Tag: loksabhaelections 2019

  • ಲೋಕ ಚುನಾವಣಾ ಹಬ್ಬಕ್ಕೆ ಇಂದು ತೆರೆ – ಮತಪೆಟ್ಟಿಗೆ ಸೇರಲಿದೆ ಮೋದಿ, ಶತ್ರುಘ್ನ, ಸನ್ನಿ ಭವಿಷ್ಯ

    ಲೋಕ ಚುನಾವಣಾ ಹಬ್ಬಕ್ಕೆ ಇಂದು ತೆರೆ – ಮತಪೆಟ್ಟಿಗೆ ಸೇರಲಿದೆ ಮೋದಿ, ಶತ್ರುಘ್ನ, ಸನ್ನಿ ಭವಿಷ್ಯ

    – ಕೂತಹಲ ಕೆರಳಿಸಿದೆ ಎಕ್ಸಿಟ್‍ಪೋಲ್ ಸರ್ವೆ

    ನವದೆಹಲಿ: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಇಂದು ನಡೆಯುತ್ತಿದ್ದು, ಕೇಂದ್ರ ಚುನಾವಣಾ ಆಯೋಗವು ಸಕಲ ಸಿದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

    ಉತ್ತರ ಪ್ರದೇಶ ಮತ್ತು ಪಂಜಾಬ್‍ನ ತಲಾ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದ 9, ಬಿಹಾರ ಮತ್ತು ಮದ್ಯ ಪ್ರದೇಶದ ತಲಾ 8, ಹಿಮಾಚಲ ಪ್ರದೇಶದ ನಾಲ್ಕು, ಜಾರ್ಖಂಡ್‍ನ ಮೂರು ಹಾಗೂ ಕೇಂದ್ರಾಡಳಿತ ಪ್ರದೇಶ ಚಂಡೀಘಡದ ಒಂದು ಕ್ಷೇತ್ರ ಸೇರಿದಂತೆ ಒಟ್ಟು 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ನಡೀತಿದೆ.

    ಪ್ರಮುಖವಾಗಿ ವಾರಣಾಸಿ ಕ್ಷೇತ್ರದಿಂದ 2ನೇ ಬಾರಿಗೆ ಕಣಕ್ಕಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 918 ಅಭ್ಯರ್ಥಿಗಳ ಭವಿಷ್ಯವನ್ನು ಒಟ್ಟು 10.01 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ. ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಬಿಹಾರದ ಪಟ್ನಾ ಸಾಹಿಬ್‍ನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದು, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರತಿಸ್ಪರ್ಧಿಯಾಗಿದ್ದಾರೆ. ಚಿತ್ರನಟ ಸನ್ನಿ ಡಿಯೋಲ್ ಮತ್ತು ಗ್ಲಾಮರ್ ಸಂಸದೆ ಮಿಮಿ ಚಕ್ರವರ್ತಿ ಸ್ಪರ್ಧಾ ಕಣದಲ್ಲಿರುವ ತಾರಾ ಅಕರ್ಷಣೆಯಾಗಿದ್ದಾರೆ.

    59 ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶದ ವಾರಣಾಸಿ ಭಾರೀ ಗಮನ ಸೆಳೆಯುತ್ತಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‍ನಿಂದ ಅಜಯ್ ರಾಯ್ ಕಣಕ್ಕೆ ಇಳಿದಿದ್ದಾರೆ. ಕೊನೆಯ ಹಂತದ ಮತದಾನ ಆಗಿರುವುದರಿಂದ ಶುಕ್ರವಾರ ಸಂಜೆಯೇ ಬಹಿರಂಗ ಪ್ರಚಾರ ಅಂತ್ಯಗೊಂಡಿತ್ತು. ಇದನ್ನೂ ಓದಿ: ಸದೃಢ ಸರ್ಕಾರವಿದ್ರೆ ಐಪಿಎಲ್, ಚುನಾವಣೆ, ರಂಜಾನ್, ಹನುಮಾನ್ ಜಯಂತಿ ಒಟ್ಟಿಗೆ ನಡೆಯುತ್ತೆ – ನರೇಂದ್ರ ಮೋದಿ

    ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮತದಾರರಿಗೆ ವಂದನೆ ತಿಳಿಸಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಆದರೆ ಪ್ರಧಾನಿ ಮೋದಿ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡದೇ ಜಾರಿಕೊಂಡರು. ಈ ನಡೆಯ ಬಗ್ಗೆ ಕಾಂಗ್ರೆಸ್ ಸೇರಿದಂತೆ ಅನೇಕರು ಟೀಕಿಸಿದರು. ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಜನರಿಗೆ ಮಾಧ್ಯಮಗೋಷ್ಠಿ ನಡೆಸಿ, ಮತದಾರರಿಗೆ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಮೊದಲ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಎದುರಿಸದ ಪ್ರಧಾನಿ: ಕಾಲೆಳೆದ ನೆಟ್ಟಿಗರು

    ಎಕ್ಸಿಟ್ ಪೋಲ್ ಸರ್ವೆ:
    ಸಂಜೆ 6 ಗಂಟೆಗೆ ಮತದಾನ ಮುಗಿಯುತ್ತಿದ್ದಂತೆ, ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಎಕ್ಸಿಟ್ ಪೋಲ್ ಕೂಡ ಹೊರಬೀಳಲಿದೆ. ಈಗಾಗಲೇ ರಾಜಕೀಯ ವಲಯದಲ್ಲಿ ನಾನಾ ಲೆಕ್ಕಾಚಾರಗಳೂ ನಡೆಯುತ್ತಿವೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಟೀಂ 300ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಘೋಷಿಸಿ ಬಿಟ್ಟಿದ್ದಾರೆ.  ಇದನ್ನೂ ಓದಿ: ಮೊದಲ ಸುದ್ದಿಗೋಷ್ಠಿಯಲ್ಲೂ ಪ್ರಶ್ನೆ ಎದುರಿಸದ ಪ್ರಧಾನಿ – ರಾಹುಲ್ ಗಾಂಧಿ ಲೇವಡಿ

    ಕಾಂಗ್ರೆಸ್ ಕೂಡ ಕಡಿಮೆ ಏನಿಲ್ಲ. ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಾವು ಪ್ರಧಾನಿ ಹುದ್ದೆಗೆ ಹಕ್ಕು ಪ್ರತಿಪಾದನೆ ಮಾಡೇ ಮಾಡ್ತೀವಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಪ್ರೀಪೋಲ್ ಸರ್ವೆಗಳು ಅತಂತ್ರ ಫಲಿತಾಂಶ ಬರಲಿದೆ ಎಂದು ಭವಿಷ್ಯ ನುಡಿದಿರೋದ್ರಿಂದ ತೃತೀಯ ರಂಗ ರಚನೆಯ ಮಾತುಕತೆಗಳೂ ನಡೆಯುತ್ತಿವೆ. ದೇವೇಗೌಡರು, ಮಾಯಾವತಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಕೆ. ಚಂದ್ರಶೇಖರರಾವ್ ಸಹಿತ ಬಹುತೇಕರು ಪ್ರಧಾನಿ ಹುದ್ದೆಯ ಕನಸು ಕಾಣುತ್ತಿದ್ದಾರೆ.

  • ಬೆಳಗ್ಗೆ 11 ಗಂಟೆ- ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿದೆ?

    ಬೆಳಗ್ಗೆ 11 ಗಂಟೆ- ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿದೆ?

    ಬೆಂಗಳೂರು: ಕರ್ನಾಟಕದಲ್ಲಿ ಎರಡನೇ ಹಂತದ ಚುನವಣೆ ನಡೆಯುತ್ತಿದ್ದು, 14 ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗುತ್ತಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ಒಟ್ಟು 11.75% ಮತದಾನ ನಡೆದಿದೆ. ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಪ್ರಮಾಣದ 22.22% ಮತದಾನ ನಡೆದಿದ್ದರೆ, ರಾಯಚೂರಿನಲ್ಲಿ ಅತಿ ಕಡಿಮೆ 6.49% ಮತದಾನ ನಡೆದಿದೆ.

    ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿದೆ?:
    ಬಾಗಲಕೋಟೆ: 8.77%
    ಬೆಳಗಾವಿ: 10.22%
    ಬಳ್ಳಾರಿ: 11.46%
    ಬೀದರ್: 9.55%

    ಬಿಜಾಪುರ: 6.89%
    ಚಿಕ್ಕೋಡಿ: 10.45%
    ದಾವಣಗೆರೆ: 11.96%
    ಧಾರವಾಡ: 16.26 %
    ಕಲಬುರಗಿ: 9.40%

    ಹಾವೇರಿ: 8.56%
    ಕೊಪ್ಪಳ: 15.3%
    ರಾಯಚೂರು: 6.49%
    ಶಿವಮೊಗ್ಗ: 11.08%
    ಉತ್ತರ ಕನ್ನಡ: 22.22%

     

  • ಸದೃಢ ಭಾರತಕ್ಕಾಗಿ ಸರತಿಸಾಲಿನಲ್ಲಿ ನಿಂತು ನವವಧುಗಳಿಂದ ಮತದಾನ

    ಸದೃಢ ಭಾರತಕ್ಕಾಗಿ ಸರತಿಸಾಲಿನಲ್ಲಿ ನಿಂತು ನವವಧುಗಳಿಂದ ಮತದಾನ

    – ವಾಮಂಜೂರಿನಲ್ಲಿ ಕೆಲಕಾಲ ಕೈ ಕೊಟ್ಟ ಇವಿಎಂ
    – ವೃದ್ಧನಿಗೆ ಕಾಂಗ್ರೆಸ್ ಅಭ್ಯರ್ಥಿ ಸಹಾಯ

    ಮಂಗಳೂರು: ಸದೃಢ ಭಾರತಕ್ಕಾಗಿ ನವವಧುಗಳು ಸರತಿ ಸಾಲಿನಲ್ಲಿಯೇ ನಿಂತು ತನ್ನ ಹಕ್ಕು ಚಲಾಯಿಸಿರುವ ಘಟನೆ ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ನಡೆದಿದೆ.

    ಹೌದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವಿಟ್ಲದ ಕುಡ್ಪಲ್ತಡ್ಕದಲ್ಲಿ ವಧು ತನ್ನ ಮದುವೆಗೂ ಮುಂಚೆಯೇ ಮತದಾನ ಮಾಡಿದ್ದಾರೆ. ಆನೆಯಾಲಗುತ್ತು ಶ್ರುತಿ ಶೆಟ್ಟಿ ಎಂಬವರೇ ಈ ರೀತಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಇತ್ತ ಬೆಳ್ತಂಗಡಿಯಲ್ಲೂ ಮೂವರು ವಧುಗಳು ಒಂದೇ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ. ತಾಲೂಕಿನ ತಣ್ಣೀರುಪಂಥ ಬೂತ್ ನಲ್ಲಿ ಮದುವೆ ಶೃಂಗಾರದಲ್ಲೇ ಬಂದ ಅಕ್ಷತಾ, ಅಶ್ವಿನಿ ಹಾಗೂ ಹೇಮಲತಾ ಮದುವೆ ಮಂಟಪಕ್ಕೆ ತೆರಳುವ ಮುನ್ನವೇ ತಮ್ಮ ಅಮೂಲ್ಯ ಮತವನ್ನು ಹಾಕಿದ್ದಾರೆ.

    ಕೈಕೊಟ್ಟ ಇವಿಎಂ:
    ಮಂಗಳೂರಿನಲ್ಲಿ ಇವಿಎಂ ಮೆಷಿನ್ ಕೆಲಕಾಲ ಕೈಕೊಟ್ಟಿತ್ತು. ವಾಮಂಜೂರು ತಿರುವೈಲ್ ವಾರ್ಡ್‍ನ ಮತಗಟ್ಟೆ 150ರಲ್ಲಿ ಈ ಘಟನೆ ನಡೆದಿದೆ. ಕೈಕೊಟ್ಟ ಇವಿಎಂನಿಂದಾಗಿ ಮತದಾರರು ಅಸಮಾಧಾನಗೊಂಡು ವಾಪಾಸ್ ಆಗಿದ್ದರು. ಹೀಗಾಗಿ ಒಂದು ಗಂಟೆ ತಡವಾಗಿ ಮತದಾನ ಆರಂಭಗೊಂಡಿದ್ದು, ವಾಪಸ್ಸಾದವರು ಸೇರಿದಂತೆ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

    ವೃದ್ಧನಿಗೆ ಮಿಥುನ್ ರೈ ಸಹಾಯ:
    ಮಂಗಳೂರು ಬಲ್ಮಠ ಸರ್ಕಾರಿ ಪ್ರೌಢ ಶಾಲೆ ಮತಗಟ್ಟೆಯಲ್ಲಿ ಅಶಕ್ತರಾಗಿದ್ದ 83 ವರ್ಷದ ರಮೇಶ್ ರಾವ್‍ಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಸಹಾಯ ಮಾಡಿದ್ದಾರೆ. ಕಾರಿನಿಂದ ಎತ್ತಿ ಇಳಿಸಿ ನಂತರವ್ಹೀಲ್ ಚೇರ್ ನಲ್ಲಿ ರೈ ಕೂರಿಸಿದ್ದಾರೆ. ಮಿಥುನ್ ರೈ ನಂತರ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಮಿಥುನ್, ಹೆಗಲಿಗೆ ಕೇಸರಿ ಮತ್ತು ಹಳದಿ ಶಾಲು ಹಾಕ್ಕೊಂಡು ಬಂದಿದ್ದರು.

    ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಕೂಡ ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮತದಾನ ಮಾಡಿದ್ರು. ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟು ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದ ಇವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು.

  • ಖರ್ಗೆ ವರ್ಸಸ್ ಜಾಧವ್: ಬಿಜೆಪಿ ನಾಯಕರ ಮನೆ ಮೇಲೆ ಕಲ್ಲು ತೂರಾಟ!

    ಖರ್ಗೆ ವರ್ಸಸ್ ಜಾಧವ್: ಬಿಜೆಪಿ ನಾಯಕರ ಮನೆ ಮೇಲೆ ಕಲ್ಲು ತೂರಾಟ!

    ಕಲಬುರಗಿ: ಕಾಂಗ್ರೆಸ್ ಭದ್ರಕೋಟೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿ ಟಫ್ ಫೈಟ್ ನೀಡುತ್ತಿದ್ದು, ಇದೀಗ ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

    ಹೌದು. ಸೂಫಿ ನಾಡು ಕಲಬುರಗಿ ಜಿಲ್ಲೆಯಲ್ಲಿ ಇದೀಗ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೆರುತ್ತಿದ್ದು, ಇದೇ ಮೊದಲ ಬಾರಿಗೆ ಕೈ ಮುಖಂಡ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಪ್ರಬಲವಾಗಿ ಪೈಪೋಟಿ ನೀಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳದ ಕೆಲ ಪುಡಾರಿಗಳು ಕಲಬುರಗಿ ಗ್ರಾಮೀಣ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ ಹಾಗು ರಾಹುಲ್ ಎಂಬವರ ಮನೆ ಮತ್ತು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರಂತೆ. ಈ ಮೂಲಕ ಬಿಜೆಪಿ ನಾಯಕರನ್ನು ಹತ್ತಿಕಲು ಕೈ ಕುತಂತ್ರವನ್ನು ಮಾಡುತ್ತಿದೆ ಎಂದು ಬಿಜೆಪಿ ನಿಯೋಗ ಇದೀಗ ಚುನಾವಣಾಧಿಕಾರಿಗೆ ದೂರು ನೀಡಿ ಸೂಕ್ತ ಭದ್ರತೆ ನೀಡುವಂತೆ ಮನವಿ ಸಲ್ಲಿಸಿದೆ.

    2014ರ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಇರುವ ಕೆಲ ಮತಗಟ್ಟೆಗಳಲ್ಲಿ ಶೇ.90ರಷ್ಟು ಮತದಾನವಾಗಿದ್ದು, ಅಂತಹ ಬೂತ್‍ಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಪರಗಣಿಸಿ ಸೂಕ್ತ ಭದ್ರತೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇನ್ನು ಜಾಧವ್ ಹೆಸರಿನ ಮೂರು ಜನ ಪಕ್ಷೇತರ ಅಭ್ಯರ್ಥಿಗಳನ್ನು ನಿಲ್ಲಿಸಿ ಕೈ ನಾಯಕರು ಸಿಲ್ಲಿ ಪಾಲಿಟಿಕ್ಸ್ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಮಲ್ಲಿಕಾರ್ಜುನ ಖರ್ಗೆ, ನನ್ನ 40 ವರ್ಷದ ರಾಜಕಾರಣದಲ್ಲಿ ಸಿಲ್ಲಿ ರಾಜಕೀಯ ಮಾಡಿಲ್ಲವೆಂದು ಹೇಳಿದ್ದಾರೆ.

    ಬಿಜೆಪಿ ಅಭ್ಯರ್ಥಿ ಪರ ಬ್ಯಾಟ್ ಬೀಸಿದ ಕೈ ಮುಖಂಡ ಅಜಗರ್ ಮೇಲೆಯೂ ಹಲ್ಲೆ ಮಾಡಲಾಗಿದೆ. ಇದೆಲ್ಲವನ್ನು ನೋಡಿದ್ರೆ ಈ ಬಾರಿ ಕಲಬುರಗಿ ಲೋಕಸಭೆ ಸೂಕ್ತ ಭದ್ರತೆ ನೀಡಲಿಲ್ಲ ಅಂದ್ರೆ, ಪಾರದರ್ಶಕ ಚುನಾವಣೆ ನಡೆಯುವುದು ಬಹುತೇಕ ಅನುಮಾನ ಮೂಡಿಸುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

  • ಇಂದು ಹಾಸನದಲ್ಲಿ ಪ್ರಜ್ವಲ್ ನಾಮಿನೇಷನ್ – ಬೆಳ್ಳಂಬೆಳಗ್ಗೆ ಟೆಂಪಲ್ ರನ್

    ಇಂದು ಹಾಸನದಲ್ಲಿ ಪ್ರಜ್ವಲ್ ನಾಮಿನೇಷನ್ – ಬೆಳ್ಳಂಬೆಳಗ್ಗೆ ಟೆಂಪಲ್ ರನ್

    ಹಾಸನ: ಇಂದು ಹಾಸನ ಲೋಕಸಭಾ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಲಿದ್ದು, ತಂದೆ ಎಚ್‍ಡಿ ರೇವಣ್ಣ ಇಟ್ಟಿರುವ ಮುಹೂರ್ತ ಪ್ರಕಾರವೇ ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

    ಬೆಳಗ್ಗೆಯೇ 5.30ಕ್ಕೆ ಹೊಳೆನರಸೀಪುರದಲ್ಲಿರುವ ಮನೆಯಲ್ಲಿ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಹೊಳೆನರಸೀಪುರದಲ್ಲಿರುವ ಲಕ್ಷ್ಮೀನರಸಿಂಹ ಸ್ವಾಮಿ, ಹರದನಹಳ್ಳಿಯ ದೇವೇಶ್ವರ ದೇವಸ್ಥಾನ, ಆಂಜನೇಯ ದೇಗುಲದಲ್ಲೂ ಪೂಜೆ ಸಲ್ಲಿಸಿದ್ರು.

    ಬೆಳಗ್ಗೆ 9.30ರ ವೇಳೆಗೆ ಪೂಜೆ ಕಾರ್ಯಗಳು ಮುಗಿಯಲಿವೆ. ಬಳಿಕ ಹಾಸನಕ್ಕೆ ಬಂದು ನಗರದ ಎನ್‍ಆರ್ ಸರ್ಕಲ್‍ನಲ್ಲಿರುವ ಹೇಮಾವತಿ ಪ್ರತಿಮೆಯಿಂದ ರೋಡ್ ಶೋ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಮಧ್ಯಾಹ್ನ 12.05ರಿಂದ 12.45ರೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ. ಹಾಸನ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.


    ಪುತ್ರನ ನಾಮಪತ್ರಕ್ಕೆ `ವಾಸ್ತು’ ಮಂತ್ರ..!
    ಪ್ರಜ್ವಲ್ ನಾಮಿನೇಷನ್‍ಗೆ ಇದೇ ದಿನ ಯಾಕೆ ಆಯ್ಕೆ ಮಾಡ್ಕೊಂಡ್ರು ಎಂದು ಚರ್ಚೆ ಶುರುವಾಗಿದೆ. ರೇವಣ್ಣ ವಾಸ್ತು ಪ್ರೀತಿ ಎಲ್ಲರಿಗೂ ಗೊತ್ತಿರೋದೇ. ಅದೆಷ್ಟರ ಮಟ್ಟಿಗೆ ಅಂದ್ರೆ ಈ ಹಿಂದೆ ಕಟ್ಟಡವೊಂದರ ಶಂಕುಸ್ಥಾಪನೆ ವೇಳೆ ಪೂಜಾರಿಗೆಯೇ ಪಾಠ ಮಾಡಿದ್ದರು. ಆ ಬಳಿಕ ಬಜೆಟ್ ಇರಲಿ, ಕಾಮಗಾರಿ ಉದ್ಘಾಟನೆ ಇರಲಿ, ಖಾಸಗಿ ಕೆಲಸಗಳೇ ಇರಲಿ. ರೇವಣ್ಣ ವಾಸ್ತು, ಮುಹೂರ್ತ ಎಲ್ಲವೂ ನೋಡೇ ನೋಡ್ತಾರೆ. ಹಾಗೆಯೇ ಇದೀಗ ಪುತ್ರ ಪ್ರಜ್ವಲ್ ನಾಮಪತ್ರ ಸಲ್ಲಿಕೆಗೆ ಕೂಡ ಇವರೇ ಮುಹೂರ್ತ ಇಟ್ಟಿದ್ದಾರೆ. ಎಲ್ಲಾ ಶುಭಕಾರ್ಯಗಳನ್ನು ಶುಕ್ರವಾರವೇ ಮಾಡೋ ರೇವಣ್ಣ, ಮಗನ ನಾಮಪತ್ರ ಸಲ್ಲಿಕೆಗೂ ಶುಕ್ರವಾರವನ್ನೇ ಆಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

  • ಟೆಕ್ಕಿಗಳ ಜೊತೆ ರಾಹುಲ್ ಸಂವಾದಕ್ಕೆ ಆರಂಭದಲ್ಲೇ ಅಡ್ಡಿ..!

    ಟೆಕ್ಕಿಗಳ ಜೊತೆ ರಾಹುಲ್ ಸಂವಾದಕ್ಕೆ ಆರಂಭದಲ್ಲೇ ಅಡ್ಡಿ..!

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಬೆಂಗಳೂರಿನಲ್ಲಿ ನಡೆಯುವ ಸಂವಾದ ಕಾರ್ಯಕ್ರಮಕ್ಕೆ ಆರಂಭದಲ್ಲೇ ಅಡ್ಡಿ ಉಂಟಾಗಿದೆ.

    ಹೌದು. ಸೋಮವಾರ ಟೆಕ್ಕಿಗಳ ಜೊತೆ ರಾಹುಲ್ ಗಾಂಧಿಯವರ ಸಂವಾದ ಕಾರ್ಯಕ್ರಮ ನಿಗದಿಯಾಗಿತ್ತು. ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಬರ್ಡ್ಸ್ ಪಾರ್ಕ್ ನಲ್ಲಿ ಈ ಸಂವಾದಕ್ಕೆ ಪ್ಲಾನ್ ಮಾಡಲಾಗಿತ್ತು. ಆದ್ರೆ ಅಲ್ಲಿನ ಸ್ಥಳೀಯರು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಸೂಕ್ಷ್ಮ ಪರಿಸರದಲ್ಲಿ ರಾಜಕೀಯ ಮಾಲೀನ್ಯ ಬೇಡ ಎಂದು ಸ್ಥಳೀಯರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಸ್ಥಳೀಯರ ವಿರೋಧಕ್ಕೆ ರಾಜ್ಯ ಬಿಜೆಪಿ ನಾಯಕರು ಕೂಡ ಸಾಥ್ ನೀಡಿದ್ದಾರೆ. ಸ್ಥಳೀಯರ ವಿರೋಧದಿಂದಾಗಿ ಇದೀಗ ಕಾಂಗ್ರೆಸ್, ರಾಹುಲ್ ಸಂವಾದ ಸ್ಥಳ ಬದಲಾವಣೆ ಮಾಡಿದೆ. ಕೊನೆಗೆ ಮಾನ್ಯತಾ ಟೆಕ್ ಪಾರ್ಕ್ ಬಯಲು ರಂಗಮಂದಿರದಲ್ಲಿ ರಾಹುಲ್ ಸಂವಾದ ನಿಗದಿಯಾಗಿದೆ.

    ಈ ಬಾರಿಯ ಚುನಾವಣೆಯಲ್ಲಿ ಟೆಕ್ಕಿಗಳನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಮಾನ್ಯತಾ ಟೆಕ್ ಪಾರ್ಕ್ ಗೆ ಕೆಲಸಕ್ಕೆಂದು ಬರುತ್ತಾರೆ. ಹೀಗಾಗಿ ಕಾಂಗ್ರೆಸ್ ಅದೇ ಜಾಗವನ್ನು ಆಯ್ಕೆ ಮಾಡಿಕೊಂಡಿತ್ತು. ಆದ್ರೆ ಮಾನ್ಯತಾ ಟೆಕ್ ಪಾರ್ಕ್ ರೆಸಿಡೆನ್ಶಿಯಲ್ ಅಸೋಸಿಯೇಶನ್ ನವರು ಕಾರ್ಯಕ್ರಮದಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ಇಲ್ಲಿ ಸಂವಾದವನ್ನು ಆಯೋಜಿಸಬಾರದು ಕಮಿಷನರ್ ಗೆ ದೂರು ನೀಡಿದ ಬಳಿಕ ಇದೀಗ ಲೊಕೇಶನ್ ಶಿಫ್ಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ- ಶೋಭಾ ವಿರುದ್ಧ ಸ್ವಪಕ್ಷಿಯರೇ ಸಮರ

    ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ- ಶೋಭಾ ವಿರುದ್ಧ ಸ್ವಪಕ್ಷಿಯರೇ ಸಮರ

    – ಟಿಕೆಟ್ ತಪ್ಪಿಸಲು ಸಿಟಿ ರವಿ ಯತ್ನ

    ಚಿಕ್ಕಮಗಳೂರು: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಚಾರ್ಮ್ ಬೆಳೆಸಿಕೊಳ್ತಿರೋ ಶೋಭಾ ಕರಂದ್ಲಾಜೆಯ ರಾಜಕೀಯ ಭವಿಷ್ಯವನ್ನ ಬಿಜೆಪಿಗರೇ ಮುಗಿಸೋಕೆ ಸ್ಕೆಚ್ ಹಾಕಿರುವಂತಿದೆ. ಬಿಎಸ್‍ವೈ ಬೆಂಬಗಲಿಗರೆಂದು ಗುರುತಿಸಿಕೊಳ್ಳದ ಸಿ.ಟಿ.ರವಿ, ರಘುಪತಿ ಭಟ್ ಹಾಗೂ ಸುನಿಲ್ ಕುಮಾರ್ ಆಂತರಿಕವಾಗಿ ಜಯಪ್ರಕಾಶ್ ಹೆಗ್ಡೆ ಬೆನ್ನಿಗೆ ನಿಂತಿದ್ದಾರೆ. ಕಾಫಿನಾಡ ಬಿಜೆಪಿ ಮುಖಂಡರು, ನಗರಸಭೆ ಹಾಗೂ ಜಿಪಂ ಸದಸ್ಯರನ್ನ ಮುಂದೆ ಬಿಟ್ಟು ಸಿ.ಟಿ ರವಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯೋಕೆ ಸ್ಕೆಚ್ ಹಾಕಿದ್ದಾರಾ ಎಂಬ ಅನುಮಾನ ದಟ್ಟವಾಗಿದೆ.

    ಬಿಜೆಪಿ ಎಂಪಿ ಮತ್ತು ಶಾಸಕರ ನಡುವೆಯೇ ಲೋಕಸಮರದ ಟಿಕೆಟ್‍ಗಾಗಿ ಆಂತರಿಕ ಕಲಹ ಏರ್ಪಟ್ಟಂತಿದೆ. ಗೋ ಬ್ಯಾಕ್ ಶೋಭಕ್ಕ ಚಳವಳಿ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಲೋಕಸಮರದಲ್ಲಿ ಶೋಭಾ ಹೆಸರನ್ನು ತೆರೆಮರೆಗೆ ಸರಿಸಲು ಸ್ವಪಕ್ಷೀಯರೇ ಯತ್ನಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ರಾಜ್ಯ ಮತು ರಾಷ್ಟ್ರ ರಾಜಕಾರಣದಲ್ಲೂ ಸಕ್ರಿಯರಾಗಿರುವ ಸಂಸದೆ ಶೋಭಾ ಕರಂದ್ಲಾಜೆಗೆ ಈ ಬಾರಿ ಎಂಪಿ ಟಿಕೆಟ್ ತಪ್ಪಿಸಲು ಒಳಗೊಳಗೆ ಹುನ್ನಾರ ನಡೆಸುತ್ತಿದ್ದಾರೆ ಎಂಬುದಾಗಿ ಮೂಲಗಳಿಂದ ಮಾಹಿತಿ ಲಭಿಸಿದೆ.

    ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ಅತ್ಯಾಪ್ತರೇ ಶೋಭರಿಗೆ ಟಿಕೆಟ್ ಬೇಡ ಎನ್ನುತ್ತಿದ್ದಾರೆ. ಇದರ ಹಿಂದೆ ಸಿ.ಟಿ ರವಿಯೇ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದು ರಾಜ್ಯ, ಜಿಲ್ಲೆಯ ನಾಯಕತ್ವದ ಸ್ಥಾನವನ್ನು ಗಟ್ಟಿ ಮಾಡಿಕೊಂಡು ಶೋಭಾ ರಾಜಕೀಯ ಜೀವನವನ್ನು ಮುಗಿಸೋಕೆ ಪ್ಲಾನ್ ಮಾಡ್ತಿದ್ದಾರಾ ಎಂಬ ಅನುಮಾನ ಮೂಡಿದೆ ಎಂದು ಬಿಜೆಪಿ ನಗರಸಭೆ ಸದಸ್ಯ ರಾಜಶೇಖರ್ ತಿಳಿಸಿದ್ದಾರೆ.

    ಶೋಭಾ ರಾಷ್ಟ್ರ ಮತ್ತು ರಾಜ್ಯ ನಾಯಕಿ ಆದರೆ ಅವರನ್ನು ಭೇಟಿಯೇ ಮಾಡೋಕಾಗಲ್ಲ. ಸಂಸದರ ಕಚೇರಿಯಲ್ಲೂ ಸಿಗಲ್ಲ. ಸಿಕ್ಕರೂ ಮಾತಾಡಿಸಲ್ಲ. ಒಂದೂ ಸಭೆ ನಡೆಸಿಲ್ಲ. ಹೀಗಾಗಿ ಶೋಭಾರಿಗೆ ಟಿಕೆಟ್ ಬೇಡವೆಂದು ಕಾಫಿನಾಡಿನ ಜನ ಹೇಳುತ್ತಿದ್ದಾರೆ. ಜೊತೆಗೆ ಸ್ಥಳೀಯರಿಗೆ ಟಿಕೆಟ್ ಕೊಡಿ ಅಂತ ಜಯಪ್ರಕಾಶ್ ಹೆಗ್ಡೆ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಈ ಮಧ್ಯೆ ಆರ್.ಎಸ್.ಎಸ್ ಮುಖಂಡ ನಾಗೇಶ್ ಅಂಗೀರಸ ಶೋಭಾ ಡಮ್ಮಿ ಕ್ಯಾಂಡಿಡೇಟ್ ಎಂದು ವ್ಯಂಗ್ಯವಾಡಿದ್ದಾರೆ.

    ಇತ್ತ ಶೋಭಾಗೆ ಟಿಕೆಟ್ ಕೊಡಿಸಲು ಬಿಎಸ್‍ವೈ ಕಸರತ್ತು ನಡೆಸುತ್ತಿದ್ದರೆ, ಅತ್ತ ಬಿಎಸ್‍ವೈ ಬೆಂಬಲಿರೆಂದು ಗುರುತಿಸಿಕೊಳ್ಳದ ಸಿ.ಟಿ ರವಿ, ಸುನಿಲ್ ಕುಮಾರ್ ಹಾಗೂ ರಘುಪತಿ ಭಟ್ ಒಳಗೊಳಗೆ ಜಯಪ್ರಕಾಶ್ ಹೆಗ್ಡೆ ಬೆನ್ನಿಗೆ ನಿಂತಿದ್ದಾರೆ. ಒಂದು ವೇಳೆ ಶೋಭಾಗೆ ಟಿಕೆಟ್ ತಪ್ಪಿದ್ರೆ ಬಿಎಸ್‍ವೈ ಬೆಂಬಲಿಗ ಶಾಸಕರಾದ ಮೂಡಿಗೆರೆ ಕುಮಾರಸ್ವಾಮಿ, ತರೀಕೆರೆ ಸುರೇಶ್, ಕಡೂರಿನ ಬೆಳ್ಳಿ ಪ್ರಕಾಶ್ ಏನ್ ಮಾಡ್ತಾರೆ ಎಂಬುದನ್ನು ಕಾದುನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv