Tag: Loksabha election result

  • 4.79 ಲಕ್ಷ ಮತಗಳ ಅಂತರದಲ್ಲಿ ಗೆದ್ದು, 6ನೇ ಬಾರಿ ಲೋಕಸಭೆಗೆ ಹೆಗಡೆ ಪ್ರವೇಶ

    4.79 ಲಕ್ಷ ಮತಗಳ ಅಂತರದಲ್ಲಿ ಗೆದ್ದು, 6ನೇ ಬಾರಿ ಲೋಕಸಭೆಗೆ ಹೆಗಡೆ ಪ್ರವೇಶ

    ಕಾರವಾರ: ಕಳೆದ ಐದು ಬಾರಿಯೂ ಹಿಂದುತ್ವದ ಅಲೆಯಿಂದ ಜಯಗಳಿಸಿದ್ದ ಅನಂತಕುಮಾರ್ ಅವರು ಎರಡನೇ ಬಾರಿ ಮೋದಿ ಅಲೆ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ತನ್ನ ಅಧಿಪತ್ಯ ಸಾಧಿಸಿದೆ.

    ಹೌದು. ಉತ್ತರ ಕನ್ನಡದಲ್ಲಿ ಒಟ್ಟೂ 11,54,390 ಮತಗಳು ಚಲಾವಣೆಯಾಗಿದೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ 16,017 ಸಾವಿರ ನೋಟಾ ಮತಗಳು ಚಲಾವಣೆಯಾಗಿದೆ. ಅದರಲ್ಲಿ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ವಿರುದ್ಧ ಅನಂತ್‍ಕುಮಾರ್ ಅವರು 4,79,649 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾರೆ. ಹೆಗಡೆ 7,86,042 ಮತಗಳನ್ನು ಪಡೆದಿದ್ದರೆ, ಮೈತ್ರಿ ಅಭ್ಯರ್ಥಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಆನಂದ್ ಆಸ್ನೋಟಿಕರ್ 3,06,393 ಮತಗಳನ್ನು ಪಡೆಡು ಭಾರೀ ಸೋಲನ್ನು ಅನುಭವಿಸಿದ್ದಾರೆ.

    ಗೆದ್ದಿದ್ದು ಹೇಗೆ?
    ಯಾವುದೇ ಅಭಿವೃದ್ಧಿ ಗೆಲ್ಲಬೇಕಾದರೇ ಪಕ್ಷದ ಕಾರ್ಯಕರ್ತರ ಶ್ರಮ ಇರಲೇ ಬೇಕು. ಆ ದಿಕ್ಕಿನಲ್ಲಿ ಹೇಳುವುದಾದರೇ ಬಿಜೆಪಿ ಕಾರ್ಯಕರ್ತರ ಶ್ರಮ ಉತ್ತರ ಕನ್ನಡ ಜಿಲ್ಲೆಯ ಕ್ಷೇತ್ರದಲ್ಲಿ ಹೆಚ್ಚಾಗಿತ್ತು. ಬಿಜೆಪಿ ಕಾರ್ಯಕರ್ತರಿಂದ ಹಿಡಿದು ಸಂಘ ಪರಿವಾರದ ಕಾರ್ಯಕರ್ತರು ತಮ್ಮ ಸರ್ಕಾರದ ನಿಲುವುಗಳನ್ನು, ಸಾಧನೆಗಳನ್ನು ಅನಾಯಾಸವಾಗಿ ಜನರ ಮುಂದೆ ಇಟ್ಟಿರುವುದು ಬಿಜೆಪಿಯ ಪ್ಲಸ್ ಪಾಯಿಂಟ್ ಆಗಿತ್ತು. ಇದೇ ಕಾರಣಕ್ಕೆ ಅನಂತ್‍ಕುಮಾರ್ ಅವರು ಸಲೀಸಾಗಿ ಲೋಕಸಮರವನ್ನು ಗೆದ್ದು ಮತ್ತೋಮ್ಮೆ ಲೋಕಸಭೆಯನ್ನು ಪ್ರವೇಶಿಸಿದ್ದಾರೆ.

    ಕಳೆದ ಚುನಾವಣೆಗೆ ಹೋಲಿಸಿದರೆ ಅನಂತಕುಮಾರ್ ಹೆಗಡೆ ಕ್ಷೇತ್ರದಲ್ಲಿ ಜನರೊಂದಿಗೆ ಬೆರತಿರುವುದು ಹೆಚ್ಚು ಲಾಭ ತಂದಿದೆ. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಶ್ರಮದಿಂದ ನಾಲ್ಕು ಬಿಜೆಪಿ ಶಾಸಕರನ್ನು ಗೆದ್ದಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಹಕಾರಿಯಾಗಿದೆ. ಇದಲ್ಲದೇ ಪಕ್ಷದಲ್ಲೇ ಇದ್ದು ವಿರೋಧಿಗಳಾಗಿದ್ದ ಶಿರಸಿ ಶಾಸಕ ವಿಶ್ವೇಶ್ವರ ಭಟ್ ಕಾಗೇರಿ ಅನಂತಕುಮಾರ್ ಪರ ಪ್ರಚಾರ ಮಾಡಿರುವುದು ಸಹ ಬಿಜೆಪಿಗೆ ಗೆಲುವಿದೆ ಬುನಾದಿ ಕಲ್ಪಿಸಿಕೊಟ್ಟಿತ್ತು.

    ಆನಂದ್ ಆಸ್ನೋಟಿಕರ್ ಸೋಲಲು ಕಾರಣವೇನು?
    ಹಲವು ಬಾರಿ ಪಕ್ಷ ಬದಲಾವಣೆಯಿಂದ ನಂಬಿಕೆ ಕೆಡಿಸಿಕೊಂಡಿದ್ದು. ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಕ್ಷೇತ್ರದ ಜನರ ಜೊತೆ ಸಂಪರ್ಕ ಕಳೆದುಕೊಂಡಿದ್ದು ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಅವರು ಸೋಲಲು ಮುಖ್ಯ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿ ದೇಶಪಾಂಡೆ ಜೊತೆ ವೈಯಕ್ತಿಕವಾಗಿ ಹೆಸರು ಕೆಡಿಸಿಕೊಂಡು ವಿರೋಧ ಮಾಡಿದ್ದು ಹಾಗೂ ಕಾಂಗ್ರೆಸ್ಸಿನ ಮಾರ್ಗರೇಟ್ ಆಳ್ವ ಬಣದಲ್ಲಿ ಹೆಚ್ಚು ಆತ್ಮೀಯವಾಗಿದ್ದು ಆಸ್ನೋಟಿಕರ್ ಅವರೊಗೆ ಸೋಲು ತಂದಿದೆ ಎನ್ನಬಹುದು. ಮೈತ್ರಿಕೂಟದ ಸಮನ್ವಯತೆ ಕಾಪಾಡಿಕೊಳ್ಳದೇ ಇರುವುದು ಹಾಗೂ ಮೂಲ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರಿಬ್ಬರನ್ನೂ ಕಡೆಗಣಿಸಿರುವುದು, ಸ್ಪರ್ಧೆ ಸಂದರ್ಭದಲ್ಲಿ ಸ್ಥಳೀಯ ನಾಯಕರು ಇವರ ಪರ ನಿಲ್ಲದೇ ಬಹಿರಂಗವಾಗಿ ಅಸಮದಾನ ಹೊರಹಾಕಿರುವುದು ಆನಂದ್ ಆಸ್ನೋಟಿಕರ್ ಅವರಿಗೆ ಭಾರಿ ಅಂತರದಲ್ಲಿ ಸೋಲು ಅನಿಭವಿಸುವಂತೆ ಮಾಡಿದೆ.

    ಕ್ಷೇತ್ರವಾರು ವಿವರ:
    1. ಖಾನಾಪುರ: ಬಿಜೆಪಿ-1,13,386
    ಮೈತ್ರಿಕೂಟ- 25,108 ಮತ
    2. ಕಿತ್ತೂರು: ಬಿಜೆಪಿ-92,339
    ಮೈತ್ರಿಕೂಟ- 37,337
    3. ಹಳಿಯಾಳ: ಬಿಜೆಪಿ- 81,629
    ಮೈತ್ರಿಕೂಟ-39,865
    4. ಕಾರವಾರ: ಬಿಜೆಪಿ- 1,13,135
    ಮೈತ್ರಿಕೂಟ- 37,349
    5. ಕುಮಟಾ: ಬಿಜೆಪಿ-99,609
    ಮೈತ್ರಿಕೂಟ- 33,179
    6. ಭಟ್ಕಳ: ಬಿಜೆಪಿ- 94,560
    ಮೈತ್ರಿ ಕೂಟ- 51,290
    7. ಶಿರಸಿ: ಬಿಜೆಪಿ-1,03,904
    ಮೈತ್ರಿಕೂಟ-38,996
    8. ಯಲ್ಲಾಪುರ: ಬಿಜೆಪಿ-84,649
    ಮೈತ್ರಿಕೂಟ-43,006

    ಅಂಚೆ ಮತ ವಿವರ:
    ಒಟ್ಟು 3199 ಮತಗಳು ಚಲಾವಣೆಯಾಗಿದೆ. ಅದರಲ್ಲಿ ಬಿಜೆಪಿ- 2831 ಮತ, ಮೈತ್ರಿಕೂಟ-263 ಮತಗಳನ್ನು ಗಳಿಸಿದೆ.

    ಸುಧಾಕರ್- 40, ನಾಗರಾಜ್ ನಾಯ್ಕ- 7, ನಾಗರಾಜ್ ಶೇಟ್- 4, ಮಂಜುನಾಥ್ ಸದಾಶಿವ- 7, ಸುನಿಲ್ ಪವಾರ್- 6, ಅನಿತಾ ಶೇಟ್- 16, ಕುಂದಾಬಾಯಿ- 7, ಚಿದಾನಂದ್- 4, ನಾಗರಾಜ್ ಶಿರಾಲಿ- 5, ಬಾಲಕೃಷ್ಣ ಪಾಟೀಲ್- 3, ಮಹ್ಮದ್ ಜಬುರುದ್ ಕತೀಬ್- 6 ಮತಗಳನ್ನು ಗಳಿಸಿದ್ದಾರೆ.

    ಮೈತ್ರಿ ಕೂಟದಲ್ಲಿ ಹೊಂದಾಣಿಕೆ ಇಲ್ಲದೇ ಬಹಿರಂಗವಾಗಿ ಕ್ಷೇತ್ರದಲ್ಲಿ ನಾಯಕರು ಅಸಮಧಾನ ತೋಡಿಕೊಂಡಿರುವುದು ಹೆಚ್ಚು ಬಿಜೆಪಿಗೆ ಹೆಚ್ಚು ಲಾಭ ತಂದಿದೆ. ಜಿಲ್ಲೆಯಲ್ಲಿ ಮೋದಿ ಹವ ಇರುವುದು, ಪ್ರಭಲ ಅಭ್ಯರ್ಥಿ ಎದುರಾಳಿಯಾಗಿರದೇ ಇರುವುದು ಹಾಗೂ ಪರೇಶ್ ಮೇಸ್ತಾ ಸಾವಿನ ಪ್ರಕರಣದ ಲಾಭ, ಮೈತ್ರಿಕೂಟದ ಅಭ್ಯರ್ಥಿ ಪರ ದೇಶಪಾಂಡೆ ಸೇರಿದಂತೆ ಉಳಿದ ನಾಯಕರು ಹೆಚ್ಚು ಪ್ರಚಾರ ಮಾಡದೇ ಅಸಮಧಾನ ಹೊರಹಾಕಿದ್ದು ಅನಂತ್‍ಕುಮಾರ್ ಅವರಿಗೆ ಮತ್ತೊಮ್ಮೆ ವಿಕ್ಟರಿ ತಂದುಕೊಟ್ಟಿದೆ.

  • ಕೊಪ್ಪಳದಲ್ಲಿ ಹಿಟ್ನಾಳ ಹಿಟ್‍ಔಟ್ – ಸಂಗಣ್ಣ ಕರಡಿಗೆ ಭರ್ಜರಿ ಜಯ

    ಕೊಪ್ಪಳದಲ್ಲಿ ಹಿಟ್ನಾಳ ಹಿಟ್‍ಔಟ್ – ಸಂಗಣ್ಣ ಕರಡಿಗೆ ಭರ್ಜರಿ ಜಯ

    ಕೊಪ್ಪಳ: ಲೋಕಸಮರದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಅವರನ್ನು ಹಿಂದಿಕ್ಕಿ ಭರ್ಜರಿ ಜಯ ಗಳಿಸಿದ್ದಾರೆ.

    ಕೊಪ್ಪಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ಭಾರಿ ಪೈಪೋಟಿ ನಡೆದಿತ್ತು. ಈ ಪ್ರತಿಷ್ಠೆಯ ಓಟದಲ್ಲಿ ಬಿಜೆಪಿ ವಿಜಯದ ಪತಾಕೆ ಹಾರಿಸಿದೆ. ಬಿಜೆಪಿಯ ಸಂಗಣ್ಣ ಕರಡಿ 38397 ಮತಗಳ ಅಂತರದಲ್ಲಿ ರಾಜಶೇಖರ ಹಿಟ್ನಾಳ ಅವರನ್ನು ಹಿಟ್‍ಔಟ್ ಮಾಡಿದ್ದಾರೆ.

    ಕಳೆದ ಬಾರಿಗಿಂತ 8 ಸಾವಿರಕ್ಕೂ ಹೆಚ್ಚು ಮತಗಳನ್ನು ಈ ಬಾರಿ ಸಂಗಣ್ಣ ಕರಡಿ ಗಳಿಸಿದ್ದಾರೆ. ಸಂಗಣ್ಣ ಕರಡಿ ಅವರು 5,86,783 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದರೆ, ರಾಜಶೇಖರ್ ಹಿಟ್ನಾಳ ಅವರು 5,48,386 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಒಟ್ಟು 2624 ಅಂಚೆ ಮತಗಳು ಬಿದ್ದಿವೆ. ಅದರಲ್ಲಿ ಸಂಗಣ್ಣ ಕರಡಿ 1786 ಮತಗಳನ್ನು ಪಡೆದಿದ್ದರೆ, ರಾಜಶೇಖರ್ ಹಿಟ್ನಾಳ್ 813 ಮತಗಳನ್ನು ಪಡೆದಿದ್ದಾರೆ.

    ಯಾವ ಕ್ಷೇತ್ರದಲ್ಲಿ ಎಷ್ಟು?
    1. ಸಿಂಧನೂರ: ಜೆಡಿಎಸ್‍ನ ವೆಂಕಟರಾವ್ ನಾಡಗೌಡ ಶಾಸಕರಾಗಿದ್ದು, 81 ಮತಗಳ ಲೀಡ್ ಪಡೆದಿದೆ.
    ಮೈತ್ರಿ – 71,361 ಮತ ಬಿಜೆಪಿ – 71,441

    2. ಮಸ್ಕಿ: ಕಾಂಗ್ರೆಸ್ಸಿನ ಪ್ರತಾಪಗೌಡ ಪಾಟೀಲ್ ಶಾಸಕರಾಗಿದ್ದು, ಬಿಜೆಪಿ 12,071 ಮತಗಳಿಂದ ಲೀಡ್ ಪಡೆದಿದೆ.
    ಮೈತ್ರಿ – 52467 ಮತ, ಬಿಜೆಪಿ – 64538

    3. ಕುಷ್ಟಗಿ: ಕಾಂಗ್ರೆಸ್ಸಿನ ಅಮರೇಗೌಡ ಬಯ್ಯಪುರ ಶಾಸಕರಾಗಿದ್ದು, ಬಿಜೆಪಿ 7,825 ಮತಗಳ ಮುನ್ನಡೆ ಸಿಕ್ಕಿತ್ತು
    ಮೈತ್ರಿ – 64649 ಮತ, ಬಿಜೆಪಿ – 72474

    4. ಕನಕಗಿರಿ: ಬಿಜೆಪಿಯ ಬಸವರಾಜ ದಡೇಸ್ಗೂರ ಶಾಸಕರಾಗಿದ್ದು, ಬಿಜೆಪಿಗೆ 7,296 ಮತಗಳ ಲೀಡ್ ಪಡೆದುಕೊಂಡಿತ್ತು.
    ಮೈತ್ರಿ – 69763 ಮತ, ಬಿಜೆಪಿ – 77059

    5. ಗಂಗಾವತಿ: ಬಿಜೆಪಿಯ ಪರಣ್ಣ ಮುನವಳ್ಳಿ ಶಾಸಕರಾಗಿದ್ದು, ಬಿಜೆಪಿಗೆ 2,536 ಮತಗಳ ಲೀಡ್ ಬಂದಿದೆ.
    ಮೈತ್ರಿ ಅಭ್ಯರ್ಥಿ – 67751 ಮತ, ಬಿಜೆಪಿ – 70287

    6. ಯಲಬುರ್ಗಾ: ಬಿಜೆಪಿಯ ಹಾಲಪ್ಪ ಆಚಾರ ಶಾಸಕರಾಗಿದ್ದು, ಬಿಜೆಪಿಗೆ 8,072 ಮತಗಳ ಮುನ್ನಡೆ ಸಿಕ್ಕಿತ್ತು.
    ಮೈತ್ರಿ ಅಭ್ಯರ್ಥಿ – 68549, ಬಿಜೆಪಿ-76621

    7. ಕೊಪ್ಪಳ: ಕಾಂಗ್ರೆಸ್ಸಿನ ರಾಘವೇಂದ್ರ ಹಿಟ್ನಾಳ್ ಶಾಸಕರಾಗಿದ್ದು, ಬಿಜೆಪಿಗೆ 11,678 ಮತಗಳ ಮುನ್ನಡೆ ಪಡೆದಿತ್ತು.
    ಮೈತ್ರಿ ಅಭ್ಯರ್ಥಿ – 79446, ಬಿಜೆಪಿ – 91124

    8. ಸಿರಗುಪ್ಪ: ಬಿಜೆಪಿಯ ಸೋಮಲಿಂಗಪ್ಪ ಶಾಸಕರಾಗಿದ್ದು, ಕಾಂಗ್ರೆಸ್ಸಿಗೆ 12,134 ಮತಗಳ ಲೀಡ್ ಬಂದಿದೆ.
    ಮೈತ್ರಿ ಅಭ್ಯರ್ಥಿ -73587, ಬಿಜೆಪಿ – 61453

    ಸಂಗಣ್ಣ ಕರಡಿ ಗೆಲುವಿಗೆ ಕಾರಣವೇನು?
    ಸಂಗಣ್ಣ ಕರಡಿ ಗೆಲುವಿಗೆ ಬಹುಮುಖ್ಯ ಕಾರಣವಾಗಿದ್ದು ಮೋದಿ ಅಲೆ ಎಂದರೆ ತಪ್ಪಾಗಲ್ಲ. ಯಾಕೆಂದರೆ ದೇಶದಲ್ಲಿ ಮೋದಿ ಪ್ರಭಾವ ಅಷ್ಟರ ಮಟ್ಟಿಗೆ ಇದೆ. ಲೋಕಸಮರದಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರಿ ಅಂತರದಲ್ಲಿ ಗೆಲುವು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಪಾತ್ರ ಅಪಾರವಾಗಿದೆ. ಅಲ್ಲದೆ ಕ್ಷೇತ್ರದಲ್ಲಿ ಸಂಗಣ್ಣ ಕರಡಿ ಅವರಿಗೆ ಹಿಂದೂ ಸಂಘಟನೆಗಳು ಹಾಗೂ ಸಂಘ ಪರಿವಾರದ ಬೆಂಬಲ, ಸಂಸದರಾಗಿ ಮತ್ತು ಶಾಸಕರಾಗಿ ಆಡಳಿತ ನಡೆಸಿದ ಅನುಭವ, ಜನರ ಬಳಿ ಜಾಸ್ತಿ ಒಡನಾಟ ಹೊಂದಿರುವುದೇ ಅವರು ಜಯ ಗಳಿಸುವಂತೆ ಮಾಡಿದೆ.

    ಅಲ್ಲದೆ ಲಿಂಗಾಯತ ಸಮುದಾಯದ ಮುಂಚೂಣಿ ನಾಯಕರಾಗಿ, ಆರ್.ಎಸ್.ಎಸ್. ಮೇಲುಸ್ತುವಾರಿಯನ್ನು ಉತ್ತಮವಾಗಿ ನಿಭಾಯಿಸಿಕೊಂಡು ಬಂದಿರುವುದು ಹಾಗೂ ಯುವ ಮತದಾರರ ಬೆಂಬಲದಿಂದ ಇಂದು ಲೋಕಸಮರದಲ್ಲಿ ಗೆದ್ದು ಯಶಸ್ಸಿನ ಪತದತ್ತ ಸಾಗಿದ್ದಾರೆ.

    ಆದರೆ ರಾಜಕೀಯ ಅನುಭವ ಕಡಿಮೆ ಇರುವುದು, ಜಿ.ಪಂ ಅಧ್ಯಕ್ಷರಾಗಿ ಒಮ್ಮಿಂದಲೆ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಇಳಿದಿದ್ದು, ಕುಟುಂಬ ರಾಜಕಾರಣ ಎಂಬ ಹಣೆ ಪಟ್ಟಿ ಇವರುವ ಕಾರಣಕ್ಕೆ ಇಂದು ರಾಜಶೇಕರ್ ಹಿತ್ನಾಳ ಸೋಲು ಕಂಡಿದ್ದಾರೆ. ಜೊತೆಗೆ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ ಇರುವುದು, ಜೆ.ಡಿ.ಎಸ್ ಕಾರ್ಯಕರ್ತರ ಕಡೆಗಣನೆ ಮಾಡಿರುವು ಹಾಗೂ ಮುಸ್ಲಿಂ ಮತಗಳು ವಿಂಗಡನೆ ಆದ ಹಿನ್ನೆಲೆ ಹಿತ್ನಾಳ ಸೋಲು ಅನುಭವಿಸಿದ್ದಾರೆ.

  • ನಾಳೆಯಿಂದ ಕರ್ನಾಟಕ ರಾಜಕಾರಣ ಕುರುಕ್ಷೇತ್ರ ಆಗುತ್ತೆ: ಬಚ್ಚೇಗೌಡ

    ನಾಳೆಯಿಂದ ಕರ್ನಾಟಕ ರಾಜಕಾರಣ ಕುರುಕ್ಷೇತ್ರ ಆಗುತ್ತೆ: ಬಚ್ಚೇಗೌಡ

    ಚಿಕ್ಕಬಳ್ಳಾಪುರ: ಕರ್ನಾಟಕ ರಾಜಕಾರಣ ನಾಳೆಯಿಂದ ಕುರುಕ್ಷೇತ್ರ ಆಗುತ್ತೆ. ಮೂರು-ನಾಲ್ಕು ದಿನದಲ್ಲಿ ಬಿಜೆಪಿ ನಾಯಕ ಯಡಿಯೂರಪ್ಪ ಸಿಎಂ ಆಗ್ತಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು, ಎರಡು, ಮೂರು, ನಾಲ್ಕು ಅಂತ ಎಣಿಸಿ ನೋಡಿ. ನಾಳೆಯಿಂದ ಕರ್ನಾಟಕ ರಾಜಕಾರಣ ಕುರುಕ್ಷೇತ್ರ ಆಗುತ್ತೆ. ಯಡಿಯೂರಪ್ಪ ಈ ಕುರುಕ್ಷೇತ್ರದಲ್ಲಿ ಗೆಲ್ಲುತ್ತಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮೋದಿ ಪ್ರಧಾನಿ ಆಗಬೇಕು ಎಂಬುದು ನನ್ನ ಆಸೆ ಅದು ನೆರವೇರುತ್ತಿದೆ. ಈಗ ಯಡಿಯೂರಪ್ಪ ಸಿಎಂ ಅಗಬೇಕು ಎಂಬುದೇ ನನ್ನ ಆಸೆಯಾಗಿದೆ. ಎರಡು ಮೂರು ದಿನ ಕಾದು ನೋಡಿ ಯಡಿಯೂರಪ್ಪ ಸಿಎಂ ಅಗ್ತಾರೆ ಎಂದರು. ಇದೇ ವೇಳೆ  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮಾಧ್ಯಮಗಳ ಎಕ್ಸಿಟ್ ಪೋಲ್ ಸಮೀಕ್ಷೆಗೆ ಬಚ್ಚೇಗೌಡರು ಪ್ರಶಂಸೆ ವ್ಯಕ್ತಪಡಿಸಿದರು.

  • ಕರ್ನಾಟಕದಲ್ಲಿ ಈ ಬಾರಿ ಇತಿಹಾಸ ಸೃಷ್ಟಿ – ಜನತೆಗೆ ಬಿಎಸ್‍ವೈ ಧನ್ಯವಾದ

    ಕರ್ನಾಟಕದಲ್ಲಿ ಈ ಬಾರಿ ಇತಿಹಾಸ ಸೃಷ್ಟಿ – ಜನತೆಗೆ ಬಿಎಸ್‍ವೈ ಧನ್ಯವಾದ

    ಬೆಂಗಳೂರು: ರಾಜ್ಯದ ಜನತೆ ಬಿಜೆಪಿಗೆ ಬೆಂಬಲ ಸೂಚಿಸಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬಿಜೆಪಿಗೆ ಬೆಂಬಲ ನೀಡಿರುವ ಜನರಿಗೆ ಅಭಿನಂದನೆಗಳು. ಬಿಜೆಪಿ ರಾಜ್ಯದಲ್ಲಿ ಮುನ್ನಡೆ ಸಾಧಿಸುತ್ತಿರುವುದು ಖುಷಿಯ ವಿಚಾರ. ಜೊತೆಗೆ ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್ ಮುನಿಯಪ್ಪ ಹೀನಾಯ ಸೋಲು ಅನುಭವಿಸಿರುವುದು ಇನ್ನೊಂದು ಸಂತೋಷದ ವಿಚಾರವಾಗಿದೆ. ಇದು ರಾಜ್ಯದ ಜನತೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಮೇಲೆ ನಂಬಿಕೆ ಇಟ್ಟಿರುವುದನ್ನು ತಿಳಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

    ಮೋದಿ ವಿರುದ್ಧ ಏಕವಚನದಲ್ಲಿ, ದುರಂಹಕಾರದಲ್ಲಿ ಮಾತಾನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಮುಖಭಂಗ ಆಗಿದೆ. ರಾಜ್ಯ ಹಾಗೂ ದೇಶದ ಜನರ ಬಳಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಜನತೆ ಬಿಜೆಪಿಗೆ ಶೇ.54 ರಷ್ಟು ಮತ ನೀಡಿ ಇತಿಹಾಸ ಸೃಷ್ಟಿಸಿದ್ದಾರೆ. ದೇಶದ ಇತಿಹಾಸದಲ್ಲಿ ಇದು ದಾಖಲೆ. ರಾಜ್ಯದ 24 ಕ್ಷೇತ್ರಗಳನ್ನ ಬಿಜೆಪಿ ಮುನ್ನಡೆ ಸಾಧಿಸಿದೆ. ಅದರಲ್ಲೂ ಕರಾವಳಿ ಭಾಗದ ಜನರಿಗೆ ವಿಶೇಷ ಅಭಿನಂದನೆ ತಿಳಿಸುತ್ತೇನೆ. ಆಡಳಿತ ರೂಢ ಮೈತ್ರಿ ಸರ್ಕಾರದ ಭ್ರಷ್ಟಚಾರ, ವರ್ಗಾವಣೆ ದಂಧೆ, ರೈತರ ಸಾಲ ಮನ್ನಾದ ಸುಳ್ಳು ಭರವಸೆಗೆ ಈಗ ಉತ್ತರ ಸಿಕ್ಕಿದೆ ಎಂದು ಟಾಂಗ್ ನೀಡಿದರು.

    ರಾಜ್ಯದ ಎರಡು ಕ್ಷೇತ್ರದಲ್ಲಿ ಉಪ-ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, ಚಿಂಚೊಳಿಯಲ್ಲಿ ಬಿಜೆಪಿ ಗೆದ್ದಿದೆ, ಆದರೆ ಕುಂದಗೋಳ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಹಿನ್ನಡೆಯಾಗಿದೆ ಎಂದರು.

    ಮಂಡ್ಯದಲ್ಲಿ ಸುಮಲತಾ ಗೆಲುವು ನಮಗೆ ಸಂತಸ ತಂದಿದೆ. ನೂರಾರು ಕೋಟಿ ಖರ್ಚು ಮಾಡಿ, ಹಣ ಬಲ ತೋರಿದ ಸಿಎಂ ಕುಮಾರಸ್ವಾಮಿ ಅವರಿಗೆ ಮಂಡ್ಯ ಜನ ಬುದ್ಧಿ ಕಲಿಸಿದ್ದಾರೆ. ಇದಕ್ಕಾಗಿ ಮಂಡ್ಯ ಜನರಿಗೆ ವಿಶೇಷ ಧನ್ಯವಾದಗಳು. 24 ಕ್ಷೇತ್ರದಲ್ಲಿ ಗೆದ್ದಷ್ಟೇ ಖುಷಿ ಸುಮಲತಾ ಗೆಲುವಿನಿಂದ ಆಗಿದೆ ಎಂದು ಸಂತೋಷವನ್ನು ಹಂಚಿಕೊಂಡರು.

    ಮೈತ್ರಿ ಸರ್ಕಾರ ಬೀಳಿಸುವ ವಿಚಾರವಾಗಿ ಮತನಾಡಿ, ಈಗ ಏನು ಹೇಳಲ್ಲ. ಈಗ ಅವರೇ ತೀರ್ಮಾನ ಮಾಡಬೇಕಿದೆ. ಯಾರ ಮೇಲೂ ಒತ್ತಡ ಹಾಕಲ್ಲ, ನಾನು ಕಾಯುತ್ತೇನೆ. ಅವರ ಆಡಳಿತಕ್ಕೆ ಈಗ ಉತ್ತರ ಸಿಕ್ಕಿದೆ. ಎಚ್. ವಿಶ್ವನಾಥ್, ರೋಷನ್ ಭೇಗ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಅವರು ಯಾರೂ ನನ್ನ ಸಂಪರ್ಕ ಮಾಡಿಲ್ಲ. ಅದರ ಬಗ್ಗೆ ನಾನು ಏನೂ ಹೇಳಲ್ಲ. ನಾನು ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ನಾನು ಈಗ ಏನೂ ಮಾತನಾಡಲ್ಲ ಎಂದರು. ಬಳಿಕ ಮತ್ತೆ ಚುನಾವಣೆಗೆ ಹೋಗುತ್ತೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸದ್ಯ ಕೇಂದ್ರ ನಾಯಕರು ಹೇಳಿದಂತೆ ಕೇಳುವೆ. ಅವರ ಅಭಿಪ್ರಾಯಕ್ಕೆ ನಾನು ಬದ್ಧ ಎಂದು ತಿಳಿಸಿದರು.

  • ಆರಂಭಿಕ ಸುತ್ತುಗಳಲ್ಲಿ ಮಂಡ್ಯದ ಮೂವರು ಸುಮಲತಾರಿಗೆ 1,210 ಮತ

    ಆರಂಭಿಕ ಸುತ್ತುಗಳಲ್ಲಿ ಮಂಡ್ಯದ ಮೂವರು ಸುಮಲತಾರಿಗೆ 1,210 ಮತ

    ಮಂಡ್ಯ: ಲೋಕಸಭಾ ಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಈ ನಡುವೆ ಭಾರೀ ಸದ್ದು ಮಾಡುತ್ತಿರುವ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಅವರನ್ನು ಹೊರತುಪಡಿಸಿ ಕಣಕ್ಕಿಳಿದಿದ್ದ ಸುಮಲತಾ ಹೆಸರಿನ ಅಭ್ಯರ್ಥಿಗಳು ಆರಂಭಿಕ ಸುತ್ತುಗಳಲ್ಲಿ ಸುಮಾರು 1,210 ಮತಗಳನ್ನು ಪಡೆದಿದ್ದಾರೆ.

    ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದಲೂ ಮಂಡ್ಯ ಕ್ಷೇತ್ರ ಭಾರೀ ಸುದ್ದಿಯಲ್ಲಿದೆ. ಇಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ಅಭ್ಯರ್ಥಿಗಳ ಹೆಸರಿನಲ್ಲೇ ಭಾರೀ ರಾಜಕೀಯ ನಡೆದಿತ್ತು. ಅದರಲ್ಲೂ ಸುಮಲತಾ ಅಂಬರೀಶ್ ಹೊರತುಪಡಿಸಿ ಸುಮಲತಾ ಹೆಸರಿರುವ ಇತರೇ 3 ಮಂದಿ ಅಭ್ಯರ್ಥಿಗಳು ಕೂಡ ಸಖತ್ ಸುದ್ದಿಯಾಗಿದ್ದರು. ಸದ್ಯ ಈವರೆಗೆ ನಡೆದಿರುವ ಮತ ಏಣಿಕೆಯಲ್ಲಿ 32,183 ಮತಗಳನ್ನು ನಿಖಿಲ್ ಕುಮಾರಸ್ವಾಮಿ ಗಳಿಸಿದ್ದರೆ ಸುಮಲತಾ ಅಂಬರೀಶ್ 30,311 ಮತಗಳನ್ನು ಪಡೆದಿದ್ದಾರೆ. ಅಲ್ಲದೆ 1,872 ಮತಗಳ ಅಂತರದಿಂದ ನಿಖಿಲ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹಾಗೆಯೇ ಉಳಿದ ಮೂವರು ಸುಮಲತಾ ಹೆಸರಿನ ಅಭ್ಯರ್ಥಿಗಳು ಒಟ್ಟು 1,210 ಮತಗಳನ್ನು ಪಡೆದಿದ್ದಾರೆ. ಕ್ರ.ಸಂ19- ಸುಮಲತ 549, ಕ್ರ.ಸಂ21- ಎಂ.ಸುಮಲತ 478, ಕ್ರ.ಸಂ22- ಸುಮಲತಾ 183 ಮತ ಗಳಿಸಿದ್ದಾರೆ.

    ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ಪ್ರತಿಷ್ಠೆಯ ಕಣವಾಗಿ ಏರ್ಪಟ್ಟಿತ್ತು. ಈ ಇಬ್ಬರು ಅಭ್ಯರ್ಥಿಗಳ ನಡುವೆ ಪ್ರಚಾರದ ವೇಳೆ ಹಾಗೂ ಮತದಾನದ ವೇಳೆ ನಡೆದ ಸಣ್ಣ ಗಲಾಟೆ, ಪರ ವಿರೋಧ ಹೇಳಿಕೆಗಳಿಂದಲೇ ಮಂಡ್ಯ ಅಖಾಡ ಹೆಚ್ಚು ಸದ್ದು ಮಾಡಿತ್ತು.

  • ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ

    ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಭಾರೀ ಹಿನ್ನಡೆ

    ನವದೆಹಲಿ: ಇಂದು ಲೋಕಸಮರದ ಮಹಾತೀರ್ಪಿನ ಹಿನ್ನೆಲೆ ಮತ ಏಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಪ್ರಧಾನಿ ಅಭ್ಯರ್ಥಿಯಾಗಿರುವ ಕೆಪಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಅಮೇಥಿಯಲ್ಲಿ ಭಾರಿ ಹಿನ್ನಡೆಯಾಗಿದೆ.

    ರಾಹುಲ್ ಗಾಂಧಿಯವರು ಅಮೆಥಿ ಹಾಗೂ ವಯನಾಡು ಎರಡು ಕ್ಷೇತ್ರದಿಂದ ಲೋಕಸಭಾ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ನಿಂತಿದ್ದ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಗೆ ಆರಂಭಿಕ ಸುತ್ತುಗಳಲ್ಲಿ 5 ಸಾವಿರ ಮತಗಳಿಂದ ಹಿನ್ನಡೆಯಲ್ಲಿದ್ದಾರೆ.

    ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿ ಮುನ್ನಡೆಯಲ್ಲಿದ್ದಾರೆ. ಉತ್ತರ ಪ್ರದೇಶದ ರಾಯ್‍ಬರೇಲಿಯಲ್ಲಿ ಕಣಕ್ಕೆ ಇಳಿದಿರುವ ಸೋನಿಯಾ ಗಾಂಧಿ ಮುನ್ನಡೆಯಲಿದ್ದಾರೆ.

  • ರೋಷನ್ ಬೇಗ್ ಕ್ಷೇತ್ರದಲ್ಲೇ ನಾನು ಲೀಡ್‍ನಲ್ಲಿ ಗೆಲ್ತೇನೆ: ರಿಜ್ವಾನ್ ಅರ್ಷದ್

    ರೋಷನ್ ಬೇಗ್ ಕ್ಷೇತ್ರದಲ್ಲೇ ನಾನು ಲೀಡ್‍ನಲ್ಲಿ ಗೆಲ್ತೇನೆ: ರಿಜ್ವಾನ್ ಅರ್ಷದ್

    ಬೆಂಗಳೂರು: ಇಂದು ಲೋಕಸಮರದ ಮಹಾತೀರ್ಪು ಹೊರಬೀಳಲಿದೆ. ಯಾವ ಪಕ್ಷ ಬಹುಮತ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ ಎಂದು ಇಡೀ ದೇಶವೇ ಕಾದು ಕೂತಿದೆ. ಈ ನಡುವೆ ಬೆಳ್ಳಂಬೆಳಗ್ಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಶಾಸಕ ರೋಷನ್ ಬೇಗ್ ವಿರುದ್ಧ ಕಿಡಿಕಾರಿದ್ದಾರೆ.

    ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಾಜಿನಗರ ಶಾಸಕ ರೋಷನ್ ಬೇಗ್ ಮೇಲೆ ಕಿಡಿಕಾರಿದರು. ರೋಷನ್ ಬೇಗ್ ಅವರು ತಾನಿಲ್ಲದೇ ಇದ್ದರೆ ನಾನು ಗೆಲ್ಲೋಕೆ ಸಾಧ್ಯವಿಲ್ಲ ಅಂದುಕೊಂಡಿದ್ದಾರೆ. ಆದರೆ ನನಗೆ ಅವರದ್ದೇ ಕ್ಷೇತ್ರ ಶಿವಾಜಿನಗರದಲ್ಲಿ ಜನ ಬೆಂಬಲಿಸಿದ್ದಾರೆ. ಅವರು ತಾನೇ ದೊಡ್ಡ ಲೀಡರ್ ಅಂದ್ಕೊಂಡಿದ್ದಾರೆ. ನಾನು ಕನಿಷ್ಠ 50 ಸಾವಿರ ಬಹುಮತದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಜನ ಕೊಟ್ಟಿದ್ದಾರೆ ಎಂದು ಹೇಳಿದರು.

    ಮೌಂಟ್ ಕಾರ್ಮೆಲ್ ಕಾಲೇಜ್‍ನಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮತ ಏಣಿಕೆ ನಡೆಯುತ್ತಿದೆ. ಹೀಗಾಗಿ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸೇರಿರುವ ಕೈ ಕಾರ್ಯಕರ್ತರು ಸದ್ಯ ಕೌಂಟಿಂಗ್ ಸೆಂಟರ್‍ಗೆ ಬಂದಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಎಲ್ಲ ಸಮಯದಲ್ಲಿ ಸತ್ಯವಾಗಲ್ಲ. ದೇಶದ ಪರ್ಸೆಂಟೆಜ್ ಲೆಕ್ಕದಲ್ಲಿ ಚುನಾವಣಾ ಸಮೀಕ್ಷೆ ಮಾಡಿದ್ದಾರೆ. ಕ್ಷೇತ್ರವಾರು ಸಮೀಕ್ಷೆ ಮಾಡಿಲ್ಲ. ಚುನಾವಣೋತ್ತರ ಸಮೀಕ್ಷೆಗಳೇ ನಿಜವಾದ್ರೆ ಚುನಾವಣೆ ಫಲಿತಾಂಶ ಯಾಕೆ ಬೇಕು ಎಂದು ರಿಜ್ವಾನ್ ಅರ್ಷದ್ ಪ್ರತಿಕ್ರಿಯಿಸಿದರು.

  • ಇವಿಎಂ ಮೇಲೆ ನಮಗೆ ನಂಬಿಕೆ ಇಲ್ಲ, ತನಿಖೆಯಾಗಲಿ – ಮುನಿಯಪ್ಪ

    ಇವಿಎಂ ಮೇಲೆ ನಮಗೆ ನಂಬಿಕೆ ಇಲ್ಲ, ತನಿಖೆಯಾಗಲಿ – ಮುನಿಯಪ್ಪ

    ಕೋಲಾರ: ಇವಿಎಂ ಮೇಲೆ ನಮಗೆ ನಂಬಿಕೆ ಇಲ್ಲ, ತನಿಖೆಯಾಗಬೇಕು ಎಂದು ಸಂಸದ ಕೆ.ಎಚ್ ಮುನಿಯಪ್ಪ ಆಗ್ರಹಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೇಂದ್ರ ಸರ್ಕಾರ ಧಕ್ಕೆ ತಂದಿದೆ. ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇವಿಎಂ ಮೇಲೆ ನಮಗೆ ನಂಬಿಕೆ ಇಲ್ಲ. ಈ ಕುರಿತು ಚುನಾವಣಾ ಆಯೋಗ ತನಿಖೆ ನಡೆಸಬೇಕು. ಎಲ್ಲಾ ಪ್ರತಿಪಕ್ಷ ನಾಯಕರೂ ಕೂಡ ಇವಿಎಂ ವಿರುದ್ಧ ತನಿಖೆ ನಡೆಸುವಂತೆ ಕೇಳಿಕೊಳ್ಳುತ್ತಿದ್ದಾರೆ ಎಂದು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದರು.

    ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಈ ಸಂಬಂಧ ಮನವಿ ಮಾಡಿದ್ದೇವೆ. ಶೇ.50 ರಷ್ಟು ವಿವಿ ಪ್ಯಾಟ್ ಎಣಿಕೆಯಾಗಲಿ ಎಂದು ಕೋರಿದ್ದೇವೆ. ಈ ಹಿಂದೆಯೇ ಎಲ್ಲಾ 17 ವಿರೋಧ ಪಕ್ಷದ ಒಕ್ಕೂಟಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇವೆ. ಮಂಗಳವಾರ ಕೂಡ 21 ಪಕ್ಷಗಳು ಇವಿಎಂ ವಿರುದ್ಧ ತನಿಖೆ ಆಗಬೇಕು ಎಂದು ಮನವಿ ಮಾಡಿದೆ. ಇವಿಎಂ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇಲ್ಲದಾಗಿದೆ. ಬ್ಯಾಲೆಟ್ ಪೇಪರ್ ಮುಖಾಂತರವೇ ಚುನಾವಣೆ ನಡೆಯಬೇಕು ಎಂದು ಕೋರಿದ್ದೇವೆ. ಚುನಾವಣಾ ಆಯೋಗಕ್ಕೆ ಭೇಟಿ ನೀಡಿ, ಶೇ.50 ರಷ್ಟು ವಿವಿ ಪ್ಯಾಟ್ ಎಣಿಕೆಯಾಗಬೇಕು, ಆ ಮುಖಾಂತರ ನಿಜಾಂಶ ಹೊರಬರುತ್ತದೆ ಎಂದು ಹೇಳಿದ್ದೇವೆ. ಆದರೆ ಯಾವುದಕ್ಕೂ ಸರಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಹರಿಹಾಯ್ದರು.

    ಈಗ ಬಂದಿರುವುದು ಎಕ್ಸಿಟ್ ಪೋಲ್ ಸಮೀಕ್ಷೆ, ಎಕ್ಸಾಕ್ಟ್ ಪೋಲ್ ಅಲ್ಲ. ಎಕ್ಸಿಟ್ ಪೋಲ್‍ಗೆ ತದ್ವಿರುದ್ಧವಾದ ಫಲಿತಾಂಶ ಈ ಬಾರಿ ದೇಶದಲ್ಲಿ ಬರಲಿದೆ. ರಾಜಸ್ಥಾನ, ಮಧ್ಯಪ್ರದೇಶ ಮುಖ್ಯಸ್ಥರು ಹಾಗೂ ಎಐಸಿಸಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಕೋಲಾರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ಆದರೆ ಲೀಡ್ ಬಗ್ಗೆ ಮಾತನಾಡಲ್ಲ ಎಂದು ತಿಳಿಸಿದರು.

    ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರು ತಮ್ಮ ನೋವನ್ನ ಹೇಳಿಕೊಂಡಿದ್ದಾರೆ. ಪಕ್ಷ ಇದೆ ಪಕ್ಷದ ನಾಯಕರ ಬಳಿ ತಮ್ಮ ಅಸಮಾಧಾನವನ್ನು ಹೇಳಿಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಮುನಿಯಪ್ಪ ಅವರು ಪ್ರತಿಕ್ರಿಯಿಸಿದರು.

  • ಪ್ರಕಾಶ್ ಹುಕ್ಕೇರಿ ಗೆಲುವಿಗೆ ತನ್ನ ಮೀಸೆ ಪಣಕ್ಕಿಟ್ಟ ಅಭಿಮಾನಿ!

    ಪ್ರಕಾಶ್ ಹುಕ್ಕೇರಿ ಗೆಲುವಿಗೆ ತನ್ನ ಮೀಸೆ ಪಣಕ್ಕಿಟ್ಟ ಅಭಿಮಾನಿ!

    ಬೆಳಗಾವಿ(ಚಿಕ್ಕೋಡಿ): ಲೋಕಸಭಾ ಚುನಾವಣೆಯ ಫಲಿತಾಂಶ ಗುರುವಾರ ಹೊರಬೀಳಲಿದೆ. ಈ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಗೆಲುವಿಗೆ ಅಭಿಮಾನಿಯೊಬ್ಬರು ತಮ್ಮ ಮೀಸೆಯನ್ನೇ ಪಣಕ್ಕಿಟ್ಟಿದ್ದಾರೆ.

    ಹೌದು. ಚುನಾವಣೆ ವೇಳೆ ಹಣ, ಆಸ್ತಿ ಬೆಟ್ಟಿಂಗ್ ಕಟ್ಟೋದನ್ನ ನೋಡಿದ್ದೀವಿ ಇದೇನಪ್ಪ ಮೀಸೆ ಬೆಟ್ಟಿಂಗ್ ಎಂದು ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಚಿಕ್ಕೋಡಿ ಮಾಜಿ ಪುರಸಭೆ ಸದಸ್ಯ ರವಿ ಮಾಳಿ ಕಳೆದ 20 ವರ್ಷಗಳಿಂದ ಪ್ರೀತಿಯಿಂದ ಬೆಳೆಸಿರುವ ಮೀಸೆ-ಗಡ್ಡ ಪಣಕ್ಕೆ ಇಟ್ಟಿದ್ದಾರೆ. ಪ್ರಕಾಶ್ ಹುಕ್ಕೇರಿ ಅವರು ಈ ಭಾರಿ ಲೋಕಸಮರದಲ್ಲಿ ಗೆಲ್ಲದಿದ್ದರೆ ಅರ್ಧ ಮೀಸೆ ಅರ್ಧ ಗಡ್ಡ ತೆಗೆಯುತ್ತೇನೆ. ಹಾಗೆಯೇ ಚಿಕ್ಕೋಡಿಯಲ್ಲಿ ಪಟ್ಟಣದಲ್ಲಿ ಓಡಾಡುತ್ತೇನೆ ಎಂದು ಚಾಲೆಂಜ್ ಕಟ್ಟಿದ್ದಾರೆ.

    ಈ ಬಗ್ಗೆ ರವಿ ಅವರನ್ನ ಕೇಳಿದರೆ, ಚಿಕ್ಕೋಡಿಯಲ್ಲಿ ಪ್ರಕಾಶ ಹುಕ್ಕೇರಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಯಾವುದೇ ಕಾರಣಕ್ಕೂ ಗೆಲ್ಲುವದಿಲ್ಲ ಎನ್ನುವುದು ಗೊತ್ತು. ಆದ್ದರಿಂದ ನಮ್ಮ ನಾಯಕರಿಗಾಗಿ ಈ ಮೀಸೆ ಬೆಟ್ಟಿಂಗ್ ಕಟ್ಟಿದ್ದೇನೆ ಎಂದು ಹೇಳಿದ್ದಾರೆ.

    ನಾಳೆ ಪ್ರಕಟವಾಗುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಈ ನಡುವೆ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಬೆಟ್ಟಿಂಗ್ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಈ ಮಧ್ಯೆ ಈ ಮೀಸೆ ಬೆಟ್ಟಿಂಗ್ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಫಲಿತಾಂಶದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

  • ನಿಖಿಲ್ ಗೆಲುವಿಗೆ ಮೇಕೆ ಬಿಟ್ಟು ಹರಕೆ ಹೊತ್ತುಕೊಂಡ ಅಭಿಮಾನಿಗಳು!

    ನಿಖಿಲ್ ಗೆಲುವಿಗೆ ಮೇಕೆ ಬಿಟ್ಟು ಹರಕೆ ಹೊತ್ತುಕೊಂಡ ಅಭಿಮಾನಿಗಳು!

    ಮಂಡ್ಯ: ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆಯೇ ತಾವು ಬೆಂಬಲಿಸುವ ಅಭ್ಯರ್ಥಿಗಳ ಗೆಲುವಿಗಾಗಿ ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಹರಕೆ ಹೊತ್ತುಕೊಳ್ಳುವುದು ಹೆಚ್ಚಾಗುತ್ತಿದೆ. ಸೋಮವಾರದಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಅಭಿಮಾನಿ ಆಯ್ತು, ಇಂದು ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವಿಗಾಗಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

    ಸೋಮವಾರ ಸುಮಲತಾ ಅವರ ಅಭಿಮಾನಿಗಳು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿಯಲ್ಲಿಯ ಶಿವ ದೇವಾಲಯದಲದಲ್ಲಿ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದ್ದರು. ಹಾಗೆಯೇ ಇಂದು ನಿಖಿಲ್ ಅವರ ಅಭಿಮಾನಿಗಳಿಂದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದ ಅಹಲ್ಯದೇವಿ ಪೂಜೆ ಸಲ್ಲಿಸಲಾಗಿದೆ. ಜೊತೆಗೆ ತನ್ನ ನೆಚ್ಚಿನ ನಾಯಕನ ಗೆಲುವಿಗೆ ದೇವರಿಗೆ ಮೇಕೆ ಬಿಟ್ಟು ಅಭಿಮಾನಿಗಳು ಹರಕೆ ಹೊತ್ತುಕೊಳ್ಳುತ್ತಿದ್ದಾರೆ. ಅಲ್ಲದೆ ದೇವರಿಗೆ ಉರುಳು ಸೇವೆಯನ್ನು ಕೂಡ ಸಲ್ಲಿಸಿದ್ದಾರೆ.

    ಚುನಾವಣೋತ್ತರ ಸಮೀಕ್ಷೆಯ ಆಧಾರದ ಮೇಲೆ ಗೆಲುವು ತಮ್ಮದೇ ಎಂದು ನಿಖಿಲ್ ಅವರ ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 10 ಎಕ್ಸಿಟ್ ಪೋಲ್ ಸಮೀಕ್ಷೆ ಪೈಕಿ 6 ರಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಬಂದಿದೆ. ಹೀಗಾಗಿ ಗೆಲುವು ನಮ್ಮದೇ ಅನ್ನೋದು ನಿಖಿಲ್ ಅಭಿಮಾನಿಗಳ ಅಭಿಪ್ರಾಯವಾಗಿದೆ. ಇತ್ತ ಸುಮಲತಾ ಅವರ ಅಭಿಮಾನಿಗಳು ಕೂಡ ಗೆಲುವು ನಮ್ಮದೇ ಎನ್ನುತ್ತಿದ್ದಾರೆ.

    ಸಮೀಕ್ಷೆ ವರದಿ ಬಹಿರಂಗವಾದ ನಂತರ ಗೆಲುವು ನಮ್ಮದೇ ಎಂದು ಎರಡೂ ಅಭ್ಯರ್ಥಿಗಳ ಅಭಿಮಾನಿಗಳ ಹೇಳುತ್ತಿದ್ದಾರೆ. ಹೀಗಾಗಿ ಗೆಲುವಿಗೆ ದೇವರ ಆಶೀರ್ವಾದಕ್ಕಾಗಿ ಅಭಿಮಾನಿಗಳು ಹರಕೆಯ ಮೊರೆ ಹೋಗುತ್ತಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆಯುತ್ತಿದೆ ಎನ್ನಲಾಗಿದೆ.