದೆ.

    ಬೃಹತ್ ಮೊತ್ತದ ಗುರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಡಿಕಾಕ್, ರಾಹುಲ್ ಜೋಡಿ ಆರಂಭದಲ್ಲೇ ಎಡವಿತು. 1 ಸಿಕ್ಸ್ ಸಹಿತ ಅಬ್ಬರಿಸುವ ಸೂಚನೆ ಹೊರಡಿಸಿದ ಡಿಕಾಕ್ ಆಟ ಡುಪ್ಲೆಸಿಸ್ ಹಿಡಿದ ಉತ್ತಮ ಕ್ಯಾಚ್‍ನೊಂದಿಗೆ ಅಂತ್ಯವಾಯಿತು. ಬಳಿಕ ಬಂದ ಮನನ್ ವೋಹ್ರಾ, ರಾಹುಲ್ ಜೊತೆಗೂಡಿ ಪವರ್ ಪ್ಲೇನಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಆರ್‌ಸಿಬಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದರು. ಆದರೆ ವೋಹ್ರಾ ಆಟ 19 ರನ್ (11 ಎಸೆತ, 1 ಬೌಂಡರಿ, 2 ಸಿಕ್ಸ್‌ಗೆ ಅಂತ್ಯಗೊಂಡಿತು. ಬಳಿಕ ದೀಪಕ್ ಹೂಡಾ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. ಈ ಜೋಡಿ ಪಂದ್ಯವನ್ನು ಗೆಲುವಿಗೆ ಹತ್ತಿರ ಕೊಂಡೊಯ್ಯುತ್ತಿದ್ದಂತೆ ದಾಳಿಗಿಳಿದ ಹಸರಂಗ ಸೂಪರ್ ಸ್ಪೇಲ್‍ಗೆ ಹೂಡಾ ಕ್ಲೀನ್ ಬೌಲ್ಡ್ ಆದರು. ಆದರೆ ಈ ಮೊದಲು 45 ರನ್ (26 ಎಸೆತ, 1 ಬೌಂಡರಿ, 4 ಸಿಕ್ಸ್) ಬಾರಿಸಿ ರಾಹುಲ್ ಜೊತೆ 3ನೇ ವಿಕೆಟ್‍ಗೆ 96 ರನ್ (61 ಎಸೆತ) ಜೊತೆಯಾಟವಾಡಿ ತಂಡದ ಗೆಲುವಿಗೆ ಶ್ರಮಪಟ್ಟರು.

    ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಡುಪ್ಲೆಸಿಸ್ ಶೂನ್ಯ ಸುತ್ತಿ ಬಂದಷ್ಟೇ ವೇಗವಾಗಿ ಡಗೌಟ್ ಸೇರಿಕೊಂಡರು.

    ಆ ಬಳಿಕ ಒಂದಾದ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟ ತೊಡಗಿದರು. ಇತ್ತ ಪಾಟಿದಾರ್ ಮಾತ್ರ ಪವರ್ ಫುಲ್ ಹಿಟ್‍ಗಳ ಮೂಲಕ ಲಕ್ನೋಗೆ ಆರಂಭದಲ್ಲೇ ಎಚ್ಚರಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 25 ರನ್ (24 ಎಸೆತ, 2 ಬೌಂಡರಿ) ಸಿಡಿಸಿದ್ದ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ ಈ ಜೋಡಿ 66 ರನ್ (46 ಎಸೆತ) ಜೊತೆಯಾಟವಾಡಿ ಮಿಂಚಿತು.

    ಪಾಟಿದಾರ್ ಚೊಚ್ಚಲ ಶತಕ:
    ಕೊಹ್ಲಿ ಬಳಿಕ ಬಂದ ಮಾಕ್ಸ್‌ವೆಲ್ ಆಟ 1 ಸಿಕ್ಸ್ ಸಹಿತ 9 ರನ್‍ಗಳಿಗೆ ಅಂತ್ಯವಾಯಿತು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ ಇನ್ನೊಂದು ಕಡೆ ಪಾಟಿದರ್ ಲಕ್ನೋ ಬೌಲರ್‌ಗಳ ಪ್ರತಿ ಎಸೆತಗಳನ್ನು ಬೌಂಡರಿ, ಸಿಕ್ಸ್ ಸಿಡಿಸುವ ಮೂಲಕ ಘರ್ಜಿಸಲಾರಂಭಿಸಿದರು. ಇನ್ನೊಂದೆಡೆ ಲಕ್ನೋ ಫೀಲ್ಡರ್‌ಗಳು ಸಾಕಷ್ಟು ಕ್ಯಾಚ್‌ಗಳನ್ನು ಕೈಚೆಲ್ಲಿ ಕೈ ಸುಟ್ಟುಕೊಂಡರು. ಡೆತ್ ಓವರ್‌ಗಳಂತೂ ದಿನೇಶ್ ಕಾರ್ತಿಕ್ ಮತ್ತು ಪಾಟಿದರ್ ಅಬ್ಬರಿಸಿ ಬೊಬ್ಬಿರಿದರು. ಅದರಲ್ಲೂ ಲಕ್ನೋ ಬೌಲರ್ ರವಿ ಬಿಷ್ಣೋಯ್ ಎಸೆದ 16ನೇ ಓವರ್‌ನಲ್ಲಿ 2 ಬೌಂಡರಿ, 3 ಸಿಕ್ಸ್ ಸಹಿತ ಬರೋಬ್ಬರಿ 26 ಕಸಿದ ಪಾಟಿದರ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಚೊಚ್ಚಲ ಶತಕ ಬಾರಿಸಿ ಆರ್‌ಸಿಬಿ ಪಾಳಯದಲ್ಲಿ ಹರುಷ ತಂದರು.

    ಅಂತಿಮವಾಗಿ ಪಾಟಿದರ್ ಅಜೇಯ 112 ರನ್ (54 ಎಸೆತ, 12 ಬೌಂಡರಿ, 7 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 37 ರನ್ (23 ಎಸೆತ, 5 ಬೌಂಡರಿ, 1 ಸಿಕ್ಸ್) ಸಹಿತ 5ನೇ ವಿಕೆಟ್‍ಗೆ ಅಜೇಯ 92 ರನ್ (41 ಎಸೆತ) ಜೊತೆಯಾಟವಾಡಿ ರನ್ ಮಳೆ ಸುರಿಸಿತು. ಅಂತಿಮವಾಗಿ ಆರ್‌ಸಿಬಿ ತಂಡ 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 207 ರನ್‍ಗಳ ಬೃಹತ್ ಮೊತ್ತ ಪೇರಿಸಿತು.

    ರನ್ ಏರಿದ್ದು ಹೇಗೆ?
    50 ರನ್ 35 ಎಸೆತ
    100 ರನ್ 72 ಎಸೆತ
    150 ರನ್ 97 ಎಸೆತ
    200 ರನ್ 117 ಎಸೆತ
    207 ರನ್ 120 ಎಸೆತ

  • ಇಂದು ಎಲಿಮಿನೇಟರ್ ಪಂದ್ಯ – ಆರ್‌ಸಿಬಿಗೆ ಲಕ್ನೋ ಸವಾಲು

    ಇಂದು ಎಲಿಮಿನೇಟರ್ ಪಂದ್ಯ – ಆರ್‌ಸಿಬಿಗೆ ಲಕ್ನೋ ಸವಾಲು

    ಕೋಲ್ಕತ್ತಾ: ಈಡನ್ ಗಾರ್ಡನ್ಸ್‌ನಲ್ಲಿಂದು ಐಪಿಎಲ್ 2022ರ ಎಲಿಮಿನೇಟರ್ 2ನೇ ಪಂದ್ಯ ನಡೆಯಲಿದ್ದು, ಡುಪ್ಲೆಸಿ ಬಳಗಕ್ಕೆ ಕನ್ನಡಿಗ ರಾಹುಲ್ ನೇತೃತ್ವದ ಲಕ್ನೋ ತಂಡವು ಎದುರಾಗಲಿದೆ.

    ಐಪಿಎಲ್‍ನಲ್ಲಿ ಇದೇ ಮೊದಲ ಬಾರಿ ಕಣಕ್ಕಿಳಿದಿರುವ ಹೊಸ ತಂಡ ಲಕ್ನೋ ಲೀಗ್ ಹಂತದಲ್ಲಿ ತನ್ನ ಚರಣದ 14 ಪಂದ್ಯಗಳನ್ನಾಡಿ 9ರಲ್ಲಿ ಜಯಗಳಿಸಿದ್ದು, 5 ಪಂದ್ಯಗಳಲ್ಲಿ ಸೋತಿದೆ. ಟೂರ್ನಿಯ ಉದ್ದಕ್ಕೂ ಉತ್ತಮ ಪ್ರರ್ದಶನ ತೋರಿದ ರಾಹುಲ್ 2 ಮತ್ತು ಕ್ವಿಂಟನ್ ಡಿಕಾಕ್ ಒಂದು ಶತಕ ಗಳಿಸಿದ್ದಾರೆ. ಕೋಲ್ಕತ್ತಾ ನೈಟ್‍ರೈಡರ್ಸ್ ಎದುರಿನ ಪಂದ್ಯದಲ್ಲಿ ಇವರಿಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ ಅಜೇಯ 210 ರನ್ ಗಳಿಸಿ ದಾಖಲೆ ಬರೆದಿದ್ದರು. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

    ಎವಿನ್ ಲೂಯಿಸ್, ದೀಪಕ್ ಹೂಡಾ, ಆಲ್‍ರೌಂಡರ್‌ಗಳಾದ ಮಾರ್ಕಸ್ ಸ್ಟೊಯಿನಿಸ್ ಮತ್ತು ಜೇಸನ್ ಹೋಲ್ಡರ್ ಉತ್ತಮ ಫಾರ್ಮ್‍ನಲ್ಲಿರುವುದರಿಂದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆರಂಭಿಕ ಓವರ್‌ಗಳಲ್ಲಿಯೇ ವಿಕೆಟ್ ಗಳಿಸುವ ಆವೇಶ್ ಖಾನ್, ಮೊಹಸೀನ್ ಖಾನ್ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಅವರ ಮಾರಕ ಬೌಲಿಂಗ್ ಬೆಂಗಳೂರು ತಂಡಕ್ಕೆ ಸವಾಲಾಗಿ ನಿಂತಿದೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮಿಂಚಿದ ತ್ರಿಪಾಠಿಗೆ ಯಾಕಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ? – ರೊಚ್ಚಿಗೆದ್ದ ಅಭಿಮಾನಿಗಳು

    ಸತತ ವೈಫಲ್ಯಗಳ ನಂತರ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಫಾರ್ಮ್‍ಗೆ ಮರಳಿರುವುದು ತಂಡದಲ್ಲಿ ಉತ್ಸಾಹ ಹೆಚ್ಚಿಸಿದೆ. ನಾಯಕ ಡುಪ್ಲೆಸಿ, ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಆದರೆ ಬೌಲರ್‌ಗಳು ಸ್ಥಿರತೆ ಕಾಪಾಡಿಕೊಳ್ಳುವ ಸವಾಲು ತಂಡಕ್ಕೆ ಇದೆ. ಹರ್ಷಲ್ ಪಟೇಲ್, ಸ್ಪಿನ್ನರ್ ವಣಿಂದು ಹಸರಂಗಾ ಮತ್ತು ಜೋಶ್ ಹ್ಯಾಜಲ್‍ವುಡ್ ಅವರು ರಾಹುಲ್ ಪಡೆಯ ಅಬ್ಬರಕ್ಕೆ ತಡೆಯೊಡ್ಡುವಲ್ಲಿ ಸಫಲರಾದರೆ ಆರ್‌ಸಿಬಿಗೆ ಎರಡನೇ ಕ್ವಾಲಿಫೈಯರ್ ಪ್ರವೇಶಿಸುವ ಅವಕಾಶ ಲಭಿಸಬಹುದು.

    IPL

    ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕಾಗಿ ನಡೆದಿದ್ದ ಪೈಪೋಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು ಸೋತ ಕಾರಣಕ್ಕೆ ಆರ್‌ಸಿಬಿಯು ಹಾದಿ ಸುಗಮವಾಗಿತ್ತು. ಅದರಿಂದಾಗಿ ಸತತ ಮೂರನೇ ಆವೃತ್ತಿಯಲ್ಲಿಯೂ ಪ್ಲೇ ಆಫ್ ಪ್ರವೇಶಿಸಿದೆ.

  • RCBಗೆ ಇಂದು ಅಗ್ನಿಪರೀಕ್ಷೆ – ಗೆದ್ದರಷ್ಟೇ ಪ್ಲೆ-ಆಫ್ ಕನಸು ಜೀವಂತ

    RCBಗೆ ಇಂದು ಅಗ್ನಿಪರೀಕ್ಷೆ – ಗೆದ್ದರಷ್ಟೇ ಪ್ಲೆ-ಆಫ್ ಕನಸು ಜೀವಂತ

    ಮುಂಬೈ: ಐಪಿಎಲ್ ಟೂರ್ನಿಯ ಟಾಪ್ 4 ತಂಡಗಳಲ್ಲಿ ಕಾಣಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಇಂದು ನಿರ್ಣಾಯಕ ದಿನ.

    ಐಪಿಎಲ್‌ ಅಂಕಪಟ್ಟಿಯಲ್ಲಿ ಟಾಪ್- 1 ಆಗಿರೋ ಗುಜರಾತ್ ಟೈಟಾನ್ಸ್ ವಿರುದ್ಧ ಡು ಪ್ಲೆಸಿಸ್ ಪಡೆ ಶತಾಯಗತಾಯ ಗೆಲುವು ದಾಖಲಿಸಲೇಬೇಕಿದೆ. ಗೆಲುವಿನ ಹಿಂದೆ ನಾನಾ ಲೆಕ್ಕಾಚಾರಗಳೂ ಇವೆ. ಆರ್‌ಸಿಬಿ ಇಂದಿನ ಪಂದ್ಯ ಗೆದ್ದು, ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ವಿರುದ್ಧ ಸೋತರೆ ಮಾತ್ರವೇ ಆರ್‌ಸಿಬಿ ಪ್ಲೇ-ಆಫ್ ತಲುಪಲಿದೆ. ಇದನ್ನೂ ಓದಿ: ಸ್ಟೋಯಿನಿಸ್ ಸ್ಟನ್‌ ಬೌಲಿಂಗ್, ಡಿ ಕಾಕ್ ದರ್ಬಾರ್‌ – ಪ್ಲೇ ಆಫ್‍ಗೆ ಎರಡನೇ ತಂಡವಾಗಿ ಎಂಟ್ರಿಕೊಟ್ಟ ಲಕ್ನೋ

