Tag: lorry

  • ಲಾರಿ, ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ- ಬೈಕ್ ಸವಾರ ಸಜೀವ ದಹನ

    ಲಾರಿ, ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ- ಬೈಕ್ ಸವಾರ ಸಜೀವ ದಹನ

    ಹುಬ್ಬಳ್ಳಿ: ಲಾರಿ ಮತ್ತು ಬೈಕ್ ನಡುವೆ ಅಪಘಾತವಾಗಿ, ಅಪಘಾತದ ರಭಸಕ್ಕೆ ಬೆಂಕಿಹೊತ್ತಿಕೊಂಡು ಬೈಕ್ ಸವಾರ ಸಜೀವದಹನಗೊಂಡ ಘಟನೆ ಹುಬ್ಬಳ್ಳಿ ಹೊರವಲಯದ ತಾರಿಹಾಳ ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಿಂದ ಬೆಂಕಿ ಹೊತ್ತಿಕೊಂಡಿದೆ. ಇದರ ಪರಿಣಾಮ ಬೈಕ್ ನಲ್ಲಿದ್ದ ಮುಂಬದಿ ಸವಾರ ಸುಟ್ಟು ಕರಕಲಾದ್ರೆ, ಹಿಂಬದಿ ಸವಾರನಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ಮೃತ ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ಲಾರಿಗೂ ಬೆಂಕಿ ಹೊತ್ತಿಕೊಂಡಿದ್ದು, ಲಾರಿ ಚಾಲಕ ಹಾಗೂ ಕ್ಲಿನರ್ ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಇದರಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆಗೆ ಅತಿಯಾದ ವೇಗವೇ ಕಾರಣ ಎನ್ನಲಾಗುತ್ತದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಈ ಸಂಬಂಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ವಾಹನ ಸವಾರರ ಗುರುತು ಮಾತ್ರ ಇನ್ನೂ ಪತ್ತೆಯಾಗಿಲ್ಲ.

  • ಸ್ನೇಹಿತರನ್ನು ಭೇಟಿಯಾಗಲು ಬೈಕ್ ನಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿ- ಇಬ್ಬರ ದುರ್ಮರಣ

    ಸ್ನೇಹಿತರನ್ನು ಭೇಟಿಯಾಗಲು ಬೈಕ್ ನಲ್ಲಿ ತೆರಳುತ್ತಿದ್ದಾಗ ಲಾರಿ ಡಿಕ್ಕಿ- ಇಬ್ಬರ ದುರ್ಮರಣ

    ತುಮಕೂರು: ಬೈಕ್ ಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ನಗರದ ಕ್ಯಾತ್ಸಂದ್ರದ ಶಿವರಾಜ್ ಟಾಕೀಸ್ ಬಳಿ ನಡೆದಿದೆ.

    ಹಾವೇರಿ ಮೂಲದ ಶಂಕರ್ ಜೋಷಿ ಹಾಗೂ ವೇಣುಗೋಪಾಲ ಎಂಬವರು ಮೃತ ದುರ್ದೈವಿಗಳಾಗಿದ್ದು, ಇವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

    ಮೃತ ಶಂಕರ್ ಜೋಷಿ ಗಾಗೂ ವೇಣುಗೋಪಾಲ ಬೆಂಗಳೂರಿನಿಂದ ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಬೈಕ್‍ನಲ್ಲಿ ಇಂದು ಮುಂಜಾನೆ ಸುಮಾರು 5 ಗಂಟೆಗೆ ತುಮಕೂರಿಗೆ ಹೋಗುತ್ತಿದ್ದರು. ಸುಮಾರು 6.30 ಕ್ಕೆ ರಾಷ್ಟ್ರೀಯ ಹೆದ್ದಾರಿಯ ಬಳಿ ಬಂದಾಗ ನಿಧಾನವಾಗಿ ಬೈಕ್ ಓಡಿಸುತಿದ್ದರು. ಆದರೆ ತಮಿಳುನಾಡು ಮೂಲದ ಲಾರಿ ಹಿಂಬದಿಯಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಒಬ್ಬರು ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿಕೊಂಡು ಮೃತಪಟ್ಟರೆ, ಮತ್ತೊಬ್ಬರಿಗೆ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

    ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಮೃತದೇಹಗಳನ್ನು ಆಂಬುಲೆನ್ಸ್ ಮೂಲಕ ಸಮೀಪದ  ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

  • ಆಟೋಗೆ ಲಾರಿ ಡಿಕ್ಕಿ- ಸ್ಥಳದಲ್ಲಿಯೇ 6 ಮಂದಿ ದುರ್ಮರಣ

    ಆಟೋಗೆ ಲಾರಿ ಡಿಕ್ಕಿ- ಸ್ಥಳದಲ್ಲಿಯೇ 6 ಮಂದಿ ದುರ್ಮರಣ

    ಹೈದರಾಬಾದ್: ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ದಾರುಣವಾಗಿ ಮೃತಪಟ್ಟಿದ್ದು, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಮೂಲತಃ ಅಲ್ಲಾವರಮ್ ಗ್ರಾಮ ನಿವಾಸಿಗಳಾದ ನಾಗಮಣಿ (46), ಪಿಲ್ಲಾ ಸರಸ್ವತಿ (48), ಪಿಲ್ಲಾ ಭವಾನಿ (25), ಪಿ ಅನಂತಲಕ್ಷ್ಮಿ (45) ಹಾಗೂ ದುರ್ಗ ಎಂಬವರು ಈ ದುರಂತದಲ್ಲಿ ಮೃತಪಟ್ಟ ದುರ್ದೈವಿಗಳು. ಇವರೆಲ್ಲರೂ ಪೂರ್ವ ಗೋದಾವರಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

    ಒಂದೇ ಗ್ರಾಮದವರಾದ 13 ಮಂದಿ ಆಟೋರಿಕ್ಷಾದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಆಟೋ ಮೊಡೆಕುರು ತಲುಪಿದ ನಂತರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮರಳು ತುಂಬಿದ ಲಾರಿ ವೇಗವಾಗಿ ಬಂದು ಆಟೋಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಅಮಲಪುರಂನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಶರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

  • ಬೆಳ್ಳಂಬೆಳಗ್ಗೆ ಭೀಕರ ಅನಾಹುತ – ಲಾರಿ ಹರಿದು ತಾಯಿ-ಮಗಳು ದುರ್ಮರಣ

    ಬೆಳ್ಳಂಬೆಳಗ್ಗೆ ಭೀಕರ ಅನಾಹುತ – ಲಾರಿ ಹರಿದು ತಾಯಿ-ಮಗಳು ದುರ್ಮರಣ

    ಬೆಂಗಳೂರು: ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಲಾರಿ ಹರಿದು ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ಬೆಂಗಳೂರಿನ ಬಾಣಸವಾಡಿ ಬಳಿಯ ಬಾಬುಸಾಬ್‍ಪಾಳ್ಯದಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರು ತಮಿಳುನಾಡು ಮೂಲದ ತಾಯಿ-ಮಗಳು ಎಂದು ಹೇಳಲಾಗುತ್ತಿದೆ.

    ಮೃತರಿಬ್ಬರು ದೀಪಾವಳಿ ಹಬ್ಬ ಮಗಿಸಿ ತಮಿಳುನಾಡಿನಿಂದ ಬೆಂಗಳೂರಿಗೆ ವಾಪಾಸ್ಸಾಗಿ ಸುಮಾರು 6.30ರ ವೇಳೆಗೆ ಬಸ್ಸಿನಿಂದ ಇಳಿದು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಪಾದಾಚಾರಿಗಳ ಮೇಲೆ ಲಾರಿಯೊಂದು ಹರಿದಿದೆ. ಪರಿಣಾಮ ಮಹಿಳೆಯರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಸ್ಥಳಕ್ಕೆ ಬಾಣಸವಾಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

  • ಸೇತುವೆ ಕುಸಿದು ನೀರಿಗೆ ಬಿದ್ದ ಲಾರಿ- 100 ಮೂಟೆ ಅಕ್ಕಿ, 30 ಮೂಟೆ ಬೇಳೆ ನೀರು ಪಾಲು

    ಸೇತುವೆ ಕುಸಿದು ನೀರಿಗೆ ಬಿದ್ದ ಲಾರಿ- 100 ಮೂಟೆ ಅಕ್ಕಿ, 30 ಮೂಟೆ ಬೇಳೆ ನೀರು ಪಾಲು

    ಮಂಡ್ಯ: ಸತತವಾಗಿ ಮಳೆಯಿಂದ ಶಿಥಿಲಗೊಂಡಿದ್ದ ಸೇತುವೆ ಕುಸಿದ ಪರಿಣಾಮ ಪಡಿತರ ಅಕ್ಕಿ ಮತ್ತು ಬೇಳೆ ಸಾಗಿಸುತ್ತಿದ್ದ ಲಾರಿ ನೀರಿಗೆ ಬಿದ್ದಿರುವ ಘಟನೆ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕೆಆರ್ ಪೇಟೆ ಸೊಸೈಟಿಯಿಂದ ನಾಯಕನಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಲಾರಿಯಲ್ಲಿ ಪಡಿತರ ಅಕ್ಕಿ ಮತ್ತು ಬೇಳೆಯನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ಈ ಸಂದರ್ಭದಲ್ಲಿ ಲಾರಿ ನಾಯಕನಹಳ್ಳಿ ಕೆರೆಗೆ ಅಡ್ಡಲಾಗಿ ವಾಹನ ಸಂಚರಿಸಲು ಕಟ್ಟಲಾಗಿದ್ದ ಸೇತುವೆ ಮೇಲೆ ಬಂದಿದೆ. ಆದರೆ ಸತತ ಮಳೆಯಿಂದ ಶಿಥಿಲಗೊಂಡಿದ್ದ ಸೇತುವೆ ತಕ್ಷಣ ಕುಸಿದಿದೆ. ಪರಿಣಾಮ ಪಡಿತರರಿಗಾಗಿ ಸಾಗಿಸುತ್ತಿದ್ದ ಲಾರಿ ನೀರಿಗೆ ಬಿದ್ದಿದೆ.

    ಲಾರಿ ನೀರಿನಲ್ಲಿ ಬಿದ್ದುದ್ದರಿಂದ ಸುಮಾರು 100 ಮೂಟೆ ಅಕ್ಕಿ, 30 ಮೂಟೆ ಬೇಳೆ ನೀರು ಪಾಲಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಗ್ರಾಮಸ್ಥರು ನೀರಿಗೆ ಧುಮುಕಿ ಆಹಾರ ವಸ್ತುಗಳನ್ನು ಮೇಲೆತ್ತಲು ಲಾರಿಯವರಿಗೆ ಸಹಾಯ ಮಾಡಿದ್ದಾರೆ. ಈ ಸೇತುವೆ ಸುಮಾರು 22 ವರ್ಷ ಹಳೆಯದಾಗಿದ್ದು, ಮಳೆಯಿಂದ ನನೆದು ಸೇತುವೆ ಕುಸಿದಿದೆ. ಇದರಿಂದಾಗಿ ಸಂತೆಬಾಚಹಳ್ಳಿ ಮತ್ತು ನಾಯಕನಹಳ್ಳಿ ಮಾರ್ಗ ಸಂಪೂರ್ಣ ಕಡಿತವಾಗಿದೆ.

    ಇನ್ನೂ ಲಾರಿ ನೀರಿಗೆ ಬಿದ್ದಿದ್ದು, ಸದ್ಯಕ್ಕೆ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ತಕ್ಷಣ ಕ್ರೇನ್ ತರಿಸಿ ಮೇಲೆತ್ತದಿದ್ದರೆ, ಮತ್ತಷ್ಟು ಅಪಾಯವಾಗುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ.

  • ಲಾರಿ ನಿಲ್ಲಿಸಿ ಪಂಕ್ಚರ್ ಹಾಕ್ತಿದ್ದಾಗ ಮತ್ತೊಂದು ಲಾರಿ ಡಿಕ್ಕಿ- ಚಕ್ರಕ್ಕೆ ಸಿಲುಕಿ ಯುವಕ ಸಾವು

    ಲಾರಿ ನಿಲ್ಲಿಸಿ ಪಂಕ್ಚರ್ ಹಾಕ್ತಿದ್ದಾಗ ಮತ್ತೊಂದು ಲಾರಿ ಡಿಕ್ಕಿ- ಚಕ್ರಕ್ಕೆ ಸಿಲುಕಿ ಯುವಕ ಸಾವು

    ರಾಯಚೂರು: ಲಾರಿ ಡಿಕ್ಕಿ ಹೊಡೆದು ಯುವಕನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ರಾಯಚೂರಿನ ಮಾನ್ವಿ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಆಂಧ್ರ ಮೂಲದ ರಾಜು (26) ಮೃತ ವ್ಯಕ್ತಿಯಾಗಿದ್ದಾರೆ. ಇವರು ರಾತ್ರಿ ರಸ್ತೆ ಪಕ್ಕ ಲಾರಿ ನಿಲ್ಲಿಸಿ ಪಂಕ್ಚರ್ ಹಾಕುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಲಾರಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ರಾಜು ಲಾರಿಯ ಹಿಂದಿನ ಚಕ್ರಕ್ಕೆ ಸಿಲುಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್ ಸ್ಟ್ಯಾಂಡ್ ತೆಗೆಯದೇ ಗಾಡಿ ಚಲಾಯಿಸಿ ಆಯತಪ್ಪಿ ಬಿದ್ದ- ಲಾರಿ ಹರಿದು ಸವಾರ ಸಾವು

    ಬೈಕ್ ಸ್ಟ್ಯಾಂಡ್ ತೆಗೆಯದೇ ಗಾಡಿ ಚಲಾಯಿಸಿ ಆಯತಪ್ಪಿ ಬಿದ್ದ- ಲಾರಿ ಹರಿದು ಸವಾರ ಸಾವು

    ಮಂಗಳೂರು: ಲಾರಿ ಹರಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯ ತೊಕ್ಕೊಟ್ಟಿನಲ್ಲಿ ನಡೆದಿದೆ.

    ತಲಪಾಡಿ ಕೆ.ಸಿ. ರೋಡ್ ನಿವಾಸಿ ಸಲೀಂ (30) ಮೃತ ದುರ್ದೈವಿ. ಸಲೀಂ ಅವರು ಬೈಕನ ಸ್ಟಾಂಡ್ ತೆಗೆಯದೇ ಚಲಾಯಿಸಿದ್ದರಿಂದ ಆಯತಪ್ಪಿ ರಸ್ತೆಗೆ ಉರುಳಿ ಬಿದ್ದಿದ್ದು, ದುರದೃಷ್ಟವಶಾತ್ ಹಿಂದಿನಿಂದ ಬರುತ್ತಿದ್ದ ಲಾರಿ ಅವರ ಮೇಲೆ ಹರಿದು ಹೋಗಿದೆ.

    ಸಲೀಂ ತಲೆಯ ಭಾಗ ಜಜ್ಜಿ ಹೋಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಲೀಂ ಅವರ ಜೇಬಿನಲ್ಲಿ ಎರಡು ಪ್ಯಾಕೆಟ್ ಗಾಂಜಾ ಪತ್ತೆಯಾಗಿದ್ದು, ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾರಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಸಂಬಂಧ  ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರಿನ ರಸ್ತೆ ಹೊಂಡಕ್ಕೆ ಮತ್ತೊಂದು ಬಲಿ – ಲಾರಿ ಹರಿದು ಸವಾರೆ ದಾರುಣ ಸಾವು

    ಬೆಂಗಳೂರಿನ ರಸ್ತೆ ಹೊಂಡಕ್ಕೆ ಮತ್ತೊಂದು ಬಲಿ – ಲಾರಿ ಹರಿದು ಸವಾರೆ ದಾರುಣ ಸಾವು

    ಬೆಂಗಳೂರು: ನಗರದ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದೆ. ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಗುಂಡಿಗೆ ಬಿದ್ದ ಪರಿಣಾಮ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ನಾಯಂಡನಹಳ್ಳಿ ಸಿಗ್ನಲ್ ಬಳಿ ನಡೆದಿದೆ. ಮೃತ ದುರ್ದೈವಿ ಮಹಿಳೆಯನ್ನು 52 ವರ್ಷದ ರಾಧಾ ಎಂಬುವುದಾಗಿ ಗುರುತಿಸಲಾಗಿದೆ.

    ಬೈಕ್ ನಲ್ಲಿ ತನ್ನ ಅಳಿಯ ರವಿಕುಮಾರ್ ಜೊತೆ ಜೊತೆ ರಾಧಾ ಕಾಡುಗೋಡಿಯಿಂದ ರಾಮನಗರಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಿಗ್ನಲ್ ಬಳಿ ಚಿಕ್ಕ-ಚಿಕ್ಕ ಜಲ್ಲಿಯಿಂದಾಗಿ ಬೈಕ್ ಸ್ಕಿಡ್ ಆಗಿ ರಸ್ತೆಯಲ್ಲೇ ನಿರ್ಮಾಣವಾದ ಗುಂಡಿಗೆ ಬಿದ್ದಿದೆ. ಈ ವೇಳೆ ಅಳಿಯ ಎಡಭಾಗಕ್ಕೆ ಬಿದ್ದ ಪರಿಣಾಮ ಸಾವಿನಿಂದ ಪಾರಾಗಿದ್ದಾರೆ. ಆದ್ರೆ ಹಿಂಬದಿಯಲ್ಲಿ ಕುಳಿತಿದ್ದ ಅತ್ತೆ ಬಲ ಬದಿಗೆ ಬಿದ್ದಿದ್ದು, ಕೂಡಲೇ ಹಿಂದಿನಿಂದ ಬರುತ್ತಿದ್ದ ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಅವರ ಮೇಲೆ ಹರಿದಿದೆ.

    ಘಟನೆಯಿಂದ ಬೈಕ್ ಸವಾರ ರಾಧಾ ಅಳಿಯ ರವಿಕುಮಾರ್‍ಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರಾಧಾ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಬಳಿಕ ಸ್ಥಳೀಯರು ಜಮಾಯಿಸಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಪ್ರತಿಭಟನೆ ನಡೆಸಿದ್ದಾರೆ.

    ಸಿಟಿ ಮಾರ್ಕೆಟ್ ಮೇಲ್ಸೇತುವೆಯ ರಸ್ತೆ ಗುಂಡಿಯು ಅಕ್ಟೋಬರ್ 2ರಂದು ರಾತ್ರಿ ಎರಡು ಜೀವಗಳನ್ನು ಬಲಿ ಪಡೆದಿತ್ತು. ಮರುದಿನ ಬೆಳಿಗ್ಗೆ ಅದೇ ಪ್ರದೇಶದಲ್ಲಿ ಬೈಕ್‍ನಿಂದ ಬಿದ್ದು ಮತ್ತಿಬ್ಬರು ಗಾಯಗೊಂಡಿದ್ದರು. ಜಗಜೀವನ್ ರಾಮನಗರದ ಅಂಥೋಣಿ ಜೋಸೆಫ್ (55) ಹಾಗೂ ಪತ್ನಿ ಸಗಾಯ್ ಮೇರಿ (52) ಮೃತಪಟ್ಟಿದ್ದು, ಅವರ ಆರು ವರ್ಷದ ಮೊಮ್ಮಗಳು ಅಕ್ಯೂಲಾ ಶೆರಿನ್ ಪ್ರಾಣಾಪಾಯದಿಂದ ಪಾರಾಗಿದ್ದಳು.

     

     

  • ರಸ್ತೆಯಲ್ಲಿ ಕಸಗುಡಿಸುವ ಮಂದಿ ಎಚ್ಚರವಾಗಿರಿ! ವಿಡಿಯೋ ನೋಡಿ

    ರಸ್ತೆಯಲ್ಲಿ ಕಸಗುಡಿಸುವ ಮಂದಿ ಎಚ್ಚರವಾಗಿರಿ! ವಿಡಿಯೋ ನೋಡಿ

    ಹೈದರಾಬಾದ್: ತೆಲಂಗಾಣದ ವಾರಂಗಲ್ ಜಿಲ್ಲೆಯ ಪರ್ಕಳದ ರಸ್ತೆಯೊಂದರಲ್ಲಿ ಕಸಗುಡಿಸುತ್ತಿದ್ದ ಮಹಿಳೆ ಕಾರ್ಮಿಕರೊಬ್ಬರಿಗೆ ಲಾರಿಯೊಂದು ಏಕಾಏಕಿ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

    ವಿಡಿಯೋದಲ್ಲಿ ಮುಂಜಾನೆ ಇಬ್ಬರು ಮಹಿಳಾ ಕಾರ್ಮಿಕರು ಎಂದಿನಂತೆ ರಸ್ತೆಯನ್ನು ಶುಚಿ ಮಾಡುತ್ತಿದ್ದರು. ಈ ವೇಳೆ ಓರ್ವ ಕಾರ್ಮಿಕರ ಪೊರಕೆ ಸಡಿಲ ಗೊಂಡಿದ್ದು, ಅದನ್ನು ರಸ್ತೆಯಲ್ಲಿ ನಿಂತುಕೊಂಡು ಸರಿಪಡಿಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಲಾರಿಯೊಂದು ಸ್ವಲ್ಪ ದೂರದಿಂದ ಬರುತ್ತಿತ್ತು.

    ಲಾರಿ ಚಾಲಕ ಅಡ್ಡ ದಿಡ್ಡಿಯಾಗಿ ಓಡಿಸುತ್ತಾ ಮಹಿಳೆಯ ನಿಂತಿದ್ದ ಕಡೆ ಬಂದು ಏಕಾಏಕಿ ಡಿಕ್ಕಿ ಹೊಡೆದು ವೇಗವಾಗಿ ಲಾರಿಯನ್ನು ಓಡಿಸಿಕೊಂಡು ಪರಾರಿಯಾಗಿದ್ದಾನೆ. ಇತ್ತ ಲಾರಿ ಗುದ್ದಿದ್ದ ರಭಸಕ್ಕೆ ಅವರು ಮೇಲೆ ಹಾರಿ ಕೆಳಗೆ ಬಿದ್ದಿದ್ದಾರೆ. ತಲೆಗೆ ಏಟು ಬಿದ್ದಿದ್ದರೂ ಅವರು ತಕ್ಷಣ ಮೇಲೆ ಎದ್ದು ಕುಳಿತುಕೊಂಡಿದ್ದಾರೆ. ಇದನ್ನು ನೋಡಿದ ಸಹೋದ್ಯೋಗಿ ತಕ್ಷಣ ಅವರ ಸಹಾಯಕ್ಕೆ ಬಂದಿದ್ದಾರೆ.

    ಈ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಗಾಯಗೊಂಡ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

    https://www.youtube.com/watch?v=YeRBvV2GXsE

  • ಗದಗ, ದಾವಣಗೆರೆಯಲ್ಲಿ ಭಾರೀ ಮಳೆ: ಹಳ್ಳದ ನೀರಿನಲ್ಲಿ ಸಿಲುಕಿಕೊಂಡವು ವಾಹನಗಳು

    ಗದಗ, ದಾವಣಗೆರೆಯಲ್ಲಿ ಭಾರೀ ಮಳೆ: ಹಳ್ಳದ ನೀರಿನಲ್ಲಿ ಸಿಲುಕಿಕೊಂಡವು ವಾಹನಗಳು

    ಗದಗ/ದಾವಣಗೆರೆ: ಪ್ರತಿದಿನ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗುತ್ತಲೇ ಇವೆ. ಮಳೆಯಿಂದಾಗಿ ಕಾರೊಂದು ಕೊಚ್ಚಿ ಹೋಗಿದ್ದು, ಅದನ್ನು ಸ್ಥಳೀಯರು ಹೊರ ತೆಗೆದಿರುವ ಘಟನೆ ದಾವಣಗೆರೆ ತಾಲೂಕಿನ ಕುಂಟಪಾಲನಹಳ್ಳಿಯ ಸಮೀಪದಲ್ಲಿ ನಡೆದಿದೆ.

    ಮಂಗಳವಾರ ಪ್ರೊ.ನಿಂಗಪ್ಪ ಎಂಬುವವರ ಕಾರನ್ನು ಚಾಲಕ ಸಂಬಂಧಿಕರನ್ನು ಕರೆತರಲು ದಾವಣಗೆರೆಯಿಂದ ಲೋಕಿಕೆರೆ ಗ್ರಾಮಕ್ಕೆ ಚಲಾಯಿಸಿಕೊಂಡು ಹೋಗುತ್ತಿದ್ದ. ಆದರೆ ಅತಿಯಾಗಿ ಸುರಿದ ಮಳೆಯ ಪರಿಣಾಮ ಕುಂಟಪಾಲನಹಳ್ಳಿಯ ಪಕ್ಕದಲ್ಲಿದ್ದ ಹಳ್ಳವೊಂದು ತುಂಬಿ ಸೇತುವೆಯ ಮೇಲೆ ನೀರು ಹರಿಯಲು ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬರುತ್ತಿದ್ದ ಕಾರು ಸೇತುವೆಯ ಮಧ್ಯ ಸಿಲುಕಿಗೊಂಡಿದ್ದು, ಮುಂದೆ ಹೋಗಲು ಸಾಧ್ಯವಾಗಲಿಲ್ಲ. ತಕ್ಷಣ ಚಾಲಕ ಕಾರಿನಿಂದ ಕೆಳಗಿಳಿದಿದ್ದಾನೆ. ನೀರಿನ ರಭಸ ಹೆಚ್ಚಾದಂತೆ ಕಾರು ಕೊಚ್ಚಿ ಹೋಗಿ ಕೆಸರಲ್ಲಿ ಸಿಲುಕಿಕೊಂಡಿದೆ. ಇಂದು ಆ ಕಾರನ್ನು ಗ್ರಾಮಸ್ಥರು ಬಂದು ಮೇಲಕ್ಕೆತ್ತಿದ್ದಾರೆ.

    ಇನ್ನೂ ಮಳೆಯಿಂದ ಲಾರಿಯೊಂದು ತಡರಾತ್ರಿ ಹಳ್ಳಕ್ಕೆ ಉರುಳಿ ಬಿದ್ದಿರುವ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದ ಬಳಿ ನಡೆದಿದೆ.

    ಗದಗ ನಗರದ ಮಹ್ಮದ್ ಹುಸೇನ್ ಎಂಬುವವರಿಗೆ ಸೇರಿದ ಲಾರಿ ಬಿತ್ತನೆ ಬೀಜವನ್ನು ಸಾಗಿಸುತ್ತಿತ್ತು. ಮಂಗಳವಾರ ಲಾರಿ ಕೊಪ್ಪಳ ಜಿಲ್ಲೆಯ ಕುಕನೂರಿಗೆ ಬಿತ್ತನೆ ಬೀಜವನ್ನು ತಲುಪಿಸಿ ಹಾತಲಗೇರಿ ಮಾರ್ಗವಾಗಿ ಗದಗಕ್ಕೆ ವಾಪಾಸಾಗುತ್ತಿತ್ತು. ಕಳೆದ ಕೆಲ ದಿನಗಳಿಂದ ಸುರಿಯುತ್ತಿರೋ ಭಾರಿ ಮಳೆಗೆ ಗದಗ ಹಾತಲಗೇರಿ ರಸ್ತೆ ಮಧ್ಯದಲ್ಲಿ ಹರಿಯುವ ಗದ್ದಿಹಳ್ಳ ತುಂಬಿ ರಸ್ತೆಯ ಮೇಲೆ ಹರಿದ ಪರಿಣಾಮ ಲಾರಿ ನೀರಿನಲ್ಲಿ ಸಿಲುಕಿಕೊಂಡಿತ್ತು.

    ಈ ಘಟನೆ ನಡೆದಾಗ ಲಾರಿಯಲ್ಲಿದ್ದ ಚಾಲಕ ರಾಜೇಸಾಬ್ ಸೇರಿದಂತೆ ಇತರೇ 5 ಜನ ಹಳ್ಳದಲ್ಲಿ ಸಿಲುಕಿಕೊಂಡಿದ್ದರು. ಆಗ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಹಾತಲಗೇರಿ ಗ್ರಾಮಸ್ಥರು ಲಾರಿಯಲ್ಲಿದ್ದವರನ್ನ ರಕ್ಷಣೆ ಮಾಡುವ ಮೂಲಕ ಜೀವಹಾನಿ ತಪ್ಪಿಸಿದ್ದಾರೆ.

    ಇದನ್ನು ಓದಿ: ಹಾವೇರಿ: ಪ್ರವಾಹದಲ್ಲಿ ಸಿಲುಕಿದ ಆಟೋ ಚಾಲಕನನ್ನು ಪ್ರಾಣದ ಹಂಗು ತೊರೆದು ರಕ್ಷಸಿದ ಯುವಕ