Tag: Loksabha election result

  • ಎಷ್ಟೋ ಎಕ್ಸಿಟ್ ಪೋಲ್‍ಗಳು ನಿಜವಾಗಲ್ಲ, ಇದನ್ನು ನಾನು ಒಪ್ಪಲ್ಲ: ದಿನೇಶ್ ಗುಂಡೂರಾವ್

    ಎಷ್ಟೋ ಎಕ್ಸಿಟ್ ಪೋಲ್‍ಗಳು ನಿಜವಾಗಲ್ಲ, ಇದನ್ನು ನಾನು ಒಪ್ಪಲ್ಲ: ದಿನೇಶ್ ಗುಂಡೂರಾವ್

    ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಲೋಕಸಮರ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ ಈ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ. ಎಷ್ಟೋ ಎಕ್ಸಿಟ್ ಪೋಲ್‍ಗಳು ನಿಜವಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿಯವರು ಅಭಿವೃದ್ಧಿಪರ ಆಡಳಿತ ಕೊಡಲಿಲ್ಲ. ಮೋದಿಯವರು ಪ್ರಚಾರದಲ್ಲೇ ಆಡಳಿತ ಮಾಡಿದ್ದಾರೆ. ಸಾಕಷ್ಟು ಸಮಸ್ಯೆಗಳಿದ್ದರೂ ಅವರಿಗೆ ಇಷ್ಟೊಂದು ಅಂಕಿ ಸಂಖ್ಯೆ ತೋರಿಸುತ್ತಿರೋದು ಆಶ್ಚರ್ಯವಾಗುತ್ತಿದೆ. ಎಷ್ಟೋ ಎಕ್ಸಿಟ್ ಪೋಲ್‍ಗಳು ನಿಜವಾಗಲ್ಲ ಎಂದಿದ್ದಾರೆ.

    ಆಸ್ಟ್ರೇಲಿಯದಲ್ಲೂ ಯಾವುದೇ ಎಕ್ಸಿಟ್ ಪೋಲ್ ಸಮೀಕ್ಷೆಗಳು ನಿಜ ಹೇಳಲಿಲ್ಲ. ಚುನಾವಣೋತ್ತರ ಸಮೀಕ್ಷೆಗಳು ತಪ್ಪು ಅಥವಾ ಸುಳ್ಳು ಅಂತ ಹೇಳುತ್ತಿಲ್ಲ. ಆದರೆ ಕರ್ನಾಟಕದಲ್ಲಿ ಈ ಸಮೀಕ್ಷೆಗಳು ತೋರಿಸಿರುವುದಕ್ಕಿಂತ ಹೆಚ್ಚು ಸ್ಥಾನಗಳನ್ನು ನಾವು ಪಡೆಯುತ್ತೇವೆ. ಎರಡೂ ಪಕ್ಷಗಳು ಇನ್ನೂ ಚೆನ್ನಾಗಿ ಕೆಲಸ ಮಾಡಿದರೆ ಇನ್ನೂ ಹೆಚ್ಚಾಗಿ ಸೀಟುಗಳನ್ನು ಗೆಲ್ಲಬಹುದಿತ್ತು. ಈ ಸಮೀಕ್ಷೆಗಳನ್ನು ನಾನು ಒಪ್ಪಲ್ಲ. 23 ರ ತನಕ ಕಾಯೋಣ. ಆವತ್ತು ನಿಜವಾದ ಸಮೀಕ್ಷೆ ಬರುತ್ತೆ. ನಾವು ರಾಜ್ಯದಲ್ಲೂ, ದೇಶದಲ್ಲೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕರ್ನಾಟಕದ ಬಗ್ಗೆ ಎಕ್ಸಿಟ್ ಪೋಲ್ ಫಲಿತಾಂಶಕ್ಕೂ ನಮ್ಮ ಲೆಕ್ಕಾಚಾರಕ್ಕೂ ಹೊಂದಿಕೆ ಆಗುತ್ತಿಲ್ಲ. ನಾವು ಕಳೆದ ಬಾರಿ 11 ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ಜೆಡಿಎಸ್ 2 ಗೆದ್ದಿತ್ತು. ಈ ಸಲ ಅದಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ನಾವು ಈಗ ಹೇಳಿರೋದಕ್ಕಿಂತಲೂ ಡಬಲ್ ಸ್ಥಾನಗಳನ್ನು ಗೆಲ್ಲುತ್ತೇವೆ. ಬಿಜೆಪಿ ಆಡಳಿತದಲ್ಲಿ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ತಮ್ಮ ಮಾತುಗಳನ್ನೇ ಅವರು ಉಳಿಸಿಕೊಳ್ಳಲಿಲ್ಲ. ಎಕ್ಸಿಟ್ ಪೋಲ್ ಗಳೇ ನಿಜವಾಗಿಬಿಟ್ಟರೆ 23ರ ತನಕ ಯಾಕೆ ಕಾಯಬೇಕು? ಎಂದು ಪ್ರಶ್ನಿಸಿದರು.

    ಮಂಡ್ಯದ ಬಗ್ಗೆ ನಾನು ಈಗಲೇ ಏನೂ ಮಾತಾಡಲ್ಲ. ಕರ್ನಾಟಕದಲ್ಲಿ ನಮ್ಮ ಪರ್ಫಾರ್ಮೆನ್ಸ್ ಉತ್ತಮವಾಗಿದೆ. ನಾವು ಎರಡು ಉಪಚುನಾವಣೆಗಳನ್ನೂ ಗೆಲ್ಲುತ್ತೇವೆ. ರಾಹುಲ್ ಗಾಂಧಿಯವರ ಸಭೆಯಲ್ಲಿ ಬಗ್ಗೆ ಚರ್ಚೆ ನಡೆಸಿಲ್ಲ. ರಿಸಲ್ಟ್ ಬಳಿಕ ಏನೇನು ಕ್ರಮ ತಗೋಬೇಕು ಅಂತ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

  • ‘ಲೋಕಾ’ ಫಲಿತಾಂಶ ಬಂದ 24 ಗಂಟೆಯೊಳಗೆ ಮೈತ್ರಿ ಸರ್ಕಾರ ಪತನ: ನಿರಾಣಿ ಭವಿಷ್ಯ

    ‘ಲೋಕಾ’ ಫಲಿತಾಂಶ ಬಂದ 24 ಗಂಟೆಯೊಳಗೆ ಮೈತ್ರಿ ಸರ್ಕಾರ ಪತನ: ನಿರಾಣಿ ಭವಿಷ್ಯ

    ದಾವಣಗೆರೆ: ಮೇ 23 ರಂದು ಕೇಂದ್ರದಲ್ಲಿ ಮೋದಿ ಪ್ರಧಾನಿಯಾಗುತ್ತಾರೆ. ಲೋಕಸಭಾ ಫಲಿತಾಂಶ ಬಂದ 24 ಗಂಟೆಯ ಒಳಗಡೆ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಭವಿಷ್ಯ ನುಡಿದಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ ಪಕ್ಷ ಜೆಡಿಎಸ್ ಅವರಿಗೆ ಕೈ ಕೊಡಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಲಿದ್ದಾರೆ. ಲೋಕ ಫಲಿತಾಂಶದ ಬಳಿಕ ಮೈತ್ರಿ ಮುರಿಯಲಿದೆ ಎಂದು ಭವಿಷ್ಯ ನುಡಿದರು.

    ಕೆಲವು ಮೈತ್ರಿ ಶಾಸಕರು ಬಿಜೆಪಿ ಸೇರಲಿದ್ದಾರೆ. ಹೀಗಾಗಿ ಆಪರೇಷನ್ ಕಮಲ ಅಗತ್ಯವಿಲ್ಲ. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗಲಿದೆ. ಬಿಜೆಪಿ ಸರ್ಕಾರ ರಚನೆ ಆಗೋದು ಗ್ಯಾರಂಟಿ, ಎಲ್ಲವನ್ನು ಕಾದು ನೋಡಿ ಎಂದು ಹೇಳಿದರು.