Tag: lord rama idol

  • ರಾಮಲಲ್ಲಾ ವಿಗ್ರಹದ ಫೋಟೋ ವೈರಲ್‌ ಮಾಡಿದವ್ರ ವಿರುದ್ಧ ಕಠಿಣ ಕ್ರಮಕ್ಕೆ ಪ್ರಧಾನ ಅರ್ಚಕ ಒತ್ತಾಯ

    ರಾಮಲಲ್ಲಾ ವಿಗ್ರಹದ ಫೋಟೋ ವೈರಲ್‌ ಮಾಡಿದವ್ರ ವಿರುದ್ಧ ಕಠಿಣ ಕ್ರಮಕ್ಕೆ ಪ್ರಧಾನ ಅರ್ಚಕ ಒತ್ತಾಯ

    – ನೇತ್ರ ಮಾಂಗಲ್ಯ ಅಂದ್ರೆ ಏನು..?

    ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ವಿಗ್ರಹ ಪ್ರಾಣಪ್ರತಿಷ್ಠಾಪನಾ ಮಹೋತ್ಸವಕ್ಕೆ (Pran Prathistha ceremony) ಮೊದಲೇ ಅಯೋಧ್ಯೆ (Ayodhya Ram Mandir) ರಾಮನ ವಿಗ್ರಹ ದಿವ್ಯಮಂಗಳ ರೂಪ ಹೊರಗೆ ಬಂದಿತ್ತು. ಗರ್ಭಗುಡಿಗೆ ಬಾಲರಾಮನ ವಿಗ್ರಹವನ್ನು ಸೇರಿಸುವ ಮೊದಲೇ ಕಣ್ಣಿಗೆ ಯಾವುದೇ ಪಟ್ಟಿ ಕಟ್ಟಿಲ್ಲದ ರಾಮನ ವಿಗ್ರಹದ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು. ಇದನ್ನು ಶ್ರೀರಾಮಜನ್ಮಭೂಮಿ ತೀರ್ಥ ಟ್ರಸ್ಟ್ ಗಂಭೀರವಾಗಿ ಪರಿಗಣಿಸಿದೆ.

    ಫೋಟೋ ವೈರಲ್ ಕುರಿತು ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ (Satyendra Das) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು.. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಟ್ರಸ್ಟ್ ಆಂತರಿಕ ವಿಚಾರಣೆ ನಡೆಸಿದೆ. ದೇಗುಲದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಉತ್ತರಾಧಿಕಾರಿಯಾಗಿ 23 ವರ್ಷದ ಮೋಹಿತ್ ಪಾಂಡೆ ಆಯ್ಕೆಯಾಗಿದ್ದಾರೆ. ಪ್ರಾಣಪ್ರತಿಷ್ಠಾಪನೆಗೂ ಮುನ್ನ ಬಾಲರಾಮನಿಗೆ ನೇತ್ರ ಮಾಂಗಲ್ಯ ಬಾಕಿ ಇದೆ.

    ಏನಿದು ನೇತ್ರ ಮಾಂಗಲ್ಯ?: ವೈರಲ್ ಆಗಿರುವ ಬಾಲರಾಮನ ಮೂರ್ತಿ (Lord Rama Idol)  ಪರಿಪೂರ್ಣವಲ್ಲ. ಬಾಲರಾಮನ ನೇತ್ರ ಮಾಂಗಲ್ಯ ಕಾರ್ಯ ಇನ್ನೂ ಬಾಕಿಯಿದೆ. ಪ್ರಾಣ ಪ್ರತಿಷ್ಠಾಪನೆ ವೇಳೆ ಕಣ್ಣುಗಳನ್ನು ಶಿಲ್ಪಿ ಬಿಡಿಸುತ್ತಾರೆ. ಇದಕ್ಕೆ ವಿಶೇಷವಾದ ಚಿನ್ನದ ಉಳಿ ಉಪಯೋಗಿಸುತ್ತಾರೆ. ಈ ದೈವಿಕ ಪ್ರಕ್ರಿಯೆಯನ್ನು ನೇತ್ರ ಮಾಂಗಲ್ಯ ಎನ್ನುತ್ತಾರೆ. ಇದನ್ನೂ ಓದಿ: ಅಗ್ನಿ ತೀರ್ಥ ಕಡಲತೀರದಲ್ಲಿ ನರೇಂದ್ರ ಮೋದಿ ಪವಿತ್ರ ಸ್ನಾನ

    IMG-20240119-WA0023

    ಈ ಕುರಿತು ಆನಂದ ಕುಮಾರಸ್ವಾಮಿಯ ‘Mediaeval Sinhalese Art’ ಎಂಬ ಕೃತಿಯಲ್ಲಿ ಉಲ್ಲೇಖವಾಗಿದೆ. ಅದರಲ್ಲಿ ಮಹಾರಾಜರೊಬ್ಬರು ಶಿಲ್ಪಿಯನ್ನು ನೇಮಿಸಲು ಸಂಪ್ರದಾಯಬದ್ಧವಾದ ಆಹ್ವಾನ ಕೊಡುತ್ತಾರೆ. ನಂತರ ಶುಭ ಮುಹೂರ್ತದಲ್ಲಿ ಶಿಲ್ಪಿ ತನ್ನ ಕೆಲಸ ಶುರು ಮಾಡುತ್ತಾರೆ. ಶಿಲ್ಪದ ಕೆಲಸ ನಡೆಯುವಷ್ಟೂ ಕಾಲವೂ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಾರೆ. ಪರಿಣಾಮವಾಗಿ ಮೂರ್ತಿ ಶಿಲ್ಪದ ಕೆಲಸ ಪೂರ್ಣಗೊಳ್ಳುತ್ತದೆ. ಕಡೆಗೆ ಶಿಲ್ಪಿ ಪ್ರತಿಷ್ಠಾಪನೆಯ ಸಮಯದಲ್ಲಿ ವಿಗ್ರಹಕ್ಕೆ ನೇತ್ರೋನ್ಮೀಲನ ಅಂದ್ರೆ ನೇತ್ರ ಮಾಂಗಲ್ಯ ಕಾರ್ಯವನ್ನು ಮಾಡುತ್ತಾರೆ. ಆ ಕಣ್ಣಿನ ಬಿಡಿಸುವಿಕೆಯಿಂದಾಗಿ ಧನ್ಯತೆಯ ಭಾವ, ಪ್ರತಿಷ್ಠಾಪಿತಗೊಂಡ ಮೂರ್ತಿಯಲ್ಲಿ ಕಾಂತಿಯುತವಾಗಿ ಪ್ರತಿಫಲಿಸುತ್ತದೆ. ಅದನ್ನು ರಾಜ ತಾನು ಕೊಂಡೊಯ್ದ ಕನ್ನಡಿಯನ್ನು ಹಿಡಿದು ತೋರಿಸುತ್ತಾನೆ. ಇದೀಗ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಬಹುಶಃ ಪ್ರಧಾನಿ ಮೋದಿಯವರು ಇದನ್ನು ಮಾಡುತ್ತಾರೆ ಎನ್ನಲಾಗಿದೆ.

  • ರಾಮಮಂದಿರ ಪ್ರವೇಶಿಸಿದ ರಾಮಲಲ್ಲಾ ಮೂರ್ತಿ

    ರಾಮಮಂದಿರ ಪ್ರವೇಶಿಸಿದ ರಾಮಲಲ್ಲಾ ಮೂರ್ತಿ

    ಅಯೋಧ್ಯೆ: ಜನವರಿ 22 ರಂದು ರಾಮಮಂದಿರದಲ್ಲಿ (Ayodhya Ram Mandir) ನಡೆಯುವ ಬಾಲರಾಮನ ಪ್ರಾಣ ಪ್ರತಿಷ್ಠೆಗೆ (Pran Prathistha Ceremony) ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಇದೀಗ ರಾಮಲಲ್ಲಾ ಮೂರ್ತಿಯು (Lord Rama Idol) ರಾಮಮಂದಿರವನ್ನು ಪ್ರವೇಶಿಸಿದೆ.

    ಹೌದು. ಇಂದು ಸಂಜೆ ಭಗವಾನ್ ರಾಮನ ವಿಗ್ರಹವನ್ನು ಹೊತ್ತ ಟ್ರಕ್ ಅನ್ನು ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ರಾಮ ಮಂದಿರದ ಆವರಣಕ್ಕೆ ತರಲಾಯಿತು. ಈ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ . ಇದನ್ನೂ ಓದಿ: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ರಾಮಮಂದಿರ ಪ್ರವೇಶ – ದೇವಾಲಯದ ಸುತ್ತ ಪ್ರದಕ್ಷಿಣೆ

    ಇದಕ್ಕೂ ಮುನ್ನ ಜಲಯಾತ್ರೆ, ತೀರ್ಥಯಾತ್ರೆ, ಕುಮಾರಿ ಸುವಾಸಿನಿ ಪೂಜೆ, ವರ್ಧಿನಿ ಪೂಜೆಗಳು ನೆರವೇರಿದವು. ನಿನ್ನೆಯೇ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಸ್ಥಳವನ್ನು ಶುದ್ದೀಕರಿಸಿ. ವಿಶೇಷ ಪೂಜೆ ಮಾಡಲಾಗಿತ್ತು. ಅಲ್ಲದೇ ರಾಮಲಲ್ಲಾ ಮೂರ್ತಿಗೆ ವಿಶೇಷ ಸ್ನಾನಾದಿಗಳನ್ನು ಮಾಡಿಸಿ, ಮೂರ್ತಿಯ ಕಣ್ಣುಗಳಿಗೆ ಪಟ್ಟಿ ಕಟ್ಟಲಾಯ್ತು. ಈ ರಾಮ್‍ಲಲ್ಲಾ ಮೂರ್ತಿಯನ್ನು ನಾಳೆ ಗರ್ಭಗುಡಿಯೊಳಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಬಾಲರಾಮನ ಕಣ್ಣುಗಳಿಗೆ ಕಟ್ಟಿರುವ ಪಟ್ಟಿಯನ್ನು ಜನವರಿ 22ರಂದು ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ತೆರೆಯಲಾಗುತ್ತದೆ.

    ಇಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ನಿರ್ಮೋಹಿ ಅಖಾಡದ ಮಹಾಂತ ದೀನೇಂದ್ರ ದಾಸ್ ಮತ್ತು ರಾಮಮಂದಿರದ ಅರ್ಚಕ ಸುನೀಲ್ ದಾಸ್ ಗರ್ಭಗುಡಿಯಲ್ಲಿರುವ ಪ್ರಾಣಪ್ರತಿಷ್ಠಾಪನೆಯ ಪೀಠಕ್ಕೆ ವಿಶೇಷ ಪೂಜೆಗಳನ್ನು ನೆರವೇರಿಸಿದರು. ಈ ಮಧ್ಯೆ ರಾಮಮಂದಿರದ ಆಮಂತ್ರಣ ಪತ್ರಿಕೆಯಲ್ಲಿ ರಾಮ್‍ಲಲ್ಲಾ ಮೂರ್ತಿ ಮಾದರಿಯ ಫೋಟೋ ಮುದ್ರಿಸಲಾಗಿದೆ. ಇದು ರಾಮಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವರ್ಣಿಸಿದ ಮಾದರಿಯಲ್ಲಿಯೇ ರಾಮ್‍ಲಲ್ಲಾ ಫೋಟೋ ಇದೆ. ಶಿಲ್ಪಿ ಅರುಣ್ ಯೋಗಿರಾಜ್ ಕಲ್ಪನೆಯಲ್ಲಿ ಮೂಡಿದ ರಾಮಲಲ್ಲಾ ಮೂರ್ತಿ ಇದೇನಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ರಾಮಲಲ್ಲಾ ಮೂರ್ತಿಯ ಕೆತ್ತನೆಯನ್ನು ಕಣ್ಣಾರೆ ಕಂಡಿರುವ ಆಚಾರ್ಯ ಕರುಣಾನಿಧಾನ್ ಉತ್ತರ ನೀಡಿದ್ದಾರೆ.