Tag: Love Marriage

  • ಪ್ರೇಮ ವಿವಾಹಕ್ಕೆ ವಿರೋಧ- ಹುಡುಗನ ಮನೆಯ ನಾಲ್ವರ ಕಗ್ಗೊಲೆ

    ಪ್ರೇಮ ವಿವಾಹಕ್ಕೆ ವಿರೋಧ- ಹುಡುಗನ ಮನೆಯ ನಾಲ್ವರ ಕಗ್ಗೊಲೆ

    – ಮಹಿಳೆಯರು ಎನ್ನದೇ ಕೊಚ್ಚಿ ಕೊಲೆಗೈದ ಪಾಪಿಗಳು

    ರಾಯಚೂರು: ಪ್ರೇಮ ವಿವಾಹಕ್ಕೆ ವಿರೋಧದಿಂದ ಶುರುವಾದ ಗಲಾಟೆ ಇಂದು ನಾಲ್ಕು ಜನರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಯಚೂರಿನ ಸಿಂಧನೂರಿನ ಸುಕಾಲಪೇಟೆಯಲ್ಲಿ ನಡೆದಿದೆ. ಇಡೀ ರಾಯಚೂರು ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವಂತೆ ಹಾಡುಗಲೇ ನಡುರಸ್ತೆಯಲ್ಲಿ ನಾಲ್ಕು ಜನರ ಹತ್ಯೆ ಮಾಡಲಾಗಿದೆ.

    ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿ ಸಂಬಂಧಿಕರಿಂದ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಲಾಗಿದೆ. 38 ವರ್ಷದ ನಾಗರಾಜ್, 40 ವರ್ಷದ ಹನುಮೇಶ್, 55 ವರ್ಷದ ಸುಮಿತ್ರ ಹಾಗೂ 30 ವರ್ಷದ ಶ್ರೀದೇವಿ ಹತ್ಯೆಗೀಡಾಗಿದ್ದಾರೆ. ಮದುವೆಯಾದ ಯುವಕನ ತಾಯಿ, ಅತ್ತಿಗೆ, ಇಬ್ಬರು ಅಣ್ಣಂದಿರ ಕೊಲೆಯಾಗಿದೆ. ಗಲಾಟೆಯಲ್ಲಿ ಈರಪ್ಪ, ರೇವತಿ, ತಾಯಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಅಂಬಣ್ಣ ಹಾಗೂ ಫಕೀರಪ್ಪ ಸೇರಿ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಐದು ತಿಂಗಳ ಹಿಂದೆ ಒಂದೇ ಕೋಮಿನ ಮೌನೇಶ್ ಹಾಗೂ ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಮದುವೆಗೆ ಯುವತಿಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ವಿರೋಧದ ನಡುವೆಯೂ ಮದುವೆಯಾಗಿದ್ದ ಯುವಕ ಮತ್ತು ಯುವತಿ ಒಟ್ಟಾಗಿ ಸಂಸಾರ ನಡಸಿದ್ದರು. ಇದೇ ಹಿನ್ನೆಲೆಯಿಂದ ಇಂದು ಬೆಳಗ್ಗೆ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ಆಗಿತ್ತು.

    ಇದೇ ಗಲಾಟೆ ವಿಕೋಪಕ್ಕೆ ತಿರುಗಿ ಸಂಜೆ ವೇಳೆಗೆ ಯುವತಿಯ ಮನೆಯವರಿಂದ ಯುವಕನ ಮನೆಯ ನಾಲ್ವರ ಹತ್ಯೆಯಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಜೀವ ಭಯದಿಂದ ಮೌನೇಶ್ ಹಾಗೂ ಮಂಜುಳ ಪೊಲೀಸ್ ಠಾಣೆಗೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿಚಾರಣೆ ನಡೆದಿದೆ.

  • ಮದ್ವೆಯಾದ 12 ದಿನಕ್ಕೆ ನಾಪತ್ತೆ, ಪತಿಯನ್ನು ಹುಡುಕಿಕೊಡಿ – ಪತ್ನಿಯಿಂದ ದೂರು

    ಮದ್ವೆಯಾದ 12 ದಿನಕ್ಕೆ ನಾಪತ್ತೆ, ಪತಿಯನ್ನು ಹುಡುಕಿಕೊಡಿ – ಪತ್ನಿಯಿಂದ ದೂರು

    – ಗಂಡನ ಮನೆಯವರಿಂದಲೇ ಪತಿ ಅಪಹರಣದ ಆರೋಪ

    ಶಿವಮೊಗ್ಗ: ಮದುವೆಯಾದ 12 ದಿನಕ್ಕೆ ತನ್ನ ಪತಿಯನ್ನು ಅವರ ಕುಟುಂಬಸ್ಥರೇ ಕಿಡ್ನಾಪ್ ಮಾಡಿದ್ದು, ನನ್ನ ಪತಿಯನ್ನು ಹುಡುಕಿಕೊಡಿ ಎಂದು ಗೃಣಿಯೋರ್ವಳು ಪೊಲೀಸರಿಗೆ ದೂರು ನೀಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ.

    ಅರಕೆರೆ ಗ್ರಾಮದ ಅಂಬಿಕಾ ಹಾಗೂ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ರವಿರಾಜ್ ಈ ಇಬ್ಬರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಸುತ್ತಿದ್ದ ಈ ಇಬ್ಬರು ಕಳೆದ ಮೇ 7ರಂದು ಶಿವಮೊಗ್ಗ ಸಮೀಪದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಆದರೆ ಈ ಇಬ್ಬರ ಪ್ರೀತಿಗೆ ರವಿರಾಜ್ ಮನೆಯವರ ವಿರೋಧ ಇತ್ತು ಎನ್ನಲಾಗಿದೆ.

    ಅಂಬಿಕಾಳಿಗೆ ಈ ಮೊದಲು 2007ರಲ್ಲಿಯೇ ವಿವಾಹವಾಗಿತ್ತು. ಆದರೆ ಗಂಡ ಹೆಂಡತಿ ನಡುವೆ ಹೊಂದಾಣಿಕೆಯಾಗದ ಕಾರಣ 2014ರಲ್ಲಿ ವಿಚ್ಛೇದನ ಆಗಿತ್ತು. ವಿಚ್ಛೇದನದ ನಂತರ ಅಂಬಿಕಾ ತನ್ನ ತಾಯಿಯ ಜೊತೆ ಜೀವನ ಸಾಗಿಸುತ್ತಿದ್ದಳು. ಈಗಿರುವಾಗ ಸಂಬಂಧಿಕನೇ ಆದ ರವಿರಾಜ್ ಕಳೆದ ಒಂದು ವರ್ಷದಿಂದ ಅಂಬಿಕಾಳ ಮನೆಗೆ ಹೆಚ್ಚಾಗಿ ಬಂದು ಹೋಗುತ್ತಿದ್ದ. ಈ ನಡುವೆ ಇಬ್ಬರ ನಡುವೆ ಪ್ರೀತಿಯಾಗಿದೆ.

    ಮೊದಲೇ ವಿಚ್ಛೇದನ ಪಡೆದಿದ್ದ ಅಂಬಿಕಾಳಿಗೆ ಬಾಳು ಕೊಡುವುದಾಗಿ ಹೇಳಿದ್ದಾನೆ. ಗಂಡಿನ ಆಸರೆ ಇಲ್ಲದೇ ಸಮಾಜದಲ್ಲಿ ಬದುಕುವುದು ಕಷ್ಟ ಎಂದು ತೀರ್ಮಾನಿಸಿದ ಅಂಬಿಕಾ ರವಿರಾಜ್ ನನ್ನು ವಿವಾಹವಾಗಿದ್ದಾಳೆ. ಆದರೆ ಇದೀಗ ಮದುವೆಯಾದ 12 ದಿನಕ್ಕೆ ರವಿರಾಜ್ ನನ್ನು ಅವರ ಮನೆಯವರು ನಮ್ಮ ಮನೆಗೆ ಬಂದು ಕರೆದುಕೊಂಡು ಮುಚ್ಚಿಟ್ಟಿದ್ದಾರೆ ಎಂದು ಅಂಬಿಕಾ ಆರೋಪಿಸಿದ್ದಾಳೆ.

    ಈ ಬಗ್ಗೆ ಹೊಳೆಹೊನ್ನೂರು ಠಾಣೆಗೆ ದೂರು ಸಹ ನೀಡಿದ್ದಾಳೆ. ಹಾಗೂ ಪತಿ ಕಾಣೆಯಾಗಿ 12 ದಿನವಾದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಪತಿ ಮನೆಯವರ ಜೊತೆ ಶಾಮೀಲಾಗಿದ್ದಾರೆ ಎಂದು ಅಂಬಿಕಾ ಆರೋಪಿಸಿದ್ದಾಳೆ. ಹೀಗಾಗಿ ಪತಿಯನ್ನು ಶೀಘ್ರವಾಗಿ ಹುಡುಕಿಕೊಡುವಂತೆ ಎಸ್‍ಪಿ ಅವರಿಗೂ ಸಹ ಮನವಿ ಮಾಡಿಕೊಂಡಿದ್ದಾಳೆ.

  • 8 ತಿಂಗಳ ಹಿಂದೆ ಪ್ರೀತಿಸಿ ಮದುವೆ – ಇಂದು ವಿಷ ಸೇವಿಸಿ ಆತ್ಮಹತ್ಯೆ

    8 ತಿಂಗಳ ಹಿಂದೆ ಪ್ರೀತಿಸಿ ಮದುವೆ – ಇಂದು ವಿಷ ಸೇವಿಸಿ ಆತ್ಮಹತ್ಯೆ

    – ಕೊಲೆಯೆಂದು ಆರೋಪಿಸುತ್ತಿರುವ ಪೋಷಕರು

    ಚಿಕ್ಕಮಗಳೂರು: ಎಂಟು ತಿಂಗಳ ಹಿಂದೆಯಷ್ಟೇ ಪ್ರೀತಿಸಿದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ನವವಿವಾಹಿತೆಯ ಸಾವಿನ ಸುತ್ತ ಅನುಮಾನಗಳ ಹುತ್ತವೇ ಮೂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಗಾಳಿಗುತ್ತಿ ಗ್ರಾಮದಲ್ಲಿ ನಡೆದಿದೆ.

    8 ತಿಂಗಳ ಹಿಂದೆ ವಿವಾಹವಾಗಿದ್ದ ಗೃಹಿಣಿ ಗಂಡನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತಳನ್ನು ಕಡೂರು ತಾಲೂಕಿನ ಹಳೇ ಸಿದ್ದರಹಳ್ಳಿಯ ಶ್ವೇತಾ (18) ಎಂದು ಗುರುತಿಸಲಾಗಿದೆ. ಗಾಳಿಗುತ್ತಿ ಗ್ರಾಮದ ವಸಂತ್ ಅವರನ್ನು ಪ್ರೀತಿಸುತ್ತಿದ್ದ ಶ್ವೇತಾ ಎಂಟು ತಿಂಗಳ ಹಿಂದೆಯಷ್ಟೇ ಪ್ರೇಮ ವಿವಾಹವಾಗಿದ್ದಳು.

    ಇದೀಗ ಶ್ವೇತಾ ಪೋಷಕರು ಪ್ರೇಮ ವಿವಾಹವಾಗಿದ್ದರಿಂದ ವರದಕ್ಷಿಣಿ ತಂದಿಲ್ಲ. ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಆಕೆಯ ಗಂಡನ ಮನೆಯವರು ಪೀಡಿಸುತ್ತಿದ್ದರು. ಅವರೇ ಹೊಡೆದು ನಂತರ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತ ಶ್ವೇತಾ ಪೋಷಕರು ಕಡೂರು ಠಾಣೆಯಲ್ಲಿ ವರದಕ್ಷಿಣಿ ಕಿರುಕುಳವೆಂದು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಡೂರು ಪೊಲೀಸರು ಶ್ವೇತಾ ಪತಿ ವಸಂತ್‍ನನ್ನ ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

  • ಪ್ರೀತ್ಸಿ ಮದ್ವೆಯಾಗಿದ್ದ ನವ ವಿವಾಹಿತೆ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆ

    ಪ್ರೀತ್ಸಿ ಮದ್ವೆಯಾಗಿದ್ದ ನವ ವಿವಾಹಿತೆ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆ

    ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾದ ಘಟನೆ ಆನೇಕಲ್ ತಾಲೂಕಿನ ಹಿಲಲಿಗೆ ರೈಲ್ವೆ ಸ್ಟೇಷನ್ ಬಳಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಚಿತ್ರದುರ್ಗ ಮೂಲದ ಅರುಣಾಕ್ಷಿ ಶವವಾಗಿ ಪತ್ತೆಯಾದ ನವವಿವಾಹಿತೆ. ಅರುಣಾಕ್ಷಿ ಏಳು ತಿಂಗಳ ಹಿಂದೆಯಷ್ಟೇ ಆನೇಕಲ್‍ನ ರಾಚಮಾನಹಳ್ಳಿ ನಿವಾಸಿ ಶಿವಕುಮಾರ್ ಜೊತೆಗೆ ಮದುವೆ ಆಗಿತ್ತು. ಸೋಮವಾರ ರಾತ್ರಿಯೇ ಅರುಣಾಕ್ಷಿ ಕೊಲೆಯಾಗಿದ್ದಾಳೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ಅರುಣಾಕ್ಷಿ ಕೆಲವು ವರ್ಷಗಳ ಹಿಂದೆ ಓದಿಗಾಗಿ ಕುಟುಂಬದ ಜೊತೆಗೆ ಬಂದಿದ್ದಳು. ಆದರೆ ತನ್ನ ಕಾಲೇಜು ಬಳಿಯೇ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಎಂಬಾತನ ಪ್ರೇಮ ಪಾಶದಲ್ಲಿ ಬಿದ್ದಿದ್ದಳು. ಇಬ್ಬರೂ ಬೆಂಗಳೂರಿನ ಬೀದಿ ಬೀದಿ ಸುತ್ತಾಡಿದ್ದರು. ಸುಮಾರು 8 ತಿಂಗಳ ಹಿಂದೆ ಮನೆಯ ವಿರೋಧದ ನಡುವೆಯೂ ಅರುಣಾಕ್ಷಿ ಹಾಗೂ ಶಿವಕುಮಾರ್ ಮದುವೆಯಾಗಿದ್ದರು.

    ಕಳೆದು ಒಂದು ತಿಂಗಳ ಹಿಂದೆ ರಾಚಮಾನಹಳ್ಳಿಗೆ ಬಂದು ವಾಸವಾಗಿದ್ದ ಶಿವಕುಮಾರ್ ದಂಪತಿ ಸೋಮವಾರ ರಾತ್ರಿ ಸಣ್ಣ ವಿಚಾರಕ್ಕೆ ಫೋನ್‍ನಲ್ಲಿಯೇ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಮುನಿಸಿಕೊಂಡ ಅರುಣಾಕ್ಷಿ ತಾನು ತವರು ಮನೆಗೆ ಹೋಗುತ್ತೇನೆ ಅಂತ ಪತಿಗೆ ಹೇಳಿ, ತನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಆನೇಕಲ್ ತಾಲೂಕಿನ ಹಿಲಲಿಗೆ ರೈಲ್ವೆ ಸ್ಟೇಷನ್‍ಗೆ ಬಂದಿದ್ದಳು. ಆದರೆ ಇಂದು ಬೆಳಗ್ಗೆ ಆಕೆಯ ಮೃತ ದೇಹ ರೈಲ್ವೆ ಹಳಿಯ ಬಳಿ ಪತ್ತೆಯಾಗಿದೆ.

    ಶಿವಕುಮಾರ್ ಪತ್ನಿಗಾಗಿ ಭಾನುವಾರ ರಾತ್ರಿ ಹಾಗೂ ಸೋಮ ಬೆಂಗಳೂರಿನ ಹಲವು ಕಡೆ ಹುಡುಕಾಡಿದ್ದ. ಆದರೆ ಸಿಗದೆ ಮನೆಗೆ ವಾಪಸ್ ಬಂದಿದ್ದ. ರೈಲ್ವೆ ಹಳಿಯ ಮೇಲೆ ಅರುಣಾಕ್ಷಿ ಮೃತದೇಹ ಬೆಳಗ್ಗೆ ಪತ್ತೆಯಾಗಿದೆ. ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಯಾರೋ ಕೊಲೆ ಮಾಡಿ ಶವವನ್ನು ರೈಲ್ವೆ ಹಳಿ ಮೇಲೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

  • ನಾನು ಬರಲ್ಲ, ನನ್ಗೆ ಇವನೇ ಬೇಕು-ಪ್ರಿಯತಮನನ್ನ ಮದ್ವೆಯಾದ ಯುವತಿಯ ಅಳಲು

    ನಾನು ಬರಲ್ಲ, ನನ್ಗೆ ಇವನೇ ಬೇಕು-ಪ್ರಿಯತಮನನ್ನ ಮದ್ವೆಯಾದ ಯುವತಿಯ ಅಳಲು

    ತುಮಕೂರು: ಪ್ರೀತಿಸಿ ಮದುವೆಯಾದ ಜೋಡಿಗೆ ಹೆತ್ತವರೇ ವಿಲನ್ ಆಗಿದ್ದಾರೆ. ಅಲ್ಲದೆ ಪೋಷಕರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರೇಮಿಗಳಿಬ್ಬರು ತಮ್ಮ ಅಳಲು ತೋಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

    ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದ್ದನಾಯಕನಹಳ್ಳಿ ಗ್ರಾಮದ ಲಕ್ಷ್ಮಿ ಹಾಗೂ ಶ್ರೀನಿವಾಸ್ ವಿಡಿಯೋ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಯುವ ಪ್ರೇಮಿಗಳು ಪೋಷಕರ ವಿರೋಧದ ನಡುವೆಯೂ ದೇವಾಲಯದಲ್ಲಿ ಮದುವೆಯಾಗಿದ್ದಾರೆ.

    ಯುವತಿಯ ಅಳಲು:
    ಪತಿಯ ಜೊತೆ ಕುಳಿತಿರುವ ಯುವತಿ, ನಮ್ಮ ಪ್ರೀತಿ ಬಗ್ಗೆ ಮನೆಯಲ್ಲಿ ಹೇಳಿದ್ರೆ ಪೋಷಕರು ಒಪ್ಪಲಿಲ್ಲ. ಬೇರೊಬ್ಬನ ಜೊತೆ ನನ್ನ ಮದುವೆ ನಿಶ್ಚಯ ಮಾಡಲು ಮುಂದಾದಗ ಮನೆಯಿಂದ ಹೊರಬಂದು ಶ್ರೀನಿವಾಸ್ ಜೊತೆಯಲ್ಲಿ ತಿರುಪತಿಗೆ ಹೋದೆ. ಅಲ್ಲಿಂದ ಮರಡಿ ರಂಗನಾಥಸ್ವಾಮಿ ದೇವಾಲಯದಲ್ಲಿ ಮದ್ವೆ ಆದೆ. ನಮ್ಮ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದರಿಂದ ನೇರವಾಗಿ ಶಿರಾ ಟೌನ್ ಪೊಲೀಸ್ ಠಾಣೆಗೆ ಸ್ಪಷ್ಟನೆ ನೀಡಲು ಬಂದೆ. ಅಲ್ಲಿ ಪೋಷಕರು ನನ್ನ ಮನವೊಲಿಸಿ ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಪೊಲೀಸರ ಮುಂದೆಯೇ ನನಗೆ ಇವನೇ ಬೇಕು, ಬರಲ್ಲ ಎಂದು ಹೇಳಿಕೆ ದಾಖಲಿಸಿದ್ದೇನೆ. ಮಹಿಳಾ ಕೇಂದ್ರಕ್ಕೆ ತೆರಳಿ ಮದ್ವೆಯಾದ ಫೋಟೋ, ನಮ್ಮ ಐಡಿ ನೀಡಿ ಬಂದಿದ್ದೇವೆ ಎಂದು ಹೇಳಿದ್ದಾನೆ.

    ಸಬ್ ರಿಜಿಸ್ಟಾರ್ ನಲ್ಲಿ ಮದುವೆಯಾಗಲು ಹೋದ್ರೆ ಪೋಷಕರು ಅವಕಾಶ ಮಾಡಿಕೊಡುತ್ತಿಲ್ಲ. ಕೆಲವರಿಂದ ಬೆದರಿಕೆ ಸಹ ಹಾಕಿಸುತ್ತಿದ್ದಾರೆ. ನನಗೆ ತಲೆ ಕೆಟ್ಟಿದೆ ಅಂತಾ ನಮ್ಮ ಪೋಷಕರು ಸುಳ್ಳು ಹೇಳುತ್ತಿದ್ದಾರೆ. ನಾನು ಪದವೀಧರಳಾಗಿದ್ದು, ಸ್ವಇಚ್ಛೆಯ ಮೇರೆಗೆ ಮದುವೆ ಆಗಿದ್ದೇನೆ ಎಂದು ಲಕ್ಷ್ಮಿ ಹೇಳಿಕೊಂದ್ದಾಳೆ.

    ವಿಡಿಯೋದಲ್ಲಿ ಲಕ್ಷ್ಮಿ ಪತಿ ಶ್ರೀನಿವಾಸ್ ಮಾತನಾಡಿ, ನಮ್ಮ ಕುಟುಂಬಸ್ಥರು ಮದುವೆಯನ್ನು ಒಪ್ಪಿಕೊಂಡಿದ್ದಾರೆ. ಲಕ್ಷ್ಮಿ ಪೋಷಕರೇ ನಮ್ಮ ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ. ರಕ್ಷಣೆ ಕೋರಿ ಈ ವಿಡಿಯೋ ಮಾಡುತ್ತಿದ್ದೇವೆ ಎಂದು ಹೇಳಿದ್ದಾನೆ.

    ಅಲ್ಲದೆ ಮದುವೆ ನೋಂದಣಿಗೆ ಹೋದರೆ ಸಬ್ ರಿಜಿಸ್ಟಾರ್ ಕಚೇರಿ ಮುಂದೆ ಯುವತಿಯ ಪೋಷಕರ ಕಡೆಯವರು ಬಂದು ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ ಅಂತಾ ಹೇಳಿಕೊಂಡಿದ್ದಾರೆ. ನಾನು ಕಿಡ್ನಾಪ್ ಆಗಿಲ್ಲ, ನನ್ನ ಆಸೆಯಂತೆಯೇ ಮದುವೆಯಾಗಿದ್ದು, ನನ್ನ ತಲೆ ಸರಿ ಇದೆ. ನಾನು ಫಿಟ್ ಆ್ಯಂಡ್ ಫೈನ್ ಆಗಿದ್ದೀನಿ ಎಂದು ಯುವತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

  • ಪ್ರೀತಿಸಿ ಮದ್ವೆಯಾಗಿದ್ದ ಪತಿಯನ್ನ ಪೋಷಕರೊಂದಿಗೆ ಸೇರಿ ಅಟ್ಟಾಡಿಸಿ ಕೊಲೆಗೈದ ಪತ್ನಿ

    ಪ್ರೀತಿಸಿ ಮದ್ವೆಯಾಗಿದ್ದ ಪತಿಯನ್ನ ಪೋಷಕರೊಂದಿಗೆ ಸೇರಿ ಅಟ್ಟಾಡಿಸಿ ಕೊಲೆಗೈದ ಪತ್ನಿ

    – ಮಗನನ್ನ ನೋಡಲು ಹೋಗಿ ಬಲಿಯಾದ

    ಬೆಳಗಾವಿ: ಮಹಿಳೆಯೊಬ್ಬಳು ಪೋಷಕರೊಂದಿಗೆ ಸೇರಿ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನು ಅಟ್ಟಾಡಿಸಿ ಕೊಲೆಗೈದ ಘಟನೆ ನಗರದಲ್ಲಿ ನಡೆದಿದೆ.

    ಬೆಳಗಾವಿಯ ಲಕ್ಷ್ಮೀ ನಗರದ ನಿವಾಸಿ ಕಿರಣ್ ಲೊಕರೆ (28) ಕೊಲೆಯಾದ ಪತಿ. ಪತ್ನಿ ಸವಿತಾ, ಮಾವ ವಿಠ್ಠಲ್, ಅತ್ತೆ ಸುರೇಖಾ, ಭಾಮೈದ ಜ್ಯೋತಿಬಾ ಕೊಲೆಗೈದ ಆರೋಪಿಗಳು. ಕಿರಣ್ ಎರಡು ವರ್ಷದ ಮಗನನ್ನು ನೋಡಲು ಹೋದಾಗ ಘಟನೆ ನಡೆದಿದೆ.

    ಲಕ್ಷ್ಮೀ ನಗರದ ನಿವಾಸಿಗಳಾಗಿದ್ದ ಕಿರಣ್ ಹಾಗೂ ಸವಿತಾ ಪರಸ್ಪರ ಪ್ರೀತಿಸಿ, ಐದು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎರಡು ವರ್ಷದ ಮಗು ಕೂಡ ಇದೆ. ಕೌಟುಂಬಿಕ ಕಲಹದಿಂದಾಗಿ ಕಿರಣ್ ಹಾಗೂ ಸವಿತಾ ಒಂದು ವರ್ಷದ ಹಿಂದೆ ಬೇರೆ ಬೇರೆಯಾಗಿದ್ದರು. ಬಳಿಕ ಸವಿತಾ ಮಗುವನ್ನು ಕರೆದುಕೊಂಡು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದಳು.

    ಪತ್ನಿ ಹಾಗೂ ಮಗುವಿನ ಅಗಲಿಕೆಯಿಂದ ಕಿರಣ್ ಮಾನಸಿಕವಾಗಿ ಕುಗ್ಗಿದ್ದ. ಸವಿತಾ ಮಗುವನ್ನು ಕರೆದುಕೊಂಡು ಇಂದು ಬೆಳಗಾವಿಗೆ ವಾಸಪ್ ಬಂದಿದ್ದಳು. ಈ ಸುದ್ದಿ ತಿಳಿಯುತ್ತಿದ್ದಂತೆ ಕಿರಣ್ ಮಗನನ್ನು ನೋಡಲು ಪತ್ನಿಯ ತವರು ಮನೆಗೆ ಬಂದಿದ್ದ. ಈ ವೇಳೆ ಸವಿತಾ ಹಾಗೂ ಕಿರಣ್ ಮಧ್ಯೆ ಜಗಳ ಆರಂಭವಾಗಿದ್ದು, ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಸವಿತಾ ಹಾಗೂ ಆಕೆಯ ಪೋಷಕರು ಕಿರಣ್‍ನನ್ನು ಅಟ್ಟಾಡಿಸಿ ಕಬ್ಬಿಣದ ರಾಡ್​ನಿಂದ  ಹಲ್ಲೆ ಮಾಡಿ, ಕೊಲೆಗೈದಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಕಿರಣ್ ಮೃತದೇಹವನ್ನು ಮರಣೋತ್ತ ಪರೀಕ್ಷೆಗೆ ಕಳುಹಿಸಲಾಗಿದ್ದು, ಆತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಶಹಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮದ್ವೆಯಾದ ಒಂದೇ ದಿನಕ್ಕೆ ಪತ್ನಿಯನ್ನು ರೈಲಿನಿಂದ ತಳ್ಳಿ ತಾನೂ ಹಾರಿದ ಪತಿ

    ಮದ್ವೆಯಾದ ಒಂದೇ ದಿನಕ್ಕೆ ಪತ್ನಿಯನ್ನು ರೈಲಿನಿಂದ ತಳ್ಳಿ ತಾನೂ ಹಾರಿದ ಪತಿ

    ದಿಸ್ಪುರ್: ಮದುವೆಯಾಗಿ ಒಂದೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿ ತಾನೂ ಹಾರಿದ ಘಟನೆ ಅಸ್ಸಾಂನ ಟೆನ್ಸುಕಿಯದ ರೈಲಿನಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ನಡೆದಿದ್ದು, ತನ್ನ 18 ವರ್ಷದ ಪತ್ನಿ ಬೇಬಿಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿ ನಂತರ ಪತಿ ಹಿರಾನು ಕೂಡ ಹಾರಿದ್ದಾನೆ. ಆದರೆ ಈ ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫತೇಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ದಂಪತಿಯನ್ನು ಪೊಲೀಸರು ಹತ್ತಿರದ ಜಿಲ್ಲಾ ಆಸ್ಪತ್ರೆಯ ತುರ್ತು ವಾರ್ಡಿಗೆ ಸೇರಿಸಿದ್ದಾರೆ.

    ಚಿಕಿತ್ಸೆಯ ನಂತರ ಈ ವಿಚಾರದ ಬಗ್ಗೆ ಮಾತನಾಡಿರುವ ಹಿರಾ ಪತ್ನಿ ಬೇಬಿ, ಮೊರಾದಾಬಾದ್ ನಿವಾಸಿಯಾದ ನನ್ನ ಪತಿ ನನ್ನನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿ ನಂತರ ಅವನು ರೈಲಿನಿಂದ ಹಾರಿದ್ದಾನೆ ಎಂದು ಆರೋಪ ಮಾಡಿದ್ದಾಳೆ. ಒಂದು ದಿನದ ಹಿಂದೆ ಹಿರಾ ಜೊತೆ ದೇವಸ್ಥಾನದಲ್ಲಿ ಪ್ರೇಮ ವಿವಾಹವಾಗಿದ್ದೇವು ಎಂದು ಹೇಳಿದ್ದಾಳೆ.

    ನನಗೆ ಕೆಳದ ಮೂರು ತಿಂಗಳಿನಿಂದ ಅಪರಿಚಿತ ಸಂಖ್ಯೆಯಿಂದ ಹಿರಾ ಕರೆ ಮಾಡುತ್ತಿದ್ದ. ನಂತರ ನಾನು ಅವರ ಜೊತೆ ಮಾತನಾಡುತ್ತಿದ್ದೆ. ನಮ್ಮಿಬ್ಬರ ನಡುವೆ ಪ್ರೀತಿ ಬೆಳೆಯಿತು. ಇಬ್ಬರು ಸೇರಿ ಮದುವೆಯಾಗಲು ತೀರ್ಮಾನ ಮಾಡಿ, ಮನೆಯಿಂದ ಓಡಿಹೋದೆವು. ಜುಲೈ 26 ರಂದು ಹಿರಾ ಟೆನ್ಸುಕಿಯನಗೆ ಬಂದು ನನ್ನನ್ನು ಕರೆದುಕೊಂಡು ಬಂದ. ನಂತರ ಅಲ್ಲಿಂದ ಪಾಟ್ನಾ ತಲುಪಿದೆವು. ಎರಡು ದಿನಗಳ ಕಾಲ ಹೋಟೆಲ್‍ನಲ್ಲಿ ಉಳಿದುಕೊಂಡು ಜುಲೈ 29 ರಂದು ದೇವಾಲಯವೊಂದರಲ್ಲಿ ಮದುವೆಯಾದೆವು ಎಂದು ಬೇಬಿ ಪೊಲೀಸರಿಗೆ ತಿಳಿಸಿದ್ದಾಳೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದನ್ ಸಿಂಗ್, ಬೇಬಿ ಗಂಭೀರ ಸ್ಥಿತಿಯಲ್ಲಿಂದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ಮಾಡಲು ರೈಲ್ವೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

  • ಲವ್ ಮಾರೇಜ್ ಆದ 6 ತಿಂಗಳಿಗೇ ಹೆಣವಾದ ನವ ವಿವಾಹಿತೆ!

    ಲವ್ ಮಾರೇಜ್ ಆದ 6 ತಿಂಗಳಿಗೇ ಹೆಣವಾದ ನವ ವಿವಾಹಿತೆ!

    ಚಿಕ್ಕಮಗಳೂರು: ಪ್ರೇಮ ವಿವಾಹವಾಗಿ ಆರೇ ತಿಂಗಳಿಗೆ ನವವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ತರಿಕೆರೆ ತಾಲೂಕಿನ ಶಿವನಿ ಸಮೀಪದ ದಂದೂರು ಗ್ರಾಮದಲ್ಲಿ ನಡೆದಿದೆ.

    ಮೃತ ಯುವತಿಯನ್ನ ಲತಾ(19) ಎಂದು ಗುರುತಿಸಲಾಗಿದೆ. ದಂದೂರಿನ ನಿವಾಸಿಯಾಗಿದ್ದ ಲತಾ ಅದೇ ಊರಿನ ಧರ್ಮರಾಜ್‍ನನ್ನು ಪ್ರೀತಿಸುತ್ತಿದ್ದಳು. ಲತಾಳ ಪ್ರೀತಿ ಆಕೆಯ ಅಪ್ಪ-ಅಮ್ಮನಿಗೆ ಇಷ್ಟರವಿರಲಿಲ್ಲ. ಆದ್ರೆ, ಧರ್ಮರಾಜ್ ಪೋಷಕರು ಮುಂದೆ ನಿಂತು ತರೀಕೆರೆಯ ಕಲ್ಲತ್ತಿಗಿರಿ ದೇವಾಲಯದಲ್ಲಿ ಇಬ್ಬರಿಗೂ ಮದುವೆ ಮಾಡಿದ್ದರು.

    ಮದುವೆಯಾದ ಆರೇ ತಿಂಗಳಿಗೆ ಲತಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ, ಮೃತ ಲತಾಳ ಪೋಷಕರು ಲತಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ನೇಣು ಬಿಗಿದುಕೊಂಡಿರುವ ಆಕೆಯ ಕಾಲುಗಳು ನೆಲದ ಮೇಲೆಯೇ ಇವೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ.

    ಈ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಗೆ ಲತಾ ಪೋಷಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಪೋಷಕರ ಒಪ್ಪಿಗೆಯಿಲ್ಲದೆ ಲವ್ ಮ್ಯಾರೇಜ್ ಆಗಲ್ಲ- ಪ್ರಮಾಣ ಮಾಡಲಿದ್ದಾರೆ 10 ಸಾವಿರ ವಿದ್ಯಾರ್ಥಿಗಳು

    ಪೋಷಕರ ಒಪ್ಪಿಗೆಯಿಲ್ಲದೆ ಲವ್ ಮ್ಯಾರೇಜ್ ಆಗಲ್ಲ- ಪ್ರಮಾಣ ಮಾಡಲಿದ್ದಾರೆ 10 ಸಾವಿರ ವಿದ್ಯಾರ್ಥಿಗಳು

    ಗಾಂಧಿನಗರ: ಪ್ರೇಮಿಗಳ ದಿನದಂದು ಸುಮಾರು 10 ಸಾವಿರ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪಡೆಯದೇ ಪ್ರೇಮ ವಿವಾಹವಾಗುವುದಿಲ್ಲ ಎಂದು ಪ್ರಮಾಣ ಮಾಡಲಿದ್ದಾರೆ.

    ಯುವಕ, ಯುವತಿಯರು ತಮ್ಮ ಪ್ರೀತಿ, ಪ್ರೇಮವನ್ನು ಕಳೆದುಕೊಂಡರೂ ಪರವಾಗಿಲ್ಲ, ಆದರೇ ಪೋಷಕರ ಒಪ್ಪಿಗೆಯಿಲ್ಲದೆ ಪ್ರೇಮ ವಿವಾಹವಾಗುವುದಿಲ್ಲವೆಂದು ನಿರ್ಧಾರ ಮಾಡಿದ್ದಾರೆ. ಲಾಫ್ಟರ್ ಥೆರಪಿಸ್ಟ್ ಕಮಲೇಶ್ ಮಸಾಲಾವಾಲಾ ನಡೆಸುತ್ತಿರುವ ಹಾಸ್ಯಮೇವ ಜಯತೆ ಎಂಬ ಸ್ವಯಂಪ್ರೇರಿತ ಸಂಘಟನೆ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ ಸೂರತ್‍ನ ಸುಮಾರು 15 ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಲ್ಲಿ ತಾವು ಪ್ರೇಮ ವಿವಾಹವಾಗಲ್ಲ ಎಂದು ಪ್ರಮಾಣ ಮಾಡಲು ಮುಂದಾಗಿದ್ದು, ಸಂಸ್ಕಾರ ಭಾರತಿ, ಪ್ರೆಸಿಡೆನ್ಸಿ ಹೈಸ್ಕೂಲ್ ಸೇರಿ 15 ಶಾಲೆಗಳಲ್ಲಿ ಏಕಕಾಲದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಮಾಣ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ಈ ಬಗ್ಗೆ ಮಾತನಾಡಿದ ಕಾರ್ಯಕ್ರಮ ಆಯೋಜಕರು, “ಇತ್ತೀಚೆಗೆ ಯುವಕ ಯುವತಿಯರು ಪ್ರೀತಿಯಲ್ಲಿ ಬೀಳುತ್ತಾರೆ ಅಲ್ಲದೆ ತಾವು ಪ್ರೀತಿಸಿದವರನ್ನೇ ಮದುವೆಯಾಗುವ ದೃಢ ನಿರ್ಧಾರ ಮಾಡುತ್ತಾರೆ. ಆದರಲ್ಲಿ ಮನೆಬಿಟ್ಟು ಓಡಿ ಹೋಗಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಮದುವೆಯಾದವರ ಸಂಬಂಧ ಬೇಗನೇ ಮುರಿದುಬೀಳುತ್ತವೆ. ಇಂತಹ ನಿರ್ಧಾರ ಮಾಡುವಾಗ ಪೋಷಕರ ಸಲಹೆ ಅವಶ್ಯಕ ಎಂಬ ಸಂದೇಶ ನೀಡಲು ಈ ಹೊಸ ಕಾರ್ಯಕ್ರಮವನ್ನು ನಡೆಸಲು ಹೊರಟಿದ್ದೇವೆ” ಎಂದು ತಿಳಿಸಿದ್ದಾರೆ.

    ಅಷ್ಟೇ ಅಲ್ಲದೆ ಈ ಕಾರ್ಯಕ್ರಮದ ಸಹ ಆಯೋಜಕರಾಗಿರುವ ಕವಿ ಮುಕುಲ್ ಛೋಕ್ಸಿ ಮಾತನಾಡಿ, “ಹಲವು ಯುವಕರು ಪೋಷಕರ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವಾಗುತ್ತಾರೆ. ಯಾಕೆ ಪೋಷಕರು ತಮ್ಮ ಮಕ್ಕಳ ಪ್ರೀತಿಯನ್ನು ವಿರೋಧಿಸುತ್ತಾರೆ ಎಂದು ಯುವಕರಿಗೆ ತಿಳಿದಿರೋದಿಲ್ಲ. ಹೀಗಾಗಿ ಈ ರೀತಿ ಪ್ರಮಾಣ ಮಾಡಿದಾಗ ತಮ್ಮ ಪೋಷಕರ ಭಾವನೆಗಳಿಗೆ ಗೌರವ ಕೊಡಲು ಯುವಕರು ನಿರ್ಧಾರ ಮಾಡುತ್ತಾರೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ನಮ್ಮ ಪೋಷಕರಿಗೋಸ್ಕರ ನಾವು ಈ ರೀತಿ ಪ್ರಮಾಣ ಮಾಡಲು ಸಿದ್ಧರಿದ್ದೇವೆ. ತಂದೆ ತಾಯಿಯರು ತಮ್ಮ ಮಕ್ಕಳಿಗೆ ಮಾಡಿರುವಷ್ಟು ತ್ಯಾಗ ಈ ಜಗತ್ತಿನಲ್ಲಿ ಬೇರೆ ಯಾರೂ ಮಾಡಿಲ್ಲ. ಹೀಗಾಗಿ ಅವರ ನಿರ್ಧಾರಗಳಿಗೆ ನಾವು ಗೌರವ ನೀಡುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮ ವಿವಾಹವಾದ ತಂಗಿಯ ಜೀವನ ಸರಿಪಡಿಸಲು ಆಗಮಿಸ್ತಿದ್ದ ಸಹೋದರರ ಕಾರು ಪಲ್ಟಿ

    ಪ್ರೇಮ ವಿವಾಹವಾದ ತಂಗಿಯ ಜೀವನ ಸರಿಪಡಿಸಲು ಆಗಮಿಸ್ತಿದ್ದ ಸಹೋದರರ ಕಾರು ಪಲ್ಟಿ

    ಚಿತ್ರದುರ್ಗ: ಅನ್ಯ ಧರ್ಮದೊಂದಿಗೆ ಪ್ರೇಮ ವಿವಾಹವಾದ ತಂಗಿಯ ಜೀವನ ಸರಿಪಡಿಸಲು ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದ ಸಹೋದರರ ಕಾರು ಪಲ್ಟಿಯಾಗಿ ಒಂದೇ ಕುಟುಂಬದ ಇಬ್ಬರು ಅಣ್ತಮ್ಮಂದಿರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಹೊರವಲಯದಲ್ಲಿ ನಡೆದಿದೆ.

    ಅಕ್ರಂ(27) ಹಾಗೂ ಇರ್ಫಾನ್(24) ಮೃತಪಟ್ಟ ಸಹೋದರರು. ಶಿವಮೊಗ್ಗದಿಂದ ತಂಗಿಯ ಭೇಟಿಗಾಗಿ ತಾಯಿ ಸಹಿತ ಇಬ್ಬರು ಮಕ್ಕಳು ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದರು. ಆಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಅಕ್ರಂ ಸ್ಥಳದಲ್ಲಿಯೇ ಬುಧವಾರ ರಾತ್ರಿ ಅಸುನೀಗಿದ್ದನು.

    ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಹಾಗು ಇನ್ನೊಬ್ಬ ಮಗನಾದ ಇರ್ಫಾನ್‍ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇರ್ಫಾನ್ ಕೂಡ ಕೊನೆಯುಸಿರೆಳೆದಿದ್ದಾನೆ. ತಾಯಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ದಾವಣಗೆರೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೇ ಸಹೋದರಿ ಬದುಕನ್ನು ಸರಿಮಾಡಲು ಬಂದ ಸೋದರರು ಸ್ಮಶಾನ ಸೇರುವಂತಾಗಿದ್ದು, ಹೊಸ ಬಾಳಿಗೆ ಕಾಲಿಟ್ಟ ಯುವತಿಗೆ ಶುಭ ಹಾರೈಸಬೇಕಿದ್ದ ಕುಟುಂಬಸ್ಥರು ಹಿಡಿಶಾಪ ಹಾಕುವಂತಾಗಿದೆ.

    ಸದ್ಯ ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv