Tag: Lok Sabha Election 2024

  • 70 ವರ್ಷ ಮೇಲ್ಪಟ್ಟ ಎಲ್ಲರೂ ಆಯುಷ್ಮಾನ್‌ ಭಾರತ್‌ ವ್ಯಾಪ್ತಿಗೆ ಸೇರ್ಪಡೆ – ಬಿಜೆಪಿ ಭರವಸೆಗಳೇನು?

    70 ವರ್ಷ ಮೇಲ್ಪಟ್ಟ ಎಲ್ಲರೂ ಆಯುಷ್ಮಾನ್‌ ಭಾರತ್‌ ವ್ಯಾಪ್ತಿಗೆ ಸೇರ್ಪಡೆ – ಬಿಜೆಪಿ ಭರವಸೆಗಳೇನು?

    – 3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’
    – ಪ್ರಧಾನಮಂತ್ರಿ ಸೂರ್ಯ ಘರ್‌ ಯೋಜನೆಯಡಿ ಉಚಿತ ವಿದ್ಯುತ್‌
    – ವಿಶ್ವಾದ್ಯಂತ ರಾಮಾಯಣ ಉತ್ಸವ ಆಚರಣೆ

    ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election 2024) ಬಿಜೆಪಿ ತನ್ನ ಬಹುನಿರೀಕ್ಷಿತ ಪ್ರಣಾಳಿಕೆಯನ್ನು (BJP Manifesto) ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ (Narendra Modi) ಅವರು ಬಡವರು, ಮಹಿಳೆಯರು, ರೈತರು, ಮಹಿಳೆಯರ ಅಭಿವೃದ್ಧಿ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.

    3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’
    70 ವರ್ಷ ಮೇಲ್ಪಟ್ಟ ಎಲ್ಲರನ್ನೂ ಹಾಗೂ ತೃತೀಯಲಿಂಗಿಗಳನ್ನು ಆಯುಷ್ಮಾನ್ ಭಾರತ್‌ ವ್ಯಾಪ್ತಿಗೆ ಸೇರ್ಪಡೆ ಮಾಡುವ ಭರವಸೆಯನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಆ ಮೂಲಕ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ಸೌಲಭ್ಯ ಒದಗಿಸಲಾಗುವುದು. ಅಲ್ಲದೇ, 3 ಕೋಟಿ ಮನೆ ನಿರ್ಮಾಣ, ಪೈಪ್ ಮೂಲಕ ಮನೆಗೆ ಅಡುಗೆ ಅನಿಲ, 3 ಕೋಟಿ ಗ್ರಾಮೀಣ ಮಹಿಳೆಯರು ‘ಲಖ್ ಪತಿ ದೀದಿ’ ಯೋಜನೆ ಫಲಾನುಭವಿಗಳಾಗಲಿದ್ದಾರೆಂಬ ಭರವಸೆಯನ್ನು ಪ್ರಣಾಳಿಕೆ ನೀಡಿದೆ. ಇದನ್ನೂ ಓದಿ: ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಗರ್ಭಕಂಠ ಕ್ಯಾನ್ಸರ್ ತಡೆಗೆ ವಿಶೇಷ ಯೋಜನೆ, ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ತಡೆಯಲು ಕಠಿಣ ಕಾನೂನು, ಹಿರಿಯ ನಾಗರಿಕರಿಗೆ ಜ್ಞಾನ ಹಂಚಿಕೆ ಪೋರ್ಟಲ್ ಹಾಗೂ ಬಡವರಿಗೆ ಉಚಿತ ಪಡಿತರ, ನೀರು ಮತ್ತು ಗ್ಯಾಸ್ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದೆ.

    ಕಾಲಕ್ಕೆ ತಕ್ಕಂತೆ ಎಂಎಸ್‌ಪಿ ಜಾರಿ
    ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು, ಅಂಚೆ‌ ಮತ್ತು ಡಿಜಿಟಲ್‌ ನೆಟ್ವರ್ಕ್ ಸಹಯೋಗ, ಹಿರಿಯ ನಾಗರಿಕರಿಗೆ ಯುಪಿಐ ಬಗ್ಗೆ ತರಬೇತಿ – ಮೋಸ ವಂಚನೆಗಳಿಂದ ತಪ್ಪಿಸಲು ಕ್ರಮಕೈಗೊಳ್ಳುವುದು, ಹಿರಿಯ ನಾಗರಿಕರಿಗೆ ಆಯುಷ್ ಕ್ಯಾಂಪ್‌ ಆಯೋಜನೆ, ರಾಜ್ಯ ಸರ್ಕಾರಗಳ ಜೊತೆ ಸೇರಿ ಹಿರಿಯ ನಾಗರಿಕರಿಗೆ ಸುಗಮ ತೀರ್ಥಯಾತ್ರೆ ವ್ಯವಸ್ಥೆ, ಕಾಲಕ್ಕೆ ತಕ್ಕಂತೆ ಎಂಎಸ್‌ಪಿ ಜಾರಿ, ಭಾರತವನ್ನು ಅಂತಾರಾಷ್ಟ್ರೀಯ ನ್ಯೂಟ್ರಿ ಹಬ್ ಮಾಡುವುದು, ಕೃಷಿಗಾಗಿ ಪ್ರತ್ಯೇಕ ಸ್ಯಾಟಲೈಟ್ ಮೊದಲಾದ ಭರವಸೆಗಳನ್ನು ಬಿಜೆಪಿ ಜನರಿಗೆ ನೀಡಿದೆ. ಇದನ್ನೂ ಓದಿ: ಸಿಎಂ ತವರಲ್ಲಿಂದು ನಮೋ ಘರ್ಜನೆ – ಮೈಸೂರಲ್ಲಿ ಎಲ್ಲೆಲ್ಲಿ ಮಾರ್ಗ ಬದಲಾವಣೆ?

    ಶೂನ್ಯ ವಿದ್ಯುತ್ ಬಿಲ್
    ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ಸಾಮಾನ್ಯ ಮತದಾರರ ಪಟ್ಟಿಯನ್ನು ತರುವುದು, ಏಕರೂಪ ನಾಗರಿಕ ಸಂಹಿತೆ (UCC) ಜಾರಿ, ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಡಿ ಶೂನ್ಯ ವಿದ್ಯುತ್ ಬಿಲ್, ಮಹಿಳೆಯರಿಗಾಗಿ ಶೌಚಾಲಯಗಳ ಸಂಖ್ಯೆ ಹೆಚ್ಚಳ ಮತ್ತು ಮಹಿಳಾ ಶಕ್ತಿ ವಂದನ್ ಕಾಯ್ದೆಯ ಅನುಷ್ಠಾನ, ವಂದೇ ಭಾರತ್ ರೈಲು ಜಾಲದ ವಿಸ್ತರಣೆ, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳು ಬರಲಿವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

    ಹೊಸ ವಿಮಾನ ನಿಲ್ದಾಣ, ಹೆದ್ದಾರಿಗಳು, ಮೆಟ್ರೋ ಮತ್ತು ನೀರಿನ ಮೆಟ್ರೋಗಳು ಬರಲಿವೆ. ಹೆದ್ದಾರಿಗಳಲ್ಲಿ ಟ್ರಕ್ ಚಾಲಕರಿಗೆ ಆಧುನಿಕ ಸೌಲಭ್ಯಗಳು, ವಿಶ್ವಾದ್ಯಂತ ರಾಮಾಯಣ ಉತ್ಸವ ಆಚರಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಹಾಲಿ, ಮಾಜಿ ಪ್ರಧಾನಿಗಳ ಸಮಾಗಮದಿಂದ ದೊಡ್ಡ ಸಂದೇಶ ರವಾನೆ: ಯದುವೀರ್‌

  • ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಮೋದಿ ಗ್ಯಾರಂಟಿ-2024; ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    – ಪ್ರತಿ ಕ್ಷಣವೂ ದೇಶಕ್ಕಾಗಿ.. 24*7 For 2047: ಚುನಾವಣಾ ಘೋಷವಾಕ್ಯ
    – ಫಲಾನುಭವಿಗಳಿಗೆ ಸಂಕಲ್ಪ ಪತ್ರ ವಿತರಿಸಿದ ಮೋದಿ

    ನವದೆಹಲಿ: ಲೋಕಸಭಾ ಚುನಾವಣೆಗೆ ‘ಸಂಕಲ್ಪ ಪತ್ರ’ (Sankalp Patra) ಹೆಸರಿನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು (BJP Manifesto) ಭಾನುವಾರ ಬಿಡುಗಡೆ ಮಾಡಿತು. ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಪಕ್ಷದ ಹಿರಿಯ ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡಿದರು.

    ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಜಯಂತಿ ದಿನದಂದೇ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿತು. ಇದಕ್ಕೂ ಮುನ್ನ ಅಂಬೇಡ್ಕರ್‌ ಅವರ ಪುತ್ಥಳಿಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪುಷ್ಪನಮನ ಸಲ್ಲಿಸಿದರು. ಇದನ್ನೂ ಓದಿ: ಅಂಬೇಡ್ಕರ್‌ ಜನ್ಮದಿನದಂದೇ ಸಂಕಲ್ಪ ಪತ್ರ – ಭಾನುವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಪ್ರತಿ ಕ್ಷಣವೂ ದೇಶಕ್ಕಾಗಿ.. 24*7 For 2047 ಚುನಾವಣಾ ಘೋಷವಾಕ್ಯದೊಂದಿಗೆ ಬಿಜೆಪಿ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿತು. ಇದೇ ವೇಳೆ ಪ್ರಧಾನಿ ಮೋದಿ ಅವರ 10 ವರ್ಷಗಳ ಸಾಧನೆ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.

  • 6 ವರ್ಷಗಳ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ

    6 ವರ್ಷಗಳ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ

    – ಮೈಸೂರಿಗೆ ಮೋದಿ ಆಗಮನದ ಹೊತ್ತಲ್ಲೇ ತವರಲ್ಲಿ ಬಿಜೆಪಿಗೆ ಸಿಎಂ ಮಾಸ್ಟರ್ ಸ್ಟ್ರೋಕ್

    ಮೈಸೂರು: ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಲ್ಲಿ ಮೈಸೂರು (Mysuru) ಭಾಗದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿರುವಂತೆ ಕಾಣುತ್ತಿದೆ. ರಾಜಕೀಯ ಕಾರಣಕ್ಕೆ 6 ವರ್ಷಗಳಿಂದ ಇದ್ದ ಮುನಿಸನ್ನು ಮರೆತು ಬಿಜೆಪಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್ (V.Srinivas Prasad) ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.

    ನಾಳೆ (ಭಾನುವಾರ) ಪ್ರಧಾನಿ ಮೋದಿ ಅವರು ಮೈಸೂರಿಗೆ ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ. ಈ ಹೊತ್ತಿನಲ್ಲೇ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಅವರನ್ನು ಸಿಎಂ ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ. ಆರು ವರ್ಷಗಳಿಂದ ದಿಗ್ಗಜ ನಾಯಕರು ಪರಸ್ಪರ ಭೇಟಿಯಾಗಿರಲಿಲ್ಲ. ಮಾತುಕತೆಯೂ ಇರಲಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿ ಪ್ರಸಾದ್ ಮನೆಗೆ ಸಿದ್ದರಾಮಯ್ಯ (Siddaramaiah) ಅವರು ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೂಲ ನಮ್ಮ ಪಕ್ಷದವರಲ್ಲ, ಬೇರೆ ಪಕ್ಷದಿಂದ ಬಂದವರು: ಡಿಕೆ ಸುರೇಶ್

    ಇದು ಸೌಹಾರ್ದಯುತ ಭೇಟಿಯೋ ಅಥವಾ ರಾಜಕೀಯ ಭೇಟಿಯೋ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ, ಬನ್ರಿ ಪ್ರಸಾದ್ ಎಂದು ಸಿಎಂ ಕುಶಲೋಪರಿ ವಿಚಾರಿಸಿದರು.

    ಶ್ರೀನಿವಾಸ ಪ್ರಸಾದ್ ಬಂದ ಕೂಡಲೇ ಸಿಎಂ ಎದ್ದು ನಿಲ್ಲಲು ಮುಂದಾದರು. ಆಗ ಶ್ರೀನಿವಾಸ್ ಪ್ರಸಾದ್, ಬೇಡ ಬೇಡ.. ಕೂತುಕೊಳ್ಳಿ ಎಂದರು. ಈ ವೇಳೆ ಸಿಎಂ ಬಳಿ ಪ್ರಸಾದ್ ಆರೋಗ್ಯ ಸಮಸ್ಯೆ ಹೇಳಿಕೊಂಡರು. ‘ಆರೋಗ್ಯ ನಿರ್ಲಕ್ಷ್ಯ ಮಾಡಬೇಡಿ’ ಎಂದು ಸಿಎಂ ಸಲಹೆ ನೀಡಿದರು. ಇದನ್ನೂ ಓದಿ: ತುಮಕೂರು ಕ್ಷೇತ್ರ ಗೆಲ್ಲಲು ಬಿಜೆಪಿ ಪ್ಲ್ಯಾನ್‌; ಮಾಧುಸ್ವಾಮಿ ಮುನಿಸು ಶಮನಕ್ಕೆ ಆಫರ್ – ಸೋಮಣ್ಣ ಪರ ಪ್ರಚಾರಕ್ಕಿಳಿತಾರಾ?

    2013 ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕಂದಾಯ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ತಮ್ಮ ಸಂಪುಟದಿಂದ ಕೈಬಿಟ್ಟಿದ್ದರು. ಇದರಿಂದ ಕುಪಿತಗೊಂಡಿದ್ದ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಚುನಾವಣೆ ಎದುರಿಸಿದ್ದರು. ಆಗ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ನಂತರ ಚಾಮರಾಜನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಸಾದ್ ಗೆಲುವು ಸಾಧಿಸಿದ್ದರು.

    ಸಂಪುಟದಿಂದ ಕೈಬಿಟ್ಟಾಗಿನಿಂದ ಸಿದ್ದರಾಮಯ್ಯ ವಿರುದ್ಧ ಪ್ರಸಾದ್ ಅಸಮಾಧಾನ ಹೊಂದಿದ್ದರು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಲವು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಪ್ರಸಾದ್ ಅನಾರೋಗ್ಯ ಹಾಗೂ ವಯಸ್ಸಿನ ಕಾರಣ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಬಿಜೆಪಿಯಿಂದ ಬಾಲರಾಜ್ ಕಣಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್‌ನಿಂದ ಹೆಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಸ್ಪರ್ಧಿಸಿದ್ದಾರೆ. ಪುತ್ರನ ಗೆಲುವಿಗಾಗಿ ಕ್ಷೇತ್ರದಲ್ಲಿ ಮಹದೇವಪ್ಪ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿ ರಾಜಕೀಯ ದಾಳ ಉರುಳಿಸಿದ್ದರು.

  • ನಾಳೆ ರಾಜ್ಯಕ್ಕೆ ಮೋದಿ ಆಗಮನ – ಪ್ರಧಾನಿ ಮುಂದೆ ಹಲವು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್‌ ಅಭ್ಯರ್ಥಿ

    ನಾಳೆ ರಾಜ್ಯಕ್ಕೆ ಮೋದಿ ಆಗಮನ – ಪ್ರಧಾನಿ ಮುಂದೆ ಹಲವು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್‌ ಅಭ್ಯರ್ಥಿ

    ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿಗೆ ಬೆಂಗಳೂರು ಉತ್ತರದ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜೀವ್‌ ಗೌಡ (Rajeev Gowda) ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನಾಳೆ ರಾಜ್ಯಕ್ಕೆ ‌ಬರ್ತಿದ್ದಾರೆ. ಅವರು ಬರುವ ಮುನ್ನ ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು. ಬೆಂಗಳೂರಿನಲ್ಲಿ ನೀರನ ಸಮಸ್ಯೆ ದೊಡ್ಡದಿದೆ. ಮೇಕೆದಾಟಿಗೆ ಪ್ರಪೋಸಲ್ ಕೊಟ್ಟಿದ್ದೆವು. ಯಾಕೆ ಎನ್‌ವಿರಾನ್‌ಮೆಂಟ್‌ ಅಪ್ರೂವಲ್ ಕೊಟ್ಟಿಲ್ಲ. ಕೃಷ್ಣ ಟ್ರಿಬ್ಯೂನಲ್ ಆಗಿ 10 ವರ್ಷ ಆಯ್ತು. ಯಾಕೆ‌ ಗೆಜೆಟ್ ಹೊರಡಿಸಿಲ್ಲ? ಅಪ್ಪರ್ ಭದ್ರಾಗೆ 5,300 ಕೋಟಿ ರೂ. ಘೋಷಿಸಿದ್ರು. ಯಾಕೆ ಇಲ್ಲಿಯವರೆಗೆ ಅದರ ಹಣ ಬಿಡುಗಡೆ ಮಾಡಿಲ್ಲ ಎಂದು ರಾಜೀವ್‌ ಗೌಡ ಕೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೂಲ ನಮ್ಮ ಪಕ್ಷದವರಲ್ಲ, ಬೇರೆ ಪಕ್ಷದಿಂದ ಬಂದವರು: ಡಿಕೆ ಸುರೇಶ್

    15 ನೇ ಹಣಕಾಸು ಆಯೋಗದ ರಿಪೋರ್ಟ್ ಏನಿದೆ? ಕರ್ನಾಟಕಕ್ಕೆ 5,400 ಕೋಟಿ ಶಿಫಾರಸು ಮಾಡಿತ್ತು. ಅದರ ಬಗ್ಗೆ ಯಾಕೆ ಚಕಾರವಿಲ್ಲ. ಇಂಪ್ಲಿಮೆಂಟ್ ಮಾಡ್ತೇವೆ ಅಂದವರು ಯಾಕೆ ಮಾಡಿಲ್ಲ? ಫೈನಾನ್ಸ್ ಕಮಿಷನ್ ರೆಕಮೆಂಡೇಷನ್ ಮಾಡಿತ್ತು. ಯಾಕೆ ಹಣವನ್ನ ನಮಗೆ ಬಿಡುಗಡೆ ಮಾಡಿಲ್ಲ? ಪೆರಿಪೆರಲ್ ರಿಂಗ್ ರಸ್ತೆಗೆ ಹಣ ಯಾಕೆ ಕೊಟ್ಟಿಲ್ಲ. ಪ್ರಧಾನಿ, ಸಬರಬನ್ ರೈಲು ಉದ್ಘಾಟಿಸಿದರು. 40 ತಿಂಗಳಲ್ಲಿ ಯೋಜನೆ ಪೂರ್ಣ ಎಂದಿದ್ರಿ. ಈಗ 20 ತಿಂಗಳಾಯ್ತು, ಎಲ್ಲಿ ಹೋಯ್ತು ಯೋಜನೆ? ಬರ ಪರಿಹಾರದ ಬಗ್ಗೆ ಗಮನವೇ ಕೊಟ್ಟಿಲ್ಲ. 223 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಹೆಚ್ಚಿದೆ. ಗ್ರಾಮೀಣ ಭಾಗದ ಜನ ಸಂಕಷ್ಟದಲ್ಲಿದ್ದಾರೆ.
    ಇಲ್ಲಿಯವರೆಗೆ ಪರಿಹಾರದ ಹಣ ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ನಾ ಕಾವೂಂಗಾ ನಾ ಕಾನೇ ದೂಂಗಾ ಅಂತೀರ. ನಮ್ಮ ಎಂಪಿಯೊಬ್ಬರ ಮೇಲೆ ಇಡಿ ಕೇಸ್ ಇದೆ. ಅವರನ್ನ ಯಾಕೆ ಸಚಿವ ಸಂಪುಟಕ್ಕೆ ತೆಗೆದುಕೊಂಡ್ರಿ. ಶೋಭಾ ಅವರ ಮೇಲೆ 44 ಕೋಟಿ ರೂ. ಆರೋಪವಿದೆ. ಅವರನ್ನ ಹೇಗೆ ಸಚಿವೆಯನ್ನಾಗಿ ಮಾಡಿದ್ರಿ. ಇದು ನ್ಯಾಯಕ್ಕೆ ವಿರುದ್ಧವಾದುದು. ಶೋಭಾ ಕರಂದ್ಲಾಜೆ ಅವರನ್ನ ತಕ್ಷಣ ಕೆಳಗಿಳಿಸಿ, ಎಲೆಕ್ಟ್ರೋ ಬಾಂಡ್‌ನಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಇಡಿ ರೇಡ್ ಮಾಡಿಸ್ತೀರ. ನಂತರ ಹಣವನ್ನ ಕಲೆಕ್ಟ್ ಮಾಡ್ತೀರ. ಭ್ರಷ್ಟಾಚಾರ ಅಂದ್ರೆ ಮೋದಿ ಸರ್ಕಾರ ಬರುತ್ತೆ. ನಮ್ಮ ರಾಜ್ಯಕ್ಕೆ ಬಂದಾಗ ಉತ್ತರ ಕೊಡಬೇಕು ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ತುಮಕೂರು ಕ್ಷೇತ್ರ ಗೆಲ್ಲಲು ಬಿಜೆಪಿ ಪ್ಲ್ಯಾನ್‌; ಮಾಧುಸ್ವಾಮಿ ಮುನಿಸು ಶಮನಕ್ಕೆ ಆಫರ್ – ಸೋಮಣ್ಣ ಪರ ಪ್ರಚಾರಕ್ಕಿಳಿತಾರಾ?

    ಬಿಜೆಪಿ ಕ್ಯಾಂಡಿಡೇಟ್ (ಶೋಭಾ ಕರಂದ್ಲಾಜೆ) ಬಗ್ಗೆ ಒಳ್ಳೆ ಪ್ರತಿಕ್ರಿಯೆ ಇಲ್ಲ. ಅವರ ಕಾರ್ಯಕರ್ತರೇ ವಿರೋಧ ಮಾಡ್ತಾರೆ. ಉತ್ತರದಲ್ಲಿ ಜೆಡಿಎಸ್ ಕಾರ್ಯಕರ್ತರು ನಮ್ಮ ಜೊತೆ ಬಂದಿದ್ದಾರೆ. ಎಸ್.ಟಿ.ಸೋಮಶೇಖರ್ ಬೆಂಬಲ ಕೊಟ್ಟಿದ್ದಾರೆ. ಅದು ನಮಗೆ ಶಕ್ತಿ ತುಂಬಲಿದೆ. ಬಹಿರಂಗವಾಗಿಯೇ ಅವರು ಬೆಂಬಲ ನೀಡ್ತಾರೆ. ಶೋಭಾ ಕರಂದ್ಲಾಜೆ ಅವರ ಬಗ್ಗೆ ಪ್ರಚಾರ ಮಾಡ್ತೇವೆ. ಇಡಿ ಕೇಸ್ ಬಗ್ಗೆ ಜನರಿಗೆ ತಿಳಿಸ್ತೇವೆ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದಾರೆ.

  • ತುಮಕೂರು ಕ್ಷೇತ್ರ ಗೆಲ್ಲಲು ಬಿಜೆಪಿ ಪ್ಲ್ಯಾನ್‌; ಮಾಧುಸ್ವಾಮಿ ಮುನಿಸು ಶಮನಕ್ಕೆ ಆಫರ್ – ಸೋಮಣ್ಣ ಪರ ಪ್ರಚಾರಕ್ಕಿಳಿತಾರಾ?

    ತುಮಕೂರು ಕ್ಷೇತ್ರ ಗೆಲ್ಲಲು ಬಿಜೆಪಿ ಪ್ಲ್ಯಾನ್‌; ಮಾಧುಸ್ವಾಮಿ ಮುನಿಸು ಶಮನಕ್ಕೆ ಆಫರ್ – ಸೋಮಣ್ಣ ಪರ ಪ್ರಚಾರಕ್ಕಿಳಿತಾರಾ?

    ತುಮಕೂರು: ಮಾಧುಸ್ವಾಮಿ ಬಂಡಾಯದ ಮೂಲಕ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ತುಮಕೂರಿನಲ್ಲಿ ಇದೀಗ ಎಲ್ಲಾ ವೈಷಮ್ಯಗಳು ತೆರೆಮರೆಗೆ ಸೇರಿದಂತೆ ಕಾಣುತ್ತಿದೆ. ವಿ.ಸೋಮಣ್ಣ ಮೇಲಿನ ಮಾಧುಸ್ವಾಮಿ (J.C.Madhuswamy) ಮುನಿಸು ತಣ್ಣಗಾಗಿದೆ. ಇತ್ತ ವಿ.ಸೋಮಣ್ಣರ ಪರ ಮಾಧುಸ್ವಾಮಿ ಪ್ರಚಾರ ಮಾಡುವ ಮೂಲಕ ಎಲ್ಲಾ ಅನುಮಾನಗಳಿಗೂ ತೆರೆ ಎಳೆಯಲಾಗಿದೆ.

    ತುಮಕೂರು (Tumakuru) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ (V.Somanna) ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ಮಾಧುಸ್ವಾಮಿಯ ಕೋಪ ಕಡಿಮೆಯಾದಂತೆ ಕಾಣುತ್ತಿದೆ. ಸೋಮಣ್ಣರ ಪರ ಬಹಿರಂಗ ಪ್ರಚಾರ ಮಾಡದೇ ಇದ್ದರೂ ಅಂಡರ್ ಗ್ರೌಂಡ್ ವರ್ಕ್ ಮಾಡುತ್ತಿದ್ದಾರೆ. ಮಾಧುಸ್ವಾಮಿಯ ಕೋಪ ತಣಿಯಲು ರಾಜ್ಯ ಬಿಜೆಪಿ ವರಿಷ್ಠರು ಹೊಸದೊಂದು ಮದ್ದು ಅರೆದಂತೆ ಕಾಣುತ್ತಿದೆ. ಇದನ್ನೂ ಓದಿ: ತುಮಕೂರು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್- ಮಾಧುಸ್ವಾಮಿ ಭೇಟಿಯಾದ ಮುದ್ದಹನುಮೇಗೌಡ!

    ವಿ.ಸೋಮಣ್ಣರ ಪರ ಕೆಲಸ ಮಾಡುವ ಜೊತೆಗೆ ಮಾಧುಸ್ವಾಮಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹೊಣೆಗಾರಿಕೆಯನ್ನೂ ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರಿನಿಂದ ಶ್ರೀನಿವಾಸ್ ಪೂಜಾರಿ ಗೆಲ್ಲಿಸಿಕೊಂಡು ಬಂದರೆ ಮಾಧುಸ್ವಾಮಿ ಲಕ್ ಬದಲಾಗಬಹುದು ಎನ್ನಲಾಗಿದೆ. ಕಾರಣ, ಶ್ರೀನಿವಾಸ್ ಪೂಜಾರಿಯಿಂದ ತೆರವಾದ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ಮಾಧುಸ್ವಾಮಿ ಕೂರಿಸುವ ನಿರ್ಧಾರ ಮಾಡಲಾಗಿದೆ ಎಂಬ ಮಾತು ಕೇಳಿಬಂದಿದೆ. ಪರಿಷತ್ ವಿಪಕ್ಷ ನಾಯಕ ಪಟ್ಟ ಕಟ್ಟುವ ಭರವಸೆ ಬಳಿಕವೇ ಮಾಧುಸ್ವಾಮಿ ಸೋಮಣ್ಣರನ್ನು ಬೆಂಬಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಭರವಸೆ ಬಳಿಕವೇ ಮಾಧುಸ್ವಾಮಿ ಇನ್ನಷ್ಟು ಆಕ್ಟಿವ್ ಆಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಸೋಮಣ್ಣ ಪರ ಕೆಲಸ ಮಾಡುವಂತೆ ತಮ್ಮ ಆಪ್ತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅತೃಪ್ತಗೊಂಡ ಜೆಡಿಎಸ್ ಮುಖಂಡರನ್ನೂ ಭೇಟಿಯಾಗಿ ಅಸಮಾಧಾನ ತಣಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೂ ಬಿರುಸಿನ ಪ್ರಚಾರದಲ್ಲಿದ್ದಾರೆ. ರಾಜ್ಯ ಬಿಜೆಪಿ ವರಿಷ್ಠರು ಕೊಟ್ಟ ಟಾಸ್ಕ್ ಯಶಸ್ವಿಗೊಳಿಸಿ, ಪರಿಷತ್ ವಿಪಕ್ಷ ನಾಯಕನ ಪಟ್ಟಕ್ಕೇರುವ ಪ್ರಯತ್ನದಲ್ಲಿ ಇದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್‌ ತೊರೆದ 400 ಕಾರ್ಯಕರ್ತರು

  • ರಾಜಸ್ಥಾನದಲ್ಲಿ ಕಾಂಗ್ರೆಸ್‌ ತೊರೆದ 400 ಕಾರ್ಯಕರ್ತರು

    ರಾಜಸ್ಥಾನದಲ್ಲಿ ಕಾಂಗ್ರೆಸ್‌ ತೊರೆದ 400 ಕಾರ್ಯಕರ್ತರು

    ಜೈಪುರ್: ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ ಭಾರೀ ಹಿನ್ನಡೆಯಾಗಿದೆ. ಬರೋಬ್ಬರಿ 400 ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಮೂಲಗಳು ತಿಳಿಸಿವೆ.

    ನಾಗೌರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ (ಆರ್‌ಎಲ್‌ಪಿ) ಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ನಾಗೌರ್ ಸಂಸದ ಮತ್ತು ಆರ್‌ಎಲ್‌ಪಿ ಮುಖ್ಯಸ್ಥ ಹನುಮಾನ್ ಬೇನಿವಾಲ್ ಅವರನ್ನು ಕಾಂಗ್ರೆಸ್ ಇಲ್ಲಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

    ಏತನ್ಮಧ್ಯೆ, ಬೆನಿವಾಲ್ ನೀಡಿದ ದೂರು ಹಾಗೂ ನಾಗೌರ್‌ನ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ಪರವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ ಮೂವರು ಕಾಂಗ್ರೆಸ್ ಕಾರ್ಯಕರ್ತರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು.

    ಮಾಜಿ ಶಾಸಕ ಭರರಾಮ್, ಕುಚೇರಾ ಪುರಸಭೆ ಅಧ್ಯಕ್ಷ ತೇಜ್ಪಾಲ್ ಮಿರ್ಧಾ ಮತ್ತು ಸುಖರಾಮ್ ದೊಡ್ವಾಡಿಯಾ ಸೇರಿದಂತೆ ಈ ಕಾಂಗ್ರೆಸ್ ಮುಖಂಡರನ್ನು ಅಮಾನತುಗೊಳಿಸಿದ್ದು, ನಾಗೌರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.

    ಅಮಾನತುಗೊಳಿಸಿರುವುದನ್ನು ವಿರೋಧಿಸಿ ಮೂವರು ಕಾಂಗ್ರೆಸ್ ನಾಯಕರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೇ ವೇಳೆ ಶುಕ್ರವಾರ ಸುದ್ದಿಗೋಷ್ಠಿ ಕರೆದಿದ್ದ ತೇಜ್‌ಪಾಲ್‌ ಮಿರ್ಧಾ, ವಿಧಾನಸಭಾ ಚುನಾವಣೆ ವೇಳೆ ನಾಗೌರ್‌ನಲ್ಲಿ ಕಾಂಗ್ರೆಸ್‌ ಪ್ರಬಲ ಸ್ಥಾನದಲ್ಲಿತ್ತು. ಎಂಟರಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು. ಲೋಕಸಭೆ ಚುನಾವಣೆಯಲ್ಲಿಯೂ ಅದರ ಸ್ಥಾನ ಅಷ್ಟೇ ಬಲವಾಗಿತ್ತು. ಹೀಗಿದ್ದರೂ, RLP ಯೊಂದಿಗೆ ಏಕೆ ಮೈತ್ರಿ ಮಾಡಿಕೊಳ್ಳಲಾಯಿತು ಎಂದು ಪ್ರಶ್ನಿಸಿದ್ದರು.

    ಹನುಮಾನ್ ಬೇನಿವಾಲ್ ನಾಗೌರ್‌ನಲ್ಲಿ ಕಾಂಗ್ರೆಸ್ ಅನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಸಾಧನವಿದ್ದಂತೆ. ಅಂತಹ ವ್ಯಕ್ತಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಅದಕ್ಕಾಗಿಯೇ ನಾವೆಲ್ಲರೂ ನಮ್ಮ ಸಾಮೂಹಿಕ ರಾಜೀನಾಮೆ ಪತ್ರವನ್ನು ನೀಡುತ್ತಿದ್ದೇವೆ ಎಂದು ಮಿರ್ಧಾ ಸ್ಪಷ್ಟಪಡಿಸಿದ್ದಾರೆ.

  • ರಾತ್ರಿ 10 ಗಂಟೆ ನಂತರವೂ ಪ್ರಚಾರ – ಅಣ್ಣಾಮಲೈ ವಿರುದ್ಧ ದೂರು ದಾಖಲು

    ರಾತ್ರಿ 10 ಗಂಟೆ ನಂತರವೂ ಪ್ರಚಾರ – ಅಣ್ಣಾಮಲೈ ವಿರುದ್ಧ ದೂರು ದಾಖಲು

    ಚೆನ್ನೈ: ಗಡುವನ್ನು ಮೀರಿ ರಾತ್ರಿ 10 ಗಂಟೆಯ ನಂತರವೂ ಪ್ರಚಾರ ನಡೆಸಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ಹಾಗೂ ತಮಿಳುನಾಡು (Tamil Nadu) ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ (K.Annamalai) ವಿರುದ್ಧ ಕೊಯಮತ್ತೂರು ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

    ಕಾನೂನು ಬಾಹಿರ ಸಭೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಡುವು ಮೀರಿ ಬಿಜೆಪಿ ಪ್ರಚಾರ ನಡೆಸಿದ್ದಕ್ಕೆ ಡಿಎಂಕೆ ಮತ್ತು ಎಡಪಕ್ಷಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಬಿಆರ್‌ಎಸ್‌ ನಾಯಕಿ 3 ದಿನ ಸಿಬಿಐ ಕಸ್ಟಡಿಗೆ

    ಸೆಕ್ಷನ್ 143, 341 ಮತ್ತು 290 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಡಿಎಂಕೆ ನೀಡಿದ ದೂರಿನ ಮೇಲೆ ಬಿಜೆಪಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅಣ್ಣಾಮಲೈ ಅವರು ಸೋಲಿನ ಭಯದಿಂದ ಭಯೋತ್ಪಾದನೆ ಮತ್ತು ಗಲಭೆಗಳನ್ನು ಪ್ರಚೋದಿಸುತ್ತಾರೆ. ದುರಹಂಕಾರದ ಬಗ್ಗೆ ಮಾತನಾಡುವ ಪ್ರಧಾನಿಗಳು, ಅಣ್ಣಾಮಲೈ ಅವರಿಗೆ ಜ್ಞಾನಾರ್ಜನೆ ನೀಡಬೇಕು ಎಂದು ಡಿಎಂಕೆ ವಕ್ತಾರ ಎ.ಸರವಣನ್‌ ಹೇಳಿದ್ದರು. ಇದನ್ನೂ ಓದಿ: 370 ವಿಧಿಯನ್ನು ರದ್ದುಪಡಿಸಿದ್ದಕ್ಕೆ ಅಂಬೇಡ್ಕರ್ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು: ಮೋದಿ

    ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ. ರಾತ್ರಿ 10 ಗಂಟೆಯ ನಂತರ ಜನರನ್ನು ಭೇಟಿ ಮಾಡಲು ನನಗೆ ಎಲ್ಲ ಹಕ್ಕಿದೆ. ಯಾವ ಚುನಾವಣಾ ಆಯೋಗವು ನಿಮ್ಮನ್ನು ತಡೆಯುತ್ತದೆ? ಆದೇಶ ಎಲ್ಲಿದೆ, ನೀವು ನನಗೆ ತೋರಿಸುತ್ತೀರಾ ಎಂದು ಅಣ್ಣಾಮಲೈ ಕೇಳಿದ್ದಾರೆ.

  • 370 ವಿಧಿಯನ್ನು ರದ್ದುಪಡಿಸಿದ್ದಕ್ಕೆ ಅಂಬೇಡ್ಕರ್ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು: ಮೋದಿ

    370 ವಿಧಿಯನ್ನು ರದ್ದುಪಡಿಸಿದ್ದಕ್ಕೆ ಅಂಬೇಡ್ಕರ್ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು: ಮೋದಿ

    ಮುಂಬೈ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದಕ್ಕೆ ಡಾ.ಬಿ.ಆರ್ ಅಂಬೇಡ್ಕರ್ (Dr.BR Ambedkar) ಅವರ ಆತ್ಮ ನನ್ನನ್ನು ಆಶೀರ್ವದಿಸುತ್ತಿರಬಹುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ನಾಗ್ಪುರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತಾಡಿದ ಅವರು, ಮೂರನೇ ಬಾರಿಗೆ ಮೋದಿ ಗೆದ್ದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಲಿದೆ ಎಂಬ ಪ್ರತಿಪಕ್ಷಗಳ ಟೀಕೆಗಳನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳು ಪ್ರತ್ಯೇಕತಾವಾದಿಗಳ ಬಗ್ಗೆ ಮೃದು ಧೋರಣೆ ಹೊಂದಿದ್ದು, 370ನೇ ವಿಧಿಯನ್ನು (Article 370) ರದ್ದು ಮಾಡಿದಾಗ ಅದಕ್ಕೆ ವಿರೋಧಿಸಿದವು. ಆರ್ಟಿಕಲ್ 370 ರದ್ದಾದ ನಂತರ ಅಂಬೇಡ್ಕರ್ ಅವರ ಆತ್ಮವು ನನ್ನನ್ನು ಆಶೀರ್ವದಿಸುತ್ತಿರಬಹುದು ಎಂದಿದ್ದಾರೆ. ಇದನ್ನೂ ಓದಿ: ಉರಿಬಿಸಿಲಿನಲ್ಲಿ ಗೋಧಿ ಕಟಾವು ಮಾಡಿ ಮತಯಾಚಿಸಿದ ಹೇಮಾ ಮಾಲಿನಿ

    ಬಿಜೆಪಿ (BJP) ಸರ್ಕಾರಕ್ಕೆ ದೇಶದ ಸಂವಿಧಾನವೇ ಸರ್ವಸ್ವವಾಗಿದೆ. ಈಗ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನವನ್ನು ರದ್ದುಪಡಿಸಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಹೇಳುವ ಮೂಲಕ ಪ್ರತಿಪಕ್ಷಗಳು ಜನರನ್ನು ಮೂರ್ಖರನ್ನಾಗಿಸುತ್ತಿವೆ. ಕಾಂಗ್ರೆಸ್ (Congress) ತುರ್ತು ಪರಿಸ್ಥಿತಿಯನ್ನು ಹೇರಿ ಸಂವಿಧಾನವನ್ನು ನಾಶಪಡಿಸಲು ಪ್ರಯತ್ನಿಸಿತ್ತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

    ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ದಲಿತರು ಮತ್ತು ಬುಡಕಟ್ಟು ಜನಾಂಗದವರು ಈಗ ಸಾಂವಿಧಾನಿಕ ಹಕ್ಕುಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಅವರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಡೆಗಣಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

    ಮುಂದಿನ ಐದು ವರ್ಷಗಳಲ್ಲಿ ನಿಮ್ಮ ಕನಸು ನನ್ನ ಸಂಕಲ್ಪವಾಗಿದೆ. ನನ್ನ ಪ್ರತಿಯೊಂದು ಕ್ಷಣವೂ ನಿಮ್ಮ ಕಲ್ಯಾಣ ಮತ್ತು ದೇಶದ ಪ್ರಗತಿಗಾಗಿ ಮೀಸಲಿಡಲಾಗಿದೆ ಎಂದಿದ್ದಾರೆ.

    ಅಂಬೇಡ್ಕರ್ ಏನು ಹೇಳಿದ್ದರು?
    ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದಕ್ಕೆ ಅಂಬೇಡ್ಕರ್ ವಿರೋಧಿಸಿದ್ದರು. ವಿಶೇಷ ಸ್ಥಾನಮಾನ ನೀಡಿದರೆ ಭಾರತದ ಸಮಗ್ರತೆ ಮತ್ತು ಏಕತೆಗೆ ಧಕ್ಕೆ ಆಗುತ್ತದೆ ಎಂದು ಹೇಳಿದ್ದರು. ಆದರೆ ಜವಾಹಾರಲಾಲ್ ನೆಹರು ಅವರು ವಿಶೇಷ ಸ್ಥಾನ ಪರ ಮಾತನಾಡಿದ್ದರು. ಇದನ್ನೂ ಓದಿ: ಲೋಕಸಭಾ ಅಖಾಡಕ್ಕಿಳಿದ ಅಂಧ ಅಭ್ಯರ್ಥಿ – ಬ್ರೈಲ್ ಲಿಪಿಯಲ್ಲೇ ಪ್ರತಿಜ್ಞಾವಿಧಿ ಸ್ವೀಕಾರ

  • ಕೇವಲ 2 ವೋಟಿಗಾಗಿ ಕಾಡು ಹಾದಿಯಲ್ಲಿ 107 ಕಿಮೀ ಸಾಗಿದ ಅಧಿಕಾರಿಗಳು

    ಕೇವಲ 2 ವೋಟಿಗಾಗಿ ಕಾಡು ಹಾದಿಯಲ್ಲಿ 107 ಕಿಮೀ ಸಾಗಿದ ಅಧಿಕಾರಿಗಳು

    ಮುಂಬೈ: ಲೋಕಸಭಾ ಚುನಾವಣೆಗೆ (Lok Sabha Election) ಕೇವಲ 2 ಮತಕ್ಕಾಗಿ ಚುನಾವಣಾ ಅಧಿಕಾರಿಗಳು 107 ಕಿಲೋಮೀಟರ್‌ ದೂರ ಕಾಡು ಹಾದಿಯಲ್ಲಿ ಸಾಗಿರುವ ಘಟನೆ ಮಹಾರಾಷ್ಟ್ರದ (Maharashtra) ಗಡ್ಚಿರೋಲಿ (Gadchiroli) ಜಿಲ್ಲೆಯಲ್ಲಿ ನಡೆದಿದೆ.

    ಚುನಾವಣೆಗೆ ಇಬ್ಬರು ವೃದ್ಧರು ತಮ್ಮ ಮನೆಯಿಂದಲೇ ಮತ ಚಲಾಯಿಸುವುದಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳು ಕಾಡು ಹಾದಿಯಲ್ಲಿ 107 ಕಿ.ಮೀ ಸಾಗಿದ್ದಾರೆ. ಇದನ್ನೂ ಓದಿ: ಉರಿಬಿಸಿಲಿನಲ್ಲಿ ಗೋಧಿ ಕಟಾವು ಮಾಡಿ ಮತಯಾಚಿಸಿದ ಹೇಮಾ ಮಾಲಿನಿ

    ಏ.19 ರಿಂದ ಮೊದಲ ಹಂತದ ಮತದಾನ ನಡೆಯಲಿದೆ. ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತ ಚಲಾವಣೆಗೆ ಅವಕಾಶವಿದ್ದು, ನಾಳೆಯಿಂದ ಮತದಾನ ಆರಂಭವಾಗಲಿದೆ. ಹೀಗಾಗಿ, ಗಡ್ಚಿರೋಲಿ-ಚಿಮೂರ್ ಕ್ಷೇತ್ರದಿಂದ 100 ಮತ್ತು 86 ವರ್ಷ ವಯಸ್ಸಿನ ಇಬ್ಬರು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

    ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 40% ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಚುನಾವಣಾ ಆಯೋಗವು ನೀಡಿದೆ. ಇದನ್ನೂ ಓದಿ: ದೆಹಲಿ ಸರ್ಕಾರ ಉರುಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಸಂಚು – ಆಪ್‌ ಸಚಿವೆ ಆರೋಪ

  • ಲೋಕಸಭಾ ಅಖಾಡಕ್ಕಿಳಿದ ಅಂಧ ಅಭ್ಯರ್ಥಿ – ಬ್ರೈಲ್ ಲಿಪಿಯಲ್ಲೇ ಪ್ರತಿಜ್ಞಾವಿಧಿ ಸ್ವೀಕಾರ

    ಲೋಕಸಭಾ ಅಖಾಡಕ್ಕಿಳಿದ ಅಂಧ ಅಭ್ಯರ್ಥಿ – ಬ್ರೈಲ್ ಲಿಪಿಯಲ್ಲೇ ಪ್ರತಿಜ್ಞಾವಿಧಿ ಸ್ವೀಕಾರ

    ಬೀದರ್: ಎರಡನೇ ಹಂತದ ಲೋಕಸಭಾ ಚುನಾವಣೆಗೆ (Lok Sabha Election 2024), ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಇಂದು ಬೀದರ್ ಲೋಕಸಭಾ ಅಖಾಡದಿಂದ ಅಂಧ ಅಭ್ಯರ್ಥಿಯೊಬ್ಬರು ಉಮೇದುವಾರಿಕೆ  (Nomination) ಸಲ್ಲಿಸಿದ್ದಾರೆ.

    ಬೀದರ್‌ನ (Bidar) ಕಾಡವಾಡ ಗ್ರಾಮದವರಾದ ದಿಲೀಪ್ ನಾಗಪ್ಪ ಬೂಸಾ ಎಂಬವರು ಚುನಾವಣಾಧಿಕಾರಿ ಗೋವಿಂದರೆಡ್ಡಿ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಬ್ರೈಲ್ ಲಿಪಿಯ ಸಹಾಯದಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ದಿಲೀಪ್ ಲೋಕಸಭಾ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: ಕೋಡ್‌ವರ್ಡ್‌ ಸಹಾಯದಿಂದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಆರೋಪಿಗಳು ಅರೆಸ್ಟ್‌!

    ಘಟಾನುಘಟಿ ಸ್ಪರ್ಧಾಳುಗಳ ನಡುವೆ ಉಮೇದುವಾರಿಕೆ ಸಲ್ಲಿಸಿಸಿರುವ ದಿಲೀಪ್, ರೆಕಾಡಿರ್ಂಗ್ ಸ್ಟುಡಿಯೋ ನಡೆಸುತ್ತಿದ್ದಾರೆ. ಸಂಗೀತದಿಂದಲೇ ತಮ್ಮ ಆದಾಯದ ಮೂಲ ಕಂಡುಕೊಂಡಿದ್ದಾರೆ.

    ಬೀದರ್‍ನಲ್ಲಿ ಒಟ್ಟು 17,08,787 ಮತದಾರರಿದ್ದಾರೆ. ಈ ಪೈಕಿ ಪುರುಷ ಮತದಾರರು – 8,89,571 ಇದ್ದರೆ, ಮಹಿಳಾ ಮತದಾರರು – 8,17,396 ಮಂದಿ ಇದ್ದಾರೆ. ಇತರೆ ಮತದಾರರು 50 ಮಂದಿ ಇದ್ದಾರೆ. ಇದನ್ನೂ ಓದಿ: ಉರಿಬಿಸಿಲಿನಲ್ಲಿ ಗೋಧಿ ಕಟಾವು ಮಾಡಿ ಮತಯಾಚಿಸಿದ ಹೇಮಾ ಮಾಲಿನಿ