Tag: Love Letter

  • ಸುಟ್ಟಿದ್ದು ಪ್ರೇಮ ಪತ್ರ – ಅಪಾರ್ಟ್‌ಮೆಂಟ್‌ಗೆ ಬಿತ್ತು ಬೆಂಕಿ

    ಸುಟ್ಟಿದ್ದು ಪ್ರೇಮ ಪತ್ರ – ಅಪಾರ್ಟ್‌ಮೆಂಟ್‌ಗೆ ಬಿತ್ತು ಬೆಂಕಿ

    ವಾಷಿಂಗ್ಟನ್: ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಪ್ರೇಮ ಪತ್ರ ಸುಡುತ್ತಿದ್ದಾಗ ಆಕೆಯ ನಿರ್ಲಕ್ಷ್ಯದಿಂದ ಅಪಾರ್ಟ್‌ಮೆಂಟ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಅಮೆರಿಕದ ನೆಬ್ರಾಸಿಕದಲ್ಲಿ ನಡೆದಿದೆ.

    ಅರಿಯುನಾ ಶನೆಲ್ ಲಿಲ್ಲಾರ್ಡ್(19) ಬ್ಯುಟೇನ್ ಟಾರ್ಚ್ ಸಹಾಯದಿಂದ ತನ್ನ ಮಾಜಿ ಪ್ರಿಯಕರ ನೀಡಿದ್ದ ಪ್ರೇಮ ಪತ್ರವನ್ನು ಸುಡುತ್ತಿದ್ದಳು. ಮೊದಲು ಪತ್ರಗಳಿಗೆ ಸರಿಯಾಗಿ ಬೆಂಕಿ ಹೊತ್ತಿಕೊಳ್ಳಲಿಲ್ಲ. ಇದರಿಂದ ಮನನೊಂದ ಅರಿಯುನಾ ಆ ಪ್ರೇಮ ಪತ್ರಗಳನ್ನು ನೆಲದ ಮೇಲೆ ಬಿಸಾಕಿ ಮತ್ತೊಂದು ರೂಮಿನಲ್ಲಿ ಮಲಗಲು ಹೋಗಿದ್ದಳು.

    ಸ್ವಲ್ಪ ಸಮಯದ ನಂತರ ನಿದ್ದೆಯಿಂದ ಎದ್ದಾಗ ಅರಿಯುನಾ ಕಾರ್ಪೆಟ್‍ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ್ದಾಳೆ. ತಕ್ಷಣ ಆಕೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

    ಯುವತಿ ಮಾಡಿದ ಎಟವಟ್ಟಿನಿಂದ ಸುಮಾರು 4,000 ಡಾಲರ್ ಅಂದರೆ 2,85,270 ರೂ. ನಷ್ಟವಾಗಿದೆ. ಈ ಘಟನೆಯಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

  • 10ರ ಪೋರಿಗೆ ಪ್ರೇಮ ಪತ್ರ ಬರೆದ 13ರ ಪೋರ

    10ರ ಪೋರಿಗೆ ಪ್ರೇಮ ಪತ್ರ ಬರೆದ 13ರ ಪೋರ

    -ನಮ್ಮ ಹುಡ್ಗ ಒಳ್ಳೆಯವನು ಎಂದ ಪೋಷಕರು

    ಗಾಂಧಿನಗರ: 13 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕಿಗೆ ಪ್ರೇಮ ಪತ್ರ ಬರೆದಿದ್ದು, ಬಳಿಕ ಇಬ್ಬರ ಕುಟುಂಬದವರು ಪರಸ್ಪರ ಹೊಡೆದಾಡಿಕೊಂಡ ಘಟನೆ ಗುಜರಾತ್‍ನ ಸುರೇಂದ್ರನಗರ ಜಿಲ್ಲೆಯಲ್ಲಿ ನಡೆದಿದೆ.

    ಸುರೇಂದ್ರನಗರದ ಗೋಲಿಡಾ ಗ್ರಾಮದ ಆನಂದ್‍ಪುರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಾಲಕ ಹಾಗೂ ಬಾಲಕಿಯ ಕುಟುಂಬಸ್ಥರು ಪರಸ್ಪರ ಆರೋಪ ಮಾಡುತ್ತಿದ್ದಾರೆ.

    ಮಾಹಿತಿಗಳ ಪ್ರಕಾರ ಬಾಲಕ ‘ಐ ಲವ್ ಯೂ’ ಎಂದು ಹೇಳುತ್ತಾ ಬಾಲಕಿಗೆ ಹಿಂಸೆ ನೀಡುತ್ತಿದ್ದನು. ಅಲ್ಲದೇ ಬಾಲಕ ಶಾಲೆಯಲ್ಲಿ ಬಾಲಕಿಗೆ ಲವ್ ಲೆಟರ್ ಕೂಡ ನೀಡುತ್ತಿದ್ದನು. ಗುರುವಾರ ಈ ಘಟನೆ ಬಗ್ಗೆ ಇಬ್ಬರ ಕುಟುಂಬದವರು ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬಾಲಕ ತನಗೆ ಹಿಂಸೆ ನೀಡುತ್ತಿರುವುದನ್ನು ಬಾಲಕಿ ತನ್ನ ಪೋಷಕರ ಬಳಿ ಹೇಳಿದ್ದಾಳೆ. ಈ ವೇಳೆ ಬಾಲಕಿಯ ಪೋಷಕರು ಬಾಲಕನ ಜೊತೆ ಶಾಂತಿಯುತವಾಗಿ ಮಾತನಾಡುತ್ತಿದ್ದರು. ಆದರೆ ಬಾಲಕನ ಕುಟುಂಬದವರಿಗೆ ಅವರು ಮಾಡುತ್ತಿದ್ದ ಆರೋಪಗಳು ಇಷ್ಟವಾಗಲಿಲ್ಲ. ಇದರಿಂದ ಬೇಸರಗೊಂಡು ಬಾಲಕಿಯ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಹಲ್ಲೆ ಮಾಡುವಾಗ ಬಾಲಕನ ಕುಟುಂಬದವರು ಬಾಲಕಿಯ ಪೋಷಕರ ಮೇಲೆ ಖಾರದ ಪುಡಿ ಎರಚಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯಲ್ಲಿ ಬಾಲಕಿಯ ಕಡೆಯವರಾದ 6 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯಲ್ಲಿದ್ದ ಅಧಿಕಾರಿ ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕನ ಕುಟುಂಬದವರು ಬಾಲಕಿಯ ಪೋಷಕರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಹಲ್ಲೆಯಿಂದ ನಮ್ಮ ಕಡೆಯವರು 4 ಜನ ಗಾಯಗೊಂಡಿದ್ದಾರೆ. ಅಲ್ಲದೇ ಬಾಲಕಿಯ ಕುಟುಂಬದವರು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಹುಡುಗ ಯಾರಿಗೂ ಪ್ರೇಮ ಪತ್ರ ಬರೆದಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನಾಮಧೇಯ ಪ್ರೇಮ ಪತ್ರದಿಂದಾಗಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ

    ಅನಾಮಧೇಯ ಪ್ರೇಮ ಪತ್ರದಿಂದಾಗಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ

    ಮುಂಬೈ: ಅನಾಮಧೇಯ ಪ್ರೇಮ ಪತ್ರದಿಂದಾಗಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪಂಡರಾಪುರದಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ವಾಖ್ರಿ ಗ್ರಾಮದವಳಾಗಿದ್ದು, ಪಂಡರಾಪುರದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

    ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಹಿಂದೆ ಇದ್ದ ಸಹಪಾಠಿಯೊಬ್ಬರು ಅನಾಮಧೇಯ ಪ್ರೇಮ ಪತ್ರ ನೀಡಿದ್ದಾರೆ. ಈ ವೇಳೆ ಅದನ್ನು ನೋಡಿದ ತರಗತಿಯ ಶಿಕ್ಷಕಿ ವಿದ್ಯಾರ್ಥಿನಿಯನ್ನು ನಿಲ್ಲಿಸಿ ಮನಬಂದಂತೆ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಘಟನೆಯಿಂದ ಮನನೊಂದು ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ವಿದ್ಯಾರ್ಥಿಯ ತಂದೆ, ನನಗೆ ಶಾಲೆಯಿಂದ ಫೋನ್ ಬಂದಿತ್ತು. ತಕ್ಷಣವೇ ನಾನು ಶಾಲೆಗೆ ಭೇಟಿ ನೀಡುತ್ತಿದ್ದಂತೆ ಮಗಳು ಅಳುತ್ತಾ ನನ್ನ ಬಳಿಗೆ ಬಂದಳು. ಬಳಿಕ ಶಿಕ್ಷಕಿ ಬಂದು ನಿಮ್ಮ ಮಗಳ ಕೈಯಲ್ಲಿ ಪ್ರೇಮ ಪತ್ರ ಸಿಕ್ಕಿದೆ ಅಂತ ದೂರಿದರು. ನನ್ನ ಮಗಳು ಯಾರನ್ನೂ ಪ್ರೀತಿಸುತ್ತಿಲ್ಲ. ಈ ಪತ್ರವನ್ನು ಆಕೆಗೆ ಯಾರೋ ಬರೆದಿದ್ದಾರೆ ಎಂದು ತಿಳಿಸಿ ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದೆ ಎಂದರು.

    ತರಗತಿ ಹಾಗೂ ಶಾಲೆಯಲ್ಲಿ ಆದ ಘಟನೆಯಿಂದ ಮಗಳು ಮುಜುಗುರಕ್ಕೆ ಒಳಗಾಗಿದ್ದಳು. ಇದರಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರಿದ್ದಾರೆ.

    ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮೃತ ವಿದ್ಯಾರ್ಥಿನಿ ಪೋಷಕರು ಹಾಗೂ ವಾಖ್ರಿ ಗ್ರಾಮಸ್ಥರು ಪಂಡರಾಪುರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಶಿಕ್ಷಕಿಯ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಬರೆದ ಮೊದಲ ಪ್ರೇಮ ಪತ್ರದಲ್ಲಿ ಏನಿತ್ತು?

    ಅಂಬಿ ಬರೆದ ಮೊದಲ ಪ್ರೇಮ ಪತ್ರದಲ್ಲಿ ಏನಿತ್ತು?

    – ಅಂಬಿ ಪತ್ನಿಗೆ ನೀಡಿದ ಗಿಫ್ಟ್ ಏನು ಗೊತ್ತಾ?

    ಬೆಂಗಳೂರು: ಕನ್ನಡದ ಕರ್ಣ ಅಂಬರೀಶ್ ಮೊದಲ ಬಾರಿಗೆ ಪತ್ನಿ ಸುಮಲತಾರಿಗೆ ಬರೆದ ಪ್ರೇಮ ಪತ್ರದಲ್ಲಿ ‘ನನ್ನನ್ನು ಕ್ಷಮಿಸು’ ಅಂತಾ ಬರೆದಿದ್ದರು ಎಂದು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

    ಒಮ್ಮೆ ಸುಮಲತಾ ಬರ್ತ್ ಡೇ ಇತ್ತು. ನನಗೆ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಹೇಳಲಾಗಿತ್ತು. ಚಿತ್ರೀಕರಣದಲ್ಲಿ ನಾನು ಬ್ಯೂಸಿ ಆಗಿದ್ದರಿಂದ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಲಿಲ್ಲ. ಮರುದಿನ ಶುಭಾಶಯ ತಿಳಿಸಲು ಹೋದಾಗ ಆಕೆ ನನ್ನ ಜೊತೆ ಮಾತನಾಡಲಿಲ್ಲ. ರಾತ್ರಿ ಪಾರ್ಟಿಗೆ ಬಾ ಅಂತಾ ಕರೆದ್ರೆ, ಬೆಳಗ್ಗೆ ಏಕೆ ಬಂದೆ ಎಂದು ಕೋಪಗೊಂಡು ಸುಮಲತಾ ನನ್ನ ಜೊತೆ ಮಾತನಾಡಲೇ ಇಲ್ಲ. ಆವಾಗ ಒಂದು ಪತ್ರದಲ್ಲಿ ಕ್ಷಮಿಸು, ಸಾರಿ, ಕ್ಷಮಿಸಂಡಿ ಎಂದು ಎಲ್ಲ ಭಾಷೆಯಲ್ಲಿ ಬರೆದು ಕೊಟ್ಟೆ. ಅದೇ ನನ್ನ ಮೊದಲ ಲವ್ ಲೆಟರ್ ಎಂದು ಹೇಳಿ ನಕ್ಕರು.

    ಅಂದು ಸುಮಲತಾ ಮುಂಬೈನಲ್ಲಿದ್ದರು. ನನಗೆ ಬರ್ತ್ ಡೇ ಗಿಫ್ಟ್ ಏನು ಕೊಡಲೇ ಇಲ್ಲ ಅಂತಾ ಹೇಳಿದಾಗ, ನನಗೆ ಗೊತ್ತಿರುವ ಚಿನ್ನದ ಮಳಿಗೆ ಹೋಗಿ ಖರೀದಿ ಮಾಡು ಬಿಲ್ ಕೊಡುತ್ತೇನೆ ಅಂತಾ ಹೇಳಿದೆ. ಒಂದು ಚಿನ್ನದ ಸರ ಅಥವಾ ಬಳೆನೋ ಖರೀದಿ ಮಾಡಬಹುದು ಅಂತಾ ಗೆಸ್ ಮಾಡಿದ್ದೆ. ಆದ್ರೆ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗ ಐದೂವರೆ ಲಕ್ಷದ ವಜ್ರಾಭರಣ ತೋರಿಸಿದ್ದಾನೆ. ಅಷ್ಟು ಬೆಲೆಯ ನೆಕ್ಲೇಸ್ ಹೇಗೆ ಖರೀದಿ ಮಾಡೋದು ಅಂತಾ ಎರಡೂವರೆ ಲಕ್ಷದ ಬೆಲೆಯದ್ದು ಖರೀದಿ ಮಾಡಿದ್ರು. ಇದನ್ನೂ ಓದಿ: ವ್ಯಕ್ತಿ ಸತ್ತಾಗ ನೋಡದನ್ನ, ಬದುಕಿದ್ದಾಗ ನೋಡಿದವ ನಾನು ಪುಣ್ಯವಂತ

    ಅಂದಿನ ಕಾಲದಲ್ಲಿ ಎರಡೂವರೆ ಲಕ್ಷ ಅಂದ್ರೆ ದೊಡ್ಡ ಮೊತ್ತ. ಅಂಗಡಿ ಮಾಲೀಕ ನನಗೆ ಫೋನ್ ಮಾಡಿ ಯಾರು ಈ ಹುಡುಗಿ? ಇಷ್ಟು ಬೆಲೆಯ ನೆಕ್ಲೇಸ್ ಯಾಕೆ ಕೊಡಸ್ತೀಯಾ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ. ಕೂಡಲೇ ಫೋನ್ ಇಡು ಎಂದು ಹೇಳಿ ಕೊನೆಗೆ ಅದೇ ನೆಕ್ಲೇಸ್ ಖರೀದಿ ಆಯ್ತು. ಎರಡೂವರೆ ಲಕ್ಷದ ಮೌಲ್ಯದ ನೆಕ್ಲೇಸ್ ಸುಮಲತಾ ಮನೆಗೆ ಹೋಗುತ್ತೆ ಅಂತಾ ಆಕೆಯನ್ನು ಮದುವೆ ಆಗಿಬಿಟ್ಟೆ ಎಂದು ಹೇಳಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಇದನ್ನೂ ಓದಿ: ನಾನು 500 ರೂ.ಗೆ ಖಳನಾಯಕನಾಗಿ ಬಂದವನು-ಮಗನಿಗೆ ಇದನ್ನೇ ಮಾಡ್ಬೇಕು ಎಂದು ಹೇಳಲ್ಲ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv