Tag: Lok Sabha Elections

  • ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ: ಹೆಚ್‍ಡಿಕೆ ಘೋಷಣೆ

    ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ: ಹೆಚ್‍ಡಿಕೆ ಘೋಷಣೆ

    ರಾಮನಗರ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದ ಲೋಕಸಭೆ ಕ್ಷೇತ್ರದಿಂದಲೇ ಕಣಕ್ಕಿಳಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.

     

    ತಮ್ಮ ಮತ್ತು ನಿಖಿಲ್ ವಿರುದ್ಧ ಕೆಲವರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಜನರು ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಕಳೆದ ಚುನಾವಣೆಯಲ್ಲಿ ನಮ್ಮ ವಿರುದ್ಧ ಕುತಂತ್ರದ ರಾಜಕಾರಣ ನಡೆಯಿತು. ಕಾಂಗ್ರೆಸ್, ಬಿಜೆಪಿ, ರೈತಸಂಘ ಒಂದಾಗಿದ್ದರು ಎಂದು ಕಿಡಿಕಾರಿದರು. ಇದೇ ವೇಳೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಿಂದಲೇ ಸ್ಪರ್ಧೆ ಮಾಡಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಗಂಡಸ್ತನ ಪದ ಬಳಕೆಗೆ ಹೆಚ್‌.ಡಿ.ಕುಮಾರಸ್ವಾಮಿ ವಿಷಾದ

    ಇತ್ತೀಚೆಗಷ್ಟೆ ಮಂಡ್ಯದ ಮದ್ದೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಅವರು, ಬೇರೆಯವರನ್ನು ದೂರುವ ಬದಲು ಸಂಸದರು ಆತ್ಮಾವಲೋಕನ ಮಾಡಿಕೊಳ್ಳಲಿ. ಸಂಸದರಾಗಿ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿಕೊಳ್ಳಲಿ. ಮಂಡ್ಯದ ಶಾಸಕರು ಎರಡು ಮೂರು ಬಾರಿ ಆಯ್ಕೆ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ನಿಮಗೆ ಗಂಡಸ್ತನ ಇದ್ದರೆ, ಏನು ಗೊತ್ತಿಲ್ಲದಂತೆ ಮೌನವಾಗಿರಬೇಡಿ: ಸಿಎಂಗೆ ಹೆಚ್‍ಡಿಕೆ ಸವಾಲ್

    ಅಭಿವೃದ್ಧಿ ಆಗಿಲ್ಲ ಅಂದರೆ, ಶಾಸಕರನ್ನು ಜನರು ಪ್ರಶ್ನೆ ಮಾಡುತ್ತಾರೆ. ಆದರೆ ಇವರನ್ನು ಪ್ರಶ್ನೆ ಮಾಡುವವರು ಯಾರು? ಪ್ರತಿ ಬಾರಿ ಕಾಲು ಕೆರೆದುಕೊಂಡು ಜಗಳ ಹುಟ್ಟುಹಾಕಿ. ಯಾರೋ ಏನೋ ಅಂದ್ಬಿಟ್ರು, ಯಾರೋ ಏನೋ ಅಂದ್ಬಿಟ್ರು ಅಂತ ಅನುಕಂಪ ಗಿಟ್ಟಿಸಲು ಆಗಲ್ಲ. 2024ರವರೆಗೂ ಅವರ ಅಧಿಕಾರ ಇದೆ. ಜನಗಳ ಜೊತೆ ನಿಂತು ಕೆಲಸ ಮಾಡಲಿ ಎಂದು ಸಂಸದೆ ಸುಮಲತಾ ವಿರುದ್ಧ ಆಕ್ರೋಶ ಹೊರಹಾಕಿದರು.

  • ಮಂಡ್ಯ ಜನರು ಮುಗ್ಧರು ಎಲ್ಲರನ್ನೂ ನಂಬ್ತಾರೆ – ಮಗನ ಸೋಲನ್ನು ಮರೆಯದ ಹೆಚ್‍ಡಿಕೆ

    ಮಂಡ್ಯ ಜನರು ಮುಗ್ಧರು ಎಲ್ಲರನ್ನೂ ನಂಬ್ತಾರೆ – ಮಗನ ಸೋಲನ್ನು ಮರೆಯದ ಹೆಚ್‍ಡಿಕೆ

    ಮಂಡ್ಯ: ಜಿಲ್ಲೆಯ ಜನರು ಮುಗ್ಧರು, ಹಾಗಾಗಿ ಎಲ್ಲರನ್ನು ಬಹುಬೇಗನೆ ನಂಬುತ್ತಾರೆ ಎಂದು ಹೇಳುವ ಮೂಲಕ ಪುತ್ರ ನಿಖಿಲ್ ಸೋಲಿನ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬ್ಯಾಡರಹಳ್ಳಿಯ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಭಾಗಿಯಾಗಿದ್ದರು. ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡುವಾಗ ಲೋಕಸಭೆ ಚುನಾವಣೆಯಲ್ಲಿ ಮಗನ ಸೋಲಿನ ಬಗ್ಗೆ ಬೇಸರದ ನುಡಿಗಳನ್ನಾಡಿದ್ದಾರೆ. ಹಲವರ ಒತ್ತಾಯದ ಮೇರೆಗೆ ಮಗನನ್ನು ಚುನಾವಣೆಗೆ ನಿಲ್ಲಿಸಿದೆ. ಕಾರ್ಯಕರ್ತರು ತುಂಬಾ ಕೆಲಸ ಮಾಡಿದರು. ಈ ಹಿಂದೆ ಗೆದ್ದಾಗ ಐದು ಕಾಲು ಲಕ್ಷ ಮತ ನೀಡಿದ್ದ ಜನರು ಸೋತಾಗ ಐದು ಮುಕ್ಕಾಲು ಲಕ್ಷ ಮತ ನೀಡಿದರು.

