Tag: Lok Sabha elections 2019

  • ಚುನಾವಣೆ ನಡೆದಿದ್ದು ಮೋದಿ-ರಾಹುಲ್ ನಡುವೆ-ದೆಹಲಿಯಲ್ಲಿ ನಮ್ಮದೇ ಸರ್ಕಾರ

    ಚುನಾವಣೆ ನಡೆದಿದ್ದು ಮೋದಿ-ರಾಹುಲ್ ನಡುವೆ-ದೆಹಲಿಯಲ್ಲಿ ನಮ್ಮದೇ ಸರ್ಕಾರ

    ನವದೆಹಲಿ: ಲೋಕಸಭಾ ಚುನಾವಣೆ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ನಡೆದಿತ್ತು. ಆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಇರಲಿಲ್ಲ. ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ. ದೆಹಲಿಯಲ್ಲಿ ನಮ್ಮದೇ ಸರ್ಕಾರ ಇರಲಿದೆ ಎಂದು ಆಪ್ ಮುಖ್ಯಸ್ಥ, ಸಿಎಂ ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಆಪ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಲೋಕಸಭಾ ಚುನಾವಣೆಯ ಫಲಿತಾಂಶ ನೋಡಿ ಯಾರು ನಿರಾಶರಾಗಬೇಕಿಲ್ಲ. ದೆಹಲಿಯ ಜನತೆ ನಮ್ಮ ಸರ್ಕಾರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಎಲ್ಲರೂ ನಿಮ್ಮ ಕಾಲರ್ ಮೇಲೆ ಮಾಡಿಕೊಳ್ಳಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

    ಚುನಾವಣೆ ಸಮಯದಲ್ಲಿ ಜನರು ಇದು ರಾಹುಲ್ ಗಾಂಧಿ ಮತ್ತು ಮೋದಿ ನಡುವಿನ ದೊಡ್ಡ ಚುನಾವಣೆ. ಹಾಗಾಗಿ ಮೋದಿ ಹೆಸರು ನೋಡಿ ಮತ ಹಾಕುತ್ತಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಆಪ್ ಗೆ ನಮ್ಮ ಮತ ಎಂದು ಹೇಳುತ್ತಿದ್ದರು. ದೆಹಲಿಯ ಜನತೆ ನಿಮ್ಮನ್ನು ಹೊಗಳುತ್ತಿರುವ ಸಂದರ್ಭದಲ್ಲಿ ಆಪ್ ಕಾರ್ಯಕರ್ತರು ನಿರಾಶೆಗೆ ಒಳಗಾಗಬಾರದು. ದೊಡ್ಡ ಚುನಾವಣೆ ಮುಗಿದಿದ್ದು, ಸಣ್ಣ ಚುನಾವಣೆ ಬಂದಿದೆ. ಹೆಸರು ನೋಡಿ ಅಲ್ಲ, ಕೆಲಸ ನೋಡಿ ಮತ ಹಾಕಬೇಕೆಂದು ಜನತೆಯಲ್ಲಿ ಎಲ್ಲ ಕಾರ್ಯಕರ್ತರು ಮನವಿ ಮಾಡಿಕೊಳ್ಳಿ ಎಂದು ಸೂಚಿಸಿದರು.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ದೆಹಲಿಯ ಎಲ್ಲ ಬಿಜೆಪಿ ಅಭ್ಯರ್ಥಿಗಳು ಶೇ.50ಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಪ್ ಶೂನ್ಯ ಫಲಿತಾಂಶ ದಾಖಲಿಸಿವೆ. ಕಾಂಗ್ರೆಸ್‍ನಿಂದ ಈಶಾನ್ಯ ದೆಹಲಿಯ ಕ್ಷೇತ್ರದಿಂದ ಕಣಕ್ಕಿಳಿದ್ದ ಮಾಜಿ ಸಿಎಂ ಶೀಲಾ ದೀಕ್ಷಿತ್ ಸಹ ಸೋಲು ಕಂಡಿದ್ದಾರೆ.

    https://www.youtube.com/watch?v=HHAaag6olJg

  • ಮೇ 23ರಂದು ಮಂಡ್ಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ!

    ಮೇ 23ರಂದು ಮಂಡ್ಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ!

    ಮಂಡ್ಯ: ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನಲೆಯಲ್ಲಿ ಮೇ 23ರಂದು ಮಂಡ್ಯ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ತಿಳಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ನಿಷೇಧಾಜ್ಞೆ ಜೊತೆಗೆ ಮದ್ಯ ಮಾರಾಟ ನಿಷೇಧ ಇರುತ್ತದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ಫಲಿತಾಂಶ ಸ್ಥಳದಲ್ಲಿ ವಿಜಯೋತ್ಸವ ಆಚರಿಸುವಂತಿಲ್ಲ. ಜೊತೆಗೆ ಗೆದ್ದವರ ಬೆಂಬಲಿಗರು ಸೋತ ಅಭ್ಯರ್ಥಿಯ ಮನೆ ಮುಂದೆ ಪಟಾಕಿ ಸಿಡಿಸುವಂತಿಲ್ಲ ಎಂದು ತಿಳಿಸಿದರು.

    ವಿಜೇತ ಅಭ್ಯರ್ಥಿಯ ಬೆಂಬಲಿಗರು ಸೋತ ಅಭ್ಯರ್ಥಿಗೆ ತೊಂದರೆ ಕೊಡುವ ರೀತಿಯಲ್ಲಿ ವಿಜಯೋತ್ಸವ ಆಚರಿಸಿದರೆ ಕಠಿಣ ಕ್ರಮಕೈಗೊಳ್ಳುತ್ತೇವೆ. 113 ಟೇಬಲ್‍ನಲ್ಲಿ ಮತ ಎಣಿಕಾ ಪ್ರಕ್ರಿಯೆ ನಡೆಯಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಿದೆ. ಪ್ರತಿ ಟೇಬಲ್‍ಗೂ ಅಭ್ಯರ್ಥಿಗಳ ಒಬ್ಬೊಬ್ಬ ಏಜೆಂಟ್ ಬರಲು ಅವಕಾಶ ಇರುತ್ತದೆ. ಚುನಾವಣಾ ಸಿಬ್ಬಂದಿ ಹಾಗೂ ಮಾಧ್ಯಮಗಳನ್ನು ಹೊರತುಪಡಿಸಿ ಉಳಿದವರಿಗೆ ಮೊಬೈಲ್ ನಿಷೇಧ ಮಾಡಲಾಗಿದೆ. ಸಿಆರ್ ಪಿ ಎಫ್, ಬಿಎಸ್‍ಎಫ್, ಸೆಂಟ್ರಲ್ ಪ್ಯಾರಾ ಮಿಲಿಟರಿ ಪೋರ್ಸ್ ಹಾಗೂ ಸ್ಥಳೀಯ ಪೊಲೀಸರನ್ನು ಭದ್ರತೆಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

    ಫಲಿತಾಂಶದ ಸಮಯದಲ್ಲಿ ಪರಾಭವಗೊಂಡ ಹಾಗೂ ಅವರ ಬೆಂಬಲಿಗರ ನಡುವೆ ಸಂಘರ್ಷ ಉಂಟಾಗಿ ಗ್ರಾಮಗಳಲ್ಲಿ ಹಲ್ಲೆ ನಡೆದು ಒಬ್ಬರು ಮತ್ತೊಬ್ಬರ ಮನೆಯ ಮೇಲೆ ಕಲ್ಲು ಹೊಡೆಯುವುದು, ಬೆಂಕಿ ಹಚ್ಚಿ ದುಷ್ಕøತ್ಯಗಳನ್ನ ಮಾಡುವ ಸಾಧ್ಯತೆವಿದೆ. ಇದರಿಂದಾಗಿ ಕಾನೂನು ಹಾಗೂ ಸುವ್ಯವಸ್ಥೆಗೆ ಭಂಗ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಮೇ 23ರಿಂದ ಬೆಳಗ್ಗೆ 6 ಗಂಟೆಯಿಂದ ಮೇ 24 ಮಧ್ಯರಾತ್ರಿವರೆಗೆ ಮಂಡ್ಯ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ.

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಮೇ ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಬೆಂಗಳೂರು ಕಮೀಷನರೇಟ್‍ನಲ್ಲಿ ನಿಷೇಧಾಜ್ಞೆ ಜಾರಿ ಮಾಡುವಂತೆ ಆದೇಶ ಹೊರಡಿಸಲಾಗಿದೆ.

    ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23ರಂದು ಹೊರಬೀಳಲಿದೆ. ಆದ್ದರಿಂದ ಫಲಿತಾಂಶದ ದಿನ ಗಲಾಟೆ ಆಗುವ ಸಾಧ್ಯತೆಯಿದೆ ಎಂಬ ಮಾಹಿತಿ ಹಿನ್ನೆಲೆ ಬೆಂಗಳೂರು ಕಮೀಷನರೇಟ್‍ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೆ 23 ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

  • ಸದೃಢ ಸರ್ಕಾರವಿದ್ರೆ ಐಪಿಎಲ್, ಚುನಾವಣೆ, ರಂಜಾನ್, ಹನುಮಾನ್ ಜಯಂತಿ ಒಟ್ಟಿಗೆ ನಡೆಯುತ್ತೆ – ನರೇಂದ್ರ ಮೋದಿ

    ಸದೃಢ ಸರ್ಕಾರವಿದ್ರೆ ಐಪಿಎಲ್, ಚುನಾವಣೆ, ರಂಜಾನ್, ಹನುಮಾನ್ ಜಯಂತಿ ಒಟ್ಟಿಗೆ ನಡೆಯುತ್ತೆ – ನರೇಂದ್ರ ಮೋದಿ

    ನವದೆಹಲಿ: ಪೂರ್ಣ ಬಹುಮತ ಎನ್‍ಡಿಎ ಸರ್ಕಾರವು 5 ವರ್ಷ ಆಡಳಿತ ಪೂರ್ಣಗೊಳಿಸಿದ್ದು, ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಕಾರಾತ್ಮಕ ಭಾವನೆಯಿಂದ ಚುನಾವಣೆ ಪೂರ್ಣಗೊಳಿಸುವ ಹಂತಕ್ಕೆ ತಲುಪಿದ್ದೇವೆ. 2014ರಲ್ಲಿ ಬಹಳ ವರ್ಷಗಳ ನಂತರ ಒಂದು ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಅಷ್ಟೇ ಅಲ್ಲದೆ ಈ ಬಾರಿಯೂ ಗೆಲ್ಲುವ ವಿಶ್ವಾಸವನ್ನು ಮೂಡಿಸಿದೆ. ಇದು ಬಹು ವರ್ಷಗಳ ಬಳಿಕ ನಡೆದ ಅದ್ಭುತ ಘಟನೆ ಎಂದು ಹೇಳಿದರು.

    2014ರ ಫಲಿತಾಂಶ ಮೇ 16ಕ್ಕೆ ಬಂದಿತ್ತು. ಆ ದಿನವೇ ದೊಡ್ಡ ದುರ್ಘಟನೆ ನಡೆದಿತ್ತು. ಬಿಜೆಪಿ 218-220 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಕಟ್ಟಿದವರೆಲ್ಲ ಹಣ ಕಳೆದುಕೊಂಡಿದ್ದರು. ಈ ಮೂಲಕ ಒಂದರ್ಥದಲ್ಲಿ ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸುವ ಪ್ರಕ್ರಿಯೆ ನನ್ನ ಪ್ರಮಾಣವಚನಕ್ಕೂ ಮೊದಲೇ ಆರಂಭವಾಯಿತು ಎಂದು ಹೇಳಿದರು.

    ಭಾರತವನ್ನು ವಿಶ್ವದಲ್ಲಿ ಪ್ರಭಾವಶಾಲಿ ದೇಶವನ್ನಾಗಿ ನಿರ್ಮಾಣ ಮಾಡಬೇಕಿದೆ. ಇಂತಹ ದೊಡ್ಡ ಚುನಾವಣೆ ಸಮಯದಲ್ಲಿಯೂ ಐಪಿಎಲ್ ಪಂದ್ಯಗಳನ್ನು ದೇಶದಲ್ಲಿ ನಡೆಸಲಾಯಿತು. ಸದೃಢ ಸರ್ಕಾರ ದೇಶದಲ್ಲಿದ್ದರೆ ಚುನಾವಣೆಯ ವೇಳೆಯೂ ರಂಜಾನ್, ಐಪಿಎಲ್ ಪಂದ್ಯ, ಹನುಮಾನ್ ಜಯಂತಿ, ರಾಮ ಜಯಂತಿ ಹಾಗೂ ಮಕ್ಕಳ ಪರೀಕ್ಷೆ ನಡೆಯುತ್ತವೆ ಎಂದು ತಿಳಿಸಿದರು.

    ಚುನಾವಣೆ ಪ್ರಚಾರದ ವೇಳೆ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ಹೆಲಿಕಾಪ್ಟರ್ ಒಂದೆರಡು ಬಾರಿ ದರುಸ್ತಿಗೊಂಡಿದ್ದರಿಂದ ಕೆಲ ಕಾರ್ಯಕ್ರಮಗಳಿಗೆ ತಡವಾಗಿ ಹಾಜರಾಗಿದ್ದೇನೆ. ದೇಶದ ಜನರು ನನಗೆ 5 ವರ್ಷಗಳ ಕಾಲ ಆಡಳಿತ ನಡೆಸಲು ಸಹಕಾರ ನೀಡಿದ್ದಾರೆ ಎಂದು ಧನ್ಯವಾದ ಸಲ್ಲಿಸಿದರು.

    ಸಾಮಾಜಿಕ ಜಾಲತಾಣಗಳು ಬಂದ ನಂತರ ಲೋಕಸಭಾ ಚುನಾವಣೆ ಪ್ರಚಾರ ಕೆಲಸ ಮತ್ತಷ್ಟು ಹೆಚ್ಚಾಯಿತು. ಸಮಾವೇಶದಲ್ಲಿ ಭಾಷಣ ಮಾಡುವುದು ಇದರ ಜೊತೆಗೆ ಟ್ವಿಟ್ಟರ್ ಮೂಲಕ ಜನರಿಗೆ ಸಂದೇಶ ನೀಡುವ ಕೆಲಸ ಮಾಡಬೇಕಾಗುತ್ತಿದೆ. ಎರಡು ಟ್ವಿಟ್ಟರ್ ಖಾತೆಯನ್ನು ನಿಭಾಯಿಸುತ್ತಿದ್ದೇನೆ ಎಂದು ಹೇಳಿ ನಗೆ ಬೀರಿದರು.

    ಮೋದಿ ಗಪ್‍ಚುಪ್:
    5 ವರ್ಷದಲ್ಲಿ ಮೊದಲ ಬಾರಿಗೆ ಮೋದಿ ಸುದ್ದಿಗೋಷ್ಠಿಗೆ ಆಗಮಿಸಿದ್ದರೂ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಿಲ್ಲ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಿಸ್ತಿನ ನೆಪವೊಡ್ಡಿ, ಪಕ್ಷದ ಅಧ್ಯಕ್ಷರು ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತಾರೆ ಎಂದು ಹೇಳಿದರು. ಬಳಿಕ ಅಮಿತ್ ಶಾ ಅವರೇ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದರು.

  • ಜೆಡಿಎಸ್ `ಹೆಚ್‍ಎಂಟಿ’ ಅಸ್ತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್‍ನಿಂದ `ಕೆಎಂಸಿ’ ಅಸ್ತ್ರ!

    ಜೆಡಿಎಸ್ `ಹೆಚ್‍ಎಂಟಿ’ ಅಸ್ತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್‍ನಿಂದ `ಕೆಎಂಸಿ’ ಅಸ್ತ್ರ!

    ಬೆಂಗಳೂರು: ಲೋಕಸಭಾ ಚುನಾವಣೆಯನ್ನು ಮೈತ್ರಿ ಮೂಲಕ ಎದುರಿಸಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ತಮ್ಮ ಮುಖಂಡರೇ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡದ ಕಾರಣ ಅಸಮಾಧಾನದ ಹೊಗೆ ಎದ್ದಿದೆ.

    ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ನೀಡಿರಲಿಲ್ಲ. ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ಗೆ ಸಿಎಂ ದೂರು ನೀಡಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ ಅವರ ಈ ದೂರಿಗೆ ಸಾಕ್ಷಿ ಸಮೇತ ಪ್ರತಿ ದೂರು ನೀಡಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಕಾಂಗ್ರೆಸ್ ಹೈಕಮಾಂಡ್‍ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ದೂರಿಗೆ ಪ್ರತ್ಯಸ್ತ್ರವಾಗಿ ಸ್ವತಃ ಸಿಎಂ ಅವರಿಗೆ ದೂರು ನೀಡಲು ಕಾಂಗ್ರೆಸ್ ಮುಂದಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕೋಲಾರ, ಮೈಸೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಜೆಡಿಎಸ್ ನಾಯಕರು ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ನೀಡಿರಲಿಲ್ಲ. ಅದರಲ್ಲೂ ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರು ಬಹಿರಂಗ ಹೇಳಿಕೆ ನೀಡಿ ಬಿಜೆಪಿಗೆ ಮತ ನೀಡಿ ಎಂದಿದ್ದರು. ಚಿಕ್ಕಬಳ್ಳಾಪುರದಲ್ಲಿ ಮೊದಲು ಹೆಚ್ಚಿನ ಉತ್ಸಾಹದಿಂದಲೇ ಮುಂದಾದ ವೀರಪ್ಪ ಮೊಯ್ಲಿ ಅವರಿಗೆ ಜೆಡಿಎಸ್ ನಾಯಕರ ಬೆಂಬಲ ಲಭಿಸಿರಲಿಲ್ಲ. ಮೈಸೂರಿನಲ್ಲಿ ಈಗಾಗಲೇ ಸಚಿವ ಜಿಡಿ ದೇವೇಗೌಡ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ವಿಚಾರಗಳನ್ನು ಸಾಕ್ಷಿ ಸಮೇತ ನೀಡಲು ಕೈ ನಾಯಕರು ಮುಂದಾಗಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರ ಮೇಲೆ ಈ ಮೂಲಕ ಒತ್ತಡ ಹಾಕುವುದು ಕಾಂಗ್ರೆಸ್ ಉದ್ದೇಶವಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಬಂಡಾಯ ಮುಖಂಡರ ವಿರುದ್ಧ ಕ್ರಮಕೈಗೊಂಡಿರುವ ಪಟ್ಟಿಯೂ ಸಿದ್ಧವಾಗಿದೆ. ಆದರೆ ಇದುವರೆಗೂ ಜೆಡಿಎಸ್ ಪಕ್ಷದಿಂದ ಯಾವುದೇ ಸಣ್ಣ ಕಾರ್ಯಕರ್ತನ ಮೇಲೂ ಕ್ರಮಕೈಗೊಂಡಿರುವ ಉದಾಹಣೆ ಇಲ್ಲ. ಹೀಗಾಗಿ ನಾವು ಯಾಕೆ ನಮ್ಮ ನಾಯಕರ ಮೇಲೆ ಕ್ರಮ ಕೈಗೊಳ್ಳಬೇಕು? ನಮ್ಮ ದೂರಿಗೆ ಸಿಎಂ ಸ್ಪಂದನೆ ಯಾವ ರೀತಿ ಇರುತ್ತದೋ ಅದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತೀರ್ಮಾ ತೆಗೆದುಕೊಳ್ಳವುದು ಸರಿ ಎನ್ನುವ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ ಎನ್ನಲಾಗಿದೆ.

  • ಶಿವಮೊಗ್ಗದಲ್ಲಿ ಗೆಲುವಿನ ಮಾಲೆ ಯಾರಿಗೆ? – ದೋಸ್ತಿ, ಬಿಜೆಪಿ ಲೆಕ್ಕ ರಿವೀಲ್

    ಶಿವಮೊಗ್ಗದಲ್ಲಿ ಗೆಲುವಿನ ಮಾಲೆ ಯಾರಿಗೆ? – ದೋಸ್ತಿ, ಬಿಜೆಪಿ ಲೆಕ್ಕ ರಿವೀಲ್

    – ಭಿನ್ನ ಉತ್ತರ ನೀಡಿತಾ ಗುಪ್ತಚರ ವರದಿ!

    ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕೊನೆಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರದಲ್ಲಿ ಅಡಕವಾಗಿದೆ. ಆದ್ರೆ ಚುನಾವಣೋತ್ತರ ಸಮೀಕ್ಷೆಗಳು ಹೊರ ಬರುತ್ತಿವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸಹ ಖಾಸಗಿ ಏಜೆನ್ಸಿಗಳಿಂದ ಸರ್ವೆ ಮಾಡಿಸಿವೆ. ಈ ಮೂರು ಪಕ್ಷಗಳ ಸರ್ವೆ ಒಂದೆಡೆಯಾದ್ರೆ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆ ಸಹ ತನ್ನ ಸಮೀಕ್ಷೆಯನ್ನು ನೀಡಿದೆ.

    ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆಗಳ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮಾಜಿ ಸಿಎಂ ಪುತ್ರರಿಬ್ಬರಾದ ಬಿ.ವೈ.ರಾಘವೇಂದ್ರ ಮತ್ತು ಮಧು ಬಂಗಾರಪ್ಪ ಸ್ಪರ್ಧೆ ಮಾಡಿರುವ ಶಿವಮೊಗ್ಗ ಹೈ ವೋಲ್ಟೇಜ್ ಕಣವಾಗಿತ್ತು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಮುನ್ನಡೆ ಸಾಧಿಸಲಿದ್ದಾರೆ ಎಂದು ದೋಸ್ತಿ ಲೆಕ್ಕ ಹೀಗಿದೆ.

    ದೋಸ್ತಿ ಲೆಕ್ಕ:
    ದೋಸ್ತಿ ಲೆಕ್ಕದ ಪ್ರಕಾರ ಶಿವಮೊಗ್ಗ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಲೀಡ್ ಕಾಯ್ದುಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರದಲ್ಲಿ 1,70,635 ಮತಗಳು ಚಲಾವಣೆಯಾಗಿವೆ. ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಮಧು ಬಂಗಾರಪ್ಪ 10 ರಿಂದ 15 ಸಾವಿರ ಮತಗಳ ಲೀಡ್ ಪಡೆದುಕೊಳ್ಳುತ್ತಿದ್ದಾರೆ ಎಂದು ದೋಸ್ತಿ ಲೆಕ್ಕ ಹೇಳುತ್ತಿದೆ. ಉಳಿದಂತೆ ಶಿವಮೊಗ್ಗ ನಗರದಲ್ಲಿ 5ರಿಂದ 10 ಸಾವಿರ, ತೀರ್ಥಹಳ್ಳಿಯಲ್ಲಿ 10 ಸಾವಿರ, ಶಿಕಾರಿಪುರದಲ್ಲಿ 5 ಸಾವಿರ, ಸೊರಬದಲ್ಲಿ 15 ಸಾವಿರ, ಸಾಗರದಲ್ಲಿ 15 ಸಾವಿರ, ಬೈಂದೂರಿನಲ್ಲಿ 10 ಸಾವಿರ ಮತ್ತು ಭದ್ರಾವತಿಯಲ್ಲಿ 25 ಸಾವಿರ ಅಂತರದಲ್ಲಿ ಮಧು ಬಂಗಾರಪ್ಪ ಗೆಲುವು ದಾಖಲಿಸಲಿದ್ದಾರೆ ದೋಸ್ತಿ ಸಮೀಕ್ಷೆ ಹೇಳುತ್ತಿದೆ. ಒಟ್ಟಾರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 75ರಿಂದ 1 ಲಕ್ಷಗಳ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ 75 ಸಾವಿರದಿಂದ 1 ಲಕ್ಷ ಮತಗಳ ಅಂತರದಲ್ಲಿ ಗೆಲುವು ಕಾಣುತ್ತಾರೆ ಎಂದು ದೋಸ್ತಿ ಲೆಕ್ಕ ಹೇಳುತ್ತಿದೆ.

    ಬಿಜೆಪಿ ಲೆಕ್ಕ:
    ಬಿಜೆಪಿ ಲೆಕ್ಕದ ಪ್ರಕಾರ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿ.ವೈ.ರಾಘವೇಂದ್ರ ಗೆಲುವಿನ ನಗೆ ಬೀರಲಿದ್ದಾರೆ ಎಂದು ಕಮಲ ಸರ್ವೆ ಹೇಳುತ್ತಿದೆ. ಶಿವಮೊಗ್ಗ ಗ್ರಾಮಾಂತರ 20 ಸಾವಿರ, ಭದ್ರಾವತಿ 10 ರಿಂದ 15 ಸಾವಿರ, ಶಿವಮೊಗ್ಗ ನಗರ 25 ಸಾವಿರ, ತೀರ್ಥಹಳ್ಳಿ 15 ರಿಂದ 20 ಸಾವಿರ, ಶಿಕಾರಿಪುರ 10 ರಿಂದ 15 ಸಾವಿರ, ಸೊರಬ 17 ರಿಂದ 20 ಸಾವಿರ, ಸಾಗರ 17 ರಿಂದ 20 ಸಾವಿರ, ಬೈಂದೂರು 10 ರಿಂದ 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ರೆ ಒಟ್ಟಾರೆ 1 ರಿಂದ 1.5 ಲಕ್ಷ ಮತಗಳ ಅಂತರದಿಂದ ಬಿ.ವೈ.ರಾಘವೇಂದ್ರ ಗೆಲುವು ಕಾಣ್ತಾರೆ ಎಂದು ಬಿಜೆಪಿ ಸಮೀಕ್ಷೆ ಹೇಳುತ್ತಿದೆ.

    ಗುಪ್ತಚರ ವರದಿ: ರಾಜ್ಯ ಸರ್ಕಾರ ಗುಪ್ತಚರ ಇಲಾಖೆ ಮೈತ್ರಿ  ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವು ಕಾಣ್ತಾರೆ ಎಂದು ಹೇಳಿ ಕೆಲವು ಅಂಕಿ ಅಂಶಗಳನ್ನು ಸಿಎಂಗೆ ಒಪ್ಪಿಸಿದೆಯಂತೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಸೊರಬದಲ್ಲಿ ಮಧು ಬಂಗಾರಪ್ಪ ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ. ಸಾಗರದಲ್ಲಿ ಎರಡೂ ಪಕ್ಷಗಳ ಸಮಬಲ ಸಾಧಿಸಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗ ಗ್ರಾಮಾಂತರ 6 ಸಾವಿರ, ಭದ್ರಾವತಿ 5 ಸಾವಿರ, ಶಿವಮೊಗ್ಗ ನಗರ 12 ರಿಂದ 14 ಸಾವಿರ, ತೀರ್ಥಹಳ್ಳಿ 6 ರಿಂದ 7 ಸಾವಿರ, ಶಿಕಾರಿಪುರ 14 ಸಾವಿರ, ಬೈಂದೂರು 8 ರಿಂದ 10 ಸಾವಿರ ಮತಗಳ ಅಂತರದಲ್ಲಿ ಬಿ.ವೈ.ರಾಘವೇಂದ್ರ ಮುನ್ನಡೆ ಕಾಯ್ದುಕೊಂಡು ಅಂದಾಜು 50 ರಿಂದ 52 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಗುಪ್ತಚರ ವರದಿ ತಿಳಿಸಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ನಾಲ್ಕನೇ ಹಂತದ ಮತದಾನ -72 ಲೋಕಸಭಾ ಕ್ಷೇತ್ರಗಳಲ್ಲಿ ಮತ ಹಬ್ಬ

    ನಾಲ್ಕನೇ ಹಂತದ ಮತದಾನ -72 ಲೋಕಸಭಾ ಕ್ಷೇತ್ರಗಳಲ್ಲಿ ಮತ ಹಬ್ಬ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗ್ತಾರಾ..? ಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ..? ಈ ಪ್ರಶ್ನೆಗೆ ಲೋಕಸಭಾ ಚುನಾವಣೆಯಲ್ಲಿ ಬಾಕಿ ಉಳಿದಿರುವ ನಾಲ್ಕು ಹಂತಗಳು ಉತ್ತರ ನೀಡಲಿದೆ. ಈಗಾಗ್ಲೇ 543 ಕ್ಷೇತ್ರಗಳ ಪೈಕಿ 303 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. 240 ಲೋಕಸಭಾ ಕ್ಷೇತ್ರಗಳಿಗಷ್ಟೇ ಮತದಾನ ಬಾಕಿಯಿದೆ. ಇಂದು 72 ಕ್ಷೇತ್ರಗಳಲ್ಲಿ ನಾಲ್ಕನೇ ಹಂತದ ಮತದಾನ ನಡೆಯಲಿದೆ.

    ಇಂದು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಲೋಕ ಕದನಕ್ಕೆ ಚಾಲನೆ ಸಿಗಲಿದ್ದು, ಒಡಿಶಾ, ಮಹಾರಾಷ್ಟ್ರದಲ್ಲಿ ಮತದಾನ ಮುಕ್ತಾಯವಾಗಲಿದೆ. ಮಹಾರಾಷ್ಟ್ರ-17, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ 13, ಪಶ್ಚಿಮ ಬಂಗಾಳ-8, ಮಧ್ಯ ಪ್ರದೇಶ ಮತ್ತು ಓಡಿಶಾಗಳಲ್ಲಿ ತಲಾ 6, ಬಿಹಾರ-5, ಜಾರ್ಖಂಡ್-3 ಹಾಗೂ ಜಮ್ಮು & ಕಾಶ್ಮೀರದ ಒಂದು ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ.

