Tag: Loksabha Elections

  • ರಾಜ್ಯದಲ್ಲಿ 28 ಸ್ಥಾನಗಳನ್ನೂ ಗೆಲ್ಲಿಸ್ತಾರೆ ವಿಜಯೇಂದ್ರ: ನೂತನ ಅಧ್ಯಕ್ಷರಿಗೆ HDK, ರೇಣುಕಾಚಾರ್ಯ ವಿಶ್‌

    ರಾಜ್ಯದಲ್ಲಿ 28 ಸ್ಥಾನಗಳನ್ನೂ ಗೆಲ್ಲಿಸ್ತಾರೆ ವಿಜಯೇಂದ್ರ: ನೂತನ ಅಧ್ಯಕ್ಷರಿಗೆ HDK, ರೇಣುಕಾಚಾರ್ಯ ವಿಶ್‌

    -ರಾಜ್ಯ ಬಿಜೆಪಿ ಘಟಕಕ್ಕೆ ಆನೆಬಲ ಬಂದಿದೆ ಎಂದ ಮಾಜಿ ಸಚಿವ

    ಬೆಂಗಳೂರು: ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ (BY Vijayendra) ಆಯ್ಕೆಯಾಗಿದ್ದಾರೆ. ಈ ಮೂಲಕ ಶಿಕಾರಿಪುರದ ಶಾಸಕರೂ ಆಗಿರುವ ವಿಜಯೇಂದ್ರಗೆ ಹೈಕಮಾಂಡ್ ದೀಪಾವಳಿ ಗಿಫ್ಟ್ ಕೊಟ್ಟಿದ್ದು, ಕಾರ್ಯಕರ್ತರು ಹಾಗೂ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

    ಹೆಚ್.ಡಿ ಕುಮಾರಸ್ವಾಮಿ (H.D Kumaraswamy):
    ಕರ್ನಾಟಕ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ಬಿ.ವೈ ವಿಜಯೇಂದ್ರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಯುವನಾಯಕರಾಗಿ ಸಂಘಟನೆಯಲ್ಲಿ ಈಗಾಗಲೇ ಕ್ರಿಯಾಶೀಲರಾಗಿರುವ ಅವರಿಗೆ ಕಿರಿಯ ವಯಸ್ಸಿನಲ್ಲಿಯೇ ಬಹುದೊಡ್ಡ ಜವಾಬ್ದಾರಿ ಅರಸಿ ಬಂದಿದೆ. ತಮಗೆ ವಹಿಸಿರುವ ಈ ಗುರುತರ ಹೊಣೆಯನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ವಿಜಯೇಂದ್ರ ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ.

    ಎಂ.ಪಿ ರೇಣುಕಾಚಾರ್ಯ (M P Renukacharya):
    ರಾಜ್ಯದ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಬಹಳಷ್ಟು ಜನರಿಗೆ ವಿಜಯೇಂದ್ರ ಆಯ್ಕೆ ಸಂತಸ ತಂದಿದೆ. ದೀಪಾವಳಿ ಸಂದರ್ಭದಲ್ಲೇ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನ ವಿಜಯೇಂದ್ರ ಗೆಲ್ಲಿಸುತ್ತಾರೆ. ಮುಂಬರುವ ದಿನಗಳಲ್ಲಿ ದೊಡ್ಡಮಟ್ಟದ ಸಂಘಟನೆಯಾಗುತ್ತೆ. ಕರ್ನಾಟಕ ಬಿಜೆಪಿಗೆ ಆನೆಬಲ ಬಂದಿದೆ. ಮೋದಿ ಜೀ, ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

    ಬಿ.ವೈ ರಾಘವೇಂದ್ರ:
    ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ವಿಜಯೇಂದ್ರ ಅವರಿಗೆ ಹಾರ್ದಿಕ ಶುಭಾಶಯಗಳು. ಹಿರಿಯರ ಆಶೀರ್ವಾದ ಹಾಗೂ ಕಿರಿಯರ ಬೆಂಬಲದೊಂದಿಗೆ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಿ ಮುನ್ನಡೆಸುತ್ತಾರೆ ಮತ್ತು ಯಡಿಯೂರಪ್ಪನವರು, ಅನಂತಕುಮಾರ್ ಅವರೇ ಮುಂತಾದ ನಾಯಕರುಗಳ ದಾರಿಯಲ್ಲಿ ನಡೆಯುತ್ತಾರೆ ಅನ್ನುವ ಭರವಸೆ ನನಗಿದೆ. ಅವರ ನಾಯಕತ್ವದಲ್ಲಿ ಪಕ್ಷ ಹೊಸ ಚೈತನ್ಯದೊಂದಿಗೆ ಬೆಳೆಯಲಿ, ರಾಜ್ಯವನ್ನು ಆವರಿಸಿಕೊಂಡಿರುವ ಕಾಂಗ್ರೆಸ್ ದುರಾಡಳಿತದ ಕಾರ್ಮೋಡದ ನಡುವೆ ಭರವಸೆಯ ಒಂದು ಹೊಸ ಕಿರಣವಾಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ.

    ಬಸವರಾಜ ಬೊಮ್ಮಾಯಿ:
    ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಯುವ ನಾಯಕ ವಿಜಯೇಂದ್ರ ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಅಧ್ಯಕ್ಷ ಅವಧಿಯಲ್ಲಿ ಪಕ್ಷ ಮತ್ತಷ್ಟು ಸಂಘಟನಾತ್ಮಕವಾಗಿ ಬಲಗೊಂಡು ಇನ್ನಷ್ಟು ಶಕ್ತಿಯುತವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ.

  • ದೇವರಲ್ಲಿ ನಾನು ಏನನ್ನೂ ಬೇಡಿಲ್ಲ – ಧ್ಯಾನದ ಬಳಿಕ ಮೋದಿ ಮಾತು

    ದೇವರಲ್ಲಿ ನಾನು ಏನನ್ನೂ ಬೇಡಿಲ್ಲ – ಧ್ಯಾನದ ಬಳಿಕ ಮೋದಿ ಮಾತು

    ಡೆಹ್ರಾಡೂನ್: ನಾನು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದಾಗ ಹಾಗೂ ಧ್ಯಾನದ ವೇಳೆ ದೇವರಲ್ಲಿ ಏನನ್ನೂ ಬೇಡಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಕೇದಾರನಾಥ ಗುಹೆಯಲ್ಲಿ 20 ಗಂಟೆ ಧ್ಯಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮತಗಿಟ್ಟಿಸಲು ಗುಹೆಯೊಳಗೆ ಧ್ಯಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಶಾಂತಿ, ಪ್ರಾರ್ಥನೆ ಹಾಗೂ ಧ್ಯಾನ ಮಾಡುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ದೇವರಲ್ಲಿ ಏನನ್ನೂ ಬೇಡಿಕೊಂಡಿಲ್ಲ ಎಂದು ಹೇಳುವ ಮೂಲಕ ತನ್ನ ಮೇಲೆ ಕೇಳಿ ಬಂದ ಆರೋಪಗಳಿಗೆ ತಿರುಗೇಟು ನೀಡಿದರು.

    ಕೇದಾರನಾಥ ದೇವಾಲಯವನ್ನು ಅಭಿವೃದ್ಧಿ ಪಡಿಸುವುದೇ ನನ್ನ ಮೂಲ ಉದ್ದೇಶವಾಗಿದೆ. ಈ ಪುಣ್ಯ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಇನ್ನಷ್ಟು ಅಭಿವೃದ್ಧಿಪಡಿಸಬೇಕೆಂಬುದೇ ನನ್ನ ಗುರಿಯಾಗಿದೆ. ಪವಿತ್ರ ಧಾರ್ಮಿಕ ಕ್ಷೇತ್ರ ಕೇದಾರನಾಥ ನನ್ನ ಅವಧಿಯಲ್ಲಿ ಅಭಿವೃದ್ಧಿಯಾಗುತ್ತಿರುವುದು ನನಗೆ ಸಂತಸ ತಂದಿದೆ. ದೇವಾಲಯದ ಅಭಿವೃದ್ಧಿಗಾಗಿ ತಂಡ ಕಠಿಣ ಪರಿಶ್ರಮ ಪಡುತ್ತಿದೆ. ಒಟ್ಟಿನಲ್ಲಿ ಈ ಪ್ರದೇಶದ ಬಗ್ಗೆ ವರದಿ ಮಾಡುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡಲು ಮಾಧ್ಯಮ ಕೂಡ ಸಹಾಯ ಮಾಡಿದೆ. ಅದಕ್ಕಾಗಿ ಮಾಧ್ಯಮ ಮಿತ್ರರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

    ಲೋಕಸಮರದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ಶನಿವಾರ ಪಹರಿ ಉಡುಗೆಯಲ್ಲಿ ಕೇದಾರನಾಥದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದ್ದರು. ಅಲ್ಲಿಂದ ಮಳೆಯಲ್ಲೇ ನಡೆದು ಸುಮಾರು ಎರಡು ಕಿ.ಮೀ ದೂರವಿರುವ ಗುಹಾಲಯಕ್ಕೆ ತೆರಳಿ ಗವಿಯೊಳಗೆ ಧ್ಯಾನಸ್ಥರಾಗಿ ಮಹಾತಪಸ್ಸು ಮಾಡಿದ್ದರು. ಶನಿವಾರ ಮಧ್ಯಾಹ್ನ 2.45 ರಿಂದ ಧ್ಯಾನಸ್ಥರಾಗಿರುವ ಮೋದಿ ಇಂದು ಬೆಳಗ್ಗೆ 10.45ಕ್ಕೆ ಮುಗಿಸಿದ್ದಾರೆ. ಬರೋಬ್ಬರಿ 20 ಗಂಟೆ ಕಾಲ ಮೋದಿ ತಪಸ್ಸು ಕೈಗೊಂಡಿದ್ದಾರೆ. ಮೋದಿಯವರು 2014ರಲ್ಲಿ ಬಿಜೆಪಿಯಿಂದ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೇದಾರನಾಥಕ್ಕೆ ನಾಲ್ಕನೇ ಬಾರಿ ಭೇಟಿ ಮಾಡಿದ್ದಾರೆ.

  • ಫಸ್ಟ್ ಟೈಂ ಕಾಂಗ್ರೆಸ್ಸಿಗಿಂತ ಬಿಜೆಪಿ ಹೆಚ್ಚಿನ ಕ್ಷೇತ್ರದಲ್ಲಿ ಸ್ಪರ್ಧೆ

    ಫಸ್ಟ್ ಟೈಂ ಕಾಂಗ್ರೆಸ್ಸಿಗಿಂತ ಬಿಜೆಪಿ ಹೆಚ್ಚಿನ ಕ್ಷೇತ್ರದಲ್ಲಿ ಸ್ಪರ್ಧೆ

    ನವದೆಹಲಿ: ಲೋಕಸಭಾ ಚುನಾವಣೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಕಾಂಗ್ರೆಸ್ಸಿಗಿಂತ ಅತಿ ಹೆಚ್ಚು ಸ್ಥಾನದಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿ ಇಲ್ಲಿಯವರೆಗೆ 437 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದರೆ ಕಾಂಗ್ರೆಸ್ 425 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

    2014ರಲ್ಲಿ ಮೋದಿ ಅಧಿಕಾರಕ್ಕೆ ಏರಿದ ಬಳಿಕ ಬಿಜೆಪಿ ತನ್ನ ಮತಗಳಿಕೆಯನ್ನು ವೃದ್ಧಿಸಿದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್ ಕರ್ನಾಟಕ, ಬಿಹಾರ, ಜಮ್ಮು ಕಾಶ್ಮೀರ ಸೇರಿದಂತೆ ಹಲವು ಕಡೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಬಾರಿ ಕಡಿಮೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ.

    ಬಿಜೆಪಿ 2014ರ ಚುನಾವಣೆಯಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಬಾರಿ ಆಂಧ್ರ ಮತ್ತು ತೆಲಂಗಾಣದಲ್ಲಿ ಮೈತ್ರಿ ಮಾಡದೇ ಏಕಾಂಗಿಯಾಗಿ ಕಣಕ್ಕೆ ಇಳಿಯುತ್ತಿರುವ ಕಾರಣ ಸ್ಪರ್ಧಿಸುತ್ತಿರುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿದೆ.

    2009 ರಲ್ಲಿ ಬಿಜೆಪಿ 433 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 116 ರಲ್ಲಿ ಜಯಗಳಿಸಿದ್ದರೆ ಕಾಂಗ್ರೆಸ್ 440 ಕಡೆ ಸ್ಪರ್ಧಿಸಿ 206 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 2014ರ ಚುನಾವಣೆಯಲ್ಲಿ ಬಿಜೆಪಿ 428 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 282ರಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 464 ಕಡೆ ಸ್ಪರ್ಧಿಸಿ ಕೇವಲ 44 ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಂಡಿತ್ತು.

    2009 ಮತ್ತು 2014 ರಲ್ಲಿ ಮಾಯಾವತಿ ನೇತೃತ್ವದ ಬಿಎಸ್‍ಪಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. 2009 ರಲ್ಲಿ 500 ಕಡೆ, 2014 ರಲ್ಲಿ 503 ಕಡೆ ಸ್ಪರ್ಧಿಸಿತ್ತು. ಈ ವರ್ಷ 139 ಕ್ಷೇತ್ರಗಳಲ್ಲಿ ಬಿಎಸ್‍ಪಿ ಸ್ಪರ್ಧಿಸುತ್ತಿದೆ.

    1980 ರಲ್ಲಿ ಸ್ಥಾಪನೆಗೊಂಡಿದ್ದ ಬಿಜೆಪಿ 1984 ರ ಚುನಾವಣೆಯಲ್ಲಿ ಎರಡು ಸ್ಥಾನವನ್ನು ಗೆದ್ದುಕೊಂಡಿತ್ತು. ನಂತರ ನಡೆದ ಚುನಾವಣೆಯಲ್ಲಿ 85(1989), 120(1991), 161(1996), 182(1998), 182(1999), 145(2004), 116(2009), 282(2014) ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ಸುಮಲತಾ ಗೆಲುವಿಗೆ ಶ್ರಮಿಸ್ತಿದ್ದಾರಾ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ..?

    ಸುಮಲತಾ ಗೆಲುವಿಗೆ ಶ್ರಮಿಸ್ತಿದ್ದಾರಾ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ..?

    ಮಂಡ್ಯ: ನಾಗಮಂಗಲದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆ ಸುಮಲತಾ ಗೆಲುವಿಗೆ ಶ್ರಮಿಸುತ್ತಿದ್ದಾರಾ ಅನ್ನೋ ಅನುಮಾನವೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.

    ಚೆಲುವರಾಯ ಸ್ವಾಮಿ ಅವರಿಗೆ ಸುಮಲತಾ ವಂದನೆ ಸಲ್ಲಿಸುತ್ತಿರುವಂತೆ ಪೋಸ್ಟ್ ಹಾಕಿ ವೈರಲ್ ಮಾಡಲಾಗುತ್ತಿದೆ. “ನನ್ನ ಬೆನ್ನ ಹಿಂದೆ ನಿಂತು ನನ್ನ ಗೆಲುವಿಗೆ ಶ್ರಮಿಸುತ್ತಿರುವ ಚೆಲುವರಾಯಸ್ವಾಮಿಯವರಿಗೆ ನನ್ನ ವಂದನೆಗಳು” ಎಂದು ಸುಮಲತಾ ಬರೆದಿದ್ದಾರೆ ಎನ್ನಲಾದ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ ಇದನ್ನು ಸುಮಲತಾ ಅವರೇ ಬರೆದಿದ್ದಾರಾ ಅಥವಾ ಬೇರೆಯವರು ಬರೆದಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ.

    ಸುಮಲತಾ, ನಿಖಿಲ್ ಪ್ರಚಾರ:
    ಮಂಡ್ಯ ಕುರುಕ್ಷೇತ್ರದಲ್ಲಿ ನಾನಾ ನೀನಾ ಅಂತ ಜಿದ್ದಿಗೆ ಬಿದ್ದಿರುವ ಸುಮಲತಾ ಹಾಗೂ ನಿಖಿಲ್‍ರ ಅಬ್ಬರದ ಪ್ರಚಾರ ಇಂದು ಮುಂದುವರಿಯಲಿದೆ. ಸುಮಲತಾ ಅಂಬರೀಶ್ ಮೈಸೂರು ಜಿಲ್ಲೆ ಕೆಆರ್ ನಗರ ಭಾಗದಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ. ಇವರಿಗೆ ಪುತ್ರ ಅಭಿಷೇಕ್ ಸಾಥ್ ನೀಡಲಿದ್ದಾರೆ.ಹೀಗಾಗಿ ಬಿಎಸ್‍ವೈ ಭೇಟಿಯನ್ನು ಸುಮಲತಾ ಮುಂದೂಡಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯಲ್ಲಿ ಸಂಚರಿಸಿ ಮತಬೇಟೆಯಾಡಲಿದ್ದಾರೆ. ಇವರಿಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಶಾಸಕ ಸುರೇಶ್ ಗೌಡ ಹಾಗೂ ಸಂಸದ ಶಿವರಾಮೇಗೌಡ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ಬಾರಿ ಗೆಲುವು ಯಾರಿಗೆ? ರಾಜ್ಯಗಳ 4,230 ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿಗೆ ಎಷ್ಟು ಸ್ಥಾನ ಸಿಕ್ಕಿದೆ?

    ಈ ಬಾರಿ ಗೆಲುವು ಯಾರಿಗೆ? ರಾಜ್ಯಗಳ 4,230 ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿಗೆ ಎಷ್ಟು ಸ್ಥಾನ ಸಿಕ್ಕಿದೆ?

    ಬೆಂಗಳೂರು: ಲೋಕಸಭಾ ಚುನಾವಣೆಗೆ ದಿನಾಂಕ ಹೊರ ಬೀಳುತ್ತಿದ್ದಂತೆ ಈ ಬಾರಿ ಗೆಲ್ಲುವ ಕುದುರೆ ಯಾರು ಎನ್ನುವ ಎನ್ನುವ ವಿಶ್ಲೇಷಣೆ ಜೋರಾಗಿ ನಡೆಯುತ್ತಿದೆ. ರಾಷ್ಟ್ರಮಟ್ಟದಲ್ಲಿ ಗೆಲ್ಲುವ ಕುದುರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ತಿಳಿಯುವ ಮೊದಲು ಈ ಹಿಂದೆ ರಾಜ್ಯಗಳ ಚುನಾವಣೆಯಲ್ಲಿ ಜಯಗಳಿಸಿದವರು ಯಾರು ಎನ್ನುವುದನ್ನು ತಿಳಿದುಕೊಂಡರೆ ಮೊದಲ ಪ್ರಶ್ನೆಗೆ ಉತ್ತರ ಹೇಳಲು ಪ್ರಯತ್ನ ನಡೆಸಬಹುದು.

    ಹೌದು. 2014 ರ ಮೇ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ  ಪ್ರಮಾಣವಚನ ಸ್ವೀಕರಿಸಿದ ಬಳಿಕ ಇಲ್ಲಿಯವರೆಗೆ ಕೇಂದ್ರಾಡಳಿತ ಪ್ರದೇಶವಾದ ದೆಹಲಿ, ಪುದುಚೇರಿ ಸೇರಿದಂತೆ ಒಟ್ಟು 29 ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಯಾರು ಎಷ್ಟು ಸ್ಥಾನಗಳನ್ನು ಗಳಿಸಿದ್ದಾರೆ ಎನ್ನುವುದನ್ನು ಲೆಕ್ಕ ಹಾಕಿದರೆ ಈ ಬಾರಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು? ಯಾವ ರಾಜ್ಯದಲ್ಲಿ ಯಾವ ಪಕ್ಷದ ಪ್ರಭಾವ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಹೀಗಾಗಿ ಇಲ್ಲಿ 2014 ರಿಂದ ಆರಂಭಗೊಂಡು ಇಲ್ಲಿಯವರೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ಮಾಹಿತಿಯನ್ನು ನೀಡಲಾಗಿದೆ.

    2014 ಚುನಾವಣೆ
    ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ವರ್ಷವಾದ 2014ರಲ್ಲಿ ಒಟ್ಟು 8 ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹರ್ಯಾಣ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಸಿಕ್ಕಿಂನಲ್ಲಿ ಚುನಾವಣೆ ನಡೆದಿತ್ತು.

    ಆಂಧ್ರಪ್ರದೇಶ : ಒಟ್ಟು 294 ಸ್ಥಾನ
    ಬಿಜೆಪಿ 9, ಕಾಂಗ್ರೆಸ್ 21, ಎಡರಂಗ 2, ಇತರೇ 262

    ಅರುಣಾಚಲ ಪ್ರದೇಶ : ಒಟ್ಟು 60 ಸ್ಥಾನ
    ಬಿಜೆಪಿ 11, ಕಾಂಗ್ರೆಸ್ 42, ಇತರೇ 7

    ಜಮ್ಮು ಕಾಶ್ಮೀರ : ಒಟ್ಟು 87 ಸ್ಥಾನ
    ಬಿಜೆಪಿ 25, ಕಾಂಗ್ರೆಸ್ 12, ಎಡ ಪಕ್ಷ 1, ಇತರೇ 49

    ಹರ್ಯಾಣ : ಒಟ್ಟು 90 ಸ್ಥಾನ
    ಬಿಜೆಪಿ 47, ಕಾಂಗ್ರೆಸ್ 15, ಇತರೇ 28

    ಜಾರ್ಖಂಡ್ : ಒಟ್ಟು 81 ಸ್ಥಾನ
    ಬಿಜೆಪಿ 37, ಕಾಂಗ್ರೆಸ್ 6, ಎಡ ಪಕ್ಷ 1 ಇತರೇ 37

    ಮಹಾರಾಷ್ಟ್ರ : ಒಟ್ಟು 288 ಸ್ಥಾನ
    ಬಿಜೆಪಿ 122, ಕಾಂಗ್ರೆಸ್ 42, ಎಡ ಪಕ್ಷ 1, ಇತರೇ 123

    ಒಡಿಶಾ : ಒಟ್ಟು 147 ಕ್ಷೇತ್ರ
    ಬಿಜೆಪಿ 10, ಕಾಂಗ್ರೆಸ್ 16, ಎಡ ಪಕ್ಷ 1, ಇತರೇ 120

    ಸಿಕ್ಕಿಂ : ಎಲ್ಲ 32 ಕ್ಷೇತ್ರಗಳನ್ನು ಇತರೇ ಪಕ್ಷಗಳು ಗೆದ್ದುಕೊಂಡಿವೆ.

    ಯಾರಿಗೆ ಎಷ್ಟು ಸ್ಥಾನ?
    8 ರಾಜ್ಯಗಳ 1,079 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 261, ಕಾಂಗ್ರೆಸ್ 154, ಎಡ ಪಕ್ಷ 6, ಇತರೇ 658 ಸ್ಥಾನಗಳಲ್ಲಿ ಜಯಗಳಿಸಿದ್ದರು.

    2015 ಚುನಾವಣೆ
    ಬಿಹಾರ ಮತ್ತು ದೆಹಲಿಯಲ್ಲಿ ಚುನಾವಣೆ ನಡೆದಿತ್ತು. ದೆಹಲಿಯಲ್ಲಿ ಆಪ್ ಜಯಗಳಿಸಿದ್ದರೆ ಬಿಹಾರದಲ್ಲಿ ಮಹಾಘಟಬಂಧನ್ ಜಯಗಳಿಸಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸುತ್ತಿದೆ.

    ಬಿಹಾರ : ಒಟ್ಟು 243 ಕ್ಷೇತ್ರಗಳು
    ಬಿಜೆಪಿ 53, ಕಾಂಗ್ರೆಸ್ 27, ಎಡ ಪಕ್ಷ 3, ಇತರೇ 160

    ದೆಹಲಿ: ಒಟ್ಟು 70 ಕ್ಷೇತ್ರಗಳು
    ಬಿಜೆಪಿ 3 ರಲ್ಲಿ ಜಯಗಳಿಸಿದರೆ ಆಪ್ 67 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

    ಯಾರಿಗೆ ಎಷ್ಟು ಸ್ಥಾನ?
    ಕೇಂದ್ರಾಡಳಿತ ಪ್ರದೇಶವಾದ ದೆಹಲಿ, ಬಿಹಾರದಲ್ಲಿ ಒಟ್ಟು 313 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ 56, ಕಾಂಗ್ರೆಸ್ 27, ಎಡ ಪಕ್ಷ 3, ಇತರೇ 227

    2016 ಚುನಾವಣೆ:
    ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಅಸ್ಸಾಂ ಹೊರತು ಪಡಿಸಿ ಎಂದಿನಂತೇ ಸ್ಥಳೀಯ ಪಕ್ಷಗಳೇ ಜಯಭೇರಿ ಬಾರಿಸಿವೆ.

    ಅಸ್ಸಾಂ : ಒಟ್ಟು 126 ಕ್ಷೇತ್ರ
    ಬಿಜೆಪಿ 60, ಕಾಂಗ್ರೆಸ್ 26, ಇತರೇ 40

    ಕೇರಳ : ಒಟ್ಟು 140 ಕ್ಷೇತ್ರ
    ಬಿಜೆಪಿ 1, ಕಾಂಗ್ರೆಸ್ 22, ಎಡ ಪಕ್ಷ 77, ಇತರೇ 40

    ಪುದುಚೇರಿ : ಒಟ್ಟು 30 ಕ್ಷೇತ್ರ
    ಬಿಜೆಪಿ 0, ಕಾಂಗ್ರೆಸ್ 15, ಇತರೇ 15

    ತಮಿಳುನಾಡು : ಒಟ್ಟು 232 ಕ್ಷೇತ್ರ
    ಬಿಜೆಪಿ 0, ಕಾಂಗ್ರೆಸ್ 8, ಇತರೇ 224(ಎಐಎಡಿಎಂಕೆ 136, ಡಿಎಂಕೆ 98)

    ಪಶ್ಚಿಮ ಬಂಗಾಳ : ಒಟ್ಟು 294
    ಬಿಜೆಪಿ 3, ಕಾಂಗ್ರೆಸ್ 44, ಎಡಪಕ್ಷ 32, ಇತರೇ 215(ಟಿಎಂಸಿ 211)

    ಯಾರಿಗೆ ಎಷ್ಟು ಸ್ಥಾನ?
    ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿದಂತೆ ನಾಲ್ಕು ರಾಜ್ಯಗಳ ಒಟ್ಟು 822 ಕ್ಷೇತ್ರಗಳ ಪೈಕಿ ಬಿಜೆಪಿ 64, ಕಾಂಗ್ರೆಸ್ 115, ಎಡಪಕ್ಷ 109, ಇತರೇ 534 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

    2017 ಚುನಾವಣೆ:
    ನೋಟು ನಿಷೇಧದ ನಂತರ 7 ರಾಜ್ಯಗಳಲ್ಲಿ ನಡೆದ ಚುನಾವಣೆ ಭಾರೀ ಮಹತ್ವ ಪಡೆದಿತ್ತು. ಅತಿ ಹೆಚ್ಚು ಕ್ಷೇತ್ರಗಳಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಜಯಗಳಿಸಿದ್ದರೆ ಪಂಜಾಬ್ ನಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಮೋದಿ ತವರು ನೆಲ ಗುಜರಾತಿನಲ್ಲಿ ಕಮಲ ಅರಳಿತ್ತು.

    ಗೋವಾ: ಒಟ್ಟು ಕ್ಷೇತ್ರಗಳು 40
    ಬಿಜೆಪಿ 13, ಕಾಂಗ್ರೆಸ್ 17, ಇತರೇ 10

    ಗುಜರಾತ್ : ಒಟ್ಟು ಕ್ಷೇತ್ರಗಳು 182
    ಬಿಜೆಪಿ 99, ಕಾಂಗ್ರೆಸ್ 77, ಇತರೇ 6

    ಹಿಮಾಚಲ ಪ್ರದೇಶ : ಒಟ್ಟು ಕ್ಷೇತ್ರಗಳು 68
    ಬಿಜೆಪಿ 44, ಕಾಂಗ್ರೆಸ್ 21, ಎಡ ಪಕ್ಷ 1, ಇತರೇ 2

    ಮಣಿಪುರ : ಒಟ್ಟು ಕ್ಷೇತ್ರಗಳು 60
    ಬಿಜೆಪಿ 21, ಕಾಂಗ್ರೆಸ್ 28, ಇತರೇ 11

    ಪಂಜಾಬ್ : ಒಟ್ಟು ಕ್ಷೇತ್ರಗಳು 117
    ಬಿಜೆಪಿ 3, ಕಾಂಗ್ರೆಸ್ 77, ಇತರೇ 37

    ಉತ್ತರ ಪ್ರದೇಶ: ಒಟ್ಟು ಕ್ಷೇತ್ರಗಳು 403
    ಬಿಜೆಪಿ 312, ಕಾಂಗ್ರೆಸ್ 7, ಇತರೇ 84

    ಉತ್ತಾರಖಂಡ್ : ಒಟ್ಟು ಕ್ಷೇತ್ರಗಳು 69
    ಬಿಜೆಪಿ 56, ಕಾಂಗ್ರೆಸ್ 11, ಇತರೇ 2

    ಯಾರಿಗೆ ಎಷ್ಟು?
    ಒಟ್ಟು 7 ರಾಜ್ಯಗಳ 939 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 548, ಕಾಂಗ್ರೆಸ್ 238, ಎಡ ಪಕ್ಷ 1, ಇತರೇ 152 ಸ್ಥಾನಗಳನ್ನು ಗೆದ್ದುಕೊಂಡಿದೆ.

    2018 ಚುನಾವಣೆ:
    ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಈ ಚುನಾವಣೆಯಲ್ಲಿ ರಾಜಸ್ಥಾನ, ಛತ್ತೀಸ್​ಗಢದಲ್ಲಿ ಕಾಂಗ್ರೆಸ್ ಜಯ ಗಳಿಸಿದರೆ ತ್ರಿಪುರದಲ್ಲಿ ಬಿಜೆಪಿ ಜಯಗಳಿಸಿತ್ತು. ಕರ್ನಾಟಕದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಕಾಂಗ್ರೆಸ್ಸಿಗೆ ಪ್ರಬಲ ಪೈಪೋಟಿ ನೀಡಿತ್ತು.

    ಕರ್ನಾಟಕ: ಒಟ್ಟು ಕ್ಷೇತ್ರಗಳು 222
    ಬಿಜೆಪಿ 104, ಕಾಂಗ್ರೆಸ್ 78, ಇತರೇ 40(ಜೆಡಿಎಸ್ 37)

