Tag: low price

  • ಹಸಿದ ಹೊಟ್ಟೆಗೆ ಊಟ ಕೊಡುತ್ತಿರುವ ಕುಟುಂಬ- 1 ರೂ.ಗೆ ಇಡ್ಲಿ, 5 ರೂ.ಗೆ ಊಟ

    ಹಸಿದ ಹೊಟ್ಟೆಗೆ ಊಟ ಕೊಡುತ್ತಿರುವ ಕುಟುಂಬ- 1 ರೂ.ಗೆ ಇಡ್ಲಿ, 5 ರೂ.ಗೆ ಊಟ

    ಚೆನ್ನೈ: ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಹಸಿದ ಹೊಟ್ಟೆಗಳಿಗೆ ಒಂದು ರೂಪಾಯಿಗೆ ಇಡ್ಲಿ, 5 ರೂಪಾಯಿಗೆ ಊಟ ನೀಡುವ ಮೂಲಕವಾಗಿ ತಮಿಳುನಾಡಿನ ದಂಪತಿ ಮಾನವೀಯ ಕಾರ್ಯವನ್ನು ಮಾಡುತ್ತಿದ್ದಾರೆ.

    ಪುಷ್ಪರಾಣಿ, ಚಂದ್ರಶೇಖರ್ ದಂಪತಿ ಲಾಕ್‍ಡೌನ್ ವೇಳೆಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಕಡಿಮೆ ಬೆಲೆಯಲ್ಲಿ ಆರೋಗ್ಯಕರವಾದ ಆಹಾರವನ್ನು ನೀಡುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

    ಕೊರೊನಾ ಸೋಂಕು ಎಲ್ಲೆಡೆ ಹಬ್ಬಿರುವಾಗ ಲಾಕ್‍ಡೌನ್ ಮಾಡಲಾಗಿತ್ತು. ಈ ವೇಳೆ ಎಷ್ಟೋ ಜನ ಊಟವಿಲ್ಲದೆ ಹಸಿದುಕೊಂಡು ಇದ್ದರು. ರಸ್ತೆ ಬದಿಯಲ್ಲಿ ದಿನಗೂಲಿ ಮಾಡುವವರು, ಕೆಲಸ ಕಳೆದುಕೊಂಡಿರುವ ಅದೆಷ್ಟೋ ಜನರನ್ನು ನಾವು ನೋಡಿದ್ದೇವೆ. ಈ ವಿಚಾರವನ್ನು ನಾವು ಗಮನದಲ್ಲಿಟ್ಟುಕೊಂಡು ಕಡಿಮೆ ಬೆಲೆ ಉತ್ತಮ ಆಹಾರವನ್ನು ಕೊಡಲು ನಿರ್ಧರಿಸಿದ್ದೆವು. 1 ರುಪಾಯಿಗೆ ಇಡ್ಲಿ, ಚಟ್ನಿ ನೀಡುತ್ತೇವೆ ಎಂದು ಪುಷ್ಪರಾಣಿ ಹೇಳಿದ್ದಾರೆ.

    ಲಾಕ್‍ಡೌನ್ ಆಗುವ ಮೊದಲು ಚಂದ್ರಶೇಖರ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ನಂತರ ಆರ್ಥಿಕ ಸಮಸ್ಯೆಯಿಂದಾಗಿ ಆ ಕೆಲಸವನ್ನು ಬಿಟ್ಟು ಹೋಟೆಲ್ ಪ್ರಾರಂಭಿಸಿದ್ದರು. ಬ್ಯಾಂಕಿನಲ್ಲಿ 50.000 ಸಾಲ ಪಡೆದು ಈ ದಂಪತಿ ಬಡ ಜನರಿಗಾಗಿ ಸಹಾಯವಾಗುವಂತೆ ಊಟವನ್ನು ಕೊಡಲು ಪ್ರಾರಂಭಿಸಿದರು.

    ಪ್ರತಿದಿನ ಸರಿಸುಮಾರು 400 ಮಂದಿ ಊಟವನ್ನು ಮಾಡುತ್ತಾರೆ. ಪ್ರತಿನಿತ್ಯ 4 ಗಂಟೆಗೆ ಎದ್ದು ಅಡುಗೆಯನ್ನು ಪ್ರಾರಂಭಿಸುತ್ತೇವೆ. ಮನೆಯ ಮಕ್ಕಳು ಕೂಡಾ ಸಹಾಯ ಮಾಡುತ್ತಾರೆ. ಬೆಳಗ್ಗೆ 7 ಗಂಟೆಗೆ ತಿಂಡಿ ಮಾರಾಟ ಮಾಡಿದರೆ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಊಟವನ್ನು ಮಾರಾಟ ಮಾಡುತ್ತೇವೆ. ಜನರಿಗೆ ನಮ್ಮಿಂದಾದಷ್ಟು ಸಹಾಯವಾಗಲಿ ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಕುಟುಂಬ ಹೇಳಿಕೊಂಡಿದೆ.

  • ಇಂದಿನಿಂದ ಜನೌಷಧ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್‍ಗಳು 1 ರೂ.ಗೆ ಲಭ್ಯ

    ಇಂದಿನಿಂದ ಜನೌಷಧ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್‍ಗಳು 1 ರೂ.ಗೆ ಲಭ್ಯ

    ನವದೆಹಲಿ: ಮಹಿಳೆಯರ ಆರೋಗ್ಯ, ಶುಚಿತ್ವ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಜನೌಷಧ ಕೇಂದ್ರಗಳಲ್ಲಿ ಕೇವಲ 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಒದಗಿಸಲು ಮುಂದಾಗಿದೆ.

    ಈ ಹಿಂದೆ ಜನೌಷಧ ಕೇಂದ್ರಗಳಲ್ಲಿ 2.50 ರೂ.ಗೆ ಮಾರಲಾಗುತ್ತಿದ್ದ ಸ್ಯಾನಿಟರಿ ಪ್ಯಾಡ್‍ಗಳು ಇಂದಿನಿಂದ ಕೇವಲ 1 ರೂ.ಗೆ ದೊರೆಯಲಿವೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್‍ಸುಖ್ ಮಾಂಡವೀಯ ತಿಳಿಸಿದ್ದಾರೆ. ಮಣ್ಣಿನಲ್ಲಿ ಕರಗಬಲ್ಲ(ಬಯೋಡಿಗ್ರೆಡೆಬಲ್) ‘ಸುವಿಧಾ’ ನ್ಯಾಪ್‍ಕಿನ್‍ಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ವಿಶ್ವ ಪರಿಸರ ದಿನಾಚರಣೆಯಂದು ಮಹಿಳೆಯರಿಗೆ ಭರ್ಜರಿ ಗಿಫ್ಟ್- ಕಡಿಮೆ ಬೆಲೆಯ ನ್ಯಾಪ್‍ಕಿನ್ ಬಿಡುಗಡೆ

    ಈ ಹಿಂದೆ 4 ಸ್ಯಾನಿಟರಿ ಪ್ಯಾಡ್‍ಗಳುಳ್ಳ ಪ್ಯಾಕಿಗೆ 10 ರೂ. ಇತ್ತು. ಆದರೆ ಇಂದಿನಿಂದ ಅದೇ ಪ್ಯಾಡ್‍ಗಳ ಬೆಲೆ 4 ರೂ.ಗೆ ಇಳಿದಿದೆ. ಹೀಗೆ ದರದಲ್ಲಿ 60% ಕಡಿತ ಮಾಡುವ ಮೂಲಕ ಮೋದಿ ನೇತೃತ್ವದ ಸರ್ಕಾರವು 2019ರ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಿದೆ ಎಂದು ಸಚಿವರು ತಿಳಿಸಿದರು.

    ಸದ್ಯ ತಯಾರಕರು ಉತ್ಪಾದನಾ ವೆಚ್ಚ ಎಷ್ಟಾಗುತ್ತದೋ ಅದೇ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‍ಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಆದರೆ ನಾವು ಅದಕ್ಕೆ ಸಬ್ಸಿಡಿ ನೀಡಿ ಅದರ ಮಾರಾಟ ದರವನ್ನು ಕಡಿಮೆಗೊಳಿಸಿದ್ದೇವೆ. ಮಾರಾಟದ ಪ್ರಮಾಣದ ಮೇಲೆ ಸಬ್ಸಿಡಿಯ ವಾರ್ಷಿಕ ವೆಚ್ಚ ಅವಲಂಭಿಸಿದೆ ಎಂದರು.

    ಸುವಿಧಾ ನ್ಯಾಪ್‍ಕಿನ್ಸ್ ಯೋಜನೆಯನ್ನು 2018ರ ಮಾರ್ಚ್‍ನಲ್ಲಿ ಘೋಷಿಸಲಾಗಿತ್ತು. ಅದೇ ವರ್ಷ ಮೇ ತಿಂಗಳಿನಿಂದ ಈ ಯೋಜನೆ ಜನೌಷಧ ಕೇಂದ್ರಗಳಲ್ಲಿ ಲಭ್ಯವಾಗಿತ್ತು. ಕಳೆದ 1 ವರ್ಷದ ಅವಧಿಯಲ್ಲಿ ಸುಮಾರು 5,500 ಜನೌಷಧ ಕೇಂದ್ರಗಳಲ್ಲಿ 2.2 ಕೋಟಿ ನ್ಯಾಪ್‍ಕಿನ್‍ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಈಗ ದರ ಇಳಿಕೆ ಮಾಡಿರುವುದರಿಂದ ಸುವಿಧಾ ನ್ಯಾಪ್‍ಕಿನ್ಸ್ ಮಾರಾಟ ಪ್ರಮಾಣ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ ಎಂದು ಮನ್‍ಸುಖ್ ಮಾಂಡವೀಯ ಅಭಿಪ್ರಾಯ ವ್ಯಕ್ತಪಡಿಸಿದರು.

  • ಪ್ಲಾಸ್ಟಿಕ್‌ನಿಂದ ಪೆಟ್ರೋಲ್, 1 ಲೀಟರ್ ಗೆ 40 ರೂ. – ಹೈದ್ರಾಬಾದ್ ಎಂಜಿನಿಯರ್ ಸಾಧನೆ

    ಪ್ಲಾಸ್ಟಿಕ್‌ನಿಂದ ಪೆಟ್ರೋಲ್, 1 ಲೀಟರ್ ಗೆ 40 ರೂ. – ಹೈದ್ರಾಬಾದ್ ಎಂಜಿನಿಯರ್ ಸಾಧನೆ

    ಹೈದರಾಬಾದ್: ಇತ್ತೀಚಿಗೆ ಪೆಟ್ರೋಲ್, ಡೀಸೆಲ್ ಬೆಲೆ ಚಿನ್ನದ ದರದಂತೆ ದಿನೇ ದಿನೇ ಗಗನಕ್ಕೇರುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70 ರೂಪಾಯಿಗೂ ಅಧಿಕವಿದೆ. ಈ ಮಧ್ಯೆ ಹೈದರಾಬಾದ್ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬರು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಉಪಯೋಗಿಸಿ ಪೆಟ್ರೋಲ್ ತಯಾರಿಸಿ ಹುಬ್ಬೇರುವಂತೆ ಮಾಡಿದ್ದಾರೆ.

    ಹೈದರಾಬಾದ್ ಮೂಲಕ ಪ್ರೊ.ಸತೀಶ್ ಕುಮಾರ್ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಪ್ಲಾಸ್ಟಿಕ್ ಮೂಲಕ ಪೆಟ್ರೋಲ್ ತಯಾರಿಸಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಿಕೊಟ್ಟಿದ್ದಾರೆ. ಸತೀಶ್ ಕುಮಾರ್ ಹಲವು ವರ್ಷಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಂಪನಿಯನ್ನು ನಡೆಸುತ್ತಿದ್ದಾರೆ. ಇಲ್ಲಿ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ಮೂರು ಹಂತಗಳ ಪ್ರಕ್ರಿಯೆಸಿ ಪ್ಲಾಸ್ಟಿಕ್ ಅನ್ನು ಇಂಧನವಾಗಿ ಪರಿವರ್ತಿಸುತ್ತಿದ್ದಾರೆ. ಇದನ್ನು ಪೆಟ್ರೋಲ್ ಪ್ಯಾರೊಲಿಸಿಸ್ ಎಂದು ಕರೆಯಲಾಗುತ್ತದೆ.

    ಈ ಪ್ರಕ್ರಿಯೆಯು ಪ್ಲಾಸ್ಟಿಕ್ ಅನ್ನು ತೈಲ, ಡೀಸೆಲ್, ಪೆಟ್ರೋಲ್ ಆಗಿ ಪರಿವರ್ತಿಸಿ ಬಳಕೆ ಮಾಡಲು ಉಪಯುಕ್ತವಾಗಿದೆ. ಸುಮಾರು 500 ಕೆ.ಜಿ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‍ನಿಂದ 400 ಲೀಟರ್ ಪೆಟ್ರೋಲ್ ಉತ್ಪಾದಿಸಬಹುದು. ಇದು ಸರಳ ವಿಧಾನವಾಗಿದ್ದು ಇದನ್ನು ತಯಾರಿಸಲು ನೀರಿನ ಅವಶ್ಯಕತೆ ಬೀಳುವುದಿಲ್ಲ. ಅಲ್ಲದೆ ಕೊಳಚೆ ನೀರನ್ನು ಕೂಡ ಇದು ಬಿಡುಗಡೆ ಮಾಡುವುದಿಲ್ಲ. ಇದರಿಂದ ವಾಯು ಮಾಲಿನ್ಯವೂ ಆಗುವುದಿಲ್ಲ ಎಂದು ಸತೀಶ್ ತಿಳಿಸಿದ್ದಾರೆ.

    2016 ರಿಂದ ಸತೀಶ್ ಅವರು ಮರುಬಳಕೆ ಮಾಡಲಾಗದ 50 ಟನ್ ಪ್ಲಾಸ್ಟಿಕ್ ಅನ್ನು ಪೆಟ್ರೋಲ್ ಆಗಿ ಪರಿವರ್ತನೆ ಮಾಡಿದ್ದಾರೆ. ಸದ್ಯ ಪ್ರತಿ ದಿನ 200 ಕೆಜಿ ತ್ಯಾಜ್ಯ ಪ್ಲಾಸ್ಟಿಕ್‍ನಿಂದ 200 ಲೀಟರ್ ಪೆಟ್ರೋಲ್ ಉತ್ಪಾದಿಸುತ್ತಿದ್ದಾರೆ. ಅಲ್ಲದೆ ಇಲ್ಲಿ ಉತ್ಪಾದಿಸಲಾಗುವ ಪೆಟ್ರೋಲ್, ಡೀಸೆಲ್‍ನ್ನು ಸ್ಥಳೀಯರಿಗೆ ಪ್ರತಿ ಲೀಟರ್ ಗೆ 40ರಿಂದ 50 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

    ಪರಿಸರವನ್ನು ಕಾಪಾಡುವುದು ಈ ಪ್ರಯೋಗದ ಮುಖ್ಯ ಉದ್ದೇಶವಾಗಿದೆ. ನಾವು ಇದರಿಂದ ವಾಣಿಜ್ಯ ಲಾಭವನ್ನು ಬಯಸುತ್ತಿಲ್ಲ ಬದಲಿಗೆ ಮುಂದೆ ಭವಿಷ್ಯದಲ್ಲಿ ಪರಿಸರ ಸ್ವಚ್ಛವಾಗಿರಬೇಕು ಎಂದು ಮಾಡುತ್ತಿದ್ದೇವೆ. ಈ ಬಗ್ಗೆ ಆಸಕ್ತಿ ಹೊಂದಿರುವ ಯಾವುದೇ ಕಂಪನಿಯೊಂದಿಗೆ ನಾವು ನಮ್ಮ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಸಿದ್ಧರಿದ್ದೇವೆ ಎಂದು ಸತೀಶ್ ಹೇಳಿದ್ದಾರೆ.

    ಸದ್ಯ ಈ ಪೆಟ್ರೋಲ್ ವಾಹನಗಳಿಗೆ ಸೂಕ್ತ ಎನ್ನುವ ಬಗ್ಗೆ ಪರೀಕ್ಷೆಗಳು ನಡೆಸಿಲ್ಲ. ಅಲ್ಲದೆ ಪಿವಿಸಿ (ಪಾಲಿವಿನೈಲ್ ಕ್ಲೋರೈಡ್) ಮತ್ತು ಪಿಇಟಿ (ಪಾಲಿಥಿಲೀನ್ ಟೆರೆಫ್ಥಲೇಟ್) ಪ್ಲಾಸ್ಟಿಕ್ ಬಿಟ್ಟು, ಉಳಿದೆಲ್ಲಾ ರೀತಿಯ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‍ಗಳನ್ನು ಉಪಯೋಗಿಸಿ ಇಂಧನ ತಯಾರಿಸಬಹುದಾಗಿದೆ.