Tag: LSG

  • ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ಕೋಲ್ಕತ್ತಾ: ಬ್ಯಾಟ್ಸ್‌ಮ್ಯಾನ್‌ಗಳ ಮೇಲಾಟಕ್ಕೆ ಸಾಕ್ಷಿಯಾದ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಆರ್‌ಸಿಬಿ 14 ರನ್‍ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ 2ನೇ ಎಲಿಮಿನೇಟರ್ ಪಂದ್ಯಕ್ಕೆ ಲಗ್ಗೆ ಇಟ್ಟರೆ, ಲಕ್ನೋ ಈ ಸೋಲಿನೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

    ಕೋಲ್ಕತ್ತಾದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿದರೆ, ಪಂದ್ಯ ಆರಂಭದ ಬಳಿಕ ರನ್ ಮಳೆ ಸುರಿಯಿತು.ಆರ್‌ಸಿಬಿ ನೀಡಿದ 208 ರನ್‍ಗಳ ಬೃಹತ್ ಮೊತ್ತ ಗುರಿ ಬೆನ್ನಟ್ಟಿದ ಲಕ್ನೋ ತಂಡಕ್ಕೆ ನಾಯಕ ಕೆ.ಎಲ್ ರಾಹುಲ್ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಆರಂಭದಿಂದಲೂ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ರಾಹುಲ್ ಕೊನೆಯಲ್ಲಿ ತಾಳ್ಮೆ ಕಳೆದುಕೊಂಡು 79 ರನ್ (58 ಎಸೆತ, 3 ಬೌಂಡರಿ, 5 ಸಿಕ್ಸ್) ಬಾರಿಸಿ ಔಟ್ ಆದರು. ಇತ್ತ ಕೊನೆಯ ಎರಡು ಓವರ್‌ಗಳಲ್ಲಿ ಕಂಬ್ಯಾಕ್ ಮಾಡಿದ ಆರ್‌ಸಿಬಿ ಬೌಲರ್‌ಗಳು ಅನಿರೀಕ್ಷಿತ ಜಯ ತಂದುಕೊಟ್ಟು ಈ ಸಲ ಕಪ್ ನಮ್ದೇ ಆಸೆಗೆ ಜೀವ ತುಂಬಿದ್ದಾರೆ. ಈ ಗೆಲುವಿನೊಂದಿಗೆ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡ ರಾಜಸ್ಥಾನವನ್ನು ಎದುರಿಸಲಿದೆ.

    ಬೃಹತ್ ಮೊತ್ತದ ಗುರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಡಿಕಾಕ್, ರಾಹುಲ್ ಜೋಡಿ ಆರಂಭದಲ್ಲೇ ಎಡವಿತು. 1 ಸಿಕ್ಸ್ ಸಹಿತ ಅಬ್ಬರಿಸುವ ಸೂಚನೆ ಹೊರಡಿಸಿದ ಡಿಕಾಕ್ ಆಟ ಡುಪ್ಲೆಸಿಸ್ ಹಿಡಿದ ಉತ್ತಮ ಕ್ಯಾಚ್‍ನೊಂದಿಗೆ ಅಂತ್ಯವಾಯಿತು. ಬಳಿಕ ಬಂದ ಮನನ್ ವೋಹ್ರಾ, ರಾಹುಲ್ ಜೊತೆಗೂಡಿ ಪವರ್ ಪ್ಲೇನಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಆರ್‌ಸಿಬಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದರು. ಆದರೆ ವೋಹ್ರಾ ಆಟ 19 ರನ್ (11 ಎಸೆತ, 1 ಬೌಂಡರಿ, 2 ಸಿಕ್ಸ್‌ಗೆ ಅಂತ್ಯಗೊಂಡಿತು. ಬಳಿಕ ದೀಪಕ್ ಹೂಡಾ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. ಈ ಜೋಡಿ ಪಂದ್ಯವನ್ನು ಗೆಲುವಿಗೆ ಹತ್ತಿರ ಕೊಂಡೊಯ್ಯುತ್ತಿದ್ದಂತೆ ದಾಳಿಗಿಳಿದ ಹಸರಂಗ ಸೂಪರ್ ಸ್ಪೇಲ್‍ಗೆ ಹೂಡಾ ಕ್ಲೀನ್ ಬೌಲ್ಡ್ ಆದರು. ಆದರೆ ಈ ಮೊದಲು 45 ರನ್ (26 ಎಸೆತ, 1 ಬೌಂಡರಿ, 4 ಸಿಕ್ಸ್) ಬಾರಿಸಿ ರಾಹುಲ್ ಜೊತೆ 3ನೇ ವಿಕೆಟ್‍ಗೆ 96 ರನ್ (61 ಎಸೆತ) ಜೊತೆಯಾಟವಾಡಿ ತಂಡದ ಗೆಲುವಿಗೆ ಶ್ರಮಪಟ್ಟರು.

    ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಡುಪ್ಲೆಸಿಸ್ ಶೂನ್ಯ ಸುತ್ತಿ ಬಂದಷ್ಟೇ ವೇಗವಾಗಿ ಡಗೌಟ್ ಸೇರಿಕೊಂಡರು.

    ಆ ಬಳಿಕ ಒಂದಾದ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟ ತೊಡಗಿದರು. ಇತ್ತ ಪಾಟಿದಾರ್ ಮಾತ್ರ ಪವರ್ ಫುಲ್ ಹಿಟ್‍ಗಳ ಮೂಲಕ ಲಕ್ನೋಗೆ ಆರಂಭದಲ್ಲೇ ಎಚ್ಚರಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 25 ರನ್ (24 ಎಸೆತ, 2 ಬೌಂಡರಿ) ಸಿಡಿಸಿದ್ದ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ ಈ ಜೋಡಿ 66 ರನ್ (46 ಎಸೆತ) ಜೊತೆಯಾಟವಾಡಿ ಮಿಂಚಿತು.

    ಪಾಟಿದಾರ್ ಚೊಚ್ಚಲ ಶತಕ:
    ಕೊಹ್ಲಿ ಬಳಿಕ ಬಂದ ಮಾಕ್ಸ್‌ವೆಲ್ ಆಟ 1 ಸಿಕ್ಸ್ ಸಹಿತ 9 ರನ್‍ಗಳಿಗೆ ಅಂತ್ಯವಾಯಿತು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ ಇನ್ನೊಂದು ಕಡೆ ಪಾಟಿದರ್ ಲಕ್ನೋ ಬೌಲರ್‌ಗಳ ಪ್ರತಿ ಎಸೆತಗಳನ್ನು ಬೌಂಡರಿ, ಸಿಕ್ಸ್ ಸಿಡಿಸುವ ಮೂಲಕ ಘರ್ಜಿಸಲಾರಂಭಿಸಿದರು. ಇನ್ನೊಂದೆಡೆ ಲಕ್ನೋ ಫೀಲ್ಡರ್‌ಗಳು ಸಾಕಷ್ಟು ಕ್ಯಾಚ್‌ಗಳನ್ನು ಕೈಚೆಲ್ಲಿ ಕೈ ಸುಟ್ಟುಕೊಂಡರು. ಡೆತ್ ಓವರ್‌ಗಳಂತೂ ದಿನೇಶ್ ಕಾರ್ತಿಕ್ ಮತ್ತು ಪಾಟಿದರ್ ಅಬ್ಬರಿಸಿ ಬೊಬ್ಬಿರಿದರು. ಅದರಲ್ಲೂ ಲಕ್ನೋ ಬೌಲರ್ ರವಿ ಬಿಷ್ಣೋಯ್ ಎಸೆದ 16ನೇ ಓವರ್‌ನಲ್ಲಿ 2 ಬೌಂಡರಿ, 3 ಸಿಕ್ಸ್ ಸಹಿತ ಬರೋಬ್ಬರಿ 26 ಕಸಿದ ಪಾಟಿದರ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಚೊಚ್ಚಲ ಶತಕ ಬಾರಿಸಿ ಆರ್‌ಸಿಬಿ ಪಾಳಯದಲ್ಲಿ ಹರುಷ ತಂದರು.

    ಅಂತಿಮವಾಗಿ ಪಾಟಿದರ್ ಅಜೇಯ 112 ರನ್ (54 ಎಸೆತ, 12 ಬೌಂಡರಿ, 7 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 37 ರನ್ (23 ಎಸೆತ, 5 ಬೌಂಡರಿ, 1 ಸಿಕ್ಸ್) ಸಹಿತ 5ನೇ ವಿಕೆಟ್‍ಗೆ ಅಜೇಯ 92 ರನ್ (41 ಎಸೆತ) ಜೊತೆಯಾಟವಾಡಿ ರನ್ ಮಳೆ ಸುರಿಸಿತು. ಅಂತಿಮವಾಗಿ ಆರ್‌ಸಿಬಿ ತಂಡ 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 207 ರನ್‍ಗಳ ಬೃಹತ್ ಮೊತ್ತ ಪೇರಿಸಿತು.

    ರನ್ ಏರಿದ್ದು ಹೇಗೆ?
    50 ರನ್ 35 ಎಸೆತ
    100 ರನ್ 72 ಎಸೆತ
    150 ರನ್ 97 ಎಸೆತ
    200 ರನ್ 117 ಎಸೆತ
    207 ರನ್ 120 ಎಸೆತ

  • ಇಂದು ಎಲಿಮಿನೇಟರ್ ಪಂದ್ಯ – ಆರ್‌ಸಿಬಿಗೆ ಲಕ್ನೋ ಸವಾಲು

    ಇಂದು ಎಲಿಮಿನೇಟರ್ ಪಂದ್ಯ – ಆರ್‌ಸಿಬಿಗೆ ಲಕ್ನೋ ಸವಾಲು

    ಕೋಲ್ಕತ್ತಾ: ಈಡನ್ ಗಾರ್ಡನ್ಸ್‌ನಲ್ಲಿಂದು ಐಪಿಎಲ್ 2022ರ ಎಲಿಮಿನೇಟರ್ 2ನೇ ಪಂದ್ಯ ನಡೆಯಲಿದ್ದು, ಡುಪ್ಲೆಸಿ ಬಳಗಕ್ಕೆ ಕನ್ನಡಿಗ ರಾಹುಲ್ ನೇತೃತ್ವದ ಲಕ್ನೋ ತಂಡವು ಎದುರಾಗಲಿದೆ.

    ಐಪಿಎಲ್‍ನಲ್ಲಿ ಇದೇ ಮೊದಲ ಬಾರಿ ಕಣಕ್ಕಿಳಿದಿರುವ ಹೊಸ ತಂಡ ಲಕ್ನೋ ಲೀಗ್ ಹಂತದಲ್ಲಿ ತನ್ನ ಚರಣದ 14 ಪಂದ್ಯಗಳನ್ನಾಡಿ 9ರಲ್ಲಿ ಜಯಗಳಿಸಿದ್ದು, 5 ಪಂದ್ಯಗಳಲ್ಲಿ ಸೋತಿದೆ. ಟೂರ್ನಿಯ ಉದ್ದಕ್ಕೂ ಉತ್ತಮ ಪ್ರರ್ದಶನ ತೋರಿದ ರಾಹುಲ್ 2 ಮತ್ತು ಕ್ವಿಂಟನ್ ಡಿಕಾಕ್ ಒಂದು ಶತಕ ಗಳಿಸಿದ್ದಾರೆ. ಕೋಲ್ಕತ್ತಾ ನೈಟ್‍ರೈಡರ್ಸ್ ಎದುರಿನ ಪಂದ್ಯದಲ್ಲಿ ಇವರಿಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ ಅಜೇಯ 210 ರನ್ ಗಳಿಸಿ ದಾಖಲೆ ಬರೆದಿದ್ದರು. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

    ಎವಿನ್ ಲೂಯಿಸ್, ದೀಪಕ್ ಹೂಡಾ, ಆಲ್‍ರೌಂಡರ್‌ಗಳಾದ ಮಾರ್ಕಸ್ ಸ್ಟೊಯಿನಿಸ್ ಮತ್ತು ಜೇಸನ್ ಹೋಲ್ಡರ್ ಉತ್ತಮ ಫಾರ್ಮ್‍ನಲ್ಲಿರುವುದರಿಂದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆರಂಭಿಕ ಓವರ್‌ಗಳಲ್ಲಿಯೇ ವಿಕೆಟ್ ಗಳಿಸುವ ಆವೇಶ್ ಖಾನ್, ಮೊಹಸೀನ್ ಖಾನ್ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಅವರ ಮಾರಕ ಬೌಲಿಂಗ್ ಬೆಂಗಳೂರು ತಂಡಕ್ಕೆ ಸವಾಲಾಗಿ ನಿಂತಿದೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮಿಂಚಿದ ತ್ರಿಪಾಠಿಗೆ ಯಾಕಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ? – ರೊಚ್ಚಿಗೆದ್ದ ಅಭಿಮಾನಿಗಳು

    ಸತತ ವೈಫಲ್ಯಗಳ ನಂತರ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಫಾರ್ಮ್‍ಗೆ ಮರಳಿರುವುದು ತಂಡದಲ್ಲಿ ಉತ್ಸಾಹ ಹೆಚ್ಚಿಸಿದೆ. ನಾಯಕ ಡುಪ್ಲೆಸಿ, ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಆದರೆ ಬೌಲರ್‌ಗಳು ಸ್ಥಿರತೆ ಕಾಪಾಡಿಕೊಳ್ಳುವ ಸವಾಲು ತಂಡಕ್ಕೆ ಇದೆ. ಹರ್ಷಲ್ ಪಟೇಲ್, ಸ್ಪಿನ್ನರ್ ವಣಿಂದು ಹಸರಂಗಾ ಮತ್ತು ಜೋಶ್ ಹ್ಯಾಜಲ್‍ವುಡ್ ಅವರು ರಾಹುಲ್ ಪಡೆಯ ಅಬ್ಬರಕ್ಕೆ ತಡೆಯೊಡ್ಡುವಲ್ಲಿ ಸಫಲರಾದರೆ ಆರ್‌ಸಿಬಿಗೆ ಎರಡನೇ ಕ್ವಾಲಿಫೈಯರ್ ಪ್ರವೇಶಿಸುವ ಅವಕಾಶ ಲಭಿಸಬಹುದು.

    IPL

    ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕಾಗಿ ನಡೆದಿದ್ದ ಪೈಪೋಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು ಸೋತ ಕಾರಣಕ್ಕೆ ಆರ್‌ಸಿಬಿಯು ಹಾದಿ ಸುಗಮವಾಗಿತ್ತು. ಅದರಿಂದಾಗಿ ಸತತ ಮೂರನೇ ಆವೃತ್ತಿಯಲ್ಲಿಯೂ ಪ್ಲೇ ಆಫ್ ಪ್ರವೇಶಿಸಿದೆ.

  • ಐಪಿಎಲ್ ಪಂದ್ಯ ರದ್ದು ತಡೆಗೆ `ಸೂಪರ್’ ನಿಯಮ – ಯಾವ ತಂಡದ ಲಕ್ ಹೇಗಿದೆ?

    ಐಪಿಎಲ್ ಪಂದ್ಯ ರದ್ದು ತಡೆಗೆ `ಸೂಪರ್’ ನಿಯಮ – ಯಾವ ತಂಡದ ಲಕ್ ಹೇಗಿದೆ?

    ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಪ್ಲೇ-ಆಫ್ ಹಂತದ ಪಂದ್ಯಗಳಿಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದ್ದು, ಬಿಸಿಸಿಐ ಹೊಸ ನಿಯಮ ಪ್ರಕಟಿಸಿದೆ.

    ಈ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಒಂದಿಲ್ಲೊಂದು ಲಕ್ ಒಲಿಯುತ್ತಿದ್ದು, ಬಹುಶಃ ಚಾಂಪಿಯನ್ ಆಗುವ ಅವಕಾಶವಿದ್ದಂತೆಯೇ ಕಾಣುತ್ತಿದೆ. ಪ್ಲೇ ಆಫ್‌ನಿಂದ ಹೊರಬೀಳಬೇಕಿದ್ದ ಆರ್‌ಸಿಬಿ ಮುಂಬೈ ಗೆಲುವಿನ ಕೃಪೆಯಿಂದ ಪ್ಲೇ-ಆಫ್ ಪ್ರವೇಶಿಸಿತು. ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದರೆ, ರನ್‌ರೇಟ್ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತಿತ್ತು. ಆದರೆ, ಈ ಬಾರಿ ಸೂಪರ್ ಓವರ್ ನಿಯಮವನ್ನು ಅನುಷ್ಠಾನಗೊಳಿಸಿದ್ದು, ಹೆಚ್ಚುವರಿ ಸಮಯವನ್ನೂ ನಿಗದಿ ಮಾಡಲಾಗಿದೆ. ಈ ಬೆಳವಣಿಗೆ ಆರ್‌ಸಿಬಿಗೆ ವರ.

    IPL 2022 RCB VS SRH 5

    ಮಳೆ ಅಡ್ಡಿಯಿಂದ ನಿಗದಿತ ಸಮಯದೊಳಿಗೆ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಕೇವಲ ಸೂಪರ್ ಓವರ್ ವಿಜೇತರನ್ನು ನಿರ್ಧರಿಸಲಿದೆ. ಟಿ20 ಕ್ರಿಕೆಟ್‌ನಲ್ಲಿ ಕೇವಲ ಸೂಪರ್ ಓವರ್‌ನಿಂದಲೇ ಫಲಿತಾಂಶ ನಿರ್ಧರಿಸುವ ನಿಯಮ ಇದೇ ಮೊದಲಿಗೆ ಬಿಸಿಸಿಐ ಮಾಡಿದೆ. ಇದನ್ನೂ ಓದಿ: ಆಫ್ರಿಕಾ ಸರಣಿಗೆ ತಂಡ ಪ್ರಕಟ – ಟಿ20 ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್, ಡಿಕೆ ವಾಪಸ್‌, ಉಮ್ರಾನ್ ಮಲಿಕ್‍ಗೆ ಸ್ಥಾನ

    ಫೈನಲ್ ಸೇರಿ ಪ್ಲೇ-ಆಫ್‌ನ ಒಟ್ಟು 4 ಪಂದ್ಯಗಳಿಗೆ ನಿಗದಿತ 200 ನಿಮಿಷಗಳ ಜೊತೆಗೆ ಹೆಚ್ಚುವರಿ 2 ಗಂಟೆಗಳ ಸಮಯಾವಕಾಶ ನೀಡಲಾಗಿದೆ. ಮೊದಲ 3 ಪಂದ್ಯಗಳು ಮಳೆಯಿಂದಾಗಿ ವಿಳಂಬಗೊಂಡರೆ ಓವರ್ ಕಡಿತಗೊಳಿಸದೆ ರಾತ್ರಿ 9:40ಕ್ಕೆ ಆರಂಭಿಸಲು ಗಡುವು ನೀಡಲಾಗಿದೆ. ಒಂದು ವೇಳೆ ತಲಾ 5 ಓವರ್ ಪಂದ್ಯ ನಡೆಸಲು ಅವಕಾಶ ಸಿಕ್ಕರೆ ಆ ಪಂದ್ಯ ಆರಂಭಿಸಲು ರಾತ್ರಿ 11:56 ರವರೆಗೂ ಸಮಯವಿರಲಿದೆ. 5 ಓವರ್ ಪಂದ್ಯದಲ್ಲಿ ಟೈಮ್‌ಔಟ್ ಇರುವುದಿಲ್ಲ. ಅಲ್ಲದೆ ಮಧ್ಯರಾತ್ರಿ 12:50ರೊಳಗೆ ಪಂದ್ಯ ಮುಗಿಸುವಂತೆ ನಿಯಮ ಮಾಡಿದೆ.

    IPL 2022 GT VS LSG PLAYOFF 1

    5 ಓವರ್ ಪಂದ್ಯವೂ ಸಾಧ್ಯವಾಗದೆ ಇದ್ದಲ್ಲಿ ಸೂಪರ್ ಓವರ್ ನಡೆಯಲಿದೆ. ಇದಕ್ಕೆ ಮಧ್ಯರಾತ್ರಿ 12:50ರ ವರೆಗೂ ಸಮಯವಿರಲಿದೆ. ಮಳೆ ನಿಲ್ಲದೆ ಪಂದ್ಯ ನಡೆಸಲು ಸಾಧ್ಯವಾಗದೆ ಇದ್ದರೆ ಅಂಕಪಟ್ಟಿಯಲ್ಲಿ ಗಳಿಸಿದ ಸ್ಥಾನಗಳ ಮೇಲೆ ವಿಜೇತರ ನಿರ್ಧಾರವಾಗಲಿದೆ.  ಇದನ್ನೂ ಓದಿ: ಪ್ಲೇ ಆಫ್ ಪಂದ್ಯಗಳಿಗೆ ಮಳೆ ಕಾಟ – ಹೀಗೆ ನಿರ್ಧಾರವಾಗಲಿದೆ ಫಲಿತಾಂಶ?

    ಕ್ವಾಲಿಫೈಯರ್-1 ಮಳೆಗೆ ಬಲಿಯಾದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಗುಜರಾತ್ ನೇರವಾಗಿ ಫೈನಲ್‌ಗೇರಲಿದೆ. ರಾಜಾಸ್ಥಾನ ಕ್ವಾಲಿಫೈಯರ್-2ರಲ್ಲಿ ಆಡಬೇಕಾಗುತ್ತದೆ. ಎಲಿಮಿನೇಟರ್ ಪಂದ್ಯ ಮಳೆಗೆ ಆಹುತಿಯಾದರೆ, ಆರ್‌ಸಿಬಿ ಹೊರಬೀಳಲಿದ್ದು, 2ನೇ ಪ್ಲೇ ಆಫ್ ಪಂದ್ಯಕ್ಕೆ ಲಖನೌ ಪ್ರವೇಶ ಪಡೆಯಲಿದೆ.

    ಫೈನಲ್ ಪಂದ್ಯಕ್ಕೆ ಏನು ನಿಯಮ?: ಮೇ 29ಕ್ಕೆ ನಿಗದಿಯಾಗಿರುವ ಫೈನಲ್ ಪಂದ್ಯ ರಾತ್ರಿ 8ಕ್ಕೆ ಆರಂಭಗೊಳ್ಳುವ ಕಾರಣ ಮಳೆಯಿಂದ ತಡವಾದರೆ ಓವರ್ ಕಡಿತವಿಲ್ಲದೆ ಪಂದ್ಯ ಆರಂಭಿಸಲು ರಾತ್ರಿ 10:10ರ ವರೆಗೂ ಅವಕಾಶವಿರಲಿದೆ. 5 ಓವರ್ ಪಂದ್ಯ ನಡೆಸಲುಮಧ್ಯ ರಾತ್ರಿ 12:26ರ ವರೆಗೂ ಕಾಲಾವಕಾಶ ಇರಲಿದ್ದು, ಮೇ 30 ಅನ್ನು ಮೀಸಲು ದಿನವಾಗಿ ಇಡಲಾಗಿದೆ.

    IPL2022

    ಮೊದಲ ದಿನ ಪಂದ್ಯ ಅರ್ಧ ನಡೆದಿದ್ದರೆ, ಮೀಸಲು ದಿನದಂದು ಪಂದ್ಯ ಮುಂದುವರಿಯಲಿದೆ. ಕೇವಲ ಟಾಸ್ ಅಷ್ಟೇ ಆಗಿ ಪಂದ್ಯ ನಡೆಯದಿದ್ದರೆ, 2ನೇ ದಿನ ಹೊಸದಾಗಿ ಟಾಸ್ ಹಾಕಲಾಗುತ್ತದೆ. ಒಂದು ವೇಳೆ ಮೊದಲ ಇನ್ನಿಂಗ್ಸ್ ಮುಗಿದು, 2ನೇ ಇನ್ನಿಂಗ್ಸ್‌ 5 ಓವರ್ ಪೂರ್ಣಗೊಂಡ ಬಳಿಕ ಮಳೆ ಸುರಿದರೆ, ಡಕ್ವರ್ತ್ ಲೂಯಿಸ್ ನಿಯಮವನ್ನು ಅಳವಡಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಮೀಸಲು ದಿನದಂದು ಕೇವಲ ಸೂಪರ್ ಓವರ್ ನಿಂದಲೂ ಫಲಿತಾಂಶ ನಿರ್ಧರಿಸಬಹುದಾಗಿದೆ.

    ಫೈನಲ್‌ನಲ್ಲಿ ಸೂಪರ್ ಓವರ್ ಆರಂಭಿಸಲು ಮಧ್ಯರಾತ್ರಿ 1.20ರ ವರೆಗೂ ಅವಕಾಶವಿರಲಿದೆ.

  • ಪಂದ್ಯವಾಡದೇ ಆರ್‌ಸಿಬಿ ಮನೆಗೆ ಬರುತ್ತಾ?

    ಪಂದ್ಯವಾಡದೇ ಆರ್‌ಸಿಬಿ ಮನೆಗೆ ಬರುತ್ತಾ?

    ಕೋಲ್ಕತ್ತಾ: ಐಪಿಎಲ್‍ನಲ್ಲಿ ಕಡೆಯ ರೋಚಕ ಪಂದ್ಯಗಳಿಗೆ ಕೋಲ್ಕತ್ತಾ ಸಜ್ಜಾಗುತ್ತಿದೆ. ಈಗಾಗಲೇ 4 ತಂಡಗಳು ಪ್ಲೇ ಆಫ್ ಪಂದ್ಯಗಳನ್ನು ಆಡಲು ತಯಾರಿ ನಡೆಸುತ್ತಿವೆ. ಈ ನಡುವೆ ಪ್ಲೇ ಆಫ್ ಪ್ರವೇಶಿಸಿರುವ ಆರ್‌ಸಿಬಿ ಪಂದ್ಯವಾಡದೇ ಮನೆಗೆ ಬರುತ್ತಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡುತ್ತಿದೆ.

    ಹೌದು ಇದಕ್ಕೆಲ್ಲ ಕಾರಣ ಕೋಲ್ಕತ್ತಾದಲ್ಲಿ ಸುರಿಯುತ್ತಿರುವ ಮಳೆ. ಕೋಲ್ಕತ್ತಾದಲ್ಲಿ ಪ್ಲೇ ಆಫ್ ಪಂದ್ಯಗಳು ನಡೆಯುತ್ತಿದ್ದು, ಕೋಲ್ಕತ್ತಾದಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿದೆ. ಇದೀಗ ಪ್ಲೇ ಆಫ್‍ನ ಎರಡು ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿದೆ. ಕೋಲ್ಕತ್ತಾದಲ್ಲಿ ಇನ್ನೆರಡು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ ಪ್ಲೇ ಆಫ್ ಪಂದ್ಯಗಳು ಸರಿಯಾಗಿ ನಡೆಯುವುದು ಅನುಮಾನವಾಗಿದೆ. ಇದನ್ನೂ ಓದಿ: ಪ್ಲೇ ಆಫ್ ಪಂದ್ಯಗಳಿಗೆ ಮಳೆ ಕಾಟ – ಹೀಗೆ ನಿರ್ಧಾರವಾಗಲಿದೆ ಫಲಿತಾಂಶ?

    ಮೊದಲನೇ ಕ್ವಾಲಿಫೈಯರ್ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಮೇ 24 ಮಂಗಳವಾರ ನಡೆಯಲಿದೆ. ಎಲಿಮಿನೇಟರ್ ಪಂದ್ಯ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೇ 25 ಬುಧವಾರದಂದು ನಡೆಯಲಿದೆ. ಒಂದು ವೇಳೆ ಈ ಪಂದ್ಯಗಳು ಮಳೆಯಿಂದಾಗಿ ಸೂಪರ್ ಓವರ್ ಮೂಲಕವೂ ಫಲಿತಾಂಶ ಕಾಣದೇ ರದ್ದಾದರೆ ನೆಟ್‍ ರನ್‌ರೇಟ್‌ನಲ್ಲಿ ಮುಂದಿರುವ ತಂಡ 2ನೇ ಎಲಿಮಿನೇಟರ್‌ಗೆ ತೇರ್ಗಡೆ ಆಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಎಲಿಮಿನೇಟರ್ ಪಂದ್ಯವಾಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ರನ್‍ರೇಟ್ ವರವಾಗುವ ಸಾಧ್ಯತೆ ಹೆಚ್ಚಿದೆ.

    ಇದೀಗ ಅಂಕಪಟ್ಟಿಯನ್ನು ಗಮನಿಸಿದಾಗ ಮೊದಲ ಸ್ಥಾನದಲ್ಲಿರುವ ಗುಜರಾತ್ ತಂಡ +0.316 ನೆಟ್‌ ರನ್‍ರೇಟ್ ಹೊಂದಿದ್ದರೆ, 2ನೇ ಸ್ಥಾನದಲ್ಲಿರುವ ರಾಜಸ್ಥಾನ +0298, 3ನೇ ಸ್ಥಾನದಲ್ಲಿರುವ ಲಕ್ನೋ +0.251 ಮತ್ತು ಬೆಂಗಳೂರು -0.253 ರನ್‍ರೇಟ್ ಹೊಂದಿದೆ. ಇದನ್ನು ಗಮನಿಸಿದಾಗ ಅದೃಷ್ಟದಾಟದ ಮೂಲಕ ಪ್ಲೇ ಆಫ್ ಪ್ರವೇಶಿಸಿರುವ ಆರ್‌ಸಿಬಿ ತಂಡಕ್ಕೆ ಪ್ಲೇ ಆಫ್‍ನಲ್ಲಿ ರನ್‍ರೇಟ್ ಮುಳ್ಳಾಗುವ ಸಾಧ್ಯತೆ ಕಂಡುಬರುತ್ತಿದೆ. ಇದನ್ನೂ ಓದಿ: ಆಫ್ರಿಕಾ ಸರಣಿಗೆ ತಂಡ ಪ್ರಕಟ – ಟಿ20 ತಂಡಕ್ಕೆ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್, ಡಿಕೆ ವಾಪಸ್‌, ಉಮ್ರಾನ್ ಮಲಿಕ್‍ಗೆ ಸ್ಥಾನ

    ಆರ್‌ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯಕ್ಕೆ ಮಳೆ ಅಡಚಣೆ ನೀಡಿ ಒಂದೂ ಎಸೆತ ಕಾಣದೇ ಪಂದ್ಯ ರದ್ದಾದರೆ, ನೆಟ್‍  ರನ್‍ರೇಟ್‍ನಲ್ಲಿ ಮುಂದಿರುವ ತಂಡ 2ನೇ ಕ್ವಾಲಿಫೈಯರ್‌ಗೆ ತೇರ್ಗಡೆ ಹೊಂದಲಿದೆ. ಇದೀಗ ನೆಟ್‍  ರನ್‍ರೇಟ್‍ನಲ್ಲಿ ಆರ್‌ಸಿಬಿಗಿಂತ ಲಕ್ನೋ ತಂಡ ಮುಂದಿದೆ. ಇದು ಪಂದ್ಯಕ್ಕೂ ಮುನ್ನ ಲಕ್ನೋ ಮೇಲುಗೈ ಸಾಧಿಸಿರುವಂತೆ ಕಂಡುಬಂದರೆ, ಇತ್ತ ಆರ್‌ಸಿಬಿ ಪಂದ್ಯವಾಡದೇ ಮನೆಗೆ ಹೆಜ್ಜೆ ಇಡುವ ದಾರಿಯಾಗಿದೆ.

    IPL 2022 GUJARATH VS RCB 05

    ಈ ರೀತಿ ಆಗದಿರಲಿ ಪ್ಲೇ ಆಫ್ ಪಂದ್ಯಗಳು ಸರಿಯಾಗಿ ನಡೆದು ಫಲಿತಾಂಶ ಕಾಣುವಂತಾಗಲಿ. ಆರ್‌ಸಿಬಿ ಫೈನಲ್‍ಗೇರಿ ಕಪ್ ಗೆಲ್ಲಲಿ ಎಂದು ಆರ್‌ಸಿಬಿ ಅಭಿಮಾನಿಗಳು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

  • ರಾಜಸ್ಥಾನ ರಾಯಲ್ ಆಟ – ಲಕ್ನೋಗೆ ಕೈ ತಪ್ಪಿದ ಪ್ಲೇ ಆಫ್ ಖಾತ್ರಿ ಟಿಕೆಟ್

    ರಾಜಸ್ಥಾನ ರಾಯಲ್ ಆಟ – ಲಕ್ನೋಗೆ ಕೈ ತಪ್ಪಿದ ಪ್ಲೇ ಆಫ್ ಖಾತ್ರಿ ಟಿಕೆಟ್

    ಮುಂಬೈ: ರಾಜಸ್ಥಾನ ರಾಯಲ್ಸ್ ತಂಡದ ಕೆಚ್ಚೆದೆಯ ಹೋರಾಟದಿಂದಾಗಿ ಲಕ್ನೋ ವಿರುದ್ಧ 24 ರನ್‍ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ 16 ಅಂಕಗಳಿಸಿ ಲಕ್ನೋ ತಂಡದೊಂದಿಗೆ ಪ್ಲೇ ಆಫ್ ಫೈನಲ್ ಟಿಕೆಟ್‍ಗಾಗಿ ತೀವ್ರ ಸ್ಪರ್ಧೆಯೊಡ್ಡಿದೆ.

    ಕೊನೆಯ 12 ಎಸೆತಗಳಲ್ಲಿ 48 ರನ್‍ಗಳ ಗುರಿ ಪಡೆದ ಲಕ್ನೋ ತಂಡಕ್ಕೆ 19ನೇ ಓವರ್‌ನಲ್ಲಿ 15 ರನ್ ಬಂತು. ಕೊನೆಯ ಓವರ್‌ನಲ್ಲಿ 34 ರನ್ ಬೇಕಿತ್ತು. ಮಾರ್ಕಸ್ ಸ್ಟೊಯಿನಿಸ್ ಹೋರಾಟದ ಮುಂಚೂಣಿಯಲ್ಲಿದ್ದರೂ ಕೊನೆಯ ಓವರ್‌ನಲ್ಲಿ 27 ರನ್ (17 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಗೆಲುವಿನ ಆಸೆ ಕಮರಿತು. ಇತ್ತ ರಾಜಸ್ಥಾನ ಈ ಗೆಲುವಿನೊಂದಿಗೆ ಪ್ಲೇ ಆಫ್‍ಗೆ ಮತ್ತಷ್ಟು ಸನಿಹವಾಗಿದೆ.

    ಗೆಲ್ಲಲು 179 ರನ್‍ಗಳ ಗುರಿ ಪಡೆದ ಲಕ್ನೋ ತಂಡ ಗೆಲುವಿಗಾಗಿ ಹೋರಾಡಿ ಕೊನೆಗೆ 8 ವಿಕೆಟ್ ಕಳೆದುಕೊಂಡು 154 ರನ್ ಪೇರಿಸಲಷ್ಟೇ ಶಕ್ತವಾಗಿ ಪ್ಲೇ ಆಫ್ ಟಿಕೆಟ್ ಖಾತ್ರಿ ಪಡಿಸುವಲ್ಲಿ ವಿಫಲವಾಯಿತು.

    ಪೈಪೋಟಿಯ ಮೊತ್ತವನ್ನು ಬೆನ್ನಟ್ಟಿದ ಲಕ್ನೋ 29 ರನ್ ಆಗುವಷ್ಟರಲ್ಲಿ ಅಗ್ರಕ್ರಮಾಂಕದ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ದೀಪಕ್ ಹೂಡಾ ಮತ್ತು ಕೃನಾಲ್ ಪಾಂಡ್ಯ ಲಕ್ನೋ ತಂಡದ ಚೇಸಿಂಗ್ ಜವಾಬ್ದಾರಿ ವಹಿಸಿಕೊಂಡರು. ಈ ಜೋಡಿ 4ನೇ ವಿಕೆಟ್‍ಗೆ 65 ರನ್ (46 ಎಸೆತ) ಸಿಡಿಸಿ ಬೇರ್ಪಟ್ಟಿತು. ಪಾಂಡ್ಯ 25 ರನ್ (23 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು. ಇತ್ತ ಹೂಡಾ ಮಾತ್ರ ಹೂಡಿಬಡಿ ಆಟದ ಮೂಲಕ ಲಕ್ನೋಗೆ ಪ್ಲೇ ಆಫ್ ಟಿಕೆಟ್ ಕೊಡಿಸುವಲ್ಲಿ ಹೋರಾಡಿ ಕೊನೆಗೆ 59 ರನ್ (39 ಎಸೆತ, 5 ಬೌಂಡರಿ, 2 ಸಿಕ್ಸ್) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು.


    ಟಾಸ್ ಗೆದ್ದ ರಾಜಸ್ಥಾನ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ರಾಜಸ್ಥಾನದ ಪರ ಅಬ್ಬರದಾಟ ಪ್ರದರ್ಶಿಸುತ್ತಿದ್ದ ಜೋಸ್ ಬಟ್ಲರ್ 2 ರನ್‍ಗಳಿಗೆ ಸೈಲೆಂಟಾದರು. ಇತ್ತ ಯಶಸ್ವಿ ಜೈಸ್ವಾಲ್ ವೈಲೆಂಟ್ ಆಟಕ್ಕೆ ಮೊರೆ ಹೋದರು. ನಾಯಕ ಸಂಜು ಸ್ಯಾಮ್ಸನ್ ಜೊತೆ 2ನೇ ವಿಕೆಟ್‍ಗೆ 64 ರನ್(40 ಎಸೆತ) ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಸ್ಯಾಮ್ಸನ್ ಆಟ 32 ರನ್‍ಗೆ (24 ಎಸೆತ, 6 ಬೌಂಡರಿ)ಗೆ ಅಂತ್ಯಗೊಂಡಿತು.

    ಬಳಿಕ ಜೈಸ್ವಾಲ್ ಜೊತೆ ಕನ್ನಡಿಗ ದೇವದತ್ ಪಡಿಕ್ಕಲ್ ಅಬ್ಬರಿಸಲು ಆರಂಭಿಸಿದರು. ಕೆಲ ಕಾಲ ಲಕ್ನೋ ತಂಡದ ಬೌಲರ್‍ಗಳಿಗೆ ಕಾಟಕೊಟ್ಟ ಜೈಸ್ವಾಲ್ 41 ರನ್ (29 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ಪಡಿಕ್ಕಲ್ 39 ರನ್ (18 ಎಸೆತ, 5 ಬೌಂಡರಿ, 2 ಸಿಕ್ಸ್) ಬಾರಿಸಿ ಔಟ್ ಆಗಿ ಹೊರ ನಡೆದರು.

    ಆ ಬಳಿಕ ರಿಯಾನ್ ಪರಾಗ್ 19 ರನ್, ನಿಶಾಮ್ 14, ಅಶ್ವಿನ್ ಅಜೇಯ 10 ರನ್ ಮತ್ತು ಟ್ರೆಂಟ್ ಬೌಲ್ಟ್ 17 ರನ್‍ಗಳ ನೆರವಿನಿಂದ ರಾಜಸ್ಥಾನ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್‍ಗಳ ಉತ್ತಮ ಮೊತ್ತ ಪೇರಿಸಿತು.

  • ಮೊಹ್ಸಿನ್ ಖಾನ್ ಮುಂದೆ ನಡೆಯಲಿಲ್ಲ ಡೆಲ್ಲಿ ದರ್ಬಾರ್ – ಲಕ್ನೋಗೆ 6 ರನ್‍ಗಳ ಜಯ

    ಮೊಹ್ಸಿನ್ ಖಾನ್ ಮುಂದೆ ನಡೆಯಲಿಲ್ಲ ಡೆಲ್ಲಿ ದರ್ಬಾರ್ – ಲಕ್ನೋಗೆ 6 ರನ್‍ಗಳ ಜಯ

    ಮುಂಬೈ: ಬ್ಯಾಟಿಂಗ್‍ನಲ್ಲಿ ರಾಹುಲ್, ಹೂಡಾ ಹೊಡಿ ಬಡಿ ಆಟ ಬೌಲಿಂಗ್‍ನಲ್ಲಿ ಮೊಹ್ಸಿನ್ ಖಾನ್ ಮಾರಕ ದಾಳಿಗೆ ಬೆಚ್ಚಿ ಬಿದ್ದ ಡೆಲ್ಲಿ ದರ್ಬಾರ್ ನಡೆಸಲಾಗದೇ ಲಕ್ನೋ ವಿರುದ್ಧ ಕೇವಲ 6 ರನ್‍ಗಳಿಂದ ಸೋಲು ಕಂಡಿದೆ.

    196 ರನ್‍ಗಳ ಟಾರ್ಗೆಟ್ ಬೆನ್ನಟುವ ವೇಳೆ ರೋವ್ಮನ್ ಪೊವೆಲ್ 35 ರನ್ (21 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಡೆಲ್ಲಿ ಗೆಲುವಿನ ಕನಸಿಗೆ ಹಿನ್ನಡೆ ಆಯಿತು. ಆದರೆ ಇತ್ತ ಅಕ್ಷರ್ ಪಟೇಲ್ ಡೆಲ್ಲಿ ಗೆಲುವಿಗಾಗಿ ಹೋರಾಡಲು ಮುಂದಾದರು ಕಡೆಯ ವರೆಗೆ ಲಕ್ನೋ ಬೌಲರ್‌ಗಳಿಂದ ಗೆಲುವು ಕಸಿಯಲು ಪ್ರಯತ್ನಿಸಿದ ಅಕ್ಷರ್ ಪಟೇಲ್ ಅಜೇಯ 42 ರನ್ (24 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿದ ಹೊರತಾಗಿಯು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್ ಸಿಡಿಸಲಷ್ಟೇ ಶಕ್ತವಾಗಿ 6 ರನ್‍ಗಳ ಅಂತರದ ಸೋಲು ಕಾಣಬೇಕಾಯಿತು.

    ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 13 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. ಆ ಬಳಿಕ ಮಿಚೆಲ್ ಮಾರ್ಷ್ ಮತ್ತು ನಾಯಕ ಪಂತ್ ಜೊತೆಗೂಡಿ ರನ್ ಏರಿಸಲು ಮುಂದಾದರು. ಮಿಚೆಲ್ ಮಾರ್ಷ್ ಸ್ಫೋಟಕ 37 ರನ್ (20 ಎಸೆತ, 3 ಬೌಂಡರಿ, 3 ಸಿಕ್ಸ್) ಮತ್ತು ರಿಷಭ್ ಪಂತ್ 44 ರನ್ (30 ಎಸೆತ, 7 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಡೆಲ್ಲಿ ತಂಡದ ಸ್ಟಾರ್ ಬ್ಯಾಟ್ಸ್‌ಮ್ಯಾನ್‌ಗಳನ್ನು ಟಾರ್ಗೆಟ್ ಮಾಡಿ ವಿಕೆಟ್ ಬೇಟೆಯಾಡಿದ ಮೊಹ್ಸಿನ್ ಖಾನ್  ಪ್ರಮುಖ 4 ವಿಕೆಟ್ ಕಿತ್ತು ಡೆಲ್ಲಿಗೆ ಶಾಕ್ ನೀಡಿದರು.

    ಈ ಮೊದಲು ಟಾಸ್ ಗೆದ್ದ ಲಕ್ನೋ ನಾಯಕ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರಕ್ಕೆ ಬಂದರು. ಅದರಂತೆ ರಾಹುಲ್ ಮತ್ತು ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಮೊದಲ 4 ಓವರ್‌ಗಳಲ್ಲಿ 40 ರನ್ ಚಚ್ಚಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡುತ್ತಿದ್ದಂತೆ ಶಾರ್ದೂಲ್ ಠಾಕೂರ್ ದಾಳಿಗಿಳಿದ ಡಿ ಕಾಕ್ 23 ರನ್ (13 ಎಸೆತ, 3 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

    ಈ ಮೊದಲು ಟಾಸ್ ಗೆದ್ದ ಲಕ್ನೋ ನಾಯಕ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರಕ್ಕೆ ಬಂದರು. ಅದರಂತೆ ರಾಹುಲ್ ಮತ್ತು ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಮೊದಲ 4 ಓವರ್‌ಗಳಲ್ಲಿ 40 ರನ್ ಚಚ್ಚಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡುತ್ತಿದ್ದಂತೆ ಶಾರ್ದೂಲ್ ಠಾಕೂರ್ ದಾಳಿಗಿಳಿದು ಡಿ ಕಾಕ್ 23 ರನ್ (13 ಎಸೆತ, 3 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

    ರಾಹುಲ್, ಹೂಡಾ ಭರ್ಜರಿ ಬ್ಯಾಟಿಂಗ್
    ಆ ಬಳಿಕ ಜೊತೆಯಾದ ದೀಪಕ್ ಹೂಡಾ ಮತ್ತು ರಾಹುಲ್ ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಇಬ್ಬರೂ ಕೂಡ ಬೌಂಡರಿ, ಸಿಕ್ಸರ್ ಸಿಡಿಸುತ್ತ ಲಕ್ನೋ ರನ್ ಹೆಚ್ಚಿಸಲು ಮುಂದಾದರು. ಈ ಜೋಡಿ 14.3 ಓವರ್‌ಗಳ ವರೆಗೆ ಕ್ರಿಸ್‍ನಲ್ಲಿ ನಿಂತು 2ನೇ ವಿಕೆಟ್‍ಗೆ 95 ರನ್ (61 ಎಸೆತ) ಗಳ ಜೊತೆಯಾಟವಾಡಿತು. ಈ ವೇಳೆ ಮತ್ತೆ ದಾಳಿಗಿಳಿದ ಠಾಕೂರ್, ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಹೂಡಾ 52 ರನ್ (34 ಎಸೆತ, 6 ಬೌಂಡರಿ, 1 ಸಿಕ್ಸ್) ವಿಕೆಟ್ ಕಿತ್ತು ಬ್ರೇಕ್ ನೀಡಿದರು.

    ಇತ್ತ ರಾಹುಲ್ ಮಾತ್ರ ಆರ್ಭಟ ನಿಲ್ಲಿಸಲಿಲ್ಲ. ಸರಾಗವಾಗಿ ರನ್ ಏರಿಸುತ್ತಿದ್ದ ರಾಹುಲ್ ಕಡೆಗೆ 77 ರನ್ (51 ಎಸೆತ, 4 ಬೌಂಡರಿ, 5 ಸಿಕ್ಸ್) ಸಿಡಿಸಿ ಠಾಕೂರ್‌ಗೆ ಮೂರನೇ ಬಳಿಯಾದರು. ನಂತರ ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಸ್ಟೊಯಿನಿಸ್ ಅಜೇಯ 17 ರನ್ (16 ಎಸೆತ, 1 ಬೌಂಡರಿ, 1 ಸಿಕ್ಸ್) ಮತ್ತು ಕೃನಾಲ್ ಪಾಂಡ್ಯ 9 ರನ್ (6 ಎಸೆತ) ಸಿಡಿಸಿ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 195 ರನ್‍ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು.

    ರನ್ ಏರಿದ್ದು ಹೇಗೆ
    31 ಎಸೆತ 50 ರನ್
    63 ಎಸೆತ 100 ರನ್
    97 ಎಸೆತ 150 ರನ್
    120 ಎಸೆತ 195 ರನ್

  • ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    ವಿಕೆಟ್ ನೀಡಿದ ಪೋಲಾರ್ಡ್‍ಗೆ ಮುತ್ತು ಕೊಟ್ಟು ಸಂಭ್ರಮಿಸಿದ ಕೃನಾಲ್ ಪಾಂಡ್ಯ

    ಮುಂಬೈ: ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಲಕ್ನೋ ತಂಡದ ಬೌಲರ್ ಕೃನಾಲ್ ಪಾಂಡ್ಯ ಬೌಲಿಂಗ್‍ನಲ್ಲಿ ವಿಕೆಟ್ ಕಳೆದುಕೊಂಡ ಮುಂಬೈ ಬ್ಯಾಟ್ಸ್‌ಮ್ಯಾನ್‌ ಕೀರನ್ ಪೋಲಾರ್ಡ್ ಪೆವಿಲಿಯನ್‍ಗೆ ಹೆಜ್ಜೆಹಾಕುತ್ತಿದ್ದಂತೆ ಪಾಂಡ್ಯ ಮುತ್ತುಕೊಟ್ಟು ಸಂಭ್ರಮಿಸಿದ ಫೋಟೋ ವೈರಲ್ ಆಗುತ್ತಿದೆ.

