Tag: loksabha elections 2019

  • ಬಾಲಕೋಟ್‍ನಲ್ಲಿ ಏರ್ ಸ್ಟ್ರೈಕ್ ಮಾಡಿದ್ದಕ್ಕೆ ಜೆಡಿಎಸ್, ಕಾಂಗ್ರೆಸ್‍ಗೆ ನೋವಾಗಿದೆ: ಮೋದಿ

    ಬಾಲಕೋಟ್‍ನಲ್ಲಿ ಏರ್ ಸ್ಟ್ರೈಕ್ ಮಾಡಿದ್ದಕ್ಕೆ ಜೆಡಿಎಸ್, ಕಾಂಗ್ರೆಸ್‍ಗೆ ನೋವಾಗಿದೆ: ಮೋದಿ

    – ಕರ್ನಾಟಕ ಸರ್ಕಾರದ ರಿಮೋಟ್ 12 ಜನ್ರ ಕೈಯಲ್ಲಿದೆ
    – ಹಗರಣ ಮಾಡಿದವರ ವಿರುದ್ಧ ಮತ ಹಾಕಿ ಶಿಕ್ಷೆ ನೀಡಿ

    ಚಿತ್ರದುರ್ಗ: ಬಾಲಕೋಟ್ ಮೇಲಿನ ವಾಯು ದಾಳಿಯಿಂದ ಪಾಕಿಸ್ತಾನಕ್ಕೆ ನೋವು ಆಗಿದೆಯೋ ಗೊತ್ತಿಲ್ಲ. ಇಲ್ಲಿಯ ಜೆಡಿಎಸ್ ಮತ್ತು ಕಾಂಗ್ರೆಸ್ ತುಂಬಾನೇ ನೋವಾಗಿದೆ. ಇಲ್ಲಿಯ ಮುಖ್ಯಮಂತ್ರಿ ದೇಶದ ಪರಾಕ್ರಮದ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತಾರೆ. ತಮ್ಮ ಮತಗಳ ಎಲ್ಲಿ ಕಳೆದು ಹೋಗುತ್ತೆ ಎಂಬ ಭಯದಿಂದ ಭಾರತವನ್ನೇ ವಿರೋಧ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ದೇಶದೆಲ್ಲೆಡೆ ಭಾರತ್ ಮಾತಾ ಕೀ ಜೈಕಾರ ನಿಮ್ಮಿಂದ ಕೇಳುತ್ತಿದೆ. ಐದು ವರ್ಷಗಳ ಹಿಂದೆ ನೀವು ನೀಡಿದ್ದ ಅಧಿಕಾರದಿಂದ ದೇಶದೆಲ್ಲೆಡೆ ಹಿಂದೂಸ್ತಾನದ ಘೋಷಣೆಗಳು ಕೇಳುತ್ತಿವೆ. ಈ ಮೊದಲು ನೆರೆಯ ವೈರಿ ಪಾಕಿಸ್ತಾನ ನಮಗೆ ಬೆದರಿಕೆ ಹಾಕುತ್ತಿದ್ದವು. ಅಂದಿನ ಸರ್ಕಾರಗಳು ಯಾವುದೇ ಕ್ರಮಕೈಗೊಳ್ಳುತ್ತಿರಲಿಲ್ಲ. ಇಂದು ಧಮ್ಕಿ ಹಾಕುತ್ತಿದ್ದವರ ಧ್ವನಿ ನಮ್ಮ ದೇಶದಲ್ಲಿ ಕೇಳದಂತೆ ಮಾಡಿದ್ದೇವೆ ಎಂದರು.

    ಇಡೀ ಜಗತ್ತು ನಮ್ಮ ಸೇನೆಯನ್ನು ಹೊಗಳಿದ್ರೆ ಇಲ್ಲಿಯ ಕಾಂಗ್ರೆಸ್ ಮತ್ತು ಜೆಡಿಎಸ್ ಸೇನೆ ನಡೆಸಿದ ಏರ್ ಸ್ಟ್ರೈಕ್ ವಿರೋಧ ಮಾಡುತ್ತಿವೆ. ಇಡೀ ವಿಶ್ವವೇ ಒಪ್ಪಿಕೊಂಡರೂ ಇವರು ಮಾತ್ರ ನಂಬುತ್ತಿಲ್ಲ. ಕೇವಲ ಒಬ್ಬ ಸಂಸದನನ್ನು ಆಯ್ಕೆ ಮಾಡದೇ ಒಂದು ಸದೃಢ ಸರ್ಕಾರಕ್ಕೆ ನೀವು ಮತ ನೀಡಬೇಕಿದೆ. ದೇಶದ ರಕ್ಷಣೆಗಾಗಿ ಬಲಿಷ್ಠ ನಿರ್ಣಯ ತೆಗೆದುಕೊಳ್ಳುವ ಸರ್ಕಾರಕ್ಕೆ ನೀಡಬೇಕಿದೆ ಎಂದು ಮನವಿ ಮಾಡಿಕೊಂಡರು.

    ಕರ್ನಾಟಕ ಸರ್ಕಾರದ ರಿಮೋಟ್ ದೆಹಲಿಯ 12 ಜನರ ಕೈಯಲ್ಲಿದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ವಿಧಾನಸಭಾ ಚುನಾವಣೆಯಲ್ಲಿ ಪ್ರಯತ್ನ ಮಾಡಿದರು. ಇಲ್ಲಿಯ ನಾಯಕರಿಗೆ ದೇಶದ ಚಿಂತೆ ಇಲ್ಲ ಮತ್ತು ಸಂವಿಧಾನದ ಬಗ್ಗೆ ಗೌರವ ಸಹ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಒನಕೆ ಒಬ್ಬವ್ವ ಮತ್ತು ವೀರ ಮದಕರಿ ನಾಯಕ ಅವರು ವಿರೋಧಿಗಳನ್ನು ಹೊಡೆದುರಳಿಸಿದ್ದರು. ಇಂದು ನೀವೆಲ್ಲರೂ ಈ ಚೌಕಿದಾರನೊಂದಿಗೆ ನಿಲ್ಲಬೇಕು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಮಂತ್ರವಾಗಿದೆ. ಇದೇ ಮಂತ್ರದಂತೆ ನಾವು ಕೆಲಸ ಮಾಡುತ್ತಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದ ಎಲ್ಲ ರೈತರಿಗೆ ವಿಸ್ತರಿಸುತ್ತೇವೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗುತ್ತಾ ಬಂದರೂ ಇದೂವರೆಗೂ ಯಾವ ರೈತರ ಸಾಲಮನ್ನಾ ಮಾಡಿಲ್ಲ. ಬದಲಾಗಿ ರೈತರ ಮನೆಗಳಿಗೆ ಬ್ಯಾಂಕ್ ಗಳಿಂದ ನೋಟಿಸ್ ಬರುತ್ತಿದೆ ಎಂದು ದೂರಿದರು.

    ದಾವಣಗೆರೆಯನ್ನು ಸ್ಮಾರ್ಟ್ ಸಿಟಿ ಮಾಡಲು, ಉದ್ಯೋಗ ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ ನಾಲ್ಕು ತಲೆಮಾರಿನಿಂದ ತನ್ನ ಆಡಳಿತಾವಧಿಯಲ್ಲಿ ದೇಶದ ಜನತೆಗೆ ಮೋಸ ಮಾಡಿಕೊಂಡು ಬರುತ್ತಿದೆ. ದೆಹಲಿಯ ಸಿಖ್ ಧಂಗೆ, ಕಾಮನ್‍ವೆಲ್ತ್, 2ಜಿ, ನ್ಯಾಷನಲ್ ಹೆರಾಲ್ಡ್, ಹೆಲಿಕಾಪ್ಟರ್ ಹಗರಣ ಮಾಡಿದವರಿಗೆ ಕೆಲವೇ ದಿನಗಳಲ್ಲಿ ಶಿಕ್ಷೆ ಸಿಗಲಿದೆ. 20ನೇ ಶತಮಾನದ ಶಿಕ್ಷೆಗೆ 21ನೇ ಶತಮಾನದ ಯುವ ಜನತೆ ತಮ್ಮ ವೋಟ್ ಮೂಲಕ ಶಿಕ್ಷೆ ನೀಡಲಿದ್ದಾರೆ. ಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಜನತೆ ದೇಶವನ್ನು ಭದ್ರ ಮಾಡಲು, ಹುತಾತ್ಮರಾದ ಯೋಧರು, ಬಡವರಿಗೆ ಸಮರ್ಪಣೆ ಮಾಡಬೇಕು. ಇವಿಎಂನಲ್ಲಿ ಕಮಲಕ್ಕೆ ನೀವು ಹಾಕುವ ಮತ ನನ್ನ ಖಾತೆಗೆ ಬಂದು ಬೀಳಲಿದೆ. ನಿಮ್ಮ ಹೆಚ್ಚು ಮತಗಳು ನನ್ನನ್ನು ಮತ್ತಷ್ಟು ಬಲಿಷ್ಠ ಮಾಡಲಿವೆ ಎಂದು ಮೋದಿ ಹೇಳಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

    ಆರಂಭದಲ್ಲಿ ಕರ್ನಾಟಕದ ಜನತೆಗೆ ಯುಗಾದಿ ಹಬ್ಬದ ಶುಭಾಶಯವನ್ನ ಕನ್ನಡದಲ್ಲಿಯೇ ತಿಳಿಸಿ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಇದೇ ವೇಳೆ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನಮನ ಸಲ್ಲಿಸಿದರು.

  • ಪ್ರೀತಂ ಗೌಡ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಸತ್ಯಕ್ಕೆ ದೂರವಾದದ್ದು- ಎ. ಮಂಜು

    ಪ್ರೀತಂ ಗೌಡ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಸತ್ಯಕ್ಕೆ ದೂರವಾದದ್ದು- ಎ. ಮಂಜು

    ಹಾಸನ: ಶಾಸಕ ಪ್ರೀತಂ ಗೌಡ ಅವರು ಹಾಸನ ಬಿಜೆಪಿ ಅಭ್ಯರ್ಥಿ ಎ ಮಂಜು ಅವರನ್ನು ಸೋಲಿಸಲು ಪ್ಲಾನ್ ಮಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಇದಕ್ಕೆ ಎ ಮಂಜು ಅವರು ಪ್ರತಿಕ್ರಿಯಿಸಿ ಮನವಿ ಮಾಡಿಕೊಂಡಿದ್ದಾರೆ.

    ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋದಲ್ಲಿ ಇರುವುದು ಸತ್ಯಾಂಶವಲ್ಲ. ಶಾಸಕರಾದ ಬೆಳ್ಳಿಪ್ರಕಾಶ್, ಪ್ರೀತಂಗೌಡ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಇದು ಜೆಡಿಎಸ್ ನವರ ಪಿತೂರಿಯಾಗಿದೆ ಎಂದು ಹೇಳಿದ್ದಾರೆ.

    ಬಿಜೆಪಿಯಿಂದ ಶಾಸಕನಾಗಿದ್ದಾಗ ಶಿವಪ್ಪನವರ ಜೊತೆ ಇದ್ದೆ. ಈಗ ಬಿಜೆಪಿಯಲ್ಲಿ ಇದ್ದೇನೆ. ಇಲ್ಲಿಯೇ ಇರುತ್ತೇನೆ. ಕಾರ್ಯಕರ್ತರು ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡರು.

    ಪ್ರೀತಂ ಸ್ಪಷ್ಟನೆ:
    ಆಗ ಎ. ಮಂಜು ಬಿಜೆಪಿಗೆ ಬಂದಿರಲಿಲ್ಲ ಇನ್ನೂ ಚರ್ಚೆಯ ಹಂತದಲ್ಲಿತ್ತು. ಆಗ ಮಾತನಾಡಿದ ಆಡಿಯೋವನ್ನು ಎಡಿಟ್ ಮಾಡಲಾಗಿದೆ. ಪ್ರೀತಂಗೌಡನನ್ನು ವಿಕ್ ಮಾಡಿದ್ರೆ, ಬಿಜೆಪಿ ವಿಕ್ ಆಗುತ್ತೆ ಅನ್ನೋ ಮನೋಭಾವನೆ ಕೆಲವರದ್ದು ಇರಬೇಕು ಎಂದು ಆಡಿಯೋದಲ್ಲಿನ ವಿವರಣೆಗೆ ಗೊಂದಲದ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್

    ಇದು ಎಡಿಟೆಟ್ ಆಡಿಯೋ ಆಗಿದೆ. ನನ್ನ ಕಟ್ಟಿಹಾಕಲು ಇದು ವಿರೋಧಿಗಳ ಪಿತೂರಿ. ನನ್ನ ಮತ್ತು ಎ.ಮಂಜು ನಡುವೆ ವೈಮನಸ್ಸು ಹುಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಎ. ಮಂಜುಗಿಂತ ಪ್ರೀತಂ ಗೌಡ ಜಾಸ್ತಿ ಓಡಾಡುತ್ತಿದ್ದಾರೆ. ಇವರ ಮಧ್ಯ ಏನಾದ್ರು ಕಂದಕ ಮೂಡಿಸಲು ಈ ಪ್ರಯತ್ನ ಮಾಡಿದ್ದಾರೆ. ನನ್ನ ವಿರೋಧಿಗಳು ಈ ವಿಡಿಯೋವನ್ನು ಸೃಷ್ಟಿಸಿದ್ದಾರೆ ಎಂದು ತಿಳಿಸಿದ್ದಾರೆ.

    ದಿನಕ್ಕೆ ಸಾವಿರ ಮಂದಿ ಜೊತೆ ಮಾತನಾಡುತ್ತೇನೆ. ಫೇಕ್ ಆಡಿಯೋದಿಂದಾಗಿ ಎರಡು ಲಕ್ಷ ಮತಗಳು ಹೆಚ್ಚಾಗಿ ಬಿಜೆಪಿಗೆ ಬೀಳುತ್ತವೆ. ಯಾರು ವಿಚಲಿತರಾಗಿದ್ದಾರೆ ಅವರು ಆಡಿಯೋ ಹಿಂದೆ ಹೋಗ್ತಾರೆ. ದೇಶ ಕಟ್ಟುವವರು ನಾವು ಮತದಾರರ ಬಳಿ ಹೋಗುತ್ತೇವೆ ಎಂದು ಹೇಳಿದ್ದಾರೆ.

    ನಾನು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ನಾನೇ ಅಭ್ಯರ್ಥಿ ಎಂಬಂತೆ ಕೆಲಸ ಮಾಡುತ್ತಿದ್ದೇನೆ. ನನ್ನ ವೈಯಕ್ತಿಕ ಭದ್ರತೆಯನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇನೆ. ಫೇಕ್ ಆಡಿಯೋ, ಎಡಿಟ್ ಆಡಿಯೋ ಮಾಡಿ ಬಿಟ್ರೆ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಅಂದಿದ್ದಾರೆ.

  • ವೈರಲ್ ಆಡಿಯೋ ಬಗ್ಗೆ ಶಾಸಕ ಪ್ರೀತಂ ಗೌಡ ಸ್ಪಷ್ಟನೆ

    ವೈರಲ್ ಆಡಿಯೋ ಬಗ್ಗೆ ಶಾಸಕ ಪ್ರೀತಂ ಗೌಡ ಸ್ಪಷ್ಟನೆ

    ಹಾಸನ: ಬಿಜೆಪಿ ಅಭ್ಯರ್ಥಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್ ಹಾಕಿದ್ದಾರೆ ಎಂದು ಹೇಳಲಾದ ವೈರಲ್ ಆಡಿಯೋ ಬಗ್ಗೆ ಸ್ವತಃ ಶಾಸಕರೇ ಇದೀಗ ಪ್ರತಿಕ್ರಿಯಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗ ಎ. ಮಂಜು ಬಿಜೆಪಿಗೆ ಬಂದಿರಲಿಲ್ಲ ಇನ್ನೂ ಚರ್ಚೆಯ ಹಂತದಲ್ಲಿತ್ತು. ಆಗ ಮಾತನಾಡಿದ ಆಡಿಯೋವನ್ನು ಎಡಿಟ್ ಮಾಡಲಾಗಿದೆ. ಪ್ರೀತಂಗೌಡನನ್ನು ವಿಕ್ ಮಾಡಿದ್ರೆ, ಬಿಜೆಪಿ ವಿಕ್ ಆಗುತ್ತೆ ಅನ್ನೋ ಮನೋಭಾವನೆ ಕೆಲವರದ್ದು ಇರಬೇಕು ಎಂದು ಆಡಿಯೋದಲ್ಲಿನ ವಿವರಣೆಗೆ ಗೊಂದಲದ ಹೇಳಿಕೆ ನೀಡಿದ್ದಾರೆ.

    ಒಟ್ಟಿನಲ್ಲಿ ಎ.ಮಂಜು ಪಕ್ಷ ಸೇರ್ಪಡೆಗೂ ಮುಂಚೆ ಮಾತನಾಡಿದ ಆಡಿಯೋ ಇರಬಹುದು. ಆಗ ಕಾಂಗ್ರೆಸ್ ನಲ್ಲಿ ಇದ್ದವರ ಕುರಿತು ನಾನು ಹೊಗಳಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

    ಇದು ಎಡಿಟೆಟ್ ಆಡಿಯೋ ಆಗಿದೆ. ನನ್ನ ಕಟ್ಟಿಹಾಕಲು ಇದು ವಿರೋಧಿಗಳ ಪಿತೂರಿ. ನನ್ನ ಮತ್ತು ಎ.ಮಂಜು ನಡುವೆ ವೈಮನಸ್ಸು ಹುಟ್ಟುಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಎ. ಮಂಜುಗಿಂತ ಪ್ರೀತಂ ಗೌಡ ಜಾಸ್ತಿ ಓಡಾಡುತ್ತಿದ್ದಾರೆ. ಇವರ ಮಧ್ಯ ಏನಾದ್ರು ಕಂದಕ ಮೂಡಿಸಲು ಈ ಪ್ರಯತ್ನ ಮಾಡಿದ್ದಾರೆ. ಒಟ್ಟಿನಲ್ಲಿ ಇದು ವೈರಲ್ ಆಗೋರದಿಕ್ಕೆ ವಿರೋಧ ಪಕ್ಷದವರು ಮಾಡಿರುವ ಪಿತೂರಿ ಎಂದು ಆರೋಪಿಸಿದರು. ಇದನ್ನೂ ಓದಿ: ಹಾಸನದಲ್ಲಿ ಎ. ಮಂಜು ಸೋಲಿಸಲು ಪ್ರೀತಂ ಗೌಡ ಸ್ಕೆಚ್!- ಆಡಿಯೋ ವೈರಲ್

    ಹೊಳೇನರಸೀಪುರ ಮತ್ತು ಚನ್ನರಾಯಪಟ್ಟಣದಂತಹ ಕ್ಷೇತ್ರಗಳನ್ನು ನಾನು ಉಸ್ತುವಾರಿ ವಹಿಸಿಕೊಂಡಿದ್ದೇನೆ. ಚುನಾವಣಾ ಫಲಿತಾಂಶ ಬಂದ ದಿನ ನಾನೂ ಕೂಡ ಮಾತನಾಡುತ್ತೇನೆ. ಮಂಡ್ಯದಲ್ಲಿ ಕೂಡ ನಾಲ್ಕು ಮಂದಿ ಸುಮಲತಾರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಎ. ಮಂಜಣ್ಣ ನನ್ನ ಆತ್ಮೀಯ ಸ್ನೇಹಿತರು. ನನ್ನ ಮನೆಗೆ ಕಲ್ಲು ಹೊಡೆದಾಗಲೂ ಮಂಜಣ್ಣ ಬಂದಿದ್ದರು ಎಂದು ಹೇಳಿದರು.

    ದಿನಕ್ಕೆ ಸಾವಿರ ಮಂದಿ ಜೊತೆ ಮಾತನಾಡುತ್ತೇನೆ. ಫೇಕ್ ಆಡಿಯೋದಿಂದಾಗಿ ಎರಡು ಲಕ್ಷ ಮತಗಳು ಹೆಚ್ಚಾಗಿ ಬಿಜೆಪಿಗೆ ಬೀಳುತ್ತವೆ. ಯಾರು ವಿಚಲಿತರಾಗಿದ್ದಾರೆ ಅವರು ಆಡಿಯೋ ಹಿಂದೆ ಹೋಗ್ತಾರೆ. ದೇಶ ಕಟ್ಟುವವರು ನಾವು ಮತದಾರರ ಬಳಿ ಹೋಗುತ್ತೇವೆ ಎಂದು ಹೇಳಿದ್ದಾರೆ.

    ನಾನು ಭಾರತೀಯ ಜನತಾ ಪಾರ್ಟಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ನಾನೇ ಅಭ್ಯರ್ಥಿ ಎಂಬಂತೆ ಕೆಲಸ ಮಾಡುತ್ತಿದ್ದೇನೆ. ನನ್ನ ವೈಯಕ್ತಿಕ ಭದ್ರತೆಯನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇನೆ. ಫೇಕ್ ಆಡಿಯೋ, ಎಡಿಟ್ ಆಡಿಯೋ ಮಾಡಿ ಬಿಟ್ರೆ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಅಂದಿದ್ದಾರೆ.

  • ಮಂಡ್ಯದಲ್ಲಿ ಹೊಡಿ ಬಡಿ ಪಾಲಿಟಿಕ್ಸ್- ಜೆಡಿಎಸ್‍ನ ಮೂವರು ಆಸ್ಪತ್ರೆ ಪಾಲು!

    ಮಂಡ್ಯದಲ್ಲಿ ಹೊಡಿ ಬಡಿ ಪಾಲಿಟಿಕ್ಸ್- ಜೆಡಿಎಸ್‍ನ ಮೂವರು ಆಸ್ಪತ್ರೆ ಪಾಲು!

    ಮಂಡ್ಯ: ಸಾವಿನ ರಾಜಕೀಯ, ಮಾತಿನ ರಾಜಕೀಯ ಆಯ್ತು ಇದೀಗ ಮಂಡ್ಯದಲ್ಲಿ ದ್ವೇಷದ ರಾಜಕೀಯ ಆರಂಭವಾಗಿದೆ.

    ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದೆ. ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಹೊಡಿ ಬಡಿ ಪಾಲಿಟಿಕ್ಸ್ ಗೆ ಜೆಡಿಎಸ್‍ನ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಜೆಡಿಎಸ್‍ನ ಕಾರ್ತಿಕ್, ಅನಿಲ್, ಪಾಪಣ್ಣ ಮೇಲೆ ಸುಮಲತಾ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಷಯ ತಿಳಿದು ಭಾನುವಾರ ರಾತ್ರಿ ಕೆಎಂ ದೊಡ್ಡಿ ಆಸ್ಪತ್ರೆಗೆ ನಿಖಿಲ್ ಭೇಟಿ ನೀಡಿದ್ದಾರೆ. ಈ ರೀತಿ ಗಲಾಟೆ ಮಾಡಿದ್ರೆ ನಾನು ಸುಮ್ಮನೆ ಕೂರಲ್ಲ ಎಂದು ನಿಖಿಲ್ ಗರಂ ಆಗಿದ್ದಾರೆ ಎನ್ನಲಾಗಿದೆ.

    ಇತ್ತ ನಂಗೇನೂ ಗೊತ್ತಿಲ್ಲ. ಆದರೆ ಜೆಡಿಎಸ್ ನವರ ರೌಡಿಸಂ ಮಿತಿಮೀರಿದೆ ಎಂದು ಸುಮಲತಾ ಪ್ರತ್ಯಾರೋಪ ಮಾಡಿದ್ದಾರೆ. ಗಲಾಟೆ ಬಳಿಕ ಗುರುದೇವರಹಳ್ಳಿಯಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

    ಈ ಬಗ್ಗೆ ಕೆಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಬಕಾರಿ ಇಲಾಖೆಯಿಂದ ಲಕ್ಷ ಲಕ್ಷ ಮೌಲ್ಯದ ಮದ್ಯ ವಶ

    ಅಬಕಾರಿ ಇಲಾಖೆಯಿಂದ ಲಕ್ಷ ಲಕ್ಷ ಮೌಲ್ಯದ ಮದ್ಯ ವಶ

    ರಾಯಚೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಅಬಕಾರಿ ಇಲಾಖೆ 37 ಮದ್ಯದಂಗಡಿಗಳ ಪರವಾನಿಗೆಯನ್ನ ಅಮಾನತು ಮಾಡಿ ಆದೇಶ ಹೊರಡಿಸಿದೆ.

    ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೆರೆಯಲಾದ 5 ಕಂಟ್ರೋಲ್ ರೂಂ.ಗಳಲ್ಲಿ ಒಟ್ಟು 177 ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆ ಅಬಕಾರಿ ಇಲಾಖೆ, ಅಕ್ರಮ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದೆ. ಚಿಲ್ಲರೆಗೆ ಮದ್ಯ ಕೊಡುವುದು, ಎಂಆರ್‍ಪಿ ಗಿಂತ ಹೆಚ್ಚು ಬೆಲೆ ಹಾಗೂ ಬಿಲ್ ಕೊಡದ 37 ಮದ್ಯದಂಗಡಿಗಳ ಪರವಾನಿಗೆಯನ್ನ ಅಮಾನತು ಮಾಡಲಾಗಿದೆ.

    ಇನ್ನೂ ಇದುವರೆಗೆ ಅಕ್ರಮ ಸಾಗಣೆ ಮಾಡುತ್ತಿದ್ದ 1600 ಲೀಟರ್ ಮದ್ಯ, 193 ಲೀಟರ್ ಬೀಯರ್, 769 ಲೀಟರ್ ಕಲಬೆರಿಕೆ ಸೇಂದಿ, 10 ಲೀಟರ್ ಕಳ್ಳಭಟ್ಟಿ ಹೆಂಡವನ್ನ ಜಪ್ತಿ ಮಾಡಲಾಗಿದೆ. ದಾಳಿ ವೇಳೆ ಒಟ್ಟು 22 ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ವಾಹನ ಸೇರಿದಂದ 18 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಬಕಾರಿ ಉಪ ಆಯುಕ್ತ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

  • ಕಲಬುರಗಿಯಲ್ಲೂ ಆರಂಭವಾಯ್ತು ಜಾತಿ ಅಸ್ತ್ರ!

    ಕಲಬುರಗಿಯಲ್ಲೂ ಆರಂಭವಾಯ್ತು ಜಾತಿ ಅಸ್ತ್ರ!

    ಕಲಬುರಗಿ: ಮಂಡ್ಯದಲ್ಲಿ ಗೌಡ್ತಿ ವರ್ಸಸ್ ನಾಯ್ಡು ಜಾತಿ ರಾಜಕೀಯದ ಕೆಸರೆರಚಾಟ ನಡೆಯುತ್ತಿದ್ದರೆ, ಇತ್ತ ಕಲಬುರಗಿಯಲ್ಲಿ ಕೂಡ ಜಾಧವ್ ಜಾತಿ ಯಾವುದು ಅನ್ನೋ ಚರ್ಚೆ ನಡೆದಿದೆ.

    ನಾಮಪತ್ರ ಪರಿಶೀಲನೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕಡೆಯವರು ಜಾಧವ್ ನಾಮಪತ್ರದ ಕಾಲಂ ನಂಬರ್ 7 ತುಂಬಿಲ್ಲ. ಅಲ್ಲದೆ ಅವರ ಜಾತಿ ಲಂಬಾಣಿನಾ ಅಥವಾ ಬಂಜಾರಾನಾ ಎಂದು ಕ್ಯಾತೆ ತೆಗೆದಿದ್ದಾರೆ.

    ಇದಕ್ಕೆ ಜಾಧವ್ ಕೂಡ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನವರು ಜಾತಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ನನ್ನನ್ನ ಸೋಲಿಸೋಕೆ ಏನೆಲ್ಲ ಕುತಂತ್ರ ಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಜಾತಿ ಎಳೆಯೋ ಮೂಲಕ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಸಿಲ್ಲಿ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತ ಖರ್ಗೆ ಕೂಡ ಜಾಧವ್‍ಗೆ ಟಾಂಗ್ ಕೊಟ್ಟಿದ್ದಾರೆ.

    ಒಂದೇ ಹೆಸರಿನ ಮೂವರು ಅಭ್ಯರ್ಥಿಗಳು:
    ಮತದಾರರಲ್ಲಿ ಗೊಂದಲ ಮೂಡಿಸಲು ಮಂಡ್ಯದಲ್ಲಿ ಮೂರು ಜನ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಇತ್ತ ಕಲಬುರಗಿ ಜಿಲ್ಲೆಯಲ್ಲೂ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಮತ ವಿಭಜಿಸಲು, ಜಾಧವ್ ಹೆಸರಿನ ಮೂವರು ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಕಲಬುರಗಿ ಲೋಕಸಭಾ ಕಣದಲ್ಲಿ ಶಂಕರ್ ಜಾಧವ್, ವಿಠಲ್ ಜಾಧವ್ ಹಾಗೂ ವಿಜಯ್ ಜಾಧವ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಡಾ.ಉಮೇಶ್ ಜಾಧವ್ ಮತಗಳು ಒಡೆಯಲು ವಿಪಕ್ಷಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  • ಮಂಡ್ಯದಲ್ಲಿ ಮತಬಿತ್ತನೆಗೆ 100 ಕೋಟಿ ರೂ.!

    ಮಂಡ್ಯದಲ್ಲಿ ಮತಬಿತ್ತನೆಗೆ 100 ಕೋಟಿ ರೂ.!

    ಮಂಡ್ಯ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಷ್ಟು ದಿನ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಮೈತ್ರಿ ಸರ್ಕಾರದ ಅಭ್ಯರ್ಥಿ ನಿಖಿಲ್ ನಾಮಪತ್ರದ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈಗ ಮಂಡ್ಯ ರಣಕಣದಲ್ಲಿ ಮತಬಿತ್ತನೆಗೆ ಬರೋಬ್ಬರಿ ನೂರು ಕೋಟಿ ಸಿದ್ಧವಾಗಿದೆ ಎಂದು ಸುಮಲತಾ ಆರೋಪಿಸಿದ್ದಾರೆ.

    ಈಗಾಗಲೇ ನೂರು ಕೋಟಿ ರೂಪಾಯಿ ಹಣ ಸಾಂಸ್ಕೃತಿಕ ನಗರಿ ತಲುಪಿದ್ದು, ಸಿಎಂ ಪುತ್ರ ನಿಖಿಲ್ ಗೆಲುವಿಗಾಗಿ ಮಂಡ್ಯದಲ್ಲಿ ನೂರು ಕೋಟಿ ಕಾಂಚಾಣ ಸದ್ದು ಮಾಡುತ್ತಿದೆ ಎಂದು ಚನಾವಣಾ ಆಯೋಗದ ಅಧಿಕಾರಿಗಳ ಬಳಿ ಸುಮಲತಾ ಅಂಬರೀಶ್ ಆತಂಕ ವ್ಯಕ್ತಪಡಿಸಿದ್ದಾರೆ.

    ನೂರು ಕೋಟಿ ಹಣ ನೂರು ಅಡ್ಡದಾರಿಗಳ ಮೂಲಕ ಸಾಂಸ್ಕೃತಿಕ ನಗರಿ ತಲುಪಿದೆ. ದ್ರಾಕ್ಷಿ ಹಣ್ಣಿನ ಬುಟ್ಟಿಗಳಲ್ಲಿ ಮೈಸೂರಿಗೆ ಕೋಟಿ ಕೋಟಿ ಹಣ ಸಾಗಾಟ ಮಾಡಲಾಗಿದೆ. `ರೇಷ್ಮೆ’ ಗೂಡಿನ ಗಾಡಿಗಳ ಮೂಲಕ ರಾಮನಗರದ ಗಡಿ ದಾಟಿದೆ. ತುಮಕೂರು ಭಾಗಕ್ಕೆ ‘ಎಳನೀರು’ ಲಾರಿಗಳಲ್ಲಿ ಹಣವನ್ನು ಸಾಗಾಟ ಮಾಡಲಾಗಿದೆ. ಕೊನೆಯದಾಗಿ ಮಂಡ್ಯದಲ್ಲಿ ಕಬ್ಬಿನ ಲಾರಿ ಮತ್ತು ಬೆಲ್ಲದ ಲಾರಿಯಲ್ಲಿ ಹಣ ತಲುಪಿದೆ ಎಂದು ಸುಮಲತಾ ಬೆಂಬಲಿಗರು ಆರೋಪಿಸಿದ್ದಾರೆ.

    ಮಂಡ್ಯದಲ್ಲಿ ಪ್ರಚಾರದ ಸಂದರ್ಭದಲ್ಲಿ ಜೆಡಿಎಸ್ ಮತ್ತು ಸುಮಲತಾ ಬೆಂಬಲಿಗರ ಮಧ್ಯೆ ನಡೆದ ಮಾತುಕತೆಗಳು ಇದಕ್ಕೆ ಪೂರಕವಾಗಿದೆ. ಅಂದರೆ ಜೆಡಿಎಸ್ ಕಾರ್ಯಕರ್ತರು ಈ ಬಾರಿ 100 ಕೋಟಿ ಆದರೂ ಸಿಎಂ ಕುಮಾರಸ್ವಾಮಿ ಬಿಡಲ್ಲ ಎಂದು ಹೇಳಿದ್ದರು. ಹೀಗಾಗಿ ದ್ರಾಕ್ಷಿ ಹಣ್ಣಿನ ಬುಟ್ಟಿ, ಎಳನೀರು ಮೂಲಕ ಹಣ ಸಾಗಾಟ ಮಾಡುತ್ತಿದ್ದಾರೆ ಎಂಬ ಸುದ್ದಿ ಮಂಡ್ಯ ವಲಯದಲ್ಲಿ ಹರಿದಾಡುತ್ತಿದೆ.

  • ಹಾಸನದಲ್ಲಿಂದು ಎಸ್‍ಎಂಕೆ ಪ್ರಚಾರ – ಗದ್ದುಗೆ ತಪ್ಪಿಸಿದ್ದ ಗೌಡರ ವಿರುದ್ಧ ಮೊಳಗುತ್ತಾ ರಣಕಹಳೆ?

    ಹಾಸನದಲ್ಲಿಂದು ಎಸ್‍ಎಂಕೆ ಪ್ರಚಾರ – ಗದ್ದುಗೆ ತಪ್ಪಿಸಿದ್ದ ಗೌಡರ ವಿರುದ್ಧ ಮೊಳಗುತ್ತಾ ರಣಕಹಳೆ?

    ಹಾಸನ: ಹೇಳಿ ಕೇಳಿ ಹಾಸನ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಅಡ್ಡ. ಒಕ್ಕಲಿಗರ ಪ್ರಶ್ನಾತೀತ ನಾಯಕರಲ್ಲಿ ಅವರು ಒಬ್ಬರು ಅನ್ನೋದು ಗೊತ್ತಿರುವ ಸಂಗತಿ. ಇದೀಗ ಗೌಡರ ಅಡ್ಡಾದಲ್ಲಿ ಮತ್ತೊಬ್ಬ ಒಕ್ಕಲಿಗರ ಪ್ರಬಲ ನಾಯಕ ಅಂತಲೇ ಗುರುತಿಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಇಂದು ಪ್ರಚಾರದ ಅಖಾಡಕ್ಕೆ ಇಳಿಯುತ್ತಿದ್ದಾರೆ.

    ಬಿಜೆಪಿ ಪರ ಪ್ರಚಾರ ನಡೆಸಲಿರೋ ಕೃಷ್ಣ ಎಂಟ್ರಿ ಜೆಡಿಎಸ್‍ನಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ ಕೃಷ್ಣ ಹಾಗೂ ದೇವೇಗೌಡರ ರಾಜಕೀಯ ಪೈಪೋಟಿಗೆ ಪ್ರಚಾರ ಕಣ ಸಾಕ್ಷಿಯಾಗಲಿದೆ.

    ಲೋಕಸಭಾ ಚುನಾವಣೆ ದಿನಾಂಕ ಪ್ರಕಟವಾದ ನಂತರ ಪ್ರಚಾರಕ್ಕೆ ಇದೇ ಮೊದಲ ಬಾರಿಗೆ ಎಸ್ ಎಂ ಕೆ ಹಾಸನಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಬೂವನಹಳ್ಳಿಯ ಹೆಲಿಪ್ಯಾಡ್ ಗೆ ಆಗಮಿಸಲಿರೋ ಕೃಷ್ಣ, ಜಿಲ್ಲೆಯ ಅರಸೀಕೆರೆಯ ಗಂಡಸಿ ಮತ್ತು ಬೇಲೂರು ತಾಲೂಕಿನ ಹಗರೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಇದನ್ನೂ ಓದಿ: ಕೈ ತೊರೆದಿದ್ದು ಯಾಕೆ? ರಾಜ್ಯಪಾಲರನ್ನಾಗಿ ನೇಮಿಸಿದ್ದು ಯಾಕೆ? – ಮಾಧ್ಯಮಗಳ ಜೊತೆ ಎಸ್‍ಎಂಕೆ ಮಾತು

    ಬಳಿಕ ರಾತ್ರಿ ಚಿಕ್ಕಮಗಳೂರು ತಾಲೂಕಿನ ಚೀಕನಹಳ್ಳಿಯಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ವಿಶೇಷ ಅಂದ್ರೆ ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ತಮಗೆ 2ನೇ ಬಾರಿ ಸಿಎಂ ಹುದ್ದೆ ತಪ್ಪಲು ದೇವೇಗೌಡರೇ ಕಾರಣ ಅಂತ ಕೃಷ್ಣ ವಾಗ್ದಾಳಿ ನಡೆಸಿದ್ದರು. ಇದಕ್ಕೆ ದೇವೇಗೌಡ ಕೂಡ ತಿರುಗೇಟು ಕೊಟ್ಟಿದ್ದರು. ಹೀಗಾಗಿ ಗೌಡರ ಮೊಮ್ಮಗ ಪ್ರಜ್ವಲ್ ರನ್ನು ಸೋಲಿಸುವ ಮೂಲಕ ತಮಗೆ ಸಿಎಂ ಸ್ಥಾನ ತಪ್ಪಿಸಿದ್ದ ಗೌಡರ ವಿರುದ್ಧ ಸೇಡು ತೀರಿಸಿಕೊಳ್ಳಲು ಕೃಷ್ಣ ಮುಂದಾಗಿದ್ದಾರೆ ಎನ್ನಲಾಗಿದೆ.

  • ಸಿ-ವೋಟರ್ ಸಮೀಕ್ಷೆ: ಬಿಜೆಪಿ ನೇತೃತ್ವದ ಎನ್‍ಡಿಎಗೆ ಕೊಂಚ ಕಹಿಸುದ್ದಿ

    ಸಿ-ವೋಟರ್ ಸಮೀಕ್ಷೆ: ಬಿಜೆಪಿ ನೇತೃತ್ವದ ಎನ್‍ಡಿಎಗೆ ಕೊಂಚ ಕಹಿಸುದ್ದಿ

    ನವದೆಹಲಿ: ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ದಿನ ಬಾಕಿ ಇರುವಂತೆ ಸಿ-ವೋಟರ್ ಜನಾಭಿಪ್ರಾಯ ಸಮೀಕ್ಷೆ ಪ್ರಕಟಗೊಂಡಿದೆ.

    ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಬಿಜೆಪಿ ನೇತೃತ್ವದ ಎನ್‍ಡಿಎಗೆ ಸಮೀಕ್ಷೆಯಲ್ಲಿ ಕೊಂಚ ಕಹಿ ಸುದ್ದಿ ಹೊರಬಿದ್ದಿದ್ದು, ಯಾವುದೇ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯುವುದಿಲ್ಲ ಎಂದು ಸರ್ವೆ ಭವಿಷ್ಯ ನುಡಿದಿದೆ.

    ವಿಶೇಷ ಅಂದ್ರೆ ಯುಪಿಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಲಿದೆ. ಆದ್ರೆ ಬಿಹಾರ ಹಾಗೂ ಬಂಗಾಳದಲ್ಲಿ ಕೇಸರಿ ಪಡೆ ಉತ್ತಮ ಸಾಧನೆ ಮಾಡಲಿದೆ ಅಂತ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಮಾರ್ಚ್ ಮೂರನೇ ವಾರದಲ್ಲಿ ನಡೆಸಲಾಗಿದ್ದ ಈ ಸಮೀಕ್ಷೆಯಲ್ಲಿ ಎನ್‍ಡಿಎ ಮೈತ್ರಿಕೂಟ ಹಿನ್ನಡೆ ಅನುಭವಿಸಿದ್ರೂ ಅಧಿಕಾರದ ಸನಿಹಕ್ಕೆ ಬಂದು ನಿಲ್ಲಲಿದೆಯೆಂದು ಸಮೀಕ್ಷೆ ಹೇಳಿದೆ. ಹಾಗಾದ್ರೆ ಸಿ-ವೋಟರ್ ಜನಾಭಿಪ್ರಾಯದಂತೆ ಯಾರ್ಯಾರಿಗೆ ಎಷ್ಟೆಷ್ಟು ಸ್ಥಾನ ಲಭಿಸಲಿದೆ ಎಂಬುದನ್ನು ನೋಡೋಣ..

    ದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ..?
    ಒಟ್ಟು ಸ್ಥಾನ : 543
    ಎನ್‍ಡಿಎ : 261
    ಯುಪಿಎ : 143
    ಎಂಜಿಬಿ+ಇತರೆ: 139

    ದಕ್ಷಿಣ ಭಾರತದಲ್ಲಿ ಯಾರಿಗೆ ಎಷ್ಟು ಸ್ಥಾನ
    ಒಟ್ಟು ಸ್ಥಾನ : 130
    ಎನ್‍ಡಿಎ : 23
    ಯುಪಿಎ : 62
    ಇತರೆ : 45

    ಉ.ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ?
    ಒಟ್ಟು ಸ್ಥಾನ : 80
    ಎನ್‍ಡಿಎ : 28
    ಯುಪಿಎ : 04
    ಮಹಾಘಟಬಂಧನ್ : 48

    ಮಹಾರಾಷ್ಟ್ರದಲ್ಲಿ ಯಾರಿಗೆ ಎಷ್ಟು ಸ್ಥಾನ?
    ಒಟ್ಟು ಸ್ಥಾನ : 48
    ಎನ್‍ಡಿಎ : 34
    ಯುಪಿಎ : 14
    ಇತರೆ : 00

    ಒಟ್ಟಾರೆ ಶೇಕಡಾವಾರು ಮತ ಹಂಚಿಕೆ
    ಎನ್‍ಡಿಎ : 42.7 %
    ಯುಪಿಎ : 30.3 %
    ಇತರೆ : 27 %

    ಪ್ರಧಾನಿ ಹುದ್ದೆಗೆ ಯಾರು ಸೂಕ್ತ?
    ದೇಶದ ಪ್ರಧಾನಮಂತ್ರಿ ಸ್ಥಾನಕ್ಕೆ ಯಾರು ಸೂಕ್ತ ಎಂಬ ಸೀವೋಟರ್ ಜನಾಭಿಪ್ರಾಯದ ಪ್ರಕಾರ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂದು ಶೇ. 59.3ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ರೆ, ಶೇ.33.53ರಷ್ಟು ಮಂದಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಅಭಿಪ್ರಾಯಿಸಿದ್ದಾರೆ.