Tag: lorry

  • ಹಾಲು ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿ: ಸ್ಥಳದಲ್ಲಿಯೇ ಚಾಲಕ ಸಾವು

    ಹಾಲು ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿ: ಸ್ಥಳದಲ್ಲಿಯೇ ಚಾಲಕ ಸಾವು

    ಬೆಳಗಾವಿ: ಹಾಲು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸ್ಥಳದಲ್ಲೇ ಲಾರಿ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವ ಪಟ್ಟಣದ ಬಳಿ ನಡೆದಿದೆ.

    ಯಶವಂತ ಭೈರಾಗಿ(40) ಮೃತಪಟ್ಟ ಲಾರಿ ಚಾಲಕ. ಗೋಕುಲ್ ಹಾಲಿನ ಡೈರಿಗೆ ಸೇರಿರುವ ಈ ಲಾರಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹಾಲು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಸದಲಗಾ-ಬೋರಗಾಂವ ಮಾರ್ಗ ಮಧ್ಯೆ ಜಮೀನೊಂದರಲ್ಲಿ ಪಲ್ಟಿಯಾಗಿದೆ.

    ಸ್ಥಳಕ್ಕೆ ಸದಲಗಾ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಜೆಸಿಬಿಯನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಕಾರಿಗೆ ಡಿಕ್ಕಿ: ದಂಪತಿ ದುರ್ಮರಣ

    ಜೆಸಿಬಿಯನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಕಾರಿಗೆ ಡಿಕ್ಕಿ: ದಂಪತಿ ದುರ್ಮರಣ

    ಚಿಕ್ಕಬಳ್ಳಾಪುರ: ತಮಿಳುನಾಡು ಮೂಲದ ಆರ್ ಸಿ ಸಿ ಎಲ್ ಕನ್ ಸ್ಟ್ರಕ್ಷನ್ ಕಂಪನಿಗೆ ಸೇರಿದ ಲಾರಿಯೊಂದು ಓಮ್ನಿ ಇಕೋ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಕಾಪುರ ಗೇಟ್ ಬಳಿ ನಡೆದಿದೆ. ಓಮ್ನಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹುಣೇಸಹಳ್ಳಿ ಗ್ರಾಮದ 50 ವರ್ಷದ ವೇಣುಗೋಪಾಲ ಶರ್ಮಾ ಹಾಗೂ ಅವರ ಪತ್ನಿ ಸ್ವರ್ಣಲತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ದಂಪತಿಯ ಮೂವರು ಮಕ್ಕಳಾದ ರಮ್ಯಾ, ಮಾನಸಾ ಮತ್ತೊಂದು ಚಿಕ್ಕ ಮಗು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತಮಿಳುನಾಡು ಮೂಲದ ರಾಮಲಿಂಗಂ ಕನ್ ಸ್ಟ್ರಕ್ಷನ್ ಗೌರಿಬಿದನೂರು ಬಳಿ ಹೆದ್ದಾರಿ ಕಾಮಗಾರಿ ನಡೆಸುತ್ತಿದೆ. ಹೀಗಾಗಿ ಕಾಮಗಾರಿಗಾಗಿ ಜೆಸಿಬಿಯನ್ನ ಲಾರಿ ಮುಖಾಂತರ ಮತ್ತೊಂದೆಡೆಗೆ ಸಾಗಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

    ಘಟನೆ ನಂತರ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರ್: ಯುವಕ ಸಾವು

    ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರ್: ಯುವಕ ಸಾವು

    ಮಂಡ್ಯ: ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನೊಳಗಿದ್ದ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

    ಶ್ರೀರಂಗಪಟ್ಟಣದ ಕಿರಂಗೂರು ವೃತ್ತದ ಬಳಿ ಅಪಘಾತ ನಡೆದಿದ್ದು, ನೀಲನಹಳ್ಳಿ ಗ್ರಾಮದ 23 ವರ್ಷದ ಯುವಕ ಅಭಿಷೇಕ್ ಮೃತಪಟ್ಟಿದ್ದಾರೆ. ರಸ್ತೆ ಬದಿಯ ಲಾರಿಯೊಂದು ನಿಂತಿತ್ತು. ಈ ವೇಳೆ ವೇಗವಾಗಿ ಬಂದ ಕಾರು ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮ ಕಾರಿನೊಳಗಿದ್ದ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಪಘಾತಕ್ಕೆ ಕಾರು ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯೆ ಕಾರಣ ಎಂದು ತಿಳಿದು ಬಂದಿದೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟಂಟಂ, ಲಾರಿ ಮುಖಾಮುಖಿ ಡಿಕ್ಕಿ- ಮೂವರ ದುರ್ಮರಣ, 10 ಕುರಿಗಳ ಸಾವು

    ಟಂಟಂ, ಲಾರಿ ಮುಖಾಮುಖಿ ಡಿಕ್ಕಿ- ಮೂವರ ದುರ್ಮರಣ, 10 ಕುರಿಗಳ ಸಾವು

    ರಾಯಚೂರು: ಟಂಟಂ ವಾಹನ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಬಳಿ ನಡೆದಿದೆ.

    ಬೆಳಗಿನ ಜಾವ 6 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಕೊಪ್ಪಳದ ಕುಷ್ಟಗಿ ತಾಲೂಕಿನ ಕನ್ನಾಳ ಗ್ರಾಮದ 40 ವರ್ಷದ ಮೌಲಪ್ಪ, 44 ವರ್ಷದ ಯಮನೂರು ಹಾಗೂ ಸಂಗನಾಳ ಗ್ರಾಮದ ಗಣಪತಿ ಬಾಲಪ್ಪ ಮೃತ ದುರ್ದೈವಿಗಳು.

    ಕನ್ನಾಳದಿಂದ ಸಿಂಧನೂರಿಗೆ ಕುರಿ ಸಂತೆಗೆ ಬರುತ್ತಿದ್ದ ಟಂಟಂ ಹಾಗೂ ತೌಡು ತುಂಬಿಕೊಂಡು ಕೊಪ್ಪಳದ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಟಂಟಂನಲ್ಲಿದ್ದ 10 ಕುರಿಗಳು ಸಹ ಸ್ಥಳದಲ್ಲೇ ಸಾವನ್ನಪ್ಪಿವೆ. ಅಲ್ಲದೇ ವಾಹನದಲ್ಲಿದ್ದ ನಾಲ್ಕು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ತಾವರಗೇರಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ತುರುವಿಹಾಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

  • ಅಪಘಾತದ ರಭಸಕ್ಕೆ ಇನ್ನೊಂದು ರಸ್ತೆಗೆ ಜಂಪ್ ಮಾಡ್ದ ಸ್ಕಾರ್ಪಿಯೋ, ಲಾರಿಗೆ ಡಿಕ್ಕಿ: ಬೆಂಗ್ಳೂರಲ್ಲಿ ಇಬ್ಬರ ದುರ್ಮರಣ

    ಅಪಘಾತದ ರಭಸಕ್ಕೆ ಇನ್ನೊಂದು ರಸ್ತೆಗೆ ಜಂಪ್ ಮಾಡ್ದ ಸ್ಕಾರ್ಪಿಯೋ, ಲಾರಿಗೆ ಡಿಕ್ಕಿ: ಬೆಂಗ್ಳೂರಲ್ಲಿ ಇಬ್ಬರ ದುರ್ಮರಣ

    ಬೆಂಗಳೂರು: ಸ್ಕಾರ್ಪಿಯೋ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಹಿನ್ನೆಲೆಯಲ್ಲಿ ಇಬ್ಬರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

    ಮೃತರನ್ನು ಅಶ್ವತ್ ಬಾಬು ಹಾಗೂ ರಾಜು ಎಂಬುವುದಾಗಿ ಗುರುತಿಸಲಾಗಿದ್ದು, ಇವರಿಬ್ಬರೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನವರು ಎಂದು ಹೇಳಲಾಗುತ್ತಿದೆ

    ಬೆಂಗಳೂರು ಏರ್‍ ಪೋರ್ಟ್ ಕಡೆಯಿಂದ ಬರುತ್ತಿದ್ದ ಸ್ಕಾರ್ಪಿಯೋ ಹುಣಸಮಾರನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕಾರ್ಪಿಯೋ ಇನ್ನೊಂದು ರಸ್ತೆಗೆ ಜಂಪ್ ಆಗಿ, ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರ್ ಸಂಪೂರ್ಣ ಜಖಂ ಆಗಿದ್ದು, ಕಾರ್ ನ ಮುಂಭಾಗದಲ್ಲಿ ಕುಳಿತಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಿಂದ ಹಿಂಬದಿ ಕುಳಿತಿದ್ದ ಮೂವರಿಗೆ ಕೂಡ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪರಿಣಾಮ ಮೃತದೇಹಗಳನ್ನು ಹೊರತೆಗೆಯುವಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಹರಸಾಹಸಪಟ್ಟರು. ಸದ್ಯ ಇಬ್ಬರು ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯ್ಲಲಿರೋ ಶವಾಗಾರಕ್ಕೆ ರವಾನಿಸಲಾಗಿದೆ.

    ನಜ್ಜುಗುಜ್ಜಾದ ಕಾರನ್ನು ಕ್ರೇನ್ ಮೂಲಕ ಬೇರೆಡೆ ಸ್ಥಳಾಂತರಿಸಲಾಗಿದೆ. ಭಾಷಾ ಅನ್ನೊರಿಗೆ ಸೇರಿದ ಕ್ಯಾಂಟರ್ ಲಾರಿಯನ್ನು ಬ್ಲೂಡಾರ್ಟ್ ಕಂಪನಿಗೆ ಗಾಡಿ ಅಟೆಚ್ ಮಾಡಿದ್ದರು ಎಂಬುವುದಾಗಿ ತಿಳಿದುಬಂದಿದೆ.

     

  • 100 ಮೀಟರ್ ದೂರದವರೆಗೆ ರಿಕ್ಷಾವನ್ನು ಎಳೆದುಕೊಂಡು ಹೋಯ್ತು ಲಾರಿ: ಐದು ಸಾವು, 6 ಮಂದಿಗೆ ಗಂಭೀರ ಗಾಯ

    100 ಮೀಟರ್ ದೂರದವರೆಗೆ ರಿಕ್ಷಾವನ್ನು ಎಳೆದುಕೊಂಡು ಹೋಯ್ತು ಲಾರಿ: ಐದು ಸಾವು, 6 ಮಂದಿಗೆ ಗಂಭೀರ ಗಾಯ

    ಹೈದರಾಬಾದ್: ಲಾರಿಯೊಂದು ಆಟೋ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ತೆಲಂಗಾಣದ ಆಸಿಫಾಬಾದ್ ಜಿಲ್ಲೆಯ ಬೆನ್ದಾರದಲ್ಲಿ ನಡೆದಿದೆ.

    ಘಟನೆಯಲ್ಲಿ ಲೀಮುಗುಡ ಜಿಲ್ಲೆಯ ಮೊರೋಲೆ ಸಂತೋಷ್(18) ಹಾಗೂ ಅಡೇ ತಿರುಪತಿ(22). ಅಗರ್‍ವಾಡದಲ್ಲಿ ವಾಸಿಸುತ್ತಿದ್ದ ವೇದ್‍ಮ ಅಂಭರಾವ್(25), ಕೇರಮೇರಿ ಮಂಡಲ್‍ನ ಜಾರಿ ಜಿಲ್ಲೆಯ ಲೇಂದಗುಡ(14) ಸಾವನ್ನಪ್ಪಿರುವ ವ್ಯಕ್ತಿಗಳು ಎಂದು ವಾನ್‍ಕಿಡಿ ಪೊಲೀಸರು ತಿಳಿಸಿದ್ದಾರೆ.

    ಗುರುತಿಲ್ಲದ ಲಾರಿಯು ಆಟೋಗೆ ಡಿಕ್ಕಿ ಒಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಸಾವನ್ನಪ್ಪಿದ್ದಾನೆ.

    ಲಾರಿ ವೇಗದಿಂದ ಬಂದು ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಹೇಗಿತ್ತು ಎಂದರೆ ಲಾರಿಯು ಆಟೋವನ್ನು 100 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ. ರಿಕ್ಷಾದ ಮೇಲಿನ ಭಾಗವು ಸಂಪೂರ್ಣವಾಗಿ ಜಖಂಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

    ಗಾಯಾಳುಗಳನ್ನು ವಾನ್‍ಕಿಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮನ್ಚೇರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

  • ಲಾರಿ, ಕ್ರೂಸರ್ ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ 12 ಮಂದಿಗೆ ಗಾಯ

    ಲಾರಿ, ಕ್ರೂಸರ್ ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ 12 ಮಂದಿಗೆ ಗಾಯ

    ದಾವಣಗೆರೆ: ಲಾರಿ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ 12 ಮಂದಿಗೆ ಗಾಯಗಳಾದ ಘಟನೆ ನಡೆದಿದೆ.

    ಜಗಳೂರು ತಾಲೂಕಿನ ದೇವಿಕೆರೆ ಬಳಿ ಇಂದು ಮುಂಜಾನೆ ಈ ಅವಘಡ ಸಂಭವಿಸಿದೆ. ಇಬ್ಬರು ಚಿಕ್ಕಮಕ್ಕಳು ಸೇರಿದಂತೆ ಆರು ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಾಳುಗಳನ್ನು ದಾವಣಗೆರೆ ನಿಟ್ಟುವಳ್ಳಿಯ ಶ್ರಿನಿವಾಸ್, ಪರಶುರಾಮ, ದೀಪಿಕಾ, ಮಹಾಲಕ್ಷ್ಮಿ, ರೇಣುಕಮ್ಮ, ಸಿಂಚನಾ, ಇಂಚರಾ, ರವಿಕುಮಾರ್, ನೇತ್ರಾವತಿ, ಶಶಿಕಲಾ, ಮಣಿ, ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.

    ಪಾವಗಡ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ದೇವಿಕೆರೆ ಸಮೀಪ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ರೂಸರ್ ನ ಮುಂಭಾಗದಲ್ಲಿ ಕುಳಿತವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಎಲ್ಲಾ ಗಾಯಾಳುಗಳನ್ನು ದಾವಣಗೆರೆ ಬಾಪೂಜೆ, ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಜಗಳೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಟೋ-ಲಾರಿ ನಡುವೆ ಡಿಕ್ಕಿ- ನಾಲ್ವರು ಸ್ಥಳದಲ್ಲೇ ಸಾವು

    ಆಟೋ-ಲಾರಿ ನಡುವೆ ಡಿಕ್ಕಿ- ನಾಲ್ವರು ಸ್ಥಳದಲ್ಲೇ ಸಾವು

    ಚಿತ್ರದುರ್ಗ: ಆಟೋ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆ ಬಳಿ ನಡೆದಿದೆ.

    ಹಿರಿಯೂರು ಪಟ್ಟಣದ ಸಮೀಪವಿರುವ ನಂಜಯ್ಯನ ಕೊಟ್ಟಿಗೆ ನಿವಾಸಿಗಳಾದ ಮನೋಹರ್, ಶರಣ್, ಮುತ್ತು ಹಾಗು ಮದಕರಿಪುರ ಗ್ರಾಮದ ನಿವಾಸಿ ಚಿದಾನಂದ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಅಪಘಾತದಲ್ಲಿ ಗಾಯಗೊಂಡಿರುವ ಇಬ್ಬರ ಹೆಸರು ತಿಳಿದುಬಂದಿಲ್ಲ. ಲಾರಿ ಚಾಲಕನ ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.

    ಅಪಘಾತದ ಬಳಿಕ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಆಟೋ ಹಿರಿಯೂರಿನಿಂದ ಚಳ್ಳಕೆರೆ ಕಡೆಗೆ ಬರುತ್ತಿತ್ತು. ಲಾರಿ ಚಳ್ಳಕೆರೆ ಕಡೆಯಿಂದ ಹಿರಿಯೂರಿನ ಕಡೆಗೆ ಹೋಗುತ್ತಿತ್ತು. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.

    ಈ ಸಂಬಂಧ ಘಟನಾ ಸ್ಥಳಕ್ಕೆ ಐಮಂಗಳ ಪೊಲೀಸರು ಆಗಮಿಸಿ, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದ್ದಾರೆ. ಐಮಂಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬ್ರಿಡ್ಜ್ ಮೇಲಿಂದ ಪಲ್ಟಿಯಾಗಿ ಕೆಳಗೆ ಬಿದ್ದ ಸಿಮೆಂಟ್ ಲಾರಿ

    ಬ್ರಿಡ್ಜ್ ಮೇಲಿಂದ ಪಲ್ಟಿಯಾಗಿ ಕೆಳಗೆ ಬಿದ್ದ ಸಿಮೆಂಟ್ ಲಾರಿ

    ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರದ ಸುಲ್ತಾನಪುರ ಬಳಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ಸೇತುವೆ ಮೇಲಿಂದ ಪಲ್ಟಿಯಾಗಿ ಕೆಳಗೆ ಬಿದ್ದಿದೆ.

    ಸೇತುವೆ ಮೇಲಿಂದ ಲಾರಿ ಬಿದ್ದರೂ ಚಾಲಕ ಬಸವರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಮೇಲಿಂದ ಬಿದ್ದಿದರಿಂದ ಸಿಮೆಂಟ್ ಚೀಲಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಜೆ.ಎಸ್.ಡಬ್ಲು ನಿಂದ ಸಿಮೆಂಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಇಂದು ನಸುಕಿನ ಜಾವ ಡ್ರೈವರ್ ಅಜಾಗರೂಕತೆಯಿಂದ ಸೇತುವೆ ಮೇಲಿಂದ ಪಲ್ಟಿಯಾಗಿ ಬಿದ್ದಿದೆ.

    ಚಾಲಕ ಬಸವರಾಜನನ್ನು ಸಂಡೂರಿನ ಸರ್ಕಾರಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಆಕ್ಟಿವಾಗೆ ಟಿಪ್ಪರ್ ಲಾರಿ ಡಿಕ್ಕಿ: ಭಯಾನಕ ಅಪಘಾತದಿಂದ ಇಬ್ಬರು ಪಾರು

    ಆಕ್ಟಿವಾಗೆ ಟಿಪ್ಪರ್ ಲಾರಿ ಡಿಕ್ಕಿ: ಭಯಾನಕ ಅಪಘಾತದಿಂದ ಇಬ್ಬರು ಪಾರು

    ಚಿಕ್ಕಬಳ್ಳಾಪುರ: ಆಕ್ಟಿವಾ ಹೋಂಡಾ ಬೈಕಿಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಭೀಕರ ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ಈ ಅಪಘಾತ ನಡೆದಿದೆ. ಇದು ಒಂದು ವಾರದ ಹಿಂದೆ ಅಪಘಾತ ನಡೆದಿದೆ ಎನ್ನಲಾಗಿದೆ. ಈ ಅಪಘಾತದ ದೃಶ್ಯ ಹೆದ್ದಾರಿ ಬದಿಯ ಹೋಟೆಲ್‍ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆಕ್ಟಿವಾ ಹೋಂಡಾ ಬೈಕ್ ನಲ್ಲಿದ್ದ ಸವಾರ ನೋಡದೇ ಬಲಗಡೆಗೆ ಗಾಡಿಯನ್ನು ತಿರುಗಿಸಿದ್ದಾನೆ. ಈ ವೇಳೆ ಅತಿ ವೇಗದಿಂದ ಬರುತ್ತಿದ್ದ ಟಿಪ್ಪರ್ ಲಾರಿ ಬಂದು ಆಕ್ಟಿವಾಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿ ಹೊಡೆದ ರಭಸಕ್ಕೆ ಆಕ್ಟಿವಾ ಹೋಂಡಾ ನೆಲಕ್ಕುರುಳಿ ಬಿದ್ದು ಸವಾರನಿಗೆ ತೀವ್ರವಾದ ಗಾಯಗಳಾಗಿದೆ. ಅದೇ ಆಕ್ಟಿವಾ ಹೋಂಡಾದ ಹಿಂಬದಿ ಕುಳಿತಿದ್ದ ಮಹಿಳೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾಳೆ.

    ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ತಿಳಿದುಬಂದಿದೆ. ಈ ಕುರಿತು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.