Tag: Lok Sabha Elections

  • ತೆಲಂಗಾಣದ ಶ್ರೀಮಂತ ಅಭ್ಯರ್ಥಿ – ಓವೈಸಿ ವಿರುದ್ಧ ಅಖಾಡಕ್ಕಿಳಿದಿರೋ ಮಾಧವಿ ಲತಾ ಆಸ್ತಿ ಎಷ್ಟಿದೆ ಗೊತ್ತಾ?

    ತೆಲಂಗಾಣದ ಶ್ರೀಮಂತ ಅಭ್ಯರ್ಥಿ – ಓವೈಸಿ ವಿರುದ್ಧ ಅಖಾಡಕ್ಕಿಳಿದಿರೋ ಮಾಧವಿ ಲತಾ ಆಸ್ತಿ ಎಷ್ಟಿದೆ ಗೊತ್ತಾ?

    ಹೈದರಾಬಾದ್‌: ಅಸಾದುದ್ದೀನ್‌ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಮಹಿಳಾ ಅಭ್ಯರ್ಥಿ ಮಾಧವಿ ಲತಾ (Madhavi Latha) ತಮ್ಮ ಕುಟುಂಬದ ಆಸ್ತಿ ವಿವರ ಘೋಷಿಸಿಕೊಂಡಿದ್ದಾರೆ. ತೆಲಂಗಾಣದ ಅತ್ಯಂತ ಶ್ರೀಮಂತ ಅಭ್ಯರ್ಥಿಗಳಲ್ಲಿ ಒಬ್ಬರಾಗಿರುವ ಮಾಧವಿ ಲತಾ ಅವರ ಕುಟುಂಬ ಬರೋಬ್ಬರಿ 221.38 ಕೋಟಿ ರೂ. ಆಸ್ತಿ (Assets) ಹೊಂದಿರುವುದಾಗಿ ಅವರು ಘೋಷಿಸಿಕೊಂಡಿದ್ದಾರೆ.

    ಮಾಧವಿ ಲತಾ ಕುಟುಂಬ ಅವಳಿ ನಗರವಾದ ಸಿಕಂದರಾಬಾದ್‌ನಲ್ಲಿ ನೆಲೆಸಿದೆ. ಮಾಧವಿ ಲತಾ ಮತ್ತು ಕೊಂಪೆಲ್ಲಾ ವಿಶ್ವನಾಥ್ (Kompella Viswanath) ದಂಪತಿ 165.46 ಕೋಟಿ ರೂ. ಚರಾಸ್ತಿ, 55.91 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 49 ವರ್ಷ ವಯಸ್ಸಿನ ಮಾಧವಿ ಲತಾ ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ಓವೈಸಿ ವಿರುದ್ಧ ಸ್ಪರ್ಧಿಸ್ತಿರೋ ಬಿಜೆಪಿ ಅಭ್ಯರ್ಥಿಗೆ Y+ ಭದ್ರತೆ

    ಮಾಧವಿ ಲತಾ ವೈಯಕ್ತಿಕವಾಗಿ ವಿವಿಧ ಕಂಪನಿಗಳಲ್ಲಿ 25.20 ಕೋಟಿ ರೂ. ಹೂಡಿಕೆ ಸೇರಿದಂತೆ ಒಟ್ಟು 31.31 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಜೊತೆಗೆ ವಿರಿಂಚಿ ಲಿಮಿಟೆಡ್‌ನಲ್ಲಿ 7.80 ಕೋಟಿ ರೂ. ಹೂಡಿಕೆ ಮಾಡಿದ್ದು, 3.78 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನ ಹೊಂದಿದ್ದಾರೆ. ಪತಿ ವಿಶ್ವನಾಥ್‌ ವಿರಿಂಚಿ ಲಿಮಿಟೆಡ್‌ನಲ್ಲಿ 52.36 ಕೋಟಿ ರೂ. ಮೌಲ್ಯದ ಷೇರುಗಳು ಒಳಗೊಂಡಂತೆ, 88.31 ಕೋಟಿ ರೂ.ನಷ್ಟು ಚರಾಸ್ತಿ ಹೊಂದಿದ್ದಾರೆ. ಅವರ ಮೂರು ಮಕ್ಕಳ ಹೆಸರಲ್ಲಿ 45 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಚರಾಸ್ತಿ ಇದೆ ಎಂಬುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?

    ಅಭ್ಯರ್ಥಿಯಾಗಿರುವ ಮಾಧವಿ 6.32 ಕೋಟಿ ರೂ.ಗಳಷ್ಟು ಸ್ಥಿರಾಸ್ತಿ ಹೊಂದಿದ್ದರೆ, ಪತಿ 49.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಆಸ್ತಿಗಳಲ್ಲಿ ಕೃಷಿಯೇತರ ಭೂಮಿ ಮತ್ತು ಹೈದರಾಬಾದ್ ಮತ್ತು ಸುತ್ತಮುತ್ತಲಿನ ವಾಣಿಜ್ಯ ಮತ್ತು ವಸತಿ ಕಟ್ಟಡಗಳು ಸೇರಿವೆ. ಇನ್ನೂ ಮಾಧವಿ ಲತಾ 90 ಲಕ್ಷ ರೂ.ಗಳ ಸಾಲ ಹೊಂದಿದ್ದರೆ, ಪತಿ 26.13 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ.

    ಕ್ರಿಮಿನಲ್‌ ಪ್ರಕರಣವೂ ಇದೆ:
    ಮಾಧವಿ ಲತಾ ಅವರು ಒಂದು ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿದ್ದಾರೆ. ಕಳೆದ ವಾರವಷ್ಟೇ ಹೈದರಾಬಾದ್‌ನ ಬೇಗಂ ಬಜಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 295-ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಚುನಾವಣಾ ಪ್ರಚಾರದ ವೇಳೆ ಮಸೀದಿಗೆ ಬಾಣ ಬಿಡುವಂತೆ ಸನ್ನೆ ಮಾಡಿದ್ದರು. ಇದನ್ನೂ ಓದಿ: ಏ.26ರಂದು ರಾಜ್ಯದ ಮೊದಲ ಹಂತದ ಚುನಾವಣೆ: ಯಾವ ಕ್ಷೇತ್ರ-ಎಷ್ಟು ಮತದಾರರು? ಇಲ್ಲಿದೆ ವಿವರ…

    ಮಾಧವಿ ಲತಾ ಯಾರು?: ಆರ್‌ಎಸ್‌ಎಸ್‌ನ ಕಟ್ಟಾ ಕಾರ್ಯಕರ್ತೆ, ಹೋರಾಟಗಾರ್ತಿ, ಭರತನಾಟ್ಯ ಕಲಾವಿದೆ ಮಾಧವಿ ಲತಾ (Madhavi Latha) ಅವರನ್ನು ಭಾರತೀಯ ಜನತಾ ಪಾರ್ಟಿ ಅಖಾಡಕ್ಕೆ ಇಳಿಸಿದೆ. ಈ ಮೂಲಕ ಓವೈಸಿ ವಿರುದ್ಧ ಈ ಬಾರಿ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿಜೆಪಿ ಬಿದ್ದಂತಿದೆ.

    ನಿಜಾಮ್ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಧವಿ ಲತಾ ಅವರು ಪಡೆದಿದ್ದಾರೆ. ಇವರ ಮೂವರು ಮಕ್ಕಳಲ್ಲಿ ಇಬ್ಬರು ಐಐಟಿ ಮದ್ರಾಸ್‌ನಲ್ಲಿ ಓದುತ್ತಿದ್ದಾರೆ. ಹೋಮ್‌ ಸ್ಕೂಲಿಂಗ್‌ ನಡೆಸಿಯೇ ಮಕ್ಕಳನ್ನು ಐಐಟಿಗೆ ಕಳುಹಿಸಿರುವುದು ವಿಶೇಷವಾಗಿದೆ.

