Tag: LokSabha election

  • ಗೌರವದಿಂದ ಮನೆಯಲ್ಲಿರಿ, ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ- ನಟರಿಗೆ ಪರೋಕ್ಷ ಎಚ್ಚರಿಕೆ

    ಗೌರವದಿಂದ ಮನೆಯಲ್ಲಿರಿ, ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ- ನಟರಿಗೆ ಪರೋಕ್ಷ ಎಚ್ಚರಿಕೆ

    ಮಂಡ್ಯ: ಗೌರವದಿಂದ ಮನೆಯಲ್ಲಿ ಇರಿ. ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ ಎಂದು ಜೆಡಿಎಸ್ ಶಾಸಕ ನಾರಾಯಣಗೌಡ ಅವರು ನಟರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

    ಮಂಡ್ಯದಲ್ಲಿ ಕೆ.ಆರ್ ಪೇಟೆ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಅವರು ಅಂಬರೀಶ್ ಬಗ್ಗೆ ನಮಗೆ ಈಗಲೂ, ಮುಂದೆಯೂ ಗೌರವವಿದೆ. ಆದರೆ ಇತರ ಚಲನಚಿತ್ರ ಕಲಾವಿದರ ಬಗ್ಗೆ ನನಗೆ ಅಸಮಾಧಾನವಿದೆ. ಅನೇಕ ಚಿತ್ರಕಲಾವಿದರೂ ಗೊಂದಲನ್ನು ಹುಟ್ಟು ಹಾಕುತ್ತಿದ್ದಾರೆ. ಇದೇ ರೀತಿ ಗೊಂದಲ ಹುಟ್ಟು ಹಾಕಿದರೆ ಅವರಿಗೆ ಒಳ್ಳೆಯದಲ್ಲ. ಚಲನಚಿತ್ರದ ಕ್ಷೇತ್ರದ ಬಗ್ಗೆ ಮಾತನಾಡಲಿ. ಆದ್ರೆ ಅವರು ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿದರೆ ಒಳ್ಳೆಯದಲ್ಲ ಎಂದು ಹೇಳಿದರು.

    ನೀವು ಮನೆಯಲ್ಲಿ ಇದ್ದರೆ ನಿಮಗೆ ಗೌರವ, ಇಲ್ಲದಿದ್ದರೆ ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ತಕ್ಕ ಪಾಠ ಕಲಿಸುತ್ತೇವೆ. ಸರ್ಕಾರ ನಮ್ಮದಿದೆ. ಸುಮ್ಮಿನಿದ್ರೆ ಸರಿ. ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ. ಶೂಟಿಂಗ್ ಮಾಡ್ಕೊಂಡು ಗೌರವವಾಗಿ ಇರಿ. ರಾಜಕಾರಣದ ಬಗ್ಗೆ ಮಾತಾಡಲು ನಿಮಗೆ ಹಕ್ಕಿಲ್ಲ. ನೀವು ಭಾರತ ದೇಶವನ್ನೇ ನೋಡಿಲ್ಲ. ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಹೇಳುವ ಮೂಲಕ ಶಾಸಕರು, ದರ್ಶನ್ ಹಾಗೂ ಯಶ್‍ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

    ಕ್ಷಮೆ ಕೇಳಿದ ಶಾಸಕ:
    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಶಾಸಕ ನಾರಾಯಣಗೌಡ ಅವರು, ನಾವು ಸ್ಟಾರ್ ನಟರನ್ನು ಪ್ರಚಾರಕ್ಕೆ ಕರೆಸಿಕೊಂಡಿಲ್ಲ. ಸ್ಟಾರ್ ನಟರು ಮಂಡ್ಯದ ರೈತರ ಬಗ್ಗೆ ಹಾಗೂ ಜನರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಅವರು ನನ್ನ ಮಂಡ್ಯದ ಜನತೆ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರು ಇಷ್ಟೊಂದು ದಿನ ಕಾವೇರಿ ಹೋರಟಕ್ಕಾಗಿ ಹಾಗೂ ರೈತರ ಹೋರಾಟಕ್ಕಾಗಿ ಬಂದಿಲ್ಲ. ಅವರು ಈಗ ಮಂಡ್ಯಕ್ಕೆ ಬರುವುದು ಸರಿಯಲ್ಲ. ದರ್ಶನ್‍ಗೆ ಮಂಡ್ಯದ ಜನತೆ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದರು.

    ಈ ಚುನಾವಣೆ ಬಗ್ಗೆ ದರ್ಶನ್ ಅವರನ್ನು ಪ್ರಶ್ನಿಸಿದ್ದಾರೆ. ಆಗ ಅವರು ಮಂಡ್ಯದ ಜನತೆ ಬಗ್ಗೆ ಹಾಗೂ ನಮ್ಮ ಪಕ್ಷದ ಬಗ್ಗೆ ಏಕವಚನದಲ್ಲಿ ಹಾಗೂ ಕೆಟ್ಟದಾಗಿ ಮಾತನಾಡಿದ್ದಾರೆ. ಹಾಗಾಗಿ ನಾನು ಅವರ ಮೇಲೆ ಆಕ್ರೋಶದಿಂದ ಮಾತನಾಡಿದ್ದೇನೆ. ನಾನು ಆಕ್ರೋಶದಿಂದ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದೇನೆ. ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಮಂಡ್ಯ ಜನತೆಗೆ ಇವರ ಕೊಡುಗೆ ಏನಿದೆ?. ರೈತರ ಹೋರಾಟಕ್ಕೆ ಇವರು ಭಾಗಿಯಾಗಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.