    IPL 2022 RCB VS SRH 5

    ಏಕೆಂದರೆ ಐಪಿಎಲ್ ಅಂಕಪಟ್ಟಿಯ ಮೊದಲ 4 ತಂಡಗಳಾಗಿ ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್‌ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮೊದಲ 4 ಸ್ಥಾನಗಳಲ್ಲಿವೆ. ಆರ್‌ಸಿಬಿ 5ನೇ ಸ್ಥಾನದಲ್ಲಿದೆ.

    ಇಂದು ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ ಗೆಲ್ಲಲೇಬೇಕಿದೆ. ಒಂದು ವೇಳೆ ರಿಷಭ್ ಪಂತ್ ಬಳಗಕ್ಕೆ, ರೋಹಿತ್ ಬಳಗ ಶರಣಾದರೆ ಆರ್‌ಸಿಬಿ ಪ್ಲೇ-ಆಫ್ ನಿಂದ ಹೊರಬೀಳಲಿದೆ. ಇದನ್ನೂ ಓದಿ: ಐರ್ಲೆಂಡ್ ಪ್ರವಾಸ – ಭಾರತ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್

    IPL

    ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ವಿರುದ್ಧ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ 2 ರನ್‌ಗಳ ರೋಚಕ ಜಯ ದಾಖಲಿಸಿದೆ. ಕ್ವಿಂಟನ್ ಡಿಕಾಕ್ 140, ರಾಹುಲ್ 68 ರನ್‌ಗಳ ಜೊತೆಯಾಟದಿಂದ ಸೂಪರ್ ಜೈಂಟ್ಸ್ ಬೃಹತ್ 210 ರನ್ ಗಳಿಸಿತ್ತು. ಇದಕ್ಕೆ ಕೋಲ್ಕತ್ತಾ ಕೂಡ ಭರ್ಜರಿ ಆಟವಾಡಿ 208 ರನ್‌ಗಳಿಸಿ, ಮಂಡಿಯೂರಿತು.

  • ರಾಜಸ್ಥಾನ ರಾಯಲ್ ಆಟ – ಲಕ್ನೋಗೆ ಕೈ ತಪ್ಪಿದ ಪ್ಲೇ ಆಫ್ ಖಾತ್ರಿ ಟಿಕೆಟ್

    ರಾಜಸ್ಥಾನ ರಾಯಲ್ ಆಟ – ಲಕ್ನೋಗೆ ಕೈ ತಪ್ಪಿದ ಪ್ಲೇ ಆಫ್ ಖಾತ್ರಿ ಟಿಕೆಟ್

    ಮುಂಬೈ: ರಾಜಸ್ಥಾನ ರಾಯಲ್ಸ್ ತಂಡದ ಕೆಚ್ಚೆದೆಯ ಹೋರಾಟದಿಂದಾಗಿ ಲಕ್ನೋ ವಿರುದ್ಧ 24 ರನ್‍ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ 16 ಅಂಕಗಳಿಸಿ ಲಕ್ನೋ ತಂಡದೊಂದಿಗೆ ಪ್ಲೇ ಆಫ್ ಫೈನಲ್ ಟಿಕೆಟ್‍ಗಾಗಿ ತೀವ್ರ ಸ್ಪರ್ಧೆಯೊಡ್ಡಿದೆ.

    ಕೊನೆಯ 12 ಎಸೆತಗಳಲ್ಲಿ 48 ರನ್‍ಗಳ ಗುರಿ ಪಡೆದ ಲಕ್ನೋ ತಂಡಕ್ಕೆ 19ನೇ ಓವರ್‌ನಲ್ಲಿ 15 ರನ್ ಬಂತು. ಕೊನೆಯ ಓವರ್‌ನಲ್ಲಿ 34 ರನ್ ಬೇಕಿತ್ತು. ಮಾರ್ಕಸ್ ಸ್ಟೊಯಿನಿಸ್ ಹೋರಾಟದ ಮುಂಚೂಣಿಯಲ್ಲಿದ್ದರೂ ಕೊನೆಯ ಓವರ್‌ನಲ್ಲಿ 27 ರನ್ (17 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಗೆಲುವಿನ ಆಸೆ ಕಮರಿತು. ಇತ್ತ ರಾಜಸ್ಥಾನ ಈ ಗೆಲುವಿನೊಂದಿಗೆ ಪ್ಲೇ ಆಫ್‍ಗೆ ಮತ್ತಷ್ಟು ಸನಿಹವಾಗಿದೆ.

    ಗೆಲ್ಲಲು 179 ರನ್‍ಗಳ ಗುರಿ ಪಡೆದ ಲಕ್ನೋ ತಂಡ ಗೆಲುವಿಗಾಗಿ ಹೋರಾಡಿ ಕೊನೆಗೆ 8 ವಿಕೆಟ್ ಕಳೆದುಕೊಂಡು 154 ರನ್ ಪೇರಿಸಲಷ್ಟೇ ಶಕ್ತವಾಗಿ ಪ್ಲೇ ಆಫ್ ಟಿಕೆಟ್ ಖಾತ್ರಿ ಪಡಿಸುವಲ್ಲಿ ವಿಫಲವಾಯಿತು.

    ಪೈಪೋಟಿಯ ಮೊತ್ತವನ್ನು ಬೆನ್ನಟ್ಟಿದ ಲಕ್ನೋ 29 ರನ್ ಆಗುವಷ್ಟರಲ್ಲಿ ಅಗ್ರಕ್ರಮಾಂಕದ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ದೀಪಕ್ ಹೂಡಾ ಮತ್ತು ಕೃನಾಲ್ ಪಾಂಡ್ಯ ಲಕ್ನೋ ತಂಡದ ಚೇಸಿಂಗ್ ಜವಾಬ್ದಾರಿ ವಹಿಸಿಕೊಂಡರು. ಈ ಜೋಡಿ 4ನೇ ವಿಕೆಟ್‍ಗೆ 65 ರನ್ (46 ಎಸೆತ) ಸಿಡಿಸಿ ಬೇರ್ಪಟ್ಟಿತು. ಪಾಂಡ್ಯ 25 ರನ್ (23 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ಇತ್ತ ಹೂಡಾ ಮಾತ್ರ ಹೂಡಿಬಡಿ ಆಟದ ಮೂಲಕ ಲಕ್ನೋಗೆ ಪ್ಲೇ ಆಫ್ ಟಿಕೆಟ್ ಕೊಡಿಸುವಲ್ಲಿ ಹೋರಾಡಿ ಕೊನೆಗೆ 59 ರನ್ (39 ಎಸೆತ, 5 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು.


    ಟಾಸ್ ಗೆದ್ದ ರಾಜಸ್ಥಾನ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ರಾಜಸ್ಥಾನದ ಪರ ಅಬ್ಬರದಾಟ ಪ್ರದರ್ಶಿಸುತ್ತಿದ್ದ ಜೋಸ್ ಬಟ್ಲರ್ 2 ರನ್‍ಗಳಿಗೆ ಸೈಲೆಂಟಾದರು. ಇತ್ತ ಯಶಸ್ವಿ ಜೈಸ್ವಾಲ್ ವೈಲೆಂಟ್ ಆಟಕ್ಕೆ ಮೊರೆ ಹೋದರು. ನಾಯಕ ಸಂಜು ಸ್ಯಾಮ್ಸನ್ ಜೊತೆ 2ನೇ ವಿಕೆಟ್‍ಗೆ 64 ರನ್(40 ಎಸೆತ) ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಸ್ಯಾಮ್ಸನ್ ಆಟ 32 ರನ್‍ಗೆ (24 ಎಸೆತ, 6 ಬೌಂಡರಿ)ಗೆ ಅಂತ್ಯಗೊಂಡಿತು.

    ಬಳಿಕ ಜೈಸ್ವಾಲ್ ಜೊತೆ ಕನ್ನಡಿಗ ದೇವದತ್ ಪಡಿಕ್ಕಲ್ ಅಬ್ಬರಿಸಲು ಆರಂಭಿಸಿದರು. ಕೆಲ ಕಾಲ ಲಕ್ನೋ ತಂಡದ ಬೌಲರ್‍ಗಳಿಗೆ ಕಾಟಕೊಟ್ಟ ಜೈಸ್ವಾಲ್ 41 ರನ್ (29 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ಪಡಿಕ್ಕಲ್ 39 ರನ್ (18 ಎಸೆತ, 5 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆಗಿ ಹೊರ ನಡೆದರು.

    ಆ ಬಳಿಕ ರಿಯಾನ್ ಪರಾಗ್ 19 ರನ್, ನಿಶಾಮ್ 14, ಅಶ್ವಿನ್ ಅಜೇಯ 10 ರನ್ ಮತ್ತು ಟ್ರೆಂಟ್ ಬೌಲ್ಟ್ 17 ರನ್‍ಗಳ ನೆರವಿನಿಂದ ರಾಜಸ್ಥಾನ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್‍ಗಳ ಉತ್ತಮ ಮೊತ್ತ ಪೇರಿಸಿತು.

  • ‘ಸಮ’ಬಲಶಾಲಿಗಳ ಹೋರಾಟದಲ್ಲಿ 62 ರನ್‌ಗಳ ಜಯ – ಪ್ಲೇ ಆಫ್‌ಗೆ ಗುಜರಾತ್ ಟೈಟನ್ಸ್ ಭರ್ಜರಿ ಎಂಟ್ರಿ

    ‘ಸಮ’ಬಲಶಾಲಿಗಳ ಹೋರಾಟದಲ್ಲಿ 62 ರನ್‌ಗಳ ಜಯ – ಪ್ಲೇ ಆಫ್‌ಗೆ ಗುಜರಾತ್ ಟೈಟನ್ಸ್ ಭರ್ಜರಿ ಎಂಟ್ರಿ

    ಮುಂಬೈ: ಐಪಿಎಲ್ 2022ರ 15ನೇ ಆವೃತ್ತಿಯಲ್ಲಿ ಹೊಸ ತಂಡವಾಗಿ ಸೇರ್ಪಡೆಗೊಂಡ ಗುಜರಾತ್ ಟೈಟನ್ಸ್, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 62 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. 15ನೇ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಇದಾಗಿದೆ.

    ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ಸಾಧಾರಣ ಮೊತ್ತ ದಾಖಲಿಸಿತು. ಲಕ್ನೋ ಸೂಪರ್ ಜೈಂಟ್ಸ್ ಗೆಲ್ಲಲು 145 ರನ್‌ಗಳ ಟಾರ್ಗೆಟ್ ನೀಡಿತು. ಈ ರನ್‌ಗಳ ಗುರಿ ಬೆನ್ನತ್ತಿದ ಲಕ್ನೋ ತಂಡವು 13.5 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 82 ರನ್ ಗಳನ್ನಷ್ಟೇ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    IPL 2022 GT VS LSG SHUBMAN GILL

    ಪ್ರಮುಖ ಬ್ಯಾಟ್ಸ್ಮನ್‌ಗಳ ವೈಫಲ್ಯ: ಲಕ್ನೋ ಸೂಪರ್ ಜೈಂಟ್ಸ್ ಬೌಲರ್‌ಗಳು ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನವನ್ನೇ ತೋರಿದರು. 144 ರನ್‌ಗಳಿಗೆ ಗುಜರಾತ್ ಟೈಟನ್ಸ್ ತಂಡವನ್ನು ಕಟ್ಟಿ ಹಾಕಿದರು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕಳಪೆ ಪ್ರದರ್ಶನ ತೋರಿದ್ದು, ತಂಡದ ಸೋಲಿಗೆ ಕಾರಣವಾಯ್ತು.

    ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ 8 ರನ್, ಕ್ವಿಂಟನ್ ಡಿಕಾಕ್ 11 ರನ್‌ಗಳಿಸಿ ನಿರ್ಗಮಿಸಿದ್ದು, ತಂಡಕ್ಕೆ ಆರಂಭಿಕ ಆಘಾತ ನೀಡಿತು. ನಂತರದಲ್ಲಿ ದೀಪಕ್ ಹೂಡಾ ಅವರ ಹೋರಾಟ 3 ಬೌಂಡರಿ ಸೇರಿ 27 ರನ್‌ಗಳನ್ನು ಹೊಡೆದರು. ನಂತರ ಸ್ಥಿರವಾಗಿ ನಿಲ್ಲದ ಆಟಗಾರರು ಒಂದಂಕಿಯ ರನ್‌ಗಳಿಸಿ ಪೆವಿಲಿಯನ್ ಸೇರಿದರು.

    IPL 2022 GT VS LSG - AVESH KHAN

    ಕರಣ್ ಶರ್ಮಾ 4, ಕೃನಾಲ್ ಪಾಂಡ್ಯ 5, ಮಾರ್ಕಸ್ ಸ್ಟೋಯ್ನಿಸ್ 2, ಆಯುಷ್ ಬದೋನಿ 8, ಜೇಸನ್ ಹೋಲ್ಡರ್ 1, ಮೊಹ್ಸಿನ್ ಖಾನ್ 1 ರನ್‌ಗಳಿಸಿದರು. ದುಷ್ಮಂತ ಚಮೀರ ಶೂನ್ಯಕ್ಕೆ ಅಜೇಯರಾಗುಳಿದರು.

    ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ಬೌಲರ್ ಆವೇಶ್ ಖಾನ್ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 26 ರನ್ ನೀಡಿ 5 ವಿಕೆಟ್ ಪಡೆದರು. ಇನ್ನುಳಿದಂತೆ ಮೊಹ್ಸಿನ್ ಖಾನ್, ಜೇಸನ್ ಹೋಲ್ಡರ್ ತಲಾ ಒಂದೊಂದು ವಿಕೆಟ್ ಪಡೆದರು.