    ವೃತ್ತಿಪರ ಭರತನಾಟ್ಯಂ ಡಾನ್ಸರ್‌ ಆಗಿರುವ 49 ವರ್ಷದ ಮಾಧವಿ ಲತಾ ಅವರು ಹೆಣ್ಣುಮಕ್ಕಳ ಶಿಕ್ಷಣದ ಪ್ರಾಯೋಜಕರಾಗಿದ್ದಾರೆ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುವಲ್ಲಿ ಮತ್ತು ಪ್ರವಾಹ ನೆರವು ನೀಡುವಲ್ಲಿನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ಹೈದರಾಬಾದ್ ಮೂಲದ ಪ್ರಮುಖ ಆರೋಗ್ಯ ಸಂಸ್ಥೆಯಾದ ವಿರಿಂಚಿ ಹಾಸ್ಪಿಟಲ್ಸ್‌ನ ಅಧ್ಯಕ್ಷರಾಗಿದ್ದಾರೆ. ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದ ಆರೋಪದ ನಂತರ ಆರೋಗ್ಯ ಅಧಿಕಾರಿಗಳು ಕೋವಿಡ್‌-19 ಚಿಕಿತ್ಸೆಗಾಗಿ ಅದರ ಪರವಾನಗಿಯನ್ನು ರದ್ದುಗೊಳಿಸಿದಾಗ ವಿರಿಂಚಿ ಹಾಸ್ಪಿಟಲ್ಸ್‌ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

  • ಪ್ರಕೃತಿಯ ಮಡಿಲು, ಗಿರಿಶಿಖರ ಕಡಲು – ಕಣ್ಮನ ಸೆಳೆಯುತ್ತಿವೆ ಮಡಿಕೇರಿಯ ಮತಗಟ್ಟೆಗಳು

    ಪ್ರಕೃತಿಯ ಮಡಿಲು, ಗಿರಿಶಿಖರ ಕಡಲು – ಕಣ್ಮನ ಸೆಳೆಯುತ್ತಿವೆ ಮಡಿಕೇರಿಯ ಮತಗಟ್ಟೆಗಳು

    – ಬುಡಕಟ್ಟು ಜನರ ಮತದಾನ ಜಾಗೃತಿಗೆ ವಿಭಿನ್ನ ಪ್ರಯತ್ನ
    – ಚುನಾವಣೆಗೆ ಸಕಲ ಸಿದ್ಧತೆ; ಒಟ್ಟು 546 ಮತಗಟ್ಟೆ; 4.70 ಲಕ್ಷ ಮತದಾರರು

    ಮಡಿಕೇರಿ: ಕೊಡಗು ಜಿಲ್ಲೆಯ ಕಾಡಂಚಿನ ಭಾಗದಲ್ಲಿರುವ ಬುಡಕಟ್ಟು ಹಾಗೂ ಆದಿವಾಸಿ ಜನರು ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಕೊಡಗು (Kodagu) ಜಿಲ್ಲಾಡಳಿತ ಸಾಂಪ್ರದಾಯಿಕ ಶೈಲಿಯಲ್ಲಿ ಮತಗಟ್ಟೆಗಳನ್ನು (Polling Booths) ನಿರ್ಮಾಣಮಾಡಿದೆ. ಬುಡಕಟ್ಟು ಜನರ ಸಂಪ್ರದಾಯ, ಸಂಸ್ಕೃತಿ ಬಿಂಬಿಸುವ ಅಲಂಕಾರ, ಹಸಿರು ಪ್ರಕೃತಿಯ ಸಂಪನ್ಮೂಲ ಹೊಂದಿದ ಚಿತ್ರಪಟಗಳನ್ನು ಬಿಡಿಸಿ ಪ್ರತಿಯೊಬ್ಬರಿಂದಲೂ ಮತದಾನ ಮಾಡಿಸಲು ಮುಂದಾಗಿದೆ.

    ʻಕಾಫಿ ಅರಣ್ಯ ವನ್ಯಜೀವಿʼ ಥೀಮ್ ನಲ್ಲಿ ಮತಗಟ್ಟೆ:
    ಈ ಬಾರಿ ಕೊಡಗು ಜಿಲ್ಲಾಡಳಿತ ʻಕಾಫಿ ಅರಣ್ಯ ವನ್ಯಜೀವಿʼ ಥೀಮ್‌ನಲ್ಲಿ ಮತಗಟ್ಟೆಗಳನ್ನ ಸ್ಥಾಪನೆ ಮಾಡಿದ್ದು, ಮಡಿಕೇರಿ ನಗರ ಹಿಂದೂಸ್ತಾನಿ ಶಾಲೆಯಲ್ಲಿ ಹೊಸ ಪ್ರಯೋಗ ಮಾಡಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ. ಶಾಲೆಗಳ ಆವರಣದಲ್ಲಿ ಬಾಳೆ ಕಂಬ, ಮಾವಿನ ಎಲೆಗಳ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಇದು ಮತದಾನ ಜಾಗೃತಿಯೊಂದಿಗೆ ವನ್ಯಸಂಪತ್ತಿನ ಬಗ್ಗೆ ಅರಿವು ಮೂಡಿಸುವ ಉದ್ದೇಶವೂ ಆಗಿದೆ. ಇದನ್ನೂ ಓದಿ: ಏಪ್ರಿಲ್‌ 27, 28ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ – ವಿದ್ಯಾರ್ಥಿಗಳೇ, ಪೋಷಕರೇ ಬನ್ನಿ ಮಾಹಿತಿ ಪಡೆದುಕೊಳ್ಳಿ

    ಕೊಡಗಿನಲ್ಲಿ 546 ಮತಗಟ್ಟೆ- 4.70 ಲಕ್ಷ ಮತದಾರರು:
    ಕೊಡಗು ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ಚುನಾವಣೆಗಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ‌. ಈಗಾಗಲೇ ಮತಗಟ್ಟೆಗಳಲ್ಲಿ ಸ್ವಚ್ಛಾ ಕಾರ್ಯಗಳನ್ನೂ ನಡೆಸಲಾಗಿದೆ. ಏಪ್ರಿಲ್‌ 26ರಂದು ನಡೆಯುವ ಮೊದಲ ಹಂತದ ಚುನಾವಣೆಗಾಗಿ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4,70,766 ಮತದಾರರು ಮತದಾನಕ್ಕೆ ಅರ್ಹರಿದ್ದು, ಮಡಿಕೇರಿ ಕ್ಷೇತ್ರದಲ್ಲಿ 1,16,143 ಪುರುಷ, 1,14,425 ಮಹಿಳೆ, 9 ಇತರರು ಸೇರಿ 2,30,568 ಮಂದಿ, ವೀರಾಜಪೇಟೆ ಕ್ಷೇತ್ರದಲ್ಲಿ 1,14,425 ಪುರುಷರು, 1,17,601 ಮಹಿಳೆಯರು, 7 ಇತರರು ಸೇರಿ 2,32,033 ಮಂದಿ ಮತದಾರರಿದ್ದಾರೆ. 2 ಕ್ಷೇತ್ರಗಳಲ್ಲಿ ತಲಾ 273 ರಂತೆ ಒಟ್ಟು 546 ಮತಗಟ್ಟೆಗಳಿವೆ. 2 ಕ್ಷೇತ್ರಗಳು ಒಳಗೊಂಡಂತೆ 604 ಪಿಆರ್‌ಒ, 604 ಎಪಿಆರ್‌ಒ, 1,208 ಪಿಓ ಗಳು ಸೇರಿ ಒಟ್ಟು 2,416 ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. ಒಟ್ಟು 108 ಮತಗಟ್ಟೆಗಳನ್ನು ವಲ್ನರೇಬಲ್, ಕ್ರಿಟಿಕಲ್ ಎಂದು ಗುರುತಿಸಲಾಗಿದೆ.

    ಒಟ್ಟು 14 ಚೆಕ್‌ಪೋಸ್ಟ್‌ಗಳಿವೆ, 23 ವಿಶೇಷ ಮತಗಟ್ಟೆಗಳನ್ನೂ ರಚನೆ ಮಾಡಲಾಗಿದೆ. 10 ಸಖಿ ಬೂತ್, 6 ಸಾಂಪ್ರದಾಯಿಕ ಮತಗಟ್ಟೆ, 2 ದಿವ್ಯಾಂಗ ಮತಗಟ್ಟೆ, 2 ಯುವಮತದಾರರ ಬೂತ್ ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟರಾಜಾ ತಿಳಿಸಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮ ಅಪಮಾನಿಸುವವರ ವಿರುದ್ಧ ನನ್ನ ಹೋರಾಟ – ಯೂಟ್ಯೂಬರ್‌ ಮನೀಶ್‌ ಕಶ್ಯಪ್‌ ಬಿಜೆಪಿ ಸೇರ್ಪಡೆ

  • ಏ.26ರಂದು ರಾಜ್ಯದ ಮೊದಲ ಹಂತದ ಚುನಾವಣೆ: ಯಾವ ಕ್ಷೇತ್ರ-ಎಷ್ಟು ಮತದಾರರು? ಇಲ್ಲಿದೆ ವಿವರ…

    ಏ.26ರಂದು ರಾಜ್ಯದ ಮೊದಲ ಹಂತದ ಚುನಾವಣೆ: ಯಾವ ಕ್ಷೇತ್ರ-ಎಷ್ಟು ಮತದಾರರು? ಇಲ್ಲಿದೆ ವಿವರ…

    ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಳೆಗಟ್ಟಿದೆ. ಇದೇ ಏಪ್ರಿಲ್‌ 26 (ನಾಳೆ)ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಲು ಉತ್ಸುಕರಾಗಿದ್ದಾರೆ. ಮೊದಲ ಹಂತದ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ (ಎಸ್‌ಸಿ) ಸೇರಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 

    ಒಟ್ಟು 1,44,17,530 ಪುರುಷರು, 1,43,87,585 ಮಹಿಳೆಯರು ಹಾಗೂ 3,067 ತೃತೀಯ ಲಿಂಗಿಗಳು ಸೇರಿ ಒಟ್ಟು 2,88,08,182 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಹಾಗಾದ್ರೆ ಕ್ಷೇತ್ರವಾರು ಮತದಾರರ ವಿವರ ಎಷ್ಟಿದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ… 

    ಉಡುಪಿ-ಚಿಕ್ಕಮಗಳೂರು

    ಹಾಸನ

    ದಕ್ಷಿಣ ಕನ್ನಡ

    ಚಿತ್ರದುರ್ಗ (ಎಸ್‌ಸಿ)

    ತುಮಕೂರು

    ಮಂಡ್ಯ

    ಮೈಸೂರು

    ಚಾಮರಾಜನಗರ (ಎಸ್‌ಸಿ)

    ಬೆಂಗಳೂರು ಗ್ರಾಮಾಂತರ

    ಬೆಂಗಳೂರು ಉತ್ತರ

    ಬೆಂಗಳೂರು ಕೇಂದ್ರ

    ಬೆಂಗಳೂರು ದಕ್ಷಿಣ

    ಚಿಕ್ಕಬಳ್ಳಾಪುರ

    ಕೋಲಾರ (ಎಸ್‌ಸಿ)

  • ಉದ್ಯಮಿ ಮನೆ ಮೇಲೆ ಐಟಿ ದಾಳಿ; ಸೀಕ್ರೆಟ್‌ ರೂಮಿನಲ್ಲಿದ್ದ 22 ಕೆಜಿ ಚಿನ್ನ, 6.50 ಕೋಟಿ ಹಣ ಜಪ್ತಿ!

    ಉದ್ಯಮಿ ಮನೆ ಮೇಲೆ ಐಟಿ ದಾಳಿ; ಸೀಕ್ರೆಟ್‌ ರೂಮಿನಲ್ಲಿದ್ದ 22 ಕೆಜಿ ಚಿನ್ನ, 6.50 ಕೋಟಿ ಹಣ ಜಪ್ತಿ!

    ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಬುಧವಾರ (ಏ.24) ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಈ ನಡುವೆ ಐಟಿ ಅಧಿಕಾರಿಗಳು ಭರ್ಜರಿ ಕಾರ್ಯಚರಣೆಗೆ (IT Raid) ಮುಂದಾಗಿದ್ದಾರೆ.

    ಬೆಂಗಳೂರಿನ ಬಸವನಗುಡಿ ಉದ್ಯಮಿಯೊಬ್ಬರ (Bengaluru Businessmen) ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಸೀಕ್ರೆಟ್ ರೂಮಿನಲ್ಲಿಟ್ಟಿದ್ದ 6.5 ಕೋಟಿ ರೂ. ನಗದು ಹಣ, 22 ಕೆಜಿ ಚಿನ್ನ (Gold Seize) ಹಾಗೂ 40 ಕೆಜಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಊರಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಂತ ಆಸ್ತಿ ದಾನ ಮಾಡಿದ್ದೇನೆ, ಇಂಥಾ ಕೆಲಸ ಕುಮಾರಸ್ವಾಮಿ ಮಾಡಿದ್ದಾರಾ: ಡಿಕೆಶಿ ಪ್ರಶ್ನೆ

    ಡಿ.ಕೆ ಸುರೇಶ್ ಆಪ್ತರಿಗೂ ಐಟಿ ಶಾಕ್:
    ಇನ್ನೂ ಬೆಂಗಳೂರು ಗ್ರಾಮಾಂತರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್ ಕೊಟ್ಟಿದೆ. ಡಿಕೆ ಸುರೇಶ್ ಆಪ್ತರಿಗೆ ಸೇರಿದ 6 ಕಡೆ ಐಟಿ ರೇಡ್ ಮಾಡಿದೆ ಬೆಂಗಳೂರಿನ ಕೋಣನಕುಂಟೆಯ ಶ್ರೀಧರ್, ಅಂಜನಾಪುರ ಮಾಜಿ ಕಾರ್ಪೋರೇಟರ್ ಗಂಗಾಧರ್ ಸೇರಿ ಆರು ಜನರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.

    ಗಂಗಾಧರ್ ನಿವಾಸದಲ್ಲಿ 87 ಲಕ್ಷ ರೂಪಾಯಿ ನಗದು ಸಿಕ್ಕಿದೆ. ರೇಡ್ ಬಳಿಕ ಮಾತಾಡಿದ ಗಂಗಾಧರ್, ಕಾಂಗ್ರೆಸ್ ಪರ ಪ್ರಚಾರ ಮಾಡಬಾರದು ಅನ್ನೋ ರೀತಿಲಿ ಐಟಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಐಟಿ ರೇಡ್ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಸಹ ನಡೆಸಿದ್ದಾರೆ. ಆದ್ರೆ, ಐಟಿ ದಾಳಿಯನ್ನು ಬಿಜೆಪಿ ಸ್ವಾಗತಿಸಿದೆ. ಇದನ್ನೂ ಓದಿ: ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ

    ಅಲ್ಲದೇ ಬೆಂಗಳೂರು ದಕ್ಷಿಣ ಸೇರಿ ವಿವಿಧೆಡೆ ಕಳೆದ 2 ದಿನದಿಂದ ಐಟಿ ಇಲಾಖೆ ನಡೆಸಿದ್ದ ಶೋಧ ಕಾರ್ಯದಲ್ಲಿ, 1.33 ಕೋಟಿ ನಗದು, 23 ಕೆಜಿ ಚಿನ್ನಾಭರಣ, ಬೇನಾಮಿ ಆಸ್ತಿಪತ್ರದ ದಾಖಲೆಗಳನ್ನು ಜಪ್ತಿ ಮಾಡಿದೆ. ಬಳ್ಳಾರಿಯಲ್ಲಿ ಚಿನ್ನದ ವ್ಯಾಪಾರಿ ಕಮಲೇಶ್ ಜೈನ್ ನಿವಾಸದಲ್ಲಿ ದಾಖಲೆ ಇಲ್ಲದ 23 ಲಕ್ಷ ನಗದು, 450 ಗ್ರಾಂ ಚಿನ್ನ, 13 ಕೆಜಿ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿ, ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.

  • ಮೋದಿ ಸಹ ಕರಿಮಣಿ ಮಾಲೀಕ ಆಗಿದ್ರಲ್ಲಾ, ಮಂಗಳಸೂತ್ರದ ಬೆಲೆ ಗೊತ್ತಾ: ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಮೋದಿ ಸಹ ಕರಿಮಣಿ ಮಾಲೀಕ ಆಗಿದ್ರಲ್ಲಾ, ಮಂಗಳಸೂತ್ರದ ಬೆಲೆ ಗೊತ್ತಾ: ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಕಲಬುರಗಿ: ಪ್ರಧಾನಿ ಮೋದಿ ಅವರೂ ಕರಿಮಣಿ ಮಾಲೀಕ (Karimani Malika) ಆಗಿದ್ದರಲ್ಲಾ? ಮೋದಿಗೆ ಮಂಗಳಸೂತ್ರದ ಬೆಲೆ ಗೊತ್ತಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದಾರೆ.

    ಕಲಬುರಗಿಯಲ್ಲಿ (Kalaburagi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ (BJP) ನಿರೀಕ್ಷೆಗೆ ತಕ್ಕಷ್ಟು ಮತಗಳು ಬಂದಿಲ್ಲ. ಹಾಗಾಗಿ ವಿಶ್ವಗುರು ಅಂತ ಕರೆಸಿಕೊಳ್ಳುವ ಮೋದಿ ಹತಾಶರಾಗಿದ್ದಾರೆ. ಮೊದಲ ಹಂತದ ಮತದಾನದ ವೇಳೆ ಅಲ್ಪಸಂಖ್ಯಾತರ ಪರವಾಗಿದ್ದರು, ಮುಸ್ಲಿಮರ (Muslims) ಏಳಿಗೆ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ ನಾಗಪುರ ಆರ್‌ಎಸ್‌ಎಸ್ ಕಚೇರಿಗೆ ಮೋದಿ ಹೋಗಿ ಬಂದ ಮೇಲೆ ಏನಾಯ್ತು? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹುಟ್ಟಿದ್ದು ಭಾರತದಲ್ಲಿ, ಬೆಳೆದಿದ್ದು ಪಾಕಿಸ್ತಾನ – ಪಾಕ್‌ ಯುವತಿಗೆ ಮರುಜೀವ ನೀಡಿದ ಭಾರತದ ಹೃದಯ!

    ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಿಂದೂ ಮಹಿಳೆಯ ಮಂಗಳಸೂತ್ರ ಸಹ ಉಳಿಯೋದಿಲ್ಲ ಅಂತಾ ಮೋದಿ ಹೇಳಿದ್ದಾರೆ. ಸೋನಿಯಾ ಗಾಂಧಿ ದೇಶಕ್ಕಾಗಿ ತಮ್ಮ ತಮ್ಮ ಮಂಗಳ ಸೂತ್ರ ಬಲಿಕೊಟ್ಟರು. ಎಲ್‌ಟಿಟಿಯವರು ರಾಜೀವ್‌ಗಾಂಧಿ ಅವರನ್ನ ಹತ್ಯೆಮಾಡಿದರು. ಮೋದಿ ಅವರೂ ಕರಿಮಣಿ ಮಾಲೀಕ ಆಗಿದ್ರಲ್ಲಾ? ಮೋದಿಗೆ ಮಂಗಳಸೂತ್ರದ ಬೆಲೆ ಗೊತ್ತಾ? ಜನ ಚಿನ್ನ ಆಸ್ತಿ-ಪಾಸ್ತಿ ಮಾರಾಟ ಮಾಡಿದ್ದು ಮೋದಿಯ ಮಾಸ್ಟರ್ ಸ್ಟ್ರೋಕ್‌ಗಳಿಂದ, ಬೆಲೆ ಏರಿಕೆ, ಕೊರೊನಾ ವೇಳೆ ಚಿಕಿತ್ಸೆಗೋಸ್ಕರ ಜನ ತಮ್ಮ ಆಸ್ತಿ ಮಾರಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ

    ಮೋದಿಯವರ ಭಾಷಣಕ್ಕೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತಿಲ್ಲ ಏಕೆ? ಅವರ ಭಾಷಣದಲ್ಲಿ ಬರೀ ರಾಮಮಂದಿರ, ಹನುಮಾನ್ ಚಾಲಿಸಾ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇವುಗಳ ಹೆಸರು ಬಿಟ್ಟರೆ ಬೇರೆನೂ ಬರುತ್ತಿಲ್ಲ. ಚುನಾವಣಾ ಆಯೋಗ ಸತ್ತು ಹೋಗಿದೆಯಾ? ಮೋದಿ ಅವರ ದ್ವೇಷದ ಭಾಷಣಗಳಿಗೆ ಚುನಾವಣಾ ಆಯೋಗದಿಂದ ಒಂದೇ ಒಂದು ನೋಟಿಸ್ ಸಹ ಕೊಟ್ಟಿಲ್ಲ. ಸಾಕಷ್ಟು ದೂರುಗಳನ್ನ ಕೊಟ್ಟರೂ ಆಯೋಗ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದ್ರೆ ನಮಗೆ ಮಾತ್ರ ತಕ್ಷಣವೇ ನೋಟೀಸ್ ಜಾರಿ ಮಾಡ್ತಾರೆ. ಎಲೆಕ್ಷನ್ ಕಮಿಷನ್‌ನನ್ನ ಕಿತ್ತು ಬಿಸಾಕಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 93.5% ಮಾರ್ಕ್ಸ್‌ ನೋಡಿ ಮೂರ್ಛೆ ಬಿದ್ದ 10ನೇ ತರಗತಿ ವಿದ್ಯಾರ್ಥಿ- ಐಸಿಯುಗೆ ದಾಖಲು

  • 10 ವರ್ಷಗಳ ಸಾಧನೆ ಬಿಜೆಪಿಗೆ ಬೂಸ್ಟರ್‌ ಡೋಸ್‌ ಕೊಡುತ್ತಾ? 

    10 ವರ್ಷಗಳ ಸಾಧನೆ ಬಿಜೆಪಿಗೆ ಬೂಸ್ಟರ್‌ ಡೋಸ್‌ ಕೊಡುತ್ತಾ? 

    ನವದೆಹಲಿ: 2024ರ ಲೋಕಸಭಾ ಚುನಾವಣೆ ಕಳೆಗಟ್ಟಿದೆ. ಈಗಾಗಲೇ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮೊದಲಿಗೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಇದರಿಂದಾಗಿ ರಾಷ್ಟ್ರೀಯ ಪಕ್ಷಗಳ ನಡುವೆ ಕೆಸರೆರಚಾಟ ಶುರುವಾಗಿದೆ. ಕಾಂಗ್ರೆಸ್‌ ತನ್ನ ಗ್ಯಾರಂಟಿಗಳ ಮೇಲೆ ನಂಬಿಕೆಯಿಟ್ಟಿದ್ದರೆ, ಬಿಜೆಪಿ ಮೋದಿ ಗ್ಯಾರಂಟಿಯ ಮೇಲೆ ಭರವಸೆ ಹೊಂದಿದೆ. ಅದಕ್ಕೆ ಪೂರಕವಾಗಿ ಕಳೆದ 10 ವರ್ಷಗಳಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಬಿತ್ತರಿಸಲು ಶುರು ಮಾಡಿದ್ದಾರೆ.

    ಕಳೆದ 10 ವರ್ಷಗಳ ಸಾಧನೆಯನ್ನು ಬಣ್ಣಿಸುತ್ತಿರುವ ಪ್ರಧಾನಿ ಮೋದಿ ಅವರು, ಮುಂದಿನ ಗ್ಯಾರಂಟಿಗಳೊಂದಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಿಗೆ ನೀಡುತ್ತಿರುವ ಸಂದರ್ಶನಗಳಲ್ಲಿ ನೆರೆ-ಹೊರೆ ದೇಶಗಳ ಜೊತೆಗಿನ ಸಂಬಂಧ, ಲೋಕಸಭಾ ಚುನಾವಣೆ, ಭಾರತದಲ್ಲಿ ಪ್ರಜಾಪ್ರಭುತ್ವ, ಮುಕ್ತ ಪತ್ರಿಕಾ ಸ್ವಾತಂತ್ರ್ಯ, ಮೂಲಸೌಕರ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಡಿಜಿಟಲ್ ಕೇತ್ರದಲ್ಲಿನ ಭಾರತದ ಸಾಧನೆ ಮೊದಲಾದ ವಿಷಯಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

    ಪ್ರಸ್ತುತ ಚುನಾವಣೆಯಲ್ಲಿ 3ನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂದು ಪಣ ತೊಟ್ಟಿರುವ ಪ್ರಧಾನಿ ಮೋದಿ, 3ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಮಾಡುವ ಗುರಿ ಹೊಂದಿರುವುದಾಗಿ ಮಹತ್ವದ ಗ್ಯಾರಂಟಿ ನೀಡಿದ್ದಾರೆ. ಹಾಗಾದ್ರೆ ಕಳೆದ 10 ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರದಲ್ಲಿ ಏನೇನು ಬೆಳವಣಿಯಾಗಿದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಸಂವಿಧಾನದ 370ನೇ ವಿಧಿ ರದ್ದು:

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತು. ಭಾರತದ ಸಂವಿಧಾನದ 370ನೇ ವಿಧಿಯು ಉತ್ತರ ಭಾರತದಲ್ಲಿ ವಿವಾದಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿತ್ತು. ಇದು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ, ರಾಜ್ಯಧ್ವಜ ಮತ್ತು ಆಂತರಿಕ ಆಡಳಿತ ಸ್ವಾಯತತ್ತೆಯನ್ನು ಒದಗಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವಿಧಿಯನ್ನ ರದ್ದುಗೊಳಿಸಿತು. 370ನೇ ವಿಧಿ ರದ್ದತಿಯ ನಂತರ ಆ ಪ್ರದೇಶ ಜಾಗತಿಕ ಕಾರ್ಯಕ್ರಮಗಳ ತಾಣವಾಗಿ ಬದಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೇ ಇತ್ತೀಚೆಗೆ ಪ್ರಮುಖ ಹೂಡಿಕೆಗಾದರರೂ ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ಹೂಡಿಕೆಗೆ ಮನಸ್ಸು ಮಾಡುತ್ತಿರುವುದು ಗಮನಾರ್ಹ.

    ಮಹಿಳೆಯರಿಗೆ ಮೀಸಲಾತಿ:

    ಕೇಂದ್ರ ಸರ್ಕಾರ ಹೊಸ ಸಂಸತ್‌ ಕಟ್ಟಡದ ಮೊದಲ ವಿಶೇಷ ಅಧಿವೇಶನ ಸಮಯದಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ (Women Reservation) ನೀಡುವ ಮಸೂದೆಯನ್ನು ಪಾಸ್‌ ಮಾಡಿದೆ. 1989 ರಿಂದ ಈ ವಿಚಾರ ಸಂಸತ್ತಿನಲ್ಲಿ ಚರ್ಚೆ ಆಗುತ್ತಲೇ ಇತ್ತು. ಆದರೆ 2023ರ ಸೆಪ್ಟೆಂಬರ್‌ನಲ್ಲಿ ಮಸೂದೆಯನ್ನು ಪಾಸ್‌ ಮಾಡಲಾಗಿದೆ.  ಅಲ್ಲದೇ ಸಶಸ್ತ್ರ ಮೀಸಲು ಪಡೆಗಳು ಸೇರಿದಂತೆ ಎಲ್ಲ ಕ್ಷೇತ್ರಗಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ಅಲ್ಲದೇ ಮಹಿಳೆಯರಿಗಾಗಿ ನಮೋ ಡ್ರೋನ್‌ ದೀದಿ, ಲಕ್‌ಪತಿ ದೀದಿ, ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ನಾರಿ ಶಕ್ತಿಯ ಬಲ ಹೆಚ್ಚಿಸಿದೆ ಎಂದು ಮೋದಿ ಹೇಳಿಕೊಂಡಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ:

    ಕಳೆದ ಮಾರ್ಚ್‌ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಗೊಳಿಸಿತು.. 2014ರ ಡಿಸೆಂಬರ್‌ 31ಕ್ಕೂ ಮುನ್ನ  ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಕಾರಣಕ್ಕೆ ಅಲ್ಲಿ ಕಿರುಕುಳ ಅನುಭವಿಸಿ, ಬದುಕಲಾಗದೆ 31 ಡಿಸೆಂಬರ್‌ 2014ಕ್ಕಿಂತ ಮುಂಚೆ ಭಾರತದೊಳಗೆ ಓಡಿಬಂದ ಹಿಂದೂ, ಜೈನ, ಭೌದ್ಧ, ಕ್ರಿಶ್ಚಿಯನ್‌, ಪಾರ್ಸಿ ಮತ್ತು ಸಿಖ್ಖರನ್ನು ಭಾರತೀಯ ನಾಗರಿಕರು ಎಂದು ಪರಿಗಣಿಸಿ ಅವರಿಗೆ ಈ ಕಾಯ್ದೆಯ ಅಡಿ ಪೌರತ್ವ ನೀಡಲಾಗುತ್ತದೆ. 

    ತ್ರಿವಳಿ ತಲಾಖ್‌ ನಿಷೇಧ:

    2019ರ ಜುಲೈ 30 ರಂದು ಭಾರತದ ಸಂಸತ್ತು ತ್ರಿವಳಿ ತಲಾಖ್‌ ಪದ್ದತಿಯನ್ನು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಘೋಷಣೆ ಮಾಡಿತು. ಆನಂತರ 2019ರ ಆಗಸ್ಟ್‌ 1 ರಂದು ಮುಸ್ಲಿಂ ಮಹಿಳೆಯರ ವಿಹಾಹದ ಮೇಲಿನ ಹಕ್ಕುಗಳ ಸಂರಕ್ಷಣೆ ಕಾಯ್ದೆ 2019 ಹೆಸರಿನಲ್ಲಿ ಶಿಕ್ಷಾರ್ಹ ಕಾಯ್ದೆಯನ್ನು ಅನುಷ್ಟಾನಗೊಳಿಸಲಾಯಿತು. ಈ ನಿಯಮ ಉಲ್ಲಂಘಿಸಿದರೆ ಕನಿಷ್ಠ 3 ವರ್ಷ ಜೈಲು ಶಿಕ್ಷಗೆ ವ್ಯಕ್ತಿ ಗುರಿಯಾಗಬಹುದು ಜೊತೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೇ ತ್ರಿವಳಿ ತಲಾಖ್‌ ಪಡೆದ ಸಂತ್ರಸ್ತೆಯು ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ, ಜೊತೆಗೆ ಮಕ್ಕಳನ್ನು ತನ್ನ ಸುಪರ್ದಿಗೆ ಪಡೆಯುವ ಅವಕಾಶವೂ ಮಹಿಳೆಗೆ ಇರುತ್ತದೆ ಎಂಬುದು ಗಮನಾರ್ಹ.

    ಹೆದ್ದಾರಿಗಳ ಸಂಖ್ಯೆಯಲ್ಲಿ ಹೆಚ್ಚಳ:

    ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ ಶೇ.60 ರಷ್ಟು ಹೆಚ್ಚಳವಾಗಿದೆ. 91,287 ಕಿಮೀ ಗಳಿಂದ 1,46,145 ಕಿಮೀಗಳಿಗೆ ಹೆಚ್ಚಿಸಿದ್ದೇವೆ. ದೇಶಾದ್ಯಂತ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ. 1 ಕೋಟಿ ಮನೆಗಳಿಗೆ ಸೌರ ವಿದ್ಯುತ್‌ ಕಲ್ಪಿಸಲಾಗಿದೆ. ಅಲ್ಲದೇ ಕಳೆದ 1 ದಶಕದಲ್ಲಿ ಸೌರಶಕ್ತಿ ಬಳಕೆಯಲ್ಲೂ ಗಣನೀಯ ಏರಿಕೆ ಕಂಡಿದೆ ಎಂಬುದಾಗಿ ಪ್ರಧಾನಿ ಹೇಳಿದ್ದಾರೆ. ದೇಶದಲ್ಲಿ ಸೌರಶಕ್ತಿ ಸಾಮರ್ಥ್ಯವೂ 2014 ರಿಂದ 2024ರ ಅವಧಿಗೆ 2,820 ಮೆಗಾವ್ಯಾಟ್‌ನಿಂದ 72,000 ಮೆಗಾವ್ಯಾಟ್‌ಗೆ ತಲುಪಿದೆ. ಭಾರತ ಕೈಗೊಂಡಿರುವ ಭವಿಷ್ಯದ ಯೋಜನೆಗಳೂ ಸಹ ಹವಾಮಾನ ಸುಧಾರಣೆಯ ವಿಚಾರದಲ್ಲಿ ಭದ್ರತೆ ಹೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೇ 12,349 ಕಿಮೀ ರಾಷ್ಟ್ರೀಯ ಹೆದ್ದಾರಿಯನ್ನು 2023-24ರ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ.

    ಪ್ರಮುಖ ಬೆಳವಣಿಗೆ ಮುಖ್ಯಾಂಶಗಳು:

    • ಹೆಚ್‌ಎಎಲ್‌ 2026ರ ವೇಳೆ 2 ಲಕ್ಷ ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದೆ.
    • ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗ ಸಭೆ ಆಯೋಜನೆ
    • ಅತಿದೊಡ್ಡ ಆರ್ಥಿಕತೆ ಹೊಂದಿದ ದೇಶಗಳ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ 5ನೇ ಸ್ಥಾನಕ್ಕೆ ಜಿಗಿದಿದೆ.
    • ಸೆನ್ಸೆಕ್ಸ್‌ ಸಾರ್ವಕಾಲಿಕ ದಾಖಲೆ. 2014ರಲ್ಲಿ 25,000 ಸಾವಿರ ದಷ್ಟಿದ್ದ ಷೇರುಪೇಟೆ ಸೂಚ್ಯಂಕ 2024ರಲ್ಲಿ 75000 ಅಂಕಗಳನ್ನು ದಾಟಿದೆ.
    • 3ನೇ ಅತಿದೊಡ್ಡ ಸ್ಟಾರ್ಟ್‌ಅಪ್‌ ಪರಿಸರ ವ್ಯವಸ್ಥೆ ಹೊಂದಿದ ದೇಶವಾಗಿ ಭಾರತ ಗುರುತಿಸಿಕೊಂಡಿದೆ ಎಂಬುದಾಗಿಯೂ ಪ್ರಧಾನಿ ಮೋದಿ ತಿಳಿಸಿದ್ದಾರೆ.

  • ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲ ಧರ್ಮದ ತಾಯಂದಿರು ಗಂಡ-ಮಕ್ಕಳನ್ನ ಕಳೆದುಕೊಳ್ತಾರೆ: ಯತೀಂದ್ರ

    ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲ ಧರ್ಮದ ತಾಯಂದಿರು ಗಂಡ-ಮಕ್ಕಳನ್ನ ಕಳೆದುಕೊಳ್ತಾರೆ: ಯತೀಂದ್ರ

    – ಮೋದಿ ಟೀಕಿಸುವ ಭರದಲ್ಲಿ ಸಿಎಂ ಪುತ್ರ ವಿವಾದಾತ್ಮಕ ಹೇಳಿಕೆ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಟೀಕಿಸುವ ಭರದಲ್ಲಿ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ರಾಜ್ಯದಲ್ಲಿ ವಿವಿಧ ಪಕ್ಷಗಳು ಆಡಳಿತ ನಡೆದಿವೆ. ಯಾವಾಗಲೂ ಹಿಂದೂಗಳಿಗೆ ಅನ್ಯಾಯ ಆಗಿಲ್ಲ. ಈ ಸಲ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಹಿಂದೂ ಮಹಿಳೆಯರ (Hindu Womens) ಮಂಗಳಸೂತ್ರ ಮಾತ್ರವಲ್ಲ, ಎಲ್ಲಾ ಧರ್ಮದ ತಾಯಂದಿರೂ ತಮ್ಮ ಮಕ್ಕಳು ಹಾಗೂ ಗಂಡಂದಿರನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

    ಏಕೆಂದರೆ ಈ ದೇಶದಲ್ಲಿ ಬಿಜೆಪಿ ಕೋಮುಗಲಭೆ, ದೊಂಬಿ ಗಲಾಟೆ ಸೃಷ್ಟಿ ಮಾಡಿ ಒಬ್ಬರನ್ನೊಬ್ಬರು ಬಡಿದಾಡಿಕೊಂಡು ಸಾಯುವಂತೆ ಮಾಡ್ತಾರೆ. ಇಡೀ ಸಮಾಜ ಅಧಃಪತನಕ್ಕೆ ಹೋಗುವಂತೆ ಮಾಡ್ತಾರೆ. ಮಕ್ಕಳಿಗೆ ಶಿಕ್ಷಣ ಕೊಡದೇ ಕೋಮು ಗಲಭೆಗಳಲ್ಲಿ ತೊಡಗಿಸಿ ನಿರುದ್ಯೋಗಿಗಳನ್ನಾಗಿ ಮಾಡ್ತಾರೆ ಎಂದು ಕಿಡಿ ಕಾರಿದ್ದರೆ. ಇದನ್ನೂ ಓದಿ:ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಎಂದು ಕಾಂಗ್ರೆಸ್‌ ಹೇಳಿತ್ತು: ಮೋದಿ ಕಿಡಿ 

    ಪ್ರಧಾನಿ ಮೋದಿ ಮತ ಕೇಳುವ ನೆಪದಲ್ಲಿ ಅತ್ಯಂತ ತುಚ್ಛವಾದ ಹೇಳಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರದ ಯಾವುದೇ ಒಬ್ಬ ಪ್ರಧಾನಿ ಇಂತಹ ಕೆಳಮಟ್ಟಕ್ಕೆ ಇಳಿಯೋದಿಲ್ಲ. ಮೋದಿ ಅವರು ಮತೀಯ ಭಾವನೆ ಕೆರಳಿಸುವ ರೀತಿ ಮಾತನಾಡಿದ್ದಾರೆ. ಚುನಾವಣಾ ಆಯೋಗ ಯಾಕೆ ಕಣ್ಣು ಮುಚ್ಚಿ ಕುಳಿತಿದ್ಯೋ ಗೊತ್ತಿಲ್ಲ ವಾಗ್ದಾಳಿ ನಡೆಸಿದ್ದಾರೆ.

    ಪ್ರಧಾನಿ ಮೋದಿ ಹೇಳಿದ್ದೇನು?
    ರಾಜಸ್ಥಾನದ ಬನ್ಸಾರ್‌ನಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಬಹುದು. ಅವರು (ಕಾಂಗ್ರೆಸ್) ಅಧಿಕಾರದಲ್ಲಿದ್ದಾಗ ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಎಂದು ಹೇಳಿದ್ದರು. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನುಸುಳುಕೋರರಿಗೆ ನೀಡಬಹುದೇ? ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಬಿಜೆಪಿ ಸ್ವತಂತ್ರವಾಗಿಯೇ 350 ಸೀಟು ಗೆಲ್ಲುತ್ತೆ, ತಮಿಳುನಾಡಿನಲ್ಲಿ 5 ಸೀಟು ಖಚಿತ: ಆರ್ಥಿಕ ತಜ್ಞ ಭಲ್ಲಾ ಭವಿಷ್ಯ

    ಅಲ್ಲದೇ ಜನರ ಖಾಸಗಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ. ನಮ್ಮ ತಾಯಂದಿರು ಮತ್ತು ಸಹೋದರಿಯರ ಒಡೆತನದ ಮಂಗಳಸೂತ್ರ ಮತ್ತು ಚಿನ್ನದ ಮೌಲ್ಯವು ಅಮೂಲ್ಯವಾಗಿದೆ. ಕಾಂಗ್ರೆಸ್ ಈ ಸಂಪತ್ತನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಮರುಹಂಚಿಕೆ ಮಾಡುವ ಭರವಸೆಯನ್ನು ಹೇಗೆ ನೀಡುತ್ತದೆ? ಎಂದು ಪ್ರಶ್ನಿಸಿದ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಿಂದೂ ಹೆಣ್ಮಕ್ಕಳ ಮಂಗಳ ಸೂತ್ರವನ್ನೂ ಉಳಿಸೋದಿಲ್ಲ ಎಂದು ಹೇಳಿದ್ದರು.

  • ಮಿಷನ್‌-100 ಟಾರ್ಗೆಟ್‌; 98ರಲ್ಲಿ ಸೋಲು, 99ನೇ ಚುನಾವಣೆಯಲ್ಲಿ ಮತ್ತೆ ಕಣಕ್ಕೆ – ಈ ಅಭ್ಯರ್ಥಿ ಯಾರು ಗೊತ್ತೆ?

    ಮಿಷನ್‌-100 ಟಾರ್ಗೆಟ್‌; 98ರಲ್ಲಿ ಸೋಲು, 99ನೇ ಚುನಾವಣೆಯಲ್ಲಿ ಮತ್ತೆ ಕಣಕ್ಕೆ – ಈ ಅಭ್ಯರ್ಥಿ ಯಾರು ಗೊತ್ತೆ?

    – ಸೋಲಿನಲ್ಲೇ ಶತಕ ಬಾರಿಸುವ ಗುರಿ ಹೊಂದಿದ್ದಾರೆ ಆಗ್ರಾದ ಅಭ್ಯರ್ಥಿ

    ಲಕ್ನೋ: ದೇಶದಲ್ಲಿ ಈಗಾಗಲೇ ಲೋಕಸಭಾ ಚುನಾವಣೆ (Lok Sabha Elections) ಆರಂಭವಾಗಿದೆ. ಏಪ್ರಿಲ್‌ 19ರಿಂದ ಮೊದಲ ಹಂತದ ಚುನಾವಣೆ ಶುರುವಾಗಿದ್ದು, 21 ರಾಜ್ಯಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಮೊದಲ ಹಂತದ ಚುನಾವಣೆಯಲ್ಲಿ ಅತ್ಯಂತ ಶ್ರೀಮಂತ ಹಾಗೂ ಶೂನ್ಯ ಆಸ್ತಿ ಹೊಂದಿದ್ದ ಬಡ ಅಭ್ಯರ್ಥಿಗಳನ್ನೂ ನೋಡಿದ್ದೇವೆ. ಆದ್ರೆ ಉತ್ತರ ಪ್ರದೇಶದಲ್ಲೊಬ್ಬ ವ್ಯಕ್ತಿ ಸೋಲಿನಲ್ಲೇ ಶತಕ ಬಾರಿಸಲು ಮುಂದಾಗಿದ್ದಾರೆ.

    ಈಗಾಗಲೇ 98 ಚುನಾವಣೆಗಳಲ್ಲಿ ಸೋತಿರುವ ಆಗ್ರಾದ ರಾಮನಗರ ನಿವಾಸಿಯಾಗಿರುವ ಹಸ್ನೂರಾಮ್ ಅಂಬೇಡ್ಕರ್ (Hasnuram Ambedkari) 99ನೇ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. 100ನೇ ಚುನಾವಣೆಯಲ್ಲಿ ತಾನು ಸೋತ ಬಳಿಕ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: Lok Sabha Elections 2024: ಮಣಿಪುರದ 11 ಬೂತ್‌ಗಳಲ್ಲಿ ಇಂದು ಮರು ಮತದಾನ

    ಹೌದು. ಹಸ್ನೋರಾಮ್‌ ಅಂಬೇಡ್ಕರ್‌ 1985 ರಿಂದ ಇಲ್ಲಿಯವರೆಗೆ ಎಲ್ಲಾ ಮಾದರಿಯ ಚುನಾವಣೆಗಳಿಂದ 98 ಬಾರಿ ಸ್ಪರ್ಧಿಸಿ ಸೋತಿದ್ದಾರೆ. ಈ ಬಾರಿ ಶತಕ ಬಾರಿಸಲೇಬೇಕೆಂದು ಆಗ್ರಾ ಮತ್ತು ಫತೇಪುರ್‌ ಸಿಕ್ರಿಯಿಂದ ನಾಮಪತ್ರ ಸಲ್ಲಿಸಿದ್ದರು. ಆದ್ರೆ ಫತೇಪುರ್‌ ಸಿಕ್ರಿಯಲ್ಲಿ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ 99ನೇ ಬಾರಿ ಕಣಕ್ಕಿಳಿಯುವ ಮೂಲಕ ಸುದ್ದಿಯಾಗಿದ್ದಾರೆ.

    ಕಳೆದ 4 ದಶಕಗಳಿಂದ ವಿಧಾನಸಭೆ, ಲೋಕಸಭೆ, ಪಂಚಾಯ್ತಿ ಚುನಾವಣೆಗಳು, ಸ್ಥಳೀಯ ಸಂಸ್ಥೆ ಮತ್ತು ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ (ಬಿಡಿಸಿ)ಗೆ ನಡೆದ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಅಲ್ಲದೇ ಅಷ್ಟೂ ಚುನಾವಣೆಯನ್ನೂ ತಮ್ಮ ಸ್ವಂತ ಖರ್ಚಿನಿಂದಲೇ ಎದುರಿಸುತ್ತಿದ್ದಾರೆ ಎಂಬುದು ವಿಶೇಷ. ಈ ಹಿಂದೆ ಬಹುಜನ ಸಮಾಜವಾದಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದರು ಆದ್ರೆ ಪಕ್ಷ ಟಿಕೆಟ್‌ ನಿರಾಕರಿಸಿದ್ದರಿಂದ ಸ್ವತಂತ್ರವಾಗಿ ಸ್ಪರ್ಧಿಸಲು ಶುರು ಮಾಡಿದ್ದಾರೆ.

    2,768 ಮತ ಪಡೆದಿದ್ದ ಹಸ್ನೂರಾಮ್:
    ಸತತ ಸೋಲುಗಳನ್ನೇ ಕಂಡಿದ್ದರೂ ಉತ್ಸಾಹ ಕಳೆದುಕೊಳ್ಳದ ಹಸ್ನೋರಾಮ್‌ 2019ರ ಲೋಕಸಭಾ ಚುನಾವಣೆಯಲ್ಲಿ ಆಗ್ರಾದಿಂದ ಸ್ಪರ್ಧಿಸಿ 2,768 ಮತಗಳನ್ನು ಪಡೆದುಕೊಂಡಿದ್ದರು.

    ಈ ಕುರಿತು ಮಾತನಾಡಿರುವ ಹಸ್ನೂರಾಮ್ ನಾನು ಯಾವುದೇ ಕಾರಣಕ್ಕೂ ಗೆಲ್ಲೋದಿಲ್ಲ ಅನ್ನೋದು ಗೊತ್ತಿದೆ. ಆದ್ರೆ 100 ಚುನಾವಣೆಗಳಲ್ಲಿ ಸ್ಪರ್ಧಿಸಲೇಬೇಕೆಂಬುದು ನನ್ನ ಗುರಿ. 100ನೇ ಚುನಾವಣೆಯಲ್ಲಿ ಸೋತ ನಂತರ ಸ್ಪರ್ಧಿಸುವುದನ್ನು ಬಿಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 14 ವರ್ಷದ ಅಪ್ರಾಪ್ತೆಯ ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ಅನುಮತಿ

  • ಬಿಜೆಪಿ ಸ್ವತಂತ್ರವಾಗಿಯೇ 350 ಸೀಟು ಗೆಲ್ಲುತ್ತೆ, ತಮಿಳುನಾಡಿನಲ್ಲಿ 5 ಸೀಟು ಖಚಿತ: ಆರ್ಥಿಕ ತಜ್ಞ ಭಲ್ಲಾ ಭವಿಷ್ಯ

    ಬಿಜೆಪಿ ಸ್ವತಂತ್ರವಾಗಿಯೇ 350 ಸೀಟು ಗೆಲ್ಲುತ್ತೆ, ತಮಿಳುನಾಡಿನಲ್ಲಿ 5 ಸೀಟು ಖಚಿತ: ಆರ್ಥಿಕ ತಜ್ಞ ಭಲ್ಲಾ ಭವಿಷ್ಯ

    ನವದೆಹಲಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಬಿಜೆಪಿ ಸ್ವತಂತ್ರವಾಗಿ ಕನಿಷ್ಠ 330 ರಿಂದ 350 ಸೀಟು ಗೆಲ್ಲುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ (Surjit Bhalla) ಭವಿಷ್ಯ ನುಡಿದಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಬಿಜೆಪಿಗೆ 2019ಕ್ಕಿಂತಲೂ ಉತ್ತಮ ಫಲಿತಾಂಶ ಬರಲಿದೆ. 2019ರಲ್ಲಿ ಬಿಜೆಪಿ 303 ಕಾಂಗ್ರೆಸ್‌ 52 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಈ ಬಾರಿ ಎನ್‌ಡಿಎ ಹೊರತುಪಡಿಸಿ, ಬಿಜೆಪಿಯೇ ಸ್ವತಂತ್ರವಾಗಿ 330 ರಿಂದ 350 ಸ್ಥಾನಗಳನ್ನು ಗೆಲ್ಲಲಿದೆ. ತಮಿಳುನಾಡಿನಲ್ಲಿ (Tamil Nadu) ಕನಿಷ್ಠ 5 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಅನಾರೋಗ್ಯ – ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಗೈರು

    ಸದ್ಯದಲ್ಲಿ ಜನರ ಮನಸ್ಥಿತಿ ಬಿಜೆಪಿ ಕಡೆಗೆ ವಾಲಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಚಾರ ಜನರ ಮೇಲೆ ಪ್ರಭಾವ ಬೀರಿದೆ. ಆದ್ದರಿಂದ 2019ರ ಫಲಿತಾಂಶಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಖಚಿತ. ಕೇರಳದಲ್ಲಿ ಬಹುಶಃ ಒಂದು ಅಥವಾ ಎರಡು ಸ್ಥಾನಗಳಲ್ಲಿ ಗೆಲ್ಲಬಹುದು. ಇನ್ನೂ 2019ರ ಚುನಾವಣೆಯಲ್ಲಿ 52 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿ 44 ಸ್ಥಾನಗಳಿಗೆ ಕುಸಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ವಯನಾಡ್‌ನಲ್ಲಿ ರಾಹುಲ್‌ಗೆ ಬಿಗ್‌ ಶಾಕ್‌ – ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ

    ಈ ಬಾರಿ ಬಿಜೆಪಿ ದೇಶದಲ್ಲಿ ಅಭೂತಪೂರ್ವ ಗೆಲುವು ಸಾಧಿಸಲಿದೆ. ಅದಕ್ಕೆ ಕಾರಣವೂ ಇದೆ. ಇಂದಿನ ಜನ ಜೀವನ ಮಟ್ಟ ಸಾಕಷ್ಟು ಸುಧಾರಣೆ ಕಂಡಿದೆ. ಭಾರತ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಬಹಳಷ್ಟು ಸಂಖ್ಯೆಯ ಜನ ಬಡತನದಿಂದ ಹೊರಬಂದಿದ್ದಾರೆ. ಜೊತೆಗೆ 2019ಕ್ಕಿಂತಲೂ ಮುಂಚೆ ಇದ್ದ ನಿರುದ್ಯೋಗಿಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಕಳೆದ 10 ವರ್ಷಗಳಲ್ಲಿ ಈ ಬೆಳವಣಿಗೆಯಾಗಿದೆ, ಈ ಎಲ್ಲ ಕಾರಣಗಳಿಂದ ಬಿಜೆಪಿ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಅಂಜುಮನ್ ಕಾಲೇಜು ಕೊಠಡಿಗೆ ನೇಹಾ ಹೆಸರು; ಧಾರವಾಡದಲ್ಲಿ ಸೋಮವಾರ ಅರ್ಧದಿನ ವ್ಯಾಪಾರ ಬಂದ್

  • ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ – ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿಶ್ವಾಸ

    ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ – ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿಶ್ವಾಸ

    ಹುಬ್ಬಳ್ಳಿ: ರಾಜ್ಯದಲ್ಲಿ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ವಿಶ್ವಾಸ ವ್ಯಕ್ತಪಡಿಸಿದರು.

    ಹುಬ್ಬಳ್ಳಿಯಲ್ಲಿಂದು (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಪ್ರಚಾರದ ವೇಳೆ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಮತದಾನ ವೇಳೆ ಗುಂಡಿನ ದಾಳಿ, ಇವಿಎಂ ಧ್ವಂಸ – ಮಣಿಪುರದ 11 ಮತಗಟ್ಟೆಗಳಲ್ಲಿ ಮರು ಮತದಾನ

    ನಮ್ಮ ಪರಿವಾರ ಮೋದಿ ಪರಿವಾರ, ಮನೆ ಮನೆಗೆ ಬಿಜೆಪಿ ಘೋಷವಾಕ್ಯ ಮತ್ತು ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ನಮ್ಮ ಕಾರ್ಯಕರ್ತರು ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಇಂದು ಹುಬ್ಬಳ್ಳಿಗೆ ಜೆಪಿ ನಡ್ಡಾ – ನೇಹಾ ಕುಟುಂಬಸ್ಥರ ಭೇಟಿ ಸಾಧ್ಯತೆ

    ನಡ್ಡಾ ಮತಯಾಚನೆ:
    ಹುಬ್ಬಳ್ಳಿಯಲ್ಲಿಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರು ಮತಯಾಚನೆ ನಡೆಸಲಿದ್ದಾರೆ. ಮಧ್ಯಾಹ್ನವೇ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಧಾವಿಸಲಿದ್ದು, ಖಾಸಗಿ ಹೋಟೆಲ್‌ನಲ್ಲಿ ಶಾಸಕರು‌, ಅಭ್ಯರ್ಥಿಗಳು ಹಾಗೂ ಪ್ರಮುಖ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಸಂಜೆ ಹುಬ್ಬಳ್ಳಿ ಉಣಕಲ್ ಎಂ ಆರ್ ಸಾಕ್ರೆ ಸ್ಕೂಲ್ ಮೈದಾನದಲ್ಲಿ ನಡೆಯುವ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಬಳಿಕ ಖಾಸಗಿ ಹೋಟೆಲ್‌ನಲ್ಲಿ ಕೋರ್‌ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವ ಜೋಶಿ ತಿಳಿಸಿದರು.