Tag: lokpal

  • ಲೋಕಪಾಲ್ ಆಯ್ಕೆ ಸಮಿತಿ ಸಭೆಯ ವಿಶೇಷ ಆಹ್ವಾನವನ್ನು ತಿರಸ್ಕರಿಸಿದ ಖರ್ಗೆ

    ಲೋಕಪಾಲ್ ಆಯ್ಕೆ ಸಮಿತಿ ಸಭೆಯ ವಿಶೇಷ ಆಹ್ವಾನವನ್ನು ತಿರಸ್ಕರಿಸಿದ ಖರ್ಗೆ

    ನವದೆಹಲಿ: ಲೋಕಾಪಾಲ್ ಆಯ್ಕೆ ಸಮಿತಿಗೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದ ಆಹ್ವಾನವನ್ನ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ತಿರಸ್ಕರಿಸಿದ್ದಾರೆ.

    ಈ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಅವರು ಆಹ್ವಾನ ನೀಡಿದ್ದಾರೆ. ಆದರೆ ಈ ಆಹ್ವಾನದಲ್ಲಿ ನಮ್ಮನ್ನು ವಿಶೇಷ ಆಹ್ವಾನಿತರಾಗಿ ಪರಿಗಣಿಸಿದ್ದಾರೆ. ಒಂದು ವೇಳೆ ಈ ಸಭೆಯಲ್ಲಿ ನಾವು ಭಾಗವಹಿಸಿ ಲೋಕಾಪಾಲ್ ಸ್ಥಾನಕ್ಕೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡದೆ ಇದ್ದರೆ, ವಿಶೇಷ ಆಹ್ವಾನಿತರಾಗಿರುವ ನಮಗೇ ಆದನ್ನು ವಿರೋಧಿಸುವ ಅಧಿಕಾರ ಇರುವುದಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ವಿಶೇಷ ಆಹ್ವಾನಿತರಿತರಿಗೆ ಲೋಕಪಾಲ್ ನೇಮಕದಲ್ಲಿ ಮಹತ್ವವಿಲ್ಲ. ವಿಶೇಷ ಆಹ್ವಾನಿತರ ಮಾತಿಗೂ ಸಭೆಯಲ್ಲಿ ಬೆಲೆ ಇಲ್ಲ. ಲೋಕಪಾಲ್ ಕಾಯ್ದೆಯಾಗಿ ನಾಲ್ಕು ವರ್ಷವಾಗಿದೆ. ಅಲ್ಲದೇ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿದೆ. ನಂತರ ಮಸೂದೆಯನ್ನು ಸ್ಟ್ಯಾಂಡಿಂಗ್ ಕಮಿಟಿ ಮುಂದೆ ಕಳುಹಿಸಲಾಯಿತು. ಕಳೆದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಬಹುದಿತ್ತು. ಆದರೆ ಇಂತಹ ಯಾವುದೇ ಕಾರ್ಯವನ್ನು ಮಾಡಲಿಲ್ಲ ಎಂದು ದೂಷಿಸಿದರು.

    ಲೋಕಪಾಲರ ನೇಮಕಕ್ಕೆ ಈಗಾಗಲೇ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆದರೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ಲೋಕಪಾಲ್ ನೇಮಕಕ್ಕೆ ಮುಂದಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷಗಳಿಗೂ ಅವಕಾಶ ನೀಡಬೇಕು. ಲೋಕಪಾಲ್ ತಿದ್ದುಪಡಿ ಮಸೂದೆಯನ್ನು ಅನುಷ್ಠಾನ ಗೊಳಿಸಬೇಕಿತ್ತು. ಲೋಕಪಾಲರ ನೇಮಕದಲ್ಲಿ ವಿಶೇಷ ಆಹ್ವಾನಿತರ ಪಾತ್ರ ಏನೂ ಇಲ್ಲ. ಸಭೆಗೆ ಹೋಗಿ ಮೂಲೆಯಲ್ಲಿ ಕೂತು ಬರಲು ಹೋಗಲ್ಲ. ಪ್ರಧಾನಿ ಮೋದಿಯವರಿಗೆ ಲೋಕಪಾಲರೆಂದರೆ ಅಲರ್ಜಿ. ಗುಜರಾತ್ ನಲ್ಲಿ 13 ವರ್ಷ ಆಡಳಿತ ನಡೆಸಿದರೂ ಲೋಕಾಯುಕ್ತರನ್ನೇ ನೇಮಕ ಮಾಡಲಿಲ್ಲ ಎಂದು ಆರೋಪಿಸಿದರು.

    ದೇಶದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಪಾಲ ನೇಮಕ ಆಯ್ಕೆ ನಿರ್ಣಾಯಕವಾಗಿದ್ದು, ಇಂತಹ ಮಹತ್ವದ ಹುದ್ದೆಗೆ ಅರ್ಹರನ್ನು ನೇಮಕ ಮಾಡುವಾಗ ಪ್ರತಿಪಕ್ಷಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅನಿವಾರ್ಯ. ಆದರೆ ಮೋದಿ ಸರ್ಕಾರ ನಾಮಕಾವಸ್ತೆ ಎಂಬಂತೆ ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿದೆ. ಆ ಮೂಲಕ ಪ್ರತಿಪಕ್ಷಗಳಿಲ್ಲದೇ ಲೋಕಪಾಲ ಆಯ್ಕೆ ಮಾಡುವುದು ಕೇಂದ್ರ ಸರ್ಕಾರದ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

    ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ ಪ್ರಕಾರ, ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಲೋಕಸಭಾ ಸ್ಪೀಕರ್, ಲೋಕಸಭೆಯ ವಿರೋಧ ಪಕ್ಷ ನಾಯಕ, ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನೇಮಕ ಮಾಡುವ ಸುಪ್ರೀಂ ಕೋರ್ಟ್‍ನ ಒಬ್ಬರು ನ್ಯಾಯಮೂರ್ತಿ ಮತ್ತು ರಾಷ್ಟ್ರಪತಿ ನೇಮಕ ಮಾಡುವ ಒಬ್ಬ ಕಾನೂನು ತಜ್ಞರು ಸದಸ್ಯರಾಗಿರುತ್ತಾರೆ.

    ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಪಡೆಯಬೇಕಾದರೆ ಒಟ್ಟು ಸದಸ್ಯರ 10ನೇ ಒಂದು ಭಾಗದ ಸದಸ್ಯರು ಆಯ್ಕೆಯಾಗಬೇಕಾಗುತ್ತದೆ. 16ನೇ ಲೋಕಸಭೆಯಲ್ಲಿ ಯಾವೊಂದು ವಿರೋಧ ಪಕ್ಷವು 55 ಸ್ಥಾನಗಳನ್ನು ಗೆದ್ದುಕೊಂಡಿಲ್ಲ. ಕಾಂಗ್ರೆಸ್ 44 ಸ್ಥಾನ ಗೆದ್ದಿದ್ದರೂ ವಿರೋಧ ಪಕ್ಷಕ್ಕೆ ಬೇಕಾಗಿದ್ದ ಸಂಖ್ಯೆಯನ್ನು ತಲುಪದ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಸಿಗದೇ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ಸ್ಥಾನಮಾನ ಸಿಕ್ಕಿತ್ತು.

  • ಮೋದಿ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಗರಂ- ಹೋರಾಟದ ಎಚ್ಚರಿಕೆ

    ಮೋದಿ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಗರಂ- ಹೋರಾಟದ ಎಚ್ಚರಿಕೆ

    ನವದೆಹಲಿ: ಲೋಕ್‍ಪಾಲ್ ನೇಮಕ ವಿಚಾರದಲ್ಲಿ ವಿಳಂಬ ಹಿನ್ನೆಲೆಯಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ದೆಹಲಿಯಲ್ಲಿ ಮೊತ್ತೊಂದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

    ಅಧಿಕಾರಕ್ಕೆ ಬಂದು ಮೂರು ವರ್ಷವಾದ್ರೂ ಲೋಕಪಾಲ್ ನೇಮಕ ವಿಚಾರದಲ್ಲಿ ನಿರಾಸಕ್ತಿ ತೋರಿರುವ ಮೋದಿ ಸರ್ಕಾರದ ವಿರುದ್ಧ ನನ್ನ ಹೋರಾಟವಿರುತ್ತದೆ ಎಂದು ಪತ್ರದಲ್ಲಿ ಹೇಳಿದ್ದಾರೆ. ಇದರೊಂದಿಗೆ ಆಹಾರ ಭದ್ರತೆ ಹಾಗೂ ರೈತರ ಕಲ್ಯಾಣದ ಬಗೆಗಿನ ಸ್ವಾಮಿನಾಥನ್ ಕಮಿಷನ್ ವರದಿಯನ್ನು ಜಾರಿ ಮಾಡುವಂತೆಯೂ ಒತ್ತಾಯಿಸಬಹುದು ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

    ಭಷ್ಟ್ರಾಚಾರ ಮುಕ್ತ ಭಾರತ ನಿರ್ಮಿಸುವ ಉದ್ದೇಶದಿಂದ ಐತಿಹಾಸಿಕ ಚಳವಳಿ ನಡೆದು 6 ವರ್ಷ ಕಳೆದಿವೆ. ಆದ್ರೆ 6 ವರ್ಷಗಳಾದ್ರೂ ಭಷ್ಟ್ರಾಚಾರಕ್ಕೆ ಮುಕ್ತಿ ಹಾಡಲು ಸರ್ಕಾರ ಒಂದು ನಿರ್ದಿಷ್ಟವಾದ ಕಾನೂನಿನ ಕರಡು ಸಿದ್ಧಪಡಿಸಿಲ್ಲ ಎಂದು ಪತ್ರದಲ್ಲಿ ಅಣ್ಣಾ ಹಜಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಲೋಕ್‍ಪಾಲ್ ಹಾಗೂ ಲೋಕಾಯುಕ್ತ ನೇಮಕದ ಬಗ್ಗೆ 3 ವರ್ಷಗಳಿಂದ ನಾನು ನಿಮ್ಮ ಸರ್ಕಾರಕ್ಕೆ ನೆನಪಿಸುತ್ತಲೇ ಇದ್ದೇನೆ. ಆದ್ರೆ ನೀವು ನನ್ನ ಪತ್ರಗಳಿಗೆ ಉತ್ತರಿಸಿಯೂ ಇಲ್ಲ. ಯಾವುದೇ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಹಜಾರೆ ಬರೆದಿದ್ದಾರೆ.

    ಮುಂದಿನ ಪತ್ರದಲ್ಲಿ ದೆಹಲಿಯಲ್ಲಿನ ಹೋರಾಟಕ್ಕೆ ದಿನಾಂಕ ಹಾಗೂ ಸ್ಥಳದ ಬಗ್ಗೆ ಬಹಿರಂಗಪಡಿಸುತ್ತೇನೆ ಎಂದು ಹಜಾರೆ ಹೇಳಿದ್ದಾರೆ.

    ಇದೇ ವರ್ಷ ಮಾರ್ಚ್‍ನಲ್ಲೂ ಕೂಡ ಲೋಕ್‍ಪಾಲ್ ಪ್ರತಿಭಟನೆ ನಡೆಸುವ ನಿರ್ಧಾರದ ಬಗ್ಗೆ ಹಜಾರೆ ಮೋದಿಗೆ ಪತ್ರದಲ್ಲಿ ತಿಳಿಸಿದ್ದರು. ಭ್ರಷ್ಟಾಚಾರಕ್ಕೆ ಕೊನೆ ಹಾಡುತ್ತೇವೆಂಬ ಸರ್ಕಾರದ ಭರವಸೆ ವಾಸ್ತವಕ್ಕೆ ಬರಲೇ ಇಲ್ಲ ಎಂದು ಹಜಾರೆ ಹೇಳಿದ್ದರು.

    2011ರ ಏಪ್ರಿಲ್‍ನಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಜನ್ ಲೋಕ್‍ಪಾಲ್ ಮಸೂದೆಗೆ ಆಗ್ರಹಿಸಿ ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಅರವಿಂದ ಕೇಜ್ರಿವಾಲ್, ಬಾಬಾ ರಾಮ್‍ದೇವ್ ಹಾಗೂ ಕಿರಣ್ ಬೇಡಿ ಕೂಡ ಅಣ್ಣಾ ಟೀಂನಲ್ಲಿದ್ದರು. ಜನರ ಒತ್ತಾಯಕ್ಕೆ ಮಣಿದು 2013ರಲ್ಲಿ ಲೋಕ್‍ಪಾಲ್ ಕಾಯ್ದೆಯನ್ನ ಪಾಸ್ ಮಾಡಲಾಗಿತ್ತು.