    IPL 2022 GT VS LSG - RAHUL THEVATIYA

    ಟೈಟನ್ಸ್‌ಗೆ ಗಿಲ್ ಆಸರೆ: ಗುಜರಾತ್ ಟೈಟನ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಶುಭ್‌ಮನ್ ಗಿಲ್ ಮತ್ತು ವೃದ್ಧಿಮಾನ್ ಸಹಾ ಮೊದಲ ವಿಕೆಟ್‌ಗೆ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಎಡವಿದರು. 2.4 ಓವರ್‌ಗಳಾಗಿದ್ದಾಗ ವೃದ್ಧಿಮಾನ್ ಸಹಾ 11 ಎಸೆತಗಳಲ್ಲಿ 5 ರನ್ ಬಾರಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ವೇಡ್ 7 ಎಸೆತಗಳಲ್ಲಿ 10 ರನ್ ಕಲೆ ಹಾಕಿ ಔಟಾದರು.

    ಈ ನಡುವೆಯೂ ಗುಜರಾತ್ ತಂಡಕ್ಕೆ ಕೊನೆಯವರೆಗೂ ಆಸರೆಯಾಗಿ ನಿಂತವರು ಶುಭಮನ್ ಗಿಲ್. ಅವರ ಅರ್ಧಶತಕದ ನೆರವಿನಿಂದ ತಂಡವು 140 ರನ್ ಗಡಿ ದಾಟಿತು. 49 ಎಸೆತಗಳನ್ನು ಎದುರಿಸಿದ ಅವರು 7 ಫೋರ್ ಸಹಿತ ಅಜೇಯ 63 ರನ್ ದಾಖಲಿಸಿದರು. ನಿಗದಿತ 20 ಓವರ್‌ಗಳಲ್ಲಿ ತಂಡವು 4 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತು.

    IPL 2022 GT VS LSG -

    ಇದಕ್ಕೆ ಸಾಥ್ ನೀಡಿದ ಡೇವಿಡ್ ಮಿಲ್ಲರ್ (26 ರನ್) ಮತ್ತು ರಾಹುಲ್ ತೆವಾಟಿಯಾ (22 ರನ್) ಅವರ ಜೊತೆಯಾಟದಿಂದ ತಂಡವು 140 ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಪಾಯಕಾರಿ ಆಗಬಹುದಾಗಿದ್ದ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 11 ರನ್‌ಗಳನ್ನು ಗಳಿಸಿ ಅತೀ ಸುಲಭದ ಕೀಪರ್‌ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಬೆನ್ನಲ್ಲೇ ಮ್ಯಾಥ್ಯು ವೇಡ್ 10 ರನ್‌ಗಳಿಸಿ ಆವೇಶ್ ಖಾನ್ ಬೌಲಿಂಗ್‌ಗೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು.

    ಹೀಗೆ ಗುಜರಾತ್ ಟೈಟನ್ಸ್ ತಂಡದ ಪರ ಶುಭ್‌ಮನ್ ಗಿಲ್, ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತೇವಾಟಿಯಾ ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು.

  • ಕೆಕೆಆರ್ ವಿರುದ್ಧ 75 ರನ್‍ಗಳ ಜಯ – ಅಂಕಪಟ್ಟಿಯಲ್ಲಿ ಲಕ್ನೋ ಟಾಪ್

    ಕೆಕೆಆರ್ ವಿರುದ್ಧ 75 ರನ್‍ಗಳ ಜಯ – ಅಂಕಪಟ್ಟಿಯಲ್ಲಿ ಲಕ್ನೋ ಟಾಪ್

    ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ಆಟಕ್ಕೆ ಸ್ಟನ್ ಆದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗೆಲುವಿಗೆ 75 ರನ್ ಬೇಕಿರುವಾಗಲೇ ಅಲೌಟ್ ಆಗಿ ಹೀನಾಯ ಸೋಲನುಭವಿಸಿತು.

    ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್‍ಗಳ ಸವಾಲಿನ ಗುರಿ ನೀಡಿತ್ತು.

    ಕೆ.ಎಲ್ ರಾಹುಲ್ ಪಡೆಗೆ ಆರಂಭಿಕ ಆಘಾತ ಎದುರಾಗಿತ್ತು. ನಾಯಕ ಕೆ.ಎಲ್. ರಾಹುಲ್ ಖಾತೆ ತೆರೆಯುವ ಮುನ್ನವೇ ಔಟ್ ಆಗಿ ಶೂನ್ಯ ಸುತ್ತಿದರು. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‍ನಲ್ಲಿ ಮೂರನೇ ಬಾರಿಗೆ ಶೂನ್ಯ ಸುತ್ತಿದರು.

    ಎರಡನೇ ವಿಕೆಟ್‍ಗೆ ಕ್ವಿಂಟನ್ ಡಿ ಕಾಕ್ ಹಾಗೂ ದೀಪಕ್ ಹೂಡಾ ಅರ್ಧಶತಕದ (71) ಜೊತೆಯಾಟವನ್ನು ಆಡಿದರು. ಇವರಿಬ್ಬರು ಕೆಕೆಆರ್ ಬೌಲರ್‍ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಡಿ ಕಾಕ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರು. 29 ಎಸೆತಗಳನ್ನು ಎದುರಿಸಿದ ಡಿ ಕಾಕ್ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು.

    ಹೂಡಾ ಕೂಡ 41 ರನ್‍ಗಳ (27 ಎಸೆತ, 4 ಬೌಂಡರಿ, 2 ಸಿಕ್ಸರ್) ಮೂಲಕ ಉತ್ತಮವಾದ ಇನ್ನಿಂಗ್ಸ್ ಕಟ್ಟಿದರು. ಇನ್ನಿಂಗ್ಸ್‍ನ ಕೊನೆಯಲ್ಲಿ ಕೃಣಾಲ್ ಪಾಂಡ್ಯ (25) ಹಾಗೂ ಮಾರ್ಕಸ್ ಸ್ಟೋಯಿನಿಸ್ (28 ರನ್, 14 ಎಸೆತ) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

    ಅಂತಿಮವಾಗಿ ಲಖನೌ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಹೋಲ್ಡರ್ 13 ರನ್ ಗಳಿಸಿದರು. ಕೆಕೆಆರ್ ಪರ ಆಂಡ್ರೆ ರಸೆಲ್ ಎರಡು ಹಾಗೂ ಸುನಿಲ್ ನಾರಾಯಣ್ ಒಂದು ವಿಕೆಟ್ ಕಬಳಿಸಿದರು. ಇದೇ ಮೊದಲ ಬಾರಿ ಆಡುತ್ತಿರುವ ಲಕ್ನೋ, ಇದುವೆರೆಗೆ 11 ಪಂದ್ಯಗಳಲ್ಲಿ ಏಂಟರಲ್ಲಿ ಗೆದ್ದು ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಈ ಮೂಲಕ ಒಟ್ಟು 16 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

    11 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದು 7 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಎಂಟು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಈ ಮೂಲಕ ಶ್ರೇಯಸ್ ಪಡೆಗೆ ಪ್ಲೇ ಆಫ್ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ.

    ನಂತರದಲ್ಲಿ ಲಕ್ನೋ 176 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡವು ಖಾತೆ ತೆರೆಯುವ ಮುಂಚೆಯೇ ಶೂನ್ಯಕ್ಕೆ ಬಾಬಾ ಇಂದ್ರಜೀತ್ ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಕಂಡಿತು. ನಂತರದಲ್ಲಿ 25 ರನ್ ಗಳಿಸುವಷ್ಟರಲ್ಲಿಯೇ 3 ವಿಕೆಟ್‍ಗಳನ್ನು ಕಳೆದುಕೊಂಡು ಪೆವಿಲಿಯನ್‍ನತ್ತ ಪರೇಡ್ ನಡೆಸಿದರು. ತಂಡದ ನಾಯಕ ಶ್ರೇಯಸ್ ಆಯ್ಯರ್ ಕೂಡಾ ಹೇಳಿಕೊಳ್ಳುವಷ್ಟೇನು ಬ್ಯಾಟ್ ಬೀಸದೆ 9 ಎಸೆತಗಳಲ್ಲಿ 6 ರನ್ ಗಳಿಸುವಷ್ಟರಲ್ಲಿ ಚಾಮೀರಾಗೆ ವಿಕೆಟ್ ಒಪ್ಪಿಸಿದರು.

    6ನೇ ವಿಕೆಟ್‍ಗೆ ಜೊತೆಯಾದ ಜಮೈಕಾದ ದೈತ್ಯ ಆಟಗಾರರಾದ ರಸೆಲ್ 45 ಕೇವಲ (19 ಎಸೆತ, 3 ಬೌಂಡರಿ, 5 ಸಿಕ್ಸರ್) ಹೊಡೆದು ತಂಡದ ಗೆಲುವಿನ ಆಸೆಯನ್ನು ಕೊಂಚ ಚಿಗುರಿಸಿದರು. ನಂತರದಲ್ಲಿ ಆವೇಶ್ ಖಾನ್‍ಗೆ ವಿಕೆಟ್ ನೀಡಿ ನಿರ್ಗಮಿಸಿದರು. ಅದೇ ರೀತಿ ಸುನಿಲ್ ನರೈನ್ 22 ರನ್‍ಗಳನ್ನು ಬಾರಿಸಿ 3 ಬೌಂಡರಿ ಒಂದು ಸಿಕ್ಸರ್ ಬಾರಿಸಿ ಜೇಸನ್ ಹೋಲ್ಡರ್ ಅವರ ಬೌಲಿಂಗ್‍ನಲ್ಲಿ ಕೃಣಾಲ್ ಪಾಂಡ್ಯಗೆ ಕ್ಯಾಚ್ ನೀಡಿ ಪೆವಿಲಿಯನ್‍ನತ್ತ ಮುಖ ಮಾಡಿದರು.