    ಎಲ್ಲರೂ ಸೇರಿ ಮುಗಿಸಬೇಕು ಅಂತಾ ಮುಗಿಸಿದರು. ಆದ್ರೆ ನನಗೆ ಮಂಡ್ಯ ಜಿಲ್ಲೆಯ ಜನರ ಬಗ್ಗೆ ಬೇಸರವಿಲ್ಲ. ರಾಜಕಾರಣಕ್ಕೆ ಬಂದ ದಿನದಿಂದ ಮಂಡ್ಯ ಜನರ ಜೊತೆ ನನ್ನ ಒಡನಾಟವಿದೆ. ಜಿಲ್ಲೆಯ ಜನರು ತುಂಬಾ ಮುಗ್ಧರು, ಎಲ್ಲರನ್ನು ನಂಬುತ್ತಾರೆ. ದೇವೇಗೌಡರು ಮತ್ತು ನಮ್ಮನ್ನು ಬೆಳೆಸಿದ್ದೇ ಮಂಡ್ಯದ ಜನತೆ. ಕೆಲವರು ನಾವು ಬೇರೆ ಜಿಲ್ಲೆಯವರೆಂದು ಹೇಳ್ತಾರೆ. ಆ ಮಾತುಗಳನ್ನೆಲ್ಲ ನಂಬಬೇಡಿ ಎಂದರು.

    ನಾನು ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದು ಕೊಂಡಿದ್ದೆ. ಜನರು ತೋರಿಸುವ ಪ್ರೀತಿ ನೋಡಿದಾಗ ನಾನು ಅನ್ಯಾಯ ಮಾಡುತ್ತಿದ್ದೇನೆ ಅನ್ನಿಸಿತು. ನನಗೆ ಈ ವ್ಯವಸ್ಥೆಯಿಂದ ಆದ ಬೇಸರದಿಂದ ಹೊರಗೆ ಹೋದರೆ ಜನರಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತೆ. ಈ ಕಾರಣಕ್ಕೆ ನಾನು ರಾಜಕೀಯದಲ್ಲಿ ಮುಂದುವರಿದಿದ್ದೇನೆ. ವೈಯುಕ್ತಿಕವಾಗಿ ರಾಜಕೀಯದಲ್ಲಿ ಮುಂದುವರಿಯುವ ಆಸೆ ಇಲ್ಲ ಎಂದು ಹೇಳಿದರು.

  • ಶೀಘ್ರವೇ ಹಾಸನಕ್ಕೆ ಹೊಸ ಸಂಸದ- ಪ್ರಜ್ವಲ್ ರೇವಣ್ಣಗೆ ವಕೀಲ ತಿರುಗೇಟು

    ಶೀಘ್ರವೇ ಹಾಸನಕ್ಕೆ ಹೊಸ ಸಂಸದ- ಪ್ರಜ್ವಲ್ ರೇವಣ್ಣಗೆ ವಕೀಲ ತಿರುಗೇಟು

    ಹಾಸನ: ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ವಕೀಲರೊಬ್ಬರು ನ್ಯಾಯಾಲಯ ಮೆಟ್ಟಿಲೇರಿದ್ದರು. ಸದ್ಯ ಈ ಪ್ರಕರಣ ಮತ್ತೆ ಚರ್ಚೆಗೆ ಬಂದಿದ್ದು, ಇದೇ ವಿಚಾರವಾಗಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಕೀಲ ದೇವರಾಜೇಗೌಡರ ನಡುವೆ ಪರಸ್ಪರ ಕೆಸರೆರೆಚಾಟಕ್ಕೆ ಕಾರಣವಾಗಿದೆ.

    ನಗರದಲ್ಲಿ ಸೋಮವಾರ ಮಾತನಾಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರು, ಯಾರೋ ಒಬ್ಬ ಏನೋ ಸುಳ್ಳು ಹೇಳಿದ್ದ. ಅದನ್ನು ಮಾಧ್ಯಮದವರು ತೋರಿಸಿದ್ದರು. ಮೂರು ತಿಂಗಳಲ್ಲಿ ಪ್ರಜ್ವಲ್ ಸ್ಥಾನ ಕಿತ್ತು ಹಾಕುತ್ತೇನೆ ಎಂದು ಹೇಳಿದವನು ಈಗ ಪತ್ತೇನೆ ಇಲ್ಲ. ಎಲ್ಲೋ ಓಡಿ ಹೋಗಿದ್ದಾನೆ ಎಂದು ಕಿಡಿಕಾರಿದ್ದರು.

    ಜನರು ನನ್ನನ್ನು 1 ಲಕ್ಷದ 41 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ನಾನು ಜನರ ಪರ ಕೆಲಸ ಮಾಡುತ್ತೇನೆ. ಇಂತಹ ಆರೋಪಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿ ವೈಯಕ್ತಿಕ ಇಮೇಜ್ ಬೆಳೆಸಿಕೊಳ್ಳಲು ಮುಂದಾಗಿದ್ದಾರೆ ಅಷ್ಟೇ ಎಂದು ಹೇಳಿದ್ದರು. ಅಲ್ಲದೇ ಸಂಸದರ ಸಭೆಗೆ ಗೈರು ಹಾಜರಿ ಆಗಿದ್ದ ಅಧಿಕಾರಿಗಳ ವಿರುದ್ಧವೂ ಬೇಸರ ವ್ಯಕ್ತಪಡಿಸಿದ್ದರು.

    ಪ್ರಜ್ವಲ್ ರೇವಣ್ಣ ಅವರ ಹೇಳಿಕೆಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿರುವ ವಕೀಲ ದೇವರಾಜೇಗೌಡ ಅವರು, 5 ಬಾರಿ ನ್ಯಾಯಾಲಯದಿಂದ ಸಮನ್ಸ್ ಆದಾಗ ಸಂಸದರಾದ ತಾವು ಊರು ಬಿಟ್ಟು ಓಡಿ ಹೋಗಿದ್ರಿ. ಪೇಪರ್ ಪಬ್ಲಿಕೇಷನ್ ಹಾಕಿದ ನಂತರ ನೀವು ಆಗಮಿಸಿದ್ರಿ. ಪೇಪರ್ ಪಬ್ಲಿಕೇಷನ್ ಹಾಕೋದು ಕದ್ದು ಹೋಗುವವರಿಗೆ. ದಾಖಲೆ ಸಮೇತ ನಾನು ಕೇಸ್ ಹಾಕಿದ್ದೇನೆ. ನಾನು ಎಲ್ಲೂ ಹೋಗಲ್ಲ, ನಾನು ರಣಹೇಡಿಯಲ್ಲ. ನಾನೊಬ್ಬ ಹೀರೋ. ಕದ್ದು ಹೋದವರು ನೀವು. ಅತೀ ಶೀಘ್ರದಲ್ಲೇ ಜಿಲ್ಲೆಗೆ ಹೊಸ ಸಂಸದರು ಬರುತ್ತಾರೆ ಎಂದು ಸವಾಲು ಹಾಕಿದ್ದಾರೆ.

  • ‘ಭಾರತ ಮತ್ತೆ ಗೆದ್ದಿದೆ’ – ‘ಗೋಲ್ಡನ್ ಟ್ವೀಟ್’ ಹೆಗ್ಗಳಿಕೆಗೆ ಪಾತ್ರವಾಯ್ತು ಮೋದಿ ಮಾತು

    ‘ಭಾರತ ಮತ್ತೆ ಗೆದ್ದಿದೆ’ – ‘ಗೋಲ್ಡನ್ ಟ್ವೀಟ್’ ಹೆಗ್ಗಳಿಕೆಗೆ ಪಾತ್ರವಾಯ್ತು ಮೋದಿ ಮಾತು

    ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಪ್ರಧಾನಿ ನರೇಂದ್ರ ಮೋದಿ, ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವ ಮಟ್ಟದ ನಾಯಕರ ಪೈಕಿ ಒಬ್ಬರಾಗಿದ್ದಾರೆ. ಇದೀಗ ಅವರ ಒಂದು ಟ್ವೀಟ್ ಸಹ ಅದೇ ರೀತಿ ಹೆಚ್ಚು ವೈರಲ್ ಆಗುವ ಮೂಲಕ ‘ಗೋಲ್ಡನ್ ಟ್ವೀಟ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮೇ 23 ರಂದು ಮಧ್ಯಾಹ್ನ 2:42ಕ್ಕೆ ಲೋಕಸಭೆಯ ಚುನಾವಣೆಯ ಫಲಿತಾಂಶದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಟ್ವೀಟ್ ಇದೀಗ 2019ರ ‘ಗೋಲ್ಡನ್ ಟ್ವೀಟ್’ ಆಗಿ ಹೊರಹೊಮ್ಮಿದೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ವಿಜಯದ ಸಂತಸವನ್ನು ಹಂಚಿಕೊಳ್ಳುವ ಟ್ವೀಟ್ ಮಾಡಿದ್ದರು. ಇದನ್ನು ಅತಿ ಹೆಚ್ಚು ಜನ ರೀಟ್ವೀಟ್ ಹಾಗೂ ಲೈಕ್ ಮಾಡಿದ್ದು, ಈ ಮೂಲಕ ‘ಗೋಲ್ಡನ್ ಟ್ವೀಟ್’ ಎಂದು ಟ್ವಿಟ್ಟರ್ ಇಂಡಿಯಾ ತಿಳಿಸಿದೆ.

    2019ನೇ ಸಾಲಿನಲ್ಲಿ ಅತಿ ಹೆಚ್ಚು ರೀಟ್ವೀಟ್ ಆಗಿರುವ ಟ್ವೀಟ್‍ಗಳನ್ನು ಟ್ವಟ್ಟರ್ ಇಂಡಿಯಾ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಚುನಾವಣೆಯ ಫಲಿತಾಂಶದ ಶುಭ ಹಾರೈಕೆಯ ಟ್ವೀಟ್ ಬರೋಬ್ಬರಿ 4.20 ಲಕ್ಷ ಮೆಚ್ಚುಗೆಗಳನ್ನು ಗಳಿಸಿದ್ದು, 1.17 ಲಕ್ಷ ಬಾರಿ ಇದನ್ನು ರೀಟ್ವೀಟ್ ಮಾಡಲಾಗಿದೆ.

    ಅಲ್ಲದೆ #loksabhaelections2019 ಎಂಬ ಹ್ಯಾಶ್ ಟ್ಯಾಗ್ ಹೆಚ್ಚು ಬಳಕೆಯಾಗಿದ್ದು, ನಂತರ #chandrayaan2, #cwc19, #pulwama ಹಾಗೂ #article370 ಹ್ಯಾಶ್ ಟ್ಯಾಗ್‍ಗಳನ್ನು ಹೆಚ್ಚು ಬಳಸಲಾಗಿದೆ.

    ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯರ್ತರಿಗೆ ಹಾಗೂ ದೇಶವಾಸಿಗಳಿಗೆ ಟ್ವೀಟ್ ಮಾಡುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡಿದ್ದರು. ‘ಎಲ್ಲರೂ ಜೊತೆಯಾಗಿ ಬೆಳೆಯೋಣ. ಎಲ್ಲರೂ ಸಮೃದ್ಧಿಯಿಂದ ಇರೋಣ, ಜೊತೆಗೂಡಿ ಸದೃಢ ಹಾಗೂ ಅಂತರ್ಗತ ಭಾರತ ನಿರ್ಮಿಸೋಣ. ಭಾರತ ಮತ್ತೆ ಗೆದ್ದಿದೆ! #ವಿಜಯಭಾರತ್ ಎಂದು ಬರೆದು ಟ್ವೀಟ್ ಮಾಡಿದ್ದರು.

    ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಅವರನ್ನು 5.18 ಕೋಟಿ ಜನ ಫಾಲೋ ಮಾಡುತ್ತಿದ್ದು ಮೋದಿ ಅವರು 2,296 ವ್ಯಕ್ತಿಗಳನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

    2019ರ ಲೋಕಸಭಾ ಚುನಾವಣೆ ಭಾರೀ ಕುತೂಹಲ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇದರಲ್ಲಿ ಆಡಳಿತಾರೂಢ ಬಿಜೆಪಿ ನೆತೃತ್ವದ ಎನ್‍ಡಿಎನ ಸರ್ಕಾರ ಮರಳಿ ಆಧಿಕಾರಕ್ಕೇರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಮೇ.23ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು. ಐತಿಹಾಸಿಕ ಗೆಲುವಿನ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರದ ಗದ್ದುಗೆಯನ್ನೇರಿತು. ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿತ್ತು. ಆದರೆ ಎನ್‍ಡಿಎ ಸರ್ಕಾರ ಒಟ್ಟು 352 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿಯೇ ಏಕಾಂಗಿಯಾಗಿ 303 ಸ್ಥಾನಗಳಲ್ಲಿ ಜಯಗಳಿಸಿತ್ತು.

    ಅದ್ಭುತ ಜಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದರು. ಈ ವಿಜಯವು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಹಾಗೂ ಅವರ ಮೇಲೆ ಜನತೆ ಇಟ್ಟಿರುವ ನಂಬಿಕೆಯದ್ದಾಗಿದೆ ಎಂದು ಹೇಳಿದ್ದರು.

    ಇದು ಭಾರತದ, ರೈತ, ಬಡ ಕುಟುಂಬದ ಯುವಕರ ಆಶಾವಾದದ ವಿಜಯ ಎಂದು ಬಣ್ಣಿಸಿದ್ದರು. ಇದು ಮೋದಿಯವರ ಅಭಿವೃದ್ಧಿ, ಜನರು ಅವರ ಮೇಲೆ ಇಟ್ಟಿರುವ ನಂಬಿಕೆಯ ವಿಜಯವಾಗಿದೆ ಕೋಟ್ಯಂತರ ಬಿಜೆಪಿ ಕಾರ್ಯಕರ್ತರ ಪರವಾಗಿ ನರೇಂದ್ರ ಮೋದಿಯವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.

  • ‘ಅಭಿಮನ್ಯು’ವಿಗೆ ಹಿಂದಿನಿಂದ ತಿವಿದರು – ಮಂಡ್ಯದಲ್ಲಿ ಸೋತ ಕಥೆಯನ್ನು ವಿವರಿಸಿದ ನಿಖಿಲ್

    ‘ಅಭಿಮನ್ಯು’ವಿಗೆ ಹಿಂದಿನಿಂದ ತಿವಿದರು – ಮಂಡ್ಯದಲ್ಲಿ ಸೋತ ಕಥೆಯನ್ನು ವಿವರಿಸಿದ ನಿಖಿಲ್

    – ಸೋಲಿಸಲು 45 ದಿನ ದುಡಿದಿದ್ದಾರೆ
    – ಷಡ್ಯಂತ್ರಗಳ ಅನುಭವ ಪಡೆದೆ
    – ಇಂಟರ್ ನ್ಯಾಷನಲ್ ಸ್ಟಾರ್ ಮಾಡಿದಕ್ಕೆ ಧನ್ಯವಾದ

    ತುಮಕೂರು: ಮಂಡ್ಯ ಲೋಕಸಭಾ ಚುನಾವಣೆ ಇಡೀ ದೇಶ ಗಮನಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಆದರೆ ನಾನು ಆ ಚುನಾವಣೆಯಲ್ಲಿ ಸೋತರೂ ಹಲವು ಷಡ್ಯಂತ್ರಗಳ ಅನುಭವ ಪಡೆದಿದ್ದೇನೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಯ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

    ತುಮಕೂರು ತಾಲೂಕಿನ ಹೊನ್ನುಡಿಕೆಯಲ್ಲಿ ಕನ್ನಡ ಸಂಘಟನೆಯವರು ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಚುನಾವಣೆಗೆ ಸ್ಪರ್ಧಿಸಲು ಇಷ್ಟ ಇರಲಿಲ್ಲ. ಮುಖಂಡರ ಒತ್ತಾಯದ ಮೇರೆಗೆ ಸ್ಪರ್ಧಿಸಿದ್ದೆ. ಆದರೆ ನನ್ನ ಸೋಲಿಸಲು ಸುಮಾರು 45 ದಿನ ಊಟ ತಿಂಡಿ ಬಿಟ್ಟು, ನಿದ್ದೆ ಮಾಡದೇ ದುಡಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ನಾನು ಸೋತಿದ್ದರೂ ಅಲ್ಲಿಯ ಅನುಭವ ಅಪಾರ. ಕುರುಕ್ಷೇತ್ರದ ಅಭಿಮನ್ಯು ನಿಜ ಜೀವನದಲ್ಲೂ ಅಭಿಮನ್ಯುವಾದ ಅನುಭವ ಪಡೆದಿದ್ದೇನೆ. ಕುರುಕ್ಷೇತ್ರದಲ್ಲಿ ಘಂಟೆ ಭಾರಿಸಿದ ಬಳಿಕ ಮತ್ತೆ ಯುದ್ಧ ಮಾಡುವಂತಿಲ್ಲ. ಆದರೆ ನನಗೆ ಯುದ್ಧ ಮುಗಿದರೂ ಹಿಂದಿನಿಂದ ಬಂದು ಹಿತ ಶತ್ರುಗಳು ತಿವಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಕೆ.ಆರ್ ಪೇಟೆಯಲ್ಲಿ ಕಳೆದ ಬಾರಿ ನಾರಾಯಣಗೌಡರ ಟಿಕೆಟ್ ಘೋಷಣೆ ಮಾಡಿದ್ದು ನಾನೇ. ತಂದೆಯವರ ಅನುಮತಿ ಮೇರೆಗೆ ಕಾರ್ಯಕ್ರಮವೊಂದರಲ್ಲಿ ನಾನೇ ಟಿಕೆಟ್ ಘೋಷಣೆ ಮಾಡಿದ್ದೆ ಎಂದು ಹೇಳುವ ಮೂಲಕ ನಾರಾಯಣ ಗೌಡರೂ ಲೋಕಸಭೆಯಲ್ಲಿ ತನ್ನ ಕೈಹಿಡಿದಿಲ್ಲ ಅನ್ನೋದನ್ನ ಸೂಚ್ಯವಾಗಿ ಹೇಳಿದರು.

    ಶಾಸಕನಾದ ಬಳಿಕ ನಾರಾಯಣ ಗೌಡ ಮುಖ್ಯಮಂತ್ರಿಗಳ ಬಳಿ ತಾಲೂಕಿನ ಜನರ ಸಮಸ್ಯೆಗಳನ್ನು ತರುತ್ತಿರಲಿಲ್ಲ. ತನಗೇನೂ ಲಾಭ ಆಗುತ್ತಿಲ್ಲವಲ್ಲ ಎಂದು ವೈಯಕ್ತಿಕ ವಿಚಾರವನ್ನು ತರುತಿದ್ದರು ಎಂದು ದೂರಿದರು.

    ಇದೇ ವೇಳೆ ರಾಜ್ಯದ ಈಗಿನ ಮುಖ್ಯಮಂತ್ರಿಗಳ ಹಿಂದೆ ಅವರ ಮಕ್ಕಳು ಸುತ್ತುತಿರುತ್ತಾರೆ. ಫೈಲ್ ಹಿಡಿದುಕೊಂಡು ಅಧಿಕಾರಿಗಳಿಗೆ ಫೋನ್ ಮಾಡುತ್ತಿರುತ್ತಾರೆ. ಆದರೆ ನಾನೂ ನಮ್ಮಪ್ಪನ 14 ತಿಂಗಳ ಅಧಿಕಾರವಧಿಯಲ್ಲಿ ಯಾವತ್ತೂ ಮೂಗು ತೋರಿಸಿಲ್ಲ ಎಂದರು.

    ಎಲ್ಲಿದ್ದೀಯಪ್ಪಾ ನಿಖಿಲ್ ಎಂದು ಟ್ರೋಲ್ ಮಾಡುವ ಮೂಲಕ ನನ್ನನ್ನು ಮಾನಸಿಕವಾಗಿ ಕೊಲ್ಲಲು ಪ್ರಯತ್ನ ಪಟ್ಟರು. ಆದರೂ ಪರವಾಗಿಲ್ಲ ನನ್ನ ಇಂಟರ್ ನ್ಯಾಷನಲ್ ಸ್ಟಾರ್ ಮಾಡಿದಕ್ಕೆ ಧನ್ಯವಾದ ಎಂದು ಹೇಳಿದರು.

  • ಲೋಕಸಭಾ ಟಿಕೆಟ್ ನಿರಾಕರಿಸಿದ್ದಕ್ಕೆ ಸಿಧು ಪತ್ನಿ ಕಾಂಗ್ರೆಸ್‍ಗೆ ಗುಡ್ ಬೈ

    ಲೋಕಸಭಾ ಟಿಕೆಟ್ ನಿರಾಕರಿಸಿದ್ದಕ್ಕೆ ಸಿಧು ಪತ್ನಿ ಕಾಂಗ್ರೆಸ್‍ಗೆ ಗುಡ್ ಬೈ

    ಚಂಡೀಗಢ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಕಾಂಗ್ರೆಸ್ ತೊರೆದಿದ್ದಾರೆ.

    ಪೂರ್ವ ಅಮೃತಸರದ ಮಾಜಿ ಶಾಸಕಿ ಹಾಗೂ ಮಾಜಿ ಸಂಸದೀಯ ಪ್ರಧಾನ ಕಾರ್ಯದರ್ಶಿ ಕೌರ್ ಅವರಿಗೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಚಂಡೀಗಢ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಲಾಗಿತ್ತು.

    ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಶಾ ಕುಮಾರಿ ಅವರಿಂದಾಗಿ ಚಂಡೀಗಢ ಲೋಕಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗಲಿಲ್ಲ ಎಂದು ಕೌರ್ ಆರೋಪಿಸಿದ್ದರು. ಈ ಹೇಳಿಕೆಯನ್ನು ಸಿಧು ಸಹ ಸಮರ್ಥಿಸಿಕೊಂಡು ಅವರು ಎಂದೂ ಸುಳ್ಳು ಹೇಳುವುದಿಲ್ಲ. ನನ್ನ ಪತ್ನಿಗೆ ಶಕ್ತಿ ಹಾಗೂ ನೈತಿಕತೆ ಇದೆ, ಅವರು ಎಂದಿಗೂ ಸುಳ್ಳು ಹೇಳುವುದಿಲ್ಲ, ಇದೇ ನನ್ನ ಉತ್ತರ ಎಂದು ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

    ಈ ಕುರಿತು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಕ್ರಿಯಿಸಿ, ಅವರಿಗೆ ಅಮೃತಸರ ಅಥವಾ ಬಂಟಿಂಡಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಟಿಕೆಟ್ ನೀಡಲಾಗಿತ್ತು. ಆದರೆ ಅವರು ನಿರಾಕರಿಸಿದರು. ಚಂಡೀಗಢ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪುವಲ್ಲಿ ನನ್ನ ಪಾತ್ರವಿಲ್ಲ. ಕಾಂಗ್ರೆಸ್ ಹೈ ಕಮಾಂಡ್ ಟಿಕೆಟ್ ಹಂಚಿಕೆ ಮಾಡಿತ್ತು ಎಂದು ಸ್ಪಷ್ಟಪಡಿಸಿದ್ದರು.

    ಮುಖ್ಯಮಂತ್ರಿಯೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಜುಲೈನಲ್ಲಿ ನವಜೋತ್ ಸಿಂಗ್ ಸಿಧು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಕೆಲವು ತಿಂಗಳುಗಳ ನಂತರ ಕೌರ್ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಕೌರ್ ಅವರು 2016ರಲ್ಲಿ ಬಿಜೆಪಿ ತೊರೆದ ನಂತರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

  • ಬಿಜೆಪಿಗೆ ವೋಟ್ ಹಾಕಿದ ಮುಸ್ಲಿಂರು ಛಕ್ಕಾಗಳು: ಓವೈಸಿ

    ಬಿಜೆಪಿಗೆ ವೋಟ್ ಹಾಕಿದ ಮುಸ್ಲಿಂರು ಛಕ್ಕಾಗಳು: ಓವೈಸಿ

    ಹೈದರಾಬಾದ್: ಬಿಜೆಪಿಗೆ ಮತ ಹಾಕಿರುವ ಶೇ.6ರಷ್ಟು ಮುಸ್ಲಿಂರು ಛಕ್ಕಾಗಳು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಓವೈಸಿ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.

    ಹೈದರಾಬಾದ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಓವೈಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಮತಗಳ ಅಂಕಿ ಅಂಶಗಳನ್ನು ಜನರಿಗೆ ತಿಳಿಸುತ್ತಿದ್ದರು. ಈ ವೇಳೆ 2014ರ ಚುನಾವಣೆಯಲ್ಲಿ ಶೇ.6ರಷ್ಟು ಮುಸ್ಲಿಂರು ಬಿಜೆಪಿಗೆ ಮತ ನೀಡಿದ್ದರು. 2019ರಲ್ಲಿಯೂ ಇದೇ ಶೇ.6ರಷ್ಟು ಮುಸ್ಲಿಂ ಜನ ಬಿಜೆಪಿಗೆ ಮತ ನೀಡಿದರು ಎಂದು ವರದಿ ಬಿತ್ತರವಾಗಿತ್ತು ಎಂದರು.

    ವರದಿಗೆ ಪ್ರತಿಕ್ರಿಯೆ ಪಡೆದುಕೊಳ್ಳಲು ಪತ್ರಕರ್ತರೊಬ್ಬರು ಫೋನ್ ಮಾಡಿದ್ದರು. ವರದಿಯಲ್ಲಿ ಮೂರು ಅಂಶಗಳನ್ನು ಗಮನಿಸಬೇಕು. 2014 ಮತ್ತು 2019ರಲ್ಲಿ ಚುನಾವಣೆಗಳಲ್ಲಿ ಮುಸ್ಲಿಂರು ನೀಡಿದ ಮತಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಹಿಂದೂಗಳು 2014ರಲ್ಲಿ ಶೇ.37 ಮತ್ತು 2019ರಲ್ಲಿ ಶೇ.44ರಷ್ಟು ಮತಗಳನ್ನು ನೀಡಿದ್ದಾರೆ. ಹಿಂದೂ ಮತಗಳಲ್ಲಿ ಏರಿಕೆ ಕಂಡಿದ್ದು, ಮುಸ್ಲಿಂ ಮತಗಳು (ಶೇ.6) ಸ್ಥಿರವಾಗಿವೆ. ಕ್ರಿಕೆಟ್ ಭಾಷೆಯಲ್ಲಿ ನಂಬರ್ ನ್ನು ಛಕ್ಕಾ ಎಂದು ಕರೆಯುತ್ತಾರೆ. ಏನು ಆ ಆರು ಅದು ಛಕ್ಕಾ ಎಂದು ಹೇಳುವ ಮೂಲಕ ಬಿಜೆಪಿಗೆ ಮತ ಹಾಕಿದ ಮುಸ್ಲಿಂರ ವಿರುದ್ಧ ಕಿಡಿಕಾರಿದರು.

    ಓವೈಸಿ ಹೇಳಿಕೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, 2014 ಮತ್ತು 2019ರಲ್ಲಿ ಪ್ರಧಾನಿ ಮೋದಿಗೆ ವೋಟ್ ಹಾಕಿದ ಶೇ.6ರಷ್ಟು ಮುಸ್ಲಿಂರು ಓವೈಸಿ ಅವರ ಪ್ರಕಾರ ಛಕ್ಕಾಗಳು. ಹಾಗಾದ್ರೆ ಹೈದರಾಬಾದ್ ಮತ್ತು ಔರಾಂಗಬಾದ್ ನಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ ಹಿಂದೂಗಳ ಬಗ್ಗೆ ಅಭಿಪ್ರಾಯವೇನು ಎಂದು ಪ್ರಶ್ನೆ ಮಾಡಿದ್ದಾರೆ.

  • ಕಾಂಗ್ರೆಸ್ ದೊಡ್ಡ ಸಮಸ್ಯೆ ರಾಹುಲ್ ಗಾಂಧಿ ಪಲಾಯನ, ಸೋನಿಯಾ ನಿರ್ಲಕ್ಷ್ಯ- ಸಲ್ಮಾನ್ ಖುರ್ಷಿದ್

    ಕಾಂಗ್ರೆಸ್ ದೊಡ್ಡ ಸಮಸ್ಯೆ ರಾಹುಲ್ ಗಾಂಧಿ ಪಲಾಯನ, ಸೋನಿಯಾ ನಿರ್ಲಕ್ಷ್ಯ- ಸಲ್ಮಾನ್ ಖುರ್ಷಿದ್

    ನವದೆಹಲಿ: ಕಾಂಗ್ರೆಸ್‍ನ ಬಹುದೊಡ್ಡ ಸಮಸ್ಯೆ ಪಕ್ಷದ ನಾಯಕ ರಾಹುಲ್ ಗಾಂಧಿ ಪಲಾಯನ ಮಾಡುತ್ತಿರುವುದು. ಅಲ್ಲದೆ, ಸೋನಿಯಾ ಗಾಂಧಿಯವರು ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲಿ ಹಾಗೂ ಪಕ್ಷದ ಕಾರ್ಯಚಟುವಟಿಕೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಶಿದ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಾವು ಯಾಕೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇವೆ ಎಂಬುದನ್ನು ಚರ್ಚಿಸಲು ಸಹ ಯಾರೂ ಒಟ್ಟಿಗೆ ಸೇರಿಲ್ಲ. ನಮ್ಮ ನಾಯಕರು ಪಲಾಯನ ಮಾಡಿರುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ ಈ ವರೆಗೆ ಪಕ್ಷದ ಅಧ್ಯಕ್ಷರನ್ನು ನೇಮಿಸಿಲ್ಲ, ಬಹುಶಃ ಅಕ್ಟೋಬರ್‍ನಲ್ಲಿ ನಡೆಯುತ್ತಿರುವ ಕೆಲವು ರಾಜ್ಯಗಳ ಚುನಾವಣೆ ನಂತರ ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖುರ್ಶಿದ್  ಅಭಿಪ್ರಾಯ ವ್ಯಕ್ತಪಡಿಸಿದರು.

    ಸೋನಿಯಾಗಾಂಧಿಯವರು ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದರೂ ಸಹ ನಂತರ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಕುರಿತು ನಾವು ವಿಸ್ತೃತ ಚರ್ಚೆ ನಡೆಸಬೇಕಿತ್ತು. ಆದರೆ ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದರು ಎಂದು ಖುರ್ಶಿದ್ ಅಸಮಾಧಾನ ವ್ಯಕ್ತಪಡಿಸಿದರು.

    ಸಂದರ್ಶನದಲ್ಲಿ ಕಾಂಗ್ರೆಸ್ ಸಮಸ್ಯೆಗಳ ಕುರಿತು ಮಾತನಾಡುವ ಮೂಲಕ ಖುರ್ಶಿದ್ ಅವರು ಅತ್ಯಂತ ಹಳೇಯ ಪಕ್ಷಕ್ಕೆ ಎದುರಾಗಿರುವ ಅಸ್ತಿತ್ವದ ಕುರಿತ ಬಿಕ್ಕಟ್ಟಿನ ಬಗ್ಗೆ ಇರುವ ಆತಂಕವನ್ನು ಇನ್ನೂ ದ್ವಿಗುಣಗೊಳಿಸಿದ್ದಾರೆ.

    ನಮ್ಮ ಪಕ್ಷ ಇಂದು ಯಾವ ಮಟ್ಟದಲ್ಲಿದೆ ಎಂಬುದನ್ನು ನೆನೆದರೆ ತುಂಬಾ ನೋವಾಗುತ್ತದೆ, ಅಷ್ಟೇ ಕಾಳಜಿಯೂ ಇದೆ. ಏನೇ ಆಗಲಿ ನಾವು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಕೆಲವರು ಪಕ್ಷದಿಂದ ಎಲ್ಲವನ್ನೂ ಪಡೆದು ಇದೀಗ ಬೇರೆ ಪಕ್ಷಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪಕ್ಷಾಂತರವಾಗುತ್ತಿದ್ದಾರೆ ಎಂದು ಹರಿಹಾಯ್ದರು.

    ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ರಾಹುಲ್ ಗಾಂಧಿ ಅವರಿಗೆ ಎಷ್ಟೇ ಕೇಳಿಕೊಂಡರೂ ಅವರು ಕೇಳಲಿಲ್ಲ. ಅವರೇನಾದರೂ ಅಧ್ಯಕ್ಷರಾಗಿ ಮುಂದುವರಿದಿದ್ದರೆ ಚುನಾವಣೆಯ ನಂತರದ ಮರಣೋತ್ತರ ಪರೀಕ್ಷೆಯನ್ನು ಸರಿಯಾಗಿ ನಡೆಸಬಹುದಿತ್ತು. ರಾಹುಲ್ ಗಾಂಧಿ ಈಗ ಪಕ್ಷದ ಅಧ್ಯಕ್ಷರಲ್ಲ. ಆದರೆ ಈಗಲೂ ಅವರು ನಮ್ಮ ಪಕ್ಷದ ಪ್ರಮುಖ ನಾಯಕರು. ಒಂದು ದೊಡ್ಡ ಸೋಲಿನಿಂದ ಪಕ್ಷದ ನಾಯಕನ ಮೇಲಿನ ವಿಶ್ವಾಸ ಕಳೆದುಕೊಳ್ಳಲು ಕಾರಣವಾದ ಪ್ರಕರಣ ಇತಿಹಾಸದಲ್ಲಿ ಇದೇ ಮೊದಲು. ಅವರು ಪಕ್ಷದಲ್ಲಿ ಉಳಿದುಕೊಂಡಿದ್ದರೆ, ಚರ್ಚಿಸಿ ನಮ್ಮ ಸೋಲಿನ ಕಾರಣಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದೆವು. ಮುಂಬರುವ ಚುನಾವಣೆಗಳನ್ನು ಎದುರಿಸಲು ಸನ್ನದ್ಧರಾಗುತ್ತಿದ್ದೆವು. ಇದೀಗ ಸೋನಿಯಾ ಗಾಂಧಿ ಅವರು ಶಾಶ್ವತ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಬೇಕು ಎಂದು ಒತ್ತಿ ಹೇಳಿದರು.

    ನಮಗೆ ಬಹಳ ಕಡಿಮೆ ಸಮಯವಿದೆ. ಅಲ್ಲದೆ, ಪಕ್ಷವು ಕೆಲವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ನಮ್ಮ ನಾಯಕ ರಾಹುಲ್ ಗಾಂಧಿ ನಮ್ಮನ್ನು ತೊರೆದಿದ್ದರಿಂದ ನಿರ್ಧಾರ ಕೈಗೊಳ್ಳಲು ವಿಳಂಬವಾಗುತ್ತಿದೆ. ಅಧ್ಯಕ್ಷ ಸ್ಥಾನದಲ್ಲಿ ಅವರು ಇರಬೇಕೆಂಬುದು ನಮ್ಮ ಬಯಕೆಯಾಗಿದೆ ಎಂದು ತಿಳಿಸಿದರು.

    66 ವರ್ಷದ ಖುರ್ಶಿದ್ ಅವರು ಉತ್ತರ ಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದು, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುಪಿಯ 80 ಸ್ಥಾನಗಳ ಪೈಕಿ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಜಯಗಳಿಸಿತ್ತು. ರಾಹುಲ್ ಗಾಂಧಿ ಸಹ ಅಮೆಥಿ ಕ್ಷೇತ್ರದಲ್ಲಿ ಸೋಲುಂಡಿದ್ದರು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸಿತ್ತು. ಆದರೂ ಸಹ ಕೇವಲ 52 ಸ್ಥಾನಗಳಲ್ಲಿ ಮಾತ್ರ ಜಯಗಳಿಸಲು ಸಾಧ್ಯವಾಗಿತ್ತು. ಬಿಜೆಪಿ 303 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿತ್ತು.

  • ನಾಯಕರ ಕಿತ್ತಾಟದಿಂದಲೇ ಲೋಕ ಸಮರದಲ್ಲಿ ಕಾಂಗ್ರೆಸಿಗೆ ಸೋಲು – ಪರಮೇಶ್ವರ್

    ನಾಯಕರ ಕಿತ್ತಾಟದಿಂದಲೇ ಲೋಕ ಸಮರದಲ್ಲಿ ಕಾಂಗ್ರೆಸಿಗೆ ಸೋಲು – ಪರಮೇಶ್ವರ್

    ತುಮಕೂರು: ಕಾಂಗ್ರೆಸ್ ನಾಯಕರ ನಡುವಿನ ಕಿತ್ತಾಟ, ಒಗ್ಗಟ್ಟು ಇಲ್ಲದಿರುವುದೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಎಂದು ಸತ್ಯಶೋಧನಾ ಸಮಿತಿ ವರದಿ ನೀಡಿರುವುದು ನಿಜ. ಈ ಕುರಿತು ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

    ತುಮಕೂರಿನ ಹೆಗ್ಗೆರೆಯ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಘಟಿಕೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸತ್ಯಶೋಧನಾ ಸಮಿತಿ ವರದಿಯಲ್ಲಿ ಒಗ್ಗಟ್ಟಿನ ಕೊರತೆಯಿಂದಲೇ ಸೋಲುಂಟಾಗಿದೆ ಎಂದು ತಿಳಿದು ಬಂದಿದೆ. ನಾಯಕರ ನಡುವೆ ಯಾಕೆ ಭಿನ್ನಾಭಿಪ್ರಾಯ ಮೂಡಿತು ಎನ್ನುವುದರ ಕುರಿತು ಚರ್ಚೆ ಮಾಡುತ್ತೇವೆ. ಪಕ್ಷದ ಪ್ರಮುಖ ನಾಯಕತ್ವದಿಂದ ಆಗಿದೆಯೋ ಅಥವಾ ಸ್ಥಳೀಯ ಮುಖಂಡರಿಂದ ಆಗಿದೆಯೋ ಎಂಬುದನ್ನು ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

    ಈ ಕುರಿತು ಸೆಪ್ಟೆಂಬರ್ 18ರಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕ್ರಮ ಕೈಗೊಳ್ಳುವ ಕುರಿತು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.

    ಅದಷ್ಟು ಬೇಗ ಹೈಕಮಾಂಡ್ ವಿರೋಧ ಪಕ್ಷ ನಾಯಕರನ್ನು ಆಯ್ಕೆ ಮಾಡಲಿದೆ. ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ. ಯಾರೇ ಆದರೂ ನಮ್ಮ ನಾಯಕರೇ. ಹೈ ಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆಯೋ ಗೊತ್ತಿಲ್ಲ. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೆನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಅನರ್ಹರಿಗೆ ತಪ್ಪಿನ ಅರಿವಾಗಿದೆ
    ಅನರ್ಹ ಶಾಸಕರಿಗೆ ತಮ್ಮ ತಪ್ಪಿನ ಅರಿವಾಗಿದೆ. ಮುಂದಿನ ದಿನದಲ್ಲಿ ಏನಾಗುತ್ತೋ ಕಾದು ನೋಡೋಣ. ಅನರ್ಹರನ್ನು ಮತ್ತೆ ಪಕ್ಷಕ್ಕೆ ಕರೆದುಕೊಳ್ಳುವ ಸನ್ನಿವೇಶ ಬರುವುದಿಲ್ಲ. ಒಂದು ವೇಳೆ ಬಂದರೆ, ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ರಾಜ್ಯ ಬಿಜೆಪಿ ಸರ್ಕಾರದ ಉಳಿವಿನ ಬಗ್ಗೆ ಸಮಯ ನಿಗದಿ ಮಾಡಲ್ಲ, ಆದರೆ ಹೆಚ್ಚು ಕಾಲ ಈ ಸರ್ಕಾರ ಉಳಿಯುವುದಿಲ್ಲ. ಮಧ್ಯಂತರ ಚುನಾವಣೆ ಕುರಿತು ನನಗೆ ತಿಳಿದಿಲ್ಲ. ಆದರೆ, ಮಧ್ಯಂತರ ಚುನಾವಣೆ ನಡೆದರೆ ನಾವು ತಯಾರಾಗುತ್ತಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.

    ವರದಿಯಲ್ಲೇನಿದೆ?
    ಕಾಂಗ್ರೆಸ್ ಶಾಸಕರ ಸ್ವಪ್ರತಿಷ್ಠೆ, ಕೆಲವರ ಪಕ್ಷ ವಿರೋಧಿ ಚಟುವಟಿಕೆ, ನಾಯಕರ ನಡುವಿನ ಆಂತರಿಕ ಕಿತ್ತಾಟಗಳಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ನೇತೃತ್ವದ ಸತ್ಯ ಶೋಧನಾ ಸಮಿತಿ ತಿಳಿಸಿದೆ. ತನ್ನ ವರದಿಯಲ್ಲಿ ಸಮಿತಿ ಕಾಂಗ್ರೆಸ್ ಕಾಯಕರ್ತರು ಕೆಲಸ ಮಾಡಿದ್ದರೂ ನಾಯಕರ ಒಳಜಗಳಿಂದಾಗಿ ಅಭ್ಯರ್ಥಿಗಳು ಸೋತಿದ್ದಾರೆ. ಚುನಾವಣೆ ಸೋಲಿಗೆ ಮೈತ್ರಿಯೂ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಕ್ಟೋಬರ್ 2ರಂದು ಕೆಪಿಸಿಸಿಗೆ ಈ ವರದಿಯನ್ನು ಸಲ್ಲಿಸಲು ಸಮಿತಿ ತೀರ್ಮಾನಿಸಿದೆ.

  • ಸಿದ್ದರಾಮಯ್ಯ, ಹೆಚ್‍ಡಿಡಿ ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ: ವಿ.ಶ್ರೀನಿವಾಸ್ ಪ್ರಸಾದ್

    ಸಿದ್ದರಾಮಯ್ಯ, ಹೆಚ್‍ಡಿಡಿ ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ: ವಿ.ಶ್ರೀನಿವಾಸ್ ಪ್ರಸಾದ್

    – ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿಯೇ ಮೇಲೆ ಬಂದಿದ್ದು

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡ ಇಬ್ಬರು ಬೆನ್ನಿಗೆ ಚೂರಿ ಹಾಕುವವರೇ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ಮಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿಯೇ ಮೇಲೆ ಬಂದಿದ್ದು. ದೇವೇಗೌಡರು ಸಹ ಬೆನ್ನಿಗೆ ಚೂರಿ ಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಾಯಿಗೆ ಬಂದಂತೆ ಅಪ್ಪನಾಣೆ ಇಟ್ಟುಕೊಂಡು ಮಾತನಾಡಿದರು. ಆದರೆ ಲೋಕಸಭೆಯಲ್ಲಿ ಭಾಯಿ, ಭಾಯಿ ಎಂದು ಅಕ್ಕಪಕ್ಕದಲ್ಲಿ ಕುಳಿತುಕೊಂಡರು ಎಂದು ವ್ಯಂಗ್ಯವಾಡಿದರು.

    ಕಳೆದ ಮೂರು ದಿನದಿಂದ ಒಬ್ಬರ ಮೇಲೋಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಜನ ಎಲ್ಲವನ್ನು ನೋಡುತ್ತಿದ್ದಾರೆ. ಇವರನ್ನು ನೋಡಿ ಜನ ಅಸಹ್ಯ ಪಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದೀರಾ. ಈಗಲಾದರೂ ಗಂಭೀರವಾಗಿ ಇರುವುದನ್ನು ಕಲಿಯಿರಿ ಎಂದು ದೇವೇಗೌಡರು ಹಾಗೂ ಸಿದ್ದರಾಮಯ್ಯಗೆ ಹೆಸರನ್ನು ಹೇಳಿ ವಿ.ಶ್ರೀನಿವಾಸ್ ಪ್ರಸಾದ್ ಸಲಹೆ ನೀಡಿದರು.

    ಮಾನಸಿಕವಾಗಿ ಅವರು ಮೈತ್ರಿಯಾಗಿರಲಿಲ್ಲ. ದೈಹಿಕವಾಗಿ ಬಂದು ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು. ಸದನದಲ್ಲಿ ಪಾಯಿಂಟ್ ಆಫ್ ಆರ್ಡರ್ ಎತ್ತಿ ಆಗಿನ ಸಿಎಂ ಕುಮಾರಸ್ವಾಮಿಯನ್ನು ಸಮರ್ಥಿಸಿಕೊಂಡಿದ್ದು ಸಿದ್ದರಾಮಯ್ಯನೇ ಅಲ್ವಾ. ಈಗ ಏಕೆ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಇವರ ಹೇಳಿಕೆಗಳನ್ನು ನೋಡುತ್ತಿದ್ದರೆ ಜನರಿಗೆ ಅಸಹ್ಯವಾಗುತ್ತದೆ ಎಂದು ಕಿಡಿಕಾರಿದರು.