Tag: LokSabha election

  • ರಾಜಕಾರಣಿಗಳ ಮೇಲೆ ಆಯೋಗದಿಂದ ಹೊಸ ಬ್ರಹ್ಮಾಸ್ತ್ರ..!

    ರಾಜಕಾರಣಿಗಳ ಮೇಲೆ ಆಯೋಗದಿಂದ ಹೊಸ ಬ್ರಹ್ಮಾಸ್ತ್ರ..!

    ಬೆಂಗಳೂರು: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕಾರಣಿಗಳಿಗೆ ಢವಢವ ಆರಂಭವಾಗಿದೆ. ಚುನಾವಣಾ ಆಯೋಗವು ರಾಜಕಾರಣಿಗಳ ಮೇಲೆ ಹೊಸ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದೆ. ರಾಜಕಾರಣಿಗಳು ಲೆಕ್ಕ ಕೊಡ್ಲೇ ಬೇಕು, ಇಲ್ಲಾಂದ್ರೆ ಎಲೆಕ್ಷನ್‍ಗೆ ನಿಲ್ಲೋ ಹಾಗೇ ಇಲ್ಲ ಎಂಬ ಹೊಸ ನೀತಿಯನ್ನು ಚುನಾವನಾ ಆಯೋಗ ಮುಂದಿಟ್ಟಿದೆ.

    ಏನದು ರೂಲ್ಸ್..?
    ಚುನಾವಣೆಗೆ ನಿಲ್ಲುವ ರಾಜಕಾರಣಿಗಳು ತಮ್ಮ ಸಂಪತ್ತಿನ ಲೆಕ್ಕ ಕೊಡುವುದು ಕಡ್ಡಾಯವಾಗಿದೆ. ಕೇವಲ ಭಾರತದಲ್ಲಿರುವ ಆಸ್ತಿಪಾಸ್ತಿಯಷ್ಟೇ ಅಲ್ಲ ಈ ಬಾರಿ ವಿದೇಶಿ ಸಂಪತ್ತಿನ ಲೆಕ್ಕನೂ ಕೊಡಬೇಕು. 5 ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆ ಮುಂದೆ ಘೋಷಿಸಿಕೊಂಡಿರುವ ಆಸ್ತಿಪಾಸ್ತಿ ಲೆಕ್ಕನೂ ಕೊಡಬೇಕು. ಅಭ್ಯರ್ಥಿ ಹಾಗೂ ಅಭ್ಯರ್ಥಿಯ ಪತಿ ಅಥವಾ ಪತ್ನಿ, ಮಕ್ಕಳು, ಕುಟುಂಬಸ್ಥರ ಹೆಸರಲ್ಲಿರುವ ಆಸ್ತಿಯ ಲೆಕ್ಕವನ್ನೂ ನೀಡಬೇಕು.

    ವಿದೇಶಿ ಸಂಪತ್ತು, 5 ವರ್ಷಗಳ ಹಿಂದಿನ ಐಟಿ ಲೆಕ್ಕ ಕೊಡದೆ ಹೋದರೆ ನಾಮಪತ್ರ ತಿರಸ್ಕೃತವಾಗುತ್ತದೆ. ಈ ಮಾಹಿತಿಗಳನ್ನ ಚುನಾವಣಾಧಿಕಾರಿಗಳು ನೋಟಿಸ್ ಬೋರ್ಡ್ ನಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಅಲ್ಲದೆ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಅಭ್ಯರ್ಥಿಗಳ ಪಕ್ಷವೇ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಕೂಡ ಕಡ್ಡಾಯವಾಗಿದೆ.

    ಅಭ್ಯರ್ಥಿಗಳು ಬೇಕಾಬಿಟ್ಟಿ, ಪ್ರಚಾರ ಮಾಡಂಗಿಲ್ಲ. ಖರ್ಚು ಮಾಡುವಂತಿಲ್ಲ. ಇದರ ಬಗ್ಗೆಯೂ ಚುನಾವಣಾ ಆಯೋಗ ಕಣ್ಣಿಟ್ಟಿದೆ. ಫಾರ್ಮ್ 26 ಸರಿಯಾಗಿ ಭರ್ತಿಯಾಗದಿದ್ದಲ್ಲಿ ನಾಮಪತ್ರ ತಿರಸ್ಕೃತವಾಗಲಿದೆ. ನಿಖರ ಮಾಹಿತಿ ಇಲ್ಲದಿದ್ದಲ್ಲಿ ಕೂಡ ನಾಮಪತ್ರ ತಿರಸ್ಕೃತವಾಗುತ್ತದೆ. ಅಭ್ಯರ್ಥಿಗಳು ಪಾನ್‍ಕಾರ್ಡ್ ಹೊಂದಿರಲೇಬೇಕು. ಸ್ಥಳೀಯ ಪತ್ರಿಕೆಗಳಲ್ಲಿ ಅಕ್ರಮ ಮಾಡೋ ಅಭ್ಯರ್ಥಿಗಳ ಭಾವಚಿತ್ರವರಬಾರದು. ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಯಾರು ಬೇಕಾದರೂ ಸಿ-ವಿಜಿಲ್ ಆ್ಯಪ್ ಮೂಲಕ ದೂರು ಕೊಡಬಹುದು.

    ಮೊಬೈಲ್ ಆಪ್ ಮೂಲಕ ದೂರು ನೀಡಲು ಅವಕಾಶವಿದೆ. ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ 100 ನಿಮಿಷದ ಒಳಗೆ ಕ್ರಮ ಕೈಗೊಳ್ಳಲಾಗುವುದು. ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಪ್ರಚಾರಕ್ಕೆ ಬ್ರೇಕ್ ಹಾಕಲಾಗಿದೆ. ಮಾಧ್ಯಮಗಳಲ್ಲಿ ಪ್ರಚಾರ ಮಾಡಿದರೆ ಅದರ ಲೆಕ್ಕವನ್ನು ಕೂಡ ನೀಡಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚುನಾವಣಾ ನೀತಿ ಸಂಹಿತೆ ಎಫೆಕ್ಟ್ – ಸಿದ್ದರಾಮಯ್ಯ ಕಾರಿಗೆ ಡ್ರೈವರ್ ಆದ್ರು ಖಾದರ್

    ಚುನಾವಣಾ ನೀತಿ ಸಂಹಿತೆ ಎಫೆಕ್ಟ್ – ಸಿದ್ದರಾಮಯ್ಯ ಕಾರಿಗೆ ಡ್ರೈವರ್ ಆದ್ರು ಖಾದರ್

    – ದೇಶಾದ್ಯಂತ ಫ್ಲೆಕ್ಸ್, ಬ್ಯಾನರ್ ರಿಮೂವ್

    ಉಡುಪಿ/ಬೆಳಗಾವಿ: ಲೋಕಸಮರಕ್ಕೆ ಮುಹೂರ್ತ ನಿಗದಿಯಾಗಿದ್ದು ಭಾನುವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಉಡುಪಿಯಲ್ಲಿದ್ದ ಸಿದ್ದರಾಮಯ್ಯ ಮಂಗಳೂರಿಗೆ ವಾಪಸ್ ತೆರಳುವಾಗ ಸಚಿವ ಯು.ಟಿ. ಖಾದರ್ ಚಲಾಯಿಸುತ್ತಿದ್ದ ಕಾರಿನಲ್ಲಿ ತೆರಳಿದ್ದರು.

    ಕಲ್ಸಂಕದಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ಜಾಥಾ ಮುಗಿಯೋ ವೇಳೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಿಂದ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೀನುಗಾರ ಮಹಿಳೆಯರ ಕಾರ್ಯಕ್ರಮಕ್ಕೆ ಸರಕಾರಿ ಕಾರನ್ನು ಬಿಟ್ಟು ಸಚಿವ ಖಾದರ್ ಕಾರಿನಲ್ಲಿ ಆಗಮಿಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ: ಯಾವ ಕ್ಷೇತ್ರಗಳಲ್ಲಿ ಯಾವ ದಿನ ಚುನಾವಣೆ?

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವೆ ಜಯಮಾಲಾ ಸೇರಿದಂತೆ ಹಲವು ನಾಯಕರು ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ರು. ಬೆಳಗಾವಿಯ ಯರಗಟ್ಟಿಯಲ್ಲಿ ಆಯೋಜಿಸಿದ್ದ ಮೋದಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಸುರೇಶ್ ಅಂಗಡಿ ಸಹ ಸರ್ಕಾರಿ ವಾಹನ ಬಿಟ್ಟು ಬಸ್‍ನಲ್ಲೇ ಸುಮಾರು 65 ಕಿ.ಮೀ ಪ್ರಯಾಣಿಸಿದ್ರು.

    ಸಚಿವರಾದ ಜಿ.ಟಿ.ದೇವೆಗೌಡ ಹಾಗೂ ಪುಟ್ಟರಾಜು ಮೊದಲೇ ಖಾಸಗಿ ಕಾರಿನಲ್ಲಿ ಬಂದು ಮೈಸೂರಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇವರೆಲ್ಲರ ಮಧ್ಯೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಕಾಂಗ್ರೆಸ್ ಪರಿವರ್ತನಾ ಯಾತ್ರೆ ಮುಗಿಸಿ ಸರ್ಕಾರಿ ಕಾರಿನಲ್ಲೇ ಪ್ರಯಾಣ ಬೆಳೆಸಿದ್ರು. ಇತ್ತ ಸಂಸದ ಪ್ರಹ್ಲಾದ್ ಜೋಶಿ ನೀತಿ ಸಂಹಿತೆ ಜಾರಿ ಬಳಿಕವೂ ಸಾರ್ವಜನಿಕ ಸಭೆ ನಡೆಸಿದ್ರು.


    ನೀತಿ ಸಂಹಿತೆ ಜಾರಿ ಬೆನ್ನಲ್ಲೇ ದೇಶಾದ್ಯಂತ ರಸ್ತೆ, ಮಾಲ್, ಅಂಗಡಿ ಸೇರಿ ಹಲವೆಡೆ ಹಾಕಲಾಗಿದ್ದ ರಾಜಕೀಯ ಪಕ್ಷಗಳ ಬ್ಯಾನರ್, ಫ್ಲೆಕ್ಸ್‍ಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಬ್ಯಾನರ್, ಫ್ಲೆಕ್ಸ್ ಗಳನ್ನು ತೆರವುಗೊಳಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಯೋಜನೆಗಳ ಪರ ಜಾಹೀರಾತು ಹೊಂದಿರುವ ಫ್ಲೆಕ್ಸ್ ಗಳನ್ನು ಕೂಡ ತೆರವು ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜನರೇ ನಮ್ಮ ತಂದೇ ಮಾಡಿರುವ ಆಸ್ತಿ: ನಿಖಿಲ್ ಕುಮಾರಸ್ವಾಮಿ

    ಜನರೇ ನಮ್ಮ ತಂದೇ ಮಾಡಿರುವ ಆಸ್ತಿ: ನಿಖಿಲ್ ಕುಮಾರಸ್ವಾಮಿ

    ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಅವರು ನಡೆದ ಹಾದಿಯಲ್ಲೇ ನಾನು ಹೋಗಲು ಇಷ್ಟ ಪಡುತ್ತೇನೆ. ಜನರೇ ನಮ್ಮ ತಂದೆ ಮಾಡಿರುವ ಆಸ್ತಿ ಎಂದು ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ನಿಖಿಲ್ ಅವರು ವಿವಾಹಕ್ಕೂ ಮೊದಲು ನಡೆದ ಕಲ್ಯಾಣೋತ್ಸವದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ನಿಖಿಲ್ ಅವರಿಗೆ ಸಚಿವ ಸಿ.ಎಸ್ ಪುಟ್ಟರಾಜು ಕೂಡ ಸಾಥ್ ನೀಡಿದರು. ಬಳಿಕ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ಎಲ್ಲರ ಅಭಿಪ್ರಾಯ ಪಡೆದುಕೊಂಡು ನನ್ನನ್ನ ಲೋಕಸಭೆ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಜಿಲ್ಲೆಯ ಮೂವರು ಸಚಿವರು, ಶಾಸಕರು ಹಾಗೂ ಜಿಲ್ಲೆಯ ಜನರ ನಾಡಿ ಮಿಡಿತ ಅರಿತು ಹೆಸರು ಘೋಷಣೆ ಮಾಡಿದ್ದಾರೆ. ನಾನು ನಿಮ್ಮ ಗುಲಾಮನಾಗಿ ಕೆಲಸ ಮಾಡ್ತಿನಿ, ಒಂದು ಅವಕಾಶ ಮಾಡಿಕೊಡಿ ಎಂದು ವಿನಂತಿ ಮಾಡಿಕೊಂಡರು.

    ತಾತ ಹಾಗೂ ತಂದೆಯ ಹಾದಿಯಲ್ಲಿ ನಾನು ಸಾಗುತ್ತೇನೆ. ನನ್ನ ತಂದೆ ಆಸ್ತಿ ಅಂತ ಗಳಿಸಿದ್ದು ಜನರನ್ನ. ನೀವೇ ನಮಗೆ ಆಸ್ತಿ. ಜಿಲ್ಲೆಯ ಅಭಿವೃದ್ದಿಗಾಗಿ ಸಿಎಂ 9 ಸಾವಿರ ಕೋಟಿ ರೂ. ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೊಸ ಸಕ್ಕರೆ ಕಾರ್ಖಾನೆ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.

    ಬಳಿಕ ಮಂಡ್ಯ ಕ್ಷೇತ್ರದಲ್ಲಿ ಚುನಾವಣಾ ಅಭ್ಯರ್ಥಿ ವಿಚಾರವಾಗಿ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ. ಜಿಲ್ಲೆಯ ಜನರು ನಮ್ಮ ತಂದೆಗೆ ಪುನರ್ಜನ್ಮ ನೀಡಿದ್ದಾರೆ. ನಾನು ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದರಾಮಯ್ಯ ಬೊಗಳೆ ಹೊಡೆಯೋರು, ಪುಂಗಿದಾಸ: ಈಶ್ವರಪ್ಪ ಟೀಕೆ

    ಸಿದ್ದರಾಮಯ್ಯ ಬೊಗಳೆ ಹೊಡೆಯೋರು, ಪುಂಗಿದಾಸ: ಈಶ್ವರಪ್ಪ ಟೀಕೆ

    ಹಾವೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಬೊಗಳೆ ಹೊಡೆಯೋರು, ಪುಂಗಿದಾಸ ಅಂತ ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಅವರು ಟೀಕಿಸಿದ್ದಾರೆ.

    ಜಿಲ್ಲೆಯ ಬ್ಯಾಡಗಿ ತಾಲೂಕು ಮೊಟೇಬೆನ್ನೂರಿನ ಶಿಕ್ಷಣಸಂಸ್ಥೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ರಾಜೀನಾಮೆ ನೀಡಲಿ, ನಾನು ಶಿವಮೊಗ್ಗ ಕ್ಷೇತ್ರಕ್ಕೆ ರಾಜೀನಾಮೆ ಕೊಡುತ್ತೇನೆ. ಬಳಿಕ ಇಬ್ಬರು ನಮ್ಮ ನಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತೇವೆ. ಬಾದಾಮಿಯಲ್ಲಿ ಅವರ ವಿರುದ್ಧ ನಮ್ಮ ಪಕ್ಷದ ಅಭ್ಯರ್ಥಿ ಹಾಕುತ್ತೇವೆ. ಅವರು ನಮ್ಮ ವಿರುದ್ಧ ಅವರ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿ. ಜನ ಯಾರ ಪರ ಇದ್ದಾರೆ ಅಂತ ಆಗ ಗೊತ್ತಾಗುತ್ತೆ. ಎರಡು ಕ್ಷೇತ್ರದಲ್ಲಿ ನಮ್ಮ ಪಕ್ಷವೇ ಗೆಲ್ಲದಿದ್ದರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡುತ್ತೇನೆ ಎಂದು ಸವಾಲ್ ಹಾಕಿದ್ದಾರೆ.

    ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತದಿಂದ ಯಾಕೆ ಸೋತರು? ಶಿವಮೊಗ್ಗದ ಜನ ಐತಿಹಾಸಿಕವಾಗಿ ನನ್ನನ್ನು ಗೆಲ್ಲಿಸಿದ್ದಾರೆ. ಪಾಪ ಬಾದಾಮಿ ಜನರಿಗೆ ಸಿದ್ದರಾಮಯ್ಯ ಅವರ ವಿಚಾರ ಗೊತ್ತಿಲ್ಲ ಅದಕ್ಕೆ ಮೊದಲ ಬಾರಿ ಗೆಲ್ಲಿಸಿದ್ದಾರೆ. ಸಿದ್ದರಾಮಯ್ಯ ಬೊಗಳೆ ಹೊಡೆಯುತ್ತಾರೆ, ಪುಂಗಿದಾಸ ಅಂತ ರಾಜ್ಯದ ಜನರು ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮಾತಿಗೆ ಬೆಲೆಯಿಲ್ಲ. ಅವರು ಸುಮ್ಮನೆ ನಾನು ಇಂದೂ ಸಿಎಂ, ಮುಂದೂ ಸಿಎಂ ಅಂತ ಹೇಳುತ್ತಾರೆ ಅಷ್ಟೇ. ಬಿಜೆಪಿಗೆ ಅಧಿಕಾರ ಸಿಗಬಾರದು ಅಂತ ಮೈತ್ರಿ ಸರ್ಕಾರ ಮಾಡಿದರು. ಆದ್ರೆ ಪಾಪ ಈಗ ಸಿಎಂ ಕುಮಾರಸ್ವಾಮಿ ಅವರ ಪರಿಸ್ಥಿತಿ ನೋಡೋದಕ್ಕೆ ಆಗ್ತಿಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಚಿವ ತಮ್ಮಣ್ಣ ಮನೆಗೆ ಮುತ್ತಿಗೆ ಹಾಕಿ ಮದ್ದೂರು ಜನ ಎಚ್ಚರಿಕೆ

    ಸಚಿವ ತಮ್ಮಣ್ಣ ಮನೆಗೆ ಮುತ್ತಿಗೆ ಹಾಕಿ ಮದ್ದೂರು ಜನ ಎಚ್ಚರಿಕೆ

    ಮಂಡ್ಯ: ಒಂದು ಕಡೆ ಮಂಡ್ಯದಲ್ಲಿ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಏರುತ್ತಿದ್ದು, ಮತ್ತೊಂದು ಕಡೆ ಚುನಾವಣೆ ಘೋಷಣೆಗೂ ಮುನ್ನವೇ ರೈತರಿಂದ ಮತದಾನಕ್ಕೆ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಮನೆಗೆ ಮುತ್ತಿಗೆ ಹಾಕಿ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆಯನ್ನು ರೈತರು ನೀಡಿದ್ದಾರೆ. ಮದ್ದೂರು ತಾಲೂಕಿನ ಕಡೆಯ ಭಾಗಕ್ಕೆ ವ್ಯವಸಾಯಕ್ಕೆ ನೀರು ಬಿಡದ ಹಿನ್ನೆಲೆಯಲ್ಲಿ ಸಚಿವರ ಮನೆಗೆ ರೈತರು ಮುತ್ತಿಗೆ ಹಾಕಿದ್ದಾರೆ.

    ಅಜ್ಜಹಳ್ಳಿ, ಮಾರ್ಗೇನಹಳ್ಳಿ, ಉಪ್ಪಾರದೊಡ್ಡಿ ಗ್ರಾಮಸ್ಥರಿಂದ ಸಚಿವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಭಾಗದ ಜಮೀನಿಗೆ ವ್ಯವಸಾಯಕ್ಕೆ ನೀರಿಲ್ಲ. ಹೀಗಿರುವಾಗ ನಮಗೆ ಚುನಾವಣೆ ಯಾಕೆ? ಮತಪೆಟ್ಟಿಗೆ ನಮ್ಮ ಊರಿಗೆ ಬರಲು ಬಿಡಲ್ಲ ಎಂದು ಗ್ರಾಮಸ್ಥರು ಸಚಿವರ ಮನೆಗೆ ಮುತ್ತಿಗೆ ಹಾಕಿ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • `ದೇವೇಗೌಡರ ಕ್ರಿಕೆಟ್ ಟೀಂ’ – ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

    `ದೇವೇಗೌಡರ ಕ್ರಿಕೆಟ್ ಟೀಂ’ – ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

    ಮಂಡ್ಯ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಟಿಕೆಟ್ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ಈ ಮಧ್ಯೆ ಕುಟುಂಬ ರಾಜಕಾರಣದ ಬಗ್ಗೆ ಭಾರೀ ಚರ್ಚೆಗಳಾಗುತ್ತಿವೆ.

    ಹೌದು. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ದೇವೇಗೌಡರು ಟೀಂ ಇಂಡಿಯಾ ಕಟ್ಟುತ್ತಿದ್ದರೆ ಅವರ ಇಡೀ ಕುಟುಂಬ ಟೀಂ ಇಂಡಿಯಾದಲ್ಲಿರುತ್ತಿತ್ತು ಎಂದು ಹೇಳುವಂತಹ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಫೋಟೋದಲ್ಲಿ ಟೀಂ ಇಂಡಿಯಾ ಆಟಗಾರರ ಫೋಟೋಗೆ ದೇವೇಗೌಡರ ಕುಟುಂಬದವರ ಫೋಟೋ ಎಡಿಟ್ ಮಾಡಿ `ದೇವೇಗೌಡರ ಕ್ರಿಕೆಟ್ ಟೀಂ’ ಎಂದು ಬರೆಯಲಾಗಿದೆ. ಇದೀಗ ಈ ಎಡಿಟೆಡ್ ಫೋಟೋ ವೈರಲ್ ಆಗುತ್ತಿದೆ. ದೊಡ್ಡಗೌಡ್ರು ಇಂಡಿಯಾ ಟೀಂ ಸೇರಿದ್ದಿದ್ರೆ ಇಷ್ಟೊತ್ತಿಗೆ ಫುಲ್ ಟೀಂನಲ್ಲಿ ಅವರ ಕುಟುಂಬದವ್ರೇ ಇರುತ್ತಿದ್ದರು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

    ಜೆಡಿಎಸ್‍ನಲ್ಲಿ ಯಾವ ಕಾರ್ಯಕರ್ತರಿಗೂ `ಟಿಕೆಟ್’ ಕೊಡಲ್ಲ. ಪಕ್ಷಕ್ಕಾಗಿ ದುಡಿದು ದುಡಿದು ಅವರೇ `ಟಿಕೆಟ್’ ತಗೋಬೇಕು ಎಂದು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ದೇವೇಗೌಡರ ಕುಟುಂಬ ರಾಜಕಾರಣ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ವಿಶೇಷ ಏನೆಂದರೆ ಜೆಡಿಎಸ್ ಕಾರ್ಯಕರ್ತರೇ ಈ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿಯಣ್ಣನ ಕಳೆದುಕೊಂಡು ನೋವಾಗಿದೆ – ಪ್ರಚಾರದ ವೇಳೆ ಮಂಡ್ಯದ ಗಂಡನ್ನು ನೆನೆದ ನಿಖಿಲ್

    ಅಂಬಿಯಣ್ಣನ ಕಳೆದುಕೊಂಡು ನೋವಾಗಿದೆ – ಪ್ರಚಾರದ ವೇಳೆ ಮಂಡ್ಯದ ಗಂಡನ್ನು ನೆನೆದ ನಿಖಿಲ್

    ಮಂಡ್ಯ: ಅಂಬರೀಶಣ್ಣನ ಕಳೆದುಕೊಂಡು ನಮಗೆಲ್ಲ ತುಂಬಾ ನೋವಾಗಿದೆ. ಚಿತ್ರರಂಗಕ್ಕೆ ಅವರು ತಮ್ಮದೇ ಆದ ಕೊಡುಗೆ ನೀಡಿದ್ದರು ಎಂದು ನಟ ನಿಖಿಲ್ ಕುಮಾರಸ್ವಾಮಿ ಪ್ರಚಾರದ ವೇಳೆ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನಪಿಸಿಕೊಂಡಿದ್ದಾರೆ.

    ಅಂಬರೀಶಣ್ಣನ ಕಳೆದುಕೊಂಡು ನಮಗೆಲ್ಲ ತುಂಬಾ ನೋವಾಗಿದೆ. ಚಿತ್ರರಂಗದಲ್ಲಿ ಅವರದೇ ಕೊಡುಗೆ ನೀಡಿದ್ದಾರೆ. ಅಂಬರೀಶಣ್ಣನ ಸಹೋದರನಾಗಿ ಕುಮಾರಣ್ಣ ನಡೆದುಕೊಂಡ ರೀತಿ ನಿಮಗೆ ಗೊತ್ತಿದೆ. ನಾನು ಸಂಬಂಧಗಳಿಗೆ ಬೆಲೆ ಕೊಡುವ ಮನುಷ್ಯ. ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದ್ರು ಚುನಾವಣೆಗೆ ನಿಲ್ಲಬಹುದು. ಯಾರೇ ಚುನಾವಣೆಗೆ ನಿಂತರೂ ಸ್ವಾಗತಿಸೋಣ. ಅಂತಿಮ ತೀರ್ಪು ದೇವರಾದ ನೀವು ಕೊಡಬೇಕು. ನೀವು ಕೊಟ್ಟ ತೀರ್ಪಿಗೆ ನಾವೆಲ್ಲ ತಲೆಬಾಗುತ್ತೇವೆ ಎಂದು ಹೇಳಿದ್ದಾರೆ.

    ನಾನು ಎಲ್ಲಿ ಉಳಿದುಕೊಳ್ಳಲಿ ಎಂದು ತಂದೆ ಜೊತೆ ಚರ್ಚೆ ಮಾಡಿದೆ. ಬಾಡಿಗೆ ಮನೆ ಬೇಡ ಎಂದು ಹೇಳಿದ್ದರು. ಅವರ ತೀರ್ಮಾನ ಸರಿಯಾಗಿರುತ್ತದೆ. ನಾನು ಬಾಡಿಗೆ ಮನೆ ಮಾಡಲು ಬಂದಿಲ್ಲ. ಸ್ವಂತ ತೋಟ ಮನೆ ಮಾಡಿ ನಿಮ್ಮ ಮನದಲ್ಲಿ ಶಾಶ್ವತವಾಗಿ ಉಳಿಯಲು ಬಂದಿದ್ದೇನೆ. ಕುಮಾರಣ್ಣನಿಗೆ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆ, ಮರುಜನ್ಮ ಕೊಟ್ಟಿದ್ದು ಮಂಡ್ಯ ಜಿಲ್ಲೆ. ಹಾಗಾಗಿ ನಿಮ್ಮ ಋಣ ಮರೆಯಲು ಸಾಧ್ಯವಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಒಂದು ಬಾರಿ ಅವಕಾಶ ಮಾಡಿಕೊಡಲು ಸಾಧ್ಯವೇ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

    ಇದೇ ವೇಳೆ ಜನರು ನಿಖಿಲ್ ಅವರಿಗೆ ಹಾಡುವಂತೆ ಒತ್ತಾಯಿಸಿದ್ದಾರೆ. ಜನರ ಒತ್ತಾಯಕ್ಕೆ ಮಣಿದು ನಿಖಿಲ್ ‘ಸೀತಾರಾಮ ಕಲ್ಯಾಣ’ ಚಿತ್ರದ ‘ನಿನ್ನ ರಾಜ ನಾನು, ನನ್ನ ರಾಣಿ ನೀನು ಹಾಡು’ ಹೇಳಿ ನೃತ್ಯ ಮಾಡಿ ಜನರನ್ನು ರಂಜಿಸಿದ್ದಾರೆ. ಬಳಿಕ ಮಳವಳ್ಳಿಯ ಮುಸ್ಲಿಂ ಬಾಂಧವರು ನಿಖಿಲ್‍ಗೆ ಖಡ್ಗ ನೀಡಿ ಗೌರವಿಸಿದ್ದಾರೆ. ಅವರ ಒತ್ತಾಯಕ್ಕೆ ಮಣಿದು ನಿಖಿಲ್ ಹಿಂದಿಯಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ಖಡ್ಗ ಹಿಡಿದು ಕುರುಕ್ಷೇತ್ರ ಚಿತ್ರದಲ್ಲಿ ತಮ್ಮ ಅಭಿಮನ್ಯು ಪಾತ್ರ ನೆನೆದು, ಸಿನಿಮಾ ನೋಡುವಂತೆ ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಲ್ಲಿ ಸುಮಲತಾ ವರ್ಸಸ್ ಜೆಡಿಎಸ್ – ರೇವಣ್ಣ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣ

    ಮಂಡ್ಯದಲ್ಲಿ ಸುಮಲತಾ ವರ್ಸಸ್ ಜೆಡಿಎಸ್ – ರೇವಣ್ಣ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣ

    ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಈ ಮಧ್ಯೆ ಮಂಡ್ಯದಲ್ಲಿ ಜೆಡಿಎಸ್ ವರ್ಸಸ್ ಸುಮಲತಾ ಅಂಬರೀಶ್ ಮಧ್ಯೆ ಭಾರೀ ಫೈಟ್ ಆರಂಭವಾಗಿದೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮುಯ್ಯ ಅವರು ಮಂಡ್ಯದಿಂದ ಸುಮಲತಾ ಅವರಿಗೆ ಟಿಕೆಟ್ ಕೊಡಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಅಲ್ಲೋಲಕಲ್ಲೋವಾಗಿದೆ. ಆದ್ರೂ ಸುಮಲತಾ ಅವರು ಪಕ್ಷ ಟಿಕೆಟ್ ಕೊಡದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವುದಾಗಿ ಪಣ ತೊಟ್ಟಿದ್ದಾರೆ. ಅಲ್ಲದೆ ಈ ಸಂಬಂಧ ಈಗಾಗಲೇ ಜಿಲ್ಲೆಯಲ್ಲಿ ಪ್ರಚಾರಕ್ಕೂ ಇಳಿದಿದ್ದಾರೆ.

    ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು `ಗಂಡ ಸತ್ತ ಒಂದೂವರೆ ತಿಂಗಳುಗಳೇ ಕಳೆದಿಲ್ಲ. ಈ ಸ್ಥಿತಿಯಲ್ಲಿ ಅವರಿಗೆ ರಾಜಕೀಯ ಬೇಕಿತ್ತಾ ಎಂದು ಪ್ರಶ್ನೆ ಮಾಡಿರುವ ವಿಚಾರ ಇದೀಗ ಭಾರೀ ಚರ್ಚೆಗೆ ಈಡಾಗಿದೆ.

    ಯಾಕಂದ್ರೆ 2018ರ ನ.24ಕ್ಕೆ ಅಂಬರೀಶ್ ಅವರು ಮರಣ ಹೊಂದಿರುವ ಸುದ್ದಿ ಕೇಳಿದಾಕ್ಷಣ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ದೌಡಾಯಿಸಿದ್ದರು. ಕುಟುಂಬದ ಸದಸ್ಯರನ್ನೇ ಕಳೆದುಕೊಂಡಷ್ಟು ಚಿಂತಾಕ್ರಾಂತರಾಗಿದ್ದರು. ಅಲ್ಲದೆ ಮರುದಿನ ಅಣ್ಣನ ಅಂತ್ಯಸಂಸ್ಕಾರಕ್ಕೆ ತಮ್ಮನಂತೆ ಹೆಗಲು ಕೂಡ ಕೊಟ್ಟಿದ್ದರು. ಮಂಡ್ಯಕ್ಕೆ ಸೇನಾ ಹೆಲಿಕಾಪ್ಟರ್ ತರಿಸುವುದರಿಂದ ಹಿಡಿದು ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನೂ ಕಲ್ಪಿಸಿದ್ರು. ಮಂಡ್ಯಕ್ಕೆ ಖುದ್ದು ಭೇಟಿ ಕೊಟ್ಟು ಗಲಾಟೆ ಆಗದಂತೆ ನೋಡಿಕೊಂಡಿದ್ದರು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರಕ್ಕೂ ವ್ಯವಸ್ಥೆ ಮಾಡಿಕೊಟ್ಟಿದ್ದರು. ಹೀಗೆ ಮುಖ್ಯಮಂತ್ರಿ ಅನ್ನೋದನ್ನೂ ಕೂಡ ಮರೆತು ಕುಮಾರಸ್ವಾಮಿಯವರು ಅಂದು ಅಂಬರೀಶ್ ಅಂತ್ಯಸಂಸ್ಕಾರವನ್ನು ತೀರಾ ಮುತುವರ್ಜಿಯಿಂದ ನೆರವೇರಿಸಿದ್ದರು. ಆದ್ರೆ ಇಂದು ಸಿಎಂ ಸಹೋದರನ ಒಂದು ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ತಲ್ಲಣವೇ ಏರ್ಪಟ್ಟಿದೆ.

    ಈ ಕಡೆ, ತಂದೆಯಂತೆ ಮಗ ನಿಖಿಲ್ ಕೂಡ ಧೈರ್ಯ ತುಂಬಿದ್ದರು. ಅಣ್ಣನಂತೆ ಅಭಿಷೇಕ್‍ಗೆ ಸಾಂತ್ವಾನ ಹೇಳಿದ್ದರು. ಅಂತ್ಯಸಂಸ್ಕಾರ ಆಗುವವರೆಗೂ ಅಭಿಷೇಕ್ ಜೊತೆಯಲ್ಲಿದ್ದರು. ಈಗ ಕಾಲ ಬದಲಾಗಿ ಹೋಗಿದೆ. ಅಧಿಕಾರಕ್ಕಾಗಿ ಫೈಟ್ ಶುರುವಾಗಿದೆ. ಅಂಬಿ ನಿಧನದ ಎರಡೂವರೆ ತಿಂಗಳಲ್ಲಿ ರಾಜಕೀಯ ಬೇಕಿತ್ತಾ ಅನ್ನೋ ಪ್ರಶ್ನೆ ಇದೀಗ ಅಂಬಿ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.

    https://www.youtube.com/watch?v=BGvmKX3g6b8

    https://www.youtube.com/watch?v=1zAHuxijg6Q

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿಗೆ ಹೋಗಲ್ಲ, ಪಕ್ಷೇತರಳಾಗಿ ಸ್ಪರ್ಧೆ ಮಾಡುತ್ತೇನೆ: ಸುಮಲತಾ

    ಬಿಜೆಪಿಗೆ ಹೋಗಲ್ಲ, ಪಕ್ಷೇತರಳಾಗಿ ಸ್ಪರ್ಧೆ ಮಾಡುತ್ತೇನೆ: ಸುಮಲತಾ

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿಗೆ ಬರಲ್ಲ. ಪಕ್ಷೇತರಳಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಕಮಲ ಮುಖಂಡರ ಬಳಿ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.

    ಗುರುವಾರ ಮಂಡ್ಯದಲ್ಲಿ ಸುಮಲತಾ ಅವರು ಬಿಜೆಪಿ ಮುಖಂಡ ಶಿವಲಿಂಗಯ್ಯ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಮಾತುಕತೆ ವೇಳೆ ತಮಗೆ ಬೆಂಬಲ ನೀಡುವಂತೆ ಬಿಜೆಪಿ ಮುಖಂಡ ಶಿವಲಿಂಗಯ್ಯ ಅವರನ್ನು ಸುಮಲತಾ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಶಿವಲಿಂಗಯ್ಯ ಅವರು ಬಿಜೆಪಿಗೆ ಸೇರ್ಪಡೆಯಾಗುವಂತೆ ಸುಮಲತಾಗೆ ಆಹ್ವಾನ ನೀಡಿದ್ದಾರೆ. ಎಂದು ಹೇಳಲಾಗುತ್ತಿದೆ.

    ನಾನು ಇನ್ನೂ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದೇನೆ. ಆದರೆ ಮಂಡ್ಯ ಜನ ಮಾತ್ರ ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧಿಸಲು ಹೇಳುತ್ತಿದ್ದಾರೆ. ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಸುಮಲತಾ ಅವರಿಗೆ ಬಿಜೆಪಿ ಸಪೋರ್ಟ್ ಮಾಡುವ ಬಗ್ಗೆ ಪಕ್ಷದ ತೀರ್ಮಾನಕ್ಕೆ ನಾವು ಬದ್ಧ. ಪಕ್ಷದ ಹಿತದೃಷ್ಟಿಯಿಂದ ಬಿಜೆಪಿ ಮಂಡ್ಯದಲ್ಲಿ ಅಭ್ಯರ್ಥಿ ಹಾಕಲಿ ಎಂದು ಶಿವಲಿಂಗಯ್ಯ ಅಭಿಮತ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ- ಸುಮಲತಾ ರಾಜಕೀಯ ಎಂಟ್ರಿ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

    ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ- ಸುಮಲತಾ ರಾಜಕೀಯ ಎಂಟ್ರಿ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

    ಬೆಂಗಳೂರು: ಲೋಕಸಭಾ ಚುನಾವಣೆಗೆ ನಟಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸಲು ರಾಜಕೀಯಕ್ಕೆ ಎಂಟ್ರಿ ಕೊಟ್ಟ ವಿಷಯದ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.

    ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ?. ಕ್ಯಾಂಪೆನ್ ವಿಚಾರವಾಗಿ ನನಗೆ ಇನ್ನೂ ಬುಲಾವ್ ಬಂದಿಲ್ಲ. ಬುಲಾವ್ ಬಂದರೆ ನಿಮಗೆ ಮೊದಲು ಹೇಳುತ್ತೇನೆ. ಸದ್ಯ ನಾನು ಈಗ ರಾಜಕೀಯದಿಂದ ತುಂಬಾ ದೂರ ಇದ್ದೇನೆ. ಅಲ್ಲದೆ ಸಾಕಷ್ಟು ನಿರ್ಮಾಪಕರು ನನ್ನ ನಂಬಿ ಹಣ ಹಾಕಿದ್ದಾರೆ. ಹಾಗಾಗಿ ಸಿನಿಮಾದಲ್ಲಿ ಬ್ಯುಸಿ ಆಗಿದ್ದೇನೆ. ಸುಮಲತಾ ಅವರಲ್ಲೇ ಅಂಬರೀಶ್ ಎಂಬ ಹೆಸರು ಇದೆ. ಅಂಬರೀಶ್ ಒಂದು ದೊಡ್ಡ ಹೆಸರು. ಸುಮಲತಾ ಅವರಿಗೆ ಆ ಹೆಸರೇ ಸಾಕು. ಅಲ್ಲದೆ ದರ್ಶನ್ ಅವರು ಕೂಡ ಸುಮಲತಾ ಅವರ ಜೊತೆ ಇದ್ದಾರೆ. ರಾಜಕೀಯದಲ್ಲಿ ನನ್ನ ಒಲವು ಕಡಿಮೆ ಇದೆ ಎಂದು ಸುದೀಪ್ ತಿಳಿಸಿದ್ದಾರೆ.

    ಮಂಡ್ಯದ ಮಳವಳ್ಳಿಯಲ್ಲಿ ದರ್ಶನ್ ಬೆಂಬಲ ನೀಡುವ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ ಅವರು, ದರ್ಶನ್ ಹಾಗೂ ಯಶ್ ನನ್ನ ಮನೆ ಮಕ್ಕಳು. ದರ್ಶನ್ ನನ್ನ ದೊಡ್ಡ ಮಗ ಇದ್ದಂತೆ. ನಾನೇನೇ ಕೇಳಿದರೂ ದರ್ಶನ್ ನನ್ನ ಜೊತೆ ಇರುತ್ತಾರೆ. ಅಭಿಷೇಕ್ ನಿಂದ ನಿರೀಕ್ಷೆ ಮಾಡುವ ಎರಡರಷ್ಟು ನನ್ನಿಂದ ನಿರೀಕ್ಷೆ ಮಾಡಿ ಎಂದು ದರ್ಶನ್ ಹೇಳುತ್ತಾರೆ. ದರ್ಶನ್ ನನ್ನ ಪರ ನಿಲ್ಲುತ್ತಾರೆ ಎನ್ನುವ ನಂಬಿಕೆ ನನಗೆ ಇದೆ ಎಂದರು.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಈ ಬಗ್ಗೆ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ‘ಯಜಮಾನ’ ಚಿತ್ರದ ಸಕ್ಸಸ್ ಪ್ರೆಸ್‍ಮೀಟ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು. ಅಂಬರೀಶ್ ಅವರು ಚುನಾವಣೆಗೆ ನಿಂತಾಗಲೂ ಪ್ರಚಾರಕ್ಕೆ ಹೋಗಿದ್ದೇನೆ. ಈಗಲೂ ಹೋಗುತ್ತೇನೆ. ಸುಮಲತಾ ಪರ ಪ್ರಚಾರ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ. ಅಲ್ಲದೆ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ಸ್ಪರ್ಧಿಸಿ, ಚುನಾವಣಾ ಪ್ರಚಾರಕ್ಕೆ ಕರೆದರೆ ನಾನು ಹೋಗುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಸ್ನೇಹಿತರು ಯಾರೇ ಕರೆದರೂ ಪ್ರಚಾರಕ್ಕೆ ಹೋಗುತ್ತೇನೆ ಎಂದು  ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv