Tag: Lokesh

  • ಅಂಧತ್ವವನ್ನು ಮೆಟ್ಟಿನಿಂತು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಿಂಚುತ್ತಿರುವ ಹಳ್ಳಿ ಪ್ರತಿಭೆ ಲೋಕೇಶ್

    ಅಂಧತ್ವವನ್ನು ಮೆಟ್ಟಿನಿಂತು ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಿಂಚುತ್ತಿರುವ ಹಳ್ಳಿ ಪ್ರತಿಭೆ ಲೋಕೇಶ್

    ಕೊಪ್ಪಳ: ಕ್ರೀಡೆಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಕ್ರಿಕೆಟ್ ಆಟದ ಅಂಧರ ವಿಭಾಗದಲ್ಲಿ ಭಾರತ ದೇಶದ ಬಿ3 ತಂಡಕ್ಕೆ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಯುವಕ ಆಯ್ಕೆಯಾಗಿದ್ದಾರೆ.

    ಚಿಕ್ಕಬೆಣಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲಿರುವ ಯಡಳ್ಳಿ ಗ್ರಾಮದ ಲೋಕೇಶ್ ಎನ್ನುವ ಯುವಕ ಸದ್ಯ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ಹಳ್ಳಿ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಹಾಗೇ ಮಾಡಿದ್ದಾರೆ. ಆಯ್ಕೆಯಾಗಿ ಐದಾರು ವರ್ಷಗಳು ಕಳೆದಿದ್ದು, ಇದೀಗ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ಯುವ ಪ್ರತಿಭೆ ಅಂಗವಿಕಲತೆಯನ್ನು ವರವನ್ನಾಗಿ ಮಾಡಿಕೊಂಡು ಮಿಂಚುಹರಿಸುತ್ತಿದ್ದಾರೆ. ಕಡು ಬಡತನವನ್ನು ಅನುಭವಿಸುತ್ತಿರುವ ರೇಣುಕಪ್ಪ, ಹುಲಿಗೇಮ್ಮ ದಂಪತಿಗಳ ನಾಲ್ಕನೇ ಮಗನಾದ ಲೋಕೇಶ್ ಕಣ್ಣು ಕಾಣದೆ ಹುಟ್ಟು ಅಂಧತ್ವವನ್ನು ಪಡೆದುಕೊಂಡಿದ್ದಾರೆ. ಅಂಧತ್ವವನ್ನು ವರವನ್ನಾಗಿ ಮಾಡಿಕೊಂಡಿರುವ ಲೋಕೇಶ್ ಕ್ರಿಕೆಟ್‍ನಲ್ಲಿ ಆಸಕ್ತಿಯನ್ನು ಹೊಂದಿದ್ದು, ಅದರಲ್ಲಿಯೇ ಮುಂದುವರಿದು ಸದ್ಯ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ಹೆಸರು ವಾಸಿಯಾಗಿದ್ದಾರೆ. ಇದನ್ನೂ ಓದಿ: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ

    ಗ್ರಾಮದಲ್ಲಿ ಕ್ರಿಕೆಟ್ ಆಡುವ ಮೂಲಕ ಆಸಕ್ತಿಯನ್ನು ರೂಡಿಸಿಕೊಂಡಿದ್ದ ಲೋಕೇಶ್ ಕಳೆದ 15 ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ, ಕೂಲಿ ಕೆಲಸವನ್ನು ಮಾಡುವ ಮೂಲಕ ಸಮರ್ಥ ಟ್ರಸ್ಟ್ ವತಿಯಿಂದ ಕ್ರಿಕೆಟ್ ಅಭ್ಯಾಸವನ್ನು ನಡೆಸಿದ್ದಾರೆ. ಬೆಂಗಳೂರಿನಲ್ಲಿ ರಣಜಿ ತಂಡಗಳಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಅದರ ಫಲವಾಗಿ ಭಾರತ ತಂಡದ ಅಂಧರ ವಿಭಾಗಕ್ಕೆ ಆಯ್ಕೆಯಾಗಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು

    2016 ರಲ್ಲಿ ಟೀಂ ಇಂಡಿಯಾಗೆ ಆಯ್ಕೆ:
    ರಣಜಿಯಲ್ಲಿ ಉತ್ತಮ ಪ್ರದರ್ಶನದಿಂದ ಭಾರತದ ಬಿ3 ವಿಭಾಗದ ಅಂಧರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಲೋಕೇಶ್, 2016 ರಲ್ಲಿ ಅಂಧರ ಏಷ್ಯಾ ಕಪ್ ಪಂದ್ಯಾವಳಿ ಆಡಿದ್ದಾರೆ. ಬಾಂಗ್ಲಾದೇಶದಲ್ಲಿ ಏಷ್ಯ ಕಪ್ ಪಂದ್ಯಗಳನ್ನು ಆಡುವ ಮೂಲಕ ಟೂರ್ನಿಯಲ್ಲಿ ಆಲ್‌ರೌಂಡರ್ ಪ್ರದರ್ಶನದ ಮೂಲಕ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ಟ್ರೋಪಿಯಲ್ಲಿ ಭಾಗವಹಿಸಿದ್ದಾರೆ. 2019ರಲ್ಲಿ ನೇಪಾಳನಲ್ಲಿ ಭಾರತ ಮತ್ತು ನೇಪಾಳ ಪಂದ್ಯಾವಳಿ ಉತ್ತಮ ಪ್ರದರ್ಶನ ವನ್ನು ತೊರಿಸಿದ್ದಾರೆ. 2021 ಡಿಸೆಂಬರ್‌ನಲ್ಲಿ ಮೂರು ದಿನಗಳ ಕಾಲ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮ್ಯಾನ್‌ ಆಗಿ ಆಡುವ ಮೂಲಕ ಅಬ್ಬರದ ಬ್ಯಾಟಿಂಗ್ ಮಾಡಿ, ಲೋಕೇಶ್ 142 ರನ್‍ಗಳನ್ನು ಕಲೆ ಹಾಕಿ ಮಿಂಚಿದ್ದಾರೆ. ಸರಣಿಯಲ್ಲಿ ಉತ್ತಮ ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸರಣಿಯ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಲೋಕೇಶ್ ಅವರು ಪಡೆದುಕೊಂಡಿದ್ದರು.

    ಬಡವತದಲ್ಲಿ ಕುಟುಂಬ:
    ಲೋಕೇಶ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದರು ಸಹ ತಾಲೂಕಿನ ಯಡಳ್ಳಿ ಗ್ರಾಮದ ಪುಟ್ಟ ಮನೆಯಲ್ಲಿ ಇರುವ ಲೋಕೇಶ್ ಅವರ ತಂದೆ, ತಾಯಿ ಈಗಲೂ ಸಹ ಬಡತನದಲ್ಲೇ ಕಾಲ ಕಳೆಯುತ್ತಿದ್ದಾರೆ. ಇರುವ ಕೊಂಚ ಜಮೀನಿನಲ್ಲಿಯೇ ಕೃಷಿ ಮಾಡಿಕೊಂಡು, ಬೆಟ್ಟದಲ್ಲಿ ಸಿಗುವ ಕಟ್ಟಿಗೆಗಳಿಂದ ಮನೆ ಬಳಕೆ ವಸ್ತುಗಳನ್ನು ಸಿದ್ಧ ಪಡಿಸಿ, ಮಾರುಕಟ್ಟೆಯಲ್ಲಿ ಅವುಗಳನ್ನು ಮಾರಾಟ ಮಾಡಿ, ಬದುಕು ಸಾಗಿಸುತ್ತಿದ್ದಾರೆ. ಮಗ ಉತ್ತಮ ಪ್ರದರ್ಶನ ತೋರಿ ಭಾರತ ದೇಶದಲ್ಲಿಯೇ ಹೆಸರು ವಾಸಿಯಾದರೂ ಸಹ ಪಾಲಕರು ಮಾತ್ರ ಬಡತನದಲ್ಲಿ ಕೈತೊಳೆಯುತ್ತಿದ್ದಾರೆ. ರಾಷ್ಟ್ರ ತಂಡಕ್ಕೆ ಆಯ್ಕೆಯಾಗಿ ನಾಲ್ಕೈದು ವರ್ಷಗಳು ಕಳೆದರೂ ಸಹ ರಾಜ್ಯ ಸರ್ಕಾರ ಗುರುತಿಸಿ ಗೌರವಿಸಲು ಮುಂದಾಗಿಲ್ಲ. ಪಂದ್ಯಗಳನ್ನು ಆಡಿದ ವೇಳೆಯಲ್ಲಿ ದೊರೆಯುವ ಕೊಂಚ ಆದಾಯದಲ್ಲಿಯೇ ಬದುಕು ಸಾಗಿಸಬೇಕಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ಸಹಾಯ ಧನಗಳು ಸಹ ದೊರೆತಿಲ್ಲ ಎನ್ನುವುದು ಲೋಕೇಶ್ ಅವರ ಮಾತಾಗಿದ್ದು, 2022ರಲ್ಲಿ ನಡೆಯಲಿರುವ ಅಂಧರ ವಿಶ್ವಕಪ್ ಪಂದ್ಯಾವಳಿಯನ್ನು ಆಡುವ ಕನಸು ಕಟ್ಟಿಕೊಂಡು ಕ್ರಿಕೆಟ್ ಆಟದ ಮೂಲಕ ಜೀವನ ರೂಪಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

  • ಸ್ಯಾಂಡಲ್‍ವುಡ್ ಕಲಾ ನಿರ್ದೇಶಕ ಲೋಕೇಶ್ ಆತ್ಮಹತ್ಯೆಗೆ ಶರಣು

    ಸ್ಯಾಂಡಲ್‍ವುಡ್ ಕಲಾ ನಿರ್ದೇಶಕ ಲೋಕೇಶ್ ಆತ್ಮಹತ್ಯೆಗೆ ಶರಣು

    ಬೆಂಗಳೂರು: ಕೊರೊನಾದಿಂದಾಗಿ ಎಲ್ಲ ವಲಯಗಳಿಗೂ ಎಫೆಕ್ಟ್ ಆಗಿದ್ದು, ಸಿನಿಮಾ ರಂಗ ಸ್ಥಗಿತಗೊಂಡು ನೂರಾರು ಕಲಾವಿದರು ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಬೆಲ್ ಬಾಟಮ್, ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡಿರುವ ಲೋಕೇಶ್ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕೊರೊನಾ ಲಾಕ್‍ಡೌನ್ ಆದಾಗಿನಿಂದ ಕೆಲಸವಿಲ್ಲದೆ ಲೋಕೇಶ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು ಎಂದು ತಿಳಿದು ಬಂದಿದೆ. ಮೂಲತಃ ನಾಗಮಂಗಲದವರಾಗಿದ್ದ ಲೋಕೇಶ್ ಕೆಲಸದ ನಿಮಿತ್ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಪೋಷಕರನ್ನು ಕಳೆದುಕೊಂಡಿದ್ದ ಲೋಕೇಶ್ ಸೋದರನ ಜೊತೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬೆಲ್ ಬಾಟಮ್ ಟು ಹಾಗೂ ಬನಾರಸ್ ಸಿನಿಮಾಗೆ ಕೆಲಸ ಮಾಡಬೇಕಿತ್ತು. ಆದ್ರೆ ಲಾಕ್‍ಡೌನ್ ಆಗಿದ್ದರಿಂದ ಸಿನಿಮಾದ ಕೆಲಸ ಸಹ ಸ್ಥಗಿತಗೊಂಡಿತ್ತು. ಲಾಕ್‍ಡೌನ್ ವೇಳೆ ಒಂಟಿಯಾಗಿದ್ದ ಲೋಕೇಶ್ ಖಿನ್ನತೆಗೆ ಒಳಗಾಗಿದ್ದರು. ಕಷ್ಟ ಅಂತ ಕೇಳಿದ್ದರೆ ಸಹಾಯ ಮಾಡ್ತಿದ್ದ, ಸ್ವಾಭಿಮಾನಿ ಲೋಕೇಶ್ ಯಾರ ಬಳಿ ಕೈಚಾಚುವವರಲ್ಲ. ಕೊರೊನಾ ಕಾಟ, ಒಂಟಿತನ, ಆರ್ಥಿಕ ಸಂಕಷ್ಟ, ಇದೆಲ್ಲವೂ ಸೇರಿ ಲೋಕೇಶ್ ಅವರನ್ನ ಬಲಿ ಪಡೆದಿವೆ ಎಂದು ನಿರ್ಮಾಪಕ ಸಂತೋಷ್ ಸಂತಾಪ ಸೂಚಿಸಿದ್ದಾರೆ.

    ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಶವ ಪರೀಕ್ಷೆ ಬಳಿಕ ಲೋಕೇಶ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ನಿರ್ದೇಶಕ ಜಯತೀರ್ಥ ಸೇರಿದಂತೆ ಹಲವು ಆಪ್ತರು ರಾಮಯ್ಯ ಆಸ್ಪತ್ರೆಗೆ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ನಾಳೆ ನಾಗಮಂಗಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

  • ಮನಪರಿವರ್ತನಾ ಕೇಂದ್ರವಾದ ಚಿತ್ರದುರ್ಗ ಜೈಲು- ಅಧೀಕ್ಷಕ ಲೋಕೇಶ್ ಪಬ್ಲಿಕ್ ಹೀರೋ

    ಮನಪರಿವರ್ತನಾ ಕೇಂದ್ರವಾದ ಚಿತ್ರದುರ್ಗ ಜೈಲು- ಅಧೀಕ್ಷಕ ಲೋಕೇಶ್ ಪಬ್ಲಿಕ್ ಹೀರೋ

    -ದಕ್ಷಿಣ ಭಾರತದಲ್ಲಿಯೇ ಬೆಸ್ಟ್ ಜೈಲು

    ಚಿತ್ರದುರ್ಗ: ಸಾಮಾನ್ಯವಾಗಿ ಜೈಲು ಅಂದರೆ ಕೈದಿಗಳ ಪಾಲಿನ ಸೆರೆಮನೆ. ಹೀಗಾಗಿ ತಪ್ಪು ಮಾಡಿ ಜೈಲು ಸೇರಿದವರಿಗೆ ಅಲ್ಲಿ ನರಕಯಾತನೆ ತಪ್ಪಿದ್ದಲ್ಲ ಅನ್ನೋ ಮಾತುಗಳಿವೆ. ಆದರೆ ಕೋಟೆನಾಡು ಚಿತ್ರದುರ್ಗದ ಕಾರಾಗೃಹ ಮಾತ್ರ ಕೈದಿಗಳ ಮನಪರಿವರ್ತನಾ ಕೇಂದ್ರವೆನಿಸಿ, ಅವರ ಪಾಲಿಗೆ ನೆಮ್ಮದಿಯ ಸ್ವರ್ಗವೆನಿಸಿದೆ. ಇದಕ್ಕೆ ಕಾರಣ ಜೈಲಿನ ಅಧೀಕ್ಷಕ ಲೋಕೇಶ್.

    ಹೌದು. ಚಿತ್ರದುರ್ಗ ಜಿಲ್ಲಾ ಕಾರಗೃಹದ ಅಧೀಕ್ಷಕ ಲೋಕೇಶ್, ಸಿಬ್ಬಂದಿ ಹಾಗೂ ಕೈದಿಗಳ ಪರಿಶ್ರಮದಿಂದ ಈ ಜೈಲು ದಕ್ಷಿಣ ಭಾರತದಲ್ಲೇ ಬೆಸ್ಟ್ ಎನಿಸಿದೆ. ಕೋಟೆನಾಡಿನ ಜೈಲಿನಲ್ಲಿ ಸುಸಜ್ಜಿತ ವಿಡಿಯೋ ಕಾನ್ಫರೆನ್ಸ್ ಹಾಲ್ ಕೂಡ ಇದೆ. ಅಲ್ಲದೇ ಚಿಕಿತ್ಸೆಗಾಗಿ ಎರಡು ಬೆಡ್‍ಗಳ ಆಸ್ಪತ್ರೆ, ಸಹ ಇಲ್ಲಿದೆ. ಕೈದಿಗಳ ಮನಪರಿವರ್ತನೆಗಾಗಿ ನಿತ್ಯ ವಿಶೇಷ ಪಾಠ ಪ್ರವಚನಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಡುಗೆ ಮನೆ ಕಟ್ಟಡ ಕಾಮಗಾರಿ ಹಾಗೂ ತೋಟದಲ್ಲಿ ದುಡಿದ ಕೈದಿಗಳ ಪರವಾಗಿ ವಕೀಲರಿಗೆ ಮತ್ತು ಕುಟುಂಬಸ್ಥರಿಗೆ 38 ಸಾವಿರ ಹಣ ಕೂಲಿ ತಲುಪಿಸಲಾಗಿದೆ ಎಂದು ಕಾರಾಗೃಹ ಶಿಕ್ಷಕ ಶ್ರೀರಾಮ ರೆಡ್ಡಿ ಹೇಳಿದ್ದಾರೆ.

    ಒಟ್ಟಾರೆ ಅಧಿಕಾರಿಗಳು ಮನಸ್ಸು ಮಾಡಿದರೆ ಎಂತಹ ಬದಲಾವಣೆ ಬೇಕಿದ್ದರೂ ತರಬಹುದು ಅನ್ನೋದಕ್ಕೆ ಚಿತ್ರದುರ್ಗ ಜಿಲ್ಲಾ ಕಾರಗೃಹವೇ ಸಾಕ್ಷಿಯಾಗಿದೆ. ಜೈಲು ಅಧೀಕ್ಷಕ ಮತ್ತು ಸಿಬ್ಬಂದಿ ಕೆಲಸ ಎಲ್ಲರಿಗೂ ಮಾದರಿಯಾಗಿದ್ದಾರೆ.

  • ವಿಡಿಯೋ: ಮೊಟ್ಟೆಯಿಂದ ಹೊರಬರ್ತಿದ್ದಂತೆ ಹೆಡೆಯೆತ್ತುತ್ತಿವೆ 16 ನಾಗರ ಹಾವಿನ ಮರಿಗಳು!

    ವಿಡಿಯೋ: ಮೊಟ್ಟೆಯಿಂದ ಹೊರಬರ್ತಿದ್ದಂತೆ ಹೆಡೆಯೆತ್ತುತ್ತಿವೆ 16 ನಾಗರ ಹಾವಿನ ಮರಿಗಳು!

    ಬೆಂಗಳೂರು: ನಾಗರಹಾವಿನ ಮೊಟ್ಟೆಗಳಿಂದ ಬರೋಬ್ಬರಿ 16 ಮರಿಗಳು ಹೊರಬಂದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ.

    ನೆಲಮಂಗಲದ ಸ್ನೇಕ್ ಲೋಕೇಶ್ ಕಳೆದ ಮೂರು ತಿಂಗಳ ಹಿಂದೆ ಹೆಸರಘಟ್ಟ ಗ್ರಾಮದಲ್ಲಿ ಮೊಟ್ಟೆಗಳನ್ನ ಸಂಗ್ರಹಿಸಿದ್ದರು. ಮೂರು ತಿಂಗಳ ಬಳಿಕ ಮೊಟ್ಟೆಯಿಂದ ಹಾವಿನ ಮರಿಗಳು ಹೊರಬಂದಿವೆ. ಹುಟ್ಟುತ್ತಲೇ ಹೆಡೆಯೆತ್ತಿ ನಾಗರಹಾವಿನ ಮರಿಗಳು ಬುಸುಗುಡುತ್ತಿವೆ. ಮೊಟ್ಟೆಯಿಂದ ಹಾವು ಮರಿಗಳು ಹೊರ ಬರುವ ಅಪರೂಪದ ದೃಶ್ಯವನ್ನು ಲೋಕೇಶ್ ಕುಟುಂಬಸ್ಥರು ಸೆರೆಹಿಡಿದ್ದಾರೆ.

    ಮಾರ್ಚ್ ತಿಂಗಳು ಸಾಮಾನ್ಯವಾಗಿ ನಾಗರಹಾವು ಮೊಟ್ಟೆಯಿಡುವ ಸಮಯವಾಗಿದೆ. ಹೆಸರಘಟ್ಟದಲ್ಲಿ ನಾರಾಯಣ ಎಂಬವರ ಮನೆಯಲ್ಲಿ ನಾಗರಹಾವು ಮೊಟ್ಟೆ ಇಟ್ಟು ಹೋಗಿತ್ತು. ಇದನ್ನು ಗಮನಿಸಿದ ಮನೆ ಮಾಲೀಕ ನನಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದರು. ನಾನು ಹೋಗಿ ನಾಗರಹಾವಿನ ಮೊಟ್ಟೆಗಳನ್ನು ತಂದು ನಮ್ಮ ಮನೆಯಲ್ಲಿ ಪೋಷಣೆ ಮಾಡುತ್ತಿದ್ದು, ಇಂದು 16 ನಾಗರಹಾವಿನ ಮರಿಮಗಳು ಮೊಟ್ಟೆಯಿಂದ ಹೊರ ಬಂದಿವೆ. ಸದ್ಯಕ್ಕೆ 16 ಹಾವಿನ ಮರಿಗಳು ಆರೋಗ್ಯವಾಗಿವೆ ಎಂದು ಲೋಕೇಶ್ ತಿಳಿಸಿದ್ದಾರೆ.

    ನಮ್ಮ ತಂದೆ ತುಂಬ ವರ್ಷದಿಂದ ನಾಗರಹಾವನ್ನು ರಕ್ಷಣೆ ಮಾಡುತ್ತಿದ್ದಾರೆ. ಅನೇಕ ಕಡೆಯಿಂದ ಹಾವಿನ ಮರಿಗಳನ್ನು ತರುತ್ತಿರುತ್ತಾರೆ. ಇಂದು ನಮ್ಮ ಮನೆಯಲ್ಲಿ 16 ನಾಗರಹಾವಿನ ಮರಿಗಳಾಗಿವೆ. ಇದರಿಂದ ಎಲ್ಲರಿಗೂ ಸಂತೋಷವಾಗಿದೆ ಎಂದು ಲೋಕೇಶ್ ಅವರ ಮಗ ಹೇಳಿದ್ದಾರೆ.

  • ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಕ್ಕೆ 2 ವರ್ಷವಾದ್ರೂ ಪರಿಹಾರ ಸಿಕ್ಕಿಲ್ಲ

    ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಕ್ಕೆ 2 ವರ್ಷವಾದ್ರೂ ಪರಿಹಾರ ಸಿಕ್ಕಿಲ್ಲ

    ಮಂಡ್ಯ:  ಎಐಸಿಸಿ ಉಪಾಧ್ಯಕ್ಷ  ರಾಹುಲ್ ಗಾಂಧಿ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದ ರೈತ ಕುಟುಂಬಕ್ಕೆ ಎರಡು ವರ್ಷವಾದರೂ ಪರಿಹಾರ ಸಿಕ್ಕಿಲ್ಲ.

    ಜಿಲ್ಲೆಯ ಪಾಂಡವಪುರ ತಾಲೂಕಿನ ಸಣಬದಕೊಪ್ಪಲು ಗ್ರಾಮದ ರೈತ ಲೋಕೇಶ್, 2015 ಅಕ್ಟೋಬರ್ 09 ರಂದು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಇದೇ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಮನೆಗೆ ಭೇಟಿ ನೀಡಲು ರಾಹುಲ್ ಗಾಂಧಿ ಮಂಡ್ಯ ಜಿಲ್ಲೆಗೆ ಆಗಮಿಸಿದ್ರು.

    ರಾಹುಲ್ ಗಾಂಧಿಯೊಂದಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಇಂಧನ ಸಚಿವ ಡಿಕೆ ಶಿವಕುಮಾರ್, ಮಾಜಿ ಸಂಸದೆ ರಮ್ಯಾ ಸೇರಿದಂತೆ ಕಾಂಗ್ರೆಸ್‍ನ ಘಟಾನುಘಟಿ ನಾಯಕರು ಜಿಲ್ಲೆಗೆ ಆಗಮಿಸಿದ್ರು. ಆತ್ಮಹತ್ಯಗೆ ಶರಣಾಗಿದ್ದ ವಿಷ್ಯ ಕೇಳಿದ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ದಂಡಿನೊಂದಿಗೆ ನೇರವಾಗಿ ಆತ್ಮಹತ್ಯೆಗೆ ಶರಣಾದ ರೈತ ಲೋಕೇಶ್ ಮನೆಗೆ ಭೇಟಿ ನೀಡಿದ್ರು.

    ಲೋಕೇಶ್ ಮೃತದೇಹದ ಮುಂದೆ ಕುಳಿತು ಕಣ್ಣೀರು ಹಾಕುತ್ತಿದ್ದ ಕುಟುಂಬಕ್ಕೆ ಸಾಂತ್ವನ ಹೇಳಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಒಂದು ಲಕ್ಷ ರೂ. ಚೆಕ್ ನೀಡಿ, ಸರ್ಕಾರದಿಂದ ಪರಿಹಾರ ನೀಡುವ ಭರವಸೆ ಕೂಡ ನೀಡಿದ್ರು. ಆದ್ರೆ ರಾಹುಲ್ ಗಾಂಧಿ ರೈತನ ಮನೆಗೆ ಬಂದು ಹೋಗಿ ಸುಮಾರು ಎರಡು ವರ್ಷ ಮುಗಿಯುತ್ತಾ ಬಂದರೂ, ರೈತ ಕುಟುಂಬಕ್ಕೆ ಸರ್ಕಾರದ ಪರಿಹಾರದ ಹಣ ಮಾತ್ರ ದೊರಕಿಲ್ಲ.

    ಆತ್ಮಹತ್ಯೆಗೆ ಶರಣಾದ ರೈತ ಲೋಕೇಶ್ ಅವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗನನ್ನು ಮಂಡ್ಯ ಸಂಸದ ಪುಟ್ಟರಾಜು ಓದಿಸುತ್ತಿದ್ದಾರೆ. ಲೋಕೇಶ್ ಪತ್ನಿ ಶೋಭಾ ಕೂಲಿ ಮಾಡಿಕೊಂಡು ಮನೆಯ ಜವಾಬ್ದಾರಿ ಹೊತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸರ್ಕಾರದ ಪರಿಹಾರಕ್ಕಾಗಿ ಲೋಕೇಶ್ ಕುಟುಂಬ ಅಧಿಕಾರಿಗಳ ಬಳಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

    ಸೆಪ್ಟೆಂಬರ್ 8 ರಂದು ಮಂಡ್ಯದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದ ಪುಟ್ಟರಾಜು ವೇದಿಕೆ ಮೇಲೆಯೇ ರೈತ ಕುಟುಂಬಕ್ಕೆ ಪರಿಹಾರ ಸಿಗದಿರುವ ಬಗ್ಗೆ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ರು. ಇದರ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಆದ್ರೆ ಪರಿಹಾರ ಸಿಗೋದು ಯಾವಾಗ? ಕಷ್ಟಕಾಲದಲ್ಲಿಯೂ ಪರಿಹಾರ ಸಿಗದಿದ್ರೆ ಹೇಗೆ ಅನ್ನೋದು ರೈತ ಕುಟುಂಬದ ಪ್ರಶ್ನೆಯಾಗಿದೆ.

    https://youtu.be/-gbDrL0mSBk