    ಈ ಹಿಂದೆ ಕೃನಾಲ್ ಪಾಂಡ್ಯ ಮತ್ತು ಪೋಲಾರ್ಡ್ ಮುಂಬೈ ತಂಡದಲ್ಲಿ ಜೊತೆಯಾಗಿ ಆಡುತ್ತಿದ್ದರು. ಆದರೆ 15ನೇ ಅವೃತ್ತಿ ಐಪಿಎಲ್‍ನಲ್ಲಿ ಪೋಲಾರ್ಡ್ ಮುಂಬೈ ತಂಡದ ಪರ ಆಡುತ್ತಿದ್ದರೆ, ಪಾಂಡ್ಯ ಲಕ್ನೋ ಪರ ಆಡುತ್ತಿದ್ದಾರೆ. ಆದರೂ ಇವರಿಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. ನಿನ್ನೆಯ ಪಂದ್ಯದಲ್ಲಿ ಇವರಿಬ್ಬರ ನಡುವೆ ರೋಚಕ ಹಣಾಹಣಿ ನಡೆದಿತ್ತು. ಇದನ್ನೂ ಓದಿ: ರಾಹುಲ್ ತೂಫಾನ್ – ಮುಂಬೈಗೆ ಸೋಲಿನ ಬರೆ

    ಕೃನಾಲ್ ಪಾಂಡ್ಯ ವಿಕೆಟ್‍ನ್ನು ಪೋಲಾರ್ಡ್ ಕಿತ್ತಿದ್ದರು. ಆ ಬಳಿಕ ಮುಂಬೈ ತಂಡದ ಗೆಲುವಿಗಾಗಿ ಹೋರಾಡುತ್ತಿದ್ದ ಪೋಲಾರ್ಡ್ 19 ರನ್ (20 ಎಸೆತ, 1 ಸಿಕ್ಸ್) ಸಿಡಿಸಿ ಅಪಾಯಕಾರಿಯಾಗಿ ಗೋಚರಿಸುತ್ತಿದ್ದಾಗ ದಾಳಿಗಿಳಿದ ಕೃನಾಲ್ ಪಾಂಡ್ಯ, ಪೋಲಾರ್ಡ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವಿಕೆಟ್ ಪಡೆದ ಬಳಿಕ ಪೆವಿಲಿಯನ್‍ಗೆ ಹೊರಟ ಪೋಲಾರ್ಡ್ ಬಳಿ ತೆರಳಿದ ಪಾಂಡ್ಯ ಮುತ್ತು ಕೊಟ್ಟು ಸಂಭ್ರಮಿಸಿದರು. ಈ ವೀಡಿಯೋ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: 3.10 ಕೋಟಿ ರೂಪಾಯಿಯ ಐಷಾರಾಮಿ ಕಾರು ಖರೀದಿಸಿದ ಹಿಟ್ ಮ್ಯಾನ್

    ಈ ಕುರಿತು ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ನಾನು ದೇವರಿಗೆ ಧನ್ಯವಾದ ತಿಳಿಸುತ್ತೇನೆ. ಪೋಲಾರ್ಡ್ ವಿಕೆಟ್ ಸಿಗದೇ ಇದ್ದಿದ್ದರೆ ನನಗೆ ಜೀವನಪೂರ್ತಿ ಕಾಡುತ್ತಿತ್ತು. ಇದೀಗ 1-1 ಸಮಬಲಗೊಂಡಿದೆ. ಪೋಲಾರ್ಡ್ ಮಾತನಾಡದಂತಾಗಿದೆ ಎಂದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮತ್ತು ಮೈಕಲ್ ಕ್ಲಾರ್ಕ್ ಸಂಬಂಧ ಕೆಡಲು ಐಪಿಎಲ್ ಕಾರಣ: ಸೈಮಂಡ್ಸ್

    ಮುಂಬೈ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಶತಕದಾಟ ಮತ್ತು ಲಕ್ನೋ ಬೌಲರ್‌ಗಳ ಶ್ರೇಷ್ಠ ನಿರ್ವಹಣೆಯ ಫಲವಾಗಿ 36 ರನ್‍ಗಳಿಂದ ಗೆದ್ದಿತು. ಈ ಮೂಲಕ ಮುಂಬೈ ಟೂರ್ನಿಯಲ್ಲಿ ಸತತ 8ನೇ ಸೋಲು ಕಂಡು ಮತ್ತೆ ನಿರಾಸೆ ಅನುಭವಿಸಿತು.

  • ರಾಹುಲ್ ತೂಫಾನ್ – ಮುಂಬೈಗೆ ಸೋಲಿನ ಬರೆ

    ರಾಹುಲ್ ತೂಫಾನ್ – ಮುಂಬೈಗೆ ಸೋಲಿನ ಬರೆ

    ಮುಂಬೈ: ರಾಹುಲ್ ಭರ್ಜರಿ ಶತಕದಾಟ ಮತ್ತು ಬೌಲರ್‌ಗಳ ಶ್ರೇಷ್ಠ ನಿರ್ವಹಣೆಯಿಂದ ಮುಂಬೈ ತಂಡವನ್ನು ಕಟ್ಟಿಹಾಕಿದ ಲಕ್ನೋ 36 ರನ್‍ಗಳ ಭರ್ಜರಿ ಜಯ ಗಳಿಸಿತು.

    ಲಕ್ನೋ ಬೌಲರ್‌ಗಳ ಸಂಘಟಿತ ಪ್ರದರ್ಶನದ ಮುಂದೆ ಮುಂಬೈ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್‍ ಗಳಿಸಲಷ್ಟೇ ಶಕ್ತವಾಗಿ ಸತತ 8ನೇ ಸೋಲುಂಡಿತು.

    ಗೆಲ್ಲಲು 169 ರನ್ ಗುರಿ ಬೆನ್ನಟ್ಟಿದ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ಇಶಾನ್ ಕಿಶನ್ 8 ರನ್ (20 ಎಸೆತ) ವಿಕೆಟ್ ನೀಡಿ ಹೊರ ನಡೆದರು. ನಂತರ ಬಂದ ಡೆವಾಲ್ಡ್ ಬ್ರೆವಿಸ್ 3 ರನ್‍ಗೆ ಸುಸ್ತಾದರು. ಇತ್ತ ರೋಹಿತ್ ಶರ್ಮಾ 39 ರನ್ (31 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ಸಿಡಿಯುವ ಸೂಚನೆ ನೀಡಿ ಔಟ್ ಆದರು. ನಂತರ ತಿಲಕ್ ವರ್ಮಾ 38 ರನ್ (27 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿ ಗೆಲುವಿಗಾಗಿ ಹೋರಾಟ ನಡೆಸಿ ವಿಕೆಟ್ ಕೈಚೆಲ್ಲಿಕೊಂಡರು ಇದರೊಂದಿಗೆ ಮುಂಬೈ ಸೋಲು ಖಾತ್ರಿಯಾಯಿತು.

    ರಾಹುಲ್ ರಣಾರ್ಭಟ
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭಿಕ ಆಟಗಾರ ಡಿ ಕಾಕ್‍ರನ್ನು 10 ರನ್ (9 ಎಸೆತ, 1 ಸಿಕ್ಸ್) ಬೇಗನೆ ಕಳೆದುಕೊಂಡಿತು. ಆದರೆ ಇತ್ತ ಕೆ.ಎಲ್ ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್‍ಗೆ ಮುಂದಾದರು.

    ರಾಹುಲ್‍ಗೆ ಉತ್ತಮ ಸಾಥ್ ನೀಡಿದ ಮನೀಶ್ ಪಾಂಡೆ 2ನೇ ವಿಕೆಟ್‍ಗೆ 58 ರನ್ (47 ಎಸೆತ) ಜೊತೆಯಾಟವಾಡಿ ಇನ್ನಿಂಗ್ಸ್ ಕಟ್ಟಿದರು. ಈ ವೇಳೆ ದಾಳಿಗಿಳಿದ ಪೋಲಾರ್ಡ್, 22 ರನ್ (22 ಎಸೆತ, 1 ಸಿಕ್ಸ್) ಸಿಡಿಸಿದ್ದ ಮನೀಶ್ ಪಾಂಡೆ ವಿಕೆಟ್ ಪಡೆಯಲು ಯಶಸ್ವಿಯಾದರು.

    ಆ ಬಳಿಕ ಏಕಾಏಕಿ ಕುಸಿತಕಂಡ ಲಕ್ನೋಗೆ ರಾಹುಲ್ ಏಕಾಂಗಿ ಹೋರಾಟದ ಮೂಲಕ ಬಲ ತುಂಬಿದರು. ಮುಂಬೈ ಬೌಲರ್‌ಗಳಿಗೆ ಸೆಡ್ಡು ಹೊಡೆದ ರಾಹುಲ್ 15ನೇ ಆವೃತ್ತಿ ಐಪಿಎಲ್‍ನ 2ನೇ ಶತಕ ಸಿಡಿಸಿ ಮೆರೆದಾಡಿದರು. ಆರಂಭದಿಂದ ಕೊನೆಯ ಎಸೆತದವರೆಗೆ ಬ್ಯಾಟ್‍ಬೀಸಿದ ರಾಹುಲ್ ಅಜೇಯ 103 ರನ್ (62 ಎಸೆತ, 12 ಬೌಂಡರಿ, 4 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಅಂತಿಮವಾಗಿ ಲಕ್ನೋ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಪೇರಿಸಿತು.

  • ಕೆಎಲ್ ರಾಹುಲ್‍ಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ

    ಕೆಎಲ್ ರಾಹುಲ್‍ಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ

    ಮುಂಬೈ: ಮಂಗಳವಾರ ರಾತ್ರಿ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರಿಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಲಾಗಿದೆ.

    ಐಪಿಎಲ್ ನೀತಿ ಸಂಹಿತೆಯ ಹಂತ 1ರ ಪ್ರಕಾರ ರಾಹುಲ್‍ಗೆ ದಂಡ ವಿಧಿಸಲಾಗಿದೆ. ತಂಡದ ಸಹ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಅವರು ಸಹ ಅದೇ ಪಂದ್ಯದಲ್ಲಿ ಐಪಿಎಲ್‍ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ ಕೂಡಾ ಐಪಿಎಲ್ ನೀತಿ ಸಂಹಿತೆಯ ಹಂತ 1 ಅಡಿ ದಂಡ ಕಟ್ಟಬೇಕಾಗಿದೆ. ಇದನ್ನೂ ಓದಿ: ಲಕ್ನೋಗೆ ಕೆಜಿಎಫ್ ಚಿತ್ರದ ಡೈಲಾಗ್ ಮೂಲಕ ಟಕ್ಕರ್ ನೀಡಿದ ಆರ್‌ಸಿಬಿ

    ಜೋಶ್ ಹ್ಯಾಜಲ್‍ವುಡ್ ಎಸೆತದಲ್ಲಿ ಸ್ಟೊಯಿನಿಸ್ ಔಟಾಗಿದ್ದರು. ಆದರೆ ಇದಕ್ಕೂ ಮುನ್ನ ಅವರು ಅಂಪೈರ್ ಜೊತೆ ವಾಗ್ದಾಳಿ ನಡೆಸಿದರು. ಅವರ ಮಾತುಗಳು ಸ್ಟಂಪ್ ಮೈಕ್ರೋಫೋನ್‍ನಲ್ಲಿ ರೆಕಾರ್ಡ್ ಆಗಿವೆ. ಈ ಹಿನ್ನೆಲೆ ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಳಿಗೆ, ಮ್ಯಾಚ್ ರೆಫ್ರಿ ದಂಡ ವಿಧಿಸಿದ್ದಾರೆ.

    ಲಕ್ನೋ ಮತ್ತು ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ರನ್‍ಗಳಿಂದ ಜಯ ಸಾಧಿಸಿತು. ಇದನ್ನೂ ಓದಿ: ಪ್ಲೆ-ಆಫ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಔಟ್?

  • ಲಕ್ನೋಗೆ ಕೆಜಿಎಫ್ ಚಿತ್ರದ ಡೈಲಾಗ್ ಮೂಲಕ ಟಕ್ಕರ್ ನೀಡಿದ ಆರ್‌ಸಿಬಿ

    ಲಕ್ನೋಗೆ ಕೆಜಿಎಫ್ ಚಿತ್ರದ ಡೈಲಾಗ್ ಮೂಲಕ ಟಕ್ಕರ್ ನೀಡಿದ ಆರ್‌ಸಿಬಿ

    ಮುಂಬೈ: ಲಕ್ನೋ ಮತ್ತು ಆರ್‌ಸಿಬಿ ನಡುವೆ ನಡೆದ ನಿನ್ನೆಯ ಪಂದ್ಯಕ್ಕೂ ಮೊದಲು ಲಕ್ನೋ ತಂಡ ಮಾಡಿದ ಒಂದು ಟ್ವೀಟ್‍ಗೆ ಆರ್‌ಸಿಬಿ ಪಂದ್ಯ ಗೆದ್ದು ಕೆಜಿಎಫ್ ಚಿತ್ರದ ಡೈಲಾಗ್ ಮೂಲಕ ತಿರುಗೇಟು ನೀಡಿದೆ.

    ಪಂದ್ಯ ಆರಂಭಕ್ಕೂ ಮೊದಲು ಲಕ್ನೋ ತಂಡ ಇದು ನಮ್ಮ ಆಡುವ 11ರ ಬಳಗ. ಆರ್‌ಸಿಬಿ ಮಕ್ಕಳೇ ನಿಮ್ಮಿಂದ ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಲಕ್ನೋ ವಿರುದ್ಧ 18 ರನ್‍ಗಳಿಂದ ಗೆದ್ದಿತ್ತು. ಬಳಿಕ ಆರ್‌ಸಿಬಿ ತಂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದ If you think you’re Bad, I am your Dad ಡೈಲಾಗ್ ಹಾಕಿಕೊಂಡು ಲಕ್ನೋಗೆ ರೀ ಪೋಸ್ಟ್ ಮಾಡಿ ಟಕ್ಕರ್ ನೀಡಿತು. ಇದನ್ನೂ ಓದಿ: ಪ್ಲೆ-ಆಫ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಔಟ್?

    ಆರ್‌ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಡು ಪ್ಲೆಸಿಸ್ 96 ರನ್ (64 ಎಸೆತ, 11 ಬೌಂಡರಿ, 2 ಸಿಕ್ಸ್) ನೆರವಿನಿಂದ 181 ರನ್‍ಗಳ ದೊಡ್ಡ ಮೊತ್ತ ಕಲೆಹಾಕಿತು. ಆ ಬಳಿಕ 182 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಲಕ್ನೋಗೆ ಜೋಶ್ ಹ್ಯಾಜಲ್‍ವುಡ್ ಕಂಟಕವಾದರು. ಬಿಗಿ ಬೌಲಿಂಗ್ ದಾಳಿ ನಡೆಸಿದ ಹ್ಯಾಜಲ್‍ವುಡ್ 4 ಓವರ್ ಎಸೆದು 25 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಇದನ್ನೂ ಓದಿ: ಪಾರ್ಟಿ ಮೂಡ್‌ನಲ್ಲಿ ಸಿಎಸ್‌ಕೆ ಅಂಡ್ ಟೀಂ – ಸಾಂಪ್ರದಾಯಿಕ ಉಡುಗೆಯ ಸಂಭ್ರಮ

    ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 163 ರನ್ ಪೇರಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಆರ್‌ಸಿಬಿ 18 ರನ್‍ಗಳ ಅಂತರದ ಜಯದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.