Tag: Lok sabha Session

  • ಸೋಮವಾರದಿಂದ ಲೋಕಸಭಾ ಅಧಿವೇಶನ – ಯಾವ ದಿನ ಏನು ನಡೆಯುತ್ತದೆ?

    ಸೋಮವಾರದಿಂದ ಲೋಕಸಭಾ ಅಧಿವೇಶನ – ಯಾವ ದಿನ ಏನು ನಡೆಯುತ್ತದೆ?

    ನವದೆಹಲಿ: 18ನೇ ಲೋಕಸಭೆಯ (Lok Sabha) ಮೊದಲ ಅಧಿವೇಶನ (Session) ಸೋಮವಾರ ಚಾಲನೆ ಸಿಗಲಿದೆ. ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಹಂಗಾಮಿ ಸ್ಪೀಕರ್‌ ಒಡಿಶಾದ ಬಿಜೆಪಿ ಸಂಸದ ಭತೃಹರಿ (Bhartruhari Mahtab) ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

    ಸೋಮವಾರ ಮತ್ತು ಮಂಗಳವಾರ ನೂತನ ಸಂಸದರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ (PM Narendra Modi), ಕೇಂದ್ರ ಮಂತ್ರಿಗಳು ಸೇರಿ 280 ಸಂಸದರ ಪ್ರತಿಜ್ಞಾವಿಧಿ ನಡೆಯಲಿದೆ. ಉಳಿದವರಿಗೆ ನಾಡಿದ್ದು ಪ್ರಮಾಣವಚನ ಬೋಧಿಸಲಾಗುತ್ತದೆ.

     

    ಜೂನ್ 26ಕ್ಕೆ ಸ್ಪೀಕರ್ ಸ್ಥಾನಕ್ಕೆ ಎಲೆಕ್ಷನ್ ನಡೆಯಲಿದೆ. ಸ್ಪೀಕರ್ ಸ್ಥಾನಕ್ಕೆ ಮತ್ತೆ ಓಂ ಬಿರ್ಲಾ ಹೆಸರು ಕೇಳಿಬರುತ್ತಿದೆ. ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ವಿಪಕ್ಷಗಳು ಬೇಡಿಕೆ ಇಟ್ಟಿವೆ.

    ಜೂನ್‌ 27 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಿರೀಕ್ಷೆಯಂತೆಯೇ ನೀಟ್ (NEET) ಹಗರಣದ ಅಸ್ತ್ರವನ್ನು ಝಳಪಿಸಲು ವಿಪಕ್ಷಗಳು ಸಜ್ಜಾಗಿವೆ. ಇದನ್ನೂ ಓದಿ: NEET ಪರೀಕ್ಷಾ ಅಕ್ರಮ ಕೇಸ್:‌ ʻಸಾಲ್ವರ್‌ ಗ್ಯಾಂಗ್‌ʼ ಕೆಲಸ ಏನಾಗಿತ್ತು? ಮಾಸ್ಟರ್‌ ಮೈಂಡ್‌ ಮಾಫಿಯಾಗೆ ಸಿಲುಕಿದ್ದು ಹೇಗೆ?

     

    ಹಂಗಾಮಿ ಸ್ಪೀಕರ್‌ ಆಗಿ ಭತೃಹರಿ ನೇಮಕವಾಗಿದ್ದಕ್ಕೆ ವಿಪಕ್ಷಗಳು ಈಗಾಗಲೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಕೇರಳ ಕಾಂಗ್ರೆಸ್ ಸದಸ್ಯ ಕೆ.ಸುರೇಶ್ ಅವರು 8 ಬಾರಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಲೋಕಸಭೆಯ ಹಿರಿಯ ಸದಸ್ಯರಾಗಿರುವ ಕಾರಣ ಅವರಿಗೆ ಹಂಗಾಮಿ ಸ್ಪೀಕರ್‌ ಸ್ಥಾನ ನೀಡಬೇಕಿತ್ತು ಎಂದು ಆಗ್ರಹಿಸಿವೆ.

    ವಿಪಕ್ಷಗಳ ಆಗ್ರಹಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ, ಭತೃಹರಿ ಅವರು ಸತತ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಸುರೇಶ್‌ ಅವರು 1998 ಮತ್ತು 2004ರ ಚುನಾವಣೆಯಲ್ಲಿ ಸೋತಿದ್ದಾರೆ. ಈಗ ಅವರು ಸತತ 4 ಬಾರಿ ಜಯಗಳಿಸಿದ್ದಾರೆ ಎಂದು ತಿಳಿಸಿದ್ದರು.

    ಸುರೇಶ್‌ ಅವರು ಕೇರಳದ ಮಾವೇಲಿಕರ ಲೋಕಸಭಾ ಕ್ಷೇತ್ರದಿಂದ 1989, 1991, 1996, 1999, 2009, 2014, 2019, 2024ರ ಚುನಾವಣೆಯಲ್ಲಿ ಗೆದ್ದಿದ್ದಾರೆ.

  • ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ

    ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ

    ನವದೆಹಲಿ: ಬಿಜೆಪಿ ಸಂಸದ ಓಂ ಬಿರ್ಲಾ ಅವರು 17ನೇ ಲೋಕಸಭೆಗೆ ನೂತನ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

    ಸೋಮವಾರ ಲೋಕಸಭಾ ಅಧಿವೇಶನ ಆರಂಭವಾಗಿದ್ದು, ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಓಂ ಬಿರ್ಲಾ ಅವರು ಎರಡನೇ ಬಾರಿ ರಾಜಸ್ಥಾನದ ಸಂಸದರಾಗಿ ಆಯ್ಕೆಯಾಗಿದ್ದು, 17ನೇ ಲೋಕಸಭೆಗೆ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಸುಮಿತ್ರಾ ಮಹಾಜನ್ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಬಿರ್ಲಾ ಪತ್ನಿ ಅಮಿತ್ ಬಿರ್ಲಾ, ನಮ್ಮ ಕುಟಂಬಕ್ಕೆ ಹೆಮ್ಮೆ ತರುವಂತಹ ವಿಚಾರವಿದು. ಬಹಳ ಸಂತೋಷವಾಗಿದೆ. ಇವರನ್ನು ಸ್ಪಿಕರ್ ಆಗಿ ಆಯ್ಕೆ ಮಾಡಿದ ಕ್ಯಾಬಿನೆಟ್‍ಗೆ ಧನ್ಯವಾದಗಳು ಎಂದರು.

    ಬಿರ್ಲಾ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ರಾಮ್‍ನಾರಾಯಣ್ ಮೀನಾ ವಿರುದ್ಧ 2.5 ಲಕ್ಷ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು.

    56 ವರ್ಷದ ಬಿರ್ಲಾ, ಬಿಜೆಪಿ ಯೂತ್ ವಿಭಾಗದೊಂದಿಗೆ ನಿರಂತರ ಸಂಬಂಧ ಹೊಂದಿದ್ದು, ಸತತ ಎರಡು ಬಾರಿ ರಾಜಸ್ಥಾನ ಕೋಟಾದ ಶಾಸಕರಾಗಿದ್ದರು. ಅಲ್ಲದೆ ಬಿಜೆಪಿ ಹಿರಿಯ ನಾಯಕ ಹಾಗೂ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಆಪ್ತರಾಗಿದ್ದಾರೆ.

    ನೂತನ ಸ್ಪೀಕರ್ ಅಧಿಕಾರಕ್ಕೆ ಬಂದ ನಂತರ ತಾತ್ಕಾಲಿಕ ಸ್ಪೀಕರ್ ಆಗಿ ಲೋಕಸಭೆಯಲ್ಲಿ 300 ಸಂಸದರಿಗೆ ಪ್ರಮಾಣ ವಚನ ನೀಡಿದ ವೀರೇಂದ್ರ ಕುಮಾರ್‍ರವರು ಕರ್ತವ್ಯದಿಂದ ಕೆಳಗಿಳಿಯಲಿದ್ದಾರೆ.

    ಈ ಬಾರಿ ಸಂಸದೆ ಮನೇಕಾ ಗಾಂಧಿಯವರನ್ನು ಸಂಪುಟದಿಂದ ಕೈ ಬಿಡಲಾಗಿದೆ. ಮನೇಕಾ ಗಾಂಧಿಯವರೇ ಲೋಕಸಭಾ ಸ್ಪೀಕರ್ ಆಗಿ ನೇಮಕಗೊಳ್ಳಲಿದ್ದಾರೆಂಬ ಸುದ್ದಿಯೊಂದು ಬಲವಾಗಿ ಹರಿದಾಡಿತ್ತು. ತಮ್ಮನ್ನು ಸಂಪುಟದಿಂದ ಕೈ ಬಿಟ್ಟ ಕುರಿತು ಇದೂವರೆಗೂ ಮನೇಕಾ ಗಾಂಧಿ ಬಹಿರಂಗವಾಗಿ ಹೇಳಿಕೆ ನೀಡಿಲ್ಲ.

  • ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕ ಸಂಸದರು

    ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕ ಸಂಸದರು

    ನವದೆಹಲಿ: 17ನೇ ಲೋಕಸಭೆಯ ಮೊಟ್ಟ ಮೊದಲ ಅಧಿವೇಶನ ಆರಂಭವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಆಗಿರುವ 542 ಮಂದಿ ಸದಸ್ಯರು ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಕರ್ನಾಟಕದಿಂದ ಆಯ್ಕೆ ಆಗಿರುವ ಸಂಸದರಾದ ಸದಾನಂದ ಗೌಡ, ಸುರೇಶ್ ಅಂಗಡಿ ಅವರು ಕನ್ನಡದಲ್ಲೇ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ವೇಳೆ ಇತರೇ ಸಂಸದರು ಮೇಜು ಕುಟ್ಟಿ ಸ್ವಾಗತ ಮಾಡಿದರು.

    ಕಳೆದ ಲೋಕಸಭೆಯಲ್ಲಿ ಅನಂತ್ ಕುಮಾರ್ ನಿರ್ವಹಿಸುತ್ತಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನೇ ಸದಾನಂದ ಗೌಡರಿಗೆ ನೀಡಲಾಗಿದೆ. ಇಂದು ಡಿವಿಎಸ್ ಅವರು 4ನೇಯವರಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ 12ನೇಯವರಾಗಿ ಸಂಸರಾದ ಪ್ರಹ್ಲಾದ್ ಜೋಶಿ ಅವರು ಕೂಡ ಕನ್ನಡಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.

    ಲೋಕಸಭೆಯಲ್ಲಿ ಆಡಳಿತ ಪಕ್ಷದ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಮೊದಲಿಗರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮಧ್ಯಪ್ರದೇಶದ ಸಾಗರ್ ಕ್ಷೇತ್ರದ ಸಂಸದ ವೀರೇಂದ್ರ ಕುಮಾರ್ ಹಂಗಾಮಿ ಸ್ಪೀಕರ್ ಆಗಿದ್ದು ಹೊಸ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಿ ಮೋದಿ ಬಳಿಕ ರಾಜ್‍ನಾಥ್ ಸಿಂಗ್, ನಿತಿನ್ ಗಡ್ಕರಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

    542 ಸಂಸದರಲ್ಲಿ 267 ಮಂದಿ ಲೋಕಸಭೆಗೆ ಹೊಸ ಸದಸ್ಯರಾಗಿದ್ದು, ಅತೀ ದೊಡ್ಡ ಪಕ್ಷವಾಗಿರುವ ಬಿಜೆಪಿ 303 ಸದಸ್ಯ ಬಲದ ಪ್ರಚಂಡ ಬಹುಮತ ಹೊಂದಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಲೋಕಸಭೆಯಲ್ಲಿ ಯಾವುದೇ ಅಧಿಕೃತ ವಿಪಕ್ಷವಿಲ್ಲ. ಕಾಂಗ್ರೆಸ್ 52 ಸಂಸದರನ್ನು ಹೊಂದಿದ್ದರೂ ಅಧಿಕೃತ ವಿಪಕ್ಷ ಸ್ಥಾನಕ್ಕೆ 55 ಸ್ಥಾನಗಳು ಅಗತ್ಯವಿದೆ. ಉಳಿದಂತೆ ಡಿಎಂಕೆ -23, ಟಿಎಂಸಿ -22, ಜೆಡಿಯು – 16, ಬಿಎಸ್‍ಪಿ -10, ವೈಎಸ್‍ಆರ್‍ಪಿ -22, ಶಿವಸೇನೆ -18, ಬಿಜೆಡಿ – 12, ಟಿಆರ್‍ಎಸ್ -9, ಎಲ್‍ಜೆಪಿ – 6 ಸಂಸದರನ್ನು ಹೊಂದಿದೆ. ಪಕ್ಷೇತರ ಸಂಸದೆಯಾಗಿ ಆಯ್ಕೆ ಇತಿಹಾಸ ನಿರ್ಮಿಸಿರುವ ಮಂಡ್ಯ ಸಂಸದೆ ಸುಮಲತಾ ನಾಳೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

  • ಲೋಕಸಭೆಯಲ್ಲೂ ಆಪರೇಷನ್ ಆಡಿಯೋ ಬಿಸಿಬಿಸಿ ಚರ್ಚೆ

    ಲೋಕಸಭೆಯಲ್ಲೂ ಆಪರೇಷನ್ ಆಡಿಯೋ ಬಿಸಿಬಿಸಿ ಚರ್ಚೆ

    – ಬಿಜೆಪಿ ವಿರುದ್ಧ ಚಾಟಿ ಬೀಸಿದ ಮಲ್ಲಿಕಾರ್ಜುನ ಖರ್ಗೆ, ಎಚ್‍ಡಿಡಿ

    ನವದೆಹಲಿ: ಆಪರೇಷನ್ ಆಡಿಯೋ ವಿಚಾರ ಲೋಕಸಭಾ ಕಲಾಪದಲ್ಲಿಯೂ ಭಾರೀ ಚರ್ಚೆಯಾಗಿದ್ದು, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಾಸಕರನ್ನು ಖರೀದಿ ಮಾಡಲು ಯತ್ನಿಸಿದ ಆಡಿಯೋ ಬಿಡುಗಡೆಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಆಮಿಷ ಒಡ್ಡಿ ರಾಜೀನಾಮೆ ಕೊಡಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನನ್ನದೇ ಲೋಕಸಭೆ ಕ್ಷೇತ್ರದ ಗುರುಮಿಠಕಲ್ ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಅಧಿವೇಶನಲ್ಲಿ ಆರೋಪಿಸಿದರು.

    ಶಾಸಕ ನಾಗನಗೌಡ ಅವರ ಮಗ ಶರಣಗೌಡ ಮೂಲಕ ಕುದುರೆ ವ್ಯಾಪಾರಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇದಕ್ಕೆ ಪೂರಕ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಡಿಯೋದಲ್ಲಿ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾಗಿಯೂ ಹೇಳಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರಿಗೆ 50 ಕೋಟಿ ರೂ. ನೀಡುವ ಬಗ್ಗೆ ಆಡಿಯೋದಲ್ಲಿ ಉಲ್ಲೇಖವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದರು.

    ಕಾನೂನು ತೊಡಕು ಉಂಟಾದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನಿಭಾಯಿಸುತ್ತಾರೆ. ಪಕ್ಷಕ್ಕೆ ಬಂದಲ್ಲಿ ಸಚಿವ ಸ್ಥಾನ ಮತ್ತು ಹಣ ನೀಡುತ್ತೇವೆ ಎನ್ನುವ ಅಂಶಗಳು ಆಡಿಯೋದಲ್ಲಿದೆ ಎಂದು ಕಿಡಿಕಾರಿದರು.

    ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಆಪರೇಷನ್ ಮಾಡುವುದನ್ನು ಮೊದಲು ಶುರು ಮಾಡಿದ್ದೆ ಬಿಜೆಪಿಯವರು. 2009ರಲ್ಲಿ ಬಿಜೆಪಿಯವರು ಶಾಸಕರನ್ನು ಖರೀದಿ ಮಾಡಿದರು. ಮತ್ತೆ ಆ ಕೆಲಸವನ್ನು ಆರಂಭಿಸಿದ್ದಾರೆ. ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷ ಒಡಲಾಗುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

    ಕಲಾಪಕ್ಕೂ ಮುನ್ನ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಅನೇಕ ನಾಯಕರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಆಪರೇಷನ್ ಕಮಲ ಸಂವಿಧಾನದ ಸಾವು, ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಮಾರಾಟವಾಗುತ್ತಿದೆ. ಶಾಸಕರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಘೋಷಣೆ ಕೂಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv