Tag: LokSabha election

  • ನಾಳೆಯಿಂದ ಸುಮಲತಾ ಪರ ಡಿಬಾಸ್ ಪ್ರಚಾರ

    ನಾಳೆಯಿಂದ ಸುಮಲತಾ ಪರ ಡಿಬಾಸ್ ಪ್ರಚಾರ

    ಮಂಡ್ಯ: ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋಮವಾರದಿಂದ ಮಂಡ್ಯದಲ್ಲಿ ಪ್ರಚಾರ ಆರಂಭಿಸಲಿದ್ದಾರೆ.

    ಲೋಕಸಮರದ ಅಖಾಡಕ್ಕೆ ಸುಮಲತಾ ಪರ ಡಿಬಾಸ್ ಅಬ್ಬರದ ಪ್ರಚಾರ ನಡೆಸಲಿದ್ದು, ಏಪ್ರಿಲ್ 2ರಿಂದ ರಾಕಿಂಗ್ ಸ್ಟಾರ್ ಯಶ್ ಕೂಡ ಸಾಥ್ ನೀಡಲಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಾಳೆ ಬೆಳಗ್ಗೆ 9 ಗಂಟೆಗೆ ಕೆಆರ್‍ಎಸ್‍ನ ಅರಳಿಕಟ್ಟೆ ಸರ್ಕಲ್‍ನಿಂದ ದರ್ಶನ್ ಪ್ರಚಾರ ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಜಿಲ್ಲೆಯ ಹುಲಿಕೆರೆ, ಬೆಳಗೊಳ, ಮಂಟಿ, ಮೊಗರಹಳ್ಳಿ, ಪಂಪ್ಹೌಸ್.ಹೊಸಹಳ್ಳಿ, ಆನಂದೂರು, ಪಾಲಹಳ್ಳಿ, ನಗುವನಹಳ್ಳಿ, ಚಂದಗಾಲು, ಹೊಸೂರು, ಮೇಳಾಪುರ, ಹೆಬ್ಬಾಡಿಹುಂಡಿ, ಹೆಬ್ಬಾಡಿ, ಚಿಕ್ಕಅಂಕನಹಳ್ಳಿ, ಹಂಪಾಪುರ, ಹುರುಳಿಕ್ಯಾತನಹಳ್ಳಿ, ತರೀಪುರ, ಚನ್ನಹಳ್ಳಿ ಬಿದರಹಳ್ಳಿ, ಮಹದೇವಪುರ, ಮಂಡ್ಯಕೊಪ್ಪಲು, ಚಿಂದೇಗೌಡನಕೊಪ್ಪಲು, ಅರಕೆರೆ, ತಡಗವಾಡಿ, ಕೊಡಿಯಾಲ ಗ್ರಾಮಗಳಲ್ಲಿ ದರ್ಶನ್ ಅವರು ಸುಮಲತಾ ಜೊತೆಗೂಡಿ ಭರ್ಜರಿ ಪ್ರಚಾರ ಮಾಡಲಿದ್ದಾರೆ.

    ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ದರ್ಶನ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ.

  • ಹಾಸನ, ಮಂಡ್ಯ, ತುಮಕೂರಲ್ಲಿ ಮೈತ್ರಿ ಅಭ್ಯರ್ಥಿಗಳ ಸೋಲು: ಶ್ರೀರಾಮುಲು ಭವಿಷ್ಯ

    ಹಾಸನ, ಮಂಡ್ಯ, ತುಮಕೂರಲ್ಲಿ ಮೈತ್ರಿ ಅಭ್ಯರ್ಥಿಗಳ ಸೋಲು: ಶ್ರೀರಾಮುಲು ಭವಿಷ್ಯ

    ಬಳ್ಳಾರಿ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಪರವಾಗಿ ಶಾಸಕ ಶ್ರೀರಾಮುಲು ಭರ್ಜರಿ ಪ್ರಚಾರಕ್ಕೆ ಇಳಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯ ಮುಂದೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಲೆ ನಡೆಯಲ್ಲ ಎಂದು ಶಾಸಕ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಸರಿಯಾದ ದಾಖಲೆಗಳನ್ನ ನೀಡಿಲ್ಲ. ಹೀಗಾಗಿ ಅವರ ನಾಮಪತ್ರ ರದ್ದಾಗಬೇಕಿತ್ತು. ಆದ್ರೆ ಸಿಎಂ ಕುಮಾರಸ್ವಾಮಿ ತಮ್ಮ ಪ್ರಭಾವ ಬಳಸಿ ಅಧಿಕಾರಗಳನ್ನ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ದಾಖಲೆಗಳನ್ನ ನೀಡಿ ಸರಿ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿಗೆ ಮಂಡ್ಯ, ಹಾಸನ, ತುಮಕೂರಿನಲ್ಲಿ ಮಾತ್ರ ಚುನಾವಣೆ ಕಂಡು ಬರುತ್ತಿದೆ. ಅದಕ್ಕೆ ಅಲ್ಲಿ ಮಾತ್ರ ಪ್ರಚಾರ ಮಾಡಿಕೊಂಡು ಬ್ಯುಸಿಯಾಗಿದ್ದಾರೆ. ಆದ್ರೆ ಈ ಮೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸೋಲುತ್ತಾರೆ ಎಂದು ಭವಿಷ್ಯ ನುಡಿದರು.

    ಅಷ್ಟೇ ಅಲ್ಲದೆ, ಈ ಬಾರಿ ಬಿಜೆಪಿ ರಾಜ್ಯದಲ್ಲಿ ಕನಿಷ್ಠ 24 ಕ್ಷೇತ್ರದಲ್ಲಿ ಗೆಲ್ಲುತ್ತದೆ. ಮೋದಿ ಅಲೆ ಮುಂದೆ ಮೈತ್ರಿ ಅಲೆ ನಡೆಯಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನಾಮಪತ್ರ ಸಲ್ಲಿಕೆಗೆ ಇನ್ನೂ ಎರಡು ದಿನ ಇರುವಾಗಲೇ ದೇವೆಂದ್ರಪ್ಪ ಪರವಾಗಿ ಶಾಸಕ ಶ್ರೀರಾಮುಲು ಹಾಗೂ ಮಾಜಿ ಶಾಸಕ ಸುರೇಶಬಾಬು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿಂದು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಕಪ್ಪಗಲ್, ಹಿರೇಹಡ್ಲಗಿ, ಚಾನಾಳ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿಂದು ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಜೊತೆಗೆ ಮತಯಾಚನೆ ಮಾಡಿದರು. ಈ ವೇಳೆ ಕಪ್ಪಗಲ್ ಗ್ರಾಮದಲ್ಲಿ ಮತಯಾಚನೆ ವೇಳೆ ಮಹಿಳೆಯೊಬ್ಬರು ರಸ್ತೆ ಮಾಡಿಲ್ಲ, ಕುಡಿಯೋಕೆ ನೀರಿಲ್ಲ ಅಂತ ಕ್ಲಾಸ್ ತೆಗೆದುಕೊಂಡರು. ಆಗ ಕಾಲಿಗೆ ಬಿದ್ದು ಕೆಲಸ ಮಾಡುತ್ತೇವೆ ಮತ ಹಾಕಿ ಎಂದು ಮಹಿಳೆಯರಿಗೆ ಸಾಮಾಧಾನ ಮಾಡಿ ಮುಂದೆ ಸಾಗಿದರು.

  • ನಾಗಪೂಜೆಯಿಂದ ಸಂಗಣ್ಣ ಕರಡಿಗೆ ಸಿಕ್ತು ಲೋಕಸಮರಕ್ಕೆ ಟಿಕೆಟ್!

    ನಾಗಪೂಜೆಯಿಂದ ಸಂಗಣ್ಣ ಕರಡಿಗೆ ಸಿಕ್ತು ಲೋಕಸಮರಕ್ಕೆ ಟಿಕೆಟ್!

    ಕೊಪ್ಪಳ: ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಶುಕ್ರವಾರ ಬಿಜೆಪಿ ಕೊನೆಯ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿತ್ತು. ಆದ್ರೆ ಇದಕ್ಕೆ ಸಂಗಣ್ಣ ಅವರ ಪತ್ನಿ ಸಲ್ಲಿಸಿದ್ದ ನಾಗಪೂಜೆಯೇ ಕಾರಣ ಎಂದು ಬೆಂಬಲಿಗರು ಮತ್ತು ಕುಟುಂಬದವರು ಹೇಳುತ್ತಿದ್ದಾರೆ.

    ನಾಗದೇವತೆಗೂ ಲೋಕಸಭಾ ಟಿಕೆಟ್ ಗೂ ಏನು ಸಂಬಂಧ ಅಂತ ಪ್ರಶ್ನೆ ಹುಟ್ಟೋದು ಸಾಮಾನ್ಯ. ಅದಕ್ಕೆ ಉತ್ತರ ಇಲ್ಲಿದೆ, ಬಿಜೆಪಿ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡಿದರೂ ಕೊಪ್ಪಳದ ಅಭ್ಯರ್ಥಿಯ ಹೆಸರನ್ನು ತಡೆಹಿಡಿದಿತ್ತು. ಈ ಕುರಿತು ಸಂಗಣ್ಣರ ಪತ್ನಿಗೂ ಆತಂಕದ ಛಾಯೆ ಅವರಿಸಿತ್ತು. ಆದರಿಂದ ಟಿಕೆಟ್ ಘೋಷಣೆ ವಿಳಂಬ ಹಿನ್ನೆಲೆ ಸಂಗಣ್ಣ ಪತ್ನಿ ನಿಂಗಮ್ಮ ಟಿಕೆಟ್‍ಗಾಗಿ ನಾಗದೇವತೆ ಮೊರೆ ಹೋಗಿದ್ದರಂತೆ. ಆಗ ದೋಷ ನಿವಾರಣೆಯಾಗಿ ಟಿಕೆಟ್ ಸಿಗಲಿ ಎಂದು ಬೇಡಿಕೊಂಡಿದ್ದರಂತೆ. ಆದರಿಂದಲೇ ಸಂಗಣ್ಣ ಅವರಿಗೆ ಟಿಕೆಟ್ ಸಿಕ್ಕಿದೆ ಎಂದು ನಂಬಿ ಸಂಗಣ್ಣ ಅವರು ಕುಟುಂಬ ಸಮೇತ ಇಂದು ನಾಗದೇವತೆಗೆ ಪೂಜೆ ಸಲ್ಲಿಸಿದ್ದಾರೆ.

    ಸ್ವಾಮೀಜಿಯೊಬ್ಬರು ಸಂಗಣ್ಣ ಪತ್ನಿ ಬಳಿ, ನಿಮ್ಮ ಪತಿಗೆ ನಾಗ ದೋಷವಿದೆ ನಿವಾರಣೆ ಮಾಡಿಸಿ ಆ ಮೇಲೆ ಟಿಕೆಟ್ ಸಿಗುತ್ತೆ ಅಂತ ಹೇಳಿದ್ದರು. ಆಗ ಸ್ವಾಮೀಜಿಯ ಮಾತು ಅನುಸರಿಸಿದ ಸಂಗಣ್ಣ ಪತ್ನಿ ನಿಂಗಮ್ಮ ಅವರು ಕಳೆದ ಎರಡು ದಿನದಿಂದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಬುಕ್ಕಸಾಗಾರ ಗ್ರಾಮದಲ್ಲಿ ಇರುವ ನಾಗದೇವತೆಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಒಂದು ವಾರದಿಂದ ತೆಲೆನೋವಾಗಿದ್ದ ಟಿಕೆಟ್ ವಿಚಾರ ಶುಕ್ರವಾರ ಅಧಿಕೃತವಾಗಿ ಬಗೆಹರಿದಿದೆ. ಇದಕ್ಕೆ ದೇವರ ಕೃಪೆ ಕಾರಣವೆಂದು ಸಂಗಣ್ಣ ಕುಟುಂಬಸ್ಥರು ನಂಬಿದ್ದಾರೆ.

  • ನಿಖಿಲ್‍ಗೆ ಮುತ್ತು ನೀಡಿ ಶುಭ ಹಾರೈಸಿದ ವೃದ್ಧೆ

    ನಿಖಿಲ್‍ಗೆ ಮುತ್ತು ನೀಡಿ ಶುಭ ಹಾರೈಸಿದ ವೃದ್ಧೆ

    ಮಂಡ್ಯ: ಮಂಡ್ಯ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಮದ್ದೂರಿನ ಕೆಸ್ತೂರು ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ನಿಖಿಲ್ ಅವರಿಗೆ ವೃದ್ಧೆಯೊಬ್ಬರು ಮುತ್ತು ನೀಡಿ ಶುಭ ಹಾರೈಸಿದ್ದಾರೆ.

    ಮದ್ದೂರಿನ ಹೆಮ್ಮನಹಳ್ಳಿ, ಕದಲೂರು, ಆತಗೂರು ಸೇರಿದಂತೆ ಹಲವು ಗ್ರಾಮದಲ್ಲಿ ಇಂದು ನಿಖಿಲ್ ಹಾಗೂ ಅವರ ಬೆಂಬಲಿಗರು ಜೊತೆಗೂಡಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗೆ ಕೆಸ್ತೂರು ಗ್ರಾಮದಲ್ಲಿ ಜನರೊಂದಿಗೆ ನಿಖಿಲ್ ಅವರು ಮಾತನಾಡುತ್ತಿದ್ದ ವೇಳೆ ಅವರ ಬಳಿ ಬಂದ ವೃದ್ಧೆಯೊಬ್ಬರು ಅವರ ಕಿವಿಯಲ್ಲಿ ಶುಭ ಹಾರೈಸಿ ಮುತ್ತು ಕೊಟ್ಟಿದ್ದಾರೆ.

    ಇದಕ್ಕೂ ಮೊದಲು ಹೆಮ್ಮನಹಳ್ಳಿ ಗ್ರಾಮದಿಂದ ನಿಖಿಲ್ ಪ್ರಚಾರ ಆರಂಭಿಸಿದಾಗ ಆತಗೂರು ಗ್ರಾಮದಲ್ಲಿ ಪದ್ಮಮ್ಮ, ತಮ್ಮ ಮಕ್ಕಳಿಗೆ ಕೆಲಸವಿಲ್ಲ ಎಂದು ಕಣ್ಣೀರು ಹಾಕಿದ್ದರು. ಆಗ ನಿಖಿಲ್, ಪದ್ಮಮ್ಮ ಅವರ ಕಣ್ಣೀರು ಒರೆಸಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ನಾನು ನಿಮ್ಮ ಮಗನಿದ್ದಂತೆ, ನಿಮ್ಮ ಮಕ್ಕಳಿಗೂ ಅಣ್ಣ-ತಮ್ಮನಂತೆ ನಾನಿದ್ದೇನೆ. ಉದ್ಯೋಗ ಸೃಷ್ಟಿ ಮಾಡುವ ವಿಷಯದ ಬಗ್ಗೆ ಬಹಳ ಸೂಕ್ಷ್ಮವಾಗಿ ಗಮನಿಸಿ ಮಾಡುತ್ತೇನೆ ಎಂದು ಮಹಿಳೆಯನ್ನು ಸಮಾಧಾನಪಡಿಸಿದ್ದರು. ಅಲ್ಲದೆ ಕೆಸ್ತೂರು ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ನಾನೇನಾದರೂ ಕೆಲಸ ಮಾಡಲಿಲ್ಲ ಅಂದರೆ ಕುತ್ತಿಗೆ ಪಟ್ಟಿ ಹಿಡಿದು ಕೇಳಿ ಎಂದು ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡ ಸಂದರ್ಭದಲ್ಲಿ ಹೇಳಿದ್ದಾರೆ.

  • ಸುಮಲತಾ ಗೆಲುವಿಗಾಗಿ ಯುವಕನಿಂದ ಉರುಳು ಸೇವೆ

    ಸುಮಲತಾ ಗೆಲುವಿಗಾಗಿ ಯುವಕನಿಂದ ಉರುಳು ಸೇವೆ

    ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಚುನಾವಣೆಯಲ್ಲಿ ಗೆಲ್ಲಲಿ ಎಂದು ಮಂಡ್ಯದ ಯುವಕನೊಬ್ಬ ಉರುಳು ಸೇವೆ ಮಾಡಿದ್ದಾರೆ.

    ಬೆನಕಪ್ರಸಾದ್ ಉರುಳು ಸೇವೆ ಮಾಡಿದ ಯುವಕ. ಬೆನಕಪ್ರಸಾದ್ ಪಕ್ಕಾ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಯಾಗಿದ್ದು, ಈಗ ಅವರ ಪತ್ನಿ, ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಮಂಡ್ಯ ಚುನಾವಣೆಯಲ್ಲಿ ಜಯಶಾಲಿಯಾಗಲಿ ಎಂದು ಈ ಸೇವೆ ಮಾಡಿದ್ದಾರೆ.

    ಬೆನಕಪ್ರಸಾದ್ ಕೆ.ಆರ್ ನಗರ ಪಟ್ಟಣ ಆಂಜನೇಯ ಬ್ಲಾಕ್‍ನ ಆಂಜನೇಯಸ್ವಾಮಿ ದೇವಾಲಯದಿಂದ ಹಳೆ ಎಡತೊರೆ ಆಂಜನೇಯಸ್ವಾಮಿ ದೇವಾಲಯದವರೆಗೆ ಉರುಳು ಸೇವೆ ಮಾಡಿದ್ದಾರೆ. ಬೆಳಗ್ಗಿನ ಜಾವ 2 ಗಂಟೆಗೆ ಎದ್ದು ಸುಮಾರು 5 ಕಿಲೋಮೀಟರ್ ದೂರ ಉರುಳು ಸೇವೆ ಮಾಡಿದ್ದಾರೆ.

  • ರಾಹುಲ್ ಗಾಂಧಿ `ಕೈ’ ಸೇರಿದ ಬಿಟೌನ್ ಬೆಡಗಿ ಉರ್ಮಿಳಾ

    ರಾಹುಲ್ ಗಾಂಧಿ `ಕೈ’ ಸೇರಿದ ಬಿಟೌನ್ ಬೆಡಗಿ ಉರ್ಮಿಳಾ

    ನವದೆಹಲಿ: ಬಾಲಿವುಡ್ ತಾರೆ ಉರ್ಮಿಳಾ ಮಾತೋಂಡ್ಕರ್ ಅವರು ಬುಧವಾರದಂದು ರಾಹುಲ್ ಗಾಂಧಿಯನ್ನು ಭೇಟಿಯಾಗಿ, ಅವರ ನಿವಾಸದಲ್ಲಿಯೇ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    ಲೋಕಸಭೆ ಚುನಾವಣೆ ಸಮಯದಲ್ಲಿಯೇ ಉರ್ಮಿಳಾ ಅವರು ಕಾಂಗ್ರೆಸ್ ಸೇರ್ಪಡೆಯಾಗಿ, ಪಕ್ಷಕ್ಕಾಗಿ ಕೆಲಸ ಮಾಡಲು ಇಚ್ಚಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣ್‍ದೀಪ್ ಸುರ್ಜೆವಾಲ ಅವರು, ಕಾಂಗ್ರೆಸ್ ಪಕ್ಷ ಸೇರಿರುವ ಉರ್ಮಿಳಾ ಅವರು ಇನ್ಮುಂದೆ ಪಕ್ಷದ ಸಿದ್ದಾಂತವನ್ನು ಅರಿತು, ಪಕ್ಷವನ್ನು ಬಲಗೊಳಿಸುವ ಕಾರ್ಯ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಉರ್ಮಿಳಾ ಅವರು, ನಾನು ಕಾಂಗ್ರೆಸ್ ಸಿದ್ದಾಂತವನ್ನು ನಂಬುತ್ತೇನೆ. ಆದರಿಂದ ನಾನು ಕೈ ಪಕ್ಷ ಸೇರಿದ್ದೇನೆ. ನಾನು ಕೇವಲ ಚುನಾವಣಾ ಉದ್ದೇಶಕ್ಕಾಗಿ ಪಕ್ಷಕ್ಕೆ ಸೇರಿಲ್ಲ ಎಂದರು. ಅಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಭಾಗಿಯಾಗಿತ್ತು. ಹಾಗೆಯೇ ಕಾಂಗ್ರೆಸ್ ಸೇರುವ ಮೂಲಕ ದೇಶದೊಳಗಡೆ ಕಳೆದು ಐದು ವರ್ಷಗಳಿಂದ ನಡೆಯುತ್ತಿರುವ ಆಂತರಿಕ ದಾಳಿ ಹಾಗೂ ಇನ್ನು ಹಲವು ವಿಚಾರಗಳ ಬಗ್ಗೆ ಧ್ವನಿಯೆತ್ತುವ ಅವಕಾಶ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಲೋಕಸಮರಕ್ಕೆ ಮುಂಬೈ ಉತ್ತರ ಕ್ಷೇತ್ರದಿಂದ ಉರ್ಮಿಳಾ ಅವರಿಗೆ ಕಾಂಗ್ರೆಸ್ ಟಿಕಿಟ್ ನೀಡಲಿದೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.

  • ಟಿಕೆಟ್ ನೀಡದ್ದಕ್ಕೆ ರೊಚ್ಚಿಗೆದ್ದು ಕಚೇರಿಯಲ್ಲಿದ್ದ ಕುರ್ಚಿಗಳನ್ನು ಹೊತ್ತೊಯ್ದ ಕೈ ಎಂಎಲ್‍ಎ!

    ಟಿಕೆಟ್ ನೀಡದ್ದಕ್ಕೆ ರೊಚ್ಚಿಗೆದ್ದು ಕಚೇರಿಯಲ್ಲಿದ್ದ ಕುರ್ಚಿಗಳನ್ನು ಹೊತ್ತೊಯ್ದ ಕೈ ಎಂಎಲ್‍ಎ!

    ಮುಂಬೈ: ಲೋಕಸಭಾ ಚುನಾವಣೆಗೆ ಟಿಕೆಟ್ ನೀಡದ್ದಕ್ಕೆ ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕರೊಬ್ಬರು ತಾವು ಪಕ್ಷದ ಕಚೇರಿಗೆ ನೀಡಿದ್ದ 300 ಕುರ್ಚಿಗಳನ್ನು ವಾಪಸ್ ಹೊತ್ತುಕೊಂಡು ಹೋದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದಿದೆ.

    ಔರಂಗಾಬಾದ್‍ನ ಸಿಲೋಡ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿದ್ದಕ್ಕೆ ಅಲ್ಲಿನ ಶಾಸಕ ಅಬ್ದುಲ್ ಸತ್ತಾರ್ ಎ ನಬಿ ಹಾಗೂ ಅವರ ಬೆಂಬಲಿಗರು ಕಚೇರಿಯಲ್ಲಿದ್ದ 300 ಪ್ಲಾಸ್ಟಿಕ್ ಕುರ್ಚಿಗಳನ್ನು ಹೊತ್ತುಕೊಂಡು ಹೋಗಿದ್ದಾರೆ.

    ಸಿಲೋಡ್‍ನಲ್ಲಿರುವ ಕಾಂಗ್ರೆಸ್ ಕಚೇರಿಗೆ ಅಬ್ದುಲ್ ಅವರು 300 ಖುರ್ಚಿಯನ್ನು ದೇಣಿಗೆ ರೂಪದಲ್ಲಿ ನೀಡಿದ್ದರು. ಆದರೆ ಪಕ್ಷ ತನಗೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದಿದ್ದಾರೆ. ಬಳಿಕ ನನಗೆ ಟಿಕೆಟ್ ಕೊಡದ ಮೇಲೆ ನಾನು ನೀಡಿರುವ ಕುರ್ಚಿ ಕಚೇರಿಯಲ್ಲಿ ಯಾಕಿರಬೇಕು ಎಂದು ಆಕ್ರೋಶಗೊಂಡು ತಮ್ಮ ವಾಹನಕ್ಕೆ ಲೋಡ್ ಮಾಡಿಸಿಬಿಟ್ಟಿದ್ದಾರೆ.

    ಟಿಕೆಟ್ ನೀಡದ ಕಾರಣಕ್ಕೆ ಈಗಾಗಲೇ ಅಬ್ದುಲ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಪತ್ರ ಸಲ್ಲಿಸಿದ್ದು, ಬಿಜೆಪಿ ಸೇರುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಸೇರ್ಪಡೆ ವಿಚಾರ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಅಬ್ದುಲ್ ಅವರ ಮನವೊಲಿಸಿ ಸಿಲೋಡ್ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

    ಒಟ್ಟಿನಲ್ಲಿ ಈ ಬಾರಿ ಅಬ್ದುಲ್ ಅವರು ಚುನಾವಣೆಗೆ ನಿಂತರೂ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಾರೋ ಅಥವಾ ಬಿಜೆಪಿ, ಕಾಂಗ್ರೆಸ್‍ನಿಂದ ನಿಲ್ಲುತ್ತಾರೋ ಇನ್ನುವ ಪ್ರಶ್ನೆ ಸದ್ಯ ಹುಟ್ಟಿಕೊಂಡಿದೆ.

  • ಜನಪ್ರತಿನಿಧಿಗೆ ಐಟಿ ಬೆದರಿಕೆ: ಸಚಿವ ತುಕಾರಾಂ

    ಜನಪ್ರತಿನಿಧಿಗೆ ಐಟಿ ಬೆದರಿಕೆ: ಸಚಿವ ತುಕಾರಾಂ

    ಬಳ್ಳಾರಿ: ಕಂಪ್ಲಿಯ ಓರ್ವ ಜನಪ್ರತಿನಿಧಿಗೆ ಐಟಿ ಇಲಾಖೆ, ನಾವು ಹೇಳಿದ ಹಾಗೆ ಕೇಳಬೇಕು. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವಂತೆ ಬೆದರಿಕೆ ಹಾಕಿದೆ ಎಂದು ಸಚಿವ ತುಕಾರಾಂ ಗಂಭೀರ ಆರೋಪ ಮಾಡಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ರಿಪಬ್ಲಿಕ್ ಆಪ್ ಇಂಡಿಯಾ ಮಾಡಲು ಹೊರಟ್ಟಿದ್ದಾರೆ. ಹೀಗಾಗಿಯೇ ಐಟಿ ಅಧಿಕಾರಿಗಳು ಆದಾಯಗಳಿಕೆ ಬಗ್ಗೆ ನೋಟಿಸ್ ನೀಡದೇ, ವಿಪಕ್ಷಗಳ ಶಾಸಕರು ಹಾಗೂ ನಾಯಕರಿಗೆ ರಾಜಕೀಯ ವಿಚಾರದಲ್ಲಿ ನೋಟಿಸ್ ನೀಡಿದ್ದಾರೆ. ಎಷ್ಟು ಸಲ ಗೆಲುವು ಸಾಧಿಸಿದ್ದೀರಿ? ಎಷ್ಟು ಮತಗಳ ಅಂತರದಿಂದ ಗೆದ್ದಿದ್ದೀರಿ? ಎಷ್ಟು ಆಸ್ತಿ ಇದೆ ಅಂತಾ ಜನಪ್ರತಿನಿಧಿಗಳಿಗೆ ಐಟಿ ನೋಟಿಸ್ ನೀಡಿರುವುದು ಎಷ್ಟು ಸರಿ ಎಂದು ಐಟಿ ಅಧಿಕಾರಿಗಳ ಕಾರ್ಯವೈಖರಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

    ನಮ್ಮ ಆಸ್ತಿ ಎಷ್ಟಿದೆ? ಹೇಗೆ ಆಸ್ತಿ ಗಳಿಸಿದ್ದೀರಿ ಅನ್ನೋ ಬಗ್ಗೆ ಐಟಿ ಅಧಿಕಾರಿಗಳು ಕೇಳಲಿ. ಆದ್ರೆ ಎಷ್ಟು ಸಾರಿ ಗೆದ್ದಿದ್ದೀರಿ. ಎಷ್ಟು ಮತಗಳಿಂದ ಗೆದ್ದಿದ್ದೀರಿ ಅಂತಾ ನೋಟಿಸ್ ನೀಡೋದು ಎಷ್ಟು ಸರಿ ಎಂದು ಕಿಡಿಕಾರಿದರು. ಅಲ್ಲದೇ ನಮ್ಮ ಆಸ್ತಿ ವಿಚಾರ ಲೋಕಾಯುಕ್ತರು ಕೇಳಲಿ. ಆದರೆ ಐಟಿಯವರಿಗೆ ಈ ವಿಚಾರ ಯಾಕೆ? ನಾವು ಯಾವ ಪಾರ್ಟಿಯಿಂದ ಗೆದ್ದರೇ ಎನೂ? ಐಟಿಯವರಿಗೆ ಯಾಕೆ ಬೇಕು ಇದೆಲ್ಲಾ ಅಂತ ಐಟಿ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲದೇ ತಮಗೆ ಮೂರುವರೆ ತಿಂಗಳ ಹಿಂದೆ ಬಂದಿದ್ದ ನೋಟಿಸ್ ಗೆ ಉತ್ತರ ನೀಡಿರುವುದಾಗಿ ತಿಳಿಸಿದರು.

  • ಮದ್ಯ ನಿಷೇಧಿಸಿದ ರಾಜ್ಯದಲ್ಲೇ ಕುಡಿದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಅಂದರ್

    ಮದ್ಯ ನಿಷೇಧಿಸಿದ ರಾಜ್ಯದಲ್ಲೇ ಕುಡಿದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಅಂದರ್

    ಪಟ್ನಾ: ಬಿಹಾರ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಬ್ಯಾನ್ ಮಾಡಲಾಗಿದೆ. ಆದ್ರೆ ಇಲ್ಲಿನ ಪುರ್ನಿಯಾ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಕಂಠ ಪೂರ್ತಿ ಕುಡಿದು ಬಂದು ನಾಮಪತ್ರ ಸಲ್ಲಿಸಿ, ಪೊಲೀಸರ ಅತಿಥಿಯಾಗಿದ್ದಾರೆ.

    ಹೌದು, ಪುರ್ನಿಯಾ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ರಾಜೀವ್ ಕುಮಾರ್ ಸಿಂಗ್ ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ಮದ್ಯಪಾನ ಮಾಡಿಕೊಂಡು ಬಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜೀವ್ ಮೂಲತಃ ಭಗಲ್‍ಪುರ ಜಿಲ್ಲೆಯವರು. ಮಂಗಳವಾರ ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಭ್ಯರ್ಥಿಯ ವರ್ತನೆ ಕಂಡು ಅನುಮಾನ ಬಂದಿದೆ. ಆಗ ಆಲ್ಕೋ ಮೀಟರ್ ನಿಂದ ಅಭ್ಯರ್ಥಿಯನ್ನು ಪರೀಕ್ಷಿಸಿದಾಗ ಆತ ಕುಡಿದಿರುವುದು ಖಚಿತವಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಬಗ್ಗೆ ಖಚಿತವಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ರಾಜೀವ್ ಕುಮಾರ್‍ನನ್ನು ಬಂಧಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿರುವ ಕಾನೂನನ್ನು ಉಲ್ಲಂಘಿಸಿದಕ್ಕೆ ಆರೋಪಿ ಮೇಲೆ ಪ್ರಕರಣ ಕೂಡ ದಾಖಲಿಸಲಾಗಿದೆ. 2016 ರಲ್ಲಿ ನಿತೀಶ್ ಕುಮಾರ್ ಸರ್ಕಾರ ಆಡಳಿತದಲ್ಲಿದಾಗ, ಬಿಹಾರದಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿತ್ತು. ಆದರೂ ಕೂಡ ಬಿಹಾರದಲ್ಲಿ ಮದ್ಯ ಮಾರಾಟ ನಿಂತಿಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದ್ದು, ಈ ಕುರಿತು ರಾಜಕೀಯ ಪಾಳಯದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ.

    ಬಿಹಾರದ ಪುರ್ನಿಯಾ ಕ್ಷೇತ್ರದಿಂದ ಒಟ್ಟು 18 ಅಭ್ಯರ್ಥಿಗಳು ಲೋಕಸಮರಕ್ಕೆ ಕಣಕ್ಕಿಳಿಯಲಿದ್ದಾರೆ. ಅವರಲ್ಲಿ ಈಗಾಗಲೇ 11 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

  • ರಾಜಕಾರಣ ಬದಲು ಮೋದಿ ಬಾಲಿವುಡ್ ಸೇರಬೇಕಿತ್ತು: ಗೆಹ್ಲೋಟ್ ವ್ಯಂಗ್ಯ

    ರಾಜಕಾರಣ ಬದಲು ಮೋದಿ ಬಾಲಿವುಡ್ ಸೇರಬೇಕಿತ್ತು: ಗೆಹ್ಲೋಟ್ ವ್ಯಂಗ್ಯ

    ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಟನೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಅವರು ರಾಜಕೀಯವಲ್ಲ ಬಾಲಿವುಡ್ ಸೇರಬಹುದಿತ್ತು ಎಂದು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಟೀಕಿಸಿದ್ದಾರೆ.

    ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಗೆಹ್ಲೋಟ್, “ಜುಂಬ್ಲೆಬಾಜಿ (ವಾಕ್ಚಾತುರ್ಯ), ಡ್ರಾಮಾಬಾಜಿ (ನಟನೆ) ಮೋದಿ ಅವರ ಸ್ವಭಾವದಲ್ಲಿಯೇ ಇದೆ. ಅವರು ಬಾಲಿವುಡ್ ಸೇರಿ ಒಳ್ಳೆಯ ನಟರಾಗಬಹುದಿತ್ತು” ಎಂದು ಟಾಂಗ್ ಕೊಟ್ಟಿದ್ದಾರೆ.

    ನಟನೆಯಲ್ಲಿ ಸತ್ಯ, ವಾಸ್ತವವಿರುವುದಿಲ್ಲ. ಹಾಗೆಯೇ ಮೋದಿ ಅವರು ಸತ್ಯವನ್ನು ಹೇಳುವುದನ್ನು ಬಿಟ್ಟು, ಸುಳ್ಳಿನ ಆಸರೆಯಲ್ಲಿ ನಟಿಸುತ್ತಾರೆ. ನಟನೆ ದೇಶಕ್ಕೇನೂ ಒಳ್ಳೆಯದನ್ನು ಮಾಡಿಲ್ಲ. ಬರೀ ನಟನೆಯಿಂದ ಅಭಿವೃದ್ಧಿಯೂ ಆಗಲ್ಲ, ಯಾರ ಹಸಿವು ಕೂಡ ನೀಗಲ್ಲ ಎಂದು ಕಿಡಿಕಾರಿದರು.

    ದೇಶ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಇಂದು ಅಪಾಯದಲ್ಲಿದೆ. ನಾವು ಸಂಪೂರ್ಣ ಬಲ ಮತ್ತು ಸಾಮಥ್ರ್ಯದೊಂದಿಗೆ ಚುನಾವಣೆಯನ್ನು ಎದುರಿಸದಿದ್ದರೆ ಬಿಜೆಪಿ ನಮ್ಮ ದೇಶವನ್ನು ನಿರ್ನಾಮ ಮಾಡುತ್ತಾರೆ ಅಂತ ಆತಂಕ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ ಬಿಜೆಪಿ ಸರ್ಕಾರ ರಾಜ್ಯದ ಮತ್ತು ದೇಶದ ಆರ್ಥಿಕತೆಯನ್ನು ನಾಶಮಾಡುತ್ತಿದೆ ಎಂದು ಆರೋಪಿಸಿದರು.

    ಅಲ್ಲದೆ 2019 ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವವನ್ನು ಉಳಿಸಲು ಒಂದು ಅವಕಾಶ. ಹಾಗೆಯೇ ಈಗಾಗಲೇ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಸಿಬಿಐ ಅಂತಹ ಸಂಸ್ಥೆಯನ್ನು ದುರ್ಬಲಗೊಳಿಸಿದೆ. ಆದರಿಂದ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಎಲ್ಲಾ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.