Tag: LokSabha election

  • ಬಿಜೆಪಿ ಟಿಕೆಟ್‌ ಹೆಸರಲ್ಲಿ ವಂಚನೆ – ಜೋಶಿ ಸಹೋದರ ಗೋಪಾಲ್‌ ಜೋಶಿ ಅರೆಸ್ಟ್‌

    ಬಿಜೆಪಿ ಟಿಕೆಟ್‌ ಹೆಸರಲ್ಲಿ ವಂಚನೆ – ಜೋಶಿ ಸಹೋದರ ಗೋಪಾಲ್‌ ಜೋಶಿ ಅರೆಸ್ಟ್‌

    ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ (Loksabha Election) ಬಿಜೆಪಿ ಟಿಕೆಟ್​ ಕೊಡಿಸುವುದಾಗಿ 2.25 ಕೋಟಿ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಅವರ ಸಹೋದರ ಗೋಪಾಲ್​ ಜೋಶಿ (Gopal Joshi) ಅವರನ್ನು ಹುಬ್ಬಳ್ಳಿಯಲ್ಲಿ ಬಂಧಿಸಲಾಗಿದೆ.

    ಎಸಿಪಿ ಚಂದನ್ (ACP Chandan)​ ಅವರ ನೇತೃತ್ವದಲ್ಲಿ ಬೆಂಗಳೂರಿನ ಬಸವೇಶ್ವರ ನಗರ ಠಾಣಾ ಪೊಲೀಸರು ಗೋಪಾಲ್‌ ಜೋಶಿ ಅವರನ್ನು ಬಂಧಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಗೋಪಾಲ್ ಜೋಶಿ ತಲೆಮರೆಸಿಕೊಂಡಿದ್ದರು.

    ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಿದ ಬಳಿಕ ಹುಬ್ಬಳ್ಳಿಯ ಇಂದಿರಾ ಕಾಲೋನಿಯಲ್ಲಿನ ಗೋಪಾಲ ಜೋಶಿ ಅವರ ಮನೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ದೂರುದಾರೆ ಸುನೀತಾ ಚೌಹ್ವಾಣ್ ಸಹ ಕೇಶ್ವಾಪುರ ಠಾಣೆ ಆಗಮಿಸಿದ್ದು ಅವರಿಂದ ಪೊಲೀಸರು ಹೇಳಿಕೆ ಪಡೆಯುತ್ತಿದ್ದಾರೆ.

    ಬಿಜೆಪಿ ಮಾಜಿ ಶಾಸಕ ದೇವಾನಂದ್ ಸಿಂಗ್ ಚವ್ಹಾಣ್ ಅವರ ಪತ್ನಿ ಸುನಿತಾ ಚವ್ಹಾಣ್​ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ಪೊಲೀಸರು ಗೋಪಾಲ್ ಜೋಶಿ, ವಿಜಯಲಕ್ಷ್ಮೀ ಹಾಗೂ ಅಜಯ್ ಜೋಶಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಪೊಲೀಸರು ಆರೋಪಿಗಳನ್ನು ಬೆಂಗಳೂರಿಗೆ ಕರೆತರಲು ಸಿದ್ಧತೆ ನಡೆಸುತ್ತಿದ್ದಾರೆ.

    ಯಾವುದೇ ಸಂಬಂಧ ಇಲ್ಲ:
    ಗೋಪಾಲ್ ಜೋಶಿ ನನ್ನ ಸಹೋದರ ಅದರಲ್ಲಿ ಯಾವುದೇ ಅನುಮಾನವಿಲ್ಲ. ಈಗ ಅವರಿಗೂ ನನಗೂ ಯಾವುದೇ ಕೌಟುಂಬಿಕ ಹಾಗೂ ಹಣಕಾಸಿಕ ಸಂಬಂಧ ಇಲ್ಲ ಎಂದು ಪ್ರಹ್ಲಾದ್‌ ಜೋಶಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು.

    ನನ್ನ ಹಿರಿಯ ಸಹೋದರ ಗೋಪಾಲ್ ಜೋಶಿ ಅವರು ನಾನು ಬೇರೆಯಾಗಿ 33 ವರ್ಷಗಳು ಕಳೆದಿವೆ. ಈ ಹಿಂದೆಯೂ ಅವರ ವಿರುದ್ಧ ಎರಡು ಸಲ ಆರೋಪ ಕೇಳಿ ಬಂದಿತ್ತು. ಅದಕ್ಕಾಗಿ ನಾನು ಹಿಂದೆಯೇ ಗೋಪಾಲ್ ಜೋಶಿ ಅವರೊಂದಿಗೆ ನನ್ನ ಹೆಸರು ಲಿಂಕ್ ಮಾಡಬಾರದು ಎಂದು ಕೋರ್ಟ್‌ನಿಂದ ಆದೇಶ ತಂದಿದ್ದೇನೆ. ಸಾಮಾಜಿಕವಾಗಿ ಆರ್ಥಿಕವಾಗಿ ಯಾವುದೇ ಸಂಬಂಧ ಇಲ್ಲ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

     

  • ಜಾತಿವಾರು ಡಿಸಿಎಂ ಹುದ್ದೆ ನೀಡಿದ್ರೆ ತಪ್ಪೇನು : ಸಚಿವ ರಾಜಣ್ಣ ಪ್ರಶ್ನೆ

    ಜಾತಿವಾರು ಡಿಸಿಎಂ ಹುದ್ದೆ ನೀಡಿದ್ರೆ ತಪ್ಪೇನು : ಸಚಿವ ರಾಜಣ್ಣ ಪ್ರಶ್ನೆ

    ಬಾಗಲಕೋಟೆ: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಹೆಚ್ಚುವರಿ ಡಿಸಿಎಂ ಕೂಗು ಕೇಳಿಬರತೊಡಗಿದೆ. ಇಂದು ಕೂಡ, ಜಾತಿವಾರು ಡಿಸಿಎಂ ಹುದ್ದೆ (Caste Wise DCM Post) ಸೃಷ್ಟಿಗೆ ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಆಗ್ರಹಿಸಿದ್ದಾರೆ. ಜಾತಿವಾರು ಡಿಸಿಎಂ ಹುದ್ದೆ ಸೃಷ್ಟಿಸಿದರೆ ಏನು ನಷ್ಟ ಆಗುತ್ತದೆ? ನೀಡಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ (Lok Sabha Election) ಪೂರ್ವದಲ್ಲೂ ಡಿಸಿಎಂ ಹುದ್ದೆಗೆ ಬೇಡಿಕೆ ಇತ್ತು. ಬಿಜೆಪಿಯಲ್ಲಿ ಈ ತರಹ ಡಿಸಿಎಂ ಹುದ್ದೆ ನೀಡಲಾಗಿತ್ತು. ಡಿಸಿಎಂ ಹುದ್ದೆಯಿಂದ ಹೆಚ್ಚಿನದೇನು ಕೊಡಬೇಕಿಲ್ಲವಲ್ಲ. ಎಲ್ಲ ಸಮುದಾಯದವರಿಗೂ ತಮ್ಮವರಿಗೆ ಹುದ್ದೆ ಸಿಗಬೇಕು ಎನ್ನುವ ಆಸೆ ಇರುತ್ತದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ರಾಮಮಂದಿರದಲ್ಲಿ ಭಕ್ತರೆಲ್ಲಾ ಸಮಾನರು – ಅರ್ಚಕರು ವಿಐಪಿಗಳಿಗೆ ತಿಲಕ ಇಡುವಂತಿಲ್ಲ

     

    ಸಮುದಾಯ ಆಧಾರಿತ ಡಿಸಿಎಂ ಹುದ್ದೆ ಆಗಬೇಕು. ಈ ಬಗ್ಗೆ ಬೇಡಿಕೆ ಇದ್ದೆ ಇದೆ. ಆದರೆ ನಾನು ಡಿಸಿಎಂ ಹುದ್ದೆ ಆಕಾಂಕ್ಷಿ ಅಲ್ಲ. ಮುಂದೆ ನಾನು ಚುನಾವಣೆಗೂ ನಿಲ್ಲುವುದಿಲ್ಲ ಎಂದು ಹೇಳುವ ಮೂಲಕ ಚುನಾವಣಾ ರಾಜಕೀಯಕ್ಕೆ ಕೆ.ಎನ್.ರಾಜಣ್ಣ ನಿವೃತ್ತಿ ಘೋಷಿಸಿದರು.

    ಲಿಂಗಾಯತ, ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಡಿಸಿಎಂ ಹುದ್ದೆ ಬೇಕು ಎನ್ನುವ ಬೇಡಿಕೆ ಇದೆ. ಸಚಿವ ಜಮೀರ್ ಅಹ್ಮದ್ ಸಹ ಹೇಳಿದ್ದಾರೆ. ವಿವಿಧ ಸಮುದಾಯಗಳಿಗೆ ಡಿಸಿಎಂ ಹುದ್ದೆ ನೀಡಿದರೆ ತಪ್ಪೇನಿಲ್ಲ ಎಂದರು.

     

  • ಚುನಾವಣೆಯಲ್ಲಿ ಸೋತ್ರೂ ನೈತಿಕವಾಗಿ ನಾವು ಗೆದ್ದಿದ್ದೇವೆ: ರಮಾನಾಥ ರೈ

    ಚುನಾವಣೆಯಲ್ಲಿ ಸೋತ್ರೂ ನೈತಿಕವಾಗಿ ನಾವು ಗೆದ್ದಿದ್ದೇವೆ: ರಮಾನಾಥ ರೈ

    ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋತರೂ ನಾವು ನೈತಿಕವಾಗಿ ಗೆದ್ದಿದ್ದೇವೆ ಎಂದು ಮಾಜಿ ಸಚಿವ ರಮಾನಾಥ ರೈ (Ramanatha Rai) ಹೇಳಿದ್ದಾರೆ.

    ಚುನಾವಣಾ ಫಲಿತಾಂಶದ ಕುರಿತು ಮಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ನೈತಿಕವಾಗಿ ಸೋತಿದ್ದಾರೆ. ಚಾರ್ ಸೊ ಪಾರ್ ಅನ್ನುತ್ತಿದ್ದವರು ಈಗ ಅಧಿಕಾರ ಉಳಿಸಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ ಎಂದರು.

    ಬೇರೆ ಬೇರೆ ರೀತಿಯಲ್ಲಿ ನಮ್ಮ ಒಕ್ಕೂಟವನ್ನ ಸೋಲಿಸುವ ಕೆಲಸ ಮಾಡಿದ್ದಾರೆ. ಇಡಿ, ಐಟಿ ಬಳಸಿ ನಮ್ಮ ಬ್ಯಾಂಕ್ ಖಾತೆ, ಹಣವನ್ನ ಫ್ರೀಜ್ ಮಾಡುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಲೋಕಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಎನ್‌ಡಿಎ 293, ಇಂಡಿಯಾ ಒಕ್ಕೂಟ 232 ಮತ್ತು ಇತರರು 18 ಸ್ಥಾನಗಳನ್ನು ಗೆದ್ದಿದ್ದಾರೆ. ಬಹುಮತಕ್ಕೆ 272 ಸದಸ್ಯರ ಅಗತ್ಯವಿದೆ.

  • 2047 ರವರೆಗೆ 24×7 ಕೆಲಸ ಮಾಡಬೇಕೆಂದು ದೇವರು ನನಗೆ ಆದೇಶಿಸಿದ್ದಾನೆ ಎಂದು ನಂಬಿದ್ದೇನೆ: ಮೋದಿ

    2047 ರವರೆಗೆ 24×7 ಕೆಲಸ ಮಾಡಬೇಕೆಂದು ದೇವರು ನನಗೆ ಆದೇಶಿಸಿದ್ದಾನೆ ಎಂದು ನಂಬಿದ್ದೇನೆ: ಮೋದಿ

    – ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಕಳುಹಿಸಿದ್ದಾನೆ
    – ರಾಜೀವ್‌ ಗಾಂಧಿ ಮೃತಪಟ್ಟಾಗ 22 ದಿನ ಚುನಾವಣೆ ಮುಂದೂಡಲಾಗಿತ್ತು

    ನವದೆಹಲಿ: ಅಭಿವೃದ್ಧಿ ಹೊಂದಿದ ಭಾರತದ (India) ಗುರಿಯನ್ನು ಸಾಧಿಸಲು ನಾನು 2047 ರವರೆಗೆ 24×7 ಕೆಲಸ ಮಾಡಬೇಕೆಂದು ದೇವರು ನನಗೆ ಆದೇಶಿಸಿದ್ದಾನೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿ ನಾನು ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

    ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ 74 ವರ್ಷದ ಮೋದಿ, ಸರ್ವಶಕ್ತ ದೇವರು ನನ್ನನ್ನು ವಿಶೇಷ ಉದ್ದೇಶಕ್ಕಾಗಿ ಕಳುಹಿಸಿದ್ದಾನೆ ಎಂದು ನಾನು ಭಾವಿಸುತ್ತೇನೆ. ದೇವರು ನನ್ನನ್ನು 2047 ರ ವೇಳೆಗೆ ವಿಕಸಿತ ಭಾರತದ (Viksit Bharat) ಗುರಿಯನ್ನು ಸಾಧಿಸಲು ಕಳುಹಿಸಿದ್ದಾನೆ. ದೇವರು ನನಗೆ ಮಾರ್ಗವನ್ನು ತೋರಿಸುತ್ತಿದ್ದಾನೆ. ದೇವರು ನನಗೆ ಶಕ್ತಿಯನ್ನು ನೀಡುತ್ತಿದ್ದಾನೆ. ನಾನು ಈ ಗುರಿಯನ್ನು ಸಾಧಿಸುವ ಸಂಪೂರ್ಣ ವಿಶ್ವಾಸವಿದೆ. 2047 ರ ವೇಳೆಗೆ ಆ ಗುರಿಯನ್ನು ಸಾಧಿಸುವವರೆಗೆ ದೇವರು ನನ್ನನ್ನು ಮರಳಿ ಕರೆಯುವುದಿಲ್ಲ ಎಂದು ಹೇಳಿದರು.

    400 ಪಾರ್ ಎಂಬುದು ಬಿಜೆಪಿ (BJP) ಸೃಷ್ಟಿ ಮಾಡಿದ ಘೋಷ ವಾಕ್ಯವಲ್ಲ. ಜನರಿಂದಲೇ ಬಂದ ಘೋಷಣೆಯಿದು. ಕಳೆದ ಐದು ವರ್ಷಗಳಲ್ಲಿ ನಾವು ಈಗಾಗಲೇ ಸಂಸತ್ತಿನಲ್ಲಿ 400 ಬಲ ಹೊಂದಿದ್ದೇವೆ. 95% ಅಂಕಗಳನ್ನು ಪಡೆದ ಯಾವುದೇ ಮಗು ಹೆಚ್ಚಿನ ಅಂಕ ಪಡೆಯಲು ಪ್ರಯತ್ನಿಸುವುದು ಸಹಜ ಎಂದರು.

    ಈ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಮತ್ತು ಇತರ ವಿರೋಧ ಪಕ್ಷಗಳು ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ದೂರುತ್ತಿರುವ ಹಿನ್ನೆಲೆಯಲ್ಲಿ ಹಿಂದಿನ ಚುನಾವಣಾ ಆಯೋಗದ ಕೆಲಸವನ್ನು ಉಲ್ಲೇಖಿಸಿ ಮೋದಿ ತಿರುಗೇಟು ನೀಡಿದರು.

    ಮೇ 21, 1991 ರಂದು ಶ್ರೀಪೆರಂಬದೂರಿನಲ್ಲಿ ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ (Rajiv Gandhi) ಹತ್ಯೆಯಾದ ನಂತರ 1991 ರಲ್ಲಿ ಅಂದಿನ ಮುಖ್ಯ ಚುನಾವಣಾ ಆಯೋಗದ ಆಯುಕ್ತರಾಗಿದ್ದ ಟಿಎನ್ ಶೇಷನ್ (T. N. Seshan) ಅವರು 22 ದಿನಗಳ ಕಾಲ ದೇಶಾದ್ಯಂತ ಮತದಾನವನ್ನು ಹೇಗೆ ಮುಂದೂಡಿದರು ಎಂಬುದನ್ನು ನೆನಪಿಸಿದ ಮೋದಿ ಅಂದು ಕೇವಲ ಒಂದು ಸುತ್ತಿನ ಮತದಾನ ಮುಗಿದಿತ್ತು. ಜೂನ್ ಮಧ್ಯಭಾಗದವರೆಗೆ ಚುನಾವಣೆಯನ್ನು ಮುಂದೂಡಲಾಯಿತು ಮತ್ತು ಅಂತಿಮವಾಗಿ ಜೂನ್ 12 ಮತ್ತು 15 ರಂದು ಮತದಾನ ನಡೆಯಿತು ಎಂಬುದನ್ನು ಪ್ರಸ್ತಾಪಿಸಿದರು.

    ಈಗ ಯಾವ ರೀತಿ ಮಾತನಾಡುತ್ತಿದ್ದಾರೆ? ಸಾಮಾನ್ಯವಾಗಿ, ಅಭ್ಯರ್ಥಿ ಮೃತಪಟ್ಟಾಗ ಆ ಕ್ಷೇತ್ರದ ಚುನಾವಣೆಯನ್ನು ಮಾತ್ರ ನಿಲ್ಲಿಸಲಾಗುತ್ತದೆ. ಆದರೆ 1991 ರಲ್ಲಿ ದೇಶಾದ್ಯಂತ ಚುನಾವಣೆಯನ್ನು ಮುಂದೂಡಲಾಯಿತು ಮತ್ತು ಅಗಲಿದ ನಾಯಕನ ಅಂತ್ಯಕ್ರಿಯೆಗೆ ವ್ಯಾಪಕವಾಗಿ ಪ್ರಚಾರ ನೀಡಿದ ನಂತರವೇ ಮತದಾನ ನಡೆಯಿತು. ಅದೇ ಟಿಎನ್‌ ಶೇಷನ್‌ ನಿವೃತ್ತಿಯ ನಂತರ 1999 ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು ಗಾಂಧಿನಗರದಲ್ಲಿ ನಮ್ಮ ಪಕ್ಷದ ಅಧ್ಯಕ್ಷ ಎಲ್‌ಕೆ ಅಡ್ವಾಣಿ ವಿರುದ್ಧ ಸ್ಪರ್ಧಿಸಿದರು ಎಂದು ತಿಳಿಸಿದರು.

    ದೆಹಲಿ ಮತ್ತು ಜಾರ್ಖಂಡ್‌ ಸಿಎಂಗಳ ಬಂಧನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಅವರನ್ನು ಜೈಲಿಗೆ ಕಳುಹಿಸಲಿಲ್ಲ. ಕಳುಹಿಸುವ ಅಧಿಕಾರ ನಮಗಿಲ್ಲ, ನ್ಯಾಯಾಲಯಗಳು ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿದವು ಎಂದರು.

    ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಪರಿಚಿತ ಹಂತಕರ ಉದ್ದೇಶಿತ ಹತ್ಯೆಗಳ ಹಿಂದೆ ಭಾರತದ ಕೈವಾಡವಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಪಾಕಿಸ್ತಾನದ ಜನರು ಇತ್ತೀಚಿನ ದಿನಗಳಲ್ಲಿ ಚಿಂತಿತರಾಗಿದ್ದಾರೆ. ನನಗೂ ಗೊತ್ತು, ಇದಕ್ಕೆ ಮೂಲ ಕಾರಣ ನಾನು. ಅವರು ಅಳುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ನಮ್ಮ ಜನರು ಏಕೆ ಅಳುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ವಿಪಕ್ಷಗಳಿಗೆ ಟಾಂಗ್‌ ನೀಡಿದರು.

     

  • ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ, 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿವಿ: ಶೋಭಾ ಕರಂದಾಜ್ಲೆ

    ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ, 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿವಿ: ಶೋಭಾ ಕರಂದಾಜ್ಲೆ

    – ಸಿದ್ದರಾಮಯ್ಯ ಸರ್ಕಾರ ಭಯೋತ್ಪಾದಕರನ್ನು ರಕ್ಷಿಸುವ ಸರ್ಕಾರ

    ಬೆಳಗಾವಿ: ಬಿಜೆಪಿಗೆ (BJP) ಅಭಿವೃದ್ಧಿಯೇ ಮಾನದಂಡ, 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದಾಜ್ಲೆ (Shobha Karandlaje) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಆದ ಮೂಲಸೌಕರ್ಯಗಳ ಅಭಿವೃದ್ಧಿ, ಗ್ರಾಮೀಣ ಭಾಗಕ್ಕೆ ಸಿಕ್ಕ ನೆರವು, ಇದು ನಮ್ಮ ಶಕ್ತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕಾರ್ಯಕ್ರಮಗಳು, ದೇಶದ ಬಗ್ಗೆ ಅವರಿಗಿರುವ ಕಳಕಳಿ, ದೇಶದ ರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಮೋದಿಗಿರುವ ದೂರದೃಷ್ಟಿ, ವಿದೇಶದಲ್ಲಿರುವ ಭಾರತೀಯರಿಗೆ ಸಿಗುವ ಗೌರವದ ದೂರದೃಷ್ಟಿ ಮೇಲೆ ಮತ ಕೇಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಬಳಿಕ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‍ಗೆ ಶಾಕ್ – ಮಾಜಿ ಕೇಂದ್ರ ಸಚಿವ ಸೇರಿ ಹಲವು ನಾಯಕರು ಬಿಜೆಪಿಗೆ

    ಈರುಳ್ಳಿ, ಟೊಮೆಟೊ ಸಲುವಾಗಿ ಸರ್ಕಾರ ಬಿದ್ದ ಉದಾಹರಣೆಗಳಿವೆ. ಅದಕ್ಕೆ ಖಾದ್ಯ ತೈಲ ಕಾಳು ಬೆಳೆಯಲು ರೈತರಿಗೆ ಉತ್ತೇಜನ ನೀಡಲಾಗುತ್ತಿದೆ. ಸಬ್ಸಿಡಿ ಆಧಾರದ ಮೇಲೆ ರೈತರಿಗೆ ಬೀಜ, ಟೆಕ್ನಾಲಜಿ ನೀಡುತ್ತಿದ್ದೇವೆ. ಯುಪಿಎ ಸಮಯದಲ್ಲಿನ ಲೋಪಗಳ ಗುಂಡಿ ಮುಚ್ಚಿ, ಮೇಲೆದ್ದು ಬರಲು ನಮಗೆ ಸಮಯ ಬೇಕು. ಎಲ್ಲಾ ವಿಚಾರಗಳಲ್ಲೂ ಸ್ವಾವಲಂಬನೆ ಸಾಧಿಸಲು ಮೋದಿ ಕಾರ್ಯ ಪ್ರವೃತ್ತರಾಗುತ್ತಿದ್ದಾರೆ. ಈ ಮೊದಲು ನಾವು ಡಿಫೆನ್ಸ್‍ನಲ್ಲಿ ಸ್ವಾವಲಂಬಿಗಳಾಗಿರಲಿಲ್ಲ. ಮದ್ದುಗುಂಡುಗಳು ಆಚೆಯಿಂದ ಬರುತ್ತಿತ್ತು. ಇವತ್ತು ಭಾರತ ಸ್ವಾವಲಂಬನೆ ಕಡೆಗೆ ದಾಪುಗಾಲಿಡುತ್ತಿದೆ. ಈಗ ನಾವು ಬೇರೆ ದೇಶಕ್ಕೆ ರಪ್ತು ಮಾಡಲು ಯೋಚನೆ ಮಾಡಿದ್ದೇವೆ ಎಂದಿದ್ದಾರೆ.

    ಚುನಾವಣೆ (General Elections 2024) ಸಂದರ್ಭದಲ್ಲಿ ಸಿಲಿಂಡರ್, ಪೆಟ್ರೊಲ್ ಬೆಲೆ ಇಳಿಕೆ ಮಾಡಿರುವ ಬಗ್ಗೆ ಮಾತನಾಡಿದ ಅವರು, ಬೆಲೆ ಇಳಿಕೆ ಹಾಗೂ ಚುನಾವಣೆಗೂ ಸಂಬಂಧವಿಲ್ಲ, ಗ್ಯಾಸ್, ಪೆಟ್ರೋಲ್‍ನಲ್ಲಿ ನಾವು ಸ್ವಾವಲಂಬಿ ಆಗಿಲ್ಲ. ಈ ವಿಚಾರದಲ್ಲೂ ಸ್ವಾವಲಂಬನೆ ಸಾಧಿಸಲು ಮೋದಿಯವರು ಯೋಜನೆ ರೂಪಿಸುತ್ತಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಖಾದ್ಯ ತೈಲದಲ್ಲಿ ನಾವು ಸ್ವಾವಲಂಬಿ ಆಗಿಲ್ಲ. ಈ ಎಲ್ಲವನ್ನೂ ನಾವು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ವಿದೇಶಿ ಮಾರುಕಟ್ಟೆ ಆಧಾರದ ಮೇಲೆ ಬೆಲೆ ನಿಗದಿ ಆಗುತ್ತದೆ ಎಂದಿದ್ದಾರೆ.

    ರಾಜ್ಯ ಸರ್ಕಾರ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವ ಸರ್ಕಾರವಾಗಿದೆ. ನಿಷೇಧಿತ ಸಂಘಟನೆ ಮುಖಂಡರೆಲ್ಲಾ ಮುಖ್ಯಮಂತ್ರಿ (Siddaramaiah) ಮತ್ತು ಗೃಹ ಸಚಿವರ ಮನೆಯಲ್ಲೇ ಇರುತ್ತಾರೆ. ಹಾಗಾಗಿ, ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು ಕೂಡ ಪೊಲೀಸ್ ಇಲಾಖೆಗೆ ಸವಾಲಾಗಿದೆ. ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಬೆಂಗಳೂರಿನ ಕ್ಯಾಂಟಿನ್‍ನಲ್ಲಿ ಬಾಂಬ್ ಸ್ಫೋಟ ಪ್ರಕರಣಗಳೇ ಇದಕ್ಕೆಲ್ಲಾ ಸಾಕ್ಷಿ. ಆದ್ದರಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ರಕ್ಷಣೆ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಕಿರಿಕ್‌ ಚೀನಾಗೆ ಠಕ್ಕರ್‌ – ವಿಶ್ವದ ಅತೀ ಉದ್ದದ ದ್ವಿಪಥ ಸುರಂಗ ಲೋಕಾರ್ಪಣೆಗೊಳಿಸಿದ ಮೋದಿ

  • ಲೋಕಸಭೆಗೆ ರಾಜ್ಯ ಬಿಜೆಪಿ ಪಟ್ಟಿ ಬಹುತೇಕ ಫೈನಲ್- ಮಾಜಿ ಸಿಎಂಗಳ ಸ್ಪರ್ಧೆ ಬಗ್ಗೆ ಸಸ್ಪೆನ್ಸ್

    ಲೋಕಸಭೆಗೆ ರಾಜ್ಯ ಬಿಜೆಪಿ ಪಟ್ಟಿ ಬಹುತೇಕ ಫೈನಲ್- ಮಾಜಿ ಸಿಎಂಗಳ ಸ್ಪರ್ಧೆ ಬಗ್ಗೆ ಸಸ್ಪೆನ್ಸ್

    – ಜೆಡಿಎಸ್ ಸಂಭಾವ್ಯ ಕ್ಷೇತ್ರ, ಅಭ್ಯರ್ಥಿಗಳ ಲಿಸ್ಟ್

    ನವದೆಹಲಿ: ಲೋಕಸಭಾ ಚುನಾವಣೆಗೆ (Loksabha Elections 2024) ಕರ್ನಾಟಕ, ಆಂಧ್ರ ಸೇರಿ ವಿವಿಧ ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರು ಮಾಡಲು ಬಿಜೆಪಿ ಹೈಕಮಾಂಡ್ ಕಸರತ್ತು ನಡೆಸಿದೆ. ಎರಡನೇ ಪಟ್ಟಿ (BJP 2nd List) ಬಿಡುಗಡೆ ಸಂಬಂಧ ಬುಧವಾರ ತಡರಾತ್ರಿವರೆಗೂ ಅಮಿತ್ ಶಾ, ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆದಿದೆ.

    ಕರ್ನಾಟಕಕ್ಕೆ ಸಂಬಂಧಿಸಿ ಎಲ್ಲಾ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಮಿತ್ರಪಕ್ಷಗಳಿಗೆ ಬಿಟ್ಟುಕೊಡಬೇಕಾದ ಸ್ಥಾನಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಮೂರು ರಿಪೋರ್ಟ್‍ಗಳನ್ನು ಮುಂದಿಟ್ಟುಕೊಂಡು ಕ್ಷೇತ್ರವಾರು ಸಮೀಕ್ಷೆಗಳನ್ನು ತಾಳೆ ಹಾಕಲಾಗಿದೆ. ಪ್ರತಿ ಕ್ಷೇತ್ರದ ಬಗ್ಗೆ ರಾಜ್ಯ ನಾಯಕರ ಅಭಿಪ್ರಾಯ ಪಡೆಯಲಾಗಿದೆ. ಮಾತುಕತೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇಂದು ಕೂಡ ಬಿಜೆಪಿ ಹೈಕಮಾಂಡ್ ಸಭೆ ನಡೆಸಿದೆ. ಆದರೆ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ? ಯಾರಿಗೆ ಕೊಕ್ ನೀಡಲಾಗುತ್ತೆ. ಯಾರಿಗೆ ಮತ್ತೆ ಟಿಕೆಟ್ ಸಿಗುತ್ತೆ ಎಂಬ ಗುಟ್ಟನ್ನು ಅಮಿತ್ ಶಾ (Amitshah) ಬಿಟ್ಟುಕೊಟ್ಟಿಲ್ಲ.

    ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಸಂಸದೆ ಸುಮಲತಾ ಸ್ಪರ್ಧೆ ರಹಸ್ಯವೂ ಅನಾವರಣಗೊಂಡಿಲ್ಲ. ಸದ್ಯಕ್ಕೆ ಎಲ್ಲವೂ ಸಸ್ಪೆನ್ಸ್ ಆಗಿದೆ. ನಾಳೆ ಬಿಜೆಪಿಯ ಚುನಾವಣಾ ಸಮಿತಿ ಸಭೆಯ ಬಳಿಕ ಎರಡನೇ ಪಟ್ಟಿ ರಿಲೀಸ್ ಆಗೋದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ರಾಜ್ಯದ ಕೆಲ ನಾಯಕರ ಬಗ್ಗೆ ಸಿಟಿ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೇಳೋಕೆ ಸಾಕಷ್ಟಿದೆ. ಆದರೆ ಹೇಳಲು ಸಮಯ ಇದಲ್ಲ. ಲೋಕಸಭೆ ಚುನಾವಣೆ ಮುಗಿಯಲಿ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: BJP Lok Sabha Candidates: ಮೊದಲ ಪಟ್ಟಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸೀಟು?

    ಯಾರಿಗೆ ಕೊಕ್ ಸಾಧ್ಯತೆ?: ಶ್ರೀನಿವಾಸ್ ಪ್ರಸಾದ್ (ಚಾಮರಾಜನಗರ), ದೇವೇಂದ್ರಪ್ಪ (ಬಳ್ಳಾರಿ), ಮಂಗಳಾ ಅಂಗಡಿ (ಬೆಳಗಾವಿ), ಜಿಎಸ್ ಬಸವರಾಜು (ತುಮಕೂರು), ಶಿವಕುಮಾರ್ ಉದಾಸಿ (ಹಾವೇರಿ), ರಮೇಶ್ ಜಿಗಜಿಣಗಿ (ವಿಜಯಪುರ) ಸಂಗಣ್ಣ ಕರಡಿ (ಕೊಪ್ಪಳ), ನಾರಾಯಣಸ್ವಾಮಿ (ಚಿತ್ರದುರ್ಗ), ರಾಜಾ ಅಮರೇಶ್ವರ ನಾಯಕ್ (ರಾಯಚೂರು)

    ವೇಯ್ಟಿಂಗ್ ಲಿಸ್ಟ್: ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮಾಜಿ ಸಚಿವರುಗಳಾದ ಡಾ.ಕೆ.ಸುಧಾಕರ್, ಸಿ.ಟಿ.ರವಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ.

    ಸಸ್ಪೆನ್ಸ್ ಲಿಸ್ಟ್: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದಗೌಡ, ಉತ್ತರ ಕನ್ನಡದ ಸಂಸದ ಅನಂತಕುಮಾರ್ ಹೆಗಡೆ, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್‍ಕಟೀಲ್, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಮಂಡ್ಯ ಸಂಸದೆ ಸುಮಲತಾ.

    ಇತ್ತ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ದೋಸ್ತಿ ಪಕ್ಷ ಜೆಡಿಎಸ್‍ಗೆ (JDS) ಮೂರು ಮತ್ತೊಂದು ಸ್ಥಾನಗಳನ್ನು ನೀಡಲು ಬಿಜೆಪಿ ಮುಂದಾಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರಗಳಾದ ಹಾಸನ, ಮಂಡ್ಯ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಜೆಡಿಎಸ್ ಪಾಲಾಗುವ ಸಂಭವ ಹೆಚ್ಚಿದೆ. ಈ ಬಗ್ಗೆ ಬಿಜೆಪಿ ಸಿಇಸಿ ಸಭೆಯಲ್ಲಿ ಚರ್ಚೆ ನಡೆದಿದೆ. ವಿಶೇಷ ಅಂದ್ರೆ ಕಳೆದ ಮೂರ್ನಾಲ್ಕು ದಿನಗಳಿಂದ ಈ ಕ್ಷೇತ್ರದ ನಾಯಕರೊಂದಿಗೆ ಕುಮಾರಸ್ವಾಮಿ ಮೇಲಿಂದ ಮೇಲೆ ಸಭೆಗಳನ್ನು ಮಾಡಿದ್ದಾರೆ. ಯಾರಿಗೆ ಟಿಕೆಟ್ ಸಿಕ್ಕಿದ್ರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಮುಖಂಡರಿಗೆ ಕುಮಾರಸ್ವಾಮಿ ಕರೆ ನೀಡಿದ್ದಾರೆ.

    ಜೆಡಿಎಸ್ ಸಂಭಾವ್ಯ ಕ್ಷೇತ್ರ ಹಾಗೂ ಅಭ್ಯರ್ಥಿಗಳು:
    * ಮಂಡ್ಯ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ, ಮಾಜಿ ಸಚಿವ ಸಿಎಸ್ ಪುಟ್ಟರಾಜು
    * ಹಾಸನ: ಪ್ರಜ್ವಲ್ ರೇವಣ್ಣ, ಸಂಸದ
    * ಕೋಲಾರ: ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ.
    * ಬೆಂಗಳೂರು (ಗ್ರಾ): ವೈದ್ಯ ಡಾ. ಸಿಎನ್ ಮಂಜುನಾಥ್, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ

  • ನಿಮ್ಮ ಹೃದಯ ಗೆಲ್ಲಲು ನಾನು ಇಲ್ಲಿಗೆ ಬಂದಿದ್ದೇನೆ: ನರೇಂದ್ರ ಮೋದಿ

    ನಿಮ್ಮ ಹೃದಯ ಗೆಲ್ಲಲು ನಾನು ಇಲ್ಲಿಗೆ ಬಂದಿದ್ದೇನೆ: ನರೇಂದ್ರ ಮೋದಿ

    ಶ್ರೀನಗರ: ಲೋಕಸಭಾ ಚುನಾವಣೆಗೂ (Loksabha Election) ಮುನ್ನ ವಿವಿಧ ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರು. ಆರ್ಟಿಕಲ್ 370 ರದ್ದಾದ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದ ಅವರು 6,400 ಮೌಲ್ಯದ 53 ಯೋಜನೆಗಳಿಗೆ ಚಾಲನೆ ನೀಡಿದರು. ಬಕ್ಷಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರಿಗೆ ನೇಮಕಾತಿ ಪತ್ರ ವಿತರಿಸಿದರು‌.

    ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ (Narendra Modi), ಶ್ರೀನಗರದ ಅದ್ಭುತ ಜನರಲ್ಲಿ ಒಬ್ಬರಾಗಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ, ನಿಮ್ಮ ಹೃದಯ ಗೆಲ್ಲಲು ನಾನು ಇಲ್ಲಿಗೆ ಬಂದಿದ್ದೇನೆ. ಇಂದು ಸಮರ್ಪಿಸಲಾಗುತ್ತಿರುವ ಅಭಿವೃದ್ಧಿ ಯೋಜನೆಗಳು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಉತ್ತೇಜನ ನೀಡುತ್ತವೆ. ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರ ಆದ್ಯತೆ ಎಂದರು.

    ಜಮ್ಮು ಮತ್ತು ಕಾಶ್ಮೀರದ (Jammu & Kashmir) ಜನರು ಪ್ರಯೋಜನಗಳಿಂದ ವಂಚಿತರಾದ ಯುಗವೂ ಇತ್ತು. ದೇಶದ ಇತರ ಭಾಗಗಳಲ್ಲಿ ಜಾರಿಗೊಳಿಸಲಾದ ಕಾನೂನನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೊಳಿಸಲು ಸಾಧ್ಯವಾಗದ ಯುಗವಿತ್ತು. ದೇಶಾದ್ಯಂತ ಬಡವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಿದಾಗ, ಜಮ್ಮು ಮತ್ತು ಕಾಶ್ಮೀರದ ನಮ್ಮ ಸಹೋದರ-ಸಹೋದರಿಯರು ವಂಚಿತರಾಗಿದ್ದರು. ಈಗ ನೋಡಿ ಸಮಯ ಹೇಗೆ ಬದಲಾಗಿದೆ. ಕಾಂಗ್ರೆಸ್ ಕೇವಲ ಜಮ್ಮು ಮತ್ತು ಕಾಶ್ಮೀರದ ಜನರನ್ನು ಮಾತ್ರವಲ್ಲದೆ ಇಡೀ ದೇಶವನ್ನು 370 ನೇ ವಿಧಿಯ ಬಗ್ಗೆ ತಪ್ಪುದಾರಿಗೆಳೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಇಂದು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ನನಗೆ ಅವಕಾಶ ಸಿಕ್ಕಿದೆ. ಅಭಿವೃದ್ಧಿಯ ಶಕ್ತಿ, ಪ್ರವಾಸೋದ್ಯಮ ಸಾಧ್ಯತೆಗಳು, ರೈತರ ಸಬಲೀಕರಣ ಮತ್ತು ಜಮ್ಮು ಮತ್ತು ಕಾಶ್ಮೀರದ ಯುವಕರ ನಾಯಕತ್ವ ಹೆಚ್ಚಿಸಲಿದೆ. ಜಮ್ಮು ಮತ್ತು ಕಾಶ್ಮೀರ ಕೇವಲ ಒಂದು ಪ್ರದೇಶವಲ್ಲ, ಅದು ಭಾರತದ ಹಣೆಬರಹ. ವಿಕ್ಷಿತ್ ಜಮ್ಮು ಮತ್ತು ಕಾಶ್ಮೀರವು ವಿಕ್ಷಿತ್ ಭಾರತ್‌ನ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

    ಕಾರ್ಯಕ್ರಮದಲ್ಲಿ 285 ಬ್ಲಾಕ್‌ಗಳಿಂದ 1 ಲಕ್ಷ ಜನರು ವಾಸ್ತವಿಕವಾಗಿ ನಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ನಾನು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಹೊಸ ಜಮ್ಮು ಮತ್ತು ಕಾಶ್ಮೀರಕ್ಕೆ ಉಜ್ವಲ ಭವಿಷ್ಯವಿದೆ ಮತ್ತು ಸವಾಲುಗಳನ್ನು ಜಯಿಸುವ ಧೈರ್ಯವಿದೆ. ನಿಮ್ಮ ಸಂತೋಷದ ಮುಖಗಳನ್ನು ನೋಡಿ, ದೇಶಾದ್ಯಂತ 140 ಕೋಟಿ ಜನರು ಸಂತೃಪ್ತಿ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು

    ಇದಕ್ಕೂ ಮುನ್ನ ಪ್ರಧಾನಿಯವರು ಹೊಸದಾಗಿ ನೇಮಕಗೊಂಡ ಸುಮಾರು 1,000 ಸರ್ಕಾರಿ ನೌಕರರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು ಮತ್ತು ಮಹಿಳಾ ಸಾಧಕರು, ರೈತರು ಮತ್ತು ಉದ್ಯಮಿಗಳು ಸೇರಿದಂತೆ ವಿವಿಧ ಕೇಂದ್ರ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

  • ಕಾಂಗ್ರೆಸ್ ಪಟ್ಟಿ ಫೈನಲ್‍ಗೆ ಗುರುವಾರ ದೆಹಲಿಯಲ್ಲಿ ಸಭೆ- ಮಂಡ್ಯ ಟಿಕೆಟ್ ಘೋಷಣೆಗೂ ಮುನ್ನವೇ ಕಿತ್ತಾಟ

    ಕಾಂಗ್ರೆಸ್ ಪಟ್ಟಿ ಫೈನಲ್‍ಗೆ ಗುರುವಾರ ದೆಹಲಿಯಲ್ಲಿ ಸಭೆ- ಮಂಡ್ಯ ಟಿಕೆಟ್ ಘೋಷಣೆಗೂ ಮುನ್ನವೇ ಕಿತ್ತಾಟ

    ನವದೆಹಲಿ: ಕಾಂಗ್ರೆಸ್ ಪಕ್ಷ ಕೂಡ ಲೋಕಸಮರಕ್ಕೆ (Loksabha Election) ಭರ್ಜರಿ ತಯಾರಿ ನಡೆಸ್ತಿದೆ. ಟಿಕೆಟ್ ಪಟ್ಟಿ (Congress List) ಅಂತಿಮಗೊಳಿಸುವ ಸಂಬಂಧ ಗುರುವಾರ ಸಂಜೆ ದೆಹಲಿಯಲ್ಲಿ ಕಾಂಗ್ರೆಸ್ ಸಿಇಸಿ ಸಭೆ ನಡೆಯಲಿದೆ.

    ಸಿಎಂ-ಡಿಸಿಎಂ ಸೇರಿ ಹಲವರು ಭಾಗವಹಿಸಲಿದ್ದಾರೆ. ಕೆಪಿಸಿಸಿ ಈಗಾಗಲೇ ಗೊಂದಲ ಇಲ್ಲದ ಕ್ಷೇತ್ರಗಳಿಗೆ ಒಂದೊಂದು ಹೆಸರನ್ನು ರವಾನಿಸಿದೆ. ಕೆಲವೊಂದು ಕ್ಷೇತ್ರಗಳಿಗೆ ಇಬ್ಬರು ಸಂಭಾವ್ಯರ ಹೆಸರನ್ನು ಶಿಫಾರಸು ಮಾಡಿದೆ. ಈ ಮಧ್ಯೆ ಮಂಡ್ಯದಲ್ಲಿ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಲು ಮುಂದಾಗಿರೋದ್ರಿಂದ ಟಿಕೆಟ್ ಆಕಾಂಕ್ಷಿ ಡಾ. ರವೀಂದ್ರ, ಕೆಪಿಸಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ಸಲ್ಲಿ ದುಡ್ಡು ಇರೋರಿಗೆ ಮಣೆ ಹಾಕಲಾಗ್ತಿದೆ ಅಂತ ದೂರಿದ್ದಾರೆ.

    ಇತ್ತ ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಮುಂದಾಗಿದೆ. ಶೀಘ್ರವೇ ಎಸ್‍ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸೇರಿ ಹಲವರು ಕಾಂಗ್ರೆಸ್ ಸೇರುವ ಸುಳಿವನ್ನು ಸಿಎಂ-ಡಿಸಿಎಂ ನೀಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಲಕ್ಷ್ಮಣ ಸವದಿಯನ್ನು ಮಂತ್ರಿ ಮಾಡುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಇನ್ನು ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಅಭ್ಯರ್ಥಿಯಾಗೋದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದ್ಲೇ ವಿರೋಧ ವ್ಯಕ್ತವಾಗ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಗೋಬ್ಯಾಕ್ ಚಳವಳಿ ಆರಂಭವಾಗಿದೆ. ಇದನ್ನೂ ಓದಿ; ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ- 50% ರಷ್ಟು ಸಂಸದರಿಗೆ ಕೊಕ್ ಸಾಧ್ಯತೆ

  • ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ- 50% ರಷ್ಟು ಸಂಸದರಿಗೆ ಕೊಕ್ ಸಾಧ್ಯತೆ

    ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ- 50% ರಷ್ಟು ಸಂಸದರಿಗೆ ಕೊಕ್ ಸಾಧ್ಯತೆ

    ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಶುರುವಾಗಿದೆ. ಮುಂದಿನ ಒಂದು ವಾರದಲ್ಲಿ ಮುಹೂರ್ತ ಪ್ರಕಟ ಆಗುವ ಸಂಭವ ಇದೆ. ಹೀಗಾಗಿ ಟಿಕೆಟ್ ರಾಜಕೀಯ ಚುರುಕು ಪಡೆದಿದೆ.

    ಕರ್ನಾಟಕ ಬಿಜೆಪಿ ಹುರಿಯಾಳುಗಳನ್ನು ಅಂತಿಮಗೊಳಿಸುವ ಸಲುವಾಗಿ ದೆಹಲಿಯಲ್ಲಿ ಬಿಜೆಪಿ ಸಿಇಸಿ ಸಂಜೆಯಿಂದ ಸಭೆ ನಡೆಸಿದೆ. ಜೆ.ಪಿ ನಡ್ಡಾ ನೇತೃತ್ವದ ಸಭೆಯಲ್ಲಿ ಯಡಿಯೂರಪ್ಪ, ವಿಜಯೇಂದ್ರ, ಅಶೋಕ್, ಶೆಟ್ಟರ್, ಬಿಎಲ್ ಸಂತೋಷ್ ಸೇರಿ ಪ್ರಮುಖರು ಭಾಗವಹಿಸಿದ್ದಾರೆ. ಯಾರಿಗೆ ಟಿಕೆಟ್ ಕೊಡ್ಬೇಕು, ಯಾರನ್ನು ಬಿಡ್ಬೇಕು, ಸಾಧಕ-ಬಾಧಕಗಳೇನು ಎಂಬ ಬಗ್ಗೆ ಚರ್ಚೆ ನಡೆದಿದೆ. ಇದನ್ನೂ ಓದಿ: ಬಿಜೆಪಿ ಮೊದಲ ಪಟ್ಟಿಯಲ್ಲಿ ಕರ್ನಾಟಕಕ್ಕೆ ಕೊಕ್‌ – ಆಕಾಂಕ್ಷಿಗಳಲ್ಲಿ ನಿರಾಸೆ

    ಒಂದೆರಡು ದಿನಗಳಲ್ಲಿ ಬಿಜೆಪಿಯ ಎರಡನೇ ಪಟ್ಟಿ ರಿಲೀಸ್ (BJP 2nd List) ಆಗಲಿದೆ. ಈ ಪಟ್ಟಿಯಲ್ಲಿ ಗೊಂದಲ ಇಲ್ಲದ ರಾಜ್ಯದ 10 ರಿಂದ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳು ಪ್ರಕಟವಾಗುವ ನಿರೀಕ್ಷೆ ಇದೆ. 50% ರಷ್ಟು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿ ಹೊಸಬರಿಗೆ ಮಣೆ ಹಾಕಬಹುದು. ಜೆಡಿಎಸ್ (JDS) ಜೊತೆ ಸೀಟು ಹಂಚಿಕೆ ಫೈನಲ್ ಆಗದ ಕಾರಣ ಮಂಡ್ಯ, ಹಾಸನ, ಕೋಲಾರ ಸೇರಿ ಹಲವು ಕ್ಷೇತ್ರಗಳಿಗೆ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಿಸಲ್ಲ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯ ಬಿಜೆಪಿಯಿಂದ 15+ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರು ಫೈನಲ್

    ಸಿಇಸಿ ಸಭೆಗೆ ಮುನ್ನ ಕೇಂದ್ರ ಸಚಿವ ಭಗವಂತ್ ಖೂಬಾ, ರೇಣುಕಾಚಾರ್ಯ ಸೇರಿ ಹಲವರು ಬಿಎಸ್‍ವೈ ಭೇಟಿ ಮಾಡಿ ಟಿಕೆಟ್ ಲಾಬಿ ನಡೆಸಿದ್ರು. ಈ ಮಧ್ಯೆ ಡಾ.ಸಿಎನ್ ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆಗೆ ಒಪ್ಪಿಸುವ ಕೆಲಸ ಮಾಡಿದ್ದೇವೆ ಎಂದು ಸಿಪಿ ಯೋಗೇಶ್ವರ್ ಹೇಳಿದ್ರು. ಇತ್ತ ಮಂಡ್ಯ ಟಿಕೆಟ್ ವಿಚಾರದಲ್ಲಿ ಕುಮಾರಸ್ವಾಮಿ ನಿವಾಸದಲ್ಲಿ ಸಭೆ ನಡೆದಿದೆ.

  • ಹೇಳಿಕೆಗಳನ್ನು ಕೊಡುವಾಗ ಹುಷಾರಾಗಿರಿ- ರಾಗಾಗೆ ಚುನಾವಣಾ ಆಯೋಗ ಎಚ್ಚರಿಕೆ

    ಹೇಳಿಕೆಗಳನ್ನು ಕೊಡುವಾಗ ಹುಷಾರಾಗಿರಿ- ರಾಗಾಗೆ ಚುನಾವಣಾ ಆಯೋಗ ಎಚ್ಚರಿಕೆ

    ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗವು ಎಚ್ಚರಿಕೆಯೊಂದನ್ನು ನೀಡಿದೆ.

    ಸಾರ್ವಜನಿಕ ಭಾಷಣಗಳಲ್ಲಿ ಹೇಳಿಕೆ ನೀಡುವಾಗ ಎಚ್ಚರವಹಿಸಿ. ಚುನಾವಣಾ ಪ್ರಚಾರದ ಸಮಯದಲ್ಲಿ ಸ್ಟಾರ್ ಪ್ರಚಾರಕರು ಮತ್ತು ರಾಜಕೀಯ ನಾಯಕರಿಗೆ ಇತ್ತೀಚಿನ ಸಲಹೆಯನ್ನು ಅನುಸರಿಸುವಂತೆ ಚುನಾವಣಾ ಸಮಿತಿಯು ರಾಹುಲ್ ಗಾಂಧಿಗೆ (Rahul Gandhi) ತಿಳಿಸಿದೆ.

    ನೀತಿ ಸಂಹಿತೆಯ ಉಲ್ಲಂಘನೆಗಾಗಿ ಪಕ್ಷಗಳು, ಅಭ್ಯರ್ಥಿಗಳು ಮತ್ತು ಸ್ಟಾರ್ ಪ್ರಚಾರಕರು ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಈ ಹಿಂದೆ ನೊಟೀಸ್ ಪಡೆದಿರುವ ಪಕ್ಷದ ಪ್ರಚಾರಕರು ಮತ್ತು ಅಭ್ಯರ್ಥಿಗಳು ಮಾದರಿ ಸಂಹಿತೆಯನ್ನು ಪುನರಾವರ್ತಿತವಾಗಿ ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗವು (Election Commission) ಎಚ್ಚರಿಸಿದೆ.

    ಕಳೆದ ವರ್ಷ ಮೋದಿ (narendra Modi) ಅವರನ್ನು ಪನೌಟಿ (ಕೆಟ್ಟ ಶಕುನ) ಮತ್ತು ಪಿಕ್‌ಪಾಕೆಟ್ ಎಂದು ಕರೆದಿದ್ದಕ್ಕಾಗಿ ರಾಹುಲ್‌ ಗಾಂಧಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೆಹಲಿ ಹೈಕೋರ್ಟ್ ಸೂಚಿಸಿತ್ತು. ಅದರಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗವು ನೋಟಿಸ್ ನೀಡಿತ್ತು. ಇದನ್ನೂ ಓದಿ: ವಂಚನೆಯಿಂದ ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಹೈದರಾಬಾದ್‌ ಯುವಕ – ಯುದ್ಧದಲ್ಲಿ ದುರಂತ ಸಾವು