ಮಂಡ್ಯ: ನಟ ದರ್ಶನ್ ಅವರು ಕಳೆದ ದಿನ ಸುಮಲತಾ ಅಂಬರೀಶ್ ಪರವಾಗಿ ಮಳವಳ್ಳಿ ತಾಲೂಕಿನಲ್ಲಿ ಬರುವ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಇದೇ ವೇಳೆ ನಟ ದರ್ಶನ್ ಎತ್ತಿನ ಗಾಡಿಯ ಮೇಲೆ ಸವಾರಿ ಮಾಡಿದ್ದಾರೆ.
ನಟ ದರ್ಶನ್ ಮಳವಳ್ಳಿಯ ಕಂದೇಗಾಲದಲ್ಲಿ ಪ್ರಚಾರ ಮಾಡುವ ವೇಳೆ ಎತ್ತಿನ ಗಾಡಿ ಓಡಿಸಿದ್ದಾರೆ. ಕಂದೇಗಾಲದಲ್ಲಿ ದರ್ಶನ್ ಅಭಿಮಾನಿಗಳು ದಾರಿಯ ಮಧ್ಯೆಯೇ ಎತ್ತಿನ ಗಾಡಿ ಸಿದ್ಧಪಡಿಸಿ ಅವರಿಗಾಗಿ ಕಾದು ಕುಳಿತ್ತಿದ್ದರು. ದರ್ಶನ್ ಅವರು ಪ್ರಚಾರಕ್ಕೆಂದು ಕಂದೇಗಾಲ ಕಡೆ ಬರುತ್ತಿದ್ದಂತೆ ಅವರ ಅಭಿಮಾನಿಗಳು ಎತ್ತಿನ ಗಾಡಿ ಓಡಿಸುವಂತೆ ಒತ್ತಾಯ ಮಾಡಿದ್ದಾರೆ.
ಕೊನೆಗೆ ಅಭಿಮಾನಿಗಳ ಒತ್ತಾಯದ ಮೇರೆಗೆ ನಟ ದರ್ಶನ್ ಅವರು ಕಬ್ಬು ಸಾಗಿಸುವ ಎತ್ತಿನ ಗಾಡಿ ಹತ್ತಿದ್ದಾರೆ. ಬಳಿಕ ಜೋಡೆತ್ತು ಗಾಡಿ ಮೇಲೆ ಹಗ್ಗ ಹಿಡಿದು ನಿಂತು ಹೊಯ್.. ಹೊಯ್.. ಎಂದು ಎತ್ತಿನ ಗಾಡಿ ಸವಾರಿ ಮಾಡಿದ್ದಾರೆ.
ದರ್ಶನ್ ಅವರಿಗಾಗಿ ಅಭಿಮಾನಿಗಳು ಎತ್ತಿನ ಗಾಡಿಯನ್ನು ವಿಶೇಷವಾಗಿ ಅಲಂಕಾರ ಮಾಡಿದ್ದರು. ಗಾಡಿಗೆ ಕರ್ನಾಟಕದ ಬಾವುಟ ಹಾಕಿದ್ದು, ಜೊತೆಗೆ ಬಾಳೆದಿಂಡು ಕಟ್ಟಿದ್ದರು. ಅಷ್ಟೇ ಅಲ್ಲದೇ ಜೋಡೆತ್ತುಗಳ ಬೆನ್ನಿನ ಮೇಲೆ ರೆಬೆಲ್ ಸ್ಟಾರ್ ಅಂಬಿ ಮತ್ತು ಡಿ ಬಾಸ್ ಎಂದು ಬರೆಯಲಾಗಿತ್ತು.
ನವದೆಹಲಿ: ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಒಂದು ವೇಳೆ ನೀವು ನನಗೆ ವೋಟ್ ಹಾಕದಿದ್ದರೆ ನಾನು ನಿಮಗೆ ಶಾಪ ಹಾಕುತ್ತೇನೆ ಎಂದು ಹೇಳುವ ಮೂಲಕ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ನಾನು ಒಬ್ಬ ಸನ್ಯಾಸಿ. ನೀವು ನಾನು ಗೆಲ್ಲುವಂತೆ ಮಾಡಿದರೆ ನಾನು ಗೆಲ್ಲುತ್ತೇನೆ. ಇಲ್ಲದಿದ್ದರೆ ದೇವಸ್ಥಾನದಲ್ಲಿ ಭಜನೆ, ಕೀರ್ತನೆಯನ್ನು ನಾನು ಮಾಡಿಕೊಂಡಿರುತ್ತೇನೆ. ಇಂದು ನಾನು ನಿಮ್ಮ ಮತಗಳನ್ನು ಕೇಳಲು ಬಂದಿದ್ದು, ನನ್ನನ್ನು ಗೆಲ್ಲಿಸಿ ಎಂದು ಕೇಳಿಕೊಂಡಿರುವುದಾಗಿ ರಾಷ್ಟ್ರೀಯ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೀವು ನನ್ನನ್ನು ಗೆಲ್ಲಿಸಬೇಕು. ನಾನು ನಿಮ್ಮ ಮನೆ ಬಾಗಿಲಿಗೆ ಬೇಡಲು ಬಂದಿದ್ದೇನೆ. ನೀವು ಸನ್ಯಾಸಿಗೆ ಭಿಕ್ಷೆ ಕೊಡಲು ನಿರಾಕರಿಸಿದರೆ ನಿಮ್ಮ ಕುಟುಂಬದ ಸಂತೋಷವನ್ನು ಕಿತ್ತುಕೊಂಡು ಹೋಗುತ್ತೇನೆ. ಮತ್ತು ನಿಮಗೆ ಶಾಪ ಹಾಕುತ್ತೇನೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಸಾಕ್ಷಿ ಮಹಾರಾಜ್ ಹೇಳಿಕೆಗೆ ಪಕ್ಷ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಸಾಕ್ಷಿ ಮಹಾರಾಜ್ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಚಲಿತರಾಗಿದ್ದು, ಇದೀಗ ಬೆದರಿಕೆಯ ಮೂಲಕ ಮತ ಕೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮಂಡ್ಯ: ನಿಷ್ಠಾವಂತ ಡಿಸಿಯಾಗಿದ್ದ ಮಂಜುಶ್ರೀ ಅವರಿಗೆ ತೊಂದರೆ ಕೊಟ್ಟು, ಒತ್ತಡ ಹಾಕಿ ಕೆಲಸ ಮಾಡಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲು ನಾನು ಹೇಳಿದ್ದನ್ನೆಲ್ಲಾ ಆರೋಪ ಎಂದು ಹೇಳುತ್ತಿದ್ದರು. ಇದೀಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ನನ್ನ ಮಾತಲ್ಲಿ ನಿಜ ಇದ್ದ ಕಾರಣ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ ಅವರನ್ನು ವರ್ಗಾ ಮಾಡಿದ್ದಾರೆ. ನನಗೆ ಸಿಆರ್‍ಪಿಎಫ್ ಭದ್ರತೆ ಬೇಕು ಎಂದು ಕೇಳಿದ್ದೇನೆ ಅಂದ್ರು.
ಇದೇ ವೇಳೆ ಅಂಗವಿಕಲ ಹೆಣ್ಣು ಮಗಳು ಕಷ್ಟಪಟ್ಟು ಐಎಎಸ್ ಮಾಡಿ ನಿಷ್ಠಾವಂತಳಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಒಬ್ಬಳು ಹೆಣ್ಣು ಮಗಳ ಕಷ್ಟವನ್ನು ಅರ್ಥ ಮಾಡಿಕೊಳ್ಳದೇ ಅವರನ್ನು ಇಲ್ಲಿಂದ ಓಡಿಸಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಈ ಮಾತಲ್ಲಿ ಅರ್ಥವೇ ಇಲ್ಲ. ಯಾಕಂದ್ರೆ ಅಂಥವರಿಗೆ ಮೊದಲು ತೊಂದರೆ ಕೊಟ್ಟು, ಒತ್ತಡ ಹೇರಿದ್ದಾರೆ. ಹೀಗಾಗಿ ಸರ್ಕಾರದ ವಿಷಯದಲ್ಲಿ ಆ ಮಾತುಗಳನ್ನು ಆಡಲೇ ಬಾರದು ಅಂದ್ರು.
ಸಿದ್ದರಾಮಯ್ಯಗೆ ಟಾಂಗ್:
ಪಕ್ಷೇತರ ಅಭ್ಯರ್ಥಿ ಸುಮಲತಾರನ್ನು ಸೋಲಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಟಾಂಗ್ ಕೊಟ್ಟ ಸುಮಲತಾ, ಕಾವೇರಿ ನೀರಿಗಾಗಿ ದೇವೇಗೌಡರು ಮಾತ್ರ ಹೋರಾಟ ಮಾಡಿಲ್ಲ. ನನ್ನ ಗಂಡ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಕಾವೇರಿ ನೀರಿಗಾಗಿ ರಾಜೀನಾಮೆ ಕೊಟ್ಟ ಏಕೈಕ ವ್ಯಕ್ತಿ ಅಂಬರೀಶ್ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಮಾಯಾಂಗನೆ ಹೇಳಿಕೆಗೆ ಪ್ರತಿಕ್ರಿಯೆ:
ಇದೇ ವೇಳೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರನ್ನು ಮೀರಿಸುವ ಮಾಯಾಂಗನೆಯಾಗಿ ಹೋರಾಟ ಮಾಡುತ್ತಿದ್ದಾರೆ ಸಂಸದ ಶಿವರಾಮೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, ಜೆಡಿಎಸ್ ನಲ್ಲಿ ಯಾರು ತಾನೆ ಒಳ್ಳೆಯ ಮಾತನ್ನಾಡುತ್ತಾರೆ. ಅವರ ಹೇಳಿಕೆಗೆ ನಾನು ಬೆಲೆ ಕೊಡಲ್ಲ. ಜನ ಕೂಡ ಅವರ ಮಾತಿಗೆ ಬೆಲೆ ಕೋಡೋದಿಕ್ಕೆ ಸಾಧ್ಯನೇ ಇಲ್ಲ. ಹೀಗಾಗಿ ಅವರ ಮಾತಿಗೆ ನಾನೇನು ತಲೆಕೆಡಿಸಿಕೋಳ್ಳೋದಕ್ಕೆ ಹೋಗಲ್ಲ ಎಂದರು.
ಚಿತ್ರದುರ್ಗ: ಯಾರೋ ಹುಟ್ಟಿಸಿದ ಮಗುವಿಗೆ ನಾನು ತಂದೆ ಎಂದು ಹೇಳುವವರು ಬಿಜೆಪಿಯವರು. ಅಭಿವೃದ್ಧಿ ಬಗ್ಗೆ ಬಿಜೆಪಿ ನಾಯಕರಿಗೆ ಕಳಕಳಿ ಇಲ್ಲ ಎಂದು ಮಾಜಿ ಸಚಿವ ಹೆಚ್.ಆಂಜನೇಯ ವಾಗ್ದಾಳಿ ನಡೆಸಿದ್ರು.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರೋ ಹುಟ್ಟಿಸಿದ ಮಗುವಿಗೆ ನಾನು ತಂದೆ ಎಂದು ಹೇಳುವವರು ಬಿಜೆಪಿಯವರು. ಅಭಿವೃದ್ಧಿ ಬಗ್ಗೆ ಅವರಿಗೆ ಕಿಂಚಿತ್ತೂ ಕಳಕಳಿ ಇಲ್ಲ. ಭದ್ರಾ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಬಿಜೆಪಿ ಶ್ರಮ ವಹಿಸಿಲ್ಲ. ಮಹದಾಯಿ ಯೋಜನೆ ಜಾರಿಗೊಳಿಸಲು ಬಿಜೆಪಿಗೆ ಬದ್ಧತೆ ಇಲ್ಲ. ಗೋವಾ, ಮಹಾರಾಷ್ಟ್ರದೊಂದಿಗೆ ಮಾತನಾಡಿ ನೀರಿನ ಸಮಸ್ಯೆ ಪರಿಹರಿಸಬೇಕಿತ್ತು. ಭದ್ರಾ ಯೋಜನೆ ತಾಂತ್ರಿಕ ದೋಷದಿಂದ ತಡವಾಗಿದೆ. ಮಾಹಿತಿ ಕೊರತೆಯಿಂದ ಬಿಜೆಪಿ ಇಲ್ಲಸಲ್ಲದ ಆರೋಪ ಸರಿಯಲ್ಲ. ಯೋಜನೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ರು.
ಏಪ್ರಿಲ್ 13 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಕೋಟೆನಾಡು ಚಿತ್ರದುರ್ಗಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಾರೆ. ಈ ವೇಳೆ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಬೃಹತ್ ಸಮಾವೇಶದಲ್ಲಿ ಪ್ರಚಾರ ನಡೆಸಲಿದ್ದಾರೆ. ಸಮಾವೇಶದಲ್ಲಿ ಸಿಎಂ ಕುಮಾರಸ್ವಾಮಿ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಪರಮೇಶ್ವರ್ ಸಚಿವರಾದ ಸತೀಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.
ಸಮಾವೇಶಕ್ಕಾಗಿ ವಿನೂತನ ಜರ್ಮನ್ ಟೆಂಟ್ ಹೌಸ್ ವೇದಿಕೆ ರೆಡಿ ಮಾಡಲಾಗುತ್ತಿದೆ. ವೇದಿಕೆ ಮುಂಭಾಗದಲ್ಲಿ 25000 ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ. ರಾಹುಲ್ ಗಾಂಧಿಗೆ ಕೋಟೆ ನಾಡನ್ನಾಳಿದ ಪಾಳೆಗಾರ ವೀರ ಮದಕರಿನಾಯಕರ ಪ್ರತಿಮೆ ನೀಡಿ ಸನ್ಮಾನ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಅಂದ್ರು.
ಈ ವೇಳೆ ಮೈತ್ರಿ ಅಭ್ಯರ್ಥಿ ಚಂದ್ರಪ್ಪ, ಶಾಸಕ ರಘುಮೂರ್ತಿ, ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ಹುಬ್ಬಳ್ಳಿ: ರಾಜ್ಯ ಸರ್ಕಾರ ಸದ್ಯ ಐಸಿಯುನಲ್ಲಿದ್ದು, ಕೋಮಾ ಸ್ಥಿತಿ ತಲುಪಿದೆ. ರಾಜ್ಯದಲ್ಲಿ 22 ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸುಭದ್ರ ಸರ್ಕಾರ ಬೇಕೋ, ಭ್ರಷ್ಟಾಚಾರದ ಸರ್ಕಾರ ಬೇಕೋ ಜನರೇ ತೀರ್ಮಾನ ಮಾಡಲಿ. ಪುಲ್ವಾಮಾ ದಾಳಿ ಬಗ್ಗೆ ನನಗೆ ಮೊದಲೇ ಗೊತ್ತಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದು ಕುಮಾರಸ್ವಾಮಿ ಅವರ ನೈತಿಕ ಅಧಃ ಪತನ. ಸರ್ಕಾರದ ಆಯಸ್ಸು ಮುಗಿಯುತ್ತಾ ಬಂದಿದೆ. ರಾಜ್ಯ ಸರ್ಕಾರ ಸದ್ಯ ಐಸಿಯುನಲ್ಲಿದ್ದು ಕೋಮಾ ಸ್ಥಿತಿಯನ್ನು ತಲುಪಿದೆ ಅಂದ್ರು.
ಕುಟುಂಬ ರಾಜಕಾರಣ ಅಂದ್ರೆ ಕುಟುಂಬದಲ್ಲಿ ಒಬ್ಬರು ಇಬ್ಬರೂ ರಾಜಕೀಯ ಮಾಡುವುದಲ್ಲ. ಸಂಪೂರ್ಣ ಕುಟುಂಬವೇ ರಾಜಕಾರಣ ಮಾಡುವುದು. ಅದಕ್ಕೆ ಉತ್ತಮ ಉದಾಹರಣೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ. ನಾನು ನಿಂಬೆ ಹಣ್ಣು ಇಟ್ಟುಕೊಂಡು ಭವಿಷ್ಯ ಹೇಳುತ್ತಿಲ್ಲ. ಪಕ್ಷದ ಬಲ ನೋಡಿ 22 ಸೀಟು ಗೆಲ್ಲುವುದಾಗಿ ಹೇಳುವೆ ಎಂದು ತಿಳಿಸಿದ್ರು.
ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದಾರೆ. ಮೋದಿ ಅವರ ಅನೇಕ ಜನಪರ ಯೋಜನೆಗಳನ್ನು ಕೊಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿಗೆ ಮಂಡ್ಯ ಲೋಕಸಭೆಯ ಸೋಲಿನ ಭಯ ಕಾಡುತ್ತಿದೆ. ಕುಟುಂಬ ರಾಜಕಾರಣದಿಂದ ರಾಜ್ಯದ ಜನ ಬೇಸತ್ತಿದ್ದಾರೆ ಅಂದ್ರು.
ಐಟಿ ದಾಳಿ ಕುರಿತು ಮಾತನಾಡಿದ ಅವರು, ದಾಖಲೆಗಳನ್ನ ಪರಿಶೀಲಿಸಿ ದಾಳಿ ನಡೆಯುತ್ತದೆ. ಬಿಜೆಪಿಯ ಅನೇಕ ನಾಯಕರ ಮನೆ ಮೇಲೂ ದಾಳಿ ಆಗಿದೆ. ಆಗ ನಾವು ಬೀದಿಗಿಳಿದು ಹೋರಾಟ ಮಾಡಿಲ್ಲ. ಮುಖ್ಯಮಂತ್ರಿ ಮಾತಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳಿದ್ರು.
ಕುಂದಗೋಳ ಬೈ ಎಲೆಕ್ಷನ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ನಾಯಕರೊಂದಿಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಧರ್ಮ ಒಡೆದವರು ಸದ್ಯ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.
ಮಂಡ್ಯ: ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಜಿಲ್ಲೆಯಲ್ಲಿಂದು ಮಗ ನಿಖಿಲ್ ಪರ ಪ್ರಚಾರ ಮಾಡಿದ ಕುಮಾರಸ್ವಾಮಿ, ಯಾವ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಾರೆ. ನನ್ನ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನ ಜೊತೆ ಚರ್ಚೆ ಮಾಡುವುದಕ್ಕೂ ಅವರ ಕೈಯಲ್ಲಿ ಶಕ್ತಿಯಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಮಂಡ್ಯ ಜಿಲ್ಲೆಗೆ ದೇವೇಗೌಡ ಕುಟುಂಬ ಕೊಟ್ಟಿರುವ ಕೊಡುಗೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೋ ಅಥವಾ ಇನ್ನು ಯಾರ ಬಗ್ಗೆ ಚರ್ಚೆ ಮಾಡುತ್ತಾರೋ ಎಂದು ವ್ಯಂಗ್ಯವಾಡಿದ್ರು.
ಸುಮಲತಾ ಅವರ ಅಭಿವೃದ್ಧಿ ಏನಿದೆ ಎಂದು ಮತ್ತೆ ಪ್ರಶ್ನಿಸಿದ ಸಿಎಂ, ಅವರು ಇಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಅಂಬರೀಶ್ ಸಂಸದರಾಗಿದ್ದಾಗ ಜನರ ಕಷ್ಟ-ಸುಖ ಕೇಳಿದ್ದಾರಾ. ಅಭಿವೃದ್ಧಿ ಬಗ್ಗೆ ಇವರ ಬಳಿ ನಾವು ಪಾಠ ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಅಲೆ ಇದೆ. ನನಗೆ ಯಾವುದೇ ರೀತಿಯ ಆತಂಕಗಳು ಇಲ್ಲ. ಮಂಡ್ಯ ಜಿಲ್ಲೆಯ ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿಯನ್ನ ಆಯ್ಕೆ ಮಾಡಿ ಅಭಿವೃದ್ಧಿಗೆ ಚಾಲನೆ ಕೊಡುವ ದೃಷ್ಟಿಯಿಂದ ಈ ಅವಕಾಶವನ್ನು ಉಪಯೋಗ ಮಾಡಿಕೊಳ್ಳುವ ನಿರ್ಧಾರದಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ನಿಖಿಲ್ ಸವಾಲೇನು?
ಸುಮ್ಮನೆ ಒಬ್ಬೊಬ್ಬರ ಕಾಲೆಳೆದುಕೊಂಡು ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡೋಣ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸುಮಲತಾಗೆ ನಿಖಿಲ್ ಸವಾಲು ಹಾಕಿದ್ದರು.
ಸುಮಲತಾ ಏನ್ ಹೇಳಿದ್ದರು?
ಅಂಬರೀಶ್ ಮತ್ತು ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ. ಎಲ್ಲಿ ಬೇಕಾದರೂ, ಯಾವ ವೇದಿಕೆಯಲ್ಲಾದರೂ ಚರ್ಚೆ ಮಾಡಿ. ನಿಖಿಲ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲನ್ನು ಸುಮಲತಾ ಸ್ವೀಕರಿಸಿದ್ದರು. ಅಲ್ಲದೆ ”Any time, any where..I am ready” ಎನ್ನುವ ಮೂಲಕ ನಿಖಿಲ್ ಸವಾಲು ಸ್ವೀಕರಿಸಿದ್ದರು.
ನಿಖಿಲ್ ಪ್ರತಿಕ್ರಿಯೆ:
ಸುಮಲತಾ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಬುಧವಾರ ಕೆಆರ್ ನಗರದ ಬ್ಯಾಡರಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರತಿಕ್ರಿಯಿಸಿದ್ದ ನಿಖಿಲ್, ನಾನು ಯಾವ ಓಪನ್ ಚಾಲೆಂಜ್ ಕೂಡ ಕೊಟ್ಟಿಲ್ಲ. ಓಪನ್ ಚಾಲೆಂಜ್ ಗೀಪನ್ ಚಾಲೆಂಜ್ ನಂಗೆ ಗೊತ್ತಿಲ್ಲ. ನಾನು ಲೈವ್ ಆಗಿ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ತಂದೆ-ತಾಯಂದಿರು ಏನು ಸಮಸ್ಯೆಗಳ ಬಗ್ಗೆ ಮಾತಾಡುತ್ತಾ ಇದ್ದಾರೆಯೋ ಅವರಿಗೆ ನಾನು ಉತ್ತರಿಸಬೇಕಾಗಿದೆ ಎಂದು ತಿಳಿಸಿದ್ದರು.
ಇಲ್ಲಿ ಬೇರೆಯವರಿಗೆ ಉತ್ತರ ನೀಡುವ ಅಗತ್ಯವಿಲ್ಲ. ಹೀಗಾಗಿ ಏ.18ರ ವರೆಗೆ ಸಮಯ ವ್ಯರ್ಥ ಮಾಡದೇ ದಯವಿಟ್ಟು ಪ್ರಚಾರ ಮಾಡೋದಕ್ಕೆ ಹೇಳಿ. ಈ ಮೂಲಕ ಜನರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಲು ಹೇಳಿ. ಆಮೇಲೆ ಮಾತನಾಡೋಣ ಎಂದು ನಿಖಿಲ್ ಸಲಹೆ ನೀಡಿದ್ದರು.
ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ರೋಡ್ ಶೋ ವೇಳೆ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿವಿ ಸದಾನಂದ ಗೌಡರಿಗೆ ಮುಜುಗರ ಉಂಟಾದ ಪ್ರಸಂಗ ನಡೆಯಿತು.
ಈಗ ಹೆಚ್ಚಾಗಿ ಕೇಳಿ ಬರ್ತಿರೋ ಸ್ಲೋಗನ್ ಅಂದ್ರೆ ಚೌಕೀದಾರ್.. ಚೌಕೀದಾರ್ ಎಂದು. ಆದ್ರೆ ಡಿವಿ ಸದಾನಂದಗೌಡರು ಕೆಆರ್ ಪುರಂನ ಮಹದೇವಪುರದಲ್ಲಿ ಪ್ರಚಾರಕ್ಕೆ ತೆರಳಿದ್ದಾಗ ಚೌಕಿದಾರ್ ಚೋರ್ ಹೇ ಎಂದು ಘೋಷಣೆ ಕೂಗಿದ್ರು. ಘೋಷಣೆಯಿಂದ ರೋಡ್ ಶೋನಲ್ಲಿದ್ದ ಡಿವಿಎಸ್‍ಗೆ ಮುಜುಗರವಾಯ್ತು.
ಆದ್ರೆ ತನಗೆ ಮುಜುಗರವಾದರೂ ತೋರಿಸಿಕೊಳ್ಳದ ಸದಾನಂದಗೌಡರು, ಜೊತೆಗಿದ್ದ ಕಾರ್ಯಕರ್ತರು ಘೋಷಣೆ ಕೂಗಿದವರ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಮಿತ್ ಶಾ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದ್ದ ವೇಳೆ ಚೌಕೀದಾರ್ ಶೇರ್ ಎಂದು ಘೋಷಣೆ ಕೂಗಿದ್ದರು.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸದಾನಂದ ಗೌಡರು ಸ್ಪರ್ಧಿಸಿದ್ರೆ, ಮೈತ್ರಿ ಅಭ್ಯರ್ಥಿಯಾಗಿ ಕೃಷ್ಣಬೈರೇಗೌಡರು ಕಣದಲ್ಲಿದ್ದಾರೆ.
ದಾವಣಗೆರೆ: ಚುನಾವಣಾ ಆಯೋಗದ ಬಗ್ಗೆ ನಾವು ವಿಶ್ವಾಸ ಕಳೆದುಕೊಳ್ಳುತ್ತಿದ್ದೇವೆ. ಮೋದಿಯವರು ಏನೇ ಮಾತನಾಡಿದರೂ ಸುಮ್ಮನೆ ಇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಬಾಪೂಜಿ ಮೈದಾನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿಯವರು ಉದ್ಯೋಗ ಸೃಷ್ಠಿ ಮಾಡಿದ್ದೇನೆ. ಮತ ನೀಡಿ ಎಂದು ಕೇಳುತ್ತಿಲ್ಲ. ಪಾಕ್ ಮೇಲೆ ಯುದ್ಧ ಮಾಡಿದ್ದೇವೆ ವೋಟ್ ಕೊಡಿ ಎನ್ನುತ್ತಿದ್ದಾರೆ. ಈ ರೀತಿ ಬಹಿರಂಗವಾಗಿ ವೇದಿಕೆ ಮೇಲೆ ಹೇಳಿದರೂ ಚುನಾವಣಾ ಆಯೋಗ ಏನು ಮಾಡುತ್ತಿಲ್ಲ. ಮಾಧ್ಯಮ ಕ್ಷೇತ್ರದ ಮೇಲೆ ಬೆದರಿಕೆ ಹಾಕುತ್ತಿದ್ದಾರೆ. ಅವರನ್ನು ಸಹ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ದಾವಣಗೆರೆಯಲ್ಲಿ ಲೋಕಸಭಾ ಸದಸ್ಯರ ಸಾಧನೆ ಏನೂ ಇಲ್ಲ. ಹೀಗಾಗಿ ಮಂಜಪ್ಪನವರ ಗೆಲುವು ಖಚಿತ. ಮಂಡ್ಯದಲ್ಲಿ ಸುಮಲತಾಗೆ ಮೋದಿ ಬೆಂಬಲ ನೀಡುತ್ತಿದ್ದಾರೆ. ಸುಮಲತಾ ಬಿಜೆಪಿ ಅಭ್ಯರ್ಥಿ ಆನ್ನೋದು ಇದರಿಂದ ಗೊತ್ತಾಗುತ್ತಿದೆ. ಮಂಡ್ಯದಲ್ಲಿ ನಿಖಿಲ್ ಭಾರೀ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ರು.
ರಾಜ್ಯದಲ್ಲಿ ಆದಾಯ ತೆರಿಗೆ ಇಲಾಖೆ ಬಿಜೆಪಿಯ ಬ್ರಾಂಚ್ ಆಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಆದಾಯ ತೆರಿಗೆ ಇಲಾಖೆ ಬಳಕೆ ಮಾಡಿಕೊಂಡು ಪ್ರತಿಯೊಂದು ಸಂಸ್ಥೆಯನ್ನು ಸರ್ವನಾಶ ಮಾಡಿದ್ದಾರೆ. ಅಲ್ಲದೆ ಯಡಿಯೂರಪ್ಪ ಮನೆ ಮೇಲೆ ಯಾಕೆ ಐಟಿ ದಾಳಿ ನಡೆಯುವುದಿಲ್ಲ. 200, 300 ಕೋಟಿ ಮನೆಯಲ್ಲಿ ಇಟ್ಟುಕೊಂಡು ಆಪರೇಶನ್ ಕಮಲ ಮಾಡುತ್ತಾ ಇದ್ದಾರೆ ಎಂದು ಗರಂ ಆದ್ರು.
ರಾಹುಲ್ ಗಾಂಧಿ ವಯನಾಡ್‍ಗೆ ಹೋದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದಿನೇಶ್, ಯಾರಿಗೂ ಹೆದರಿ ರಾಹುಲ್ ಕೇರಳಕ್ಕೆ ಹೋಗಿಲ್ಲ. ರಾಹುಲ್ ಅವರು ಎರಡೂ ಕಡೆ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ತಾಲೂಕು ಕಚೇರಿ ಆವರಣದಲ್ಲಿ ಚುನಾವಣಾ ವಾಹನವನ್ನು ಚಾಲಕರು ಅಂದರ್ ಬಾಹರ್‍ಗೆ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಧೂಮಪಾನ ನಿಷೇಧದ ಸ್ಥಳದಲ್ಲೇ ಸಿಗರೇಟ್ ಸೇದುವ ಮೂಲಕ ಅಕ್ರಮ ತಡೆಗಟ್ಟುವ ಸಿಬ್ಬಂದಿಯಿಂದಲೇ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಈ ಮೂಲಕ ಸರ್ಕಾರಿ ವಾಹನಗಳ ಚಾಲಕರನ್ನ ಹೇಳೋರಿಲ್ಲ ಕೇಳೋರಿಲ್ಲ ಅನ್ನುವಂತವಾಗಿದೆ.
ಲೋಕಸಭಾ ಚುನಾವಣೆಯ ಕೆಲಸಕ್ಕೆ ಕೆಲವು ಖಾಸಗಿ ವಾಹನಗಳ ಬಳಕೆ ಮಾಡಲಾಗಿದೆ. ಆದ್ರೆ ಸರ್ಕಾರಿ ಕಚೇರಿಯ ಆವರಣದಲ್ಲೇ ಖಾಸಗಿ ಬೊಲೆರೋ ಜೀಪ್ ಕೆಎ 04 ಎಂಟಿ 0654 ವಾಹನದಲ್ಲಿ ಐದಾರು ಮಂದಿ ಚಾಲಕರು ಜೂಜಾಟ ನಡೆಸುತ್ತಿರುವುದು ಕಂಡು ಬಂದಿದೆ.