Tag: LokSabha election

  • ಮಗನ ಒಳಿತಿಗಾಗಿ ಒಂದು ಕಾಲು ರೂಪಾಯಿ ಹರಕೆ ಹೊತ್ತ ಅನಿತಾ ಕುಮಾರಸ್ವಾಮಿ!

    ಮಗನ ಒಳಿತಿಗಾಗಿ ಒಂದು ಕಾಲು ರೂಪಾಯಿ ಹರಕೆ ಹೊತ್ತ ಅನಿತಾ ಕುಮಾರಸ್ವಾಮಿ!

    ಮಂಡ್ಯ: ನಟ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಮಂಡ್ಯ ಲೋಕಸಭಾ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದ್ದು, ಒಂದೆಡೆ ನಿಖಿಲ್ ಸ್ಪರ್ಧಿಸುವ ಸುಳಿವು ನೀಡಿದ್ರೆ, ಮತ್ತೊಂದೆಡೆ ನಿಖಿಲ್ ತಾಯಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮಗನ ರಾಜಕೀಯ ಭವಿಷ್ಯದ ಒಳಿತಿಗೆ ಹರಕೆ ಹೊತ್ತಿದ್ದಾರೆ.

    ನಿಖಿಲ್ ತಾಯಿ ಹಾಗೂ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಮದ್ದೂರಿನ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪುತ್ರನಿಗಾಗಿ ಒಂದು ಕಾಲು ರೂಪಾಯಿ ಹರಕೆ ಹೊತ್ತಿದ್ದಾರೆ. ಒಂದು ಕಾಲು ರೂಪಾಯಿ ಹರಕೆ ಹೊತ್ತರೆ, ಇಷ್ಠಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅನಿತಾ ಕುಮಾರಸ್ವಾಮಿ, ನಾನು ನನ್ನ ಮಗನಿಗೆ ಒಳ್ಳೆಯದಾಗಲಿ ಎಂದು ಪೂಜೆ ಸಲ್ಲಿಸಿದ್ದೇನೆ ಅಂತಿದ್ದಾರೆ. ಇದೇ ವೇಳೆ ಮಂಡ್ಯದಿಂದ ಸುಮಲತಾ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿ, ಆ ಬಗ್ಗೆ ನಾನೇನು ಮಾತನಾಡಲ್ಲ. ಆದರೆ ಮಂಡ್ಯ ಜೆಡಿಎಸ್ ಬೆಲ್ಟ್ ಎನ್ನುವ ಮೂಲಕ ತಮ್ಮ ಮಗನ ಸ್ಪರ್ಧೆ ಬಗ್ಗೆಯೂ ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಮೈತ್ರಿ ಕೂಟದ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಸ್ಪರ್ಧೆ ಬಹುತೇಕ ಖಚಿತವಾಗಿದೆ ಅನ್ನೋ ಚರ್ಚೆ ಮಂಡ್ಯ ಜಿಲ್ಲೆಯಲ್ಲಿ ಜೋರಾಗಿರುವಾಗಲೇ ತಾಯಿ ಅನಿತಾ ಕುಮಾರಸ್ವಾಮಿ ಮಗನ ಶ್ರೇಯೋಭಿವೃದ್ಧಿಗಾಗಿ ದೇವರಲ್ಲಿ ಹರಕೆ ಹೊತ್ತಿದ್ದಾರೆ. ಇತ್ತ ನಿಖಿಲ್ ಕೂಡ ತಮ್ಮ ಸ್ಪರ್ಧೆ ಬಗ್ಗೆ ಮಾತನಾಡುತ್ತ, ಜಿಲ್ಲೆಯ ಜನರ ಭಾವನೆಗಳನ್ನು ಅರ್ಥೈಸಿಕೊಂಡು ನಮ್ಮ ಪಕ್ಷದ ನಾಯಕರು ತೀರ್ಮಾನ ಕೈಗೊಳ್ತಾರೆ ಅಂತಿದ್ದಾರೆ. ಈ ಮೂಲಕ ಈಗಾಗಲೇ ನಿಖಿಲ್ ಸ್ಪರ್ಧೆಗೆ ಒತ್ತಡ ಹೇರುತ್ತಿರುವ ಮುಖಂಡರ ಮನವಿಗೆ ಪಕ್ಷ ಸ್ಪಂದಿಸುತ್ತದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದು, ತಮ್ಮ ಸ್ಪರ್ಧೆಯ ಬಗ್ಗೆ ಖಚಿತ ಪಡಿಸಿದ್ದಾರೆ.

    ಸಕ್ಕರೆ ನಾಡಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಕೂಟದಿಂದ ನಿಖಿಲ್ ಕುಮಾರ್ ಹಾಗೂ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಸ್ಪರ್ಧೆ ಬಹುತೇಕ ಖಚಿತವಾಗಿದೆ ಎಂಬ ಚರ್ಚೆ ಜಿಲ್ಲೆಯಾದ್ಯಂತ ಜೋರಾಗಿ ಶುರುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಓಲಾ, ಉಬರ್ ಕ್ಯಾಬ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ವ್ಯವಸ್ಥೆ: ಬಂಡೆಪ್ಪ ಕಾಶೇಂಪುರ

    ಓಲಾ, ಉಬರ್ ಕ್ಯಾಬ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ವ್ಯವಸ್ಥೆ: ಬಂಡೆಪ್ಪ ಕಾಶೇಂಪುರ

    ಬೆಂಗಳೂರು: ಕೇಂದ್ರದ ಮೋದಿ ಸರ್ಕಾರ ರೈತರ ಖಾತೆಗೆ 2 ಸಾವಿರ ಹಾಕಿದ ಬೆನ್ನಲ್ಲೇ, ಇತ್ತ ರಾಜ್ಯ ಸರ್ಕಾರ ರೈತರಿಗೆ ಟ್ರ್ಯಾಕ್ಟರ್ ಸೇವೆ ನೀಡಲು ಚಿಂತನೆ ನಡೆಸಿದೆ. ಓಲಾ, ಉಬರ್ ಕ್ಯಾಬ್ ಮಾದರಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೇಂಪುರ ತಿಳಿಸಿದರು.

    ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಬಂಡೆಪ್ಪ ಕಾಶೇಂಪುರ, ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲು ಓಲಾ, ಉಬರ್ ಕ್ಯಾಬ್ ಮಾದರಿಯಲ್ಲಿ ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗುವುದು. ಹೊಲದಿಂದಲೇ ಉತ್ಪನ್ನಗಳನ್ನು ಸಾಗಿಸಲು ರೈತರು ಟ್ರ್ಯಾಕ್ಟರ್ ಬುಕ್ ಮಾಡಬಹುದುದಾಗಿದೆ. ಇನ್ಮುಂದೆ ಕೃಷಿ ಉತ್ಪನ್ನಗಳ ಖರೀದಿ ಗೋಡಾನ್‍ನಲ್ಲಿ ಆಗಲಿದ್ದು, ಇದಕ್ಕೆ ಆ್ಯಪ್ ಸಿದ್ಧ ಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ ತೊಂದರೆ ಆಗದಂತೆ ಲಭ್ಯ ಆಗುತ್ತಿದೆ. ಹೆಸರು, ಉದ್ದು, ಸೋಯಾ, ತೊಗರಿ ಎಲ್ಲ ಬೆಳೆಗಳಿಗೂ ಬೆಂಬಲ ಬೆಲೆ ಸಿಗುತ್ತಿದೆ. ಸರ್ಕಾರ ಸಾಲಮನ್ನಾ ಮಾಡಿ ರೈತರ ಭಾರ ಇಳಿಸಿದೆ. ಈ ಯೋಜನೆ ಚುರುಕಾಗಿ ಸಾಗುತ್ತಿದ್ದು, ಹಲವು ಯೋಜನೆಗಳ ಮೂಲಕ ರಾಜ್ಯ ಸರ್ಕಾರ ರೈತರ ಬದುಕು ಸುಭದ್ರಗೊಳಿಸಲು ಬದ್ಧವಾಗಿದೆ. ಬಡವರ ಬಂಧು ಯೋಜನೆ ಸಫಲತೆ ಹಾದಿಯಲ್ಲಿದ್ದು, ಇದುವರೆಗೂ 18 ಸಾವಿರ ಜನರಿಗೆ ಉಪಯೋಗವಾಗಿದೆ ಎಂದರು.

    ಲೋಕಸಭಾ ಚುನಾವಣೆಯ ಸ್ಥಾನಗಳ ಹಂಚಿಕೆಯನ್ನು ಹೈಕಮಾಂಡ್ ಹಾಗು ರಾಹುಲ್ ಗಾಂಧಿ ಅವರು ನಿರ್ಧಾರ ಮಾಡುತ್ತಾರೆ. ಯಾರಿಗೆ ಎಷ್ಟು ಸೀಟು ಎಂಬುವುದು ಆ ಬಳಿಕ ತಿಳಿಯಲಿದೆ. ಸೀಟು ಹಂಚಿಕೆಯಾದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗುವುದು ಸಹಜ. ಆದರೆ ಅದನ್ನು ಸರಿಪಡಿಸಿಕೊಳೂತ್ತೇವೆ. ಎಲ್ಲವೂ ಮಾತುಕತೆಯ ಮೂಲಕ ಸುಗಮವಾಗಿ ಹಂಚಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಲು ಒತ್ತಾಯ!

    ಹುತಾತ್ಮ ಯೋಧನ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಲು ಒತ್ತಾಯ!

    ಮಂಡ್ಯ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಗುರು ಪತ್ನಿ ಕಲಾವತಿ ಅವರನ್ನ ಮಂಡ್ಯ ಲೋಕಸಭೆ ಚುನಾವಣೆಯ ಅಭ್ಯರ್ಥಿಯನ್ನಾಗಿ ಮಾಡಲು ರಾಜ್ಯದ ಮೂರು ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದು ಒತ್ತಾಯಿಸಲಾಗುತ್ತಿದೆ.

    ಹೌದು, ಬೆಂಗಳೂರು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರು ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಕಾಲೋನಿಯ ಹುತಾತ್ಮ ಯೋಧ ಗುರು ನಿವಾಸದಲ್ಲಿ ಪತ್ರ ಬಿಡುಗಡೆ ಮಾಡಿದ ವೆಂಕಟೇಶ್ ಅವರು ಕಲಾವತಿಯವರನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಮಂಡ್ಯದಿಂದ ಸ್ಪರ್ಧಿಸಲು ಅವಕಾಶ ನೀಡಿ ಎಂದು ರಾಜಕೀಯ ಪಕ್ಷಗಳ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ.

    ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಹಾಗೂ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್‍ಗೆ ವೆಂಕಟೇಶ್ ಅವರು ಪತ್ರ ಬರೆದಿದ್ದಾರೆ. ಈಗಾಗಲೇ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಕಣಕ್ಕಿಳಿಯಲು ನಟಿ ಸುಮಲತಾ, ನಟ ನಿಖಿಲ್ ಕುಮಾರಸ್ವಾಮಿ, ಲಕ್ಷ್ಮಿ ಅಶ್ವಿನ್ ಗೌಡ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಆದ್ರೆ ಯೋಧನ ಪತ್ನಿ ಕಲಾವತಿ ಅವರನ್ನ ಸಂಸತ್‍ಗೆ ಅವಿರೋಧವಾಗಿ ಆಯ್ಕೆ ಮಾಡಿ ಕಳುಹಿಸಿಕೊಡುವ ಬಗ್ಗೆ ಎಲ್ಲಾ ಪಕ್ಷಗಳು ಮುಂದಾಗುವಂತೆ ಈ ಪತ್ರದಲ್ಲಿ ಉಲ್ಲೇಖಿಸಿಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಫಂಗರು, ಮೂರು ಬಿಟ್ಟವರು ರಾಜಕಾರಣ ಮಾಡಬೇಕು: ರಾಯರೆಡ್ಡಿ ಬೇಸರ

    ಲಫಂಗರು, ಮೂರು ಬಿಟ್ಟವರು ರಾಜಕಾರಣ ಮಾಡಬೇಕು: ರಾಯರೆಡ್ಡಿ ಬೇಸರ

    ಕೊಪ್ಪಳ: ರಾಜಕೀಯ ವ್ಯವಸ್ಥೆ ಗಲೀಜು ಆಗಿದೆ. ಮಾನ ಮರ್ಯಾದೆ ಇದ್ರೆ ರಾಜಕಾರಣ ಮಾಡಬಾರದು, ಲಫಂಗರು, ಮೂರು ಬಿಟ್ಟವರು ರಾಜಕಾರಣ ಮಾಡಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಬೇಸರದ ನುಡಿಗಳನ್ನು ಆಡಿದ್ದಾರೆ.

    ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕೂಟದಲ್ಲಿ ದೇವಸ್ಥಾನ ಒಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಯರೆಡ್ಡಿ ಮಾಧ್ಯಮ ಮುಂದೆ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಲಫಂಗರು, ಮೂರು ಬಿಟ್ಟವರು ರಾಜಕಾರಣ ಮಾಡಬೇಕು. ಎಲ್ಲಾ ಪಕ್ಷದಲ್ಲಿ ನೈತಿಕತೆ ಇಲ್ಲ. ರಾಜಕೀಯ ಪಕ್ಷದಲ್ಲಿ ಅಷ್ಟೇ ಅಲ್ಲ, ಎಲ್ಲಾ ಕಡೆ ಅನೈತಿಕತೆ ನಡೆದಿದೆ. ಜನರೇ ರಾಜಕೀಯವನ್ನು ಸುಧಾರಣೆ ಮಾಡಬೇಕು ಎಂದು ಹೇಳಿದರು.

    ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಸಿಎಂ ಬೆಗ್ಗರ್ಸ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಸಿದ ರಾಯರೆಡ್ಡಿ ಅವರು, ಯಾರು ಸಹ ಆ ರೀತಿ ಮಾತನಾಡಬಾರದು. ಸಿಎಂ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹೀಗಾಗಿ ಅವರು ಆ ರೀತಿ ಮಾತನಾಡಬಾರದು ಎಂದರು.

    ನಾನು ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ನಾನು ಟಿಕೆಟ್ ಗಾಗಿ ಅರ್ಜಿ ಹಾಕಿಲ್ಲ. ಕೆಲವರು ನಾನು ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಗಾಸಿಪ್‍ಗೆ ತೆರೆ ಎಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭಾ ಚುನಾವಣೆ ಅಖಾಡಕ್ಕೆ ಅಮಿತ್ ಶಾ ಅದ್ಧೂರಿ ಎಂಟ್ರಿ

    ಲೋಕಸಭಾ ಚುನಾವಣೆ ಅಖಾಡಕ್ಕೆ ಅಮಿತ್ ಶಾ ಅದ್ಧೂರಿ ಎಂಟ್ರಿ

    ಬೆಂಗಳೂರು: ಲೋಕಸಭಾ ಚುನಾವಣೆಯ ಅಖಾಡಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಅದ್ಧೂರಿ ಎಂಟ್ರಿ ಕೊಡುತ್ತಿದ್ದಾರೆ.

    ಅಮಿತ್ ಶಾ ಆಂಧ್ರ ಪ್ರದೇಶ, ಕರ್ನಾಟಕ ಹಾಗು ತಮಿಳುನಾಡಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಇಂದು ಬೆಂಗಳೂರಿಗೆ ಬರುತ್ತಿದ್ದಾರೆ. ಚಾಣಾಕ್ಯನ ಭೇಟಿಯಿಂದಾಗಿ ರಾಜ್ಯ ಬಿಜೆಪಿ ಪಾಳಯದಲ್ಲಿನ ರಾಜಕೀಯ ಚಟುವಟಿಕೆ ಗರಿಗೆದರಿದೆ.

    ದೇವನಹಳ್ಳಿ, ಬೆಂಗಳೂರು ಹೊರವಲಯದ ರೆಸಾರ್ಟ್‍ನಲ್ಲಿ ಶಕ್ತಿಕೇಂದ್ರದ ಸಮಾವೇಶ, ಶಾಸಕರು, ಸಂಸದರ ಜೊತೆ ಸಭೆ, ಪ್ರಭಾರಿಗಳ ಜೊತೆ ಸಭೆಯಲ್ಲಿ ಭಾಗವಹಿಸಲಿದ್ದು, ಇಡೀ ದಿನ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಈ ನಡುವೆ ಇಂದು ರಾತ್ರಿಯೇ ಬೆಂಗಳೂರಿನ ಹೊರ ವಲಯದ ರೆಸಾರ್ಟ್‍ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಆಪರೇಷನ್ ಡೀಲ್ ಆಡಿಯೋ ಆರೋಪದಿಂದಾದ ಡ್ಯಾಮೇಜ್ ಕಂಟ್ರೋಲ್ ಮಾಡುವ ಬಗ್ಗೆ, ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆಯ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಲಿದೆ.

    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.40ಕ್ಕೆ ದೇವನಹಳ್ಳಿಯ ಅವತಿಯ ಸಾಯಿ ಗಾರ್ಡನ್ ನಲ್ಲಿರುವ ಶಕ್ತಿಕೇಂದ್ರದ ಸಮಾವೇಶದಲ್ಲಿ ಭಾಗವಹಿಸಿ, ಸಂಜೆ 5.45ಕ್ಕೆ ಯಲಹಂಕದಲ್ಲಿರುವ ರೆಸಾರ್ಟ್‍ನಲ್ಲಿ ಶಾಸಕರು, ಸಂಸದರ ಸಭೆ ನಡೆಸಲಿದ್ದಾರೆ.

    ಸಂಜೆ 7.15 ಕ್ಕೆ ಲೋಕಸಭಾ ಪ್ರಭಾರಿಗಳು, ಸಂಚಾಲಕರು, ವಿಸ್ತಾರಕರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರ ಸಭೆ ನಡೆಸಲಿದ್ದು, ರೆಸಾರ್ಟ್‍ನಲ್ಲಿಯೇ ರಾತ್ರಿ 9 ಗಂಟೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ, ರೆಸಾರ್ಟ್‍ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಫೆ.22 ರಂದು ಬೆಳಗ್ಗೆ 9.30ಕ್ಕೆ ತಮಿಳುನಾಡಿನ ಮಧುರೈಗೆ ಪ್ರವಾಸ ಕೈಗೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿ ಆರ್ ನಾಟ್ ಬೆಗ್ಗರ್ಸ್ – ಕಾಂಗ್ರೆಸ್ಸಿಗೆ ಸಿಎಂ ಟಾಂಗ್

    ವಿ ಆರ್ ನಾಟ್ ಬೆಗ್ಗರ್ಸ್ – ಕಾಂಗ್ರೆಸ್ಸಿಗೆ ಸಿಎಂ ಟಾಂಗ್

    ಮೈಸೂರು: ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ವಿ ಆರ್ ನಾಟ್ ಬೆಗ್ಗರ್ಸ್ ಎಂದು ಕಾಂಗ್ರೆಸ್‍ಗೆ ಟಾಂಗ್ ಕೊಟ್ಟಿದ್ದಾರೆ.

    ಮೈಸೂರು ನಗರ ಪ್ರದಕ್ಷಿಣೆಗೆ ಸಿಎಂ ಕುಮಾರಸ್ವಾಮಿ ಆಗಮಿಸಿದ್ದಾರೆ. ಇದೇ ವೇಳೆ ಲೋಕಸಭಾ ಚುನಾವಣೆ ಸೀಟು ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದ ಸಿಎಂ, “ನಾವು ಬೆಗ್ಗರ್ಸ್ ಅಲ್ಲ. ನಮಗೆ ಏಳೋ ಐದೋ ಮೂರೋ ಸೀಟು ಬಿಟ್ಟು ಕೊಡ್ತಾರೋ ಗೊತ್ತಿಲ್ಲ. ವೀ ಆರ್ ನಾಟ್ ಬೆಗ್ಗರ್ಸ್. ರಾಷ್ಟ್ರಕ್ಕೆ ಒಂದು ಸಂದೇಶ ರವಾನೆ ಆಗಬೇಕಾದರೆ ಎಲ್ಲರೂ ಕೂತು ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡಬೇಕು. ಆಡಳಿತ ಕಡೆಗೆ ನಾನು ಗಮನ ಹರಿಸಿದ್ದೇನೆ. ನಮ್ಮ ರಾಷ್ಟ್ರಧ್ಯಕ್ಷರು ಕಾಂಗ್ರೆಸ್ ಜೊತೆ ಕೂತು ಮಾತಾಡಿ ಸೀಟು ಹಂಚಿಕೆ ಮಾಡಿಕೊಳ್ತಾರೆ. ನಾನು ಈ ಸ್ಥಾನ ಹಂಚಿಕೆ ಬಗ್ಗೆ ಯೋಚನೆ ಮಾಡಿಲ್ಲ” ಎಂದು ಹೇಳಿದರು.

    ಎರಡು ಪಾರಂಪರಿಕ ಕಟ್ಟಡ ನೆಲಸಮಕ್ಕೆ ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಪಾಲಿಕೆಯ ಈ ಕ್ರಮಕ್ಕೆ ಯದುವಂಶದ ಯದುವೀರ್ ಒಡೆಯರ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಅವರು ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡವನ್ನು ವೀಕ್ಷಣೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದ ನಿಜವಾದ ಮನೆಮಗಳು ಯಾರು? – ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ಮಂಡ್ಯದ ನಿಜವಾದ ಮನೆಮಗಳು ಯಾರು? – ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ಮಂಡ್ಯ: ನಟಿ ಸುಮಲತಾ ಅಂಬರೀಶ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಅನ್ನೋ ವಿಚಾರ ಕೇಳಿ ಬಂದ ಬೆನ್ನಲ್ಲೆ ವಾಟ್ಸಪ್ ನಲ್ಲಿ ಲಕ್ಷ್ಮಿ ಅಶ್ವಿನ್ ಗೌಡ ಹೆಸರು ಹರಿದಾಡ್ತಿದೆ.

    ಮಂಡ್ಯದ ನಿಜವಾದ ಮನೆ ಮಗಳು ಯಾರು? ಲಕ್ಷ್ಮಿ ಅಶ್ವಿನ್ ಗೌಡ ಅಥವಾ ಸುಮಲತಾ ಎಂಬ ಚರ್ಚೆ ಎದ್ದಿದೆ. ಕಾಂಗ್ರೆಸ್‍ನಿಂದ ಸುಮಲತಾರನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಜೆಡಿಎಸ್‍ನಿಂದ ಲಕ್ಷ್ಮಿ ಅಶ್ವಿನ್ ಗೌಡ ಹೆಸರು ಚಾಲ್ತಿಗೆ ಬಂದಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಲಕ್ಷ್ಮಿ ಅಶ್ವಿನ್ ಗೌಡ ಅವರು ಕಳೆದ ವರ್ಷ ನವಂಬರ್‍ನಲ್ಲಿ ನಡೆದ ಲೋಕಸಭಾ ಉಪಚುನಾವಣೆಯ ಆಕಾಂಕ್ಷಿಯಾಗಿದ್ದರು. ಆದ್ರೆ ವರಿಷ್ಠರು ಎಲ್‍ಆರ್ ಶಿವರಾಮೇಗೌಡರಿಗೆ ಟಿಕೆಟ್ ನೀಡಿದ್ದರು. ಇದೀಗ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡೋದಾದ್ರೆ ಅವರ ವಿರುದ್ಧ ಜೆಡಿಎಸ್‍ನಿಂದ ಲಕ್ಷ್ಮಿಅಶ್ವಿನ್ ಗೌಡರನ್ನ ನಿಲ್ಲಿಸುತ್ತಾರೆ. ಆ ಮೂಲಕ ಮಂಡ್ಯದ ನಿಜವಾದ ಮಗಳು ಎಂದು ಅಂಬಿ ಅಭಿಮಾನಿಗಳಿಗೆ ಸೆಡ್ಡು ಹೊಡೆಯುತ್ತಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಇದನ್ನೂ ಓದಿ: ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ: ಕೆ.ಟಿ.ಶ್ರೀಕಂಠೇಗೌಡ

    ಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರು ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ ಎಂಬ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯಿಂದ ಈ ಮನೆ ಮಗಳ ವಾದ ವಿವಾದ ಹುಟ್ಟಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಮನೆಮಗಳು ಯಾರು ಎನ್ನುವುದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿಯಿಂದ ಸ್ಪರ್ಧಿಸಲು ಸುಮಲತಾ ಅವರಿಗೇನು ಹುಚ್ಚು ಇದೆಯಾ: ಡಾ. ಸಿದ್ದರಾಮಯ್ಯ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಾಜ್ಯಕ್ಕೆ ಸಚಿವ ಡಿವಿಎಸ್ ಕೊಡುಗೆ ಬಗ್ಗೆ ಆರ್‌ಟಿಐನಲ್ಲಿಲ್ಲ ಮಾಹಿತಿ!

    ರಾಜ್ಯಕ್ಕೆ ಸಚಿವ ಡಿವಿಎಸ್ ಕೊಡುಗೆ ಬಗ್ಗೆ ಆರ್‌ಟಿಐನಲ್ಲಿಲ್ಲ ಮಾಹಿತಿ!

    ಬೆಂಗಳೂರು: ಕೇಂದ್ರ ಸಚಿವರೊಬ್ಬರು ಕರ್ನಾಟಕದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ಅವರ ಐದು ವರ್ಷದ ಅವಧಿ ಮುಗಿದು ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜ್ಯಕ್ಕೆ ಸಚಿವರ ಕೊಡುಗೆ ಏನು ಎಂಬ ಮಾಹಿತಿ ಕೋರಿ ಅರ್ಜಿ ಹಾಕಿದ್ರೆ ಮಾಹಿತಿ ಸಿಕ್ಕಿಲ್ಲ. ಬದಲಾಗಿ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿಕೊಳ್ಳಿ ಎಂಬ ಉತ್ತರ ಬಂದಿದೆ.

    ಹೌದು. 5 ವರ್ಷ ಮೋದಿ ಸರ್ಕಾರದಲ್ಲಿ ಆರಂಭದಲ್ಲಿ ರೈಲ್ವೇ ಸಚಿವರಾಗಿ ಬಳಿಕ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ಸಚಿವರಾಗಿರುವ ಡಿವಿ ಸದಾನಂದ ಗೌಡರು ಐದು ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಮಾಡಿದ ಕೆಲಸಗಳೇನು ಎಂದು ಮಾಹಿತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು.

    ಈ ಪ್ರಶ್ನೆಗೆ ಪಬ್ಲಿಕ್ ಡೊಮೇನ್ ನಲ್ಲಿ ನೋಡಿ ಅಥವಾ ಇಂಟರ್‍ನೆಟ್ ನಲ್ಲಿ ನೋಡಿ ಎನ್ನುವ ಉತ್ತರ ಬಂದಿದೆ ಎಂದು ಆರ್‍ಟಿಯ ಕಾರ್ಯಕರ್ತ ಶಿವ ಮಂಜೇಶ್ ಹೇಳಿದ್ದಾರೆ.

    ಡಿ.ವಿ ಸದಾನಂದ ಗೌಡರ ಕ್ಷೇತ್ರದಡಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಆ ಕ್ಷೇತ್ರಗಳಲ್ಲಿ ಸಂಸದರ ನಿಧಿಯಿಂದ ಏನು ಕೆಲಸ ಮಾಡಿದ್ದಾರೆ ಎಂದರು ಯಾವುದೇ ಮಾಹಿತಿ ಇಲ್ಲ. ಅಲ್ಲದೇ ಎಸ್‍ಸಿ, ಎಸ್ಟಿ ವರ್ಗದವರಿಗೂ ಶೇ.1ರಷ್ಟು ಕೆಲಸ ಕಾರ್ಯಗಳನ್ನ ಮಾಡಿಲ್ಲ ಎಂದು ಶಿವ ಮಂಜೇಶ್ ಆರೋಪಿಸಿದ್ದಾರೆ.

    ಒಟ್ಟಾರೆ ಐದು ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಸದಾನಂದಗೌಡರ ಕೊಡುಗೆ ಬಗ್ಗೆ ಆರ್‍ಟಿಐನಲ್ಲೂ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇನ್ನಾದರೂ ಮಾಹಿತಿ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ರಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ನಿಧನದ ಬಳಿಕ ಈ ಖಾತೆಯನ್ನು ಡಿವಿಎಸ್ ಅವರಿಗೆ ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸುಮಲತಾರನ್ನು ಚುನಾವಣಾ ಕಣಕ್ಕಿಳಿಸಲು ಪಟ್ಟು ಹಿಡಿದ ಅಂಬಿ ಅಭಿಮಾನಿ ಬಳಗ

    ಸುಮಲತಾರನ್ನು ಚುನಾವಣಾ ಕಣಕ್ಕಿಳಿಸಲು ಪಟ್ಟು ಹಿಡಿದ ಅಂಬಿ ಅಭಿಮಾನಿ ಬಳಗ

    ಮಂಡ್ಯ: ಈ ಬಾರಿ ಮಂಡ್ಯ ಲೋಕಸಭೆ ಚುನಾವಣಾ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲೇ ಬೇಕು ಅಂತ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇಂದು ಮಂಡ್ಯದಿಂದ ಸಾವಿರಾರು ಅಂಬಿ ಅಭಿಮಾನಿಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.

    ಸ್ಯಾಂಡಲ್‍ವುಡ್ ಕಲಾವಿದರು ಒತ್ತಾಯ ಮಾಡಿದ್ದು ಆಯ್ತು, ಈಗ ಅಂಬರೀಶ್ ಅಭಿಮಾನಿಗಳ ಒತ್ತಾಯ ಶುರುವಾಗಿದೆ. ಹೌದು ಬರುವ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸುವಂತೆ ರೆಬೆಲ್ ಸ್ಟಾರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಮನವಿ ಮಾಡಿಕೊಳ್ಳಲು ಇಂದು ಮಂಡ್ಯದಿಂದ ಬೆಂಗಳೂರಿನ ಅಂಬರೀಶ್ ಅವರ ನಿವಾಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿದ್ದಾರೆ.

    ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಸಕ್ಕರೆನಾಡಿನಲ್ಲಿ ರಾಜಕೀಯ ಗರಿಗೆದರಿದೆ. ಈ ಬಾರಿ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲೇ ಬೇಕು ಅನ್ನೋ ಒತ್ತಾಯ ತೀವ್ರವಾಗಿ ಕೇಳಿಬರ್ತಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಸ್ಯಾಂಡಲ್‍ವುಡ್‍ನ ಪ್ರಮುಖರು ಕೂಡ ಸುಮಲತಾ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದರು. ಈಗ ಮತ್ತೆ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬಿ ಅಭಿಮಾನಿಗಳಿಂದ ಸುಮಲತಾ ಸ್ಪರ್ಧೆಗೆ ಒತ್ತಾಯ ಕೇಳಿ ಬಂದಿದೆ. ಇಷ್ಟೇ ಅಲ್ಲದೆ ಈಗಾಗಲೇ ಮೈತ್ರಿ ಪಕ್ಷದಿಂದ ಸುಮಲತಾರನ್ನು ಕಣಕ್ಕಿಳಿಸುವ ಉದ್ದೇಶದಿಂದ ಜೆಡಿಎಸ್ ವರಿಷ್ಠ ಹೆಚ್‍ಡಿ ದೇವೇಗೌಡರನ್ನ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ. ಹಾಗೆಯೇ ಅಂಬಿ ಅಭಿಮಾನಿಗಳು ಸುಮಲತಾ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವಂತೆ ಒತ್ತಾಯ ಮಾಡಲಾಗಿದೆ ಅಂತ ಮಾಹಿತಿ ಮೂಲಗಳು ತಿಳಿಸಿವೆ.

    ಇಂದು ಬೆಳಗ್ಗೆ ಮಂಡ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಂಬರೀಶ್ ರವರ ಮನೆಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ಶತಾಯಾ-ಗತಾಯ ಸುಮಲತಾ ಅಂಬರೀಶ್ ರವರ ಮನವೊಲಿಸಿ ಈ ಬಾರಿ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಲಿದ್ದಾರೆ. ಬೆಳಗ್ಗೆ ಮಂಡ್ಯ ನಗರದಿಂದ ಎರಡು ಬಸ್ಸುಗಳನ್ನು ಮಾಡಲಾಗಿದ್ದು, ಜಿಲ್ಲಾದ್ಯಂತ ಹಲವಾರು ಬಸ್ ಮೂಲಕ ತೆರಳಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ.

    ಮತ್ತೊಂದು ಕಡೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲು ಜೆಡಿಎಸ್ ಕೂಡ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಮಂಡ್ಯದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಹಿಂದೆ ಕುಮಾರಸ್ವಾಮಿಯವರು ಕೂಡ ಅಭಿಮಾನಿಗಳ ಒತ್ತಾಯ ಇದೆ. ಹೀಗಾಗಿ ನಿಖಿಲ್ ಮಂಡ್ಯದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಸದ್ಯ ಮಂಡ್ಯದಲ್ಲಿ ಈ ಬಾರಿ ಯಾರು ಅಭ್ಯರ್ಥಿ ಆಗ್ತಾರೆ ಅನ್ನೋ ಗೊಂದಲ ಶುರುವಾಗಿದ್ದು, ಮೈತ್ರಿ ಪಕ್ಷ ಯಾವ ರೀತಿ ಇದನ್ನ ಸರಿಪಡಿಸಿಕೊಂಡು ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತೆ ಅಂತ ಕಾದು ನೋಡಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಲೋಕಸಮರದ ಹೊತ್ತಲ್ಲಿ ದೋಸ್ತಿಗಳಲ್ಲಿ ದೊಡ್ಡ ಬಿರುಕು- ರಾಹುಲ್ ಗಾಂಧಿಗೆ ಸಿದ್ದರಾಮಯ್ಯರಿಂದ ಸ್ಫೋಟಕ ಕಂಪ್ಲೆಂಟ್

    ಲೋಕಸಮರದ ಹೊತ್ತಲ್ಲಿ ದೋಸ್ತಿಗಳಲ್ಲಿ ದೊಡ್ಡ ಬಿರುಕು- ರಾಹುಲ್ ಗಾಂಧಿಗೆ ಸಿದ್ದರಾಮಯ್ಯರಿಂದ ಸ್ಫೋಟಕ ಕಂಪ್ಲೆಂಟ್

    ಬೆಂಗಳೂರು: ಲೋಕಸಭಾ ಚುನಾವಣೆಯ ಹೊತ್ತಲ್ಲಿಯೇ ದೋಸ್ತಿಗಳಲ್ಲಿ ದೊಡ್ಡ ಬಿರುಕು ಬಿಡುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಪ್ರತೀ ದಿನ ದೋಸ್ತಿ ಸರ್ಕಾರದ ಬೆಳವಣಿಗೆಗಳನ್ನು ಗಮನಿಸಿದ್ರೆ ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಮುರಿದುಬೀಳುತ್ತಾ ಅನ್ನೋ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.

    ಇತ್ತ ಪದೇ ಪದೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜೀನಾಮೆ ಮಾತು ಆಡುತ್ತಿದ್ದಾರೆ. ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರು ನೀಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ ಸಿದ್ದರಾಮಯ್ಯ ಏನೆಲ್ಲಾ ಮಾತನಾಡಿದ್ದಾರೆ ಅನ್ನೋದನ್ನು ನೋಡೋದಾದ್ರೆ..
    ರಾಹುಲ್ ಗಾಂಧಿ – ಸಿದ್ದುಜೀ, ನಮ್ಮವರ್ಯಾಕೆ ಪದೇ ಪದೇ ಮಾತನಾಡ್ತಾರೆ..? ಜೆಡಿಎಸ್‍ನವರ ಕಥೆ ಏನು..?
    ಸಿದ್ದರಾಮಯ್ಯ – ನಮ್ ಶಾಸಕರು ಒಂದೆರಡು ಕಡೆ ಬಹಿರಂಗವಾಗಿ ಮಾತನಾಡಿರಬಹುದು ಸರ್.. ಅದರಿಂದ ಸರ್ಕಾರಕ್ಕೆ ಯಾವುದೆ ರೀತಿಯ ತೊಂದರೆ ಇಲ್ಲ.
    ಸಿದ್ದರಾಮಯ್ಯ – ಆದರೆ ಜೆಡಿಎಸ್ ನಾಯಕರು ಅದನ್ನೆ ದೊಡ್ಡ ವಿವಾದ ಮಾಡೋ ಹಿಂದೆ ಬೇರೆಯದೆ ಲೆಕ್ಕಾಚಾರವಿದೆ…..
    ರಾಹುಲ್ ಗಾಂಧಿ – ಏನದು..?
    ಸಿದ್ದರಾಮಯ್ಯ – ಮೈತ್ರಿ ಹೆಸರಿನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಹವಣಿಸುತ್ತಿದ್ದಾರೆ…
    ಸಿದ್ದರಾಮಯ್ಯ – ಒಮ್ಮೆ 5-6 ಲೋಕಸಭಾ ಕ್ಷೇತ್ರ ಅವರ ಪಾಲಾದ್ರೆ, ಅವರು ನಮ್ ಯುಪಿಎ ಜೊತೆಗೆ ನಿಲ್ತಾರೆ ಅಂತಾ ಹೇಳೋಕೆ ಸಾಧ್ಯ ಇಲ್ಲ

    ಸಿದ್ದರಾಮಯ್ಯ – ತಮಗೆ ಅನುಕೂಲ ಆಗೋದಾದ್ರೆ ಎನ್‍ಡಿಎ ಜೊತೆ ಹೋಗೋಕೂ ಹಿಂದೇಟು ಹಾಕಲ್ಲ…
    ರಾಹುಲ್ ಗಾಂಧಿ – ಏನ್ ಸಿದ್ದುಜೀ ಹಿಂಗೆ ಅಂತೀರಾ..?
    ಸಿದ್ದರಾಮಯ್ಯ – ಹೌದು ಸಾರ್.. ಹಾಗೇನಾದ್ರೂ ಎನ್‍ಡಿಎ ಜೊತೆ ಹೋದ್ರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವೂ ಉಳಿಯಲ್ಲ….
    ಸಿದ್ದರಾಮಯ್ಯ – ಜೆಡಿಎಸ್ ನಾಯಕರ ವರ್ತನೆ ನೋಡಿದ್ರೆ ಅವರು ಬಿಜೆಪಿ ನಾಯಕರ ವಿಶ್ವಾಸ ಗಳಿಸುವ ಯತ್ನ ಮಾಡುವಂತಿದೆ.
    ಸಿದ್ದರಾಮಯ್ಯ – ನಾವು ಈಗಲೆ ಎಚ್ಚೆತ್ತುಕೊಂಡು ಲೋಕಸಭಾ ಮೈತ್ರಿ ಬೇಕಾ ಬೇಡ್ವಾ ಎಂಬ ಬಗ್ಗೆ ಸ್ಪಷ್ಟ ತೀರ್ಮಾನ ತಗೋಬೇಕು..
    ರಾಹುಲ್ ಗಾಂಧಿ – ಆಯ್ತು ಸಿದ್ದುಜೀ, ಮೈತ್ರಿ ಬಗ್ಗೆ ಯೋಚಿಸಿ ತೀರ್ಮಾನ ಮಾಡೋಣ.. ಅವರ ಜೊತೆ ಮಾತಾಡ್ತೀನಿ.. ಡೋಂಟ್ ವರಿ..
    ರಾಹುಲ್ ಗಾಂಧಿ – ಹಂಗೇ, ನಮ್ಮವರಿಗೆ ಕಾಮ್ ಆಗಿ ಇರ್ಲಿಕ್ಕೆ ಹೇಳಿ.. ಎಲೆಕ್ಷನ್ ಟೈಮಲ್ಲಿ ಅನಗತ್ಯ ವಿವಾದ ಸೃಷ್ಟಿಸಿಕೊಳ್ಳಬೇಡಿ..
    ರಾಹುಲ್ ಗಾಂಧಿ – ಮುಂದಿನ ವಾರ ಫೈನಲ್ ಡಿಸಿಷನ್ ತಗೊಳ್ಳೋಣ.. ನೀವು ಚುನಾವಣೆಗೆ ತಯಾರಿ ನಡೆಸಿ
    ಸಿದ್ದರಾಮಯ್ಯ – ಆಯ್ತು ಸರ್…


    ಒಟ್ಟಿನಲ್ಲಿ ಸಿದ್ದರಾಮಯ್ಯ ಅವರು ಸ್ಫೋಟಕ ದೂರು ಕೇಳಿ ರಾಹುಲ್ ಗಾಂಧಿ ಶಾಕ್ ಆಗಿದ್ದಾರಂತೆ. ಜೆಡಿಎಸ್‍ನವರು ನಮ್ಮ ಬೆಂಬಲಿದಿಂದ ಗೆದ್ದ ಮೇಲೆ ಕೈಕೊಟ್ರೆ, ಮೈತ್ರಿಧರ್ಮ ಪಾಲನೆಯೋ ಅಥವಾ ಫ್ರೆಂಡ್ಲಿ ಫೈಟ್ ಮಾಡುವುದೋ ಅನ್ನೋ ಗೊಂದಲದಲ್ಲಿ ರಾಹುಲ್ ಸಿಲುಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv