Tag: Lok Sabha Election 2024

  • ಶಿವಮೊಗ್ಗ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಕೆ

    ಶಿವಮೊಗ್ಗ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಕೆ

    ಶಿವಮೊಗ್ಗ: ಶಿವಮೊಗ್ಗ ಲೋಕಸಭಾ (Shivamogga Lok Sabha) ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ (K.S.Eshwarappa) ‌ಇಂದು (ಶುಕ್ರವಾರ) ನಾಮಪತ್ರ ಸಲ್ಲಿಸಿದರು.

    ನಾಮಪತ್ರ ಸಲ್ಲಿಕೆಗೂ ಮೊದಲು ರಾಮಣ್ಣಶ್ರೇಷ್ಠಿ ಪಾರ್ಕ್‌ನ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಕೆ ಬಳಿಕ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಜಿಲ್ಲಾಧಿಕಾರಿ ‌ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬ ಹಿಂದಿನಿಂದಲೂ ಡಿಕೆಶಿ ಮೇಲೆ ಹಗೆತನ ಸಾಧಿಸುತ್ತಿದೆ: ಡಿ.ಕೆ.ಸುರೇಶ್‌

    ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಆರಂಭವಾದ ಮೆರವಣಿಗೆಗೆ ಈಶ್ವರಪ್ಪ ಅವರು ಪಾಂಚಜನ್ಯ ಮೊಳಗಿಸುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತದ್ರೂಪಿ ವ್ಯಕ್ತಿಯೊಬ್ಬರು ಭಾಗವಹಿಸುವ ಮೂಲಕ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದರು. ಅಲ್ಲದೇ ಮೆರವಣಿಗೆಗೆ ಜನಪದ ಕಲಾತಂಡಗಳು ಮೆರುಗು‌ ನೀಡಿದವು.

    ಮೆರವಣಿಗೆ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಈಶ್ವರಪ್ಪ ಅವರ ಭಾವಚಿತ್ರದ ಫ್ಲೆಕ್ಸ್‌ಗಳು ರಾರಾಜಿಸಿದವು. ಈಶ್ವರಪ್ಪ ಹಾಗೂ ಮೋದಿ ಪರ ಘೋಷಣೆ ಕೂಗಿದರು. ನಂತರ ಚುನಾವಣಾಧಿಕಾರಿಗೆ ಪತ್ನಿ ಹಾಗೂ ಬೆಂಬಲಿಗರ ಜೊತೆ ತೆರಳಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ನಂತರ ಮಾತನಾಡಿದ ಈಶ್ವರಪ್ಪ, ಈ ಬಾರಿ ಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ಗೆಲ್ಲುವ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್‌ ಬಂಧನ- NIA, ಪೊಲೀಸರಿಗೆ ಪರಮೇಶ್ವರ್‌ ಅಭಿನಂದನೆ

  • ಕರ್ನಾಟಕದಲ್ಲಿ ನಾಳೆಯಿಂದ ಮತದಾನ ಆರಂಭ – ಮನೆಗೆ ಬರಲಿದೆ ಮತಗಟ್ಟೆ

    ಕರ್ನಾಟಕದಲ್ಲಿ ನಾಳೆಯಿಂದ ಮತದಾನ ಆರಂಭ – ಮನೆಗೆ ಬರಲಿದೆ ಮತಗಟ್ಟೆ

    ಬೆಂಗಳೂರು: ಏ.26 ರಂದು ಮೊದಲ ಹಂತ ನಡೆಯಲಿರುವ ಲೋಕಸಭಾ ಕ್ಷೇತ್ರಗಳಲ್ಲಿ ನಾಳೆಯಿಂದ ಹಿರಿಯ ನಾಗರಿಕರ ಮತದಾನ ನಡೆಯಲಿದೆ.

    ರಾಜ್ಯದಲ್ಲಿರುವ 85 ವರ್ಷಕ್ಕಿಂತ ಮೇಲ್ಪಟ್ಟ (ಎವಿಎಸ್‍ಸಿ) ಹಾಗೂ ವಿಶೇಷ ಚೇತನರಿಗೆ (40%ಕ್ಕಿಂತ ಹೆಚ್ಚು ಅಂಗವಿಲತೆ ಉಳ್ಳ, ಮತದಾರರ ಪಟ್ಟಿಯಲ್ಲಿ ಗುರುತಿಸಿರುವವರಿಗೆ) ಅಂಚೆ ಮತದಾನದ  (Postal voting) ಮೂಲಕ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್‌ ಬಂಧನ- NIA, ಪೊಲೀಸರಿಗೆ ಪರಮೇಶ್ವರ್‌ ಅಭಿನಂದನೆ

    ಬೆಂಗಳೂರಿನಲ್ಲಿ (Bengaluru) 85 ವರ್ಷ ಮೇಲ್ಪಟ್ಟ 95,128 ಹಾಗೂ 22,222 ವಿಶೇಷ ಚೇತನರನ್ನು ಗುರುತಿಸಲಾಗಿದೆ. ಈ ಪೈಕಿ 85 ವರ್ಷ ಮೇಲ್ಪಟ್ಟ 6206 ಮತದಾರರು ಹಾಗೂ ವಿಶೇಷ ಚೇತನರು 201 ಮತದಾರರು ಅಂಚೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ.

    85 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರು ಹಾಗೂ ವಿಶೇಷ ಚೇತನರಿಗೆ ಏಪ್ರಿಲ್ 13 ರಿಂದ ಏಪ್ರಿಲ್ 18 ರವರೆಗೆ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಮತದಾರರ ಮನೆಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವಿಡಿಯೋಗ್ರಾಫರ್ ಒಳಗೊಂಡಿರುವ ಮತಗಟ್ಟೆ ತಂಡವು ಮನೆಗೆ ತೆರಳಿ ಮತದಾನ ಗುರುತಿನ ಚೀಟಿ ಪರಿಶೀಲಿಸಲಾಗುತ್ತದೆ. ಬಳಿಕ ಗೌಪ್ಯ ಮತದಾನಕ್ಕಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ವಿಡಿಯೋ ಮೂಲಕ ಸೆರೆಹಿಡಿಯಲಾಗುತ್ತದೆ.

    ಮತಗಟ್ಟೆ ಸಿಬ್ಬಂದಿಯು ಮತಪತ್ರ ಹಾಗೂ ಮತಪೆಟ್ಟಿಗೆಗಳೊಂದಿಗೆ ಪ್ರತೀ ಮತದಾರರ ಮನೆಗೆ ಎರಡು ಬಾರಿ ಭೇಟಿ ನೀಡುತ್ತಾರೆ. ಮುಂಚಿತವಾಗಿ ಮಾಹಿತಿ ನೀಡಿದ ಬಳಿಕವೇ ಮತಗಟ್ಟೆ ಸಿಬ್ಬಂದಿ ಭೇಟಿ ನೀಡುತ್ತಾರೆ. ಮೊದಲ ಬಾರಿ ಮತದಾರರು ಮನೆಯಲ್ಲಿರದಿದ್ದರೆ, ಎರಡನೇ ಬಾರಿ ಹೋಗುತ್ತಾರೆ. ಈ ವೇಳೆ ಮತದಾರರು ಸಿಗದಿದ್ದರೆ, ಬಳಿಕ ಮತದಾನಕ್ಕೆ ಅವಕಾಶವಿರುವುದಿಲ್ಲ.

    ಮನೆಯಿಂದ ಮತದಾನಕ್ಕೆ 12ಡಿ ನಮೂನೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವವರಿಗೆ ಮತಗಟ್ಟೆಗೆ ಬಂದು ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸುವ ಅವಕಾಶವಿರುವುದಿಲ್ಲ. ಇದನ್ನೂ ಓದಿ: ದೀದಿ ಆಡಳಿತದ ಬಂಗಾಳ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ: ರಾಮೇಶ್ವರಂ ಕೆಫೆ ಬಾಂಬರ್‌ ಅರೆಸ್ಟ್‌ ಬಗ್ಗೆ ಅಮಿತ್‌ ಮಾಳವಿಯ ಮಾತು

  • ಸ್ವತಂತ್ರ ಭಾರತದ 2ನೇ ಲೋಕಸಭಾ ಚುನಾವಣೆ ಬಗ್ಗೆ ನಿಮಗೆಷ್ಟು ಗೊತ್ತು?

    ಸ್ವತಂತ್ರ ಭಾರತದ 2ನೇ ಲೋಕಸಭಾ ಚುನಾವಣೆ ಬಗ್ಗೆ ನಿಮಗೆಷ್ಟು ಗೊತ್ತು?

    – ದೇಶದ ಗಮನ ಸೆಳೆದಿದ್ದ ಕರ್ನಾಟಕದ ಪಕ್ಷೇತರ ಅಭ್ಯರ್ಥಿ
    – ಸ್ವತಂತ್ರ ಅಭ್ಯರ್ಥಿಗೆ ಬಿದ್ದಿರಲಿಲ್ಲ ಒಂದೇ ಒಂದು ವೋಟ್‌!

    – ಪಬ್ಲಿಕ್‌ ಟಿವಿ ವಿಶೇಷ

    ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ನಂತರದ ಆರಂಭಿಕ ವರ್ಷಗಳಲ್ಲಿ ರಾಜಕೀಯವಾಗಿ ಕಾಂಗ್ರೆಸ್ ಪ್ರಬಲವಾಗಿತ್ತು. ಆಗ ಚುನಾವಣೆಗಳಲ್ಲೂ ದೇಶದೆಲ್ಲೆಡೆ ಕಾಂಗ್ರೆಸ್‌ನದ್ದೇ ಪಾರುಪತ್ಯ. ಹಲವು ದಶಕಗಳ ಕಾಲ ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆದ್ದು ದೇಶದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿತು. ಲೋಕಸಭಾ ಚುನಾವಣೆಯ ಇತಿಹಾಸ ಗಮನಿಸಿದರೆ ಕಾಂಗ್ರೆಸ್‌ನ ಪ್ರಾಬಲ್ಯ ಎಷ್ಟರ ಮಟ್ಟಿಗೆ ಇತ್ತು ಎಂಬುದು ತಿಳಿಯುತ್ತದೆ.

    ಸ್ವಾತಂತ್ರ್ಯ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಬಗ್ಗೆ ನೀವು ಈಗಾಗಲೇ ಓದಿದ್ದೀರಿ. ನಂತರ 1957 ರಲ್ಲಿ ಎರಡನೇ ಸಾರ್ವತ್ರಿಕ ಚುನಾವಣೆ (1957 Lok Sabha Election) ನಡೆಯಿತು. ಆ ಚುನಾವಣೆಯಲ್ಲಾದ ರಾಜಕೀಯ ಬೆಳವಣಿಗೆ ಏನು? ಫಲಿತಾಂಶ ಏನಾಗಿತ್ತು ಎಂಬುದನ್ನು ‘ಪಬ್ಲಿಕ್‌ ಟಿವಿ’ ನಿಮಗೆ ತಿಳಿಸಿಕೊಡುತ್ತದೆ. ಇದನ್ನೂ ಓದಿ: ಭಾರತದ ಮೊದಲ ಚುನಾವಣೆ 4 ತಿಂಗಳ ಕಾಲ ನಡೆದಿದ್ದು ನಿಮಗೆ ಗೊತ್ತಾ..?

    15 ಪಕ್ಷಗಳು ಸ್ಪರ್ಧೆ
    ದೇಶದ ಎರಡನೇ ಲೋಕಸಭಾ ಚುನಾವಣೆಯು 1957 ರ ಫೆ.24 ರಿಂದ ಮಾ.14 ರ ವರೆಗೆ ನಡೆದಿತ್ತು. ಸುಮಾರು 15 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 494 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಬಹುಮತಕ್ಕೆ 248 ಸೀಟ್‌ಗಳು ಬೇಕಾಗಿದ್ದವು. ಮುಖ್ಯ ಚುನಾವಣಾ ಆಯುಕ್ತ ಸುಕುಮಾರ್‌ ಸೇನ್‌ ಅವರು ಚುನಾವಣೆ ಮೇಲ್ವಿಚಾರಣೆ ಮಾಡಿದರು.

     

    ಹಕ್ಕು ಚಲಾಯಿಸಿದವರೆಷ್ಟು?
    1957 ರ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ 26,52,41,358 ಮಂದಿ ಅರ್ಹತೆ ಪಡೆದಿದ್ದರು. 18,20,75,041 ಜನರು ಮತದಾನ ಮಾಡಿದರು. ಆ ಸಂದರ್ಭದಲ್ಲಿ 68.6% ಮತ ಚಲಾವಣೆಯಾಗಿತ್ತು.

    371 ಸ್ಥಾನ ಗೆದ್ದ ಕಾಂಗ್ರೆಸ್
    1957 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಅಂತರದಿಂದ ಗೆದ್ದಿತ್ತು. 371 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಏರಿತ್ತು. ಉಳಿದಂತೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 19, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 27, ಭಾರತೀಯ ಜನ ಸಂಘ 4, ಪರಿಶಿಷ್ಟ ಜಾತಿ ಫೆಡರಲ್ 6, ಆಲ್ ಇಂಡಿಯಾ ಜನತಂತ್ರ ಪರಿಷದ್ 7, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ 2, ಹಿಂದೂ ಮಹಾಸಭಾ 1, ಪಿಡಬ್ಲ್ಯೂಪಿಐ 4, ಜಾರ್ಖಂಡ್ ಪಾರ್ಟಿ 6, ಫಾರ್ವರ್ಡ್ ಬ್ಲಾಕ್ (ಮಾರ್ಕ್ಸಿಸ್ಟ್) 2, ಸಿಎನ್‌ಎಸ್‌ಪಿಜೆಪಿ 3 ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸ್ಥಾನಗಳನ್ನು ಗೆದ್ದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ 2ನೇ ಹಂತದ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ

    ಈ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಸಲ ಭಾರಿ ಅಂತರದಿಂದ ಜಯ ಸಾಧಿಸಿತ್ತು. ಸಮಾಜವಾದಿ ಪಕ್ಷ ಮತ್ತು ಕೆಎಂಪಿಪಿಯೊಂದಿಗೆ ವಿಲೀನಗೊಂಡ ನಂತರ ಹೊಸದಾಗಿ ರೂಪುಗೊಂಡ ಪ್ರಜಾ ಸೋಷಿಯಲಿಸ್ಟ್ ಪಕ್ಷವು (ಪಿಎಸ್‌ಪಿ) 19 ಸ್ಥಾನಗಳನ್ನು ಪಡೆಯಿತು. ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾವು (ಸಿಪಿಐ) 27 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತು. ಜನಸಂಘ ಮತದಾನ ಪ್ರಮಾಣವನ್ನು ದ್ವಿಗುಣಗೊಳಿಸಿಕೊಂಡರೂ, ಪಕ್ಷವು ಹೆಚ್ಚು ಸ್ಥಾನಗಳನ್ನು ಗಳಿಸಲಿಲ್ಲ. ಅಂಬೇಡ್ಕರ್ ಅವರ ಅಖಿಲ ಭಾರತದ ಪರಿಶಿಷ್ಟ ಜಾತಿ ಒಕ್ಕೂಟ (ಎಸ್‌ಸಿಎಫ್) ಆರು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತು.

    ಮತದಾನದ ಪ್ರಮಾಣ ಎಷ್ಟಿತ್ತು?
    ಕಾಂಗ್ರೆಸ್ ಮತದಾನದ ಪ್ರಮಾಣ 47.8% ಇತ್ತು. ಉಳಿದಂತೆ ಇತರೆ 25.2%, ಪಿಎಸ್‌ಪಿ 10.4%, ಸಿಪಿಐ 8.9%, ಬಿಜೆಎಸ್ 6%, ಎಸ್‌ಸಿಎಫ್ 1.7% ಮತವನ್ನು ಪಡೆದುಕೊಂಡಿದ್ದವು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್- ಕಾಂಗ್ರೆಸ್‌ನಿಂದ ಮಿಡ್‍ನೈಟ್ ಆಪರೇಷನ್

    ನೆಹರೂ ನೇತೃತ್ವದಲ್ಲಿ ‘ಕೈ’ಗೆ ಮತ್ತೊಂದು ಗೆಲುವು
    ಜವಾಹರಲಾಲ್ ನೆಹರೂ ಅವರ ನಾಯಕತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 494 ಸ್ಥಾನಗಳಲ್ಲಿ 371 ಸ್ಥಾನಗಳನ್ನು ಪಡೆದು ಎರಡನೇ ಅವಧಿಗೆ ಅಧಿಕಾರ ಏರಿತು. ಮೊದಲ ಚುನಾವಣೆಗಿಂತ ಏಳು ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದಿತ್ತು. ಮತ ಪ್ರಮಾಣ 45% ರಿಂದ 48% ಕ್ಕೆ ಏರಿತು. ಆ ಸಂದರ್ಭದಲ್ಲಿ 2ನೇ ಅತಿ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದ್ದು ಕಮ್ಯುನಿಸ್ಟ್ ಪಕ್ಷ. ಈ ಪಕ್ಷ ಗೆದ್ದಿದ್ದು 27 ಸ್ಥಾನಗಳನ್ನು.

    ಪಕ್ಷೇತರ ಅಭ್ಯರ್ಥಿಗಳ ದಾಖಲೆ
    ಪಕ್ಷೇತರರಾಗಿ ಸ್ಪರ್ಧಿಸಿದ್ದವರ ಪೈಕಿ 42 ಅಭ್ಯರ್ಥಿಗಳು ಗೆದ್ದು ಪಾರ್ಲಿಮೆಂಟ್‌ ಪ್ರವೇಶಿಸಿದರು. 19% ವೋಟ್‌ ಶೇರ್‌ ಪಕ್ಷೇತರ ಅಭ್ಯರ್ಥಿಗಳ ಪಾಲಾಗಿತ್ತು. ಇದು ಭಾರತೀಯ ಸಾರ್ವತ್ರಿಕ ಚುನಾವಣೆಗಳಲ್ಲೇ ಅತ್ಯಧಿಕ ಎಂಬ ದಾಖಲೆ ಕೂಡ ಬರೆದಿದೆ. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ 36 ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು. ಅದು ಬಿಟ್ಟರೆ 1991 ರಲ್ಲಿ ಅತೀ ಕಡಿಮೆ ಅಂದರೆ ಒಬ್ಬರು ಸ್ವತಂತ್ರ ಅಭ್ಯರ್ಥಿ ಮಾತ್ರ ಪಾರ್ಲಿಮೆಂಟ್‌ಗೆ ಎಂಟ್ರಿ ಕೊಟ್ಟಿದ್ದರು. ಇನ್ನು 2019 ರ ಚುನಾವಣೆಯಲ್ಲಿ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು.

    ಮೈನ್‌ಪುರಿ ಅಭ್ಯರ್ಥಿಗೆ ಸೊನ್ನೆ (0) ವೋಟ್‌?
    ದೇಶದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದ್ದವು. ಮೈನ್‌ಪುರಿ ಕ್ಷೇತ್ರದ ಅಭ್ಯರ್ಥಿಯೊಬ್ಬರಿಗೆ ಆಗ ಒಬ್ಬರೇ ಒಬ್ಬ ಮತದಾರ ಕೂಡ ವೋಟು ಹಾಕಿರಲಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಂಕರ್‌ ಲಾಲ್‌ ಎಂಬವರಿಗೆ ಶೂನ್ಯ ವೋಟಿನ ಹೊಡೆತ ಬಿದ್ದಿತ್ತು. ತಮ್ಮ ಪರವಾಗಿ ತಾವೇ ಚಲಾಯಿಸಿಕೊಂಡಿದ್ದ ಒಂದೇ ಒಂದು ವೋಟ್‌ ಕೂಡ ಅಮಾನ್ಯವಾಗಿತ್ತು. ಹೀಗಾಗಿ ಸೊನ್ನೆ ವೋಟ್‌ ಪಡೆದ ಕೆಟ್ಟ ದಾಖಲೆ ಬರೆದರು. ಇದನ್ನೂ ಓದಿ: ಬಾಲಕಿಯಿಂದ ವಿನೂತನವಾಗಿ ಮತದಾನ ಜಾಗೃತಿ- ಚುನಾವಣಾ ಆಯೋಗ ಪ್ರಶಂಸೆ

    ಮೈಸೂರು ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟ್?
    ಕರ್ನಾಟಕ ಏಕೀಕರಣವಾಗಿದ್ದು 1956 ರಲ್ಲಿ. ಆದರೆ ಕರ್ನಾಟಕ ಎಂದು ನಾಮಕರಣವಾಗಿದ್ದು 1974 ರಲ್ಲಿ. ಈ ಹಿನ್ನೆಲೆಯಲ್ಲಿ 1957 ರ ಸಾರ್ವತ್ರಿಕ ಚುನಾವಣೆಯಲ್ಲೂ ಮೈಸೂರು ರಾಜ್ಯ ಎಂದೇ ಪರಿಗಣಿಸಲಾಗಿತ್ತು. ಮೈಸೂರು ರಾಜ್ಯದಲ್ಲಿ ಒಟ್ಟು 26 ಸ್ಥಾನಗಳ ಪೈಕಿ 23 ರಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಉಳಿದಂತೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 1, ಪರಿಶಿಷ್ಟ ಜಾತಿ ಫೆಡರಲ್ 1 ಹಾಗೂ ಪಕ್ಷೇತರ 1 ಸ್ಥಾನ ಬಂದಿತ್ತು.

    ದೇಶದ ಗಮನ ಸೆಳೆದಿದ್ದ ಕರ್ನಾಟಕದ ಪಕ್ಷೇತರ ಅಭ್ಯರ್ಥಿ
    1957 ರಲ್ಲಿ ಅಂದಿನ ಮೈಸೂರು-ಕರ್ನಾಟಕದ ಬಿಜಾಪುರ ಉತ್ತರ ಲೋಕಸಭಾ ಕ್ಷೇತ್ರದಿಂದ (ಈಗಿನ ವಿಜಯಪುರ) ಮರಿಗಪ್ಪ ಸಿದ್ದಪ್ಪ ಸುಗಂಧಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿ ದಾಖಲೆ ಮಾಡಿದ್ದರು.

