Tag: Lovers day

  • ಅವನಿಗೆ ನಾನು ‘ಏಪ್ರಿಲ್ ಏಂಜಲ್’…

    ಅವನಿಗೆ ನಾನು ‘ಏಪ್ರಿಲ್ ಏಂಜಲ್’…

    ವನಿಗೆ ನಾನಂದ್ರೆ ಅದೇನು ಹುಚ್ಚು ಪ್ರೀತಿಯೋ ಗೊತ್ತಿಲ್ಲ. ಕಾಲೇಜಲ್ಲಿ ನೂರಾರು ಹುಡುಗಿಯರಿದ್ರೂ ನನ್ನನ್ನೇ ನೋಡ್ತಿದ್ದ. ಜಾಸ್ತಿ ನನ್ನನ್ನೇ ಮಾತಾಡಿಸ್ತಿದ್ದ. ಮೊದ ಮೊದಲು ಅವನು ನನ್ನ ಪ್ರೀತಿಸ್ತಿದ್ದಾನೆ ಅಂತ ಗೊತ್ತಿರ್ಲಿಲ್ಲ. ಕಾಲೇಜು ಅಂದ್ಮೇಲೆ ಹುಡುಗ-ಹುಡುಗಿ ಕ್ಲೋಸ್ ಆಗಿ ಮಾತಾಡೋದು ಕಾಮನ್. ಬೇರೆ ಹುಡುಗರ ಜೊತೆ ಕ್ಲೋಸ್ ಫ್ರೆಂಡ್ ಆಗಿ ಇದ್ದಂತೆ ಇವನ ಜೊತೆಯೂ ಇದ್ದೆ. ನಾನು ಕಾಲೇಜಿಗೆ ಬಂದ್ರೆ ಸಾಕು, ದಿನವೂ ಸಿಕ್ತಿದ್ದ. ಹಾಯ್.. ಹಲೋ ಅಂತ ಹಲ್ಲು ಕಿಸಿದು ಮಾತಾಡ್ತಿದ್ದ. ನಾನು ಅಷ್ಟೇ ಮಾಮೂಲಿಯಂತೆ ಮಾತಾಡಿಸ್ತಿದ್ದೆ.

    ಕಾಲೇಜಿನ ಕ್ಯಾಂಟೀನ್‌ನಲ್ಲಿ ನಾನು ಗೆಳತಿಯರ ಜೊತೆ ಇದ್ರೆ ಅಲ್ಲಿಗೂ ಬರ್ತಿದ್ದ. ನಾವು ಜ್ಯೂಸ್ ಕುಡಿಯುತ್ತಿದ್ರೆ, ‘ನನಗೆ ಕೊಡಿಸಲ್ವ?’ ಅಂತ ಕೇಳ್ತಿದ್ದ. ‘ಅದಕ್ಕೇನಂತೆ ತಗೋ’ ಅಂತ ನಾನು ಕಾಮನ್ ಆಗಿ ಕೊಡ್ಸಿದ್ದೆ. ಪ್ರತಿ ದಿನ ನನ್ನನ್ನು ಮೀಟ್ ಆಗ್ತಿದ್ದ. ಸಿಕ್ಕಾಗಲೆಲ್ಲ ಹಾಯ್.. ಅಂತ ಸ್ಮೈಲ್ ಕೊಡ್ತಿದ್ದ. ನಾನೂ ಸ್ಮೈಲ್ ಕೊಡ್ತಿದ್ದೆ. ‘ತಿಂಡಿ ಆಯ್ತಾ’ ಎಂದು ಕೇಳ್ತಿದ್ದ. ನಾನೂನು ಉತ್ತರ ಕೊಡ್ತಿದ್ದೆ. ಹೀಗೆಯೇ ದಿನ ಕಳೆಯುತ್ತಿತ್ತು. ನಾನು ಅವನ ಬಗ್ಗೆ ಅಷ್ಟಾಗಿ ಗಮನ ಕೊಟ್ಟಿರಲಿಲ್ಲ. ಇದನ್ನೂ ಓದಿ: ಹೃದಯದ ಮೌನ.. ಹೃದಯಕೆ ಸೀದಾ.. ತಲುಪುವ ಹಾಗೆ ಮಾತಾಡು ನೀ…….

    ಕಾಲೇಜು ಅಂದ್ಲೇಲೆ ಸ್ನೇಹ, ಹರಟೆ, ಲವ್, ಕ್ರಶ್ ಎಲ್ಲವೂ ಇರುತ್ತೆ. ಆದರೆ ಕಾಲೇಜಿನಲ್ಲಿ ನನ್ನ ಮೊದಲ ವರ್ಷ ಅದಾಗಿದ್ದರಿಂದ ಈ ಲವ್ ಬಗ್ಗೆ ಅಷ್ಟೇನು ತಿಳುವಳಿಕೆ ಮತ್ತೆ ಆಸಕ್ತಿ ಇರಲಿಲ್ಲ. ದಿನಕ್ಕೊಬ್ಬರ ಮೇಲೆ ಕ್ರಶ್ ಅಂತೂ ಆಗುತ್ತಿತ್ತು. ನಾವು ಹುಡುಗಿಯರ ಗುಂಪು ನಿಂತಿದ್ದಾಗ, ಎದುರುಗಡೆಯಿಂದ ಯಾರಾದ್ರೂ ಹುಡುಗರು ಸುಳಿದಾಡಿದರೆ, ‘ಹೇ. ಅಲ್ನೋಡೆ.. ಅವ್ನು ತುಂಬಾ ಚೆನ್ನಾಗಿದ್ದಾನೆ ಅಲ್ವ?’ ಅಂತ ಮಾತಾಡಿಕೊಳ್ತಿದ್ವಿ. ಇನ್ಯಾರಾದರು ಹಾಗೆಯೇ ಓಡಾಡುತ್ತಿದ್ರೆ ‘ಇವ್ನು.. ಪರ್ವಾಗಿಲ್ಲ’, ‘ಅವ್ನು ಅಷ್ಟಕ್ಕಷ್ಟೆ’ ಅಂತೆಲ್ಲಾ ಹುಡುಗರ ಸೌಂದರ್ಯವನ್ನ ಜಡ್ಜ್‌ಗಳಂತೆ ತೀರ್ಮಾನಿಸುತ್ತಿದ್ದೆವು.

    ನನ್ನ ಹುಟ್ಟುಹಬ್ಬದ ದಿನವದು. ಆ ದಿನ ಹೊಸ ಡ್ರೆಸ್ ಹಾಕ್ಕೊಂಡು ಕಾಲೇಜಿಗೆ ಬಂದಿದ್ದೆ. ಕ್ಲಾಸ್‌ಮೇಟ್ಸ್ಗೆ ಸಿಹಿ ಹಂಚಿದೆ. ಎಲ್ಲರೂ ವಿಶ್ ಮಾಡಿದರು. ಎಂದಿನಂತೆ ಕ್ಲಾಸ್ ಮುಗಿದ ಮೇಲೆ ನನ್ನ ಗ್ರೂಪ್ ಗೆಳತಿಯರೊಂದಿಗೆ ಹೊರ ಬಂದೆ. ಈ ವೇಳೆ ಧುತ್ ಅಂತ ಅವನು ನನಗೆ ಎದುರಾದ. ನಾನು ಎಂದಿನಂತೆ ಅವನಿಗೆ ಸ್ಮೈಲ್ ಕೊಟ್ಟೆ. ಅವನು, ‘ಕೈ ಮುಂದೆ ನೀಡು’ ಎಂದು ಹೇಳಿ ಒಂದು ಚಾಕ್ಲೆಟ್ ಕೊಟ್ಟ. ಅದನ್ನು ಅಕ್ಕಪಕ್ಕದಲ್ಲಿದ್ದ ನನ್ನ ಸ್ನೇಹಿತೆಯರು ಕಿತ್ತುಕೊಂಡು ಕವರ್ ಓಪನ್ ಮಾಡಿ ಹಂಚಿಕೊಂಡು ಅಲ್ಲಿಯೇ ತಿಂದುಬಿಟ್ಟರು. ಅವನು ಮತ್ತೆ ನನ್ನ ಕೈಗೆ ಒಂದು ಲೆಟರ್ ಕೊಟ್ಟ. ‘ಇದನ್ನ ಇಲ್ಲೇ ಓಪನ್ ಮಾಡ್ಬೇಡ. ಮನೇಲಿ ತೆಗೆದು ಓದು’ ಎಂದು ಹೇಳಿ ಹೊರಟು ಬಿಟ್ಟ.

    ಅವನು ಹೇಳಿದಂತೆ ಲೆಟರ್ ಅನ್ನು ಮನೆಯಲ್ಲಿ ಓಪನ್ ಮಾಡಿ ನೋಡಿದ ನನಗೆ ಶಾಕ್ ಕಾದಿತ್ತು. ಅಲ್ಲೇ ನನಗೆ ತಿಳಿದಿದ್ದು, ಅವನು ನನ್ನ ಲವ್ ಮಾಡ್ತಿದ್ದಾನೆ ಅಂತ. ಲೆಟರ್‌ನ ರಕ್ತದಲ್ಲಿ ಬರೆದಿದ್ದ. ‘ನೀನು ನನ್ನ ಏಂಜಲ್.. ಡ್ರೀಮ್.. ಐ ಲವ್ ಯು’ ಅಂತೆಲ್ಲಾ ಬರೆದಿದ್ದ. ಎಲ್ಲವನ್ನೂ ಓದಿ, ಲೆಟರ್‌ನ್ನು ಹಾಗೆಯೇ ಮಡಚಿಟ್ಟೆ.

    ಮಾರನೇ ದಿನ ಕಾಲೇಜಿಗೆ ಹೋದೆ. ನಿರೀಕ್ಷಿಸಿದ್ದಂತೆ ಅವನು ನನಗೆ ಎದುರಾದ. ‘ನಿನ್ನ ಅಭಿಪ್ರಾಯ ತಿಳಿಸು.. ನಾನು ಒಕೆನಾ’ ಎಂದು ಕೇಳಿದ’. ನಾನು ಕುತೂಹಲಕ್ಕೆ, ‘ನಾನು ಅಂದ್ರೆ ನಿಂಗೆ ಯಾಕಿಷ್ಟ? ಅಂಥದ್ದೇನು ನೋಡಿ ನನ್ನನ್ನು ಲವ್ ಮಾಡ್ದೆ?’ ಅಂತ ಕೇಳ್ದೆ. ಅದಕ್ಕವನು, ‘ನೀನು ಒಳ್ಳೆ ಹುಡುಗಿ.. ನಿನ್ನ ಆಟಿಟ್ಯೂಡ್ ನಂಗೆ ತುಂಬಾ ಇಷ್ಟ.. ನಿನ್ನ ಬರ್ತಡೆ ದಿನವೇ ಪ್ರಪೋಸ್ ಮಾಡಿದ್ದೀನಿ. ನನಗೆ ನೀನು ಏಪ್ರಿಲ್ ಏಂಜಲ್’ ಹಾಗೇ ಹೀಗೆ ಅಂತ ಹೊಗಳಿ ಮಾತಾಡಿದ. ಆ ಕ್ಷಣ ನನಗೆ ಒಳಗೊಳಗೆ ಖುಷಿ ಆಗಿದ್ದುಂಟು. ಒಬ್ಬ ಹುಡುಗ ನನ್ನ ಬಗ್ಗೆ ಪಾಸಿಟಿವ್ ಆಗಿ ಮಾತಾಡಿದ್ನಲ್ಲಾ ಅಂತ ಮನಸ್ಸಲ್ಲೇ ಹಿರಿಹಿರಿ ಹಿಗ್ಗಿದ್ದೆ. ಆದರೂ ಅದನ್ನು ಅವನೆದರು ತೋರಿಸಿಕೊಳ್ಳದಂತೆ ಸುಮ್ಮನೆ ಕೇಳುತ್ತಾ ನಿಂತಿದ್ದೆ. ಕೊನೆಗೆ ಅವನು, ‘ನಿನ್ನ ಅಭಿಪ್ರಾಯ ಹೇಳು’ ಎಂದು ಕೇಳಿದ. ‘ನನಗೆ ಲವ್ ಅಂದ್ರೆ ಆಗಲ್ಲ’ ಎಂದು ಅವನ ಪ್ರೀತಿಯನ್ನು ನಿರಾಕರಿಸಿ ಬಿಟ್ಟೆ. ಅವನು ‘ಯಾಕೆ’ ಎಂದು ಕೇಳಿದ. ನಾನು ಏನನ್ನೂ ಮಾತಾಡದೇ ಅಲ್ಲಿಂದ ಹೊರಟುಬಿಟ್ಟೆ.

    ಈ ವಿಚಾರವನ್ನು ನನ್ನ ಸ್ನೇಹಿತೆಯರ ಬಳಿ ಹೇಳಿಕೊಂಡೆ. ಅವರು ತಕ್ಷಣ ಪ್ರಾಂಶುಪಾಲರ ಬಳಿ ಹೋಗಿ ನಡೆದಿದ್ದೆಲ್ಲವನ್ನೂ ಹೇಳಿಬಿಟ್ಟರು. ಆಗ ಪ್ರಾಂಶುಪಾಲರು ಅವನನ್ನು ಕರೆದು ಬುದ್ದಿಮಾತು ಹೇಳಿದರು. ‘ನೋಡಪ್ಪ.. ನೀವು ಕಾಲೇಜಿಗೆ ಬರೋದು ಚೆನ್ನಾಗಿ ಓದಿ ಬುದ್ಧಿವಂತರಾಗೋಕೆ. ತಿಳುವಳಿಕೆ ಇಲ್ಲದ ವಯಸ್ಸಿನಲ್ಲಿ ಲವ್ ಅಂತ ನಿಮ್ಮ ಜೀವ ಹಾಳು ಮಾಡ್ಕೋಬೇಡಿ’ ಅಂತೆಲ್ಲ ಹೇಳಿ ಅವನ ತಂದೆ ಎದುರೇ ಕಪಾಳಕ್ಕೆ ಹೊಡೆದುಬಿಟ್ಟರು. ತಂದೆ ಎದುರೇ ಹೊಡೆದರಲ್ಲ ಅಂತ ಅವನು ಬೇಜಾರು ಮಾಡ್ಕೊಂಡ. ಅಲ್ಲಿಂದಾಚೆಗೆ ಅವನು ನನ್ನ ಕಡೆ ತಿರುಗಿಯೂ ನೋಡಲಿಲ್ಲ.

    ನಾನು ಯಾವತ್ತೂ ಜೀವನವನ್ನ ಸೀರಿಯಸ್ ಆಗಿ ತಗೊಂಡವಳಲ್ಲ. ಕ್ರೇಜಿ ಹುಡುಗಿ ನಾನು. ಎಲ್ಲರ ಜೊತೆಯೂ ಕ್ಲೋಸ್ ಆಗಿ ಇರ್ತಿದ್ದೆ. ಯಾರ ಮನಸ್ಸನ್ನೂ ನೋಯಿಸಬಾರದು ಎಂಬ ಭಾವನೆಯವಳು. ಕ್ರೇಜಿಯಷ್ಟೇ ಲೇಜಿ಼ ಹುಡುಗಿಯೂ ಹೌದು. ಯಾವ ವಿಚಾರಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಲವ್ ಪ್ರಪೋಸ್ ಮಾಡಿದ್ದಕ್ಕೆ ಅವನು ಕಪಾಳಕ್ಕೆ ಹೊಡೆಸಿಕೊಂಡು ಅವಮಾನಿತನಾಗಿದ್ದು ನನಗೆ ಬೇಜಾರಾಯಿತು. ಇದನ್ನ ಸ್ನೇಹಿತೆಯರ ಬಳಿ ಹೇಳಿಕೊಂಡಾಗ, ‘ಅವನಿಗೆ ಅವಮಾನವಾಗಿದ್ದಕ್ಕೆ ನೀನು ಫೀಲ್ ಆಗಿರೋದನ್ನ ನೋಡಿದ್ರೆ. ಅವನ ಮೇಲೆ ನಿನಗೆ ಲವ್ ಇದೆ ಅನ್ನಿಸ್ತಿದೆ’ ಎಂದಿದ್ದರು.

    ನನ್ನ ಚೈಲ್ಡಿಸ್ಟ್ ಬುದ್ದಿಗೆ ಅವನ ಪ್ರೀತಿ ಅರ್ಥವಾಗಲಿಲ್ಲ. ಆದರೆ ಅವನಿಗೆ ನಾನು ‘ಏಪ್ರಿಲ್ ಏಂಜಲ್’. ಹೀಗೆ ಹೇಳುತ್ತಾ ಎಲ್ಲಾ ಫ್ರೆಂಡ್ಸ್ ಕೂಡ ನನ್ನನ್ನು ಈಗಲೂ ರೇಗಿಸುತ್ತಾರೆ. ಆದೇನೊ ಗೊತ್ತಿಲ್ಲ, ಆ (ಏಪ್ರಿಲ್ ಏಂಜಲ್) ಪದ ಕೇಳಿದಾಗ ನಾಚಿ ನೀರಂತೆ ಆಗ್ತೀನಿ. ಒಳಗೊಳಗೆ ಅದೇನೊ ಖುಷಿ. ಇಂತಹ ಸುಂದರ ನೆನಪನ್ನು ನನ್ನಲ್ಲಿ ಬಿಟ್ಟು ಹೋದ ಅವನನ್ನು ಪ್ರೀತಿಯಿಂದ ಗೌರವಿಸುತ್ತೇನೆ.

    – ನದಿ, ಕನ್ನಡತಿ

  • ವ್ಯಾಲೆಂಟೈನ್ಸ್ ಡೇಗೆ ಬಜರಂಗದಳ ವಿರೋಧ

    ವ್ಯಾಲೆಂಟೈನ್ಸ್ ಡೇಗೆ ಬಜರಂಗದಳ ವಿರೋಧ

    ಮಂಗಳೂರು: ಪ್ರೇಮಿಗಳ ದಿನಕ್ಕೂ ಕರಾವಳಿಗೂ ಎಣ್ಣೆ ಸೀಗೆಕಾಯಿಯ ಸಂಬಂಧ. ಪ್ರತೀವರ್ಷ ವ್ಯಾಲೆಂಟೈನ್ಸ್ ಡೇ ಬಂದಾಗ ಕರಾವಳಿಯಲ್ಲಿ ಪ್ರೇಮಿಗಳ ದಿನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ಇದೀಗ ಈ ಬಾರಿಯೂ ಬಜರಂಗದಳ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿದೆ.

    ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಜರಂಗದಳ ದ.ಕ. ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಭಾರತ ದೇಶವು ಪುಣ್ಯ ಭೂಮಿ ವೈಶಿಷ್ಟ್ಯವಾದ ಸಂಸ್ಕೃತಿ ಸಂಸ್ಕಾರವನ್ನು ನಮ್ಮ ದೇಶ ಹೊಂದಿದೆ. ಅಲ್ಲದೆ ನಮ್ಮ ಸಂಸ್ಕೃತಿ ಆಚರಣೆಗಳಿಗೆ ಅದರದ್ದೇ ಆದ ಮಹತ್ವವಿದ್ದು, ಶತಮಾನಗಳ ಇತಿಹಾಸವನ್ನು ಹೊಂದಿದೆ. ಅದಾಗಿಯೂ ಭಾರತೀಯ ಸಂಸ್ಕೃತಿಗೆ ಸೆಡ್ಡು ಹೊಡೆಯುತ್ತಾ ಪಾಶ್ಚಿಮಾತ್ಯ ಸಂಸ್ಕೃತಿಗಳು ದಾಳಿ ಮಾಡುತ್ತಿವೆ ಎಂದು ಹೇಳಿದ್ದಾರೆ.

    ಈ ಪಾಶ್ಚಿಮಾತ್ಯ ಸಂಸ್ಕೃತಿಗಳು ಯುವ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿವೆ. ನಮ್ಮ ಅಮೂಲ್ಯವಾದ ಸಂಸ್ಕೃತಿ ಆಚರಣೆ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದಕ್ಕೆ ಸ್ಪಷ್ಟ ಉದಾಹರಣೆ ಪ್ರೇಮಿಗಳ ದಿನ. ಹೀಗಾಗಿ ಬಜರಂಗದಳ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತದೆ. ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಇದನ್ನು ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

    ಭಾರತೀಯ ಪರಂಪರೆಯಲ್ಲಿ ಪ್ರೇಮಿಗಳ ದಿನಾಚರಣೆ ಸರಿಯಲ್ಲ. ಆದುದರಿಂದ ಪ್ರೇಮಿಗಳ ದಿನಾಚರಣೆ ಆಚರಿಸಬಾರದು. ನಗರದ ಎಲ್ಲಾ ಹೂ ಅಂಗಡಿ ಮತ್ತು ಗಿಫ್ಟ್ ಸೆಂಟರ್ ಗಳು ಪ್ರೇಮಿಗಳ ದಿನಾಚರಣೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು. ಈ ಮೂಲಕ ಈ ಆಚರಣೆಗೆ ಬೆಂಬಲ ಸೂಚಿಸಬಾರದು ಎಂದು ವಿನಂತಿಸುವುದಾಗಿ ಪುನೀತ್ ತಿಳಿಸಿದ್ದಾರೆ.

  • ಹುಡ್ಗೀರ ಕಾಟ ತಡೆಯಲು ಆಗ್ತಿಲ್ಲ, 5 ದಿನ ರಜೆ ಕೊಡಿ: ವಿದ್ಯಾರ್ಥಿಯ ರಜಾರ್ಜಿ ವೈರಲ್

    ಹುಡ್ಗೀರ ಕಾಟ ತಡೆಯಲು ಆಗ್ತಿಲ್ಲ, 5 ದಿನ ರಜೆ ಕೊಡಿ: ವಿದ್ಯಾರ್ಥಿಯ ರಜಾರ್ಜಿ ವೈರಲ್

    ಚಾಮರಾಜನಗರ: ವಿದ್ಯಾರ್ಥಿಯೊಬ್ಬ ಫೆಬ್ರವರಿ 14ರಂದು ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ರಜೆ ಕೇಳಿ ಪತ್ರ ಬರೆಯುವ ಮೂಲಕ ಸುದ್ದಿಯಾಗಿದ್ದಾನೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ದ್ವೀತಿಯ ಬಿ.ಕಾಂ ವಿದ್ಯಾರ್ಥಿ ಎಸ್ ಶಿವರಾಜು ವಿಕ್ಟರ್ ರಜೆ ಕೋರಿ ಪತ್ರ ಬರೆದಿದ್ದಾನೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಪತ್ರದಲ್ಲಿ ಏನಿದೆ..?
    ಪ್ರೇಮಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಹುಡುಗಿಯರ ಕಾಟ ತಡೆಯಲು ಆಗ್ತಿಲ್ಲ. ಹೀಗಾಗಿ ನನಗೆ ಐದು ದಿನ ರಜೆ ಕೋರಿ ಎಂದು ರಜಾರ್ಜಿ ಬರೆದಿದ್ದಾನೆ. ಈ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ವಿದ್ಯಾರ್ಥಿಯ ರಜಾರ್ಜಿ ವೈರಲ್ ಆಗುತ್ತಿದ್ದಂತೆಯೇ ಸಾಕಷ್ಟು ಕಾಮೆಂಟ್ ಗಳು ಬಂದಿವೆ.

  • ಪ್ರೇಮಿಗಳ ದಿನದಂದೇ ಪತಿಯಿಂದ ಪತ್ನಿಯ ಅಂಗಾಂಗ ದಾನ

    ಪ್ರೇಮಿಗಳ ದಿನದಂದೇ ಪತಿಯಿಂದ ಪತ್ನಿಯ ಅಂಗಾಂಗ ದಾನ

    ಚೆನ್ನೈ: ಮೆದುಳಿನ ರಕ್ತಸ್ರಾವದಿಂದ ಮೃತಪಟ್ಟ ಗರ್ಭಿಣಿ ಪತ್ನಿಯ ಅಂಗಾಂಗವನ್ನು ಪ್ರೇಮಿಗಳ ದಿನದಂದೇ ಪತಿ ದಾನ ಮಾಡಿ ಮಾನವೀಯತೆ ತೋರಿದ ಘಟನೆ ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

    ಕೋಕಿಲಾ(24) ಮೃತಪಟ್ಟ ಮಹಿಳೆ. ಕೋಕಿಲಾ ಕಡಕೂರಿನ ಭುವನಗಿರಿ, ಬಾಗಲಂತೇನ್ ನಿವಾಸಿಯಾಗಿದ್ದು, ಕಳೆದ ವರ್ಷ ಮೇ ತಿಂಗಳಿನಲ್ಲಿ ಗೌತಮ್ ರಾಜ್‍ರನ್ನು ಮದುವೆಯಾಗಿದ್ದರು. ಕೋಕಿಲಾ ಗರ್ಭಿಣಿ ಆಗಿದ್ದು, ತಮ್ಮ ಮೊದಲನೇ ಮಗುವಿಗೆ ಜನ್ಮ ನೀಡಲು ಫೆ.4ರಂದು ಹೆರಿಗೆಗಾಗಿ ಸಿಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

    ಕೋಕಿಲಾ ಗರ್ಭಿಣಿ ಆದ ಬಳಿಕ ದೇಹದ ತೂಕ ಕಡಿಮೆ ಆಗುತ್ತಿತ್ತು. ಇದರಿಂದ ಕೋಕಿಲಾ ಆರೋಗ್ಯ ಹದಗೆಟ್ಟಿತ್ತು. ಫೆ. 7ರಂದು ಕೋಕಿಲಾಳಿಗೆ ರಕ್ತಸ್ರಾವ ಶುರುವಾಗಿದೆ. ಆಗ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೆಣ್ಣು ಮಗುವನ್ನು ಹೊರ ತೆಗೆದಿದ್ದಾರೆ.

    ಹೆಣ್ಣು ಮಗು ಕೂಡ ತುಂಬಾ ವೀಕ್ ಆಗಿದ್ದ ಕಾರಣ ಮಗುವನ್ನು ಇನ್‍ಕ್ಯೂಬೇಟರ್ ಗೆ ಹಾಕಲಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವದಿಂದಾಗಿ ಕೋಕಿಲಾಗೆ ಪ್ರಜ್ಞೆ ಇರಲಿಲ್ಲ. ಫೆ.14 ಅಂದರೆ ಪ್ರೇಮಿಗಳ ದಿನದಂದು ಬೆಳಗ್ಗೆ 3.37ಕ್ಕೆ ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ಫೋಷಿಸಿದರು.

    ಈ ಶಾಕಿಂಗ್ ಸುದ್ದಿ ಕೇಳಿದ ಬಳಿಕ ಪತಿ ಗೌತಮ್ ರಾಜ್ ತನ್ನ ಪತ್ನಿ ಕೋಕಿಲಾಳ ದೇಹದ ಅಂಗಾಂಗವನ್ನು ದಾನ ಮಾಡಲು ನಿರ್ಧರಿಸಿದರು. ಹೃದಯ ಹಾಗೂ ಶ್ವಾಸಕೋಶವನ್ನು ಚೆನ್ನೈನ ಫೋರ್ಟಿಸ್ ಮಲಾರ್ ಆಸ್ಪತ್ರೆಗೆ ಸಾಗಿಸಲಾಯಿತು. ಕಣ್ಣು, ಕಿಡ್ನಿ ಹಾಗೂ ಲಿವರ್ ಸಿಎಂಸಿ ಆಸ್ಪತ್ರೆಗೆ ನೀಡಿದರು. ಇಂದು ಕೋಕಿಲಾ ತವರೂರಾದ ಪೊಲೂರಿನಲ್ಲಿ ಅಂತ್ಯಕ್ರಿಯೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv