Tag: lottery

  • ಕೇರಳ ಲಾಟರಿ ಮಾರಾಟ – ಕೊಡಗಿನಲ್ಲಿ ಆರೋಪಿ ಬಂಧನ

    ಕೇರಳ ಲಾಟರಿ ಮಾರಾಟ – ಕೊಡಗಿನಲ್ಲಿ ಆರೋಪಿ ಬಂಧನ

    ಮಡಿಕೇರಿ: ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೇಂಬುಕೊಲ್ಲಿಯಲ್ಲಿ ಕುಟ್ಟ ಪೊಲೀಸರು ಬಂಧಿಸಿದ್ದಾರೆ.

    ವಿರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದ ನಿವಾಸಿ ರಾಜು ಬಂಧಿತ ಆರೋಪಿ. ಈತ ಕೇಂಬುಕೊಲ್ಲಿಯಲ್ಲಿ ಲಾಠರಿಯನ್ನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ರಾಜು ಬಳಿ ಇದ್ದ 6,000 ಮೌಲ್ಯದ ಕೇರಳ ಮೂಲದ ಲಾಟರಿ ಟಿಕೆಟ್ ಹಾಗೂ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

    ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಸರ್ಕಾರ ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇಧಿಸಿರುವುದರಿಂದ ಕೊಡಗು-ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ವಿರಾಜಪೇಟೆ ತಾಲೂಕಿನ ಗಡಿ ಭಾಗದಲ್ಲಿ ಲಾಟರಿ ದಂಧೆ ಅವ್ಯಹತವಾಗಿ ನಡೆಯುತ್ತಿದೆ.

  • ಫ್ರೀ ಕಾರು ಆಸೆಗೆ ಬಿದ್ದು 37 ಸಾವಿರ ಕಳೆದುಕೊಂಡ ಶೋ ರೂಮ್ ಉದ್ಯೋಗಿ

    ಫ್ರೀ ಕಾರು ಆಸೆಗೆ ಬಿದ್ದು 37 ಸಾವಿರ ಕಳೆದುಕೊಂಡ ಶೋ ರೂಮ್ ಉದ್ಯೋಗಿ

    ಚಿಕ್ಕಬಳ್ಳಾಪುರ: ಸ್ನ್ಯಾಪ್ ಡೀಲ್ ನಲ್ಲಿ ನೀವು ವಸ್ತುಗಳನ್ನ ಖರೀದಿಸಿದ್ದೀರಿ, ನಿಮಗೆ 12 ಲಕ್ಷ ರೂ. ಮೌಲ್ಯದ ಟಾಟಾ ಸಫಾರಿ ಕಾರು ಲಾಟರಿ ಬಂದಿದೆ ಎಂದು ಕರೆ ಮಾಡಿದ ಖದೀಮ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚನೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.

    ನಗರದ ಹೋಂಡಾ ಶೋ ರೂಂನಲ್ಲಿ ಅಡ್ಮಿನ್ ಆಗಿ ಕೆಲಸ ಮಾಡುತ್ತಿರುವ ಪಾರ್ಥಸಾರಥಿ ವಂಚನೆಗೊಳಗಾದವರು. ಪಾರ್ಥಸಾರಥಿ ಮೊಬೈಲ್‍ಗೆ ಸಂದೇಶ ಕಳುಹಿಸಿ ಕರೆ ಮಾಡಿದ ಅನಾಮಿಕ ವ್ಯಕ್ತಿ ನಿಮಗೆ 12.60 ಲಕ್ಷ ರೂ. ಬೆಲೆಯ ಟಾಟಾ ಸಫಾರಿ ಕಾರು ಲಾಟರಿ ಬಂದಿದೆ ಎಂದು ತಿಳಿಸಿದ್ದಾನೆ. ಆದರೆ ಪಾರ್ಥಸಾರಥಿ ನನಗೆ ಕಾರು ಬೇಡ ಕಾರಿನ ಮೊತ್ತದ ಹಣವನ್ನು ಕೊಡುವಂತೆ ಕೇಳಿದ್ದು, ಕಾರಿನ ಮೊತ್ತದ ಹಣ ಕೊಡಬೇಕಾದರೆ ನೀವು ಮೊದಲು ಪ್ರೊಸೆಸಿಂಗ್ ಫೀಸ್ ಎಂದು ಹಣ ನೀಡಬೇಕು ಎಂದು ವಂಚಕ ಹೇಳಿದ್ದಾನೆ.

    ಮೊದಲು 4,500 ರೂ. ಪ್ರೊಸೆಸಿಂಗ್ ಫೀಸ್ ಎಂದು ಪಾರ್ಥಸಾರಥಿ ಅನಾಮಿಕನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದು, ಆ ಬಳಿಕ 12 ಲಕ್ಷದ ದೊಡ್ಡ ಮೊತ್ತದ ಹಣವನ್ನು ನಿಮಗೆ ವರ್ಗಾಯಿಸಲು ಮೊದಲು ಜಿಎಸ್‍ಟಿಗಾಗಿ 18,900 ರೂ. ನೀಡಬೇಕಿದೆ ಎಂದು ಹೇಳಿ ಮತ್ತೆ ಹಣವನ್ನು ಗೂಗಲ್ ಪೇ ಮೂಲಕ ವಂಚಕ ಪಡೆದಿದ್ದ. ಹೀಗೆ ಹಲವು ಬಾರಿ ಪಾರ್ಥಸಾರಥಿಗೆ ಕರೆ ಮಾಡಿದ ವಂಚಕ ಒಟ್ಟು 37,596 ರೂ.ಗಳನ್ನು ಪಡೆದುಕೊಂಡಿದ್ದ.

    ಪದೇ ಪದೇ ಕರೆ ಮಾಡಿ ಹಣ ಹಾಕಿ ಎಂದು ಕೇಳುತ್ತಿದ್ದ ಕಾರಣ, ಎಚ್ಚರಗೊಂಡ ಪಾರ್ಥಸಾರಥಿ, ತಾವು ವಂಚನೆಗೊಳಗಾಗಿ ಹಣ ಕಳೆದುಕೊಂಡಿರುವುದನ್ನು ಮನಗಂಡಿದ್ದಾರೆ. ಆ ಬಳಿಕ ಚಿಕ್ಕಬಳ್ಳಾಪುರ ಡಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ವಂಚಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.

  • ಬಂಪರ್ ಬಹುಮಾನ – 23.18 ಕೋಟಿ ರೂ. ಲಾಟರಿ ಗೆದ್ದ ಸುಳ್ಯದ ಯುವಕ

    ಬಂಪರ್ ಬಹುಮಾನ – 23.18 ಕೋಟಿ ರೂ. ಲಾಟರಿ ಗೆದ್ದ ಸುಳ್ಯದ ಯುವಕ

    ಅಬುಧಾಬಿ: ಸುಳ್ಯ ಮೂಲದ ವ್ಯಕ್ತಿಯೊಬ್ಬರು 12 ದಶಲಕ್ಷ ದಿರ್ಹಾಮ್(23.18 ಕೋಟಿ ರೂ.) ಅಬುಧಾಬಿ ಲಾಟರಿ ಗೆದ್ದು ಸುದ್ದಿಯಾಗಿದ್ದಾರೆ.

    24 ವರ್ಷದ ಮೊಹಮ್ಮದ್ ಫಯಾಜ್ ಜೆ.ಎ. ಮೂಲತಃ ವಾಣಿಜ್ಯ ನಗರಿ ಮುಂಬೈನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ವೇಳೆ ರೂಮ್‍ಮೇಟ್ ಜೊತೆ ಲಾಟರಿ ಖರೀದಿಸಲು ಪ್ರಾರಂಭಿಸಿದ್ದರು. ಲಾಟರಿ ಖರೀದಿಸಲು ಪ್ರಾರಂಭಿಸಿ ಕೇವಲ ಆರು ತಿಂಗಳಾಗಿತ್ತು. ಸತತ ಪ್ರಯತ್ನದಿಂದ ಅಬುಧಾಬಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ 23.18 ಕೋಟಿ ರೂ. ಗೆದ್ದಿದ್ದಾರೆ. ಇದನ್ನೂ ಓದಿ: ಲಾಟರಿ ಬಂಪರ್ – ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಸುಳ್ಯದ ವ್ಯಕ್ತಿ!

    ಫಯಾಜ್ ಚಿಕ್ಕ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡಿದ್ದಾರೆ. ಇವರಿಗೆ ಒಬ್ಬ ಸಹೋದರ, ಇಬ್ಬರು ಸಹೋದರಿಯರನ್ನು ಇದ್ದಾರೆ. ಕುಟುಂಬ ನಿರ್ವಹಣೆಗಾಗಿ ಮುಂಬೈನಲ್ಲಿ ಕೆಲಸಕ್ಕೆ ಸೇರಿದ್ದರು.

    ಮೂತ್ರಪಿಂಡದ ಖಾಯಿಲೆಯಿಂದ ನನ್ನ ಪೋಷಕರು ಇಬ್ಬರೂ ತೀರಿಕೊಂಡರು. ನನ್ನ ತಂದೆ ಸೌದಿ ಅರೇಬಿಯಾದಲ್ಲಿ ಬಹಳ ದಿನಗಳ ಕಾಲ ಕೆಲಸ ಮಾಡಿದ್ದರು. 12 ವರ್ಷಗಳಿಗೂ ಹೆಚ್ಚು ಕಾಲ ಮೂತ್ರಪಿಂಡ ವೈಫಲ್ಯದ ವಿರುದ್ಧ ಹೋರಾಡಿದ್ದರು. ನಮ್ಮ ಪೋಷಕರು ತುಂಬಾ ನೋವುಂಡಿದ್ದನ್ನು ನಾವು ನೋಡಿದ್ದೇವೆ. ನಮ್ಮ ಪೋಷಕರು ನಮ್ಮೊಂದಿಗೆ ಇಲ್ಲದಿರುವ ಆಘಾತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದೇವೆ. ನನಗೆ ತಂಗಿ ಇದ್ದಾಳೆ, ಅಕ್ಕನ ಮದುವೆಯಾಗಿದೆ. ಮನೆ ನಿರ್ಮಿಸಲು ನಾನು ಸ್ವಲ್ಪ ಜಮೀನನ್ನು ಮಾರಿದ್ದೆವು. ಇದೀಗ ಮನೆ ನಿರ್ಮಿಸುವುದು ಬಾಕಿ ಇದೆ ಎಂದು ಲಾಟರಿ ಹೊಡೆದ ಖುಷಿಯಲ್ಲಿ ಫಯಾಜ್ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.

    ಕುಟುಂಬದ ಹೊರೆ ನನ್ನ ಮೇಲೆಯೇ ಇದ್ದ ಕಾರಣ ಒಂದು ವರ್ಷದ ಹಿಂದೆ ಕೆಲಸಕ್ಕಾಗಿ ನಾನು ಮುಂಬೈಗೆ ಬಂದೆ. ಇಬ್ಬರು ಮಕ್ಕಳ ತಂದೆಯಾಗಿರುವ ನನ್ನ ಸಹೋದರ ಕರ್ನಾಟಕದಲ್ಲಿ ನಮ್ಮ ಹೊಲ ಮನೆಯನ್ನು ನೋಡಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.

    ಆನ್‍ಲೈನ್ ಮೂಲಕ ಲಾಟರಿ ಖರೀದಿಸುವ ಆಲೋಚನೆಯನ್ನು ನನ್ನ ರೂಮ್‍ಮೇಟ್ ನೀಡಿದ. ಗಡುವು ಮುಗಿದಿದ್ದರಿಂದ ಎರಡು ತಿಂಗಳುಗಳ ಕಾಲ ಲಾಟರಿ ಖರೀದಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಸರಿಯಾದ ಸಮಯಕ್ಕೆ ಖರೀದಿಸಿದೆ. ಸೆಪ್ಟೆಂಬರ್ ಕೊನೆಯ ದಿನ ನಿಜವಾಗಿಯೂ ವಿಜೇತನಾದೆ ಎಂದು ತಿಳಿಸಿದ್ದಾರೆ.

    ಲಾಟರಿ ವಿನ್ ಆಗಿದ್ದಕ್ಕೆ ಬಿಗ್ ಟಿಕೆಟ್ ಡ್ರಾದ ರಿಚರ್ಡ್ ಕಾಲ್ ಮಾಡಿದಾಗ ಫಯಾಜ್ ಮೊಬೈಲ್ ಬ್ಯುಸಿ ಬಂದಿತ್ತು. ಗೆದ್ದಿರುವ ಕುರಿತು ತಿಳಿಸಲು ರಿಚರ್ಡ್ ನಾಲ್ಕು ಬಾರಿ ನನಗೆ ಕರೆ ಮಾಡಿದ್ದರು. ನಂತರ ನನಗೆ ಕಾಲ್ ಕನೆಕ್ಟ್ ಆಗಿದೆ, ಈ ಕುರಿತು ರಿಚರ್ಡ್ ಹೇಳುತ್ತಿದ್ದಂತೆ ಅದೃಷ್ಟವನ್ನು ನಾನು ನಂಬಲಿಲ್ಲ. ನಂತರ ಆನ್‍ಲೈನ್‍ನಲ್ಲಿ ಪರಿಶೀಲಿಸಿದೆ. ಕರೆ ಬರುವುದಕ್ಕೂ ಹಿಂದಿನ ರಾತ್ರಿ ನಾನು ಇದನ್ನು ಗೆಲ್ಲುತ್ತೇನೆ ಎಂಬ ಕನಸು ಕಂಡಿದ್ದೆ. ನನ್ನ ಜೀವನದಲ್ಲಿ ಶೀಘ್ರವೇ ಮಹತ್ತರ ಸಂಗತಿ ನಡೆಯಲಿದೆ ಎಂದು ನನ್ನ ಸ್ನೇಹಿತರಿಗೆ ಹೇಳಿದ್ದೆ ಎಂದು ಫಯಾಜ್ ವಿವರಿಸಿದ್ದಾರೆ.

    ಈ ಹಣದಿಂದ ನಾನು ಏನು ಮಾಡಬೇಕು ಎನ್ನುವದನ್ನು ತೀರ್ಮಾನಿಸಿಲ್ಲ. ಆದರೆ ನನ್ನ ಸಹೋದರನಿಗೆ ಅರ್ಹತೆಗೆ ಅನುಗುಣವಾಗಿ ಕೆಲಸ ಸಿಗಬೇಕು ಎಂಬುದು ನನ್ನ ಆಸೆಯಾಗಿದೆ. ಸಹೋದರ ಎಂಬಿಎ ಪದವೀಧರರಾಗಿದ್ದು, ಕರ್ನಾಟಕದಲ್ಲಿ ಮೀನು ಮಾರುಕಟ್ಟೆಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಮಾರಾಟ ಮಾಡಿದ್ದ ನಮ್ಮ ಜಮೀನನ್ನು ಮರಳಿ ಪಡೆಯಬೇಕೆಂಬುದು ನನ್ನ ಆಸೆಯಾಗಿದೆ. ಶೀಘ್ರದಲ್ಲೇ ನನ್ನ ಮನೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುತ್ತೇನೆ. ನಾನು ಕೆಲವು ಚಾರಿಟಿ ಕೆಲಸವನ್ನು ಮಾಡುತ್ತೇನೆ. ಇನ್ನೂ ಯುಎಇಗೆ ಹೋಗಿಲ್ಲ, ಚೆಕ್ ಸ್ವೀಕರಿಸಲು ಮುಂದಿನ ತಿಂಗಳು ಹೊರಡುತ್ತೇನೆ ಎಂದು ತಿಳಿಸಿದ್ದಾರೆ.

  • ಮಂಡ್ಯದಲ್ಲಿ ಜೆಡಿಎಸ್‍ಗೆ ಲಾಟರಿ – ಬಿಜೆಪಿಗೆ ಭಾರೀ ಮುಖಭಂಗ

    ಮಂಡ್ಯದಲ್ಲಿ ಜೆಡಿಎಸ್‍ಗೆ ಲಾಟರಿ – ಬಿಜೆಪಿಗೆ ಭಾರೀ ಮುಖಭಂಗ

    ಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಸಂಘದ (ಮನ್ಮುಲ್) ಚುನಾವಣೆಯಲ್ಲಿ ಜೆಡಿಎಸ್‍ಗೆ ಲಾಟರಿ ಮೂಲಕ ಅಧಿಕಾರ ಸಿಕ್ಕಿದ್ದು, ಬಿಜೆಪಿಗೆ ಭಾರಿ ಮುಖಭಂಗವಾಗಿದೆ.

    ಜಿಲ್ಲೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಮನ್ಮುಲ್ ಅಧ್ಯಕ್ಷ ಸ್ಥಾನದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಲಾಟರಿ ಮೂಲಕ ಜೆಡಿಎಸ್‍ನ ರಾಮಚಂದ್ರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಬಾರಿ ಮನ್ಮುಲ್ ಗದ್ದುಗೆ ಹಿಡಿಯಬೇಕು ಎಂದುಕೊಂಡಿದ್ದ ಬಿಜೆಪಿ ಕನಸು ನುಚ್ಚುನೂರು ಆಗಿದೆ.

    ಈ ಚುನಾವಣೆಯಲ್ಲಿ ಚಲಾವಣೆಯಾಗಿದ್ದ 16 ಮತಗಳಗಳಲ್ಲಿ 8 ಮತ ಜೆಡಿಎಸ್‍ಗೆ ಉಳಿದ 8 ಬಿಜೆಪಿ ಅಭ್ಯರ್ಥಿ ಎಸ್‍ಪಿ ಸ್ವಾಮಿಗೆ ಬಿದ್ದಿತ್ತು. ಹೀಗಾಗಿ ಎರಡು ಪಕ್ಷಗಳ ಒಪ್ಪಿಗೆ ಮೇರೆಗೆ ಅಭ್ಯರ್ಥಿಗಳ ಹೆಸರಿನ ಮೇಲೆ ಲಾಟರಿ ಹಾಕಲಾಗಿದ್ದು, ಇದರಲ್ಲಿ ಜೆಡಿಎಸ್‍ನ ಅಭ್ಯರ್ಥಿಯಾಗಿದ್ದ ರಾಮಚಂದ್ರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

    ಜೆಡಿಎಸ್‍ನಿಂದ 8 ನಿರ್ದೇಶಕರು, ಕಾಂಗ್ರೆಸ್‍ನಿಂದ 3 ನಿರ್ದೇಶಕರು ಮತ್ತು ಬಿಜೆಪಿಯಿಂದ 1 ನಿರ್ದೇಶಕರ ಜೊತೆಗೆ ಇಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಉಪ ನಿಬಂಧಕರು, ಕೆಎಂಎಫ್ ನಿರ್ದೇಶಕರು ಹಾಗೂ ಸರ್ಕಾರದಿಂದ ಆಯ್ಕೆಯಾದ ನಾಮ ನಿರ್ದೇಶಕರು ಸಹ ಮತ ಹಾಕಿದ್ದಾರೆ.

    ಮನ್ಮಲ್ ಅಧ್ಯಕ್ಷ ಗಾದಿ ಹಿಡಿಯಲು 9 ಸದಸ್ಯರ ಬಲ ಬೇಕಿತ್ತು. ಅದ್ದರಿಂದ ಬಿಜೆಪಿ ಸರ್ಕಾರಿ ಅಧಿಕಾರಿಗಳನ್ನು ತಮ್ಮ ಕಡೆ ಸೆಳೆದುಕೊಂಡು ಕಾಂಗ್ರೆಸ್ ನಿಂದ ಮೂವರು ಮತ್ತು ಜೆಡಿಎಸ್‍ನಿಂದ ಒಬ್ಬ ನಿರ್ದೇಶಕರನ್ನು ಹೈಜಾಕ್ ಮಾಡಿತ್ತು. ಆದರೆ ಇಂದು ನಡೆದ ಚುನಾವಣೆಯ ಸಮಯದಲ್ಲಿ ಬಿಜೆಪಿಯವರ ಕಡೆ ಒಬ್ಬ ಅಧಿಕಾರಿಂದ ಜೆಡಿಎಸ್ ಕ್ರಾಸ್ ವೋಟಿಂಗ್ ಹಾಕಿದ್ದಾರೆ ಎನ್ನಲಾಗುತ್ತಿದೆ.

  • 25 ಲಕ್ಷ ಲಾಟರಿ ಬಂದಿದೆ ಎಂದು ಆನ್‍ಲೈನ್ ಮೂಲಕ ಮಹಿಳೆಗೆ 3 ಲಕ್ಷ ಮೋಸ

    25 ಲಕ್ಷ ಲಾಟರಿ ಬಂದಿದೆ ಎಂದು ಆನ್‍ಲೈನ್ ಮೂಲಕ ಮಹಿಳೆಗೆ 3 ಲಕ್ಷ ಮೋಸ

    ಚಿಕ್ಕಬಳ್ಳಾಪುರ: ಐಎಂಎ ಜ್ಯೂವೆಲರ್ಸ್ ಮಾಲೀಕ ಮನ್ಸೂರ್ ಅಲಿಖಾನ್ ಸಾವಿರಾರು ಜನರಿಗೆ ಮೋಸ ಮಾಡಿರೋದು ಕಣ್ಣುಮುಂದೆ ಇರಬೇಕಾದರೆ, 25 ಲಕ್ಷ ಲಾಟರಿ ಬಂದಿದೆ ಎಂದು ಹೇಳಿ ಆನ್‍ಲೈನ್ ಮೂಲಕ ಮಹಿಳೆಯಿಂದ 3 ಲಕ್ಷ ಕಟ್ಟಿಸಿಕೊಂಡು ಮೋಸ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಜಿಲ್ಲೆಯ ಗೌರಿಬಿದನೂರು ನಗರದ ನಿವಾಸಿ ಶಮೀನ್ ಎಂಬ ಮಹಿಳೆ ವಂಚಕರ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ. ಮನೆಗೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಶಮೀನ್ ಜೂನ್ 11 ರಂದು ಕೋಲ್ಕತ್ತಾದಿಂದ ಬಂದ ಅನಾಮಿಕರ ಫೋನ್ ಕಾಲ್‍ಗೆ ಮಾರುಹೋಗಿ ಮೋಸ ಹೋಗಿದ್ದಾರೆ.

    ನಿಮ್ಮ ಮೊಬೈಲ್ ನಂಬರಿಗೆ 25 ಲಕ್ಷ ರೂಪಾಯಿ ಲಾಟರಿ ಬಂದಿದೆ ಎಂದು ನಂಬಿಸಿ, ದಿನೇ ದಿನೇ ಹಣ ಕಟ್ಟಿಸಿಕೊಂಡು ಇದುವರೆಗೂ 3 ಲಕ್ಷ ರೂಪಾಯಿ ಹಣ ಕಟ್ಟಿಸಿಕೊಂಡಿದ್ದಾರೆ. ಆದರೆ ಇವತ್ತು ಮತ್ತೆ ಹಣ ಕಟ್ಟಿ ಎಂದು ಫೋನ್ ಮಾಡಿದ್ದಾಗ ಅನುಮಾನಗೊಂಡ ಶಮೀನ್ ಗೌರಿಬಿದನೂರು ಪೊಲೀಸರ ಮೊರೆ ಹೋದಾಗ ಮೋಸಹೋದ ಸತ್ಯ ಗೊತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರದ ದಾಖಲೆಗಳನ್ನು ಬಳಸಿದ್ದು, ಬೇರೊಬ್ಬ ಮಹಿಳೆಗೆ ಲಾಟರಿ ಹಣ ಬಂದಿರುವ ವಿಡಿಯೋ ಹಾಗೂ ಇವರ ಅಕೌಂಟಿಗೆ ಹಣ ವರ್ಗಾವಣೆ ಮಾಡೋ ರೀತಿಯ ದಾಖಲೆಗಳನ್ನು ಸೃಷ್ಟಿಸಿ ಅಮಾಯಕ ಮಹಿಳೆಯನ್ನು ವಂಚಿಸಿದ್ದಾರೆ.

    ಮನೆಗೆಲಸ ಮಾಡಿಕೊಂಡು ಮದುವೆ ವಯಸ್ಸಿಗೆ ಬಂದಿರೋ ಮಕ್ಕಳಿಗೆ ಎಂದು ಕೂಡಿಟ್ಟಿದ್ದ ಹಣ ಒಡವೆಗಳು ಇದೀಗ ಮೋಸದ ಜಾಲಕ್ಕೆ ಬಲಿಯಾಗಿರೊದು ವಿಪರ್ಯಾಸವೇ ಸರಿ. ಒಟ್ಟಿನಲ್ಲಿ ಇನ್ನಾದರೂ ಅನಾಮಿಕರ ಮೋಸದ ಜಾಲಕ್ಕೆ ಬಲಿಯಾಗಬೇಡಿ ಎಂಬುದೇ ನಮ್ಮ ಕಳಕಳಿಯಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಲಾಟರಿಯಲ್ಲಿ ಪೇದೆಗೆ ಬಂತು ಬರೋಬ್ಬರಿ 2 ಕೋಟಿ ರೂ.

    ಲಾಟರಿಯಲ್ಲಿ ಪೇದೆಗೆ ಬಂತು ಬರೋಬ್ಬರಿ 2 ಕೋಟಿ ರೂ.

    ಚಂಡೀಗಢ: ಪಂಜಾಬ್‍ನ ಹೋಶಿಯಾರ್‍ಪುರದಲ್ಲಿ ಪಂಜಾಬ್ ರಾಜ್ಯ ಲೋಹ್ರಿ ಬಂಪರ್ ಲಾಟರಿ ಮೂಲಕ ಪೊಲೀಸ್ ಪೇದೆಯೊಬ್ಬರಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಬಹುಮಾನ ಬಂದಿದೆ.

    ಅಶೋಕ್ ಕುಮಾರ್ ಬಹುಮಾನ ಗೆದ್ದ ಪೊಲೀಸ್ ಪೇದೆ. ಇವರು ಹೋಶಿಯಾರ್‍ಪುರದ ಸದರ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಮ್ಮೆ ಲಾಟರಿ ಟಿಕೆಟ್ ಮಾರಾಟ ಮಾಡಲು ಪೊಲೀಸ್ ಠಾಣೆಗೆ ಏಜೆಂಟ್ ಬಂದಿದ್ದರು. ಆಗ ಅಶೋಕ್ ಕುಮಾರ್ ಲಾಟರಿ ಟಿಕೆಟ್ ಖರೀದಿಸಿದ್ದರು.

    “ಬುಧವಾರ ಸಂಜೆ ನನ್ನ ಮೊಬೈಲ್‍ಗೆ ಒಂದು ಮೆಸೇಜ್ ಬಂತು. ಅದು ಲಾಟರಿ ಟಿಕೆಟ್ ಕಡೆಯಿಂದ ಬಂದಿತ್ತು. ಆಗ ನಾನು ಮನೆಯಲ್ಲಿದ್ದೆ. ಆದರೆ ಲಾಟರಿ ಟಿಕೆಟ್ ಅನ್ನು ಠಾಣೆಯಲ್ಲಿ ಇಟ್ಟಿದ್ದೆ. ತಕ್ಷಣ ಓಡಿ ಹೋಗಿ ಲಾಟರಿ ಟಿಕೆಟ್ ತಂದು ನೋಡಿದಾಗ, ಬಹುಮಾನ ಬಂದ ಲಾಟರಿ ನಂಬರ್ ಮತ್ತು ನಾನು ಖರೀದಿ ಮಾಡಿದ್ದ ಲಾಟರಿ ನಂಬರ್ ಒಂದೇ ಆಗಿತ್ತು. ತಕ್ಷಣವೇ ನನಗೆ ಒಂದು ಫೋನ್ ಬಂದಿತ್ತು. ಅವರು ನೀವು ಲಾಟರಿಯಲ್ಲಿ ಎರಡು ಕೋಟಿ ರೂ. ಬಹುಮಾನ ಗೆದ್ದಿದ್ದೀರಿ ಎಂದು ಹೇಳಿದರು. ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಆದರೆ ತುಂಬಾ ಖುಷಿಯಾಯಿತು” ಎಂದು ಪೇದೆ ಅಶೋಕ್ ಕುಮಾರ್

    ಪೇದೆ ಅಶೋಕ್ ಹೋಶಿಯಾರ್‍ಪುರ ಜಿಲ್ಲೆಯ ಮೌಟಿಯಾನ್ ಗ್ರಾಮದ ನಿವಾಸಿಯಾಗಿದ್ದು, ಒಂಬತ್ತು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಇತ್ತೀಚೆಗಷ್ಟೆ ನಮ್ಮ ಗ್ರಾಮದಲ್ಲಿ ಹೊಸ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದೇವೆ. ಆದರೆ ಈಗ ಮನೆಗೆ ಬೇಕಾದ ಪೀಠೋಪಕರಣ ಮತ್ತು ಇತರ ವಸ್ತುಗಳನ್ನು ಖರೀದಿಸುವುದು ಸುಲಭವಾಗಿದೆ ಎಂದು ಪೇದೆ ಅಶೋಕ್ ಸಂತೋಷದಿಂದ ಹೇಳಿದ್ದಾರೆ.

    “ನಾನು ಎರಡನೇ ಬಾರಿಗೆ ಈ ಲಾಟರಿ ಟಿಕೆಟ್ ಖರೀದಿಸಿದ್ದು, ಈ ಬಾರಿ ನನಗೆ 2 ಕೋಟಿ ರೂ. ಗೆಲ್ಲುವ ಟಿಕೆಟ್ ನೀಡಬೇಕು ಎಂದು ಏಜೆಂಟ್ ಬಳಿ ತಮಾಷೆಯಾಗಿ ಹೇಳಿದ್ದೆ. ಆದರೆ ಅದು ನಿಜವಾಗಿದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಬುಧಾಬಿಯಲ್ಲಿ ಕೇರಳ ಮೂಲದ ವ್ಯಕ್ತಿಗೆ 12 ಕೋಟಿ ಬಂಪರ್ ಲಾಟರಿ!

    ಅಬುಧಾಬಿಯಲ್ಲಿ ಕೇರಳ ಮೂಲದ ವ್ಯಕ್ತಿಗೆ 12 ಕೋಟಿ ಬಂಪರ್ ಲಾಟರಿ!

    ಕೊಚ್ಚಿ: ಸಾಮಾನ್ಯವಾಗಿ ಲಾಟರಿಯಲ್ಲಿ ಗೆಲುವು ಸಿಗುವುದು ಅತ್ಯಂತ ವಿರಳ. ಒಂದು ವೇಳೆ ಲಾಟರಿ ಗೆದ್ದರೆ ಅದು ಆತನ ಲಕ್ ಅಂತಾನೇ ಹೇಳಬಹುದು. ಈ ಲಕ್ ಅಬುದಾಭಿಯಲ್ಲಿ ವಾಸವಿರುವ ಕೇರಳ ಮೂಲದ ವ್ಯಕ್ತಿಗೆ ಖುಲಾಯಿಸಿದೆ.

    ಹೌದು. ಕೇರಳದ ಶ್ರೀರಾಜ್ ಕೃಷ್ಣನ್(33) ಎಂಬವರು ಕಳೆದ ಭಾನುವಾರ ಅಬುದಾಭಿಯಲ್ಲಿ 12.72 ಕೋಟಿ ರೂ. ಲಾಟರಿ ಗೆದ್ದಿದ್ದಾರೆ. ಉದ್ಯೋಗದ ನಿಮಿತ್ತ ತೆರಳಿದ ಇವರು ಕಳೆದ 9 ವರ್ಷಗಳಿಂದ ಅಬುದಾಭಿಯಲ್ಲಿ ನೆಲೆಸಿದ್ದಾರೆ.

    ಈ ಕುರಿತು ರಾಷ್ಟ್ರೀಯ ಪತ್ರಿಕೆಯೊಂದರ ಜೊತೆ ಹಂಚಿಕೊಂಡ ಅವರು, ಕಳೆದ ಭಾನುವಾರ ಲಾಟರಿ ಗೆದ್ದಿರುವ ಬಗ್ಗೆ ಕರೆಬಂದಾಗ ಅಚ್ಚರಿಗೊಳಗಾದೆ. ಆ ಕರೆಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಒಟ್ಟಿನಲ್ಲಿ ಲಾಟರಿ ಗೆದ್ದಿರುವ ಕುರಿತು ನನಗಿನ್ನೂ ನಂಬಿಕೆ ಬರ್ತಾ ಇಲ್ಲ. ಕೊನೆಗೂ ನನ್ನ ಕನಸು ಈಡೇರಿತ್ತು. 44698 ನಂಬರ್ ನನ್ನ ಲಕ್ಕಿ ನಂಬರ್ ಅನ್ನೋದನ್ನ ಪ್ರೂವ್ ಮಾಡಿತ್ತು ಎಂದು ಹೇಳಿದ್ದಾರೆ.

    ಅಬುದಾಭಿಯಲ್ಲಿ ಇವರು ಶಿಪ್ಪಿಂಗ್ ಕಂಪನಿ ಉದ್ಯೋಗಸ್ಥರಾದ್ರೆ, ಇವರ ಪತ್ನಿ ಅಶ್ವಥಿ, ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಟರಿ ಗೆದ್ದಿರುವ ಖುಷಿಯಲ್ಲಿರುವ ಈ ದಂಪತಿ, ಈ ಹಣವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕೆಂಬುವುದನ್ನು ಇನ್ನೂ ನಿರ್ಧರಿಸಿಲ್ಲ. ಒಟ್ಟಿನಲ್ಲಿ ಲಾಟರಿ ಗೆದ್ದ ಸಂತಸದಲ್ಲಿ ಮೌನವಹಿಸಿರುವ ಶ್ರೀರಾಜ್, ಯಾವುದೇ ಕಾರಣಕ್ಕೂ ಅಬುದಾಭಿಯಲ್ಲಿನ ಉದ್ಯೋಗವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಅಂತಾ ಸ್ಪಷ್ಟವಾಗಿದೆ.

    ಇತ್ತ ಕೇರಳದ ತ್ರಿಶೂರ್‍ನ ವರಂದರಪಿಲ್ಲಿಯಲ್ಲಿರುವ ಶ್ರೀರಾಜ್ ಪೋಷಕರು ಕೂಡ ಮಗ ಲಾಟರಿ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಮಗನ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ. ಮಗ ಲಾಟರಿ ಗೆದ್ದ ವಿಚಾರ ಕೇಳಿ ತುಂಬಾ ಸಂತಸವಾಯ್ತು. ಅಂತೆಯೇ ಆತ ತವರೂರಿಗೆ ಬಂದು ಅದೇ ಹಣದಲ್ಲಿ ಸ್ವಂತ ಉದ್ಯಮವನ್ನು ಕೈಗೊಳ್ಳುತ್ತಾನೆಂಬ ನಂಬಿಕೆಯಿದೆ. ಅಂತೆಯೇ ಅದರಲ್ಲಿ ಸ್ವಲ್ಪ ಹಣವನ್ನು ಸೇವಾಕಾರ್ಯಗಳಿಗೆ ನೀಡಬೇಕು ಅಂತಾ ಶ್ರೀರಾಜ್ ತಂದೆ ಉನ್ನಿಕೃಷ್ಣನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    2013ರಲ್ಲಿ ಶ್ರೀರಾಜ್ ತುಂಬಾ ಕಷ್ಟದಲ್ಲಿದ್ದರು. ಈ ವೇಳೆ ಜ್ಯೋತಿಷಿಯವರ ಬಳಿ ಹೋಗಿ ಕೇಳಿದಾಗ, ನೀವೇನೂ ಚಿಂತೆ ಮಾಡ್ಬೇಡಿ. ನಿಮ್ಮ ಮಗನ ಭವಿಷ್ಯ 2016-17ರ ವೇಳೆ ಬದಲಾಗಲಿದೆ ಅಂತಾ ಹೇಳಿದ್ರು. ಅವರ ಈ ಮಾತು ಇಂದು ನಿಜವಾಗಿದೆ ಅಂತಾ ಉನ್ನಿಕೃಷ್ಣನ್ ಹೇಳಿದ್ದಾರೆ.

    ಒಟ್ಟಿನಲ್ಲಿ ಲಾಟರಿ ಗೆದ್ದ ಬಳಿಕ ಶ್ರೀರಾಜ್‍ಗೆ ಕರೆಗಳ ಸುರಿಮಳೆಯೇ ಹರಿದು ಬರುತ್ತಿದೆ. ಕುಟುಂಬ, ಸ್ನೇಹಿತರು ಅಂತಾ ಶುಭಾಶಯ ಕೋರಲು ದಿನದಲ್ಲಿ ಸಾವಿರಾರು ಕರೆಗಳು ಬರುತ್ತಿವೆ. ಬಂದಿರುವ ಕರೆಯಲ್ಲಿ ವೈದ್ಯಕೀಯ ನೆರವು ಮತ್ತು ಚಾರಿಟಿಗಳಿಂದಲೂ ಸಹಾಯ ನೀಡುವಂತೆ ಫೋನ್ ಕಾಲ್ ಬಂದಿವೆ ಅಂತಾ ಶ್ರೀರಾಜ್ ತಿಳಿಸಿದ್ದಾರೆ.