Tag: loksabha elections 2019

  • ತೇಜಸ್ವಿ ಸೂರ್ಯಗೆ ಮನೆಯಲ್ಲೇ ತೇಜಸ್ವಿನಿ ಅನಂತ್‍ಕುಮಾರ್ ಕ್ಲಾಸ್!

    ತೇಜಸ್ವಿ ಸೂರ್ಯಗೆ ಮನೆಯಲ್ಲೇ ತೇಜಸ್ವಿನಿ ಅನಂತ್‍ಕುಮಾರ್ ಕ್ಲಾಸ್!

    ಬೆಂಗಳೂರು: ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಭಾಗದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮನೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಅಭ್ಯರ್ಥಿ ಘೋಷಣೆಯಾದ ಬಳಿಕ ಇಂದು ತೇಜಸ್ವಿ ಸೂರ್ಯ ಅವರು ತೇಜಸ್ವಿನಿ ಅನಂತ್ ಕುಮಾರ್ ಮನೆಗೆ ಆಶೀರ್ವಾದ ಪಡೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ತೇಜಸ್ವಿ ಸೂರ್ಯಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ತೇಜಸ್ವಿನಿ ಹೇಳಿದ್ದು ಏನು?
    ಮಾತುಕತೆಯ ಬಳಿಕ ತೇಜಸ್ವಿ ಸೂರ್ಯ ಅವರು ಮನೆಯಲ್ಲೇ ಪ್ರತಿಕ್ರಿಯೆ ನೀಡಲು ಮುಂದಾಗಿದ್ದರು. ಇದರಿಂದ ಸ್ವಲ್ಪ ಗರಂ ಆದ ತೇಜಸ್ವಿನಿ, ಪ್ರಬುದ್ಧರಾಗಿ ವರ್ತಿಸಿ. ಇಲ್ಲಿ ಮಾತಾಡೋದು ಬೇಡ. ಕ್ಯಾಮರಾ ಮುಂದೆ ಬೇಡ, ಏನ್ ಹೇಳ್ಬೇಕು ಅದನ್ನ ನಿಮಗೆ ಹೇಳ್ತೇನೆ ಎಂದು ಹೇಳಿದರು.

    ಇದು ಒಬ್ಬರಿಗೊಬ್ಬರು ಚರ್ಚೆ ಮಾಡುವ ಸ್ಥಳ ಅಲ್ಲ. ಇದರಿಂದ ನೀವೇನೂ ಸಾಧನೆ ಮಾಡಲು ಆಗಲ್ಲ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಪ್ರಬುದ್ಧತೆಯನ್ನು ಎಲ್ಲರ ಮುಂದೆ ತೋರಿಸಿ. ನಾವು ಒಂದು ಸಿದ್ಧಾಂತದ ಪರವಾಗಿದ್ದೇವೆ. ಹಾಗೆಯೇ ನರೇಂದ್ರ ಮೋದಿ ಮತ್ತು ದೇಶದ ಪರವಾಗಿದ್ದೇವೆ. ಸಪೂರ್ಣವಾಗಿ ಪ್ರಚಾರಕ್ಕೆ ಬೆಂಬಲಿಸುವುದಾಗಿ ಹೇಳಿದ್ರು.

     ಇದೇ ವೇಳೆ ತೇಜಸ್ವಿ ಸೂರ್ಯ ಅವರು ಮನೆಯೊಳಗಡೆಯೇ ಭೋಲೋ ಭಾರತ್ ಮಾತಾಕಿ, ಅನಂತ್ ಕುಮಾರ್ ಜೀ ಕಿ ಜೈ ಅಂದ್ರು. ಈ ಸಂದರ್ಭದಲ್ಲಿ ಅನಂತ್ ಕುಮಾರ್ ಅಭಿಮಾನಿಗಳು ತೇಜಸ್ವಿ ಸೂರ್ಯ ಅವರಿಗೆ ದನಿಯಾಗಿ ಜೈಕಾರ ಕೂಗಿದ್ರು. ಆದರೆ ಅದರಲ್ಲೊಬ್ಬ ತೇಜಸ್ವಿ ಸೂರ್ಯ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ರು.

  • ರಾಯಚೂರು ಗ್ರಾಮೀಣ ಭಾಗದಲ್ಲಿ ಮತದಾರರೇ ಕಾಣೆ!

    ರಾಯಚೂರು ಗ್ರಾಮೀಣ ಭಾಗದಲ್ಲಿ ಮತದಾರರೇ ಕಾಣೆ!

    ರಾಯಚೂರು: ಲೋಕಸಭಾ ಚುನಾವಣಾ ಕಣ ಎಲ್ಲೆಡೆ ರಂಗೇರುತ್ತಿದೆ. ಆದ್ರೆ ರಾಯಚೂರು ಗ್ರಾಮೀಣ ಭಾಗದಲ್ಲಿ ಮಾತ್ರ ಮತದಾರರೇ ಕಾಣೆಯಾಗಿದ್ದಾರೆ. ಮನೆಗಳಿಗೆ ಬೀಗ ಜಡಿದು ಹೊಟ್ಟೆಪಾಡಿಗಾಗಿ ಊರುಗಳನ್ನೇ ತೊರೆದಿದ್ದಾರೆ. ಹಣ, ಬಸ್ ಚಾರ್ಜ್ ಕೊಟ್ರೆ ಮಾತ್ರ ಗುಳೆ ಹೋದವರು ಮತಹಾಕಲು ಬಂದರೂ ಬರಬಹುದು ಎಂದು ಗ್ರಾಮಗಳಲ್ಲಿ ಉಳಿದ ಜನ ಹೇಳುತ್ತಿದ್ದಾರೆ.

    ಬಿಸಿಲನಾಡು ರಾಯಚೂರು ಈ ಬಾರಿ ಭೀಕರ ಬರಗಾಲಕ್ಕೆ ತತ್ತರಿಸಿ ಹೋಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಜನ ಮನೆಗಳಿಗೆ ಬೀಗ ಜಡಿದು ಬೆಂಗಳೂರು, ಪುಣೆ, ಹೈದ್ರಾಬಾದ್ ಕಡೆ ಗುಳೆ ಹೋಗಿದ್ದಾರೆ. ಸಂಸದರ ಆದರ್ಶ ಗ್ರಾಮ ಜಾಗೀರ್ ವೆಂಕಟಾಪುರ ಸೇರಿದಂತೆ ರಾಯಚೂರು, ದೇವದುರ್ಗ, ಲಿಂಗಸುಗೂರು ತಾಲೂಕುಗಳಿಂದ ಅತೀ ಹೆಚ್ಚು ಸಂಖ್ಯೆಯಲ್ಲಿ ಜನ ಗುಳೆ ಹೋಗಿದ್ದು ಮತ ಹಾಕುವವರೇ ಇಲ್ಲದಂತಾಗಿದೆ. ರಾಯಚೂರಿನ ಗೋನಾಳ ಗ್ರಾಮವೊಂದರಲ್ಲೆ ಸುಮಾರು 1200 ಮತದಾರರಲ್ಲಿ ಅರ್ಧದಷ್ಟು ಜನ ಗುಳೆ ಹೋಗಿದ್ದಾರೆ ಎಂದು ಕೂಲಿ ಕಾರ್ಮಿಕ ಸಂಘದ ಮುಖಂಡ ಗುರುರಾಜ್ ಹೇಳಿದ್ದಾರೆ.

    ಗ್ರಾಮಗಳಲ್ಲಿ ಕೇವಲ ವಯೋವೃದ್ಧರನ್ನ ಮನೆಕಾಯಲು ಬಿಟ್ಟುಹೋಗಿದ್ದಾರೆ. ಇನ್ನೂ ಕೆಲವರು ಮಕ್ಕಳ ಪರೀಕ್ಷೆಗಳು ಮುಗಿಯುವುದನ್ನ ಕಾಯುತ್ತಿದ್ದಾರೆ. ಚುನಾವಣೆ ಮತದಾನ ಸಂದರ್ಭದಲ್ಲಿ ಅಭ್ಯರ್ಥಿಗಳು ದುಡ್ಡು ಕೊಟ್ಟು ವಾಹನ ವ್ಯವಸ್ಥೆ ಮಾಡಿದರೆ ಮಾತ್ರ ಗುಳೆ ಹೋದವರು ಮತ ಹಾಕಲು ಬರುತ್ತಾರೆ ಎಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಹೊಟ್ಟೆಪಾಡಿಗಾಗಿ ದುಡಿಯಲು ದೂರದ ಊರುಗಳಿಗೆ ತೆರಳಿದವರು ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮತದಾನ ಪ್ರಮಾಣ ಹೆಚ್ಚು ಮಾಡಲು ಚುನಾವಣಾ ಅಧಿಕಾರಿಗಳು ಏನೆಲ್ಲಾ ಕಸರತ್ತು ನಡೆಸಿದ್ರೂ ಗ್ರಾಮೀಣ ಭಾಗದ ಜನರು ಗುಳೆ ಹೋಗುವುದನ್ನ ತಡೆಯಲು ಮಾತ್ರ ಆಗುತ್ತಿಲ್ಲ.

  • ಅನಂತ್‌ಕುಮಾರ್‌ ತನ್ನನ್ನು ಬೆಳೆಸಿದ ಕಥೆಯನ್ನು ಬಿಚ್ಚಿಟ್ಟ ತೇಜಸ್ವಿ ಸೂರ್ಯ!

    ಅನಂತ್‌ಕುಮಾರ್‌ ತನ್ನನ್ನು ಬೆಳೆಸಿದ ಕಥೆಯನ್ನು ಬಿಚ್ಚಿಟ್ಟ ತೇಜಸ್ವಿ ಸೂರ್ಯ!

    ಬೆಂಗಳೂರು: ದಿವಂಗತ ಅನಂತ್ ಕುಮಾರ್ ಅವರು ಬೆಳೆಸಿದ ಹುಡುಗ ನಾನು. ತೇಜಸ್ವಿನಿ ಅನಂತ್ ಕುಮಾರ್ ಅವರು ನನ್ನನ್ನು ಬೆಂಬಲಿಸುತ್ತಾರೆ. ಅಲ್ಲದೆ ಪ್ರೋತ್ಸಾಹ ಕೂಡ ನೀಡಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಅನಂತ್ ಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಮೆಲುಕು ಹಾಕಿಕೊಂಡರು. ತೇಜಸ್ವಿನಿ ಅನಂತ್ ಕುಮಾರ್ ಅವರು ಆಶೀರ್ವಾದ ಹಾಗೂ ಸಂಪೂರ್ಣ ಬೆಂಬಲ ನೀಡುವವರಿದ್ದಾರೆ. ಅನಂತ್ ಕುಮಾರ್ ಅವರು ಹೈಸ್ಕೂಲ್ ದಿವಸದಿಂದ ನನ್ನನ್ನು ಬೆಳೆಸಿದವರು. ಅಂತಹ ಮೇರು ನಾಯಕರು ಇದ್ದಂತಹ ಕ್ಷೇತ್ರದಲ್ಲಿ ನನಗೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಹೀಗಾಗಿ ಎಲ್ಲರು ಸಹಕರಿಸುವಂತೆ ಮತದಾರರಲ್ಲಿ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

    ನಾನು ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದಾಗ ಅದಮ್ಯ ಚೇತನ ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸುತ್ತಿದ್ದರು. ಕಾರ್ಯಕ್ರಮದ ನಿರೂಪಣೆ ಮಾಡಲು ಅವಕಾಶ ನೀಡುತ್ತಿದ್ದರು. ಅಷ್ಟು ಮಾತ್ರವಲ್ಲದೇ ಯಾವುದಾದರೂ ಕಾರ್ಯಕ್ರಮದಲ್ಲಿ 5-10 ನಿಮಿಷ ಮಾತನಾಡಲು ಅವಕಾಶ ನೀಡುವ ಮೂಲಕ ನನ್ನನ್ನು ಬೆಳೆಸಿದ್ದಾರೆ ಅಂದ್ರು.

    ಅಡ್ವಾಣಿಯವರ ಜನಚೇತನ ಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ, ಕಾರ್ಯಕ್ರಮಕ್ಕೆ ನನ್ನನ್ನು ಕಳುಹಿಸಿ ಎಂದು ನಾನು ಅನಂತ್ ಕುಮಾರ್ ಅವರನ್ನು ಬಹಳ ಕಾಡಿದ್ದೆನು. ಹೀಗಾಗಿ ಸಾಹೆಬ್ರು ನನ್ನನ್ನು ಜನಚೇತನ ಯಾತ್ರೆಗೆ ಕಳುಹಿಸಿದ್ದರು. ಆವಾಗಿಂದಲೇ ಅವರು ನನ್ನನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಹೇಳುವ ಮೂಲಕ ಹಳೆಯ ನೆನಪನ್ನು ಮೆಲುಕು ಹಾಕಿದ್ರು.

    ನಮ್ಮ ತಾಯಿಯಂತೆ ಅವರು ಕೂಡ ನನ್ನನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಹಲವು ಬಾರಿ ಹೇಳಿದ್ದೆ. ಹೀಗಾಗಿ ಈ ಹಿಂದೆ ತೇಜಸ್ವಿನಿ ಅನಂತ್ ಕುಮಾರ್ ಅವರು ಅಭ್ಯರ್ಥಿ ಎಂದು ಹೆಸರು ಕಳುಹಿಸಿದ್ರೋ, ಆವಾಗ ಟ್ವೀಟ್ ಮಾಡುವ ಮೂಲಕ ಬಹಳ ಸಂತೋಷದ ಸಂಗತಿ. ಅಂಥವರು ಇಲ್ಲಿಗೆ ನಾಯಕರಾಗಬೇಕು ಎಂದು ಹೇಳಿದ್ದೆ. ಆದ್ರೆ ಪಕ್ಷದ ಹೈಕಮಾಂಡ್ ಯಾವ ದೃಷ್ಟಿಯಿಂದ ಈ ರೀತಿಯ ನಿರ್ಧಾರ ತೆಗೆದುಕೊಂಡಿತೆಂದು ಗೊತ್ತಿಲ್ಲ. ಅವರು ಅಭ್ಯರ್ಥಿಯಾಗ್ತಿದ್ರೆ ಖುಷಿ ಪಡುತ್ತಿದ್ದರು. ನಾನು ಕೂಡ ನಮ್ಮ ತಾಯಿ ಅಭ್ಯರ್ಥಿಯಾಗುತ್ತಿದ್ರೆ ಎಷ್ಟು ಖುಷಿ ಪಡುತ್ತಿದ್ದೆನೋ ಅಷ್ಟೇ ಖುಷಿ ಅವರು ಕ್ಯಾಂಡಿಡೇಟ್ ಆದಾಗಲೂ ಖುಷಿಯಾಗುತ್ತಿದ್ದೆ. ಆದ್ರೂ ಅವರು ಈ ಸಂದರ್ಭದಲ್ಲಿ ನನಗೆ ಪ್ರೋತ್ಸಾಹ ಕೊಡುವವರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ಪಕ್ಷದ ಅಧ್ಯಕ್ಷರು ಹೋಗಿ ಗೆದ್ದು ಬಾ ಎಂದು ನನಗೆ ಇಂದು ಸಂಪೂರ್ಣ ಆಶೀರ್ವಾದ ಮಾಡಿದರು. ಒಬ್ಬ ಕಾರ್ಯಕರ್ತನನ್ನು ಗುರುತಿಸಿ, ಪಕ್ಷದ ಬೆಳವಣಿಗೆಗೆ ಹಾಗೂ ಪಕ್ಷಕ್ಕೆ ಬಹಳ ಅವಕಾಶ ಆಗುತ್ತೆ. ಹೀಗಾಗಿ ಈ ಕಾರ್ಯಕರ್ತನನ್ನು ಬೆಳೆಸಬೇಕು ಎನ್ನುವ ದೃಷ್ಟಿಯಿಂದ ಪಕ್ಷ ಈ ನಿರ್ಧಾರ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವಕ್ಕೆ ಬಹಳ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ರು.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜ್ಯದ ನಾಯಕರಾದ ಯಡಿಯೂರಪ್ಪ, ಅಶೋಕ್, ಸತೀಶ್ ರೆಡ್ಡಿ ಹಾಗೂ ಸೋಮಣ್ಣ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ರು.

  • ಗಂಡ ಬಿಜೆಪಿ ಲೋಕಸಭಾ ಅಭ್ಯರ್ಥಿ – ಹೆಂಡ್ತಿ ಕಾಂಗ್ರೆಸ್ ಕಟ್ಟಾಳು!

    ಗಂಡ ಬಿಜೆಪಿ ಲೋಕಸಭಾ ಅಭ್ಯರ್ಥಿ – ಹೆಂಡ್ತಿ ಕಾಂಗ್ರೆಸ್ ಕಟ್ಟಾಳು!

    – ಬಳ್ಳಾರಿ ಕದನ ಕಣದಲ್ಲಿ ವಿಶಿಷ್ಟ ಪರಿಸ್ಥಿತಿ

    ಬಳ್ಳಾರಿ: ಗಣಿನಾಡಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಕಾವು ಏರುತ್ತಿದ್ದಂತೆ ಚುನಾವಣಾ ಕಾವು ಕೂಡ ಹೆಚ್ಚಾಗ್ತಿದೆ. ಜಿಲ್ಲೆಯಲ್ಲಿ ಪತ್ನಿ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯರಾದರೆ, ಪತಿ ಬಿಜೆಪಿಯಿಂದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಜನ ಯಾರನ್ನೂ ನಂಬಿ ಮತ ಹಾಕಬೇಕು ಎಂದು ಗೊಂದಲದಲ್ಲಿದ್ದಾರೆ.

    ಅಣ್ಣ ಒಂದು ಪಕ್ಷದಲ್ಲಿದ್ದರೆ ತಮ್ಮ ಇನ್ನೊಂದು ಪಕ್ಷದಲ್ಲಿರೋದು ಸಾಮಾನ್ಯ. ಆದ್ರೆ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲೀಗ ಪತಿ-ಪತ್ನಿಯ ಜುಗಲ್‍ಬಂಧಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅರಸಿಕೇರಿ ದೇವೇಂದ್ರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ. ಆದ್ರೆ ದೇವೇಂದ್ರಪ್ಪ ಪತ್ನಿ ಸುಶೀಲಮ್ಮ ಬಳ್ಳಾರಿ ಜಿಲ್ಲಾ ಪಂಚಾಯತ್‍ನಲ್ಲಿ ಕಾಂಗ್ರೆಸ್ ಸದಸ್ಯೆ. ಇದು ಮತದಾರರನ್ನು ಗೊಂದಲಕ್ಕೀಡು ಮಾಡಿದೆ.

    ಈ ಬಗ್ಗೆ ಬಿಜೆಪಿ ಅಭ್ಯರ್ಥಿ ಅರಸಿಕೇರಿ ದೇವೇಂದ್ರಪ್ಪ ಅವರನ್ನು ಕೇಳಿದ್ರೆ, ಅವರನ್ನೇ ಕೇಳಬೇಕು. ಈ ಪ್ರಜಾಪ್ರಭುತ್ವದಲ್ಲಿ ಅವರಿಗೂ ಹಕ್ಕು ಇದೆ ಎಂದು ಹೇಳುತ್ತಿದ್ದಾರೆ. ಇತ್ತ ಇದುವರೆಗೂ ಕಾಂಗ್ರೆಸ್‍ನಲ್ಲಿದ್ದುಕೊಂಡು ಚುನಾವಣೆ ಬರುತ್ತಿದ್ದಂತೆ ಬಿಜೆಪಿಗೆ ಜಿಗಿದ ದೇವೇಂದ್ರಪ್ಪರ ಬಗ್ಗೆ ಕಾಂಗ್ರೆಸ್ ನಾಯಕರು ಸಹ ಹರಿಹಾಯುತ್ತಿದ್ದಾರೆ.

    ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ನನ್ನ ಸ್ನೇಹಿತರಾದ ಶ್ರೀರಾಮುಲು ಅಣ್ಣ ಸೇರಿ ಬಿಜೆಪಿಯ ಒಂದು ಕಾರ್ಯಕರ್ತನನ್ನು ಹುಡುಕಿ ಅವನನ್ನು ನಾಯಕನನ್ನಾಗಿ ಮಾಡಕ್ಕಾಗಿಲ್ಲ ಎಂಬ ವ್ಯಥೆ ನನ್ನ ಕಾಡುತ್ತಿದೆ. ನಮ್ಮ ಶ್ರೀರಾಮುಲು ಅಣ್ಣನಿಗೆ ಚಿಂತೆ ಮಾಡಕ್ಕಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿಯೇ ಬೇಕಾಗಿತ್ತಾ ನಿಮಗೆ ಎಂದು ಪ್ರಶ್ನಿಸಿದ ಅವರು, ಪಾಪ ದೇವೇಂದ್ರಪ್ಪ ಅವರು ದೇವರು ಇದ್ದಂಗೆ ಇರಲಿ ಎಂದಿದ್ದಾರೆ.

    ಒಟ್ಟಿನಲ್ಲಿ ಪತಿ- ಪತ್ನಿ ಬೇರೆ ಬೇರೆ ಪಕ್ಷದಲ್ಲಿರೋದ್ರಿಂದ ಮತದಾರರಿಗೆ ಗೊಂದಲವೋ ಗೊಂದಲ. ಯಾರು ಯಾರ ಪರವಾಗಿ ಪ್ರಚಾರ ಮಾಡ್ತಾರೆ? ಕಾಂಗ್ರೆಸ್‍ನಲ್ಲಿ ಸದಸ್ಯರಾಗಿದ್ದುಕೊಂಡು ಪತಿಯ ಪರವಾಗಿ ಪತ್ನಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಾರಾ ಎನ್ನುವ ಗೊಂದಲದಲ್ಲಿ ಮತದಾರರು ಇದ್ದಾರೆ.

  • ಮತದಾರರಿಗೆ ಬಸ್ ಬರೆ!

    ಮತದಾರರಿಗೆ ಬಸ್ ಬರೆ!

    ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಭರಾಟೆ ಜೋರಾಗಿರುವಂತೆ ಜನರಿಗೆ ಬಸ್ ದರದ ಬಿಸಿ ತಾಗಿದೆ. ಎಲೆಕ್ಷನ್ ಹಿನ್ನೆಲೆಯಲ್ಲಿ ಮತದಾನದ ಮುನ್ನಾದಿನವಾದ ಏಪ್ರಿಲ್ 17 ಹಾಗೂ ಏಪ್ರಿಲ್ 22 ರಂದು ತಮ್ಮ ತಮ್ಮ ಊರುಗಳಿಗೆ ತೆರಳುವವರು ದುಪ್ಪಟ್ಟು ಹಣ ತೆರಬೇಕಾದ ಪರಿಸ್ಥಿತಿ ಎದುರಾಗಿದೆ.

    ಈ 2 ದಿನಗಳಂದು ರಾಜಕೀಯ ಮುಖಂಡರು ಈಗಾಗಲೇ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್‍ಗಳನ್ನು ಬುಕ್ ಮಾಡಿಕೊಂಡಿದ್ದಾರೆ. ಇದರಿಂದ ಇನ್ನಷ್ಟು ಡಿಮ್ಯಾಂಡ್ ಕ್ರಿಯೆಟ್ ಆಗಿದ್ದು ಬಸ್ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ.

    ಯಾವ್ಯಾವ ಊರುಗಳಿಗೆ ಎಷ್ಟೆಷ್ಟು ಏರಿಕೆ?:
    ಬೆಂಗಳೂರಿನಿಂದ ಉಡುಪಿಗೆ ತೆರಳಲು ಬಸ್ಸಿನ ಸಾಮಾನ್ಯ ದರ 900 ಆಗಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಮತದಾನದ ಮುನ್ನಾ ದಿನ ತೆರಳಿದ್ರೆ ಅದರ ದರ 1,500ರೂ.ಗೆ ಏರಿಕೆ ಮಾಡಲಾಗಿದೆ.

    ಬೆಂಗಳೂರಿನಿಂದ ಬೆಳಗಾವಿಗೆ ಪ್ರಸ್ತುತ ಬಸ್ ದರ 1,000 ಆಗಿದ್ದು, ಲೋಕಸಭಾ ಚುನಾವಣೆಯ ಮತದಾನದ ಮುಂದಿನ ದಿನ ತೆರಳಬೇಕಾದ್ರೆ 2000 ರೂ. ಟಿಕೆಟ್ ತೆಗೆದುಕೊಳ್ಳಲೇಬೇಕಾಗಿದೆ. ಹಾಗೆಯೇ ಶಿವಮೊಗ್ಗಕ್ಕೆ ತೆರಳಬೇಕಾದ್ರೆ ಪ್ರಸ್ತುತ ದರ 500 ಆಗೊದೆ. ಆದ್ರೆ ಚುನಾವಣೆ ಮೊದಲನೇ ದಿನ ತೆರಳಬೇಕಾದ್ರೆ 1,200 ರೂ. ಕೊಟ್ಟು ಟಿಕೆಟ್ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

    ಹುಬ್ಬಳ್ಳಿಗೆ ತೆರಳಲು ಪ್ರಸ್ತುತ ಬಸ್ಸಿನ ದರ 1,000 ಆಗಿದ್ದು, 2,000ಕ್ಕೆ ಏರಿಕೆ ಮಾಡಲಾಗಿದೆ. ಹಾಗೆಯೇ ಮೈಸೂರಿಗೆ ಬಸ್ ಟಿಕೆಟ್ ದರ ಪ್ರಸ್ತುತ 300 ಆಗಿದ್ದು, 700ಕ್ಕೆ ಏರಿಸಲಾಗಿದೆ.

    ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು ತೆರಳಲುವ ಪ್ರಯಾಣಿಕರಿಗೆ ಬಸ್ ದರ ಏರಿಕೆ ಮಾಡುವ ಮೂಲಕ ಖಾಸಗಿ ಬಸ್ಸುಗಳು ಶಾಕ್ ಕೊಟ್ಟಿದೆ ಎಂದು ಪ್ರಯಾಣಿಕ ರಾಘವೇಂದ್ರ ಹೇಳುತ್ತಾರೆ.

  • ಯೋಧನ ಪತ್ನಿಗೆ ಬಾಗಿನ ನೀಡಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ದ್ವಾರಕನಾಥ್

    ಯೋಧನ ಪತ್ನಿಗೆ ಬಾಗಿನ ನೀಡಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ದ್ವಾರಕನಾಥ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಅಭ್ಯರ್ಥಿ ಸಿ. ಎಸ್ ದ್ವಾರಕನಾಥ್ ಅವರು ಯೋಧನ ಪತ್ನಿಗೆ ಬಾಗಿನ ನೀಡಿ ಬಳಿಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

    ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಇಂದು ಚಿಕ್ಕಬಳ್ಳಾಪುರ ನಗರದ KSRTC ಡಿಪೋ ಗ್ಯಾರೇಜ್ ಬಳಿಯ ಇರುವ ಯೋಧ ನಾಗಾರ್ಜುನ ಮನೆಗೆ ಸಿಎಸ್ ದ್ವಾರಕನಾಥ್ ಭೇಟಿ ನೀಡಿದ್ದಾರೆ. ಬಳಿಕ ಯೋಧ ನಾಗಾರ್ಜುನ ಪತ್ನಿ ಮೀನಾಕ್ಷಿ ಜೊತೆ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ಸಂದರ್ಭದಲ್ಲಿ ಮೀನಾಕ್ಷಿಗೆ ದ್ವಾರಕನಾಥ್ ದಂಪತಿ ಬಾಗಿನ ಕೊಟ್ಟಿದ್ದಾರೆ. ಹರಿಶಿನ ಕುಂಕುಮ ಸೀರೆ ಹಣ್ಣು ಕಾಯಿ ಕೊಟ್ಟು ಬಳಿಕ ನಾಮಪತ್ರ ಸಲ್ಲಿಕೆಗೆ ತೆರಳಿದ್ದಾರೆ. ಯೋಧ ನಾಗಾರ್ಜುನ್ ಅವರು ಅಂಡಮಾನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಬಾಗಿನ ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ದೇಶಕ್ಕೋಸ್ಕರ ಚಳಿ, ಗಾಳಿ, ಮಳೆ, ಬಿಸಿಲು ಹಾಗೂ ಹಿಮದಲ್ಲಿ ಕೆಲಸ ಮಾಡುವಂತಹ ಯೋಧರ ಕುಟುಂಬಗಳನ್ನು ಇಲ್ಲಿನ ರಾಜಕರಾಣ ನಿರ್ಲಕ್ಷ್ಯಿಸುತ್ತಿದೆ. ಆ ಕಾರಣಕ್ಕಾಗಿ ಇಡೀ ಯೋಧರ ಕುಟುಂಬಗಳ ಸಮಸ್ಯೆಗಳನ್ನು ಕುರಿತು ಸದನದಲ್ಲಿ ಪ್ರಾತಿನಿಧ್ಯ ವಹಿಸಬೇಕು ಎಂದು ಬಯಸುತ್ತಾ ಇದ್ದೀನಿ ಅಂದ್ರು.

    ನನ್ನ ಮುಂದೆ 2 ಆಯ್ಕೆಗಳು ಇವೆ. ಅದರಲ್ಲಿ ಒಂದು ದೇಶದ ಆಯ್ಕೆ, ಎರಡನೆಯದ್ದು, ನನ್ನ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಆದ್ಯತೆ ನೀಡುವುದಾಗಿದೆ. ದೇಶದ ಆಯ್ಕೆ ಏನೆಂದರೆ, ಸಾಮಾನ್ಯ ಯೋಧರ ಕುಟುಂಬ, ಆರೋಗ್ಯದ ಬಗ್ಗೆ ಯಾರು ಸದನದಲ್ಲಿ ಮಾತನಾಡಲ್ಲ. ಹೀಗಾಗಿ ನಾನು ಅವರ ಪರ ಧ್ವನಿಯೆತ್ತ ಬೇಕು ಅಂದುಕೊಂಡಿದ್ದೇನೆ ಎಂದರು.

    ಇತ್ತ ಭೋಗನಂಧೀಶ್ವರ ದೇವಾಲಯದಲ್ಲಿ ಸಂಸದ ವೀರಪ್ಪ ಮೋಯ್ಲಿ ಅವರು ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿರುವ ದೇವಾಲಯದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸಚಿವ ಎಂಟಿಬಿ ನಾಗರಾಜ್, ಶಿವಶಂಕರರೆಡ್ಡಿ, ಶಾಸಕ ಸುಧಾಕರ್ ಸೇರಿದಂತೆ ಹಲವು ಮುಖಂಡರು ಮೊಯ್ಲಿಗೆ ಸಾಥ್ ನೀಡಿದ್ದಾರೆ. ದೇವಸ್ಥಾನ ನಂತರ ಅದರ ಹಿಂಭಾಗದಲ್ಲೇ ಇರುವ ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದಲ್ಲಿರುವ ದರ್ಗಾಗೆ ಮೊಯ್ಲಿ ಭೇಟಿ ನೀಡಿದ್ದಾರೆ.

  • ಗೌಡರ ಕುಟುಂಬದ ಮನವಿಗೆ ಸಿದ್ದರಾಮಯ್ಯ ಡೋಂಟ್ ಕೇರ್!

    ಗೌಡರ ಕುಟುಂಬದ ಮನವಿಗೆ ಸಿದ್ದರಾಮಯ್ಯ ಡೋಂಟ್ ಕೇರ್!

    ಬೆಂಗಳೂರು: ಕಳೆದ ಚುನಾವಣೆಯ ಸೋಲಿನ ಕಹಿ ಘಟನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮರೆತಿಲ್ಲವೆಂದು ಕಾಣುತ್ತಿದ್ದು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದ ಮನವಿಗೆ ಸಿದ್ದರಾಮಯ್ಯ ಕ್ಯಾರೇ ಎಂದಿಲ್ಲ.

    ಹೌದು. ಮಗನ ಗೆಲುವಿಗಾಗಿ ತಮ್ಮ ಕಾಲದ ದಶಕದ ದ್ವೇಷವನ್ನು ಬದಿಗಿಟ್ಟು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದರು. ಮಂಡ್ಯ ಕಾಂಗ್ರೆಸ್ ನಾಯಕರ ಮನವೊಲಿಕೆ ಮಾಡಿ ಅನ್ನೋ ಬೇಡಿಕೆ ಜೊತೆಗೆ ಮಾರ್ಚ್ 25 ರಂದು ಮಂಡ್ಯದಲ್ಲಿನ ನಿಖಿಲ್ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೂ ಬರುವಂತೆ ಸಿದ್ದರಾಮಯ್ಯರ ಬಳಿ ಮನವಿ ಮಾಡಿಕೊಂಡಿದ್ದರು. ಈ ವೇಳೆ ಸಿದ್ದರಾಮಯ್ಯ ಮಂಡ್ಯಕ್ಕೆ ತೆರಳುವ ಭರವಸೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಆದ್ರೆ ಸಿದ್ದರಾಮಯ್ಯ ಅವರು ಇಂದು ಮಂಡ್ಯಕ್ಕೆ ತೆರಳುತ್ತಿಲ್ಲ. ಈ ಮೂಲಕ ಯಾರೆ ಮನೆ ಬಾಗಿಲಿಗೆ ಬಂದ್ರೂ, ಎಷ್ಟೇ ಮೈತ್ರಿ ಅಂದ್ರೂ ಸಿದ್ದರಾಮಯ್ಯ ಮನಸ್ಸಿಗೆ ಎರಡೆರಡು ಬಾರಿ ಆದ ಆ ಗಾಯ ಎಂದಿಗೂ ವಾಸಿ ಆಗಲ್ಲ ಅನ್ನಿಸುತ್ತದೆ. ಅದರ ಪರಿಣಾಮವೇ ದೇವೇಗೌಡರ ಕುಟುಂಬದ ಪ್ರೀತಿ, ಸ್ನೇಹ ಯಾವುದಕ್ಕೂ ಸಿದ್ದರಾಮಯ್ಯ ಕ್ಯಾರೇ ಅನ್ನುತ್ತಿಲ್ಲ ಎನ್ನಲಾಗಿದೆ.

    2006 ರಲ್ಲಿ ದೇವೇಗೌಡರ ಜೊತೆಗಿನ ಮುನಿಸಿನಿಂದ ಪಕ್ಷ ತೊರೆದು ಅಹಿಂದ ಕಟ್ಟಿದ ಸಿದ್ದರಾಮಯ್ಯರ ರಾಜಕೀಯ ಜೀವನವೇ ಬಹುತೇಕ ಅಂತ್ಯವಾಗುವ ಅಪಾಯವಿತ್ತು. ಅಹಿಂದ ಅಸ್ತ್ರವನ್ನೇ ಬಳಸಿ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಅಹಿಂದ ಸಿಎಂ ಆಗಿ 5 ವರ್ಷ ಸಿಎಂ ಆಗಿದ್ದು ಇತಿಹಾಸವಾಗಿದೆ.

    ದೇವೇಗೌಡರ ಕುಟುಂಬದ ಜೊತೆಗಿನ ಸಿಟ್ಟನ್ನ ಮನಸಲ್ಲಿಟ್ಟುಕೊಂಡೆ ಬಂದಿದ್ದ ಸಿದ್ದರಾಮಯ್ಯರ ಗಾಯದ ಮೇಲಿನ ಬರೆ ಎಂಬಂತೆ ಗೌಡರ ಕುಟುಂಬ ಹಠಕ್ಕೆ ಬಿದ್ದು ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ಸೋಲಿನ ಬಿಸಿ ಮುಟ್ಟಿಸಿತ್ತು. ಬಳಿಕ ಅನಿವಾರ್ಯವಾಗಿ ಮೈತ್ರಿ ಒಪ್ಪಿಕೊಂಡಿರುವ ಸಿದ್ದರಾಮಯ್ಯರಿಗೆ ಗೌಡರ ಕುಟುಂಬದ ಮೇಲಿನ ಕೋಪವಂತು ಕಡಿಮೆಯಾಗಿಲ್ಲ ಎನ್ನುವುದು ಹಲವು ಸಂದರ್ಭದಲ್ಲಿ ಸಾಬೀತಾಗಿತ್ತು.

    ಮಂಡ್ಯದ ಅಖಾಡದಲ್ಲಿ ನಿಖಿಲ್ ಗೆಲುವಿಗೆ ಸಿದ್ದರಾಮಯ್ಯ ನೆರವು ಬೇಕೆ ಬೇಕು ಎಂಬ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಆದರೆ ಇದು ಯಾವುದಕ್ಕೆ ತಲೆ ಕೆಡಿಸಿಕೊಳ್ಳದ ಸಿದ್ದರಾಮಯ್ಯ ಇಂದು ಮಂಡ್ಯಕ್ಕೆ ಹೋಗದೇ ತಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

  • ಮನವೊಲಿಸಲು ಯತ್ನಿಸಿದ ಡಿಸಿಎಂಗೆ ಮುದ್ದಹನುಮೇಗೌಡ ಖಡಕ್ ಉತ್ತರ

    ಮನವೊಲಿಸಲು ಯತ್ನಿಸಿದ ಡಿಸಿಎಂಗೆ ಮುದ್ದಹನುಮೇಗೌಡ ಖಡಕ್ ಉತ್ತರ

    ತುಮಕೂರು: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಹಾಲಿ ಸಂಸದ ಮುದ್ದಹನುಮೇಗೌಡ ಅವರನ್ನು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮನವೊಲಿಸಲು ಯತ್ನಿಸಿದ್ದಾರೆ. ಆದ್ರೆ ಪರಂ ಮಾತಿಗೆ ಹಾಲಿ ಸಂಸದರು ಒಪ್ಪಿಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಹೌದು. ಮುದ್ದಹನುಮೇಗೌಡ ಅವರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಕಾಂಗ್ರೆಸ್ ನಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ, ಅಲ್ಲದೆ ಈ ಬಗ್ಗೆ ಇಂದು ನಾಮಪತ್ರ ಕೂಡ ಸಲ್ಲಿಸುವುದಾಗಿ ಹೇಳಿದ್ದರು. ಆದ್ರೆ ಈ ಮಧ್ಯೆ ಡಿಸಿಎಂ ಅವರು ಭಾನುವಾರ ತಡರಾತ್ರಿ ಮುದ್ದಹನುಮೇಗೌಡ ಅವರಿಗೆ ಪೋನ್ ಕರೆ ಮಾಡಿ ಮನವೊಲಿಕೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.


    ನಿಮ್ಮ ಅಸಮಾಧಾನ ಬಿಟ್ಟುಬಿಡಿ ನಮ್ಮ ಜೊತೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಪರಮೇಶ್ವರ್ ಮನವೊಲಿಕೆಗೆ ಪಟ್ಟು ಬಿಡದ ಮುದ್ದುಹನುಮೇಗೌಡ, ಸ್ಪರ್ಧಿಸಿಯೇ ಸ್ಪರ್ಧಿಸುತ್ತೇನೆ. ಏನ್ ಮಾಡ್ಕೊತ್ತೀರಾ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಇತ್ತೀಚೆಗೆ ನಡೆದ ಹೆಬ್ಬೂರಿನ ತೋಟದ ಮನೆಯಲ್ಲಿ ಕಾರ್ಯಕರ್ತರ ಜೊತೆ ಮುದ್ದಹನುಮೇಗೌಡ ಅವರು ಸಭೆ ನಡೆಸಿದ್ದರು. ಸಭೆಯಲ್ಲಿ ಮಾತನಾಡಿದ ಗೌಡರು, ನನಗಾಗಿ ಅನೇಕ ಹೃದಯಗಳು ಮಿಡಿದಿವೆ. ಅವರಿಗೆ ನನ್ನ ಅಭಿನಂದನೆ ಸಲ್ಲಿಸುತ್ತಿದ್ದೇನೆ. 30 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ನಾನು 10 ದಿನಗಳ ಹಿಂದೆ ಈ ಸಭೆ ನಡೆಸುತ್ತೇನೆ ಎಂಬ ಅರಿವಿರಲಿಲ್ಲ. ನೀತಿ ಸಂಹಿತೆ ಜಾರಿಗೆ ಬರುವವರೆಗೂ ಲೋಕಸಭೆ ಸದಸ್ಯನಾಗಿ ಕೆಲಸ ಮಾಡಿದೆ. ಒಂದೇ ಒಂದು ಕಾರಣ ಹೇಳಿಲ್ಲ. ನನ್ನನ್ನೇ ಯಾಕೆ ಬಲಿಪಶು ಮಾಡುತ್ತೀರಾ ಎಂದು ಪ್ರಶ್ನಿಸಿದ್ದ ಅವರು, ಇನ್ನೂ ಕಾಲ ಮಿಂಚಿಲ್ಲ. ಒಂದು ಅವಕಾಶ ಕೊಡಿ. ನನಗೆ ಟಿಕೆಟ್ ಕೊಟ್ರೆ ಇತಿಹಾಸ ಸೃಷ್ಟಿಯಾಗುತ್ತದೆ. ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಜನರ ನ್ಯಾಯಾಲಯದಲ್ಲಿ ಹೋಗುತ್ತೇನೆ. ಸೀಟ್ ಗೋಸ್ಕರ ಅಂಗಲಾಚುವ ಪರಿಸ್ಥಿತಿ ಬರಲಿದೆ ಅಂದು ನಿರೀಕ್ಷೆ ಮಾಡಿಲ್ಲ. ಯಾರ ಬಗ್ಗೆನೂ ಟೀಕೆ ಮಾಡಿಲ್ಲ. ಮನವಿ ಮಾಡಿದ್ದೇನೆ ಅಷ್ಟೆ ಎಂದು ಹೇಳಿದ್ದರು.

    ಇದೇ ವೇಳೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಬೆಂಬಲಿಗರು ಒತ್ತಾಯಿಸಿದ್ರು. ಅಯ್ಯಯ್ಯೊ ಅನ್ಯಾಯ.. ನ್ಯಾಯ ಬೇಕು ಎಂದು ಘೋಷಣೆ ಮಾಡಿದ್ದರು. ಸ್ಪರ್ಧೆ ಮಾಡದೇ ಇದ್ದರೆ ವಿಷ ಕುಡಿಯುವುದಾಗಿ ಅಭಿಮಾನಿಗಳಿಂದ ಎಚ್ಚರಿಕೆಯನ್ನೂ ನೀಡಿದ್ದರು. ಈ ಹಿನ್ನೆಲೆಯಿಂದಾಗಿ ಮುದ್ದಹನುಮೇಗೌಡರು ಸ್ಪರ್ಧಿಸಲು ನಿರ್ಧರಿಸಿದ್ದಾರೆ.

    ತಮ್ಮ ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸಲಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಮೈತ್ರಿ ಸರ್ಕಾರದಿಂದಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಬಂಡಾಯ ಜೋರಾಗಿದೆ.

  • ಹೈಕಮಾಂಡ್ ನನಗೆ ಸರ್ಪ್ರೈಸ್ ನೀಡಿದೆ – ಶಾಮನೂರು

    ಹೈಕಮಾಂಡ್ ನನಗೆ ಸರ್ಪ್ರೈಸ್ ನೀಡಿದೆ – ಶಾಮನೂರು

    ದಾವಣಗೆರೆ: ನನಗೆ ಗೊತ್ತಿಲ್ಲದೆ ಹೆಸರು ಘೋಷಣೆಯಾಗಿದೆ. ಹೈಕಮಾಂಡ್ ನನಗೆ ಸರ್ಪ್ರೈಸ್ ಕೊಟ್ಟಿದೆ ಎಂದು ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ, 87 ವರ್ಷದ ಕಾಂಗ್ರೆಸ್ಸಿನ ಹಿರಿಯ ನಾಯಕ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

    ದಾವಣಗೆರೆಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹಿಂದೆಯೆಲ್ಲ ವಯಸ್ಸಾಗಿದೆ. ಟಿಕೆಟ್ ನೀಡಲ್ಲ ಎಂದು ಹೇಳುತ್ತಿದ್ದರು. ಈಗ ಅವರೇ ನಮಗೆ ಟಿಕೆಟ್ ನೀಡುತ್ತಿದ್ದಾರೆ. ನಾನು ಒಂದು ಬಾರಿ ಸಂಸದನಾಗಿದ್ದೆ, 5 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಇಂದು ಬೆಂಗಳೂರಿಗೆ ಹೋಗಿ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ. ಅಲ್ಲದೆ ಮಲ್ಲಿಕಾರ್ಜುನ್‍ಗೆ ಟಿಕೆಟ್ ಕೊಡುವಂತೆ ನಾನು ಕೇಳುವುದಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

    ಒಂದು ಲಕ್ಷ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂದು ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ ಅವರವರ ಇಷ್ಟ ಬಂದಂತೆ ಹೇಳಿದ್ದಾರೆ ಎಂದರು.

    ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಕ್ಷಿಣ ಕ್ಷೇತ್ರವನ್ನ ಪುತ್ರನಿಗೆ ಬಿಟ್ಟುಕೊಡಲು ಶಾಮನೂರು ಸಂಕಲ್ಪ ತೊಟ್ಟಿದ್ದಾರೆ. ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಈಗಾಗಲೇ ಮೂರು ಬಾರಿ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸೋಲು ಕಂಡಿದ್ದಾರೆ. ಆದ್ರೆ ಈ ಬಾರಿ ಸ್ವತಃ ಶಾಮನೂರು ಅವರೇ ಕಣಕ್ಕೆ ಇಳಿದು ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಸೋತಿರುವ ಭಯದಿಂದ ಈ ಬಾರಿ ಲೋಕಸಮರಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್ ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ.

    ಸದ್ಯ ಬೀಗರ ಜಿದ್ದಾಜಿದ್ದಿಗೆ ದಾವಣಗೆರೆ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಲಿದೆ. ಯಾಕೆಂದರೆ ಶಾಮನೂರು ಹಾಗೂ ಸಿದ್ದೇಶ್ವರ್ ಇಬ್ಬರೂ ಸಂಬಂಧದಲ್ಲಿ ಮಾವ-ಅಳಿಯ ಆಗುತ್ತಾರೆ. ಆದ್ರೆ ಅಳಿಯನ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕ್ತಾರಾ ಮಾವ ಅನ್ನೋದನ್ನ ಕಾದು ನೋಡಬೇಕಾಗಿದೆ.

  • ಕೊಪ್ಪಳದಲ್ಲಿ ಭುಗಿಲೆದ್ದ ಭಿನ್ನಮತ – ಮಾಜಿ ಸಂಸದ ವಿರೂಪಾಕ್ಷಪ್ಪ ಕಾಂಗ್ರೆಸ್‍ಗೆ ಗುಡ್‍ಬೈ!

    ಕೊಪ್ಪಳದಲ್ಲಿ ಭುಗಿಲೆದ್ದ ಭಿನ್ನಮತ – ಮಾಜಿ ಸಂಸದ ವಿರೂಪಾಕ್ಷಪ್ಪ ಕಾಂಗ್ರೆಸ್‍ಗೆ ಗುಡ್‍ಬೈ!

    – ಬಿಜೆಪಿ ಟಿಕೆಟ್ ಸಿಗದಿದ್ರೆ ಸಂಗಣ್ಣ ಕರಡಿ ಕಾಂಗ್ರೆಸ್‍ಗೆ

    ಕೊಪ್ಪಳ: ಲೋಕಸಮರ ಟಿಕೆಟ್ ವಿಚಾರಕ್ಕೆ ಸಂಬಂಧ ಕೊಪ್ಪಳದಲ್ಲಿ ಭಿನ್ನಮತ ಭುಗಿಲೆದ್ದಿದೆ. ಕಾಂಗ್ರೆಸ್‍ನಿಂದ ರಾಜಶೇಖರ್ ಹಿಟ್ನಾಳ್ ಹೆಸರು ಪಕ್ಕಾ ಆಗುತ್ತಿದ್ದಂತೆಯೇ ಅಸಮಾಧಾನದ ಹೊಗೆ ಎದ್ದಿದೆ.

    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿ ಸೇರುವ ಸಾಧ್ಯತೆ ಇದೆ. ಈಗಾಗಲೇ ಯಡಿಯೂರಪ್ಪ ಮತ್ತು ಈಶ್ವರಪ್ಪ ಜೊತೆ ಒಂದು ಸುತ್ತಿನ ಮಾತುಕತೆ ನಡಸಿದ್ದಾರೆ ಎಂದು ತಿಳಿದುಬಂದಿದೆ.

    ಈ ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿರೂಪಾಕ್ಷಪ್ಪ ಬಿಜೆಪಿಯಿಂದ ಕಾಂಗ್ರೆಸ್ ಗೆ ಜಂಪ್ ಆಗಿದ್ದರು. ಮೊದಲಿನಂದಲೂ ಹಿಟ್ನಾಳ್ ಕುಟುಂಬದೊಂದಿಗೆ ವಿರೂಪಾಕ್ಷಪ್ಪ ಸಂಬಂಧ ಅಷ್ಟಕಷ್ಟೆ ಇತ್ತು. ಇದೀಗ ರಾಜಶೇಖರ್ ಹಿಟ್ನಾಳ್ ಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ತೊರೆಯುವ ಸಾಧ್ಯತೆಗಳು ಕಂಡುಬರುತ್ತಿದೆ.

    ಇದು ಮೈತ್ರಿ ಕಥೆಯಾದ್ರೆ, ಬಿಜೆಪಿಯದ್ದೂ ಅಷ್ಟೇ ಆಗಿದೆ. ಒಂದು ವೇಳೆ ಬಿಜೆಪಿಯಿಂದ ಸಂಗಣ್ಣ ಕರಡಿಗೆ ಟಿಕೆಟ್ ಸಿಗದಿದ್ರೆ ಕಾಂಗ್ರೆಸ್‍ಗೆ ಸೇರ್ಪಡೆ ಆಗ್ತಾರೆ ಅನ್ನೋ ಊಹಾಪೋಹಗಳು ಎದ್ದಿವೆ. ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತ ಧರ್ಮಣ್ಣ ಹಟ್ಟಿ ಅವರು ಸಂಗಣ್ಣ ಕರಡಿ ಸಮುದಾಯವೂ ಕಾಂಗ್ರೆಸ್‍ಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.