    ಕನ್ನಯ್ಯ ಕುಮಾರ್, ಊರ್ಮಿಳಾ ಮಾಂತೋಡ್ಕರ್, ಮಿಲಿಂದ್ ದಿಯೋರಾ, ಅಖಿಲೇಶ್ ಸಿಂಗ್, ಮನೇಕಾ ಗಾಂಧಿ ಸೇರಿ 961 ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ. ಇವತ್ತಿಂದ ಮತದಾನ ಆಗುತ್ತಿರುವ ಕ್ಷೇತ್ರಗಳನ್ನು ಕಳೆದ ಬಾರಿ ಬಿಜೆಪಿ ಗೆದ್ದುಕೊಂಡಿತ್ತು. ಮತ್ತೆ ಅಧಿಕಾರಕ್ಕೆ ಬರಬೇಕಾದ್ರೆ ಈ ಕ್ಷೇತ್ರಗಳನ್ನು ಮತ್ತೆ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.

  • ತೋಳ ಬಂತು ತೋಳ ಕಥೆ ಹೇಳ್ತಿದ್ದಾರೆ ರಮೇಶ್ ಜಾರಕಿಹೊಳಿ: ಲಕ್ಷ್ಮಿ ಹೆಬ್ಬಾಳ್ಕರ್

    ತೋಳ ಬಂತು ತೋಳ ಕಥೆ ಹೇಳ್ತಿದ್ದಾರೆ ರಮೇಶ್ ಜಾರಕಿಹೊಳಿ: ಲಕ್ಷ್ಮಿ ಹೆಬ್ಬಾಳ್ಕರ್

    – ನಾಯಕರನ್ನು ಹುಟ್ಟು ಹಾಕುವ ಪಕ್ಷಕ್ಕೆ ಯಾರು ಅನಿವಾರ್ಯವಲ್ಲ
    – ಇಂತಹ ನಾಯಕರು ಹೋದರೆ ಸೆಕೆಂಡ್ ಲೈನ್ ನಾಯಕರು ಮುಂದೆ ಬರ್ತಾರೆ

    ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ತೋಳ ಬಂತು ತೋಳದ ಕಥೆಯನ್ನು ಹೇಳಿಕೊಂಡು ಬರುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವ್ಯಂಗ್ಯವಾಡಿದ್ದಾರೆ.

    ರಮೇಶ್ ಜಾರಕಿಹೊಳಿ ಪಕ್ಷ ತೊರೆಯುವ ವಿಚಾರದ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ತೋಳ ಬಂತು ತೋಳ ಬಂತು ಎಂಬಂತೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ. ನಾನು ಸೇರಿದಂತೆ ಪಕ್ಷಕ್ಕೆ ಯಾರು ಅನಿವಾರ್ಯ ಇಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಯಾರು ಅನಿವಾರ್ಯ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

    ಮತದಾನ ದಿನ ಅತ್ಯಂತ ಮಹತ್ವದ ದಿನವಾಗಿದ್ದು, ಇಂದು ಇಂತಹ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಪಕ್ಷದಲ್ಲಿ ಬಹಳಷ್ಟು ಜನ ಬರ್ತಾರೆ, ಹೋಗುತ್ತಿರುತ್ತಾರೆ. ರಮೇಶ್ ಜಾರಕಿಹೊಳಿ ಒಬ್ಬರು ಪಕ್ಷದಿಂದ ಹೊರ ಹೋದರೆ ಕಾಂಗ್ರೆಸ್‍ಗೆ ಯಾವುದೇ ನಷ್ಟವಿಲ್ಲ. ಪಕ್ಷ ನಾಯಕರನ್ನು ಹುಟ್ಟಿಸುತ್ತದೆ. ಹೊಸ ನಾಯಕ, ನಾಯಕತ್ವವನ್ನು ಹುಟ್ಟಿಸುವ ಸಾಮಾರ್ಥ್ಯ ಕಾಂಗ್ರೆಸ್ ಹೊಂದಿದೆ. ಇಂತಹ ನಾಯಕರು ಹೋದರೆ ಸೆಕೆಂಡ್ ಲೈನ್ ನಾಯಕರು ಮುಂದೆ ಬರಲು ಸಾಧ್ಯವಾಗುತ್ತದೆ. ಪಕ್ಷದಲ್ಲಿ ಇರಬೇಕೋ ಅಥವಾ ಬಿಡಬೇಕೋ ಎಂಬುವುದು ರಮೇಶ್ ಜಾರಕಿಹೊಳಿ ಅವರ ವೈಯಕ್ತಿಕ ವಿಚಾರ ಎಂದರು.

    ಮತದಾನ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ರಾಜಕೀಯಕ್ಕೆ ಬಂದಾಗಿನಿಂದ ಸಂಸದೆ ಅಗಬೇಕೆಂಬ ಆಸೆ ನನಗಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಸಂಸದ ಚುನಾವಣೆಗೆ ನಾನೇ ಸ್ಪರ್ಧೆ ಮಾಡಿದ್ದೇನೆ ಎಂದು ತಿಳಿದುಕೊಂಡು ನನಗೆ ನೀಡಲಾಗಿದ್ದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ವಿರೂಪಾಕ್ಷಿ ಸಾಧುನವರ್ ಒಳ್ಳೆಯ ಕುಟುಂಬದಿಂದ ಬಂದ ನಾಯಕರಾಗಿದ್ದು, ಹೆಚ್ಚು ಮತಗಳಿಂದ ಗೆಲ್ಲಲಿ ಎಂದು ಶುಭ ಹಾರೈಸಿದರು.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷದಿಂದ ಹೊರ ಹೋದ ಮೇಲೆ ಮಾತನಾಡುತ್ತೇನೆ. ಕಳೆದ 30 ರಿಂದ 35 ದಿನ ನನ್ನ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದರಿಂದ ಹೆಚ್ಚಿನ ಮಾಹಿತಿ ನನಗಿಲ್ಲ. ಇಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದು ಪ್ರಚಾರ ಮಾಡಿದ್ದೇನೆ ಎಂದು ಹೆಬ್ಬಾಳ್ಕರ್ ತಿಳಿಸಿದರು.

    ಸಮುದ್ರ ಮಥನವಾದಾಗ ಅಮೃತ ಮತ್ತು ವಿಷ ಎರಡೂ ಬರುತ್ತದೆ. ಎರಡನ್ನೂ ಸೇವಿಸಲು ಸಿದ್ಧವಾಗಬೇಕು. ಇಂತಹ ಸೂಕ್ಷ್ಮ ವಿಚಾರಗಳನ್ನು ಹೈಕಮಾಂಡ್ ಮತ್ತು ರಾಜ್ಯದ ನಾಯಕರು ನೋಡಿಕೊಳ್ಳುತ್ತಾರೆ. ನಮ್ಮ ಒಂದು ಹೇಳಿಕೆಯಿಂದ ಯಾವುದೇ ಬದಲಾವಣೆಗಳು ಆಗಲ್ಲ. ಹೈಕಮಾಂಡ್ ಎಲ್ಲರೂ ಗಣನೆಗೆ ತೆಗದುಕೊಂಡು ಸಾಧಕ-ಬಾಧಕಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಅಷ್ಟು ಸುಲಭವಾಗಿ ಕಾಂಗ್ರೆಸ್ ಪಕ್ಷದ ಮೇಲೆ ದಾಳಿ (ರೇಡ್) ಮಾಡೋದಕ್ಕೆ ಸಾಧ್ಯವಿಲ್ಲ. ಪಕ್ಷವನ್ನೇ ಹಿಡಿತಕ್ಕೆ ತೆಗೆದುಕೊಳ್ಳುತ್ತೇನೆ ಅನ್ನೋದು ಮೂರ್ಖತನದ ಪರಮಾವಧಿ. ರಮೇಶ್ ಜಾರಕಿಹೊಳಿ ಅವರ ಬಗ್ಗೆ ಮಾಹಿತಿ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.

  • ಮೋದಿ ಕುರಿತ ವೆಬ್ ಸೀರಿಸ್ ನಿಷೇಧಿಸಿ ಚುನಾವಣಾ ಆಯೋಗ ಆದೇಶ

    ಮೋದಿ ಕುರಿತ ವೆಬ್ ಸೀರಿಸ್ ನಿಷೇಧಿಸಿ ಚುನಾವಣಾ ಆಯೋಗ ಆದೇಶ

    ನವದೆಹಲಿ: ಪ್ರಧಾನಿ ಮೋದಿ ಜೀವನಾಧಾರಿತ “ಪಿಎಂ ನರೇಂದ್ರ ಮೋದಿ” ಸಿನಿಮಾ ಹಾಗೂ ನಮೋ ಚಾನೆಲ್ ನಿಷೇಧದ ಬೆನ್ನಲ್ಲೇ ‘ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್’ ಪ್ರಸಾರದ ಮೇಲೆಯೂ ಚುನಾವಣಾ ಆಯೋಗ ನಿಷೇಧ ಹೇರಿ ಆದೇಶ ಹೊರಡಿಸಿದೆ.

    ‘ಎರೋಸ್ ನೌ’ ಡಿಜಿಟಲ್ ಮಾಧ್ಯಮವು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಆನ್‍ಲೈನ್ ಸೀರಿಸ್ ‘ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್’ ಪ್ರಸಾರ ಮಾಡುತ್ತಿದೆ. ಈ ಸೀರಿಸ್ ಪ್ರಸಾರವನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಸಂಸ್ಥೆಗೆ ಸೂಚನೆ ನೀಡಿದೆ.

    ಬಾಲಿವುಡ್ ನಿರ್ದೇಶಕ ಉಮೇಶ್ ಶುಕ್ಲಾ ಅವರ ‘ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್’ ಆನ್‍ಲೈನ್ ಸೀರಿಸ್ 5 ಸಂಚಿಕೆ ಹೊಂದಿದೆ. ಇದು ಮತದಾರರ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ ನಿಮ್ಮ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಿರುವ ಸೀರಿಸ್‍ಗಳನ್ನು ತೆಗೆದು ಹಾಕಬೇಕು ಎಂದು ತಿಳಿಸಿದೆ.

    ‘ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್’ ಆನ್‍ಲೈನ್ ಸೀರಿಸ್ ದೇಶದ ಪ್ರಧಾನಿ, ಪಕ್ಷವೊಂದರ ನಾಯಕ, ಲೋಕಸಭಾ ಚುನಾವಣೆಯ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ್ದಾಗಿದೆ. ಈ ಸಂಬಂಧ ದಾಖಲೆಗಳನ್ನು ಪರಿಶೀಲಸಿದ ನಂತರ ನಮಗೆ ತಿಳಿದಿದೆ. ಇದರಿಂದಾಗಿ ಸೀರಿಸ್‍ನ ಪ್ರದರ್ಶನವನ್ನು ಕೂಡಲೇ ನಿಲ್ಲಿಸಬೇಕು ಎಂದು ಚುನಾವಣಾ ಆಯೋಗವು ಸೂಚನೆ ನೀಡಿದೆ.

    https://twitter.com/ErosNow/status/1111863121780658176

    ಮೀಡಿಯಾ ಪ್ರಮಾಣೀಕರಣ ಮತ್ತು ಮಾನಿಟರಿಂಗ್ ಸಮಿತಿ (ಎಂಸಿಎಂಸಿ)ಯಿಂದ ಅನುಮತಿ ಪಡೆಯದೆ ಏಪ್ರಿಲ್‍ನಲ್ಲಿ ಆನ್‍ಲೈನ್ ಎರೋಸ್‍ನೌ ವೆಬ್‍ಸೈಟ್ ಪ್ರಧಾನಿ ನರೇಂದ್ರ ಮೋದಿ ಅವರ ವೆಬ್ ಸರಣಿಯನ್ನು ಬಿಡುಗಡೆ ಮಾಡಿದೆ ಎಂದು ಸೋಮವಾರ ದೆಹಲಿ ಸಿಇಒ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

  • ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿರುವ ಶಿವಮೊಗ್ಗ ಕ್ಷೇತ್ರ

    ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿರುವ ಶಿವಮೊಗ್ಗ ಕ್ಷೇತ್ರ

    – ಹಾಲಸ್ವಾಮಿ ಆರ್.ಎಸ್.

    ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಸದಾ ಮೊದಲ ಸಾಲಿನಲ್ಲೇ ಇರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಬರೀ ಸೋಲು-ಗೆಲುವಿಗಷ್ಟೇ ಸೀಮಿತವಾಗದೆ ರಾಜಕೀಯ ಭವಿಷ್ಯವನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ.

    ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸೀತಾರಾಮ ಕೇಸರಿ ಅವರು 1992ರಲ್ಲಿ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪ ಅವರನ್ನು ಕೆಳಗಿಳಿಸಿ ವೀರಪ್ಪ ಮೂಯ್ಲಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದ್ದರು. ಇದರಿಂದ ಕುದ್ದು ಹೋದ ಬಂಗಾರಪ್ಪ ಕಾಂಗ್ರೆಸ್ ತೊರೆದು ಕರ್ನಾಟಕ ಕಾಂಗ್ರೆಸ್ ಪಾರ್ಟಿ ಸ್ಥಾಪಿಸಿದರು. ಈ ಕೆಸಿಪಿ ಹೊಡೆತಕ್ಕೆ 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತತ್ತರಿಸಿ ಹೋಯಿತು. ಮತ್ತೆ ಕಾಂಗ್ರೆಸ್ ಸೇರಿದ ಬಂಗಾರಪ್ಪ 1997ರಲ್ಲಿ ಮತ್ತೆ ಕರ್ನಾಟಕ ವಿಕಾಸ ಪಾರ್ಟಿ ಸ್ಥಾಪಿಸಿದರು. ನಂತರ ಇದನ್ನೂ ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದರು. 2004ರಲ್ಲಿ ಮತ್ತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಹೀಗೆ ಬಂಗಾರಪ್ಪ ಅವರು ನಿರಂತರವಾಗಿ ಕಾಂಗ್ರೆಸ್ ಪಕ್ಷದ ಜೊತೆ ಹಾವು ಏಣಿ ಆಟ ಆಡಿದ ಪರಿಣಾಮವಾಗಿ, ನಂತರ ನಾಯಕತ್ವದ ಕೊರತೆ, ಒಳಸುಳಿಗಳ ಪರಿಣಾಮವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕೆಪಿಸಿಸಿಯ ಡಜನ್ ಗಟ್ಟಲೆ ನಾಯಕರು ಇಂದು ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಪರವಾಗಿ ಕಣದಲ್ಲಿ ಟೊಂಕಕಟ್ಟಿ ನಿಂತಿದ್ದಾರೆ.

    ಇದುವರೆಗೂ ನಾಲ್ಕು ಚುನಾವಣೆ ಎದುರಿಸಿರುವ ಮಧು ಬಂಗಾರಪ್ಪ ಮೂರರಲ್ಲಿ ಸೋತಿದ್ದಾರೆ. ಇದು ಇವರ ಐದನೇ ಚುನಾವಣೆ. ಕಳೆದ ವಿಧಾನಸಭಾ ಚುನಾವಣೆ, ಲೋಕಸಭೆಗೆ ನಡೆದ ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಸೋಲಿನ ಹ್ಯಾಟ್ರಿಕ್ ಆಗುವುದಿಲ್ಲ ಎಂಬುದು ಅವರ ವಿಶ್ವಾಸ.

    ಮೈತ್ರಿ ಉಳಿಯಲು ಮಧು ಗೆಲುವು ಅನಿವಾರ್ಯ ಎಂಬ ಮಾತನ್ನು ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದ್ದಾರೆ. ರಾಜಕೀಯದಲ್ಲಿ ಯಾವುದೇ ಮೈತ್ರಿ ಕ್ಷಣಿಕವೂ ಅಲ್ಲ- ಶಾಶ್ವತವೂ ಅಲ್ಲ ಎನ್ನುವಂತೆ ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ನ ಮಧು ಬಂಗಾರಪ್ಪ ಅವರಿಗಾಗಿ ವೀರಾವೇಶದಿಂದ ಹೋರಾಡುವ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಸಿಲುಕಿದೆ. ಮೈತ್ರಿ ಪಕ್ಷಗಳ ನಡುವಿನ ಭಿನ್ನಮತ ಢಾಳಾಗಿ ಬಹಿರಂಗ ಆಗದಿದ್ದರೂ ಒಳಗಿನ ಕಿಚ್ಚು ಹಾಗೇ ಇದೆ. ಮುಖ್ಯವಾಗಿ ಭದ್ರಾವತಿ, ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಇಂಥ ಭಿನ್ನತೆಯ ನಡುವೆಯೇ ಅಭ್ಯರ್ಥಿ ಗೆಲುವಿಗಾಗಿ ಕೆಲಸ ನಡೆಯುತ್ತಿದೆ.

    ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳೇ ಸಿಗದ ಪರಿಸ್ಥಿತಿಯಲ್ಲಿ ಮಧು ಕೊರಳಿಗೆ ಹಾರ ಹಾಕಲಾಗಿದೆ. ಒಂದು ಲೆಕ್ಕದಲ್ಲಿ ಮಧು ಬಂಗಾರಪ್ಪ ಮೈತ್ರಿ ಕೂಟದ ಸಾಂದರ್ಭಿಕ ಶಿಶು ಎಂದರೆ ತಪ್ಪಾಗದು. ಈ ಶಿಶುವಿನ ಗೆಲವು ಮೈತ್ರಿಯ ಗೆಲವು- ಜಿಲ್ಲೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಗೆಲವು. ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಮಧು ಬಂಗಾರಪ್ಪ ಅವರ ರಾಜಕೀಯ ಭವಿಷ್ಯವನ್ನು ಈ ಚುನಾವಣೆ ನಿರ್ಣಯ ಮಾಡಲಿದೆ. ಈ ಎಲ್ಲಾ ಕಾರಣಗಳಿಂದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲ್ಲಬೇಕಿದೆ. ಗೆಲ್ಲುವ ವಿಶ್ವಾಸ ಮೂಡಿಸಲು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಸೇರಿಂದತೆ ರಣಧೀರರ ಪಡೆಯೇ ಶಿವಮೊಗ್ಗದಲ್ಲಿ ನೆಲೆಯೂರಿದೆ. ಈ ಪಡೆ ರಣತಂತ್ರಗಳು ಮತಗಳಾಗಿ ಪರಿವರ್ತನೆ ಆಗಬೇಕಷ್ಟೇ.

    ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಗೆಲುವು- ಸೋಲು ಅವರ ತಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಭವಿಷ್ಯ ನಿರ್ಧರಿಸಲಿದೆ. ಬಿಜೆಪಿಗಿಂತ ಈ ಗೆಲುವು ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿದೆ. ಸರ್ಕಾರ ರಚನೆ ಮಾಡಲು ಹೋಗಿ ಕೈ ಸುಟ್ಟುಕೊಂಡ ಯಡಿಯೂರಪ್ಪ ಪಕ್ಷದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷ ಎಡವಿದರೆ ಅದರ ಹೊಣೆ ಯಡಿಯೂರಪ್ಪ ಒಬ್ಬರ ತಲೆಗೆ ಕಟ್ಟಲು ವೇದಿಕೆ ಸಜ್ಜಾಗಿದೆ. ಗೆದ್ದರೆ ಸಾಮೂಹಿಕ ನಾಯಕತ್ವ- ಸೋತರೆ ಪಕ್ಷದ ರಾಜ್ಯಾಧ್ಯಕ್ಷರೇ ಹೊಣೆ ಎನ್ನುವುದು ಬಿಜೆಪಿಯ ಸಾಂಪ್ರದಾಯಿಕ ಪದ್ಧತಿ. ಪಕ್ಷದ ದೆಹಲಿ ನಾಯಕರ ಇತ್ತೀಚಿನ ವರ್ತನೆಯಿಂದ ಇದನ್ನು ಯಡಿಯೂರಪ್ಪ ಮನದಟ್ಟು ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕು ಹಾಗೇ ತಮ್ಮ ಮಗ ಬಿ.ವೈ.ರಾಘವೇಂದ್ರ ಕೂಡ ಶಿವಮೊಗ್ಗದಲ್ಲಿ ಗೆಲ್ಲಬೇಕು ಎಂಬ ಅನಿವಾರ್ಯತೆಯಲ್ಲಿ ಯಡಿಯೂರಪ್ಪ ಇದ್ದಾರೆ.

    ಈ ಬಾರಿ ಮಗನೂ ಗೆಲ್ಲುತ್ತಾನೆ, ರಾಜ್ಯದಲ್ಲೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತೆ, ಮೈತ್ರಿ ಖತಂಗೊಂಡು ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಸುವರ್ಣ ಅವಕಾಶ ಕಣ್ಮುಂದೆ ಇದೆ ಎಂಬ ಆಶಾವಾದದಲ್ಲಿ 76 ವರ್ಷದ ಬಿ.ಎಸ್.ಯಡಿಯೂರಪ್ಪ ಇದ್ದಾರೆ. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಬಿಜೆಪಿಯ ಒಂದು ವರ್ಗದ ಅಸಹನೆಗೆ ಕಾರಣವಾಗಿದೆ. ಮತ್ತೆ ಸಿಎಂ ಆಗುವ ಬಯಕೆ, ಮಗನ ರಾಜಕೀಯ ಭವಿಷ್ಯ ರೂಪಿಸುವ ಕನಸು- ಈ ಎಲ್ಲಾ ಕಾರಣಗಳಿಂದ ಯಡಿಯೂರಪ್ಪ ಈ ಚುನಾವಣೆಯಲ್ಲಿ ತಮ್ಮ ಎಲ್ಲಾ ರೀತಿಯ ತಂತ್ರ-ಮಂತ್ರಗಳನ್ನು ಪ್ರಯೋಗಿಸಲು ಸಜ್ಜಾಗಿದ್ದಾರೆ.

    ಇನ್ನು ಕ್ಷೇತ್ರದ ಸಮಸ್ಯೆಗಳ ವಿಷಯಕ್ಕೆ ಬಂದರೆ ಬಗರ್ ಹುಕುಂ, ಅರಣ್ಯ ಹಕ್ಕು, ವಿಐಎಸ್ ಎಲ್, ಎಂಪಿಎಂ, ನೀರಾವರಿ ಯೋಜನೆಗಳು, ಮಂಗನಕಾಯಿಲೆ ಇತ್ಯಾದಿ ವಿಷಯಗಳ ಬಗ್ಗೆ ಎರಡೂ ಪಕ್ಷಗಳು ತಮಗೆ ಬೇಕಾದಂತೆ ವ್ಯಾಖ್ಯಾನ ಮಾಡುತ್ತಿವೆ. ಇಂಥ ಇನ್ನೂ ಹತ್ತಾರು ವಿಷಯಗಳಿಗೆ ಕೇಂದ್ರ- ರಾಜ್ಯ ಸರ್ಕಾರಗಳೆರಡೂ ಹೊಣೆಯಾಗಿವೆ. ಈ ಸಮಸ್ಯೆಗಳು ತಾರಕಕ್ಕೇರಲು ಎಲ್ಲಾ ಪಕ್ಷಗಳ ಕೊಡುಗೆಯೂ ಇದೆ.

    ಸ್ವಾತಂತ್ರ್ಯಾ ನಂತರ ಇದೂವರೆಗೂ ಕ್ಷೇತ್ರದಲ್ಲಿ 18 ಚುನಾವಣೆಗಳು ನಡೆದಿವೆ. 1991ರ ಚುನಾವಣೆಯವರೆಗೂ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಇಲ್ಲಿ ಹತ್ತು ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಅಂದರೆ 1998ರಿಂದ ಈಚೆಗೆ ನಡೆದ ಏಳು ಚುನಾವಣೆಗಳಲ್ಲಿ ಬಿಜೆಪಿ ಆರು ಚುನಾವಣೆಗಳನ್ನು ಗೆದ್ದಿದೆ. ಕೊನೆ ಮೂರು ಚುನಾವಣೆಗಳಲ್ಲೂ ಬಿಜೆಪಿ ನಿರಂತರವಾಗಿ ಗೆಲ್ಲುತ್ತಲೇ ಬಂದಿದೆ. ಆದರೆ, ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಗೆಲುವಿನ ಅಂತರ 50 ಸಾವಿರಕ್ಕೆ ಇಳಿದದ್ದು, ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. ಈ ಗೆಲುವನ್ನೂ ಸೋಲೆಂದೇ ಸ್ವೀಕರಿಸಿ ಬಿಜೆಪಿ ಕೆಲಸ ಮಾಡಿದೆ. ಚುನಾವಣೆ ಗೆಲುವನ್ನೇ ಗುರಿ ಮಾಡಿಕೊಂಡು ಈ ಮಟ್ಟಿಗಿನ ಬದ್ಧತೆಯ ಕೆಲಸ ಮೈತ್ರಿಕೂಟದಲ್ಲಿ ಆಗಿಲ್ಲ. ಈಗ ಮತ್ತೊಮ್ಮೆ ಮೈತ್ರಿ- ಬಿಜೆಪಿ ಅಭ್ಯರ್ಥಿಗಳು ಮುಖಾಮುಖಿಯಾಗಿದ್ದಾರೆ.

    ಹೀಗೆ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಫ್ಯಾಮಿಲಿಯ ಹಣಾಹಣಿಗೆ ವೇದಿಕೆಯಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆದಿದೆ. ಕೊನೆಯ ಗಳಿಗೆಯ ಆಟಕ್ಕೆ ಎರಡೂ ಬಣಗಳು ಸಜ್ಜಾಗಿವೆ. ಇನ್ನು ಮತದಾನ- ಫಲಿತಾಂಶದತ್ತ ಕುತೂಹಲ ಮೂಡಿದೆ.

  • ಗುಂಡಿನ ದಾಳಿ, ಇವಿಎಂ ಎಸೆತ, ಬಲವಂತದ ಮತದಾನ – ಇದು ಪಶ್ಚಿಮ ಬಂಗಾಳ ಎಲೆಕ್ಷನ್ ಸ್ಟೈಲ್

    ಗುಂಡಿನ ದಾಳಿ, ಇವಿಎಂ ಎಸೆತ, ಬಲವಂತದ ಮತದಾನ – ಇದು ಪಶ್ಚಿಮ ಬಂಗಾಳ ಎಲೆಕ್ಷನ್ ಸ್ಟೈಲ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆ ಮತದಾನವು ಇಂದು ನಡೆಯುತ್ತಿದ್ದು, ಅನೇಕ ಕಡೆಗಳಲ್ಲಿ ಗಲಾಟೆ, ಹಲ್ಲೆ ಹಾಗೂ ಬಲವಂತವಾಗಿ ಮತದಾನ ಮಾಡಲಾಗಿದೆ.

    ರಾಯ್‍ಗಂಜ್ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಮೊಹಮ್ಮದ್ ಸಲಿಂ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಕೆಲ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೊಹಮ್ಮದ್ ಸಲಿಂ ಅವರು ಕಾಂಗ್ರೆಸ್ ಹಾಲಿ ಸಂಸದೆ ದೀಪಾ ದಾಸ್ಮುನ್ಸಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ದೀಪಾ ಅವರ ಪತಿ ರಂಜನ್ ದುಸ್ಮಾನ್ಸಿ ಅವರು 1999ರಿಂದಲೂ ರಾಯ್‍ಗಂಜ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ ಅವರ ಅನಾರೋಗ್ಯದಿಂದಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಪತಿ ದೀಪಾ ದಾಸ್ಮುನ್ಸಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

    ಇಸ್ಲಾಂಪುರ್ ಮತಗಟ್ಟೆಯ 100 ಮೀಟರ್ ದೂರದಲ್ಲಿ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಸೇರಿದ್ದಾರೆ. ಈ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಮತದಾರರನ್ನು ಹೆದರಿಸುತ್ತಿದ್ದಾರೆ. ಅವರ ಬಳಿಗೆ ಹೋಗುತ್ತಿದ್ದಂತೆ ನನ್ನ ವಾಹನದ ಮೇಲೆ ದಾಳಿ ಮಾಡಿದರು. ಪೊಲೀಸರು ದಾಳಿ ಮಾಡಿದವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಮೊಹಮ್ಮದ್ ಸಲಿಂ ಆರೋಪಿಸಿದ್ದಾರೆ.

    ರಾಯ್‍ಗಂಜ್‍ನಲ್ಲಿ ಟಿಎಂಸಿ ಕಾರ್ಯಕರ್ತರು ಬೂತ್ ಅನ್ನು ತಮ್ಮ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಬೂತ್ ಒಳಗೆ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಬಲವಂತವಾಗಿ ಇವಿಎಂ ರೂಂ ಪ್ರವೇಶಿಸಿ ಮತದಾರರ ಮೇಲೆ ಒತ್ತಡ ಹಾಕಿ ವೋಟ್ ಹಾಕಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ದೂರಿದೆ.

    ಪಶ್ಚಿಮ ಬಂಗಾಳದ ಚೋಪ್ರಾದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಈ ವೇಳೆ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಉತ್ತರ ಡಿಗಿರ್ ಪರ್ ಕ್ಷೇತ್ರದಲ್ಲಿ ಮತದಾನದ ಆರಂಭವಾದ ಕೆಲವೇ ಸಮಯದಲ್ಲಿ ಗಲಭೆ ಆರಂಭವಾಗಿದೆ. ಮತದಾನ ಮಾಡದಂತೆ ಗುಂಪೊಂದು ಸಾರ್ವಜನಿಕರಿಗೆ ಒತ್ತಾಯಿಸಿತ್ತು. ಈ ವೇಳೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಿ, ಪುನಃ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿತು.

    ಪುರುಲಿಯಾ ಜಿಲ್ಲೆಯ ಸೇನಾಬೊನಾ ಗ್ರಾಮದ ಹೊರ ವಲಯದ ಮರದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿ ಟಿಎಂಸಿ ಕಾರ್ಯರ್ತರು ಈ ಕೃತ್ಯ ಎಸದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.