Tag: loksabha elections 2019

  • ಸರ್ಕಾರ ರಚನೆಯ ಕನಸಿನಲ್ಲಿದ್ದ ಬಿಎಸ್‍ವೈಗೆ ಶಾಕ್!

    ಸರ್ಕಾರ ರಚನೆಯ ಕನಸಿನಲ್ಲಿದ್ದ ಬಿಎಸ್‍ವೈಗೆ ಶಾಕ್!

    ಬೆಂಗಳೂರು: ಲೋಕಸಭಾ ಚುನಾವಣೆಯ ಬಳಿಕ ಸರ್ಕಾರ ರಚನೆಯ ಕನಸಿನಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಶಾಕ್ ಎದುರಾಗಿದೆ. ಒಂದೇ ಏಟಿಗೆ ಮೂರು ಹಕ್ಕಿ ಹೊಡೆಯಲು ಮಹಾಪ್ಲಾನ್ ನಡೆದಿದೆ.

    ಚಿಕ್ಕೋಡಿ ಹಾಗೂ ಬೆಂಗಳೂರು ದಕ್ಷಿಣ ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಎಸ್‍ವೈ, ಅನಂತ್ ಕುಮಾರ್ ಬೆಂಬಲಿಗರಿಗೆ ಸಂಕಷ್ಟ ಶುರುವಾಗಿದೆ. ಇದಕ್ಕೆ ಕಾರಣ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಎಂದು ಅವರ ವಿರುದ್ಧ ಆರೋಪ ಕೇಳಿಬರುತ್ತಿದೆ.

    ಚಿಕ್ಕೋಡಿಯಲ್ಲಿ ಬಿಎಸ್‍ವೈ ಆಪ್ತ ಉಮೇಶ್ ಕತ್ತಿ ಸಹೋದರನಿಗೆ ಟಿಕೆಟ್ ಕೈತಪ್ಪಲು ಹಾಗೂ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್‍ಗೆ ಟಿಕೆಟ್ ಕೈ ತಪ್ಪಲು ಸಂತೋಷ್ ಅವರೇ ಕಾರಣರಾಗಿದ್ದಾರೆ. ಮೂರು ಹಕ್ಕಿಗಳನ್ನು ಹೊಡೆಯಲು ಈ ಎರಡು ಕ್ಷೇತ್ರಗಳಲ್ಲಿ ಮಾಸ್ಟರ್ ಗೇಮ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ತೇಜಸ್ವಿಸೂರ್ಯ ತಂದು ತೇಜಸ್ವಿನಿ ಅನಂತ್ ಕುಮಾರ್‍ಗೆ ಬ್ರೇಕ್ ಹಾಕುವುದು ಮೂಲ ಉದ್ದೇಶವಾಗಿದೆ. ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಮೂಲಕ ವಿಜಯೇಂದ್ರಕ್ಕೆ ಮೂಗುದಾರ ಹಾಕುವ ಪ್ಲಾನ್ ಮಾಡಲಾಗಿದೆ. ಈ ನಡುವೆ ಲೋಕಸಭಾ ಚುನಾವಣೆ ಬಳಿಕ ಯಡಿಯೂರಪ್ಪ ಸರ್ಕಾರ ರಚನೆಯ ಕನಸನ್ನ ಭಂಗ ಮಾಡುವ ಯತ್ನ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ.

    ಉಮೇಶ್ ಕತ್ತಿಯನ್ನ ಯಡಿಯೂರಪ್ಪರಿಂದ ದೂರ ಮಾಡಿದ್ರೆ ಸಿಎಂ ಕುರ್ಚಿ ಸಿಗಲ್ಲ ಅನ್ನೋ ಆಲೋಚನೆ ಇದಾಗಿದೆ. ಹಾಗಾಗಿಯೇ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ಕೈ ತಪ್ಪಿಸುವ ಮೂಲಕ ಸಂತೋಷ್ ರಾಜಕೀಯ ಚದುರಂಗದಾಟಕ್ಕಿಳಿದಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸಂತೋಷ್ ಚದುರಂಗದಾಟಕ್ಕೆ ಬಿಎಸ್‍ವೈ ಚೆಕ್ ಕೊಡ್ತಾರಾ ಅನ್ನೋ ಕುತೂಹಲ ಮೂಡಿದೆ.

  • ನಿಖಿಲ್ ಫಸ್ಟ್, ಸುಮಲತಾ ಲಾಸ್ಟ್- ಇವಿಎಂನಲ್ಲಿ ಅಭ್ಯರ್ಥಿಗಳ ಸ್ಥಾನ ಇಂತಿದೆ

    ನಿಖಿಲ್ ಫಸ್ಟ್, ಸುಮಲತಾ ಲಾಸ್ಟ್- ಇವಿಎಂನಲ್ಲಿ ಅಭ್ಯರ್ಥಿಗಳ ಸ್ಥಾನ ಇಂತಿದೆ

    ಮಂಡ್ಯ: ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳಿಗೆ ಇವಿಎಂನಲ್ಲಿ ಈ ಕೆಳಕಂಡಂತೆ ಸ್ಥಾನ ನೀಡಲಾಗಿದೆ. ಮೊದಲ ಹೆಸರು ಮುಖ್ಯಮಂತ್ರಿ ಮಗ ನಿಖಿಲ್ ಕುಮಾರಸ್ವಾಮಿಯದ್ದಾದ್ರೆ ಕಡೆಯವರಲ್ಲಿ 2ನೇಯವರಾಗಿ ಸುಮಲತಾ ಅಂಬರೀಶ್ ಹೆಸರಿದೆ.

    ಸುಮಲತಾ ಅಂಬರೀಶ್ ಹೆಸರಿನ ಮೊದಲಿಗೆ ಮತ್ತು ನಂತರದಲ್ಲಿ ಕೊನೆಯವರಾಗಿ ಇನ್ನಿಬ್ಬರು ಸುಮಲತಾ ಹೆಸರಿನ ಪಕ್ಷೇತರ ಅಭ್ಯರ್ಥಿಗಳು ಇದ್ದಾರೆ. ಇವಿಎಂನಲ್ಲಿ ಈ ಬಾರಿ ಅಭ್ಯರ್ಥಿಗಳ ಫೋಟೋವು ಇರುವುದರಿಂದ ಮತದಾರರಿಗೆ ಅಷ್ಟೊಂದು ಗೊಂದಲ ಆಗುವ ಸಾಧ್ಯತೆ ಇಲ್ಲ.

    ಕ್ರಮ ಸಂಖ್ಯೆ- ಅಭ್ಯರ್ಥಿ-  ಪಕ್ಷ – ಚಿಹ್ನೆ

    1. ನಿಖಿಲ್ ಕೆ- ಜೆಡಿಎಸ್ – ತೆನೆ ಹೊತ್ತ ಮಹಿಳೆ

    2. ನಂಜುಂಡಸ್ವಾಮಿ – ಬಿಎಸ್‍ಪಿ – ಆನೆ

    3. ಗುರುಲಿಂಗಯ್ಯ – ಐಎನ್‍ಸಿಪಿ – ಕಬ್ಬು ಬೆಳೆಗಾರ

    4. ಡಿ ಸಿ ಜಯಶಂಕರ –  ಐಎನ್‍ಪಿ – ಚಪಾತಿ ರೋಲರ್

    5. ಸಿ ಪಿ ದಿವಾಕರ್ –  ಉತ್ತಮ ಪ್ರಜಾಕೀಯ ಪಾರ್ಟಿ  – ಆಟೋ ರಿಕ್ಷಾ

    6. ಸಂತೋಷ್ ಹೆಚ್‍ಪಿ – ಇಂಜಿನಿಯರ್ಸ್ ಪಾರ್ಟಿ – ಟ್ರಾಕ್ಟರ್ ಚಲಾಯಿಸುವ ರೈತ

    7. ಅರವಿಂದ್ – ಪ್ರೇಮಾನಂದ್  ಪಕ್ಷೇತರ – ಮೈಕ್

    8. ಕೌಡ್ಲೆ ಚನ್ನಪ್ಪ – ಪಕ್ಷೇತರ – ಏಸಿ

    9. ತುಳಸಪ್ಪ ದಾಸರ – ಪಕ್ಷೇತರ – ಹೆಲ್ಮೆಟ್

    10. ಹೆಚ್ ನಾರಾಯಣ – ಪಕ್ಷೇತರ – ಸಿಸಿಟಿವಿ

    11. ಎನ್‍ಸಿ ಪುಟ್ಟರಾಜು – ಪಕ್ಷೇತರ – ಟಿವಿ

    12. ಪ್ರೇಮಕುಮಾರ ವಿ.ವಿ – ಪಕ್ಷೇತರ – ತೆಂಗಿನ ತೋಟ

    13. ಮಂಜುನಾಥ್ ಬಿ – ಪಕ್ಷೇತರ – ಅಲ್ಮೇರಾ

    14. ಜಿ.ಮಂಜುನಾಥ್ – ಪಕ್ಷೇತರ – ವಜ್ರ

    15. ಲಿಂಗೇಗೌಡ ಎಸ್ ಹೆಚ್ – ಪಕ್ಷೇತರ – ವಿಷಲ್

    16. ಸಿ.ಲಿಂಗೇಗೌಡ – ಪಕ್ಷೇತರ – ಚಪ್ಪಲಿ

    17. ಎಂ ಎಲ್ ಶಶಿಕುಮಾರ್ – ಪಕ್ಷೇತರ – ಸಿತಾರ್

    18. ಸತೀಶ್‍ಕುಮಾರ್ ಟಿ ಎನ್ – ಪಕ್ಷೇತರ – ಕಂಪ್ಯೂಟರ್

    19. ಸುಮಲತಾ – ಪಕ್ಷೇತರ – ತಳ್ಳುಗಾಡಿ

    20. ಎ ಸುಮಲತಾ – ಪಕ್ಷೇತರ – ಕಹಳೆ ಊದುತ್ತಿರುವ ವ್ಯಕ್ತಿ

    21. ಎಂ ಸುಮಲತಾ – ಪಕ್ಷೇತರ – ಬೇಬಿ ವಾಕರ್

    22. ಸುಮಲತಾ ಪಿ – ಪಕ್ಷೇತರ – ಬ್ಯಾಟ್

  • ಸುಮಲತಾಗೆ ಸಚಿವ ಪುಟ್ಟರಾಜು ಸವಾಲು

    ಸುಮಲತಾಗೆ ಸಚಿವ ಪುಟ್ಟರಾಜು ಸವಾಲು

    ಮಂಡ್ಯ: ದಿವಂಗತ ಅಂಬರೀಶ್ ಹೆಸರು ಹೇಳಲ್ಲ ಹೇಳಲ್ಲ ಎನ್ನುತ್ತಲೇ ಅಂಬಿ ಹೆಸರು ಜಪವಾಗುತ್ತಿದ್ದು, ಇದೀಗ ಸಚಿವ ಪುಟ್ಟರಾಜು ಅವರು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಸವಾಲೆಸೆದಿದ್ದಾರೆ.

    ಅಂಬಿಗೆ ನಾನೇನು ಮಾಡಿದ್ದೇನೆ ಎಂಬುದನ್ನು ಸುಮಲತಾ ಹೇಳಿಕೊಳ್ಳಲಿ. ಅಂಬರೀಶ್ ಸಮಾಧಿ ಬಳಿ ಪೂಜೆ ಮಾಡಲು ಹೋದಾಗ ಪುಟ್ಟರಾಜು ಅವರು ರಾಜಕೀಯವಾಗಿ ಕುಟುಂಬಕ್ಕೆ ಏನೇನು ಸಹಾಯ ಮಾಡಿದ್ದಾರೆ ಎಂಬುದನ್ನು ಅಂಬರೀಶ್ ಅಣ್ಣನ ಮುಂದೆ ಕೇಳಿಕೊಳ್ಳಲಿ ಎಂದು ಸಚಿವರು ಸುಮಲತಾಗೆ ಚಾಲೆಂಜ್ ಮಾಡಿದ್ದಾರೆ.

    ನಾನು ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇನೆ. ಹಾಗೆಯೇ ರಾಮನಗರದಲ್ಲಿ ಸೋತ ಬಳಿಕ ಅವರನ್ನು ನಾನೇ ಮಂಡ್ಯಕ್ಕೆ ಕರೆತಂದಿದ್ದೇನೆ. ಅಲ್ಲದೇ ಮುಂದೆ ನೀವು ಇಲ್ಲೇ ಎಂಪಿ ಅಭ್ಯರ್ಥಿ ಆಗಬೇಕು ಎಂದು ಮಾಡಿದ್ದೀನಿ. ರಾಜಕೀಯ ಪ್ರವೇಶ ಮಂಡ್ಯದಿಂದಲೇ ಮಾಡಬೇಕು ಎಂದು ಹೇಳಿದ್ದೆ ಅಂದ್ರು.

    ಅಂಬರೀಶ್ ಅವರ ರಾಜಕೀಯ ಏಳಿಗೆಗಾಗಿ ನಾನು ಶ್ರಮವಹಿಸಿದ್ದೇನೆ. ನನ್ನ ಆತ್ಮಾಭಿಮಾನದ ಬಗ್ಗೆ ಸುಮಲತಾ ಪ್ರಶ್ನೆ ಮಾಡೋದು ಬೇಡ ಎಂದು ಪುಟ್ಟರಾಜು, ಸುಮಲತಾ ವಿರುದ್ಧ ಗರಂ ಆಗಿದ್ದಾರೆ.

    ಈ ಹಿಂದೆ ಸುಮಲತಾ ಅವರು ಕೂಡ ಅಂಬರೀಶ್ ಹೆಸರನ್ನು ಬಿಟ್ಟು ಪ್ರಚಾರ ಮಾಡಲಿ. ಸುಮಲತಾ ಅಂಬರೀಶ್ ನಲ್ಲಿ ಅಂಬರೀಶ್ ಹೆಸರನ್ನು ಬೇರ್ಪಡಿಸಲು ಯಾರಿಂದಲೂ ಆಗಲ್ಲ ಎಂದು ಹೇಳಿದ್ದರು.

  • 5 ವರ್ಷ ತೇಜಸ್ವಿ ಸೂರ್ಯ ಕೈಯಲ್ಲಿ ನರಳಿದ್ದೇನೆ -ಬಿಜೆಪಿ ಅಭ್ಯರ್ಥಿ ವಿರುದ್ಧ ಮಹಿಳೆ ಗಂಭೀರ ಆರೋಪ

    5 ವರ್ಷ ತೇಜಸ್ವಿ ಸೂರ್ಯ ಕೈಯಲ್ಲಿ ನರಳಿದ್ದೇನೆ -ಬಿಜೆಪಿ ಅಭ್ಯರ್ಥಿ ವಿರುದ್ಧ ಮಹಿಳೆ ಗಂಭೀರ ಆರೋಪ

    – ಇದು ಮೀಟೂ ಕೇಸಾ ಎಂದು ಕಾಂಗ್ರೆಸ್ ಪ್ರಶ್ನೆ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಅವರ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಆ ಮಹಿಳೆಯ ಆರೋಪವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಶ್ನೆ ಮಾಡುತ್ತಿದೆ.

    ಹೌದು. ಡಾ. ಸೋಮ್ ದತ್ತಾ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ತೇಜಸ್ವಿ ಸೂರ್ಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

    ಆರೋಪವೇನು?:
    5 ವರ್ಷ ನಾನು ತೇಜಸ್ವಿ ಸೂರ್ಯ ಕೈಯಲ್ಲಿ ನಲುಗಿದ್ದೇನೆ. ನನ್ನ ಪ್ರೀತಿ ಕುರುಡಾಗಿತ್ತು. ನನ್ನನ್ನು ನಂಬಿ ನಾನು ಮೊದಲನೇಯ ಬಲಿಪಶು ಅಲ್ಲ, ಕೊನೆಯವಳೂ ಅಲ್ಲ. ಪ್ರತಿಯೊಬ್ಬ ಹಿಂದೂವು ನಿಜವಾದ ಅರ್ಥದಲ್ಲಿ ಧಾರ್ಮಿಕನಾಗಿರಲ್ಲ. ದೊಡ್ಡದಾಗಿ ಭಾಷಣ ಮಾಡೋರೆಲ್ಲ ದೊಡ್ಡ ವ್ಯಕ್ತಿ ಆಗಿರಲಿಲ್ಲ ಎಂದಿದ್ದಾರೆ.

    ಸತ್ಯ ಗೊತ್ತಿಲ್ಲದೆ ತೇಜಸ್ವಿ ಸೂರ್ಯಗೆ ಪುಕ್ಕಟೆ ಪ್ರಚಾರ ಕೊಡಬೇಡಿ. ಇಂಥ ವ್ಯಕ್ತಿಗೆ ಟಿಕೆಟ್ ಕೊಡುವ ಮೊದಲು ಬಿಜೆಪಿ ಹಿನ್ನೆಲೆಯನ್ನ ಪರಿಶೀಲಿಸಬೇಕಿತ್ತಲ್ಲ. ತೇಜಸ್ವಿ ಸೂರ್ಯ ಜೊತೆಗಿನ ನಂಟಿದ್ದ ನನ್ನ ತಂದೆ-ತಾಯಿ ಕೂಡ ನೋವು ಅನುಭವಿಸಿದ್ದಾರೆ. ನನ್ನ ತಂದೆ-ತಾಯಿ ಮತ್ತಷ್ಟು ಕೊರಗುವುದು ನನಗೆ ಇಷ್ಟವಿಲ್ಲ ಎಂದು ಮಹಿಳೆ ತೇಜಸ್ವಿ ಸೂರ್ಯ ವಿರುದ್ಧ ಆರೋಪಿಸಿದ್ದಾರೆ.

    ಮಹಿಳೆ ಆರೋಪ ಮಾಡುತ್ತಿದ್ದಂತೆಯೇ ಎಚ್ಚೆತ್ತ ಕಾಂಗ್ರೆಸ್ ಈ ಟ್ವೀಟನ್ನೇ ಉಲ್ಲೇಖಿಸಿ, ತೇಜಸ್ವಿ ಸೂರ್ಯ ವಿರುದ್ಧ `ತೇಜಸ್ವಿ ಸೂರ್ಯ ಮತ್ತೊಬ್ಬ ಮೀಟೂ ಎಂಜೆ ಅಕ್ಬರ್..’ ಎಂದು ಪ್ರಶ್ನಿಸಿದೆ.

    ದತ್ತಾ ಮನವಿ:
    ದತ್ತಾ ಟ್ವೀಟ್ ಗಳು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನನ್ನ ಹಾಗೂ ತೇಜಸ್ವಿ ವಿಚಾರವನ್ನು ಇಲ್ಲಿಗೆ ನಿಲ್ಲಿಸಿ. ಇದು ನನ್ನ ವಿನಮ್ರ ಮನವಿಯಾಗಿದೆ. ನಾವಿಬ್ಬರೂ ಒಳ್ಳೆಯ ಮನೆತನ ಇರುವ ಕುಟುಂಬದಿಂದ ಬಂದಿದ್ದೇವೆ. ಹೀಗಾಗಿ ಈ ವಿಚಾರವನ್ನು ಎಳೆದುಕೊಂಡು ಹೋದರೆ ಇಬ್ಬರ ಕುಟುಂಬಕ್ಕೂ ತೊಂದರೆಯಾಗುತ್ತದೆ. ಸದ್ಯ ನನ್ನ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದೇನೆ. ದಯವಿಟ್ಟು ಈ ವಿಚಾರವನ್ನು ಇಲ್ಲೇ ಬಿಟ್ಟುಬಿಡಿ. ನಾವಿಬ್ಬರೂ ನಮ್ಮದೇ ದಾರಿಯಲ್ಲೇ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.

    ತೇಜಸ್ವಿ ಅಭಿಮಾನಿಗಳು ಗರಂ:
    ಇದೂವರೆಗೆ ಪ್ರಶ್ನೆ ಮಾಡದ ಈಕೆ ತೇಜಸ್ವಿ ಅವರಿಗೆ ಟಿಕೆಟ್ ಸಿಕ್ಕಿದ ಕೂಡಲೇ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಿದ್ದಾರೆ. ತೊಂದರೆ ಆಗಿದ್ದರೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದಿತ್ತು. ದೂರು ನೀಡದೇ ಈಗ ತೇಜೋವಧೆ ಮಾಡಲು ಈ ಮಹಿಳೆ ಮುಂದಾಗಿದ್ದಾರೆ ಎಂದು ತೇಜಸ್ವಿ ಅಭಿಮಾನಿಗಳು ಹಾಗೂ ಬಿಜೆಪಿಗರು ಕಿಡಿಕಾರಿದ್ದಾರೆ.

  • ರಮ್ಯಾಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ತಾಯಿ ರಂಜಿತಾ ಕಣ್ಣೀರು!

    ರಮ್ಯಾಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ತಾಯಿ ರಂಜಿತಾ ಕಣ್ಣೀರು!

    ಮಂಡ್ಯ: ನಟಿ, ಮಾಜಿ ಸಂಸದೆ ರಮ್ಯಾಗೆ ಮಂಡ್ಯ ಟಿಕೆಟ್ ಕೈ ತಪ್ಪಿದ್ದಕ್ಕೆ ತಾಯಿ ರಂಜಿತಾ ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ರಮ್ಯಾ 5 ಲಕ್ಷ ಮತಗಳನ್ನ ಪಡೆದು ಗೆದ್ದಿದ್ದರು. ಅಂಬರೀಶ್ ಕಾಂಗ್ರೆಸ್‍ಗೆ ದ್ರೋಹ ಮಾಡಿ ಜೆಡಿಎಸ್‍ನ್ನ ಗೆಲ್ಲಿಸಿದ್ರು. ಮಂಡ್ಯ ಋಣ ತೀರಿಸಲು ಕೆಲವರಿಗೆ ಅವಕಾಶವಿತ್ತು, ಋಣನೂ ತೀರಿಸಲಿಲ್ಲ, ಕೆಲಸನೂ ಮಾಡಿಲ್ಲ. ನಾವು ಕಾಂಗ್ರೆಸ್‍ನಲ್ಲಿದ್ದೇವೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ರು.

    ರಮ್ಯಾ ಅಥವಾ ನಾನು ಇಲ್ಲಿ ಸೋಲಿಸೋಕೆ ಏನೂ ಇಲ್ಲ. ನಮ್ಮ ಮಂಡ್ಯ ಮತದಾರರು ತುಂಬಾ ಬುದ್ಧಿವಂತರಿದ್ದಾರೆ. ಮಂಡ್ಯ ಜಿಲ್ಲೆಗೆ ಮಾತ್ರವಲ್ಲ ಇಡೀ ದೇಶಕ್ಕೆ ರಮ್ಯಾ ಸೋತಿದ್ದಕ್ಕೆ ಕಾರಣ ಯಾರು, ಸೋಲಿಸಿದವರು ಯಾರು ಎಂದು ಗೊತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಯಾರಿಂದ ಸರ್ವನಾಶ ಆಗಿದೆ. 7 ಶಾಸಕರು ಯಾರಿಂದ ಸೋತಿದ್ದರು. ಮಂಡ್ಯದಲ್ಲಿ ನಮ್ಮ 5 ಲಕ್ಷ ಮತದಾರರು ಯಾರಿಂದ ಅನಾಥರಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಇಲ್ಲದಂತೆ ಮಾಡಿದ್ದು ಯಾರು ಎಂದು ಮಂಡ್ಯ ಜನತೆಗೆ ಗೊತ್ತಾಗಿದೆ. ಹೀಗಾಗಿ ನಾವೇನೂ ಹೇಳಕ್ಕಾಗಲ್ಲ. ಅವರೇ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ರು.

    ನಾನು ಮಣ್ಣಿನ ನಿಜವಾದ ಮಗಳು. ಈ ಭೂಮಿಗೋಸ್ಕರ ನಾವು ಈ ಜನಕ್ಕೆ ಕೆಲಸ ಮಾಡಬೇಕು ಎಂದು ಆಸೆ ಇಟ್ಟುಕೊಂಡು ಬಂದಿದ್ದವರು. ನಮಗೆ ಬೇಕಾದಂತೆ ಬದುಕಬಹುದಿತ್ತು. ಯಾಕಂದ್ರೆ ವೈಭವ, ದುಡ್ಡು ಎಲ್ಲವೂ ಇತ್ತು. ಇವುಗಳನ್ನೆಲ್ಲಾ ಬಿಟ್ಟು ಮಂಡ್ಯ ಜಿಲ್ಲೆಗೆ ಸೇವೆ ಮಾಡಬೇಕು ಎಂದು ಬಂದೆವು. ಹಾಗೆಯೇ ಒಂದು ಅವಕಾಶನೂ ಕೊಟ್ಟರು. ಯಾರ್ಯಾರು ಎಷ್ಟೆಷ್ಟೋ ಗೆದ್ದಿದ್ದರೂ ಬೇಕಾದಷ್ಟು ಸಮಯವಿತ್ತು. ಕೆಲವರಿಗೆ ಋಣ ತೀರಿಸಲು, ಕೆಲಸ ಮಾಡಲು ಸಮಯವಿತ್ತು. ಆದ್ರೆ ಯಾರೂ ಏನೂ ಮಾಡಿಲ್ಲ ಎಂದು ಭಾವುಕರಾದ್ರು.

    ಮಂಡ್ಯ ಜನತೆ ದಡ್ಡರಲ್ಲ. ತುಂಬಾ ಬುದ್ಧಿವಂತರಾಗಿದ್ದು, ಯೋಚನೆ ಮಾಡುವ ಶಕ್ತಿ ಇದೆ. ಇಂದು ರಮ್ಯಾ ಅವರಿಗೆ ಯಾಕೆ ಅವಕಾಶ ಸಿಕ್ಕಿಲ್ಲ ಎಂದು ಜಿಲ್ಲೆಯ ಜನತೆಗೆ ಗೊತ್ತಿದೆ. ರಮ್ಯಾರನ್ನು ಯಾರು ಸೋಲಿಸಿದ್ರು, ಯಾರು ನಮ್ಮ ಕೈ ಬಿಟ್ಟರು ಇವೆಲ್ಲ ಜನತೆಗೆ ಗೊತ್ತಿದೆ. ಜಿಲ್ಲೆಯ ಜನರಿಗೆ ಇನ್ನೂ ನಮ್ಮ ಮೇಲೆ ಪ್ರೀತಿ, ಕರುಣೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಮೈತ್ರಿ ಧರ್ಮ ಪಾಲಿಸುವುದು ನಮ್ಮ ಧರ್ಮವಾಗಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯನ್ನು ನಮ್ಮದೇ ಅಭ್ಯರ್ಥಿ ಎಂದು ತಿಳಿದುಕೊಂಡು, ಮಂಡ್ಯದಲ್ಲಿ ಅವರನ್ನು ಗೆಲ್ಲಿಸುವುದಕ್ಕೆ ಬೆಂಬಲಿಸುತ್ತೇವೆ. ಸದ್ಯ ಮಂಡ್ಯದಲ್ಲಿ ನಿಖಿಲ್ ಪರ ಪ್ರಚಾರ ಮಾಡೋದಿಕ್ಕೆ ಬಂದಿದ್ದೇನೆ ಅಂದ್ರು.

  • ಲೋಕಸಭಾ ಚುನಾವಣಾ ಸರ್ವೆಯೇ ಐಟಿ ದಾಳಿಗೆ ಕಾರಣ!

    ಲೋಕಸಭಾ ಚುನಾವಣಾ ಸರ್ವೆಯೇ ಐಟಿ ದಾಳಿಗೆ ಕಾರಣ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಭಯಕ್ಕೆ ಬಿದ್ರಾ ಅನ್ನೋ ಅನುಮಾನವೊಂದು ಮೂಡಿದೆ. ಯಾಕಂದ್ರೆ ಐಟಿ ದಾಳಿ ಮಾಡ್ಲಿಲ್ಲ ಅಂದ್ರೆ `ರಾಜಕೀಯ’ ಕಷ್ಟ ಎಂದು `ಚೌಕಿದಾರ್’ ಜೋಡಿಗೆ ಮುನ್ಸೂಚನೆಯೊಂದು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಚುನಾವಣೆ ಹೊತ್ತಲ್ಲೇ ದೋಸ್ತಿಗಳಿಗೆ ಐಟಿ ದಾಳಿಯ ಶಾಕ್ ಕೊಟ್ರಾ ಅನ್ನೋ ಪ್ರಶ್ನೆ ಎದ್ದಿದೆ.

    ಮುನ್ಸೂಚನೆ ಏನು..?
    ಲೋಕಸಭಾ ಚುನಾವಣಾ ಸರ್ವೆಯೊಂದು ನಡೆದಿದೆ. ಇದರಿಂದ `ಚೌಕಿದಾರ್’ ಜೋಡಿ ಬೆಚ್ಚಿಬಿದ್ದಿದೆ. ಕಾಂಗ್ರೆಸ್-ಜೆಡಿಎಸ್ ದೋಸ್ತಿಯಿಂದಾಗಿ ಹಳೆಯ ಸೀಟುಗಳನ್ನೂ ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಟಾರ್ಗೆಟ್ 25 ರೀಚ್ ಆಗುವುದಿರಲಿ, 17 ಸ್ಥಾನಗಳಲ್ಲಿ ಮತ್ತೆ ಗೆಲ್ಲುವುದೇ ಕಷ್ಟವಾಗುತ್ತದೆ. ಇದರಿಂದ ಕಾಂಗ್ರೆಸ್-ಜೆಡಿಎಸ್ ಲೋಕಸಭಾ ಮೈತ್ರಿಯಿಂದ ಬಿಜೆಪಿಗೆ ಭಾರೀ ನಷ್ಟ ಎಂಬ ಮುನ್ಸೂಚನೆ ಸಿಕ್ಕಿರುವುದಾಗಿ ಮಾಹಿತಿ ಲಭಿಸಿದೆ. ಇದನ್ನೂ ಓದಿ: ‘ಲೋಕ ಸಮರ’ಕ್ಕೆ ಐಟಿ ಈಟಿ-ಐಟಿ ದಾಳಿ ನಡೆದಿದ್ದೇಲ್ಲಿ?

    ಈ ಸರ್ವೆಯ ವರದಿ ಫೆಬ್ರವರಿ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಶಾ ಕೈ ಸೇರಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೋಸ್ತಿಗಳ ಶಕ್ತಿ ಕುಗ್ಗಿಸಲು `ಐಟಿ ಅಸ್ತ್ರ’ ಬಳಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೊದಲ ಹಂತದಲ್ಲಿ ಮತದಾನ ನಡೆಯೋ ಕಡೆಗಳಲ್ಲಿ ಗುರುವಾರದಿಂದ ಐಟಿ ಶೋಧ ನಡೆಯುತ್ತಿದೆ. ಸಿಎಂ ಕುಮಾರಸ್ವಾಮಿ, ರೇವಣ್ಣ, ಡಿಕೆಶಿಯನ್ನೇ ಗುರಿಯಾಗಿಟ್ಟುಕೊಂಡು ಹುಡುಕಾಟ ನಡೆಸಲಾಗಿದೆ. 2ನೇ ಹಂತದ ಮತದಾನ ನಡೆಯೋ ಶಿವಮೊಗ್ಗದಲ್ಲೂ ಶೋಧ ನಡೆಯಲಿದ್ದು, ಚುನಾವಣೆ ಮುಗಿಯೋದಕ್ಕೂ ಮೊದಲು ಮತ್ತೊಮ್ಮೆ ಐಟಿ ದಾಳಿ ನಡೆಯುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.

  • 2014ರ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗಿರುವ ಕ್ಷೇತ್ರಗಳ ವಿವರ ಇಲ್ಲಿದೆ

    2014ರ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗಿರುವ ಕ್ಷೇತ್ರಗಳ ವಿವರ ಇಲ್ಲಿದೆ

    ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಈ ಹಿಂದೆ ಅಂದರೆ 2014ರ ಚುನಾವಣೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮತದಾನವಾದ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿರುವ ಮಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಉಡುಪಿ-ಚಿಕ್ಕಮಗಳೂರು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿತ್ತು.

    ಮಂಗಳೂರು:
    ರಾಜ್ಯದಲ್ಲೇ ಅತೀ ಹೆಚ್ಚು ಮತದಾನವಾಗಿದ್ದು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ. ಇಲ್ಲಿನ 8 ವಿಧಾನಸಭಾ ಕ್ಷೇತ್ರದಲ್ಲಿ 1,766 ಮತದಾನದ ಕೇಂದ್ರಗಳಿತ್ತು. 15,65,219 ಮತದಾರರಿದ್ದರು. ಇದರಲ್ಲಿ 12,07,583 ಮತದಾನ ಮಾಡಿದ್ದರು. ಈ ವಿಧಾನಸಭಾ ಕ್ಷೇತ್ರಗಳಲ್ಲಿ 17 ನಾಮಪತ್ರ ಸಲ್ಲಿಕೆಯಾಗಿತ್ತು. ಅಲ್ಲದೆ 14 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ 12 ಮಂದಿ ಠೇವಣಿ ಕಳೆದುಕೊಂಡಿದ್ದರು. ಒಟ್ಟಾರೆ ಕ್ಷೇತ್ರಗಳಲ್ಲಿ ಶೇ.77.15 ರಷ್ಟು ಮತದಾನವಾಗಿತ್ತು.


    ಚಿಕ್ಕಬಳ್ಳಾಪುರ:
    ಎರಡನೇಯ ಸ್ಥಾನ ಪಡೆದ ಚಿಕ್ಕಬಳ್ಳಾಪುರದ 8 ವಿಧಾನಸಭಾ ಕ್ಷೇತ್ರದಲ್ಲಿ 2,119 ಮತದಾನದ ಕೇಂದ್ರಗಳಿತ್ತು. ಈ ಕ್ಷೇತ್ರಗಳಲ್ಲಿ 16,58,410 ಮತದಾರರಿದ್ದರು. ಇದರಲ್ಲಿ 12,63,911 ಮಂದಿ ಮತದಾನ ಮಾಡಿದ್ದರು. ಈ ಕ್ಷೇತ್ರಗಳಲ್ಲಿ 23 ಮಂದಿ ನಾಮಪತ್ರ ಸಲ್ಲಿಸಿದ್ದು, 19 ಮಂದಿ ಸ್ಪರ್ಧಿಸಿದ್ದರು. ಹಾಗೆಯೇ 16 ಮಂದಿ ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದರು. ಒಟ್ಟಾರೆ ಕ್ಷೇತ್ರಗಳಲ್ಲಿ ಶೇ.76.21ರಷ್ಟು ಮತದಾನವಾಗಿತ್ತು.

    ಕೋಲಾರ:
    ಮೂರನೇ ಸ್ಥಾನ ಕೋಲಾರ ಪಡೆದುಕೊಂಡಿದ್ದು, ಈ ಕ್ಷೇತ್ರದಲ್ಲಿ 2,041 ಮತದಾನದ ಕೇಂದ್ರಗಳಿತ್ತು. ಇಲ್ಲಿ 14,92,977 ಮತದಾರರಿದ್ದರು. ಈ ಕ್ಷೇತ್ರಗಳಲ್ಲಿ 33 ಮಂದಿ ನಾಮಪತ್ರ ಸಲ್ಲಿಸಿದ್ದು, 22 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ 19 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದರು. 2014ರ ಚುನಾವಣೆಯಲ್ಲಿ 11,27,340 ಮಂದಿ ಮತದಾನ ಮಾಡಿದ್ದು, ಶೇ. 75.51ರಷ್ಟು ಮತದಾನವಾಗಿತ್ತು.


    ಉಡುಪಿ- ಚಿಕ್ಕಮಗಳೂರು:
    ಮತದಾನ ಮಾಡಿರುವುದರಲ್ಲಿ ನಾಲ್ಕನೇ ಸ್ಥಾನ ಉಡುಪಿ ಹಾಗೂ ಚಿಕ್ಕಮಗಳೂರಿಗೆ ಸಿಕ್ಕಿದೆ. ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 1,751 ಮತದಾನ ಕೇಂದ್ರಗಳಿದ್ದವು. ಅದರಲ್ಲಿ ಒಟ್ಟು 13,87,294 ಮತದಾರರಿದ್ದರು. ಈ ಕ್ಷೇತ್ರಗಳಲ್ಲಿ 14 ಮಂದಿ ನಾಮಪತ್ರ ಸಲ್ಲಿಸಿ 11 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ 9 ಮಂದಿ ಠೇವಣಿ ಕಳೆದುಕೊಂಡಿದ್ದರು. ಈ ಕ್ಷೇತ್ರಗಳಲ್ಲಿ 10,34,334 ಮಂದಿ ಮತದಾನಗೈದಿದ್ದು, ಶೇ. 74.56ರಷ್ಟು ಮತದಾನವಾಗಿತ್ತು.

    ಚಿಕ್ಕೋಡಿ:
    ಐದನೇ ಸ್ಥಾನದಲ್ಲಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 1,728 ಮತದಾನ ಕೇಂದ್ರಗಳಿದ್ದವು. ಚುನಾವಣೆಯ ಸಂದರ್ಭದಲ್ಲಿ ಈ ಕ್ಷೇತ್ರಗಳಲ್ಲಿ 14,42,206 ಮತದಾರರಿದ್ದರು. ಇಲ್ಲಿ 15 ಮಂದಿ ನಾಮ ಪತ್ರ ಸಲ್ಲಿಸಿದ್ದರು. ಹಾಗೆಯೇ 12 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ 10 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದರು. 10,71,495 ಮಂದಿ ಮತದಾನ ಮಾಡಿದ್ದು, ಶೇ.74.30 ರಷ್ಟು ಮತದಾನವಾಗಿತ್ತು.

  • ಜೆಡಿಎಸ್ ನಾಯಕರಿಂದ ಕಾಂಗ್ರೆಸ್‍ಗೆ ತಾಕೀತು

    ಜೆಡಿಎಸ್ ನಾಯಕರಿಂದ ಕಾಂಗ್ರೆಸ್‍ಗೆ ತಾಕೀತು

    ತುಮಕೂರು: ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆದರೆ ಇನ್ನೂ ದೋಸ್ತಿ ಸರ್ಕಾರದಲ್ಲಿ ತುಮಕೂರು ಬಂಡಾಯ ಶಮನವಾಗಿಲ್ಲ. ಹೀಗಾಗಿ ಜೆಡಿಎಸ್ ನಾಯಕರು ಕಾಂಗ್ರೆಸ್ ಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

    ತುಮಕೂರು ಲೋಕಸಭಾ ಕ್ಷೇತ್ರದ ದೋಸ್ತಿ ಅಭ್ಯರ್ಥಿಯಾಗಿ ಈಗಾಗಲೇ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಈ ಮಧ್ಯೆ ಮದ್ದಹನುಮೇಗೌಡ ಅವರು, ಅಭಿಮಾನಿಗಳ ಒತ್ತಾಯದ ಮೇರೆಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಮನವನ್ನು ಕೂಡಲೇ ಸರಿಪಡಿಸದಿದ್ದರೆ ಪರಿಸ್ಥಿತಿ ಸರಿ ಇರಲ್ಲ ಎಂದು ಜೆಡಿಎಸ್ ನಾಯಕರು ಕಾಂಗ್ರೆಸ್‍ಗೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಮುದ್ದುಹನುಮೇಗೌಡರ ರೆಬೆಲ್ ಫೈಟ್ ದೋಸ್ತಿಗೆ ಭಂಗ ತರುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಒಂದು ವೇಳೆ ಮುದ್ದಹನುಮೇಗೌಡರ ಬಂಡಾಯ ಶಮನವಾಗದಿದ್ದರೆ ಮೈತ್ರಿಗೆ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

    ಇತ್ತ ಮುದ್ದ ಹನುಮೇಗೌಡರ ಮನವೊಲಿಸಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದು, ಮುದ್ದ ಹನುಮೇಗೌಡರಿಗೆ ಕೆ.ಎನ್.ರಾಜಣ್ಣ ಸಾಥ್ ನೀಡಿದ್ದಾರೆ. ದೇವೇಗೌಡರಿಗೆ ಕೈ ರೆಬೆಲ್ಸ್ ನಾಯಕರಿಂದ ತೊಂದರೆ ಆದರೆ ಮೈತ್ರಿಗೆ ತೊಂದರೆ ಆಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.


    ಎಚ್‍ಡಿಡಿಗೆ ಕಾಂಗ್ರೆಸ್‍ನಿಂದ ತೊಂದರೆ ಅನ್ನೋ ಮೇಸೆಜ್ ಹೋದರೆ ಕಷ್ಟವಾಗಲಿದೆ. ಹೀಗಾಗಿ ಕಾಂಗ್ರೆಸ್‍ನಿಂದ ಮುದ್ದ ಹನುಮೇಗೌಡರ ಮನವೊಲಿಕೆ ಯತ್ನ ನಡೆಸಲಾಗುತ್ತಿದ್ದು, ಇಂದು ಸಂಧಾನ ಸಭೆ ನಡೆಯೋ ಸಾಧ್ಯತೆಗಳಿವೆ ಎನ್ನಲಾಗಿದೆ.

  • ಖರ್ಗೆ ಕೆಡವಲು ಕಮಲ ಒಗ್ಗಟ್ಟಿನ ಮಂತ್ರ – ಅಹಿಂದ ಮತಕ್ಕಾಗಿ ಬಿಜೆಪಿ ಮಾಸ್ಟರ್ ಪ್ಲಾನ್!

    ಖರ್ಗೆ ಕೆಡವಲು ಕಮಲ ಒಗ್ಗಟ್ಟಿನ ಮಂತ್ರ – ಅಹಿಂದ ಮತಕ್ಕಾಗಿ ಬಿಜೆಪಿ ಮಾಸ್ಟರ್ ಪ್ಲಾನ್!

    ಕಲಬುರಗಿ: ಕಾಂಗ್ರೆಸ್ ಭದ್ರಕೋಟೆ ಕಲಬುರಗಿಯಲ್ಲಿ ಈ ಬಾರಿ ಶತಾಯಗತಾಯ ಕಮಲ ಅರಳಿಸಲು ಬಿಜೆಪಿ ಸಜ್ಜಾಗಿದೆ. ಬಿಜೆಪಿಯ ಮಾಸ್ಟರ್ ಪ್ಲಾನಿಗೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕೈ ನಾಯಕರು ದಂಗಾಗಿದ್ದಾರೆ.

    ರಾಜ್ಯದ ಟಾಪ್ 5 ಲೋಕಸಭಾ ಕ್ಷೇತ್ರಗಳಲ್ಲಿ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರ ಸಹ ಒಂದಾಗಿದೆ. ಇಲ್ಲಿ ಕೈ ಮುಖಂಡ ಹಾಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಕೆಡವಲು ಬಿಜೆಪಿ ನಾಯಕರು ಒಗಟ್ಟಿನ ಮಂತ್ರ ಜಪಿಸುತ್ತಿದ್ದು, ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್‍ಗೆ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್, ಬಾಬೂರಾವ್ ಚಿಂಚನಸೂರ್ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಸಾಥ್ ನೀಡಿದ್ದಾರೆ.

    ಕ್ಷೇತ್ರದಲ್ಲಿ ಹಾಲಿ ಶಾಸಕರಾದ ದತ್ತಾತ್ರೇಯ ಪಾಟೀಲ್, ಬಸವರಾಜ್ ಮತ್ತಿಮೂಡ ಮತ್ತು ರಾಜಕುಮಾರ್ ತೆಲ್ಕೂರ ಸಹ ಕ್ಷೇತ್ರದ ಗಲ್ಲಿಗಲ್ಲಿಗಳಲ್ಲಿ ಹೋಗಿ ಬಿಜೆಪಿ ಪರ ಮತ ಯಾಚಿಸುತ್ತಿದ್ದಾರೆ. ಈ ಮೂಲಕ ಬಿಜೆಪಿ ಒಗ್ಗಟ್ಟಾಗಿ ಖರ್ಗೆ ವಿರುದ್ಧ ತೊಡೆ ತಟ್ಟಿದ್ದು, ಇದು ಕೈ ನಾಯಕರಲ್ಲಿ ಆತಂಕ ಸೃಷ್ಟಿಸಿದೆ. ಕೆಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಕೈನತ್ತ ಮುಖ ಮಾಡಿದ್ರೂ ಕೂಡ ಅದಕ್ಕೆ ಡಾ.ಉಮೇಶ್ ಜಾಧವ್ ಮಾತ್ರ ತಲೆ ಕಡಿಸಿಕೊಂಡಿಲ್ಲ ಎಂಬುದಾಗಿ ಮೂಲಗಳು ತಿಳಿಸಿವೆ.

    ಇತ್ತ ಜಿಲ್ಲೆಯಲ್ಲಿ ಲಿಂಗಾಯತ-ಲಂಬಾಣಿ ಮತಗಳ ಜೊತೆಗೆ ಅಹಿಂದ ವರ್ಗದ ಮತ ಸೆಳೆಯಲು ಬಿಜೆಪಿ ಮುಂದಾಗಿದ್ದು, ಜಿಲ್ಲೆಯಲ್ಲಿ ಬಹುಸಂಖ್ಯಾತರಾದ ಕೋಲಿ ಮತ ಸೆಳೆಯಲು ಬಾಬೂರಾವ್ ಚಿಂಚನಸೂರ್ ಮುಂದಾಗಿದ್ದಾರೆ. ಜಿಲ್ಲೆಯ ಪ್ರಮುಖ ಸಮಾಜ ಮುಖಂಡರ ಜೊತೆ ಸಭೆ ನಡೆಸಿ ಬಿಜೆಪಿ ಜಾಧವ್ ಅವರಿಗೆ ಬೆಂಬಲಿಸಿ ಎಂದು ಕರೆ ನೀಡಿದ್ದಾರೆ. ಅಹಿಂದ ಮತಗಳನ್ನೆ ನಂಬಿರುವ ಖರ್ಗೆಗೆ ಬಿಜೆಪಿಯ ಈ ಮಾಸ್ಟರ್ ಪ್ಲಾನ್ ಇದೀಗ ನುಂಗಲಾಗದ ಬಿಸಿ ತುಪ್ಪವಾಗಿದೆ ಎನ್ನಲಾಗುತ್ತಿದೆ.

    ಬಿಜೆಪಿಯ ಈ ತಂತ್ರಕ್ಕೆ ಪ್ರತಿತಂತ್ರ ರಚಿಸಬೇಕಾದ ಖರ್ಗೆ ಹಾಗೂ ಜೂನಿಯರ್ ಖರ್ಗೆ ರಾಹುಲ್ ಭೇಟಿಯ ನಂತರ ಜಿಲ್ಲೆಗೆ ವಾಪಸ್ ಬಂದಿಲ್ಲ. ಸದ್ಯ ಇಂದಿನಿಂದ ಪ್ರಚಾರ ಕಾರ್ಯಕ್ಕೆ ಖರ್ಗೆ ಧುಮುಕಲಿದ್ದು, ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸುವರೇ ಎಂಬುದು ಸದ್ಯದ ಕುತೂಹಲವಾಗಿದೆ. ಮೇಲ್ನೋಟಕ್ಕೆ ಕಾಂಗ್ರೆಸ್ ಭದ್ರಕೋಟೆಯಾದ ಕಲಬುರಗಿಯಲ್ಲಿ, ಇದೇ ಮೊದಲ ಬಾರಿಗೆ ಬಿಜೆಪಿ ಇಂತಹ ಟಫ್ ಫೈಟ್ ನೀಡುತ್ತಾ ಇರುವುದು ಕೈ ನಾಯಕರ ನಿದ್ದೆಗೆಡಿಸಿರುವುದು ಸತ್ಯ.

  • ಕರಾವಳಿ ಕೇಸರಿ ಭದ್ರಕೋಟೆಯಲ್ಲಿ ಬಿರುಕು- ಸುಲಭವಾಗಿಲ್ಲ ನಳಿನ್, ಶೋಭಾ ಗೆಲುವು!

    ಕರಾವಳಿ ಕೇಸರಿ ಭದ್ರಕೋಟೆಯಲ್ಲಿ ಬಿರುಕು- ಸುಲಭವಾಗಿಲ್ಲ ನಳಿನ್, ಶೋಭಾ ಗೆಲುವು!

    ಮಂಗಳೂರು: ರಾಜ್ಯದ ಕರಾವಳಿ ಭಾಗ ಬಿಜೆಪಿಯ ಭದ್ರಕೋಟೆ. ಆದರೆ ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೇಸರಿ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿದೆ. 2 ಕ್ಷೇತ್ರಗಳಲ್ಲಿ ಹಾಲಿ ಸಂಸದರೇ ಕಣಕ್ಕಿಳಿದ ಪರಿಣಾಮ ಅನಿವಾರ್ಯವಾಗಿ ಮೋದಿ ನೋಡಿ ವೋಟು ಕೋಡಿ ಅನ್ನೋ ಪ್ರಚಾರ ನಡೆಯುತ್ತಿದೆ. ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲೂ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಧ್ವನಿ ಕೇಳಿ ಬರುತ್ತಿದೆ.


    ಹೌದು. ರಾಜ್ಯದ ಮಟ್ಟಿಗೆ ಕರಾವಳಿ ಪ್ರದೇಶ ಹೆಚ್ಚು ಕಡಿಮೆ ಕೇಸರಿ ಫೇವರ್ ಬೆಲ್ಟ್. ಇಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವಿನ ಕುದುರೆಗಳು. ಹೀಗಾಗಿ ಬಿಜೆಪಿ ಈ ಬಾರಿಯೂ ಅದೇ ರೀತಿಯ ಫಲಿತಾಂಶ ದಕ್ಕಿಸಿಕೊಳ್ಳುವ ಭರವಸೆಯಲ್ಲಿದೆ. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸದ್ಯದ ಸ್ಥಿತಿಗತಿ ನೋಡಿದರೆ ಬಿಜೆಪಿಗೆ ವರವಾಗುವ ಲಕ್ಷಣ ಕಾಣುತ್ತಿಲ್ಲ. ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಉಡುಪಿ- ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.

    ಮಿಥುನ್ ರೈಗೆ ವರವಾಗುತ್ತಾ?
    ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಹಾಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಸಿಡಿದೆದ್ದಿದ್ದಾರೆ. ಅಲ್ಲದೆ ಸಂಘ ಪರಿವಾರದ ಹಲವು ನಾಯಕರು ನಳಿನ್ ಗೆ ಈ ಬಾರಿ ಟಿಕೆಟ್ ನೀಡಬಾರದೆಂದು ಹೇಳಿದ್ದರು. ಆದರೂ ಟಿಕೆಟ್ ಗಿಟ್ಟಿಸಿಕೊಂಡಿರುವ ನಳಿನ್ ಕುಮಾರ್ ಕಟೀಲ್ ಗೆಲುವಿಗಾಗಿ ತಿಣುಕಾಡಬೇಕಾದ ಪರಿಸ್ಥಿತಿ ಎದುರಾಗಿದೆ. ವಿಶೇಷವಾಗಿ ಸಂಸದರ ಅಸಮರ್ಥನೆ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ನಡೆದಿದೆ. ಹೀಗಾಗಿ ಕಾಂಗ್ರೆಸ್‍ನಿಂದ ಕಣಕ್ಕಿಳಿದಿರೋ ಮಿಥುನ್ ರೈಗೆ ಕೊಂಚ ವರವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕರಾವಳಿ ಭಾಗದಲ್ಲಿ ಕೇಳಿಬರುತ್ತಿದೆ.

    ಮೋದಿಗಾಗಿ ವೋಟು ಕೊಡಿ!
    ಈ ಅಸಮಾಧಾನದ ಬೆಂಕಿ ಕಿಡಿಯನ್ನು ಆರಿಸಲು ಮೋದಿ ಮೊದಿಯೆಂಬ ಕೂಗು ಕೇಳಿ ಬರುತ್ತಿದೆ. ವ್ಯಕ್ತಿಗಿಂತ ದೇಶ ಮೊದಲು ಎನ್ನುತ್ತಲೇ ಪಕ್ಷ ಕಟ್ಟಿದ್ದ ಬಿಜೆಪಿ ಈಗ ಮೋದಿಯ ಹೆಸರನ್ನೇ ಜಪ ಮಾಡತೊಡಗಿದೆ. ಎಲ್ಲಿ ಅಭ್ಯರ್ಥಿ ದುರ್ಬಲವಾಗಿದ್ದಾರೆಯೋ ಅಲ್ಲೆಲ್ಲಾ ಈ ಜಪವೇ ಮಂತ್ರವಾಗಿಬಿಟ್ಟಿದೆ.

    ಇತ್ತ ಉಡುಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ಸ್ವಲ್ಪ ಜೋರಾಗಿಯೇ ಇದೆ. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿ ಹೊಂದಿರೋ ಕ್ಷೇತ್ರದಲ್ಲಿ ಶೋಭಾಗೆ ಟಿಕೆಟ್ ನೀಡದಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆದಿತ್ತು. ಆದರೆ ಸದ್ಯ ಅದು ಸೈಲೆಂಟ್ ಆಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಕರೆದುಕೊಂಡು ಬಂದು ನಾಮಪತ್ರ ಸಲ್ಲಿಸಿರುವ ಶೋಭಾಗೆ ಈ ಬಾರಿ ಜಯ ಸುಲಭ ಆಗಿಲ್ಲ ಅನ್ನೋದು ಮನದಟ್ಟಾಗಿದೆ. ದೋಸ್ತಿ ಅಭ್ಯರ್ಥಿಯಾಗಿರೋ ಪ್ರಮೋದ್ ಮಧ್ವರಾಜ್ ಮೊಗವೀರ ಸಮುದಾಯದ ಮತಗಳನ್ನ ಸುಲಭವಾಗಿ ಸೆಳೆಯೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಉತ್ತರ ಕನ್ನಡದಲ್ಲೂ ಬಿರುಕು..!
    ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇಲ್ನೋಟಕ್ಕೆ ಬಿಜೆಪಿಗೆ ಉತ್ತಮ ಸ್ಥಿತಿ ಇರುವಂತೆ ಕಾಣುತ್ತಿದ್ದರೂ ಒಳಗೊಳಗೆ ಬೇಗುದಿ ಇದೆ. 6ನೇ ಬಾರಿ ಮರು ಆಯ್ಕೆ ಬಯಸಿ ಸ್ಪರ್ಧೆಗೆ ನಿಂತಿರೋ ಹೆಗ್ಡೆಗೆ ಕೆಲವು ಸ್ವಪಕ್ಷೀಯರದ್ದೇ ಭೀತಿ ಕಾಡುತ್ತಿದೆ. ಆದರೆ ಜೆಡಿಎಸ್ ನಿಂದ ಸ್ಪರ್ಧಿಸಿರೋ ಆನಂದ್ ಅಸ್ನೋಟಿಕರ್ ಬಗ್ಗೆ ಕ್ಷೇತ್ರದಲ್ಲಿ ಅಷ್ಟಾಗಿ ಪರಿಚಯವಿಲ್ಲ. ಹೀಗಾಗಿ ಇದು ಅನಂತ್ ಕುಮಾರ್ ಗೆ ಪ್ಲಸ್ ಪಾಯಿಂಟ್ ಆಗಿದೆ. ಒಟ್ಟಿನಲ್ಲಿ ಕರಾವಳಿ ಪ್ರದೇಶದಲ್ಲಿ ಈ ಬಾರಿ ಬಿಜೆಪಿಗೆ ಗೆಲುವು ಮಾತ್ರ ಸುಲಭವಾಗಿಲ್ಲ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.