Tag: LokSabha election

  • ಕಾಂಗ್ರೆಸ್ ಉಳಿಸಲು ಜೆಡಿಎಸ್ ಅಭ್ಯರ್ಥಿಯಾದೆ: ಪ್ರಮೋದ್ ಮಧ್ವರಾಜ್

    ಕಾಂಗ್ರೆಸ್ ಉಳಿಸಲು ಜೆಡಿಎಸ್ ಅಭ್ಯರ್ಥಿಯಾದೆ: ಪ್ರಮೋದ್ ಮಧ್ವರಾಜ್

    – ಒಂದು ಶಾಲು ಎರಡು ಚಿಹ್ನೆ ಮುದ್ರಣ

    ಉಡುಪಿ: ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಜೆಡಿಎಸ್ ಟಿಕೆಟ್ ಪಡೆದು ಉಡುಪಿಗೆ ಆಗಮಿಸಿದ್ದಾರೆ. ಮೈತ್ರಿ ಟಿಕೆಟ್ ಪಡೆದು ಉಡುಪಿಗೆ ಬಂದ ಅವರು ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟರು. ವಿಭಿನ್ನ ಡಿಸೈನ್ ಶಾಲು ತೊಟ್ಟು ಬಂದು ಮೈತ್ರಿ ಧರ್ಮ ಪಾಲಿಸಿದರು. ವಿಭಿನ್ನ ಶಾಲು ತಯಾರಿ ಮಾಡಿರುವ ಪ್ರಮೋದ್ ಮಧ್ವರಾಜ್, ಕೈ ಮತ್ತು ತೆನೆ ಹೊತ್ತ ರೈತ ಮಹಿಳೆಯ ಚಿತ್ರ ಮುದ್ರಿಸಿಕೊಂಡಿದ್ದಾರೆ.

    ಒಂದೇ ಶಾಲಿನಲ್ಲಿ ಎರಡು ಪಕ್ಷದ ಚಿಹ್ನೆ ಮುದ್ರಿಸಿಕೊಂಡಿದ್ದೇನೆ. ಇಂತಹ ಶಾಲು ಈವರೆಗೆ ಯಾರೂ ತಯಾರು ಮಾಡಿಲ್ಲ. ಈ ಶಾಲನ್ನು 18ರ ವರೆಗೆ ತೊಟ್ಟಿರುತ್ತೇನೆ. ಚಿಹ್ನೆಯ ಬಗ್ಗೆ ಜನರಿಗೆ ಉತ್ತರ ಕೊಟ್ಟು ಸುಸ್ತಾಯ್ತು. ಹಾಗಾಗಿ ಗೊಂದಲವೇ ಬೇಡ ಅಂತ ಶಾಲಿಗೊಂದು ಹೊಸ ರೂಪ ಕೊಟ್ಟಿರುವುದಾಗಿ ಪ್ರಮೋದ್ ಪ್ರತಿಕ್ರಿಯಿಸಿದ್ದಾರೆ.

    ಕಾಂಗ್ರೆಸ್ ಉಳಿಸಲು ಜೆಡಿಎಸ್ ಅಭ್ಯರ್ಥಿಯಾದೆ:
    ಕಾಂಗ್ರೆಸ್ ಉಳಿಸಲು ಜೆಡಿಎಸ್ ಅಭ್ಯರ್ಥಿಯಾದೆ. ರಾಜ್ಯದಲ್ಲಿ ಹೇಗಿದ್ಯೋ ಗೊತ್ತಿಲ್ಲ. ಉಡುಪಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಹಾಲು ಜೇನಿನಂತೆ ಬೆರೆಯಲಿದೆ. ನಾನು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಮೈತ್ರಿ ಧರ್ಮದಂತೆ ಉಡುಪಿ-ಚಿಕ್ಕಮಗಳೂರು ಜೆಡಿಎಸ್ ಪಾಲಾಯ್ತು. ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸ್ತೇನೆ. ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಈ ಅವಕಾಶ ಸಿಕ್ಕಿದೆ ಎಂದರು.

    ಕೆಲಸ ಮಾಡುವ ಎಂಪಿ ಆಗುವೆ:
    ಕ್ಷೇತ್ರಕ್ಕೆ ಕೆಲಸ ಮಾಡುವ ಸಂಸದರನ್ನು ಆಯ್ಕೆ ಮಾಡಿ ಎಂದು ಪ್ರಮೋದ್ ಮಧ್ವರಾಜ್ ಕರೆ ನೀಡಿದರು. ಮನೆಗೆ ಹೋಗುವ ಮೊದಲು ಕಾಂಗ್ರೆಸ್ ಕಚೇರಿಗೆ ಭೇಟಿ ಕೊಟ್ಟಿದ್ದೇನೆ. ಮಾರ್ಚ್ 25ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಎರಡು ದಿನದಲ್ಲಿ ಎರಡು ಜಿಲ್ಲೆಗಳ ಪ್ರವಾಸ ಮಾಡುತ್ತೇನೆ ಎಂದರು. ಕಾಂಗ್ರೆಸ್ ಪಕ್ಷ ಉಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಗೆದ್ದು ಬಂದರೆ ರಾಜಧರ್ಮ ಪಾಲಿಸುತ್ತೇನೆ ಎಂದು ಮಧ್ವರಾಜ್ ಹೇಳಿದರು.

  • ಸುಮಲತಾ ಸೋಲಿಗೆ ರಮ್ಯಾ ಸ್ಕೆಚ್!

    ಸುಮಲತಾ ಸೋಲಿಗೆ ರಮ್ಯಾ ಸ್ಕೆಚ್!

    ಬೆಂಗಳೂರು: ಮಾಜಿ ಸಂಸದೆ ರಮ್ಯಾ ಅವರ ಸೋಲಿನ ನೋವು ನನ್ನ ಮನಸ್ಸಿನಲ್ಲಿ ಇನ್ನೂ ಇದೆ. ಮರೆಯೋದಕ್ಕೆ ಆಗ್ತಿಲ್ಲ ಎಂಬ ವಿಷಯ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಇದೆ. ಸದ್ಯ ಈಗ ಮಂಡ್ಯ ಅಖಾಡದಲ್ಲಿ ಸುಮಲತಾ ವಿರುದ್ಧ ರಮ್ಯಾ ಆಪ್ತ ವಲಯ ಮಸಲತ್ತು ನಡೆಯುತ್ತಿದೆ.

    ದೆಹಲಿಯಲ್ಲೇ ಕುಳಿತು ರಮ್ಯಾ ಮುಯ್ಯಿಗೆ ಮುಯ್ಯಿ ರಾಜಕಾರಣ ಶುರು ಮಾಡಿದ್ದಾರಾ ಎಂಬ ಪ್ರಶ್ನೆ ಈಗ ಶುರುವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಮಂಡ್ಯ ಕಣದಿಂದ ಸೋತಿದ್ದರು. ಆಗ ಅಂಬರೀಶ್ ಬೆಂಬಲಿಗರು ಕಾಟ ಕೊಟ್ಟಿದ್ರು ಎಂದು ಆರೋಪ ಮಾಡಲಾಗಿತ್ತು.

    ಇಂದು ಅಂಬರೀಶ್ ಪತ್ನಿ ಸುಮಲತಾ ಮಂಡ್ಯ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ಇದನ್ನೇ ರಾಜಕೀಯ ಟಾಂಗ್‍ಗೆ ರಮ್ಯಾ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಯಾಕಂದ್ರೆ ಮಂಡ್ಯದಲ್ಲಿರುವ ರಮ್ಯಾ ಆಪ್ತರಿಂದಲೇ ಅಖಾಡದಲ್ಲಿ ಒಳಗುದ್ದು ಶುರುವಾಗಿದೆ.

    ಈ ವಿಚಾರ ತಿಳೀಯುತ್ತಿದ್ದಂತೆಯೇ ಅಂಬರೀಶ್ ಅಭಿಮಾನಿಗಳು ಮಾಜಿ ಸಂಸದೆ ವಿರುದ್ಧ ಗರಂ ಆಗಿದ್ದಾರೆ. 2013ರಲ್ಲಿ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಗ ರಮ್ಯಾ ಜೊತೆ ಮಂಡ್ಯದಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿದ್ದು ಮರೆತ್ರಾ ಎಂದು ಕಿಡಿಕಾರುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ರಾಜಕಾರಣಿಗಳು ಏನೂ ಕೆಲಸ ಮಾಡದ್ದಕ್ಕೆ ರಾಜಕೀಯಕ್ಕೆ ಬಂದಿದ್ದೇನೆ: ಪ್ರಕಾಶ್ ರೈ

    ರಾಜಕಾರಣಿಗಳು ಏನೂ ಕೆಲಸ ಮಾಡದ್ದಕ್ಕೆ ರಾಜಕೀಯಕ್ಕೆ ಬಂದಿದ್ದೇನೆ: ಪ್ರಕಾಶ್ ರೈ

    ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ನಟ ಪ್ರಕಾಶ್ ರೈ ಸ್ಪರ್ಧಿಸಲು ಮುಂದಾಗಿದ್ದು, ಇಂದು ನಾಮಪತ್ರಿಕೆ ಸಲ್ಲಿಸಿದ್ದಾರೆ.

    ಈ ಬಗ್ಗೆ ಪ್ರಕಾಶ್ ರೈ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ನಾಮಪತ್ರ ಸಲ್ಲಿಸಿದಕ್ಕೆ ಸಂತೋಷವಾಗುತ್ತಿದೆ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಇದು ದೇಶದ ಹಬ್ಬ. ಪ್ರಜೆಗಳು ತಮ್ಮ ಮತ ಚಲಾಯಿಸುವ ದಿನ. 5 ವರ್ಷಗಳಲ್ಲಿ ಏನೂ ಮಾಡಿದ್ದಾರೆ ಎಂಬುದು ನೋಡಿ ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಇದು ಒಂದು ಅದ್ಭುತ ದಿನ” ಎಂದರು.

    ರಾಜಕೀಯಕ್ಕೆ ಬಂದು ಬದಲಾವಣೆ ಮಾಡಬೇಕು. ರಾಜಕಾರಣಿಗಳು ನಮ್ಮ ಹಣದಿಂದ ಆಡಳಿತ ನಡೆಸುತ್ತಾರೆ. ಅದು ನಮ್ಮ ಹಣ. ನಮ್ಮ ಹಣವನ್ನು ಇವರು ಹೇಗೆ ಉಪಯೋಗಿಸುತ್ತಿದ್ದಾರೆ. ಪ್ರಜೆಗಳು ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ನಾವು ತೆರಿಗೆ ಕಟ್ಟುತ್ತೇವೆ. ಯಾವ ನಾಯಕರು ಅವರ ಮನೆಯಿಂದ ದುಡ್ಡು ತರಲ್ಲ. ಏಕೆಂದರೆ ಬರುವ ನಾಯಕರಿಗೆ ಸಂಬಳ ಸಿಗುತ್ತೆ. ಅವರ ಕಾರು, ಸೆಕ್ಯೂರಿಟಿ ನಮ್ದು. ಅವರು ಅದನ್ನು ಉಪಯೋಗಿಸಿಕೊಳ್ಳಲಿ. ಆದರೆ ಜನರಿಗಾಗಿ ಆ ಹಣವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಉತ್ತರಿಸಿದ್ದಾರಾ? ರಾಜರ ತರಹ ಮೆರೆಯುತ್ತಿದ್ದಾರೆ. ಅವರು ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದರು.

    ರಾಜಕೀಯಕ್ಕೆ ಇಳಿಯುವುದು ಅಲ್ಲ, ರಾಜಕೀಯಕ್ಕೆ ಪ್ರವೇಶ ಮಾಡುವುದು. ಇದು ಜೀವನದ ಇನ್ನೊಂದು ಮೆಟ್ಟಿಲು. ಇದು ನೈಸರ್ಗಿಕವಾಗಿ ನಡೆಯುತ್ತೆ. ಇನ್ಮುಂದೆ ಇದು ಜೀವನದ ವಿಧಾನ. ಅದು ಸೋಲು-ಗೆಲುವಿನ ಪ್ರಶ್ನೆ ಅಲ್ಲ. ನಮ್ಮನ್ನು ವೋಟ್ ಮಾಡಿ ಗೆಲ್ಲಿಸಿದ ಜನರ ಪರ ಕೆಲಸ ಮಾಡಬೇಕು. ಅವರ ಧ್ವನಿ ಹಾಗೂ ಪ್ರತಿನಿಧಿ ಆಗಬೇಕು. ನಾನು ಕೇವಲ ನಟ ಅಲ್ಲ. ನಾನು ಸಾಮಾಜಿಕ ಚಿಂತಕ ಕೂಡ. ಜನರು ನನ್ನನ್ನು ಕೇವಲ ನಟನಾಗಿ ನೋಡುತ್ತಿಲ್ಲ. ನಾನು ಜನರ ಸಮಸ್ಯೆ ತಿಳಿದುಕೊಂಡಿರುವವನು. ಯಾರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಿಲ್ಲ. ಜನರ ಪರವಾಗಿ ಮಾತನಾಡುತ್ತಿದ್ದೇನೆ. ಆ ನಿಟ್ಟಿನಲ್ಲಿ ಜನರು ನನ್ನ ವ್ಯಕ್ತಿತ್ವವನ್ನು ನೋಡಬಹುದು ಎಂದು ತಿಳಿಸಿದರು.

    ರಾಜಕೀಯದಲ್ಲಿ ಸಿನಿಮಾದವರು ಮಾತ್ರವಲ್ಲದೇ ಉದ್ಯಮಿಯವರು, ಲಾಯರ್‍ಗಳು ಸೋತಿದ್ದಾರೆ. ಸಿನಿಮಾ ಎಂದು ನೋಡಬೇಡಿ. ಒಂದು ಪ್ರಜೆಯಾಗಿ ನೋಡಿ. ಒಬ್ಬ ಬೆಳೆದು ನಿಂತ ವ್ಯಕ್ತಿ ಹಾಗೂ ಸಾಧಾನೆ ಮಾಡಿದ ವ್ಯಕ್ತಿಯನ್ನು ನೋಡಿ. ಅವರ ಸಾಧಿಸುವ ಸಾಧನೆಯನ್ನು ನೋಡಿ. ಯಾವುದೇ ಚಿಕ್ಕ ಕೆಲಸ ಮಾಡಿದಕ್ಕೆ ನನಗೆ ಈ ಸ್ಥಾನ ಮಾನ ಸಿಕ್ಕಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬಲ ಬೇಡ. ಜನರ ಬಲ ಹಾಗೂ ಬೆಂಬಲ ಬೇಕು. ಬೆಂಗಳೂರು ಕೇಂದ್ರ ನಾನು ಹುಟ್ಟಿದ ಊರು. ನನ್ನ ಬಾಲ್ಯ, ಶಿಕ್ಷಣ, ರಂಗಭೂಮಿ, ಸಿನಿಮಾ ಎಲ್ಲಾ ಶಾಂತಿನಗರದಲ್ಲಿ ನಡೆದಿದೆ. ಹಾಗಾಗಿ ರಾಜಕೀಯಕ್ಕೂ ಶಾಂತಿನಗರವನ್ನು ಆಯ್ಕೆ ಮಾಡಿದ್ದೇನೆ ಎಂದು ಹೇಳಿದರು.

    ಜಾತಿ ರಾಜಕಾರಣದ ಬಗ್ಗೆ ಮಾತನಾಡಿ ಜನರನ್ನು ಜನರಾಗಿ ನೋಡಿ. ಈ ದೇಶದ ಪ್ರಜೆಯಾಗಿ ನೋಡಿ. ಒಬ್ಬರು ಕೇವಲ ಹಿಂದೂಗಳಿಗೆ ವೋಟ್ ಹಾಕುತ್ತಾರೆ. ಮುಸ್ಲಿಂಗೆ ವೋಟ್ ಹಾಕುತ್ತಾರೆ ಎಂದು ಹೇಳುವುದು ಸರಿಯಲ್ಲ. ಕೆಲವರು ಇದನ್ನು ಲೆಕ್ಕಾಚಾರ ಹಾಕುತ್ತಾರೆ. ಇದರಿಂದ ಜನರಿಗೆ ಸಮಸ್ಯೆಯಿಲ್ಲ. ಭಾಷೆ ಬದಲಾಗಬೇಕು. ಅವರ ಭದ್ರಕೋಟೆ, ಇವರ ಭದ್ರಕೋಟೆ ಎಂದು ನೋಡಬಾರದು. ಪ್ರಜೆಗಳನ್ನು ಆಳಬೇಕೆಂದು ಪ್ರಜಾಪ್ರಭುತ್ವ ಬಂದ ಮೇಲೆ ರಾಜನಾಗಿ ಗೆದ್ದೆ ಎಂದು ಹೇಳುತ್ತಾರೆ. ಆದರೆ ಅವರು ಗೆದ್ದಿಲ್ಲ ಹೊರತು ಜನರಿಂದ ಆಯ್ಕೆ ಆಗಿದ್ದಾರೆ. ನಮ್ಮ ಆಳ್ವಿಕೆಯಲ್ಲಿ ಎಂದು ಹೇಳುತ್ತಾರೆ. ಆಳಲು ಅವರು ಯಾರು? ಆಡಳಿತ ಎಂದು ಹೇಳಬೇಕು. ಆ ಭಾಷೆಯನ್ನು ಮೊದಲು ಬದಲಾಯಿಸಿ. ಆಳ್ವಿಕೆ ಬೇಡ ಎಂದೇ ಪ್ರಜಾಪ್ರಭುತ್ವ ತಂದಿರುವುದು. ಜನರನ್ನು ಮನುಷ್ಯನಾಗಿ ನೋಡಿ. ಜಾತಿಯಾಗಿ ನೋಡಬೇಡಿ ಎಂದು ಪ್ರಕಾಶ್ ರೈ ಹೇಳಿದರು.

