Tag: Loksabha Elections

  • ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ ಎಂದಿದ್ದ ಚಲುವರಾಯಸ್ವಾಮಿ ವೀಡಿಯೋ ವೈರಲ್

    ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತೆ ಎಂದಿದ್ದ ಚಲುವರಾಯಸ್ವಾಮಿ ವೀಡಿಯೋ ವೈರಲ್

    ಮಂಡ್ಯ: ಶತಾಯ ಗತಾಯ ಮಂಡ್ಯದಲ್ಲಿ ಕುಮಾರಸ್ವಾಮಿ (HD Kumaraswamy) ಅವರನ್ನು ಮಣಿಸಬೇಕೆಂದು ತೊಡೆ ತಟ್ಟಿದ್ದ ಮಂಡ್ಯ ಕೈ ನಾಯಕರಿಗೆ ಇದೀಗ ತೀವ್ರ ಮುಖಭಂಗವಾಗಿದೆ. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಸೋತರೆ ಮುಂದೆ ಕ್ಯಾಬಿನೆಟ್‌ನಲ್ಲಿ ಮಾತಾಡಲು ಆಗದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿ ಇರಬೇಕಾಗುತ್ತೆ ಎಂದು ಸಚಿವ ಚಲುವರಾಯಸ್ವಾಮಿ ಬಹಿರಂಗವಾಗಿ ಹೇಳಿದ್ದರು. ಇದೀಗ ಆ ಹೇಳಿಕೆಯನ್ನು‌ ಜೆಡಿಎಸ್ ಕಾರ್ಯಕರ್ತರು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

    ಪ್ರತಿ ಚುನಾವಣೆಯಲ್ಲೂ ತಮ್ಮ ಅಭ್ಯರ್ಥಿ ಗೆಲುವಿನ ವಿಚಾರದಲ್ಲಿ ನಾಯಕರು ತಮ್ಮ ಮಾತಿನಲ್ಲೆ ಪಂದ್ಯವನ್ನು ಕಟ್ಟಿಕೊಳ್ಳುತ್ತಾರೆ.‌ ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಕದನದಲ್ಲೂ ಹಲವು ಪ್ರಸಂಗಗಳು ಜರುಗಿವೆ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿಯನ್ನು ಸೋಲಿಸಲೇಬೇಕೆಂದು ಸಚಿವ ಚಲುವರಾಯಸ್ವಾಮಿ ಹಾದಿಯಾಗಿ ಮಂಡ್ಯ ಜಿಲ್ಲೆಯ ಕೈ ನಾಯಕರು ಹಾಗೂ ಮುಖಂಡರು ತೊಡೆ ತಟ್ಟಿದ್ರು. ಇದಲ್ಲದೇ ಸಿಎಂ‌ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹಾಗೂ ಮಂಡ್ಯದ ಘಟಾನುಘಟಿ ನಾಯಕರು ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸೋ ನಿಟ್ಟಿನಲ್ಲಿ ಸಚಿವ ಚಲುವರಾಯಸ್ವಾಮಿ ಹಾಗೂ ಮಂಡ್ಯ ಜಿಲ್ಲೆಯ ಕೈ ಶಾಸಕರು ಟೊಂಕಕಟ್ಟಿ ನಿಂತಿದ್ರು.‌ ಆದರೆ ಇದೀಗ ಮಂಡ್ಯದಲ್ಲಿ‌ ಹೆಚ್.ಡಿ.ಕುಮಾರಸ್ವಾಮಿ ಅವರು ಯಾರೂ ಊಹೆ ಮಾಡದ ರೀತಿಯಲ್ಲಿ 2,84,620 ಮತಗಳ‌ ಲೀಡ್ ತೆಗೆದುಕೊಂಡು ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟಿದ್ದ ಕೈ ನಾಯಕರಿಗೆ ತೀವ್ರ ಮುಖ ಭಂಗವಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ- ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ

    ವೈರಲ್‌ ಹೇಳಿಕೆಯಲ್ಲಿ ಏನಿದೆ..?: ನಾಗಮಂಗಲದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಚಲುವರಾಯಸ್ವಾಮಿಯವರು (Chaluvarayaswamy) ಒಂದು‌ ವೇಳೆ ಸ್ಟಾರ್ ಚಂದ್ರು ಸೋತರೆ ನನಗೆ ಕೆಲಸ ಮಾಡಲು‌ ಮನಸ್ಸು ಬರಲ್ಲ. ನಾನು ಕ್ಯಾಬಿನೇಟ್‌ನಲ್ಲಿ ಟೇಬಲ್ ಕುಟ್ಟಿ ಮಾತಾಡೋಕೆ ಆಗಲ್ಲ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿ ಕೆಲಸ ಮಾಡಬೇಕಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು ಸೋತರೆ ನಾನು ಅಳುವುದಿಲ್ಲ, ಬೇಜಾರ್ ಮಾಡಿಕೊಳ್ಳಲ್ಲ. ನಾನು ಯಾರ ಕೈಗೂ ಸಿಗಲ್ಲ ಎರಡು ತಿಂಗಳು ಯಾರ ಕೈಗೂ ಸಿಗದೇ ಪ್ರವಾಸಕ್ಕೆ ಹೋಗ್ತೀನಿ. ಬಳಿಕ ಫೋನ್ ನಂಬರ್ ಸ್ವೀಚ್ ಆಫ್ ಮಾಡಿಕೊಂಡು ರಾಜಕೀಯ ನಿವೃತ್ತಿ ಘೋಷಣೆ ಮಾಡಿ ನೆಮ್ಮದಿಯಾಗಿ ಇರಬೇಕಾಗುತ್ತೆ ಎಂಬ ಮಾತುಗಳನ್ನು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

