Tag: loksabha elections 2019

  • ಅಂಬಿ ಅಭಿಮಾನದ ಹೊಳೆಗೆ ಸಾಕ್ಷಿಯಾಯ್ತು ಸಕ್ಕರೆ ನಾಡು!

    ಅಂಬಿ ಅಭಿಮಾನದ ಹೊಳೆಗೆ ಸಾಕ್ಷಿಯಾಯ್ತು ಸಕ್ಕರೆ ನಾಡು!

    ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಇಂದು ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಪ್ರಚಾರಕ್ಕೆ ಧುಮುಕಿದ್ದಾರೆ.

    ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ಸುಮಲತಾ ಬೃಹತ್ ಸಮಾವೇಶ ನಡೆಸಿದ್ದು, ಈ ವೇಳೆ ಸುಮಲತಾ ಅವರಿಗೆ ನಟರಾದ ಯಶ್ ಹಾಗೂ ದರ್ಶನ್ ಎಡಬಲ ನಿಂತು ಮತ್ತಷ್ಟು ಬಲ ನೀಡಿದ್ದಾರೆ. ಅಲ್ಲದೆ ಈ ವೇಳೆ ಸಾವಿರಾರು ಮಂದಿ ಅಂಬಿ ಅಭಿಮಾನಿಗಳು ರೋಡ್ ಶೋದಲ್ಲಿ ಭಾಗಿಯಾಗಿದ್ದಾರೆ. ಸಮಲತಾ, ಯಶ್ ಹಾಗೂ ದರ್ಶನ್ ಜನರತ್ತ ಕೈ ಬೀಸುವ ಮೂಲಕ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ಪಾಸ್ ಮಾಡಿದ್ದಾರೆ.

    ಒಟ್ಟಿನಲ್ಲಿ ಜೆಡಿಎಸ್ ಭದ್ರಕೋಟೆ ಎಂದೇ ಪ್ರಖ್ಯಾತವಾದ ಮಂಡ್ಯದಲ್ಲಿ ಸುಮಲತಾ ಇಂದು ರೋಡ್ ಶೋ ನಡೆಸುವ ಮೂಲಕ ರಣಕಹಳೆ ಮೊಳಗಿಸಿದ್ದಾರೆ.

    ಇಂದು ಬೆಳಗ್ಗೆ ಚಾಮುಂಡಿ ತಾಯಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ನೇರವಾಗಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು. ಸುಮಾರು 11 ಗಂಟೆಯ ನಂತರ ಸುಮಲತಾ ಅವರು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

    ಡಿಸಿ ಕಚೇರಿಯಿಂದ ನಗರದ ವಿಶ್ವಶ್ವರಯ್ಯ ಪ್ರತಿಮೆಯ ಬಳಿ ಬಂದು ಮಾಲಾರ್ಪಣೆ ಮಾಡಿದ್ರು. ಇದಾದ ಬಳಿಕ ರೋಡ್ ಶೋ ಆರಂಭ ಮಾಡಿದ್ರು. ಈ ವೇಳೆ ನಟ ಯಶ್ ಹಾಗೂ ದರ್ಶನ್ ಜೊತೆಯಾದ್ರು. ರೋಡ್ ಶೋ ವೇಳೆ ಸಾವಿರಾರು ಅಂಬಿ ಅಭಿಮಾನಿಗಳು ಹಾಗೂ ಜಾನಪದ ಕಲಾತಂಡಗಳು ಸುಮಲತಾ ಅವರಿಗೆ ಸಾಥ್ ನೀಡಿತ್ತು.

    ರೋಡ್ ಶೋ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ನೋಡಲು ಮರ ಹತ್ತಿದ್ದಾರೆ. ರೋಡ್ ಶೋನಿಂದಾಗಿ ಹೈವೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಹೀಗಾಗಿ ಸಾಲುಗಟ್ಟಿ ನಿಂತ ವಾಹನಗಳ ಮೇಲೆ ನಿಂತು ಅಭಿಮಾನಿಗಳು ಮೆರವಣಿಗೆ ವೀಕ್ಷಿಸಿದ್ದಾರೆ.

  • ದಾವಣಗೆರೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಸರದಾರನಿಗೆ ಟಕ್ಕರ್ ಕೊಡಲು ಒಂದಾದ ಮೈತ್ರಿ ಪಕ್ಷಗಳು!

    ದಾವಣಗೆರೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಸರದಾರನಿಗೆ ಟಕ್ಕರ್ ಕೊಡಲು ಒಂದಾದ ಮೈತ್ರಿ ಪಕ್ಷಗಳು!

    ದಾವಣಗೆರೆ: ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕ ಅಖಾಡಕ್ಕೆ ಧುಮುಕಲು ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಮೂಲಕ ಬೀಗರ ನಡುವಿನ ರಣಕಣ ರಂಗೇರುತ್ತಿದೆ.

    ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಮೂರು ಬಾರಿ ಪರಾಭವಗೊಂಡಿರುವ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2004, 2009, 2014ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಲ್ಲಿಕಾರ್ಜುನ್ ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಎಂಬ ಲೆಕ್ಕಾಚಾರದೊಂದಿಗೆ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ.

    2009ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಪಡೆದಿದ್ದ ಮಲ್ಲಿಕಾರ್ಜುನ್, ಕೇವಲ 2 ಸಾವಿರ ಮತಗಳ ಅಂತರದಿಂದ ಸೋಲು ಒಪ್ಪಿಕೊಳ್ಳಬೇಕಾಯಿತು. 2014 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕ ಅಭ್ಯರ್ಥಿ ಹಾಕಿದ್ದರಿಂದ ಜೆಡಿಎಸ್ ನ ಮಹಿಮಾ ಜೆ ಪಟೇಲ್ 46,911 ಮತಗಳನ್ನ ಪಡೆದುಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ 5,01,287 ಮತ ಪಡೆದುಕೊಂಡು 17607 ಮತಗಳ ಅಂತರದಿಂದ ಪುನಃ ಸೋಲು ಕಾಣಬೇಕಾಯಿತು.

    ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮತಗಳು ಬಿಜೆಪಿಗಿಂತ ಹೆಚ್ಚಿನದ್ದಾಗಿವೆ. ಹಾಗಾಗಿ ಈ ಬಾರಿಯ ಗೆಲುವು ಸುಲಭ ಎಂಬ ಲೆಕ್ಕಾಚಾರ ಮಲ್ಲಿಕಾರ್ಜುನ್ ಆಪ್ತ ವಲಯದಲ್ಲಿದೆ. ಹಾಗಾಗಿ ಮಲ್ಲಿಕಾರ್ಜುನ್ ಸ್ಪರ್ಧೆಯನ್ನ ಅವರ ತಂದೆ ಶಾಮನೂರು ಶಿವಶಂಕರಪ್ಪ ಖಚಿತಪಡಿಸಿದ್ದಾರೆ.

    ಇತ್ತ ಮೂರು ಲೋಕಸಭಾ ಚುನಾವಣೆಯಲ್ಲೂ ಗೆದ್ದು ನಗೆ ಬೀರಿದ ಬಿಜೆಪಿಯ ಜಿ.ಎಂ ಸಿದ್ದೇಶ್ವರ್ ಇದು ನನ್ನ ಕಟ್ಟಕಡೆಯ ಆಟ, ಒಮ್ಮೆ ಗೆಲ್ಲಿಸಿ ಬಿಡಿ ಎಂದು ಪ್ರಚಾರ ಶುರು ಮಾಡಿಕೊಂಡಿದ್ದಾರೆ. ಈಗಾಗಲೇ ಬಿಜೆಪಿ ಟಿಕೆಟ್ ಫೈನಲ್ ಆಗಿರೋದ್ರಿಂದ ಕಳೆದ ಒಂದು ವಾರದಿಂದ ಬಿಜೆಪಿ ಕಾರ್ಯಕರ್ತರು ಫುಲ್ ಆ್ಯಕ್ಟಿವ್ ಆಗಿ ಸಭೆ, ಸಮಾರಂಭ ನಡೆಸುತ್ತಿದ್ದಾರೆ. ಜಿ.ಎಂ.ಸಿದ್ದೇಶ್ವರ್ ಕೂಡ ಮಾವನ ಮಗನಿಗೆ ಸ್ಟ್ರೋಕ್ ಕೊಡೋದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ಈಗಾಗಲೇ ಲೋಕಸಭಾ ಕ್ಷೇತ್ರದಲ್ಲಿ ಶೇ.90 ರಷ್ಟು ಹಳ್ಳಿಗಳಲ್ಲಿ ಒಂದು ರೌಂಡಿನ ಸುತ್ತಾಟ ಮುಗಿಸಿರುವ ಸಿದ್ದೇಶ್ವರ್ ಈಗ ಮತ್ತೊಂದು ಸುತ್ತಾಟಕ್ಕೆ ಸಜ್ಜಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲೇ ಜಿ.ಎಂ.ಸಿದ್ದೇಶ್ವರ್ ಗೆಲ್ಲೋದ್ರಲ್ಲಿ ಎರಡನೇ ಮಾತಿಲ್ಲ ಎಂದು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಹೇಳಿದ್ದಾರೆ.

    ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಜಿ.ಎಂ.ಸಿದ್ದೇಶ್ವರ್ ಮಾವ-ಅಳಿಯ. ಆದ್ರೆ, ರಾಜಕೀಯವಾಗಿ ಇಬ್ಬರೂ ಬದ್ಧ ವೈರಿಗಳು. ಮೂರು ಬಾರಿಯೂ ಮಾವನ ಮಗನನ್ನು ಮನೆಗೆ ಕಳುಹಿಸಿದ ಸಿದ್ದೇಶ್ವರ್ ಈ ಬಾರಿಗೆ ಗೆದ್ದು ಬೀಗ್ತಾರಾ, ಇಲ್ಲ ಬೀಗರಿಗೆ ಕ್ಷೇತ್ರ ಬಿಟ್ಟು ಕೊಡ್ತಾರಾ ಕಾದು ನೋಡಬೇಕಿದೆ.

  • ಇಂದು ಮಂಡ್ಯ ಅಖಾಡದಲ್ಲಿ ಸುಮಲತಾ ನಾಮಪತ್ರ – ಸಿಎಂಗೆ ಬಹಿರಂಗ ಸಮಾವೇಶದ ಮೂಲಕ ಸೆಡ್ಡು

    ಇಂದು ಮಂಡ್ಯ ಅಖಾಡದಲ್ಲಿ ಸುಮಲತಾ ನಾಮಪತ್ರ – ಸಿಎಂಗೆ ಬಹಿರಂಗ ಸಮಾವೇಶದ ಮೂಲಕ ಸೆಡ್ಡು

    – ಸುಮಲತಾಗೆ ನಟ ದರ್ಶನ್, ಯಶ್ ಸಾಥ್

    ಮಂಡ್ಯ: ಹೈವೊಲ್ಟೇಜ್ ಕ್ಷೇತ್ರವಾಗಿರೋ ಮಂಡ್ಯದಲ್ಲಿ ಘಟಾನುಘಟಿಗಳ ಸ್ಪರ್ಧೆಯಿಂದ ಗಮನ ಸೆಳೆದಿರೋ ಕ್ಷೇತ್ರದಲ್ಲಿಂದು ದಿನವಿಡೀ ಪಾಲಿಟಿಕ್ಸ್ ನಡೆಯಲಿದೆ. ಕಾರಣ ಸುಮಲತಾ ಇಂದು ನಾಮಪತ್ರ ಸಲ್ಲಿಸಲಿದ್ದು, ನಟರಾದ ದರ್ಶನ್, ಯಶ್ ಭಾಗಿಯಾಗಲಿದ್ದಾರೆ. ಅಲ್ಲದೆ ಬಹಿರಂಗ ಸಮಾವೇಶ ನಡೆಯಲಿದ್ದು, ಸಿಎಂಗೆ ಭರ್ಜರಿಯಾಗಿಯೇ ಟಾಂಗ್ ನೀಡಲು ವೇದಿಕೆ ಸಜ್ಜಾಗಿದೆ.

    ಹೌದು. ರಾಜ್ಯದ ಹೈವೊಲ್ಟೇಜ್ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರ ಇಂದು ರಣೋತ್ಸಾಹದ ರಾಜಕೀಯ ಸಂಗ್ರಾಮಕ್ಕೆ ಸಾಕ್ಷಿಯಾಗಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕಾಗಿ ಅಂಬಿ ಅಭಿಮಾನಿಗಳು ಅಖಾಡದ ಫೈಟ್‍ಗೆ ಸಜ್ಜಾಗಿದೆ.

    ಮಂಗಳವಾರ ರಾತ್ರಿಯೇ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಸುಮಲತಾ ಬೆಳಗ್ಗೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಬೆಳಗ್ಗೆ 11ಕ್ಕೆ ಮಂಡ್ಯದ ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಾದ ಬಳಿಕ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ನಡೆಯುವ ಬೃಹತ್ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ಸುಮಲತಾ ಪರ ಪ್ರಚಾರಕ್ಕೆ ಸ್ಯಾಂಡಲ್‍ವುಡ್ ದಂಡೇ ಹರಿದು ಬರುವ ಸಾಧ್ಯತೆ ಇದೆ. ಅದರಲ್ಲೂ ನಟ ದರ್ಶನ್ ಹಾಗೂ ಯಶ್ ಭಾಗವಹಿಸುತ್ತಾ ಇರೋದು ಮಂಡ್ಯದ ರಣಕಣವನ್ನು ಮತ್ತಷ್ಟು ರಂಗೇರಿಸಿದೆ. ಇದಲ್ಲದೆ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಅನೇಕರು ಸಾಥ್ ನೀಡಲಿದ್ದಾರೆ. ಜೊತೆಗೆ ಕಾಂಗ್ರೆಸ್ ನ ಕೆಲ ಅತೃಪ್ತರು ಭಾಗವಹಿಸುವ ಸಾಧ್ಯತೆ ಇದೆ.

    ಇತ್ತ ಸುಮಲತಾ ಅಂಬರೀಶ್ ಗೆ ಟಕ್ಕರ್ ಕೊಡಲು ತೀರ್ಮಾನಿಸಿರುವ ಸಿಎಂ ಕುಮಾರಸ್ವಾಮಿ, ನಿನ್ನೆ ರಾತ್ರಿ ಮಂಡ್ಯದ ಕೆ.ಆರ್.ಎಸ್. ನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದು, ಜಿಲ್ಲೆಯ ಜೆಡಿಎಸ್- ಕಾಂಗ್ರೆಸ್ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲದೆ ಇಂದು ಕೂಡ ಮಂಡ್ಯದಲ್ಲೇ ವಾಸ್ತವ್ಯ ಹೂಡಿ ಗೇಮ್ ಪ್ಲಾನ್ ರಚಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಜೆ ವೇಳೆಗೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಶ್ರೀಗಳ ಆಶಿರ್ವಾದ ಪಡೆದು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ. ಇತ್ತ ನಿಖಿಲ್ ಕುಮಾರಸ್ವಾಮಿ ಕೂಡ ಇಂದು ಶ್ರೀರಂಗಪಟ್ಟಣ, ಮದ್ದೂರು ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಲಿದ್ದಾರೆ.

    ಒಟ್ಟಾರೆ ನಿಖಿಲ್ ವರ್ಸಸ್ ಸುಮಲತಾ ಸ್ಪರ್ಧೆಯಿಂದ ಹೈ ವೊಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಇಂದು ರಾಜಕೀಯ ನಾಯಕರು, ಸಿನಿಮಾ ನಟರ ದಂಡೇ ಬೀಡು ಬಿಟ್ಟಿದ್ದು, ಇಡೀ ರಾಜ್ಯದ ಜನರೇ ಕುತೂಹಲದಿಂದ ನೋಡುವಂತೆ ಮಾಡಿದೆ.

  • ಲೋಕಸಭಾ ಚುನಾವಣೆ- ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

    ಲೋಕಸಭಾ ಚುನಾವಣೆ- ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

    ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏಪ್ರಿಲ್ 18 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಇಂದು ಅಧಿಸೂಚನೆ ಹೊರಡಲಿದೆ.

    ಆ ಮೂಲಕ ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತಿದೆ. ಆದ್ರೆ ಇಲ್ಲಿಯವರೆಗೆ ರಾಜ್ಯದ ಮೂರು ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನೇ ಇನ್ನೂ ಫೈನಲ್ ಮಾಡಿಲ್ಲ. ಅದರ ನಡುವೆಯೇ ಇಂದಿನಿಂದ ನಾಮಿನೇಷನ್ ಪ್ರಕ್ರಿಯೆ ಆರಂಭ ಕಾಣುತ್ತಿದೆ.

    ಮೊದಲ ಹಂತದಲ್ಲಿ ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 19 ಅಂದ್ರೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮಾರ್ಚ್ 26 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ. ಮಾರ್ಚ್ 27ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮಾರ್ಚ್ 29 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿರುತ್ತದೆ.

    ಮೊದಲ ಹಂತದ ಕ್ಷೇತ್ರಗಳು:
    ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ,
    ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್,
    ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ,
    ಮೈಸೂರು-ಕೊಡಗು, ಮಂಡ್ಯ, ತುಮಕೂರು,
    ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ

  • ವೈಯಕ್ತಿಕವಾಗಿ ಯಾರಿಗೂ ನೋಯಿಸುವಂತಹ ಹೇಳಿಕೆ ನೀಡಬೇಡಿ- ಜನರಲ್ಲಿ ಸುಮಲತಾ ಮನವಿ

    ವೈಯಕ್ತಿಕವಾಗಿ ಯಾರಿಗೂ ನೋಯಿಸುವಂತಹ ಹೇಳಿಕೆ ನೀಡಬೇಡಿ- ಜನರಲ್ಲಿ ಸುಮಲತಾ ಮನವಿ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಇಂದು ಸುಮಲತಾ ಅಂಬರೀಶ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಜನರಲ್ಲಿ ಮನವಿ ಕೂಡ ಮಾಡಿಕೊಂಡರು.

    ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ ಅವರು, ವೈಯಕ್ತಿಕವಾಗಿ ಯಾರಿಗೂ ನೋಯಿಸುವಂತಹ ಮಾತುಗಳನ್ನು ಹೇಳುವುದು ಬೇಡ ಎಂದು ಮನವಿ ಮಾಡಿಕೊಂಡರು.

    ಯಾರು ಯಾರಿಗೂ ನೋಯಿಸುವಂತಹ ಮಾತುಗಳನ್ನು ಆಡುವ ಅಗತ್ಯವಿಲ್ಲ. ರಾಜಕಾರಣ ಇರಬಹುದು ಅಥವಾ ಚುನಾವಣೆ ಇರಬಹುದು. ಜನಕ್ಕೆ ಏನೇನು ಒಳ್ಳೆಯದನ್ನು ಮಾಡಬೇಕು ಎಂಬುದರ ಬಗ್ಗೆ ಮಾತಾಡೋಣ. ಅದನ್ನು ಬಿಟ್ಟು ವೈಯಕ್ತಿಕವಾಗಿ ನೋವು ಕೊಡುವಂತಹ ಮಾತುಗಳು ಬೇಕಾಗಿಯೇ ಇಲ್ಲ. ಯುವಕರಿಗೆ ಮಾರ್ಗದರ್ಶನವಾಗಿ ನಿಂತುಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಅಂದ್ರು.

    ನನ್ನ ಜೊತೆ ಇಂದು ಚಿತ್ರರಂಗ ಯಾಕೆ ನಿಂತಿದೆ ಅಂದ್ರೆ ನಮ್ಮಲ್ಲಿ ಒಗ್ಗಟ್ಟಿದೆ. ಹೀಗಾಗಿ ದರ್ಶನ್, ಯಶ್, ಪುನೀತ್ ಹಾಗೂ ದೊಡ್ಡಣ್ಣ ನಿಂತಿದ್ದಾರೆ. ಎಲ್ಲರ ಸಿನಿಮಾ ವಿಚಾರದಲ್ಲಿ ಸ್ಪರ್ಧೆ ಇರುತ್ತದೆ. ಆದ್ರೆ ನಾವು ವೈರಿಗಳಲ್ಲ ಎಂದು ತೋರಿಸೋಕೆ ಇಂದು ನಿಮ್ಮ ಮುಂದೆ ನಾವೆಲ್ಲ ಕೂತಿರೋದೇ ನಿದರ್ಶನವಾಗಿದೆ. ಹಾಗೆಯೇ ರಾಜಕಾರಣದಲ್ಲಿಯೂ ನಾವೇನು ವೈರಿಗಳಾಗಬೇಕಿಲ್ಲ. ಎಲ್ಲಾ ಒತ್ತಡಗಳಿಂದಲೂ ಒಂದು ಚುನಾವಣೆಯಲ್ಲಿ ನಾವು ಫೈಟ್ ಮಾಡಬಹುದು ಅನ್ನೋದನ್ನು ತೋರಿಸೋಣ. ಇದೇ ಒಂದು ಮೊದಲ ಹೆಜ್ಜೆಯಾಗಲಿ ಅನ್ನೋದು ನನ್ನ ಆಸೆಯಾಗಿದೆ ಅಂದ್ರು.

    ನನ್ನ ಬೆನ್ನೆಲುಬಾಗಿ ನಿಂತು ನನಗೆ ಧೈರ್ಯ ಕೊಟ್ಟಿರುವ ನನ್ನ ಕುಟುಂಬ, ದೇವರು ಕೊಟ್ಟಂತಹ ನನ್ನ ಸಹೋದರ ರಾಕ್ ಲೈನ್ ವೆಂಕಟೇಶ್, ಯಾವತ್ತೂ ದೊಡ್ಡ ಮಗನಂತಿರುವ ದರ್ಶನ್, ನೀವು ನನ್ನನ್ನು ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ, ಎಂತಹ ವಿಚಾರದಲ್ಲಿಯೂ ಮನವಿ ಎನ್ನುವ ಪದವನ್ನು ಬಳಸಬಾರದು. ನೀವು ಏನೇ ಕೇಳಿದ್ರೂ ನಾನು ರೆಡಿಯಾಗಿದ್ದೇನೆ ಎಂದು ಹೇಳಿದ್ದಾರೆ.

    ಯಶ್ ನಮ್ಮ ಮನೆ ಮಗನಾಗಿದ್ದು, ಅಂಬರೀಶ್ ಅವರಿಗೆ ತುಂಬಾ ಪ್ರೀತಿ. ನೀವೇನು ನಮ್ಮನ್ನು ಕರೆಯೋದು, ನಾನು ಬಂದು ಏನು ಮಾಡಬೇಕು ಎಂದು ನಿಮ್ಮನ್ನು ಕೇಳಬೇಕು ಅನ್ನೋ ಮಾತು ಹೇಳಿದ್ರು. ಇಂತಹ ಒಂದು ಕುಟುಂಬ, ಇಂತಹ ಮಕ್ಕಳು ಪಡೆಯಲು ನಾನು ಪುಣ್ಯ ಮಾಡಿರಬೇಕು ಎಂದರು.

  • ಮಂಡ್ಯ ಜನರ ಒತ್ತಾಯಕ್ಕೆ ಮಣಿದು ಕಣಕ್ಕೆ ಇಳಿದಿದ್ದೇನೆ: ಸುಮಲತಾ ಘೋಷಣೆ

    ಮಂಡ್ಯ ಜನರ ಒತ್ತಾಯಕ್ಕೆ ಮಣಿದು ಕಣಕ್ಕೆ ಇಳಿದಿದ್ದೇನೆ: ಸುಮಲತಾ ಘೋಷಣೆ

    – ಸುದ್ದಿಗೋಷ್ಠಿಗೆ ದರ್ಶನ್, ಯಶ್ ಸಾಥ್
    – ಅಂಬಿ ಕನಸನ್ನು ನನಸು ಮಾಡಲು ಅವಕಾಶ ನೀಡಿ

    ಬೆಂಗಳೂರು: ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಮಂಡ್ಯ ಕ್ಷೇತ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದು, ಇತ್ತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಶ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

    ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಜನ ಅಂಬರೀಶ್ ಮೇಲಿಟ್ಟಿದ್ದ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಲು ಅವರ ಒತ್ತಾಯದಂತೆ ಸೇವೆ ಮಾಡಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.

    ಅಂಬರೀಶ್ ನೆನೆದು ಭಾವುಕರಾಗಿಯೇ ಮಾತು ಆರಂಭಿಸಿದ ಸುಮಲತಾ, ಜೀವನದಲ್ಲಿ ಕೆಲವು ಕ್ಷಣವನ್ನು ನಾವು ಹುಡುಕಿಕೊಂಡು ಹೋಗಿ ಏನೇನು ಮಾಡಬೇಕೆನ್ನುವ ನಿರ್ಧಾರ ಮಾಡುತ್ತೇವೆ. ಆದರೆ ಒಂದೊಂದು ಸಲ ಆ ಕ್ಷಣಗಳೇ ನಮ್ಮನ್ನು ಹುಡುಕಿಕೊಂಡು ಬಂದು ಅದೇ ನಿರ್ಧಾರ ಮಾಡುತ್ತದೆ. ಈಗ ಆ ಸಮಯ ಬಂದಿದೆ ಎಂದು ಹೇಳಿದ್ರು.

    ಅಂಬರೀಶ್ ಸಾವಿನಿಂದ ನೊಂದಿದ್ದೆ. ಆ ಸಂದರ್ಭದಲ್ಲಿ ಸ್ನೇಹಿತರು ಕುಟುಂಬಸ್ಥರು ಎಲ್ಲರೂ ನನ್ನ ಜೊತೆ ಇದ್ದರು. ಆದರೂ ಮನಸ್ಸಿಗೆ ಸಮಾಧಾನ ಇರುತ್ತಿರಲಿಲ್ಲ. ಈ ಒಂದು ಮನಸ್ಥಿತಿಯಿಂದ ಹೊರಗೆ ಬರುತ್ತೀನೋ ಇಲ್ಲವೋ ಎಂಬ ಪರಿಸ್ಥಿತಿಯಲ್ಲಿದ್ದೆ. ಅಂಬರೀಶ್ ಬದುಕಿದ್ದಾಗ ಅವರ ಜೊತೆ 24 ಗಂಟೆಯೂ ಸ್ನೇಹಿತರಿದ್ದರು. ಯಾವತ್ತೂ ಅವರು ನಾನು, ನನ್ನ ಕುಟುಂಬ, ನನ್ನ ಮನೆ ಎಂದು ಯೋಚನೆ ಮಾಡಿದವರಲ್ಲ. ಆದರೆ ಅವರು ಹೋದ ಬಳಿಕ ಒಂದಷ್ಟು ಜನ ಕಾಣಲಿಲ್ಲ. ಆದ್ರೆ ಆ ಸಮಯದಲ್ಲಿ ನನಗೆ ಧೈರ್ಯ ತುಂಬಲು ನಾವು ನಿಮ್ಮ ಜೊತೆ ಇದ್ದೇವೆ. ನಿಮ್ಮ ನೋವನ್ನು ನಾವು ಹಂಚಿಕೊಳ್ಳಬೇಕು. ಯಾಕಂದ್ರೆ ನಿಮಗಾಗಿರುವ ನೋವು ನಮಗೂ ಆಗಿದೆ. ನಮ್ಮದು ಅದೇ ಮನಸ್ಥಿತಿ ಎಂದು ಹೇಳಿಕೊಂಡು ಮಂಡ್ಯದ ಅಭಿಮಾನಿಗಳ ನಮ್ಮ ಬಳಿ ಬಂದರು ಎಂದು ಭಾವುಕರಾದರು.

    ಅಂಬರೀಶ್ ಅವರನ್ನು ಜನ ಎಷ್ಟು ಪ್ರೀತಿ ಮಾಡುತ್ತಿದ್ದರೆಂದು ನನಗೆ ಗೊತ್ತಿತ್ತು. ಆದ್ರೆ ಅವರ ಹೋದ ಮೇಲೆಯೂ ನನ್ನ ಹಾಗೂ ಅಭಿಷೇಕ್ ಮೇಲೆ ಇಷ್ಟೊಂದು ಪ್ರೀತಿ ಇಟ್ಟುಕೊಂಡು ಇನ್ನೂ ನಮ್ಮ ಹತ್ತಿರ ಬರುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಆ ಸಮಯದಲ್ಲಿ ಇಂದು ಚೂರು ಸಮಾಧಾನ ನನ್ನ ಮನಸ್ಸಿಗೆ ಸಿಕ್ಕಿತ್ತು. ಅಭಿಮಾನಿಗಳ ಪ್ರೀತಿ ವಿಶ್ವಾಸ ಕಳೆದುಕೊಳ್ಳಲು ನಮಗೂ ಇಷ್ಟವಿಲ್ಲ. ನಾವು ಜೀವಂತ ಇರೋವರೆಗೂ ಈ ಪ್ರೀತಿ ಇದ್ದೇ ಇರುತ್ತದೆ ಅನ್ನುವ ಮಾತನ್ನು ನಾನು ಹೇಳಿದ್ದೆ. ಆದ್ರೆ ಪ್ರೀತಿ ಸಂಬಂಧ ಇದ್ದೇ ಇರುತ್ತದೆ. ಅಂದ್ರೆ ನೀವು ಬಂದಾಗ ನಾವು, ನಾವು ಬಂದಾಗ ನೀವು ಮಾತಾಡಿಸುತ್ತೀರಿ ಅಷ್ಟೆ. ಆದ್ರೆ ನಿಮ್ಮ ಸೇವೆಯೂ ನಮಗೆ ಬೇಕಿದೆ ಎಂದು ಹೇಳಿದ್ರು ಅಂದ್ರು.

    ಅಂಬರೀಶ್ ಅವರು ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಹೋಗಿದ್ದಾರೆ. ಆ ಕೆಲಸಗಳನ್ನು ಮಂದುವರಿಸುವುದಕ್ಕೆ ನೀವೇ ಮುಂದಾಗಬೇಕು. ಅವರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿಯನ್ನು ನೀವೇ ಹೊರಬೇಕು ಎಂದು ಸಾವಿರಾರು ಜನ ಹೇಳಿದ್ರು ಎಂದು ತಿಳಿಸಿದ್ರು.

    ನಾನು ರಾಜಕಾರಣಿ ಅಲ್ಲ, ಅದರ ಬಗ್ಗೆಯೂ ಗೊತ್ತಿಲ್ಲ. 2-3 ವಾರಗಳಿಂದ ಮಂಡ್ಯದ ಹಲವಾರು ಊರು ಹಾಗೂ ಜನರನ್ನು ಭೇಟಿ ಮಾಡಿ ನನ್ನಿಂದ ಏನನ್ನು ಬಯಸುತ್ತೀರಾ ಎಂದು ಕೇಳಿದ್ದೆ. ಅವರೆಲ್ಲರದ್ದೂ ಒಂದೇ ಮಾತಾಗಿತ್ತು. ಯಾವುದೇ ಕಾರಣಕ್ಕೂ ಅಂಬರೀಶ್ ಅಣ್ಣನ ಪ್ರೀತಿಯನ್ನು ಕಳೆದುಕೊಳ್ಳಲು ನಾವು ರೆಡಿ ಇಲ್ಲ ಎಂಬುದಾಗಿತ್ತು. ನಿಮ್ಮ ಮೂಲಕ ನಾವು ಮತ್ತೆ ಅಂಬರೀಶ್ ಅಣ್ಣನ ಸ್ಥಾನವನ್ನು ತುಂಬಿದ್ರೆ ನಮಗೂ ಒಳ್ಳೆಯದಾಗುತ್ತೆ ಅಂತ ಹೇಳಿದ್ರು. ಹೀಗಾಗಿ ನನಗೆ ಹತ್ತಿರದವರೆಲ್ಲರನ್ನು ಕರೆದು ಸಲಹೆ ಪಡೆದೆ. ಆದ್ರೆ ಎಲ್ಲರೂ ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು ಅಂದ್ರು ಎಂದು ಸುಮಲತಾ ಹೇಳಿದ್ರು.

    ಅಂಬರೀಶ್ ಪ್ರೀತಿ ವಿಶ್ವಾಸ ಉಳಿಸಿಕೊಳ್ಳಲು ಅಂಬರೀಶ್ ಅಭಿಮಾನಿಗಳ ಮಾತು ಕೇಳಬೇಕು ಅನಿಸಿತ್ತು. ಈ ನನ್ನ ನಿರ್ಧಾರ ಇಂದು ಕೆಲವರಿಗೆ ಇಷ್ಟ ಆಗದೇ ಇರಬಹುದು, ಇನ್ನು ಕೆಲವರಿಗೆ ಅನುಕೂಲ ಇಲ್ಲದೇ ಇರಬಹುದು. ಆದ್ರೆ ಅಂಬರೀಶ್ ಅವರ ಮೇಲೆ ಇಟ್ಟಿರುವ ಪ್ರೀತಿ ಹಾಗೂ ವಿಶ್ವಸಾ ಕಾಪಾಡಿಕೊಳ್ಳಲು ಇಂದು ನಾನು ಈ ನಿರ್ಧಾರಕ್ಕೆ ಬಂದಿರೋದಾಗಿ ಹೇಳಿದ್ರು.

    ಇದರಿಂದ ಒಂದಷ್ಟು ಸಂಬಂಧ ಹಾಗೂ ಸ್ನೇಹಗಳು ದೂರ ಆಗಿದೆ. ಆದ್ರೆ ನಾನು ತೆಗೆದುಕೊಂಡ ನಿರ್ಧಾರ ಯಾರನ್ನು ದೂರ ಮಾಡುವುದಕ್ಕಲ್ಲ. ಈ ಹೆಜ್ಜೆ ಹಾಕೋದಕ್ಕೆ ನನಗೆ ಬೇಕಾದಷ್ಟು ಧೈರ್ಯ, ಆತ್ಮಸ್ಥೈರ್ಯ ಬೇಕಾಗಿತ್ತದೆ. ಅದನ್ನು ನನಗೆ ಜನ ಕೊಟ್ಟಿದ್ದಾರೆ ಎಂದರು.

    ಪುತ್ರ ಅಭಿಷೇಕ್ ರೊಂದಿಗೆ ಸುಮಲತಾ ಅವರಿಗೆ ನಟ ಯಶ್, ದರ್ಶನ್, ದೊಡ್ಡಣ್ಣ ಹಾಗೂ ರಾಕ್‍ಲೈನ್ ವೆಂಕಟೇಶ್ ಸಾಥ್ ನೀಡಿದ್ರು.

  • ಹೊಂದಾಣಿಕೆಯಾಗದಿದ್ದರೆ ಚುನಾವಣೆಯಲ್ಲಿ ಫಲಿತಾಂಶ ಸಿಗಲ್ಲ- ಕೆಪಿಸಿಸಿ ಉಪಾಧ್ಯಕ್ಷ ಭವಿಷ್ಯ

    ಹೊಂದಾಣಿಕೆಯಾಗದಿದ್ದರೆ ಚುನಾವಣೆಯಲ್ಲಿ ಫಲಿತಾಂಶ ಸಿಗಲ್ಲ- ಕೆಪಿಸಿಸಿ ಉಪಾಧ್ಯಕ್ಷ ಭವಿಷ್ಯ

    ಹಾಸನ: ರಾಜ್ಯಾದ್ಯಂತ ಎರಡೂ ಪಕ್ಷಗಳ ಕಾರ್ಯಕರ್ತರ ಜಂಟಿ ಸಭೆಗಳನ್ನು ನಡೆಸಿಲ್ಲ. ಸರಿಯಾಗಿ ಹೊಂದಾಣಿಕೆ ಆಗದೇ ಇದ್ದರೆ ಹೈಕಮಾಂಡ್ ನಿರೀಕ್ಷೆಯಂತೆ ಚುನಾವಣೆಯಲ್ಲಿ ಫಲಿತಾಂಶ ಸಿಗುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಹೊಂದಾಣಿಕೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲದ ಜಿಲ್ಲೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸ್ಥಿತಿ ದಯನೀಯವಾಗಿದೆ. ರಾಜ್ಯದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ಜಂಟಿ ಸಭೆಗಳನ್ನು ನಡೆಸಿಲ್ಲ. ಹೀಗಾಗಿ ಸರಿಯಾಗಿ ಹೊಂದಾಣಿಕೆ ಆಗದಿದ್ದಲ್ಲಿ ಹೈಕಮಾಂಡ್ ನಿರೀಕ್ಷೆಯಂತೆ ಚುನಾವಣೆಯಲ್ಲಿ ಫಲಿತಾಂಶ ಸಿಗುವುದು ಕಷ್ಟ ಎಂದು ಹೇಳಿದ್ರು.

    ನಮ್ಮ ಪಕ್ಷದಲ್ಲಿ ಎಲ್ಲ ಅಧಿಕಾರ ಅನುಭವಿಸಿದ ಮಾಜಿ ಸಚಿವ ಎ.ಮಂಜು ಪಕ್ಷಕ್ಕೆ ದ್ರೋಹ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಶ್ವಾಸವನ್ನೂ ಎ ಮಂಜು ಉಳಿಸಿಕೊಳ್ಳಲಿಲ್ಲ. ಇದನ್ನು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು. ಎ.ಮಂಜುಗೆ ಪಕ್ಷಾಂತರ ಹೊಸದಲ್ಲ. ಈ ಹಿಂದೆಯೂ ಅವರು ಮೂರು ಬಾರಿ ಪಕ್ಷಾಂತರ ಮಾಡಿದ್ದಾರೆ ಎಂದು ಕಾಲೆಳೆದರು.

    ಈ ರೀತಿಯ ಪಕ್ಷಾಂತರಗಳಿಗೆ ಕಾಂಗ್ರೆಸ್ ನಲ್ಲಿ ಬೆಲೆ ಮತ್ತು ಗೌರವ ಕೊಡ್ತಾರೆ. ನಿಷ್ಠಾವಂತರಿಗೆ ಗೌರವ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಎ.ಮಂಜು ಜಿಲ್ಲೆಯಾದ್ಯಂತ ನಡೆಸುತ್ತಿರುವ ಸಭೆಗಳಲ್ಲಿ ಭಾಗವಹಿಸುತ್ತಿರುವ ಜನಪ್ರತಿನಿಧಿಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಶಿವರಾಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಶೀಘ್ರವೇ ಶಿಸ್ತುಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

  • ಅಂಬಿ ಸಾಧನೆ, ಜನರ ಪ್ರೀತಿ ಸುಮಲತಾ ಕೈ ಹಿಡಿಯುತ್ತೆ- ಜಗ್ಗೇಶ್

    ಅಂಬಿ ಸಾಧನೆ, ಜನರ ಪ್ರೀತಿ ಸುಮಲತಾ ಕೈ ಹಿಡಿಯುತ್ತೆ- ಜಗ್ಗೇಶ್

    ರಾಯಚೂರು: ನಟಿ ಸುಮಲತಾ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ನಂಬಿಕೆಯಿದೆ. ಅಂಬರೀಶ್ ಸಾಧನೆ, ಜನರ ಪ್ರೀತಿ ಸುಮಲತಾ ಅವರ ಕೈ ಹಿಡಿಯುತ್ತೆ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದಾರೆ.

    56 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ನವರಸನಾಯಕ ಜಗ್ಗೇಶ್ ಪ್ರತೀ ವರ್ಷದಂತೆ ಈ ಬಾರಿಯೂ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಈ ವೇಳೆ ಮಂತ್ರಾಲಯದಲ್ಲಿ ಮಾತನಾಡಿದ ಅವರು, ಎಷ್ಟೇ ದೇವಸ್ಥಾನಗಳಿಗೆ ಹೋದರು ರಾಯರ ದರ್ಶನ ಪಡೆದರೆ ಮಾತ್ರ ಸಮಾಧಾನ ಆಗುತ್ತೆ ಎಂದರು.

    ರಾಜಕೀಯ ವಿಚಾರವಾಗಿ ಸಮಲತಾ ಸ್ಪರ್ಧೆ ಕುರಿತು ಮಾತನಾಡಿ, ರಾಜಕೀಯ ಹೊರತುಪಡಿಸಿ ಅಂಬರೀಶ್ ಅವರ ಜೊತೆ 30 ವರ್ಷಗಳ ಸಂಬಂಧವಿದೆ. ಯಾವತ್ತೂ ಕೂಡ ಅವರ ಕುಟುಂಬಕ್ಕೆ ಒಳಿತನ್ನೇ ಬಯಸುತ್ತೇನೆ. ಸುಮಲತಾ ಅವರು ಸರಿಯಾದ ಸಮಯಕ್ಕೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ನಂಬಿಕೆಯಿದೆ. ಅಂಬರೀಶ್ ಸಾಧನೆ, ಜನರ ಪ್ರೀತಿ ಸುಮಲತಾ ಅವರ ಕೈ ಹಿಡಿಯುತ್ತೆ ಎಂದರು.

    ನಟರು ಊಟಕ್ಕಾಗಿ ಬಣ್ಣಹಚ್ಚಿದ್ರೆ ರಾಜಕಾರಣಿಗಳು ವೋಟಿಗಾಗಿ ಬಣ್ಣ ಹಚ್ಚುತ್ತಾರೆ. ಬಣ್ಣ ಹಾಕಿಕೊಳ್ಳುವ ರಾಜಕಾರಣಿಗಳ ಬಣ್ಣ ಜನ ತೆಗೀತಾರೆ. ರಾಜಕಾರಣಿಗಳು ಮಾನ, ಮರ್ಯಾದೆ ಕೆಡಿಸಿಕೊಂಡಿದ್ದೇವೆ. ಅದರಲ್ಲಿ ಯಾರೂ ಉತ್ತಮರು ಅನ್ನೋದನ್ನ ಜನ ನಿರ್ಣಯ ಮಾಡುತ್ತಾರೆ ಎಂದರು.

    ಸ್ವಹಿತಾಸ್ತಕಿಗೆ ಮಹಾಘಟಬಂಧನ್ ಮಾಡಿಕೊಳ್ಳಲಾಗಿದೆ. ಅಭಿವೃದ್ಧಿ ಭಾರತವನ್ನ ನೋಡಬೇಕು ಅಂದ್ರೆ ಮೋದಿಗೆ ಅಧಿಕಾರ ಕೊಡಬೇಕು ಎಂದು ಜಗ್ಗೇಶ್ ಹೇಳಿದರು.

  • ಸಂಸದ ಮುನಿಯಪ್ಪ ವಿರುದ್ಧ ಎದ್ದಿದೆ ಬೃಹತ್ ಆಂದೋಲನ

    ಸಂಸದ ಮುನಿಯಪ್ಪ ವಿರುದ್ಧ ಎದ್ದಿದೆ ಬೃಹತ್ ಆಂದೋಲನ

    ಕೋಲಾರ: ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಬೃಹತ್ ಆಂದೋಲನಗಳೇ ಶುರುವಾಗಿದೆ. ಒಂದು ಕಡೆ ಟಿಕೆಟ್ ತಪ್ಪಿಸಲು ಸ್ವಪಕ್ಷೀಯರೇ ಹೈಕಮಾಂಡ್‍ಗೆ ಒತ್ತಡ ಹಾಕುತ್ತಿದ್ರೆ, ಸರ್ಕಾರಿ ಭೂಮಿ ಕಬಳಿಕೆ ಹಾಗೂ ಬೇನಾಮಿ ಉರುಳು ಸುತ್ತಿಕೊಂಡಿದೆ. ಮತ್ತೆ ಕೆ.ಎಚ್.ಹಠಾವೋ ಕೋಲಾರ ಬಚಾವೋ ಆಂದೋಲನ ಜೀವ ಪಡೆದುಕೊಂಡಿದೆ.

    ಈಗಾಗಲೇ ಶತಾಯಗತಾಯ ಸಂಸದ ಮುನಿಯಪ್ಪಗೆ ಟಿಕೆಟ್ ನೀಡಬಾರದೆಂದು ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಕಳೆದ ಅಕ್ಟೋಬರ್ ನಿಂದಲೆ ಕೆ.ಎಚ್.ಹಠಾವೋ ಆಂದೋಲನ ಶುರುವಾಗಿದೆ. ಈ ಮಧ್ಯೆ ಮೀಸಲಾತಿ ಬಳಸಿಕೊಂಡು ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಕೋಟ್ಯಂತರ ರೂಪಾಯಿ ಸರ್ಕಾರಿ ಜಮೀನು ಕಬಳಿಕೆ ಹಾಗೂ ಬೇನಾಮಿ ಆಸ್ತಿ ಮಾಡಿರುವ ದಾಖಲೆಗಳನ್ನ ದಲಿತ ಮುಖಂಡರು ಬಿಡುಗಡೆ ಮಾಡಿದ್ರು. ತಮ್ಮ ಕಟುಂಬದ ಏಳಿಗೆಗಾಗಿ ಹಾಗೂ ದಲಿತರ ಮೀಸಲಾತಿಯನ್ನ ಬಳಸಿಕೊಂಡು ದಲಿತರನ್ನ ವಂಚಿಸಲು ಕಳೆದ 28 ವರ್ಷಗಳ ಅಧಿಕಾರವಧಿಯನ್ನು ಮಿಸಲಿಟ್ಟಿದ್ದಾರೆಂದು ಆರೋಪಿಸಿದ್ರು.

    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗೊರಮಿಲ್ಲಹಳ್ಳಿಯಲ್ಲಿ ನಿರ್ಗತಿಕರು ಎಂದು ನಾಲ್ಕು ಎಕರೆ ಜಮೀನನ್ನ ಮಂಜೂರು ಮಾಡಿಸಿಕೊಂಡು ನಂತರ ತಮ್ಮ ಅಧಿಕಾರ ಬಳಸಿಕೊಂಡು ಸುಮಾರು 410 ಎಕರೆ ಸರ್ಕಾರಿ ಗೋಮಾಳ ಹಾಗೂ ಖರಾಬ್ ಜಮೀನನ್ನ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ದಲಿತ ವಿರೋಧಿ ಹಾಗೂ ದಲಿತರಿಗೆ ಮೋಸ ಮಾಡಿದ ಸಂಸದ ಮುನಿಯಪ್ಪ ವಿರುದ್ಧ ಪ್ರತಿ ಹಳ್ಳಿಯಲ್ಲೂ ಜನಾಂದೋಲನವನ್ನ ಮಾಡುವ ಮೂಲಕ ಸೋಲಿಸುವಂತೆ ಮನವಿ ಮಾಡಲಾಗುವುದು ಎಂದು ಎಚ್ಚರಿಸಿದ್ರು.

    ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಮಂಜೇನಹಳ್ಳಿ ಹಾಗೂ ವೆಂಕಟಾಲ ಗ್ರಾಮದ ಬಳಿ 9 ರಿಂದ 56 ಸರ್ವೆ ನಂ.33 ದಲಿತರಿಗೆ ಸರ್ಕಾರ ಮಂಜೂರು ಮಾಡಿರುವ ಜಮೀನನ್ನ ಕಬಳಿಸಿದ್ದಾರೆ ಎನ್ನಲಾಗಿದೆ. ದಲಿತರನ್ನ ಯಾಮಾರಿಸಿ ಸಂಸದ ಕೆ.ಎಚ್. ಬಂಟ ಮುಳಬಾಗಿಲಿನ ರಾಮಪ್ರಸಾದ್ ಎಂಬವರ ಹೆಸರಿಗೆ 20 ಎಕರೆಯನ್ನ ಮಂಜೂರು ಮಾಡಿಸಿ ಬೇನಾಮಿ ಮಾಡಿದ್ದಾರೆ. ಯಾರಿಗೂ ಪರಭಾರೆ ಮಾಡಬಾರದು ಎಂದು ಎಸಿ ಆದೇಶವನ್ನ ಲೆಕ್ಕಿಸದೆ ಜಗಜೀವನ್ ರಾಂ ಹೆಸರಿನಲ್ಲಿ ಮೆಡಿಕಲ್ ಸಂಸ್ಥೆಯನ್ನ ಸ್ಥಾಪನೆ ಮಾಡೋಣ ಎಂದು ಅಲ್ಲಿನ ದಲಿತರನ್ನ ನಂಬಿಸಿ ಇನ್ನುಳಿದ ಮೂವತ್ತು ಎಕರೆಯನ್ನ ಅಗ್ರಿಮೆಂಟ್ ಹಾಕಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಸಂಸದರ ಸರ್ಕಾರಿ ಭೂಕಬಳಿಕೆಯನ್ನ ವಿರೋಧಿಸಿ ಕೋಲಾರದ ಸರ್ಕಾರಿ ಬಸ್ ನಿಲ್ದಾಣದ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟಮುನಿಯಪ್ಪ ನೇತೃತ್ವದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡಿದ್ರು. ಸಂಸದ ಮುನಿಯಪ್ಪ ಪ್ರತಿಕೃತಿ ದಹಿಸಿ ಸಿಬಿಐ ತನಿಖೆಯಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯ ಮಾಡಿದ್ರು. ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಸಂಸದರ ವಿರುದ್ಧ ದೂರು ನೀಡಲು ಮುಂದಾಗಿದ್ದು, ಸರ್ಕಾರ ಹಾಗೂ ಶಿಡ್ಲಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಒಟ್ಟಿನಲ್ಲಿ ಸೋಲಿಲ್ಲದ ಸರದಾರ ಏಳು ಬಾರಿ ಸಂಸದರಾಗಿರುವ ಕೆ.ಎಚ್.ಮುನಿಯಪ್ಪಗೆ ಬಂಡಾಯ, ಬೇನಾಮಿ, ಸರ್ಕಾರಿ ಭೂ ಕಬಳಿಕೆ ನುಂಗಲಾರದ ತುತ್ತಾಗಿದೆ. ಇದು ಮುನಿಯಪ್ಪ ಎಂಟನೇ ಗೆಲುವಿಗೆ ಕಂಟಕವಾಗುತ್ತಾ, ಇಲ್ಲ ಎಂದಿನಂತೆ ಡ್ಯಾಮೇಜ್ ಕಂಟ್ರೋಲ್ ಮಾಡಿ ಸಂಸತ್ ಪ್ರವೇಶ ಮಾಡ್ತಾರ ಅನ್ನೋದನ್ನ ಕಾದು ನೋಡಬೇಕಾಗಿದೆ.

  • ಹಾಸನದಲ್ಲಿ ಆರಂಭವಾಗಿದೆ ಪಕ್ಷಾಂತರ ಪರ್ವ..!

    ಹಾಸನದಲ್ಲಿ ಆರಂಭವಾಗಿದೆ ಪಕ್ಷಾಂತರ ಪರ್ವ..!

    ಹಾಸನ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹಾಸನದಲ್ಲಿ ರಾಜಕೀಯ ಗರಿಗೆದರಿದೆ. ಒಂದು ಕಡೆ ಮಾಜಿ ಸಚಿವ ಎ.ಮಂಜು ಬಿಜೆಪಿ ಶಾಸಕ ಪ್ರೀತಮ್ ಗೌಡ ಮನೆಗೆ ಭೇಟಿ ನೀಡಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಈ ಬೆನ್ನಲ್ಲೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಸನದ ಬಿಜೆಪಿ ನಗರಸಭಾ ಸದಸ್ಯರನ್ನ ಜೆಡಿಎಸ್ ಗೆ ಸೆಳೆದಿದ್ದು, ಪಕ್ಷಾಂತರ ಪರ್ವ ಆರಂಭವಾಗಿದೆ.

    ಹಾಸನ ಜಿಲ್ಲೆಯು ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆದಿದ್ದು, ಈಗಿನ ಚುನಾವಣೆ ಭಾರೀ ಜಿದ್ದಾಜಿದ್ದಿ ಲಕ್ಷಣಗಳು ಕಂಡುಬಂದಿದೆ. ಬಿಜೆಪಿಯಿಂದ ಮಾಜಿ ಸಚಿವ ಎ.ಮಂಜು ಸ್ಪರ್ಧಿಸಲಿದ್ದು ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ. ಅತ್ತ ಜೆಡಿಎಸ್ ನಿಂದ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾಗಿರುವುದರಿಂದ ಭಾರೀ ಜಿದ್ದಾಜಿದ್ದಿ ಪಡೆದಿದೆ.

    ಬೆಳಗ್ಗೆ ಮಾಜಿ ಸಚಿವ ಎ.ಮಂಜು ಶಾಸಕ ಪ್ರೀತಮ್ ಗೌಡ ಮನೆಗೆ ಭೇಟಿ ನೀಡಿ ಉಪಹಾರ ಕೂಟದಲ್ಲಿ ಭಾಗಿಯಾಗಿ ಬಿಜೆಪಿ ಸೇರುವ ಬಗ್ಗೆ ಚರ್ಚೆ ನಡೆಸಿದ್ರು. ಬಿಜೆಪಿ ಕಾರ್ಯಕರ್ತರು ಕೂಡ ಎ.ಮಂಜುಗೆ ಸ್ವಾಗತ ಕೋರಿದ್ರು. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಎರಡು ದಿನಗಳಲ್ಲಿ ನಿರ್ಧಾರ ಮಾಡಿ ಸೋಮವಾರ ಬಿಜೆಪಿ ಸೇರ್ಪಡೆ ಬಗ್ಗೆ ಘೋಷಣೆ ಮಾಡುವುದಾಗಿ ಎ ಮಂಜು ಹೇಳಿದ್ದಾರೆ.

    ಮಾಜಿ ಸಚಿವ ಎ.ಮಂಜು ಬಿಜೆಪಿ ಶಾಸಕನ ಮನೆಗೆ ಭೇಟಿ ನೀಡಿದ ಬಳಿಕ ಮಧ್ಯಾಹ್ನ ಪ್ರಜ್ವಲ್ ರೇವಣ್ಣ ಬಿಜೆಪಿಯ 13ನೇ ವಾರ್ಡ್ ನ ನಗರಸಭಾ ಸದಸ್ಯ ಮಂಜುರನ್ನ ಬಿಜೆಪಿಗೆ ಸೆಳೆದ್ರು. ನಗರಸಭಾ ಸದಸ್ಯ ಮಂಜುರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿ ಚುನಾವಣೆ ಬಗ್ಗೆ ಚರ್ಚಿಸಿದ್ರು. ಹಾಸನದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಕೆಲವು ಬಿಜೆಪಿ ಮತ್ತು ಕಾಂಗ್ರೆಸ್ ನ ಘಟಾನುಘಟಿ ನಾಯಕರು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಪಜ್ವಲ್ ರೇವಣ್ಣ ಹೇಳಿದ್ದಾರೆ. ಮಾಜಿ ಶಾಸಕ ದಿವಂಗತ ಹೆಚ್.ಎಸ್.ಪ್ರಕಾಶ್ ರ ಮನೆಗೆ ಭೇಟಿ ನೀಡಿ ಪ್ರಕಾಶ್ ರ ಪುತ್ರ ಸ್ವರೂಪ್ ಜೊತೆ ಚುನಾವಣೆ ಬಗ್ಗೆ ಚರ್ಚಿಸಿದ್ರು. ಬಳಿಕ ಮಾತನಾಡಿದ ಪ್ರಜ್ವಲ್ 22 ರಂದು ಶುಕ್ರವಾರ ಬೆಳಗ್ಗೆ 9 ಗಂಟೆಯ ನಂತರ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ


    ಹಾಸನ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಯಾರು ಯಾವ ಪಕ್ಷ ಸೇರುತ್ತಾರೆ ಯಾರು ಯಾವ ಅಭ್ಯರ್ಥಿ ಪರ ಇದ್ದಾರೆ ಎಂಬುದು ಭಾರೀ ನಿಗೂಢವಾಗಿದೆ. ಒಂದು ಕಡೆ ಮಾಜಿ ಸಚಿವ ಎ.ಮಂಜು ಮತ್ತೊಂದು ಕಡೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಿದ್ದು, ಮತದಾರ ಯಾವ ಅಭ್ಯರ್ಥಿಗೆ ಮಣೆ ಹಾಕುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.