Tag: Lok Sabha Election 2024

  • Bengaluru South Lok Sabha 2024: ಪ್ರತಿಷ್ಠೆಯ ಕಣವನ್ನು ಮತ್ತೆ ಗೆಲ್ಲುತ್ತಾ ಬಿಜೆಪಿ?- ‘ಕೈ’ ವಶಕ್ಕೆ ತಂತ್ರವೇನು?

    Bengaluru South Lok Sabha 2024: ಪ್ರತಿಷ್ಠೆಯ ಕಣವನ್ನು ಮತ್ತೆ ಗೆಲ್ಲುತ್ತಾ ಬಿಜೆಪಿ?- ‘ಕೈ’ ವಶಕ್ಕೆ ತಂತ್ರವೇನು?

    – ತೇಜಸ್ವಿ ಸೂರ್ಯ V/S ಸೌಮ್ಯಾ ರೆಡ್ಡಿ
    – ಬಿಜೆಪಿ ಭದ್ರಕೋಟೆಯಲ್ಲಿ ಜಯದ ಪತಾಕೆ ಹಾರಿಸೋದ್ಯಾರು?

    ಬೆಂಗಳೂರು ದಕ್ಷಿಣ (Bengaluru South) ಕ್ಷೇತ್ರವೆಂದರೆ ಅದು ಬಿಜೆಪಿ ಭದ್ರಕೋಟೆ. 1991 ರಿಂದ ಸತತವಾಗಿ ಬಿಜೆಪಿ ಗೆದ್ದು ಅಧಿಪತ್ಯ ಸ್ಥಾಪಿಸಿದೆ. 2024 ರ ಲೋಕಸಭಾ ಚುನಾವಣೆಗೆ ಕ್ಷೇತ್ರವನ್ನು ಬಿಜೆಪಿ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಹೇಗಾದರು ಮಾಡಿ ಕ್ಷೇತ್ರವನ್ನು ವಶಕ್ಕೆ ಪಡೆಯಬೇಕು ಎಂದು ಆಡಳಿತಾರೂಢ ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.

    ಕಾಂಗ್ರೆಸ್‌ಗೆ (Congress) ಈ ಕ್ಷೇತ್ರದಲ್ಲಿ ಅಸ್ತಿತ್ವ ಇಲ್ಲ. ಚುನಾವಣಾ ಇತಿಹಾಸ ಗಮನಿಸಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರುವುದು ಎರಡೇ ಬಾರಿ. ಆದರೆ ಬಿಜೆಪಿ (BJP) ಭದ್ರ ಬುನಾದಿ ಹಾಕಿಕೊಂಡಿದೆ. ಸತತ ಆರು ಬಾರಿ ಅನಂತ್ ಕುಮಾರ್ ಅವರು ಈ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ (Tejasvi Surya) ತಮ್ಮ ರಾಜಕೀಯ ಜೀವನದ ಚೊಚ್ಚಲ ಗೆಲುವಿನೊಂದಿಗೆ ಪಾರ್ಲಿಮೆಂಟ್ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: Bengaluru North Lok Sabha 2024: ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕುತ್ತಾ ಕಾಂಗ್ರೆಸ್‌?

    ಕ್ಷೇತ್ರ ಪರಿಚಯ
    ಒಕ್ಕಲಿಗರ ಪ್ರಾಬಲ್ಯವಿರುವ ಬೆಂಗಳೂರು ದಕ್ಷಿಣ ಕ್ಷೇತ್ರವು ಸ್ವಾತಂತ್ರ್ಯ ನಂತರ ಮೈಸೂರು ರಾಜ್ಯಕ್ಕೆ ಸೇರಿತ್ತು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಟಿ.ಮಾದಯ್ಯಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕ್ಷೇತ್ರದಿಂದ ಮೊದಲ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಗೆದ್ದರು. ಅದಾದ ಬಳಿಕ ಬೆಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರವನ್ನು ಕ್ಷೇತ್ರವಾಗಿ ಮಾಡಲು ವಿಲೀನಗೊಳಿಸಲಾಯಿತು. ಹೆಚ್.ಸಿ.ದಾಸಪ್ಪ 1957 ರಿಂದ 1962 ರ ವರೆಗೆ ಈ ಕ್ಷೇತ್ರದಿಂದ ಚುನಾಯಿತರಾದರು. ನೆಹರೂ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದರು. ನಂತರ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದಿದ್ದರು.

    ತುರ್ತು ಪರಿಸ್ಥಿತಿ ಮತ್ತು ದೇಶಾದ್ಯಂತ ಕ್ಷೇತ್ರಗಳ ಮರುವಿಂಗಡಣೆಯ ನಂತರ, ಈ ಲೋಕಸಭಾ ಸ್ಥಾನವು 1977 ರಲ್ಲಿ ಬೆಂಗಳೂರು ದಕ್ಷಿಣವಾಗಿ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಈ ಕ್ಷೇತ್ರದಲ್ಲಿ 12 ಚುನಾವಣೆಗಳು ನಡೆದಿವೆ. ಬಿಜೆಪಿ 8 ಬಾರಿ, ಜನತಾ ಪಕ್ಷ 3 ಬಾರಿ ಮತ್ತು ಕಾಂಗ್ರೆಸ್ ಕೇವಲ ಒಂದು ಬಾರಿ ಗೆದ್ದಿದೆ. ಬಿಜೆಪಿ ನಾಯಕ ಅನಂತ್ ಕುಮಾರ್ ಈ ಕ್ಷೇತ್ರದಿಂದ ಸತತ 6 ಬಾರಿ ಗೆದ್ದಿದ್ದಾರೆ. ಇದನ್ನೂ ಓದಿ: Bagalkot Lok Sabha 2024: ಚಾಲುಕ್ಯರ ನಾಡಲ್ಲಿ ಬಾವುಟ ಹಾರಿಸೋದ್ಯಾರು?

    ವಿಧಾನಸಭಾ ಕ್ಷೇತ್ರಗಳೆಷ್ಟು?
    ಈ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ. ಒಟ್ಟು ಕ್ಷೇತ್ರಗಳ ಪೈಕಿ ಮೂರರಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಇನ್ನುಳಿದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದಾರೆ.

    ಮತದಾರರ ಸಂಖ್ಯೆ ಎಷ್ಟು?
    ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 23,17,472 ಮತದಾರರು ಇದ್ದಾರೆ. ಅವರ ಪೈಕಿ ಪುರುಷರು 11,95,285 ಹಾಗೂ ಮಹಿಳಾ ಮತದಾರರು 11,21,788 ಇದ್ದಾರೆ. ತೃತೀಯಲಿಂಗಿ ಮತದಾರರು 399 ಇದ್ದಾರೆ. ಇದನ್ನೂ ಓದಿ: Dakshina Kannada Lok Sabha 2024: ಬಿಜೆಪಿ ಭದ್ರಕೋಟೆ ಭೇದಿಸುತ್ತಾ ಕಾಂಗ್ರೆಸ್?‌

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?
    2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ ಗೆಲುವು ಸಾಧಿಸಿದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಸೋಲನುಭವಿಸಿದರು. 3,31,192 ಮತಗಳ ಅಂತರದಿಂದ ಬಿಜೆಪಿ ಗೆದ್ದಿತ್ತು.

    ತೇಜಸ್ವಿ ಸೂರ್ಯಗೆ ಮತ್ತೆ ಟಿಕೆಟ್
    ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸತತ ಗೆಲುವಿನ ಓಟ ಮುಂದುವರಿಸಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಹೀಗಾಗಿ ಎರಡನೇ ಬಾರಿಗೆ ತೇಜಸ್ವಿ ಸೂರ್ಯಗೆ ಟಿಕೆಟ್ ಕೊಟ್ಟಿದೆ. 2019 ರಲ್ಲಿ ಗೆದ್ದು ಮೊದಲ ಬಾರಿಗೆ ಸಂಸದರಾಗಿದ್ದ ಸೂರ್ಯಗೆ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಜವಾಬ್ದಾರಿಯನ್ನು ವಹಿಸಲಾಗಿತ್ತು. ಯುವ ಸಮುದಾಯವನ್ನು ಮುಖ್ಯವಾಹಿನಿಗೆ ತಂದು ಬೆಳೆಸುವ ನಿಟ್ಟಿನಲ್ಲಿ ಬಿಜೆಪಿ ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಕಳೆದ 32 ವರ್ಷಗಳಿಂದ ಕ್ಷೇತ್ರದಲ್ಲಿ ವಿಜಯ ಸಾಧಿಸಿರುವ ಬಿಜೆಪಿ ಮತ್ತೊಮ್ಮೆ ಗೆಲ್ಲುವ ನಿರೀಕ್ಷೆಯಲ್ಲಿದೆ. ಇದನ್ನೂ ಓದಿ: Chamarajanagara Lok Sabha 2024: ಕಾಂಗ್ರೆಸ್ ಕೋಟೆಗೆ ಎಂಟ್ರಿ ಕೊಟ್ಟಿರೋ ಬಿಜೆಪಿ ಮತ್ತೆ ಸಿಂಹಾಸನ ಏರುತ್ತಾ?

    ಕಾಂಗ್ರೆಸ್‌ನಿಂದ ಸೌಮ್ಯಾ ರೆಡ್ಡಿಗೆ ಮಣೆ
    ಬೆಂಗಳೂರು ವ್ಯಾಪ್ತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ತಮ್ಮದೇ ಆದ ಹಿಡಿತವನ್ನ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಪುತ್ರಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದರು. ಈ ಸಂಬಂಧ ಹೈಕಮಾಂಡ್ ನಾಯಕರ ಜೊತೆಯೂ ಚರ್ಚೆ ನಡೆಸಿದ್ದರು. ಅದಕ್ಕೆ ಈಗ ಫಲ ಸಿಕ್ಕಿದೆ. ನಿರೀಕ್ಷೆಯಂತೆ ಸೌಮ್ಯಾ ರೆಡ್ಡಿಗೆ (Sowmya Reddy) ಕಾಂಗ್ರೆಸ್ ಟಿಕೆಟ್ ನೀಡಿದೆ. ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಮಧ್ಯೆ ನೇರ ಹಣಾಹಣೆ ಏರ್ಪಡಲಿದೆ.

    ಜಾತಿವಾರು ಲೆಕ್ಕಾಚಾರ
    ಒಕ್ಕಲಿಗ- 3,21,000
    ಲಿಂಗಾಯತ- 34,000
    ಬ್ರಾಹ್ಮಣ- 1,81,000
    ಮುಸ್ಲಿಂ- 1,58,000

  • Lok Sabha 2024: ಸಚಿವರ ಮಕ್ಕಳು, ಕುಟುಂಬದವರಿಗೆ ‘ಕೈ’ ಟಿಕೆಟ್‌ – ಯಾರು ಎಲ್ಲಿಂದ ಸ್ಪರ್ಧೆ?

    Lok Sabha 2024: ಸಚಿವರ ಮಕ್ಕಳು, ಕುಟುಂಬದವರಿಗೆ ‘ಕೈ’ ಟಿಕೆಟ್‌ – ಯಾರು ಎಲ್ಲಿಂದ ಸ್ಪರ್ಧೆ?

    ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್‌ (Congress) ಕರ್ನಾಟಕದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದ್ದು, ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದೆ.

    ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ 6 ಸಚಿವರ ಕುಟುಂಬದವರಿಗೆ ಟಿಕೆಟ್‌ ನೀಡಲಾಗಿದೆ. ಎರಡೂ ಪಟ್ಟಿಯನ್ನು ಗಮನಿಸಿದರೆ ಒಟ್ಟು 8 ಸಚಿವರ ಸಂಬಂಧಿಕರು ಅಭ್ಯರ್ಥಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಇದನ್ನೂ ಓದಿ: ಸುರಪುರ ಉಪ ಚುನಾವಣೆ; ದಿವಂಗತ ರಾಜಾ ವೆಂಕಟಪ್ಪ ನಾಯಕ ಪುತ್ರನಿಗೆ ಕಾಂಗ್ರೆಸ್‌ ಟಿಕೆಟ್‌

    ಸಚಿವರ ಕುಟುಂಬದವರಿಗೆ ಯಾರ‍್ಯಾರಿಗೆ ಟಿಕೆಟ್?‌ (2 ಪಟ್ಟಿ ಸೇರಿ)
    * ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್- ಬೆಂಗಳೂರು ಗ್ರಾಮೀಣ
    * ಸಚಿವ ಮಧು ಬಂಗಾರಪ್ಪ ಸಹೋದರಿ ಗೀತಾ ಶಿವರಾಜ್ ಕುಮಾರ್- ಶಿವಮೊಗ್ಗ
    * ಸಚಿವ ರಾಮಲಿಂಗ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ- ಬೆಂಗಳೂರು ದಕ್ಷಿಣ
    * ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ- ಬೀದರ್
    * ಸಚಿವ ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ- ದಾವಣಗೆರೆ
    * ಸಚಿವ ಶಿವಾನಂದ ಪಟೀಲ್ ಪುತ್ರಿ ಸಂಯುಕ್ತ ಪಾಟೀಲ್- ಬಾಗಲಕೋಟೆ
    * ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್- ಬೆಳಗಾವಿ
    * ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ- ಚಿಕ್ಕೋಡಿ

    ಮೂರು ಕಡೆ ಪಕ್ಷದ ನಾಯಕರ ಸಂಬಂಧಿಕರಿಗೆ ಟಿಕೆಟ್
    * ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ- ಕಲಬುರ್ಗಿ
    * ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ‌ ಖಾನ್- ಬೆಂಗಳೂರು ಕೇಂದ್ರ
    * ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ ಹಿಟ್ನಾಳ್- ಕೊಪ್ಪಳ

  • ಮೈಸೂರಿನಿಂದ ಎಂ.ಲಕ್ಷ್ಮಣ್‌; ಶೋಭಾ ಕರಂದ್ಲಾಜೆ ವಿರುದ್ಧ ರಾಜೀವ್‌ ಗೌಡ ಕಣಕ್ಕೆ – ‘ಕೈ’ 3ನೇ ಪಟ್ಟಿಯಲ್ಲಿ ಯಾರ‍್ಯಾರಿದ್ದಾರೆ?

    ಮೈಸೂರಿನಿಂದ ಎಂ.ಲಕ್ಷ್ಮಣ್‌; ಶೋಭಾ ಕರಂದ್ಲಾಜೆ ವಿರುದ್ಧ ರಾಜೀವ್‌ ಗೌಡ ಕಣಕ್ಕೆ – ‘ಕೈ’ 3ನೇ ಪಟ್ಟಿಯಲ್ಲಿ ಯಾರ‍್ಯಾರಿದ್ದಾರೆ?

    ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ 3 ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ 17 ಅಭ್ಯರ್ಥಿಗಳು ಸೇರಿ 57 ಹುರಿಯಾಳುಗಳನ್ನು ಅಖೈರುಗೊಳಿಸಿದೆ.

    ಮೈಸೂರು-ಕೊಡಗು ಕ್ಷೇತ್ರದಿಂದ ರಾಜವಂಶಸ್ಥ ಯದುವೀರ್‌ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಇತ್ತ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರೊ. ಎಂ.ವಿ.ರಾಜೀವ್‌ ಗೌಡ ಅವರನ್ನು ಪೈಪೋಟಿಗೆ ಇಳಿಸಿದೆ.

    ಯಾರ‍್ಯಾರು ಕಣಕ್ಕೆ?
    ಬೀದರ್ -ಸಾಗರ್‌ ಖಂಡ್ರೆ
    ಬೆಳಗಾವಿ – ಮೃಣಾಲ್‌ ಹೆಬ್ಬಾಳ್ಕರ್‌
    ಬಾಗಲಕೋಟೆ – ಸಂಯುಕ್ತ ಪಾಟೀಲ್‌
    ಉತ್ತರ ಕನ್ನಡ – ಅಂಜಲಿ ಲಿಂಬಾಳ್ಕರ್‌
    ಚಿಕ್ಕೋಡಿ – ಪ್ರಿಯಾಂಕ ಜಾರಕಿಹೊಳಿ
    ಕಲಬುರಗಿ – ರಾಧಾಕೃಷ್ಣ
    ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್‌
    ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್‌ ಹೆಗ್ಡೆ
    ದಕ್ಷಿಣ ಕನ್ನಡ – ಪದ್ಮರಾಜ್‌
    ಬೆಂಗಳೂರು ಸೆಂಟ್ರಲ್‌ – ಮನ್ಸೂರ್ ಅಲಿ ಖಾನ್‌
    ಚಿತ್ರದುಗ – ಚಂದ್ರಪ್ಪ
    ಮೈಸೂರು – ಎಂ.ಲಕ್ಷ್ಮಣ್‌
    ಬೆಂಗಳೂರು ದಕ್ಷಿಣ – ಸೌಮ್ಯಾ ರೆಡ್ಡಿ ‌
    ಧಾರವಾಡ – ವಿನೋದ್‌ ಅಸೂಟಿ
    ಬೆಂಗಳೂರು ಉತ್ತರ – ರಾಜೀವ್‌ ಗೌಡ
    ರಾಯಚೂರು – ಕುಮಾರ್‌ ನಾಯಕ್‌
    ಕೊಪ್ಪಳ – ರಾಜಶೇಖರ್‌ ಹಿಟ್ನಾಳ್‌

    ರಾಜ್ಯದ ಪಟ್ಟಿಯಲ್ಲಿ 6 ಸಚಿವರ ಕುಟುಂಬದವರಿಗೆ ಟಿಕೆಟ್.
    ಸಚಿವ ರಾಮಲಿಂಗ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ – ಬೆಂಗಳೂರು ದಕ್ಷಿಣ
    ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ- ಬೀದರ್
    ಸಚಿವ ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ- ದಾವಣಗೆರೆ
    ಸಚಿವ ಶಿವಾನಂದ ಪಟೀಲ್ ಪುತ್ರಿ ಸಂಯುಕ್ತ ಪಾಟೀಲ್- ಬಾಗಲಕೋಟೆ
    ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್- ಬೆಳಗಾವಿ
    ಸಚಿವ ಸತೀಶ್ ಜಾರಕಿಹೋಳಿ ಪುತ್ರಿ ಪ್ರಿಯಾಂಕ ಜಾರಕಿಹೋಳಿ – ಚಿಕ್ಕೋಡಿ

  • ಪ್ರೀತಂಗೌಡಗೆ ಸ್ವಲ್ಪ ಅಸಮಾಧಾನ ಇತ್ತು‌, ಅದನ್ನ ಸರಿ ಮಾಡಲಾಗಿದೆ: ಪ್ರಜ್ವಲ್ ರೇವಣ್ಣ

    ಪ್ರೀತಂಗೌಡಗೆ ಸ್ವಲ್ಪ ಅಸಮಾಧಾನ ಇತ್ತು‌, ಅದನ್ನ ಸರಿ ಮಾಡಲಾಗಿದೆ: ಪ್ರಜ್ವಲ್ ರೇವಣ್ಣ

    ಬೆಂಗಳೂರು: ಪ್ರೀತಂಗೌಡಗೆ (Preetham Gowda) ಸ್ವಲ್ಪ ಅಸಮಾಧಾನ ಇತ್ತು‌. ಅದನ್ನ ಸರಿ ಮಾಡೋ ಕೆಲಸ ಆಗಿದ್ದು, ಎಲ್ಲರೂ ಒಂದಾಣಿಕೆಯಿಂದ ಕೆಲಸ ಮಾಡೋದಾಗಿ ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ತಿಳಿಸಿದ್ದಾರೆ.

    ಮಾಜಿ ಸಿಎಂ ಯಡಿಯೂರಪ್ಪ (Yediyurappa) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು (Vijayendra) ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, ಯಡಿಯೂರಪ್ಪ, ವಿಜಯೇಂದ್ರ ಅವರನ್ನ ಭೇಟಿಯಾಗಿ ಸಹಕಾರ ಕೋರಿದ್ದೇವೆ. ನಮ್ಮ ಕ್ಷೇತ್ರಕ್ಕೆ ಪ್ರಚಾರ ಮಾಡಬೇಕು, ಸಹಕಾರ ಕೊಡಬೇಕು, ಆಶೀರ್ವಾದ ಮಾಡಬೇಕು ಅಂತ ಮನವಿ ಮಾಡಿದ್ದೇವೆ. ಯಡಿಯೂರಪ್ಪ ಅವರು ಸಂಪೂರ್ಣ ಭರವಸೆ ಕೊಟ್ಟಿದ್ದಾರೆ. ನನ್ನ ಚುನಾವಣೆ ಅಂತ ಮಾಡಿಕೊಡ್ತೀನಿ ಎಂದು ಭರವಸೆ ನೀಡಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಹೋಗ್ತೀವಿ ಎಂದರು. ಇದನ್ನೂ ಓದಿ: ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್‌ಗೆ ಸ್ಪಷ್ಟವಾಗಿ ತಿಳಿಸಿದ್ದೇನೆ: ಹೆಚ್.ಸಿ.ಮಹದೇವಪ್ಪ

    ನಮ್ಮ ಗುರಿ ಮತ್ತೆ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಬೇಕು. ಇಡೀ ದೇಶದಲ್ಲಿ 400 ಸೀಟು ಬರಬೇಕು‌. ಅದರಲ್ಲಿ ನಾನು ಒಬ್ಬನಾಗಿರಬೇಕು. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಎರಡೆರೆಡು ಬಾರಿ ಬಂದು ಪ್ರಚಾರ ಮಾಡ್ತೀನಿ ಅಂತ ಹೇಳಿದ್ದಾರೆ. ನನ್ನ ಮಗ ಅಂದುಕೊಂಡ ಕೆಲಸ ಮಾಡೋದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

    ಪ್ರಜ್ವಲ್‌ಗೆ ಹಾಸನದಲ್ಲಿ ಬಿಜೆಪಿಯಿಂದ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ವಿರೋಧ ಇಲ್ಲ. ಪಕ್ಷದ ಆದೇಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಯಡಿಯೂರಪ್ಪ ಅವರೇ ಖುದ್ದು ಪಟ್ಟಿ ಬಿಡುಗಡೆ ಆದ ಮೇಲೆ ನಾನೇ ಬಂದು ಜಂಟಿ ಸಭೆ ಮಾಡೋದಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಬಂದಿರುವ 1,600 ಕೋಟಿ ರೂ. ಏನು? – ಕಾಂಗ್ರೆಸ್‌ಗೆ ಅಮಿತ್‌ ಶಾ ಪ್ರಶ್ನೆ

    ಪ್ರೀತಂಗೌಡ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಅಸಮಾಧಾನ ಇಲ್ಲ. ಪ್ರೀತಂಗೌಡ ಅಸಮಾಧಾನ ಇದ್ದರೂ ಅದನ್ನ ಸರಿ ಮಾಡಿದ್ದೇವೆ. ಯಾವುದೇ ಗೊಂದಲ ಇಲ್ಲ. ಸಣ್ಣಪುಟ್ಟ ಗೊಂದಲ ಇದ್ದರೆ ಸರಿ ಮಾಡಿಕೊಂಡು ಹೋಗ್ತೀವಿ. ಎಲ್ಲಾ ಸ್ಥಳೀಯ ಬಿಜೆಪಿ ನಾಯಕರನ್ನ ಭೇಟಿಯಾಗಿ ಮನವಿ ಮಾಡ್ತಿದ್ದೇವೆ. ಎಲ್ಲರೂ ಕೂಡಾ ನಮ್ಮ ಪರವೇ ಕೆಲಸ ಮಾಡೋದಾಗಿ ಹೇಳಿದ್ದಾರೆ. ಪ್ರೀತಂಗೌಡ ಎಲ್ಲೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿಲ್ಲ. ಸ್ವಲ್ಪ ಅಸಮಾಧಾನದಲ್ಲಿ ಇದ್ದರೂ ಅದನ್ನು ಸರಿ ಮಾಡೋ ಕೆಲಸ ಆಗಿದೆ. ಎಲ್ಲರೂ ಒಂದಾಣಿಕೆಯಿಂದ ಈಗ ಕೆಲಸ ಮಾಡ್ತಿದ್ದಾರೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಅವರ ಜೊತೆ ಮಾತಾಡ್ತಿದ್ದಾರೆ ಎಂದರು.

  • Dakshina Kannada Lok Sabha 2024: ಬಿಜೆಪಿ ಭದ್ರಕೋಟೆ ಭೇದಿಸುತ್ತಾ ಕಾಂಗ್ರೆಸ್?‌

    Dakshina Kannada Lok Sabha 2024: ಬಿಜೆಪಿ ಭದ್ರಕೋಟೆ ಭೇದಿಸುತ್ತಾ ಕಾಂಗ್ರೆಸ್?‌

    – ಕಟೀಲ್‌ಗೆ ಕೊಕ್‌, ಕ್ಯಾ. ಬ್ರಿಜೇಶ್ ಚೌಟಗೆ ಟಿಕೆಟ್‌
    – ‘ಕೈ’ ಟಿಕೆಟ್‌ ಇನ್ನೂ ಕಗ್ಗಂಟು

    ಹಿಂದುತ್ವದ ನೆಲೆ, ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆ. ‘ಲೋಕ’ಸಮರದ ಕಳೆದ ಮೂರು ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕಡೆ ಕಮಲ ಅರಳಿದೆ. ಎರಡು ಕ್ಷೇತ್ರದ ಜನ ಕೈ ಪಕ್ಷವನ್ನು ಹಿಡಿದಿದ್ದಾರೆ.

    ಮೋದಿ ಹೆಸರಿನ ಬಲ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇದೆಲ್ಲವೂ ಹಿಂದುತ್ವದ ಅಲೆ ಇರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ವರದಾನವಾಗಿದೆ. ಇತ್ತ ಕಾಂಗ್ರೆಸ್ ಗ್ಯಾರಂಟಿಗಳನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಿದೆ. ಗ್ಯಾರೆಂಟಿಗಳ ಲಾಭ ಪಡೆದುಕೊಳ್ಳುತ್ತಿರುವ ಮತದಾರರು ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆ ಎಂಬ ವಿಶ್ವಾಸದಲ್ಲಿದೆ. ಇನ್ನು ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ, ಜಿಲ್ಲೆಯಲ್ಲಿ ಬಂಟ, ಬಿಲ್ಲವ ಮತಗಳೇ ನಿರ್ಣಾಯಕ. ಅದರ ಜೊತೆ ಮೊಗವೀರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ ಮತಗಳು ಕೂಡ ಗೆಲುವಿನ ಮೆಟ್ಟಿಲನ್ನು ಸುಲಭ ಮಾಡಲು ಬೇಕೇ ಬೇಕು.

    ಕ್ಷೇತ್ರ ಪರಿಚಯ
    ದಕ್ಷಿಣ ಕನ್ನಡ ಮೊದಲು ಮಂಗಳೂರು ಲೋಕಸಭಾ ಕ್ಷೇತ್ರದ ಭಾಗವಾಗಿತ್ತು. 1950 ರ ದಶಕದಿಂದ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸತತ ಗೆಲುವಿನ ಸರಪಳಿಯು 1991 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಧನಂಜಯ ಕುಮಾರ್ ಅವರ ಗೆಲುವಿನೊಂದಿಗೆ ಕಳಚಿತ್ತು. ಅಲ್ಲಿಂದ ಸತತ ಎಂಟು ಚುನಾವಣೆಗಳಲ್ಲೂ ಇಲ್ಲಿ ಬಿಜೆಪಿಯದ್ದೇ ಪಾರುಪತ್ಯ. 2004 ರಲ್ಲಿ ಬಿಜೆಪಿ ಡಿ.ವಿ.ಸದಾನಂದ ಗೌಡರಿಗೆ ಟಿಕೆಟ್ ನೀಡಿ ಗೆಲುವಿನ ಓಟವನ್ನು ಮುಂದುವರಿಸಿತು. 2009 ರಲ್ಲಿ ಗೌಡರ ವಿರುದ್ಧ ಪಕ್ಷದ ವಲಯದಲ್ಲಿ ಅಸಮಾಧಾನ ವ್ಯಕ್ತವಾದಾಗ, ಸಂಘ ಪರಿವಾರದ ಹಿನ್ನೆಲೆಯ ನಳಿನ್ ಕುಮಾರ್ ಕಟೀಲ್‌ಗೆ ಪಕ್ಷ ಮಣೆ ಹಾಕಿತು. ಸತತ ಮೂರು ಬಾರಿ ಕಟೀಲ್ ಸಂಸದರಾಗಿ ಆಯ್ಕೆಯಾದರು.

    ವಿಧಾನಸಭಾ ಕ್ಷೇತ್ರಗಳೆಷ್ಟು?
    ಕ್ಷೇತ್ರವು ಒಟ್ಟು 7 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಮಂಗಳೂರು ದಕ್ಷಿಣ (ವೇದವ್ಯಾಸ ಕಾಮತ್-ಬಿಜೆಪಿ), ಮಂಗಳೂರು ಉತ್ತರ (ಭರತ್ ಶೆಟ್ಟಿ-ಬಿಜೆಪಿ), ಬಂಟ್ವಾಳ (ರಾಜೇಶ್ ನಾಯಕ್-ಬಿಜೆಪಿ), ಬೆಳ್ತಂಗಡಿ (ಹರೀಶ್ ಪೂಂಜಾ-ಬಿಜೆಪಿ), ಸುಳ್ಯ (ಭಾಗೀರಥಿ ಮುರುಳ್ಯಾ-ಬಿಜೆಪಿ), ಪುತ್ತೂರು (ಅಶೋಕ್ ರೈ-ಕಾಂಗ್ರೆಸ್), ಉಳ್ಳಾಲ (ಯು.ಟಿ.ಖಾದರ್-ಕಾಂಗ್ರೆಸ್).

    ಒಟ್ಟು ಮತದಾರರ ಸಂಖ್ಯೆ
    ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,96,303 ಮತದಾರರಿದ್ದಾರೆ. ಅವರ ಪೈಕಿ 8,76,957 ಪುರುಷರು ಮತ್ತು 9,19,279 ಮಹಿಳಾ ಮತದಾರರಿದ್ದಾರೆ. 67 ತೃತೀಯಲಿಂಗಿ ಮತದಾರರು ಇದ್ದಾರೆ.

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?
    2019 ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು. ಮಿಥುನ್ ರೈ ವಿರುದ್ಧ ಕಟೀಲ್ 2,74,621 ಲಕ್ಷ ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದರು.

    ಹ್ಯಾಟ್ರಿಕ್ ಸರದಾರ ಕಟೀಲ್‌ಗೆ ತಪ್ಪಿದ ಟಿಕೆಟ್
    2022ರ ಜುಲೈನಲ್ಲಿ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಸಂದರ್ಭದಲ್ಲಿ ಕಟೀಲ್ ವಿರುದ್ಧ ಪಕ್ಷದ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಬಾರಿ ಬಿಜೆಪಿಯಲ್ಲಿ ಹೊಸ ಮುಖಕ್ಕೆ ಅವಕಾಶ ಕೊಡಬೇಕು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಎದ್ದಿತ್ತು. ಅದರ ಜೊತೆ ಪುತ್ತೂರಿನ ಅರುಣ್ ಪುತ್ತಿಲ ಬಿಜೆಗೆ ಬಂಡಾಯವಾಗಿ ನಿಂತಿದ್ದರಿಂದ ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿತ್ತು. ಈ ಎಲ್ಲ ರಾಜಕೀಯ ಬೆಳವಣಿಗೆಯಿಂದಾಗಿ ಹೈಕಮಾಂಡ್ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡಿದೆ. ಅರುಣ್ ಪುತ್ತಿಲ ಬಣದ ವಿರೋಧ ಇದ್ದದ್ದು ನಳಿನ್ ಸ್ಪರ್ಧೆಗೆ ಮಾತ್ರ. ಹೀಗಾಗಿ ಹೊಸ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿತು.

    ಬಹುಸಂಖ್ಯಾತರಿರೋ ಬಿಲ್ಲವರಿಗೆ ಮಣೆ ಹಾಕುತ್ತಾ ಕಾಂಗ್ರೆಸ್?
    1991 ರ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಮರೀಚಿಕೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದರೂ ಕಾಂಗ್ರೆಸ್‌ಗೆ ದಕ್ಷಿಣ ಕನ್ನಡ ಜಿಲ್ಲೆಯ ಫಲಿತಾಂಶ ನಿರಾಸೆ ಮೂಡಿಸಿತ್ತು. ಎಂಟರಲ್ಲಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಪಕ್ಷ ಗೆದ್ದಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗತ ವೈಭವ ಮರಳಿ ಪಡೆಯಬೇಕೆಂದು ಪಕ್ಷದ ಮುಖಂಡರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಪ್ರಾಬಲ್ಯ ಹೊಂದಿರುವ ಬಿಲ್ಲವ ಸಮುದಾಯದವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಲು ಕಾಂಗ್ರೆಸ್ ಮುಂದಾಗಿದೆ. ವಿನಯ್ ಕುಮಾರ್ ಸೊರಕೆ (ಬಿಲ್ಲವ), ಬಿ.ಕೆ.ಹರಿಪ್ರಸಾದ್ (ಬಿಲ್ಲವ), ಆರ್.ಪದ್ಮರಾಜ್ (ಬಿಲ್ಲವ) ಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಯು.ಟಿ.ಇಫ್ತಿಕಾರ್ (ಮುಸ್ಲಿಂ) ಕೂಡ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಪಕ್ಷವು ಯಾರಿಗೆ ಮಣೆ ಹಾಕುತ್ತೆ ಎಂಬುದು ಕುತೂಹಲ ಮೂಡಿಸಿದೆ.

    ಬಿಜೆಪಿ ಪ್ಲಸ್: ಹಿಂದುತ್ವದ ಭದ್ರಕೋಟೆ, ಮೋದಿ ಪರವಾದ ಅಲೆ, ಅಯೋಧ್ಯೆಯ ರಾಮಮಂದಿರ, ಹಿಂದೂ ಮತ ನಿರ್ಣಾಯಕ, ತಳಮಟ್ಟದ ಕಾರ್ಯಕರ್ತರ ಶ್ರಮ.

    ಕಾಂಗ್ರೆಸ್ ಪ್ಲಸ್: ಗ್ಯಾರಂಟಿ ಯೋಜನೆಗಳ ಲಾಭದ ನಿರೀಕ್ಷೆ, ಮುಸ್ಲಿಂ ಮತಗಳ ಕ್ರೋಢಿಕರಣ, ಹದಿನೈದು ವರ್ಷದಲ್ಲಿ ಅಭಿವೃದ್ಧಿ ಆಗದ ವಿಚಾರ ಚುನಾವಣಾ ಅಸ್ತ್ರ, ಸಾಫ್ಟ್ ಹಿಂದುತ್ವ ಧೋರಣೆ.

    ಜಾತಿವಾರು ಲೆಕ್ಕಾಚಾರ
    ಬಿಲ್ಲವ- 3.60 ಲಕ್ಷ
    ಮುಸ್ಲಿಂ- 3.50 ಲಕ್ಷ
    ಎಸ್ಸಿ/ಎಸ್‌ಟಿ- 2.80 ಲಕ್ಷ
    ಗೌಡ- 2 ಲಕ್ಷ
    ಬಂಟ್ಸ್- 1.25 ಲಕ್ಷ
    ಕ್ರಿಶ್ಚಿಯನ್- 1 ಲಕ್ಷ
    ಬ್ರಾಹ್ಮಣ- 1 ಲಕ್ಷ
    ಕೊಂಕಣಿ- 1 ಲಕ್ಷ
    ಇತರ- 3.50 ಲಕ್ಷ

  • ನಾಳೆ ಬೆಳಗ್ಗೆ ಒಳಗಡೆ ಅಭ್ಯರ್ಥಿಗಳ ಹೆಸರು ಹೊರಬೀಳುತ್ತೆ: ಡಿಕೆಶಿ ಸುಳಿವು

    ನಾಳೆ ಬೆಳಗ್ಗೆ ಒಳಗಡೆ ಅಭ್ಯರ್ಥಿಗಳ ಹೆಸರು ಹೊರಬೀಳುತ್ತೆ: ಡಿಕೆಶಿ ಸುಳಿವು

    ನವದೆಹಲಿ: ಇಂದು ಅಥವಾ ನಾಳೆ ಬೆಳಗ್ಗೆ ಒಳಗಡೆ ಅಭ್ಯರ್ಥಿಗಳ ಹೆಸರು ಹೊರ ಬೀಳಲಿದೆ. ಒಟ್ಟು 17 ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸುಳಿವು ನೀಡಿದರು.

    ದೆಹಲಿಯಲ್ಲಿ ಮಾತನಾಡಿದ ಡಿಕೆಶಿ, ಇನ್ನು ನಾಲ್ಕು ಕ್ಷೇತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಂಗಳೂರಿಗೆ ಹೋಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.

    ಬೆಂಗಳೂರು ಗ್ರಾಮಾಂತರದಲ್ಲಿ ಕುಕ್ಕರ್ ಹಂಚಿಕೆ ವಿಚಾರವಾಗಿ ಮಾತನಾಡಿ, ಅವೆಲ್ಲವೂ ಹಳೇ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿದ್ದಾರೆ. ಹಿಂದಿನಿಂದಲೂ ನಾವು ನಮ್ಮ ಕ್ಷೇತ್ರದ ಜನರಿಗೆ ಹಬ್ಬ ಹರಿ ದಿನದ ಸಂದರ್ಭದಲ್ಲಿ ಉಡುಗೊರೆ ನೀಡುತ್ತೇವೆ. ನನ್ನ ಮಗಳ ಮದುವೆಯ ಸಂದರ್ಭದಲ್ಲಿ ಎಲ್ಲರಿಗೂ ಸೀರೆಯನ್ನ ಕೊಟ್ಟಿದ್ದೇವೆ. ಕನಕೋತ್ಸವದ ಸಂದರ್ಭದಲ್ಲಿ ಮನೆಗಳಿಗೆ ಉಡುಗೊರೆ ನೀಡಿದ್ದೇವೆ. ಜೊತೆಗೆ ರಂಜಾನ್ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಉಡುಗೊರೆಯನ್ನು ನೀಡಿದ್ದೇವೆ. ನಮ್ಮ ಲೋಕಲ್ ಶಾಸಕರು ನೀಡಿದ್ದಾರೆ. ಅವರಿಗೆ ನೀತಿ ಸಂಹಿತೆ ಬಗ್ಗೆ ಗೊತ್ತಾಗಿಲ್ಲ. ಬಿಜೆಪಿ-ಜೆಡಿಎಸ್ ನಡುವೆ ಅಸಮಾಧಾನ ಇತ್ತು. ಅದನ್ನು ಶಮನಗೊಳಿಸಿದ ನಂತರ ಏನಾದರೂ ಮಾತನಾಡಬೇಕಲ್ಲ. ಅದಕ್ಕೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಹಾಗಾಗಿ ಈ ವಿಚಾರವನ್ನು ಮಾತನಾಡಿದ್ದಾರೆ. ಬಿಜೆಪಿಯವರಿಗೆ ಖುಷಿಪಡಿಸಬೇಕಲ್ಲ. ಹಾಗಾಗಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಟೀಕಿಸಿದರು.

    ಬಿಜೆಪಿಯವರಿಗೆ ಖುಷಿಪಡಿಸಲು ನನ್ನನ್ನ ಬೈತಾರೆ ಅನ್ನೋದಾದ್ರೆ ಒಳ್ಳೆಯದಾಗಲಿ. ಅವರಿಗೆ ಒಳ್ಳೆಯ ಆರೋಗ್ಯ ಕೊಡಲಿ. ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 5 ಹೆಣ್ಣುಮಕ್ಕಳಿಗೆ ಟಿಕೆಟ್ ನೀಡಿದ್ದೇವೆ. ಜೊತೆಗೆ ಶೇ.50 ರಷ್ಟು ಹೆಚ್ಚು ಟಿಕೆಟ್‌ಗಳನ್ನು ಯುವಕರಿಗೆ ನೀಡಿದ್ದೇವೆ ಎಂದು ಹೇಳಿದರು.

    ಕುಟುಂಬ ರಾಜಕಾರಣ ಮುಂದುವರೆದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಯಡಿಯೂರಪ್ಪನವರ ಮನೆಯಲ್ಲಿ ಕುಟುಂಬ ರಾಜಕಾರಣ ಇಲ್ವಾ? ಜೊತೆಗೆ ರಾಜಕೀಯವಾಗಿ ಸದೃಢ ಇರುವ ನಾಯಕರಿಗೆ ಟಿಕೆಟ್ ನೀಡಿದ್ದೇವೆ ಎಂದು ಬಿಜೆಪಿಗೆ ಟಾಂಗ್‌ ಕೊಟ್ಟರು.

    ಕೋಲಾರ ಲೋಕಸಭೆಯಲ್ಲಿ ಗೊಂದಲದ ಬಗ್ಗೆ ಮಾತನಾಡಿ, ಎರಡು ಕಡೆಯ ಬೆಂಬಲಿಗರು ಬಂದು ಭೇಟಿಯನ್ನ ಮಾಡಿದ್ದಾರೆ. ಅಂತಿಮವಾಗಿ ನಾವು ನಿರ್ಧಾರವನ್ನ ಕೈಗೊಳ್ಳುತ್ತೇವೆ ಎಂದರಲ್ಲದೇ, ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ವೀಣಾ ಕಾಶಪ್ಪನವರ ಹೆಸರು ಸ್ಕ್ರೀನಿಂಗ್ ಕಮಿಟಿಯಲ್ಲಿ ಇತ್ತು. ಅದು ಅವರಿಗೆ ಗೊತ್ತಿಲ್ಲ ಎಂದರು.

    ಡಿ.ಕೆ.ಶಿವಕುಮಾರ್ ನನಗೆ ವಿಷ ಇಟ್ಟಿದ್ದಾರೆ ಎಂಬ ಹೆಚ್‌ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನೇನಾದ್ರೂ ಸರ್ಕಾರ ಬೀಳಿಸಿದ್ರೆ, ಆತರ ಏನಾದರೂ ನಾನು ಮಾಡಿದ್ದರೆ ನಾನು ನಂಬುವ ದೇವರು ನನಗೆ ಶಿಕ್ಷೆ ಕೊಡಲಿ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್‌ನಿಂದ ಬಿಜೆಪಿ ನಾಯಕರಿಗೆ ಗಾಳ ವಿಚಾರಕ್ಕೆ ಬಹಿರಂಗವಾಗಿ ಮಾತನಾಡಲು ನಿರಾಕರಿಸಿದರು. ಬೇರೆ ಪಕ್ಷದ ನಾಯಕರು ಕಾಂಗ್ರೆಸ್‌ಗೆ ಬರುವ ಬಗ್ಗೆ ಬಹಿರಂಗವಾಗಿ ಮಾತನಾಡಲ್ಲ. ಕೆಲವು ಸಂಸದರು ಕಾಂಗ್ರೆಸ್ ಸೇರ್ಪಡೆ ವಿಚಾರ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

  • ಬಿಎಸ್‌ಪಿಯಿಂದ ಅಮಾನತಾಗಿದ್ದ ಡ್ಯಾನಿಶ್‌ ಅಲಿ ಕಾಂಗ್ರೆಸ್‌ ಸೇರ್ಪಡೆ

    ಬಿಎಸ್‌ಪಿಯಿಂದ ಅಮಾನತಾಗಿದ್ದ ಡ್ಯಾನಿಶ್‌ ಅಲಿ ಕಾಂಗ್ರೆಸ್‌ ಸೇರ್ಪಡೆ

    ನವದೆಹಲಿ: ಬಹುಜನ ಸಮಾಜ ಪಕ್ಷದಿಂದ (BSP) ಅಮಾನತುಗೊಂಡಿದ್ದ ಸಂಸದ ಡ್ಯಾನಿಶ್ ಅಲಿ ಅವರು ಲೋಕಸಭಾ ಚುನಾವಣೆಗೆ (Lok Sabha Elections 2024) ಮುನ್ನ ಬುಧವಾರ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

    ಕಳೆದ ವಾರ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿ ಮಾಡಿದ್ದರು. ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮುಂಬರುವ ಚುನಾವಣೆಯಲ್ಲಿ ಅಮ್ರೋಹಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದರು. ಇದನ್ನೂ ಓದಿ: ಸದಾನಂದಗೌಡರು ಬಿಜೆಪಿ ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು: ಶೋಭಾ ಕರಂದ್ಲಾಜೆ

    ಪಕ್ಷ ವಿರೋಧಿ ಚಟುವಟಿಕೆಗಳ ಕಾರಣಕ್ಕೆ ಡ್ಯಾನಿಶ್‌ ಅಲಿ (Danish Ali) ಅವರನ್ನು ಕಳೆದ ವರ್ಷ ಬಿಎಸ್‌ಪಿ ಅಮಾನತುಗೊಳಿಸಿತ್ತು. ಅಮ್ರೋಹಾ ಸಂಸದ ಪಕ್ಷದ ಆರೋಪವನ್ನು ನಿರಾಕರಿಸಿದ್ದರು. ಅವರು ಬಿಜೆಪಿ ನೇತೃತ್ವದ ಸರ್ಕಾರದ ‘ಜನವಿರೋಧಿ’ ನೀತಿಗಳ ವಿರುದ್ಧ ಮಾತ್ರ ಧ್ವನಿ ಎತ್ತಿದ್ದೆ ಎಂದು ಪ್ರತಿಪಾದಿಸಿದ್ದರು.

    ಮಾಯಾವತಿ ಅವರು ನನ್ನನ್ನು ಬಿಎಸ್‌ಪಿ ಸಂಸದೀಯ ಪಕ್ಷದ ನಾಯಕ ಸ್ಥಾನವನ್ನೂ ನೀಡಿದ್ದರು. ನಾನು ಯಾವಾಗಲೂ ಅವರ ಅಪಾರ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತಿದ್ದೆ. ಆವರ ಇಂದಿನ ನಿರ್ಧಾರ ದುರದೃಷ್ಟಕರ. ನಾನು ಎಲ್ಲಾ ಕಠಿಣ ಕೆಲಸಗಳನ್ನು ಮಾಡಿದ್ದೇನೆ. ಬಿಎಸ್‌ಪಿಯನ್ನು ಬಲಪಡಿಸಲು ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ. ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಗಳನ್ನು ಎಂದಿಗೂ ಮಾಡಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ: ಸ್ಟ್ರಾಂಗ್ ಯಾರು ಅನ್ನೋದು ಜಗತ್ತಿಗೆ ಗೊತ್ತಿದೆ- ಸಿಎಂ ವಿರುದ್ಧ ಸಿ.ಟಿ ರವಿ ಕಿಡಿ

    ಹೆಚ್.ಡಿ.ದೇವೇಗೌಡ ಅವರ ಶಿಫಾರಸಿನ ಮೇರೆಗೆ ಟಿಕೆಟ್ ದಕ್ಕಿಸಿಕೊಂಡಿದ್ದರು. ಇದಕ್ಕೂ ಮೊದಲು ಅವರು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈಗ ಬಿಎಸ್ಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

  • Mysuru Lok Sabha 2024: ಸಿಎಂಗೆ ಪ್ರತಿಷ್ಠೆ; ಬಿಜೆಪಿಗೆ ಹ್ಯಾಟ್ರಿಕ್ ನಿರೀಕ್ಷೆ – ಮೈಸೂರು-ಕೊಡಗು ಕ್ಷೇತ್ರ ಯಾರ ಕೈಗೆ?

    Mysuru Lok Sabha 2024: ಸಿಎಂಗೆ ಪ್ರತಿಷ್ಠೆ; ಬಿಜೆಪಿಗೆ ಹ್ಯಾಟ್ರಿಕ್ ನಿರೀಕ್ಷೆ – ಮೈಸೂರು-ಕೊಡಗು ಕ್ಷೇತ್ರ ಯಾರ ಕೈಗೆ?

    – ರಾಜವಂಶಸ್ಥನ ವಿರುದ್ಧ ಕಣಕ್ಕಿಳಿಯೋ ‘ಕೈ’ ಅಭ್ಯರ್ಥಿ ಯಾರು?

    ಸಾಂಸ್ಕೃತಿಕ ನಗರಿ ಮೈಸೂರು (Mysuru). ಕಲೆ, ಸಾಹಿತ್ಯ ಹಿನ್ನೆಲೆಯಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದ ಜಿಲ್ಲೆ. ಮಂಜಿನ ನಗರಿ ಮಡಿಕೇರಿ. ಭೌಗೋಳಿಕವಾಗಿ ಎರಡೂ ನಗರಗಳೂ ಒಂದಕ್ಕೊಂದು ಸಂಬಂಧ ಹೊಂದಿವೆ. ಅಂತೆಯೇ ರಾಷ್ಟ್ರ ರಾಜಕಾರಣ ವಿಚಾರದಲ್ಲೂ ಕೂಡ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ (Mysuru-Kodagu Lok Sabha 2024) ಈಗ ರಾಜಕೀಯ ದೃಷ್ಟಿಯಿಂದ ದೇಶದ ಗಮನ ಸೆಳೆದಿದೆ. ‘ಲೋಕ’ಸಮರಕ್ಕೆ ಅಖಾಡ ಸಜ್ಜಾಗಿದ್ದು, ರಾಷ್ಟ್ರೀಯ ಪಕ್ಷಗಳು ಮೈಸೂರು ಲೋಕಸಭಾ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿವೆ. ಎರಡು ಕಾರಣಕ್ಕೆ ಮೈಸೂರು ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಪ್ರಮುಖ ಕಣವಾಗಿ ಬಿಂಬಿತವಾಗಿದೆ. ಒಂದು, ಕರ್ನಾಟದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ. ಎರಡು, ಮೈಸೂರು ಒಡೆಯರ್ ಸಂಸ್ಥಾನದ ಕುಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದು.

    ಮೇಲ್ನೋಟಕ್ಕೆ ಕಾಂಗ್ರೆಸ್‌ನ (Congress) ಭದ್ರಕೋಟೆ ಎನಿಸಿಕೊಂಡಿರುವ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ನಾಲ್ಕು ಬಾರಿ ಗೆದ್ದಿದೆ. 1998, 2004, 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಅಧಿಪತ್ಯ ಸಾಧಿಸಿದೆ. ಬಿಜೆಪಿಯಿಂದ ಸಿ.ಹೆಚ್.ವಿಜಯಶಂಕರ್ (C.H.Vijayashankar) ಎರಡು ಬಾರಿ ಸಂಸದರಾಗಿದ್ದರು. ನಂತರ ಈಗ ಪ್ರತಾಪ್‌ಸಿಂಹ (Pratap Simha) ಎರಡು ಬಾರಿ ಸಂಸದರಾಗಿದ್ದಾರೆ. 1962 ರಿಂದ 2019 ರವರೆಗೆ ಒಟ್ಟು 15 ಲೋಕಸಭಾ ಚುನಾವಣೆ ನಡೆದಿವೆ. ಇದರಲ್ಲಿ 11 ಬಾರಿ ಕಾಂಗ್ರೆಸ್ ಗೆದ್ದಿದ್ದು, ನಾಲ್ಕು ಬಾರಿ ಬಿಜೆಪಿ ಗೆದ್ದಿದೆ. ಇದನ್ನೂ ಓದಿ: Mandya Lok Sabha 2024: ಸಕ್ಕರೆ ನಾಡಿನ ಜನ ಸಿಹಿ ತಿನ್ನಿಸೋದು ಯಾರಿಗೆ?

    ಕ್ಷೇತ್ರ ಪರಿಚಯ
    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1952 ರಿಂದ 1996 ರ ವರೆಗೆ ‘ಕೈ’ ಹಿಡಿತದಲ್ಲಿತ್ತು. 1998 ರಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಜಯಗಳಿಸಿ ಮೊದಲ ಬಾರಿಗೆ ಕಮಲ ಅರಳಿಸಿದರು. ಅದಾದ ಬಳಿಕ 2009 ರ ವರೆಗೂ ಒಮ್ಮೆ ಕಾಂಗ್ರೆಸ್, ಒಮ್ಮೆ ಬಿಜೆಪಿ ಎಂಬಂತೆ ಸೋಲು-ಗೆಲುವಿನ ಆಟ ನಡೆದಿತ್ತು. ನಂತರ ದೇಶದಲ್ಲಿ ನರೇಂದ್ರ ಮೋದಿ ಅಲೆ ಇದ್ದ ಸಂದರ್ಭದಲ್ಲಿ ಎರಡು ಅವಧಿಗೆ (2014, 2019) ಬಿಜೆಪಿಯ ಪ್ರತಾಪ್ ಸಿಂಹ ಕ್ಷೇತ್ರವನ್ನು ಪ್ರತಿನಿಧಿಸಿದರು. ಈ ಹಿಂದೆ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳು ದಕ್ಷಿಣ ಕನ್ನಡ ಲೋಕಸಭೆಗೆ ಸೇರಿದ್ದವು. 2009 ಕ್ಕೆ ಅವುಗಳನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಯಿತು.

    ವಿಧಾನಸಭಾ ಕ್ಷೇತ್ರಗಳೆಷ್ಟು?
    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಗಳು ಒಟ್ಟು ಎಂಟು ವಿಧಾನಸಭೆಗಳನ್ನು ಒಳಗೊಂಡಿವೆ. ಮಡಿಕೇರಿ, ವಿರಾಜಪೇಟೆ (ಕೊಡಗು ಜಿಲ್ಲೆ) ಹಾಗೂ ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ. ಇದನ್ನೂ ಓದಿ: Koppal Lok Sabha 2024: ಹನುಮನ ಕೃಪ ಕಟಾಕ್ಷ ಯಾರ ಮೇಲೆ?

    ಮತದಾರರು ಎಷ್ಟು?
    ಈ ಕ್ಷೇತ್ರದಲ್ಲಿ ಒಟ್ಟು 20,72,337 ಮತದಾರರಿದ್ದಾರೆ. ಅವರ ಪೈಕಿ 10,17,120 ಪುರುಷ ಮತದಾರರು ಹಾಗೂ 10,55,035 ಮಹಿಳಾ ಮತದಾರರಿದ್ದಾರೆ. 182 ತೃತೀಯಲಿಂಗಿ ಮತದಾರರಿದ್ದಾರೆ.

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?
    2019 ರ ಚುನಾವಣೆಯಲ್ಲಿ ಪ್ರತಾಪ್ ಸಿಂಹ 6,88,974 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್‌ರನ್ನು ಸೋಲಿಸಿದ್ದರು. ವಿಜಯಶಂಕರ್‌ಗೆ 5,50,327 ಮತ ಬಂದಿದ್ದವು. ಬಿಜೆಪಿಯ ಗೆಲುವಿನ ಅಂತರ 1,38,647 ಮತಗಳು. ಸತತ ಎರಡನೇ ಬಾರಿಗೆ ಪ್ರತಾಪ್ ಸಿಂಹ ಕ್ಷೇತ್ರದಿಂದ ಗೆದ್ದು ಬೀಗಿದ್ದರು. ಇದನ್ನೂ ಓದಿ: Kalaburagi Lok Sabha 2024: ಖರ್ಗೆ ತವರಲ್ಲಿ ಮತ್ತೆ ಮೋಡಿ ಮಾಡುತ್ತಾ ಬಿಜೆಪಿ?

    ಸಿಎಂಗೆ ಪ್ರತಿಷ್ಠೆ
    ಮೈಸೂರು ಲೋಕಸಭಾ ಕ್ಷೇತ್ರ ಸಿಎಂ ಸಿದ್ದರಾಮಯ್ಯ ಪಾಲಿಗೆ ಅತ್ಯಂತ ಪ್ರತಿಷ್ಠೆ ಕ್ಷೇತ್ರ. ಮೊದಲ ಬಾರಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಈ ಕ್ಷೇತ್ರ ಕಾಂಗ್ರೆಸ್‌ನಿಂದ ಕೈ ಜಾರಿ ಬಿಜೆಪಿ ಮಡಿಲಿಗೆ ಬಿದ್ದಿತ್ತು. ನಂತರ 2019 ರಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಗಲೂ ಬಿಜೆಪಿ ಈ ಕ್ಷೇತ್ರ ಉಳಿಸಿ ಕೊಂಡಿತು. ಹೀಗಾಗಿ ಈ ಬಾರಿಯೂ ಸಿದ್ದರಾಮಯ್ಯ (Siddaramaiah) ಸಿಎಂ ಆಗಿರೋ ಕಾರಣ ತವರು ಕ್ಷೇತ್ರವನ್ನು ಮರಳಿ ಪಡೆಯಲೇ ಬೇಕಾದ ಪ್ರತಿಷ್ಠೆಗೆ ಬಿದ್ದಿದ್ದಾರೆ.

    ಬಿಜೆಪಿ+ಜೆಡಿಎಸ್
    ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಆದರೂ ಕೂಡ ಜೆಡಿಎಸ್ ಮತದಾರರ ಒಲವು ಹಲವು ಕಾರಣದಿಂದ ಬಿಜೆಪಿ ಪರವಾಗಿಯೆ ಇತ್ತು. ಒಂದು ರೀತಿ ಅನಧಿಕೃತ ಮೈತ್ರಿ ರೀತಿ ಜೆಡಿಎಸ್ ಮತದಾರರು ಬಿಜೆಪಿ ಅಭ್ಯರ್ಥಿ ಕೈ ಹಿಡಿದು ಗೆಲುವಿನ ದಡ ಮುಟ್ಟಿಸಿದ್ದರು. ಈ ಬಾರಿ ಎರಡು ಪಕ್ಷಗಳು ಅಧಿಕೃತವಾಗಿಯೆ ಮೈತ್ರಿ ಆಗಿರೋ ಕಾರಣ ಮೈತ್ರಿ ಅಭ್ಯರ್ಥಿಯನ್ನು ಮಣಿಸುವುದು ಕಾಂಗ್ರೆಸ್‌ಗೆ ಅಷ್ಟು ಸುಲಭದ ಕೆಲಸವಲ್ಲ. ಸ್ಥಳೀಯವಾಗಿ ಜೆಡಿಎಸ್-ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಹೊಂದಾಣಿಕೆ ಬಹಳ ಚೆನ್ನಾಗಿ ಇರುವ ಕಾರಣ ಮೈತ್ರಿ ಅಭ್ಯರ್ಥಿಗೆ ಇದರ ಲಾಭವಾಗಬಹುದು. ಇದನ್ನೂ ಓದಿ: Kolar Lok Sabha 2024: ಚಿನ್ನದ ನಾಡನ್ನು ಮತ್ತೆ ವಶಕ್ಕೆ ಪಡೆಯುತ್ತಾ ಕಾಂಗ್ರೆಸ್? – ಕ್ಷೇತ್ರ ಗೆಲ್ಲಲು ಮೈತ್ರಿ ನಡೆ ಏನು?

    ರಾಜವಂಶಸ್ಥ ಚುನಾವಣಾ ಅಖಾಡಕ್ಕೆ
    ಸಿಂಹಾಸನದಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಎರಡು ದಶಕಗಳ ನಂತರ ರಾಜಪರಿವಾರದವರು ಮತ್ತೆ ಚುನಾವಣಾ ರಾಜಕಾರಣಕ್ಕೆ ಕಾಲಿಟ್ಟಿರುವುದು ಕ್ಷೇತ್ರದ ವಿಶೇಷ. ಯದುವೀರ್ ಅವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಲ್ಕು ಬಾರಿ (1984, 1989, 1996 ಹಾಗೂ 1999) ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಈಗ ಅವರ ಪುತ್ರ ಯದುವೀರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸತತ ಮೂರನೇ ಬಾರಿಗೆ ಕ್ಷೇತ್ರವನ್ನು ಜಯಿಸಬೇಕು ಎಂದು ಬಿಜೆಪಿ ಗುರಿ ಹೊಂದಿದೆ. ಆದರೆ ಕ್ಷೇತ್ರವನ್ನು ಹೇಗಾದರೂ ಮಾಡಿ ಮತ್ತೆ ತನ್ನ ಕೈವಶ ಮಾಡಿಕೊಳ್ಳಬೇಕು ಎಂಬ ತಂತ್ರವನ್ನು ಕಾಂಗ್ರೆಸ್ ರೂಪಿಸುತ್ತಿದೆ.

    ‘ಕೈ’ ಅಭ್ಯರ್ಥಿ ಯಾರು?
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಯದುವೀರ್ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎಂಬುದು ಕಗ್ಗಂಟಾಗಿದೆ. ತಮ್ಮ ಪುತ್ರ ಯತೀಂದ್ರ ಅವರನ್ನೇ ಕಣಕ್ಕಿಳಿಸಿ ಎಂದು ಸಿದ್ದರಾಮಯ್ಯಗೆ ಸ್ಥಳೀಯ ನಾಯಕರು ಒತ್ತಾಯಿಸಿದ್ದರು. ಆದರೆ ಪುತ್ರನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸಿದ್ದರಾಮಯ್ಯ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಅದೇ ಸಮುದಾಯದ ನಾಯಕನನ್ನು ಅಖಾಡಕ್ಕೆ ಇಳಿಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಬಿಜೆಪಿಗೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಬೇಕು ಎಂಬುದು ಪಕ್ಷದ ಲೆಕ್ಕಾಚಾರ. ಹೀಗಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಅವರ ಹೆಸರು ಕಾಂಗ್ರೆಸ್ ಪಾಳಯದಲ್ಲಿ ಕೇಳಿಬರುತ್ತಿದೆ. ಒಟ್ಟಾರೆ ‘ಕೈ’ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.

    ‘ಪಬ್ಲಿಕ್ ಟಿವಿ’ಯಿಂದ ನಿಖರ ವರದಿ
    2014 ರಲ್ಲಿ ಬಿಜೆಪಿ ಹೊಸ ಮುಖಕ್ಕೆ ಅವಕಾಶ ನೀಡಿತ್ತು. ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ರಾಜಕೀಯಕ್ಕೆ ಬಂದು ಬಿಜೆಪಿ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್ ವಿರುದ್ಧ ಗೆದ್ದು ಮೊದಲ ಬಾರಿಗೆ ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಮತ್ತೆ 2019 ರಲ್ಲೂ ಪಕ್ಷದಿಂದ ಟಿಕೆಟ್ ಪಡೆದು ಕಣಕ್ಕಿಳಿದಿದ್ದ ಪ್ರತಾಪ್ ಸಿಂಹ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಮಣಿಸಿದ್ದರು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಹೈಕಮಾಂಡ್‌ನಿಂದ ಅಚ್ಚರಿಯ ಘೋಷಣೆ ಹೊರಬಿತ್ತು. ಈ ಸಲ ಪ್ರತಾಪ್ ಸಿಂಹ ಬದಲು ಯದುವೀರ್‌ಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ತೀರ್ಮಾನಿಸಿರುವ ವಿಚಾರವನ್ನು ಮೊಟ್ಟ ಮೊದಲು ಸುದ್ದಿಯಾಗಿ ಬಿತ್ತರಿಸಿದ್ದು ‘ಪಬ್ಲಿಕ್ ಟಿವಿ’ ಎಂಬುದು ಗಮನಾರ್ಹ. ಪಬ್ಲಿಕ್ ಟಿವಿಯಿಂದ ನಿಖರ ಮಾಹಿತಿ ಹೊರಬೀಳುತ್ತಿದ್ದಂತೆ ಮೈಸೂರು ಹಾಗೂ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಪ್ರತಾಪ್ ಸಿಂಹ ಅವರು ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್ ವಿಷಯವಾದರು. ಸಂಸದ ತನ್ನ ಅವಧಿಯಲ್ಲಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುತ್ತಾ, ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರಿಟ್ಟರು. ಹಾಲಿ ಸಂಸದನಿಗೆ ಟಿಕೆಟ್ ನೀಡಬೇಕು ಎಂದು ಅಭಿಮಾನಿಗಳು ಅಭಿಯಾನ ನಡೆಸಿದ್ದರು. ಮತ್ತೊಂದೆಡೆ ರಾಜವಂಶಸ್ಥ ಯದುವೀರ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದಕ್ಕೆ ಅನೇಕರಿಂದ ಬೆಂಬಲ ಕೂಡ ವ್ಯಕ್ತವಾಯಿತು. ಅಭ್ಯರ್ಥಿ ವಿಚಾರವಾಗಿ ‘ಪಬ್ಲಿಕ್ ಟಿವಿ’ ಬಿತ್ತರಿಸಿದ ವರದಿ ಸದ್ದು ಮಾಡಿತ್ತೆಂದರೆ ಅತಿಶಯೋಕ್ತಿ ಅಲ್ಲ. ಇದನ್ನೂ ಓದಿ: Uttara Kannada Lok Sabha 2024: ಬಿಜೆಪಿ ನಾಗಾಲೋಟಕ್ಕೆ ಕಾಂಗ್ರೆಸ್‌ ಹಾಕುತ್ತಾ ಬ್ರೇಕ್?‌

    ಜಾತಿವಾರು ಲೆಕ್ಕಾಚಾರ
    ಒಕ್ಕಲಿಗರು: 4 ಲಕ್ಷ
    ಮುಸ್ಲಿಂ: 2.80 ಲಕ್ಷ
    ಕುರುಬರು: 1.50 ಲಕ್ಷ
    ಎಸ್ಸಿ (ಎಡ): 2 ಲಕ್ಷ
    ಎಸ್ಸಿ (ಬಲ): 1 ಲಕ್ಷ
    ಲಿಂಗಾಯತ: 1.35 ಲಕ್ಷ
    ಎಸ್ಟಿ: 1.40
    ಕೊಡವ: 1 ಲಕ್ಷ
    ಬ್ರಾಹ್ಮಣರು: 1.10 ಲಕ್ಷ
    ಬುಡಕಟ್ಟು: 45 ಸಾವಿರ
    ಇತರೆ: 1.50 ಲಕ್ಷ

  • Kalaburagi Lok Sabha 2024: ಖರ್ಗೆ ತವರಲ್ಲಿ ಮತ್ತೆ ಮೋಡಿ ಮಾಡುತ್ತಾ ಬಿಜೆಪಿ?

    Kalaburagi Lok Sabha 2024: ಖರ್ಗೆ ತವರಲ್ಲಿ ಮತ್ತೆ ಮೋಡಿ ಮಾಡುತ್ತಾ ಬಿಜೆಪಿ?

    – ಲಕ್ಕಿ ಕ್ಷೇತ್ರ ಕಲಬುರಗಿಯಿಂದಲೇ ‘ಲೋಕ’ಸಮರಕ್ಕೆ ಕಹಳೆ ಊದಿದ ಮೋದಿ
    – ಉಮೇಶ್‌ ಜಾಧವ್‌ಗೆ ‘ಕೈ’ ಎದುರಾಳಿ ಯಾರು?

    ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ತವರು ಕಲಬುರಗಿ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲೇ ಕ್ಷೇತ್ರ ಹೆಚ್ಚು ಕುತೂಹಲ ಮೂಡಿಸುತ್ತದೆ. ಸ್ವಾತಂತ್ರ್ಯ ನಂತರದಲ್ಲಿ ನಾಲ್ಕು ದಶಕಗಳ ಕಾಲ ಕಲಬುರಗಿ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. 1996 ಜೆಡಿಎಸ್ ಅಭ್ಯರ್ಥಿ ಕಮರ್ ಉಲ್ ಇಸ್ಲಾಂ ಗೆಲುವು ದಾಖಲಿಸಿ ‘ಕೈ’ ತೆಕ್ಕೆಯಿಂದ ಕ್ಷೇತ್ರವನ್ನು ಮೊದಲ ಬಾರಿಗೆ ಬಿಡಿಸಿದರು. ಅದಾದ ಬಳಿಕ ಒಮ್ಮೆ ಬಿಜೆಪಿ ಕೂಡ ಕ್ಷೇತ್ರದಲ್ಲಿ ಜಯ ಸಾಧಿಸಿತು. ಮತ್ತೆ ಎರಡು ದಶಕಗಳ ಕಾಲ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಸೇರಿತು. ಈಗ ಬಿಜೆಪಿ ಹಿಡಿತಕ್ಕೆ ಸಿಕ್ಕಿದೆ.

    1999 ರಿಂದ ಎರಡು ಅವಧಿಗೆ ಕಾಂಗ್ರೆಸ್‌ನ (Congress) ಇಕ್ಬಾಲ್ ಅಹ್ಮದ್ ಸರಡಗಿ (1999, 2004) ಸಂಸದರಾಗಿದ್ದರು. ನಂತರ 2009 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು. ಮನಮೋಹನ್ ಸಿಂಗ್ (Manmohan Singh) ಸಂಪುಟದಲ್ಲಿ ಕೇಂದ್ರ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಖರ್ಗೆ 2009, 2014 ಎರಡು ಬಾರಿ ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಆದರೆ 2019 ರಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡರು. ಈಗ ಮತ್ತೆ ಚುನಾವಣೆಗೆ ಅಖಾಡ ಸಜ್ಜಾಗಿದೆ. ಇದನ್ನೂ ಓದಿ: Uttara Kannada Lok Sabha 2024: ಬಿಜೆಪಿ ನಾಗಾಲೋಟಕ್ಕೆ ಕಾಂಗ್ರೆಸ್‌ ಹಾಕುತ್ತಾ ಬ್ರೇಕ್?‌

    ಕ್ಷೇತ್ರ ಪರಿಚಯ
    ಗುಲ್ಬರ್ಗ ಲೋಕಸಭಾ ಕ್ಷೇತ್ರವನ್ನು 1951 ರಲ್ಲಿ ಅಂದರೆ ಸಾರ್ವತ್ರಿಕ ಚುನಾವಣೆಗೂ ಮೊದಲು ರಚಿಸಲಾಯಿತು. 1952 ರಲ್ಲಿ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ವಾಮಿ ರಮಾನಂದ ತೀರ್ಥರು ಸ್ಪರ್ಧಿಸಿ ಜಯಗಳಿಸಿದ್ದರು.

    ವಿಧಾನಸಭಾ ಕ್ಷೇತ್ರಗಳೆಷ್ಟು?
    ಕಲಬುರಗಿ (Kalaburagi Lok Sabha 2024) ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮೀಣ, ಸೇಡಂ, ಚಿತ್ತಾಪುರ, ಅಫಜಲಪುರ್, ಜೇವರ್ಗಿ ಹಾಗೂ ಗುರುಮಠಕಲ್ ಕ್ಷೇತ್ರಗಳನ್ನು ಒಳಗೊಂಡಿದೆ.

    ಒಟ್ಟು ಮತದಾರರು ಎಷ್ಟು?
    ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 22,79,426 ಮತದಾರರು ಇದ್ದಾರೆ. ಪುರುಷರು 10,40,615 ಹಾಗೂ ಮಹಿಳೆಯರು 10,38,532 ಮತದಾರರಿದ್ದಾರೆ. ಇದನ್ನೂ ಓದಿ: Haveri-Gadag Lok Sabha 2024: ಬಿಜೆಪಿ v/s ಕಾಂಗ್ರೆಸ್‌ – ಗೆಲುವು ಯಾರಿಗೆ?

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?
    2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿದ್ದರು. ಅವರ ಎದುರಿಗೆ ಆಪರೇಶನ್ ಕಮಲ ಮೂಲಕ ಚಿಂಚೋಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಲಬುರಗಿ ಲೋಕಸಭೆಯ ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ್ ಜಾಧವ್ (Umesh Jadhav) ಸ್ಪರ್ಧಿಸಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದ್ದರು. ಖರ್ಗೆ 95,457 ಮತಗಳ ಅಂತರದಿಂದ ಸೋತಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿದ್ದರೂ ಜೆಡಿಎಸ್‌ಗೆ ತನ್ನದೆ ಆದ ಅಸ್ವಿತ್ವ ಇಲ್ಲದ ಹಿನ್ನೆಲೆ ಅಷ್ಟು ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಲಾಭ ಆಗಲಿಲ್ಲ.

    ಮೀಸಲು ಕ್ಷೇತ್ರ ಕಲಬುರಗಿ
    ಸಂಸದೀಯ ಕ್ಷೇತ್ರಗಳ ವಿಂಗಡಣೆಯ ನಂತರ ಕಲಬುರಗಿ ಲೋಕಸಭಾ ಕ್ಷೇತ್ರ 2008ರಲ್ಲಿ ಎಸ್‌ಸಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. ನಂತರ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ 2013ರಲ್ಲಿ ಮೋದಿ ಅಬ್ಬರದ ಮಧ್ಯೆಯೂ ಸಹ ಖರ್ಗೆ ಅವರು ಸುಮಾರು 63 ಸಾವಿರ ಮತಗಳ ಅಂತರದಿಂದ ಬಿಜೆಪಿಯ ರೇವುನಾಯಕ ಬೆಳಮಗಿಗೆ ಸೋಲಿನ ರುಚಿ ತೋರಿಸಿದ್ದರು. ಆದರೆ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಳ ಜಗಳ ಹಾಗೂ ಸಚಿವ ಸ್ಥಾನದಿಂದ ವಂಚಿತರಾಗಿದ್ದ ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್,ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ್ ಹೆಬ್ಬಾಳ, ಮಾಲಕರೆಡ್ಡಿ ಸೇರಿದಂತೆ ಹಲವು ನಾಯಕರು ಖರ್ಗೆ ವಿರುದ್ಧ ತೊಡೆ ತಟ್ಟಿ ಚಿಂಚೋಳಿಯ ಡಾ.ಉಮೇಶ್ ಜಾಧವ್‌ಗೆ ಶಾಸಕ ಸ್ಥಾನದಿಂದ ರಾಜೀನಾಮೆ ಕೊಡಿಸಿ ಖರ್ಗೆ ವಿರುದ್ಧ ಕಣಕ್ಕೆ ಇಳಿಸಿದ್ದರು. ಪರಿಣಾಮವಾಗಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿನಾಯ ಸೋಲಾಯಿತು.

    ಉಮೇಶ್‌ ಜಾಧವ್‌ ಬಿಜೆಪಿ ಟಿಕೆಟ್‌
    ಸೋಲಿಲ್ಲದ ಸರದಾರನನ್ನು 2019 ರ ಚುನಾವಣೆಯಲ್ಲಿ ಮಣಿಸಿದ್ದ ಬಿಜೆಪಿ ಸಂಸದ ಉಮೇಶ್‌ ಜಾಧವ್‌ಗೆ ಬಿಜೆಪಿ ಮತ್ತೆ ಟಿಕೆಟ್‌ ಕೊಟ್ಟಿದೆ. 2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದವು. ಆದರೆ ಈ ಸಲ ಉಲ್ಟಾ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿವೆ. ಬಿಜೆಪಿಯಿಂದ ಹಾಲಿ ಸಂಸದ ಡಾ.ಉಮೇಶ್ ಜಾಧವ್ ಈಗಾಗಲೇ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಇದನ್ನೂ ಓದಿ: Dharwad Lok Sabha 2024: ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕುತ್ತಾ ‘ಕೈ’?

    ‘ಕೈ’ ಟಿಕೆಟ್‌ ಕಗ್ಗಂಟು
    ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ ಆದರೆ ಮಾತ್ರ ಟಫ್ ಫೈಟ್ ಆಗುವುದರಲ್ಲಿ ಎರಡು ಮಾತಿಲ್ಲ. ಆದರೆ ಎಐಸಿಸಿ ಅಧ್ಯಕ್ಷರಾದ ಹಿನ್ನೆಲೆ ದೇಶ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತರಲು ಖರ್ಗೆ ಪಣ ತೊಟ್ಟಿದ್ದು, ಕಲಬುರಗಿ ಲೋಕಸಭೆಯಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಅವರು ಸ್ಪರ್ಧೆಗೆ ನಿರಾಕರಿಸಿದರೆ ಅವರ ಅಳಿಯ ರಾಧಾಕೃಷ್ಣ, ಪುತ್ರ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ರೇವುನಾಯಕ, ಬೆಳಮಗಿ ಬಂಜಾರಾ ಮುಖಂಡ ಸುಭಾಶ್ ರಾಠೋಡ್ ಪೈಕಿ ಯಾರಾದರು ಒಬ್ಬರಿಗೆ ಟಿಕೆಟ್‌ ಪಕ್ಕ ಎನ್ನಲಾಗುತ್ತಿದೆ. ಖರ್ಗೆ ಅಳಿಯ ರಾಧಾಕೃಷ್ಣ ಅವರಿಗೆ ಟಿಕೆಟ್‌ ಸಿಗಬಹುದು ಎಂಬ ಮಾತು ಕೇಳಿಬರುತ್ತಿದೆ.

    ಮೈತ್ರಿಯಿಂದ ಬಿಜೆಪಿಗೆ ಲಾಭ?
    ಕಾಂಗ್ರೆಸ್ ಭದ್ರಕೋಟೆಯಾಗಿರುವ ಕಲಬುರಗಿ ಲೋಕಸಭೆಯಲ್ಲಿ ಜೆಡಿಎಸ್ ಹೇಳಿಕೊಳ್ಳುವಷ್ಟು ತಳಮಟ್ಟದಲ್ಲಿ ಪಕ್ಷ ಸಂಘಟನೆ ಇಲ್ಲ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೇವರ್ಗಿಯಿಂದ ದೊಡಪ್ಪಗೌಡ ಪಾಟೀಲ್ ಹಾಗೂ ಸೇಡಂ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಾಲರಾಜ್ ಗುತ್ತೇದಾರ್ ತಮ್ಮದೆ ಆದ ಛಾಪು ಹೊಂದಿದ್ದಾರೆ. ಹೀಗಾಗಿ ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: Hassan Lok Sabha 2024: ದೊಡ್ಡಗೌಡ್ರ ಭದ್ರಕೋಟೆ ಭೇದಿಸಲು ಕಾಂಗ್ರೆಸ್‌ ಕಸರತ್ತು!

    ಯಾವ ಅವಧಿಯಲ್ಲಿ ಯಾವ ಪಕ್ಷ ಗೆದ್ದಿತ್ತು?
    2009: ಮಲ್ಲಿಕಾರ್ಜುನ ಖರ್ಗೆ – ಕಾಂಗ್ರೆಸ್ (13,404 ಮತ, ಗೆಲುವಿನ ಅಂತರ)
    2014: ಮಲ್ಲಿಕಾರ್ಜುನ ಖರ್ಗೆ – ಕಾಂಗ್ರೆಸ್ (74,733 ಮತ, ಗೆಲುವಿನ ಅಂತರ)
    2019: ಡಾ.ಉಮೇಶ್ ಜಾಧವ್ – ಬಿಜೆಪಿ (95,452 ಗೆಲುವಿನ ಅಂತರ)

    ಜಾತಿವಾರು ಲೆಕ್ಕಾಚಾರ
    ಲಿಂಗಾಯತ – 5,30,000
    ಎಸ್‌ಸಿ/ಎಸ್‌ಟಿ – 3,80,000
    ಮುಸ್ಲಿಂ – 3,10,000
    ಕೊಲಿ – 2,70,000
    ಲಂಬಾಣಿ – 2,20,000
    ಕುರುಬ – 1,90,000
    ಬ್ರಾಹ್ಮಣ – 90,000
    ಗಾಣಿಗ – 80,000
    ರೆಡ್ಡಿ – 75,000
    ಇತರೆ – 1,23,000

  • Kolar Lok Sabha 2024: ಚಿನ್ನದ ನಾಡನ್ನು ಮತ್ತೆ ವಶಕ್ಕೆ ಪಡೆಯುತ್ತಾ ಕಾಂಗ್ರೆಸ್? – ಕ್ಷೇತ್ರ ಗೆಲ್ಲಲು ಮೈತ್ರಿ ನಡೆ ಏನು?

    Kolar Lok Sabha 2024: ಚಿನ್ನದ ನಾಡನ್ನು ಮತ್ತೆ ವಶಕ್ಕೆ ಪಡೆಯುತ್ತಾ ಕಾಂಗ್ರೆಸ್? – ಕ್ಷೇತ್ರ ಗೆಲ್ಲಲು ಮೈತ್ರಿ ನಡೆ ಏನು?

    – ಕೈ, ಕಮಲ-ತೆನೆ ಪಾಳಯದಲ್ಲಿ ಬಗೆಹರಿಯದ ಟಿಕೆಟ್ ಕಗ್ಗಂಟು

    ಕೋಲಾರ: ಚಿನ್ನ, ಹಾಲು, ರೇಷ್ಮೆ ಮತ್ತು ತರಕಾರಿಗಳಿಗೆ ಪ್ರಸಿದ್ಧಿ ಪಡೆದಿರುವ ಕ್ಷೇತ್ರ ಕೋಲಾರ. ಚಿನ್ನದ ನಾಡು ಎಂದು ರಾಜ್ಯದಲ್ಲಿ ಹೆಸರು ಪಡೆದಿರುವ ಕ್ಷೇತ್ರವೂ ಹೌದು. ಇಡೀ ದೇಶಕ್ಕೆ ಚಿನ್ನ ನೀಡುವ ಜೊತೆಗೆ ಹಾಲಿನ ಕ್ಷೀರ ಕ್ರಾಂತಿಯನ್ನು ನೀಡುವ ಮೂಲಕ ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕೋಲಾರ ಲೋಕಸಭಾ (Lok Sabha Election 2024) ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮೀಸಲು ಕ್ಷೇತ್ರವಾಗಿದೆ.

    ಕೋಲಾರ (Kolar Lok Sabha Election) ಮೀಸಲು ಲೋಕಸಭೆ ಕ್ಷೇತ್ರ. ಮುಖ್ಯವಾಗಿ ಮೀಸಲು ಕ್ಷೇತ್ರವಾಗಿರುವ ಜಿಲ್ಲೆಗೆ ಜಾತಿ ಆಧಾರದಲ್ಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮಾನದಂಡ ಅಂದಿನಿಂದಲೂ ಬೆಳೆದುಕೊಂಡು ಬಂದಿದೆ. ಮೀಸಲು ಕ್ಷೇತ್ರವಾದ್ದರಿಂದ ಬಹುತೇಕ ಹೆಚ್ಚಿನ ಮತದಾರರನ್ನು ಅಂದರೆ 6 ಲಕ್ಷ ಮಂದಿ ಎಸ್‌ಸಿ, ಎಸ್‌ಟಿ ಸಮುದಾಯ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನವನ್ನು ಮುಸ್ಲಿಮರು ಪಡೆದುಕೊಂಡಿದ್ದು, 3 ಲಕ್ಷ ಜನಸಂಖ್ಯೆ ಇದೆ. ಮೂರನೇ ಸ್ಥಾನದಲ್ಲಿ ಒಕ್ಕಲಿಗ ಜನಾಂಗದವರು 3 ಲಕ್ಷ ಜನರಿದ್ದಾರೆ. ಇತರೆ ಎಲ್ಲಾ ಜಾತಿಯವರು ಸಹ 3 ಲಕ್ಷ ಜನರಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿರುವ ಎಸ್‌ಸಿ/ಎಸ್‌ಟಿ ಸಮುದಾಯದವರು ಮೂರು ಪಕ್ಷಗಳ ಮತದಾರರನ್ನು ಬೆಂಬಲಿಸಿದರೆ, ಜಿಲ್ಲೆಯಲ್ಲಿ ಬಹುತೇಕ ಅಲ್ಪಸಂಖ್ಯಾತರು ಕಾಂಗ್ರೆಸ್‌ನ (Congress) ಕೈ ಹಿಡಿಯುತ್ತಲೇ ಬಂದಿದ್ದಾರೆ. ಇನ್ನು ಮೂರನೇ ದೊಡ್ಡ ಸಮುದಾಯ ಎಂಬ ಹೆಗ್ಗಳಿಕೆ ಹೊಂದಿರವ ಒಕ್ಕಲಿಗರು ಜೆಡಿಎಸ್‌ನ ಪರವಾಗಿದ್ದಾರೆ. ಉಳಿದ ಎಲ್ಲಾ ಜಾತಿಯವರು ಸಹ ಮೂರು ಪಕ್ಷಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: Lok Sabha 2024: ಕೋಟೆ ನಾಡಿಗೆ ಯಾರಾಗ್ತಾರೆ ಒಡೆಯಾ?

    ಕ್ಷೇತ್ರ ಪರಿಚಯ
    1952 ರ ಸಂದರ್ಭದಲ್ಲಿ ಕೋಲಾರ ಲೋಕಸಭಾ ಕ್ಷೇತ್ರವು ದ್ವಿಸದಸ್ಯರ ಕ್ಷೇತ್ರವಾಗಿತ್ತು. ಕಾಂಗ್ರೆಸ್ ಪಕ್ಷದಿಂದ ದೊಡ್ಡತಿಮ್ಮಯ್ಯ ಮತ್ತು ಎಂ.ವಿ.ಕೃಷ್ಣಪ್ಪ ಮೊದಲ ಸಂಸದರಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1962 ರಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ವಿಂಗಡಿಸಲಾಯಿತು. ಆಗ ಕೋಲಾರ ಏಕಸದಸ್ಯ ಕ್ಷೇತ್ರವಾಗಿ ಮಾರ್ಪಟ್ಟಿತು. ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 1952 ರಿಂದ 2014 ರ ವರೆಗೆ (1984 ರಲ್ಲಿ ಜನತಾ ಪಕ್ಷ ಗೆಲುವು ಸಾಧಿಸಿದ್ದು ಬಿಟ್ಟರೆ) ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲಿ ಜಯಶಾಲಿಗಳಾಗಿದ್ದರು. ನಂತರ 2019 ರ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಗೆದ್ದು ಹೊಸ ಇತಿಹಾಸ ಬರೆಯಿತು.

    ವಿಧಾನಸಭಾ ಕ್ಷೇತ್ರಗಳೆಷ್ಟು?
    ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಮತ್ತು ಚಿಕ್ಕಬಳ್ಳಾಪುರದ 2 ಕ್ಷೇತ್ರಗಳು ಸೇರಿ ಒಟ್ಟು 8 ಕ್ಷೇತ್ರಗಳು ಕೋಲಾರ ಲೋಕಸಭಾ ವ್ಯಾಪ್ತಿಗೆ ಬರಲಿದೆ. ಸಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ ಗೋಲ್ಡ್ ಫೀಲ್ಡ್ಸ್‌, ಬಂಗಾರಪೇಟೆ, ಕೋಲಾರ, ಮಾಲೂರು ವಿಧಾನಸಭಾ ಕ್ಷೇತ್ರಗಳು. ಇದನ್ನೂ ಓದಿ: Chikkodi Lok Sabha 2024: ‘ಕೈ’ ತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯುತ್ತಾ? – ಮತ್ತೊಂದು ಗೆಲುವಿಗೆ ಬಿಜೆಪಿ ತಂತ್ರವೇನು?

    ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಕಾಂಗ್ರೆಸ್‌ನ ಕೊತ್ತೂರು ಮಂಜುನಾಥ್, ಬಂಗಾರಪೇಟೆದಲ್ಲಿ ಕಾಂಗ್ರೆಸ್‌ನ ಎಸ್.ಎನ್.ನಾರಾಯಣಸ್ವಾಮಿ, ಮಾಲೂರಿನಲ್ಲಿ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ, ಕೆಜಿಎಫ್‌ನಲ್ಲಿ ಕಾಂಗ್ರೆಸ್‌ನ ಎಂ.ರೂಪಕಲಾ (ಸಂಸದ ಮುನಿಯಪ್ಪ ಮಗಳು), ಮುಳಬಾಗಲಿನಲ್ಲಿ ಜೆಡಿಎಸ್‌ನ ಸಮೃದ್ದಿ ಮಂಜುನಾಥ್, ಶ್ರೀನಿವಾಸಪುರದ ಜೆಡಿಎಸ್‌ನ ವೆಂಕಟಶಿವಾರೆಡ್ಡಿ, ಶಿಡ್ಲಘಟ್ಟದಲ್ಲಿ ಜೆಡಿಎಸ್‌ನ ಬಿ.ಎನ್.ರವಿಕುಮಾರ್, ಚಿಂತಾಮಣಿಯಲ್ಲಿ ಕಾಂಗ್ರೆಸ್‌ನ ಎಂ.ಸಿ.ಸುಧಾಕರ್ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ.

    2019 ರ ಲೋಕಸಭೆ ಚುನಾವಣೆಯಲ್ಲಿ ಏನಾಗಿತ್ತು?
    ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ (BJP) ಎಸ್.ಮುನಿಸ್ವಾಮಿ (S.Muniswamy) ಗೆಲುವು ದಾಖಲಿಸಿ ಇತಿಹಾಸ ಬರೆದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೋಲಾರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದರು. ಎಸ್.ಮುನಿಸ್ವಾಮಿ 7,07,863 ಹಾಗೂ ಕಾಂಗ್ರೆಸ್ ಕೆ.ಹೆಚ್.ಮುನಿಯಪ್ಪ (K.H.Muniyappa) 4,98,159 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ತನ್ನ ಎದುರಾಳಿ ಕಾಂಗ್ರೆಸ್‌ನ ಮುನಿಯಪ್ಪ ಅವರನ್ನು 2,09,704 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

    ಮತದಾರರ ಸಂಖ್ಯೆ
    ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17,08,565 ಇದೆ. ಈ ಪೈಕಿ ಪುರುಷರು 8,45,696 ಹಾಗೂ ಮಹಿಳೆಯರು 8,62,716 ಮತದಾರರಿದ್ದಾರೆ. ಇದನ್ನೂ ಓದಿ: Davanagere Lok Sabha 2024: ಬೆಣ್ಣೆ ನಗರಿನ ಕುಟುಂಬದ ಭದ್ರಕೋಟೆ ಮಾಡ್ತಾರಾ ಇಲ್ಲ ‘ಕೈ’ ಹಿಡೀತಾರಾ ಜನ?

    ಕಾಂಗ್ರೆಸ್ ನಿರೀಕ್ಷಿತ ಅಭ್ಯರ್ಥಿ
    ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಕಳೆದ ಬಾರಿ ಸೋಲೊಪ್ಪಿಕೊಂಡು ಹಣೆಪಟ್ಟಿ ಕಳೆದುಕೊಂಡಿದ್ದರು. ಕಳೆದ 7 ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಗಳಿಸಿ ಒಂದು ಬಾರಿ ಸೋತಿರುವ ಮುನಿಯಪ್ಪ ಬಾರಿಯೂ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದು ಖಚಿತ.

    ನಿರೀಕ್ಷಿತ ಬಿಜೆಪಿ ಅಭ್ಯರ್ಥಿ
    ಹಾಲಿ ಸಂಸದ ಎಸ್.ಮುನಿಸ್ವಾಮಿ ಸಹ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಸ್ವತಂತ್ರ‍್ಯಾನಂತರ 18ನೇ ಲೋಕಸಭೆಯಲ್ಲಿ ಮೊದಲ ಬಾರಿಗೆ ಚಿನ್ನದ ನಾಡು ಕೋಲಾರದಲ್ಲಿ ಕಮಲ ಅರಳಿದ್ದು ಇದೆ ಮುನಿಸ್ವಾಮಿಯಿಂದ. ಲೋಕಸಭೆಗೆ ನಡೆದ 17 ಚುನಾವಣೆಗಳಲ್ಲಿ ಪ್ರಾಬಲ್ಯ ಸಾಧಿಸಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೋಲಾರದಲ್ಲಿ ಇದೇ ಮೊದಲ ಬಾರಿಗೆ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಕಮಲ ಅರಳಿದೆ.

    ಜೆಡಿಎಸ್‌ಗೆ ಹೋಗುತ್ತಾ ಕ್ಷೇತ್ರ?
    ಆದರೆ ಈಗ ರಾಜಕೀಯ ಸನ್ನಿವೇಶ ಬದಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಈ ಬಾರಿ ಕ್ಷೇತ್ರವನ್ನು ತನಗೆ ಬಿಟ್ಟುಕೊಡುವಂತೆ ಜೆಡಿಎಸ್ ಮನವಿ ಮಾಡುತ್ತಿದೆ. ಮೈತ್ರಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಸುತ್ತಾರೆ ಅನ್ನೋ ಕುತೂಹಲ ಮೂಡಿದೆ. ಜೆಡಿಎಸ್‌ನಿಂದ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್, ಬಂಗಾರಪೇಟೆ ಮಲ್ಲೇಶ್ ಬಾಬು, ದೇವನಹಳ್ಳಿ ನಿಸರ್ಗ ನಾರಾಯಣಸ್ವಾಮಿ ನಿರೀಕ್ಷಿತ ಅಭ್ಯರ್ಥಿಗಳಾಗಿದ್ದಾರೆ. ಇದನ್ನೂ ಓದಿ: Hassan Lok Sabha 2024: ದೊಡ್ಡಗೌಡ್ರ ಭದ್ರಕೋಟೆ ಭೇದಿಸಲು ಕಾಂಗ್ರೆಸ್‌ ಕಸರತ್ತು!

    ಕಾಂಗ್ರೆಸ್ ಪ್ಲಸ್: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು, ಲೋಕಸಭಾ ಕ್ಷೇತ್ರದ 8ರ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿರುವುದು, ಜಿಲ್ಲೆಯಲ್ಲಿ ಮುಸ್ಲಿಂ ಮತಗಳು ಬಹುತೇಕ ಕಾಂಗ್ರೆಸ್ ಪರವಾಗಿರುವುದು.
    ಮೈನಸ್: ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಾರ್ಟಿಯಲ್ಲಿರುವ ಭಿನ್ನಮತ, ಹಿಂದುತ್ವದ ವಿಚಾರದಲ್ಲಿ ಬ್ಯಾಲೆನ್ಸಿಂಗ್ ಪ್ರಯತ್ನ, ಹೆಚ್ಚಾಗಿರುವ ಆಕಾಂಕ್ಷಿ ಅಭ್ಯರ್ಥಿಗಳು, ಆಹಾರ ಸಚಿವ ಮುನಿಯಪ್ಪ ಅಥವಾ ಅಳಿಯನಿಗೆ ಟಿಕೆಟ್ ಕೊಟ್ಟರೆ ಭಿನ್ನಮತ, ಗುಂಪುಗಾರಿಕೆ ಮತ್ತೆ ಸ್ಫೋಟದ ಸಾಧ್ಯತೆ.

    ಬಿಜೆಪಿ-ಜೆಡಿಎಸ್ ಪ್ಲಸ್: ಈಗಾಗಲೇ ಕೋಲಾರ ಸಂಸದ ಕ್ಷೇತ್ರದಲ್ಲಿ ಬಿಜೆಪಿ ಲೋಕಸಭಾ ಸದಸ್ಯರು ಇರುವುದು, ಮೈತ್ರಿಯಾಗಿರುವ ಕಾರಣ ಜೆಡಿಎಸ್ ಮತದಾರರು ಅನಿವಾರ್ಯವಾಗಿ ಬಿಜೆಪಿ ಪರ ಕೆಲಸ ಮಾಡುವುದು, ಬಹುಸಂಖ್ಯಾತ ಹಿಂದೂ ಮತಗಳ ಪೈಕಿ ಹೆಚ್ಚಿನ ಮತಗಳು ಬಿಜೆಪಿಗೆ ಸಿಗಬಹುದು ಎಂಬ ನಿರೀಕ್ಷೆ.
    ಮೈನಸ್: ಬಿಜೆಪಿಯ ಹಾಲಿ ಸಂಸದರಿಗೆ ಎಲ್ಲ ಎಂಟೂ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಗುವ ಪಕ್ಷದಲ್ಲಿನ ಗುಂಪುಗಾರಿಕೆ, ಕೋಲಾರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳಿಂದ ದೊರೆಯದ ಪ್ರೋತ್ಸಾಹ, ಜೆಡಿಎಸ್‌ನ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪರ ಕೆಲಸ ಮಾಡುವುದು ಅನುಮಾನ. ಇದನ್ನೂ ಓದಿ: Dharwad Lok Sabha 2024: ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕುತ್ತಾ ‘ಕೈ’?

    ಜಾತಿವಾರು ಲೆಕ್ಕಾಚಾರ
    ಒಕ್ಕಲಿಗ – 2.80 ಲಕ್ಷ
    ಕುರುಬ – 2.70 ಲಕ್ಷ
    ಭೋವಿ – 2.10 ಲಕ್ಷ
    ಮುಸ್ಲಿಂ – 3.00 ಲಕ್ಷ
    ಬಣಜಿಗ – 1.05 ಲಕ್ಷ
    ಎಸ್ಸಿ/ಎಸ್ಟಿ – 6.10 ಲಕ್ಷ
    ಇತರರು – 1.25 ಲಕ್ಷ