    ಅಂದು ಚಲುವರಾಯಸ್ವಾಮಿ ಬಹಿರಂಗ ಸಮಾವೇಶದಲ್ಲಿ ಹೇಳಿದ್ದ ಮಾತನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ಹರಿಬಿಡುವ ಮೂಲಕ ಈಗ ಚಲುವರಾಯಸ್ವಾಮಿ ಏನ್ ಮಾಡ್ತಾರೆ ಎಂದು ಕೇಳ್ತಾ ಇದ್ದಾರೆ. ಇದಕ್ಕೆ ಚಲುವರಾಯಸ್ವಾಮಿ ಏನ್ ಕೌಂಟರ್ ಕೊಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  • ಅಂಜಲಿ ನಿಂಬಾಳ್ಕರ್‌ ವಿರುದ್ಧ ಕಾಗೇರಿಗೆ ಗೆಲುವು- ಉತ್ತರ ಕನ್ನಡದಲ್ಲಿ ಸಂಭ್ರಮಾಚರಣೆ

    ಅಂಜಲಿ ನಿಂಬಾಳ್ಕರ್‌ ವಿರುದ್ಧ ಕಾಗೇರಿಗೆ ಗೆಲುವು- ಉತ್ತರ ಕನ್ನಡದಲ್ಲಿ ಸಂಭ್ರಮಾಚರಣೆ

    ಕಾರವಾರ: ಉತ್ತರಕನ್ನಡ ಕ್ಷೇತ್ರದ ಮತ ಎಣಿಕೆ ಮುಕ್ತಾಯವಾಗಿದ್ದು, ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಜಯಗಳಿಸಿದ್ದಾರೆ. ಆದರೆ ಅಧಿಕೃತವಾಗಿ ಇನ್ನಷ್ಟೇ ಘೋಷಣೆ ಮಾಡಬೇಕಿದೆ.

    ಹೌದು. ಮತ ಎಣಿಕೆ ಆರಂಭವಾದಾಗಿನಿಂದಲೂ ಕಾಗೇರಿಯವರು ಮುನ್ನಡೆ ಕಾಯ್ದುಕೊಂಡಿದ್ದರು. ಇದೀಗ ನಿಂಬಾಳ್ಕರ್‌ (Anjali Nimbalkar) ವಿರುದ್ಧ ಕಾಗೇರಿಯವರು ಗೆದ್ದು ಬೀಗಿದ್ದಾರೆ.

    ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ವಿರುದ್ಧ ಕಾಗೇರಿಯವರು 7,76,968 ಇವಿಎಂ ಮತ, 3,526 ಪೋಸ್ಟಲ್ ಮತ ಸೇರಿ 7,80,494 ಮತಗಳಿಂದ ಜಯಗಳಿಸಿದ್ದಾರೆ. ನಿಂಬಾಳ್ಕರ್ ಅವರು 4,42,622 ಮತಗಳನ್ನು ಪಡೆದುಕೊಳ್ಳುವ ಮೂಲಕ ಸೋಲನುಭವಿಸಿದರು. ಒಟ್ಟಿನಲ್ಲಿ ಕಾಗೇರಿಯವರು 3,37,872 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ತನ್ನದಾಗಿಸಿಕೊಂಡಿದ್ದಾರೆ. 10,139 ನೋಟಾ ಮತಗಳು ದಾಖಲಾಗಿವೆ.

    ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರಲ್ಲಿ ಮುಗಿಲು ಮುಟ್ಟಿದೆ. ಕುಮಟಾ ಬಿಜೆಪಿ ಕಚೇರಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದೇ ವೇಳೆ ಘೋಷಣೆಗಳನ್ನು ಕೂಗುವ ಮೂಲಕ ಕಾರ್ಯಕರ್ತರು, ಮುಖಂಡರು ಗೆಲುವನ್ನ ಸಂಭ್ರಮಿಸಿದರು.

    ತಮ್ಮ ಗೆಲುವಿನ ಕುರಿತು ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಕಾಗೇರಿಯವರು, ನನ್ನ ಗೆಲುವನ್ನು ಕಾರ್ಯಕರ್ತರು ಮತದಾರಿಗೆ ಅರ್ಪಣೆ ಮಾಡುತ್ತೇನೆ. ನನ್ನ ಸೋಲಿಸಬೇಕು ಎಂದು ಪ್ರಯತ್ನಿಸಿದ ವ್ಯಕ್ತಿಗಳು ಈಗಲಾದರೂ ಆತ್ಮಾವಲೋಕನ ಮಾಡಿಕೊಳ್ಳಲಿ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಜಿಲ್ಲೆಯ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಶಾಸಕ ಶಿವರಾಮ್ ಹೆಬ್ಬಾರ್ ಗೆ ಟಾಂಗ್ ನೀಡಿದರು.

  • ಮತಗಟ್ಟೆ ಸಮೀಕ್ಷೆಗಳಲ್ಲೂ ಚಾರ್ ಸೌ ಪಾರ್ ಸೀಟ್- ಸಂಭ್ರಮದ ಅಲೆಯಲ್ಲಿ ಕೇಸರಿ ಪಡೆ

    ಮತಗಟ್ಟೆ ಸಮೀಕ್ಷೆಗಳಲ್ಲೂ ಚಾರ್ ಸೌ ಪಾರ್ ಸೀಟ್- ಸಂಭ್ರಮದ ಅಲೆಯಲ್ಲಿ ಕೇಸರಿ ಪಡೆ

    ನವದೆಹಲಿ: ಲೋಕಸಭಾ ಚುನಾವಣೆಯ ಆರಂಭದಿಂದಲೂ ಪ್ರಧಾನಿ ಮೋದಿ, ಅಬ್ ಕಿ ಬಾರ್ ಚಾರ್ ಸೌ ಪಾರ್ ಕನಸನ್ನು ಪ್ರಚಾರ ಕಣದಲ್ಲಿ ಬಿತ್ತಿದ್ರು. ಈಗ ಇದಕ್ಕೆ ಪೂರಕವಾದ ಅಂಶಗಳು, ಕೆಲ ವಿಶ್ವಾಸಾರ್ಹ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿವೆ.

    ಮೂರು ಸಂಸ್ಥೆಗಳ ಮತಗಟ್ಟೆ ಸಮೀಕ್ಷೆಗಳಲ್ಲಿ ಎನ್‍ಡಿಎ ಮೈತ್ರಿಕೂಟ 400ರ ಗಡಿ ದಾಟಿದೆ. ಬಿಜೆಪಿ ಖುಷಿಗೆ ಪಾರವೇ ಇಲ್ಲದಂತಾಗಿದೆ. ಮೋದಿ ಅವಧಿಯಲ್ಲಿ ಬಿಜೆಪಿಗೆ 50%ಕ್ಕಿಂತ ಹೆಚ್ಚು ಮತ ಮತ ಸಿಕ್ತಿದೆ. ಈ ಸಾಧನೆ ನೆಹರೂ, ಇಂದಿರಾ ಕೈಯಲ್ಲೇ ಆಗಿರಲಿಲ್ಲ ಅಂತ ಬಿಜೆಪಿ ಹೇಳಿಕೊಂಡಿದೆ.

    ಇದೇ ಹೊತ್ತಲ್ಲಿ ತಮ್ಮ ಅಂದಾಜಿನಂತೆ ಮತಗಟ್ಟೆ ಸಮೀಕ್ಷೆಗಳು ಬಂದಿರೋದ್ರೀಂದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಖುಷಿಯಾಗಿದ್ದಾರೆ. ತಮ್ಮನ್ನು ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ. ನಾಲಗೆ ಹರಿಬಿಡುವ ರಾಜಕೀಯ ನಾಯಕರು. ಸ್ವಯಂ ಘೋಷಿತ ಸೋಷಿಯಲ್ ಮೀಡಿಯಾ ಮೇಧಾವಿಗಳ ನಿಷ್ಪ್ರಯೋಜಕ ಚರ್ಚೆ, ವಿಶ್ಲೇಷಣೆಗಳಿಗೆ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಅಂತ ಜನರಿಗೆ ಪ್ರಶಾಂತ್ ಕಿಶೋರ್ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

    400 ಪಾರ್ ಭವಿಷ್ಯ ನುಡಿದ ಸಮೀಕ್ಷೆಗಳು
    ಆಕ್ಸಿಸ್ ಮೈ ಇಂಡಿಯಾ (ಇಂಡಿಯಾ ಟುಡೇ)
    * ಎನ್‍ಡಿಎ- 361-401
    * ಐಎನ್‍ಡಿಐಎ- 131-166
    * ಇತರರು- 08-20

    ಸಿಎನ್‍ಎಕ್ಸ್ (ಇಂಡಿಯಾ ಟಿವಿ)
    * ಎನ್‍ಡಿಎ- 371-401
    * ಐಎನ್‍ಡಿಐಎ- 109-139
    * ಇತರೆ- 28-38

    ಟುಡೇಸ್ ಚಾಣಕ್ಯ
    * ಎನ್‍ಡಿಎ- 385-415
    * ಐಎನ್‍ಡಿಐಎ- 96-118
    * ಇತರೆ-27-45

  • 5ನೇ ಹಂತದ ಮತದಾನ- ವೋಟ್ ಮಾಡಿದ ಬಾಲಿವುಡ್ ಸ್ಟಾರ್ಸ್

    5ನೇ ಹಂತದ ಮತದಾನ- ವೋಟ್ ಮಾಡಿದ ಬಾಲಿವುಡ್ ಸ್ಟಾರ್ಸ್

    ಲೋಕಸಭೆ ಚುನಾವಣೆಯ (Loksabha Elections) 5ನೇ ಹಂತದಲ್ಲಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ನಡೆಯುತ್ತಿದೆ. ಇದೀಗ ಬಾಲಿವುಡ್ ನಟ-ನಟಿಯರು ಕೂಡ ಮತದಾನ ಮಾಡಿದ್ದಾರೆ. ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಅಭಿಮಾನಿಗಳಿಗೂ ಮನವಿ ಮಾಡಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ ಜಾನ್ವಿ ಕಪೂರ್, ರಾಜ್‌ಕುಮಾರ್ ರಾವ್, ನಿರ್ಮಾಪಕ ಬೋನಿ ಕಪೂರ್, ಫರ್ಹಾನ್ ಅಖ್ತರ್, ನಟ ಗೋವಿಂದ್, ನೇಹಾ ಧೂಫಿಯಾ ಸೇರಿದಂತೆ ಅನೇಕರು ವೋಟ್ ಮಾಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ‘ದೇವರ’ ಚಿತ್ರದ ನಟಿ ಜಾನ್ವಿ ಕಪೂರ್ (Janhvi Kapoor) ಆಗಮಿಸಿ ವೋಟ್ ಮಾಡಿದ್ದಾರೆ. ಮತದಾನದ ಬಳಿಕ ಮತದಾರರಿಗೆ ದಯವಿಟ್ಟು ಬನ್ನಿ ವೋಟ್ ಮಾಡಿ ಎಂದು ನಟಿ ಮನವಿ ಮಾಡಿದ್ದಾರೆ. ಹಿರಿಯ ನಟ ಧಮೇಂದ್ರ, ಹೇಮಾ ಮಾಲಿನಿ ವೋಟ್ ಮಾಡಿದ್ದು, ಉತ್ತಮ ಸಮಾಜಕ್ಕಾಗಿ ವೋಟ್ (Vote) ಮಾಡುವಂತೆ ಕೇಳಿಕೊಂಡಿದ್ದಾರೆ. ಇದನ್ನೂ ಓದಿ:ಕಂದೀಲು ತಂಡದಿಂದ ಕೌಮುದಿ: ಅಕ್ಷತಾ ಪಾಂಡವಪುರ ಲೀಡ್‍ ರೋಲ್

    ವಿದ್ಯಾ ಬಾಲನ್, ಸುನೀಲ್, ಆಮೀರ್ ಖಾನ್ ಪುತ್ರ, ಸಾನ್ಯ ಮಲ್ಹೋತ್ರಾ ಕೂಡ ವೋಟ್ ಮಾಡಿದ ಬಳಿಕ ಇಂದು ಬಿಡುವು ಮಾಡಿಕೊಂಡು ತಪ್ಪದೇ ಬಂದು ಮತದಾನ ಮಾಡಿ ಎಂದು ಮಾತನಾಡಿದ್ದಾರೆ. ಎಲ್ಲರೂ ಮತ ಚಲಾಯಿಸಿ, ಪ್ರತಿಯೊಂದು ವೋಟ್‌ ಕೂಡ ವಿಚಾರವಾಗುತ್ತದೆ. ಬದಲಾವಣೆ ತರುತ್ತದೆ ಎಂದು ಶಾಹಿದ್‌ ಕಪೂರ್‌ ಮನವಿ ಮಾಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಅಂದಹಾಗೆ, ಇಂದು ಲೋಕಸಭೆಗೆ ಐದನೇ ಹಂತದಲ್ಲಿ ಮತದಾನ ನಡೆಯುತ್ತಿದೆ. 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದೆ. ಬಿಹಾರದ 5, ಜಮ್ಮು ಮತ್ತು ಕಾಶ್ಮೀರದ 1, ಜಾರ್ಖಂಡ್‌ನ 3, ಲಡಾಕ್‌ನ 1, ಮಹಾರಾಷ್ಟ್ರದ 13, ಒಡಿಶಾದ 5, ಉತ್ತರ ಪ್ರದೇಶದ 14 ಮತ್ತು ಪಶ್ಚಿಮ ಬಂಗಾಳದ 7 ಸ್ಥಾನಗಳಿಗೆ ಮತದಾನ ನಡೆಯಲಿದೆ. ಅಮೇಥಿ, ರಾಯ್ ಬರೇಲಿ, ಲಕ್ನೋ, ಕೈಸರ್ ಗಂಜ್, ಸರನ್ ಮತ್ತು ಮುಂಬೈನ ಎಲ್ಲಾ ಕ್ಷೇತ್ರಗಳು ಹೈವೊಲ್ಟೇಜ್ ಕ್ಷೇತ್ರಗಳಾಗಿವೆ.

    ಉತ್ತರ ಪ್ರದೇಶದ ಅಮೇಥಿಯಿಂದ ಸ್ಮೃತಿ ಇರಾನಿ ಮತ್ತು ಕೆಎಲ್ ಶರ್ಮಾ, ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ದಿನೇಶ್ ಪ್ರತಾಪ್ ಸಿಂಗ್, ಲಕ್ನೋದಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಹಾರದ ಸರಣ್‌ಂದ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ, ಮಹಾರಾಷ್ಟ್ರ ಕಲ್ಯಾಣದಿಂದ ಸಿಎಂ ಏಕನಾಥ್ ಶಿಂಧೆ ಅವರ ಪುತ್ರ ಡಾ.ಶ್ರೀಕಾಂತ್ ಶಿಂಧೆ, ಮುಂಬೈ ಉತ್ತರದಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಹಿರಿಯ ವಕೀಲ ಉಜ್ವಲ್ ನಿಕಮ್, ಮಧ್ಯ ಮುಂಬೈ ವರ್ಷಾ ಗಾಯಕ್ವಾಡ್ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

    ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ದಿನೇಶ್ ಪ್ರತಾಪ್ ಸಿಂಗ್, ರಾಯ್ ಬರೇಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್, ಮುಂಬೈ ಉತ್ತರ ಬಿಜೆಪಿ ಅಭ್ಯರ್ಥಿ ಪಿಯೂಷ್ ಗೊಯೇಲ್, ಅಮಿರ್ ಪುರ್ ನಲ್ಲಿ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಹಾಗೂ ಕೈಸರಗಂಜ್‌ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಈಗಾಗಲೇ ಮತದಾನ ಮಾಡಿದ್ದಾರೆ. ಇನ್ನು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಕುಟುಂಬ ಸಮೇತರಾಗಿ ಮುಂಬೈನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

  • ಕರ್ನಾಟಕದಲ್ಲಿ ಸಾರ್ವಕಾಲಿಕ ದಾಖಲೆ ಮತದಾನ- 2ನೇ ಹಂತದಲ್ಲಿ 72%ರಷ್ಟು ಮತದಾನ

    ಕರ್ನಾಟಕದಲ್ಲಿ ಸಾರ್ವಕಾಲಿಕ ದಾಖಲೆ ಮತದಾನ- 2ನೇ ಹಂತದಲ್ಲಿ 72%ರಷ್ಟು ಮತದಾನ

    – ಎಲ್ಲಾ 14 ಕ್ಷೇತ್ರಗಳಲ್ಲೂ ಹೊಸ ದಾಖಲೆ

    ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಕರ್ನಾಟಕದಲ್ಲಿ ದಾಖಲೆ ಮತದಾನ ಆಗಿದೆ. ಚುನಾವಣೆ ಆರಂಭವಾದಾಗಿನಿಂದ ಇಲ್ಲಿ ತನಕ ನಡೆದ ಎಲ್ಲ ಚುನಾವಣೆಗಳ ದಾಖಲೆಯನ್ನೂ ಮತದಾರ ಅಳಿಸಿದ್ದಾನೆ. ಎರಡನೇ ಹಂತದ ಚುನಾವಣೆ ನಡೆದ 14 ಕ್ಷೇತ್ರಗಳಲ್ಲಿ 71.84% ಮತದಾನವಾಗಿದ್ದು, ಮೊದಲ ಹಂತದ ಚುನಾವಣೆ ನಡೆದ 14 ಕ್ಷೇತ್ರಗಳಲ್ಲಿ ದಾಖಲಾಗಿದ್ದ 69.56% ಮತದಾನವನ್ನ ಉತ್ತರ ಕರ್ನಾಟಕದ ಮತದಾರರು ಹಿಂದಿಕ್ಕಿದ್ದಾರೆ. ಕಳೆದ ಬಾರಿಗಿಂತ 2ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ.

    2014ರ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ 67.73% ಮತದಾನವಾದರೆ, 2019ರಲ್ಲಿ 68.96% ರಷ್ಟು ಮತದಾನವಾಗಿತ್ತು. ಇನ್ನು 2014ರ ಎರಡನೇ ಹಂತದಲ್ಲಿ 66.62 % ಹಾಗೂ  2019ರಲ್ಲಿ 68.65% ಮತದಾನವಾಗಿತ್ತು. ಒಟ್ಟಾರೆಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ 67.20% ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ 68.81% ಮತದಾನವಾಗಿತ್ತು. ಈ ಎರಡೂ ಶೇಕಡವಾರು ಮತದಾನವನ್ನು ನೋಡಿದರೆ ಈ ಬಾರಿ ಶೇಕಡವಾರು ಮತದಾನದಲ್ಲಿ ಹೆಚ್ಚಳವಾಗಿದೆ.

    ಲೋಕಸಮರ; ಎಲ್ಲೆಲ್ಲಿ ಎಷ್ಟೆಷ್ಟು ವೋಟಿಂಗ್: 

  • ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆಗಳಾಗ್ತಿವೆ: ಮೋದಿ ಗುಡುಗು

    ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಮೇಲೆ ಹಲ್ಲೆಗಳಾಗ್ತಿವೆ: ಮೋದಿ ಗುಡುಗು

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ನಮ್ಮ ಹೆಣ್ಣು ಮಕ್ಕಳ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಮದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಪರೋಕ್ಷವಾಗಿ ಹುಬ್ಬಳ್ಳಿ ನೇಹಾ ಹಿರೇಮಠ (Neha Hiremath) ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿದರು.

    ಇಂದು ನಗರದ ಅರಮನೆ ಮೈದಾನಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬೀದಿಗಳಲ್ಲಿ ಬಾಂಬ್ ಸ್ಫೋಟವಾಗುತ್ತಿದೆ. ಭಜನೆ, ಕೀರ್ತನೆ ಹಾಕಿದರೆ ಹಲ್ಲೆ ಮಾಡುತ್ತಾರೆ. ಹಾಡಹಗಲೇ ಹಲ್ಲೆಗಳು ನಡೆಯುತ್ತಿವೆ. ಮಹಿಳೆಯರ ಮೇಲೆ ಹಲ್ಲೆಗಳು ಆಗ್ತಿದೆ. ಇದು ಸಾಮಾನ್ಯ ವಿಚಾರ ಅಲ್ಲ ಎಂದು ಮೋದಿ ಗುಡುಗಿದರು.

    ಕಾಂಗ್ರೆಸ್ ಸರ್ಕಾರ ಕೆಲವೇ ತಿಂಗಳಲ್ಲಿ ಬೆಂಗಳೂರಿನ ಪರಿಸ್ಥಿತಿ ಹಾಳು ಮಾಡಿದೆ. ಟೆಕ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದೆ. ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ ಕೊಡ್ತಿಲ್ಲ ಎಂದು ಟೀಕೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಮೋದಿ

    ಕಾಂಗ್ರೆಸ್ ಹೆಚ್‍ಎಎಲ್ ವಿಚಾರದಲ್ಲಿ ಏನೆಲ್ಲ ಆರೋಪ ಮಾಡಿತ್ತು. ಮೋದಿ ಹೆಸರು ಕೆಡಿಸಲು ಕಾಂಗ್ರೆಸ್ ಮುಂದಾಗಿತ್ತು. ಅದೇ ಹೆಚ್‍ಎಎಲ್ ಈಗ ಅನೇಕ ಸಾಧನೆ ಮಾಡಿದೆ. ರಾಜ್ಯದಲ್ಲಿ ದೊಡ್ಡ ಹೆಲಿಕಾಪ್ಟರ್ ನಿರ್ಮಾಣ ಕೈಗಾರಿಕೆ ಹೆಚ್‍ಎಎಲ್ ಸ್ಥಾಪಿಸಿದೆ. ಕಾಂಗ್ರೆಸ್ ತಂತ್ರಜ್ಞಾನದ ವಿರೋಧಿಯಾಗಿದೆ. ಇಡೀ ಜಗತ್ತು ಡಿಜಿಟಲ್ ಇಂಡಿಯಾ ಶ್ಲಾಘಿಸ್ತಿದೆ. ಕಾಂಗ್ರೆಸ್ ಕೊರೊನಾ ವೇಳೆ ವ್ಯಾಕ್ಸಿನ್ ವಿರುದ್ಧ ಅಪಪ್ರಚಾರ ಮಾಡಿತ್ತು ಎಂದು ರಾಜ್ಯ ಸರ್ಕಾರ ವಿರುದ್ಧ ಮೋದಿ ಕಿಡಿಕಾರಿದರು.

  • ಮಧ್ಯಪ್ರದೇಶದಲ್ಲಿ ಲೋಕಸಭಾ ಅಭ್ಯರ್ಥಿ ನಿಧನ- ಚುನಾವಣೆ ಮುಂದೂಡಿಕೆ

    ಮಧ್ಯಪ್ರದೇಶದಲ್ಲಿ ಲೋಕಸಭಾ ಅಭ್ಯರ್ಥಿ ನಿಧನ- ಚುನಾವಣೆ ಮುಂದೂಡಿಕೆ

    ಭೋಪಾಲ್:‌ ಮಧ್ಯಪ್ರದೇಶದ ಬೆತುಲ್ ಕ್ಷೇತ್ರದಿಂದ ಮಾಯಾವತಿಯವರ ಬಹುಜನ ಸಮಾಜ ಪಕ್ಷದ (BSP) ಲೋಕಸಭಾ ಅಭ್ಯರ್ಥಿ ಅಶೋಕ್ ಭಾಲವಿ (Ashok Bhalawi) ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ನಡೆಯಬೇಕಿದ್ದ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.

    ಪಕ್ಷದ ಪ್ರಕಾರ, ಭಾಲವಿಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ವಿಚಾರವನ್ನು ಬೆತುಲ್ ಡಿಎಂ ನರೇಂದ್ರ ಕುಮಾರ್ ಸೂರ್ಯವಂಶಿ ಖಚಿತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ. ಹೀಗಾಗಿ ಏಪ್ರಿಲ್‌ 26ರಂದು ನಡೆಯಬೇಕಿದ್ದ ಎರಡನೇ ಹಂತದ ಮತದಾನವನ್ನು ಮುಂದೂಡಿದ್ದೇವೆ ಎಂದು ಹೇಳಿದರು.

    ಇತ್ತ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ನರೇಂದ್ರ ಸಿಂಗ್ ರಘುವಂಶಿ ಪ್ರತಿಕ್ರಿಯಿಸಿ, ಪ್ರಜಾಪ್ರತಿನಿಧಿ ಕಾಯ್ದೆಯಡಿ ಚುನಾವಣಾ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಸಿಎಎ ಉಲ್ಲೇಖಿಸಲು ಭಯ – ಕಾಂಗ್ರೆಸ್‌ ವಿರುದ್ಧ ಪಿಣರಾಯಿ ಕಿಡಿ

    ಬೇತುಲ್‌ನ ಹಾಲಿ ಸಂಸದ ದುರ್ಗಾ ದಾಸ್ ಉಯಿಕೆ ಅವರನ್ನು ಬಿಜೆಪಿ ಮತ್ತೊಮ್ಮೆ ಕ್ಷೇತ್ರದಿಂದ ಕಣಕ್ಕಿಳಿಸಿದರೆ, ಕಾಂಗ್ರೆಸ್ ರಾಮು ಟೇಕಂ ಅವರನ್ನು ಕಣಕ್ಕಿಳಿಸಿದೆ. ಏಪ್ರಿಲ್ 26 ರಂದು ಟಿಕಮ್‌ಗಢ್, ದಾಮೋಹ್, ಖಜುರಾಹೊ, ಸತ್ನಾ, ರೇವಾ ಮತ್ತು ಹೊಶಂಗಾಬಾದ್ ಸ್ಥಾನಗಳೊಂದಿಗೆ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಬೇತುಲ್ ಮತದಾನ ಮಾಡಲು ನಿರ್ಧರಿಸಲಾಗಿತ್ತು.

  • ದೇಶ, ದೇವರ ಬಗ್ಗೆ I.N.D.I.A ನಾಯಕರ ವಿವಾದಾತ್ಮಕ ಹೇಳಿಕೆ

    ದೇಶ, ದೇವರ ಬಗ್ಗೆ I.N.D.I.A ನಾಯಕರ ವಿವಾದಾತ್ಮಕ ಹೇಳಿಕೆ

    ನವದೆಹಲಿ: ಲೋಕಸಭಾ ಚುನಾವಣೆ (Loksabha Elections) ಸನಿಹದಲ್ಲಿ ವಿಪಕ್ಷ ಐಎನ್‍ಡಿಐಎ ಕೂಟದ ನಾಯಕರು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡತೊಡಗಿದ್ದಾರೆ.

    ದೇಶ, ದೇವರು, ರಾಮ, ರಾಮಾಯಣ, ರಾಮಮಂದಿರ ಮತ್ತು ಪ್ರಧಾನಿ ಮೋದಿ ವಿಚಾರವಾಗಿ ಕಾಂಗ್ರೆಸ್, ಡಿಎಂಕೆ ಮತ್ತು ಟಿಎಂಸಿಯ ಮೂವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಡಿಎಂಕೆ ಎ ರಾಜಾ ಅಂತೂ ಇಂಡಿಯಾ ಅಂದ್ರೆ ದೇಶ ಅಲ್ಲ. ಅದು ಉಪಖಂಡ ಎಂದಿದ್ದಾರೆ. ಮಣಿಪುರದಲ್ಲಿ ನಾಯಿ ಮಾಂಸ ತಿನ್ನುವುದು ಕೂಡ ಸಂಸ್ಕೃತಿ. ಕೆಲವರು ಬೀಫ್ ತಿನ್ನುತ್ತಾರೆ, ಅದು ಅವರ ಸಂಸ್ಕೃತಿ. ಅದನ್ನು ಗೌರವಿಸಬೇಕು ಎಂದಿದ್ದಾರೆ.

    ಈತನೇ ದೇವರು ಅಂದ್ರೆ.. ಜೈಶ್ರೀರಾಮ್, ಭಾರತ್ ಮಾತಾಕಿ ಜೈ ಅಂದ್ರೆ ಅದನ್ನು ತಮಿಳುನಾಡು  (Tamilnadu) ಅಂಗೀಕರಿಸಲ್ಲ. ನಾನು ರಾಮಾಯಣವನ್ನು ನಂಬಲ್ಲ. ಎಂದೆಲ್ಲಾ ಮಾತಾಡಿದ್ದಾರೆ. ಇದನ್ನೂ ಓದಿ: ನೀವು ಜೈಶ್ರೀರಾಮ್‌ ಜಪಿಸುತ್ತಾ ಹಸಿವಿನಿಂದ ಸಾಯಬೇಕೆಂದು ಪ್ರಧಾನಿ ಬಯಸುತ್ತಾರೆ: ರಾಗಾ ಟೀಕೆ

    ರಾಹುಲ್ ಗಾಂಧಿ (Rahul Gandhi) ಮಾತನಾಡಿ, ದೇಶದಲ್ಲಿ ನಿರುದ್ಯೋಗ, ಹಸಿವಿನ ಸಾವು ಹೆಚ್ಚುತ್ತಿದೆ. ಆದ್ರೆ ಮೋದಿ ಮಾತ್ರ ಜೈಶ್ರೀರಾಮ್ ಅಂತಾ ಕೂಗಿ ಎನ್ನುತ್ತಿದ್ದಾರೆ. ನೀವು ಜೈಶ್ರೀರಾಮ್ ಎಂದು ಹೇಳುತ್ತಾ ಹಸಿವಿನಿಂದ ಸಾಯಬೇಕು ಎಂದು ಪ್ರಧಾನಿ ಬಯಸ್ತಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ಟಿಎಂಸಿಯ ರಾಮೆಂದು ಸಿನ್ಹಾ ರಾಯ್ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅಯೋಧ್ಯೆಯ ರಾಮಮಂದಿರ ಅಪವಿತ್ರ ಪ್ರದೇಶ.. ಹಿಂದೂಗಳ್ಯಾರು ಅಲ್ಲಿ ಹೋಗಿ ಪೂಜಿಸಬಾರದು ಎಂದು ನಾಲಗೆ ಹರಿಬಿಟ್ಟಿದ್ದಾರೆ.

  • ಬಿಜೆಪಿಯಲ್ಲಿ ಎಲ್ಲರೂ ಜೇಬಿನಲ್ಲಿ ಟಿಕೆಟ್‌ ಇಟ್ಕೊಂಡು ಓಡಾಡ್ತಿದ್ದಾರೆ: ಅನಂತ್‌ ಕುಮಾರ್‌ ಹೆಗಡೆ

    ಬಿಜೆಪಿಯಲ್ಲಿ ಎಲ್ಲರೂ ಜೇಬಿನಲ್ಲಿ ಟಿಕೆಟ್‌ ಇಟ್ಕೊಂಡು ಓಡಾಡ್ತಿದ್ದಾರೆ: ಅನಂತ್‌ ಕುಮಾರ್‌ ಹೆಗಡೆ

    ಕಾರವಾರ: ಬಿಜೆಪಿಯಲ್ಲಿ ಎಲ್ಲರೂ ಜೇಬಿನಲ್ಲಿ ಟಿಕೆಟ್ ಇಟ್ಕೊಂಡು ಓಡಾಡ್ತಾ ಇದ್ದಾರೆ. ಎಲ್ಲರೂ ನಂಗೆ ಟಿಕೆಟ್ ಸಿಕ್ಕಿದೆ ನಂಗೆ ಟಿಕೆಟ್ ಸಿಕ್ಕಿದೆ ಅಂತಾರೆ. ನನ್ನ ಹತ್ರಾ ಅಂತೂ ಟಿಕೆಟ್ ಇಲ್ಲ. ನಮ್ಮ ಹೈಕಮಾಂಡ್ ಟಿಕೆಟ್ ಕೊಡ್ತಾರೆ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Anant Kumar Hegde) ಹೇಳಿದರು.

    ಸೋಮವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾವಳ್ಳಿ ಗ್ರಾಮದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇತಿಹಾಸದಲ್ಲಿ ಎಲ್ಲೆಲ್ಲಿ ನಮ್ಮ ಧರ್ಮಕ್ಕೆ ಅಪಮಾನ ಆಗಿದೆ, ಅದಕ್ಕೆಲ್ಲ ಪರಿಹಾರ ಸಿಗುವ ಕೆಲಸ ಆಗಬೇಕಿದೆ. ಈ ಒಂದೇ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಅಷ್ಟೆ ಅಲ್ಲ, ಮುಂದಿನ ಶತಮಾನಗಳ ಕಾಲ ಬಿಜೆಪಿ ಗೆಲುವು ಸಾಧಿಸಲಿದೆ. ನಾವು ಅಷ್ಟೊತ್ತು ಇರ್ತಿವೊ ಇಲ್ವೊ ಗೊತ್ತಿಲ್ಲ ಕಣ್ರಿ. ಎಷ್ಟೋ ಜನ ನಮಗೆ ಟಿಕೆಟ್ ಸಿಕ್ಕಿದೆ ಅಂತಾ ಓಡಾಡುತ್ತಾ ಇದ್ದಾರೆ. ಬಿಜೆಪಿಯಷ್ಟು ಕಾಂಗ್ರೆಸ್ ನಲ್ಲಿ ಅಷ್ಟೊಂದು ಇಲ್ಲ, ಕಾಂಗ್ರೆಸ್ ನಲ್ಲಿ ಸ್ವಲ್ಪ ಕನ್ಫ್ಯೂಸ್ ಇದೆ ಎಂದರು.

    ಬಿಜೆಪಿ ಅಭ್ಯರ್ಥಿ ಯಾರು ಆಗ್ತಾರೆ ಎಂಬುವುದು ನಂಗೂ ಗೊತ್ತಿಲ್ಲ. ಯಾರೇ ಸ್ಪರ್ಧಿಸಿದ್ರೂ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಿ. ಆರು ಬಾರಿ ಗೆಲ್ಲಿಸಿದ್ದೀರಿ, ಇದಕ್ಕಿಂತ ಜಾಸ್ತಿ ಇನ್ನೇನು ಬೇಕು? ಮನುಷ್ಯನ ಆಸೆಗೂ ಒಂದು ಮಿತಿ ಇರಬೇಕು ಅಲ್ವಾ..?. ಇಷ್ಟು ವರ್ಷಗಳ ಕಾಲ ಗೆಲ್ಲಿಸಿದ್ದಕ್ಕೆ ನಿಮಗೆಲ್ಲ ನಮಸ್ಕಾರ ಎಂದರು.

    ನನಗೆ ರಾಜಕೀಯವೇ ಬೇಡ ಅಂತಾ ಸುಮ್ಮನಿದ್ದೆ, ಆದರೆ ಭಟ್ಕಳ, ಕಾರವಾರ ಎಲ್ಲೆಲ್ಲಿಂದಲೋ ಬಂದು ನನಗೆ ಒತ್ತಾಯ ಮಾಡಿದ್ರು ಎಂದು ಅನಂತ್‌ ಕುಮಾರ್‌ ಹೆಗಡೆ ಹೇಳಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದ ರಾಜ್ಯಸಭಾ ಸಂಸದ ಸ್ಥಾನಕ್ಕೆ ಜೆಪಿ ನಡ್ಡಾ ರಾಜೀನಾಮೆ

  • ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಸಂಚು – ವಾಟ್ಸಪ್ ಚಾಟ್ ಹಂಚಿಕೊಂಡ ಬಿ.ಕೆ ಹರಿಪ್ರಸಾದ್

    ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಸಂಚು – ವಾಟ್ಸಪ್ ಚಾಟ್ ಹಂಚಿಕೊಂಡ ಬಿ.ಕೆ ಹರಿಪ್ರಸಾದ್

    -ದೇಶದ್ರೋಹ ಕೇಸ್ ಹಾಕಲು ಒತ್ತಾಯ

    ಬೆಂಗಳೂರು: ಅಯೋಧ್ಯೆಗೆ ಹೋಗೋರಿಗೆ ರಕ್ಷಣೆ ಕೊಡ್ಬೇಕು, ಇಲ್ಲದಿದ್ದರೆ ಗೋಧ್ರಾ ಮಾದರಿ ಘಟನೆ ಆಗಬಹುದು ಎಂದಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad), ಮತ್ತೆ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ.

    ರಾಷ್ಟ್ರ ರಕ್ಷಣಾ ಪಡೆ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಪುನಿತ್ ಕೆರೆಹಳ್ಳಿ ಹಾಕಿದ್ದಾರೆ ಎನ್ನಲಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ, ಕರ್ನಾಟಕದಲ್ಲಿ ಕೋಮು ಗಲಭೆ ಎಬ್ಬಿಸೋಕೆ ಬಿಜೆಪಿ (BJP) ನಮಗೆ ಬೆಂಬಲ ಕೊಟ್ಟಿದೆ. ಆದ್ದರಿಂದ ಎಲ್ಲಾ ಕಾರ್ಯಕರ್ತರು ರೆಡಿ ಆಗಿ ಇರಿ. ಎಲ್ಲಿ ಏನು ಮಾಡ್ಬೇಕು ಅನ್ನೋದನ್ನು ನಾವು ಈ ಗ್ರೂಪ್ ಮೂಲಕ ಮಾಹಿತಿ ಕೊಡ್ತೀವಿ. 2024ಕ್ಕೆ ಮತ್ತೊಮ್ಮೆ ಮೋದಿ ಎಂಬ ಬರಹವಿದೆ. ಇದನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಬಿ.ಕೆ ಹರಿಪ್ರಸಾದ್ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದ ಎಲ್ಲಾ ಜೈಲುಗಳಲ್ಲೂ ರಾಮಮಂದಿರ ಉದ್ಘಾಟನೆ ನೇರಪ್ರಸಾರ

    ಕೋಮುಗಲಭೆಗೆ (Communal Riots) ಬಿಜೆಪಿ ತನ್ನ ಸಹೋದರ ಸಂಘಟನೆಗಳನ್ನು ರೆಡಿ ಮಾಡ್ತಿರೋದು ಇದರಿಂದ ಗೊತ್ತಾಗುತ್ತೆ. ರೌಡಿಶೀಟರ್ ಪುನಿತ್ ಕೆರೆಹಳ್ಳಿ ಎಂಬ ಮತಾಂಧನಿಗೆ ಬಿಜೆಪಿ ಕೋಮುಗಲಭೆ ನಡೆಸುವ ಫತ್ವಾ ನೀಡಿದೆ. ವಿಶ್ವಗುರುವನ್ನು ಮತ್ತೆ ಪ್ರಧಾನಿ ಮಾಡಲು ಈ ಭಯೋತ್ಪಾದಕರ ತಂಡ ಕೆಲಸ ಮಾಡಲಿದೆಯಂತೆ. ಸಮಾಜಘಾತುಕರಿಗೆ ಇಡೀ ಬಿಜೆಪಿ ಬೆಂಬಲ ನೀಡ್ತಿದೆ ಅನ್ನೋದು ಜಗಜ್ಜಾಹೀರಾಗ್ತಿದೆ. ಕೂಡಲೇ ಸರ್ಕಾರ ಇಂತಹ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

    ಇಂತಹವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಬಿ.ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ. ಆದ್ರೆ, ಇದು ಸುಳ್ಳು, ಇದು ತಿರುಚಿದ ಪೋಸ್ಟ್, ಬಿ.ಕೆ ಹರಿಪ್ರಸಾದ್ ವಿರುದ್ಧ ದೂರು ಕೊಡುತ್ತೇನೆ ಎಂದು ಪುನೀತ್ ಕೆರೆಹಳ್ಳಿ ಹೇಳಿದ್ದಾರೆ. ಇದನ್ನೂ ಓದಿ: ಆದಿತ್ಯ-L1 ಮಿಷನ್‌ ಸಕ್ಸಸ್‌; ನಿಗದಿತ ಕಕ್ಷೆ ತಲುಪಿದ ನೌಕೆ – ISRO ಸಾಧನೆಗೆ ಮೋದಿ ಮೆಚ್ಚುಗೆ