Tag: LokSabha Elections 2024

  • ಎಲ್ಲವನ್ನೂ ದೇವರು ನೋಡ್ಕೋತಾನೆ: ಡಿಕೆ ಸುರೇಶ್ ಭಾವುಕ!

    ಎಲ್ಲವನ್ನೂ ದೇವರು ನೋಡ್ಕೋತಾನೆ: ಡಿಕೆ ಸುರೇಶ್ ಭಾವುಕ!

    ರಾಮನಗರ: ಲೋಕಸಭಾ ಚುನಾವಣೆಯಲ್ಲಿ (Lok sabha Elections 2024) ಈ ಬಾರಿ ಡಿಕೆ ಸುರೇಶ್ (DK Suresh) ಅವರಿಗೆ ಸೋಲಾಗಿದ್ದು, ಈ ಹಿನ್ನೆಲೆಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾಜಿ ಸಂಸದರು ಭಾವುಕರಾಗಿದ್ದಾರೆ.

    ಕನಕಪುರದ ಡಿಕೆ ಶಿವಕುಮಾರ್ ನಿವಾಸದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಡಿಕೆ ಸುರೇಶ್ ಕಣ್ಣೀರು ಹಾಕಿದ್ದಾರೆ. ಸೋತಿದ್ದೀನಿ ಅಂತಾ ಸುಮ್ನೆ ಕೂರುವುದಿಲ್ಲ. ನಿಮ್ಮೆಲ್ಲರಿಗೂ ಒಂದು ಕೊರಗಿತ್ತು. ನಿಮ್ಮ ಮನೆಗೆ ಬರಲ್ಲ ಅಂತಿದ್ರೀ, ಇನ್ಮುಂದೆ ನಿಮ್ಮ ಮನೆಗೂ ಬರ್ತಿನಿ, ನಿಮ್ಮ ಬೀದಿಗೂ ಬರ್ತಿನಿ. ಎಲ್ಲಾ ಕೆಲಸ ಕಾರ್ಯಗಳನ್ನು ನಿಮ್ಮ ಜೊತೇಲಿ ಇದ್ದು ಮಾಡ್ತೀನಿ ಎಂದು ಹೇಳಿದರು.

    ನಾನು ಬದುಕಬೇಕು, ಬಾಳಬೇಕು ನನ್ನ ಕೆಲಸಾನೂ ನೋಡಬೇಕು. ಅದೆಲ್ಲದರ ಜೊತೆ ನಿಮ್ಮ ಕೆಲಸವನ್ನೂ ಮಾಡ್ತೀನಿ. ಧೈರ್ಯವಾಗಿರಿ ಯಾರಿಗೂ ಅಂಜಬೇಕಾಗಿಲ್ಲ, ಯಾರಿಗೂ ಹೇದರಿಕೊಳ್ಳಬೇಡಿ. ಯಾರು ಯಾರು ಏನೆಲ್ಲಾ ಮಾಡಿದ್ದಾರೆ, ಅದೆಲ್ಲವನ್ನೂ ದೇವರು ನೋಡ್ಕೊತಾನೆ ಎಂದು ಡಿಕೆ ಸುರೇಶ್ ಗದ್ಗದಿತರಾದರು.

    ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾಕ್ಟರ್ ಮಂಜುನಾಥ್ ಅವರು ಒಟ್ಟು 10,79,002 ಹಾಗೂ ಡಿ.ಕೆ.ಸುರೇಶ್ 8,09,355 ಮತಗಳನ್ನು ಪಡೆದರು. ಡಾಕ್ಟರ್ ಬರೋಬ್ಬರಿ 2,69,647 ಮತಗಳ ಅಂತರದಿಂದ ಹಾಲಿ ಸಂಸದರನ್ನು ಪರಾಭವಗೊಳಿಸಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಡಿ.ಕೆ.ಸುರೇಶ್‍ಗೆ ನಿರಾಸೆಯಾಗಿದೆ.

  • ಭಾನುವಾರ ಸಂಜೆ 6 ಗಂಟೆಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ

    ಭಾನುವಾರ ಸಂಜೆ 6 ಗಂಟೆಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ

    ನವದೆಹಲಿ: ಜೂನ್ 9 ರ ಭಾನುವಾರ ಸಂಜೆ 6 ಗಂಟೆಗೆ ನರೇಂದ್ರ ಮೋದಿ (Narendra Modi) ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.

    ಇಂದು  ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಎನ್‌ಡಿಎ (NDA) ಸಂಸದರ ಸಭೆ ನಡೆಯಿತು. ಈ ವೇಳೆ ಪ್ರಹ್ಲಾದ್‌ ಜೋಶಿ  ಜೂನ್‌ 9 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

    ಆರಂಭದಲ್ಲಿ ಶನಿವಾರ ಪ್ರಮಾಣ ವಚನ ನಡೆಯಲಿದೆ ಎಂದು ವರದಿಯಾಗಿತ್ತು. ಆದದರೆ  ಈಗ ಭಾನುವಾರ ಪ್ರಮಾಣ ವಚನ ನಡೆಯಲಿದೆ ಎನ್ನುವುದು ಅಧಿಕೃತವಾಗಿ ಪ್ರಕಟವಾಗಿದೆ. ಯಾರೆಲ್ಲ ಪ್ರಮಾಣ ವಚನ ನಡೆಸಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.  ಇದನ್ನೂ ಓದಿ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು – ಡಿಕೆಸು ಪ್ರಾಪರ್ಟಿ ಶ್ಯೂರಿಟಿ

    ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ನಾನು ಈಗಾಗಲೇ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದರು. ಇನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾದಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಯಿತು. ಆದರೆ ಇನ್ನೊಂದು ಸ್ಥಾನ ಗೆಲ್ಲಲು ಸಾಧ್ಯವಾಗದಿರುವುದು ಬೇಸರ ತಂದಿದೆ ಎಂದರು.

    ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ  293 ಸ್ಥಾನಗಳನ್ನು ಗೆದ್ದಿದೆ. ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಕ್ರಮವಾಗಿ 16 ಮತ್ತು 12 ಸ್ಥಾನಗಳನ್ನು ತಮ್ಮ ರಾಜ್ಯಗಳಲ್ಲಿ ಗೆದ್ದುಕೊಂಡಿದ್ದಾರೆ.

  • ಲೋಕಸಭೆ ಪ್ರವೇಶಿಸುವ ಅತ್ಯಂತ ಕಿರಿಯ ಸಂಸದರಿವರು!

    ಲೋಕಸಭೆ ಪ್ರವೇಶಿಸುವ ಅತ್ಯಂತ ಕಿರಿಯ ಸಂಸದರಿವರು!

    ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್‌ 4 ರಂದು ಹೊರಬಿದ್ದಿದ್ದು, ಇದರಲ್ಲಿ ನಾಲ್ವರು ಅತ್ಯಂತ ಕಿರಿಯ ಸಂಸದರಾಗಿ ಸಂಸತ್‌ ಪ್ರವೇಶಿಸಲು ಸಿದ್ಧರಾಗಿದ್ದಾರೆ.

    ಪುಷ್ಪೇಂದ್ರ ಸರೋಜ್ ಮತ್ತು ಪ್ರಿಯಾ ಸರೋಜ್ ಸಮಾಜವಾದಿ ಪಕ್ಷದ (SP) ಟಿಕೆಟ್‌ನಲ್ಲಿ ಸ್ಪರ್ಧಿಸಿದರೆ, ಶಾಂಭವಿ ಚೌಧರಿ ಮತ್ತು ಸಂಜನಾ ಜಾತವ್ ಅವರನ್ನು ಕ್ರಮವಾಗಿ ಲೋಕ ಜನಶಕ್ತಿ ಪಕ್ಷ (LJP) ಮತ್ತು ಕಾಂಗ್ರೆಸ್‌ನಿಂದ ಕಣಕ್ಕಿಳಿಸಲಾಗಿದೆ. ಇದೀಗ ಈ 4 ಅಭ್ಯರ್ಥಿಗಳು ಬಿಹಾರ, ಯುಪಿ, ರಾಜಸ್ಥಾನದ ಸ್ಥಾನಗಳಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರೆಲ್ಲರೂ 25 ವರ್ಷ ವಯಸ್ಸಿನವರಾಗಿದ್ದು, ಲೋಕಸಭೆ ಪ್ರವೇಶಿಸುವ ಅತ್ಯಂತ ಕಿರಿಯ ಸದಸ್ಯರು ಎನಿಸಿಕೊಂಡಿದ್ದಾರೆ.

    ನಾಲ್ವರ ವಿವರ ಇಲ್ಲಿದೆ:
    * ಶಾಂಭವಿ ಚೌಧರಿ: ಬಿಹಾರದ ನಿತೀಶ್ ಕುಮಾರ್ ಸಂಪುಟದ ಸಚಿವ ಅಶೋಕ್ ಚೌಧರಿ ಅವರ ಪುತ್ರಿಯಾಗಿರುವ ಶಾಂಭವಿ (Shambhavi Choudhary), ಬಿಹಾರದ ಸಮಸ್ತಿಪುರ್ ಕ್ಷೇತ್ರದಲ್ಲಿ LJP ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ.

    ಶಾಂಭವಿ ಚೌಧರಿಯವರು ಕಾಂಗ್ರೆಸ್‌ನ ಸನ್ನಿ ಹಜಾರಿಯವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಸನ್ನಿ ಹಜಾರಿ ಜೆಡಿಯು ಸಚಿವ ಮಹೇಶ್ವರ್ ಹಜಾರಿ ಅವರ ಪುತ್ರ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಶಾಂಭವಿ ಎನ್‌ಡಿಎ ಕಿರಿಯ ಅಭ್ಯರ್ಥಿ ಎಂದು ಹಾಡಿ ಹೊಗಳಿದ್ದರು.

    * ಸಂಜನಾ ಜಾತವ್: ಇವರು ರಾಜಸ್ಥಾನದ ಭರತ್‌ಪುರ ಕ್ಷೇತ್ರದಿಂದ ಗೆದ್ದಿದ್ದಾರೆ. 25ರ ಹರೆಯದ ಸಂಜನಾ, ಬಿಜೆಪಿಯ ರಾಮಸ್ವರೂಪ್ ಕೋಲಿ ಅವರನ್ನು 51,983 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ವರ್ಷ ರಾಜಸ್ಥಾನದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಸಂಜನಾ (Sanjana Jatav), ಬಿಜೆಪಿಯ ರಮೇಶ್ ಖೇಡಿ ವಿರುದ್ಧ ಕೇವಲ 409 ಮತಗಳಿಂದ ಸೋತಿದ್ದರು. ಸಂಜನಾ ರಾಜಸ್ಥಾನದ ಪೊಲೀಸ್ ಪೇದೆ ಕಪ್ತಾನ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ.

    * ಪುಷ್ಪೇಂದ್ರ ಸರೋಜ್: ಉತ್ತರಪ್ರದೇಶದ ಕೌಶಂಬಿ ಸಂಸದೀಯ ಸ್ಥಾನದಿಂದ ಸಮಾಜವಾದಿ ಪಕ್ಷದ (SP) ಅಭ್ಯರ್ಥಿಯಾಗಿ ಪುಷ್ಪೇಂದ್ರ (Pushpendra Saroj) ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಹಾಲಿ ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ಅವರನ್ನು ಪುಷ್ಪೇಂದ್ರ ಅವರು 1,03,944 ಮತಗಳ ಅಂತರದಿಂದ ಸೋಲಿಸಿದ್ದಾರೆ.

    ಪುಷ್ಪೇಂದ್ರ ಅವರು ಎಸ್‌ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, 5 ಬಾರಿ ಶಾಸಕ ಮತ್ತು ಉತ್ತರ ಪ್ರದೇಶದ ಮಾಜಿ ಸಚಿವ ಇಂದರ್‌ಜಿತ್ ಸರೋಜ್ ಅವರ ಪುತ್ರ. ಪುಷ್ಪೇಂದ್ರ ಸರೋಜ್ ಬಿಎಸ್‌ಸಿ ಮುಗಿಸಿದ ನಂತರ ರಾಜಕೀಯಕ್ಕೆ ಧುಮುಕಿದರು.

    * ಪ್ರಿಯಾ ಸರೋಜ್: 25 ವರ್ಷದ ಪ್ರಿಯಾ ಸರೋಜ್‌ (Priya Saroj) ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರದಲ್ಲಿ ಎಸ್‌ಪಿ ಟಿಕೆಟ್‌ನಲ್ಲಿ ರಾಜಕೀಯ ಅಖಾಡಕ್ಕಿಳಿದಿದ್ದಾರೆ. ಹಾಲಿ ಬಿಜೆಪಿ ಸಂಸದ ಭೋಲಾನಾಥ್ ಅವರನ್ನು 35,850 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪ್ರಿಯಾ ಸರೋಜ್ ಅವರ ತಂದೆ ತೂಫಾನಿ ಸರೋಜ್ ಮೂರು ಬಾರಿ ಸಂಸದರಾಗಿದ್ದಾರೆ.

  • ಕೃಷಿ ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದೆ: ಹೆಚ್‍ಡಿಕೆ

    ಕೃಷಿ ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದೆ: ಹೆಚ್‍ಡಿಕೆ

    ನವದೆಹಲಿ: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಗೆದ್ದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು (HD Kumaraswamy) ಇದೀಗ ಕೃಷಿ ಖಾತೆಗಾಗಿ ಬೇಡಿಕೆ ಇಟ್ಟಿದ್ದಾರೆ.

