Tag: loksabha elections 2019

  • ಬಿಜೆಪಿಯವರು ಇಂಗು ತಿಂದ ಮಂಗನಂತಾಗಿದ್ದಾರೆ: ಸಿದ್ದರಾಮಯ್ಯ

    ಬಿಜೆಪಿಯವರು ಇಂಗು ತಿಂದ ಮಂಗನಂತಾಗಿದ್ದಾರೆ: ಸಿದ್ದರಾಮಯ್ಯ

    – ಕಾಂಗ್ರೆಸ್‍ನಲ್ಲಿ ಭಿನ್ನಮತವಿಲ್ಲ

    ಬೆಂಗಳೂರು: ಬಿಜೆಪಿಯವರು ಕಳೆದ ಒಂದು ವರ್ಷದಿಂದ ಇಂಗು ತಿಂದ ಮಂಗನಂತಾಗಿದ್ದಾರೆ. ಇನ್ನುಮುಂದೆ ಪ್ರಯತ್ನ ಮಾಡಿದರೆ ಮೂರ್ಖರಾಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಯ ಬಳಿಕ ಮಾತನಾಡಿದ ಮಾಜಿ ಸಿಎಂ, ಕಾಂಗ್ರೆಸ್‍ನಲ್ಲಿ ಯಾವುದೇ ಅಸಮಾಧಾನವಿಲ್ಲ. ಪಕ್ಷದ ಎಲ್ಲ ಶಾಸಕರು ಒಗ್ಗಟ್ಟಿನಿಂದ ಇದ್ದೇವೆ. ಮೈತ್ರಿ ಸರ್ಕಾರ ಕಲ್ಲು ಬಂಡೆಯಂತೆ ನಿಂತಿದೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.

    ಪಕ್ಷದ ಅನೇಕ ಶಾಸಕರು ಸಭೆಗೆ ಹಾಜರಾಗಿದ್ದಾರೆ. ಕೆಲವರು ನನ್ನ ಒಪ್ಪಿಗೆ ತೆಗೆದುಕೊಂಡು ಸಭೆಗೆ ಗೈರು ಆಗಿದ್ದಾರೆ. ಶಾಸಕ ರಾಮಲಿಂಗಾರೆಡ್ಡಿ ಅವರು ವಿದೇಶದಲ್ಲಿದ್ದಾರೆ. ಸುಬ್ಬಾರೆಡ್ಡಿ, ರಾಜಶೇಖರ್ ಪಾಟೀಲ್ ಚುನಾವಣೆಯಿಂದ ಬಂದಿಲ್ಲ. ಮಾಜಿ ಸಚಿವರಾದ ರೋಷನ್ ಬೇಗ್ ಹಾಗೂ ರಮೇಶ್ ಜಾರಕಿಹೊಳಿ ಅವರು ಸಭೆಗೆ ಯಾಕೆ ಬಂದಿಲ್ಲ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಅವರು ಗೈರಿನ ಬಗ್ಗೆ ಅನುಮತಿ ಕೇಳಿಲ್ಲ. ಆದರೂ ಅವರು ಎಲ್ಲಿಯೂ ಹೋಗಿಲ್ಲ ಎಂದು ತಿಳಿಸಿದರು.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬರೇ ಸೋಲಿಗೆ ಹೊಣೆಯಲ್ಲ. ನಾವೆಲ್ಲರೂ ಹೊಣೆಯನ್ನು ಹೊರುತ್ತೇವೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದ ಅವಶ್ಯಕತೆಯಿದೆ. ಶೇ. 20ರಷ್ಟು ಮತ ಕಾಂಗ್ರೆಸ್‍ಗೆ ಬಂದಿದೆ. ಸೋಲುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಅಸ್ಥಿತ್ವ ಮುಗಿದಂತೆ ಅಲ್ಲ. ಹಿಂದೆಯೂ ಪಕ್ಷ ಸೋತು, ಮತ್ತೆ ಮೇಲೆದ್ದು ಬಂದಿತ್ತು. ಹೀಗಾಗಿ ನಾವೆಲ್ಲರೂ ರಾಹುಲ್ ಗಾಂಧಿ ಅವರ ಬೆನ್ನಿಗೆ ನಿಂತಿದ್ದೇವೆ ಎಂದರು.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಸಭೆಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನಡೆ ಬಗ್ಗೆ ಚರ್ಚೆ ಮಾಡಲಾಗಿದೆ. ಸರ್ಕಾರವನ್ನು ಅಸ್ಥಿರ ಮಾಡಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಇದನ್ನು ಎದುರಿಸಲು ನಾವೆಲ್ಲರೂ ಸಿದ್ಧರಾಗಿದ್ದೇವೆ. ಮೈತ್ರಿ ಸರ್ಕಾರದಿಂದ ಹೆಚ್ಚಿನ ಕಾರ್ಯಕ್ರಮಗಳು ಜಾರಿಯಾಲಿವೆ. ಈ ಮೂಲಕ ಜನರ ಮನಸ್ಸನ್ನು ಮತ್ತೆ ಗೆಲ್ಲುವ ಎಲ್ಲ ಪ್ರಯತ್ನ ನಡೆಸುತ್ತೇವೆ ಎಂದು ತಿಳಿಸಿದರು.

    ಶಾಸಕಾಂಗ ಪಕ್ಷದ ಸಭೆಗೆ ಶಾಸಕರಾದ ಕುಸುಮ ಶಿವಳ್ಳಿ, ಸಚಿವ ಕೆ.ಜೆ ಜಾರ್ಜ್, ಖನೀಸಾ ಫಾತಿಮಾ, ವಿ.ಮುನಿಯಪ್ಪ, ಅಂಜಲಿ ನಿಂಬಾಳ್ಕರ್, ಭೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್, ಮಹೇಶ್ ಕುಮಟಳ್ಳಿ, ಪ್ರಸಾದ್ ಅಬ್ಬಯ್ಯ, ಎಸ್.ಟಿ,ಸೋಮಶೇಖರ್, ಆನಂದ್ ಸಿಂಗ್, ಶಾಸಕ ಪ್ರತಾಪ್ ಗೌಡ ಪಾಟೀಲ್, ಶಿವರಾಂ ಹೆಬ್ಬಾರ್, ಬಸವನಗೌಡ ದದ್ದಲ್, ಅಮರೇಗೌಡ ಬಯ್ಯಾಪುರ ಸೇರಿದಂತೆ ಅನೇಕರು ಹಾಜರಿದ್ದರು.

  • ಮನಮೋಹನ್ ಸಿಂಗ್ ಪ್ರಧಾನಿಯಾಗಲಿದ್ದಾರೆ- ಬಿಜೆಪಿ ಅಭ್ಯರ್ಥಿ ಎಡವಟ್ಟು

    ಮನಮೋಹನ್ ಸಿಂಗ್ ಪ್ರಧಾನಿಯಾಗಲಿದ್ದಾರೆ- ಬಿಜೆಪಿ ಅಭ್ಯರ್ಥಿ ಎಡವಟ್ಟು

    ತುಮಕೂರು: ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಲಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಎಡವಟ್ಟು ಮಾಡಿದ್ದಾರೆ.

    ಅಭ್ಯರ್ಥಿ ಗಳ ವಿಶ್ರಾಂತಿ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ನಲ್ಲಿ ಮನಮೋಹನ್ ಸಿಂಗ್ ಪರವಾಗಿ 303, 340, 370 ಹೇಳುತ್ತಾರೆ. ಒಟ್ಟಿನಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ. ಕೂಡಲೇ ತನ್ನ ತಪ್ಪಿನ ಅರಿವಾಗಿ ಕ್ಷಮಿಸಿ, ಮನಮೋಹನ್ ಸಿಂಗ್ ಅಲ್ಲ ಮೋದಿ ಪ್ರಧಾನಿಯಾಗುತ್ತಾರೆ ಎಂದಿದ್ದಾರೆ.

    8 ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಹಾಗೆಯೇ ಸುಗಮವಾಗಿ ಚುನಾವಣೆ ನಡೆದಿದೆ. ಭಾರತೀಯ ಜನತಾ ಪಕ್ಷಕ್ಕೆ ಪೂರ್ಣ ಬೆಂಬಲ ಸಿಕ್ಕಿದೆ. ಎಲ್ಲರ ಅಭಿಪ್ರಾಯವನ್ನು ಇಂದು ಸಂಗ್ರಹಿಸಿದ್ದೇವೆ. ನನ್ನ ಮಟ್ಟಿಗೆ ಇಂದು ನಮ್ಮ ಪಕ್ಷ ಮುನ್ನಡೆ ಸಾಧಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.

    ಸಮೀಕ್ಷೆಗಳು ಅವರವರ ಇಷ್ಟಕ್ಕೆ ಬಂದಂತೆ, ಗಿಣಿ ಶಾಸ್ತ್ರ ಹೇಳಿದಂತೆ ಎಂದು ಎಕ್ಸಿಟ್ ಪೋಲ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಗೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಹಾಲಿ ಸಂಸದ ಮುದ್ದಹನುಮೇಗೌಡ ಅವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು ಸ್ಪರ್ಧಿಸಿದ್ದಾರೆ.

  • ಚುನಾವಣಾ ಫಲಿತಾಂಶ: ಮತ ಎಣಿಕೆ ಪ್ರಕ್ರಿಯೆ ಹೇಗಿರುತ್ತೆ?

    ಚುನಾವಣಾ ಫಲಿತಾಂಶ: ಮತ ಎಣಿಕೆ ಪ್ರಕ್ರಿಯೆ ಹೇಗಿರುತ್ತೆ?

    ಬೆಂಗಳೂರು: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಇಂದು ಅಂತ್ಯವಾಗಲಿದೆ. ಸುಮಾರು ಎರಡು ತಿಂಗಳ ಮಹಾಭಾರತ ಕುರುಕ್ಷೇತ್ರದ ಫಲಿತಾಂಶ ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ.

    ಈ ಹಿಂದೆಯೆಲ್ಲಾ ಮೊದಲು ಅಂಚೆ ಮತಗಳನ್ನು ನಂತರ ಇವಿಎಂನಲ್ಲಿರುವ ಮತಗಳನ್ನು ಎಣಿಕೆ ಮಾಡಿ ಯಾರು ವಿಜಯಿ ಎಂದು ಘೋಷಣೆ ಮಾಡಲಾಗುತ್ತಿತ್ತು. ಆದರೆ ಬಿಜೆಪಿ ಗೆದ್ದಾಗಲೆಲ್ಲಾ, ಬಿಜೆಪಿಯೇತರ ಪಕ್ಷಗಳು ಸೋತಾಗಲೆಲ್ಲಾ ಇವಿಎಂ ಬಗ್ಗೆ ತೆಗೆಯೋ ರಾಜಕೀಯ ಪಕ್ಷಗಳ ಒತ್ತಡ, ಇವಿಎಂ ವಿಶ್ವಾಸಾರ್ಹವನ್ನ ಅನ್ನೋ ಆರೋಪಗಳ ಪರಿಣಾಮ ಐದು ಮತಗಟ್ಟೆಗಳ ವಿವಿಪ್ಯಾಟ್ ಸ್ಲಿಪ್‍ಗಳನ್ನು ಎಣಿಕೆ ಮಾಡಲಾಗುತ್ತದೆ.

    ಎಕ್ಸಿಟ್ ಪೋಲ್‍ಗಳು ಹೊರಬಿದ್ದ ಬೆನ್ನಲ್ಲೇ, ಎವಿಎಂನಲ್ಲಿರುವ ಮತಗಳ ಎಣಿಕೆಗೆ ಮುನ್ನ ವಿವಿಪ್ಯಾಟ್ ಸ್ಲಿಪ್‍ಗಳನ್ನು ಎಣಿಕೆ ಮಾಡಿಸಬೇಕು ಎಂದು ವಿಪಕ್ಷಗಳು ಚುನಾವಣಾ ಆಯೋಗದ ಮೊರೆ ಹೋಗಿದ್ದವು. ಸುಪ್ರೀಂಕೋರ್ಟ್ ಕದವನ್ನು ತಟ್ಟಿದ್ದವು. ಆದರೆ ಎಲ್ಲಾ ಕಡೆಯೂ ವಿಪಕ್ಷಗಳ ಆರೋಪಕ್ಕೆ ಹಿನ್ನಡೆಯಾಗಿದೆ.

    ಚುನಾವಣಾ ಆಯೋಗ ಈ ಮೊದಲು ನಿರ್ಧರಿಸಿದಂತೆ ಮೊದಲು ಅಂಚೆ ಮತಗಳ ಎಣಿಕೆ ಮಾಡಲಾಗುತ್ತದೆ. ನಂತರ ಮತಯಂತ್ರದಲ್ಲಿರುವ ಮತಗಳ ಕೌಂಟ್ ಮಾಡಲಾಗುತ್ತದೆ. ಬಳಿಕ ಯಾವುದಾದರೂ ಐದು ಬೂತ್‍ಗಳ ವಿವಿಪ್ಯಾಟ್‍ಗಳ ಸ್ಲಿಪ್‍ಗಳನ್ನು ಎಣಿಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಗಳು ಮುಗಿಯೋದಕ್ಕೆ ಕನಿಷ್ಠ ಅಂದರೂ ಮಧ್ಯಾಹ್ನ ಕಳೆಯಬೇಕು. ಆದರೆ 12 ಗಂಟೆ ಹೊತ್ತಿಗೆಲ್ಲಾ ಒಂದಿಷ್ಟು ಟ್ರೆಂಡ್‍ಗಳು ಸಿಗುವ ಸಾಧ್ಯತೆಗಳಿವೆ.

  • ಎಕ್ಸಿಟ್ ಪೋಲ್‍ಗಳನ್ನು ಲೆಕ್ಕಕ್ಕೆ ಇಟ್ಕೊಂಡಿಲ್ಲ, ಗೆಲ್ಲುವ ವಿಶ್ವಾಸವಿದೆ- ನಿಖಿಲ್

    ಎಕ್ಸಿಟ್ ಪೋಲ್‍ಗಳನ್ನು ಲೆಕ್ಕಕ್ಕೆ ಇಟ್ಕೊಂಡಿಲ್ಲ, ಗೆಲ್ಲುವ ವಿಶ್ವಾಸವಿದೆ- ನಿಖಿಲ್

    ಚಿಕ್ಕಮಗಳೂರು: ಮಗನ ರಾಜಕೀಯ ಭವಿಷ್ಯಕ್ಕಾಗಿ ರಾಜ್ಯಾದ್ಯಂತ ಟೆಂಪಲ್ ರನ್ ಮಾಡಿ, ಶೃಂಗೇರಿಯಲ್ಲಿ ಪೂಜೆ, ಹೋಮ, ಹವನ ನಡೆಸಿದ್ದ ಸಿ.ಎಂ ಕುಟುಂಬ, ಫಲಿತಾಂಶಕ್ಕೂ ಮುನ್ನ ಮತ್ತೊಂದು ಸುತ್ತು ಟೆಂಪಲ್ ರನ್ ಮುಂದುವರಿಸಿದೆ. ಇಂದು ಬೆಳಗ್ಗೆ ಶೃಂಗೇರಿಯಲ್ಲಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್, ಸಂಜೆ ಹಾಸನದ ಕುಲದೇವರ ಸೇರಿದಂತೆ ವಿವಿಧ ದೇವಸ್ಥಾನಕ್ಕೆ ತೆರಳಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ತಾಯಿ- ಮಗ, ಎಕ್ಸಿಟ್ ಪೋಲ್‍ಗಳನ್ನ ಲೆಕ್ಕಕ್ಕೆ ಇಟ್ಕೊಂಡಿಲ್ಲ. ಶಾರದಾಂಬೆ ಹಾಗೂ ಜನರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ರು.

    ದೇಶಾದ್ಯಂತ 543 ಕ್ಷೇತ್ರದಲ್ಲಿ ಚುನಾವಣೆ ನಡೆದರೂ ಇಂಡಿಯಾ ಕಣ್ಣು ಮಂಡ್ಯದ ಮೇಲಿರೋದ್ರಲ್ಲಿ ಅನುಮಾನವೇ ಇಲ್ಲ. ಅತ್ತ ಸುಮಲತಾ ಇತ್ತ ನಿಖಿಲ್ ಕುಮಾರಸ್ವಾಮಿಯ ಎದೆಯಲ್ಲೂ ಢವ-ಢವ ಶುರುವಾಗಿದೆ. ಆದರೆ, ಅಪ್ಪನಿಗೆ ಅಧಿಕಾರ ಕೊಟ್ಟ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಗನ ಗೆಲುವಿಗಾಗೂ ವಿಶೇಷ ಪೂಜೆ ಹೋಮ-ಹವನ ನಡೆಸಿದ್ದ ಸಿಎಂ ಕುಟುಂಬ, ಫಲಿತಾಂಶಕ್ಕೂ ಮುನ್ನ ಮಗನ ಗೆಲುವಿಗಾಗಿ ಮತ್ತೆ ಶಾರದಾಂಬೆಯ ಮೊರೆ ಹೋಗಿದ್ದಾರೆ.

    ಇದೇ ವೇಳೆ ಮಾತನಾಡಿದ ನಿಖಿಲ್, ಒಂದೊಂದು ಸರ್ವೆಗಳಲ್ಲಿ ಒಂದೊಂದು ರೀತಿ ಫಲಿತಾಂಶ ಬಂದಿದೆ. ನಾನು ಯಾವುದನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಶಾರದಾಂಬೆ ಹಾಗೂ ಜನರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿಎಂ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಶಾರದಾಂಬೆಯ ಆಶೀರ್ವಾದಕ್ಕಾಗಿ ನಾವು ಆಗಾಗ ಶೃಂಗೇರಿಗೆ ಬರುತ್ತೇವೆ. ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿ ಸರ್ಕಾರಕ್ಕೆ ಡೆಡ್‍ಲೈನ್ ಕೊಡ್ತಾನೆ ಇದೆ. ಆದರೆ ಏನೂ ಪ್ರಯೋಜನವಾಗ್ತಿಲ್ಲ. ಸರ್ಕಾರ ಪತನಗೊಳಿಸುವ ಅವರ ಆಸೆ ಈಡೇರೋದಿಲ್ಲ. ರಾಜ್ಯದಲ್ಲಿ ಜೆಡಿಎಸ್‍ಗೆ ಆರು ಸ್ಥಾನ ಬರುವ ನಿರೀಕ್ಷೆ ಇದೆ. ನಿಖಿಲ್ ಮೇಲೆ ಚಾಮುಂಡೇಶ್ವರಿ, ಶಾರದಾಂಬೆ ಹಾಗೂ ಜನರ ಆಶೀರ್ವಾದವಿದೆ ಎಂದು ಹೇಳುವ ಮೂಲಕ ನಿಖಿಲ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

    ಒಟ್ಟಿನಲ್ಲಿ 2018 ಜನವರಿ ತಿಂಗಳಿಂದ ಸಿಎಂ ರಾಜ್ಯ ಸುತ್ತಿದ್ದಕ್ಕಿಂತ ಅಧಿಕಾರ ಉಳಿಸಿಕೊಳ್ಳೋದಕ್ಕೆ ಮಠ-ಮಂದಿರ ಸುತ್ತಿದ್ದೇ ಹೆಚ್ಚು. ಸಿಎಂ ನಡೆ ಬಗ್ಗೆ ರಾಜ್ಯದ ಜನ ಕೂಡ ಆಕ್ರೋಶ ವ್ಯಕ್ತಪಡಿಸಿದರು. ಮಗನ ರಾಜಕೀಯ ಭವಿಷ್ಯಕ್ಕೂ ಅಷ್ಟೇ ಪ್ರಮಾಣದಲ್ಲಿ ದೇವಸ್ಥಾನ, ವಿಶೇಷ ಪೂಜೆ, ಹೋಮ-ಹವನ ನಡೆಸಿದ್ದ ಸಿಎಂ ಕುಟುಂಬ, ಈಗ ಫಲಿತಾಂಶಕ್ಕೂ ಮುನ್ನ ಮತ್ತೊಂದು ರೌಂಡ್ ಶುರುಮಾಡಿದ್ದಾರೆ.

  • ಮೋದಿ, ರಾಹುಲ್ ಗಾಂಧಿಯಲ್ಲಿ ಜನಪ್ರಿಯ ನಾಯಕ ಯಾರು?- ಸಿಎಸ್‍ಡಿಎಸ್ ಲೋಕನೀತಿ ಸಮೀಕ್ಷೆ

    ಮೋದಿ, ರಾಹುಲ್ ಗಾಂಧಿಯಲ್ಲಿ ಜನಪ್ರಿಯ ನಾಯಕ ಯಾರು?- ಸಿಎಸ್‍ಡಿಎಸ್ ಲೋಕನೀತಿ ಸಮೀಕ್ಷೆ

    ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಗುರುವಾರ ಹೊರ ಬೀಳುತ್ತಿದ್ದು, ದೇಶದ ಜನರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಈ ಮಧ್ಯೆ ಸಿಎಸ್‍ಡಿಎಸ್ ಲೋಕನೀತಿ ಸಮೀಕ್ಷೆಯೊಂದು ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಈ ಇಬ್ಬರಲ್ಲಿ ಯಾರು ಜನಪ್ರಿಯ  ನಾಯಕ ಎಂಬುದನ್ನು ಸರ್ವೆ ಮಾಡಿದೆ.

    ಬಿಜೆಪಿ-ಕಾಂಗ್ರೆಸ್ ನೇರ ಟಕ್ಕರ್ ಇಡುವ ಹಾಗೂ ಅಷ್ಟೇ ಪ್ರಾಬಲ್ಯ ಇರುವ ರಾಜ್ಯಗಳಲ್ಲಿ ಪ್ರಧಾನಿ ಮೋದಿ ಶೇ.54 ರಷ್ಟು ಜನಪ್ರಿಯತೆ ಹೊಂದಿದ್ದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶೇ.28 ಜನಪ್ರಿಯತೆ ಹೊಂದಿದ್ದಾರೆ ಎಂಬುದಾಗಿ ಸಮೀಕ್ಷೆಯ ವರದಿಯಲ್ಲಿ ತಿಳಿಸಿದೆ.

    ಬಿಜೆಪಿ ಆಡಳಿತದ ಪ್ರಾದೇಶಿಕ ಪಕ್ಷ ಪ್ರಾಬಲ್ಯದ ರಾಜ್ಯಗಳಲ್ಲಿ ಮೋದಿ ಶೇ.44ರಷ್ಟು ಜನಪ್ರಿಯತೆ ಪಡೆದಿದ್ದರೆ, ರಾಹುಲ್ ಗಾಂಧಿ ಶೇ.28ರಷ್ಟು ಜನಪ್ರಿಯತೆ ಹೊಂದಿದ್ದಾರೆ ಎಂಬುದಾಗಿ ಸಮೀಕ್ಷೆ ತಿಳಿಸಿದೆ. ಈ ಮೂಲಕ ಕಳೆದ ಬಾರಿ ಮೋದಿಗೆ ವೋಟ್ ಹಾಕಿದವರು ಈ ಬಾರಿ ಮತ್ತೆ ಬಿಜೆಪಿಗೆ ವೋಟ್ ಹಾಕಿದ್ದಾರಾ ಅನ್ನೋ ಅನುಮಾನ ಮೂಡಿದೆ. ಹಾಗೆಯೇ ಕಳೆದ ಬಾರಿಯ ಮತದಾರರನ್ನು ಕಾಂಗ್ರೆಸ್ ತನ್ನ ಬಳಿಯೇ ಉಳಿಸಿಕೊಂಡಿದೆಯಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಕಳೆದ ಸಲ ಬಿಜೆಪಿ, ಕಾಂಗ್ರೆಸ್‍ಗೆ ವೋಟ್ ಹಾಕಿದವರು ಈ ಬಾರಿಯೂ ಅದೇ ಪಕ್ಷಕ್ಕೆ ವೋಟ್ ಹಾಕಿದ್ದಾರೆ ಎಂಬುದಾಗಿ ಸಮೀಕ್ಷೆಯ ಮೂಲಕ ಅಂದಾಜಿಸಲಾಗಿದೆ.

    ಕಳೆದ ಬಾರಿ ಬಿಜೆಪಿ ಮಿತ್ರ ಪಕ್ಷಗಳಿಗೆ ವೋಟ್ ಹಾಕಿದವರು ಈ ಬಾರಿ ಆ ಪಕ್ಷಕ್ಕೆ ವೋಟ್ ಹಾಕಿಲ್ಲ, ಬದಲಾಗಿ ಬಾರಿ ಬೇರೆ ಪಕ್ಷಕ್ಕೆ ವೋಟ್ ಹಾಕಿದ್ದಾರೆ. ಆದರೆ ಕಳೆದ ಬಾರಿ ಕಾಂಗ್ರೆಸ್ ಮಿತ್ರ ಪಕ್ಷಕ್ಕೆ ವೋಟ್ ಹಾಕಿದವರು ಈ ಬಾರಿಯೂ ಅದೇ ಪಕ್ಷಕ್ಕೆ ವೋಟ್ ಹಾಕಿದ್ದಾರೆ ಎನ್ನಲಾಗಿದೆ.

    ಪಶ್ಚಿಮ ಬಂಗಾಳದಲ್ಲಿ ಭಾರೀ ಪ್ರಮಾಣದಲ್ಲಿ ಎಡಪಕ್ಷಗಳ ಮತದಾರರು ಬಿಜೆಪಿಯತ್ತ ವಾಲಿದ್ದಾರೆ. ಒಡಿಶಾದಲ್ಲೂ ಬಿಜೆಡಿಗೆ ಮೋದಿ ಅಲೆಯ ಶಾಕ್ ಎದುರಾಗಿದ್ದು, ಪ್ರಾದೇಶಿಕ ಪಕ್ಷಗಳಲ್ಲೂ ಮೋದಿ ಅಲೆಯ ಅಬ್ಬರವನ್ನ ತಡೆಯಲು ವಿಫಲವಾಗಿವೆ ಎಂಬುದಾಗಿ ಸಮೀಕ್ಷೆ ಮಾಹಿತಿ ನೀಡಿದೆ.

  • ರಾಜ್ಯದಲ್ಲಿ ಲೋಕ ಫಲಿತಾಂಶ 4 ಗಂಟೆ ತಡ!

    ರಾಜ್ಯದಲ್ಲಿ ಲೋಕ ಫಲಿತಾಂಶ 4 ಗಂಟೆ ತಡ!

    ಬೆಂಗಳೂರು: ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ 40 ವಿವಿ ಪ್ಯಾಟ್ ಮತ ಯಂತ್ರಗಳ ಎಣಿಕೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ 4 ಗಂಟೆ ತಡವಾಗಿ ಪ್ರಕಟವಾಗಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 23(ನಾಳೆ)ರಂದು ಬೆಳಗ್ಗೆ 8 ಗಂಟೆಗೆ ಮೊದಲು ರಿಟರ್ನಿಂಗ್ ಅಧಿಕಾರಿಯ ಕಚೇರಿಯಲ್ಲಿ ಅಂಚೆ ಮತಪತ್ರಗಳ ಎಣಿಕೆ ಆರಂಭಿಸಲಾಗುತ್ತದೆ. ಬಳಿಕ ಇವಿಎಂಗಳಲ್ಲಿನ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗುತ್ತದೆ ಎಂದು ತಿಳಿಸಿದರು.

    ಲೇಟ್ ಯಾಕೆ?: ಹಿಂದೆ 12 ಗಂಟೆಗೆ ಮುಗಿಯುತ್ತಿತ್ತು. ಆದರೆ ಈಗ ಒಂದು ರೌಂಡ್ ಎಣಿಕೆಗೆ 45 ನಿಮಿಷ ಬೇಕಾಗುತ್ತದೆ. 57 ಅಭ್ಯರ್ಥಿಗಳು ಬೆಳಗಾವಿ ಕ್ಷೇತ್ರದಲ್ಲಿ ಇದ್ದಾರೆ. ಅಲ್ಲದೆ ನಾವು ಬೇಗ ಎಣಿಕೆ ಮಾಡಲು ಸಾಧ್ಯವಿಲ್ಲ. ಬೇಗ ಎಣಿಕೆ ಮುಗಿಸುವ ಪ್ರಯತ್ನ ಮಾಡುತ್ತೇವೆ. ಆದರೆ ಸ್ವಲ್ಪ ತಡ ಆಗಬಹುದು. 3 ಗಂಟೆಯ ಒಳಗೆ ಬಹುತೇಕ ರಿಸಲ್ಟ್ ಕೊಡುತ್ತೇವೆ. ಸಂಜೆ 6 ಗಂಟೆ ಒಳಗೆ 28 ಕ್ಷೇತ್ರಗಳ ರಿಸಲ್ಟ್ ಕೊಡಲಾಗುತ್ತದೆ ಎಂದು ಹೇಳಿದರು.

    ಇದೂವರೆಗೆ 98, 606 ಪೋಸ್ಟಲ್ ಬ್ಯಾಲೆಟ್ ಬಂದಿದೆ. 25, 768 ಸರ್ವಿಸ್ ವೋಟರ್ಸ್ ಪೋಸ್ಟಲ್ ಬ್ಯಾಲೆಟ್ ಬಂದಿದೆ. 5 ವಿವಿ ಪ್ಯಾಟ್ ಗಳನ್ನು ವೇಗವಾಗಿ ಎಣಿಕೆ ಮಾಡಲಾಗುತ್ತದೆ ಎಂದರು.

    ಎಣಿಕೆ ಕಾರ್ಯ: ಅಧಿಕೃತ ಪಾಸ್ ಇದ್ದವರಿಗೆ ಮಾತ್ರ ಎಣಿಕಾ ಕೇಂದ್ರಕ್ಕೆ ಪ್ರವೇಶ ಕೊಡಲಾಗುವುದು. ಪೊಲೀಸ್ ಸಿದ್ಧತೆ ಮಾಡಲಾಗಿದೆ. ಕೌಂಟರ್ ಸೆಂಟರ್ ಗೆ ವೀಕ್ಷಕರಿಗೆ ಹೊರತುಪಡಿಸಿ ಯಾರೂ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. 18 ರಿಂದ 33 ರೌಂಡ್ಸ್ ಎಣಿಕೆ ನಡೆಯುತ್ತದೆ. ಮತದಾರರ ಸಂಖ್ಯೆ ಆಧಾರದಲ್ಲಿ ಎಷ್ಟು ರೌಂಡ್ಸ್ ಅನ್ನೋದು ಡಿಸೈಡ್ ಆಗುತ್ತದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತೀ ಹೆಚ್ಚು ರೌಂಡ್ಸ್ ಮತ ಎಣಿಕೆ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು.

    ಕೌಂಟಿಂಗ್ ಟೇಬಲ್ ಅಳವಡಿಕೆ: ಮತ ಎಣಿಕೆಗೆ 28 ಕ್ಷೇತ್ರಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಡಿಷನಲ್ ಎಆರ್ ಓ- 180  ಮಂದಿ ಇರಲಿದ್ದಾರೆ. 28 ಲೋಕಸಭಾ ಹಾಗೂ 2 ಕ್ಷೇತ್ರಗಳ ಬೈ ಎಲೆಕ್ಷನ್ ಮತ ಎಣಿಕೆ 23ರಂದು ಬೆಳಗ್ಗೆ 8 ಗಂಟೆಗೆ ನಡೆಯುತ್ತದೆ. ಶೇ. 80.23 ಅತೀ ಹೆಚ್ಚು ಮತದಾನ ಮಂಡ್ಯದಲ್ಲಿ ಆಗಿದೆ. ದಕ್ಷಿಣ ಕನ್ನಡದಲ್ಲಿ ಶೇ. 77.90, ತುಮಕೂರಿನಲ್ಲಿ ಶೇ.77.90 ಮತದಾನವಾಗಿತ್ತು. ಶೇ.53.47 ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದೆ. 28 ಕ್ಷೇತ್ರಗಳಲ್ಲಿ 461 ಮಂದಿ ಕಣದಲ್ಲಿದ್ದಾರೆ. 3224 ಕೌಂಟಿಂಗ್ ಟೇಬಲ್ ಗಳನ್ನ ಅಳವಡಿಸಲಾಗಿದೆ ಎಂದರು.

  • ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸುವವರಿಗೆ ತೇಜಸ್ವಿ ಸೂರ್ಯ ಬಹಿರಂಗ ಸವಾಲು!

    ಇವಿಎಂ ವಿಶ್ವಾಸಾರ್ಹತೆ ಪ್ರಶ್ನಿಸುವವರಿಗೆ ತೇಜಸ್ವಿ ಸೂರ್ಯ ಬಹಿರಂಗ ಸವಾಲು!

    ಬೆಂಗಳೂರು: ಚುನಾವಣೋತ್ತರ ಸಮೀಕ್ಷಾ ಫಲಿತಾಂಶದ ಕುರಿತು ಇವಿಎಂಗಳ ವಿಶ್ವಾಸಾರ್ಹತೆ ಪ್ರಶ್ನಿಸುವ ಜನ ಪ್ರತಿನಿಧಿಗಳಿಗೆ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಬಹಿರಂಗ ಸವಾಲೆಸೆದಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಜನಪ್ರತಿನಿಧಿಗಳು ಅದೇ ಇವಿಎಂಗಳ ಮೂಲಕವೇ ಗೆದ್ದು ಬಂದವರಿದ್ದಾರೆ. ಹೀಗಾಗಿ ಅವರು ಇವಿಎಂ ಸರಿಯಿಲ್ಲ ಎಂದು ಹೇಳಿ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಪ್ರಶ್ನಿಸುವ ಮೂಲಕ ಚಾಲೆಂಜ್ ಮಾಡಿದ್ದಾರೆ.

    ಸಿಎಂ ಹೇಳಿದ್ದೇನು?
    ಎಕ್ಸಿಟ್ ಪೋಲ್ ದೇಶದಲ್ಲಿ ಮೋದಿ ಅಲೆ ಇದೆ ಎಂದು ತೋರಿಸಲು ಅಷ್ಟೆ. ತಾತ್ಕಾಲಿಕ, ಕಾಲ್ಪನಿಕ ಮೋದಿ ಅಲೆ ಹೆಚ್ಚು ದಿನ ಇರಲ್ಲ. ಬಹುಮತದ ಕೊರತೆಯಾದರೆ ಪ್ರಾದೇಶಿಕ ಪಕ್ಷ ಸೆಳೆಯಲು ಯತ್ನ ಮಾಡಲಾಗುತ್ತದೆ. ಎಕ್ಸಿಟ್ ಪೋಲ್ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಸೆಳೆಯುವ ಯತ್ನ ಮಾಡಲಾಗುತ್ತಿದೆ. ಬಿಜೆಪಿ ಎಕ್ಸಿಟ್ ಪೋಲ್ ಮೂಲಕ ವೇದಿಕೆ ಸಿದ್ಧಪಡಿಸುತ್ತಿದೆ. ಇದು ಎಕ್ಸಿಟ್ ಪೋಲ್ ಅಷ್ಟೇ. ಎಕ್ಸಾಟ್ ಪೋಲ್ ಅಲ್ಲ ಎಂದು ಬರೆದು ಎಚ್.ಡಿ ದೇವೇಗೌಡ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ರಾಹುಲ್ ಗಾಂಧಿ, ಬಿಎಸ್‍ಪಿ ಹಾಗೂ ಎಕ್ಸಿಟ್ ಪೋಲ್ 2019 ಹ್ಯಾಷ್‍ಟ್ಯಾಗ್ ಹಾಕಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದರು.

    ಪರಮೇಶ್ವರ್ ಹೇಳಿದ್ದೇನು?
    ಚುನಾವಣೋತ್ತರ ಸಮೀಕ್ಷೆ ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದ ಹಾಗೆ ಇದೆ. ವಾಸ್ತವ ಸ್ಥಿತಿ ದೇಶದಲ್ಲಿ ಬೇರೆ ರೀತಿಯಲ್ಲಿ ಇದೆ. ಇಂತಹ ಸಂದರ್ಭದಲ್ಲಿ 300 ಸ್ಥಾನಗಳು ಬರುತ್ತದೆ ಎಂದು ಹೇಳಿಸಿಕೊಂಡು ಬಿಜೆಪಿ ಸಮಾಧಾನ ಪಟ್ಟುಕೊಳ್ಳುತ್ತಿದೆ. ಫಲಿತಾಂಶ ಬಂದ ಬಳಿಕ ಸ್ಪಷ್ಟವಾದ ಚಿತ್ರಣ ಗೊತ್ತಾಗುತ್ತದೆ. ಎಲ್ಲಾ ವಿರೋಧ ಪಕ್ಷಗಳು ಕೂಡ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಇವಿಎಂ ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿರೋಧ ಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳೇ ಬ್ಯಾಲೆಟ್ ಪೇಪರ್‍ಗಳನ್ನು ಆಯ್ಕೆ ಮಾಡುತ್ತಿದ್ದಾರೆ. 2019 ಎಕ್ಸಿಟ್ ಪೋಲ್ ಸಂಪೂರ್ಣವಾಗಿ ಆಡಳಿತ ಪಕ್ಷದ ಪರವಾಗಿ ಇದೆ. ಇವಿಎಂಗಳನ್ನು ಇಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಆರೋಪಿಸಿದ್ದರು.

    ಮಮತಾ ಬ್ಯಾನರ್ಜಿ:
    ಚುನಾವಣೋತ್ತರ ಸಮೀಕ್ಷೆ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿರುವ ಮಮತಾ ಬ್ಯಾನರ್ಜಿ, ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲಾರೆ. ಸಾವಿರಾರು ಇವಿಎಂಗಳು ಬದಲಾವಣೆ ಮಾಡಿರುವ ಸಾಧ್ಯತೆಗಳಿವೆ. ಎಲ್ಲ ವಿರೋಧ ಪಕ್ಷಗಳು ಒಂದಾಗಿ ಈ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಭಾಗಿಯಾಗಲು ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದರು.

    ರಾಹುಲ್ ಗಾಂಧಿ:
    ಚುನಾವಣೆ ಸಂದರ್ಭದಲ್ಲಿ ಎಲೆಕ್ಟೋಲ್ ಬಾಂಡ್ ಮತ್ತು ಇವಿಎಂಗಳನ್ನು ಬದಲಾವಣೆ ಮಾಡಲಾಗಿದೆ. ಚುನಾವಣಾ ಆಯೋಗ ನಮೋ ಟಿವಿ, ಮೋದಿ ಸೇನೆ ಮತ್ತು ಕೇದಾರನಾಥದಲ್ಲಿಯ ಡ್ರಾಮಾ, ಮೋದಿ ಹಾಗು ಗ್ಯಾಂಗ್ ಮುಂದೆ ಶರಣಾಗಿರೋದನ್ನು ಎಲ್ಲ ಭಾರತೀಯರು ನೋಡಿದ್ದಾರೆ. ಚುನಾವಣಾ ಆಯೋಗ ಮೋದಿ ಗ್ಯಾಂಗ್ ಮುಂದೆ ಗೌರವಾನ್ವಿತವಾಗಿ ಭಯಗೊಂಡಿದೆ ಎಂದು ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದರು.

    ಭಾನುವಾರ ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿತ್ತು. 10ರಲ್ಲಿ 9 ಸಮೀಕ್ಷೆಗಳು ಕೇಂದ್ರದಲ್ಲಿ ಮತ್ತೊಮ್ಮೆ ಎನ್‍ಡಿಎ ಸರ್ಕಾರ ರಚನೆ ಮಾಡಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದವು. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದವು.

  • ಹೊಳೆನರಸೀಪುರದಲ್ಲಿ ಅಕ್ರಮ ಮತದಾನ- ಮೂವರು ಸಿಬ್ಬಂದಿ ಅಮಾನತು

    ಹೊಳೆನರಸೀಪುರದಲ್ಲಿ ಅಕ್ರಮ ಮತದಾನ- ಮೂವರು ಸಿಬ್ಬಂದಿ ಅಮಾನತು

    ಹಾಸನ: ಅಕ್ರಮ ಮತದಾನದ ತನಿಖೆಯ ಪರಿಣಾಮ ಇದೀಗ ಹಾಸನದಲ್ಲಿ ಮೂವರು ಸಿಬ್ಬಂದಿ ಅಮಾನತುಗೊಂಡಿದ್ದಾರೆ.

    ಮತಗಟ್ಟೆ ಅಧಿಕಾರಿಯಾಗಿದ್ದ ಯೋಗೇಶ್, ರಾಮಚಂದ್ರ ರಾವ್ ಹಾಗೂ ದಿನೇಶ್ ಅಮಾನತುಗೊಂಡ ಸಿಬ್ಬಂದಿ. ಇವರನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ.

    ಏಪ್ರಿಲ್ 18 ರಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮೈತ್ರಿ ಅಭ್ಯರ್ಥಿ ಪ್ರಜ್ವಲ್, ಸಚಿವ ರೇವಣ್ಣ ಮತದಾನ ಮಾಡಿದ ನಂತರ ಯುವಕರು ಅಕ್ರಮ ಮತದಾನ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಬಿಜೆಪಿ ಬೂತ್ ಏಜೆಂಟ್ ರಾಜು ಹಾಗೂ ಮಾಯಣ್ಣ ಅವರು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿಯವರಿಗೆ ದೂರು ನೀಡಿದ್ದರು.

    ದೂರು ಸ್ವೀಕರಿಸಿದ್ದ ಜಿಲ್ಲಾಧಿಕಾರಿ ಭಾನುವಾರ ಸಿಸಿಟಿವಿ ದೃಶ್ಯವನ್ನು ಪರಿಶೀಲನೆ ಮಾಡಿದ್ದರು. ಈ ವೇಳೆ ಅಕ್ರಮ ಮತದಾನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿ ಅದೇಶ ಹೊರಡಿಸಿದ್ದಾರೆ.

  • ನಾಳೆಯಿಂದ ಮೋದಿಗೆ ಅಸಲಿ ಅಗ್ನಿ ಪರೀಕ್ಷೆ – ಮಹಾಘಟಬಂಧನ್‍ಗೆ ತಡೆ ಹಾಕ್ತಾರಾ ಪ್ರಧಾನಿ?

    ನಾಳೆಯಿಂದ ಮೋದಿಗೆ ಅಸಲಿ ಅಗ್ನಿ ಪರೀಕ್ಷೆ – ಮಹಾಘಟಬಂಧನ್‍ಗೆ ತಡೆ ಹಾಕ್ತಾರಾ ಪ್ರಧಾನಿ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗ್ತಾರಾ, ಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ ಎಂಬ ಈ ಪ್ರಶ್ನೆಗೆ ಲೋಕಸಭಾ ಚುನಾವಣೆಯಲ್ಲಿ ಬಾಕಿ ಉಳಿದಿರುವ ನಾಲ್ಕು ಹಂತಗಳು ಉತ್ತರ ನೀಡಲಿವೆ.

    ಈಗಾಗ್ಲೇ ಮೂರು ಹಂತಗಳಲ್ಲಿ ಒಟ್ಟು 543 ಕ್ಷೇತ್ರಗಳಲ್ಲಿ 302 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. 230 ಲೋಕಸಭಾ ಕ್ಷೇತ್ರಗಳಿಗಷ್ಟೇ ಮತದಾನ ಬಾಕಿಯಿದೆ. ನಾಳೆ ಲೋಕಸಭೆಯ ಐದನೇ ಹಂತದ ಮತದಾನ ನಡೆಯಲಿದೆ.

    ಬಿಜೆಪಿ ಬಾಹುಳ್ಯದ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಸೋಮವಾರದಿಂದ ಲೋಕ ಕದನಕ್ಕೆ ಚಾಲನೆ ಸಿಗಲಿದ್ದು ಒಡಿಶಾ, ಮಹಾರಾಷ್ಟ್ರದಲ್ಲಿ ಮತದಾನ ಮುಕ್ತಾಯವಾಗಲಿದೆ. ಬಿಹಾರ-5, ಜಾರ್ಖಂಡ್-3, ಮಧ್ಯಪ್ರದೇಶ, ಒಡಿಶಾ-6, ಪಶ್ಚಿಮ ಬಂಗಾಳ, ಮಹಾರಾಷ್ಟ್ರ -17, ರಾಜಸ್ಥಾನ, ಉತ್ತರಪ್ರದೇಶ-ತಲಾ 13 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

    ನಾಳೆಯಿಂದ ಮತದಾನ ಆಗುತ್ತಿರುವ ಕ್ಷೇತ್ರಗಳನ್ನು ಕಳೆದ ಬಾರಿ ಬಿಜೆಪಿ ಗೆದ್ದುಕೊಂಡಿತ್ತು. ಮತ್ತೆ ಅಧಿಕಾರಕ್ಕೆ ಬರಬೇಕಾದ್ರೆ ಈ ಕ್ಷೇತ್ರಗಳನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೋದಿಯವರು ಮಹಾಘಟಬಂಧನ್ ಗೆ ತಡೆ ಹಾಕ್ತಾರಾ ಎಂಬುದನ್ನು ಕಾದುನೋಡಬೇಕಿದೆ.