  • ವಾಟ್ಸಾಪ್, ಫೇಸ್‍ಬುಕ್ ನೋಡಿ ಜನ ವೋಟ್ ಹಾಕಲ್ಲ: ಸುಮಲತಾಗೆ ಸಚಿವ ಪುಟ್ಟರಾಜು ಟಾಂಗ್

    ವಾಟ್ಸಾಪ್, ಫೇಸ್‍ಬುಕ್ ನೋಡಿ ಜನ ವೋಟ್ ಹಾಕಲ್ಲ: ಸುಮಲತಾಗೆ ಸಚಿವ ಪುಟ್ಟರಾಜು ಟಾಂಗ್

    ಮಂಡ್ಯ: ವಾಟ್ಸಾಪ್ ಹಾಗೂ ಫೇಸ್‍ಬುಕ್ ನೋಡಿ ಜನ ವೋಟ್ ಹಾಕಲ್ಲ ಎಂದು ಸಚಿವ ಪುಟ್ಟರಾಜು ಸುಮಲತಾ ಅವರಿಗೆ ಟಾಂಗ್ ನೀಡಿದ್ದಾರೆ.

    ಮಂಡ್ಯದಲ್ಲಿ ಇಂದು ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜನರು ವಾಟ್ಸಾಪ್ ಹಾಗೂ ಫೇಸ್‍ಬುಕ್ ನೋಡಿ ವೋಟ್ ಹಾಕುವುದಿಲ್ಲ. ಹಾಗಿದ್ದರೆ ಮೋದಿ ಏಕೆ ಬೀದಿ ಬೀದಿ ಸುತ್ತಬೇಕಿತ್ತು ಎಂದು ಹೇಳುವ ಮೂಲಕ ಸುಮಲತಾ ಅವರಿಗೆ ಟಾಂಗ್ ನೀಡಿದ್ದಾರೆ.

    ಮಂಡ್ಯದಲ್ಲಿ ನಾವು- ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳು. ನಾವೇ ಈಗ ಒಂದಾಗಿದ್ದೇವೆ. ಆದರೆ ಬಿಜೆಪಿಗೆ ಅಭ್ಯರ್ಥಿಯೇ ಇಲ್ಲ. ಅವರು ಮಂಡ್ಯದಲ್ಲಿ ಅಭ್ಯರ್ಥಿ ಹಾಕೋದಿಲ್ಲ. ಸ್ವಾಭಿಮಾನವಿರುವ ಮಂಡ್ಯ ಜನ ಬೇರೆಯವರ ಕೈಯಲ್ಲಿ ಹೇಳಿಸಿಕೊಳ್ಳಲ್ಲ ಎಂದರು.

    ಸುಮಲತಾ ಸ್ಪರ್ಧೆ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂಬುದು ಶುದ್ಧ ಸುಳ್ಳು. ಏಕೆಂದರೆ ಅಭಿವೃದ್ಧಿಯೇ ನಮ್ಮ ಅಜೆಂಡಾ. ನಾಮಪತ್ರ ಸಲ್ಲಿಕೆಯಾದ ಮೇಲೆ ತಂತ್ರಗಾರಿಕೆ ಗೊತ್ತಾಗುತ್ತದೆ. ಮಂಡ್ಯ ಜಿಲ್ಲೆಯ ಜನರಿಗೆ ಸ್ವಾಭಿಮಾನದ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ನಾನು ಮಲಗಿಕೊಳ್ಳೋದು ಚಿನಕುರಳಿಯಲ್ಲಿ, ಬೆಳಗ್ಗೆ ಎದ್ದು ಗದ್ದೆಗೆ ನೀರು ಕಟ್ಟಿ ಅಲ್ಲಿಯೇ ವಾಕ್ ಮಾಡಿ ಬರುತ್ತೇನೆ. ಇದು ಸ್ವಾಭಿಮಾನ ಅಲ್ಲವೆ ಎಂದು ಪುಟ್ಟರಾಜು ಹೇಳಿದ್ದಾರೆ.

    ಈ ಮೂಲಕ ಸುಮಲತಾ ಅವರು ಬೆಂಗಳೂರಿನಲ್ಲಿ ಇದ್ದುಕೊಂಡು ಸ್ವಾಭಿಮಾನದ ಬಗ್ಗೆ ಮಾತನಾಡುವುದಕ್ಕೆ ಪರೋಕ್ಷವಾಗಿ ಕೆದಕಿದ್ದಾರೆ.

  • ಮುನಿಯಪ್ಪಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗಿಲ್ಲ: ರಮೇಶ್ ಕುಮಾರ್ ವ್ಯಂಗ್ಯ

    ಮುನಿಯಪ್ಪಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗಿಲ್ಲ: ರಮೇಶ್ ಕುಮಾರ್ ವ್ಯಂಗ್ಯ

    ಕೋಲಾರ: ಮುನಿಯಪ್ಪ ಅವರಿಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗೆ ಇಷ್ಟವಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

    ರಮೇಶ್ ಕುಮಾರ್ ಮತ್ತು ನಾನು ಗಂಡ ಹೆಂಡತಿ ಇದ್ದಂತೆ ಎಂದಿದ್ದ ಮುನಿಯಪ್ಪ ಹೇಳಿಕೆ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ನಾನು ಗಂಡಸರೊಂದಿಗೆ ಮಲಗುವುದಿಲ್ಲ, ನಾನು ನನ್ನ ಮನೆಯಲ್ಲಿ ಮಲಗುವೆ. ಸಪ್ತಪದಿಯೊಂದಿಗೆ ಮದುವೆಯಾಗಿರುವ ನನ್ನ ಪತ್ನಿಯೊಂದಿಗೆ ಸಂಬಂಧವಿದೆ, ಅನೈತಿಕ ಸಂಬಂಧ ಯಾವುದೂ ಇಲ್ಲ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಮುನಿಯಪ್ಪ ವಿರುದ್ಧ ಬಂಡಾಯ – ದೆಹಲಿಗೆ ದೂರು ಕೊಟ್ಟ ಕೋಲಾರ ಕೈ ಶಾಸಕರು

    ಶಾಸನ ಸಭೆಯಲ್ಲಿ ನಾನು ಸ್ಪೀಕರ್ ಒಂದು ರೀತಿ ನಾನು ಜಡ್ಜ್, ಯಾರಿಗೂ ಸಹಮತವೂ ಇಲ್ಲ, ಭಿನ್ನಮತನೂ ಇಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಎರಡೂ ಕಡೆಯವರು ಸರ್ವಾನುಮತದಿಂದ ನನ್ನ ಆಯ್ಕೆ ಮಾಡಿದ್ದಾರೆ. ನಾನು ಯಾರ ಪರವಾಗಿಯೂ ಇಲ್ಲ. ನಾನು ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದ ಮೇಲೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷದಲ್ಲಿ ನಡೆಯುವ ವಿಷಯದ ಬಗ್ಗೆ ನನಗೆ ತಿಳಿದಿಲ್ಲ. ಚುನಾವಣೆಗೆ ಯಾರನ್ನು ಕಣಕ್ಕಿಳಿಸಬೇಕೆಂದು ಪಕ್ಷದಲ್ಲಿರುವವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನನಗೆ ಈ ಬಗ್ಗೆ ಗೊತ್ತಿಲ್ಲ. ಸ್ಪೀಕರ್ ಆಗಿರುವುದರಿಂದ ನನ್ನ ಮನಸ್ಸಿನಲ್ಲಿರುವುದನ್ನ ಹೇಳುವುದಕ್ಕೆ ಆಗುವುದಿಲ್ಲ ಎಂದರು. ಇದನ್ನೂ ಓದಿ:ನಾಮಪತ್ರ ಸಲ್ಲಿಸೋ ಮುನ್ನ ಡಿಕೆ ರವಿ ವರ್ಗಾವಣೆ ಕಾರಣ ತಿಳಿಸಲಿ – ಮುನಿಯಪ್ಪಗೆ ಕೃಷ್ಣಯ್ಯ ಶೆಟ್ಟಿ ಆಗ್ರಹ

    ಉಮೇಶ್ ಜಾಧವ್ ರಾಜಿನಾಮೆ ವಿಚಾರ, 25 ನೇ ತಾರೀಖು ವಿಚಾರಣೆ ದಿನಾಂಕ ನಿಗದಿಯಾಗಿದೆ. ವಿಧಾನಸೌಧದಲ್ಲಿ ಈ ಸಂಬಂಧ ಪರ ವಿರೋಧ ವಾದ-ವಿವಾದ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

  • 2014ರ ಸೋಲು – ಎಚ್‍ಡಿಡಿ ವಿರುದ್ಧ ಬಚ್ಚೇಗೌಡ ಮೃದು ಧೋರಣೆ?

    2014ರ ಸೋಲು – ಎಚ್‍ಡಿಡಿ ವಿರುದ್ಧ ಬಚ್ಚೇಗೌಡ ಮೃದು ಧೋರಣೆ?

    ಚಿಕ್ಕಬಳ್ಳಾಪುರ: ಕಳೆದ ಚುನಾವಣೆ ವೇಳೆ ಎಚ್.ಡಿ ದೇವೇಗೌಡ ಕುಟುಂಬದ ವಿರುದ್ಧ ಹರಿಹಾಯ್ದಿದ್ದ ಮಾಜಿ ಸಚಿವ, ಈ ಬಾರಿಯ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಈಗ ಮೃದು ಧೋರಣೆ ತೋರಿದ್ದಾರೆ.

    ಜಿಲ್ಲೆಯ ಚಿಂತಾಮಣಿ ತಾಲೂಕಿನ ಪುರಾಣ ಪ್ರಸಿದ್ಧ ಕೈವಾರ ಕ್ಷೇತ್ರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಮಾಧ್ಯಮಗಳು ಈ ಬಾರಿ ನೀವು ದೇವೇಗೌಡರ ಬಗ್ಗೆ ಮೃದು ಧೋರಣೆ ತಾಳಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದಕ್ಕೆ, ದೇವೇಗೌಡರು ಮಾಜಿ ಪ್ರಧಾನಿಗಳು ಹಾಗೂ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳು. ಅವರು ದೊಡ್ಡವರು, ದೊಡ್ಡವರ ವಿಷಯ ನಮಗ್ಯಾಕೆ? ನಾವು ಅವರ ಮುಂದೆ ತುಂಬಾ ಸಣ್ಣವರು ಎಂದು ಹೇಳಿ ನಸುನಕ್ಕರು.

    ಈ ಬಾರಿ ಮೋದಿ ಅಲೆಯ ಜೊತೆಗೆ, ಕಳೆದ ಬಾರಿ ಸೋತಿರುವ ಅನುಕಂಪ, ಹಾಗೂ ಮೊಯ್ಲಿ ಯವರ ಸುಳ್ಳು ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ನನ್ನ ಗೆಲುವಿನ ಹಾದಿ ಸುಗಮವಾಗಿದೆ ಎಂದು ತಿಳಿಸಿದರು.

    ಈ ವೇಳೆ ಮಂಡ್ಯ ಚುನಾವಣೆಯಲ್ಲಿ ಬಿಜೆಪಿ ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ಯಾ ಎನ್ನುವ ಪ್ರಶ್ನೆಗೆ, ನಾನು ಹೈಕಮಾಂಡಿನ ಜೊತೆ ಹೋಗಿ ಮಾತನಾಡಿಲ್ಲ. ಮಂಡ್ಯ ರಾಜಕೀಯದ ಬಗ್ಗೆ ನನಗೆ ಏನು ಗೊತ್ತಿಲ್ಲ. ನಮ್ಮ ಚಿಕ್ಕಬಳ್ಳಾಪುರದ ಬಗ್ಗೆ ಮಾತ್ರ ನನಗೆ ಗೊತ್ತು ಎಂದು ಹೇಳಿದರು.

    ಕಳೆದ ಬಾರಿ ಏನಾಗಿತ್ತು?
    ಕಳೆದ ಬಾರಿ ದೇವೇಗೌಡರ ಬಗ್ಗೆ ಹರಿಹಾಯ್ದ ಪರಿಣಾಮ ಕೊನೆ ಕ್ಷಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಚ್‍ಡಿ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದರು. ಹೀಗಾಗಿ ಓಕ್ಕಲಿಗರ ಮತ ವಿಭಜನೆಯಿಂದಾಗಿ ಕೇವಲ 9,520 ಮತಗಳ ಅಂತರದಿಂದ ಬಚ್ಚೇಗೌಡ ಅವರು ಸೋತಿದ್ದರು.

    ಕಳೆದ ಬಾರಿ ಬಚ್ಚೇಗೌಡ ಅವರು ಗೆಲ್ಲಲ್ಲಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ ಬಚ್ಚೇಗೌಡರು ದೇವೇಗೌಡ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇದರ ಪರಿಣಾಮ ಕೊನೆಯ ಕ್ಷಣದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಎಚ್‍ಡಿಕೆ ಅಭ್ಯರ್ಥಿಯಾದ ಕೂಡಲೇ ಚುನಾವಣೆಯ ಸಂಪೂರ್ಣ ಚಿತ್ರಣವೇ ಬದಲಾಯಿತು. ಒಕ್ಕಲಿಗರ ಮತ ವಿಭಜನೆಯಾದ ಪರಿಣಮ ಬಚ್ಚೇಗೌಡ ಭಾರೀ ಸ್ಪರ್ಧೆ ನೀಡಿದರೂ ಕೊನೆ ಕ್ಷಣದಲ್ಲಿ ಮೋಯ್ಲಿ ಮುಂದೆ 9,520 ಮತಗಳ ಅಂತರದಿಂದ ಸೋಲನ್ನಪ್ಪಿದರು. ಈ ಕಾರಣಕ್ಕೆ ತಮ್ಮ ಗೆಲುವಿನ ಹಾದಿ ಕಷ್ಟ ಆಗುತ್ತದೆ ಎಂದುಕೊಂಡಿರುವ ಬಚ್ಚೇಗೌಡ ದೇವೇಗೌಡ ವಿರುದ್ಧ ತುಟಿ ಬಿಚ್ಚಲಿಲ್ಲ.

    ಕಳೆದ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಎಂ.ವೀರಪ್ಪ ಮೋಯ್ಲಿ 4,24,800 ವೋಟ್ ಗಳಿಸಿದ್ದರೆ ಬಿ.ಎನ್ ಬಚ್ಚೆಗೌಡ ಅವರಿಗೆ 4,15,280 ಮತಗಳು ಬಿದ್ದಿತ್ತು. ಎಚ್.ಡಿ ಕುಮಾರಸ್ವಾಮಿ ಅವರಿಗೆ 346,339 ಲಕ್ಷ ಮತ ಪಡೆದಿದ್ದರು.

  • ದರ್ಶನ್, ಯಶ್ ನೋಡೋಕೆ ಮುದ್ದು ಮುದ್ದಾಗಿದ್ದಾರೆ, ಅವರು ಸಿನಿಮಾ ಮಾಡ್ಕೊಂಡು ಇರಲಿ: ಅನ್ನದಾನಿ

    ದರ್ಶನ್, ಯಶ್ ನೋಡೋಕೆ ಮುದ್ದು ಮುದ್ದಾಗಿದ್ದಾರೆ, ಅವರು ಸಿನಿಮಾ ಮಾಡ್ಕೊಂಡು ಇರಲಿ: ಅನ್ನದಾನಿ

    ಬೆಂಗಳೂರು: ನಾವು ಬೇಜಾನ್ ಸ್ಟಾರ್ ಗಳನ್ನು ನೋಡಿದ್ದೇವೆ. ನಟ ದರ್ಶನ್ ಹಾಗೂ ಯಶ್ ನೋಡೋಕೆ ಮುದ್ದು ಮುದ್ದಾಗಿದ್ದಾರೆ. ಅವರು ಸಿನಿಮಾ ಮಾಡ್ಕೊಂಡು ಇರಲಿ ಎಂದು ಜೆಡಿಎಸ್ ಶಾಸಕ ಅನ್ನದಾನಿ ಹೇಳಿದ್ದಾರೆ.

    ಡಿ.ಕೆ ಶಿವಕುಮಾರ್ ಮನೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಸ್ಟಾರ್ ಗಳನ್ನು ನಾವು ಬಹಳ ನೋಡಿದ್ದೇವೆ. ರಾಜ್ ಕುಮಾರ್ ಗಿಂತಲೂ ದೊಡ್ಡ ನಟರು, ಸ್ಟಾರ್ ಯಾರಿದ್ದಾರೆ? ಅವರೇ ರಾಜಕೀಯಕ್ಕೆ ಬರಲಿಲ್ಲ. ಯಶ್, ದರ್ಶನ್ ಸಿನಿಮಾದಲ್ಲಿ ಒಳ್ಳೆ ಹೆಸರಿದೆ. ನೋಡೋಕು ಮುದ್ದು ಮುದ್ದಾಗಿದ್ದಾರೆ. ಆದರೆ ಜನರ, ರೈತರ ಕಷ್ಟ ಸುಖ ನೋಡೋರು ನಾವು. ಜನರ ಮಧ್ಯೆ ಇರೋದು ನಾವುಗಳೇ ಹೊರತು ಸಿನಿಮಾ ಸ್ಟಾರ್ ಗಳಲ್ಲ. ನಮಗೆ ದೇವೇಗೌಡರೇ ಸ್ಟಾರ್, ಕುಮಾರಸ್ವಾಮಿ, ಡಿಕೆ ಶಿವಕುಮಾರ್ ನಮಗೆ ಸ್ಟಾರ್ ಗಳು” ಎಂದು ಹೇಳಿ ಹೊಗಳಿದರು.

    ಬಳಿಕ ಮಾತನಾಡಿದ ಅವರು, ಜನರ ತಿಥಿ ಆದ್ರು, ಮದುವೆ ಆದ್ರೂ ನಾವೇ ಹೋಗೋದು. ಉಳಿದ ಸಿನಿಮಾ ಸ್ಟಾರ್ ಗಳಿಗೆ ಗ್ರೌಂಡ್ ರಿಯಾಲಿಟಿ ಏನು ಗೊತ್ತಿದೆ? ಸಿನಿಮಾ ಮಾಡಲಿ, ಬೇಡ ಅಂತಲ್ಲ. ಆದರೆ ಜನರ ಮಧ್ಯೆ ನಿಜಾವಾಗಿ ಇರೋದು ನಾವು. ಬಡವರ ಮಧ್ಯೆ ಕೆಲಸ ಮಾಡುತ್ತಿರುವುದು ನಾವು. ಸಿನಿಮಾ ಸ್ಟಾರ್ ಗಳೆಲ್ಲ ಯಾವಾಗ ಬಡವರ ಮಧ್ಯೆ ಇರೋದಕ್ಕೆ ಸಾಧ್ಯವಾಗಿದೆ. ಹೀಗಾಗಿ ಜನರು ನಮ್ಮ ಕೈ ಬಿಡಲ್ಲ ಎನ್ನುವ ವಿಶ್ವಾಸವಿದೆ. ಜನರ ಕಾಲಿಗೆ ಬಿದ್ದು ಮತ ಕೇಳ್ತೀವಿ ಎಂದು ಹೇಳಿದ್ದಾರೆ.

    ಕೆ.ಆರ್ ಪೇಟೆ ಶಾಸಕ ನಾರಾಯಣಸ್ವಾಮಿ ಅವರು ಯಶ್ ಮತ್ತು ದರ್ಶನ್ ಅವರಿಗೆ ಎಚ್ಚರಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ನೀವು ಮನೆಯಲ್ಲಿ ಇದ್ದರೆ ನಿಮಗೆ ಗೌರವ, ಇಲ್ಲದಿದ್ದರೆ ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ತಕ್ಕ ಪಾಠ ಕಲಿಸುತ್ತೇವೆ. ಸರ್ಕಾರ ನಮ್ಮದಿದೆ. ಸುಮ್ಮಿನಿದ್ರೆ ಸರಿ. ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ. ಶೂಟಿಂಗ್ ಮಾಡ್ಕೊಂಡು ಗೌರವವಾಗಿ ಇರಿ. ರಾಜಕಾರಣದ ಬಗ್ಗೆ ಮಾತಾಡಲು ನಿಮಗೆ ಹಕ್ಕಿಲ್ಲ. ನೀವು ಭಾರತ ದೇಶವನ್ನೇ ನೋಡಿಲ್ಲ. ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಹೇಳಿದ್ದರು.

  • ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಆಸ್ತಿಯನ್ನು ಸೊಸೆಗೆ ಕೊಟ್ಟ ಮುನಿಯಪ್ಪ!

    ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಆಸ್ತಿಯನ್ನು ಸೊಸೆಗೆ ಕೊಟ್ಟ ಮುನಿಯಪ್ಪ!

    – ದಾಖಲೆ ಬಿಡುಗಡೆಯಾದ ಬೆನ್ನಲ್ಲೇ ಸೊಸೆಗೆ ಗಿಫ್ಟ್

    ಕೋಲಾರ: ಸಂಸದ ಕೆ.ಎಚ್ ಮುನಿಯಪ್ಪ ಆಸ್ತಿ ದಾಖಲೆ ಬಿಡುಗಡೆ ಹಿನ್ನೆಲೆ ವಿವಾದಕ್ಕೆ ಸಿಲುಕುತ್ತಿದ್ದಂತೆ, ತನ್ನ ಪತ್ನಿ ಹೆಸರಿನಲ್ಲಿದ್ದ 300 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನ ತಮ್ಮ ಸೊಸೆಗೆ ಉಡುಗೊರೆ ಕೊಟ್ಟಿದ್ದಾರೆ.

    ಕಳೆದ ವಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಒಕ್ಕೂಟದ ಮುಖಂಡರು ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಕೆ.ಎಚ್ ಮುನಿಯಪ್ಪನ ವಿರುದ್ಧ ಅಕ್ರಮ ಆಸ್ತಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಆರೋಪ ಬಂದ ಕೂಡಲೇ ಕೊಡಗಿನಲ್ಲಿದ್ದ ಸುಮಾರು 204.42 ಎಕ್ರೆ ಏಲಕ್ಕಿ ತೋಟವನ್ನು ತನ್ನ ಸೊಸೆ ಎಸ್.ಎಲ್ ಶ್ರುತಿಶ್ರೀ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

    ಮಡಿಕೇರಿಯ ಅಕ್ರಮ ಆಸ್ತಿ ಸಂಪಾದನೆ ಕುರಿತು ಮಾ.19 ರಂದು ದಾಖಲೆಯನ್ನು ಬಿಡುಗಡೆ ಮಾಡಿದ್ದರು. ಅಂದು ಮಧ್ಯಾಹ್ನವೇ ಬಿಡುಗಡೆ ಮಾಡಿದ ದಾಖಲೆಗಳ ಆಸ್ತಿಯನ್ನು ಸೊಸೆ ಎಸ್.ಎಲ್ ಶ್ರುತಿಶ್ರೀ ಹೆಸರಿಗೆ ಮಡಿಕೇರಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಒಡಂಬಡಿಕೆ ನೋಂದಣಿ ಮಾಡಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ತನ್ನ ಆಸ್ತಿ ಘೋಷಣೆ ಮಾಡಬೇಕಾಗಿದ್ದ ಮುನಿಯಪ್ಪ ಅವರು ತಮ್ಮ ಪತ್ನಿ ನಾಗರತ್ನಮ್ಮ ಹೆಸರಿನಲ್ಲಿ ಮಡಿಕೇರಿಯ ಕುಂದಚೇರಿ ಗ್ರಾಮದ ಸರ್ವೇ ನಂ.1/10 ಸುಮಾರು 300 ಕೋಟಿ ಬೆಲೆಬಾಳುವ 204.42 ಎಕರೆ ಆಸ್ತಿ ಬಗ್ಗೆ ಮಾಹಿತಿ ತಿಳಿಸಿರಲಿಲ್ಲ ಎಂದು ಪರಿಶಿಷ್ಟ ಜಾತಿ ಪಂಗಡಗಳ ಮುಖಂಡರು ಆರೋಪಿಸಿದ್ದರು.

  • ನನಗೂ ಸುಮಲತಾಗಿಂತ ಎರಡರಷ್ಟು ಭಾವನಾತ್ಮಕವಾಗಿ ಮಾತನಾಡಲು ಬರುತ್ತೆ : ಸಿಎಂ

    ನನಗೂ ಸುಮಲತಾಗಿಂತ ಎರಡರಷ್ಟು ಭಾವನಾತ್ಮಕವಾಗಿ ಮಾತನಾಡಲು ಬರುತ್ತೆ : ಸಿಎಂ

    – ನನಗೆ ಆತಂಕ ಯಾಕೆ, ಅಂಬಿ ಅಭಿಮಾನಿಗಳು ನಮಗೆ ವೋಟ್ ಹಾಕ್ತಾರೆ

    ಮಂಡ್ಯ: ನೋವಾಗುವಂತ ಮಾತು ಯಾವ ನಾಯಕರು ಮಾತನಾಡಿದ್ದಾರೆ. ಅವರು ಯಾವ ಉತ್ತರ ಕೊಡ್ತಾರೆ ಕೊಡಲಿ. ಅವರನ್ನ ಯಾರು ಹಿಡಿದುಕೊಂಡಿಲ್ಲ ಎಂದು ಸುಮಲತಾ ಅವರಿಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ಮಂಡ್ಯದಲ್ಲಿ ಸುಮಲತಾ ಅವರು ರೋಡ್ ಶೋ ಮಾಡಿ, ಬಹಿರಂಗ ಸಮಾವೇಶ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಂಬರೀಶ್ ಅಭಿಮಾನಿಗಳು ನಮಗೇ ವೋಟ್ ಹಾಕ್ತಾರೆ. ಸುಮ್ಮನೆ ಅಲ್ಲಿ ಹೋಗಿದ್ದಾರೆ, ವೋಟ್ ನಮಗೆ ಹಾಕ್ತಾರೆ. ನಾನು ಎಲ್ಲಾ ಕಡೆ ಪ್ರಚಾರಕ್ಕೆ ಹೋಗ್ತೇನೆ. ನನ್ನ ಕಾರ್ಯಕರ್ತರು ಬಲವಾಗಿದ್ದಾಗ ಯಾವ ಮುಖಂಡರ ಬಗ್ಗೆ ನಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು? ನಮ್ಮ ನಾಯಕರು ಸುಮಲತಾ ಅವರಿಗೆ ನೋವಾಗುವಂತ ಮಾತನ್ನು ಆಡಿಲ್ಲ. ನನಗೂ ಅವರ ಎರಡರಷ್ಟು ಭಾವನಾತ್ಮಕವಾಗಿ ಮಾತನಾಡಲು ಬರುತ್ತದೆ ಎಂದು ಹೇಳಿದರು.

    ಮಾದ್ಯಮಗಳಲ್ಲಿ ಸಿಎಂ ಅತಂಕದಲ್ಲಿ ಕೂತಿದ್ದಾರೆ ಅಂತಾ ಸುದ್ದಿ ಹಾಕುತ್ತಿದ್ದರು. ನನಗೇಕೆ ಆತಂಕ? ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಯಾವ ರೀತಿ ನಡೆಸಬೇಕು ಅಂತಾ ಚರ್ಚಿಸೋಕೆ ಬಂದಿರೋದು. ಮಂಡ್ಯ ಕ್ಷೇತ್ರವನ್ನ ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದರು.

    ಕಳೆದ ಎರಡು ತಿಂಗಳಿಂದ ಕೊಟ್ಟಿರುವ ಪ್ರಚಾರ ಜೋರಾಗಿದೆ. ದೇಶದಲ್ಲಿ ಮೋದಿ, ರಾಹುಲ್ ಗಾಂಧಿಯವರ ಕ್ಷೇತ್ರಗಳಿಗೂ ಇಷ್ಟು ಪ್ರಾಧಾನ್ಯತೆ ನೀಡಿಲ್ಲ. ಮಂಡ್ಯದ ಚುನಾವಣೆಗೆ ಕೊಟ್ಟಿರುವ ಪ್ರಚಾರದಿಂದ ಮೈಮರೆಯದೇ ಕೆಲಸ ಮಾಡಬೇಕಿದೆ. ಕದ್ದುಮುಚ್ಚಿ ನಡೆಸುವ ಅವಶ್ಯಕತೆ ಇಲ್ಲ. ಪ್ರಚಾರದ ಬಗ್ಗೆಯಷ್ಟೇ ಇಂದು ಮಂಡ್ಯದ ಜಿಲ್ಲಾ ಪಂಚಾಯತ್ ಸದಸ್ಯರ ಜೊತೆ ಚರ್ಚೆ ನಡೆಸಿದ್ದೇನೆ. ಮಂಡ್ಯದಲ್ಲಿ ಜೆಡಿಎಸ್ ಉಳಿಸಿ ಬೆಳೆಸಿದ ಮತದಾರರು ಅಪಪ್ರಚಾರಗಳಿಗೆ ಒಳಗಾಗಬೇಕಿಲ್ಲ. ಮಂಡ್ಯದ ಜನರ ಕಷ್ಟಕ್ಕೆ ಸ್ಪಂದಿಸಿದ್ದೇವೆ ಎಂದು ತಿಳಿಸಿದರು.

    ನಾರಾಯಣಗೌಡರಿಗೆ ಬುದ್ದಿ ಹೇಳಿದ್ದೇನೆ. ಹೊಗಳುವವರು ಇರ್ತಾರೆ ತೆಗಳುವವರು ಇರ್ತಾರೆ. ಇಬ್ಬರು ನಟರಿಗೆ ಧಮ್ಕಿ ಹಾಕಿದ್ದಾರೆ ಅಂತಾ ಹೇಳಿದ್ದಾರೆ. ಆದ್ರೆ ನಾವು ಅಧಿಕಾರ ಬಳಸಿಕೊಂಡು ರಾಜಕೀಯ ಮಾಡಿಲ್ಲ. ಇವತ್ತು ನಮ್ಮ ವಿರುದ್ಧ ಹೋರಾಡುವುದು ಅವರ ಹಕ್ಕು. ಭಯಬೀತರನ್ನಾಗಿ ಮಾಡುವುದು ನಮ್ಮ ಜಾಯಮಾನದಲ್ಲಿ ಬಂದಿಲ್ಲ. ಆ ರೀತಿ ಮಾತನಾಡದಂತೆ ಹೇಳಿದ್ದೇನೆ ಎಂದು ಸಿಎಂ ಹೇಳಿದರು.