– ನನ್ನ ಮಗನಿಗೆ ಎಂಎಲ್‌ಸಿ, ನನಗೆ ರಾಜ್ಯಪಾಲರ ಹುದ್ದೆ ಆಫರ್ ಕೊಟ್ಟಿದ್ದಾರೆ
– ಮತ್ತೆ ರಾಜಾಹುಲಿ ಕುಟುಂಬದ ವಿರುದ್ಧ ಗುಡುಗಿದ ಈಶ್ವರಪ್ಪ
ಶಿವಮೊಗ್ಗ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ನಾನು ಸ್ಪರ್ಧಿಸುವುದು ಖಚಿತ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ. ನಾನು ಗೆದ್ದ ನಂತರ ವಿಜಯೇಂದ್ರ ತಮ್ಮ ರಾಜ್ಯಾಧ್ಯಕ್ಷರ ಹುದ್ದೆಗೆ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಮಾಜಿ ಸಚಿವ ಕೆ.ಎಸ್ ಈಶ್ವಪ್ಪ (KS Eshwarappa) ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗ (Shivamogga) ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಂದು ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಬಿ.ವೈ ರಾಘವೇಂದ್ರನನ್ನ (BY Raghavendra) ಸೋಲಿಸಿ, ಬಿಜೆಪಿ ಕಟ್ಟಾ ಅನುಯಾಯಿಯಾದ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಈಶ್ವರಪ್ಪ ಸ್ಪರ್ಧೆ ಬಗ್ಗೆ ಇಡೀ ರಾಜ್ಯದಲ್ಲಿ ಚರ್ಚೆ ಆಗ್ತಿದೆ. ಲೋಕಸಭೆ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ಚುನಾವಣಾ ಫಲಿತಾಂಶ ಬಂದು ಬಿಜೆಪಿ ಕಾರ್ಯಕರ್ತರ ವಿಜಯವಾಗುತ್ತಿದ್ದಂತೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಮ್ಮ ಹುದ್ದೆಗೆ ರಾಜೀನಾಮೆ ಕೊಡ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ 2ನೇ ಪಟ್ಟಿ ಇಂದು ಬಿಡುಗಡೆ – ಸಂಭಾವ್ಯ ಅಭ್ಯರ್ಥಿಗಳು ಯಾರು?
ಎಂಎಲ್‌ಸಿ, ರಾಜ್ಯಪಾಲರ ಹುದ್ದೆ ಆಫರ್ ಬಂದಿದೆ:
ಮುಂದಿನ ಜೂನ್‌ನಲ್ಲೇ ಪರಿಷತ್ ಸ್ಥಾನ ಖಾಲಿ ಆಗುತ್ತದೆ, ನಿಮ್ಮ ಮಗನನ್ನ ಎಂಎಲ್‌ಸಿ ಮಾಡ್ತೀವಿ. ನಿಮಗೆ ರಾಜ್ಯಪಾಲರ ಹುದ್ದೆ ಕೊಡ್ತೀವಿ ಅಂತ ಬಿಜೆಪಿ ಹೈಕಮಾಂಡ್ ನನಗೆ ಆಫರ್ ಕೊಟ್ಟಿದೆ. ನನಗೆ ಯಾವುದೇ ಸ್ಥಾನಮಾನ ಮುಖ್ಯವಲ್ಲ. ನನಗೆ ಸ್ಥಾನಮಾನ ಬೇಡ, ಪಕ್ಷ ಉಳಿಯಬೇಕು, ಬಿಎಸ್‌ವೈ ಕುಟುಂಬದ ಸರ್ವಾಧಿಕಾರದಿಂದ ಮುಕ್ತವಾಬೇಕು ಎಂಬುದಷ್ಟೇ ಮುಖ್ಯ ಎಂದು ಗುಡುಗಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರೀಕ್ಷೆಗೆ ಮೀರಿ ಬೆಂಬಲ ಸಿಗುತ್ತಿದೆ. ಸ್ವಾಮೀಜಿಗಳು ಬೆಂಬಲ ಕೊಡ್ತಿದ್ದಾರೆ, ಸಿಗಂಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ಆಶೀರ್ವಾದ ದೊರೆತಿದೆ. ಯಾವ ಕಾರಣಕ್ಕೂ ತೊಂದರೆ ಆಗಲ್ಲ, ನೂರಕ್ಕೆ ನೂರು ನೀವು ಗೆಲ್ಲುತ್ತೀರಾ ಎಂದು ಸ್ವಾಮೀಜಿಗಳು ಹೇಳಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: Chamarajanagara Lok Sabha 2024: ಕಾಂಗ್ರೆಸ್ ಕೋಟೆಗೆ ಎಂಟ್ರಿ ಕೊಟ್ಟಿರೋ ಬಿಜೆಪಿ ಮತ್ತೆ ಸಿಂಹಾಸನ ಏರುತ್ತಾ?
ಸರ್ವಾಧಿಕಾರಿ ಧೋರಣೆಯಿಂದ ಬಿಜೆಪಿ ಮುಕ್ತವಾಗಬೇಕು:
ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಕ್ಕಿದೆ, ಸರ್ವಾಧಿಕಾರಿ ಧೋರಣೆ ಇದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಬದಲಾವಣೆ ಮಾಡುವ ಪ್ರಯತ್ನ ರಾಜ್ಯದಲ್ಲಿ ನಡೆಯುತ್ತಿದೆ. ನಾನು ಸಹ ಆ ದಿಕ್ಕಿನಲ್ಲಿ ಪ್ರಯತ್ನ ಮಾಡ್ತಿದ್ದೇನೆ. ಯಾರೇ ಬಂದು ಮನವೊಲಿಸಿದರೂ ಹಿಂದೆ ಸರಿಯಲ್ಲ. ರಾಜ್ಯದಲ್ಲಿ ಈ ಬಾರಿ ಬಿಜೆಪಿ 28 ಸ್ಥಾನ ಗೆಲ್ಲಬೇಕು. ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಾನು ಕುಟುಂಬದ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲುತ್ತೇನೆ, ಗೆದ್ದ ನಂತರ ಬಿಜೆಪಿ ಸೇರುತ್ತೇನೆ ಎಂದು ನುಡಿದಿದ್ದಾರೆ.
ಲೋಕಸಭೆ ಚುನಾವಣೆ (Lok Sabha Elections) ಘೋಷಿತ ಅಭ್ಯರ್ಥಿಗಳ ಮತಬೇಟೆ ಚಟುವಟಿಕೆಗಳು ಜೋರಾಗಿಯ ನಡೆಯುತ್ತಿವೆ. ತಮ್ಮ ಕ್ಷೇತ್ರದ ಪ್ರಭಾವಿತರ ಮನೆ ಮನೆಗೆ ತೆರಳುತ್ತಿರುವ ಅಭ್ಯರ್ಥಿಗಳು ಚುನಾವಣೆಗೆ ಅವರ ಸಹಕಾರವನ್ನು ಕೇಳುತ್ತಿದ್ದಾರೆ. ಹಾಗೆಯೇ ಸಂಸದೆ ಶೋಭಾ ಕರಂದ್ಲಾಜೆ ಕೂಡ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ (Ashwini Puneet Rajkumar) ಅವರನ್ನು ಭೇಟಿ ಮಾಡಿದ್ದಾರೆ.
ದೊಡ್ಮನೆ ಸೊಸೆಯನ್ನು ಭೇಟಿ ಮಾಡಿದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಶೋಭಾ (Shobha Karandlaje), ನಮ್ಮ ಪಕ್ಷಕ್ಕೆ ಅವರ ಸಹಕಾರ ಕೇಳಿದ್ದೇವೆ. ಅಶ್ವಿನಿ ಅವರಿಗೆ ರಾಜಕೀಯ ಪಾರ್ಟಿ ಇಲ್ಲ. ಹಾಗಾಗಿ ನಿಮ್ಮ ಸಹಕಾರ, ಬೆಂಬಲ ಬೇಕು ಅಂತ ಕೇಳಿದ್ದೇವೆ. ಅವ್ರು ನಮ್ಮದೇ ಕ್ಷೇತ್ರದಲ್ಲಿದ್ದಾರೆ. ಪ್ರಚಾರದ ಬಗ್ಗೆ ಕೇಳಿಲ್ಲ’ ಎಂದಿದ್ದಾರೆ.
ರಾಜಕಾರಣದ ವಿಚಾರದಲ್ಲಿ ಪುನೀತ್ ಯಾವತ್ತಿಗೂ ಹಿಂದೇಟು ಹಾಕುತ್ತಲೇ ಇದ್ದರು. ಸ್ವತಃ ಶಿವರಾಜ್ ಕುಮಾರ್ ಪತ್ನಿ ಚುನಾವಣೆಗೆ ನಿಂತಾಗಲೂ ಅವರು ಸಪೋರ್ಟ್ ಮಾಡಲಿಲ್ಲ. ರಾಜಕಾರಣದಿಂದ ಅಂತರ ಕಾಪಾಡಿಕೊಂಡೇ ಬಂದರು. ಅಶ್ವಿನಿ ಅವರು ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಮನೆಗೆ ಬಂದವರನ್ನು ಸೌಜನ್ಯವಾಗಿ ಮಾತನಾಡಿಸಿದ್ದಾರೆ.
ಈ ಕಡೆ ಶಿವರಾಜ್ ಕುಮಾರ್ ಪತ್ನಿ ಗೀತಾ ಕೂಡ ಈ ಬಾರಿ ಲೋಕಸಭೆಯ ಕಣದಲ್ಲಿ ಇದ್ದಾರೆ. ಶಿವಮೊಗ್ಗದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ದೊಡ್ಮನೆಯಲ್ಲೇ ರಾಜಕಾರಣದ ಬಗ್ಗೆ ಭಿನ್ನ ನಿಲುವುಗಳಿವೆ.
ಶಿವಮೊಗ್ಗ: ಈ ಬಾರಿ ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ದೆಹಲಿಗೆ ಕರೆದುಕೊಂಡು ಬರುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರು ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಭರವಸೆ ನೀಡಿದ್ದಾರೆ.
ಶಿವಮೊಗ್ಗದ (Shivamogga) ಅಲ್ಲಮಪ್ರಭು ಫ್ರೀಡಂ ಪಾರ್ಕ್ ಆವರಣದಲ್ಲಿ ಆಯೋಜನೆಗೊಂಡಿದ್ದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಮೋದಿ ಅವರು ಕೈಗೊಂಡ ನಿರ್ಧಾರಗಳಿಗೆ ಕೈಜೋಡಿಸಿದ್ದೇವೆ. ಹಾಗಾಗಿ ಈ ಬಾರಿ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನ (BJP Candidates) ಗೆಲ್ಲಿಸಿ, ದೆಹಲಿಗೆ ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: Mandya Lok Sabha 2024: ಸಕ್ಕರೆ ನಾಡಿನ ಜನ ಸಿಹಿ ತಿನ್ನಿಸೋದು ಯಾರಿಗೆ?
ಕರ್ನಾಟಕದಲ್ಲಿ ಚುನಾವಣೆ ರಣ ಕಹಳೆ ಮೊಳಗಿಸಿದೆ. ಮೋದಿ ಸರ್ಕಾರ ಚುನಾವಣೆಗೆ ಕೆಲಸ ಮಾಡುವ ಸರ್ಕಾರವಲ್ಲ. ದಿನದ 24 ಗಂಟೆ ವರ್ಷದ 365 ದಿನ ಕೆಲಸ ಮಾಡುವ ಸರ್ಕಾರ. ರೈತರ ಖಾತೆಗೆ ಹಣ ಹಾಕುವ ಮೂಲಕ ಮಂದಹಾಸ ತರುವ ಕೆಲಸ ಮಾಡಿದೆ. ಕಾಶ್ಮೀರದ ಸ್ವಾಯತತ್ತೆಯ ಕನಸಾಗಿದ್ದ ಆರ್ಟಿಕಲ್ 370 (Article 370) ರದ್ದು ಮಾಡಿದ್ದಾರೆ. ಕೋವಿಡ್ ನಂತರ ವಿಶ್ವದ ಅನೇಕ ರಾಷ್ಟ್ರ ಆರ್ಥಿಕವಾಗಿ ಹಿಂದುಳಿದ್ದರೂ, ಭಾರತ ವಿಶ್ವದ ಬಲಿಷ್ಠ ಆರ್ಥಿಕ ದೇಶವಾಗಿ ಬೆಳೆಯುವಂತೆ ಮಾಡಿದ್ದಾರೆ ಎಂದು ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ನೀವು ಅರಮನೆಗೆ ಬರಬೇಕಿಲ್ಲ, ನಾನೇ ಹೊರಗೆ ಬರ್ತೀನಿ, ಸಾಮಾನ್ಯನಂತೆ ಕೆಲಸ ಮಾಡ್ತೀನಿ: ಯದುವೀರ್
ಕರ್ನಾಟಕದ ಸಕ್ಕರೆ ನಾಡು ಮಂಡ್ಯ (Mandya). ಒಕ್ಕಲಿಗರ ಪ್ರಾಬಲ್ಯವಿರುವ ಹಾಗೂ ಹಳೆ ಮೈಸೂರು ಭಾಗವಾಗಿದ್ದ ಪ್ರದೇಶ. ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರತಿ ಬಾರಿಯೂ ವಿಭಿನ್ನವಾಗಿರುತ್ತದೆ. ಇಲ್ಲಿನ ಮತದಾರರು ಚುನಾವಣೆಯಲ್ಲಿ (Elections) ಒಂದೊಂದು ಅಂಶಗಳನ್ನು ಇಟ್ಟುಕೊಂಡು ತಮ್ಮ ಮತಗಳನ್ನು ಅಭ್ಯರ್ಥಿಗಳಿಗೆ ಹಾಕುತ್ತಾರೆ. ಕಳೆದ ಲೋಕಸಭಾ ಚುನಾವಣೆ ಇದಕ್ಕಾ ತಾಜಾ ಉದಾಹರಣೆಯಾಗಿದೆ. 2019ರ ಲೋಕಸಭಾ ಚುನಾವಣೆ (2019 Lok Sabha Elections) ವೇಳೆ ಇಡೀ ರಾಷ್ಟ್ರ ರಾಜಕೀಯದಲ್ಲಿ ಮಂಡ್ಯ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿದ್ದವು (Congress JDS Alliance). ಒಂದು ಕಡೆ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಎದುರಾಳಿಯಾಗಿ ಇಂದಿನ ಸಂಸದೆ ಸುಮಲತಾ ಅಂಬರೀಶ್ ಕಣಕ್ಕೆ ಇಳಿದಿದ್ದರು. ಇತ್ತ ಬಿಜೆಪಿ ಅಭ್ಯರ್ಥಿಯನ್ನು ಹಾಕದೆ ಸುಮಲತಾ (Sumalatha) ಅವರಿಗೆ ಬೆಂಬಲ ಸೂಚಿಸಿತ್ತು. ಒಂದು ಕಡೆ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಅಸ್ತಿತ್ವ ಹೊಂದಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ, ಇನ್ನೊಂದೆಡೆ ಆಗ ತಾನೇ ಅಗಲಿದ್ದ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅವರಿಗೆ ಇದ್ದ ಅನುಕಂಪ. ಇಬ್ಬರಲ್ಲಿ ಯಾರಿಗೆ ಮತ ಹಾಕೋದು ಎಂಬ ಗೊಂದಲದಲ್ಲಿ ಆರಂಭದಲ್ಲಿ ಮಂಡ್ಯ ಮತದಾರರು ಇದ್ದರು. ಚುನಾವಣೆ ಕಾವು ಏರುತ್ತಿದ್ದಂತೆ ಜೆಡಿಎಸ್ ನಾಯಕರ ಕೆಲ ಮಾತುಗಳು ಹಾಗೂ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರು ಮೈತ್ರಿಗೆ ಕೈ ಕೊಟ್ಟಿದ್ದು, ಸುಮಲತಾ ಅಂಬರೀಶ್ ಅವರಿಗೆ ಬ್ರಹ್ಮಾಸ್ತ್ರವಾಗಿತ್ತು.
ಕ್ಷೇತ್ರ ಪರಿಚಯ:
ಕಾವೇರಿ, ಹೇಮಾವತಿ, ಲೋಕಪಾವನಿ, ಲಕ್ಷ್ಮಣತೀರ್ಥ, ಶಿಂಷಾ ಪಂಚನದಿಗಳ ಬೀಡು ಮಂಡ್ಯ. ರಾಷ್ಟ್ರ ರಾಜಕೀಯದಲ್ಲಿ ಮಂಡ್ಯಕ್ಕೆ ವಿಶೇಷ ಸ್ಥಾನವಿದೆ. ಕೃಷಿ ಪ್ರಧಾನ ಜಿಲ್ಲೆಯೂ ಹೌದು. ಅಪ್ಪಟ ಕನ್ನಡಿಗರು ಇರುವ ನೆಲವಿದು. 1952 ರಿಂದಲೂ ಮಂಡ್ಯ ಕ್ಷೇತ್ರ ಲೋಕಸಭಾ ಚುನಾವಣೆಗೆ ಸಾಕ್ಷಿಯಾಗಿದೆ. 2008 ರಲ್ಲಿ ಕ್ಷೇತ್ರ ಮರುವಿಂಗಡಣೆಯಾಯಿತು. ಆರಂಭದಲ್ಲಿ ಕಾಂಗ್ರೆಸ್ ಹಿಡಿತದಲ್ಲಿದ್ದ ಮಂಡ್ಯ ನಂತರ ಜೆಡಿಎಸ್ ತೆಕ್ಕೆಗೆ ಬಂತು. ಕಾಂಗ್ರೆಸ್ ಪ್ರಭಾವ ಸ್ವಲ್ಪ ಮಟ್ಟಿಗೆ ಕುಗ್ಗಿದೆ. ಆದರೂ ಎರಡೂ ಪಕ್ಷಗಳಿಗೆ ಇದು ಜಿದ್ದಾಜಿದ್ದಿನ ಕಣ.
ವಿಧಾನಸಭಾ ಕ್ಷೇತ್ರಗಳೆಷ್ಟು?
ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಮಂಡ್ಯ, ಮಳವಳ್ಳಿ, ಮದ್ದೂರು, ಮೇಲುಕೋಟೆ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ, ಕೆ.ಆರ್.ನಗರ. ಇದನ್ನೂ ಓದಿ: Koppal Lok Sabha 2024: ಹನುಮನ ಕೃಪ ಕಟಾಕ್ಷ ಯಾರ ಮೇಲೆ?
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಮಂಡ್ಯ ಲೋಕಸಭಾ ಚುನಾವಣೆಯು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಸ್ವತಂತ್ರ ಅಭ್ಯರ್ಥಿ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಅಂತಿಮವಾಗಿ 13,79,210 ಮತಗಳು ಆ ಚುನಾವಣೆಯಲ್ಲಿ ಚಲಾವಣೆಯಾದವು. ಇದರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸಂಸದೆ ಸುಮಲತಾ ಅಂಬರೀಶ್‌ಗೆ 7,03,660 ಮತಗಳು ಬಿದ್ದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು 5,77,784 ಮತಗಳನ್ನು ಪಡೆದರು. ಅಂತಿಮವಾಗಿ ಸುಮಲತಾ ಅಂಬರೀಶ್ 1,25,876 ಮತಗಳ ಅಂತರದಲ್ಲಿ ಭರ್ಜರಿ ಗೆಲವು ಸಾಧಿಸಿದ್ದರು.
ವಿಧಾನಸಭಾ ಕ್ಷೇತ್ರಗಳ ಪರಿಸ್ಥಿತಿ ಹೇಗಿದೆ?
ಮಂಡ್ಯ ಲೋಕಸಭಾ ಚುನಾವಣೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ 6 ಶಾಸಕರಿದ್ದು, ಒಂದು ಕ್ಷೇತ್ರ ಕಾಂಗ್ರೆಸ್ ಬೆಂಬಲ ನೀಡಿದ್ದ ರೈತ ಸಂಘದ ಶಾಸಕರಿದ್ದಾರೆ. ಒಂದು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಶಾಸಕ ಇದ್ದಾರೆ. (ಕಾಂಗ್ರೆಸ್ – ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ನಗರ ಹಾಗೂ ಜೆಡಿಎಸ್ – ಕೆ.ಆರ್.ಪೇಟೆ, ರೈತ ಸಂಘ – ಮೇಲುಕೋಟೆ). ಇದನ್ನೂ ಓದಿ: ರಾಜಕೀಯ ಪಕ್ಷಕ್ಕಾಗಿ ನೀವೂ ನ್ಯಾಯಾಲಯದಲ್ಲಿಲ್ಲ, ಮಾ.21ರ ಒಳಗಡೆ ಎಲ್ಲ ದಾಖಲೆ ಬಿಡುಗಡೆಗೆ ಸೂಚನೆ – ಎಸ್‌ಬಿಐ ವಿರುದ್ಧ ಸುಪ್ರೀಂ ಕೆಂಡ
ಕಾಂಗ್ರೆಸ್ ವರ್ಸಸ್ ಜೆಡಿಎಸ್
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹೆಚ್ಚಿನ ವರ್ಚಸ್ಸು ಪಡೆದಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 8 ಶಾಸಕರನ್ನು ಇಟ್ಟುಕೊಂಡು ಚುನಾವಣೆ ಎದುರಿಸಿ ಸೋಲು ಕಂಡಿತ್ತು. ಈ ಬಾರಿ ಕಾಂಗ್ರೆಸ್ 6 ಶಾಸಕರು ಮತ್ತು ಓರ್ವ ಬೆಂಬಲಿತ ಶಾಸಕನನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋಲು ಅನುಭವಿಸಿದರೂ ಮಂಡ್ಯ ಜಿಲ್ಲೆಯಲ್ಲಿ ತನ್ನ ಹಳೆಯ ವರ್ಚಸ್ಸನ್ನು ಕಳೆದುಕೊಂಡಿಲ್ಲ. ಇತ್ತ ಕಾಂಗ್ರೆಸ್ ತನ್ನ ಹಳೆಯ ಲಯವನ್ನು ಜಿಲ್ಲೆಯಲ್ಲಿ ಹುಟ್ಟು ಹಾಕುತ್ತಾ ಇದೆ.
ಮೈತ್ರಿ ಅಭ್ಯರ್ಥಿಯಾಗಿ ಯಾರು ಸ್ಪರ್ಧೆ?
ಸದ್ಯ ಈ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಪಕ್ಷಗಳು ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿವೆ. ಇವರಿಬ್ಬರಲ್ಲಿ ಇನ್ನೂ ಯಾರಿಗೆ ಮಂಡ್ಯ ಕ್ಷೇತ್ರ ಎಂದು ನಿರ್ಧಾರವಾಗಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಹೆಚ್ಚಿನ ವರ್ಚಸ್ಸು ಇರುವ ಕಾರಣ ಬಹುತೇಕ ಬಿಜೆಪಿ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಇನ್ನೊಂದೆಡೆ ಬಿಜೆಪಿಯ ಸ್ಥಳೀಯ ನಾಯಕರು ಹಾಲಿ ಸಂಸದೆ ಸುಮಲತಾ ಅಂಬರೀಶ್ ಎನ್‌ಡಿಎಗೆ ಬೆಂಬಲ ಸೂಚಿಸಿರುವ ಕಾರಣ ಅವರಿಗೆ ಟಿಕೆಟ್ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ನೀವೇ ಕಣಕ್ಕಿಳಿಯಿರಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ವರಿಷ್ಠ ಅಮಿತ್ ಶಾ ಸಲಹೆ ನೀಡಿದ್ದಾರೆ. ಮತ್ತೊಂದೆಡೆ ಹೆಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಒಂದು ವೇಳೆ ಇವರಿಬ್ಬರೂ ಸ್ಪರ್ಧೆಯಿಂದ ಹಿಂದೆ ಸರಿದರೆ, ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಕಣಕ್ಕಿಳಿಯುವ ಸಾಧ್ಯತೆ ಇದೆ.
ಸ್ಟಾರ್ ಚಂದ್ರುಗೆ ‘ಕೈ’ ಟಿಕೆಟ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಕಾಂಗ್ರೆಸ್ ಅತಿಯಾದ ಆತ್ಮವಿಶ್ವಾಸದಲ್ಲಿ ಇದೆ. ನಾವೇ ಗೆಲ್ಲೋದು ಗ್ಯಾರಂಟಿ, ನಮ್ಮ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುತ್ತವೆ ಎಂದು ಲೆಕ್ಕಾಚಾರದಲ್ಲಿ ಇದ್ದಾರೆ. ಸದ್ಯ ಉದ್ಯಮಿ ಸ್ಟಾರ್ ಚಂದ್ರು ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಗ್ಯಾರಂಟಿ ಯೋಜನೆಗಳ ಸಮಾವೇಶದ ಜೊತೆಗೆ ಮಂಡ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಪ್ರಚಾರ ಆರಂಭಿಸಿದೆ.
ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಮತ್ತೆ ಕಣಕ್ಕೆ?
ಸದ್ಯ ಮಂಡ್ಯ ಸಂಸದೆಯಾಗಿರುವುದು ಸುಮಲತಾ ಅಂಬರೀಶ್ ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಅಭೂತಪೂರ್ವ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಸುಮಲತಾ ಏನು ಮಾಡ್ತಾರೆ ಎಂಬ ಪರಿಸ್ಥಿತಿ ಎದುರಾಗಿದೆ. ಸುಮಲತಾ ಅಂಬರೀಶ್ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ್ದಾರೆ. ಈಗ ಸುಮಲತಾ ಅವರ ಬದ್ಧ ರಾಜಕೀಯ ವೈರಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿಯಾಗಿದೆ. ಜೆಡಿಎಸ್ ನಾಯಕರು ಖಂಡಿತವಾಗಿ ಸುಮಲತಾ ಅವರನ್ನು ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಲ್ಲ. ಈ ಸನ್ನಿವೇಶದಲ್ಲಿ ಸುಮಲತಾ ಅವರು ಕಾದುನೋಡುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಬಿಜೆಪಿ ಧೋರಣೆ ಮೇಲೆ ಸುಮಲತಾ ಅವರ ನಿರ್ಧಾರ ನಿಂತಿದೆ. ಮೈತ್ರಿ ಟಿಕೆಟ್ ಜೆಡಿಎಸ್ ಎಂಬುದು ನಿಚ್ಚಳವಾದಂತಿದೆ. ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಬೇರೆ ಕ್ಷೇತ್ರದಲ್ಲಿ ಟಿಕೆಟ್ ಕೊಡುತ್ತಾ ಅಥವಾ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸಂಸದೆ ಮಂಡ್ಯದಲ್ಲಿ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಜಾತಿವಾರು ಲೆಕ್ಕಾಚಾರ:
ಒಕ್ಕಲಿಗರು – 7,89,420
ದಲಿತರು – 3,03,601
ಲಿಂಗಾಯತರು – 1,61,436
ಕುರುಬರು – 1,71,854
ವಿಶ್ವಕರ್ಮ – 31,550
ಮುಸ್ಲಿಮರು – 1,29,154
ಕ್ರೈಸ್ತರು – 26,623
ಬ್ರಾಹ್ಮಣರು – 24,915
ಬೆಸ್ತರು – 56,219
ಇತರೆ – 55,012
ಒಟ್ಟು – 17,59,175
ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನು (CAA) ಜಾರಿ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದ್ದು, ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಈ ನಡುವೆ ಮಾತನಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನೆರೆ ರಾಷ್ಟ್ರಗಳಲ್ಲಿರುವ ಜನರನ್ನು ಭಾರತಕ್ಕೆ ಕರೆತರಲಾಗುತ್ತಿದೆ ಎಂದು ಆರೋಪಿಸಿದರು.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಎ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಇತರ ದೇಶಗಳು ಹೊರಗಿನವರು ಬರುವುದನ್ನು ನಿಲ್ಲಿಸುತ್ತವೆ. ಆದರೆ ಬಿಜೆಪಿ ಚುನಾವಣಾ ಲಾಭಕ್ಕಾಗಿ ಸಿಎಎ ತಂದಿದೆ. ತಮ್ಮ ದೇಶದ ಹಕ್ಕುಗಳನ್ನು ಪಾಕಿಸ್ತಾನಿಗಳಿಗೆ ನೀಡುತ್ತಿದ್ದಾರೆ. ಸಿಎಎ ಹಿಂಪಡೆಯಬೇಕು ಎಂದು ದೇಶ ಒತ್ತಾಯಿಸುತ್ತಿದೆ ಎಂದರು. ಇದನ್ನೂ ಓದಿ: ಸಿಎಎ ವಿಷಯದಲ್ಲಿ ನಟ ವಿಜಯ್ ಗೆ ಟಾಂಗ್ ಕೊಟ್ಟ ಕಂಗನಾ
ದೇಶದ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಬಿಜೆಪಿ 10 ವರ್ಷಗಳಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ. ಚುನಾವಣೆಗೆ ಮುನ್ನ ಸಿಎಎ ತರುವ ಅಗತ್ಯವಿರಲಿಲ್ಲ. ಭಾರತದಲ್ಲಿ ಹಣದುಬ್ಬರವು ಏರಿದೆ. ನಿರುದ್ಯೋಗ ಉತ್ತುಂಗದಲ್ಲಿದೆ. ಯುವಕರು ಉದ್ಯೋಗಕ್ಕಾಗಿ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಈ ನಡುವೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರು ಭಾರತೀಯ ಪೌರತ್ವ ಪಡೆಯಲು ಬಯಸಿದರೆ, ಅವರಿಗೂ ಪೌರತ್ವ ನೀಡಲಾಗುವುದು ಎಂದು ಕೇಂದ್ರದ ಬಿಜೆಪಿ ಸರ್ಕಾರ ಹೇಳುತ್ತದೆ. ಇದರರ್ಥ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ದೇಶಕ್ಕೆ ಕರೆತರುವ ಯೋಜನೆಯಾಗಿದೆ. ಮಾಹಿತಿ ಪ್ರಕಾರ ಸುಮಾರು 2.5 ಕೋಟಿಯಿಂದ 3 ಕೋಟಿ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಾಗುತ್ತಿದೆ. ಅಂದರೆ ಅವರನ್ನು ಕರೆತಂದು ಉದ್ಯೋಗ ನೀಡಿ ಮನೆ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.
ಬಿಜೆಪಿಯವರಿಗೆ ಇಲ್ಲಿರುವ ನಮ್ಮ ಮಕ್ಕಳಿಗೆ ಕೆಲಸ ಕೊಡಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನದಿಂದ ಬರುವ ಮಕ್ಕಳಿಗೆ ಕೆಲಸ ಕೊಡಲು ಬಯಸುತ್ತಾರೆ. ನಮ್ಮ ಅನೇಕ ಜನರು ನಿರಾಶ್ರಿತರಾಗಿದ್ದಾರೆ. ಆದರೆ ಬಿಜೆಪಿ ಪಾಕಿಸ್ತಾನದಿಂದ ಬರುವ ಜನರನ್ನು ಇಲ್ಲಿ ನೆಲೆ ನೀಡಲು ಬಯಸುತ್ತದೆ. ಅವರು ನಮ್ಮ ಕೆಲಸವನ್ನು ವಿದೇಶಿ ಮಕ್ಕಳಿಗೆ ನೀಡಲು ಬಯಸುತ್ತಾರೆ. ಪಾಕಿಸ್ತಾನಿಗಳನ್ನು ನಮ್ಮ ಹಕ್ಕಿನ ಮನೆಗಳಲ್ಲಿ ನೆಲೆಸಲು ಬಿಜೆಪಿ ನಾಯಕರು ಬಯಸುತ್ತಾರೆ. ಭಾರತ ಸರ್ಕಾರದ ಬಳಿ ಇರುವ ಹಣವನ್ನು ನಮ್ಮ ಕುಟುಂಬ ಮತ್ತು ದೇಶದ ಅಭಿವೃದ್ಧಿಗೆ ಬಳಸಬೇಕು. ಆದರೆ ಪಾಕಿಸ್ತಾನಿಗಳನ್ನು ನೆಲೆಗೊಳಿಸಲು ಇದನ್ನು ಬಳಸಲಾಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಾರತದ ಪ್ರತಿಯೊಬ್ಬ ಮುಸ್ಲಿಮರೂ ಸಿಎಎಯನ್ನು ಸ್ವಾಗತಿಸಬೇಕು: ಮುಸ್ಲಿಂ ಜಮಾತ್ ಅಧ್ಯಕ್ಷ ಕರೆ
ದೇಶಾದ್ಯಂತ ಲೋಕಸಭಾ ಚುನಾವಣೆಯ (Lok Sabha Elections) ಕಾವು ರಂಗೇರುತ್ತಿದೆ. ಯಾರೆಲ್ಲ ಅಭ್ಯರ್ಥಿ ಆಗಲಿದ್ದಾರೆ, ಯಾರಿಗೆಲ್ಲ ಟಿಕೆಟ್ ಸಿಗಲಿದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಜೊತೆಗೆ ಸೆಲೆಬ್ರಿಟಿಗಳು ಕೂಡ ಈ ಬಾರಿ ಲೋಕಸಭೆಯ ಕಣದಲ್ಲಿ ಇರಲಿದ್ದಾರೆ ಎನ್ನುವ ಮಾತೂ ಜೋರಾಗಿದೆ. ಈ ಮಾತಿನ ಹಿನ್ನೆಲೆಯಲ್ಲಿ ಬಂಗಾಳಿ ನಟಿ, ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ್ದ ರಚನಾ ಬ್ಯಾನರ್ಜಿ ಲೋಕಸಭಾ ಚುನಾವಣಾ ಕಣದಲ್ಲಿ ಇರಲಿದ್ದಾರೆ.
ರವಿಚಂದ್ರನ್ ನಟನೆಯ ಉಸಿರೆ, ಪ್ರೀತ್ಸು ತಪ್ಪೇನಿಲ್ಲ ಸಿನಿಮಾಗಳಲ್ಲಿ ರಚನಾ (Rachana Banerjee) ನಾಯಕಿಯಾಗಿ ನಟಿಸಿದ್ದರು. ಜೊತೆಗೆ ದಕ್ಷಿಣದ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಮೂಲತಃ ಬಂಗಾಳಿ (West Bengal) ಬೆಡಗಿ ಆಗಿರುವ ರಚನಾ, ಆ ಸಿನಿಮಾ ರಂಗದಲ್ಲಿ ಸಾಕಷ್ಟು ಚಿತ್ರಗಳನ್ನು ಮತ್ತು ಕಿರುತೆರೆಯಲ್ಲಿ ಅನೇಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆ.
ಇತ್ತೀಚೆಗಷ್ಟೇ ರಚನಾ ಅವರು ಮಮತಾ ಬ್ಯಾನರ್ಜಿ (Mamata Banerjee) ಅವರ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಈ ಪಕ್ಷದಿಂದಲೇ ಅವರು ಹೂಗ್ಲಿ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಟಿಕೆಟ್ ಘೋಷಣೆ ಆಗದೇ ಇದ್ದರೂ, ಟಿಕೆಟ್ ಪಕ್ಕಾ ಎಂದೇ ಹೇಳಲಾಗುತ್ತಿದೆ.
ಬಾಲಿವುಡ್ ನ ಕಂಗನಾ ರಣಾವತ್ ಸೇರಿದಂತೆ ದೇಶದಾದ್ಯಂತ ಸಾಕಷ್ಟು ಸಿನಿಮಾ ಕಲಾವಿದರ ಹೆಸರು ಚುನಾವಣೆ ಕಣದಲ್ಲಿ ಕೇಳಿ ಬರುತ್ತಿವೆ. ಯಾರಿಗೆಲ್ಲ ಟಿಕೆಟ್ ಸಿಗತ್ತೆ? ಯಾರೆಲ್ಲ ಚುನಾವಣೆಗೆ ನಿಲ್ಲಲ್ಲಿದ್ದಾರೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಬೆಂಗಳೂರು: 2024ರ ಲೋಕಸಭಾ ಚುನಾವಣೆ (Lok Sabha Elections) ಸಂಬಂಧ ಬಿಜೆಪಿ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಸೋಮವಾರ (ಮಾ.11) ಸಂಜೆ ಪ್ರಕಟಿಸುವ ಸಾಧ್ಯತೆಯಿದೆ. ಈ ಸಂಬಂಧ ದೆಹಲಿಯಲ್ಲಿ ಬಿಜೆಪಿ ಸಿಇಸಿ ಸಭೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ ಸೇರಿ ಕೇಂದ್ರ ಚುನಾವಣಾ ಸಮಿತಿ ನಾಯಕರು ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಸಭೆಯ ಬಳಿಕ 2ನೇ ಪಟ್ಟಿ ಬಿಡುಗಡೆಯಾಗಲಿದ್ದು, ಇದರಲ್ಲಿ ರಾಜ್ಯದ 15 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಹಾಗಾಗಿ ಯಾರು ಸೇಫ್ ಝೋನ್? ಯಾರು ಡೇಂಜರ್ ಝೋನ್? ಯಾರದ್ದು ವೇಯ್ಟಿಂಗ್ ಲಿಸ್ಟ್? ಯಾವ ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿ? ಅನ್ನೋದು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ: ಹೆಚ್‍ಡಿಕೆ ಗರಂ
ಜೋರಾಯ್ತು ಆಂತರಿಕ ಕಲಹ:
ಟಿಕೆಟ್ ಘೋಷಣೆಯ ಹೊತ್ತಿನಲ್ಲೇ ಬಿಜೆಪಿ ಆಕಾಂಕ್ಷಿಗಳ ಮಧ್ಯೆ ಆಂತರಿಕ ಕಚ್ಚಾಟ ಜೋರಾಗ್ತಿದೆ. ಅಲ್ಲದೇ ಬಿಜೆಪಿ ಕಾರ್ಯಕರ್ತರಿಂದ ಪ್ರಮುಖ ನಾಯಕರ ವಿರುದ್ಧ ಅಪಸ್ವರದ ಘೋಷಣೆಗಳು ಕೇಳಿಬರುತ್ತಿವೆ. ಅದರಲ್ಲೂ, ಈ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ-ಸಿಟಿ ರವಿ (CT Ravi) ಮಧ್ಯೆ ಜಟಾಪಟಿ ತಾರಕಕ್ಕೇರಿದೆ. ಶೋಭಾ ಕರಂದ್ಲಾಜೆ (Shobha Karandlaje) ವಿರುದ್ಧ `ಗೋಬ್ಯಾಕ್ ಶೋಭಕ್ಕ’ ಕ್ಯಾಂಪೇನ್ ಮುಂದುವರಿದಿದೆ. ಈ ಬಾರಿ ಚಿಕ್ಕಮಗಳೂರಿನವರಿಗೇ ಯಾರಿಗಾದರೂ ಟಿಕೆಟ್ ಕೊಡಿ ಅಂತ ಚುನಾವಣಾ ನಿರ್ವಹಣಾ ಸಮಿತಿ ಸದಸ್ಯರು ಪಟ್ಟು ಹಿಡಿದಿದ್ದಾರೆ. ಇನ್ನೂ, ಸಿಟಿ ರವಿ ಪ್ರತಿಕ್ರಿಯಿಸಿ, ನನ್ನ ಗ್ರಹಚಾರ ಸರಿ ಇರಲಿಲ್ಲ, ನನ್ನ ಅತಿಯಾದ ವಿಶ್ವಾಸದಿಂದಲೇ ವಿಧಾನಸಭೆಯಲ್ಲಿ ಸೋತಿದ್ದೇನೆ. ಮತ್ತೊಬ್ಬರ ಕಡೆ ಬೊಟ್ಟು ಮಾಡಲ್ಲ, ಅವರವರ ಕರ್ಮ ಅವರವರು ಅನುಭವಿಸಬೇಕು. ಯಾರಾದ್ರೂ ಪಕ್ಷ ದ್ರೋಹ ಮಾಡಿದ್ರೆ ಕರ್ಮ ಬೆಂಬಿಡದೆ ಕಾಡುತ್ತೆ. ಯಾರೇ ಅಭ್ಯರ್ಥಿಯಾದರೂ ಮೋದಿ ನಮ್ಮ ಅಭ್ಯರ್ಥಿ ಅಂತ ಕೆಲಸ ಮಾಡಬೇಕು ಅಂತ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಲಲ್ಲಾನ ಸನ್ನಿಧಾನಕ್ಕೆ ತೆರಳಿ ಕೊನೆಯುಸಿರೆಳೆದ ಆರ್‌ಎಸ್‌ಎಸ್ ಕಾರ್ಯಕರ್ತ
ಮೈಸೂರಿನಲ್ಲಿ ಪ್ರತಾಪ್ ಸಿಂಹ ಪರ ಬ್ಯಾಟಿಂಗ್:
ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹಗೆ (Pratap Simha) ಈ ಬಾರಿ ಟಿಕೆಟ್ ಕೈತಪ್ಪುತ್ತೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ, ಸಂಸದರ ಪರವಾಗಿ ಹೋರಾಟದ ಎಚ್ಚರಿಕೆ ಮೊಳಗಿದೆ. ಪ್ರತಾಪ್ ಸಿಂಹಗೆ ಟಿಕೆಟ್ ಕೊಡದಿದ್ದರೆ `ನೋಟ’ಗೆ ವೋಟ್ ಹಾಕೋದಾಗಿ ಕೆಲವರು ಅಭಿಯಾನ ಶುರು ಮಾಡಿದ್ದಾರೆ. ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಸಂಸದರ ಪರ ಬ್ಯಾಟಿಂಗ್ ಮಾಡಿದ್ದಾರೆ. ನೂರಕ್ಕೆ ನೂರರಷ್ಟು ಪ್ರತಾಪ್ ಸಿಂಹಗೆ ಟಿಕೆಟ್ ಸಿಗುತ್ತೆ. ಕಳೆದ 2 ಚುನಾವಣೆಗಳಲ್ಲೂ ಬೆಂಬಲಿಸಿದ್ದೆ, ಈಗಲೂ ಬೆಂಬಲಿಸುತ್ತೇನೆ ಅಂದಿದ್ದಾರೆ. ಬಿಜೆಪಿ ಶಾಸಕ ಶ್ರೀವತ್ಸ ಕೂಡ, ಈ ಬಾರಿ ಪ್ರತಾಪ್ ಸಿಂಹರಿಗೆ ಟಿಕೆಟ್ ಸಿಗುತ್ತೆ. ಅಭಿಪ್ರಾಯ ಸಂಗ್ರಹಿಸಿದಾಗಲೂ ಅವರ ವಿರುದ್ಧ ಅಪಸ್ವರ ಕೇಳಿ ಬಂದಿಲ್ಲ ಅಂದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತಾಡಿ, 8 ಸಲ ಗೆದ್ದವರಿಗೆ, 2 ಸಲ ಗೆದ್ದವರಿಗೆ ಟಿಕೆಟ್ ಕೊಡಲಾಗಿದೆ. ಊಹಾಪೋಹಗಳಿಗೆ ಉತ್ತರಿಸಲ್ಲ ಅಂದಿದ್ದಾರೆ. ಇದನ್ನೂ ಓದಿ: ಸೋಮಣ್ಣಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡದಂತೆ ರಸ್ತೆ ತಡೆದು ಆಕ್ರೋಶ
– ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್
ಶಿವಮೊಗ್ಗ: ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹೆಸರು ಘೋಷಣೆಯಾಗುತ್ತಿದ್ದಂತೆ ದೊಡ್ಮನೆ ಸೊಸೆ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಶಿವಮೊಗ್ಗದಲ್ಲಿ ಚುನಾವಣಾ ಕಾರ್ಯಗಳಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಟಿಕೆಟ್ ಘೋಷಣೆಯಾದ ಮರುದಿನವೇ ಗೀತಾ ಶಿವರಾಜ್‌ಕುಮಾರ್ ಅವರು, ಚುನಾವಣಾ ಕಾರ್ಯಗಳಿಗಾಗಿ ಬಾಡಿಗೆಮನೆ (Rent House) ಪಡೆದಿದ್ದಾರೆ. ಚುನಾವಣಾ ಪ್ರಚಾರ ಕಾರ್ಯಗಳಿಗೆ ಸಚಿವ ಮಧು ಬಂಗಾರಪ್ಪ ಮತ್ತು ಗೀತಾ ಶಿವರಾಜ್‌ಕುಮಾರ್ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಶಿವಮೊಗ್ಗದ ಕಲ್ಲಹಳ್ಳಿ ಬಡಾವಣೆಯಲ್ಲಿ ಮಧು ಬಂಗಾರಪ್ಪ ನಿವಾಸದ ಪಕ್ಕದಲ್ಲೇ ಮನೆಯೊಂದನ್ನ ಬಾಡಿಗೆಗೆ ಪಡೆದುಕೊಂಡಿದ್ದಾರೆ.
ಯಾವ ಕ್ಷೇತ್ರದಿಂದ ಯಾರು ಕಣಕ್ಕೆ?
ವಿಜಯಪುರ (SC) – ಹೆಚ್.ಆರ್. ಆಲಗೂರು (ರಾಜು)
ಹಾವೇರಿ – ಆನಂದಸ್ವಾಮಿ ಗಡ್ಡದೇವರಮಠ
ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್
ಹಾಸನ – ಎಂ. ಶ್ರೇಯಸ್ ಪಟೇಲ್
ತುಮಕೂರು – ಎಸ್.ಪಿ ಮುದ್ದಹನುಮೇಗೌಡ
ಮಂಡ್ಯ – ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್
ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು (Congress 1st Lok Sabha List) ಶುಕ್ರವಾರ ಬಿಡುಗಡೆಗೊಳಿಸಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷದ ಏಕೈಕ ಸಂಸದ ಡಿ.ಕೆ ಸುರೇಶ್ (DK Suresh) ಅವರಿಗೆ ಬೆಂಗಳೂರು ಗ್ರಾಮಾಂತರದಿಂದಲೇ ಟಿಕೆಟ್ ಘೋಷಣೆ ಮಾಡಲಾಗಿದೆ.
2014, 2019ರ ಚುನಾವಣೆಗಳಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿರುವ ಡಿ.ಕೆ ಸುರೇಶ್, ಇದೀಗ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದಾರೆ. 2014ರಲ್ಲಿ ಡಿಕೆ ಸುರೇಶ್ 14,55,244 ಮತಗಳನ್ನು ಪಡೆದು, 2,31,480 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2019ರಲ್ಲಿ 2,06,870 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹಾಗಾಗಿ ಹೈಕಮಾಂಡ್ ಸತತ 3ನೇ ಬಾರಿಗೆ ಬೆಂಗಳೂರು ಗ್ರಾಮಾಂತರದಿಂದಲೇ ಟಿಕೆಟ್ ನೀಡಿದೆ.
ಟಿಕೆಟ್ ಘೋಷಣೆ ಮಾಡಿದ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಡಿಕೆ ಸುರೇಶ್, ಬೆಂಗಳೂರು ಗ್ರಾಮಾಂತರದಲ್ಲಿ ನನ್ನ ಕೆಲಸ, ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಮನಗಂಡು ಮೂರನೆಯ ಅವಧಿಗೂ ಕ್ಷೇತ್ರದ ಜನರ ಸೇವೆಗೆ ಅವಕಾಶ ಕಲ್ಪಿಸಿದ ರಾಷ್ಟ್ರೀಯ ಕಾಂಗ್ರೆಸ್‌ಗೆ ನನ್ನ ಧನ್ಯವಾದಗಳು. ನ್ನ ಪ್ರೀತಿಯ ಕನ್ನಡಿಗರ ಹಾಗೂ ಗ್ರಾಮಾಂತರ ಜನತೆಯ ಸೇವೆ ಮಾಡಲು ಇನ್ನಷ್ಟು ಬಲ ಬಂದಂತಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
ಕರ್ನಾಟದಲ್ಲಿ ಯಾರ್ಯಾರಿಗೆ ಟಿಕೆಟ್?
ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ 9 ರಾಜ್ಯಗಳಿಂದ 39 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್, ತುಮಕೂರಿನಿಂದ ಮುದ್ದ ಹನುಮೇಗೌಡ, ವಿಜಯಪುರದಿಂದ ಎಸ್.ಆರ್. ಅಲಗೂರ, ಹಾವೇರಿಯಿಂದ ಆನಂದಸ್ವಾಮಿ ಗಡ್ಡದವೇರಮಠ, ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ ಸುರೇಶ್ ಹಾಗೂ ಹಾಸನದಿಂದ ಶ್ರೇಯಸ್ ಪಟೇಲ್, ಮಂಡ್ಯದಿಂದ ವೆಂಕಟರಮಣಗೌಡ (ಸ್ಟಾರ್ ಚಂದ್ರು) ಹೆಸರನ್ನು ಪಕ್ಷ ಫೈನಲ್ ಮಾಡಿದೆ. ಉಳಿದಂತೆ ಛತ್ತೀಸಗಢ 6, ಕೇರಳ 16, ಲಕ್ಷದ್ವೀಪ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ ಕ್ಷೇತ್ರಗಳಿಂದ ತಲಾ 1, ಮೇಘಾಲಯ 2, ತೆಲಂಗಾಣದಿಂದ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಮೊದಲ ಪಟ್ಟಿ ಪ್ರಕಟಿಸಿದ ಬಳಿಕ ಮಾತನಾಡಿದ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಸಾಮಾಜಿಕ ನ್ಯಾಯದ ಅಡಿಯಲ್ಲಿ 15 ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಒಟ್ಟು 24 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Congress 1st Lok Sabha List: ಮತ್ತೆ ವಯನಾಡಿನಿಂದಲೇ ಅದೃಷ್ಟ ಪರೀಕ್ಷೆಗಿಳಿದ ರಾಗಾ!
ಬೆಂಗಳೂರು: ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಇಂದಿನ ಪಟ್ಟಿಯಲ್ಲಿ (Congress 1st List) ಇನ್ನಷ್ಟು ಹೆಸರು ಪ್ರಕಟವಾಗಬೇಕಿತ್ತು. ಮಾರ್ಚ್ 11ರಂದು ಸ್ಕ್ರೀನಿಂಗ್ ಕಮಿಟಿ ಸಭೆ ನಂತರ ಆ ಹೆಸರುಗಳು ಅಂತಿಮವಾಗಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಸ್ಥಳೀಯ ಶಾಸಕರು, ಮುಖಂಡರ ಜೊತೆಗೆ ಚರ್ಚೆ ಮಾಡಿದಾಗ ಅವರು ಯಾರ ಹೆಸರನ್ನ ಪ್ರಸ್ತಾಪ ಮಾಡಿದವರು ಹಾಗೂ ನಮ್ಮ ಸಮೀಕ್ಷೆಗಳ ಆಧಾರದ ಮೇಲೆ ಅಭ್ಯರ್ಥಿಯನ್ನ ಆಯ್ಕೆ ಮಾಡಿದ್ದೇವೆ. ಮಾರ್ಚ್ 11ರಂದು ನಡೆಯಲಿರುವ ಸಭೆ ನಂತರ ಮತ್ತಷ್ಟು ಕ್ಷೇತ್ರಗಳ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: Congress 1st Lok Sabha List: ಶಿವಮೊಗ್ಗದಿಂದ ದೊಡ್ಮನೆ ಸೊಸೆ ಕಣಕ್ಕೆ!
ನಾನು ಎಷ್ಟು ಪಟ್ಟಿ ತೆಗೆದುಕೊಂಡು ಹೋಗಿದ್ದೆ ಎಂಬುದು ಮುಖ್ಯವಲ್ಲ. ಇದು ನನ್ನ ಪಕ್ಷ ಅಲ್ಲ. ನಮ್ಮ ಹೈಕಮಾಂಡ್ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಸೋನಿಯಾ ಗಾಂಧಿ, ಕೆ.ಸಿ ವೇಣುಗೋಪಾಲ್, ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಚರ್ಚೆ ಮಾಡುತ್ತಾರೆ. ನಾವು ಕೇವಲ ಅಭ್ಯರ್ಥಿಗಳ ಹೆಸರನ್ನು ಪ್ರಸ್ತಾಪ ಮಾಡುತ್ತೇವೆ ಅಷ್ಟೇ. ನಮ್ಮ ಪಕ್ಷದ CEC ಸಮಿತಿ ಸದಸ್ಯರು ಅವರದ್ದೇ ಮೂಲಗಳಿಂದ ಮಾಹಿತಿ ಪಡೆದುಕೊಂಡಿರುತ್ತಾರೆ. ಇವರೆಲ್ಲ ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಈಗ ಪ್ರಕಟವಾಗಿರುವ 7 ಕ್ಷೇತ್ರಗಳ ಪೈಕಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: Loksabha Elections 2024- ಕಾಂಗ್ರೆಸ್‌ನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಫಸ್ಟ್ ಲಿಸ್ಟ್‌ನಲ್ಲಿ ರಾಜ್ಯದಿಂದ ಯಾರಿಗೆ ಟಿಕೆಟ್?
ವಿಜಯಪುರ (SC) – ಹೆಚ್.ಆರ್.ಅಲಗೂರು (ರಾಜು)
ಹಾವೇರಿ – ಆನಂದಸ್ವಾಮಿ ಗಡ್ಡದೇವರಮಠ
ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್
ಹಾಸನ – ಎಂ. ಶ್ರೇಯಸ್ ಪಟೇಲ್
ತುಮಕೂರು – ಎಸ್.ಪಿ ಮುದ್ದಹನುಮೇಗೌಡ
ಮಂಡ್ಯ – ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
ಬೆಂಗಳೂರು ಗ್ರಾಮಾಂತರ – ಡಿಕೆ ಸುರೇಶ್