Tag: loksabha elections 2019

  • ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೇಫ್ ಗೇಮ್!

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೇಫ್ ಗೇಮ್!

    – ಎಚ್ಚರಿಕೆಯ ಹೆಜ್ಜೆ ಇಡಲು ಸುಮಕ್ಕ ಪ್ಲಾನ್

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಈಗಾಗಲೇ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ್ದು, ಇತ್ತ ಬಿಜೆಪಿ ಕೂಡ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಈ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೇಫ್ ಗೇಮ್ ಆಡುತ್ತಿದೆ. ಹಾಗೆಯೇ ಸುಮಲತಾ ಕೂಡ ಎಚ್ಚರಿಕೆಯ ಹೆಜ್ಜೆ ಇಡಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೂಚನೆಯಂತೆ ಹೆಜ್ಜೆ ಇಡಲು ಸುಮಲತಾ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಎಸ್‍ಎಂಕೆ ಅವರನ್ನು ಮಾತ್ರ ಮಂಡ್ಯದಲ್ಲಿ ಪ್ರಚಾರಕ್ಕೆ ಆಹ್ವಾನಿಸಲು ಚಿಂತನೆ ನಡೆಸಲಾಗಿದೆ. ಈ ಮೂಲಕ ಎಸ್‍ಎಂಕೆ ಅವರನ್ನೇ ಬಿಜೆಪಿ ಎಂದು ಬಿಂಬಿಸಿ ಉಳಿದ ನಾಯಕರನ್ನು ದೂರ ಇಡಲು ಸುಮಲತಾ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

    ಈ ಕಡೆ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರಿಗೆ ಇರಿಸುಮುರುಸು ಉಂಟಾಗದಂತೆ ಹೆಜ್ಜೆ ಇಡೋದು. ಈ ಮೂಲಕ ಬಿಜೆಪಿಯ ಬಾಹ್ಯ ಬೆಂಬಲದಿಂದ ಕೈ ಪಡೆಯೊಂದಿಗೆ ಅಖಾಡಕ್ಕೆ ಇಳಿಯುವ ಪ್ಲಾನ್ ಇದಾಗಿದೆ. ಈ ತಂತ್ರಗಾರಿಕೆಯಿಂದ ಮಾತ್ರ ಜೆಡಿಎಸ್ ವರ್ಸಸ್ ಸುಮಲತಾ ಅಖಾಡಕ್ಕೆ ಛಾನ್ಸ್ ಸಿಗಲಿದೆ. ಒಂದು ವೇಳೆ ಬಿಜೆಪಿ ನಾಯಕರನ್ನೇ ನೆಚ್ಚಿಕೊಂಡ್ರೆ ಸುಮಲತಾಗೆ ಕಷ್ಟ ಎದುರಾಗಲಿದೆ. ಹೀಗಾಗಿ ಈ ಎಲ್ಲಾ ಮುಂದಾಲೋಚನೆಗಳನ್ನು ಇಟ್ಟುಕೊಂಡು ಸುಮಲತಾ ಮಹತ್ವದ ಹೆಜ್ಜೆ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಖರ್ಗೆ ಎಂಬ ಪರ್ವತದಿಂದ್ಲೇ ಕಾಂಗ್ರೆಸ್ ನಾಶವಾಗುತ್ತೆ- ಉಮೇಶ್ ಜಾಧವ್

    ಖರ್ಗೆ ಎಂಬ ಪರ್ವತದಿಂದ್ಲೇ ಕಾಂಗ್ರೆಸ್ ನಾಶವಾಗುತ್ತೆ- ಉಮೇಶ್ ಜಾಧವ್

    ಯಾದಗಿರಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಂಬ ಪರ್ವತದಿಂದಲೇ ಕಾಂಗ್ರೆಸ್ ನಾಶವಾಗುತ್ತದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹೇಳಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಶ್ವರ ಖಂಡ್ರೆಯವರು ಮಲ್ಲಿಕಾರ್ಜುನ ಖರ್ಗೆಯನ್ನು ಪರ್ವತ ಎಂದು ಕರೆದಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಜಾಧವ್, ಮಲ್ಲಿಕಾರ್ಜುನ ಖರ್ಗೆ ಹಳೆ ಪರ್ವತ ಅದು ತಾನೇ ಬೀಳುತ್ತದೆ. ಖರ್ಗೆ ಎಂಬ ಪರ್ವತ ತಂದು ಕಾಂಗ್ರೆಸ್ ತಾನೆ ನಾಶವಾಗುತ್ತದೆ ಎಂದು ಹೇಳಿದ್ದಾರೆ.

    ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್-ಜೆಡಡಿಎಸ್ ಸರ್ಕಾರ ಪತನವಾಗಲಿದೆ. ಬಿ.ಎಸ್ ಯಡಿಯೂರಪ್ಪ ಮತ್ತೆ ಸಿಎಂ ಆಗಲಿದ್ದಾರೆ. ಇದು ನೂರಕ್ಕೂ ನೂರರಷ್ಟು ಸತ್ಯ. ನನ್ನನ್ನು ಕಾಂಗ್ರೆಸ್ ನವರೆ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ ಟಿಕೆಟ್ ಪೈನಲ್ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಭೇಟಿ ಮಾಡಿದ್ದೇನೆ. ನನಗೆ ಮತ್ತು ಮೋದಿಗೆ ದೇವರು ಒಳ್ಳೆಯದು ಮಾಡಲಿ ಎಂದು ದೇವರ ದರ್ಶನ ಮಾಡಿದ್ದೇನೆ ಎಂದು ತಿಳಿಸಿದ್ರು.

    ನನಗೆ ಕ್ಷೇತ್ರದ ಎಲ್ಲ ಕಡೆ ಬೆಂಬಲ ಸಿಗುತ್ತಿದೆ. ನನ್ನ ರಾಜೀನಾಮೆ ವಿಚಾರದಲ್ಲಿ ಕೆಲವರು ಸುಮ್ಮನೆ ಗೊಂದಲ ಸೃಷ್ಟಿ ಮಾಡಿದ್ದಾರೆ. ಕಾನೂನಿನಲ್ಲಿ ತೊಡಕು ಇಲ್ಲ ನನ್ನ ರಾಜೀನಾಮೆಯನ್ನು ಸ್ಪೀಕರ್ ಅವರು ವಿಶೇಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಪೀಕರ್ ಮತ್ತೆ ನನಗೆ ಪತ್ರ ಬರೆದಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಯಾರ ಕೈಗೊಂಬೆಯಾಗಿಲ್ಲ. ಸ್ಪೀಕರ್ ಅವರು ಈ ತಿಂಗಳ 24ಕ್ಕೆ ನನ್ನನ್ನು ವಿಚಾರಣೆ ಕರೆದಿದ್ದು 25ರ ಒಳಗೆ ರಾಜೀನಾಮೆ ಅಂಗಿಕಾರ ಆಗುತ್ತದೆ ಅಂದ್ರು.

    ಸದ್ಯ ಕಾಂಗ್ರೆಸ್ ನಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಪಕ್ಷ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ. ನಾನು ಸಚಿವ ಆಗಬೇಕೆಂದು ಚಿಂಚೋಳಿ ಕ್ಷೇತ್ರದ ಜನರ ಆಸೆ ಇತ್ತು. ಈ ಮೈತ್ರಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬುವುದಕ್ಕೆ ನಮ್ಮ ಕ್ಷೇತ್ರದ ಜನ ಬೇಸರಗೊಂಡಿದ್ದಾರೆ ಎಂದು ಅವರು ಹೇಳಿದ್ರು.

  • ಬಿಎಸ್‍ವೈ ಡೈರಿ ಪ್ರಕರಣ- ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯೆ

    ಬಿಎಸ್‍ವೈ ಡೈರಿ ಪ್ರಕರಣ- ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎಂದು ಹೇಳಲಾದ ಡೈರಿಯೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ತಲ್ಲಣವೇರ್ಪಟ್ಟಿದೆ. ಈ ಕುರಿತು ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯಿಸಿದ್ದಾರೆ.

    ಕಾಂಗ್ರೆಸ್ ನಾಯಕರಿಗೆ ವಿನಯ್ ಅವರೇ ಡೈರಿ ನೀಡಿದ್ದಾರೆ ಎಂಬ ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅವರವರ ವೈಯಕ್ತಿಕ ವಿಚಾರವಾಗಿದೆ. ಅಲ್ಲಿ ಏನೇನ್ ಆಗಿದೆ ಎಂದು ನನಗೆ ಗೊತ್ತಿಲ್ಲ. ಇತ್ತೀಚೆಗೆ ಒಂದು ಆಡಿಯೋ ಕೂಡ ರಿಲೀಸ್ ಆಗಿತ್ತು. ಇದೀಗ ಡೈರಿ ಕೇಸ್ ನಲ್ಲಿ ಸಿಕ್ಕಾಕ್ಕೊಂಡಿದ್ದಾರೆ. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.

    ಆ ಡೈರಿ ಎಲ್ಲಿತ್ತು ಅನ್ನೋದೇ ನನಗೆ ಗೊತ್ತಿಲ್ಲ. ಆ ಡೈರಿಗೂ ನಮಗೂ ಸಂಬಂಧವಿಲ್ಲ. ನಾನೇ ಆ ಡೈರಿಯನ್ನು ನೋಡಿಲ್ಲ. ಹೀಗಾಗಿ ನಾನು ಕೊಟ್ಟಿದ್ದೀನಿ ಎಂದು ಹೇಗೆ ಹೇಳುತ್ತಾರೆ. ಅದಕ್ಕೆ ಅರ್ಥನೂ ಇಲ್ಲ ಅಂದ್ರು.

    ನನ್ನನ್ನು ಕಿಡ್ನಾಪ್ ಮಾಡಿಸಿದ್ದು ಇದೇ ಯಡಿಯೂರಪ್ಪ ಅವರ ಪಿಎ. ಅದರಲ್ಲಿ ಯಾವುದೇ ಅನುಮಾನನೇ ಇಲ್ಲ. ಅದಾದ ಬಳಿಕ ನಾನು ಕಿಡ್ನಾಪ್ ವಿಚಾರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೇಸ್ ಇತ್ತೀಚೆಗೆ ಸಿಸಿಬಿ ಹಸ್ತಾಂತರ ಆದ ಬಳಿಕ ಎಲ್ಲ ವಿಚಾರಣೆ ಆರಂಭವಾದ ನಂತರ ಸಂತೋಷ್, ಸಿಸಿಬಿಗೆ ಹಸ್ತಾಂತರ ಮಾಡಿದುದರ ಬಗ್ಗೆ ಪ್ರಶ್ನೆ ಮಾಡಿ ಹೈ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಹೀಗಾಗಿ ಈ ಲೈನ್ ನಲ್ಲಿ ನಾನು ಹೋರಾಟ ಮಾಡುತ್ತಾ ಬರುತ್ತಿದ್ದೇನೆ. ಈ ಮಧ್ಯೆ ಯಾವುದೋ ಡೈರಿ ವಿಚಾರದ ಕುರಿತು ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಅಂದ್ರು.

    ಡೈರಿ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ನಾನು ಎಲ್ಲಿ ಬೇಕಾದ್ರೂ ಪ್ರಮಾಣ ಮಾಡಲು ರೆಡಿಯಾಗಿದ್ದೇನೆ. ನಾನು ಇಂದಿನವರೆಗೂ ಡಿಕೆ ಶಿವಕುಮಾರ್ ಅವರನ್ನು ಭೇಟಿಯೇ ಮಾಡಿಲ್ಲ. ನನ್ನನ್ನು ಕಿಡ್ನಾಪ್ ಮಾಡಲು ಸುಪಾರಿ ಕೊಟ್ಟಿದ್ದೇ ಸಂತೋಷ್. ಆತ ಯಾಕೆ ಮಾಡಿದ ಅನ್ನೋದಕ್ಕೆ ಅವನೇ ಬಾಯಿ ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ರು.

    ಇದೇ ವೇಳೆ ಅವರು ಕಾಂಗ್ರೆಸ್ ನವರು ಬಿಡುಗಡೆ ಮಾಡಿರುವ ಡೈರಿಯ ಮೂಲ(ಒರಿಜಿನಲ್) ಕಾಪಿ ಎಲ್ಲಿದೆ ಎಂದು ಪ್ರಶ್ನಿಸಿದ್ರು. ಐಟಿ ದಾಳಿಯಾದ ಸಂದರ್ಭದಲ್ಲಿ ಅವರ ಮನೆಯಿಂದ ವಶಪಡಿಸಿಕೊಂಡಿರುವ ಎಲ್ಲದಕ್ಕೂ ಒಂದು ನೋಟ್ ಮಾಡಿ ದಾಖಲಾತಿಗಳನ್ನು ಎಂಟ್ರಿ ಮಾಡುತ್ತಾರೆ. ಅಲ್ಲದೆ ಆ ದಾಖಲಾತಿಗೆ ಇವರ ಬಳಿ ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಹೀಗಾಗಿ ಆ ಮಹರು ಪಟ್ಟಿಯಲ್ಲಿ ಡೈರಿ ವಿಚಾರ ಇರಬೇಕಲ್ವ ಎಂದು ವಿನಯ್ ಹೇಳಿದ್ರು.

    ಇಂದು ಯಡಿಯೂರಪ್ಪ ಅವರಿಗೆ ಈ ಪರಿಸ್ಥಿತಿ ಬರಲು ಅವರು ಪಕ್ಕದಲ್ಲಿ ಇಟ್ಟುಕೊಂಡ ಶನಿಯೇ ಕಾರಣ. ಆ ಶನಿ ಪ್ರಭಾವ ಬಿಎಸ್‍ವೈ ಮೇಲೆ ಪರಿಣಾಮ ಬೀಳುತ್ತಿದೆ. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಇನ್ನಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಿದ್ರು.

    ಬಿಎಸ್‍ವೈ ಆಪ್ತ ಸಂತೋಷ್ ಹಾಗೂ ಈಶ್ವರಪ್ಪ ಆಪ್ತ ವಿನಯ್ ಒಡನಾಟ ಚೆನ್ನಾಗಿಯೇ ಇತ್ತು. ಆ ಸಂದರ್ಭದಲ್ಲಿ ಡೈರಿ ವಿನಯ್ ಬಳಿ ಇತ್ತು. ಹೀಗಾಗಿ ಆ ಡೈರಿ ಪಡೆದುಕೊಳ್ಳಲು ಸಂತೋಷ್ ವಿನಯ್ ನನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೆಲ ಬಿಜೆಪಿ ನಾಯಕರು ಸಹ ವಿನಯ್ ಸಂಪರ್ಕ ಮಾಡಿ ಡೈರಿ ಕೊಟ್ಬಿಡು ಎಂದಿದ್ದರು. ಡೈರಿಯನ್ನ ಬಿಎಸ್ ವೈ ಆಪ್ತರೇ ಕಾಂಗ್ರೆಸ್ ನಾಯಕರಿಗೆ ತಲುಪಿಸಿದ್ದಾರೆ ಎಂದು ಈಶ್ವರಪ್ಪ ಆಪ್ತ ವಿನಯ್ ಹೊಸ ಬಾಂಬ್ ಹಾಕಿದ್ದಾರೆ.

  • ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ನಾಯಕ ಹಿಂದೇಟು!

    ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ನಾಯಕ ಹಿಂದೇಟು!

    – ಬಿಎಸ್‍ವೈಗೆ ಬಿಜೆಪಿ ಕಾರ್ಯಕರ್ತರು ಮನವಿ
    – ಕಾರ್ಯಕರ್ತರ ಮಧ್ಯೆಯೇ ಕಿತ್ತಾಟ

    ಬೆಂಗಳೂರು: ಬೆಂಗ್ಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಹಿಂದೇಟು ಹಾಕಿದ್ದಾರೆ.

    ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಸ್ಪಷ್ಟನೆ ನೀಡಿರೋ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಾವು ಸುತಾರಾಂ ಸಿದ್ಧವಿಲ್ಲ. ತಮಗೆ ರಾಷ್ಟ್ರ ರಾಜಕಾರಣಕ್ಕೆ ಹೋಗಲು ಇಷ್ಟವಿಲ್ಲ. ಅಲ್ಲದೆ ತಮ್ಮ ಅಸ್ತಿತ್ವ ಏನಿದ್ರೂ ರಾಜ್ಯ ರಾಜಕಾರಣಕ್ಕೆ ಸೀಮಿತ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ಕ್ಷೇತ್ರದ ಟಿಕೆಟ್ ಕೊಡೋದಾದ್ರೆ ನನ್ನ ಮಗಳಿಗೆ ಕೊಡಿ. ಇಲ್ಲವಾದರೆ ಬೇರೆ ಯಾರಿಗಾದ್ರೂ ಕೊಡಿ ತಮ್ಮ ಅಭ್ಯಂತರ ಇಲ್ಲ. ಆದ್ರೆ ಇತ್ತ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮಾತ್ರ ಯೋಗೇಶ್ವರ್‍ಗೆ ಟಿಕೆಟ್ ನೀಡಿ. ಅವರ ಮಗಳಿಗೆ ಬೇಡ ಎಂದು ರಾಜ್ಯ ನಾಯಕರಿಗೆ ಆಗ್ರಹಿಸಿದ್ದಾರೆ.

    ಇತ್ತ ಸಿ.ಪಿ. ಯೋಗೇಶ್ವರ್ ಮತ್ತು ನಿಶಾ ಯೋಗೇಶ್ವರ್ ಗೆ ಟಿಕೆಟ್ ಬೇಡ, ರಾಮನಗರ ಜಿಲ್ಲಾಧ್ಯಕ್ಷ ರುದ್ರೇಶ್ ಗೆ ಟಿಕೆಟ್ ಕೊಡಿ. ಇಲ್ಲವೇ ಕಾರ್ಯಕರ್ತರಿಗೆ ಕೊಡಿ ಎಂದು ಕೆಲವು ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.

    ಯಡಿಯೂರಪ್ಪ ಮನೆಯಿಂದ ಹೊರಬಂದ ವೇಳೆ ಕಾರ್ಯಕರ್ತರು ಮನವಿ ಮಾಡಿದ್ದು, ಈ ವೇಳೆ ನಾನೇನು ಮಾಡಲಪ್ಪ, ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂಬ ಮಾಹಿತಿ ಮೂಲಗಳು ತಿಳಿಸಿವೆ.

    ಕಾರ್ಯಕರ್ತರಿಗೆ ಕೊಡಿ, ಕ್ಷೇತ್ರದಲ್ಲಿ ಕಾರ್ಯಕರ್ತರು ಕಷ್ಟಪಡ್ತಿದ್ದಾರೆ ಎಂದು ಕಾರ್ಯಕರ್ತರು ಕೇಳಿಕೊಂಡಾಗ ಏನು ಹೇಳಬೇಕೋ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿ ಯಡಿಯೂರಪ್ಪ ಮನೆಯಿಂದ ತೆರಳಿದ್ದಾರೆ. ಯಡಿಯೂರಪ್ಪ ತೆರಳಿದ ಬಳಿಕ ಧವಳಗಿರಿ ನಿವಾಸದ ಮುಂದೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ತಾವೇ ಕಿತ್ತಾಡಿಕೊಂಡಿದ್ದಾರೆ. ಅಲ್ಲದೆ ಇದೇ ವೇಳೆ ಯೋಗೇಶ್ವರ್ ಬೆಂಬಲಿಗರು ಮತ್ತು ರುದ್ರೇಶ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ ಎಂಬುದಾಗಿ ತಿಳಿದುಬಂದಿದೆ.

  • ತುಮಕೂರಿನಿಂದಲೇ ಎಚ್.ಡಿ ದೇವೇಗೌಡ್ರು ಸ್ಪರ್ಧೆ

    ತುಮಕೂರಿನಿಂದಲೇ ಎಚ್.ಡಿ ದೇವೇಗೌಡ್ರು ಸ್ಪರ್ಧೆ

    ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟ ಬಳಿಕ ಎಲ್ಲಿಂದ ಲೋಕ ಅಖಾಡಕ್ಕೆ ಇಳಿಯುತ್ತಾರೆ ಎಂಬ ಭಾರೀ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಯಾಕಂದ್ರೆ ಎಚ್‍ಡಿಡಿ ಅವರು ಕೊನೆಗೂ ತುಮಕೂರಿನಿಂದಲೇ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

    ಅಳೆದೂ ತೂಗಿ ತೀರ್ಮಾನಕ್ಕೆ ಬಂದಿರೋ ಅವರು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಶುಕ್ರವಾರ ರಾತ್ರಿ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಪಕ್ಷದ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಿದ ದೇವೇಗೌಡರು ಅಂತಿಮವಾಗಿ ತುಮಕೂರಿನಿಂದ ಅಖಾಡಕ್ಕಿಳಿಯುವ ಫರ್ಮಾನು ಹೊರಡಿಸಿದ್ದಾರೆ.

    ಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ತುಮಕೂರು ಜಿಲ್ಲೆಯ ಜೆಡಿಎಸ್ ಶಾಸಕರಾದ ಸಚಿವ ಗುಬ್ಬಿ ವಾಸು, ಬಿ.ಸತ್ಯನಾರಾಯಣ, ಬಿ.ಸಿ.ಗೌರಿಶಂಕರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

    ಇತ್ತ ಮೂರು ಬಾರಿ ಮುಂದೂಡಿಕೆಯಾಗಿದ್ದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನವದೆಹಲಿಯ ಸೋನಿಯಾ ಗಾಂಧಿ ನಿವಾಸದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಶುಕ್ರವಾರ ನಡೆಯಿತು. ರಾಜ್ಯದಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ರಾಜ್ಯದ ಇಪ್ಪತ್ತು ಕ್ಷೇತ್ರಗಳಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು.

    ಫೈನಲ್ ಆಗಿರುವ ಕಾಂಗ್ರೆಸ್ ಅಭ್ಯರ್ಥಿಗಳು
    ಬಾಗಲಕೋಟೆ- ವೀಣಾ ಕಾಶಪ್ಪನವರ್
    ಬೀದರ್- ಈಶ್ವರ್ ಖಂಡ್ರೆ
    ಹಾವೇರಿ – ಡಿಆರ್ ಪಾಟೀಲ್

    ಬೆಂಗಳೂರು ಗ್ರಾಮಾಂತರ- ಡಿ.ಕೆ.ಸುರೇಶ್
    ಕಲ್ಬುರ್ಗಿ- ಮಲ್ಲಿಕಾರ್ಜುನ್ ಖರ್ಗೆ
    ಕೋಲಾರ – ಕೆ.ಹೆಚ್.ಮುನಿಯಪ್ಪ
    ಚಿಕ್ಕಬಳ್ಳಾಪುರ – ವೀರಪ್ಪ ಮೊಯ್ಲಿ

    ಚಾಮರಾಜನಗರ – ಧ್ರುವನಾರಾಯಣ್
    ಚಿತ್ರದುರ್ಗ – ಬಿ.ಎನ್.ಚಂದ್ರಪ್ಪ
    ರಾಯಚೂರು- ಬಿ.ವಿ.ನಾಯಕ್
    ಬಳ್ಳಾರಿ – ಉಗ್ರಪ್ಪ
    ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ

    ಕಾಂಗ್ರೆಸ್ ಸಂಭಾವ್ಯ ಪಟ್ಟಿ
    ದಕ್ಷಿಣ ಕನ್ನಡ – ವಿನಯ್ ಕುಮಾರ್ ಸೊರಕೆ
    ಹುಬ್ಬಳ್ಳಿ, ಧಾರವಾಡ – ಶಾಕಿರ್ ಸನದಿ / ಸದಾನಂದ ಡಂಗನವರ್
    ಬೆಂಗಳೂರು ಸೆಂಟ್ರಲ್ – ರಿಜ್ವಾನ್ ಅರ್ಷದ್
    ಮೈಸೂರು – ವಿಜಯಶಂಕರ್
    ಕೊಪ್ಪಳ – ರಾಜಶೇಖರ್ ಹಿಟ್ನಾಳ್
    ದಾವಣಗೆರೆ – ಎಸ್ ಎಸ್ ಮಲ್ಲಿಕಾರ್ಜುನ್
    ಬೆಂಗಳೂರು ದಕ್ಷಿಣ – ಪ್ರಿಯಾಕೃಷ್ಣಾ

  • ಕೈ ಮುಖಂಡರ ಉಚ್ಛಾಟನೆ ನಿರೀಕ್ಷಿಸಿದ್ದೆ- ಸುಮಲತಾ

    ಕೈ ಮುಖಂಡರ ಉಚ್ಛಾಟನೆ ನಿರೀಕ್ಷಿಸಿದ್ದೆ- ಸುಮಲತಾ

    – ಪುಟ್ಟಣ್ಣಯ್ಯ ಇಲ್ಲದ ಕೊರತೆ ಕಾಡುತ್ತಿದೆ

    ಮಂಡ್ಯ: ನನ್ನನ್ನು ಬೆಂಬಲಿಸಿದ್ದ ಕಾಂಗ್ರೆಸ್ ಮುಖಂಡರ ಉಚ್ಛಾಟನೆಯನ್ನು ನಾನು ನಿರೀಕ್ಷಿಸಿದ್ದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಕ್ಯಾತನಹಳ್ಳಿಯ ದಿ.ಕೆ.ಎಸ್.ಪುಟ್ಟಣ್ಣಯ್ಯ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನನ್ನನ್ನು ಬೆಂಬಲಿಸಿದ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಹಿಂಡವಾಳು ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದಾರೆ. ಕಾಂಗ್ರೆಸ್ ಅವರು ಹೀಗೆ ಮಾಡುತ್ತಾರೆ ಎಂದು ನನಗೆ ಮೊದಲೇ ತಿಳಿದಿತ್ತು. ಇದನ್ನ ನಮ್ಮ ಬೆಂಬಲಿಗರು ಸವಾಲಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

    ಪ್ರಸ್ತುತ ಸನ್ನಿವೇಶದಲ್ಲಿ ಪುಟ್ಟಣ್ಣಯ್ಯ ಇಲ್ಲದಿರುವುದು ದೊಡ್ಡ ಕೊರತೆ ಕಾಡುತ್ತಿದೆ. ರೈತರ ಪರ ನಿಲ್ಲಲು ನಾನು ಬೆಂಬಲ ಕೇಳಿದ್ದೇನೆ ಎಂದು ಹೇಳಿದ ಅವರು, ತಮ್ಮ ಪರ ಪ್ರಚಾರಕ್ಕೆ ನಿಂತಿರೋ ದರ್ಶನ ಬಗ್ಗೆ ಮಾತನಾಡಿದ ಜೆಡಿಎಸ್‍ನವರ ವಿರುದ್ಧ ಕಿಡಿಕಾರಿದ್ದಾರೆ. ಟೀಕೆ ಮಾಡೋದ್ರಿಂದ ದರ್ಶನ್ ಇಮೇಜ್ ಗೆನೋ ಏನೂ ಧಕ್ಕೆ ಆಗಲ್ಲ ಅಂದ್ರು. ಇದನ್ನೂ ಓದಿ: ಸುಮಲತಾ ಬೆನ್ನಿಗೆ ನಿಂತ ಕಾಂಗ್ರೆಸ್ಸಿನ ಮೊದಲ ವಿಕೆಟ್ ಪತನ

    ಇದೇ ವೇಳೆ ಅಮರಾವತಿ ಚಂದ್ರಶೇಖರ್ ವಿರುದ್ಧವೂ ಹರಿಹಾಯ್ದ ಅವರು, ಅಂಬರೀಶ್ ರೀತಿ ಯಾರೂ ಇರಲ್ಲ. ಅವರು ಪಕ್ಷಾತೀತವಾಗಿದ್ದರು. ಕೆಲವರು ಇದ್ದಾಗೊಂತರ ಇಲ್ಲದಿದ್ದಾಗೊಂತರ ನಡೆದುಕೊಳ್ತಾರೆ. ಇದು ಅಮರಾವತಿ ವ್ಯಕ್ತಿತ್ವ ತೋರುತ್ತದೆ ಎಂದು ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಬೇರೆಯವರು ಏನೇ ಮಾತನಾಡಿದ್ರೂ ದರ್ಶನ್, ಯಶ್ ಇಮೇಜ್ ಹಾಗೆ ಇರುತ್ತೆ: ಸುಮಲತಾ

  • ರೋಗಿಗಳಿಗೆ ತಟ್ಟಿದ ಚುನಾವಣಾ ಬಿಸಿ- ಉಚಿತ ಚಿಕಿತ್ಸೆಗೆ ನೀತಿಸಂಹಿತೆ ಅಡ್ಡಿ

    ರೋಗಿಗಳಿಗೆ ತಟ್ಟಿದ ಚುನಾವಣಾ ಬಿಸಿ- ಉಚಿತ ಚಿಕಿತ್ಸೆಗೆ ನೀತಿಸಂಹಿತೆ ಅಡ್ಡಿ

    ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಚುನಾವಣಾ ಕಾವು ರಂಗೇರುತ್ತಾ ಇದೆ. ಮತ್ತೊಂದೆಡೆ ಹೊಸ ಯೋಜನೆ, ಹೊಸ ಕಾಮಗಾರಿಗೆ ನೀತಿ ಸಂಹಿತೆಯಿಂದಾಗಿ ಬ್ರೇಕ್ ಬಿದ್ದಿದೆ. ಇದರ ನಡುವೆ ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬರು ಕಣ್ಣೀರು ಹಾಕುತ್ತಾ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ.

    ಹೌದು. ಬಿಪಿಎಲ್ ಕಾರ್ಡ್ ಮತ್ತು ಆರೋಗ್ಯ ಭಾಗ್ಯ ಕಾರ್ಡನ್ನ ನಂಬಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ನೀತಿ ಸಂಹಿತೆಯಿಂದಾಗಿ ಚಿಕಿತ್ಸೆ ಸಿಗುತ್ತಿಲ್ಲ. ಕಳೆದ 20 ದಿನಗಳ ಹಿಂದೆ ಬಾಣಸವಾಡಿಯ ಚಂದ್ರು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗಾಗಿ ಅಲ್ಲಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯವರೇನೋ ಶಸ್ತ್ರ ಚಿಕಿತ್ಸೆ ಮಾಡ್ತೀವಿ ಕಾರ್ಡ್ ಇದ್ಯಯಲ್ಲ ಎಂದು ಮೊದಲು ಭರವಸೆ ಕೊಟ್ಟಿದ್ದಾರೆ. ಆದ್ರೆ ಬಿಲ್ಲಿಂಗ್ ಟೈಂನಲ್ಲಿ ಆನ್‍ಲೈನ್‍ನಲ್ಲಿ ನೋಡಿದಾಗ ಬಿಪಿಎಲ್‍ಕಾರ್ಡ್‍ನಲ್ಲಿ ವ್ಯಕ್ತಿಯ ಹೆಸರು ನಾಪತ್ತೆಯಾಗಿದೆ. ಸರಿ ಇನ್ನೇನು ತಿದ್ದುಪಡಿ ಮಾಡಿಕೊಂಡು ಬರೋಣವೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ರೋಗಿಯ ಸಂಬಂಧಿಕರು ಹೋದ್ರೆ ಚುನಾವಣಾ ಸಂದರ್ಭದಲ್ಲಿ ಯಾವ ಲೋಪದೋಷವನ್ನು ಸರಿಮಾಡಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ರೋಗಿ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.


    ಅತ್ತ ಲಕ್ಷ ಲಕ್ಷ ಬಿಲ್ ಕಟ್ಟಲಾರದೇ ರೋಗಿಯ ಕಡೆಯವರು ಪರದಾಟ ಪಟ್ಟಿದ್ದಾರೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬಾರಜು ಇಲಾಖೆಯವರನ್ನು ಕೇಳಿದ್ರೆ, ನಾವು ನೀತಿಸಂಹಿತೆ ಮುಗಿದ ಮೇಲೆ ಪಡಿತರ ಚೀಟಿ ದೋಷವನ್ನು ಸರಿಪಡಿಸಬಹುದು. ಈ ಬಗ್ಗೆ ನೋಟಿಸ್ ಬೋರ್ಡ್ ಕೂಡ ಹಾಕಲಾಗಿದೆ ಎಂದು ಇಲಾಖೆಯ ಪೂರ್ವವಲಯ ಉಪ ನಿರ್ದೇಶಕ ನಾಗಭೂಷಣ್ ಹೇಳಿದ್ದಾರೆ.

    ರಾಜಕೀಯ ಆಸೆ ಆಮಿಷಗಳಿಗೆ ಬ್ರೇಕ್ ಹಾಕಲು ನೀತಿ ಸಂಹಿತೆ ಇದೆ. ಆದ್ರೆ ಕೆಲವೊಮ್ಮೆ ಈ ನಿಯಮಗಳು ಸಾಮಾನ್ಯ ಜನರಿಗೆ ಅದೆಷ್ಟು ತೊಂದರೆ ಕೊಡ್ತವೆ ಅನ್ನೋದಕ್ಕೆ ಈ ಘಟನೆಯೇ ನಿದರ್ಶನವಾಗಿದೆ.

  • ಸವಾಲಾಗಿ ಸ್ವೀಕರಿಸಿ ಅಭಿವೃದ್ಧಿ ಮಾಡ್ತೀನಿ: ಶೋಭಾ ಕರಂದ್ಲಾಜೆ

    ಸವಾಲಾಗಿ ಸ್ವೀಕರಿಸಿ ಅಭಿವೃದ್ಧಿ ಮಾಡ್ತೀನಿ: ಶೋಭಾ ಕರಂದ್ಲಾಜೆ

    ಉಡುಪಿ: ಟಿಕೆಟ್ ಸಿಗುತ್ತೆ, ಸಿಗಲ್ಲ ಎಂದು ಸಾಕಷ್ಟು ಚೌಕಾಶಿ ನಡೆದು ಕೊನೆಗೂ ಉಡುಪಿ- ಚಿಕ್ಕಮಗಳೂರು ಲೋಕಸಭಾ ಟಿಕೆಟ್ ಶೋಭಾ ಕರಂದ್ಲಾಜೆ ಪಾಲಾಗಿದೆ. ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ.

    ರಾಷ್ಟ್ರ ಮತ್ತು ರಾಜ್ಯ ನಾಯಕರಿಗೆ ನನ್ನ ಧನ್ಯವಾದ. ವಿಶ್ವಾಸವಿಟ್ಟು ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ನಾವು ಒಗ್ಗಟ್ಟಾಗಿ ಬಿಜೆಪಿ ರಥ ಎಳೆಯುತ್ತೇವೆ. ದೇಶಾದ್ಯಂತ ಬಿಜೆಪಿಯಿಂದ 300 ಸಂಸದರು ಆಯ್ಕೆಯಾಗುತ್ತಾರೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನ ಆಶೀರ್ವಾದ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಈ ಬಾರಿ ಗೆದ್ದು ಸವಾಲಾಗಿ ಸ್ವೀಕರಿಸಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ಬಿಜೆಪಿ, ಸಂಘ ಪರಿವಾರ ನಮ್ಮ ಸೇನಾನಿಗಳು. ಸೈನಿಕರು ಗಡಿಯಲ್ಲಿ ಯುದ್ಧ ಮಾಡಿದಂತೆ ಫೀಲ್ಡಿನಲ್ಲಿ ಕೆಲಸ ಮಾಡುತ್ತೇನೆ. ಮೋದಿಯನ್ನು ಗೆಲ್ಲಿಸಲು ಹಗಲಿರುಳು ದುಡಿಯುತ್ತೇವೆ ಎಂದರು.

    ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಟಿಕೆಟ್‍ಗಾಗಿ ಆಕಾಂಕ್ಷೆ ಪಡುವುದು ತಪ್ಪಲ್ಲ. ಟಿಕೆಟ್ ಸಿಕ್ಕ ನಂತರ ಎಲ್ಲರೂ ಅಭ್ಯರ್ಥಿ ಪರ ದುಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.

    https://www.youtube.com/watch?v=srybZEOyHLQ

  • ಮಂಗ್ಳೂರು `ಕೈ’ ನಾಯಕರಲ್ಲಿ ವೇಣುಗೋಪಾಲ್ ಮನವಿ!

    ಮಂಗ್ಳೂರು `ಕೈ’ ನಾಯಕರಲ್ಲಿ ವೇಣುಗೋಪಾಲ್ ಮನವಿ!

    ನವದೆಹಲಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಪಟ್ಟಿ ರಿಲೀಸ್ ಮಾಡಿದ್ದು, ಇತ್ತ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಪೈಪೋಟಿ ಜೋರಾಗಿದೆ. ಸಚಿವ ಯುಟಿ. ಖಾದರ್ ನೇತೃತ್ವದಲ್ಲಿ ಟಿಕೆಟ್ ಗಾಗಿ ಜಿಲ್ಲಾ ನಾಯಕರು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಕೈ ನಾಯಕರಲ್ಲಿ ಮನವಿ ಮಾಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರೇ ಅಭ್ಯರ್ಥಿ ಆದ್ರೂ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅಭ್ಯರ್ಥಿ ಗೆಲ್ಲಿಸಬೇಕಿದೆ ಎಂದು ವೇಣುಗೋಪಾಲ್ ಕೈ ನಾಯಕರಲ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಎಲ್ಲ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

    ವೇಣುಗೋಪಾಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಮಂಗಳೂರು ಕಾಂಗ್ರೆಸ್ ಅಭ್ಯರ್ಥಿ ವಿಚಾರದ ಕುರಿತು ವೇಣುಗೋಪಾಲ್ ಬಳಿ ಒಗ್ಗಟ್ಟು ಪ್ರದರ್ಶನ ಮಾಡಿದ್ದೇವೆ. ವರಿಷ್ಠರ ಬಳಿ ಪಕ್ಷದ ಮುಖಂಡರು ಸಭೆ ಅಗಿದೆ. ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿ ಗೆಲ್ಲಿಸಬೇಕಿದೆ. ಹಾಲಿ ಸಂಸದರ ವೈಫಲ್ಯದಿಂದ ಅಭಿವೃದ್ಧಿ ಕುಂಠಿತವಾಗಿದೆ. ವೇಣುಗೋಪಾಲ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಮೈತ್ರಿ ಸರಕಾರ ಅಭಿವೃದ್ಧಿ ಮಾಡಿದೆ.

    ಇದೇ ವೇಳೆ ಮಾಜಿ ಸಚಿವ ರಮಾನಾಥ್ ರೈ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸಂಸದರಿದ್ದಾಗ ಮಂಗಳೂರು ಅಭಿವೃದ್ಧಿಯಾಗಿತ್ತು. ಬಿಜೆಪಿ ಸಂಸದರಿದ್ದಾಗ ಯಾವುದೇ ಅಭಿವೃದ್ಧಿಯಾಗಿಲ್ಲ. ಸಂಪೂರ್ಣವಾಗಿ ಕೆಲಸಗಳು ತಟಸ್ಥವಾಗಿದೆ. ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದ್ರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಬಿಜೆಪಿ ಸೋಲಿಸುವುದೇ ನಮ್ಮ ಹೋರಾಟವಾಗಿದೆ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ನಾವೆಲ್ಲ ಟಿಕೆಟ್ ಆಕಾಂಕ್ಷಿಗಳು. ನಮ್ಮಲ್ಲಿ ಒಗ್ಗಟ್ಟಿದ್ರೆ ಬದಲಾವಣೆ ಸಾಧ್ಯ. ಸಂಘಪರಿವಾರವೇ ಹಾಲಿ ಸಂಸದರನ್ನು ಕಳಪೆ ಎಂದು ಹೇಳಿದೆ. ವಿಜಯಾ ಬ್ಯಾಂಕ್ ನ್ನು ಬರೋಡಾ ಬ್ಯಾಂಕ್ ಜೊತೆ ಹೊಂದಾಣಿಕೆ ಮಾಡ್ತಿದ್ದಾರೆ. ಮಂಗಳೂರು ಏರ್ ಪೋರ್ಟ್ ಖಾಸಗಿ ಕಂಪನಿಗೆ ನೀಡಿದೆ. ನಾವೆಲ್ಲ ಒಗ್ಗಟ್ಟಾಗಿ ಚುನಾವಣೆ ಮಾಡ್ತೇವೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಿದ್ದೇವೆ. ಸದ್ಯ ಮಂಗಳೂರಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಸಂಸದ ನಳಿನ್ ಕುಮಾರ್ ಅಶಾಂತಿ ವಾತವರಣ ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದ್ರು.

    https://www.youtube.com/watch?v=srybZEOyHLQ

  • ದೇವೇಗೌಡ್ರ ಒಂದು ಮುಖ ನೀವು ನೋಡಿದ್ರೆ, ನಾಲ್ಕಾರು ಮುಖಗಳನ್ನು ನಾನು ನೋಡಿದ್ದೀನಿ – ವಿ. ಸೋಮಣ್ಣ

    ದೇವೇಗೌಡ್ರ ಒಂದು ಮುಖ ನೀವು ನೋಡಿದ್ರೆ, ನಾಲ್ಕಾರು ಮುಖಗಳನ್ನು ನಾನು ನೋಡಿದ್ದೀನಿ – ವಿ. ಸೋಮಣ್ಣ

    ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಗರಡಿಯಲ್ಲಿ ನಾನು 30 ವರ್ಷ ಬೆಳೆದಿದ್ದೇನೆ. ನೀವು ಅವರ ಒಂದು ಮುಖ ಮಾತ್ರ ನೋಡಿದ್ದೀರಿ. ನಾನು ಅವರ ನಾಲ್ಕಾರು ಮುಖಗಳನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ದೇವೇಗೌಡರ ಸ್ಪರ್ಧೆ ಕುರಿತು ಮಾತನಾಡಿದ ಅವರು, ಯಾರು ಯಾರನ್ನು ಗೆಲ್ಲಿಸುತ್ತಾರೆ, ಯಾರನ್ನು ಸೋಲಿಸುತ್ತಾರೆ. ಈ ಸುನಾಮಿಯನ್ನು ಯಾರು ಕಟ್ಟಿ ಹಾಕುತ್ತಾರೆ. ರಾಷ್ಟ್ರದಲ್ಲಿ ಸುಭದ್ರವಾದ ಸರ್ಕಾರ ಯಾರಿಂದ ಆಗುತ್ತದೆ ಎನ್ನುವುದನ್ನು ಈಗಾಗಲೇ ದೇವೇಗೌಡರು ತಿಳಿದುಕೊಂಡಿದ್ದಾರೆ. ಹೀಗಾಗಿ ಪರೋಕ್ಷವಾಗಿ ಮೋದಿ ಅಲೆ ತಡಯೋಕೆ ಆಗಲ್ಲ ಎಂದ್ರು.

    ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ರೀತಿ ನಡೆದುಕೊಳ್ತಿದ್ದಾರೆ. ಎಲ್ಲದಕ್ಕಿಂತ ಮಿಗಿಲಾಗಿದದ್ದು ರಾಷ್ಟ್ರದ ಜನ. ಜನರ ತೀರ್ಮಾನ ಏನೆಂದು ತಾವೇ ನೋಡ್ತಿರಾ ಎಂದು ಹೇಳಿದ್ರು.

    ಅಪವಿತ್ರ ಮೈತ್ರಿ ಯಾವ ಮಟ್ಟಕ್ಕೆ ಬರುತ್ತದೆ ಎನ್ನುವುದನ್ನು ಏಪ್ರಿಲ್ 18 ರೊಳಗೆ ಕಾದು ನೋಡಿ. ದೇವೇಗೌಡರು 86 ಕಳೆದು 87ಕ್ಕೆ ಹೋಗುತ್ತಿದ್ದೇನೆ ನಮ್ಮ ಅವಶ್ಯಕತೆ ಎಷ್ಟರ ಮಟ್ಟಿಗೆ ಇದೆ ಎಂದು ಅವರೇ ಹೇಳಿದ್ದಾರೆ. ರಾಜ್ಯದಲ್ಲಿ ಎಚ್‍ಡಿಡಿಯನ್ನು ಬಿಟ್ಟು ಬೇರೆ ಮಾಜಿ ಪ್ರಧಾನಿಗಳನ್ನು ನೋಡೋಕ್ಕೆ ಆಗಲ್ಲ. ಅವರು ಆಶೀರ್ವಾದ ಮಾಡಿಕೊಂಡು ಇರಬಹುದು. ಮೊಮ್ಮಕ್ಕಳನ್ನು ಗೆಲ್ಲಿಸಿಕೊಂಡು, ರಾಷ್ಟ್ರ ರಾಜಕಾರಣದಲ್ಲಿ ರಾಜ್ಯಕ್ಕೆ ಏನೆಲ್ಲಾ ಕೊಡಬಹುದು ಎನ್ನುವ ಸಲಹೆ ನೀಡಬಹುದು. ವಯಸ್ಸಿನ ಬಗ್ಗೆ ಮಾತನಾಡಿರುವುದರಿಂದ ಅವರ ಸ್ಪರ್ಧೆ ಬಗ್ಗೆ ನನಗೆ ನಂಬಿಕೆಯಿಲ್ಲ ಅಂದ್ರು.