    ಮೇಘಾಲಯ : ಒಟ್ಟು ಕ್ಷೇತ್ರಗಳು 59
    ಬಿಜೆಪಿ 2, ಕಾಂಗ್ರೆಸ್ 21, ಇತರೇ 36

    ನಾಗಲ್ಯಾಂಡ್ : ಒಟ್ಟು ಕ್ಷೇತ್ರಗಳು 59
    ಬಿಜೆಪಿ 12, ಕಾಂಗ್ರೆಸ್ 0, ಇತರೇ 47

    ತ್ರಿಪುರ : ಒಟ್ಟು ಕ್ಷೇತ್ರಗಳು 59
    ಬಿಜೆಪಿ 35, ಕಾಂಗ್ರೆಸ್ 0, ಎಡ ಪಕ್ಷ 16, ಇತರೇ 8

    ಮಧ್ಯಪ್ರದೇಶ : ಒಟ್ಟು ಕ್ಷೇತ್ರಗಳು 230
    ಬಿಜೆಪಿ 109, ಕಾಂಗ್ರೆಸ್ 114, ಇತರೇ 7

    ಛತ್ತೀಸ್​ಗಢ : ಒಟ್ಟು ಕ್ಷೇತ್ರ 90
    ಬಿಜೆಪಿ 15, ಕಾಂಗ್ರೆಸ್ 68, ಇತರೇ 8

    ರಾಜಸ್ಥಾನ : ಒಟ್ಟು ಕ್ಷೇತ್ರಗಳು 199
    ಬಿಜೆಪಿ 73, ಕಾಂಗ್ರೆಸ್ 99, ಎಡ ಪಕ್ಷ 2, ಇತರೇ 25

    ಮಿಜೋರಾಂ : ಒಟ್ಟು ಕ್ಷೇತ್ರಗಳು 40
    ಬಿಜೆಪಿ 1, ಕಾಂಗ್ರೆಸ್ 5, ಇತರೇ 34

    ತೆಲಂಗಾಣ : ಒಟ್ಟು ಕ್ಷೇತ್ರಗಳು 119
    ಬಿಜೆಪಿ 1, ಕಾಂಗ್ರೆಸ್ 19, ಎಡ ಪಕ್ಷ 1, ಇತರೇ 98

    2018ರಲ್ಲಿ ಯಾರಿಗೆ ಎಷ್ಟು?
    ಒಟ್ಟು 9 ರಾಜ್ಯಗಳ 1,077 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ 352, ಕಾಂಗ್ರೆಸ್ 404, ಎಡಪಕ್ಷ 19, ಇತರೇ 302 ಸ್ಥಾನಗಳನ್ನು ಗೆದ್ದುಕೊಂಡಿದೆ.

    ಈಗ ದೇಶದಲ್ಲಿ ಯಾರಿಗೆ ಎಷ್ಟು ಸ್ಥಾನವಿದೆ?
    ಕಳೆದ ಲೋಕಸಭಾ ಚುನಾವಣೆ ಬಳಿಕ ದೆಹಲಿ, ಪುದುಚೇರಿ ಸೇರಿದಂತೆ ಒಟ್ಟು 29 ರಾಜ್ಯಗಳ 4,230 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 1,201(ಶೇ.29), ಕಾಂಗ್ರೆಸ್ 938(ಶೇ.23), ಎಡ ಪಕ್ಷ 138(ಶೇ.3), ಇತರೇ 1,873(ಶೇ.45) ಕ್ಷೇತ್ರಗಳಲ್ಲಿ ಗೆಲುವನ್ನು ಪಡೆದಿದೆ. ಈ ಫಲಿತಾಂಶವನ್ನು ವಿಶ್ಲೇಷಿಸಿದಾಗ ರಾಷ್ಟ್ರೀಯ ಪಕ್ಷ ಅಧಿಕಾರಕ್ಕೆ ಏರಬೇಕಾದರೆ ಸ್ಥಳೀಯ ಮಟ್ಟದಲ್ಲಿ ಮೈತ್ರಿ ಅನಿವಾರ್ಯ. ಯಾರು ಗೆಲ್ಲುವ ಕುದುರೆಯ ಜೊತೆ ಮೈತ್ರಿ ಮಾಡುತ್ತಾರೋ ಅವರು ಕೇಂದ್ರದಲ್ಲೂ ಅಧಿಕಾರಕ್ಕೆ ಏರುವುದು ನಿಶ್ಚಿತ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಮಲತಾಗೆ `ಕೈ’ ಕೊಟ್ಟ ಕಾಂಗ್ರೆಸ್ – ಇತ್ತ ಪ್ರಚಾರಕ್ಕಾಗಿ ನಟಿ ಫೋಟೋಶೂಟ್

    ಸುಮಲತಾಗೆ `ಕೈ’ ಕೊಟ್ಟ ಕಾಂಗ್ರೆಸ್ – ಇತ್ತ ಪ್ರಚಾರಕ್ಕಾಗಿ ನಟಿ ಫೋಟೋಶೂಟ್

    ಮಂಡ್ಯ: ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್ಸಿನಿಂದ ಟಿಕೆಟ್ ಸಿಗದಿದ್ದರೂ, ಅವರು ಚುನಾವಣಾ ಕೆಲಸಗಳಿಗೆ ಹಾಗೂ ಪ್ರಚಾರಕ್ಕೆ ಫೋಟೋಗಳನ್ನು ಬಳಸಲು ಫೋಟೋಶೂಟ್ ನಡೆಸಿದ್ದಾರೆ.

    ಚುನಾವಣಾ ಅಖಾಡಕ್ಕಿಳಿಯಲು ಸುಮಲತಾ ಅವರು ಭರ್ಜರಿ ತಯಾರಿ ನಡೆಸಿದ್ದಾರೆ. ಕಟೌಟ್ ಮತ್ತು ವೇದಿಕೆಗಳಲ್ಲಿ ಹೇಗೆ ರಾಜಕಾರಣಿಗಳ ಫೋಟೋ ಕಾಣುತ್ತದೋ ಅದೇ ರೀತಿಯಾಗಿ ಸುಮಲತಾ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.

    ಬಿಜೆಪಿಯಿಂದ ಕಣಕ್ಕೆ ಇಳಿಯಲು ಸುಮಲತಾ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ. ಕಾಂಗ್ರೆಸ್ ಕೈ ಕೊಟ್ಟ ಹಿನ್ನೆಲೆಯಲ್ಲಿ ಅವರು ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧೆ ನಡೆಸುವ ಸಾಧ್ಯತೆಗಳಿವೆ ಎನ್ನುವ ಮಾತುಗಳು ಈಗ ಹರಿದಾಡುತ್ತಿವೆ.

    ಲೋಕಸಭಾ ಚುನಾವಣಾ ತಯಾರಿ ನಡೆದಿದ್ದು ಮಂಡ್ಯದಿಂದ ಸುಮಲತಾಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಮಂಡ್ಯವನ್ನು ಜೆಡಿಎಸ್‍ಗೆ ಬಿಟ್ಟು ಕೊಟ್ಟಿದ್ದೇವೆ. ಈಗಾಗಲೇ ಹಾಲಿ ಜೆಡಿಎಸ್ ಸಂಸದರಿದ್ದಾರೆ. ಹಾಲಿ ಜೆಡಿಎಸ್ ಸಂಸದರು ಇರುವಾಗ ಟಿಕೆಟ್ ಕೇಳಲು ಬರಲ್ಲ. ನಮ್ಮ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮೈತ್ರಿ ಹೆಚ್ಚು ಸ್ಥಾನ ಗೆಲುವು ಸಾಧಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯದಲ್ಲಿ ಮನೆ ಹುಡುಕುತ್ತಿದ್ದ ಸುಮಲತಾ ಅವರು ಅಂಬರೀಶ್ ಇದ್ದ ಬಾಡಿಗೆ ಮನೆಗೆ ಹೋಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿತ್ತು. ಈ ಹಿಂದೆಯೇ ಮಂಡ್ಯಕ್ಕೆ ಬಂದಾಗ ಜಿಲ್ಲೆಯ ಜನರನ್ನು ಭೇಟಿ ಮಾಡಿ ಅವರ ಕಷ್ಟ ಸುಖ ಆಲಿಸಲು ಸುಮಲತಾ ಸ್ವಂತ ಮನೆ ಮಾಡಲು ನಿರ್ಧಾರ ಮಾಡಿದ್ದರು. ಸ್ವಂತ ಮನೆ ಮಾಡಲು ತಡವಾಗುವುದರಿಂದ ತಕ್ಷಣಕ್ಕೆ ಚಾಮುಂಡೇಶ್ವರಿ ನಗರದಲ್ಲಿರುವ ಬಾಡಿಗೆ ಮನೆಯಲ್ಲಿರಲು ಸುಮಲತಾ ನಿರ್ಧರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 6 ತಿಂಗಳು ಮಾತ್ರ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪ್ರಜ್ವಲಿಸೋದಾ?

    6 ತಿಂಗಳು ಮಾತ್ರ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪ್ರಜ್ವಲಿಸೋದಾ?

    ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಭರ್ಜರಿ ಸರ್ಜರಿಯಾಗುವ ಸಾಧ್ಯತೆಯಿದ್ದು, ಸಂಘ, ಪಕ್ಷ ನಿಷ್ಠರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎನ್ನುವ ಸಲಹೆಯನ್ನು ಆರ್‌ಎಸ್‌ಎಸ್  ನಾಯಕರು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ನೀಡಿದ್ದಾರೆ.

    ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ನಡೆದ ಆರ್‌ಎಸ್‌ಎಸ್ ಬೈಠಕ್ ನಲ್ಲಿ ನಾಯಕರು ಅಮಿತ್ ಶಾ ಅವರಿಗೆ ಟಾಸ್ಕ್ ನೀಡಿದ್ದಾರೆ. ಸಂಘದ ಕಾರ್ಯತಂತ್ರಗಳನ್ನು ಗಟ್ಟಿಗೊಳಿಸಲು ಸಂಘ ನಿಷ್ಠ ನಾಯಕರೇ ಬಿಜೆಪಿಯನ್ನು ಮುನ್ನಡೆಸಬೇಕು. ಯಡಿಯೂರಪ್ಪ ಬದಲಾವಣೆ ಮಾಡಿದ್ದೇ ಆದಲ್ಲಿ ಪಕ್ಷ ಮುನ್ನಡೆಸಲು ಜಾತಿ, ಮಾಸ್ ಹುಡುಕಾಟ ನಡೆಸದೇ ಸಂಘದ ಜೊತೆ ಚೆನ್ನಾಗಿ ಸಂಬಂಧ ಹೊಂದಿರುವ ವ್ಯಕ್ತಿಯನ್ನು ನೇಮಿಸಿ ಎಂದು ಸಲಹೆ ನೀಡಿದ್ದಾಗಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಆರ್‌ಎಸ್‌ಎಸ್ ನೀಡಿದ ಪಟ್ಟಿಯಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಮಂಗಳೂರಿನ ಸಂಸದ ನಳೀನ್ ಕುಮಾರ್ ಕಟೀಲ್ ಹೆಸರಿದೆ. ಈ ಸಲಹೆಯನ್ನು ಅಮಿತ್ ಶಾ ಒಪ್ಪಿದ್ದಾರೆ ಎನ್ನಲಾಗಿದ್ದು, ರಾಜ್ಯದಲ್ಲಿ ಏನೇ ಬದಲಾವಣೆ ಇದ್ದರೂ ಅದು ಲೋಕಸಭಾ ಚುನಾವಣೆಯ ನಂತರವೇ ಎಂದು ಉತ್ತರಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೂರು ಮಂತ್ರವನ್ನು ಜಪಿಸಿ `ಲೋಕ’ ಗೆಲ್ಲಿ: ಅಮಿತ್ ಶಾಗೆ ಆರ್‌ಎಸ್‌ಎಸ್ ಮುಖಂಡರಿಂದ ಸಲಹೆ

    ಒಂದು ವಾರದಿಂದ ನಡೆಯುತ್ತಿರುವ ಆರ್‌ಎಸ್‌ಎಸ್ ಬೈಠಕ್ ಶುಕ್ರವಾರ ಕೊನೆಗೊಳ್ಳಲಿದ್ದು ಬುಧವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಪಾಲ್ಗೊಂಡಿದ್ದರು. ಲೋಕಸಭೆ ಚುನಾವಣೆಗೆ ಮುನ್ನ ರಾಮಮಂದಿರ ನಿರ್ಮಾಣದ ಬಗ್ಗೆ ಕೇಂದ್ರ ಸರಕಾರ ಸುಗ್ರೀವಾಜ್ಞೆ ತರಬೇಕೆಂದು ಆರ್‌ಎಸ್‌ಎಸ್ ನಾಯಕರು ಆಗ್ರಹಿಸಿದ ಹಿನ್ನೆಲೆಯಲ್ಲಿ ತಡರಾತ್ರಿಯವರೆಗೆ ನಾಯಕರ ಅಭಿಪ್ರಾಯವನ್ನು ಶಾ ಆಲಿಸಿದ್ದಾರೆ. ಸಭೆಯಲ್ಲಿ ರಾಮಮಂದಿರ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಸೂಚಿಸಲಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಶಬರಿಮಲೆ ವಿವಾದವೂ ಪ್ರಸ್ತಾಪಗೊಂಡಿದ್ದು, ಬಿಜೆಪಿ ವರಿಷ್ಠರ ಗಮನ ಸೆಳೆಯಲಾಗಿದೆ.

