ಕೋಲಾರ: ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಮತಗಟ್ಟೆಯ ಬಾಗಿಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಕೋಲಾರದಲ್ಲಿ ನಡೆದಿದೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲೊಚರುವಪಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 94 ರಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗಿನ ಜಾವ ದುಷ್ಕರ್ಮಿಗಳು ಬಾಗಿಲಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಲೋಕಸಭೆಯ ಮೊದಲ ಹಂತದ ಮತದಾನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಒಟ್ಟು 14 ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಉಡುಪಿ- ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕೆ. ಎಚ್ ಮುನಿಯಪ್ಪ ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಎಸ್. ಮುನಿಸ್ವಾಮಿ ಚುನಾವಣಾ ಕಣದಲ್ಲಿದ್ದಾರೆ.
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿಯವರಿಗೆ ಹೃದಯದಲ್ಲಿ ಭಾವುಕತೆಯಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತಿತ್ತು ಎಂದು ಬಿಎಸ್ ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರತಿದಿನ ಕಣ್ಣೀರು ಹಾಕುತ್ತೇನೆ. ನಾನು ಭಾವುಕ ಜೀವಿ. ಕಣ್ಣಲ್ಲಿ ನೀರು ಸುಮ್ ಸುಮ್ಮನೆ ಬರುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ. ಮಾಜಿ ಮುಖ್ಯಮಂತ್ರಿಯವರ ಹೃದಯದಲ್ಲಿ ಭಾವುಕತೆ ಎಂಬುದು ಇದ್ದರೆ ಅವರಿಗೆ ಕಣ್ಣೀರಿನ ಅರ್ಥ ಗೊತ್ತಾಗುತಿತ್ತು ಎಂದು ಕಿಡಿಕಾರಿದ್ರು.
ನನಗೆ ಮಂಡ್ಯ ಕ್ಷೇತ್ರ ಮಾತ್ರ ಮುಖ್ಯವಲ್ಲ. ಮೊದಲ ಹಂತದ 14 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಮಂಡ್ಯ ಜಿಲ್ಲೆಯ ಜನ ನನ್ನನ್ನು ಸೊರಗಲು ಬಿಡುವುದಿಲ್ಲ. ಮಂಡ್ಯದ ರೈತರು ಇನ್ನೂ ಸತ್ತಿಲ್ಲ. ಅಲ್ಲಿನ ರೈತರು ನಮ್ಮ ಕೈಬಿಡಲ್ಲ. ರೈತರು ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಮಂಡ್ಯದ ಸ್ವಾಭಿಮಾನ ಏನು ಎಂದು ಸುಮಲತಾಗೆ ಗೊತ್ತೆ ಎಂದು ಪ್ರಶ್ನಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮೋದಿ ಪೊಳ್ಳು ಭಾಷಣ ಮಾಡುತ್ತಿದ್ದಾರೆ. ಅವರ ಭಾಷಣಕ್ಕೆ ಜನ ಮರುಳಾಗುವುದಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಅವರ ಮಗ ಅಭಿಷೇಕ್ ಇಬ್ಬರೂ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ತರುವುದು ಬೇಡ ಎಂದುಕೊಂಡಿದ್ದರು. ಆಗಿರುವ ಘಟನೆಯ ಬಗ್ಗೆ ಮತ್ತೆ ನೆನಪಿಸಿಕೊಳ್ಳುವುದು ಬೇಡ. ಬಿಜೆಪಿಯ ಯಾವುದೇ ಆಟಗಳು ಶಿವಮೊಗ್ಗ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಮಂಡ್ಯಕ್ಕೆ ನರೇಂದ್ರ ಮೋದಿಗಿಂತ ಹೆಚ್ಚಿನ ಪ್ರಚಾರ ಸಿಕ್ಕಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ರಾಷ್ಟ್ರ ಮಟ್ಟದ ನಾಯಕನನ್ನಾಗಿ ಮಾಡಿದ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ರು.
ಸಚಿವ ಡಿ.ಕೆ ಶಿವಕುಮಾರ್‍ಗೆ ಇಂದು ಕನಕಪುರದಲ್ಲಿ ಪ್ರಚಾರ ಮಾಡುವಂತೆ ಹೇಳಿದ್ದೇನೆ. ಹಾಗಾಗಿ ಇಂದು ಅವರು ಶಿವಮೊಗ್ಗಕ್ಕೆ ಬಂದಿಲ್ಲ. ನಾಡಿದ್ದಿನಿಂದ ಮೂರು ದಿನ ಡಿ.ಕೆ.ಶಿವಕುಮಾರ್ ಶಿವಮೊಗ್ಗದಲ್ಲಿ ಪ್ರಚಾರ ಮಾಡಲಿದ್ದಾರೆ. 23ರಿಂದ 25 ಸ್ಥಾನಗಳನ್ನು ಮೈತ್ರಿಕೂಟ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ನೆಮ್ನಾರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಿಮ್ಮಿಗೆ, ಗೂಳಿಮಕ್ಕಿ ಹಾಗೂ ಅಬ್ಬಿವರೆ ಗ್ರಾಮದ ಜನರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಗ್ರಾಮದ ಸೇತುವೆಯನ್ನು ನಕ್ಸಲ್ ಪ್ಯಾಕೇಜಿನಲ್ಲಿ ಸರ್ಕಾರ ಮಾಡುತಿತ್ತು. ಆದ್ರೆ ಕಾಮಗಾರಿ ನಡೆಯುತ್ತಿರುವಾಗ ಅರಣ್ಯ ಇಲಾಖೆಯವರು ಬಂದು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ಗ್ರಾಮದ ಮಕ್ಕಳು ಶಾಲೆಗೆ ತೆರಳಲು ಮಳೆಗಾಲದಲ್ಲಿ ಪರದಾಡುವ ಸ್ಥಿತಿ ಎದುರಾಗಲಿದೆ.
ಈ ಹಿನ್ನೆಲೆಯಲ್ಲಿ 3 ಗ್ರಾಮದ ಜನ ಈ ಬಾರಿಯ ಚುನಾವಣೆಗೆ ಬಹಿಷ್ಕಾರ ಹಾಕಿದ್ದಾರೆ. ನಮಗೆ ಸೇತುವೆ ನಿರ್ಮಾಣವಾಗುವವರೆಗೂ ಯಾವುದೇ ಕಾರಣಕ್ಕೂ ಮತಾದಾನ ಮಾಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ನಾವು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಹೀಗಾಗಿ ಯಾಕೆ ಮತದಾನ ಮಾಡಬೇಕು ಎಂದು ಗ್ರಾಮಸ್ಥರಾದ ವಿಜೇಂದ್ರ ಹಿಮ್ನಿಗೆ ಹಾಗೂ ಶಂಕ್ರಪ್ಪ ಗೌಡ ಹಿಮ್ನಿಗೆ ಆಕ್ರೋಶ ಹೊರಹಾಕಿದ್ದಾರೆ.
ಕಲಬುರಗಿ: ತೀವ್ರ ಕುತೂಹಲ ಕೆರಳಿಸಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಮತಗಳಿಸಲು ಪ್ಲಾನ್ ಮೇಲೆ ಪ್ಲಾನ್ ನಡೆಯುತ್ತಿದೆ. ಮೊನ್ನೆಯಷ್ಟೇ ವೀರಶೈವ ಲಿಂಗಾಯತ ಸಮಾವೇಶ ನಡೆಸಿದ ಕೈ ಪಡೆಗೆ ಶಾಕ್ ಎನ್ನುವಂತೆ ಬಿಜೆಪಿ ಮಂಗಳವಾರ ವೀರಶೈವ ಲಿಂಗಾಯತರ ಬೃಹತ್ ಸಮಾವೇಶ ನಡೆಸಿತು.
ನಗರದ ಎನ್‍ವಿ ಕಾಲೇಜು ಆವರಣದಲ್ಲಿ ನಡೆದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಇವತ್ತೇ ನಾನು ನನ್ನ ರಕ್ತದಲ್ಲಿ ಬರೆದು ಕೊಡುತ್ತೇನೆ ಉಮೇಶ್ ಜಾಧವ್ ಸೇರಿ 300 ಜನರು ಗೆದ್ದು ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡುತ್ತೇವೆ ಎಂದರು.
ಸಮಾವೇಶ ವೀರಶೈವ ಲಿಂಗಾಯತ ಮುಖಂಡರಾಗಿದ್ದರೂ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಕೇಂದ್ರ ಬಿಂದುವಾಗಿದ್ದರು. ಶಾಸಕ ಸ್ಥಾನಕ್ಕೆ ರಿಸೈನ್ ಮಾಡಿ ರಿಸ್ಕ್ ತಗೊಂಡಿದ್ದೇನೆ. ಕಾಂಗ್ರೆಸ್ ನಾಯಕರ ವರ್ತನೆಗೆ ನೊಂದು ಹೊರಬಂದಿದ್ದೇನೆ. ನೀವು ನನಗೆ ಆಶೀರ್ವಾದ ಮಾಡಿ ಎಂದು ಬೇಡಿಕೊಂಡ್ರು. ನಂತರ ಇಡೀ ಜನಸ್ತೋಮದ ಮುಂದೆ ವೇದಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ ಹಾಕಿದ್ರು. ಒಟ್ಟಾರೆ ಇಡೀ ಸಮಾವೇಶ ಖರ್ಗೆಗೆ ಟಾರ್ಗೆಟ್ ಮಾಡಿದ್ರೆ ಮತ್ತೊಂದೆಡೆ ಲಿಂಗಾಯತರ ಮತ ಸೆಳೆಯಲು ಸಹಾಯ ಮಾಡಿದಂತಿತ್ತು.
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಇನ್ನೂ ಸಕ್ರಿಯ ರಾಜಕಾರಣದಲ್ಲಿರುತ್ತಾರೆ. ಯಡಿಯೂರಪ್ಪ ರಾಜಕೀಯ ನಿವೃತ್ತಿಯ ಮಾತೇ ಇಲ್ಲ ಎಂದು ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಅವರು ಸುಮಾರು 30-35 ವರ್ಷಗಳಿಂದ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದಾರೆ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಬಡವರು-ದಲಿತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಪಕ್ಷ ಬೆಳೆಸಿದ್ದಾರೆ. ಹೀಗಾಗಿ ಅವರು ಇನ್ನೂ ಹತ್ತು- ಹದಿನೈದು ವರ್ಷ ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಮುಂದೆ ಸಾರ್ವಜನಿಕವಾಗಿ ಕಣ್ಣೀರು ಹಾಕೊಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿ ಸೋಮವಾರ ಸಾರ್ವಜನಿಕ ಸಭೆಯಲ್ಲಿ ಮತ್ತೆ ಕಣ್ಣೀರು ಹಾಕಿದ್ದಾರೆ. ಮಂಡ್ಯದಲ್ಲಿ ಎಷ್ಟು ಕೋಟಿ ಖರ್ಚು ಮಾಡಿದರೂ ಕುಮಾರಸ್ವಾಮಿ ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ಅವರ ಜಾಗದಲ್ಲಿ ಯಾರೇ ಇದ್ರೆ ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ಬಹುಶಃ ಕುಮಾರಸ್ವಾಮಿ ಅವರು ಪರ್ಮನೆಂಟಾಗಿ ಕಣ್ಣೀರು ಹಾಕೊಂಡು ಇರಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದ್ರು.
ಅಣ್ಣನ ನೋಟು- ಅಕ್ಕನಿಗೆ ವೋಟು ಎಂಬ ಸ್ಲೋಗನ್ ಈಗ ಮಂಡ್ಯದಲ್ಲಿ ವ್ಯಾಪಕವಾಗಿದೆ. ಬಿಜೆಪಿ ಅಧಿಕೃತವಾಗಿ ಬೆಂಬಲ ಸೂಚಿಸಿದೆ. ಆದರೆ, ಜೆಡಿಎಸ್- ಕಾಂಗ್ರೆಸ್ ನಾಯಕರು ಅನಧಿಕೃತವಾಗಿ ಬೆಂಬಲ ನೀಡುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಕುಮಾರಸ್ವಾಮಿ, ರೇವಣ್ಣ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಜಾತಿ, ಪಕ್ಷ, ಧರ್ಮ ಆಧಾರದಲ್ಲಿ ಐಟಿ ದಾಳಿ ಆಗಲ್ಲ. ಹಾಸನ, ಮಂಡ್ಯದಲ್ಲಿ ರೈಡ್ ಆದಾಗ ಆಡಳಿತ ಪಕ್ಷ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಖಚಿತವಾಗಿದೆ. ಆಗದ ಕೆಲಸಗಳಿಗೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಗುತ್ತಿಗೆದಾರರು, ಉದ್ಯಮಿಗಳು ಅವರ ಸಂಬಂಧಿಗಳಾಗಿದ್ರೆ ಅದು ಕಾಕತಾಳಿಯ ಅಷ್ಟೇ ಅಂದ್ರು.
ಬೆಂಗಳೂರು: ಲೋಕಸಭಾ ಚುನಾವಣಾ ದಿನದ ಆಸುಪಾಸಿನಲ್ಲಿ ಸಾಲು ಸಾಲು ರಜೆಗಳಿದ್ದು, ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿರುವ ಮತದಾರರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಮನವಿ ಮಾಡಿದ್ದಾರೆ.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾನ ಮಾಡುವುದು ನಮ್ಮೆಲ್ಲರ ಪ್ರಮುಖ ಹಕ್ಕು. ಹಾಗಾಗಿ ನಗರ ಪ್ರದೇಶಗಳ ಜನ ಮತಗಟ್ಟೆಗೆ ತೆರಳಿ ಮತ ಹಾಕಿ ಎಂದು ನಾನು ಮನವಿ ಮಾಡಿಕೊಂಡರು.
ನರೇಂದ್ರ ಮೋದಿಯವರು ಸ್ಥಿರವಾದ ಸರ್ಕಾರ ಕೊಟ್ಟಿದ್ದಾರೆ. ಹೀಗಾಗಿ ನಿಮ್ಮ ಮತಗಳನ್ನು ನರೇಂದ್ರ ಮೋದಿಗೆ ಹಾಕಿ. ಈ ಹಿಂದಿನ ಸರ್ಕಾರಗಳಲ್ಲಿ ಸ್ಥಿರತೆ ಇದ್ದರೂ ರಿಮೋಟ್ ಕಂಟ್ರೋಲ್ ಇರುತಿತ್ತು. ಆದ್ರೆ ಮೋದಿ ಸರ್ಕಾರದಲ್ಲಿ ರಿಮೋಟ್ ಕಂಟ್ರೋಲ್ ಇರಲಿಲ್ಲ. ಈ ಚುನಾವಣೆ ದೇಶದ ದೃಷ್ಟಿಯಿಂದಷ್ಟೇ ಅಲ್ಲ. ವಿಶ್ವದ ಗಮನ ಸೆಳೆದಿರುವ ಚುನಾವಣೆಯಾಗಿದೆ. ಜನಭರಿತ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು ಎಂದು ಹೇಳಿದರು.
ರಫೆಲ್ ವಿಚಾರದಲ್ಲಿ ಏನ್ ಆಯ್ತು? ಕಾಂಗ್ರೆಸ್ ಅಧ್ಯಕ್ಷರ ಅಪ್ರಬುದ್ಧ ನಡವಳಿಕೆಯಿಂದ ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 145 ವರ್ಷಗಳ ಇತಿಹಾಸ ಇರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಲೋಚನೆ ಮಾಡಿ ಪ್ರತಿಕ್ರಿಯೆ ಕೊಡಬೇಕು. ಆದ್ರೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರದ್ದು ಅಪ್ರಬುದ್ಧತೆ, ಅನ್ ಲಿಮಿಟೆಡ್ ಆಗಿದೆ. ಸುಪ್ರೀಂಕೋರ್ಟ್ ನಲ್ಲಿ ಏನ್ ಹೇಳ್ತಾರೆ ನೋಡೋಣ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಹವ್ಯಾಸಿ ಪ್ರಿಯ ಪ್ರಧಾನ ಮಂತ್ರಿಗಳು ಇರುತ್ತಾರೆ. ನರೇಂದ್ರ ಮೋದಿಗೆ ಹವ್ಯಾಸಗಳು ಇಲ್ಲ. ಅಲ್ಲದೇ ಅವರಿಗೆ ಮಕ್ಕಳು, ಮೊಮ್ಮಕ್ಕಳ ಬಗ್ಗೆ ಚಿಂತೆ ಇಲ್ಲ. ಅವರಿಗೆ ಸಹೋದರ ಇದ್ದರೂ ನಗಣ್ಯ. ಶಾಸ್ತ್ರಿಗಳ ನಂತರ ನಾನು ಹಲವಾರು ಪ್ರಧಾನಿಗಳನ್ನ ನೋಡಿದ್ದೇನೆ. 18 ಗಂಟೆಗಳ ಕಾಲ ಕೆಲಸ ಮಾಡುವ ಮೋಸ್ಟ್ ಹಾರ್ಡ್ ವರ್ಕಿಂಗ್ ಪಿಎಂ ನರೇಂದ್ರ ಮೋದಿ ಎಂದು ಕೊಂಡಾಡಿದರು.
ಮಂಡ್ಯ: ಹಣ ಇರುವ ಕಡೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡುತ್ತಾರೆ. ಹಣ ಎಲ್ಲಿದೆ ಎಂದು ಎಲ್ಲರಿಗೂ ಗೊತ್ತು. ಹೀಗಾಗಿ ಯಾಕೆ ಐಟಿ ದಾಳಿ ಆಗುತ್ತಿದೆ ಎಂದು ಕೂಡ ಗೊತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನಗರದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಜೊತೆ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿ, ಐಟಿ ದಾಳಿಗೂ ನನಗೂ ಸಂಬಂಧವಿಲ್ಲ. ಹೀಗಾಗಿ ನಾನು ಅದರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.
ಇದೇ ವೇಳೆ ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಹಣ ಇರುವ ಕಡೆ ಐಟಿ ದಾಳಿ ಆಗುತ್ತದೆ. ಹಣ ಎಲ್ಲಿದೆ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಯಾಕೆ ಐಟಿ ದಾಳಿ ಆಗುತ್ತಿದೆ ಅಂತಲೂ ಜನಕ್ಕೆ ಗೊತ್ತಿದೆ. ಈಗಾಗಲೇ ಅವರದ್ದೇ ಎರಡು ವಿಡಿಯೋ ಬಹಿರಂಗ ಆಗಿದೆ. ಜನರಿಗೆ ಇದರ ಬಗ್ಗೆ ಎಲ್ಲ ಗೊತ್ತಿದೆ ಎಂದು ತಿಳಿಸಿದ್ರು.
ಮಂಡ್ಯದ ವಕೀಲರ ಸಂಘದ ಕಚೇರಿಗೆ ಸುಮಲತಾ ಅಂಬರೀಷ್ ಭೇಟಿ ನೀಡಿ ಬೆಂಬಲ ಕೋರಿದ್ರು. ಈ ವೇಳೆ ಸುಮಲತಾಗೆ ಮೈಸೂರು ಪೇಟಾ ತೊಡಿಸಿ ವಕೀಲರು ಬೆಂಬಲ ಘೋಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಸಮಾವೇಶ ಇಟ್ಟುಕೊಂಡಿದ್ದೇವೆ. ಕಳೆದ ನಾಲ್ಕು ವಾರಗಳ ಅನಿಸಿಕೆಯನ್ನು ಜನರ ಜೊತೆ ಹಂಚಿಕೊಳ್ಳುತ್ತೇವೆ. ಈ ಸಮಾವೇಶ ನಮ್ಮ ಶಕ್ತಿ ಪ್ರದರ್ಶನ ಅಲ್ಲ ಎಂದು ಸ್ಪಷ್ಟಪಡಿಸಿದ್ರು.
ಬಿಜೆಪಿ ನಾಯಕರ ಜೊತೆ ಸುಮಲತಾ ಭೇಟಿ ವೀಡಿಯೋ ಬಗ್ಗೆ ಸಿ.ಎಸ್ ಪುಟ್ಟರಾಜು ಹೇಳಿಕೆಗೆ ತಿರುಗೇಟು ನೀಡಿದ ಸುಮಲತಾ, ಅವರು ಏನ್ ಬೇಕಾದ್ರೂ ಹೇಳುತ್ತಾರೆ. ಏನು ಬೇಕಾದ್ರೂ ಸೃಷ್ಟಿಸುತ್ತಾರೆ. ಏನು ಬೇಕಾದ್ರೂ ಮಾಡಿದ್ರೂ ಚಿಂತೆ ಇಲ್ಲ. ಜನ ಮೋಸ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಚಿವ ಸ್ಥಾನ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಅವರು ಹೀನಾಯ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ ಎಂದರು.
ಸುಮಲತಾ ಪ್ರಚಾರದ ವಾಹನದ ಹತ್ತಿರ ನಾಗಾಸಾಧುಗಳು ಕೂಡ ಇಂದು ಕಾಣಿಸಿಕೊಂಡರು. ಉತ್ತರ ಪ್ರದೇಶದ ವಾಹನದಲ್ಲಿ ಮಂಡ್ಯದ ಕಾಳಿಕಾಂಬ ದೇವಸ್ಥಾನ ಅಂಗಳದಲ್ಲಿ ನಾಗಸಾಧುಗಳು ಬಂದಿಳಿದಿದ್ದಾರೆ. ಪ್ರಚಾರದ ವಾಹನದ ಬಳಿ ವಾಹನ ನಿಲ್ಲಿಸಿ ಸುಮಲತಾ ಬೆಂಬಲಿಗರನ್ನು ಮಾತನಾಡಿಸಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಕೊಡುಗೆ ಏನು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಜಿಲ್ಲೆಯ ಜನರು ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಸಣ್ಣ ಯೋಜನೆಯನ್ನೂ ಜಿಲ್ಲೆಗೆ ತರಲು ನಳಿನ್ ಕುಮಾರ್ ಗೆ ಸಾಧ್ಯವಾಗಿಲ್ಲ. ಮೋದಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
ಹಿಂದೂ ಸಂಸ್ಕೃತಿ ಅರಿತುಕೊಂಡಿರುವ ಮಿಥುನ್ ರೈಗೆ ಈ ಬಾರಿ ಜಿಲ್ಲೆಯ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು. ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ವ್ಯಕ್ತಿ ಪೂಜೆ ಮಾಡಲ್ಲ, ಪಕ್ಷ ಪೂಜೆ ಮಾಡುತ್ತೇವೆ ಎಂದು ಬಿಜೆಪಿಯವರ ಮೋದಿ ಘೋಷಣೆಗೆ ಟಾಂಗ್ ನೀಡಿದ್ರು.
ಮೈತ್ರಿ ಪಕ್ಷಗಳ ಜಂಟಿ ಸ್ಪರ್ಧೆಯಿಂದಾಗಿ ಲಾಭ ಜಾಸ್ತಿ. ಕಾರ್ಯಕರ್ತರ ಬಹುದೊಡ್ಡ ಲಾಭ ನಮಗಿದೆ ಎಂದು ಸಮರ್ಥಿಸಿಕೊಂಡರು. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತನ್ನ ನಿಲುವಿಗೆ ಬದ್ಧನಿದ್ದು ರಾಜಕೀಯದಲ್ಲಿ ಧರ್ಮ ಇರಬಾರದು ಎಂದು ತಿಳಿಸಿದ್ರು.
ಮೈಸೂರು: ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಚುನಾವಣೆಗೆ ನಿಲ್ಲಲ್ಲ. ಬೇರೆ ಕಡೆ ನಿಲ್ಲೋದನ್ನ ಆಮೇಲೆ ನೋಡೋಣ. ಇನ್ನೂ ಚುನಾವಣೆಗೆ ನಾಲ್ಕು ವರ್ಷ ಇದೆ ಎಂದು ಹೇಳುವ ಮೂಲಕ ಮತ್ತೆ ಚುನಾವಣೆಗೆ ನಿಲ್ಲುವ ಸುಳಿವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.
ಭಾನುವಾರ ಇಲವಾಲದ ಸಮಾವೇಶದಲ್ಲಿ ನಾನು ಇನ್ನೂ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಹೇಳಿಕೆಗೆ ಸ್ಪಷ್ಟಪಡಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಋಣವನ್ನು ಸಾಕಷ್ಟು ತೀರಿಸಿದ್ದೇನೆ. ಹೀಗಾಗಿ ನಾನು ಮತ್ತೆ ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದು ಹೇಳಿದ್ದೆ ಅಂದ ಅವರು, ಮತ್ತೆ ಬೇರೆ ಕ್ಷೇತ್ರದಲ್ಲಿ ಚುನಾವಣೆ ನಿಲ್ಲುವ ಸೂಚನೆಯನ್ನು ನೀಡಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸೋತ್ರೆ, ಸರ್ಕಾರ ಉಳಿಯುತ್ತಾ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿ ಯೂಟರ್ನ್ ಹೊಡೆದ ಸಿದ್ದರಾಮಯ್ಯ, ಮೈತ್ರಿ ಪಕ್ಷ ಸೋತ್ರೆ ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸಬಹುದು ಎಂದು ಹೇಳಿದ್ದೇನೆ. ಅದನ್ನು ನೀವು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಬಿಜೆಪಿ ಸದಾ ಮೈತ್ರಿ ಸರ್ಕಾರ ಅಸ್ಥಿರಗೊಳಿಸೋ ಪ್ರಯತ್ನ ಮಾಡುತ್ತಿದೆ. ಯಡಿಯೂರಪ್ಪ ಮೊದಲಿಂದಲೂ ಹೇಳಿಕೊಂಡು ಬರುತ್ತಿದ್ದಾನೆ. ಸರ್ಕಾರ ಬಿಳಿಸೋಕೆ ಆಗಿದ್ಯಾ ಎಂದು ಪ್ರಶ್ನಿಸಿದ್ರು. ಯಡಿಯೂರಪ್ಪ ಒಬ್ಬ ಲೀಡರೇನ್ರಿ. ಬಿಜೆಪಿ ಒಂದು ಪಾರ್ಟಿನಾ, ಒಂದು ತತ್ವ ಸಿದ್ಧಾಂತ ಇಲ್ಲ. ಅವ್ರಿಗೆ ನೈತಿಕತೆ ಇದ್ಯಾ ಎಂದು ಸಿದ್ದರಾಮಯ್ಯ ಕೆಂಡಾಮಂಡಲರಾದ್ರು. ಇದನ್ನೂ ಓದಿ: ಮೂಡ್ ಅಂದ್ರೆ ಬೇರೆ ಕಣಪ್ಪ – ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ: ಸಿದ್ದು ಹಾಸ್ಯದ ಹೇಳಿಕೆ
ನಾನು, ಜಿ.ಟಿ.ದೇವೇಗೌಡ ಕ್ಷೇತ್ರ ಪ್ರವಾಸ ಮಾಡಿದ ಮೇಲೆ ವಾತಾವರಣ ಬದಲಾಗಿದೆ. ಜನ ಮೈತ್ರಿ ಅಭ್ಯರ್ಥಿ ಕಡೆ ಒಲವು ತೋರುತಿದ್ದಾರೆ. ನಮ್ಮ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಅವರು, ದೇವೇಗೌಡರ ರಾಜಕೀಯ ಸನ್ಯಾಸತ್ವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ರು. ಮೋದಿ, ದೇವೇಗೌಡರ ಬಗ್ಗೆ ಹೇಳಿದ್ರೆ ನನ್ನನ್ನ ಯಾಕೆ ಕೇಳ್ತೀರಾ. ಹೋಗಿ ದೇವೇಗೌಡರನ್ನೇ ಕೇಳಿ ಎಂದು ಸಿಡಿಮಿಡಿಗೊಂಡರು.
ಇದೇ ವೇಳೆ ಪರ್ಸೆಂಟೇಜ್ ಸರ್ಕಾರ ಎಂಬ ಮೋದಿ ಹೇಳಿಕೆಗೆ ಗರಂ ಆದ ಮಾಜಿ ಸಿಎಂ, ಒಬ್ಬ ಪ್ರಧಾನಿಯಾಗಿ ಇಂತಹ ಹೇಳಿಕೆಗಳನ್ನ ಕೊಡಬಾರದು. ಇದೊಂದು ಬೇಸ್‍ಲೆಸ್ ಆರೋಪವಾಗಿದೆ. ಮೋದಿ ಸರ್ಕಾರ ಶೇ.100 ರಷ್ಟು ಭ್ರಷ್ಟ ಸರ್ಕಾರ ಎಂದು ಆರೋಪ ಮಾಡುತ್ತೇನೆ. ಅದನ್ನು ನೀವು ಹಾಕ್ತೀರಾ ಎಂದು ಪ್ರಶ್ನಿಸಿದ್ರು.
ಒಬ್ಬ ಪ್ರಧಾನಿ ಈ ಮಟ್ಟಕ್ಕೆ ಇಳಿದು ಮಾತನಾಡಬಾರು. ಅವರ ಬಳಿ ಇಂಟೆಲಿಜೆನ್ಸ್ ಸೇರಿದಂತೆ ಹಲವು ಇಲಾಖೆಗಳಿವೆ. ಇಂತಹ ಆರೋಪ ಮಾಡುವ ಮುನ್ನ ಯೋಚನೆ ಮಾಡಬೇಕು. ಕಳೆದ ಐದು ವರ್ಷದಲ್ಲಿ ಎಮೋಷನಲ್ ವಿಚಾರ ಬಿಟ್ಟು ಬೇರೆ ಏನೂ ಮಾತಾಡಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡ್ ನಲ್ಲಿ ನಿಲ್ಲೋದಕ್ಕೆ, ಅಲ್ಲಿ ಮೈನಾರಿಟಿ ಇರುವುದರಿಂದ ಅಲ್ಲಿ ನಿಲ್ಲುತ್ತಿದ್ದಾರೆ ಎಂದು ಕಮೆಂಟ್ ಮಾಡ್ತಾರೆ. ಇದು ಕಮ್ಯೂನಲ್ ವಯಲೆನ್ಸ್ ಆಗಲ್ವ ಎಂದು ಕಿಡಿಕಾರಿದ್ರು.
ಐಟಿ ಕಚೇರಿ ಮುಂದೆ ಪ್ರತಿಭಟನೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನಗೂ ಐಟಿಯಿಂದ ನೋಟಿಸ್ ಬಂದಿದೆ. ಈಗಾಗಲೇ ಉತ್ತರ ಕೊಟ್ಟಿದ್ದೇನೆ. ನಾನು ಚುನಾವಣೆಯಲ್ಲಿ ಬ್ಯುಸಿ ಇದ್ದೇನೆ. ನಾನು ಉತ್ತರ ಕೊಡಲು 15 ದಿನ ಬೇಕು ಎಂದು ಪ್ರತಿಕ್ರಿಯಿಸಿದ್ದೇನೆ ಎಂದರು.
ಬೆಂಗಳೂರು: ಚುನಾವಣಾ ಪ್ರಚಾರದಲ್ಲಿ ಭಾಗಿಯಾದ್ರೆ ಒಂದಿಷ್ಟು ದುಡ್ಡು ಸಿಗುತ್ತದೆ ಎಂದು ಬಡ ಜನರು ಹೋಗ್ತಾರೆ. ಆದ್ರೆ ಬೆಂಗೂರು ಕೇಂದ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಹಣ ಕೊಡುತ್ತೇನೆ ಎಂದು ಚುನಾವಣಾ ಪ್ರಚಾರಕ್ಕೆ ಮಹಿಳೆಯರನ್ನ ಕರೆದೊಯ್ದು ಹಣ ಕೊಡದೇ ವಂಚನೆ ಮಾಡಿದ ಆರೋಪವೊಂದು ಕೇಳಿಬಂದಿದೆ.
ಹೌದು. ಲೋಕಸಭಾ ಚುನಾವಣೆಗೆ ಉಳಿದಿರುವುದು ಇನ್ನೂ ಕೇವಲ ನಾಲ್ಕು ದಿನ ಮಾತ್ರ. ಹೀಗಾಗಿ ಪ್ರಚಾರದ ಭರಾಟೆ ಎಲ್ಲೆಡೆ ಜೋರಾಗಿದೆ. ಜನ ಇಲ್ಲದಿದ್ದರೂ ಹಣ ಕೊಟ್ಟು ಜನರನ್ನು ಸೇರಿಸಿ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಬೆಂಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಕೂಡ ಹಣ ಕೊಡುತ್ತೇನೆ ಎಂದು ಮಹಿಳೆಯರನ್ನ ಪ್ರಚಾರಕ್ಕೆ ಕರೆದೊಯ್ದು ವಂಚನೆ ಮಾಡಿದ್ದಾರೆ ಎಂಬ ಆರೋಪಿಸಲಾಗುತ್ತಿದೆ.
ಕಳೆದ ಐದು ದಿನಗಳ ಹಿಂದೆ ಬೆಂಗಳೂರಿನ ಗೌರಿಪಾಳ್ಯದ ಮೂವತ್ತು ಜನ ಮಹಿಳೆಯರನ್ನ ಪ್ರಚಾರಕ್ಕೆ ಕರೆದುಕೊಂಡು ಹೋಗಿದ್ದ ಪ್ರಕಾಶ್ ರೈ, ಪ್ರಚಾರದ ಬಳಿಕ ದುಡ್ಡು ಕೇಳಿದ್ರೆ ಇವತ್ತು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಹೇಳಿ ಯಾಮಾರಿಸ್ತಿದ್ದಾರೆ ಅಂತ ಪ್ರಚಾರಕ್ಕೆ ಹೋಗಿದ್ದ ಮಹಿಳೆಯೊಬ್ಬರು ಆರೋಪ ಮಾಡುತ್ತಿದ್ದಾರೆ.
ಪ್ರಕಾಶ್ ರೈ ಕಚೇರಿಗೆ ಹೋಗಿ ವಿಚಾರಿಸಿದ್ರೆ ಅವರು ಕೂಡ ನಾಳೆ ಬನ್ನಿ, ನಾಡಿದ್ದು ಬನ್ನಿ. ನಿಮ್ಮ ಕರೆದುಕೊಂಡು ಬಂದಿದವರಿಗೆ ದುಡ್ಡು ಕೊಟ್ಟಿದ್ದೇನೆ ಎಂದು ಒಂದೊಂದು ರೀತಿಯಲ್ಲಿ ಮಾತಾಡುತ್ತಾರೆ ಎಂದು ಪ್ರಚಾರಕ್ಕೆ ಹೋಗದಿದ್ದ ಅರುಣ್ ಕುಮಾರ್ ಕಿಡಿಕಾರಿದ್ದಾರೆ.