Tag: Lok Sabha Elections

  • ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಕಾರಣಕೊಟ್ಟ ಶಿವರಾಮೇಗೌಡ!

    ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಕಾರಣಕೊಟ್ಟ ಶಿವರಾಮೇಗೌಡ!

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಅದರಲ್ಲೂ ಮಂಡ್ಯದಲ್ಲಿ ನಿಖಿಲ್ ಸೋಲು ಅಘಾತ ತಂದಿದ್ದು, ಮತಯಂತ್ರದ ದೋಷವೇ ನಿಖಿಲ್ ಸೋಲಲು ಕಾರಣವಾಯ್ತ ಎಂಬ ಅನುಮಾನ ಇದೇ ಎಂದು ಮಾಜಿ ಸಂಸದ ಶಿವರಾಮೇಗೌಡ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬೇರೆಯವರ ಅಭಿಪ್ರಾಯ ನನಗೆ ಗೊತ್ತಿಲ್ಲ. ನನ್ನ ಅಭಿಪ್ರಾಯ ಬಿಜೆಪಿಯ ಭರ್ಜರಿ ಗೆಲುವಿಗೆ ಇವಿಎಂ ದೋಷವೇ ಕಾರಣ ಎಂಬ ಅನುಮಾನ ಇದೆ. ಏಕೆಂದರೆ ಮಂಡ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸುಮಾರು ಎಂಟು ಸಾವಿರ ಕೋಟಿಗೂ ಹೆಚ್ಚು ಅಭಿವೃದ್ಧಿ ಕೆಲಸಕ್ಕೆ ಅನುಮೋದನೆ ನೀಡಿದ್ದಾರೆ. ಆದರೂ ಸುಮಲತಾ ಗೆಲ್ಲುತ್ತಾರೆ ಎಂದರೆ ಮತಯಂತ್ರದ ಮೇಲಿನ ಅನುಮಾನ ಬಲವಾಗಿದೆ ಎಂದರು.

    ನನ್ನ ಅನುಮಾನದಂತೆ ನೂರಕ್ಕೆ ನೂರು ಇವಿಎಂ ಮಿಷನ್‍ನಲ್ಲಿ ಮೋಸವಾಗಿದೆ. ಬಹಳ ಜನ ಇವಿಎಂ ಮಿಷನ್‍ನಲ್ಲಿ ಏನೋ ಪ್ಲಾನ್ ಮಾಡಿದ್ದಾರೆ ಎಂದು ಹೇಳುತ್ತಿದ್ದರು. ಪ್ಲಾನ್ ಮಾಡಿರುವುದರ ಪ್ರಕಾರವೇ ಫಲಿತಾಂಶ ಬಂದಿದೆ. ದೇಶದಲ್ಲೂ ನಿರೀಕ್ಷೆ ಮೀರಿ ಫಲಿತಾಂಶ ಬಂದಿದೆ. ಇದು ಇವಿಎಂ ಮೇಲೆ ಅನುಮಾನ ಹುಟ್ಟಿಸುವ ವಿಚಾರವಾಗಿದೆ ಎಂದರು.

    ಪುಲ್ವಾಮ ದಾಳಿಗೆ ಮುಂಚೆ ನರೇಂದ್ರ ಮೋದಿಯ ಗುಂಪಿಗೆ ಮತ್ತೆ ಅಧಿಕಾರ ಹಿಡಿಯುವ ನಂಬಿಕೆ ಇರಲಿಲ್ಲ. ಪುಲ್ವಾಮ ದಾಳಿ ಆದ ಮೇಲೆ ದೇಶದ ಜನರಿಗೆ ಭಾವನಾತ್ಮಕ ವಿಚಾರ ತಲೆಗೆ ತುಂಬಿ ಗೆದ್ದಿದ್ದಾರೆ. ಯುದ್ಧ ಆಗಬಹುದು ಎಂಬ ಭೀತಿಯಿಂದ ಜನ ಒಗ್ಗಟ್ಟಾಗಿ ವೋಟ್ ಹಾಕಿದ್ದಾರೆ ಎಂದು ಇದನ್ನು ಅರ್ಥೈಸಬಹುದು ಎಂದರು.

  • ಸೋತ 120 ಕ್ಷೇತ್ರಗಳೇ ಟಾರ್ಗೆಟ್ – ಕ್ಲಿಕ್ ಆಯ್ತು ಚಾಣಕ್ಯನ ತಂತ್ರ

    ಸೋತ 120 ಕ್ಷೇತ್ರಗಳೇ ಟಾರ್ಗೆಟ್ – ಕ್ಲಿಕ್ ಆಯ್ತು ಚಾಣಕ್ಯನ ತಂತ್ರ

    ನವದೆಹಲಿ: 2014 ಲೋಕಸಭಾ ಚುನಾವಣೆಯ ಗೆಲುವಿನ ಸಂಭ್ರಮದಲ್ಲಿದ್ದ ಬಿಜೆಪಿ ಪಕ್ಷಕ್ಕೆ ಅಮಿತ್ ಶಾ ನವಸಾರಥಿಯಾಗಿದ್ದರು. ಅದರಲ್ಲೂ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 73 ಸ್ಥಾನಗಳನ್ನು ಗೆಲುವು ಪಡೆಯಲು ಶಾ ಪ್ರಮುಖ ಕಾರಣರಾಗಿದ್ದರು. ಈ ಮೂಲಕ ನರೇಂದ್ರ ಮೋದಿ ಅವರ ಟೀಂ ನಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಎನಿಸಿಕೊಂಡಿದ್ದರು. ಆದರೆ ಈ ಬಾರಿ ಅವರ ಸ್ಥಾನ ಮತ್ತಷ್ಟು ಹೆಚ್ಚಾಗಿದ್ದು, ಅಮಿತ್ ಶಾ ತಂತ್ರಗಾರಿಕೆ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರಗಳನ್ನೇ ತಲೆಕೆಳಗೆ ಮಾಡಿದೆ.

    ಮೋದಿ ಅಲೆಯಿಂದ 2014ರ ಲೋಕ ಸಮರದಲ್ಲಿ ಬಿಜೆಪಿ 282 ಸ್ಥಾನ ಗಳಿಸಿದ್ದರೂ 120 ಸ್ಥಾನಗಳಲ್ಲಿ ಸೋಲು ಕಂಡಿತ್ತು. ಈ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿದ್ದ ಅಮಿತ್ ಶಾ, ಗೆಲುವಿನ ರಣತಂತ್ರಗಳನ್ನು ರೂಪಿಸಿದ್ದರು. ಟಾರ್ಗೆಟ್ ಮಾಡಲಾಗಿದ್ದ ಕ್ಷೇತ್ರಗಳನ್ನು 25 ಕ್ಲಸ್ಟರ್ ಗಳನ್ನಾಗಿ ಮಾಡಿ ಹಿರಿಯ ನಾಯಕರಿಗೆ ಉಸ್ತುವಾರಿಯನ್ನು ನೀಡಲಾಗಿತ್ತು. ಈ ರೀತಿ ಸಂಘಟನೆ ಮಾಡಿದ ಬಳಿಕ ಗೆಲ್ಲಲು ಅವಕಾಶ ಇರುವ 80 ಕ್ಷೇತ್ರಗಳನ್ನು ಆಯ್ಕೆ ಮಾಡಿ ಅವುಗಳ ಮೇಲೆ ಹೆಚ್ಚು ಗಮನ ನೀಡುವುಂತೆ ರಾಜ್ಯ ನಾಯಕರಿಗೆ ಸೂಚಿಸಲಾಗಿತ್ತು. ಅಂದು ಅಮಿತ್ ಶಾ ಟಾರ್ಗೆಟ್ ಮಾಡಿದ್ದ 80 ಕ್ಷೇತ್ರಗಳ ಪೈಕಿ ಅರ್ಧದಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದೆ.

    ಅಮಿತ್ ಶಾ ತಮಗೆ ತಾವೇ ‘ಸೆಟ್’ ಮಾಡಿಕೊಂಡಿದ್ದ ಗುರಿಯನ್ನ ಸಾಧಿಸಲು ಹಲವು ತಂತ್ರಗಳನ್ನು ರೂಪಿಸಿದ್ದರು. ಇದರಲ್ಲಿ ಬಹುಮುಖ್ಯವಾಗಿ ‘ಆಪರೇಷನ್ ಕೋರಮಂಡಲ್’ ಕೂಡ ಒಂದಾಗಿದೆ. ಈ ತಂತ್ರದ ಭಾಗವಾಗಿಯೇ ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ ರಾಜ್ಯಗಳಲ್ಲಿ ಅಮಿತ್ ಹಲವು ನಾಯಕರನ್ನ ಪಕ್ಷದತ್ತ ಸೆಳೆದಿದ್ದರು. ಅಲ್ಲದೇ ಪಶ್ಚಿಮ ಬಂಗಾಳದಲ್ಲಿ 84ಕ್ಕೂ ಹೆಚ್ಚು ಬಾರಿ ಸಭೆಗಳನ್ನು ನಡೆಸಿದ್ದರು. ಇತ್ತ ಈಶಾನ್ಯ ರಾಜ್ಯಗಳಲ್ಲಿನ ಮೈತ್ರಿಗಳನ್ನು ಸೆಳೆಯಲು ಯಶಸ್ವಿಯಾಗಿದ್ದರು. ಇದರ ಪರಿಣಾಮ ಬಹುತೇಕ ಈಶಾನ್ಯ ರಾಜ್ಯಗಳಲ್ಲಿ ಇಂದು ಬಿಜೆಪಿ ಪಕ್ಷ ಗೆಲುವು ಪಡೆದಿದೆ.

    ಸೋಲುಂಡ ಕ್ಷೇತ್ರಗಳನ್ನ ಟಾರ್ಗೆಟ್ ಮಾಡುತ್ತಲೇ 2014ರಲ್ಲಿ ಗೆಲುವು ಪಡೆದ ಕ್ಷೇತ್ರಗಳನ್ನು ಎಚ್ಚರಿಕೆಯಿಂದ ನಿಭಾಯಿಸಿದ್ದ ಅಮಿತ್ ಶಾ, ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದ ಉತ್ತರ ಪ್ರದೇಶದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದರು. ಇದರ ಪರಿಣಾಮವಾಗಿ ಎಸ್‍ಪಿ, ಬಿಎಸ್‍ಪಿ ಮೈತ್ರಿಯಿಂದ ಪಕ್ಷಕ್ಕೆ ನಷ್ಟ ಉಂಟಾಗದಂತೆ ನೋಡಿಕೊಂಡರು.

    ಮೈತ್ರಿ ಪಕ್ಷವಾಗಿ ಜೊತೆಗಿದ್ದು ಟೀಕೆ ಮಾಡುತ್ತಿದ್ದ ಶಿವಸೇನಾ ಪಕ್ಷ ಹಾಗೂ ಜೆಡಿ(ಯು) ಪಕ್ಷಗಳೊಂದಿಗೆ ಅತ್ಯುತ್ತಮ ರೀತಿಯಲ್ಲಿ ಮೈತ್ರಿಯನ್ನ ಶಾ ಮುಂದುವರಿಸಿದ್ದರು. ದೇಶಾದ್ಯಂತ ಸುಮಾರು 161 ಕಾಲ್ ಸೆಂಟರ್ ಪ್ರಾರಂಭಿಸಿ ಕೇಂದ್ರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದರು. ಈ ಮೂಲಕ ಸರಿ ಸುಮಾರು 24.71 ಕೋಟಿ ಫಲಾನುಭವಿಗಳನ್ನು ಈ ಸೆಂಟರ್ ಮೂಲಕ ತಲುಪಿದ್ದರು. 2014 ರಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಪಡೆದಿದ್ದ ಅಮಿತ್ ಶಾ, ಈ ಬಾರಿ ‘ಮೋಸ್ಟ್ ವ್ಯಾಲುಬಲ್ ಪ್ಲೇಯರ್’ ಎನಿಸಿಕೊಂಡರು. ಇದನ್ನು ಓದಿ: ನೀವೆಲ್ಲಾ ಇದ್ದು ಏನ್ ಮಾಡ್ತಿದ್ದೀರಾ..?- ರಾಜ್ಯ ಬಿಜೆಪಿಗರ ವಿರುದ್ಧ ಅಮಿತ್ ಶಾ ಗರಂ

  • 6ನೇ ಹಂತದಲ್ಲಿ ಶಾ ಹೇಳಿದ್ದ ಭವಿಷ್ಯ ನಿಜವಾಯ್ತು – ಯಾವ ಹಂತದಲ್ಲಿ ಬಿಜೆಪಿಗೆ ಎಷ್ಟು ಸ್ಥಾನ?

    6ನೇ ಹಂತದಲ್ಲಿ ಶಾ ಹೇಳಿದ್ದ ಭವಿಷ್ಯ ನಿಜವಾಯ್ತು – ಯಾವ ಹಂತದಲ್ಲಿ ಬಿಜೆಪಿಗೆ ಎಷ್ಟು ಸ್ಥಾನ?

    ಬೆಂಗಳೂರು: ಬಿಜೆಪಿ ಅಧ್ಯಕ್ಷ ಅಮಿತ್ ಶಾ 6ನೇ ಹಂತ ಚುನಾವಣೆ ಮುಗಿದ ಬಳಿಕ ಮೋದಿ ಜೊತೆ ಸುದ್ದಿಗೋಷ್ಠಿ ನಡೆಸಿ ಈಗಾಗಲೇ ನಾವು ಬಹುಮತಕ್ಕೆ ಬೇಕಾದ ಸಂಖ್ಯೆಯನ್ನು ತಲುಪಿದ್ದೇವೆ. ಈ ಬಾರಿ ಬಿಜೆಪಿ 300ಕ್ಕೂ ಅಧಿಕ ಸ್ಥಾನವನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

    ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ ಬಳಿಕ ಎಕ್ಸಿಟ್ ಪೋಲ್ ಗಳು ಬಿಜೆಪಿ ಒಂದೇ 300ಕ್ಕೂ ಅಧಿಕ ಸ್ಥಾನವನ್ನು ಪಡೆಯುತ್ತದೆ ಎಂದರೂ ರಾಜಕೀಯ ಪಂಡಿತರು ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಎನ್‍ಎಡಿಎ ಮೈತ್ರಿ ಒಟ್ಟಾಗಿ 280-300 ಸ್ಥಾನಗಳನ್ನು ಗಳಿಸಬಹುದು ಎಂದು ಲೆಕ್ಕ ಹಾಕಿದ್ದರು. ಆದರೆ ಅಂತಿಮ ಫಲಿತಾಂಶ ಚಾಣಕ್ಯ ಅಮಿತ್ ಶಾ ಲೆಕ್ಕದಂತೆ ಪ್ರಕಟವಾಗಿದ್ದು ಬಿಜೆಪಿ ಸ್ಪರ್ಧಿಸಿದ್ದ 436 ಕ್ಷೇತ್ರಗಳಲ್ಲಿ 303 ಸ್ಥಾನಗಳನ್ನು ಗೆದ್ದುಕೊಂಡಿದೆ. 2014ರಲ್ಲಿ ಮೋದಿ ಅಲೆಯಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದಿದ್ದರೆ ಈ ಬಾರಿ ಅಲೆ ಸುನಾಮಿಯಾದ ಪರಿಣಾಮ 21 ಹೆಚ್ಚುವರಿ ಸ್ಥಾನಗಳನ್ನು ಗೆದ್ದುಕೊಂಡಿದೆ.

    ಶಾ ಈಗಾಗಲೇ ನಾವು ಬಹುಮತ ಸಾಧಿಸಿದ್ದೇವೆ ಎಂದು ಮೇ 17 ರಂದು ಹೇಳಿದ ಹಿನ್ನೆಲೆಯಲ್ಲಿ ಯಾವ ಹಂತದಲ್ಲಿ ಬಿಜೆಪಿ ಎಷ್ಟು ಸ್ಥಾನವನ್ನು ಗೆದ್ದಿದೆ ಎನ್ನುವ ಪ್ರಶ್ನೆ ಎಳುವುದು ಸಹಜ. ಹೀಗಾಗಿ ಯಾವ ಹಂತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನು ಗೆದ್ದಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಮೊದಲ ಹಂತ:
    ಒಟ್ಟು 91 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ 31 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಳೆದ ಬಾರಿ ಈ ಕ್ಷೇತ್ರಗಳಲ್ಲಿ 32 ಸ್ಥಾನಗಳನ್ನು ಪಡೆದುಕೊಂಡಿತ್ತು. ಆಂಧ್ರದಲ್ಲಿ ವೈಎಸ್‌ಆರ್‌ಸಿಪಿ 22 ಸ್ಥಾನಗಳನ್ನು ಗೆದ್ದಿದ್ದರೆ ಟಿಆರ್‍ಎಸ್ 9 ಸ್ಥಾನ, ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಜಯಗಳಿಸಿದೆ.

    ಚುನಾವಣಾ ದಿನಾಂಕ – ಏಪ್ರಿಲ್ 11
    ಒಟ್ಟು ಮತದಾನ – 69.6%

    ಎರಡನೇ ಹಂತ:
    ಒಟ್ಟು 95 ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿದೆ. 2014 ಕ್ಕೆ ಹೋಲಿಸಿದರೆ 2 ಹೆಚ್ಚುವರಿ ಸ್ಥಾನ ಬಿಜೆಪಿಗೆ ಬಂದಿದೆ. ಒಟ್ಟಾಗಿ ಬಿಜೆಪಿ 69 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

    ಚುನಾವಣಾ ದಿನಾಂಕ – ಏಪ್ರಿಲ್ 18
    ಒಟ್ಟು ಮತದಾನ – 69.5%
    ಒಟ್ಟು ಸ್ಥಾನ – 31+38 = 69

    ಮೂರನೇ ಹಂತ:
    116 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 67 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ವಿರೋಧ ಪಕ್ಷಗಳನ್ನು ಮಲಗಿಸಿಬಿಟ್ಟಿದೆ. ಕಾಂಗ್ರೆಸ್ 19 ಸ್ಥಾನಗಳನ್ನು ಗೆದ್ದರೆ, ಇತರೆ 19 ಸ್ಥಾನಗಳನ್ನು ಗೆದ್ದುಕೊಂಡಿದೆ.

    ಚುನಾವಣಾ ದಿನಾಂಕ – ಏಪ್ರಿಲ್ 23
    ಒಟ್ಟು ಮತದಾನ – 68.4%
    ಒಟ್ಟು ಸ್ಥಾನ – 31+38+67= 136

    ನಾಲ್ಕನೇಯ ಹಂತ:
    ಒಟ್ಟು 71 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 49 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಗೆಲುವಿನ ಬುಟ್ಟಿಗೆ ಮೂರು ಹೆಚ್ಚುವರಿ ಕ್ಷೇತ್ರಗಳು ಬಂದಿವೆ. ಶಿವಸೇನೆ 9, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ.

    ಚುನಾವಣಾ ದಿನಾಂಕ – ಏಪ್ರಿಲ್ 29
    ಒಟ್ಟು ಮತದಾನ – 65.5%
    ಒಟ್ಟು ಸ್ಥಾನ – 31+38+67+49 =185

    ಐದನೇ ಹಂತ:
    ಒಟ್ಟು 51 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 41 ಕ್ಷೇತ್ರಗಳಲ್ಲಿ ಜಯಗಳಿಸಿದೆ. 2014ರಲ್ಲಿ ಒಟ್ಟು 39 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಟಿಎಂಸಿ 4, ಕಾಂಗ್ರೆಸ್ 1 ಸ್ಥಾನವನ್ನು ಗೆದ್ದುಕೊಂಡಿದೆ. ಒಟ್ಟು 5ಹಂತದಲ್ಲಿ ಬಿಜೆಪಿ 272 ಸ್ಥಾನಗಳನ್ನು ಗಳಿಸಿಕೊಂಡಿರುವುದು ವಿಶೇಷ.

    ಚುನಾವಣಾ ದಿನಾಂಕ – ಮೇ 6
    ಒಟ್ಟು ಮತದಾನ – 64.4%
    ಒಟ್ಟು ಸ್ಥಾನ – 31+38+67+49+41= 227

    ಆರನೇ ಹಂತ:
    45 ಕೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಒಟ್ಟು 59 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಲವು ಕಡೆ ಕ್ಲೀನ್ ಸ್ವೀಪ್ ಮಾಡಿದೆ. ಬಿಎಸ್‍ಪಿ 4, ಟಿಎಂಸಿ 4 ಕ್ಷೇತ್ರಗಳಲ್ಲಿ ಗೆಲುವು ಪಡೆದುಕೊಂಡಿದೆ.

    ಚುನಾವಣಾ ದಿನಾಂಕ – ಮೇ 12
    ಒಟ್ಟು ಮತದಾನ – 64.4%
    ಒಟ್ಟು ಸ್ಥಾನ – 31+38+67+49+42+45=272

    ಏಳನೇ ಹಂತ:
    ಕೊನೆಯ ಹಂತದ ಚುನಾವಣೆ 59 ಕ್ಷೇತ್ರಗಳಿಗೆ ನಡೆದಿತ್ತು. ಈ ಪೈಕಿ 31 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದ್ದರೆ ಟಿಎಂಸಿ 9, ಕಾಂಗ್ರೆಸ್ 9 ರಲ್ಲಿ ಗೆಲುವು ಪಡೆದುಕೊಂಡಿದೆ.

    ಚುನಾವಣಾ ದಿನಾಂಕ – ಮೇ 19
    ಒಟ್ಟು ಮತದಾನ – 65.2%
    ಒಟ್ಟು ಸ್ಥಾನ – 31+38+67+49+42+45+31=303

    ಪಕ್ಷವಾರು ಅಂತಿಮ ಫಲಿತಾಂಶ
    ಬಿಜೆಪಿ – 303(+21)
    ಕಾಂಗ್ರೆಸ್ – 52(+8)
    ಇತರೆ – 187(-30)

    ಮೈತ್ರಿ ಅಂತಿಮ ಫಲಿತಾಂಶ
    ಎನ್‍ಡಿಎ – 349(+13)
    ಯುಪಿಎ – 82(+22)
    ಮಹಾ ಮೈತ್ರಿ – 15(+10)
    ಇತರೆ – 96(-142)

    ಶೇ.50ಕ್ಕೂ ಹೆಚ್ಚು ಮತ:
    ಬಿಜೆಪಿ ಹಿಮಾಚಲ ಪ್ರದೇಶ, ಗುಜರಾತ್, ಉತ್ತರಾಖಂಡ್, ರಾಜಸ್ತಾನ, ಹರ್ಯಾಣ, ಮಧ್ಯಪ್ರದೇಶ, ದೆಹಲಿ, ಕರ್ನಾಟಕ, ಗೋವಾ, ಛತ್ತೀಸಗಢ, ಜಾರ್ಖಂಡ್, ಚಂಡೀಗಢ, ಉತ್ತರಪ್ರದೇಶ, ಅರುಣಾಚಲ ಪ್ರದೇಶದಲ್ಲಿ ಶೇ.50 ರಷ್ಟು ಹೆಚ್ಚು ಮತಗಳನ್ನು ಬಿಜೆಪಿ ಪಡೆದಿದೆ.

    ಕಾಂಗ್ರೆಸ್ ಶೂನ್ಯ ಸಾಧನೆ.:
    ಗುಜರಾತ್, ಹರಿಯಾಣ, ದೆಹಲಿ, ರಾಜಸ್ಥಾನ, ಜಮ್ಮುಕಾಶ್ಮೀರ, ಒಡಿಶಾ, ತಮಿಳುನಾಡು, ಅಸ್ಸಾಂ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ, ಚಂಡೀಗಢ, ದಾದ್ರಾ ನಗರ್ ಹವೇಲಿ, ಡೀಯು ದಮನ್, ಲಕ್ಷದ್ವೀಪ, ತ್ರಿಪುರ, ಅಂಡಮಾನ್ ನಿಕೋಬಾರ್ ನಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.

  • ಕುಟುಂಬ ರಾಜಕಾರಣಕ್ಕೆ ಮಹತ್ವ ಸಿಗಲ್ಲ, ಕೆಲವೇ ದಿನಗಳಲ್ಲಿ ಬಂಗಾಳದಲ್ಲಿ ಅಧಿಕಾರಕ್ಕೆ- ಶಾ

    ಕುಟುಂಬ ರಾಜಕಾರಣಕ್ಕೆ ಮಹತ್ವ ಸಿಗಲ್ಲ, ಕೆಲವೇ ದಿನಗಳಲ್ಲಿ ಬಂಗಾಳದಲ್ಲಿ ಅಧಿಕಾರಕ್ಕೆ- ಶಾ

    ನವದೆಹಲಿ: ಲೋಕಸಭಾ ಚುನಾವಣೆ ಇಂದು ಹೊರ ಬಿದ್ದಿದ್ದು, ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

    ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜನ ಪ್ರಿಯ ನಾಯಕರು. ವಿಜಯೋತ್ಸವಕ್ಕೆ ಕಾರಣವಾದ ಬಿಜೆಪಿಯ ಕೋಟ್ಯಂತರ ಕಾರ್ಯಕರ್ತರು ಹಾಗೂ ದೇಶದ ಜನರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಇದು ಪಕ್ಷದ ಕಾರ್ಯಕರ್ತರ ಪರಿಶ್ರಮದ ಪ್ರತಿಫಲವಾಗಿದೆ. ಅಷ್ಟೇ ಅಲ್ಲ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ವದ ಜಯವಾಗಿದೆ ಎಂದು ಬಣ್ಣಿಸಿದರು.

    ದೇಶದ ಜನರ ಬಡತನ ನಿವಾರಣೆಗೆ ಬಿಜೆಪಿ ನೇತೃತ್ವದ ಸರ್ಕಾರವು ಶ್ರಮಿಸಿದೆ. ಹೀಗಾಗಿ ಮತದಾರರು ನಮ್ಮನ್ನು ಮತ್ತೆ ಆಯ್ಕೆ ಮಾಡಿದ್ದಾರೆ. ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದು 5 ವರ್ಷ ಆಡಳಿತ ನಡೆಸಿ, ಮತ್ತೆ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದು ಇತಿಹಾಸ ಬರೆದಿದ್ದೇವೆ ಎಂದು ಹೇಳಿದರು.

    ಮಹಾಮೈತ್ರಿ ಮೂಲಕ ನಮ್ಮನ್ನು ಸೋಲಿಸಲು ಪ್ರತಿಪಕ್ಷಗಳು ಒಂದಾಗಿದ್ದವು. ಆದರೆ ಈಗ ದೇಶದ ಎಲ್ಲ ರಾಜ್ಯದಲ್ಲಿಯೂ ಬಿಜೆಪಿಗೆ ಆಶೀರ್ವಾದ ಸಿಕ್ಕಿದೆ. ಉತ್ತರ ಪ್ರದೇಶ, ದೆಹಲಿ, ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಮಹಾರಾಷ್ಟ್ರ, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶೇ.50ಕ್ಕೂ ಹೆಚ್ಚು ಮತಗಳನ್ನು ನಾವು ಪಡೆದಿದ್ದೇವೆ ಎಂದು ತಿಳಿಸಿದರು.

    ದೇಶದಿಂದ ಕಾಂಗ್ರೆಸ್ ಕಿತ್ತೆಸೆಯಲು ಬಿಜೆಪಿ ಎಲ್ಲ ಕಡೆಯೂ ಪ್ರಯತ್ನಿಸಿ ಯಶಸ್ವಿಯಾಗಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಮಣಿಪುರ, ಮಿಜೋರಾಮ್, ಒಡಿಶಾ, ರಾಜಸ್ಥಾನ, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ, ಅಂಡಮಾನ್-ನಿಕೋಬಾರ್, ಚಂಡೀಗಢ, ದಾದ್ರಾ-ನಗರ್ ಹವೇಲಿ, ದೀಯು-ದಮನ್ ಹಾಗೂ ಲಕ್ಷ ದ್ವೀಪದಲ್ಲಿ ಕಾಂಗ್ರೆಸ್ ಬಿಗ್ ಜೀರೋ (ಸೊನ್ನೆ) ಸಿಕ್ಕಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಖಾತೆಯನ್ನು ಮುಚ್ಚಿಕೊಂಡಿದೆ ಎಂದು ವ್ಯಂಗ್ಯವಾಡಿದರು.

    ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಂಡರು. ಆದರೆ ಜನರು ಅವರನ್ನು ಕೈಬಿಟ್ಟು, ಬಿಜೆಪಿಯನ್ನು ಬೆಂಬಲಿಸಿದರು. ಈ ಮೂಲಕ ದೇಶದಲ್ಲಿ ಕುಟುಂಬ ರಾಜಕಾರಣವನ್ನು ಕಿತ್ತು ಹಾಕಿ ಬಿಜೆಪಿಗೆ ಜಯ ಸಿಕ್ಕಿದೆ. ಇನ್ನು ಮುಂದೆ ದೇಶದಲ್ಲಿ ಕುಟುಂಬ ರಾಜಕಾರಣ ಮಾಡುವ ಪಕ್ಷಗಳಿಗೆ ಯಾವುದೇ ಮಹತ್ವ ಇರುವುದಿಲ್ಲ ಎಂದು ಗುಡುಗಿದರು.

    ಎಕ್ಸಿಟ್ ಪೋಲ್ ಸಮೀಕ್ಷೆಗಳು ಸುಳ್ಳು ಎಂದು ವಿಪಕ್ಷ ನಾಯಕರು ಟೀಕೆ ಮಾಡಿದರು. ಅಷ್ಟೇ ಅಲ್ಲ ತಕ್ಷಣವೇ ದೆಹಲಿಯಲ್ಲಿ ಅಲೆದಾಡಿ ಮೈತ್ರಿ ಮಾತುಕತೆ ನಡೆಸಿದರು. ಕುಟುಂಬ ರಾಜಕಾರಣ ನಡೆಸುವ ಪಕ್ಷಗಳನ್ನು ಒಂದು ಕಡೆ ಸೇರಿಸಲು ಓಡಾಡಿದರು. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮಹಾಮೈತ್ರಿ ನಾಯಕರನ್ನು ಸೇರಿ ಸಲು ಭಾರೀ ಪರಿಶ್ರಮ ಪಟ್ಟರು. ಆದರೆ ರಾಜ್ಯದಲ್ಲಿಯೇ ಅಧಿಕಾರ ಕಳೆದುಕೊಂಡರು ಎಂದು ವ್ಯಂಗ್ಯವಾಡಿದರು.

    ಲೋಕಸಭಾ ಚುನಾವಣೆ ಜೊತೆ ಜೊತೆಗೆ ವಿಧಾನಸಭಾ ಚುನಾವಣೆಗಳು ಕೂಡ ನಡೆದವು. ಇಂದು ಬಂದ ಫಲಿತಾಂಶದ ಪ್ರಕಾರ ಆಂಧ್ರಪ್ರದೇಶದಲ್ಲಿ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಬಹುಮತ ಸಾಧಿಸಿದೆ. ಈ ಮೂಲಕ ಜಗನ್‍ಮೋಹನ್ ರೆಡ್ಡಿ ಆಂಧ್ರಪ್ರದೇಶವನ್ನು ಮುನ್ನಡೆಸಲಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಡಿಶಾದಲ್ಲಿ ನವೀನ್ ಪಟ್ನಾಯಕ್ ಹಾಗೂ ಸಿಕ್ಕಿಂನಲ್ಲಿ ಪವನ್ ಕುಮಾರ್ ಜಾಮ್ಲಿಂಗ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಅವರಿಗೂ ಅಭಿನಂದನೆ ತಿಳಿಸುತ್ತೇನೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಮೊದಲ ಬಾರಿ ಸಂಪೂರ್ಣ ಬಹುಮತ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರು, ಪ್ರಚಾರಕ್ಕೆ ಅಡ್ಡಿ ಉಂಟುಮಾಡಿದರೂ ನಾವು 18 ಸ್ಥಾನ ಪಡೆದಿದ್ದೇವೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣವಾಗಿ ಬಿಜೆಪಿ ಸರ್ಕಾರ ಬರುವುದಕ್ಕೆ ಕೆಲವೇ ದಿನಗಳು ಬಾಕಿ ಇವೆ ಎಂದು ಹೇಳುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಏರುತ್ತೇವೆ ಎಂದು ಭವಿಷ್ಯ ನುಡಿದರು.

  • ತುಮಕೂರಲ್ಲಿ ಫಲಿಸದ ಮೈತ್ರಿ – ದೇವೇಗೌಡರಿಗೆ ಸೋಲು

    ತುಮಕೂರಲ್ಲಿ ಫಲಿಸದ ಮೈತ್ರಿ – ದೇವೇಗೌಡರಿಗೆ ಸೋಲು

    ತುಮಕೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಳೆದು-ತೂಗಿ ಕೊನೆಯದಾಗಿ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸ್ಪರ್ಧಿಸಿದ್ದರು. ಆದರೆ ಇಂದಿನ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರು ದೇವೇಗೌಡರ ವಿರುದ್ಧ 12,887 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು 5,96,231 ಮತಗಳನ್ನು ಪಡೆದಿದ್ದರೆ, ದೇವೇಗೌಡರು 5,83,344 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಬಸವರಾಜು ಅವರು 12,887 ಬಹುಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.

    ಬಸವರಾಜು ಗೆಲುವಿಗೆ ಕಾರಣ?
    ನಾಲ್ಕು ಬಾರಿ ಸಂಸದರಾಗಿ 30 ವರ್ಷಗಳ ನಿರಂತರ ರಾಜಕೀಯ ಅನುಭವಿರುವ ಜಿ.ಎಸ್ ಬಸವರಾಜುಗೆ ಕ್ಷೇತ್ರದಲ್ಲಿ ಉತ್ತಮ ಸಂಪರ್ಕ ಹೊಂದಿದ್ದರು. ಪ್ರತಿ ಹಳ್ಳಿ ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ವಿಶ್ವಾಸಾರ್ಹ ಮುಖಂಡರ ಸಂಪರ್ಕ ಹೊಂದಿದ್ದರು.

    ಮಧುಗಿರಿ-ಕೊರಟಗೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಅಸ್ಥಿತ್ವವೇ ಇಲ್ಲವಾಗಿತ್ತು. 60 ವರ್ಷಗಳಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಒಂದೇ ಒಂದು ಬಾರಿ ಗೆಲುವು ಸಾಧಿಸಿಲ್ಲ. ಆದರೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣರ ಕೃಪಾಕಟಾಕ್ಷ ಬಿಜೆಪಿ ಮೇಲಿತ್ತು. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ಅಸಮಧಾನ, ಶೀತಲ ಸಮರ, ಕೋಪ-ತಾಪಗಳು ಬಿಜೆಪಿಗೆ ಮತಗಳಾಗಿ ಪರಿವರ್ತನೆಯಾಗಿವೆ.

    ಕೆ.ಎನ್ ರಾಜಣ್ಣ ತೆರೆಮರೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಜಿಲ್ಲೆಯಲ್ಲಿ ನಾಯಕ ಸಮುದಾಯದ ಪ್ರಬಲ ಮುಖಂಡನಾಗಿರುವ ಕೆ.ಎನ್ ರಾಜಣ್ಣ ನಾಯಕ ಸಮುದಾಯದ ಮತಗಳು ಬಿಜೆಪಿಗೆ ಬಿದ್ದಿವೆ. ಒಟ್ಟು 8 ಕ್ಷೇತ್ರಗಳಲ್ಲಿ 4 ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದು. ಅಲ್ಲದೆ ಮೋದಿ ಅಲೆ ಕೂಡ ವರ್ಕೌಟ್ ಆಗಿದೆ. ಮತ್ತೆ ದೇವೇಗೌಡರ ಮೇಲಿನ ಸಿಟ್ಟಿನಿಂದ ಕುರುಬರು ಮೈತ್ರಿ ಅಭ್ಯರ್ಥಿಗೆ ಮತಹಾಕದೇ ಬಿಜೆಪಿಗೆ ಹಾಕಿರುವ ಸಾಧ್ಯತೆ ಇದೆ. ಅದೇ ರೀತಿ ಗೊಲ್ಲಸಮುದಾಯದ ಮತ ಕೂಡಾ ಬಿಜೆಪಿ ಬುಟ್ಟಿಗೆ ಬಿದ್ದಿವೆ.

    ದೇವೇಗೌಡರ ಸೋಲಿಗೆ ಕಾರಣ?
    ಹೇಮಾವತಿ ನೀರನ್ನು ತುಮಕೂರು ಜಿಲ್ಲೆಗೆ ಕೊಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂಬ ವಿಚಾರ ಮತಗಳಿಗೆ ಹೊಡೆತ ಕೊಟ್ಟಿದೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನು ದೇವೇಗೌಡರು ಸೋಲಿಸಿದ್ದಾರೆ ಎಂಬ ಆರೋಪದಿಂದಾಗಿ ಕುರುಬ ಸಮುದಾಯದವರು ಮತಹಾಕಿಲ್ಲ. ಅದೇ ರೀತಿ ಕಳೆದ ಬಾರಿಯ ಅಭ್ಯರ್ಥಿ ಗೊಲ್ಲಸಮುದಾಯದ ಎ.ಕೃಷ್ಣಪ್ಪರ ಸಾವಿಗೆ ಜೆಡಿಎಸ್ ಕಾರಣ ಅನ್ನುವ ಗಂಭೀರ ಆರೋಪ ಕೂಡ ಇದೆ. ಇದರ ಪರಿಣಾಮ ಗೊಲ್ಲ ಸಮುದಾಯದವರು ಕೈ ಹಿಡಿದಿಲ್ಲ.

    ಕೆ.ಎನ್.ರಾಜಣ್ಣ ಹಾಗೂ ಮುದ್ದಹನುಮೇಗೌಡರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಉಂಟಾಗಿತ್ತು. ಮುದ್ದಹನುಮೇಗೌಡ ತಟಸ್ಥವಾಗಿದ್ದರೂ ರಾಜಣ್ಣ ತೆರೆಮರೆಯಲ್ಲಿ ಬಿಜೆಪಿಗೆ ಸಹಕರಿಸಿದ್ದರು. ಬೇರೆ ಜಿಲ್ಲೆಯಿಂದ ಬಂದ ದೇವೇಗೌಡರಿಗೆ ಜಿಲ್ಲೆಯ ಜನತೆ ಅಷ್ಟೊಂದು ಮತ ಹಾಕಿಲ್ಲ. ಜೊತೆಗೆ ಕುಟುಂಬ ರಾಜಕಾರಣದ ವಿರೋಧವೂ ಇತ್ತು.

  • ಮಂಡ್ಯದ ಜನ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ : ಸುಮಲತಾ

    ಮಂಡ್ಯದ ಜನ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ : ಸುಮಲತಾ

    ಬೆಂಗಳೂರು: ದೇಶದಲ್ಲೇ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದ್ದ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ತನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    ಚುನಾವಣೆಯ ಫಲಿತಾಂಶದ ಬಗ್ಗೆ ಸುಮಲತಾ ಅಂಬರೀಶ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. “ಯಾರು ಯಾರಿಗೆ ಅಭಿನಂದನೆಗಳನ್ನು ಹೇಳಲಿ. ನನ್ನ ಗೆಲುವಿಗಾಗಿ ಮಂಡ್ಯದ ಜನತೆ ಮಾತ್ರವಲ್ಲದೇ ರಾಜ್ಯದ ಜನತೆಯೂ  ಹಾರೈಸಿದ್ದಾರೆ” ಎಂದು ಪೋಸ್ಟ್ ಮಾಡಿದ್ದಾರೆ.

    ಮತ್ತೊಂದು ಪೋಸ್ಟ್ ಮಾಡಿದ್ದ, “ಮಂಡ್ಯದ ಜನತೆ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ. ಹಣಬಲ ತೋಳ್ಬಲ ಎಲ್ಲವನ್ನು ಮೀರಿ, ಜೊತೆಗೆ ಆಮಿಷಗಳನ್ನು ಮೀರಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದಾರೆ. ಕೋಟಿ ಕೋಟಿ ಅನಂತ ಅಭಿನಂದನೆಗಳು ಮಂಡ್ಯದ ಜನತೆಗೆ” ಸುಮಲತಾ ಅಂಬರೀಶ್ ಎಂದು ಜನರಿಗೆ ಕೃತಜ್ಞತೆ ತಿಳಿಸಿದ್ದಾರೆ.

  • ಬಿಜೆಪಿ ಪರ ಅಲೆಯಿಂದಲೇ ಸೋತ್ವಿ: ಪ್ರಮೋದ್ ಮಧ್ವರಾಜ್

    ಉಡುಪಿ: ಬಿಜೆಪಿ ಪರ ಅಲೆಯಿಂದಲೇ ನಾವು ಸೋಲು ಅನುಭವಿಸಿದ್ದೇವೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪರಾಜಿತ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

    ಟ್ವೀಟ್ ಮೂಲಕ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಯ ಪರವಾಗಿ ಅಲೆ ಇದ್ದಾಗ ನಾವೆಲ್ಲರೂ ಅಹಾಯಕರಾಗುತ್ತೇವೆ. ಆದಾಗ್ಯೂ ಮತದಾರರು ನಮ್ಮ ಮೇಲಧಿಕಾರಿಗಳಾಗಿದ್ದಾರೆ ಮತ್ತು ಅವರ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.

    ಪ್ರಮೋದ್ ಮಧ್ವರಾಜ್ ಅವರು ನಿನ್ನೆ ರಾತ್ರಿ ಕೂಡ ಟ್ವೀಟ್ ಮಾಡಿ, ಫಲಿತಾಂಶವು ಇಂದು ಹೊರಬೀಳಲಿದೆ. ನಾನು ಶುಭ ಸುದ್ದಿಯ ನಿರೀಕ್ಷೆಯಲ್ಲಿದ್ದೇನೆ. ಅತ್ಯಂತ ಹೀನಾಯ ಪರಿಸ್ಥಿತಿ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದರು.

    ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಭಾರೀ ಅಂತರದ ಮುನ್ನಡೆ ಸಾಧಿಸಿದ್ದು ಸತತ ಎರಡನೇ ಬಾರಿ ಸಂಸತ್ ಪ್ರವೇಶಿಸುತ್ತಿದ್ದಾರೆ.

  • ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವು: ಶೋಭಾ ಕರಂದ್ಲಾಜೆ

    ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವು: ಶೋಭಾ ಕರಂದ್ಲಾಜೆ

    ಉಡುಪಿ: ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಹಾಕಾಳಿ ಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ, ಕಳೆದ ಬಾರಿಗಿಂತ ದೊಡ್ಡ ಅಂತರದಲ್ಲಿ ಗೆದ್ದು ಮತ್ತೆ ಸಂಸದೆಯಾಗುತ್ತೇನೆ ಎಂಬ ವಿಶ್ವಾಸವಿದೆ. ಅನೇಕ ಕಾರ್ಯಕರ್ತರು ಬಹಳ ಉತ್ಸಾಹದಿಂದ ಕೆಲಸ ಮಾಡಿದ್ದು, ಅದೇ ರೀತಿ ಮತದಾರರು ಕೂಡ ಮತದಾನ ಮಾಡಿದ್ದಾರೆ. ಹೀಗಾಗಿ ಈ ಬಾರಿ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವ ನನ್ನದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸ್ಥಳೀಯರು ಮತ್ತು ಮೀನುಗಾರ ಸಮುದಾಯದವರು ಎದುರಾಳಿಯಾಗಿದ್ದರು. ಎಲ್ಲ ಅಂಶಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಿದ್ದೇವೆ. ಮೈತ್ರಿ ಪಕ್ಷ ಗೆಲ್ಲುವ ಭ್ರಮೆಯಲ್ಲಿದೆ. ಮೈತ್ರಿ ಸರ್ಕಾರ ರೈತರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಕರ್ನಾಟಕದಲ್ಲಿ ಅನೇಕ ಗ್ರಾಮಗಳಲ್ಲಿ ಬರಗಾಲ ಎಂದು ಫೋಷಣೆ ಮಾಡಿ, ಯಾವುದೇ ಹಳ್ಳಿಗಳಿಗೆ ಭೇಟಿ ಕೊಟ್ಟಿಲ್ಲ. ಜೊತೆಗೆ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಮೈತ್ರಿ ಸರ್ಕಾರದ ನಾಯಕರು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ನೀಡಿದ ಹೇಳಿಕೆಗಳೇ ಅವರಿಗೆ ಮುಳುವಾಗಲಿದೆ ಎಂದು ಹೇಳಿದರು.

    ಮೇ 23ರ ನಂತರ ಯಾವ ಸುನಾಮಿ ಬರುತ್ತೋ ಗೊತ್ತಿಲ್ಲ. ಕರ್ನಾಟಕ ಸರ್ಕಾರದಲ್ಲಿ ಭೂಕಂಪ ಆಗುತ್ತೋ ಗೊತ್ತಿಲ್ಲ, ಕಾದು ನೋಡಬೇಕಿದೆ. ರೋಷನ್ ಬೇಗ್, ಪರಮೇಶ್ವರ್ ಹೇಳಿಕೆ ಮತ್ತು ಸಿದ್ದರಾಮಯ್ಯ ಅವರು ಟ್ವೀಟ್ ಇದೆಲ್ಲವನ್ನು ನೋಡಿದರೆ ಸರ್ಕಾರದಲ್ಲಿ ಯಾವುದು ಸರಿ ಇಲ್ಲ ಎಂದು ತಿಳಿಯುತ್ತದೆ. ಇಂದಿನ ಫಲಿತಾಂಶ ನಂತರ ಕಾಂಗ್ರೆಸ್-ಜೆಡಿಎಸ್ ಕಿತ್ತಾಡಿಕೊಂಡು ಅವರವರೇ ನಾಶವಾಗುತ್ತಾರೆ ಎಂದು ಶೋಭಾ ಕರಂದ್ಲಾಜೆ ಭವಿಷ್ಯ ನುಡಿದರು.

  • ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ನಿಖಿಲ್ -ಇತ್ತ ಸಿಎಂ ಎಚ್‍ಡಿಕೆಯಿಂದ್ಲೂ ಟೆಂಪಲ್ ರನ್

    ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ನಿಖಿಲ್ -ಇತ್ತ ಸಿಎಂ ಎಚ್‍ಡಿಕೆಯಿಂದ್ಲೂ ಟೆಂಪಲ್ ರನ್

    ಮಂಡ್ಯ: ಲೋಕಸಭಾ ಚುನಾಚವಣೆ ಪ್ರಕ್ರಿಯೆ ಶುರುವಾಗಿ ಸಮಾರು ಎರಡು ತಿಂಗಳೇ ಕಳೆದಿವೆ. ಇಂದು ಲೋಕಸಮರದ ಫಲಿತಾಂಶ ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ. ಇತ್ತ ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಪುತ್ರ ನಿಖಿಲ್, ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.

    ಬೆಳ್ಳಂಬೆಳಗ್ಗೆ ನಿಖಿಲ್ ಕುಮಾರಸ್ವಾಮಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದು, ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಇಂದು ಮುಂಜಾನೆ ಸುಮಾರು 5 ಗಂಟೆಗೆ ನಿಖಿಲ್ ಚಾಮುಂಡಿ ಬೆಟ್ಟಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ. ನಿಖಿಲ್ ಅವರಿಗೆ ಸಚಿವರಾದ ಜಿ.ಟಿ.ದೇವೇಗೌಡ, ಪುಟ್ಟರಾಜು ಮತ್ತು ಶಾಸಕ ಸುರೇಶ್ ಗೌಡ ಸಾಥ್ ನೀಡಿದ್ದಾರೆ.

    ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಬೆಳ್ಳಂಬೆಳಗ್ಗೆ ಟೆಂಪಲ್ ರನ್ ಶುರು ಮಾಡಿದ್ದು, ಮೊದಲಿಗೆ ಬೆಂಗಳೂರಿನಲ್ಲಿರುವ ಬನಶಂಕರಿ ದೇವಸ್ಥಾನಕ್ಕೆ ಭೇಟ ನೀಡಿ ತಾಯಿ ಬನಶಂಕರಿ ದೇವಿಯ ದರ್ಶನ ಪಡೆಯಲಿದ್ದಾರೆ. ಬಳಿಕ ಅಲ್ಲಿಂದ ದೊಡ್ಡ ಗಣೇಶ ಟೆಂಪಲ್ ಹಾಗೂ ಗವಿಗಂಗಾದರೇಶ್ವರ ದೇವಾಲಯಕ್ಕೆ ಭೇಟಿ ಕೊಡಲಿದ್ದಾರೆ.

    ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲುವಿಗಾಗಿ ಚಾಮುಂಡೇಶ್ವರಿ ಮೊರೆ ಹೋಗಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ತಮ್ಮ ಬೆಂಬಲಿಗರ ಸೂಚನೆ ಮೇರೆಗೆ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಒಂದು ವೇಳೆ ಸುಮಲತಾ ಗೆಲುವು ಖಚಿತವಾದರೆ ಯಶ್ ಮತ್ತು ದರ್ಶನ್ ಕೂಡ ಮಂಡ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ.

  • ಮತ್ತೆ ಮೋದಿ ಪ್ರಧಾನಿ – ಸಂಭ್ರಮಕ್ಕೆ ಸಿದ್ಧವಾಗುತ್ತಿದೆ 2 ಸಾವಿರ ಕೆಜಿ ಸ್ವೀಟ್

    ಮತ್ತೆ ಮೋದಿ ಪ್ರಧಾನಿ – ಸಂಭ್ರಮಕ್ಕೆ ಸಿದ್ಧವಾಗುತ್ತಿದೆ 2 ಸಾವಿರ ಕೆಜಿ ಸ್ವೀಟ್

    ಮುಂಬೈ: ಲೋಕಸಭಾ ಚುನಾವಣಾ ಫಲಿತಾಂಶ ಮೇ 23ರಂದು ಹೊರ ಬೀಳಲಿದ್ದು, ಗೆಲುವಿನ ಸಂಭ್ರಮ ಆಚರಿಸಿಕೊಳ್ಳಲು ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಇತ್ತ ಮುಂಬೈನ ಬೊರಿವಲಿ ಪ್ರದೇಶದ ಸ್ವೀಟ್‍ಮಾರ್ಟ್ ನಲ್ಲಿ ಸಿಬ್ಬಂದಿ ಮೋದಿ ಮುಖವಾಡ ಧರಿಸಿ ವಿವಿಧ ಬಗೆಯ ಸಿಹಿ ಖಾದ್ಯ ತಯಾರಿಸುತ್ತಿದ್ದಾರೆ.

    ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲ್ ಶೆಟ್ಟಿ ಅವರು 1500-2000 ಕೆ.ಜಿ. ಸಿಹಿ ಖಾದ್ಯಗಳ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿಯವರ ಮುಖವಾಡ ಧರಿಸಿ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸ್ವೀಟ್‍ಮಾರ್ಟ್ ಮಾಲೀಕ ತಿಳಿಸಿದ್ದಾರೆ.

    ಲೋಕಸಭಾ ಚುನಾವಣೆಗೆ ಮೇ 19 ರಂದು ನಡೆದ ಕೊನೆಯ ಹಂತದ ಮತದಾನ ನಡೆಯಿತು. ಅಂದು ಸಂಜೆ ಬಿಡುಗಡೆಯಾದ ಬಹುಪಾಲು ಎಕ್ಸಿಟ್ ಪೋಲ್‍ಗಳು ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಗೆ ಮುಂದಾಗಿದೆ ಎಂದು ತಿಳಿಸಿದ್ದವು. ಇದರಿಂದಾಗಿ ಎನ್‍ಡಿಎ ಮೈತ್ರಿ ಕೂಟದಲ್ಲಿ ಸಂತೋಷದ ಅಲೆ ಎದ್ದಿದ್ದು, ವಿರೋಧ ಪಕ್ಷಗಳು ನಿರಾಶೆಯಲ್ಲಿ ಮುಳುಗಿವೆ. ಈ ಮೂಲಕ ಬಿಜೆಪಿ ನಾಯಕರು ಮತ ಎಣಿಕೆಗೂ ಎರಡು ದಿನಗಳ ಮೊದಲೇ ಸಿಹಿತಿಂಡಿಗಳಿಗೆ ಬೇಡಿಕೆ ಇಟ್ಟಿದ್ದಾರೆ.

    ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಚಿತ್ರದ ನಟಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಉರ್ಮಿಳಾ ಮಾತೋಂಡ್ಕರ್ ಕಣಕ್ಕೆ ಇಳಿದಿದ್ದಾರೆ. ಸಮೀಕ್ಷೆಗಳ ಪ್ರಕಾರ ತಮ್ಮ ಗೆಲುವು ಖಚಿತ ಹಾಗೂ ಕೇಂದ್ರದಲ್ಲಿ ಮತ್ತೆ ಎನ್‍ಡಿಎ ಸರ್ಕಾರ ರಚನೆಯಾಗುತ್ತದೆ ಎಂಬ ಡಬಲ್ ಸಂಭ್ರಮದಲ್ಲಿರುವ ಗೋಪಾಲ್ ಶೆಟ್ಟಿ ಅವರು 2 ಸಾವಿರ ಕೆಜಿ ಸ್ವೀಟ್‍ಗೆ ಬೇಡಿಕೆ ಇಟ್ಟಿದ್ದಾರೆ.