Tag: loksabha elections2019

  • ಕಡಿಮೆ ಅವಧಿಯಲ್ಲೇ ಪ್ರಜಾಕೀಯ ಗಮನ ಸೆಳೆದಿದೆ- ಉಪೇಂದ್ರ

    ಕಡಿಮೆ ಅವಧಿಯಲ್ಲೇ ಪ್ರಜಾಕೀಯ ಗಮನ ಸೆಳೆದಿದೆ- ಉಪೇಂದ್ರ

    ಬೆಂಗಳೂರು: ಕಡಿಮೆ ಅವಧಿಯಲ್ಲಿಯೇ ಪ್ರಜಾಕೀಯ ಪಕ್ಷ ಜನರ ಗಮನ ಸೆಳೆದಿದೆ. ಪಕ್ಷದ ಫಲಿತಾಂಶ ಖುಷಿ ತಂದಿದೆ ಎಂದು ನಟ ಉಪೇಂದ್ರ ಹೇಳಿದ್ದಾರೆ.

    ನಗರದಲ್ಲಿ ಇಂದು ಬುದ್ಧಿವಂತ – 2 ಸಿನಿಮಾದ ಮುಹೂರ್ತ ಸಮಾರಂಭದ ವೇಳೆ ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದ ರಾಜಕಾರಣ ತೀವ್ರ ಕುತೂಹಲ ಕೆರಳಿಸಿತ್ತು. ನರೇಂದ್ರ ಮೋದಿ ಮತ್ತೆ ಗೆಲುವು ಸಾಧಿಸಿರೋದು ಖುಷಿ ತಂದಿದೆ. ಈ ಐದು ವರ್ಷದಲ್ಲಿ ಮೋದಿ ಮತ್ತಷ್ಟು ಸಾಧನೆ ಮಾಡುತ್ತಾರೆ ಎಂದು ನಾನೂ ಕಾಯುತ್ತಿದ್ದೇನೆ ಅಂದರು.

    ಸ್ಮಾರ್ಟ್ ಸಿಟಿಯಂತಹ ಯೋಜನೆಗಳು ದೀರ್ಘ ಕಾಲದ್ದು, ಈ ಐದು ವರ್ಷದಲ್ಲಿ ಮೋದಿ ಮತ್ತಷ್ಟು ಸಾಧಿಸುತ್ತಾರೆ ಎಂಬ ಭರವಸೆಯಿದೆ. ಪ್ರಜಾಕೀಯದ ಫಲಿತಾಂಶವೂ ಖುಷಿ ತಂದಿದೆ. ಕಡಿಮೆ ಅವಧಿಯಲ್ಲೆ ನಮ್ಮ ಪಕ್ಷ ಜನರ ಗಮನ ಸೆಳೆದಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಮುಂದುವರಿದು ಉತ್ತಮ ಕೆಲಸಗಳನ್ನು ಮಾಡಲಿ. ಸರ್ಕಾರ ಉರುಳುವುದು ಮತ್ತೆ ಎಲೆಕ್ಷನ್ ಆಗೋದು ಚೆನ್ನಾಗಿರೋದಿಲ್ಲ, ಜನ ಕೂಡ ಪ್ರಿಪೇರ್ ಆಗಿರುವುದಿಲ್ಲ ಎಂದು ತಿಳಿಸಿದರು.

    ಸುಮಲತಾಗೆ ಹಾರೈಕೆ:
    ಇದೇ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಮಾತನಾಡಿದ ಅವರು, ಸುಮಲತಾ ಅವರಿಗೆ ಧನ್ಯವಾದಗಳು. ಅವರು ಗೆದ್ದಿದ್ದೂ ಖುಷಿ ತಂದಿದೆ. ಅವರಲ್ಲಿ ಪ್ರಬುದ್ಧ ರಾಜಕಾರಣಿ ಆಗುವ ಎಲ್ಲಾ ಲಕ್ಷಣಗಳಿವೆ. ಅವರಿಗೆ ಮುಂದೆಯೂ ಒಳಿತಾಗಲಿ ಎಂದು ಉಪೇಂದ್ರ ಹಾರೈಸಿದರು.

  • ಉಗ್ರಪ್ಪಗೆ ಸೋಲು – ಬಳ್ಳಾರಿಯಲ್ಲಿ ಬಿಜೆಪಿಗೆ ಗೆಲುವು

    ಉಗ್ರಪ್ಪಗೆ ಸೋಲು – ಬಳ್ಳಾರಿಯಲ್ಲಿ ಬಿಜೆಪಿಗೆ ಗೆಲುವು

    ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಉಗ್ರಪ್ಪ ವಿರುದ್ಧ 54,304 ಮತಗಳ ಅಂತರದಲ್ಲಿ ಬಿಜೆಪಿಯ ದೇವೇಂದ್ರಪ್ಪ ಜಯಗಳಿಸುವ ಮೂಲಕ ಲೋಕಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಶಾಸಕರ ಕಚ್ಚಾಟವೇ ಉಗ್ರಪ್ಪ ಅವರಿಗೆ ಮುಳುವಾಗಿದೆ.

    ಫಲಿತಾಂಶದಲ್ಲಿ ದೇವೇಂದ್ರಪ್ಪ ಅವರು 6,14,214 ಮತಗಳನ್ನು ಪಡೆದರೆ, ಉಗ್ರಪ್ಪ ಅವರು 5,59,970 ಮತಗಳನ್ನು ಗಳಿಸಿದ್ದಾರೆ.

    ಯಾವ ಯಾವ ತಾಲೂಕಿನಲ್ಲಿ ಯಾರಿಗೆ ಎಷ್ಟು ಲೀಡ್?
    1) ಹೂವಿನಹಡಗಲಿ – ಶಾಸಕ, ಸಚಿವ ಪರಮೇಶ್ವರ ನಾಯ್ಕ್)
    ಬಿಜೆಪಿ- 71198
    ಕಾಂಗ್ರೆಸ್- 56853
    ಬಿಜೆಪಿ ಲೀಡ್ – 14345

    2) ಹಗರಿಬೊಮ್ಮನಹಳ್ಳಿ – ಕಾಂಗ್ರೆಸ್ ಶಾಸಕ, ಭೀಮಾನಾಯ್ಕ್
    ಬಿಜೆಪಿ- 90110
    ಕಾಂಗ್ರೆಸ್- 68523
    ಬಿಜೆಪಿ ಲೀಡ್ – 21587

    3) ಹೊಸಪೇಟೆ- ಕಾಂಗ್ರೆಸ್ ಶಾಸಕ, ಆನಂದಸಿಂಗ್
    ಬಿಜೆಪಿ- 87914
    ಕಾಂಗ್ರೆಸ್-69420
    ಬಿಜೆಪಿ ಲೀಡ್ – 18494

    4) ಕಂಪ್ಲಿ – ಕಾಂಗ್ರೆಸ್ ಶಾಸಕ, ಜೆ ಎನ್ ಗಣೇಶ
    ಬಿಜೆಪಿ- 71786
    ಕಾಂಗ್ರೆಸ್- 75217
    ಕಾಂಗ್ರೆಸ್ ಲೀಡ್ – 3431

    5) ಬಳ್ಳಾರಿ ಗ್ರಾಮೀಣ – ಕಾಂಗ್ರೆಸ್ ಶಾಸಕ, ನಾಗೇಂದ್ರ
    ಬಿಜೆಪಿ- 68734
    ಕಾಂಗ್ರೆಸ್- 82279
    ಕಾಂಗ್ರೆಸ್ ಲೀಡ್ – 13545

    6) ಬಳ್ಳಾರಿ ನಗರ – ಬಿಜೆಪಿ ಶಾಸಕ, ಸೋಮಶೇಖರರೆಡ್ಡಿ
    ಬಿಜೆಪಿ- 72238
    ಕಾಂಗ್ರೆಸ್- 76472
    ಕಾಂಗ್ರೆಸ್ ಲೀಡ್- 4234

    7) ಸಂಡೂರು – ಕಾಂಗ್ರೆಸ್ ಶಾಸಕ ಸಚಿವ, ಈ ತುಕಾರಾಂ
    ಬಿಜೆಪಿ – 74142
    ಕಾಂಗ್ರೆಸ್- 75479
    ಕಾಂಗ್ರೆಸ್ ಲೀಡ್ – 1353

    8) ಕೂಡ್ಲಿಗಿ – ಬಿಜೆಪಿ ಶಾಸಕ ಎನ್ ವೈ ಗೋಪಾಲಕೃಷ್ಣ
    ಬಿಜೆಪಿ – 77837
    ಕಾಂಗ್ರೆಸ್ – 55575
    ಬಿಜೆಪಿ ಲೀಡ್ – 22.262

    ಬಿಜೆಪಿಗೆ ಪ್ಲಸ್ ಆಗಿದ್ದೇನು?:
    ಮೋದಿ ಅಲೆಯಲ್ಲಿ ಚುನಾವಣೆ ಎದುರಿಸಿದ್ದು, ಶ್ರೀರಾಮುಲು ಕೂಡ ಬೆನ್ನಿಗೆ ನಿಂತಿದ್ದರು. ಮಾಜಿ ಡಿಸಿಎಂ ದಿವಂಗತ ಎಂ ಪಿ ಪ್ರಕಾಶ್ ಗರಡಿಯಲ್ಲಿ ಬೆಳೆದ ರಾಜಕಾರಣಿ ಅನ್ನೋ ಹೆಸರಿದೆ. ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಅನುಭವ ಇರುವುದು ಜೊತೆಗೆ ಒಮ್ಮೆ ಜಿಪಂ ಉಪಾಧ್ಯಕ್ಷ ಆಗಿರುವ ರಾಜಕೀಯ ಅನುಭವ ಇರೋದು ದೇವೇಂದ್ರಪ್ಪ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಅನುಕೂಲವಾಗಿದೆ.

    ಬಿಜೆಪಿಗೆ ಜಿಲ್ಲೆಯಲ್ಲಿ ಸರಿ ಸುಮಾರು 4 ಲಕ್ಷ ಮತಗಳ ವೋಟ್ ಬ್ಯಾಂಕ್ ಇದೆ. ಈ ಬಾರಿ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ರೆಡ್ಡಿ- ರಾಮುಲು ಟೀಂ, ಸಂಘ ಪರಿವಾರ, ಹಿಂದು ಸಂಘಟನೆಗಳು ದೇವೇಂದ್ರಪ್ಪ ಬೆನ್ನಿಗೆ ನಿಂತು ಚುನಾವಣೆಯಲ್ಲಿ ರಣತಂತ್ರ ರೂಪಿಸಿತ್ತು. ಅಲ್ಲದೇ ದೇವೇಂದ್ರಪ್ಪ ಅವರು ಸ್ಥಳೀಯ ಅಭ್ಯರ್ಥಿಯಾಗಿದ್ದು ಜೊತೆಗೆ ಜಾರಕಿಹೊಳಿ ಬೀಗರು ಅನ್ನೋದು ಬಹುದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು.

    ಕಾಂಗ್ರೆಸ್ ಸೋಲಿಗೆ ಕಾರಣವೇನು?:
    ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರಲ್ಲಿ ಒಮ್ಮತ ಮೂಡದೆ ಒಳಗೊಳಗೆ ಕುದಿಯುತ್ತಿರುವ ಅಸಮಾಧಾನದಿಂದ ಈ ಬಾರಿ ಕಾಂಗ್ರೆಸ್ ಗೆ ಸೋಲುಂಟಾಗಿದೆ. ಉಗ್ರಪ್ಪ ಕೇವಲ ಎಸ್ ಟಿ ನಾಯಕರಾಗಿದ್ದು, ಜನಾಂಗಕ್ಕೆ ಅತೀ ಹೆಚ್ಚು ಆದ್ಯತೆ ನೀಡುತ್ತಾರೆ ಅನ್ನೋದು ಹಾಗೂ ಸಚಿವ ಡಿಕೆ ಶಿವಕುಮಾರ್ ಈ ಬಾರಿಯ ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸದಿರುವುದು ಕೂಡ ಪಕ್ಷಕ್ಕೆ ಮೈನಸ್ ಆಗಿದೆ.

    ಉಗ್ರಪ್ಪ ಅಧಿಕಾರಕ್ಕೆ ಬಂದರೆ ಅಧಿಕಾರಿಗಳಿಗೆ ಬೈತಾರೆ ಅನ್ನೋ ಮಾತುಗಳು ಅಧಿಕಾರಿ ವಲಯದಲ್ಲಿ ಕೇಳಿಬಂದಿತ್ತು. ಉಪಚುನಾವಣೆಯಲ್ಲಿ ಗೆದ್ದ ನಂತರ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಅವರು ಸ್ಥಳೀಯರಾಗಿರಲಿಲ್ಲ. ಅಲ್ಲದೆ ಸ್ಥಳೀಯರೊಂದಿಗೆ ಜಾಸ್ತಿ ಬೆರೆಯದಿರುವುದು ಕೂಡ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಇಷ್ಟೇ ಅಲ್ಲದೆ ಸಂಸದರಾದ ನಂತರ ಸ್ಥಳೀಯ ನಾಯಕರೊಂದಿಗೆ ಮುನಿಸು ಕಟ್ಟಿಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.

    ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ 17,51,297 ಒಟ್ಟು ಮತದಾರರಿದ್ದು, 12,18,767 ಮತಗಳು ಚಲಾವಣೆಯಾಗಿತ್ತು. ಕ್ಷೇತ್ರದಲ್ಲಿ 11 ಮಂದಿ ಅಭ್ಯರ್ಥಿಗಳಿದ್ದು, ಕಾಂಗ್ರೆಸ್ ನಿಂದ ಉಗ್ರಪ್ಪ ಹಾಗೂ ಬಿಜೆಪಿಯಿಂದ ವೈ ದೇವೇಂದ್ರಪ್ಪ ಸ್ಪರ್ಧಿಸಿದ್ದರು.

  • ಈ ಬಾರಿಯೂ ನಾನೇ ಗೆಲ್ಲುತ್ತೇನೆ- ವೀರಪ್ಪ ಮೊಯ್ಲಿ

    ಈ ಬಾರಿಯೂ ನಾನೇ ಗೆಲ್ಲುತ್ತೇನೆ- ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ನಾನೇ ಗೆಲ್ಲುವುದು ಎಂದು ಮೈತ್ರಿ ಅಭ್ಯರ್ಥಿ ಡಾ.ಎಂ ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚಿಕ್ಕಬಳ್ಳಾಪುರ ಹೊರವಲಯದ ನಾಗಾರ್ಜುನ ಕಾಲೇಜು ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಾರಿಯೂ ನಾನೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಎಕ್ಸಿಟ್ ಪೋಲ್ ಬಗ್ಗೆ ನನಗೆ ನಂಬಿಕೆಯಿಲ್ಲ. ಮಧ್ಯಾಹ್ನದ ಒಳಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ.

    ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಗುರುವಾರ ಅಂತ್ಯವಾಗಲಿದೆ. ಸುಮಾರು ಎರಡು ತಿಂಗಳ ಮಹಾಭಾರತ ಕುರುಕ್ಷೇತ್ರದ ಫಲಿತಾಂಶ ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ. ಚಿಕ್ಕಬಳ್ಳಾಪುರ ಹೊರವಲಯದ ನಾಗಾರ್ಜುನ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮೊಯ್ಲಿ ಆಗಮಿಸಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ ಹಾಲಿ ಸಂಸದ ಎಂ. ವೀರಪ್ಪ ಮೊಯ್ಲಿ ಹಾಗೂ ಕಳೆದ ಬಾರಿ ಸ್ಪರ್ಧೆ ಮಾಡಿ ಸೋಲುಂಡಿದ್ದ ಬಿಜೆಪಿಯ ಬಿ.ಎನ್ ಬಚ್ಚೇಗೌಡ ಹಾಗೂ ಬಿಎಸ್‍ಪಿ ಪಕ್ಷದಿಂದ ಡಾ. ಸಿಎಸ್ ದ್ವಾರಕನಾಥ್ ಸ್ಪರ್ಧೆ ಮಾಡಿದ್ದಾರೆ.

  • ಬೆಂಗ್ಳೂರಲ್ಲಿ ಸ್ಟ್ರಾಂಗ್ ರೂಂಗಳಿಗೆ ಬಿಗಿಭದ್ರತೆ

    ಬೆಂಗ್ಳೂರಲ್ಲಿ ಸ್ಟ್ರಾಂಗ್ ರೂಂಗಳಿಗೆ ಬಿಗಿಭದ್ರತೆ

    ಬೆಂಗಳೂರು: ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಇವಿಎಂ ಹ್ಯಾಕ್ ಸುದ್ದಿ ಪಸರಿಸಿರೋ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತಪೆಟ್ಟಿಗೆ ಇರುವ ಕೇಂದ್ರಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

    ಕೇಂದ್ರ ವಿಭಾಗದ ಮತಪೆಟ್ಟಿಗೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ, ದಕ್ಷಿಣ ವಿಭಾಗದ ಜಯನಗರ ಎನ್‍ಎಂಕೆಆರ್ ವಿ ಕಾಲೇಜಿನಲ್ಲಿ ಕಡೆಯದಾಗಿ ಉತ್ತರ ವಿಭಾಗದ ಮತಪೆಟ್ಟಿಗೆ ಮಹಾರಾಣಿ ಕಾಲೇಜಿನಲ್ಲಿ ಭದ್ರವಾಗಿದೆ. ಈ ಮತಪೆಟ್ಟಿಗೆ ಸ್ಟ್ರಾಂಗ್ ರೂಂ ಒಳಗೆ ಓಡಾಡಲು ನಿಯೋಜಿತ ಸಿಬ್ಬಂದಿ, ಗುರುತಿನ ಚೀಟಿ ಇರುವ ಅಭ್ಯರ್ಥಿ, ಅಭ್ಯರ್ಥಿಯ ಏಜೆಂಟ್‍ಗೆ ಮಾತ್ರ ಪ್ರವೇಶವಿದೆ. ಉಳಿದಂತೆ ಯಾರಿಗೂ ಸಹ ಒಳಗೆ ಪ್ರವೇಶಿಸಲು ಅವಕಾಶ ಇಲ್ಲ ಎಂದು ಆಯೋಗ ಸೂಚನೆ ನೀಡಿದೆ.

    ಬೆಂಗಳೂರಿನ ಲೋಕಸಭಾ ಚುನಾವಣೆಯ ಮತಪೆಟ್ಟಿಗೆ ಭದ್ರವಾಗಿರಿಸಲು ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ತೆಗೆದುಕೊಂಡಿದೆ. ಇವಿಎಂ ಮಿಷನ್ ಇರುವ ಕೊಠಡಿ ಕರೆಂಟ್ ಕನೆಕ್ಷನ್ ಕಟ್ ಮಾಡಲಾಗಿದೆ. ಶಾರ್ಟ್ ಸಕ್ರ್ಯೂಟ್, ವಿದ್ಯುತ್ ಸಂಬಂಧಿತ ಸಮಸ್ಯೆ ಆಗದಿರಲು ಈ ಕ್ರಮ ಕೈಗೊಳ್ಳಲಾಗಿದೆ. ಕೊಠಡಿ ಬಾಗಿಲು ಮೇ23 ಕ್ಕೆ ಚುನಾವಣಾ ಆಯೋಗ ನೇಮಕ ಮಾಡಿರುವ ಮೇಲ್ವಿಚಾರಕರ ಸಮ್ಮುಖದಲ್ಲೇ ತೆರೆಯಲಾಗುತ್ತದೆ. ಯಾವುದೇ ಆರೋಪ ಬರಬಾರದೆಂದು ರೂಂ ಕಿಟಕಿ, ಬಾಗಿಲು ಸೀಲ್ ಹಾಕಲಾಗಿದ್ದು, ರೂಂನ ಹೊರಭಾಗ ಸಿಸಿಟಿವಿ ಕಡ್ಡಾಯ ಮಾಡಲಾಗಿದೆ.

    ಸ್ಟ್ರಾಂಗ್ ರೂಂಗೆ ಸರ್ಪಗಾವಲು:
    ಇಡೀ ಕಟ್ಟಡದ ಮೂರು ಸುತ್ತಿನಲ್ಲೂ ಸೆಂಟ್ರಲ್ ಪ್ಯಾರಮಿಲಿಟರಿ ಫೋರ್ಸ್ ಸೆಕ್ಯೂರಿಟಿಯಿಂದ ಭದ್ರತೆ ಒದಗಿಸಲಾಗಿದೆ. ರಾಜ್ಯ ಪೊಲೀಸರಿಂದ ಕಟ್ಟಡ ಹೊರಭಾಗದಲ್ಲಿ, ಜಿಲ್ಲಾ ಪೊಲೀಸರಿಂದ ಕಟ್ಟಡ ಹೊರಗೆ ಭದ್ರತೆ ಒದಗಿಸಲಾಗಿದ್ದು ಇಡೀ ಕಟ್ಟಡ ಸಿಸಿಟಿವಿ ಕಣ್ಗಾವಲಿನಲ್ಲಿರಲಿದೆ. ಸ್ಟ್ರಾಂಗ್ ಒಂದಕ್ಕೆ ಕನಿಷ್ಠ 300 ಜನ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಭ್ಯರ್ಥಿಗಳ ಏಜೆಂಟ್ ಗಳು ಬೇಕಾದ್ರೂ ಸ್ಟ್ರಾಂಗ್ ರೂಂ ಕಾವಲು ಕಾಯಬಹುದು ಎಂದು ಆಯೋಗ ತಿಳಿಸಿದೆ.

  • ಸಮೀಕ್ಷೆ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗಿದೆ- ಪರಮೇಶ್ವರ್

    ಸಮೀಕ್ಷೆ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗಿದೆ- ಪರಮೇಶ್ವರ್

    – ಎಕ್ಸಿಟ್ ಪೋಲ್‍ನಲ್ಲಿ ವಿಶ್ವಾಸವಿಲ್ಲ

    ಬೆಂಗಳೂರು: ಚುನಾವಣೋತ್ತರ ಸಮೀಕ್ಷೆ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗೆ ಇದೆ. ವಾಸ್ತವ ಸ್ಥಿತಿ ದೇಶದಲ್ಲಿ ಬೇರೆ ರೀತಿಯಲ್ಲಿ ಇದೆ. ಇಂತಹ ಸಂದರ್ಭದಲ್ಲಿ 300 ಸ್ಥಾನಗಳು ಬರುತ್ತದೆ ಎಂದು ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುತ್ತಿದೆ. ಫಲಿತಾಂಶ ಬಂದ ಬಳಿಕ ಸ್ಪಷ್ಟವಾದ ಚಿತ್ರಣ ಗೊತ್ತಾಗುತ್ತದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಯುಪಿಎ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಇವೆ. ಭಾನುವಾರ ದೆಹಲಿ ಸಭೆಯಲ್ಲೂ ಚರ್ಚೆ ಮಾಡಿದ್ದೇವೆ. ಅಲ್ಲಿ ಸಿಕ್ಕ ಮಾಹಿತಿ ಪ್ರಕಾರ ಯುಪಿಎ ಮತ್ತೆ ಅಧಿಕಾರಕ್ಕೆ ಬರುತ್ತದೆ. ಕರ್ನಾಟಕದಲ್ಲಿ 18 ಸೀಟು ಬಿಜೆಪಿಗೆ ಬರುತ್ತದೆ ಅಂದರೆ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು.

    ನನಗೆ ಎಕ್ಸಿಟ್ ಪೋಲ್‍ನಲ್ಲಿ ವಿಶ್ವಾಸ ಇಲ್ಲ. ಗ್ರೌಂಡ್ ರಿಯಾಲಿಟಿ ಬೇರೆ ರೀತಿಯಲ್ಲಿದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ 20 ಕ್ಷೇತ್ರದಲ್ಲಿ ಗೆಲ್ಲಲಿದ್ದೇವೆ. ಇದು ನಮ್ಮ ಲೆಕ್ಕಾಚಾರ, ವಾತಾವರಣ ಕೂಡ ಹಾಗೆ ಇದೆ. ಚುನಾವಣಾ ಪ್ರಚಾರ ಆಧರಿಸಿ ನಾವು ಹೇಳುತ್ತಿದ್ದೇವೆ. ಇಂತಹ ಸಂದರ್ಭಗಳಲ್ಲಿ 18 ಸೀಟು ಬಿಜೆಪಿಗೆ ಬರುತ್ತದೆ ಎನ್ನುವುದರಲ್ಲಿ ಅರ್ಥ ಏನಿದೆ ಎಂದರು.

    ಸಮೀಕ್ಷೆಯಂತೆ ಫಲಿತಾಂಶ ಬಂದರೆ ದೋಸ್ತಿಗಳ ಮೇಲೆ ಪರಿಣಾಮ ಬೀರಲ್ಲ. ಫಲಿತಾಂಶ ಹಾಗೆ ಆಗೋದಕ್ಕೆ ಸಾಧ್ಯವಿಲ್ಲ ಅಂದ ಮೇಲೆ ನಾನು ಯಾವುದೇ ಊಹೆ ಮಾಡುವುದಕ್ಕೆ ಹೋಗುವುದಿಲ್ಲ. ರಾಜಕಾರಣ ಹೇಗಿರುತ್ತದೆ ಅಂದರೆ ಪರಿಸ್ಥಿತಿ ಫಲಿತಾಂಶ ಬಂದರೆ ಯಾವ್ಯಾವ ಲೆಕ್ಕಾಚಾರ ಯಾರು ಹಾಕಿದ್ದಾರೆ ನೋಡಬೇಕು. ಆದರೆ ಸರ್ಕಾರವಂತೂ ಸುಭದ್ರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇವಿಎಂ ಹ್ಯಾಕ್ ಬಗ್ಗೆ ಇಡೀ ದೇಶದಲ್ಲಿ ಮಾತುಗಳಿವೆ. ಕಳೆದ ಬಾರಿ ಕೂಡ ಅದನ್ನು ಮಾತನಾಡಿದ್ದೆವು. ಕಾಂಗ್ರೆಸ್ ನೇತೃತ್ವದಲ್ಲಿ ಅನೇಕ ಪಕ್ಷಗಳು ರಾಷ್ಟ್ರಪತಿ ಹಾಗೂ ಎಲೆಕ್ಷನ್ ಕಮೀಷನ್ ಭೇಟಿ ಮಾಡಿದೆವು. ಬ್ಯಾಲೆಟ್ ಪೇಪರ್ ಬೇಕು ಎಂದು ಹೇಳಿದ್ವಿ. ಅದನ್ನು ಕೂಡ ಅವರು ತಳ್ಳಿ ಹಾಕಿದ್ದಾರೆ. ಬಹಳಷ್ಟು ಜನ ಇವಿಎಂ ಹ್ಯಾಕ್ ಆಗೋದನ್ನು ತೋರಿಸಿಕೊಟ್ಟಿದ್ದಾರೆ. ನಮಗೂ ಕೂಡ ಅದೇ ರೀತಿಯ ಅನುಮಾನಗಳಿವೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನೋಡಿದರೆ ಯಾವ ರೀತಿ ಆಗುತ್ತದೆ ಎಂದು ಹೇಳಳು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

  • ಮಕ್ಕಳೊಂದಿಗೆ ಬಂದು ಬಿಜೆಪಿ ನಾಯಕನನ್ನು ಕೊಂದ ಕಾಂಗ್ರೆಸ್ಸಿಗ!

    ಮಕ್ಕಳೊಂದಿಗೆ ಬಂದು ಬಿಜೆಪಿ ನಾಯಕನನ್ನು ಕೊಂದ ಕಾಂಗ್ರೆಸ್ಸಿಗ!

    ಭೋಪಾಲ್: ಕಾಂಗ್ರೆಸ್ ನಾಯಕನೊಬ್ಬ 60 ವರ್ಷದ ಬಿಜೆಪಿ ನಾಯಕನನ್ನು ಬರ್ಬರವಾಗಿ ಹತ್ಯೆಗೈದ ಅಮಾನವೀಯ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಪಲಿಯಾ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ಸಂಜೆ 5.30ರ ಸುಮಾರಿಗೆ ನಡೆದಿದ್ದು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದೋರ್ ನಲ್ಲಿ ಮತದಾನ ಕೊನೆಯಾಗುತ್ತಿದ್ದಂತೆಯೇ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಿಜೆಪಿ ನಾಯಕ ನೇಮಿಚಂದ್ ತನ್ವಾರ್‍ನನ್ನು ಕಾಂಗ್ರೆಸ್ ನಾಯಕ ಅರುಣ್ ಶರ್ಮಾ ಆತನ ಮನೆಯ ಹೊರಗಡೆಯೇ ಪಿಸ್ತೂಲ್ ನಿಂದ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಇದೇ ಸಮಯದಲ್ಲಿ ಆರೋಪಿ ಅರುಣ್ ಶರ್ಮಾನ ಇಬ್ಬರು ಗಂಡು ಮಕ್ಕಳು ಕೂಡ ಜೊತೆಗಿದ್ದರು ತನ್ವಾರ ಪತ್ನಿ ಆರೋಪಿಸಿದ್ದಾರೆ.

    ಈ ಮಧ್ಯೆ ರಾಜಕೀಯ ದ್ವೇಷದಿಂದಲೇ ಬಿಜೆಪಿ ನಾಯಕನನ್ನು ಕೊಲೆ ಮಾಡಲಾಗಿದೆ. ತನ್ವರ್ ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದನು ಎಂದು ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ರಾಕೇಶ್ ಸಿಂಗ್ ಹೇಳಿದ್ದಾರೆ.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದಕ್ಕೆ ಭಾನುವಾರ ಮಧ್ಯಾಹ್ನದ ಬಳಿಕ ತನ್ವರ್ ಹಾಗೂ ಆತನ ಮಕ್ಕಳಿಗೆ ಬೆದರಿಕೆ ಹಾಕಲಾಗಿತ್ತು. ಇದರಿಂದ ತಾವು ಮುಂದೆ ಕೆಟ್ಟ ಪರಿಣಾಮ ಎದರಿಸಬೇಕಾಗುತ್ತದೆ ಎಂದು ತನ್ವರ್ ತಿಳಿಸಿದ್ದರು ಎಂದು ಸಿಂಗ್ ಹೇಳಿದರು.

    ಪ್ರಕರಣ ಸಂಬಂಧ ಆರೋಪಿ ಕಾಂಗ್ರೆಸ್ ನಾಯಕನನ್ನು ಕೂಡಲೇ ಬಂಧಿಸಲಾಗುವುದು ಅಲ್ಲದೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಗ್ ಭರವಸೆ ನೀಡಿದ್ದಾರೆ.

     

  • ಎಕ್ಸಿಟ್ ಪೋಲ್ ಬೆನ್ನಲ್ಲೇ ದೋಸ್ತಿ ಕೂಟದಲ್ಲಿ ಆತಂಕ!

    ಎಕ್ಸಿಟ್ ಪೋಲ್ ಬೆನ್ನಲ್ಲೇ ದೋಸ್ತಿ ಕೂಟದಲ್ಲಿ ಆತಂಕ!

    ಬೆಂಗಳೂರು: ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಭಾನುವಾರ ಸಂಜೆ ಹೊರಬಿದ್ದಿದ್ದು, ಸರಿ ಸುಮಾರು ಎಲ್ಲಾ ಸಮೀಕ್ಷೆಗಳೂ ಬಿಜೆಪಿಯೇ ಬಹುಮತ ಸಾಧಿಸುವುದಾಗಿ ತಿಳಿಸಿವೆ. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್‍ನಲ್ಲಿ ಅಸಮಾಧಾನ ಮತ್ತಷ್ಟು ಭುಗಿಲೆದ್ದಿದೆ ಎನ್ನಲಾಗಿದೆ.

    ಸಮೀಕ್ಷೆಯಿಂದಾಗಿ ಇಬ್ಬರು ಸೇರಿಕೊಂಡು ಮೈತ್ರಿ ಮಾಡಿದರೆ ಹೆಚ್ಚು ಲೋಕಸಭಾ ಸೀಟು ಗೆಲ್ಲಬಹುದೆಂಬ ಲೆಕ್ಕಾಚಾರ ಸುಳ್ಳಾಗುತ್ತಾ ಅನ್ನೋ ಆತಂಕ ಕಾಂಗ್ರೆಸ್ ನಾಯಕರಲ್ಲಿ ಶುರುವಾಗಿದೆ. ಇರೋ ಸೀಟನ್ನೇ ಉಳಿಸಿಕೊಳ್ಳುವುದು ಕಷ್ಟವಾದರೆ ಇಂತಹ ಮೈತ್ರಿ ಯಾಕೆ ಬೇಕು. ಹತ್ತು ಸೀಟೂ ಜಯಿಸೋಕೆ ಆಗಲ್ಲ ಅಂದರೆ ಈ ಮೈತ್ರಿಯ ಅನಿವಾರ್ಯತೆ ಏನು ಎಂಬ ಪ್ರಶ್ನೆಗಳು ಕಾಂಗ್ರೆಸ್ ನಾಯಕರಲ್ಲಿ ಮೂಡಿದ್ದು, ಈ ಹಿನ್ನೆಲೆಯಲ್ಲಿ `ಮೈತ್ರಿ ಮುರಿಯೋಣ, ಪಕ್ಷ ಉಳಿಸೋಣ’ ಎಂಬ ಕಾಂಗ್ರೆಸ್ ನಾಯಕರ ಅಭಿಯಾನ ಚುರುಕುಗೊಳ್ಳಲಿದೆ ಎಂಬುದಾಗಿ ತಿಳಿದುಬಂದಿದೆ.

    ಮೈತ್ರಿಯಿಂದಾದ ನಷ್ಟದ ಲೆಕ್ಕ ಇಡಲು ಮುಂದಾದ ರಾಜ್ಯ ನಾಯಕರು!
    1. ಜೆಡಿಎಸ್‍ಗೆ ಬಿಟ್ಟುಕೊಟ್ಟ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು. ಈಗ ಅಲ್ಲೇ ಕಾಂಗ್ರೆಸ್ ಅಸ್ತಿತ್ವದ ಪ್ರಶ್ನೆ ಎದ್ದಿದೆ.
    2. ಮಂಡ್ಯ, ಹಾಸನದಲ್ಲಿ ಜೆಡಿಎಸ್‍ಗೆ ಕಾಂಗ್ರೆಸ್ ಎದುರಾಳಿ ಆಗಿತ್ತು. ಆ ಸ್ಥಾನ ಈಗ ಬಿಜೆಪಿ ಪಾಲಾಗಿದೆ.
    3. ತುಮಕೂರಲ್ಲಿ ಕಾಂಗ್ರೆಸ್ ಗೆಲ್ಲುವ ಕ್ಷೇತ್ರ, ಆದರೆ ಜೆಡಿಎಸ್‍ಗೆ ಬಿಟ್ಟು ಕೊಟ್ಟು ಕಾಂಗ್ರೆಸ್ ಕಣ್ಮರೆ ಆಗಿದೆ.
    4. ಮಂಡ್ಯದಲ್ಲಿ ಸುಮಲತಾ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರೆ ನಮ್ಮದೇ ಗೆಲುವಾಗುತ್ತಿತ್ತು. ಆದರೆ ಮೈತ್ರಿಯಿಂದಾಗಿ ಕಾಂಗ್ರೆಸ್ ಮುಖಂಡರೇ ಮೈತ್ರಿ ಅಭ್ಯರ್ಥಿ ವಿರುದ್ಧ ತಿರುಗಿ ಬೀಳುವಂತಾಯ್ತು.
    5. ಮೈಸೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲದಂತೆ ಬಿಜೆಪಿ ಜೊತೆಗೆ ಜೆಡಿಎಸ್ ಒಪ್ಪಂದ ಮಾಡಿಕೊಂಡಿತ್ತು.
    6. ಕೋಲಾರ, ಚಿಕ್ಕಬಳ್ಳಾಪುರದಲ್ಲೂ ನಮ್ಮ ಅಭ್ಯರ್ಥಿಯ ಬೆನ್ನಿಗೆ ಜೆಡಿಎಸ್ ಚೂರಿ ಹಾಕಿದೆ.
    7. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದರೆ ಕನಿಷ್ಠ 12 ಸ್ಥಾನವನ್ನಾದರೂ ಸುಲಭವಾಗಿ ಗೆಲ್ಲಬಹುದಿತ್ತು.
    8. ಮೈತ್ರಿ ಧರ್ಮ ಪಾಲಿಸುವ ಅನಿವಾರ್ಯತೆಯಲ್ಲಿ ಕೈಯಲ್ಲಿದ್ದಿದ್ದನ್ನೂ ಕಳೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.
    9. ಹೀಗೆ ಆದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಅಸ್ತಿತ್ವನೇ ಹೊರಟು ಹೋಗುತ್ತದೆ.

    ಒಟ್ಟಿನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ಮೈತ್ರಿ ಮುರಿದುಕೊಳ್ಳುವುದು ಒಳ್ಳೆಯದು. ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್‍ಗೆ ಹೀನಾಯ ಸೋಲಾದರೆ ಮೈತ್ರಿ ಖತಂ ಆಗಲಿದ್ದು, ಮೇ 23ರ ಫಲಿತಾಂಶ ಬಳಿಕ `ಮೈತ್ರಿ ಹಠಾವೋ, ಕಾಂಗ್ರೆಸ್ ಬಚಾವೋ’ ಅಭಿಯಾನ ಜೋರಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

  • ರಾಜ್ಯದಲ್ಲಿ ಮೊಳಗಲಿದೆ ಕೇಸರಿ ಕಹಳೆ – ಮಂಡ್ಯದಲ್ಲಿ ಯಾರು `ಎಕ್ಸಿಟ್’?

    ರಾಜ್ಯದಲ್ಲಿ ಮೊಳಗಲಿದೆ ಕೇಸರಿ ಕಹಳೆ – ಮಂಡ್ಯದಲ್ಲಿ ಯಾರು `ಎಕ್ಸಿಟ್’?

    ಬೆಂಗಳೂರು/ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಜನರು ಬಿಜೆಪಿಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ರಾಜ್ಯ ಬಿಜೆಪಿ, ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಡಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳಿಗೆ 2 ಹಂತದಲ್ಲಿ ನಡೆದ ಚುನಾವಣೆಯಲ್ಲಿ ಮತದಾರ ಬಿಜೆಪಿಗೆ ಹೆಚ್ಚಿನ ಒಲವು ತೋರಿದ್ದಾನೆ. ಕಳೆದ ಚುನಾವಣೆಯಲ್ಲಿ 17 ಸ್ಥಾನಗಳಿಗೆ ತೃಪ್ತಿ ಪಟ್ಟಿದ್ದ ಬಿಜೆಪಿ ಈ ಬಾರಿ 20ರ ಗಡಿ ದಾಟಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

    ಪಕ್ಷೇತರ ಅಭ್ಯರ್ಥಿಗಿದೆ ಗೆಲುವಿನ ಅದೃಷ್ಟ!:
    ಸಾಕಷ್ಟು ಕುತೂಹಲ ಕೆರಳಿಸಿದ್ದ ಮಂಡ್ಯದಲ್ಲಿ ಕೆಲವೊಂದು ಸಮೀಕ್ಷೆಗಳು ಸುಮಲತಾ ಗೆಲುವನ್ನ ಸಾರಿ ಹೇಳುತ್ತಿವೆ. ಮತ್ತೆ ಕೆಲವು ನಿಖಿಲ್ ಗೆಲುವಿನ ಸುಳಿವು ನೀಡಿದೆ. ಕರ್ನಾಟಕದಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಒಂಬತ್ತರಲ್ಲಿ ಮತ್ತು ಪಕ್ಷೇತರ ಅಂದರೆ ಸುಮಲತಾ ಮಂಡ್ಯದಲ್ಲಿ ಗೆಲ್ಲಬಹುದು ಎಂದು ಸೀ ವೋಟರ್ ಸರ್ವೆ ಹೇಳಿದೆ.

    ಇಂಡಿಯಾ ಟುಡೇ ಆಕ್ಸಿಸ್ ಸರ್ವೆ ಕೂಡ ಮಂಡ್ಯದ ಬಗ್ಗೆ ಕುತೂಹಲಕಾರಿ ಫಲಿತಾಂಶವನ್ನೇ ಕೊಟ್ಟಿದೆ. ಇವರ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 21ರಿಂದ 25 ಸೀಟುಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ 3ರಿಂದ 6 ಸೀಟುಗಳು ಸಿಗಲಿದ್ದು, ಸ್ವತಂತ್ರ ಅಭ್ಯರ್ಥಿ ಮಂಡ್ಯದಲ್ಲಿ ಗೆಲ್ಲಬಹುದು ಎಂದು ಹೇಳಿದೆ.

    ಟೈಮ್ಸ್ ನೌ ವಿಎಂಆರ್ ಸಮೀಕ್ಷೆಯಲ್ಲಿ ಕೂಡ ಬಿಜೆಪಿಗೆ ಕರ್ನಾಟಕದಲ್ಲಿ 21 ಸ್ಥಾನಗಳ ಸಿಗಲಿವೆಯಂತೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಬರೀ ಏಳೂ ಸ್ಥಾನಗಳು ದೊರಕಲಿದ್ದು ಇತರ ಪಕ್ಷಗಳಿಗಾಗಲಿ ಪಕ್ಷೇತರರಿಗಾಗ್ಲಿ ಯಾವುದೇ ಸ್ಥಾನಗಳು ಸಿಗಲ್ಲ ಅಂದಿದೆ. ಈ ಸಮೀಕ್ಷೆಯಲ್ಲಿ ಸುಮಲತಾಗೆ ಯಾವುದೇ ಸ್ಥಾನಗಳನ್ನ ಕೊಟ್ಟಿಲ್ಲ. ಆದರೆ ಬಿಜೆಪಿ 20ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನ ಗಳಿಸುತ್ತದೆ ಅಂದಿದ್ದು, ಇದೀಗ ಕುತೂಹಲ ಮೂಡಿಸಿದೆ.

    ಚಾಣಾಕ್ಯ ಸಮೀಕ್ಷೆಯ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ, ಬಿಜೆಪಿಗೆ 23 ಸೀಟುಗಳು ಬಂದರೆ, 5 ಸೀಟುಗಳು ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಸಿಗಲಿವೆ. ಪಕ್ಷೇತರ 0 ಅನ್ನೋ ವರದಿಯನ್ನ ಕೊಟ್ಟಿದೆ. ಈ ಪ್ರಕಾರ ನೋಡಿದರೆ ಮಂಡ್ಯದಲ್ಲಿ ಸುಮಲತಾ ಸೋಲು ಕಾಣುತ್ತಾರೆ ಅನ್ನೋದು ಸಮೀಕ್ಷಾ ವರದಿಯಾಗಿದೆ.

    ಎಬಿಪಿ ಸಮೀಕ್ಷೆ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 15 ಕ್ಷೇತ್ರಗಳನ್ನ ಬಾಚಿಕೊಂಡ್ರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ 13 ಕ್ಷೇತ್ರಗಳಲ್ಲಿ ಜಯಭೇರಿಯಾಗಲಿದೆ. ಪಕ್ಷೇತರರಿಗೆ ಯಾವುದೇ ಸ್ಥಾನ ಇಲ್ಲ. ಈ ಪ್ರಕಾರ ಹಾಸನ, ಮಂಡ್ಯ, ತುಮಕೂರು ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ.

    ಇಂಡಿಯಾ ಟಿವಿ ಸಮೀಕ್ಷೆಯಲ್ಲಿ ಬಿಜೆಪಿಗೆ 17 ಸ್ಥಾನಗಳು ಸಿಕ್ರೆ, ಕಾಂಗ್ರೆಸ್‍ಗೆ 8 ಸ್ಥಾನಗಳು ಸಿಗಲಿವೆಯಂತೆ. ಜೆಡಿಎಸ್‍ಗೆ 3 ಸೀಟುಗಳು, ಇತರೆ 0 ಅನ್ನೋ ವರದಿಯನ್ನ ಕೊಟ್ಟಿದೆ. ಈ ಪ್ರಕಾರ ಕರ್ನಾಟಕದಲ್ಲಿ ಜೆಡಿಎಸ್‍ಗೆ ಸಿಗಲಿರೋ 3 ಸೀಟುಗಳು ಹಾಸನ, ಮಂಡ್ಯ, ತುಮಕೂರು ಎನ್ನಲಾಗುತ್ತಿದೆ.

    ಈ ಎಲ್ಲಾ ಮತಗಟ್ಟೆಯ ಸಮೀಕ್ಷೆಗಳನ್ನ ನೋಡಿದರೆ ಕರ್ನಾಟಕದಲ್ಲಿ ಬಿಜೆಪಿ ಪಾಳಯ, ದೋಸ್ತಿಗಳನ್ನ ಸೋಲಿಸುವಂತೆ ಕಾಣಿಸುತ್ತಿದೆ. ಒಟ್ಟಾರೆ ಇದೆಲ್ಲದಕ್ಕೂ ಫೈನಲ್ ಉತ್ತರ ಮೇ 23ಕ್ಕೆ ಸಿಗಲಿದೆ.

  • ಅಧಿಕಾರಕ್ಕೆ ಬರುತ್ತೇವೆಂದು ಹೇಳಿಕೊಳ್ಳಬಾರದೆಂದು ನಾಯಕರಿಗೆ ತಿಳಿಸಿದ್ದೇನೆ- ಬಿಎಸ್‍ವೈ

    ಅಧಿಕಾರಕ್ಕೆ ಬರುತ್ತೇವೆಂದು ಹೇಳಿಕೊಳ್ಳಬಾರದೆಂದು ನಾಯಕರಿಗೆ ತಿಳಿಸಿದ್ದೇನೆ- ಬಿಎಸ್‍ವೈ

    ಹುಬ್ಬಳ್ಳಿ: ನಾವು ಅಧಿಕಾರಕ್ಕೆ ಬರುತ್ತೇವೆ ಎಂಬುದಾಗಿ ಎಲ್ಲಿಯೂ ಹೇಳಿಕೊಳ್ಳಬಾರದು ಎಂದು ಬಿಜೆಪಿ ನಾಯಕರಿಗೆ ಈಗಾಗಲೇ ತಿಳಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 22 ಸ್ಥಾನ ಗೆದ್ದ ಮೇಲೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸ್ಥಿತಿ ಏನಾಗಲಿದೆ ಎಂದು ನಿವೇ ಯೋಚನೆ ಮಾಡಿ. ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರಾಗಿ ನಾನು ಮುಂದುವರೆಯಲು ಸಾಧ್ಯವಿಲ್ಲ. ಹೀಗಾಗಿ ಆ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

    ಕುಂದಗೋಳ ಚಿಂಚೋಳಿ ಜನ ಸರಿಯಾದ ಉತ್ತರ ಕೊಡುತ್ತಾರೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಗೆಲ್ಲಲಿದ್ದೇವೆ. ಕಾಂಗ್ರೆಸ್ ಹಣ ಬಲದ ಮೇಲೆ ಚುನಾವಣೆ ಗೆಲ್ಲಲು ಹೊರಟಿದೆ. ಬಿಜೆಪಿಯವರನ್ನ ಬಂಧಿಸಿ ಕಿರುಕುಳ ನೀಡುವ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಮಾಡಲಿದೆ. ಗೃಹ ಸಚಿವರಾಗಿ ಅವರು ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು ಎಂದು ತಿಳಿಸಿದರು.

    ಸಿಎಂ ರೈತರ ಸಾಲಮನ್ನ ಮಾಡುವ ಮಾತು ಹೇಳಿದ್ದರು. ಆದರೆ ಇದುವರೆಗೂ ಆಗಿಲ್ಲ. ಋಣಮುಕ್ತ ಪತ್ರ ಬರೆಯುವ ಮಾತು ಹೇಳಿದ್ದರು, ಈಗ ಸಾಂತ್ವನ ಪತ್ರ ಬರೆಯುತ್ತಾರಂತೆ. ಇದು ನಗೆಪಾಟಿಲಿಗೆ ಕಾರಣವಾಗಿದೆ ಎಂದರು.

    ಈ ದೇಶದ ಪ್ರಧಾನಿ ಬಗ್ಗೆ ಇಡೀ ಜಗತ್ತೇ ಗೌರವದಿಂದ ಕಾಣುತ್ತಿದೆ. ನಾವು ದೇಶದಲ್ಲಿ 280 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ. ಮೋದಿ ಅವರ ಬಗ್ಗೆ ಕೇವಲ ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಲದೆ ಹಲವು ಜನರು ಹಗುರವಾಗಿ ಮಾತನಾಡುತ್ತಾರೆ. ಇದಕ್ಕೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದರು.

    ಸಾಲಮನ್ನಾ ನಾವು ಮಾಡಿದ್ದೇವೆ. ನಾನು ಈಗಲೇ ಏನೂ ಮಾತನಾಡಲ್ಲ. ಚುನಾವಣೆ ಫಲಿತಾಂಶ ನಂತರ ಮಾತನಾಡುವೆ. ಜನರ ವಿಶ್ವಾಸದಿಂದ ನಾವು ಚುನಾವಣೆಯಲ್ಲೂ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿಎಸ್‍ವೈ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸಚಿವ ಅರುಣ್ ಜೇಟ್ಲಿ ಜೇಟ್ಲಿ ಮಾಡಿದ ಆರೋಪಕ್ಕೆ ಉತ್ತರ ನೀಡಲಿ ಎಂದು ಇದೇ ವೇಳೆ ಒತ್ತಾಯಿಸಿದರು.

  • ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ರಾಜಕೀಯ ನಿವೃತ್ತಿ- ನವಜೋತ್ ಸಿಂಗ್ ಸಿಧು

    ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ರಾಜಕೀಯ ನಿವೃತ್ತಿ- ನವಜೋತ್ ಸಿಂಗ್ ಸಿಧು

    ಲಕ್ನೋ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಕ್ರಿಕೆಟಿಗ, ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಂದ ರಾಷ್ಟ್ರೀಯತೆಯ ಪಾಠವನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ.

    70 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಬಿಜೆಪಿ ಪದೇ ಪದೇ ಹೇಳಿಕೆ ನೀಡುತ್ತಿರುವುದರ ವಿರುದ್ಧ ಸಿಂಗ್ ಹರಿಹಾಯ್ದರು. ಅಲ್ಲದೆ ಒಂದು ಚಿಕ್ಕ ಸೂಜಿಯಿಂದ ಹಿಡಿದು ದೊಡ್ಡ ವಿಮಾನದವರೆಗಿನ ಅಭಿವೃದ್ಧಿಯನ್ನು ಕಾಂಗ್ರೆಸ್ ಅವಧಿಯಲ್ಲೇ ಮಾಡಲಾಗಿತ್ತು ಎಂದು ತಿರುಗೇಟು ನೀಡಿದರು.

    ಇದೇ ವೇಳೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಹತ್ಯೆಯ ಬಳಿಕ ಕಾಂಗ್ರೆಸ್ಸನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರನ್ನು ಹೊಗಳಿದ ಸಿಧು, ಸೋನಿಯಾ ಗಾಂಧಿಯವರಿಂದಾಗಿಯೇ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ 10 ವರ್ಷ (2004-2014) ರವರೆಗೆ ಆಡಳಿತ ನಡೆಸಲು ಸಾಧ್ಯವಾಯಿತು ಎಂದರು.

    ರಫೇಲ್ ಯುದ್ಧ ವಿಮಾನ ವಿವಾದವೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಸೋಲಿಗೆ ಕಾರಣವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ನವಜೋತ್ ಸಿಂಗ್ ಅವರು ಮೊದಲು ಬಿಜೆಪಿಯಲ್ಲಿದ್ದು, ಪಂಜಾಬ್ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಇದೀಗ ಅವರು ಪಂಜಾಬ್ ಸಚಿವರಾಗಿದ್ದಾರೆ.