    ಎನ್‍ಡಿಎ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ, ಕೃಷಿ ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದೆ. ಪ್ರಧಾನಿ ಮೋದಿ ಜೊತೆಗೆ ಮೀಟಿಂಗ್ ಆದ ಬಳಿಕ ಎಲ್ಲವೂ ನಿರ್ಧಾರ ಆಗಲಿದೆ. ಈ ಹಂತದಲ್ಲಿ ಯಾವುದೇ ರೀತಿ ನೆಗೆಟಿವ್ ಆದ ನಿರ್ಧಾರ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಮಾಡುವುದಿಲ್ಲ ಎಂದು ಅನಿಸುತ್ತದೆ. ನನ್ನ ಪ್ರಜ್ಞೆ ಪ್ರಕಾರ ಅವರು ಯಾವುದೇ ನೆಗೆಟಿವ್ ತೀರ್ಮಾನ ಮಾಡುವುದಿಲ್ಲ ಎಂದುಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಜೆಡಿಎಸ್‌, ಬಿಜೆಪಿ ಕಾರ್ಯಕರ್ತರು ಒಂದೇ ನಾಣ್ಯದ ಎರಡು ಮುಖಗಳ ರೀತಿ ಕೆಲಸ ಮಾಡಿದ್ದಾರೆ: ಸೋಮಣ್ಣ

    ನಮ್ಮ ಡಿಮ್ಯಾಂಡ್ ಏನಿಲ್ಲ. ಹಲವಾರು ಸಮಸ್ಯೆ ಎದುರಿಸುತ್ತೇವೆ. ನಮ್ಮ ಮೊದಲ ಆದ್ಯತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಬೇಕು. ನಮ್ಮ ಪಕ್ಷದ ಪ್ರಮುಖ ಆಸಕ್ತಿ ಇರೋದು ರೈತರಿಗೆ ಸಹಾಯ ಮಾಡಬೇಕು ಅನ್ನೋದು. ನೋಡೋಣ ಏನು ತೀರ್ಮಾನ ಆಗುತ್ತೆ ಎಂದರು.

    ರಾಜ್ಯದ ಹಿತದೃಷ್ಟಿಯಿಂದ ಏನು ಮಾಡಬೇಕೆಂದು ಬಿಜೆಪಿ ನಾಯಕರಿಗೆ ಗೊತ್ತಿದೆ. ಅದರ ಪ್ರಕಾರ ಸಚಿವ ಸ್ಥಾನ ನೀಡುವ ನಿರ್ಧಾರ ಆಗಲಿದೆ. ಇಂಡಿಯಾ ಮೈತ್ರಿಕೂಟ ದೇಶಕ್ಕೆ ಒಳ್ಳೆಯದಲ್ಲ. ದೇಶದ ಅಭಿವೃದ್ಧಿಗೆ ಇಂಡಿಯಾ ಮೈತ್ರಿಕೂಟದಿಂದ ಅನುಕೂಲ ಇಲ್ಲ ಎಂದು ಹೇಳಿದರು.

  • ದಕ್ಷಿಣದಲ್ಲಿ ಸೂರ್ಯ ಶೈನ್- ಸೌಮ್ಯಾಗೆ ಸೋಲು

    ದಕ್ಷಿಣದಲ್ಲಿ ಸೂರ್ಯ ಶೈನ್- ಸೌಮ್ಯಾಗೆ ಸೋಲು

    ಬೆಂಗಳೂರು: ಲೋಕಸಭಾ ಚುನಾವಣೆಯ ಬೆಂಗಳೂರು ದಕ್ಷಿಣ (Bengaluru South) ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಹಾಲಿ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಮತ್ತೊಮ್ಮೆ ಗೆದ್ದು ಬೀಗಿದ್ದಾರೆ.

    ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ (Sowmya Reddy) ವಿರುದ್ಧ 2,77,083 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೂರ್ಯ ಅವರು ಎರಡನೇ ಬಾರಿಗೆ ಸಂಸತ್ ಪ್ರವೇಶ ಮಾಡಲಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ (Tejasvi Surya) ಅವರಿಗೆ 7,50,830 ಮತಗಳು ಬಿದ್ದಿದೆ. ವಿಧಾನಸಭೆ ಸೋಲಿನ ಬಳಿಕ ಲೋಕಸಭೆಯಲ್ಲಿ ಗೆಲುವಿನ ನಿರೀಕ್ಷೆಯಲಿದ್ದ ಸೌಮ್ಯಾ ರೆಡ್ಡಿಯವರು 4,73,747 ಮತಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಸೋಲಿನ ರುಚಿ ಕಂಡಿದ್ದಾರೆ. ಇನ್ನು 7830 ಮತಗಳು ನೋಟಾ ಚಲಾವಣೆಯಾಗಿದೆ.

    ಕಳೆದ ಮೂರು ದಶಕಗಳಿಂದ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿ ಉಳಿದಿದೆ. ಮುಖ್ಯವಾಗಿ ಇದು ದಿ. ಅನಂತ್ ಕುಮಾರ್ ಅವರ ಭದ್ರಕೋಟೆಯಾಗಿತ್ತು. 2019ರ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಅವರಿಗೆ 7,39,229 ಮತಗಳು ಬಿದ್ದಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಕೆ ಹರಿಪ್ರಸಾದ್ ಅವರು 4,08,037 ಮತಗಳನ್ನು ಪಡೆದು 3 ಲಕ್ಷಕ್ಕೂ ಅಧಿಕ ಮತಗಳ ಅಂತರದ ಸೋಲು ಅನುಭವಿಸಿದ್ದರು.

  • ರಾಯಚೂರಿನಲ್ಲಿ ‘ಕೈ’ ಹಿಡಿದ ಮತದಾರ- ಜಿ.ಕುಮಾರ್ ನಾಯ್ಕ್‌ಗೆ ಗೆಲುವಿನ ಮಾಲೆ

    ರಾಯಚೂರಿನಲ್ಲಿ ‘ಕೈ’ ಹಿಡಿದ ಮತದಾರ- ಜಿ.ಕುಮಾರ್ ನಾಯ್ಕ್‌ಗೆ ಗೆಲುವಿನ ಮಾಲೆ

    ರಾಯಚೂರು: ಬಿಸಿಲ ನಾಡು ರಾಯಚೂರಿನಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ (Loksabha Election Result 024) ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯ್ಕ್ (G Kumar Naik) ಭರ್ಜರಿ ಜಯಗಳಿಸಿದ್ದಾರೆ.

    ಜಿ. ಕುಮಾರ್ ಅವರು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯ್ಕ್ ವಿರುದ್ಧ 79,781 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಕುಮಾರ್ ನಾಯ್ಕ್ ಅವರು 6,70,966 ಮತಗಳನ್ನು ಪಡೆದರೆ, ರಾಜಾ ಅಮರೇಶ್ವರ್ ನಾಯ್ಕ್ (Raja Amareshwar Naik) ಅವರು 5,91,185 ಮತಗಳನ್ನು ಗಳಿಸಿದ್ದಾರೆ.

    ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ರಾಜಾ ಅಮರೇಶ್ವರ್ ನಾಯ್ಕ್ ಅವರು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭಾರೀ ಗೆಲುವು ಕಂಡಿದ್ದರು. ಹೀಗಾಗಿ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಆದರೆ ಸೋಲು ಕಂಡಿದ್ದಾರೆ.‌ ಇದನ್ನೂ ಓದಿ: ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ

    ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಕುಮಾರ್ ನಾಯ್ಕ್, ದೇಶದಲ್ಲಿನ ಬಿಜೆಪಿ ವಿರೋಧಿ ಅಲೆ ನನ್ನ ಗೆಲುವಿಗೆ ಕಾರಣವಾಗಿದೆ. ಬಿಜೆಪಿಯವರು ಪ್ರಚಾರದ ಭರಾಟೆಯಲ್ಲಿ ತಮ್ಮ ವಿರೋಧಿ ಅಲೆಯನ್ನು ಕಡೆಗಣಿಸಿದ್ದರು. 400 ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದ ಬಿಜೆಪಿಯವರ ನಿರೀಕ್ಷೆ ಸುಳ್ಳಾಗಿದೆ. ಮೋದಿ ಸರ್ಕಾರದ ವಿರುದ್ಧದ ಅಸಮಧಾನ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ. ರಾಯಚೂರು ಕ್ಷೇತ್ರದ ಮತದಾರರಿಗೆ ಧನ್ಯವಾದಗಳನ್ನ ಹೇಳುತ್ತೇನೆ. ರಾಜಕೀಯ ರಂಗದಲ್ಲಿ ನಾನಿನ್ನೂ ಅಂಬೆಗಾಲು ಇಡುತ್ತಿದ್ದೇನೆ. ರಾಯಚೂರು ನನಗೆ ಹೊಸದಲ್ಲಾ ಇದು ನನ್ನ ಕರ್ಮಭೂಮಿ ಹೀಗಾಗಿ ಜನ ಕೈ ಹಿಡಿದಿದ್ದಾರೆ.ಪ್ರಣಾಳಿಕೆಯಲ್ಲಿ ಹೇಳಿದ ಭರವಸೆಗಳನ್ನ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಅಂತ ಕುಮಾರ್ ನಾಯಕ್ ಹೇಳಿದ್ದಾರೆ.

  • ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ: ಕೋಟಾ

    ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ: ಕೋಟಾ

    – ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟಾಗೆ ಗೆಲುವು

    ಉಡುಪಿ: ಇನ್ನು ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ ಎಂದು ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಸಾಮಾನ್ಯ ಮನುಷ್ಯ ಹಿಂದಿ ಗೊತ್ತಿಲ್ಲ ಎಂದಿದ್ದೆ. ಲೆಕ್ಕ ಇಟ್ಟುಕೊಳ್ಳಿ ಆರು ತಿಂಗಳು ಅವಧಿ ಇದೆ. ಹಿಂದಿ ಮಾತನಾಡೋದನ್ನು ಕಲಿಯಲು ಇವತ್ತಿನಿಂದಲೇ ಶುರು ಮಾಡುತ್ತೇನೆ ಎಂದರು.

    ಬಿಜೆಪಿ ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟದ್ದೇ ಆಶ್ಚರ್ಯ. ಎರಡು ಜಿಲ್ಲೆಯ ನಾಯಕರ ಅವಿಶ್ರಾಂತ ದುಡಿಮೆ ಈ ಗೆಲುವಿಗೆ ಕಾರಣ. ಇದು ಕಾರ್ಯಕರ್ತರ ಗೆಲುವು ಎಂದು ಭಾವಿಸಿದ್ದೇನೆ. ಪಕ್ಷ ಮತ್ತು ಎನ್‍ಡಿಎ ಒಕ್ಕೂಟಕ್ಕೆ ಗೆಲುವನ್ನು ಸಮರ್ಪಿಸುತ್ತೇನೆ ಎಂದು ಹೇಳಿದರು.

    ಪಂಚಾಯತ್ ನಿಂದ ಪಾರ್ಲಿಮೆಂಟ್‍ವರೆಗೆ ಎಂಬ ಘೋಷಣೆ ಇಂದು ಸಾಬೀತಾಯಿತು. ನಾವು 1 ಲಕ್ಷ ಸುಮಾರು ಅಂತರದ ಗೆಲುವು ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಕಾರ್ಯಕರ್ತರು ನಾಯಕರ ಪರಿಶ್ರಮ ನನ್ನ ಮೇಲಿನ ಪ್ರೀತಿ ಈ ಸಂಖ್ಯೆಗೆ ಕಾರಣ. ನರೇಂದ್ರ ಮೋದಿ ಅವರಿಂದ ಭಾರತಕ್ಕೆ ಗೌರವ ಎಂಬುದು ಸತ್ಯ. ರಾಷ್ಟ್ರೀಯ ಭದ್ರತೆ, ರಾಮಮಂದಿರ -370, ಇಂತಹ ಬಹುದೊಡ್ಡ ಸವಾಲುಗಳಿಂದ ನಾವು ಗೆದ್ದಿದ್ದೇವೆ ಎಂದು ತಿಳಿಸಿದರು.

    ಬಡವರ ಮನೆಗೆ ಒಂದು ಲಕ್ಷ ಎಂದು ಇಂಡಿಯಾ ಕೂಟ ಹೇಳಿತ್ತು. ಎನ್ ಡಿ ಎ ಕೇಂದ್ರದಲ್ಲಿ ಅಧಿಕಾರ ಮಾಡುವುದರಲ್ಲಿ ಸಂಶಯ ಇಲ್ಲ. ನಾನು ಸಾಮಾನ್ಯ ಮನುಷ್ಯ ಹಿಂದಿ ಗೊತ್ತಿಲ್ಲ ಎಂದಿದ್ದೆ. ಲೆಕ್ಕ ಇಟ್ಟುಕೊಳ್ಳಿ ಇನ್ನು ಮುಂದೆ ಆರು ತಿಂಗಳು ಅವಧಿ ಇದೆ ಎಂದು ನುಡಿದರು.

    ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಈ ಬಾರಿ ಹೊಸ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದ್ದರು. ಇದೀ ಕೋಟಾ ಅವರು ಕಾಂಗ್ರೆಸ್‍ನ ಜಯಪ್ರಕಾಶ್ ಹೆಗ್ಡೆ ವಿರುದ್ಧ ಎರಡೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡಿದ್ದಾರೆ.

    ಇವಿಎಂ ಮತ್ತು ಅಂಚೆ ಮತಗಳ ಲೆಕ್ಕಚಾರ: ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಗೆ 731408 ಮತಗಳು ಬಿದ್ದರೆ, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಯವರಿಗೆ 4,72,505 ಮತಗಳು ಬಿದ್ದಿವೆ. ಈ ಮೂಲಕ 2,58,903 ಮತಗಳ ಅಂತರದಿಂದ ಕೋಟಾ ಅವರಿಗೆ ಪಾರ್ಲಿಮೆಂಟ್‌ ಪ್ರವೇಶ ಮಾಡುವ ಅವಕಾಶ ದಕ್ಕಿದೆ.

  • ದಕ್ಷಿಣ ಕನ್ನಡದ ‘ಕ್ಯಾಪ್ಟನ್’ ಚೌಟ

    ದಕ್ಷಿಣ ಕನ್ನಡದ ‘ಕ್ಯಾಪ್ಟನ್’ ಚೌಟ

    ಮಂಗಳೂರು: ಬಿಜೆಪಿ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ (Brijesh Chowta) ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರ ಮನಸ್ಸನ್ನು ಗೆದ್ದಿದ್ದಾರೆ.

    ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ (Padmaraj R. Poojary) ವಿರುದ್ಧ ಸುಮಾರು 1 ಲಕ್ಷ 37 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯದ ಮಾಲೆಗೆ ಕೊರಳೊಡ್ಡಿದ್ದಾರೆ. ಈ ಮೂಲಕ ಚೌಟ ಅವರು ಮೊದಲ ಪ್ರಯತ್ನದಲ್ಲಿಯೇ ಸಂಸತ್ ಪ್ರವೇಶ ಮಾಡಲಿದ್ದಾರೆ.

    ಲೋಕಸಭಾ ಚುನಾವಣೆಗೆ (Loksabha Elections 2024) ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಈ ಬಾರಿ ಹೊಸ ಮುಖಗಳನ್ನೇ ಅಖಾಡಕ್ಕೆ ಇಳಿಸಿದ್ದವು. ಹೀಗಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಪದ್ಮರಾಜ್ ಪೂಜಾರಿ ಹೆಸರು ಕೇಳಿ ಬರುತ್ತಿದ್ದಂತೆಯೇ ಭಾರೀ ಪೈಪೋಟಿ ಇರುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ಚೌಟ ಅವರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಪೂಜಾರಿಯವರನ್ನು ಸೋಲಿಸಿದ್ದಾರೆ. ಇದನ್ನೂ ಓದಿ: ಅಂಜಲಿ ನಿಂಬಾಳ್ಕರ್‌ ವಿರುದ್ಧ ಕಾಗೇರಿಗೆ ಗೆಲುವು- ಉತ್ತರ ಕನ್ನಡದಲ್ಲಿ ಸಂಭ್ರಮಾಚರಣೆ

    ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಮಿಥುನ್ ರೈ (Mithun Rai) ಹಾಗೂ ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಕಣಕ್ಕಿಳಿದಿದ್ದರು. ಈ ವೇಳೆ ಕಟೀಲ್ ಅವರು ಮಿಥುನ್ ರೈ ವಿರುದ್ಧ 2,74,621 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ 57.55 %ರಷ್ಟು ಮತಗಳನ್ನು ಪಡೆದಿತ್ತು.

    ದಕ್ಷಿಣ ಕನ್ನಡದಲ್ಲಿ 1951 ರಿಂದ 2019 ರವರೆಗೆ ಒಟ್ಟು 16 ಚುನಾವಣೆಗಳು ನಡೆದಿದೆ. ಇಲ್ಲಿಯವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 8 ಬಾರಿ ಬಿಜೆಪಿ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 9 ಬಾರಿ ಈ ಕ್ಷೇತ್ರದಿಂದ ಗೆಲುವನ್ನು ಸಾಧಿಸಿದ್ದಾರೆ.

  • ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಸೋಲು- ಗಾಂಧಿ ಕುಟುಂಬದ ಆಪ್ತನಿಗೆ ಗೆಲುವು

    ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಸೋಲು- ಗಾಂಧಿ ಕುಟುಂಬದ ಆಪ್ತನಿಗೆ ಗೆಲುವು

    ಲಕ್ನೋ: ಅಮೇಥಿ ಲೋಕಸಭಾ ಕ್ಷೇತ್ರದಿಂದ (Amethi Loksabha constituency) ಎರಡು ಬಾರಿ ಸಂಸದೆಯಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಈ ಬಾರಿ ಸೋಲನುಭವಿಸಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಅವರು  1,10,684 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಿಶೋರಿ ಲಾಲ್‌ ಅವರಿಗೆ 3,76,983 ಮತಗಳು ಬಿದ್ದರೆ, ಸ್ಮೃತಿ ಇರಾನಿಯವರಿಗೆ 2,66,299 ಮತಗಳು ಬಿದ್ದಿವೆ. ಇದು ಇನ್ನೂ ಬದಲಾಗಬಹುದು.

    ಉತ್ತರ ಪ್ರದೇಶದ 80 ಸಂಸದೀಯ ಕ್ಷೇತ್ರಗಳಲ್ಲಿ ಒಂದಾದ ಅಮೇಥಿ ಲೋಕಸಭಾ ಕ್ಷೇತ್ರವು ಐತಿಹಾಸಿಕವಾಗಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಬಿಜೆಪಿಯ ಕೇಂದ್ರ ಸಚಿವೆ ಸ್ಮೃತಿ ಇರಾನಿ 2019 ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ನೆಹರೂ-ಗಾಂಧಿ ಭದ್ರಕೋಟೆಯಾದ ಅಮೇಥಿಯಿಂದ ಆಗಿನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು 50 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು.

    ಸ್ಮೃತಿ ಇರಾನಿ ಅವರು ಗುಜರಾತ್‌ನಿಂದ 2011 ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಪ್ರವೇಶಿಸಿದ್ದರು. ನಂತರ ಆಗಸ್ಟ್ 2017 ರಲ್ಲಿ ಮರು ಆಯ್ಕೆಯಾದರು. ಪ್ರಸ್ತುತ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಜವಳಿ ಖಾತೆ ಸಚಿವರಾಗಿದ್ದಾರೆ. ಮೇ 2014 ಮತ್ತು ಜುಲೈ 2016 ರ ನಡುವೆ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜುಲೈ 2017 ರಿಂದ ಮೇ 2018 ರವರೆಗೆ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ನಿರ್ವಹಿಸಿದರು.

    ಅಮೇಥಿ ಕ್ಷೇತ್ರವು ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಮೇ 20 ರಂದು ಆರನೇ ಹಂತದಲ್ಲಿ ಅಮೇಥಿ ಸ್ಥಾನಕ್ಕೆ ಮತದಾನ ನಡೆಯಿತು. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ವಿಚಾರದಲ್ಲಿ ಅಮೇಥಿ ಮತ್ತು ರಾಯ್ ಬರೇಲಿಯನ್ನು ಸಮಾನವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದ್ದರು.

  • ಲೋಕಸಭಾ ಚುನಾವಣಾ ಫಲಿತಾಂಶ ನೋಡಲು ಪ್ರಜ್ವಲ್ ರೇವಣ್ಣಗೆ ಅವಕಾಶ

    ಲೋಕಸಭಾ ಚುನಾವಣಾ ಫಲಿತಾಂಶ ನೋಡಲು ಪ್ರಜ್ವಲ್ ರೇವಣ್ಣಗೆ ಅವಕಾಶ

    ಬೆಂಗಳೂರು: ಅತ್ಯಾಚಾರ ಆರೋಪಿ ಹಾಸನದ ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಜ್ವಲ್ ರೇವಣ್ಣ ಅವರಿಗೆ ಲೋಕಸಭಾ ಚುನಾವಣಾ ಫಲಿತಾಂಶ ನೋಡುವ ಭಾಗ್ಯ ಸಿಕ್ಕಿದೆ.

    ರಿಸಲ್ಟ್ ನೋಡುವ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ (Prajwal Revanna) ಅವರು ವಿಶೇಷ ತನಿಖಾ ತಂಡ (SIT) ಕಚೇರಿಯಲ್ಲಿ ಫಲಿತಾಂಶ ನೋಡುತ್ತಿದ್ದಾರೆ.‌

    ಪೆನ್‌ಡ್ರೈವ್ ವಿಚಾರ ಹೊರಬರುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಎಸ್‌ಐಟಿ ನೋಟಿಸ್ ಜಾರಿ ಮಾಡಿದ್ದರೂ ಕ್ಯಾರೇ ಎಂದಿರಲಿಲ್ಲ. ಬಳಿಕ ಬರೋಬ್ಬರಿ 34 ದಿನಗಳ ಬಳಿಕ ಭಾರತಕ್ಕೆ ವಾಪಸ್ಸಾಗಿದ್ದರು. ಜರ್ಮನಿಯ ಮ್ಯೂನಿಕ್‌ನಿಂದ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಎಸ್‌ಐಟಿ ಅಧಿಕಾರಿಗಳು ಲಾಕ್ ಮಾಡಿದ್ದರು.

    ಇದಾದ ಬಳಿಕ ಮೆಡಿಕಲ್ ಟೆಸ್ಟ್ಗೆ ಒಳಪಡಿಸಿ ನಂತರ ಅವರನ್ನು ಎಸ್‌ಐಟಿಯವರು ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಅವರು ಲೋಕಸಭಾ ಚುನಾವಣೆಯ ಫಲಿತಾಂಶ ನೋಡಲು ಅವಕಾಶ ನೀಡಬೇಕು ಎಂದು ಜಡ್ಜ್ ಮುಂದೆ ಮನವಿ ಮಾಡಿಕೊಂಡಿದ್ದರು. ಆಗ ಕೋರ್ಟ್, ಪರಿಸ್ಥಿತಿ ನೋಡಿಕೊಂಡು ವ್ಯವಸ್ಥೆ ಮಾಡಿಕೊಳ್ಳಲಾಗುವುದಾಗಿ ತಿಳಿಸಿತ್ತು. ಅಂತೆಯೇ ಇದೀಗ ಎಸ್‌ಐಟಿ ಕಚೇರಿಯಲ್ಲಿ ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಫಲಿತಾಂಶ ವೀಕ್ಷಿಸುತ್ತಿದ್ದಾರೆ.