    ಕ್ಷೇತ್ರದ ಪರಂಪರೆಗೆ ಧಕ್ಕೆಯಾಗದಂತೆ ಭಕ್ತರ ಸಂಘರ್ಷವನ್ನು ತಪ್ಪಿಸಲು ಬಿಜೆಪಿಯಿಂದ ಪ್ರಯತ್ನ ನಡೆಸುವಂತೆ ಸೂಚನೆ ನೀಡಲಾಗಿದೆ. ಸಭೆ ಬಳಿಕ ಹೊರಟ ಅಮಿತ್ ಶಾ ಓಷಿಯನ್ ಪರ್ಲ್ ಹೊಟೇಲ್‍ನಲ್ಲಿ ತಡರಾತ್ರಿಯವರೆಗೂ ಬಿಜೆಪಿ ನಾಯಕರೊಂದಿಗೆ ಸಣ್ಣ ಮಟ್ಟಿನ ಸಭೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ 9.15ಕ್ಕೆ ವಿಶೇಷ ವಿಮಾನದ ಮೂಲಕ ಅಮಿತ್ ಶಾ ದೆಹಲಿಗೆ ಪ್ರಯಾಣಿಸಿದ್ದಾರೆ.

    ಸತತ ನಾಲ್ಕು ಗಂಟೆಗಳ ಕಾಲ ಆರ್‌ಎಸ್‌ಎಸ್ ಮುಖಂಡರ ಜತೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ. ಸುರೇಶ್ ಭಯ್ಯಾಜಿ ಜೋಶಿ, ಮುಕುಂದ್ ಜೀ, ಸಂತೋಷ್ ಜೀ ಸೇರಿದಂತೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ಆರ್‌ಎಸ್‌ಎಸ್ ಪ್ರಮುಖರ, ಸಂಘಟನಾ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕರಾವಳಿಯಲ್ಲಿ ಬಿಜೆಪಿ ಚಾಣಕ್ಯನ ಮಾಸ್ಟರ್‌ಪ್ಲ್ಯಾನ್‌ – ಆರ್‌ಎಸ್‌ಎಸ್ ಬೈಠಕ್‍ನಲ್ಲಿ ರಹಸ್ಯ ಮಾತುಕತೆ

    ಕರಾವಳಿಯಲ್ಲಿ ಬಿಜೆಪಿ ಚಾಣಕ್ಯನ ಮಾಸ್ಟರ್‌ಪ್ಲ್ಯಾನ್‌ – ಆರ್‌ಎಸ್‌ಎಸ್ ಬೈಠಕ್‍ನಲ್ಲಿ ರಹಸ್ಯ ಮಾತುಕತೆ

    ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ಒಂದು ವಾರದಿಂದ ನಡೆಯುತ್ತಿರುವ ಆರ್‌ಎಸ್‌ಎಸ್ ಬೈಠಕ್ ಶುಕ್ರವಾರ ಕೊನೆಗೊಳ್ಳಲಿದ್ದು ಬುಧವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಪಾಲ್ಗೊಂಡಿದ್ದರು.

    ಲೋಕಸಭೆ ಚುನಾವಣೆಗೆ ಮುನ್ನ ರಾಮಮಂದಿರ ನಿರ್ಮಾಣದ ಬಗ್ಗೆ ಕೇಂದ್ರ ಸರಕಾರ ಸುಗ್ರೀವಾಜ್ಞೆ ತರಬೇಕೆಂದು ಆರ್‌ಎಸ್‌ಎಸ್ ನಾಯಕರು ಆಗ್ರಹಿಸಿದ ಹಿನ್ನೆಲೆಯಲ್ಲಿ ತಡರಾತ್ರಿವರೆಗೆ ನಾಯಕರ ಅಭಿಪ್ರಾಯವನ್ನು ಶಾ ಆಲಿಸಿದ್ದಾರೆ. ಸಭೆಯಲ್ಲಿ ರಾಮಮಂದಿರ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಸೂಚಿಸಲಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಶಬರಿಮಲೆ ವಿವಾದವೂ ಪ್ರಸ್ತಾಪಗೊಂಡಿದ್ದು, ಬಿಜೆಪಿ ವರಿಷ್ಠರ ಗಮನ ಸೆಳೆಯಲಾಗಿದೆ.

    ಕ್ಷೇತ್ರದ ಪರಂಪರೆಗೆ ಧಕ್ಕೆಯಾಗದಂತೆ ಭಕ್ತರ ಸಂಘರ್ಷವನ್ನು ತಪ್ಪಿಸಲು ಬಿಜೆಪಿಯಿಂದ ಪ್ರಯತ್ನ ನಡೆಸುವಂತೆ ಸೂಚನೆ ನೀಡಲಾಗಿದೆ. ಸಭೆ ಬಳಿಕ ಹೊರಟ ಅಮಿತ್ ಶಾ ಓಷಿಯನ್ ಪರ್ಲ್ ಹೊಟೇಲ್‍ನಲ್ಲಿ ತಡರಾತ್ರಿವರೆಗೂ ಬಿಜೆಪಿ ನಾಯಕರೊಂದಿಗೆ ಸಣ್ಣ ಮಟ್ಟಿನ ಸಭೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ 9.15ಕ್ಕೆ ವಿಶೇಷ ವಿಮಾನದ ಮೂಲಕ ಅಮಿತ್ ಶಾ ದೆಹಲಿಗೆ ಪ್ರಯಾಣಿಸಲಿದ್ದಾರೆ.

    ಏನು ಚರ್ಚೆಯಾಗಿದೆ?
    ಸತತ ನಾಲ್ಕು ಗಂಟೆಗಳ ಕಾಲಆರ್‌ಎಸ್‌ಎಸ್ ಮುಖಂಡರ ಜತೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ. ಸುರೇಶ್ ಭಯ್ಯಾಜಿ ಜೋಶಿ, ಮುಕುಂದ್ ಜೀ, ಸಂತೋಷ್ ಜೀ ಸೇರಿದಂತೆ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ಆರ್‌ಎಸ್‌ಎಸ್ ಪ್ರಮುಖರ, ಸಂಘಟನಾ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆದಿದೆ.

    ಅಯೋಧ್ಯೆ, ಶಬರಿಮಲೆ ವಿಚಾರ ಬಳಸಿ ಲೋಕಸಭೆ ಚುನಾವಣೆ ಹೇಗೆ ಎದುರಿಸಬೇಕು? ಜ್ವಲಂತ ವಿಚಾರಗಳ ಮೂಲಕ ಎಡಪಕ್ಷಗಳಿಗೆ ಏಟು ನೀಡಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸ್ಥಾನಗಳನ್ನು ಪಡೆಯಲು ಏನು ಮಾಡಬೇಕು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews