Tag: loksabha elections2019

  • ಎಚ್‍ಡಿಡಿ ಡಿಕ್ಷನರಿಯಲ್ಲಿ ಕೊನೆ ಚುನಾವಣೆ ಅಂದ್ರೆ ಏನು – ಎಸ್‍ಎಂಕೆ ಟಾಂಗ್

    ಎಚ್‍ಡಿಡಿ ಡಿಕ್ಷನರಿಯಲ್ಲಿ ಕೊನೆ ಚುನಾವಣೆ ಅಂದ್ರೆ ಏನು – ಎಸ್‍ಎಂಕೆ ಟಾಂಗ್

    ಹಾಸನ: ಯಾವಾಗಲೂ ಇದು ನನ್ನ ಕೊನೆಯ ಚುನಾವಣೆ ಎನ್ನುವ ಮಾಜಿ ಪ್ರಧಾನಿ ದೇವೇಗೌಡರ ಡಿಕ್ಷನರಿಯಲ್ಲಿ ಕೊನೆಯ ಚುನಾವಣೆ ಅಂದ್ರೆ ಏನು ಎಂದು ಕೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಟಾಂಗ್ ನೀಡಿದ್ದಾರೆ.

    ಹಾಸನದಲ್ಲಿ ಕೃಷ್ಣ ಅವರು ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಅದಾದ ಮೇಲೆ ನಾನು ಮತ್ತೆ ಎಲ್ಲೂ ಸ್ಪರ್ಧಿಸಿಲ್ಲ ಎಂದು ಹೇಳಿ ದೇವೇಗೌಡರನ್ನು ಕುಟುಕಿದ್ರು.

    ಯಾವಾಗಲೂ ಇದು ನನ್ನ ಕೊನೆಯ ಚುನಾವಣೆ ಎನ್ನುವ ದೇವೇಗೌಡರ ಡಿಕ್ಷನರಿಯಲ್ಲಿ ಕೊನೆಯ ಚುನಾವಣೆ ಅಂದ್ರೆ ಏನು ಎಂದು ಪ್ರಶ್ನಿಸಿದ್ರು. ಮೋದಿ ಕಿತ್ತೊಗೆಯುತ್ತೇನೆ ಎಂಬುದು ದೇವೇಗೌಡರ ಅಭಿಪ್ರಾಯವಾಗಿತ್ತು. ಈಗಲೂ ಅದನ್ನೇ ಪೋಷಿಸಿಕೊಂಡು ಬಂದಿದ್ದಾರೆ. ಆದ್ರೆ ದೇಶದ ರೈತರು ಈ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು.

    ಅಕ್ರಮಗಳು ಎಲ್ಲಿ ಆಗುತ್ತಿವೆ. ಅಲ್ಲಿ ಅದನ್ನ ದಯ-ದಾಕ್ಷ್ಯಿಣ್ಯವಿಲ್ಲದೆ ತಡೆಯಲಿ ಆದಾಯ ತೆರಿಗೆ ಇಲಾಖೆ ಇದೆ. ಯಾವುದೋ ಕಂಟ್ರಾಕ್ಟರ್ ಮೇಲೆ ಐಟಿ ದಾಳಿಯಾದ್ರೆ ರಾಜಕಾರಣಿಗಳಿಗೆ ಯಾಕೆ ಹೊಟ್ಟೆ ನೋವು ಬರುತ್ತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಲಿದ್ದಾರೆ. ಇದಕ್ಕೆ ಪೂರಕ ವಾತಾವರಣ ರಾಜ್ಯದಲ್ಲಿ ಕಂಡು ಬರುತ್ತಿದೆ. ಬಿಜೆಪಿ ಕಾರ್ಯಕರ್ತರಲ್ಲಿ ದೊಡ್ಡ ಪ್ರಮಾಣದ ಆತ್ಮವಿಶ್ವಾಸ ಇದೆ. ಇದರಿಂದ ರಾಜ್ಯದಲ್ಲಿ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮೋದಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಹಾಘಟಬಂಧನ್ ಅಲ್ಲ ಘಟಬಂಧನ್ ಕೂಡ ಇಲ್ಲ. ಉತ್ತರ ಪ್ರದೇಶದಲ್ಲಿ ಘಟಬಂಧನ್ ಮಾಡಿಕೊಂಡಿರುವ ಬಹುಜನ ಪಕ್ಷ ಮತ್ತು ಸಮಾಜವಾದಿ ಪಕ್ಷ ಕಾಂಗ್ರಸ್ ಗೆ ಕೇವಲ 2 ಸ್ಥಾನ ಬಿಟ್ಟು ಕೊಟ್ಟಿದೆ. ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಮಾಯಾವತಿ ಸಾರಿ ಸಾರಿ ಹೇಳಿದ್ದಾರೆ. ಇದು ಕಾಂಗ್ರಸ್ ಮುಕ್ತ ಘಟಬಂಧನ್ ಎಂದು ಹೇಳಿದ್ರು.

    ಮೋದಿ ಅವರು ಎಲ್ಲಿ? ಈ ಘಟಬಂಧನ್ ಎಲ್ಲಿ? ಮೋದಿ ಅವರ ವರ್ಚಸ್ ಏನು, ವ್ಯಕ್ತಿತ್ವವೇನು? ಮೋದಿಯವರು 5 ವರ್ಷದಲ್ಲಿ ಮಾಡಿರೋ ಸಾಧನೆ ಏನು? ಎಂದು ಪ್ರಶ್ನೆ ಮಾಡಿದರು.

    ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 25 ವರ್ಷ ಆದವರು ಯಾರು ಎಲ್ಲಿ ಬೇಕಾದ್ರೂ ನಿಲ್ಲಬಹುದು. ಸ್ಮೃತಿ ಇರಾನಿಯವರು ಅಮೇಥಿಯಲ್ಲಿ ಕಳೆದ 5 ವರ್ಷದಿಂದ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಆ ಕಾರಣದಿಂದ ರಾಹುಲ್ ಕೇರಳದಲ್ಲಿ ನಿಲ್ಲುತ್ತಿರಬಹುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸೋಲಿನ ಭಯದಿಂದ ರಾಹುಲ್ ಕೇರಳದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ರು.

    ಕೇಂದ್ರ ಸರಕಾರ ನಮಗೆ ದುರುದ್ದೇಶದಿಂದ ಹೆಲಿಕಾಪ್ಟರ್ ತಡೆ ಹಿಡಿದಿದೆ ಎಂಬ ಸಿಎಂ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹೆಲಿಕಾಪ್ಟರ್ ಕೊಂಡುಕೊಳ್ಳಬಹುದು ಅಷ್ಟು ಸಾಮರ್ಥ್ಯ ಸಿಎಂಗೆ ಇದೆ ಎಂದು ಇದೇ ವೇಳೆ ಎಚ್‍ಡಿಕೆಗೆ ಟಾಂಗ್ ನೀಡಿದ್ರು.

    ಮಾಜಿ ಸಿಎಂ ಎಸ್.ಎಂ.ಕೃಷ್ಣ ಹಾಸನಕ್ಕೆ ಎಂಟ್ರಿಯಾಗುತ್ತಿದ್ದಂತೆಯೇ ಹಾಸನ ಹೊರವಲಯದ ಬೂವನಹಳ್ಳಿಯಲ್ಲಿ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದಾರೆ.

  • ಮೈತ್ರಿಯಿಂದ ಜೆಡಿಎಸ್‍ಗೆ ಲಾಭವಿಲ್ಲ- ಸಿಎಂ ಕೈ ಸೇರಿದೆ ಗುಪ್ತಚರ ವರದಿ!

    ಮೈತ್ರಿಯಿಂದ ಜೆಡಿಎಸ್‍ಗೆ ಲಾಭವಿಲ್ಲ- ಸಿಎಂ ಕೈ ಸೇರಿದೆ ಗುಪ್ತಚರ ವರದಿ!

    ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ಬ್ಯುಸಿ ಮಧ್ಯೆಯೇ ಗುಪ್ತಚರ ಇಲಾಖೆಯ ವರದಿಯೊಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೈ ಸೇರಿದ್ದು, ಮಾಹಿತಿಯಿಂದ ದೋಸ್ತಿ ಪಕ್ಷದ ವಿರುದ್ಧವೇ ಸಿಎಂ ಅನುಮಾನ ಪಡುವಂತಾಯ್ತಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

    ಹೌದು. ಮೈತ್ರಿಯಿಂದ ಜೆಡಿಎಸ್‍ಗೆ ಹೆಚ್ಚಿನ ಲಾಭವಿಲ್ಲ ಎಂಬ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಮಾಹಿತಿಯು ಮುಖ್ಯಮಂತ್ರಿಯವರ ಕೈ ಸೇರಿದೆ ಎನ್ನಲಾಗಿದೆ.


    ಕಾಂಗ್ರೆಸ್ ಸ್ಪರ್ಧೆ ಮಾಡಿರುವ ಕಡೆಗಳಲ್ಲಿ ಜೆಡಿಎಸ್‍ನಿಂದ ಸಣ್ಣ ಮಟ್ಟದ ಬೆಂಬಲ ಸಿಗಲಿದೆ. ಆದ್ರೆ ಜೆಡಿಎಸ್ ಸ್ಪರ್ಧಿಸಿರೋ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಿಂದ ಹೆಚ್ಚಿನ ನೆರವು ಸಿಗೋದು ಅನುಮಾನ ಎಂದು ಗುಪ್ತಚರ ವರದಿಯಿಂದ ತಿಳಿದುಬಂದಿದೆ.ವಿಶೇಷವಾಗಿ ಮಂಡ್ಯ, ಹಾಸನ, ತುಮಕೂರಿನಲ್ಲೇ ಮೈತ್ರಿ ನೆರವು ಸಿಗೋದು ಅನುಮಾನವಾಗಿದೆ. ಈ ಮೂಲಕ ದೊಡ್ಡ ದೊಡ್ಡ ನಾಯಕರುಗಳು ಸ್ಪರ್ಧೆ ಮಾಡಿದ್ರೂ ಮುನಿಸು ಮರೆಯಾಗಿಲ್ಲ ಎನ್ನಲಾಗುತ್ತಿದ್ದು, ಕೈ ಕಾರ್ಯಕರ್ತರು ಜೆಡಿಎಸ್ ಪರವಾಗಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

    ಒಟ್ಟಿನಲ್ಲಿ ಗುಪ್ತಚರ ಇಲಾಖೆ ವರದಿ ಪ್ರಕಾರ ಜೆಡಿಎಸ್‍ಗೆ ದೋಸ್ತಿಯಿಂದ ಪ್ರಯೋಜನ ಇಲ್ಲವೆಂಬುದು  ಜೆಡಿಎಸ್ ಪಾಲಿಗೆ ಗಂಟಲಲ್ಲಿ ಸಿಕ್ಕ ಬಿಸಿ ತುಪ್ಪದಂತಾಗಿದೆ.

  • ಬಂಡಾಯ ಶಮನ ಸಭೆಯಲ್ಲೇ `ಕೈ’ ಬೇಗುದಿ!

    ಬಂಡಾಯ ಶಮನ ಸಭೆಯಲ್ಲೇ `ಕೈ’ ಬೇಗುದಿ!

    ಬೆಂಗಳೂರು: ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ನೀಡುವ ವಿಚಾರವಾಗಿ ಕಾಂಗ್ರೆಸ್ ನಾಯಕ ಚೆಲುವರಾಯಸ್ವಾಮಿಯವರು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಗರಂ ಆಗಿದ್ದಾರೆ.

    ಸುಮಲತಾಗೆ ತಾವು ಬೆಂಬಲ ನೀಡಿಲ್ಲ. ಇದನ್ನ ಪ್ರೂವ್ ಮಾಡಿ ತೋರಿಸಲು ನಾನೇನು ಆಂಜನೇಯ ತರಹ ಎದೆ ಬಗೆದು ತೋರಿಸಲಿಕ್ಕಾಗುವುದಿಲ್ಲ ಎಂದು ಚೆಲುವರಾಯಸ್ವಾಮಿ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಮಂಡ್ಯ ನಾಯಕರ ಸಭೆ ಬಳಿಕ ಮಾತನಾಡಿದ ಅವರು, ಪಕ್ಷದ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಸಭೆ ಕರೆದಿದ್ರು. ಚುನಾವಣಾ ವಿಚಾರವಾಗಿ ಚರ್ಚೆ ಮಾಡಿದ್ರು. ಏನೆಲ್ಲಾ ಚರ್ಚೆ ಮಾಡಬೇಕೋ ಅದನ್ನ ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಬಂಡಾಯ ಶಮನ ವಿಚಾರವಾಗಿ ಎಲ್ಲವನ್ನೂ ಮಾತನಾಡಿದ್ದಾರೆ ಎಂದು ತಿಳಿಸಿದ್ರು.

    ಅಲ್ಲದೆ ಸಿಎಂ ತಮ್ಮನ್ನ ನಿಖಿಲ್ ಪರ ಪ್ರಚಾರಕ್ಕೆ ಕರೆಯಬೇಡಿ ಎಂದಿದ್ದಾರೆ. ಹೀಗಾಗಿ ಅವರೇ ಹಾಗೆ ಹೇಳಿದ ಮೇಲೆ ಅವರ ಸ್ಟೇಟ್ ಮೆಂಟ್ ಗೆ ಪ್ರತಿಕ್ರಿಯಿಸುವುದಕ್ಕೆ ನಾನು ಅವರಷ್ಟು ದೊಡ್ಡವನಲ್ಲ ಅಂತ ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

    ಹೈಕಮಾಂಡ್ ಸೂಚನೆಯಂತೆ ಮಂಡ್ಯ ಕಾಂಗ್ರೆಸ್ ಅಸಮಾಧಾನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪಕ್ಷದ ಜಿಲ್ಲಾ ಮುಖಂಡರ ಸಭೆ ನಡೆಸಿದ್ರು. ತಡರಾತ್ರಿ ಮಂಡ್ಯ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಬಂಡಿಸಿದ್ದೇಗೌಡ ಮತ್ತು ಅರವಿಂದ ಸಾಗರ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

    ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತವಾದ ಮೇಲೆ ಮಂಡ್ಯ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರು ನಿಖಿಲ್‍ಗೆ ಬೆಂಬಲ ನೀಡಲ್ಲ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆ ಬೆಂಬಲ ನೀಡ್ತೆವೆ ಎಂಬ ಮಾತುಗಳು ಕೇಳಿ ಬರ್ತಿತ್ತು. ಈ ವಿಚಾರವನ್ನೂ ಕೂಡ ಚರ್ಚಿಸಲಾಯಿತು.

  • ಕೊನೆಗೂ ಧಾರವಾಡದಲ್ಲಿ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಮಣೆ

    ಕೊನೆಗೂ ಧಾರವಾಡದಲ್ಲಿ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಮಣೆ

    ಧಾರವಾಡ: ಕಾಂಗ್ರೆಸ್ ನಲ್ಲಿ ತೀವ್ರಗೊಂದಲಕ್ಕೆ ಕಾರಣವಾಗಿದ್ದ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಕೊನೆಗೂ ಬಗೆಹರಿದಿದೆ.

    ಪಕ್ಷದ ನಾಯಕ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಮಣೆ ಹಾಕಿದ್ದು, ತಡರಾತ್ರಿ ಟಿಕೆಟ್ ಪಟ್ಟಿ ಪ್ರಕಟಿಸಿದೆ. ಕ್ಷೇತ್ರದ ಟಿಕೆಟ್‍ಗಾಗಿ ಶಾಕಿರ್ ಸನದಿ ಹಾಗೂ ವಿಜಯ್ ಕುಲಕರ್ಣಿ ನಡುವೆ ತೀವ್ರ ಪೈಪೋಟಿ ಇತ್ತು. ಆದ್ರೆ ಹೈಕಮಾಂಡ್ ಕುಲಕರ್ಣಿಗೆ ಟಿಕೆಟ್ ನೀಡಿದೆ.

    ದಾವಣಗೆರೆ ಕ್ಷೇತ್ರದಲ್ಲಿ ಎಚ್.ಬಿ.ಮಂಜಪ್ಪಗೆ ಟಿಕೆಟ್ ನೀಡಲಾಗಿದ್ದು, ಶ್ಯಾಮನೂರು ತಮ್ಮ ಬೆಂಬಲಿಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜಪ್ಪ ಕುರುಬ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ.

  • ನಿಖಿಲ್ ಭರ್ಜರಿ ಪ್ರಚಾರದಲ್ಲಿ ತೆನೆ ಹೊತ್ತು ವ್ಯಕ್ತಿಯಿಂದ ನೃತ್ಯ!

    ನಿಖಿಲ್ ಭರ್ಜರಿ ಪ್ರಚಾರದಲ್ಲಿ ತೆನೆ ಹೊತ್ತು ವ್ಯಕ್ತಿಯಿಂದ ನೃತ್ಯ!

    ಮಂಡ್ಯ: ಚುನಾವಣಾ ಜಿದ್ದಾಜಿದ್ದಿ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಈ ವೇಳೆ ವ್ಯಕ್ತಿಯೊಬ್ಬರು ಹುಲ್ಲಿನ ಹೊರೆ ಹೊತ್ತು ನೃತ್ಯ ಮಾಡಿದ್ದಾರೆ.

    ಮಳವಳ್ಳಿ ತಾಲೂಕಿನ, ಚಿಕ್ಕಮುಲಗೂಡು ಗ್ರಾಮದಿಂದ ಪ್ರಚಾರ ಆರಂಭಿಸಿದ ನಿಖಿಲ್‍ಗೆ ಸಚಿವ ಜಿ.ಟಿ.ದೇವೇಗೌಡ, ಶಾಸಕ ಅನ್ನದಾನಿ ಸಾಥ್ ನೀಡಿದ್ರು. ಪ್ರಚಾರದ ವೇಳೆ ದ್ವಾರನಹಳ್ಳಿ ಗ್ರಾಮದ ನಾಗಣ್ಣ, ವಾಹನದ ಮುಂದೆ ತೆನೆ ಹೊತ್ತು ನೃತ್ಯ ಮಾಡಿದ್ದು ನೆರೆದಿದ್ದವರ ಗಮನ ಸೆಳೆಯಿತು.

    ಚಿಕ್ಕಮುಲಗೂಡು ಗ್ರಾಮದಲ್ಲಿ ಮಾತನಾಡಿದ ನಿಖಿಲ್, ತುಂಬಾ ಚೆನ್ನಾಗಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಅಂದ್ರು. ಇದೇ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಯಶ್, ದರ್ಶನ್ ಪ್ರಚಾರ ಮಾಡುತ್ತಿದ್ದು, ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಅದು ಅವರ ವೈಯಕ್ತಿಕ ವಿಚಾರವಾಗಿದೆ. ಅದನ್ನು ನಾನು ಯಾಕೆ ಪ್ರಶ್ನೆ ಮಾಡಲಿ. ಎಲ್ಲರಿಗೂ ಒಳ್ಳೆಯದಾಗಲಿ. ದರ್ಶನ್, ಯಶ್ ಅಭಿಮಾನಿಗಳು ಬರುತ್ತಾರೆ. ಅದರಿಂದ ನಮಗೇನೂ ಹಿನ್ನಡೆಯಾಗಲ್ಲ ಎಂದು ಹೇಳಿದ್ರು.

    ಜಿಲ್ಲೆಯ ಅಭಿವೃದ್ಧಿ ಮುಖ್ಯ:
    ಸಂಸದ ಶಿವರಾಮೇಗೌಡರು ಸುಮಲತಾ ಗೌಡ್ತಿ ಅಲ್ಲ, ನಾಯ್ಡು ಎಂದು ಹೇಳಿದ ವಿಚಾರದ ಬಗ್ಗೆ ಕೂಡ ನಾನು ಮಾತನಾಡಲ್ಲ. ಆ ಬಗ್ಗೆ ಶಿವರಾಮೇಗೌಡರನ್ನೇ ಕೇಳಬೇಕು ಎಂದು ತಿಳಿಸಿದ ಅವರು, ನಾನು ಸಂಸದನಾಗಿ ಡೆಲ್ಲಿಯಲ್ಲಿ ಮೆರೆಯಲಿಕ್ಕೆ ಬಂದವನಲ್ಲ. ನಾನು ದೇವೇಗೌಡ, ಕುಮಾರಣ್ಣ ಅವರ ಪ್ರತಿನಿಧಿಯಾಗಿ ಬಂದಿದ್ದೇನೆ. ನಾನು ಈವರೆಗೆ ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ನನಗೆ ಜಿಲ್ಲೆಯ ಅಭಿವೃದ್ಧಿ ಮುಖ್ಯ ಅಂದ್ರು.

    ದೃಷ್ಟಿ ತೆಗೆದ ಯುವತಿ:
    ಇದೇ ವೇಳೆ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ಯುವತಿಯೊಬ್ಬರು ನಿಖಿಲ್‍ಗೆ ಬೆಲ್ಲದ ಆರತಿ ಮಾಡಿ ದೃಷ್ಟಿ ತೆಗೆದಿದ್ದಾರೆ. ಪ್ರಚಾರದ ನಡುವೆ ದೃಷ್ಟಿಯಾಗಿರಬಹುದೆಂದು ಯುವತಿ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಮಹಿಳೆಯಿಂದ ತರಾಟೆ:
    ಹಿಟ್ಟಿನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಮಹಿಳೆಯೊಬ್ಬರು ಸ್ತ್ರೀ ಶಕ್ತಿ ಸಾಲ ಮನ್ನಾ ಆಗಿಲ್ಲ ಎಂದು ನಿಖಿಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ನಿಖಿಲ್, ಇದೂವರೆಗೆ ಆಗಿರುವ ಸಾಲಮನ್ನಾ ಬಗ್ಗೆ ಮಾಹಿತಿ ನೀಡಿದ್ರು.

  • ಮುನಿಸು ಮರೆತ್ರಾ ದೇವೇಗೌಡ, ಸಿದ್ದರಾಮಯ್ಯ- ಗುರು, ಶಿಷ್ಯರಿಂದ ಜಂಟಿ ಪ್ರಚಾರ!

    ಮುನಿಸು ಮರೆತ್ರಾ ದೇವೇಗೌಡ, ಸಿದ್ದರಾಮಯ್ಯ- ಗುರು, ಶಿಷ್ಯರಿಂದ ಜಂಟಿ ಪ್ರಚಾರ!

    ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ನಡುವೆ ದೋಸ್ತಿ ಆದ್ರೂ ಕೆಳಮಟ್ಟದ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದನ್ನ ಸರಿಪಡಿಸಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿಯಾಗಿ ಪ್ರಚಾರಕ್ಕೆ ಹೋಗಲು ನಿರ್ಧರಿಸಿದ್ದಾರೆ.

    ಹೌದು. 28 ಕ್ಷೇತ್ರಗಳಿಗೆ ಗೌಡರು ಹಾಗೂ ಸಿದ್ದರಾಮಯ್ಯ ಜೋಡಿ ಜೊತೆಯಲ್ಲಿ ಸಾಗಲಿದೆ. ಆ ಮೂಲಕ ದಶಕಗಳ ಕಾಲ ಒಬ್ಬರನ್ನೊಬ್ಬರು ದ್ವೇಷಿಸಿದ್ದ ಅವರಿಬ್ಬರೇ ಮೈತ್ರಿ ಸೂತ್ರ ಪಾಲನೆಗೆ ಒಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅವರಿಬ್ಬರು ಒಂದಾಗಿದ್ದಾರೆ ಇನ್ನು ನಮ್ಮದೇನು ಎಂದು ಕಾರ್ಯಕರ್ತರ ಮನವೂ ಈ ಮೂಲಕ ಪರಿವರ್ತನೆ ಆಗಬಹುದು ಎಂಬುದು ದೋಸ್ತಿ ನಾಯಕರ ಲೆಕ್ಕಾಚಾರವಾಗಿದೆ. ಆದ್ದರಿಂದ ಜಂಟಿ ಚುನಾವಣಾ ಪ್ರಚಾರದ ರೂಪುರೇಷೆ ಸಿದ್ಧವಾಗಿದ್ದು ಎಲ್ಲಾ ಕ್ಷೇತ್ರಗಳಲ್ಲೂ ಹಳೆಯ ಗುರು ಶಿಷ್ಯರಾದ ದೇವೇಗೌಡರು ಹಾಗೂ ಸಿದ್ದರಾಮಯ್ಯ ಜೊತೆ ಜೊತೆಯಲ್ಲಿ ಪ್ರಚಾರ ನಡೆಸಲಿದ್ದಾರೆ.

    ಹೀಗೆ ಎರಡೂ ಪಕ್ಷದ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸಲು ಇಂತಹ ಮಾಸ್ಟರ್ ಸ್ಟ್ರೋಕ್ ಒಂದನ್ನ ದೋಸ್ತಿ ಪಕ್ಷ ಪ್ರಯೋಗಿಸಿದೆ. ಮೈತ್ರಿ ಸೂತ್ರ ಪಾಲನೆಗಾಗಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ತಮ್ಮ ಹಳೆ ಮುನಿಸು ಮರೆಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನೊಂದು ಕಡೆ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಸಹಾ ಜಂಟಿ ಪ್ರವಾಸ ಮಾಡಿ ಸರ್ಕಾರದ ಸಾಧನೆಯನ್ನ ಜನರ ಮುಂದಿಡಲಿದ್ದಾರೆ. ಸಿಎಂ ,ಡಿಸಿಎಂ ಜಂಟಿ ಪ್ರವಾಸಕ್ಕಿಂತಲೂ ಮಾಜಿ ಪಿಎಂ ಹಾಗೂ ಮಾಜಿ ಸಿಎಂ ಜಂಟಿ ಪ್ರವಾಸವೇ ಈಗ ರಾಜ್ಯ ರಾಜಕಾರಣದ ಬಹುಚರ್ಚಿತ ವಿಷಯವಾಗಿದೆ.

    ಎಲ್ಲೆಲ್ಲಿ ಪ್ರಚಾರ:
    ಗುರು-ಶಿಷ್ಯರ ಜಂಟಿ ಪ್ರಚಾರಕ್ಕೆ ಮುಹೂರ್ತ ನಿಗದಿಯಾಗಿದ್ದು, 5 ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ದೇವೇಗೌಡರಿಂದ ಜೊತೆ ಜೊತೆಯಾಗಿ ಕ್ಯಾಂಪೇನ್ ನಡೆಯಲಿದೆ. ಏಪ್ರಿಲ್ 9 ಮೈಸೂರು, ಏಪ್ರಿಲ್ 10 ತುಮಕೂರು, ಏಪ್ರಿಲ್ 11 ಹಾಸನ, ಏಪ್ರಿಲ್ 12 ಮಂಡ್ಯ, ಏಪ್ರಿಲ್ 13 ಬೆಂಗಳೂರಲ್ಲಿ ಸಮಾವೇಶ ಹಾಗೂ ರೋಡ್ ಶೋ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

  • ನಿಖಿಲ್ ಗೆಲುವಿಗೆ ಬಸವ ಆಶೀರ್ವಾದ!

    ನಿಖಿಲ್ ಗೆಲುವಿಗೆ ಬಸವ ಆಶೀರ್ವಾದ!

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರದಿಂದ ಮಂಡ್ಯ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿರೋ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್‍ ಕುಮಾರಸ್ವಾಮಿಗೆ  ದೇವರ ಆಶೀರ್ವಾದ ಸಿಕ್ಕಿದೆ.

    ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಿಖಿಲ್, ಭಾನುವಾರ ಮದ್ದೂರು ತಾಲೂಕಿನ ಹೊನ್ನನಾಯ್ಕನಹಳ್ಳಿ ಗ್ರಾಮದ ಮಂಟೇಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಸವ ನಿಖಿಲ್ ಅಂಗೈ ಮೇಲೆ ಪಾದವಿಟ್ಟು ಆಶೀರ್ವಾದ ಮಾಡಿದ್ದಾನೆ.

    ಆರಂಭದಲ್ಲಿ ಬಸವನಿಗೆ ಹೆದರಿದ ನಿಖಿಲ್‍ಗೆ ಸ್ಥಳೀಯರು ಹೆದರದಂತೆ ಧೈರ್ಯ ಹೇಳಿದ್ರು. ಬಳಿಕ ನಿಖಿಲ್ ಧೈರ್ಯವಾಗಿ ಬಸವನ ಬಳಿ ಆಶೀರ್ವಾದ ಪಡೆದ್ರು. ಅಂಗೈ ನೀಡಿ ಬಸವನ ಆಶೀರ್ವಾದ ಬೇಡುವುದು ಇಲ್ಲಿಯ ವಾಡಿಕೆಯಾಗಿದೆ.

    ಇದಕ್ಕೂ ಮೊದಲು ನಿಖಿಲ್ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದ್ರು. ಸೋಮನಹಳ್ಳಿಯ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಪಟಾಕಿ ಸಿಡಿಸಿ ನಿಖಿಲ್‍ರನ್ನು ಗ್ರಾಮಸ್ಥರು ಸ್ವಾಗತಿಸಿದರು. ಬಳಿಕ ಮನೆ ಮನೆಗೆ ತೆರಳಿ ಮತಯಾಚಿಸಿದ್ರು.

  • ಹುಚ್ಚೇಗೌಡರ ಸೊಸೆ ಆದ ತಕ್ಷಣ ಗೌಡ್ತಿಯಾಗಲ್ಲ-ಸುಮಲತಾ ವಿರುದ್ಧ ಸಂಸದ ವಾಗ್ದಾಳಿ

    ಹುಚ್ಚೇಗೌಡರ ಸೊಸೆ ಆದ ತಕ್ಷಣ ಗೌಡ್ತಿಯಾಗಲ್ಲ-ಸುಮಲತಾ ವಿರುದ್ಧ ಸಂಸದ ವಾಗ್ದಾಳಿ

    ಮಂಡ್ಯ: ಜೆಡಿಎಸ್ ವಿರುದ್ಧ ಮುಗಿಬೀಳುತ್ತಿರೋ ಸುಮಲತಾ ವಿರುದ್ಧ ಸಂಸದ ಶಿವರಾಮೇಗೌಡ ಕಿಡಿಕಾರಿದ್ದಾರೆ.

    ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿ ಸಮೀಪ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿ ಸುಮಲತಾ ಮಂಡ್ಯ ಗೌಡ್ತಿಯೇ ಎಂದು ಪ್ರಶ್ನಿಸಿ ಮತ್ತೆ `ಗೌಡ್ತಿ’ ಹೇಳಿಕೆಯನ್ನು ಕೆಣಕಿದ್ದಾರೆ.

    ಗೌಡ್ತಿ ಹೇಳಿಕೆ ನೀಡಿ ಭಾರೀ ವಿರೋಧಕ್ಕೆ ಗುರಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಸಮ್ಮುಖದಲ್ಲೆ ಸುಮಲತಾ ಮಂಡ್ಯ ಗೌಡ್ತಿಯಲ್ಲ ಎಂದು ಸಂಸದರು ಗುಡುಗಿದ್ದಾರೆ. ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ ಅಂದ್ರು. ಇದನ್ನೂ ಓದಿ: ಅಂಬಿ ಫ್ಯಾನ್ಸ್, ಜೆಡಿಎಸ್ ನಡುವೆ ಗೌಡ್ತಿ ಫೈಟ್!- ವೈರಲ್ ಆಯ್ತು ಸಿಎಂ ತೆಲಗು ಸಂದರ್ಶನ

    ಅಂಬರೀಶ್ ಶವ ಸಂಸ್ಕಾರಕ್ಕೆ ಸೇರಿದ ಜನಸಾಗರ ಕಂಡು ಮಂಡ್ಯ ಚುನಾವಣೆಗೆ ಬಂದಿದ್ದಾರೆ. ಅವರು ನಿಜವಾಗಲು ಒಕ್ಕಲಿಗರಾ ಎಂದು ಪ್ರಶ್ನಿಸಿದ ಶಿವರಾಮೇ ಗೌಡ, ಸುಮಲತಾ ಮತ್ತು ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಸುರೇಶ್‍ಗೌಡ ಕರೆ ತಂದ ರಮ್ಯರನ್ನ ಓಡಿಸಿದ್ದೇನೆ. ಅಂಬರೀಶ್‍ರನ್ನೂ ಕರೆತಂದವನು ನಾನೇ, ಅವರನ್ನ ಸೋಲಿಸಿದವನು ನಾನೇ. ನಾನು ನಾಗಮಂಗಲದ ಗಂಡು ಎಂದು ಸುವಲತಾ ವಿರುದ್ಧ ಕಿಡಿಕಾರಿದ್ರು. ಇದನ್ನೂ ಓದಿ: ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ: ಕೆ.ಟಿ.ಶ್ರೀಕಂಠೇಗೌಡ

  • ಮಂಡ್ಯದಲ್ಲಿ ಆರಂಭವಾಯ್ತು ಚಪ್ಪಲಿ ಪಾಲಿಟಿಕ್ಸ್!

    ಮಂಡ್ಯದಲ್ಲಿ ಆರಂಭವಾಯ್ತು ಚಪ್ಪಲಿ ಪಾಲಿಟಿಕ್ಸ್!

    ಮಂಡ್ಯ: ಸಾವಿನ ರಾಜಕೀಯ, ಮಾತಿನ ರಾಜಕೀಯವಾಯ್ತು, ಇದೀಗ ಮಂಡ್ಯ ಚುನಾವಣಾ ಅಖಾಡದಲ್ಲಿ ಚಪ್ಪಲಿ ಪಾಲಿಟಿಕ್ಸ್ ಆರಂಭವಾಗಿದೆ.

    ಹೌದು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತನ್ನ ಗನ್ ಮ್ಯಾನ್‍ರಿಂದ ಚಪ್ಪಲಿ ಹಾಕಿಸಿಕೊಂಡರೆ, ಇತ್ತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚಪ್ಪಲಿ ಹಾಕಲು ಬಂದವರನ್ನು ತಡೆದಿದ್ದಾರೆ. ಈ ಎರಡೂ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲೇನಿದೆ..?
    ಮನೆಯಿಂದ ಹೊರಬರುತ್ತಿದ್ದಂತೆಯೇ ಸುಮಲತಾ ತಮ್ಮ ಗನ್ ಮ್ಯಾನ್‍ಗೆ ಕೆಳಗೆ ಏನೋ ತೋರಿಸುವ ಮೂಲಕ ಸೂಚಿಸುತ್ತಾರೆ. ಆಗ ಗನ್ ಮ್ಯಾನ್ ಕೆಳಗೆ ಬಗ್ಗಿ ಸುಮಲತಾ ಕಾಲಿಗೆ ಚಪ್ಪಲಿ ತೊಡಿಸಿದ್ದಾರೆ. ಇತ್ತ ತನ್ನ ಕಾಲಿಗೆ ಚಪ್ಪಲಿ ತೊಡಿಸಲು ಬಂದ ಕಾರ್ಯಕರ್ತನನ್ನು ತಡೆದಿದ್ದಾರೆ.

    ಕಳೆದ ಮಾರ್ಚ್ 20ರಂದು ಸುಮಲತಾ ತಮ್ಮ ಬೆಂಬಲಿಗ ಸಚ್ಚಿದಾನಂದರ ಮನೆಗೆ ಹೋಗಿದ್ದಾರೆ. ಮಾತುಕತೆ ನಡೆಸಿ ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಸುಮಲತಾ ತನ್ನ ಗನ್ ಮ್ಯಾನ್ ಕೈಯಲ್ಲಿ ಚಪ್ಪಲಿ ತೊಡಿಸಿಕೊಂಡಿದ್ದಾರೆ. ಆದ್ರೆ ಚಪ್ಪಲಿ ತೊಡಿಸುವ ದೃಶ್ಯ ಸೆರೆಯಾಗಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಟ್ರೋಲ್ ಆಗುತ್ತಿದ್ದು, ಸುಮಲತಾ ಅವರು ಚಪ್ಪಲಿಯನ್ನೇ ತೆಗೆಸಿ ಹಾಕಿಸಿಕೊಂಡಿದ್ದಾರೆ. ಇದು ಎಷ್ಟರಮಟ್ಟಿಗೆ ಸ್ವಾಭಿಮಾನ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

    ಇನ್ನೊಂದೆಡೆ ಶನಿವಾರ ನಿಖಿಲ್ ಅವರು ಮದ್ದೂರು ಭಾಗದಲ್ಲಿ ಪ್ರಚಾರ ನಡೆಸಿದ ವೇಳೆ ನಡೆದುಕೊಂಡು ಬರುತ್ತಿದ್ದಾಗ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಹಾಕಲು ಬಂದಿದ್ದಾರೆ. ಆದ್ರೆ ನಿಖಿಲ್ ಅವರನ್ನು ತಡೆದು ತಾನೇ ಚಪ್ಪಲಿಕೊಂಡು ಅವರನ್ನು ಮುಟ್ಟಿ ಕೈ ಮುಗಿದಿದ್ದಾರೆ.

  • ಸಚಿವ ಡಿಕೆಶಿ ಆರೋಪಕ್ಕೆ ಬಿಜೆಪಿ ಅಭ್ಯರ್ಥಿ ಖಡಕ್ ತಿರುಗೇಟು

    ಸಚಿವ ಡಿಕೆಶಿ ಆರೋಪಕ್ಕೆ ಬಿಜೆಪಿ ಅಭ್ಯರ್ಥಿ ಖಡಕ್ ತಿರುಗೇಟು

    ಬಳ್ಳಾರಿ: ಜಿಲ್ಲೆಯ ಲೋಕ ರಣಕಣದಲ್ಲಿ ಕಾಂಗ್ರೆಸ್ ನಾಯಕರು, ಬಿಜೆಪಿ ಅಭ್ಯರ್ಥಿಯ ವಿರುದ್ಧ ಭಾಷಣ ಮಾಡುತ್ತಾ ತೇಜೋವಧೆ ಮಾಡುತ್ತಿದ್ದಾರೆ. ಆದ್ರೆ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಅನ್ನೋ ಮೂಲಕ ಬಿಜೆಪಿ ಅಭ್ಯರ್ಥಿ, ಕೈ ನಾಯಕರಿಗೆ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ.

    ಹೌದು. ಬಳ್ಳಾರಿ ಲೋಕಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆಗೂ ಮುನ್ನವೇ ಕಾಂಗ್ರೇಸ್-ಬಿಜೆಪಿ ಆರೋಪ ಪ್ರತ್ಯಾರೋಪ ಮಾಡೋ ಮೂಲಕ ತೇಜೋವಧೆಗೆ ನಿಂತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿದ್ದ ದೇವೇಂದ್ರಪ್ಪಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು, ಬಿಜೆಪಿ ಅಭ್ಯರ್ಥಿ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ದೇವೇಂದ್ರಪ್ಪಗೆ ಓದೋಕೆ ಬರಲ್ಲ, ಬರೆಯೋಕೆ ಬರಲ್ಲ, ಇನ್ನು ಸಂಸತ್‍ನಲ್ಲಿ ಅವರೇನೂ ಮಾತಾಡ್ತಾರೋ ಎಂದು ಸಚಿವ ಡಿಕೆ ಶಿವಕುಮಾರ್ ಆರೋಪ ಮಾಡಿದ್ದಾರೆ.

    ಇದಕ್ಕೆ ಬಿಜೆಪಿ ಹುರಿಯಾಳು ದೇವೇಂದ್ರಪ್ಪ ಸಹ ಸರಿಯಾಗೆಯೇ ತಿರುಗೇಟು ನೀಡಿದ್ದಾರೆ. ನಾನು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂದು ತಿಳಿದವನು. ರಾಜಕೀಯದಲ್ಲಿ ನಾನೇನೂ ದಡ್ಡನಲ್ಲ, ನಂಗೂ ಅನುಭವ ಇದೆ. ಅವರಿಂದ ನಾನೇನೂ ಕಲಿಯಬೇಕಾಗಿಲ್ಲ. ಮುಂದೆ ಜಿಲ್ಲೆಯಲ್ಲಿ ಹೊಸ ಅಧ್ಯಾಯವನ್ನೇ ಬರೆಯುವೆ ಎಂದು ಮಾತಲ್ಲೇ ಛಾಟಿ ಬೀಸಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಉತ್ತಮ ವಾಗ್ಮಿ, ದೇವೇಂದ್ರಪ್ಪಗೆ ಓದು, ಬರಹ ಬರಲ್ಲ ಎಂದು ಕೈ ನಾಯಕರು ಹೇಳುತ್ತಿದ್ರೆ, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಅನ್ನೋ ಮೂಲಕ ಬಿಜೆಪಿ ಅಭ್ಯರ್ಥಿ ಸಹ ತಿರುಗೇಟು ನೀಡುತ್ತಿದೆ. ಹೀಗಾಗಿ ಮತದಾರರು ಓದು ಬರಹ ಬಲ್ಲವರನ್ನ ಆಯ್ಕೆ ಮಾಡ್ತಾರೋ ಅಥವಾ ಮೇಟಿ ವಿದ್ಯೆ ಅನ್ನೋರನ್ನ ಕೈ ಹಿಡಿತಾರೋ ಅನ್ನೋದು ಕುತೂಹಲ ಮೂಡಿಸಿದೆ.