    ಪಕ್ಷೇತರ ಹಾಗೂ ರಾಷ್ಟ್ರೀಯ ಅಭ್ಯರ್ಥಿ ಸ್ಪರ್ಧೆಯಿಂದಾಗಿ ಬಿಜಾಪುರ ಕ್ಷೇತ್ರ ಅಂದು ರಾಷ್ಟ್ರದ ಗಮನ ಸೆಳೆದಿತ್ತು. ಪಕ್ಷೇತರ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಅಭ್ಯರ್ಥಿ ಸ್ಫರ್ಧೆಯಿಂದಾಗಿ ಬಿಜಾಪುರ ಕ್ಷೇತ್ರ ಅಂದು ರಾಷ್ಟ್ರದ ಗಮನಸೆಳೆದಿತ್ತು. ಒಟ್ಟು 3,53,151 ಮತಗಳ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಮುರಿಯಪ್ಪ ಸಿದ್ದಪ್ಪ ಸುಗಂಧಿ 88,209 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರಾಜಾರಾಮ ಗಿರಿಧರಲಾಲ ದುಬೆ 77,223 ಮತಗಳನ್ನು ಪಡೆದಿದ್ದರು. ಅಂತಿಮವಾಗಿ ಪಕ್ಷೇತರ ಅಭ್ಯರ್ಥಿಯಾದ ಸುಗಂಧಿಯವರು 10,936 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಇದನ್ನೂ ಓದಿ: ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ

    ಮುರಿಯಪ್ಪ ಸಿದ್ದಪ್ಪ ಸುಗಂಧಿ, ದಿನಕರ ದತ್ತಾತ್ರೇಯ ದೇಸಾಯಿ ಹಾಗೂ ಸುಮಲತಾ ಅಂಬರೀಶ್ ಅವರು ಕರ್ನಾಟಕ ರಾಜ್ಯದ ಲೋಕಸಭಾ ಚುನಾವಣಾ ಇತಿಹಾಸದಲ್ಲಿಯೇ ಪಕ್ಷೇತರ ಅಭ್ಯರ್ಥಿಯಾಗಿ ಸಂಸದರಾದ ದಾಖಲೆ ಬರೆದಿದ್ದಾರೆ.

  • ಚುನಾವಣಾ ಕರ್ತವ್ಯಕ್ಕೆ ತಮಿಳುನಾಡಿಗೆ ತೆರಳಿದ್ದ ರಾಜ್ಯದ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ದುರ್ಮರಣ

    ಚುನಾವಣಾ ಕರ್ತವ್ಯಕ್ಕೆ ತಮಿಳುನಾಡಿಗೆ ತೆರಳಿದ್ದ ರಾಜ್ಯದ ಪೊಲೀಸ್ ಅಧಿಕಾರಿ ಅಪಘಾತದಲ್ಲಿ ದುರ್ಮರಣ

    – ಇಬ್ಬರ ಸಾವು, ಮೂವರು ಗಂಭೀರ

    ಬೆಂಗಳೂರು: ಕರ್ನಾಟಕದಿಂದ ತಮಿಳುನಾಡಿಗೆ ಚುನಾವಣಾ (Lok Sabha Election 2024) ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್ (Police) ಅಧಿಕಾರಿ ಹಾಗೂ ತಮಿಳುನಾಡಿನ ಕಾನ್ಸ್‌ಟೇಬಲ್  ಒಬ್ಬರು ಅಪಘಾತದಲ್ಲಿ  (Accident) ಮೃತಪಟ್ಟ ಘಟನೆ ತಮಿಳುನಾಡಿನ ಕಿಲ್ಪೆನ್ನತುರ್ ಎಂಬಲ್ಲಿ ನಡೆದಿದೆ.

    ಕೆಎಸ್‍ಆರ್‌ಪಿ ಅಸಿಸ್ಟೆಂಟ್ ಕಮಾಂಡೆಂಟ್ ಪ್ರಭಾಕರ್ ಹಾಗೂ ತಮಿಳುನಾಡಿನ (Tamil Nadu) ಕಾನ್ಸ್‌ಟೇಬಲ್ ದಿನೇಶ್ ಮೃತಪಟ್ಟ ಪೊಲೀಸರು ಎಂದು ತಿಳಿದು ಬಂದಿದೆ. ಪ್ರಭಾಕರ್ (KSRP Police Officer Prabhakar) ಅವರು ಜೀಪ್‍ನಲ್ಲಿ ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ತೆರಳುತ್ತಿದ್ದಾಗ ಬಸ್ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಸಕ ಪುತ್ರನ ಬೈಕ್ ಅಪಘಾತ

    ಇಬ್ಬರ ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.‌

    ಒಟ್ಟು ಐವರು ಪೊಲೀಸರು ಜೀಪ್‍ನಲ್ಲಿದ್ದರು ಎಂದು ತಿಳಿದು ಬಂದಿದೆ. ಹೇಮಂತ್ ಕುಮಾರ್ (ಡೆಪ್ಯೂಟಿ ಕಮಾಂಡರ್), ವಿಟ್ಠಲ್ ಗಡಾದರ್ (ಹೆಡ್ ಕಾನ್ಸ್‌ಟೇಬಲ್), ಜಯಕುಮಾರ್ (ಕಾನ್ಸ್‌ಟೇಬಲ್) ಗಾಯಗೊಂಡಿದ್ದು, ಮೂವರನ್ನೂ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಆರ್ಟಿಕಲ್ 370 ಸಹವಾಸ ಬೇಡ: ಕಾಂಗ್ರೆಸ್‍ಗೆ ಅಮಿತ್ ಶಾ ಎಚ್ಚರಿಕೆ

  • ಭಾರತದ ಮೊದಲ ಚುನಾವಣೆ 4 ತಿಂಗಳ ಕಾಲ ನಡೆದಿದ್ದು ನಿಮಗೆ ಗೊತ್ತಾ..?

    ಭಾರತದ ಮೊದಲ ಚುನಾವಣೆ 4 ತಿಂಗಳ ಕಾಲ ನಡೆದಿದ್ದು ನಿಮಗೆ ಗೊತ್ತಾ..?

    – 1951-52 ರಲ್ಲಿ ನಡೆದಿದ್ದ ಮೊದಲ ಲೋಕಸಭೆ ಚುನಾವಣೆ

    -ಪಬ್ಲಿಕ್ ಟಿವಿ ವಿಶೇಷ

    2024ರ ಲೋಕಸಭೆ ಚುನಾವಣೆಗೆ (Lok Sabha Election 2024) ಕ್ಷಣಗಣನೆ ಶುರುವಾಗಿದೆ. ಇನ್ನು ಮುಂದಿನ 2 ತಿಂಗಳ ಅವಧಿಯಲ್ಲಿ ನಡೆಯುವ ಚುನಾವಣೆಯಲ್ಲಿ ದೆಹಲಿ ಗದ್ದುಗೆ ಏರುವವರು ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಲಿದೆ. ಅದೆಲ್ಲಾ ಸರಿ. ಆದರೆ ಸ್ವತಂತ್ರ ಭಾರತದ ಮೊದಲ ಚುನಾವಣೆ (India’s First Lok Sabha Election) ಹೇಗಿತ್ತು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಈ ಕುತೂಹಲ ತಣಿಸುವ ಯತ್ನವನ್ನು ನಿಮ್ಮ ‘ಪಬ್ಲಿಕ್ ಟಿವಿ’ ಇಲ್ಲಿ ಮಾಡಿದೆ.

    ಭಾರತದ ಮೊದಲ ಚುನಾವಣೆ!
    ದೇಶದ ಮೊಟ್ಟ ಮೊದಲ ಚುನಾವಣೆ ಯಾವಾಗ, ಎಷ್ಟು ದಿನಗಳ ಅವಧಿಯಲ್ಲಿ ನಡೆಯಿತು ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅಂದಿನ ಚುನಾವಣೆಯಲ್ಲಿ ಗೆದ್ದವರು ಯಾರು ಎಂಬೆಲ್ಲಾ ವಿವರಗಳು ಇಲ್ಲಿವೆ. ಇದನ್ನೂ ಓದಿ: ನಮ್ಮ ಬಲಿಷ್ಠ ಸರ್ಕಾರದ ಅವಧಿಯಲ್ಲಿ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ: ಮೋದಿ

    120 ದಿನಗಳ ಸುದೀರ್ಘ ಅವಧಿಯಲ್ಲಿ ಚುನಾವಣೆ!
    ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ 1951-1952ರಲ್ಲಿ ನಡೆಯಿತು. 1951ರ ಅಕ್ಟೋಬರ್ 25ರಿಂದ 1952ರ ಫೆಬ್ರವರಿ 21ರ ನಡುವೆ 120 ದಿನ ಅಂದ್ರೆ 4 ತಿಂಗಳ ಕಾಲ ಲೋಕಸಭೆ ಚುನಾವಣೆ ನಡೆಯಿತು. ವಿಶ್ವದ ಜನಸಂಖ್ಯೆಯ 6ನೇ ಒಂದು ಭಾಗದಷ್ಟು ಜನರು ಮತ ಚಲಾವಣೆಗೆ ಹೊರಟಿದ್ದು, ವಿಶ್ವದ ಅತಿ ದೊಡ್ಡ ಚುನಾವಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

     

    1874 ಅಭ್ಯರ್ಥಿಗಳು & 53 ಪಕ್ಷಗಳು!
    ದೇಶದ ಮೊದಲ ಚುನಾವಣೆಯಲ್ಲಿ 53 ಪಕ್ಷಗಳಿಂದ ಒಟ್ಟು 1874 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 53 ರಾಜಕೀಯ ಪಕ್ಷಗಳಲ್ಲಿ 14 ಪಕ್ಷಗಳು ರಾಷ್ಟ್ರೀಯ ಪಕ್ಷ ಎಂಬ ಮಾನ್ಯತೆ ಪಡೆದಿದ್ದವು. ಕಾಂಗ್ರೆಸ್ (Congress), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI), ಸೋಷಲಿಸ್ಟ್ ಪಾರ್ಟಿ, ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ, ಅಖಿಲ ಭಾರತೀಯ ಹಿಂದೂ ಮಹಾಸಭಾ ಮುಂತಾದ ಪಕ್ಷಗಳು ರಾಷ್ಟ್ರಮಟ್ಟದ ಪಕ್ಷಗಳೆಂದು ಮಾನ್ಯತೆ ಪಡೆದಿದ್ದವು.

    ಮೊದಲ ಲೋಕಸಭೆಯಲ್ಲಿತ್ತು 489 ಸೀಟು
    ಭಾರತ ದೇಶದ ಮೊದಲ ಲೋಕಸಭೆಯಲ್ಲಿ ಒಟ್ಟು 489 ಕ್ಷೇತ್ರಗಳಿದ್ದವು. 489 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 364 ಸೀಟುಗಳನ್ನು ಗೆದ್ದು ಭರ್ಜರಿ ಬಹುಮತ ಗಳಿಸಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡಾ 45ರಷ್ಟು ವೋಟ್ ಷೇರು ಪಡೆದಿತ್ತು. ಸಿಪಿಐ ಪಕ್ಷ 16 ಸೀಟುಗಳನ್ನು ಗೆದ್ದು ಪ್ರಮುಖ ವಿಪಕ್ಷವಾಗಿತ್ತು. ಜಯಪ್ರಕಾಶ್ ನಾರಾಯಣ್ ಹಾಗೂ ರಾಮ್ ಮನೋಹರ್ ಲೋಹಿಯಾ ನಾಯಕತ್ವದ ಸೋಷಲಿಸ್ಟ್ ಪಾರ್ಟಿ 12 ಸೀಟು ಗೆದ್ದು 3ನೇ ಸ್ಥಾನ ಪಡೆಯಿತು. ಇದನ್ನೂ ಓದಿ: ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ

    ನೆಹರೂ ಭಾರತದ ಮೊದಲ ಪ್ರಧಾನಿ
    364 ಸೀಟು ಗೆದ್ದ ಜವಾಹರ್ ಲಾಲ್ ನೆಹರೂ (Jawaharlal Nehru) ಸ್ವತಂತ್ರ ಭಾರತದಲ್ಲಿ ಜನರಿಂದ ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಖ್ಯಾತಿಗೆ ಪಾತ್ರರಾದರು.

    1947ರ ಆಗಸ್ಟ್ 15ರಂದೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ದೇಶದ ಮೊದಲ ಚುನಾವಣೆ 1951ರಲ್ಲಿ ನಡೆಯಿತು. 1947ರಿಂದ 6ನೇ ಕಿಂಗ್ ಜಾರ್ಜ್ ಆಡಳಿತದಲ್ಲಿ ಲೂಯಿಸ್ ಮೌಂಟ್ ಬ್ಯಾಟನ್ ಭಾರತದ ಮೊತ್ತಮೊದಲ ಗವರ್ನರ್ ಜನರಲ್ ಆಗಿ ಅಧಿಕಾರ ಚಲಾಯಿಸುತ್ತಿದ್ದರು. 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿದ ಬಳಿಕ, ಜವಾಹರ್ ಲಾಲ್ ನೆಹರೂ ನೇತೃತ್ವದ ಸಂವಿಧಾನ ಸಭೆಯು ಮೊದಲ ಚುನಾಯಿತ ಸರ್ಕಾರ ಅಧಿಕಾರ ಸ್ವೀಕರಿಸುವ ಮುನ್ನ ಸಂಸತ್ತಿನಂತೆ ಕಾರ್ಯನಿರ್ವಹಿಸುತ್ತಿತ್ತು. ನೆಹರೂ ಅವರ ಈ ಮಧ್ಯಂತರ ಕ್ಯಾಬಿನೆಟ್‌ನಲ್ಲಿ ವಿವಿಧ ಸಮುದಾಯಗಳು ಮತ್ತು ಪಕ್ಷಗಳ 15 ಸದಸ್ಯರಿದ್ದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಆರ್ಟಿಕಲ್ 370 ಸಹವಾಸ ಬೇಡ: ಕಾಂಗ್ರೆಸ್‍ಗೆ ಅಮಿತ್ ಶಾ ಎಚ್ಚರಿಕೆ

    1948ರ ಜುಲೈನಲ್ಲೇ ಚುನಾವಣೆ ನಡೆಸಲು ರಾಷ್ಟ್ರಮಟ್ಟದ ನಾಯಕರು ಸಿದ್ಧರಿದ್ದರೂ ಚುನಾವಣೆ ನಡೆಸುವುದು ಹೇಗೆ ಎಂಬ ಕಾನೂನು ಅಂದು ರೂಪುಗೊಂಡಿರಲಿಲ್ಲ. ಅಂಬೇಡ್ಕರ್ ಅವರ ನೇತೃತ್ವದಲ್ಲಿ 1950ರ ಜನವರಿ 26ರಂದು ಭಾರತದಲ್ಲಿ ಸಂವಿಧಾನ ಜಾರಿಗೆ ಬಂತು.

    ಸುಕುಮಾರ್ ಸೇನ್ ಭಾರತದ ಮೊದಲ ಚುನಾವಣಾ ಆಯುಕ್ತ
    ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಬಳಿಕ ದೇಶದಲ್ಲಿ ಚುನಾವಣಾ ಆಯೋಗ ರಚನೆಯಾಯಿತು. ದೇಶದಲ್ಲಿ ಮೊದಲ ಚುನಾವಣೆ ನಡೆಸುವ ಮಹತ್ವದ ಜವಾಬ್ದಾರಿ ಸುಕುಮಾರ್ ಸೇನ್ ಅವರ ಮೇಲೆ ಬಿತ್ತು. ಸುಕುಮಾರ್ ಸೇನ್ ಅವರೇ ದೇಶದ ಮೊಟ್ಟಮೊದಲ ಚುನಾವಣಾ ಆಯುಕ್ತರಾಗಿದ್ದರು.

    ಚುನಾವಣೆಗೆ ಸಿದ್ಧವಾಗಲು ಬೇಕಾಯಿತು 3 ವರ್ಷ
    ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಚುನಾವಣೆ ನಡೆಸಬೇಕು ಎನ್ನುವುದು ಜವಾಹರ್ ಲಾಲ್ ನೆಹರೂ ಅವರ ಉದ್ದೇಶವಾಗಿತ್ತು. ಪ್ರಜಾಪ್ರಭುತ್ವದ ಸವಿಯುಣ್ಣಲು ಭಾರತ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಮೂರು ವರ್ಷಗಳ ಕಾಲ ಕಾಯಬೇಕಾಯಿತು. ಆದರೆ ಭಾರತದಂತಹ ದೇಶದಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ರೀತಿಯಲ್ಲಿ ದೊಡ್ಡ ಮಟ್ಟದ ಚುನಾವಣೆ ನಡೆಸುವುದು ಅಂದುಕೊಂಡಷ್ಟು ಸರಳವಾಗಿರಲಿಲ್ಲ. ಹೀಗಾಗಿ ಸಂವಿಧಾನ ಜಾರಿಗೆ ಬಂದರೂ ದೇಶ ಮೊದಲ ಚುನಾವಣೆ ನೋಡಲು 3 ವರ್ಷ ಕಾಯಬೇಕಾಯಿತು. ಇದನ್ನೂ ಓದಿ: ನಮ್ಮ ಬಲಿಷ್ಠ ಸರ್ಕಾರದ ಅವಧಿಯಲ್ಲಿ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ: ಮೋದಿ

    ಸವಾಲುಗಳೇ ಅಧಿಕ
    ದೇಶದಲ್ಲಿ ಮೊದಲ ಲೋಕಸಭೆ ಚುನಾವಣೆ ನಡೆಯುವ ವೇಳೆ ಭಾರತದ ಜನಸಂಖ್ಯೆ 36 ಕೋಟಿ ಇತ್ತು. ಸಂವಿಧಾನವನ್ನು ಜಾರಿಗೊಳಿಸಿದಾಗ ಸಾರ್ವತ್ರಿಕ ಮತದಾನದ ವಯಸ್ಸನ್ನು 21 ಎಂದು ನಿಗದಿಗೊಳಿಸಿತು. ಇದರ ಫಲವಾಗಿ ದೇಶದ 17 ಕೋಟಿ ಜನರು ಮತದಾನ ಮಾಡಲು ಅರ್ಹತೆ ಪಡೆದರು.

    ಅದರಲ್ಲೂ, ಅರ್ಹ 17 ಕೋಟಿ ಜನರಲ್ಲಿ ಶೇ.85ರಷ್ಟು ಜನರಿಗೆ ಓದಲು ಅಥವಾ ಬರೆಯಲು ಬರುತ್ತಿರಲಿಲ್ಲ. ಹಾಗಾಗಿ ಮತದಾರರ ಗುರುತಿಸುವಿಕೆ, ಹೆಸರು ಸೇರಿಸುವುದು ಮತ್ತು ಮತದಾರನಾಗಿ ನೋಂದಣಿ ಮಾಡಿಸುವುದು ಸವಾಲಿನ ಕೆಲಸವೇ ಆಗಿತ್ತು.

    ಜನಗಣತಿ ಆಧಾರದಲ್ಲಿ ಕ್ಷೇತ್ರ ವಿಂಗಡಣೆ
    ದೇಶದ ಜನಗಣತಿ ಆಧಾರದಲ್ಲಿ ಲೋಕಸಭಾ ಕ್ಷೇತ್ರವನ್ನು ವಿಂಗಡಿಸಬೇಕಾಗಿತ್ತು. ಈ ವಿಂಗಡಣೆಯನ್ನು 1951ರಲ್ಲಿ ಮಾಡಲಾಯಿತು. ದೇಶದ ಅನಕ್ಷರಸ್ಥ ಜನರಿಗೆ ಅರ್ಥ ಮಾಡಿಸಲು ಪಕ್ಷಗಳ ಚಿಹ್ನೆ, ಬ್ಯಾಲಟ್ ಪೇಪರ್ ಹಾಗೂ ಬ್ಯಾಲಟ್ ಬಾಕ್ಸ್ ಅಥವಾ ಮತ ಪೆಟ್ಟಿಗೆ ವಿನ್ಯಾಸಗೊಳಿಸಬೇಕಾದ ಸಮಸ್ಯೆಗಳು ಇದ್ದವು. ಮತದಾನಕ್ಕಾಗಿ ಮತಗಟ್ಟೆ ನಿರ್ಮಾಣ ಮಾಡಬೇಕಿತ್ತು. ದಕ್ಷ ಅಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ಚುನಾವಣಾ ತರಬೇತಿ ನೀಡಬೇಕಿತ್ತು.

    ಆಹಾರದ ಕೊರತೆಯೂ ಇತ್ತು!
    ಮತದಾನದ ಈ ಎಲ್ಲ ಸವಾಲುಗಳ ನಡುವೆ ಅಂದು ಭಾರತದ ಹಲವು ರಾಜ್ಯಗಳಲ್ಲಿ ಆಹಾರದ ಕೊರತೆ ಇತ್ತು. ಹಾಗಾಗಿ ಅಧಿಕಾರಿಗಳು ಪರಿಹಾರ ಕಾರ್ಯದಲ್ಲೂ ಭಾಗಿಯಾಗಬೇಕಿತ್ತು. ಈ ಎಲ್ಲ ಕೆಲಸಗಳು ಮುಗಿಯಲು ಭಾರೀ ಸಮಯ ಬೇಕಾಯಿತು. ಆದರೆ ಕೊನೆಯಲ್ಲಿ ಭಾರತದ ಚುನಾವಣೆ ನಡೆದಾಗ ಶೇ.45.70ರಷ್ಟು ಜನರು ತಮ್ಮ ಮನೆಯಿಂದ ಹೊರಬಂದು ಅದೇ ಮೊದಲ ಬಾರಿಗೆ ಮತ ಚಲಾಯಿಸಿದರು. ಈ ಮೂಲಕ ಭಾರತ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಆಯ್ಕೆಯಾದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಯಿತು. ಮೊದಲ ಚುನಾವಣೆಯ ಫಲಿತಾಂಶ 1952ರ ಫೆಬ್ರವರಿ 10ರಂದು ಪ್ರಕಟವಾಯಿತು.

  • ಈಶ್ವರಪ್ಪ ಅಂದ್ರೆ ಯಾರು? ಆ ಹೆಸರಿನವ್ರು ಯಾರೂ ಗೊತ್ತಿಲ್ಲ: ರಾಧಾಮೋಹನ್ ದಾಸ್ ವ್ಯಂಗ್ಯ

    ಈಶ್ವರಪ್ಪ ಅಂದ್ರೆ ಯಾರು? ಆ ಹೆಸರಿನವ್ರು ಯಾರೂ ಗೊತ್ತಿಲ್ಲ: ರಾಧಾಮೋಹನ್ ದಾಸ್ ವ್ಯಂಗ್ಯ

    ಬೀದರ್: ಈಶ್ವರಪ್ಪ (K.S Eshwarappa) ಅಂದ್ರೆ ಯಾರು? ಅಂತಹ ಹೆಸರಿನ ಯಾವ ವ್ಯಕ್ತಿಯೂ ನನಗೆ ಗೊತ್ತಿಲ್ಲ ಎಂದು ಬಿಜೆಪಿ (BJP) ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ (Radha Mohan Das Agarwal) ವ್ಯಂಗ್ಯವಾಡಿದ್ದಾರೆ.

    ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಈಶ್ವರಪ್ಪ ಮನವೊಲಿಸುತ್ತೀರಾ ಎಂಬ ಪ್ರಶ್ನೆಗೆ, ಆ ಹೆಸರಿನ ವ್ಯಕ್ತಿ ನನಗೆ ಗೊತ್ತೇ ಇಲ್ಲ. ಅವರು ಯಾರು ಎಂದು ಲೇವಡಿ ಮಾಡಿದ್ದಾರೆ. ಮೋದಿ ಫೋಟೋ ಬಳಸುತ್ತಿರುವ ವಿಚಾರಕ್ಕೆ, ಈ ಸೌಭಾಗ್ಯ ಎಲ್ಲಿ ಬರುತ್ತದೆ. ಕಾಂಗ್ರೆಸ್‍ನವರೇ ಮೋದಿ ಫೋಟೋ ಹಾಕ್ತಿದ್ದಾರೆ. ಎಡಿಎಂಕೆ, ಡಿಎಂಕೆ ಎಲ್ಲಾ ಪಕ್ಷದವರು ಮೋದಿ (Narendra Modi) ಫೋಟೋ ಬಳಸುತ್ತಿದ್ದಾರೆ. ಇದು ಒಳ್ಳೆಯ ಸಂಗತಿ ಎಂದಿದ್ದಾರೆ. ಇದನ್ನೂ ಓದಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು

    ಪ್ರಭು ಚೌಹಾಣ್ ಚುನಾವಣೆಗಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ಜೊತೆಗಿದ್ದಾರೆ. ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದು, ಶೀಘ್ರವೇ ಅವರು ಗುಣಮುಖರಾಗಿ ಬರಲಿ. ನಾವೇ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ ಎಂದರು.

    ಬೀದರ್‌ನಲ್ಲಿ ಬಿಜೆಪಿ ಗೆಲ್ಲಲಿದೆ. ಈ ಮೂಲಕ ಮೋದಿಯವರಿಗೆ ಜನ ಮತ್ತೊಮ್ಮೆ ಅವಕಾಶ ನೀಡಲಿದ್ದಾರೆ. ಇಲ್ಲಿ ಕಾಂಗ್ರೆಸ್ (Congress) ಠೇವಣಿ ಕಳೆದುಕೊಳ್ಳಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ

  • ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು

    ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು

    ಬೆಂಗಳೂರು: ಜಾತಿ ಹೆಸರೇಳಿ ಮತದಾರರ ಮೇಲೆ ಪ್ರಭಾವ ಹಾಗೂ ದುರ್ಬಳಕೆ ಆರೋಪ ಹೊರಿಸಿ ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ವಿರುದ್ಧ ಚುನಾವಣಾಧಿಕಾರಿಗಳಿಗೆ ಬಿಜೆಪಿ (BJP) ದೂರು ನೀಡಿದೆ.

    ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ (Ashwath Narayan) ನೇತೃತ್ವದಲ್ಲಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ಇದೇ ವೇಳೆ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಹಂಚಿಕೆಯ ಬಗ್ಗೆಯೂ ದೂರು ನೀಡಲಾಗಿದೆ. ಇದನ್ನೂ ಓದಿ: ಮೈತ್ರಿ ಒಕ್ಕಲಿಗ ನಾಯಕರ ಶಕ್ತಿಪ್ರದರ್ಶನ- ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ ದೋಸ್ತಿ ನಾಯಕರು!

    ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡಿದ್ದರು. ಮೈತ್ರಿ ನಾಯಕರ ಭೇಟಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಒಕ್ಕಲಿಗ ಸ್ವಾಮೀಜಿ ದಡ್ಡರಲ್ಲ- ಮೈತ್ರಿ ನಾಯಕರು ನಿರ್ಮಲಾನಂದ ಶ್ರೀಗಳ ಭೇಟಿಗೆ ಡಿಕೆಶಿ ಆಕ್ಷೇಪ

    ಒಕ್ಕಲಿಗರ ಸರ್ಕಾರವನ್ನು ಬಿಜೆಪಿಯವರೇ ಬೀಳಿಸಿದ್ದು, ಅದನ್ನು ಕೇಳುವ ಶಕ್ತಿ ಸ್ವಾಮೀಜಿ ಅವರಿಗೆ ಇದೆಯೋ ಇಲ್ವೊ ನನಗೆ ಗೊತ್ತಿಲ್ಲ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಡಿಸಿಎಂ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ. ಇದನ್ನೂ ಓದಿ: ಶ್ರೀಗಳ ಬಗ್ಗೆ ಮಾತಾಡೋಕೆ ಡಿಕೆಶಿಗೆ ನೈತಿಕತೆ ಇಲ್ಲ: ಅಶೋಕ್ ವಾಗ್ದಾಳಿ

  • ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ

    ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ

    ಚಂಡೀಗಢ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ (Indira Gandhi) ಹಂತಕನ ಪುತ್ರನೊಬ್ಬ ಪಂಜಾಬ್‌ನ (Punjab) ಸಂಸತ್ ಚುನಾವಣೆಯಲ್ಲಿ ಫರೀದ್‌ಕೋಟ್ (ಮೀಸಲು) ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

    12ನೇ ತರಗತಿಯಲ್ಲಿ ಡ್ರಾಪ್ಔಟ್ ಆಗಿದ್ದ ಸರಬ್ಜಿತ್ ಸಿಂಗ್ ಖಾಲ್ಸಾ (45) ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದ್ದಾರೆ. ಇವರು ದಿವಂಗತ ಪ್ರಧಾನಿಯ ಇಬ್ಬರು ಹಂತಕರಲ್ಲಿ ಒಬ್ಬನಾದ ಬಿಯಾಂತ್ ಸಿಂಗ್ (Beant Singh) ಮಗ. ಇದನ್ನೂ ಓದಿ: ನಕ್ಸಲ್ ಪೀಡಿತ ಭಾಗಗಳಲ್ಲಿ ಮೊದಲ ಬಾರಿಗೆ ಚುನಾವಣೆ ಸಿದ್ಧತೆ – 12 ಮಾವೋವಾದಿಗಳು ಶರಣು

    2014 ಮತ್ತು 2009 ರಲ್ಲಿ ಸರಬ್ಜಿತ್ ಸಿಂಗ್ ಖಾಲ್ಸಾ (Sarabjit Singh Khalsa) ಅವರು ಅನುಕ್ರಮವಾಗಿ ಫತೇಘರ್ ಸಾಹಿಬ್ (ಮೀಸಲು) ಮತ್ತು ಬಟಿಂಡಾ ಕ್ಷೇತ್ರಗಳಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. 2019 ರಲ್ಲಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿದ್ದರು.

    2014ರಲ್ಲಿ ಸರಬ್ಜಿತ್, ಚುನಾವಣಾ ಅಫಿಡವಿಟ್‌ನಲ್ಲಿ 3.5 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಅವರ ತಾಯಿ ಬಿಮಲ್ ಕೌರ್ (ರೋಪರ್ ಕ್ಷೇತ್ರ) ಮತ್ತು ಅವರ ಅಜ್ಜ ಸುಚಾ ಸಿಂಗ್ (ಬಟಿಂಡಾ ಕ್ಷೇತ್ರ) 1989 ರಲ್ಲಿ ಸಂಸದರಾಗಿದ್ದರು. ಇದನ್ನೂ ಓದಿ: ರಕ್ತ ಚೆಲ್ಲಲು ಸಿದ್ಧ.. ದೇಶದಲ್ಲಿ ಸಿಎಎ, ಎನ್‌ಆರ್‌ಸಿ, ಯುಸಿಸಿ ಜಾರಿ ಒಪ್ಪಲ್ಲ: ಮಮತಾ ಬ್ಯಾನರ್ಜಿ

    1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರ ನಿವಾಸದಲ್ಲಿ ಅಂಗರಕ್ಷಕರಾಗಿದ್ದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್, ಪ್ರಧಾನಿಯನ್ನು ಗುಂಡಿಕ್ಕಿ ಕೊಂದಿದ್ದರು.

  • ನಕ್ಸಲ್ ಪೀಡಿತ ಭಾಗಗಳಲ್ಲಿ ಮೊದಲ ಬಾರಿಗೆ ಚುನಾವಣೆ ಸಿದ್ಧತೆ – 12 ಮಾವೋವಾದಿಗಳು ಶರಣು

    ನಕ್ಸಲ್ ಪೀಡಿತ ಭಾಗಗಳಲ್ಲಿ ಮೊದಲ ಬಾರಿಗೆ ಚುನಾವಣೆ ಸಿದ್ಧತೆ – 12 ಮಾವೋವಾದಿಗಳು ಶರಣು

    ರಾಂಚಿ: ಜಾರ್ಖಂಡ್‌ನಲ್ಲಿ ನಕ್ಸಲ್ (Maoists) ಪೀಡಿತ ಭಾಗಗಳಲ್ಲಿ ಮೊದಲ ಬಾರಿ ಚುನಾವಣೆ (Lok Sabha Election 2024) ನಡೆಸಲು ಸಿದ್ಧತೆ ನಡೆದಿದ್ದು, ಚುನಾವಣೆಗೆ ಯಾವುದೇ ತೊಂದರೆಯಾಗದಂತೆ ನಕ್ಸಲರ ವಿರುದ್ಧ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇದರ ಪರಿಣಾಮ ರಾಜ್ಯದ ಪಶ್ಚಿಮ ಸಿಂಗ್‍ಭೂಮ್ (West Singhbhum) ಜಿಲ್ಲೆಯಲ್ಲಿ 12 ಮಾವೋವಾದಿಗಳು ಭದ್ರತಾ ಸಿಬ್ಬಂದಿಯ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶರಣಾದ ಮಾವೋವಾದಿ ನಾಯಕ ಮಿಸಿರ್ ಬೆಸ್ರಾನ ತಲೆಯ ಮೇಲೆ 1 ಕೋಟಿ ರೂ. ಬಹುಮಾನವನ್ನು ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾವೋವಾದಿಗಳು ಏಷ್ಯಾದ ಅತಿದೊಡ್ಡ ಸಾಲ್ ಅರಣ್ಯ ಪ್ರದೇಶವಾದ ಸರಂದಾ ಮತ್ತು ಕೊಲ್ಹಾನ್‍ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಪಶ್ಚಿಮ ಸಿಂಗ್‍ಭೂಮ್‍ನ್ನು ದೇಶದ ಅತ್ಯಂತ ಎಡಪಂಥೀಯ ಉಗ್ರಗಾಮಿ ಪೀಡಿತ ಜಿಲ್ಲೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು 46 ಮಾವೋವಾದಿ ಸಂಬಂಧಿತ ಘಟನೆಗಳಿಗೆ ಸಾಕ್ಷಿಯಾಗಿದೆ. ಕಳೆದ ವರ್ಷ ಮಾವೋವಾದಿಗಳ ದಾಳಿಯಿಂದ 22 ಸಾವುಗಳು ಸಂಭವಿಸಿದ್ದವು.

    ಮೇ 13 ರಂದು ಜಾಖರ್ಂಡ್‍ನ ಸಿಂಗ್‍ಭೂಮ್ ಲೋಕಸಭಾ ಕ್ಷೇತ್ರದ ನಕ್ಸಲ್ ಪೀಡಿತ ಸ್ಥಳಗಳಲ್ಲಿ ಮೊದಲ ಬಾರಿಗೆ ಮತದಾನಕ್ಕೆ ಸಿದ್ಧತೆ ನಡೆಸಲಾಗಿದೆ. ಈ ಭಾಗಗಳಿಗೆ ಚುನಾವಣಾ ಪರಕರಗಳು ಹಾಗೂ ಸಿಬ್ಬಂದಿಯನ್ನು ಸೇನಾ ಹೆಲಿಕಾಪ್ಟರ್ ಬಳಸಿ ಏರ್ ಲಿಫ್ಟ್ ಮಾಡುವ ಯೋಜನೆ ರೂಪಿಸಲಾಗಿದೆ.

  • ಎಲ್ಲಾ ಸೇರಿ ಮತದಾನದ ಹಬ್ಬ ಆಚರಿಸೋಣ: ತುಷಾರ್ ಗಿರಿನಾಥ್

    ಎಲ್ಲಾ ಸೇರಿ ಮತದಾನದ ಹಬ್ಬ ಆಚರಿಸೋಣ: ತುಷಾರ್ ಗಿರಿನಾಥ್

    – ಮತದಾನ ಜಾಗೃತಿಗೆ ಸೈಕಲ್ ಜಾಥಾ

    ಬೆಂಗಳೂರು: ಏ.26 ರಂದು ನಡೆಯುವ ಮತದಾನದ ಹಬ್ಬವನ್ನು ಎಲ್ಲರೂ ಸೇರಿ ಒಟ್ಟಾಗಿ ಆಚರಿಸೋಣ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಕರೆಕೊಟ್ಟಿದ್ದಾರೆ.

    ನಗರದಲ್ಲಿ, ಲೋಕಸಭಾ ಚುನಾವಣೆಯ ( Lok Sabha Election 2024) ಅಂಗವಾಗಿ ಚುನಾವಣಾ ಆಯೋಗ (Election Commission), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗ ಗುರುವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿಯ (Voting Awareness) ಸೈಕಲ್ ಜಾಥಾ (ಸೈಕ್ಲೋಥಾನ್)ಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ದಕ್ಷಿಣ ಕರ್ನಾಟಕದಲ್ಲಿ ಏಪ್ರಿಲ್ 26 ರಂದು ಹಾಗೂ ಉತ್ತರ ಕರ್ನಾಟಕದಲ್ಲಿ ಮೇ.7 ರಂದು ಮತದಾನ ನಡೆಯುತ್ತಿದೆ. ಮತ ಚಲಾಯಿಸಲು ಅರ್ಹರಿರುವ ಎಲ್ಲರೂ ತಪ್ಪದೆ ಮತ ಚಲಾಯಿಸೋಣ ಎಂದರು. ಇದನ್ನೂ ಓದಿ: ಸ್ವಾಮೀಜಿ ಕಾರ್ಯಕ್ರಮಕ್ಕೆ ಹೆಚ್‍ಡಿಕೆ ಹೋಗಿ ಬರೋದ್ರೊಳಗೆ ಆಪರೇಷನ್ ಮುಗಿದು ಹೋಗಿತ್ತು: ಡಿಕೆಶಿ

    ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಾಗೂ ಜಾಥಾಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಮತದಾರರು ಸಹಕರಿಸಬೇಕು ಎಂದು ಕೇಳಿಕೊಂಡರು.

    ಸೈಕ್ಲಥಾನ್ ಸಾಗಿದ ಹಾದಿ
    ವಿಧಾನ ಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗದಿಂದ, ಕೆ.ಆರ್ ವೃತ್ತದ ನೃಪತುಂಗ ರಸ್ತೆಯ ಮೂಲಕ ಸಾಗಿ, ಹಡ್ಸ್‍ನ್ ವೃತ್ತ, ಕಸ್ತೂರ್ ಬಾ ರಸ್ತೆ, ಕ್ವೀನ್ಸ್ ರಸ್ತೆ (ಚಿನ್ನಸ್ವಾಮಿ ಕ್ರೀಡಾಂಗಣ)ದಿಂದ, ಡಾ. ಬಿ.ಆರ್ ಅಂಬೇಡ್ಕರ್ ರಸ್ತೆಯ ಮೂಲಕ ವಿಧಾನಸೌಧ ಪೂರ್ವ ದ್ವಾರದ ಬಳಿ ಸೈಕ್ಲೋಥಾನ್ ಮುಕ್ತಾಯಗೊಂಡಿತು.

    ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ಚುನಾವಣಾ ರಾಯಭಾರಿಗಳಾದ ಅನುಪ್ ಶ್ರೀಧರ್, ನೀತು ವನಜಾಕ್ಷಿ, ಸೈಕ್ಲಿಸ್ಟ್‍ಗಳಲ್ಲಿ ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ನಾಗರೀಕರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು. ಇದನ್ನೂ ಓದಿ: ಎರಡು ಬಾರಿ ಸಂಸತ್‌ಗೆ ಹೋಗಲು ಯತ್ನಿಸಿ ವಿಫಲರಾದ ಸಿದ್ದರಾಮಯ್ಯ!