Tag: lorry

  • ಟ್ಯಾಂಕರ್ ಲಾರಿ, ಬೈಕ್ ನಡುವೆ ಭೀಕರ ಅಪಘಾತ- ಸವಾರರಿಬ್ಬರ ದುರ್ಮರಣ

    ಟ್ಯಾಂಕರ್ ಲಾರಿ, ಬೈಕ್ ನಡುವೆ ಭೀಕರ ಅಪಘಾತ- ಸವಾರರಿಬ್ಬರ ದುರ್ಮರಣ

    ದಾವಣಗೆರೆ: ಟ್ಯಾಂಕರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಸ್ಥಳದಲ್ಲಿ ಸಾವನ್ನಪ್ಪಿ, ಮತ್ತೊಬ್ಬನಿಗೆ ಗಂಭೀರ ಗಾಯವಾದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ತಾಲೂಕು ಟಿ.ಬಿ ಸರ್ಕಲ್ ಬಳಿ ನಡೆದಿದೆ.

    ಆದರ್ಶ್ (24) ಹಾಗೂ ಗಿರೀಶ್ (26) ಸಾವನ್ನಪ್ಪಿದ ದುರ್ದೈವಿಗಳಾಗಿದ್ದು, ಇನ್ನೊಬ್ಬ ಪ್ರದೀಪ್ (25) ನಿಗೆ ಗಂಭೀರ ಗಾಯವಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗೋವಿನ ಕೋವಿ ಗ್ರಾಮದ ನಿವಾಸಿಗಳಾಗಿದ್ದು, ಕಳೆದ ರಾತ್ರಿ ಹೊನ್ನಾಳಿಯಲ್ಲಿ ನಡೆದ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುವಾಗ ಈ ಅಪಘಾತ ಸಂಭವಿಸಿದೆ.

    ಸ್ಥಳಕ್ಕೆ ಹೊನ್ನಾಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

  • ರಸ್ತೆ ಬದಿಯ ಡಿವೈಡರ್ ಹಾರಿ ಕಾರಿಗೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ – ವೃದ್ಧ ದಂಪತಿ ಸ್ಥಳದಲ್ಲೇ ಸಾವು

    ರಸ್ತೆ ಬದಿಯ ಡಿವೈಡರ್ ಹಾರಿ ಕಾರಿಗೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ – ವೃದ್ಧ ದಂಪತಿ ಸ್ಥಳದಲ್ಲೇ ಸಾವು

    ಬೆಂಗಳೂರು: ಕಂಟೈನರ್ ಲಾರಿಯೊಂದು ರಸ್ತೆ ಬದಿಯ ಡಿವೈಡರ್ ಹಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನೆಲಮಂಗಲ ಪಟ್ಟಣದ ವಿಶ್ವೇಶ್ವರಪುರ ಬಳಿ ನಡೆದಿದೆ.

    ಕಾರಿನಲ್ಲಿದ್ದ ಐವರಲ್ಲಿ ಇಬ್ಬರು ಮೃತ ಪಟ್ಟಿದ್ದು, ಮೃತರು ಬೆಂಗಳೂರು ನಗರದ ಮಲ್ಲೇಶ್ವರಂ ನಿವಾಸಿಗಳು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಇನ್ನುಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಇಂದು ಬೆಳಗ್ಗೆ ಕುಟುಂಬ ಸಮೇತರಾಗಿ ಐವರು ತುಮಕೂರಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬರುತ್ತಿದ ಕಂಟೈನರ್ ಲಾರಿ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ, ಹಾರಿ ಬಲ ಬದಿಯಲ್ಲಿ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ದಂಪತಿ ಮೃತಪಟ್ಟಿದ್ದಾರೆ. ಈ ಅಪಘಾತದಿಂದ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಈ ಘಟನೆಯ ನಂತರ ಕಾರಿನ ಹಿಂದೆ ಬರುತ್ತಿದ್ದ ವೋಲ್ವೋ ಬಸ್ ಚಾಲಕ ಗಾಬರಿಗೊಂಡು ರಸ್ತೆ ಡಿವೈಡರ್ ಗೆ ಬಸ್ ಡಿಕ್ಕಿಹೊಡೆಸಿದ್ದಾನೆ. ಆದರೆ ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸರಣಿ ಅಪಘಾತ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

  • ರಸ್ತೆ ಬದಿ ನಿಲ್ಲಿಸಿ ಚಾಲಕ ಊಟಕ್ಕೆ ತೆರಳಿದಾಗ ಹೊತ್ತಿ ಉರಿದ ಲಾರಿ- ಅಕ್ಕಿ ಸಂಪೂರ್ಣ ಭಸ್ಮ

    ರಸ್ತೆ ಬದಿ ನಿಲ್ಲಿಸಿ ಚಾಲಕ ಊಟಕ್ಕೆ ತೆರಳಿದಾಗ ಹೊತ್ತಿ ಉರಿದ ಲಾರಿ- ಅಕ್ಕಿ ಸಂಪೂರ್ಣ ಭಸ್ಮ

    ದಾವಣಗೆರೆ: ರಸ್ತೆ ಬದಿ ನಿಂತಿದ್ದ ಅಕ್ಕಿ ಸಾಗಿಸುತ್ತಿದ್ದ ಲಾರಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿ ಹೊತ್ತಿ ಉರಿದ ಘಟನೆ ದಾವಣಗೆರೆ ತಾಲೂಕು ಹೆಬ್ಬಾಳದ ರಾ.ಹೆ-4ರ ಬಳಿ ನಡೆದಿದೆ.

    ಮಧ್ಯರಾತ್ರಿ ಲಾರಿಯನ್ನು ಚಾಲಕ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿ ಊಟಕ್ಕೆ ತೆರಳಿದ್ದಾರೆ. ಈ ವೇಳೆ ಲಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡು ಧಗ ಧಗನೇ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಗೆ ಅಕ್ಕಿ ಸಮೇತ ಲಾರಿ ಸಂಪೂರ್ಣ ಭಸ್ಮವಾಗಿದೆ.

    ಬೆಂಕಿ ಕಾಣಿಸುತ್ತಿದ್ದಂತೆ ದಾವಣಗೆರೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಅಲ್ಲದೆ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ತಿಳಿದುಬಂದಿಲ್ಲ.

    ಸ್ಥಳಕ್ಕೆ ದಾವಣಗೆರೆ ಹೈವೇ ಪೆಟ್ರೋಲ್ ಹಾಗೂ ದಾವಣಗೆರೆ ಗ್ರಾಮಾಂತರ ಠಾಣೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಸಿಲಿಂಡರ್ ಸಾಗಾಟ ಲಾರಿ, ಟಿಪ್ಪರ್ ಮಧ್ಯೆ ಡಿಕ್ಕಿ – ಅಪಘಾತದ ರಭಸಕ್ಕೆ ಒಂದೊಂದಾಗಿ ಸಿಲಿಂಡರ್ ಸ್ಫೋಟ

    ಸಿಲಿಂಡರ್ ಸಾಗಾಟ ಲಾರಿ, ಟಿಪ್ಪರ್ ಮಧ್ಯೆ ಡಿಕ್ಕಿ – ಅಪಘಾತದ ರಭಸಕ್ಕೆ ಒಂದೊಂದಾಗಿ ಸಿಲಿಂಡರ್ ಸ್ಫೋಟ

    ಹುಬ್ಬಳ್ಳಿ: ಅಡುಗೆ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ಮತ್ತು ಟಿಪ್ಪರ್ ನಡುವೆ ಮಾಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೊಂದಾಗಿ ಸಿಲಿಂಡರ್ ಸ್ಫೋಟಗೊಂಡ ಘಟನೆ ಹುಬ್ಬಳ್ಳಿಯ ಭಂಡಿವಾಡ ಗ್ರಾಮದ ಬಳಿ ನಡೆದಿದೆ.

    ಡಿಕ್ಕಿಯ ರಭಸಕ್ಕೆ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ರಸ್ತೆ ಮಧ್ಯೆ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡು, ಈ ಬೆಂಕಿಯಿಂದ ಲಾರಿಯಲ್ಲಿದ್ದ ಸಿಲಿಂಡರ್ ಗಳು ಒಂದೊಂದಾಗಿ ಸ್ಫೋಟಗೊಂಡಿವೆ. ಪರಿಣಾಮ ಅಕ್ಕಪಕ್ಕದ ಹೊಲದಲ್ಲಿ ಸಿಲಿಂಡರ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹೀಗಾಗಿ ರಸ್ತೆಯಲ್ಲಿ ನಿಲ್ಲಿಸಿರುವ ವಾಹನ ಸವಾರರಲ್ಲಿಯೂ ಭಯದ ವಾತಾವರಣ ನಿರ್ಮಾಣವಾಗಿದೆ.

    300 ಕ್ಕೂ ಹೆಚ್ಚು ಸಿಲಿಂಡರ್ ಪೈಕಿ ಸುಮಾರು 180 ಕ್ಕೂ ಹೆಚ್ಚು ಸಿಲಿಂಡರ್ ಸ್ಫೋಟಗೊಂಡಿವೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ, ಕೆಲಹೊತ್ತು ಕಾರ್ಯಚರಣೆ ಮಾಡಲು ಆಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲಾಯಿತು. ಇದರಿಂದ ಹುಬ್ಬಳ್ಳಿ- ಗದಗ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ವಾಹನ ಸವಾರರು ಪರದಾಡುವಂತಹ ಸ್ಥಿತಿಯಿತ್ತು.

    ಘಟನೆಯಿಂದ ಲಾರಿ ಮತ್ತು ಟಿಪ್ಪರ್ ಚಾಲಕರು ಹಾಗೂ ಕ್ಲೀನರ್ ಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಲ್ಲುಗಳನ್ನ ಹೊತ್ತೊಯ್ತಿದ್ದ ಲಾರಿ ಪಲ್ಟಿ- ಬೈಕ್ ಸವಾರನ ಜಸ್ಟ್ ಎಸ್ಕೇಪ್ ವಿಡಿಯೋ ನೋಡಿ

    ಕಲ್ಲುಗಳನ್ನ ಹೊತ್ತೊಯ್ತಿದ್ದ ಲಾರಿ ಪಲ್ಟಿ- ಬೈಕ್ ಸವಾರನ ಜಸ್ಟ್ ಎಸ್ಕೇಪ್ ವಿಡಿಯೋ ನೋಡಿ

    ಬೀಜಿಂಗ್: ಬೈಕ್ ಸವರಾನೊಬ್ಬ ಲಾರಿ ಕೆಳಗೆ ಸಿಲುಕೋದ್ರಿಂದ ಕೂದಲೆಳೆ ಅಂತರದಲ್ಲಿ ಪಾರಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಕೇವಲ 42 ಸೆಕೆಂಡ್‍ಗಳ ಈ ವಿಡಿಯೋ ನೋಡುಗರನ್ನ ದಂಗಾಗಿಸಿದೆ.

    ಚೀನಾದ ಝವೋಟಾಂಗ್ ನಗರದಲ್ಲಿ ಜನವರಿ 16ರಂದು ಈ ಘಟನೆ ನಡೆದಿದೆ. ಬೈಕ್ ಮತ್ತು ಲಾರಿ ಒಂದೇ ರಸ್ತೆಯಲ್ಲಿ ಬಂದಿವೆ. ಲಾರಿ ಮತ್ತೊಂದು ರಸ್ತೆಗೆ ಟರ್ನ್ ಮಾಡಿಕೊಳ್ಳುವ ವೇಳೆ ನಿಯಂತ್ರಣ ತಪ್ಪಿದ್ದು, ಪಕ್ಕಕ್ಕೆ ವಾಲಿಕೊಂಡು ಬಿದ್ದಿದೆ. ಈ ವೇಳೆ ಲಾರಿ ಪಕ್ಕದಲ್ಲಿ ಹೋಗ್ತಿದ್ದ ಬೈಕ್ ಸವಾರ ತನ್ನ ಸಮೀಪವೇ ಲಾರಿ ಬೀಳೋದನ್ನ ನೋಡಿದ್ದಾನೆ.

     

    ಲಾರಿ ರಸ್ತೆ ಮೇಲೆ ಪಲ್ಟಿಯಾಗಿ ಬಿದ್ದರೂ, ಬೈಕ್ ಸವಾರ ಕಲ್ಲು ಮಣ್ಣುಗಳ ಕೆಳಗೆ ಸಿಲುಕಿಲ್ಲ. ಲಾರಿ ಮೇಲಿದ್ದ ಟಾರ್ಪಲ್‍ನಿಂದ ಆತನ ಜೀವ ಉಳಿದಿದೆ. ಬೈಕ್ ಸವಾರ ಸ್ಕಿಡ್ ಆಗಿ ರಸ್ತೆ ಮೇಲೆ ಉರುಳಿಕೊಂಡು ಹೋಗಿದ್ದಾನೆ. ಘಟನೆಯಲ್ಲಿ ಬೈಕ್ ಸವಾರನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

    ಅಯ್ಯೋ ಇದು ನಿಜಕ್ಕೂ ಅದೃಷ್ಟ, ಬೈಕ್ ಸವಾರರು ಸುಲಭವಾಗಿ ಅಪ್ಪಚ್ಚಿಯಾಗ್ತಾರೆ ಎಂದು ಟ್ವಿಟ್ಟರಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಪುನರ್ಜನ್ಮ ಅಂತ ಹೇಳಿದ್ದಾರೆ.

  • ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಯ ಕಾಲಿನ ಮೇಲೆ ಹರಿದ ಲಾರಿ

    ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಯ ಕಾಲಿನ ಮೇಲೆ ಹರಿದ ಲಾರಿ

    ಬೆಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಪಾದಚಾರಿ ಮಹಿಳೆಯ ಕಾಲಿನ ಮೇಲೆ ಹರಿದಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯಲ್ಲಿ ನಡೆದಿದೆ.

    ಅತೀ ವೇಗವಾಗಿ ಬಂದ ಮಹಾರಾಷ್ಟ್ರ ಮೂಲದ ಲಾರಿ ನೆಲಮಂಗಲ ತಾಲೂಕಿನ ಮಾದೇನಹಳ್ಳಿ ಗ್ರಾಮದ ಸುವರ್ಣಮ್ಮ (44) ಅವರ ಕಾಲಿನ ಮೇಲೆ ಹರಿದಿದೆ. ಇನ್ನೂ ಘಟನೆಯ ವೇಳೆ ಮಹಿಳೆ ಕೆಲಕಾಲ ತೀವ್ರ ರಕ್ತಸ್ತ್ರಾವದಿಂದ ನಡು ರಸ್ತೆಯಲ್ಲಿ ಸಹಾಯಕ್ಕಾಗಿ ಒದಾಡ್ಡಿದ್ದಾರೆ.

    ಈ ಘಟನೆ ವೇಳೆ ಸುತ್ತ ಮುತ್ತ ಇದ್ದ ಜನರು ಸಹಾಯಕ್ಕೆ ಬಾರದೇ ಮಾನವಿಯತೆ ಮರೆತವರಂತೆ ವರ್ತಿಸುತ್ತಿದ್ದಾರೆ. ತಡವಾಗಿ ಬಂದ 108 ಅಂಬುಲೆನ್ಸ್ ಮೂಲಕ ಸುವರ್ಣಮ್ಮ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

    ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಲಾರಿ ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುದ್ದಾರೆ.

  • ಟಿನ್ ಫ್ಯಾಕ್ಟರಿ ಬಳಿ ಮೆಟ್ರೋ ಕಾಮಗಾರಿಗಾಗಿ ತೆರದಿದ್ದ ಹಳ್ಳಕ್ಕೆ ಬಿತ್ತು ಟಿಪ್ಪರ್ ಲಾರಿ

    ಟಿನ್ ಫ್ಯಾಕ್ಟರಿ ಬಳಿ ಮೆಟ್ರೋ ಕಾಮಗಾರಿಗಾಗಿ ತೆರದಿದ್ದ ಹಳ್ಳಕ್ಕೆ ಬಿತ್ತು ಟಿಪ್ಪರ್ ಲಾರಿ

    ಬೆಂಗಳೂರು: ಚಾಲಕನ ಅಜಾಗರೂಕತೆಯಿಂದ ಮೆಟ್ರೋ ಕಾಮಗಾರಿಗಾಗಿ ತೆರದಿದ್ದ ಹಳ್ಳಕ್ಕೆ ಟಿಪ್ಪರ್ ಲಾರಿಯೊಂದು ಉರುಳಿಬಿದ್ದ ಘಟನೆ ಬೆಂಗಳೂರಿನ ಓಲ್ಡ್ ಮದ್ರಾಸ್ ರಸ್ತೆಯ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ.

    ಇಂದು ಬೆಳಗಿನ ಜಾವ 4:30 ರ ಸುಮಾರಿನಲ್ಲಿ ಹೊಸಕೋಟೆ ಕಡೆಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ ಟಿನ್ ಫ್ಯಾಕ್ಟರಿ ಬಸ್ ಸ್ಟಾಪ್ ಸಮೀಪ ಅಳವಡಿಸಿದ್ದ ಮೆಟ್ರೋ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದಿದೆ. ಬ್ಯಾರಿಕೇಡ್ ಪಕ್ಕದಲ್ಲಿ ಕಾರ್ಮಿಕರು ತಂಗಲು ಇರಿಸಿದ್ದ ಕಂಟೇನರ್ ಗೂ ಡಿಕ್ಕಿ ಹೊಡೆದಿದ್ದರಿಂದ ಕಂಟೇನರ್ ಕೂಡ ಗುಂಡಿಗೆ ಬಿದ್ದಿದೆ.

    ಗುಂಡಿಗೆ ಬಿದ್ದಿರುವ ಲಾರಿ ಹಾಗೂ ಕಂಟೇನರ್ ಕ್ರೇನ್ ಮೂಲಕ ಹೊರ ತೆಗೆಯುವ ಕಾರ್ಯದಲ್ಲಿ ಬಿಎಂಆರ್‍ಸಿಎಲ್ ಸಿಬ್ಬಂದಿ ನಿರತರಾಗಿದ್ದು ಲಾರಿ ಚಾಲಕ ಮಣಿ ಎಂಬವನ ಸ್ಥಿತಿ ಗಂಭೀರವಾಗಿದೆ. ಕಂಟೇನರ್‍ನಲ್ಲಿ ಓರ್ವ ಕಾರ್ಮಿಕ ನಿದ್ರಿಸುತ್ತಿದ್ದು ಕಂಟೇನರ್ ನಲ್ಲಿ ಸಿಲುಕಿರುವ ಸಾಧ್ಯತೆ ಇರುವುದರಿಂದ ಗ್ಯಾಸ್ ಕಟಿಂಗ್ ಮೂಲಕ ಕಂಟೇನರ್ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

    ಘಟನೆಯಿಂದಾಗಿ ಟಿನ್ ಫ್ಯಾಕ್ಟರಿ ಯಿಂದ ಕೆ.ಆರ್. ಪುರದ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆ.ಆರ್. ಪುರ ಸಂಚಾರಿ ಪೊಲೀಸರು ಹರಸಾಹಸ ಪಟ್ಟು ಟ್ರಾಫಿಕ್ ಜಾಮ್ ನಿಯಂತ್ರಿಸಿದ್ದಾರೆ.

  • ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಕಾಲೇಜ್ ಬಸ್, ಕ್ಯಾಂಟರ್, ಕಾರ್ ನಡುವೆ ಸರಣಿ ಅಪಘಾತ

    ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಕಾಲೇಜ್ ಬಸ್, ಕ್ಯಾಂಟರ್, ಕಾರ್ ನಡುವೆ ಸರಣಿ ಅಪಘಾತ

    ಮಂಡ್ಯ: ಮುಂದೆ ಚಲಿಸುತ್ತಿದ್ದ ಲಾರಿ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ ಪರಿಣಾಮ ಕಾಲೇಜ್ ಬಸ್, ಕ್ಯಾಂಟರ್, ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.

    ನಗರದ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್ ಮುಂಭಾಗ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಹೆದ್ದಾರಿಯಲ್ಲಿ ಮೈಸೂರು ಕಡೆಗೆ ಚಲಿಸುತ್ತಿದ್ದ ಲಾರಿ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾರೆ. ಪರಿಣಾಮ ಲಾರಿಗೆ ಕಾಲೇಜ್ ಬಸ್, ಬಸ್‍ಗೆ ಕ್ಯಾಂಟರ್, ಕ್ಯಾಂಟರ್ ಗೆ ಕಾರ್ ಡಿಕ್ಕಿಯಾಗಿದೆ.

    ಸರಣಿ ಅಪಘಾತದಿಂದ ವಾಹನಗಳು ಜಖಂ ಆಗಿವೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ.

    ಘಟನೆ ಸಂಬಂಧ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ನೀರಿನ ಟ್ಯಾಂಕರ್, ಲಾರಿ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮೂವರಿಗೆ ಗಂಭೀರ ಗಾಯ

    ನೀರಿನ ಟ್ಯಾಂಕರ್, ಲಾರಿ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮೂವರಿಗೆ ಗಂಭೀರ ಗಾಯ

    ಕೋಲಾರ: ಮಾಲೂರು ತಾಲೂಕಿನ ಸೀತನಾಯಕನಹಳ್ಳಿ ಗ್ರಾಮದ ಬಳಿ ಇಂದು ಬೆಳಂಬೆಳಗ್ಗೆ ಲಾರಿ ಮತ್ತು ನೀರಿನ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

    ತಮಿಳುನಾಡು ಮೂಲದ ಪಳನಿ(38) ಸಾವನ್ನಪ್ಪಿದ ಲಾರಿ ಚಾಲಕ. ಪಳನಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ತಮಿಳುನಾಡಿನಿಂದ ಬರುತ್ತಿದ್ದ ಲಾರಿ ಎದುರುಗಡೆ ಬರುತ್ತಿದ್ದ ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿಯಲ್ಲಿದ್ದ ಓರ್ವ ಮತ್ತು ನೀರಿನ ಟ್ಯಾಂಕರ್ ನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದಾರೆ.

    ಬೆಳಗಿನ ಜಾವ ದಟ್ಟು ಮಂಜು ಕವಿದಿದ್ದರಿಂದ ಮತ್ತು ಚಾಲಕರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಿಂದ ಮಾಲೂರು-ಹೊಸೂರು ರಸ್ತೆ ಸಂಚಾರ ಕೆಲ ಕಾಲ ಅಸ್ತವ್ಯಸ್ತಗೊಂಡಿತ್ತು.

    ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಲಾರಿ ಚಾಲಕನ ಮೇಲೆ ದರೋಡೆಕೋರರಿಂದ ಹಲ್ಲೆ- ತಡೆಯಲು ಬಂದ ಮಗನ ಕೊಲೆ

    ಲಾರಿ ಚಾಲಕನ ಮೇಲೆ ದರೋಡೆಕೋರರಿಂದ ಹಲ್ಲೆ- ತಡೆಯಲು ಬಂದ ಮಗನ ಕೊಲೆ

    ಕಲಬುರಗಿ: ಲಾರಿ ಚಾಲಕನ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ್ದು, ಈ ವೇಳೆ ಹಲ್ಲೆ ತಡೆಯಲು ಬಂದ ಆತನ ಮಗನನ್ನು ಕೊಲೆ ಮಾಡಿರುವ ಘಟನೆ ಕಲಬುರಗಿಯ ಆಳಂದ ರಸ್ತೆಯ ಟೋಲ್ ಗೇಟ್ ಬಳಿ ನಡೆದಿದೆ.

    ಮೃತ ಯುವಕ ಮಹಾರಾಷ್ಟ್ರ ಮೂಲದ ಯುವರಾಜ್(19) ಎಂಬವನಾಗಿದ್ದಾನೆ. ಇಂದು ಬೆಳಗ್ಗೆ ಲಾರಿ ಚಾಲಕನಾದ ದಿಗಂಬರ ಬಹಿರ್ದೆಸೆಗೆ ಎಂದು ಹೋದಾಗ ಆಗಂತುಕರು ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡ ಆತನ ಮಗ ಯುವರಾಜ ತಂದೆಯ ರಕ್ಷಣೆಗೆ ಧಾವಿಸಿದಾಗ ಹಂತಕರು ಯುವಕನ ಕುತ್ತಿಗೆಗೆ ಚಾಕುವಿನಿಂದ ಇರಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.

    ತಂದೆ ಮತ್ತು ಮಗ ಇಬ್ಬರೂ ಲಾರಿ ಚಾಲಕರಾಗಿದ್ದು, ಮಹಾರಾಷ್ಟ್ರದ ಲಾತೂರರಿಂದ ಕಲಬುರಗಿಗೆ ಬರುತ್ತಿದ್ದರು. ಘಟನೆಯ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.