Tag: lok sabha election dates 2019

  • 2014ರಲ್ಲಿ ನೀಡಿದ್ದ ಭರವಸೆಗಳಿಗೆ ಉತ್ತರ ನೀಡಲು ಬಿಜೆಪಿ ಸಿದ್ಧವಾಗಿರಲಿ: ಶಿವಸೇನೆ

    2014ರಲ್ಲಿ ನೀಡಿದ್ದ ಭರವಸೆಗಳಿಗೆ ಉತ್ತರ ನೀಡಲು ಬಿಜೆಪಿ ಸಿದ್ಧವಾಗಿರಲಿ: ಶಿವಸೇನೆ

    ಮುಂಬೈ: ಬಿಜೆಪಿಯು 2014ರ ಚುನಾವಣೆ ಪ್ರಚಾರದ ವೇಳೆ ದೇಶದ ಜನರಿಗೆ ನೀಡಿದ್ದ ಅಯೋಧ್ಯದಲ್ಲಿ ರಾಮ ಮಂದಿರ ನಿರ್ಮಾಣ, ಕಾಶ್ಮೀರ ಕಣಿವೆ ವಿವಾದ ಇತ್ಯರ್ಥ ಸೇರಿದಂತೆ ಅನೇಕ ಭರವಸೆಗಳಿಗೆ ಉತ್ತರಿಸಲು ಸಿದ್ಧವಾಗಲಿ ಎಂದು ಶಿವಸೇನೆ ಹೇಳಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಸಂದೇಶ ತಿಳಿಸಲು ಮನ್ ಕಿ ಬಾತ್ ಕಾರ್ಯಕ್ರಮ ನಡೆಸುತ್ತಿದ್ದರು. ಆದರೆ ದೇಶದ ಜನರು ಮೇ 23ರಂದು ಜನರು ತಮ್ಮ ಮನದ ಮಾತು ಹೇಳಲಿದ್ದಾರೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದುಕೊಂಡಿದೆ.

    ಪ್ರಜೆಗಳು ದೀರ್ಘ ಕಾಲದವರೆಗೆ ಮೂರ್ಖರಾಗಿ ಇರುವುದಿಲ್ಲವೆಂದು ಇತಿಹಾಸ ಹೇಳುತ್ತದೆ. ಹೀಗಾಗಿ ಜನರು ಪ್ರಶ್ನೆ ಕೇಳುತ್ತಾರೆ ಹಾಗೂ ಮತದಾನದ ಮೂಲಕ ಉತ್ತರವನ್ನು ನೀಡುತ್ತಾರೆ ಎಂದು ಹೇಳಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು 2014ರ ಚುನಾವಣೆಯಲ್ಲಿ ಕಾಶ್ಮೀರ ಕಣಿವೆ ಹಾಗೂ ರಾಮ ಮಂದಿರ ನಿರ್ಮಾಣ ಮುಂದಿಟ್ಟುಕೊಂಡು ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಆದರೆ ಈ ಸಮಸ್ಯೆಗಳು 2019ರ ಲೋಕಸಭಾ ಚುನಾವಣೆ ಬಂದರೂ ಹಾಗೇ ಉಳಿದಿವೆ. ಇದಕ್ಕೆ ಉತ್ತರ ನೀಡಲು ದೇಶದ ಜನರು ಸಿದ್ಧರಾಗಿದ್ದಾರೆ ಎಂದು ಶಿವಸೇನೆ ಬರೆದುಕೊಂಡಿದೆ.

    ಲೋಕಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವಿಸ್ ಅನೇಕ ಯೋಜನೆಗಳ ಘೋಷಣೆ, ಚಾಲನೆ, ಉದ್ಘಾಟನೆಯನ್ನು ನೆರವೇರಿಸಿದರು ಎಂದು ಶಿವಸೇನೆ ಗಂಭೀರವಾಗಿ ಆರೋಪಿಸಿದೆ.

    ಲೋಕಸಭಾ ಚುನಾವಣೆ ಒಟ್ಟು 7 ಹಂತಗಳಲ್ಲಿ ಏಪ್ರಿಲ್ 11ರಿಂದ ಮೇ 19ರ ವರೆಗೆ ನಡೆಯಲಿದೆ. ಮತ ಎಣಿಕೆ ಮೇ 23ರಂದು ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv