Tag: Lord Ganesh

  • ಮೂರು ಸೊಂಡಿಲುಗಳ ಗಣೇಶನ ವಿಗ್ರಹವನ್ನು ಹೊಂದಿರುವ ದೇಶದ ಏಕೈಕ ದೇವಾಲಯವಿದು

    ಮೂರು ಸೊಂಡಿಲುಗಳ ಗಣೇಶನ ವಿಗ್ರಹವನ್ನು ಹೊಂದಿರುವ ದೇಶದ ಏಕೈಕ ದೇವಾಲಯವಿದು

    ಹಿಂದೂ ಧರ್ಮದಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಿದಾಗ, ಮೊದಲು ಗಣಪತಿಯನ್ನು ಪೂಜಿಸಲಾಗುತ್ತದೆ. ಈ ವಿಘ್ನ ವಿನಾಶಕನನ್ನು ಆರಾಧಿಸುವುದರಿಂದ ಎಲ್ಲಾ ಮಂಗಳಕರವಾಗುವುದೆಂದು ನಂಬಲಾಗಿದೆ. ಸಾಮಾನ್ಯವಾಗಿ ಎಡಮುರಿ ಗಣಪತಿ, ಬಲಮುರಿ ಗಣಪತಿಯ ಮೂರ್ತಿಯನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಮೂರು ಸೊಂಡಿಲಿರುವ ಗಣಪತಿ ಯಾವತ್ತಾದರೂ ನೋಡಿದ್ದೀರಾ? ಹೌದು, ಪುಣೆಯಲ್ಲಿ ಮೂರು ಸೊಂಡಿಲಿರುವ ದೇವಾಲಯವೊಂದಿದೆ. ಇದು ಮೂರು ಸೊಂಡಿಲಿರುವ ಗಣೇಶನ ವಿಗ್ರಹವನ್ನು ಹೊಂದಿರುವ ಭಾರತದ ಏಕೈಕ ದೇವಾಲಯವಾಗಿದೆ. ಹಾಗಿದ್ರೆ ಈ ದೇವಾಲಯದ ವಿಶೇಷತೆಯೇನು? ಇಲ್ಲಿರುವ ಗಣಪನಿಗೆ ಮೂರು ಸೊಂಡಿಲು ಏಕಿದೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ. 

    ಇವನು ಮೂರು ಸೊಂಡಿಲ ಗಣಪ:
    ಗಣೇಶನಿಗೆ ಒಂದು ಸೊಂಡಿಲು ಸಾಮಾನ್ಯ ಅದರಲ್ಲೂ ಬಲಮುರಿ, ಎಡೆಮುರಿ ಎಂಬ ಪ್ರತ್ಯೇಕತೆಯಿದೆ. ಆದರೆ ಮುದ್ಗಲ ಪುರಾಣದ ಪ್ರಕಾರ ಗಣೇಶನಿಗೆ 32 ರೂಪಗಳಿವೆ. ಆ ರೂಪದಲ್ಲಿ ತ್ರಿಮುಖ ಗಣಪತಿಯೂ ಒಂದು. ಹಾಗೆಂದರೆ ಏನು ಅಂತೀರಾ? ಮೂರು ಸೊಂಡಿಲುಗಳನ್ನು ಹೊಂದಿರುವ ಗಣೇಶನ ಬಗ್ಗೆ ಕೇಳಿದ್ದೀರಾ? ಗಣೇಶನಿಗೆ ಮೂರು ಸೊಂಡಿಲುಗಳಿರುವ ಉಲ್ಲೇಖವಿದೆ. ಈ ವಿಶಿಷ್ಟ ದೇವಾಲಯ ಪುಣೆಯಲ್ಲಿದೆ. ಈ ದೇವಾಲಯವನ್ನು ತ್ರಿಶುಂಡಿ ಗಣಪತಿ, ಮಯೂರೇಶ್ವರ ಗಣಪತಿ ಮಂದಿರ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈ ತ್ರಿಸುಂದ ಗಣಪತಿ ದೇವಾಲಯವು ಸೋಮವಾರಪೇಟೆ ಜಿಲ್ಲೆಯ ನಜಗಿರಿ ಎಂಬ ನದಿಯ ದಡದಲ್ಲಿದೆ.

    ಷಣ್ಮುಖನಿಗೂ ಮುಂಚೆ ನವಿಲು ಗಣಪತಿಯ ವಾಹನ:
    ಇಲ್ಲಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾದ ಗಣಪತಿಯು ಮೂರು ಸೊಂಡಿಲು ಮತ್ತು ಆರು ತೋಳುಗಳನ್ನು ಹೊಂದಿದ್ದಾನೆ. ಇದು ನವಿಲಿನ ಸಿಂಹಾಸನದ ಮೇಲೆ ಕುಳಿತಿರುವ ಅಪರೂಪದ ವಿಗ್ರಹವಾಗಿದೆ. ಈ ತ್ರಿಮುಖ ಗಣೇಶನ ರೂಪವರ್ಣನೆ ಬರುವುದು ಮುದ್ಗಲ ಪುರಾಣದ ಗಣೇಶಾವತಾರ ಪ್ರಸ್ತಾಪದಲ್ಲಿ ಈ ಗಣೇಶ 32 ಗಣಪತಿ ಅವತಾರಗಳಲ್ಲಿ 28ನೇಯವನು. ಈತ ಮೂರು ಸೊಂಡಿಲು, ಆರು ಕೈ ಮತ್ತು ನವಿಲಿನ ವಾಹನ ಹೊಂದಿದ್ದಾನೆ. ಮೂರು ಸೊಂಡಿಲು ಭೂತ, ಭವಿಷ್ಯತ್, ವರ್ತಮಾನಗಳು ಗಣೇಶನ ಅಧೀನ ಎಂದು ತೋರಿಸಿದರೆ ಆರು ಕೈಗಳಲ್ಲಿ ಪಾಶ, ಅಂಕುಶ, ಅಮೃತ ಕಲಶ, ರುದ್ರಾಕ್ಷಿ ಹಿಡಿದಿದ್ದಾನೆ. ಹಾಗೆಯೇ ವರದಹಸ್ತ, ಅಭಯ ಹಸ್ತ ತೋರುತ್ತಾನೆ. ಇವನು ಶಾಂತ ಸ್ವಭಾವದ ಗಣಪತಿಯಾಗಿದ್ದು ಕೆಂಪು ಬಣ್ಣವನ್ನು ಹೊಂದಿದ್ದಾನೆ ಎನ್ನಲಾಗುತ್ತದೆ.

    ಯಾರು ನಿರ್ಮಿಸಿದ ದೇಗುಲ? ವಿಶೇಷಗಳೇನು?
    ಇಂದೋರ್ ಬಳಿಯ ಧಂಪುರದಿಂದ ಬಂದ ಭೀಮಜಿಗಿರಿ ಗೋಸಾವಿ ಎಂಬ ಭಕ್ತ 1754ರಲ್ಲಿ ಈ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಿದರು. ಹದಿನಾರು ವರ್ಷಗಳ ನಂತರ, 1770ರಲ್ಲಿ, ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ಇದನ್ನು ರಾಜಸ್ಥಾನಿ, ಮಾಲ್ವಾ ಮತ್ತು ದಕ್ಷಿಣ ಭಾರತೀಯ ದೇವಾಲಯ ವಾಸ್ತುಶಿಲ್ಪ ಶೈಲಿಗಳ ಮಿಶ್ರಣವಾದ ಡೆಕ್ಕನ್ ಬಸಾಲ್ಟ್ ಬಳಸಿ ನಿರ್ಮಿಸಲಾಯಿತು. ದೇವಾಲಯದ ಗರ್ಭಗುಡಿಯ ಗೋಡೆಗಳು ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಶಾಸನಗಳನ್ನು ಮತ್ತು ಭಗವದ್ಗೀತೆಯ ಶ್ಲೋಕಗಳನ್ನು ಹೊಂದಿವೆ. ‎ದೇವಾಲಯದ ಪ್ರವೇಶದ್ವಾರಕ್ಕೆ ಹೋಗುವ ಒಂದು ಸಣ್ಣ ಅಂಗಳವಿದೆ. ದ್ವಾರಪಾಲಕರ ವಿಗ್ರಹಗಳನ್ನು ಸುಂದರವಾಗಿ ಕೆತ್ತಲಾಗಿದೆ. ದೇವಾಲಯದ ಆವರಣವು ದೇವತೆಗಳು, ಆನೆಗಳು, ಕುದುರೆಗಳು ಮತ್ತು ಇತರ ಅನೇಕ ಪ್ರಾಣಿಗಳ ಸುಂದರ ಶಿಲ್ಪಗಳಿಂದ ಅಲಂಕರಿಸಲ್ಪಟ್ಟಿದೆ.

    ಈ ದೇವಾಲಯದಲ್ಲಿ, ಒಂದು ಗೋಡೆಯ ಮೇಲೆ ಕತ್ತಿ ಹಿಡಿದ ಪ್ರಾಣಿಯನ್ನು ಕಬ್ಬಿಣದ ಸರಪಳಿಗಳಿಂದ ಬಂಧಿಸಿರುವ ಅಮೇರಿಕನ್ ಸೈನಿಕನ ಶಿಲ್ಪವಿದೆ. ಇದು ನಮ್ಮ ದೇಶದ ಬೇರೆ ಯಾವುದೇ ದೇವಾಲಯದಲ್ಲಿ ಕಂಡುಬರುವುದಿಲ್ಲ. ಇಲ್ಲಿನ ಇನ್ನೊಂದು ವಿಶೇಷವೆಂದರೆ ಈ ಗಣೇಶನ ವಿಗ್ರಹದ ಕೆಳಗೆಯೇ ಈ ದೇಗುಲ ನಿರ್ಮಾತೃ ಗೋಸಾವಿ ಗುರುಗಳ ಸಮಾಧಿಯಿದೆ. ಆ ನೆಲ ಮಾಳಿಗೆಯನ್ನು ಗುರುಪೂರ್ಣಿಮೆ ದಿನ ತೆಗೆದು ವರ್ಷ ಪೂರ್ತಿ ಬತ್ತದ ನೀರಿನ ಕುಂಡವನ್ನು ಸ್ವಚ್ಛ ಮಾಡಿ ಗೋಸಾವಿ ಗುರುವಿಗೆ ಪೂಜೆ ಮಾಡಿ ಮತ್ತೆ ಮುಚ್ಚಲಾಗುತ್ತದೆ.

    ದೇವಾಲಯದ ಗೋಡೆಗಳು ಸಂಸ್ಕೃತ, ದೇವನಾಗರಿ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಶಾಸನಗಳನ್ನು ಹೊಂದಿವೆ. ಇದು ಪೇಶ್ವೆ ಯುಗದಲ್ಲಿ ಪುಣೆಯ ಶ್ರೀಮಂತ ಸಾಂಸ್ಕೃತಿಕ ಅಡ್ಡ-ಪ್ರವಾಹಗಳನ್ನು ಎತ್ತಿ ತೋರಿಸುತ್ತದೆ.ಪ್ರತಿ ವರ್ಷ, ವಿಶೇಷವಾಗಿ ಗಣೇಶ ಚತುರ್ಥಿಯ ಸಮಯದಲ್ಲಿ ಈ ದೇವಾಲಯವು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ದೇವರಿಗೆ ದೂರ್ವಾ ಹುಲ್ಲು ಮತ್ತು ಮೋದಕಗಳನ್ನು ಅರ್ಪಿಸಲಾಗುತ್ತದೆ. ಇಲ್ಲಿ ನಡೆಯುವ ಪ್ರಾರ್ಥನೆಗಳು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಹೊಸ ಆರಂಭಗಳಲ್ಲಿ ಯಶಸ್ಸನ್ನು ತರುತ್ತವೆ ಎಂದು ಹಲವರು ನಂಬುತ್ತಾರೆ.

    ಗಣೇಶ ಚತುರ್ಥಿಯ ಸಮಯದಲ್ಲಿ ಗಣಪತಿ ದೇವಾಲಯವು ವಿಶೇಷವಾಗಿ ಪ್ರಸಿದ್ಧವಾಗಿದೆ. ಪುಣೆ ಮತ್ತು ಅದರಾಚೆಯಿಂದ ಸಾವಿರಾರು ಭಕ್ತರು ಮೂರು ಸೊಂಡಿಲಿರುವ ಗಣೇಶನನ್ನು ಪೂಜಿಸಲು ಬರುತ್ತಾರೆ. ಬುದ್ಧಿವಂತಿಕೆ, ಸಂಪತ್ತು ಮತ್ತು ಯಶಸ್ಸಿಗಾಗಿ ಅವರ ಆಶೀರ್ವಾದವನ್ನು ಪಡೆಯುತ್ತಾರೆ. 

  • ವಿದ್ಯಾರ್ಥಿಯ ಬದಲು ಬಿಹಾರದಲ್ಲಿ ಪರೀಕ್ಷೆ ಬರೆಯಲಿದ್ದಾನೆ ಗಣೇಶ!

    ವಿದ್ಯಾರ್ಥಿಯ ಬದಲು ಬಿಹಾರದಲ್ಲಿ ಪರೀಕ್ಷೆ ಬರೆಯಲಿದ್ದಾನೆ ಗಣೇಶ!

    – ಹಾಲ್ ಟಿಕೆಟ್ ನಲ್ಲಿ ಗಣೇಶನ ದೇವರ ಫೋಟೋ ಹಾಕಿ ಎಡವಟ್ಟು

    ಪಾಟ್ನಾ: ಬಿಹಾರದಲ್ಲಿ ಶಿಕ್ಷಣ ವ್ಯವಸ್ಥೆ ಯಾವ ರೀತಿ ಇದೇ ಎಂದು ಈಗಾಗಲೇ ನಿಮಗೆ ತಿಳಿದಿದೆ. ಇದಕ್ಕೆ ಮತ್ತೊಂದು ಪುರಾವೆಯಂತೆ ವಿಶ್ವವಿದ್ಯಾಲಯವೊಂದು ವಿದ್ಯಾರ್ಥಿಯ ಹಾಲ್ ಟಿಕೆಟ್ ನಲ್ಲಿ ಗಣೇಶ ದೇವರ ಫೋಟೋವನ್ನು ಮುದ್ರಿಸಿ ಎಡವಟ್ಟು ಮಾಡಿದೆ.

    ಬಿಹಾರದ ದರ್ಬಂಗಾ ಪ್ರತಿಷ್ಠಿತ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 9 ರಿಂದ ಪ್ರಥಮ ಸೆಮಿಸ್ಟರ್ ಪರೀಕ್ಷೆ ಪ್ರಾರಂಭವಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ವಿತರಿಸಿದೆ. ಆದರೆ ಬಿ.ಕಾಂ ವಿದ್ಯಾರ್ಥಿಯೊಬ್ಬನ ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯ ಫೋಟೋ ಬದಲು ಗಣೇಶನ ಫೋಟೋ ಹಾಕಿ ಮುದ್ರಿಸಿದೆ.

    ಪ್ರಥಮ ವರ್ಷದ ಬಿ.ಕಾಂ ಪದವಿಯನ್ನು ವ್ಯಾಸಂಗ ಮಾಡುತ್ತಿರುವ ಕೃಷ್ಣ ಕುಮಾರ್ ರಾಯ್ ಎಂಬ ವಿದ್ಯಾರ್ಥಿಯ ಪ್ರವೇಶ ಪತ್ರದಲ್ಲಿ ಈ ರೀತಿ ಎಡಟ್ಟು ಆಗಿದೆ. ಎಷ್ಟು ನಿರ್ಲಕ್ಷ್ಯ ವಹಿಸಿದ್ದಾರೆ ಎಂದರೆ ಪರೀಕ್ಷಾ ಅಧಿಕಾರಿಗಳು ಈ ಹಾಲ್ ಟಿಕೆಟ್ ಗೆ ಸಹಿ ಕೂಡ ಹಾಕಿದ್ದಾರೆ. ಫೋಟೋ ಎಡವಟ್ಟಿನ ಜೊತೆಗೆ ವಿದ್ಯಾರ್ಥಿಯ ವಿಳಾಸವನ್ನು ಸಹ ತಪ್ಪಾಗಿ ಮುದ್ರಣವಾಗಿದೆ.

    ನಾನು ಪರೀಕ್ಷೆಯ ಫಾರ್ಮ್‍ನಲ್ಲಿ ವಿಳಾಸವನ್ನು ಸರಿಯಾಗಿ ಬರೆದು ನನ್ನ ಫೋಟೋವನ್ನೇ ಹಾಕಿದ್ದೆ. ಆದರೆ ಹಾಲ್ ಟಿಕೆಟ್ ನೋಡಿದಾಗ ನನಗೆ ಶಾಕ್ ಆಯ್ತು. ಅದರಲ್ಲಿ ಗಣೇಶನ ಫೋಟೋ ಇತ್ತು. ಇದನ್ನು ನೋಡಿದ ತಕ್ಷಣ ಸರಿ ಮಾಡಿಸಲು ಅಧಿಕಾರಿಗಳ ಬಳಿ ಹೋದೆ. ಅವರು ತಾಂತ್ರಿಕ ಸಮಸ್ಯೆಯಿಂದಾಗಿ ಈ ಗಣೇಶ ಫೋಟೋ ಮುದ್ರಣವಾಗಿದೆ. ನಾವು ತಪ್ಪು ಮಾಡಿಲ್ಲ. ನಾವು ಸೈಬರ್ ಸೆಂಟರ್‍ಗೆ ಪ್ರವೇಶಾತಿ ಪತ್ರಗಳನ್ನು ಸಿದ್ಧ ಪಡಿಸಲು ನೀಡಿದ್ದೇವು. ಅಲ್ಲಿ ಆಗಿರುವ ಎಡವಟ್ಟು ಎಂದು ತಿಳಿಸಿದ್ದಾರೆ ಎಂಬುದಾಗಿ ವಿದ್ಯಾರ್ಥಿ ಕೃಷ್ಣ ಹೇಳಿದ್ದಾನೆ.

    ಈ ತಪ್ಪು ಹೇಗಾಯ್ತು ಎನ್ನುವುದನ್ನು ಶೀಘ್ರವಾಗಿ ವಿಚಾರಿಸಿ ಬೇಗ ಇದನ್ನು ಸರಿ ಮಾಡುತ್ತೇವೆ. ಇದರಿಂದ ವಿದ್ಯಾರ್ಥಿಗೆ ಯಾವುದೇ ತೊಂದರೆ ಆಗುವುದಿಲ್ಲ. ಖಚಿತವಾಗಿ ಅವನು ಪರೀಕ್ಷೆಗೆ ಕುಳಿತು ಕೊಳ್ಳುತ್ತಾನೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾ ಅಧಿಕಾರಿ ಕುಲಾನಂದ್ ಯಾದವ್ ಹೇಳಿದ್ದಾರೆ.

    ಇದೇ ವರ್ಷ ಕಳೆದ ಜನವರಿಯಲ್ಲಿ ಬಿಹಾರ ಸ್ಟಾಫ್ ಸೆಲೆಕ್ಷನ್ ಕಮಿಷನ್ ಪರೀಕ್ಷೆಯಲ್ಲಿ ಯುವತಿಯ ಪ್ರವೇಶಾತಿ ಕಾರ್ಡ್‍ನಲ್ಲಿ ಆಕೆಯ ಫೋಟೋ ಬದಲು ಭೋಜ್‍ಪುರಿ ನಟಿಯ ಟಾಪ್‍ಲೆಸ್ ಫೋಟೋವನ್ನು ಹಾಕಿ ಬಿಹಾರ ಮಂಡಳಿ ಕಾರ್ಡ್ ವಿತರಿಸಿತ್ತು.