  • ಅಧಿಕಾರ ಮುಖ್ಯವಲ್ಲ, ನಂಬಿದ ಕಾರ್ಯಕರ್ತರು ಮುಖ್ಯ: ಡಿಸಿಎಂಗೆ ಪತ್ರ

    ಅಧಿಕಾರ ಮುಖ್ಯವಲ್ಲ, ನಂಬಿದ ಕಾರ್ಯಕರ್ತರು ಮುಖ್ಯ: ಡಿಸಿಎಂಗೆ ಪತ್ರ

    ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್‍ಗೆ ಬಿಟ್ಟು ಕೊಟ್ಟ ಹಿನ್ನೆಲೆಯಲ್ಲಿ ಡಿಸಿಎಂ ಪರಮೇಶ್ವರ್ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಡಿಸಿಎಂಗೆ, ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮಿ ನಾರಾಯಣ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ಏನಿದೆ?
    ಮಾನ್ಯ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ. ಪರಮೇಶ್ವರ್ ರವರಿಗೆ ನಮ್ಮ ಜನರ ನಾಡಿ ಮಿಡಿತವನ್ನು ತಮ್ಮ ಅವಗಾನೆಗೆ ತಿಳಿಸುವೆ. ಮಾನ್ಯರೇ, ತಮಗೆ ರಾಜಕೀಯ ಅನುಭವ ಹಾಗೂ ಸತತ 7 ವರ್ಷಗಳ ಕಾಲ ರಾಜಾಧ್ಯಕ್ಷರಾಗಿ ಅಪಾರ ಅನುಭವ ಹೊಂದಿದ್ದೀರಿ. ತುಮಕೂರು ಲೋಕಸಭಾ ಸ್ಥಾನ ಹಾಲಿ ಸಂಸದರಿಗೆ ನೀಡದಿರುವ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಇಡೀ ಜಿಲ್ಲೆಯಲ್ಲಿ ಹಾಗೂ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು, ತಾವು ಪಕ್ಷದ ಮೇಲೆ ಮುನಿಸು ಎಂಬ ಮಾಧ್ಯಮ ವರದಿ ನಗೆ ಪಾಟೀಲಗುವ ಹಂತದಲ್ಲಿ ಬಂದಿದೆ.

    ತಾವು ಉಪ ಮುಖ್ಯಮಂತ್ರಿಗಳಾಗಿ ಸರ್ಕಾರದ ಭಾಗಿಗಳಾಗಿ ಹೈಕಮಾಂಡ್‍ಗೆ ತುಂಬಾ ಹತ್ತಿರಾಗಿದ್ದೀರಿ. ತಾವು ನಿರ್ವಹಿಸುವ ಜಿಲ್ಲೆಗೆ ಲೋಕಸಭಾ ಸೀಟು ಕೊಡಿಸಲು ಸಾಧ್ಯವಾಗಲಿಲ್ಲ ಎಂದರೆ ನಗೆಪಾಟಲು ಆಗುವ ಸಾಧ್ಯತೆಗಳು ಜಾಸ್ತಿಯಾಗಿದೆ. ಆದ ಕಾರಣ ತಕ್ಷಣವೇ ತುಮಕೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆ ಕರೆದು ಮುಂದಿನ ನಿರ್ಣಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ. ಅಧಿಕಾರ ಮುಖ್ಯವಲ್ಲ ಕೇವಲ ಮುಂದಿನ ಎರಡು ತಿಂಗಳಲ್ಲಿ ನಿಮ್ಮ ಅಧಿಕಾರ ಇರುತ್ತೋ ಇಲ್ಲವೋ ತಿಳಿಯದು, ನಂಬಿದ ಜಿಲ್ಲೆಯ ಜನರಿಗೆ ಕಾರ್ಯಕರ್ತರಿಗೆ ಆಗಿರುವ ಅವಮಾನ ಅಷ್ಟಿಷ್ಟಲ್ಲ. ಇದಕ್ಕೆ ತಾವೇ ಉತ್ತರ ಕೊಡಬೇಕಾಗುತ್ತದೆ.

    ಈಗಲೂ ಕಾಲ ಮಿಂಚಿಲ್ಲ ತಡ ಮಾಡದೇ ಮಾನ್ಯ ಸಂಸದರಾದ ಮುದ್ದ ಹನುಮೇಗೌಡರಿಗೆ ಸೀಟು ಕೊಡಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಇಲ್ಲದಿದ್ದರೆ ಮುಂದಿನ ರಾಜಕೀಯ ಭವಿಷ್ಯ ಕತ್ತಲಾದೀತು. ಉಪ ಮುಖ್ಯಮಂತ್ರಿಗಳ ಸ್ಥಾನ ಮುಖ್ಯವಲ್ಲ ನಂಬಿದ ಕಾರ್ಯಕರ್ತರು ಮುಖ್ಯ ಎಂಬುದು ಮರೆಯಬೇಡಿ. ಮುಂದೆ ನುಗ್ಗಿ ನಿಮ್ಮ ಜೊತೆ ಸದಾ ನಾವಿದ್ದೇವೆ. ನನಗೆ ರಾಜಕಾರಣದ ಕುತಂತ್ರದ ಅರಿವಿದೆ. ಆದರೆ ನಾನು ಮಾತನಾಡುವ ಹಾಗಿಲ್ಲ. ಪಕ್ಷದ ಪ್ರಾಮಣಿಕ ಕಾರ್ಯಕರ್ತನಾಗಿ ಮುಂದಿನ ರಾಜಕೀಯ ಸೂಚನೆ ತಿಳಿಸಿರುವೆ.

    ತಾವು ತುಂಬಾ ಬಿಡುವು ಇಲ್ಲದಿರುವ ಹಾಗೂ ಅನೇಕ ಬಾರಿ ತಮ್ಮ ಮನೆಗೆ ಹಾಗೂ ಕಛೇರಿಗೆ ಬಂದರೂ ಭೇಟಿ ಮಾಡಲು ಸಾಧ್ಯವಾಗದಿರುವ ಕಾರಣ ಈ ಮೂಲಕ ತಮಗೆ ವಿನಂತಿಸುವೆ. ದಿಟ್ಟ ಹೆಜ್ಜೆ ಇಡಿ. ಧನ್ಯವಾದಗಳು. ಎಂ.ಡಿ.ಲಕ್ಷ್ಮಿನಾರಾಯಣ (ಅಣ್ಣಯ್ಯ) ಮಾಜಿ ಶಾಸಕರು, ಅಧ್ಯಕ್ಷರು ಹಿಂದುಳಿದ ವರ್ಗಗಳ ವಿಭಾಗ. ಪ್ರದೇಶ ಕಾಂಗ್ರೆಸ್ ಸಮಿತಿ. ಕರ್ನಾಟಕ ಅಧ್ಯಕ್ಷರು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ.

  • ಎಚ್‍ಡಿಡಿ ಕಣ್ಣೀರಿಟ್ಟಿದ್ದು ರಾಜಕೀಯ ಕಾರಣಕ್ಕೆ ಅಲ್ಲ, ಹಳೆಯ ನೆನಪು ನೆನೆದು ಭಾವುಕರಾದರು ಅಷ್ಟೇ: ರೇವಣ್ಣ

    ಎಚ್‍ಡಿಡಿ ಕಣ್ಣೀರಿಟ್ಟಿದ್ದು ರಾಜಕೀಯ ಕಾರಣಕ್ಕೆ ಅಲ್ಲ, ಹಳೆಯ ನೆನಪು ನೆನೆದು ಭಾವುಕರಾದರು ಅಷ್ಟೇ: ರೇವಣ್ಣ

    ಹಾಸನ: ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರಿಟ್ಟಿದ್ದು ರಾಜಕೀಯ ಕಾರಣಕ್ಕೆ ಅಲ್ಲ. ಹಳೆಯ ನೆನಪು ನೆನೆದು ಭಾವುಕರಾದರು ಅಷ್ಟೇ ಅದನ್ನೇ ಮಾಧ್ಯಮಗಳು ದೊಡ್ಡದು ಮಾಡಿವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಿ.ಶಿವರಾಂ ಮನೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ರೇವಣ್ಣ, “ಕುಮಾರಸ್ವಾಮಿ ಅವರ ಮಗನೂ ಚಿತ್ರರಂಗದಲ್ಲಿದ್ದಾರೆ. ಕುಮಾರಸ್ವಾಮಿಗೆ ಪುತ್ರನನ್ನು ನಿಲ್ಲಿಸೋ ಒತ್ತಾಸೆ ಇರಲಿಲ್ಲ. ಜನರ ತೀರ್ಮಾನದಂತೆ ನಿಲ್ಲಿಸಿದ್ದಾರೆ. ಸುಮಲತಾ ಈ ಹಿಂದೆ ಚುನಾವಣೆಗೆ ನಿಲ್ಲುವೆ ಎಂದು ಹೇಳಿರಲಿಲ್ಲ” ಎಂದು ಹೇಳಿದ್ದಾರೆ.

    ನಾನು ಮಂಡ್ಯ, ಮೈಸೂರಲ್ಲೂ ಪ್ರಚಾರ ಮಾಡುವೆ. ರಾಜಕಾರಣಿದಲ್ಲಿ ಸಣ್ಣ ಪುಟ್ಟ ಗೊಂದಲ ಸಹಜ. ಹಾಸನದಲ್ಲಿ ಪ್ರಜ್ವಲ್ ನಿಲ್ಲಬೇಕು ಎಂದು ಫೈನಲ್ ಮಾಡಲಾಗಿದೆ. ಸೋಮವಾರ ದೇವೇಗೌಡರು ಹಾಸನದಿಂದ ನಿಲ್ಲಬೇಕು ಎಂದಿದ್ದ ರೇವಣ್ಣ ಇಂದು ಹಾಸನದಿಂದ ಪ್ರಜ್ವಲ್ ರೇವಣ್ಣನೇ ಅಭ್ಯರ್ಥಿ ಆಗಲಿದ್ದಾರೆ ಎಂದು ಹೇಳಿದ್ದಾರೆ.

    ಯಾವ ಪಕ್ಷದಲ್ಲೂ ಕುಟುಂಬ ರಾಜಕಾರಣ ಇಲ್ಲವೇ, ಅದು ಮಾಧ್ಯಮಗಳಿಗೆ ಕಾಣೋದಿಲ್ಲವೇ ಎಂದು ಕುಟುಂಬ ರಾಜಕಾರಣದ ಬಗ್ಗೆ ರೇವಣ್ಣ ಕಿಡಿಕಾರಿದ್ದಾರೆ. ಅದನ್ನು ಬಿಟ್ಟು ನಮ್ಮ ಕುಟುಂಬವನ್ನೇ ಟಾರ್ಗೆಟ್ ಮಾಡೋದು ಏಕೆ ಎಂದು ರೇವಣ್ಣ ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋಮುವಾದಿ ಶಕ್ತಿ ದೂರ ಇಡಲು ನಾವು ಕಾಂಗ್ರೆಸ್ ಒಂದಾಗಿದ್ದೇವೆ: ರೇವಣ್ಣ

    ಕೋಮುವಾದಿ ಶಕ್ತಿ ದೂರ ಇಡಲು ನಾವು ಕಾಂಗ್ರೆಸ್ ಒಂದಾಗಿದ್ದೇವೆ: ರೇವಣ್ಣ

    ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ಇಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಮನೆಗೆ ಭೇಟಿ ನೀಡಿದ್ದಾರೆ.

    ಬಿ.ಶಿವರಾಂ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ರೇವಣ್ಣ, “ಕೋಮುವಾದಿ ಶಕ್ತಿ ದೂರ ಇಡಲು ನಾವು ಕಾಂಗ್ರೆಸ್ ಒಂದಾಗಿದ್ದೇವೆ. ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಸಣ್ಣ ಪುಟ್ಟ ಸಮಸ್ಯೆ ಇದರೂ ಒಟ್ಟಾಗಿ ಮಾತನಾಡಿದ್ದೇವೆ. ನಾವು ಶಿವರಾಂ ಒಟ್ಟಾಗಿ ಸೇರಿ ಚುನಾವಣೆ ಕಾರ್ಯತಂತ್ರ ಮಾಡುತ್ತೇವೆ” ಎಂದು ಎಚ್‍ಡಿ ರೇವಣ್ಣ ಹೇಳಿದ್ದಾರೆ.

    ಅಲ್ಲದೆ ಮುಂದೆ ನಾವಿಬ್ಬರೂ ಜಿಲ್ಲೆಯ ಅಭಿವೃದ್ಧಿ ಮಾಡುತ್ತೇವೆ ಎಂದು ಬಿ. ಶಿವರಾಂ ಸಚಿವ ರೇವಣ್ಣ ಮಾತಿಗೆ ಧ್ವನಿಗೂಡಿಸಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಹಳೇ ಭಿನ್ನಮತ ಮರೆತು ಒಟ್ಟಾಗಿ ಹೋಗುತ್ತೇವೆ. ಮುಂದೆ ಕಾಂಗ್ರೆಸ್ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ಪಡೆಯಿರಿ ಎಂದು ಮನವಿ ಮಾಡಿದ್ದೇನೆ. ಹಿಂದಿನ ಭಾವನೆ ಬೇಡ, ನಂಬಿಕೆಯಿಂದ ಮುನ್ನಡೆಯೋಣ. ನಾನೂ ಕಾಂಗ್ರೆಸ್ ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವೆ ಎಂದು ರೇವಣ್ಣ ಹೇಳಿದ್ದಾರೆ.

    ಇತ್ತೀಚೆಗೆ ಶಿವರಾಂ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಜೆಡಿಎಸ್ ಕುರಿತು ಅಸಮಧಾನ ವ್ಯಕ್ತಪಡಿಸಿದ್ದರು. ಹಾಗಾಗಿ ಇಂದು ರೇವಣ್ಣ ಚುನಾವಣೆಯಲ್ಲಿ ಪುತ್ರನಿಗೆ ಬೆಂಬಲಿಸಲು ಸಹಾಯ ಯಾಚಿಸಲು ಶಿವರಾಂ ಮನೆಗೆ ಆಗಮಿಸಿದ್ದರು. ಈ ವೇಳೆ ಶಿವರಾಂ ರೇವಣ್ಣರನ್ನು ಹಾರ ಮತ್ತು ಶಾಲು ಹಾಕಿ ಸ್ವಾಗತಿಸಿದ್ದಾರೆ. ಬಳಿಕ ಟೀ ಕುಡಿಯುತ್ತಾ ಶಿವರಾಂ ಹೊತೆ ಉಭಯ ಕುಶಲೋಪರಿ ನಡೆಸಿದ್ದಾರೆ. ಇದೇ ವೇಳೆ ರೇವಣ್ಣ ಮನೆ ಆಲ್ಟ್ರೇಷನ್ ಮಾಡಿಸಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ನಮ್ಮ ಮನೆಯಲ್ಲಿ ವಾಸ್ತುಗೀಸ್ತು ಇಲ್ಲ ಎಂದು ಶಿವರಾಂ ನಗೆ ಚಟಾಕಿ ಹಾರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿನಿಮಾ ನಟರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

    ಸಿನಿಮಾ ನಟರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

    ಬೆಂಗಳೂರು: ಸಿನಿಮಾ ನಟರ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ದೂರು ದಾಖಲಿಸಿದೆ.

    ಕರವೇ ಸಿನಿಮಾ ನಟರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಚಿತ್ರ ನಟರು ಬಹಿರಂಗವಾಗಿ ಒಬ್ಬರ ಪರ ಮತ ಯಾಚಿಸುತ್ತಿದ್ದಾರೆ. ಹಾಗಾಗಿ ಚುನಾವಣಾ ಮುಗಿಯುವವರೆಗು ಅವರ ಚಿತ್ರಗಳನ್ನು ಬ್ಯಾನ್ ಮಾಡುವಂತೆ ಅಧ್ಯಕ್ಷ ಜಯರಾಮ್ ನಾಯ್ಡು ದೂರು ದಾಖಲಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಜಯರಾಮ್ ನಾಯ್ದು, ಕರ್ನಾಟಕ ರಕ್ಷಣಾ ವೇದಿಕೆಯಿಂದ ನಾವು ದೂರು ದಾಖಲಿಸಿದ್ದೇವೆ. ಯಾವುದೇ ಸ್ಟಾರ್ ನಟ ಅಥವಾ ಪ್ರಚಾರಕ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾದ್ರೆ, ಅವರೆಲ್ಲರೂ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಬರುತ್ತಾರೆ. ಈ ಸಂಬಂಧ ನಮ್ಮ ವಕೀಲರ ಬಳಿ ಕೇಳಿದ್ದಾಗ ಪ್ರಚಾರಕರೆಲ್ಲರೂ ಕೋಡ್ ಆಫ್ ಕಂಡೆಕ್ಟ್ ಗೆ ಬರುತ್ತೆ ಎಂದು ಹೇಳಿದ್ದಾರೆ.

    ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಕೆಲ ನಟರು ನಾವು ಗೆಲ್ಲಿಸುತ್ತೇವೆ. ಅಭಿಮಾನಿ ಸಂಘಗಳು ಕೂಡ ಸಾಥ್ ನೀಡುತ್ತಾರೆ ಎಂದು ಹೇಳಿದ್ದಾರೆ. ಹಾಗಾಗಿ ಇದು ಕೋಡ್ ಆಫ್ ಕಂಡೆಕ್ಟ್ ಗೆ ಬರುತ್ತೆ ಎಂಬ ಕಾರಣಕ್ಕೆ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇನೆ. ಚುನಾವಣೆ ಮುಗಿಯುವವರೆಗೂ ನಟರ ಚಿತ್ರ ಹಾಗೂ ಜಾಹೀರಾತು ನಿಷೇಧ ಮಾಡಬೇಕು ಎಂದು ಜಯರಾಮ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೃಷ್ಣಪ್ಪನವರನ್ನು ಸಾಯಿಸಿದ್ದೇ ಜೆಡಿಎಸ್ – ಬಸವರಾಜು ಗಂಭೀರ ಆರೋಪ

    ಕೃಷ್ಣಪ್ಪನವರನ್ನು ಸಾಯಿಸಿದ್ದೇ ಜೆಡಿಎಸ್ – ಬಸವರಾಜು ಗಂಭೀರ ಆರೋಪ

    ತುಮಕೂರು: ಕಳೆದ ಬಾರಿ ಲೋಕಸಭೆ ಚುನಾವಣೆಯ ವೇಳೆ ಪಕ್ಷದ ಅಭ್ಯರ್ಥಿಯಾಗಿದ್ದ ಎ. ಕೃಷ್ಣಪ್ಪನವರನ್ನು ಗೆಲ್ಲಿಸ್ತೀವಿ ಅಂತ ಕರೆದುಕೊಂಡು ಬಂದು ಅವರನ್ನ ಜೆಡಿಎಸ್‍ನವರು ಸಾಯಿಸಿದರು ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಬಸವರಾಜು ಗಂಭೀರ ಆರೋಪ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ಒಕ್ಕಲಿಗ ಮುಖಂಡರ ಕುತಂತ್ರದಿಂದ ಎ.ಕೃಷ್ಣಪ್ಪ ಪ್ರಾಣ ಬಿಟ್ಟರು. ಕೃಷ್ಣಪ್ಪ ಅವರನ್ನು ಗೆಲ್ಲಿಸುತ್ತೇವೆ ಅಂತ ಹೇಳಿ ಜೆಡಿಎಸ್‍ನ ಎಲ್ಲಾ ಮುಖಂಡರೂ ಮುದ್ದಹನುಮೇಗೌಡ ಪರ ಕೆಲಸ ಮಾಡಿದರು. ಹಾಗಾಗಿ ಯಾದವ ಸಮುದಾಯದ ಕೃಷ್ಣಪ್ಪ ಆ ನೋವಿನಿಂದ ಸಾವನ್ನಪ್ಪಿದರು. ‘ಅಂದು ಲಕ್ಕಪ್ಪ, ಇಂದು ಮುದ್ದಹನುಮೇಗೌಡ’ ಎಂದು ಜೆಡಿಎಸ್‍ನ ಒಕ್ಕಲಿಗ ಮುಖಂಡರು ಕರಪತ್ರ ಹಂಚಿದ್ದರು. ಹಾಗಾಗಿ ಜಾತಿಪ್ರೇಮ ಮೆರೆದರು ಎಂದು ಹರಿಹಾಯ್ದಿದ್ದಾರೆ.

    ಜೆಡಿಎಸ್ ಅವರ ಕರಪತ್ರ ಅಂದು ಸುಂಟರಗಾಳಿ ಬೀಸಿದ ಹಾಗೆ ಬೀಸಿತ್ತು. ಈ ರೀತಿ ಸಂಚುಮಾಡಿ ಹಿಂದುಳಿದ ಮುಖಂಡನನ್ನ ಜೆಡಿಎಸ್‍ನವರು ಕೊಂದರು. ಚುನಾವಣಾ ದಿನ ಸ್ವತಃ ಎ.ಕೃಷ್ಣಪ್ಪ ನನಗೆ ಫೋನ್ ಮಾಡಿ, ಬಳಿಕ ಏನಾದರು ಹೊಟ್ಟೆಗೆ ಹಾಕ್ತಿರ ಅಂತ ಕೇಳಿ ನನ್ನ ಮನೆಗೆ ಬಂದಿದ್ದರು. ಆಗ ನಾನು ತಿಂಡಿಕೊಟ್ಟು ಅವರನ್ನು ಸಮಾಧಾನ ಮಾಡಿದ್ದೆ. ಯಾವ ಜೆಡಿಎಸ್ ಶಾಸಕರೂ ನನ್ನ ಜೊತೆಗಿಲ್ಲ, ನನ್ನನ್ನ ಪರದೇಶಿ ಮಾಡಿದ್ದಾರೆ ಅಂತ ಕೃಷ್ಣಪ್ಪ ಕಣ್ಣೀರು ಸುರಿಸಿದ್ದರು. ಅದಾದ ಮಾರನೇ ದಿನವೇ ಹೃದಯಾಘಾತದಿಂದ ಅವರು ಮೃತಪಟ್ಟರು ಎಂದು ಬಸವರಾಜು ಅವರು ಕಿಡಿಕಾರಿದ್ದಾರೆ.

    ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾದ ತಮಗೆ ಟಿಕೆಟ್ ಕೈ ತಪ್ಪುತ್ತೆ ಅನ್ನುವ ವದಂತಿ ಬಗ್ಗೆ ಪ್ರತಿಕ್ರಿಯಿಸಿ, ಹೊಲ ಉಳುಮೆ ಮಾಡಿ ಮಾಡಿ ನಮಗೆ ಅನುಭವ ಬಂದಿದೆ. ನಾವು ಹಳೆಯ ಎತ್ತುಗಳು. ಎಷ್ಟು ಏರಿ ಇದ್ದರು ಎಳೀತಿವಿ. ಅದಕ್ಕೆ ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ಹಾಯಲ್ಲಾ ಒದೆಯಲ್ಲ ತೆಪ್ಪಗಿರ್ತಿವಿ. ಬಾರದು ಬಪ್ಪದು -ಬಪ್ಪದು ತಪ್ಪದು, ಹಾಗಾಗಿಯೇ ನಾನು ತೆಪ್ಪಗಿದ್ದೇನೆ. ನಾನು ಟಿಕೆಟ್‍ಗಾಗಿ ಅರ್ಜಿ ಹಾಕಿಲ್ಲ. ಪಕ್ಷದ ಆಂತರಿಕ ಸಮೀಕ್ಷಯಂತೆ ಟಿಕೆಟ್ ಕೊಡುತ್ತಾರೆ. ಹೀಗಾಗಿ ಟಿಕೆಟ್ ಸಿಗುತ್ತೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಪಕ್ಷ ನೋಡಿ ಬೆಂಬಲ ನೀಡಲ್ಲ, ಮಗನಾಗಿ ಪ್ರಚಾರ ಮಾಡ್ತೀನಿ: ದರ್ಶನ್

    ಪಕ್ಷ ನೋಡಿ ಬೆಂಬಲ ನೀಡಲ್ಲ, ಮಗನಾಗಿ ಪ್ರಚಾರ ಮಾಡ್ತೀನಿ: ದರ್ಶನ್

    ಬೆಂಗಳೂರು: ನಿಖಿಲ್ ಅವರು ಪ್ರಚಾರಕ್ಕೆ ಕರೆದಿದ್ದರೆ ಯೋಚನೆ ಮಾಡಬಹುದಾಗಿತ್ತು, ಆದ್ರೆ ನಾನು ಮನೆ ಮಗನಾಗಿ ಸುಮಲತಾ ಅವರ ಪರ ಪ್ರಚಾರ ಮಾಡುತ್ತೇನೆ. ಆದರಿಂದ ಒಂದೇ ಕ್ಷೇತ್ರದಲ್ಲಿ ಇಬ್ಬರ ಪರ ಪ್ರಚಾರ ಮಾಡಕ್ಕಾಗಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ರಾಜಧಾನಿಯ ಖಾಸಗಿ ಹೋಟೆಲ್‍ನಲ್ಲಿ ಸುಮಲತಾ ಅವರು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವತ್ತು ಪಕ್ಷ ನೋಡಿ ಬೆಂಬಲ ಕೊಡಲ್ಲ. ಮೊದಲು ಅಪ್ಪಾಜಿ ಇದ್ದಾಗ ಅವರ ಸ್ನೇಹಿತರು ಚುನಾವಣೆಗೆ ನಿಂತರೆ, ಅವರ ಪರವಾಗಿ ಪ್ರಚಾರ ಮಾಡಿ ಬಾ ಅಂತಿದ್ದರು. ನನಗೆ ಪರಿಚಯವಿಲ್ಲದ್ದರು ನಾನು ಅವರ ಮಾತಿಗೆ ಬೆಲೆ ಕೊಟ್ಟು ಪ್ರಚಾರ ಮಾಡುತ್ತಿದ್ದೆ. ನಾನು ಕಲಾವಿದನಾಗಿ ಪ್ರಚಾರ ಮಾಡಲ್ಲ, ಮನೆ ಮಗನಾಗಿ ಸುಮಲತಾ ಅವರ ಪರ ಚುನಾವಣೆ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.

    ಆದ್ರೆ ಈಗಾಗಲೇ ಮಂಡ್ಯದಲ್ಲಿ ಸುಮಲತಾ ಅವರ ಪರ ನಾನಿದ್ದೇನೆ. ಒಂದೇ ಕ್ಷೇತ್ರದಲ್ಲಿ ಇಬ್ಬರ ಪರ ಪ್ರಚಾರ ಮಾಡೋಕೆ ಆಗುತ್ತಾ? ಇಲ್ಲ. ಆದರೇ ಪ್ರಜ್ವಲ್ ರೇವಣ್ಣ ನನ್ನ ಒಳ್ಳೆಯ ಗೆಳೆಯ. ಅವರು ಕರೆದರೆ ಹಾಸನಕ್ಕೆ ಹೋಗಿ ಪ್ರಚಾರ ಮಾಡುತ್ತೇನೆ ಎಂದು ಪರೋಕ್ಷವಾಗಿ ನಿಖಿಲ್ ಪರ ಪ್ರಚಾರ ಮಾಡಲ್ಲ ಎಂದು ದರ್ಶನ್ ಸ್ಪಷ್ಟಪಡಿಸಿದ್ದಾರೆ.

  • ಕಲಾವಿದರಾಗಿ ಅಲ್ಲ, ಮನೆ ಮಕ್ಕಳಾಗಿ ಬೆಂಬಲಿಸುತ್ತೇವೆ: ಯಶ್

    ಕಲಾವಿದರಾಗಿ ಅಲ್ಲ, ಮನೆ ಮಕ್ಕಳಾಗಿ ಬೆಂಬಲಿಸುತ್ತೇವೆ: ಯಶ್

    ಬೆಂಗಳೂರು: ನಾವು ಸುಮಲತಾ ಅವರ ಜೊತೆ ಕಲಾವಿದರಾಗಿ ಕೂತಿಲ್ಲ. ಮನೆ ಮಕ್ಕಳಾಗಿ ಕುಳಿತ್ತಿದ್ದೇವೆ. ಮನೆ ತಾಯಿಯ ನಿರ್ಧಾರಕ್ಕೆ ಮಕ್ಕಳಾದ ನಾವು ಜೊತೆ ಇರುತ್ತೇವೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

    ಖಾಸಗಿ ಹೋಟೆಲ್ ನಲ್ಲಿ ಸುಮಲತಾ ನಡೆಸಿದ್ದ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಮೊದಲಿಂದಲೂ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮನೆಯವರೊಂದಿಗೆ ಒಡನಾಟ ಇದೆ. ಅವರ ಮನೆಯಲ್ಲಿ ದರ್ಶನ್ ದೊಡ್ಡ ಮಗನಂತಿದ್ದಾರೆ. ಅಕ್ಕ ಒಂದು ನಿರ್ಧಾರ ತಗೊಂಡಿದ್ದಾರೆ. ಅದಕ್ಕೆ ನಾವು ಯೋಚನೆ ಮಾಡುವ ಅಗತ್ಯ ಇಲ್ಲ. ಅಕ್ಕ ಎಲ್ಲಿ ಹೆಜ್ಜೆ ಇಡುತ್ತಾರೋ ಅವರನ್ನ ನಾವು ಹಿಂಬಾಲಿಸುತ್ತೇವೆ ಎಂದು ಹೇಳಿದರು.

    ಅಂಬರೀಶಣ್ಣ ನಮಗೆ ತುಂಬಾ ಅನುಕೂಲ ಮಾಡಿದ್ದಾರೆ. ಮಂಡ್ಯ ಜನಕ್ಕೆ ಅಂಬರೀಶಣ್ಣ ಯಾರು? ಏನು ಅಂತ ಗೊತ್ತು. ಅಷ್ಟು ವರ್ಷ ಜನರ ಪ್ರೀತಿ ಗಳಿಸೋದು ಸುಲಭವಲ್ಲ. ಅಂಬರೀಶಣ್ಣ ಮಂಡ್ಯದ ಮನೆಮಗ. ಸುಮಲತಾ ಯಾಕೆ ಸ್ಪರ್ಧಿಸುತ್ತಿದ್ದಾರೆ ಅಂತ ಅರ್ಥ ಮಾಡ್ಕೋಬೇಕು. ಇದು ಸೂಕ್ಷ್ಮವಾದ ವಿಚಾರ, ಅವರು ರಾಜಕೀಯ ಲಾಭಕ್ಕಾಗಿ ಸ್ಪರ್ಧಿಸುತ್ತಿಲ್ಲ. ಮಂಡ್ಯದ ನಂಟಿಗೆ ಸರಿಸಾಟಿ ಯಾವುದೂ ಇಲ್ಲ ಎಂದು ಸುಮಲತಾ ಅವರ ಪರ ಯಶ್ ಬ್ಯಾಟಿಂಗ್ ಮಾಡಿದರು.

    ಮಂಡ್ಯದ ಜನತೆಗೆ ಅಂಬರೀಶ್ ಪ್ರೀತಿ ಮೀರಿ ದೊಡ್ಡ ಶಕ್ತಿ ಇದೆ. ಮಂಡ್ಯದ ಜನತೆಗೆ ಜ್ಞಾನ, ಶಕ್ತಿ, ಪ್ರೀತಿ, ಒಡನಾಟ, ತಾಳ್ಮೆ, ಸಹನೆ ಎಲ್ಲ ಇದೆ. ಮಂಡ್ಯದ ಜನ ಅಂಬರೀಶ್ ಕುಟುಂಬವನ್ನು ಕೈ ಬಿಡಲ್ಲ. ಮನೆ ತಾಯಿಯ ನಿರ್ಧಾರಕ್ಕೆ ಮಕ್ಕಳಾದ ನಾವು ಸದಾ ಜೊತೆಗಿರುತ್ತೇವೆ ಎಂದು ಸುಮಲತಾ ಅವರಿಗೆ ಸಾಥ್ ನೀಡಿದ್ದಾರೆ.

  • ಬಾಯಿ ಬಡಾಯಿ ಸಾಧನೆ ಶೂನ್ಯ: ಮೋದಿ ವಿರುದ್ಧ ಸಿದ್ದು ವಾಗ್ದಾಳಿ

    ಬಾಯಿ ಬಡಾಯಿ ಸಾಧನೆ ಶೂನ್ಯ: ಮೋದಿ ವಿರುದ್ಧ ಸಿದ್ದು ವಾಗ್ದಾಳಿ

    ಕಲಬುರಗಿ: ಬಾಯಿ ಬಡಾಯಿ ಸಾಧನೆ ಶೂನ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ, “ಮೋದಿ ಇದೇ ಮೈದಾನದಲ್ಲಿ ಬಂದು ಭಾಷಣ ಮಾಡಿ ಹೋಗಿದ್ದಾರೆ. ಅವರು ಮನ್ ಕೀ ಬಾತ್ ಬಿಟ್ಟರೆ ಸಾಧನೆ ಮಾತ್ರ ಶೂನ್ಯ. ಬಾಯಿ ಬಡಾಯಿ ಸಾಧನೆ ಶೂನ್ಯ. ಅವರು ದೇಶದ ಯಾವುದೇ ಭಾಗದಲ್ಲಿ ಹೋದರೂ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ. ಬದಲಾಗಿ ಭಾವನಾತ್ಮಕ ವಿಚಾರ ಮಾತನಾಡಿ ಸಮಾಜಕ್ಕೆ ದೇಶದ ಜನರ ಜಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

    “ನರೇಂದ್ರ ಮೋದಿಗೆ ಖರ್ಗೆ ಸಿಂಹ ಸ್ವಪ್ನರಾಗಿದ್ದಾರೆ. ಹೀಗಾಗಿ ಅವರನ್ನು ಇದೀಗ ಟಾರ್ಗೆಟ್ ಮಾಡಲಾಗಿದೆ. ರಾಹುಲ್ ಗಾಂಧಿ ಪ್ರಧಾನಿ ಆಗುವುದು ನೂರಕ್ಕೆ ನೂರು ಸತ್ಯ. ರೈತರಿಗೆ ಬಿಜೆಪಿ ಸರ್ಕಾರ ಏನು ಮಾಡಿಲ್ಲ. ಹಾಗಾಗಿ ನೀವು ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿ” ಎಂದು ಮನವಿ ಮಾಡಿದರು.

    ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಅವರು ಡಾ. ಉಮೇಶ್ ಜಾಧವ್ ಬಗ್ಗೆ ಒಂದು ಮಾತನ್ನು ಆಡಲಿಲ್ಲ. ಈ ಮೂಲಕ ಅವರು ತಮ್ಮ ಶಿಷ್ಯ ಜಾಧವ್ ವಿರುದ್ಧ ಸಾಫ್ಟ್ ಕಾರ್ನರ್ ತೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲ್ಲಾ ಶಾಸಕರೂ ನನ್ನ ತಂದೆಯ ಸ್ಥಾನದಲ್ಲಿ ನಿಂತು ಕೆಲ್ಸ ಮಾಡ್ತಿದ್ದಾರೆ: ಪ್ರಜ್ವಲ್ ರೇವಣ್ಣ

    ಎಲ್ಲಾ ಶಾಸಕರೂ ನನ್ನ ತಂದೆಯ ಸ್ಥಾನದಲ್ಲಿ ನಿಂತು ಕೆಲ್ಸ ಮಾಡ್ತಿದ್ದಾರೆ: ಪ್ರಜ್ವಲ್ ರೇವಣ್ಣ

    ಹಾಸನ: ಎಲ್ಲಾ ಶಾಸಕರೂ ನನ್ನ ತಂದೆಯ ಸ್ಥಾನದಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಎಲ್ಲರೂ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, “ಎಲ್ಲಾ ಕಾಂಗ್ರೆಸ್ ಮುಖಂಡರ ಮನೆಗೆ ಭೇಟಿ ನೀಡುತ್ತಿದ್ದೇನೆ. ನಮಗೆ ವಾತಾವರಣ ಪೂರಕವಾಗಿದ್ದು 6 ಜನ ಶಾಸಕರಿದ್ದಾರೆ. ಎಲ್ಲಾ ಶಾಸಕರೂ ನನ್ನ ತಂದೆಯ ಸ್ಥಾನದಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದರು.

    ಬಳಿಕ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ಮಾತನಾಡಿದ ಅವರು, “ದೇವೇಗೌಡರು ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಗೊತ್ತಿಲ್ಲ. ದೇವೇಗೌಡರು ಎಲ್ಲೇ ಸ್ಪರ್ಧಿಸಿದರೂ ಗೆಲವು ಸಾಧಿಸಲಿದ್ದಾರೆ” ಎಂದು ಹೇಳಿದರು.

    ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮತ ಪ್ರಚಾರ ಮಾಡುತ್ತಿದ್ದೇನೆ. ಮತದಾರರ ಪ್ರತಿಕ್ರಿಯೆ ಚೆನ್ನಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಜಂಟಿ ಸಭೆಗಳನ್ನು ನಡೆಸುತ್ತೇವೆ. ಮುಂದಿನ 27ರಂದು ನಗರದಲ್ಲಿ ಕಾರ್ಯಕರ್ತರ ಜೊತೆಗೆ ಬಂದು ನಾಮ ಪತ್ರ ಸಲ್ಲಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv