Tag: LokSabha election

  • ನಾನು ನುಡಿದಂತೆ ಆಗುತ್ತೆ – ದೇಶದ ರಾಜಕೀಯ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ ರೇವಣ್ಣ!

    ನಾನು ನುಡಿದಂತೆ ಆಗುತ್ತೆ – ದೇಶದ ರಾಜಕೀಯ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ ರೇವಣ್ಣ!

    ಹಾಸನ: ಯಾವುದೇ ಕಾರಣಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲ್ಲ. ನಾನು ನುಡಿದಂತೆ ಆಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಜ್ಯೋತಿಷಿಗಳಂತೆ ಭವಿಷ್ಯ ನುಡಿದಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಈ ಹಿಂದೆ ನುಡಿದ ಭವಿಷ್ಯ ಸತ್ಯವಾಗಿದೆ. ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಅಂತಾ ಹೇಳಿದ್ದೆ ಅದು ನಿಜವಾಗಿದೆ. ಜೊತೆಗೆ ಫೆಬ್ರವರಿ 8ಕ್ಕೆ ಕುಮಾರಣ್ಣ ರಾಜ್ಯ ಬಜೆಟ್ ಮಂಡಿಸುತ್ತಾರೆ, ಜನತೆಗೆ ಒಳ್ಳೆ ಕೊಡುಗೆ ನೀಡುತ್ತಾರೆ ಅಂತ ಭವಿಷ್ಯ ನುಡಿದಿದ್ದೆ ಅದು ಕೂಡ ಸತ್ಯವಾಗಿದೆ. ಈಗ ಮತ್ತೆ ಭವಿಷ್ಯ ನುಡಿಯುತ್ತಿದ್ದೇನೆ, ಈ ಬಾರಿ ಲೋಕಸಭೆ ಚುನಾವನೆಯಲ್ಲಿ ಮೋದಿ ಗೆದ್ದು, ಪ್ರಧಾನಿಯಾಗಲ್ಲ ಅಂತ ಹೇಳುತ್ತಿದ್ದೇನೆ. ಇದು ಕೂಡ ನಿಜವಾಗುತ್ತೆ ಎಂದಿದ್ದಾರೆ.

    ರಾಜ್ಯದಲ್ಲಿ ಯಡಿಯೂರಪ್ಪ ಅವರು ಗೆಲ್ಲುತ್ತಾರೆ ಅಂತ ಸುಮ್ಮನೆ ಕನಸು ಕಾಣುತ್ತಿದ್ದಾರೆ. ಅದು ನನಸಾಗಲ್ಲ, ಅವರೂ ಕೂಡ ಸೋಲುತ್ತಾರೆ. ನಂತರ ಮತ್ತೆ ಅವರು ನಮ್ಮ ಕಡೆ ಬರುವ ಪರಿಸ್ಥಿತಿ ಬರಬಹುದು ಎಂದು ಲೇವಡಿ ಮಾಡಿದ್ದಾರೆ.

  • ಜಯಪ್ರದಾ ಬಿಜೆಪಿಗೆ ಸೇರ್ಪಡೆ – ರಾಮ್‍ಪುರದಲ್ಲಿ ಅಜಮ್ ಖಾನ್ ವಿರುದ್ಧ ಸ್ಪರ್ಧೆ

    ಜಯಪ್ರದಾ ಬಿಜೆಪಿಗೆ ಸೇರ್ಪಡೆ – ರಾಮ್‍ಪುರದಲ್ಲಿ ಅಜಮ್ ಖಾನ್ ವಿರುದ್ಧ ಸ್ಪರ್ಧೆ

    ನವದೆಹಲಿ: ಬಹುಭಾಷಾ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ.

    ಈ ಬಾರಿ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ರಾಮ್‍ಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಪ್ರದಾ ಸ್ಪರ್ಧಿಸಲಿದ್ದಾರೆ. 2014ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ಡಾ.ನೇಪಾಳ್ ಸಿಂಗ್ ಗೆಲುವು ಸಾಧಿಸಿದ್ದರು. ಈ ಬಾರಿ ಬಿಎಸ್ಪಿ-ಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಇಲ್ಲಿ ಸಮಾಜವಾದಿ ಪಕ್ಷದ ಅಜಮ್ ಖಾನ್ ಸ್ಪರ್ಧಿಸಲಿದ್ದಾರೆ. ಆದರಿಂದ ಜಯಪ್ರದಾ ಹಾಗೂ ಅಜಮ್ ಖಾನ್ ನಡುವೆ ಭಾರಿ ಸ್ಪರ್ಧೆ ನಡೆಯುವ ಸಾಧ್ಯತೆಯಿದೆ.

    ಮೂಲತಃ ಆಂಧ್ರಪ್ರದೇಶದ ರಾಜಮುಂಡ್ರಿಯವರಾದ ಜಯಪ್ರದಾ ಅವರು 1994ರಲ್ಲಿ ತೆಲುಗು ದೇಶಂ ಪಾರ್ಟಿ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದರು. ಬಳಿಕ 1996ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು ಟಿಡಿಪಿಯ ಮಹಿಳಾ ಘಟಕದ ಅಧ್ಯಕ್ಷೆ ಆಗಿಯೂ ಸೇವೆ ಸಲ್ಲಿಸಿದ್ದರು. ನಂತರ 2004ರಲ್ಲಿ ತೆಲುಗು ದೇಶಂ ಪಾರ್ಟಿ ಬಿಟ್ಟು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಹಾಗೆಯೇ ಉತ್ತರ ಪ್ರದೇಶದ ರಾಮ್‍ಪುರ ಲೋಕಸಭಾ ಕ್ಷೇತ್ರದಿಂದ 2004 ಹಾಗೂ 2009ರ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದರು. ತದನಂತರ 2014ರ ಲೋಕಸಭೆ ಚುನಾವಣೆ ವೇಳೆ ಅಮರ್ ಸಿಂಗ್ ಜತೆ ಆರ್‍ಎಲ್‍ಡಿ ಪಕ್ಷ ಸೇರಿ, ಬಿಜ್ನೂರ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

    ಜಯಪ್ರದಾ ಹಾಗೂ ಅಜಮ್ ಖಾನ್ ಇಬ್ಬರು ರಾಜಕೀಯ ವೈರಿಗಳು. ಜಯಪ್ರದಾ ಅವರು ಸಮಾಜವಾದಿ ಪಕ್ಷ ಬಿಟ್ಟು ಅಮರ್ ಸಿಂಗ್ ಅವರೊಂದಿಗೆ ಹೋದಾಗಿನಿಂದ ಅಜಮ್ ಖಾನ್ ಹಾಗೂ ಅವರ ನಡುವೆ ವೈರತ್ವ ಹೆಚ್ಚಾಗಿತ್ತು. ಅಲ್ಲದೆ 2009ರಲ್ಲಿ ಜಯಪ್ರದಾ ವಿರುದ್ಧ ಅಜಮ್ ಖಾನ್ ಬೆಂಬಲಿಗರು ಬಹಿರಂಗ ಪ್ರಚಾರವನ್ನು ಕೂಡ ಮಾಡಿದ್ದರು. ಅಲ್ಲದೆ ಅಶ್ಲೀಲ ಚಿತ್ರಗಳಿಗೆ ಜಯಪ್ರದಾ ಅವರ ಫೋಟೋ ಅಂಟಿಸಿ ಬಾರಿ ವಿವಾದವನ್ನು ಕೂಡ ಸೃಷ್ಟಿಸಿದ್ದರು. 2009ರಲ್ಲಿ ರಾಮ್‍ಪುರ ಕ್ಷೇತ್ರದಲ್ಲಿ ಜಯಪ್ರದಾ ಅವರು ಗೆದ್ದಿದ್ದರು. ಆದ್ರೆ ಅಜಮ್ ಖಾನ್ ಬೆಂಬಲಿಗರ ದುಷ್ಕೃತ್ಯದಿಂದ 30 ಸಾವಿರದಷ್ಟು ಮತಗಳು ಅವರ ಕೈತಪ್ಪಿತ್ತು.

  • ಸಮಾಜದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ದುರಂತ: ಕೃಷ್ಣಬೈರೇಗೌಡ

    ಸಮಾಜದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ದುರಂತ: ಕೃಷ್ಣಬೈರೇಗೌಡ

    ಬೆಂಗಳೂರು: ತೇಜಸ್ವಿನಿಯಂತಹ ಸುಸಂಸ್ಕೃತರಿಗೆ ಟಿಕೆಟ್ ಕೊಡದೇ ಸಮಾಜದಲ್ಲಿ ವಿಷ ಬೀಜ ಬಿತ್ತುವ ವ್ಯಕ್ತಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ದುರಂತ ಎಂದು ಬೆಂಗಳೂರು ಉತ್ತರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಅಭ್ಯರ್ಥಿ ಆಗುತ್ತಾರೆ ಎಂದು ನಾವು ಅಂದುಕೊಂಡಿದ್ದೇವು. ಏಕೆಂದರೆ ಈ ರಾಜ್ಯದಲ್ಲಿ ಅನಂತಕುಮಾರ್ ಅವರ ಕೊಡುಗೆ ಇದೆ. ಅನಂತಕುಮಾರ್ ಹಿರಿಯ ನಾಯಕರು. ಅವರು ಸದಾಕಾಲ ದೆಹಲಿಯಲ್ಲಿ ಕನ್ನಡದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ತೇಜಸ್ವಿನಿ ಅವರು ಕೂಡ ಸಾರ್ವಜನಿಕ ಜೀವನದಲ್ಲಿ ಸಂಘ – ಸಂಸ್ಥೆ ಮುಖಾಂತರ, ಕಾಲೇಜಿನ ಮುಖಾಂತರ ಬಹಳ ಆಳವಾಗಿ ತೊಡಗಿಸಿಕೊಂಡವರು. ಅವರಿಗೆ ಟಿಕೆಟ್ ಸಿಗುತ್ತೆ ಎಂದು ಭರವಸೆ ಇಟ್ಟುಕೊಂಡಿದ್ದೇವೆ ಎಂದರು.

    ಈಗ ಅವರಂತಹ ಒಳ್ಳೆಯ ಹಿನ್ನೆಲೆ ಇರುವವರನ್ನು ಬಿಟ್ಟು ಎಲ್ಲೋ ಒಂದು ಕಡೆ ಸಮಾಜದಲ್ಲಿ ದ್ವೇಷದ ಬೀಜವನ್ನು ಬಿತ್ತನೆ ಮಾಡುವಂತ ಅಭ್ಯರ್ಥಿಗೆ ಸುಸಂಸಂಸ್ಕೃವಾದ ಬೆಂಗಳೂರು ದಕ್ಷಿಣವನ್ನು ನೀಡಲಾಗಿದೆ. ತೇಜಸ್ವಿ ಸೂರ್ಯ ಅವರಿಗೆ ಬೆಂಗಳೂರು ದಕ್ಷಿಣದಲ್ಲಿ ಕೊಟ್ಟಿರುವುದು ಆ ಭಾಗದ ಜನತೆಗೆ ಇಷ್ಟವಾಗುವುದಿಲ್ಲ ಎಂಬುದು ನನ್ನ ಅನಿಸಿಕೆ. ಬೆಂಗಳೂರಲ್ಲಿ 4 ಕ್ಷೇತ್ರ ಇದೆ. ಕೇಂದ್ರ, ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಈ 4 ಕ್ಷೇತ್ರದಲ್ಲಿ ಜೆಡಿಎಸ್ – ಕಾಂಗ್ರೆಸ್ ಗೆಲ್ಲುವ ವಾತಾವಾರಣ ಕಂಡು ಬರುತ್ತಿದೆ ಎಂದರು.

    ಕಠಿಣವಾಗಿರುವ ಬೆಂಗಳೂರು ದಕ್ಷಿಣದಲ್ಲೂ ಸಹ ಕಾಂಗ್ರೆಸ್ ಗೆಲ್ಲಬಹುದು ಎಂಬ ಬದಲಾವಣೆ ಸಹ ಸೋಮವಾರದಿಂದ ಕಾಣಿಸುತ್ತಿದೆ. ಬೆಂಗಳೂರು ದಕ್ಷಿಣದಲ್ಲಿ ಬೆಜೆಪಿ ಆಯ್ಕೆ ಮಾಡಿದ ಅಭ್ಯರ್ಥಿ ಹಿನ್ನೆಲೆಯಲ್ಲಿ ನಾವು ನಾಲ್ಕು ಸ್ಥಾನ ಗೆಲ್ಲುವ ಅವಕಾಶ ಹೊಂದಿದ್ದೇವೆ. ನಮ್ಮ ಪಕ್ಷದ ವರಿಷ್ಠರು, ಜೆಡಿಎಸ್ ಪಕ್ಷದ ವರಿಷ್ಠರು, ನಮ್ಮ ಕ್ಷೇತ್ರದ ಶಾಸಕರು ನೀವೇ ಅಭ್ಯರ್ಥಿ ಆಗಬೇಕೆಂದು ಹೇಳಿದ್ದರು. ಅವರ ಭಾವನೆಗೆ ಬೆಲೆ ಕೊಟ್ಟು ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.

    ನಾನು ಈ ಬಾರಿ ಸಚಿವನಾಗಬೇಕು ಎಂದು ಬಯಸಿರಲಿಲ್ಲ. ಆದರೂ ಪಕ್ಷ ನನ್ನನ್ನು ಸಚಿವರಾಗಿ ಆಯ್ಕೆ ಮಾಡಿತ್ತು. ಭಾರತದ ಸಂಸತ್‍ನಲ್ಲಿ ಒಬ್ಬ ಸದಸ್ಯನಾಗಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕರೆ ನನ್ನ ಪಾಲಿಗೆ ದೊಡ್ಡ ಗೌರವ. ಜನರು ಆಶಿರ್ವಾದ ಮಾಡಿದರೆ ನಾನು ಅದನ್ನು ಸ್ವೀಕರಿಸುತ್ತೇನೆ. ಅದನ್ನು ಬಿಟ್ಟು ಮಂತ್ರಿ ಸ್ಥಾನ ಬಿಟ್ಟು ಹೋಗಬೇಕೆಂಬ ಅನಿವಾರ್ಯ ಆ ಆಲೋಚನೆ ನನಗಿಲ್ಲ. ಭಾರತದ ಸಂಸತ್ ನಮ್ಮ ದೇಶದ ಧ್ವನಿ ಅದು. ಅಂತಹದರಲ್ಲಿ ನಾನು ಒಬ್ಬ ಸದಸ್ಯನಾಗುವ ಅವಕಾಶ ಸಿಕ್ಕರೆ ನನ್ನ ಜೀವನದಲ್ಲಿ ಒಂದು ದೊಡ್ಡ ಹೆಜ್ಜೆ. ಇದರಿಂದ ನನ್ನ ಜೀವನ ಸಾರ್ಥಕ ಆಗುತ್ತದೆ ಎಂದರು.

    ರಾಷ್ಟ್ರಮಟ್ಟದಲ್ಲಿ ಯಾರೇ ಬೆಳೆಯುತ್ತಿರುವ ಒಬ್ಬ ಸಾರ್ವಜನಿಕ ಜೀವನದ ಪ್ರತಿನಿಧಿಗೆ ರಾಷ್ಟ್ರಮಟ್ಟದ ಅನುಭವ ಸಿಕ್ಕರೆ ನಾವು ಇನ್ನು ಒಳ್ಳೆಯ ನಾಯಕರಾಗಿ ಬೆಳೆಯವ ಅನುಕೂಲ ಆಗಲಿದೆ. ನಾಳೆ ನಾವು ರಾಜ್ಯ ರಾಜಕಾರಣ ಮಾಡಬಹುದು. ಆದರೆ ನಾವು ದೆಹಲಿಯಲ್ಲಿ ಆ ಅನುಭವ ಪಡೆದರೆ ಇಡೀ ದೇಶದ ಸಮಗ್ರ ದೃಷ್ಟಿ ಭಾರತ ಸರ್ಕಾರ ಯಾವ ರೀತಿ ಕೆಲಸ ಮಾಡುತ್ತದೆ. ಒಂದೊಂದು ರಾಜ್ಯ, ಒಂದೊಂದು ಸಂಸ್ಕೃತಿ, ಒಂದೊಂದು ಭಾಷೆ, ಅವರ ವಿಚಾರ ಭಾವವನ್ನು ಅರ್ಥ ಮಾಡಿಕೊಂಡಿದರೆ, ನಮ್ಮ ವ್ಯಕ್ತಿತ್ವ ಸುಧಾರಣೆ ಆಗುತ್ತದೆ ಎಂದು ತಿಳಿಸಿದರು.

  • ಚುನಾವಣೆಗೆ ನಿಲ್ಲದಂತೆ ಸೂಚನೆ ಬಂದಿದೆ – ಮುರಳಿ ಮನೋಹರ್ ಜೋಶಿ ಪತ್ರ

    ಚುನಾವಣೆಗೆ ನಿಲ್ಲದಂತೆ ಸೂಚನೆ ಬಂದಿದೆ – ಮುರಳಿ ಮನೋಹರ್ ಜೋಶಿ ಪತ್ರ

    ನವದೆಹಲಿ: ಉತ್ತರ ಪ್ರದೇಶದ ಕಾನ್ಪುರ ಕ್ಷೇತ್ರದಿಂದ ಈ ಬಾರಿ ನಾನು ಲೋಕಸಭೆ ಚುನಾವಣೆಗೆ ನಿಲ್ಲದಂತೆ ಬಿಜೆಪಿ ಸೂಚಿಸಿದೆ. ಆದರಿಂದ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ 85 ವರ್ಷದ ಮುರಳಿ ಮನೋಹರ್ ಜೋಶಿ ಸ್ಪಷ್ಟಪಡಿಸಿದ್ದಾರೆ.

    ಬಿಜೆಪಿ ಹೈಕಮಾಂಡ್ 75 ವರ್ಷಕ್ಕಿಂತ ಹೆಚ್ಚು ವಯಸ್ಸಾದ ನಾಯಕರನ್ನು ರಾಷ್ಟ್ರೀಯ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ. ಈ ಮೂಲಕ ಬಿಜೆಪಿಯ ಪ್ರಭಾವಿ ಹಿರಿಯ ನಾಯಕರಲ್ಲಿ ಒಬ್ಬರಾದ ಎಂ.ಎಂ ಜೋಶಿ ಅವರ ಲೋಕಸಭೆಯ ರಾಜಕೀಯ ಪಯಣ ಮುಕ್ತಾಯವಾಗಿದೆ.

    ಈ ಬಗ್ಗೆ ಕಾನ್ಪುರ ಜನತೆಗೆ ಪತ್ರ ಬರೆದಿರುವ ಎಂ.ಎಂ ಜೋಶಿ ಅವರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರು ನನ್ನನ್ನು ಭೇಟಿ ಮಾಡಿ, ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರುವಂತೆ ಸೂಚಿಸಿದ್ದಾರೆ. ಕಾನ್ಪುರ ಮಾತ್ರವಲ್ಲ ಬೇರೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಬಾರದು ಎಂದು ಹೇಳಿದ್ದಾರೆ. ಆದರಿಂದ ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

    ಜೋಶಿ ಅವರು ಕೇಂದ್ರ ಸಚಿವರಾಗಿ ಹಾಗೂ ಬಿಜೆಪಿ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ 2014ರಲ್ಲಿ ವಾರಣಾಸಿ ಕ್ಷೇತ್ರವನ್ನು ಪ್ರಧಾನಿ ಮೋದಿ ಅವರಿಗೆ ಬಿಟ್ಟುಕೊಟ್ಟಿದ್ದರು. ಬಳಿಕ 2014ರಲ್ಲಿ ಕಾನ್ಪುರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.

    ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ ಆಡ್ವಾಣಿ ಅವರ ಜೊತೆ ಸೇರಿ ಪಕ್ಷ ಕಟ್ಟುವಲ್ಲಿ ಜೋಶಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಡ್ವಾಣಿ ಸಹ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಅಡ್ವಾಣಿ ಕ್ಷೇತ್ರವಾದ ಗುಜರಾತಿನ ಗಾಂಧಿನಗರದಿಂದ ಅಮಿತ್ ಶಾ ಕಣಕ್ಕೆ ಇಳಿಯಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಮೇಲೆ 75 ವರ್ಷ ಮೇಲ್ಪಟ್ಟ ಬಿಜೆಪಿ ನಾಯಕರಿಗೆ ಮಾರ್ಗದರ್ಶಕ ಮಂಡಳಿಯಲ್ಲಿ ಸ್ಥಾನ ನೀಡಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ್ ಜೋಷಿ ಈ ಮಾರ್ಗದರ್ಶನ ಮಂಡಳಿಯಲ್ಲಿ ಸ್ಥಾನ ಪಡೆದಿದ್ದರು.

  • ಇಂದು ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ- ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಾಥ್

    ಇಂದು ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಕೆ- ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಾಥ್

    ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇಂದು ಮಧ್ಯಾಹ್ನ 12.15 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಯಾಗಲಿದ್ದಾರೆ.

    ಕಳೆದ ರಾತ್ರಿ 1 ಗಂಟೆಗೆ ಉಡುಪಿಗೆ ಆಗಮಿಸಿರುವ ನಿರ್ಮಲಾ ಸೀತಾರಾಮನ್ ಮಣಿಪಾಲದ ಕಂಟ್ರಿ ಇನ್ ಹೋಟೆಲ್‍ನಲ್ಲಿ ತಂಗಿದ್ದಾರೆ. ಉಡುಪಿ ಕೃಷ್ಣ ಮಠ ಭೇಟಿ ನೀಡಿ ಪರ್ಯಾಯ ಶ್ರೀಪಲಿಮಾರು ವಿದ್ಯಾಧೀಶ ಶ್ರೀಪಾದರ ಜೊತೆ ಮಾತುಕತೆ ನಡೆಸಲಿದ್ದಾರೆ.

    ಬಳಿಕ ಮೀನುಗಾರ ಮುಖಂಡರ ಜೊತೆ ಚರ್ಚಿಸಿ, ಕಣ್ಮರೆಯಾದ ಮೀನುಗಾರರ ಕುಟುಂಬವನ್ನು ಭೇಟಿ ಮಾಡಿ ನೌಕಾಸೇನೆ ನಡೆಸಿರುವ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಲ್ಪೆಯಲ್ಲಿ ಇರುವ ಎರಡು ಕುಟುಂಬಗಳಿಗೆ ಧೈರ್ಯ ತುಂಬಲಿದ್ದಾರೆ.

    ನಂತರ ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿ ಸಮೀಪ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಣಿಪಾಲದಲ್ಲಿ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸುವ ವೇಳೆ ನಿರ್ಮಲಾ ಸೀತಾರಾಮನ್ ಜೊತೆಗಿರಲಿದ್ದಾರೆ.

  • ಬಾಯಾರಿದ ಜೋಡೆತ್ತುಗಳಿಗೆ ರೈತನಿಂದ ಬಾಟಲಿ ನೀರು!

    ಬಾಯಾರಿದ ಜೋಡೆತ್ತುಗಳಿಗೆ ರೈತನಿಂದ ಬಾಟಲಿ ನೀರು!

    ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದು, ಮಂಡ್ಯದಲ್ಲಿ ಜನಸಾಗರವೇ ಹರಿದುಬಂದಿದೆ.

    ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಕಿಕ್ಕಿರಿದ ಜನರ ಮಧ್ಯೆ ಜೋಡೆತ್ತುಗಳು ಸಾಗಿದ್ದವು. ಸುಡುಬಿಸಿಲಿನಿಂದಾಗಿ ದಣಿದು ಬಾಯಾರಿದ್ದ ಜೋಡೆತ್ತುಗಳಿಗೆ ರೈತ ಬಾಟಲಿ ನೀರು ಕುಡಿಸಿರುವುದು ನೆರೆದಿದ್ದ ಜನರ ಗಮನಸೆಳೆಯಿತು.

    ನಿಖಿಲ್ ಅವರು ತಾವು ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ನಗರದ ಕಾಳಿಕಾಂಬ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕಾಳಿಕಾಂಬ ದೇವಸ್ಥಾನದ ಆವರಣದಿಂದ ರ‍್ಯಾಲಿ ಪ್ರಾರಂಭಿಸಿದ್ದು, ಡೊಳ್ಳು ಕುಣಿತ, ಪಟ ಕುಣಿತ, ಗೊಂಬೆ ಕುಣಿತಗಳ ಜೊತೆ ನಿಖಿಲ್ ಪ್ರಚಾರ ಕೈಗೊಳ್ಳಲಾಗಿದೆ.

    ಸುಮಾರು ಎರಡು ಕಿಲೋ ಮೀಟರ್ ರ್ಯಾಲಿ ಹೋಗಲಿದ್ದು, ನಿಖಿಲ್ ಕುಮಾರಸ್ವಾಮಿ ಅವರು ತೆರೆದ ವಾಹನದಲ್ಲಿ ನಿಂತು ಅವರನ್ನು ಹಿಂಬಾಲಿಸುತ್ತಿರುವ ಜನರಿಗಾಗಿ ಕೈ ಬೀಸುತ್ತಿದ್ದಾರೆ. ನಿಖಿಲ್ ತೆರೆದ ವಾಹನ ಹಿಂದೆ, ಮುಂದೆ ಮತ್ತು ಅಕ್ಕ-ಪಕ್ಕದಲ್ಲಿ ಕಿಕ್ಕಿರಿದ್ದಷ್ಟು ಜನರು ಸಾಗರದಂತೆ ಬಂದಿದ್ದಾರೆ. ಎತ್ತ ನೋಡಿದರೂ ಬರೀ ಜನರೆ ಕಾಣಿಸುತ್ತಿದ್ದಾರೆ. ಬಿಸಿಲು ಎಂದು ನೋಡದೆ ಜನರು ನಿಖಿಲ್ ಎಂದು ಕೂಗುತ್ತಾ ಒಂದು ರೀತಿ ಮಂಡ್ಯದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ.

    ಎರಡು ಲಾರಿಯಲ್ಲಿ ರ‍್ಯಾಲಿ:
    ರ್ಯಾಲಿಗಾಗಿ ಎರಡು ಲಾರಿ ಸಿದ್ಧತೆ ಮಾಡಿಕೊಂಡಿದ್ದು, ಜೆಡಿಎಸ್ ಬ್ಯಾನರ್‍ನಿಂದ ಅಲಂಕಾರ ಮಾಡಲಾಗಿದೆ. ಲಾರಿ ಸುತ್ತ ಹಾಕಿರುವ ಬ್ಯಾನರ್‍ನಲ್ಲಿ ನಿಖಿಲ್ ಕುಮಾರ್ ರಾರಾಜಿಸುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರ ಫೋಟೋ ಕೂಡ ಇದೆ. ಜೊತೆಗೆ ಉಳುವ ಯೋಗಿಯ ನೋಡಲ್ಲಿ ಹಾಡಿಗೆ ಹಸಿರು ಸೀರೆ ಉಟ್ಟು, ಹೊರೆ ಹೊತ್ತ ಮಹಿಳೆಯರಿಂದ ನೃತ್ಯದ ಮೂಲಕ ಮನರಂಜನೆ ನೀಡಲಾಗುತ್ತಿದೆ.

    ಭದ್ರತೆ:
    ಭದ್ರತೆಗಾಗಿ ಒಬ್ಬರು ಎಸ್‍ಪಿ, 10 ಡಿವೈಎಸ್‍ಪಿ, 20 ಸಿಪಿಐ, 35 ಪಿಎಸ್‍ಐ, 800 ಜನ ಸಿಬ್ಬಂದಿ, 5 ಡಿಆರ್ ಸಿಬ್ಬಂದಿ ಮತ್ತು 5 ಕೆಎಸ್‍ಆರ್‍ಪಿ ನಿಯೋಜನೆ ಮಾಡಲಾಗಿದೆ. ನಿಖಿಲ್ ನಾಮಪತ್ರ ಸಲ್ಲಿಕೆ ನಂತರ ಕಾವೇರಿ ಉದ್ಯಾನವನದ ಬಳಿ ಬೃಹತ್ ಬಹಿರಂಗ ಭಾಷಣ ಮಾಡಲಿದ್ದಾರೆ. ಬಹಿರಂಗ ಭಾಷಣ ವೀಕ್ಷಿಸಲು ಬೃಹತ್ ಎಲ್‍ಇಡಿ ಪರದೆ ಅಳವಡಿಕೆ ಮಾಡಲಾಗಿದೆ. ಸುಮಾರು ಹತ್ತು ಎಲ್‍ಇಡಿ ಅಳವಡಿಕೆ ಮಾಡಲಾಗಿದ್ದು, ಪಾರ್ಕ್ ಸುತ್ತ ಬ್ಯಾರಿಕೇಡ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

  • 7 ಬಾರಿ ಗೆದ್ದವನಿಗೆ 8ನೇ ಬಾರಿ ಗೆಲ್ಲೋದು ಗೊತ್ತು, ಕಾದುನೋಡಿ – ವಿರೋಧಿಗಳಿಗೆ ಮುನಿಯಪ್ಪ ಟಾಂಗ್

    7 ಬಾರಿ ಗೆದ್ದವನಿಗೆ 8ನೇ ಬಾರಿ ಗೆಲ್ಲೋದು ಗೊತ್ತು, ಕಾದುನೋಡಿ – ವಿರೋಧಿಗಳಿಗೆ ಮುನಿಯಪ್ಪ ಟಾಂಗ್

    ಕೋಲಾರ: 7 ಬಾರಿ ಗೆದ್ದಿರುವ ನನಗೆ 8ನೇ ಬಾರಿ ಗೆಲ್ಲೋದು ಗೊತ್ತಿದೆ. ನಾಳೆ ನಾಮಪತ್ರ ಸಲ್ಲಿಕೆ ನಂತರ ಎಲ್ಲಾ ವಿರೋಧಿಗಳಿಗೆ ತಕ್ಕ ಉತ್ತರ ಕೊಡುತ್ತೇನೆ ಕಾದು ನೋಡಿ ಅಂತ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

    ಇಂದು ಕೆ.ಎಚ್ ಮುನಿಯಪ್ಪ ಕೋಲಾರ ಲೋಕಸಭಾ ಕ್ಷೇತ್ರದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ತಮ್ಮ ಬೆಂಬಲಿಗರ ಜೊತೆ ಪೂರ್ವಭಾವಿ ಸಭೆ ನಡೆಸಿದರು. ಈ ವೇಳೆ ನಾಳೆ ನಾಮಪತ್ರ ಸಲ್ಲಿಕೆಗೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಮನವಿ ಮಾಡಿದರು. ಕಾಂಗ್ರೆಸ್ಸಿನ ಭದ್ರಕೋಟೆಯಾಗಿರುವ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸಂಸತ್‍ನಲ್ಲಿ ವಿಶೇಷ ಮಾನ್ಯತೆ ಇದೆ. ಹೀಗಾಗಿ ಈ ಬಾರಿಯ ನಾನು ಮಾಡಿರುವ ಸಾಧನೆಗಳನ್ನ ಬೆಂಬಲಿಸಿ ಜನ ಮತ ನೀಡಲಿದ್ದು, ತಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ:ಮುನಿಯಪ್ಪಗೆ ನನ್ನ ಪಕ್ಕ ಮಲಗಲು ಇಷ್ಟವಿರಬಹುದು, ಆದರೆ ನನಗಿಲ್ಲ: ರಮೇಶ್ ಕುಮಾರ್ ವ್ಯಂಗ್ಯ

    ತಮಗೆ ಟಿಕೆಟ್ ನೀಡದಂತೆ ಹೈಕಮಾಂಡ್ ಬಳಿ ನಿಯೋಗ ತೆರಳಿದ್ದ ಭಿನ್ನಮತೀಯರು ನಾಳಿನ ನಾಮಪತ್ರ ಸಲ್ಲಿಕೆಗೆ ಬರಬೇಕಾಗಿ ಮನವಿ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಭಿನ್ನಮತೀಯರಿಗೂ ಸರ್ಕಾರ ಅಧಿಕಾರ ಅವಕಾಶಗಳನ್ನ ನೀಡಿದ್ದು, ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೇ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಯನ್ನ ಬೆಂಬಲಿಸಬೇಕು. ಭಿನ್ನಮತೀಯರು ನಾಮಪತ್ರ ಸಲ್ಲಿಕೆಗೆ ಬರದಿದ್ದರೆ ರಾಜ್ಯ ನಾಯಕರು ಅವರ ಜೊತೆ ಮಾತನಾಡಲಿದ್ದಾರೆ. ಅಮೇಲೆ ಮುಂದಿನ ನಿರ್ಧಾರ ಎಂದು ಮುನಿಯಪ್ಪ ತಿಳಿಸಿದರು.

  • ಉದ್ದೇಶಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಿದ್ದಾರೆ: ಸುಮಲತಾ

    ಉದ್ದೇಶಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಿದ್ದಾರೆ: ಸುಮಲತಾ

    – ದರ್ಶನ್, ಯಶ್ ಬೆಂಬಲ ನೋಡಿ ಹೆದರಿದ್ದಾರೆ

    ಮಂಡ್ಯ: ಉದ್ದೇಶಪೂರ್ವಕವಾಗಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿದ್ದಾರೆ.

    ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪ ಸಮುದ್ರ ಗ್ರಾಮದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಬೇಕಂತಲೇ ಉದ್ದೇಶ ಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನನ್ನ ಬೆಂಬಲಕ್ಕೆ ದರ್ಶನ್ ಹಾಗೂ ಯಶ್ ನಿಂತಿರುವುದು ನೋಡಿ ಹೆದರಿಕೊಂಡಿದ್ದಾರೆ. ಹಾಗಾಗಿ ಈ ರೀತಿ ಮಾಡಿದ್ದಾರೆ. ಈ ಮಟ್ಟಕ್ಕೆ ಮಾಡ್ತಿರೋ ರಾಜಕಾರಣ ಮನಸ್ಸಿಗೆ ನೋವು ತಂದಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ದರ್ಶನ್ ಹಾಗೂ ಯಶ್ ಬರುತ್ತಿರುವುದಕ್ಕೆ ಹೆದರಿ ಈ ರೀತಿ ದಾಳಿ ಮಾಡಿದ್ದಾರೆ. ದಾಳಿ ಮಾಡುವ ಮೂಲಕ ದರ್ಶನ್ ಹಾಗೂ ಯಶ್‍ರನ್ನು ಹೆದರಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಅವರು ಹೆದರೋದಿಲ್ಲ. ಅಭಿಮಾನಿಗಳು ಯಾವುದೇ ಕಾರಣಕ್ಕೂ ಪ್ರವೋಕ್ ಆಗಬೇಡಿ. ಏಕೆಂದರೆ ಯಾರು ಏನೇ ಮಾಡಿದ್ರೂ ಫಲಿತಾಂಶದಲ್ಲಿ ಉತ್ತರ ಸಿಗುತ್ತದೆ. ನಾವು ಅವರಂತೆ ಮಾಡೋದು ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಏನಿದು ಘಟನೆ?
    ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ದರ್ಶನ್ ಮನೆ ಹಾಗೂ ಕಚೇರಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಇಂದು ಬೆಳಗ್ಗಿನ ಜಾವ 3 ಗಂಟೆಗೆ ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ. ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿದೆ. ಈ ಘಟನೆ ನಡೆದಾಗ ದರ್ಶನ್ ಮನೆಯಲ್ಲಿ ಇರಲಿಲ್ಲ. ದರ್ಶನ್ ಗಿರಿನಗರದಲ್ಲಿ ಇರುವ ತಮ್ಮ ಪತ್ನಿ ವಿಜಯಲಕ್ಷ್ಮಿ ಫ್ರೆಸ್ಟಿಜ್ ಅಪಾರ್ಟ್‍ಮೆಂಟ್‍ನಲ್ಲಿ ಇದ್ದರು.

    ಒಬ್ಬನೇ ವ್ಯಕ್ತಿ ಬಂದು ಮನೆ ಮೇಲೆ ಕಲ್ಲು ಎಸೆದಿದ್ದಾನೆ. ಅಲ್ಲದೆ ಮನೆ ಮುಂದೆ ಇದ್ದ ಬ್ಯಾನರ್ ಕೂಡ ಹರಿದ ಹಾಕಿದ್ದಾನೆ. ಈ ವೇಳೆ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಹೊರತುಪಡಿಸಿ ಯಾರೂ ಇರಲಿಲ್ಲ. ಕಲ್ಲು ಬಿದ್ದ ಶಬ್ದ ಕೇಳಿ ವಾಚ್‍ಮೆನ್ ಹೊರಬರ್ತಿದ್ದಂತೆ ದುಷ್ಕರ್ಮಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ.

    ಸ್ಥಳಕ್ಕೆ ರಾಜರಾಜೇಶ್ವರಿ ನಗರ ಪೊಲೀಸರು, ಕೆಂಗೇರಿ ಎಸಿಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ನಿಮಗೆ ಟಿಕೆಟ್ ನೀಡದಿದ್ದರೇ ಆತ್ಮಹತ್ಯೆ ಮಾಡ್ಕೊತೀನಿ: ರಮೇಶ್ ಕತ್ತಿ ಅಭಿಮಾನಿ

    ನಿಮಗೆ ಟಿಕೆಟ್ ನೀಡದಿದ್ದರೇ ಆತ್ಮಹತ್ಯೆ ಮಾಡ್ಕೊತೀನಿ: ರಮೇಶ್ ಕತ್ತಿ ಅಭಿಮಾನಿ

    ಬೆಳಗಾವಿ: ನಿಮಗೆ ಟಿಕೆಟ್ ನೀಡದೆ ಇದ್ದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ರಮೇಶ್ ಕತ್ತಿಗೆ ಕರೆ ಮಾಡಿ, ಅಭಿಮಾನಿಯೋರ್ವ ಅಳಲು ತೋಡಿಕೊಂಡಿದ್ದಾನೆ.

    ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮದ ಶಶಿಕಾಂತ್ ರವಳೋಜಿ ಎಂಬ ಅಭಿಮಾನಿ ರಮೇಶ್ ಕತ್ತಿ ಅವರಿಗೆ ಕರೆ ಮಾಡಿ, ನಿಮಗೆ ಟಿಕೆಟ್ ನೀಡದೆ ಇದ್ದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಕತ್ತಿ ಅವರು, ನಿನ್ನ ಕಾಲಿಗೆ ಬೀಳುತ್ತೇನೆ ಹಾಗೆ ಮಾಡಬೇಡಿ. ಹಾಗೆ ಮಾಡುವುದು ಸರಿಯಿಲ್ಲ, ಅಂತಹ ನಿರ್ಧಾರ ಮಾಡಬೇಡಿ. ನಿಮ್ಮಂಥ ತಮ್ಮನ ಆಶೀರ್ವಾದ ಇದೆ. ಎಲ್ಲ ಕಡೆ ಟಿಕೆಟ್ ನೀಡುವಂತೆ ಒತ್ತಾಯ ಇದೆ. ನಾನು ಬೆಂಗಳೂರಿನಲ್ಲಿದ್ದೆ ಎಲ್ಲಾ ಸರಿ ಮಾಡಿಕೊಂಡು ಬರುತ್ತೆನೆ. ನನಗೆ ಟಿಕೆಟ್ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಎಂದು ಅಭಿಮಾನಿ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಈ ಸಂಭಾಷಣೆ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ರಮೇಶ್ ಕತ್ತಿ ಅವರಿಗೆ ಚಿಕ್ಕೋಡಿಯಿಂದ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಬಿಜೆಪಿಯಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಗೊಂದಲ ವಿಚಾರ, ಅಣ್ಣಾಸಾಹೇಬ್ ಜೊಲ್ಲೆ ಹಾಗೂ ರಮೇಶ್ ಕತ್ತಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರ ಮಧ್ಯೆ ಕೂಡ ನಮ್ಮ ನಾಯಕನಿಗೆ ಟಿಕೆಟ್ ನೀಡಬೇಕು ಎನ್ನುವ ಆಗ್ರಹ ಭುಗಿಲೆದ್ದಿದೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲೂ ಈ ಇಬ್ಬರು ನಾಯಕರ ಬೆಂಬಲಿಗರ ನಡುವೆಯೇ ಫುಲ್ ಫೈಟ್ ನಡೆಯುತ್ತಿದೆ.

  • ಮಲ್ಲಿಕಾರ್ಜುನ ಖರ್ಗೆಗೆ ಅಲ್ಪಸಂಖ್ಯಾತ ನಾಯಕರು ಎಚ್ಚರಿಕೆ!

    ಮಲ್ಲಿಕಾರ್ಜುನ ಖರ್ಗೆಗೆ ಅಲ್ಪಸಂಖ್ಯಾತ ನಾಯಕರು ಎಚ್ಚರಿಕೆ!

    ಕಲಬುರಗಿ: ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಪಕ್ಷಗಳು ಮೈತ್ರಿ ಮಾಡಿಕೊಂಡು ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೆನ್ ಮಾಡ್ತಿದ್ರೆ, ಇತ್ತ ಹೈವೋಲ್ಟೆಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ದೋಸ್ತಿ ಸರ್ಕಾರದ ಪ್ರಮುಖ ಪಕ್ಷ ಜೆಡಿಎಸ್, ಕಾಂಗ್ರೆಸ್ ಜೊತೆ ಕುಸ್ತಿಗೆ ನಿಂತಿದೆ.

    ಕಲಬುರಗಿಯಲ್ಲಿ ಖರ್ಗೆಯವರಿಗೆ ಸೋಲಿನ ಭೀತಿ ಎದುರಾಗುತ್ತಲೆ, ಇತ್ತ ಖರ್ಗೆ ಬೆಂಬಲಿಗರು ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಹಾಗೂ ಕಾರ್ಯಕರ್ತರನ್ನು ಆಪರೇಶನ್ ಮಾಡಲು ಮುಂದಾಗಿತ್ತು. ಇದರಿಂದ ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಸಭೆ ಸೇರಿ ಬಿಜೆಪಿಗೆ ಮತ ಹಾಕಿ ಇಲ್ಲವಾದಲ್ಲಿ ನೋಟಾ ಚಲಾಯಿಸಿ ಎಂದು ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

    ಅಲ್ಪಸಂಖ್ಯಾತರ ಈ ಖಡಕ್ ನಿರ್ಧಾರಕ್ಕೆ ಖರ್ಗೆ ಬೆಚ್ಚಿಬಿದ್ದಿದ್ದಾರೆ. ಸ್ಥಳೀಯವಾಗಿ ನೀವು ನಮ್ಮನ್ನು ಕಾಂಗ್ರೆಸ್‍ಗೆ ಸೆಳೆದುಕೊಂಡರೆ ಮುಂದೆ ಕಾರ್ಪೋರೇಶನ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ನಮ್ಮನ್ನು ಮೂಲೆ ಗುಂಪು ಮಾಡುತ್ತೀರಿ. ಹೀಗಾಗಿ ನಾವು ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‍ಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

    ಅಲ್ಲದೆ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚುನಾವಣೆ ಬಂದಾಗ ಮಾತ್ರ ನಿಮಗೆ ಅಲ್ಪಸಂಖ್ಯಾತರ ಮತಗಳು ನೆನಪಾಗುತ್ತವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.