Tag: Lok Sabha Election 2019

  • ಸಕ್ಕರೆ ನಾಡಲ್ಲಿಂದು ‘ಸ್ವಾಭಿಮಾನಿ’ಗಳ ವಿಜಯೋತ್ಸವ-ಸುಮಲತಾಗೆ ಜೋಡೆತ್ತುಗಳ ಸಾಥ್

    ಸಕ್ಕರೆ ನಾಡಲ್ಲಿಂದು ‘ಸ್ವಾಭಿಮಾನಿ’ಗಳ ವಿಜಯೋತ್ಸವ-ಸುಮಲತಾಗೆ ಜೋಡೆತ್ತುಗಳ ಸಾಥ್

    ಮಂಡ್ಯ: ಸಕ್ಕರೆನಾಡು ಮಂಡ್ಯದ ಜನತೆ ಸುಮಲತಾ ಅಂಬರೀಶ್ ಅವರನ್ನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅದರ ಫಲವಾಗಿ ಸುಮಲತಾ ಮತ್ತು ಬೆಂಬಲಿಗರು ಇಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸುವ ಮೂಲಕ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.

    ಸಕ್ಕರೆನಾಡು ಮಂಡ್ಯದ ಜನ ಸ್ವಾಭಿಮಾನಿಗಳು. ಅವರು ಮುಗ್ಧರೇ ಹೊರತು ಮೂರ್ಖರಲ್ಲ ಅಂತಾ ಹೇಳಿಕೊಂಡು ಸುಮಲತಾ ಚುನಾವಣೆಯಲ್ಲಿ ಮತ ಕೇಳಿದ್ದರು. ಹಾಗೆ ಮಂಡ್ಯ ಮತದಾರರು ಸೆರಗೊಡ್ಡಿ ಮತ ಕೇಳಿದ ಸೊಸೆ ಸುಮಲತಾರ ಕೈ ಬಿಡಲಿಲ್ಲ. ಬರೋಬ್ಬರಿ ಒಂದು ಕಾಲು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದರು. ಈಗ ಆ ಮತದಾರರಿಗೆ ಕೃತಜ್ಞತೆ ಸಲ್ಲಿಸೋ ಸಮಯ. ಹೀಗಾಗಿ ಇವತ್ತು ಸುಮಲತಾ ಮತ್ತು ಬೆಂಬಲಿಗರು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸುತ್ತಿದ್ದಾರೆ.

    ಇವತ್ತು ರೆಬೆಲ್ ಸ್ಟಾರ್ ಅಂಬಿ ಹುಟ್ಟಿದ ದಿನ. ಅಂಬಿ ಜಯಂತಿ ಹಾಗೂ ಸ್ವಾಭಿಮಾನಿ ವಿಜಯೋತ್ಸವ ಮಂಡ್ಯದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇವತ್ತಿನ ವಿಜಯೋತ್ಸವದ ಮೇನ್ ಅಟ್ರ್ಯಾಕ್ಷನ್ ಜೋಡೆತ್ತು ದರ್ಶನ್ ಮತ್ತು ಯಶ್. ಸ್ವಾಭಿಮಾನಿ ಮಂತ್ರ ಜಪಿಸಿ ಸುಮಲತಾ ಗೆಲುವಿಗೆ ಸ್ಟಾರ್‍ಡಮ್ ಬಿಟ್ಟು ಹಗಲಿರುಳು ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಅಂಬಿ ಪುತ್ರ ಅಭಿಷೇಕ್ ಸೇರಿ ಹಲವರು ಸುಮಲತಾಗೆ ವಿಜಯ ಯಾತ್ರೆಯಲ್ಲಿ ಸಾಥ್ ನೀಡಲಿದ್ದಾರೆ. ಅದರಲ್ಲೂ ಡಿ ಬಾಸ್ ದಚ್ಚು ಸಂಜಯ್ ನಗರದಲ್ಲಿ ನೆಲಕ್ಕೆ ಮುತ್ತುಕೊಟ್ಟು ಭೂಮಿತಾಯಿಗೆ ನಮಿಸಲಿದ್ದಾರೆ.

    ಬೆಳಗ್ಗೆ ಬೆಂಗಳೂರಿನಲ್ಲಿ ಅಂಬಿ ಸಮಾಧಿಗೆ ನಮನ ಸಲ್ಲಿಸಿ ಮಂಡ್ಯಗೆ ಆಗಮಿಸಲಿರುವ ಸುಮಲತಾ, ಎಂದಿನಂತೆ ಮಂಡ್ಯದ ಗ್ರಾಮದೇವತೆ ಕಾಳಮ್ಮನ ಮೊರೆ ಹೋಗಲಿದ್ದಾರೆ. ಕಾಳಿಕಾಂಬ ದೇಗುಲದಿಂದ ವಿಜಯಯಾತ್ರೆ ಆರಂಭಗೊಳ್ಳಲಿದ್ದು, ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಅಂತ್ಯಗೊಳ್ಳಲಿದೆ. ಅಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಸುಮಲತಾ, ದರ್ಶನ್, ಯಶ್ ಮಾತನಾಡಲಿದ್ದಾರೆ. ಈ ವೇಳೆ ಬಿಜೆಪಿ ಸೇರುವ ವದಂತಿ ಬಗ್ಗೆ ಸುಮಲತಾ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಜೆಡಿಎಸ್ ಸಚಿವರ ಅಸಹಕಾರ ಬಗ್ಗೆಯೂ ವೇದಿಕೆಯಲ್ಲಿ ಉತ್ತರ ಕೊಡುವ ಸಾಧ್ಯತೆ ಇದೆ. ಜೋಡೆತ್ತುಗಳು ಸಿನಿಮಾ ಶೈಲಿಯಲ್ಲೇ ದಳಪತಿಗಳಿಗೆ ತಿರುಗೇಟು ನೀಡುವ ಸಾಧ್ಯತೆ ಇದೆ.

    ಸಮಾವೇಶದಲ್ಲಿ ಅಂಬಿ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ, ಸ್ವಾಭಿಮಾನಿ ವಿಜಯೋತ್ಸವ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

  • ವಿದೇಶ ಪ್ರವಾಸದಿಂದ ಬಂದ ಡಿಕೆಶಿಯಿಂದ ಮಾರ್ಮಿಕ ಮಾತು

    ವಿದೇಶ ಪ್ರವಾಸದಿಂದ ಬಂದ ಡಿಕೆಶಿಯಿಂದ ಮಾರ್ಮಿಕ ಮಾತು

    ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನ ವಿದೇಶ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ಸಚಿವ ಡಿ.ಕೆ.ಶಿವಕುಮಾರ್ ಇಂದು ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಮುಂದೆ ಕೆಲ ಮಾರ್ಮಿಕ ಮಾತು ಹೇಳಿ ಹೊರಟಿದ್ದಾರೆ.

    ವಿದೇಶ ಪ್ರವಾಸ ಮುಗಿಸಿ ಕುಟುಂಬದೊಂದಿಗೆ ರಾತ್ರಿ 12 ಗಂಟೆಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರಿಸಿದ ಸಚಿವರು, ನನಗೆಲ್ಲಾ ಗೊತ್ತಿದೆ. ಚುನಾವಣಾ ಫಲಿತಾಂಶದ ಅಪ್ಡೇಟ್ಸ್ ಎಲ್ಲಾ ಗೊತ್ತಾಗುತ್ತಿತ್ತು. ನಾನು ಮಾಹಾತ್ಮಗಾಂಧಿಯ ಅನುಯಾಯಿಯಾಗಿದ್ದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ. ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ. ಕಿವಿಗೆ ಹತ್ತಿ ಇಟ್ಟುಕೊಂಡಿದ್ದೇನೆ ಎಂದು ಹೇಳಿ ತೆರಳಿದರು.

    ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ಸಿಗಲಿದೆ ಚರ್ಚೆ ಇರೋವಾಗಲೇ ಮುಜುಗರದಿಂದ ತಪ್ಪಿಸಿಕೊಳ್ಳಲು ಸಚಿವರು ವಿದೇಶ ಪ್ರವಾಸ ಕೈಗೊಂಡಿದ್ದರು ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬಂದಿದ್ದವು. ಚುನಾವಣೆಯ ಪ್ರಚಾರದಲ್ಲಿ ನಿರಂತರವಾಗಿ ಕೆಲಸ ಮಾಡಿದ್ದರಿಂದ ವಿಶ್ರಾಂತಿ ಹಾಗೂ ಕುಟುಂಬದ ಜೊತೆ ಕ್ವಾಲಿಟಿ ಟೈಮ್ ಕಳೆಯಲು ಸಚಿವರು ಪ್ರವಾಸ ಕೈಗೊಂಡಿದ್ದರು ಎಂದು ಮೂಲಗಳು ತಿಳಿಸಿದ್ದವು.

    ರಾಜ್ಯದ 28 ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಕಾಂಗ್ರೆಸ್ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಿದೆ. ಸಚಿವರ ಸೋದರ ಡಿ.ಕೆ.ಸುರೇಶ್ ರಾಜ್ಯದ ಓರ್ವ ಕಾಂಗ್ರೆಸ್ ಸಂಸದರಾಗಿದ್ದಾರೆ.

  • ಎಂಜಿನಿಯರಿಂಗ್ ಪದವೀಧರೆ ಈಗ ದೇಶದ ಕಿರಿಯ ಮಹಿಳಾ ಸಂಸದೆ

    ಎಂಜಿನಿಯರಿಂಗ್ ಪದವೀಧರೆ ಈಗ ದೇಶದ ಕಿರಿಯ ಮಹಿಳಾ ಸಂಸದೆ

    ಭುವನೇಶ್ವರ: 17ನೇ ಲೋಕಸಭಾ ಚುನಾವಣೆ ಮುಗಿದು ದೇಶದ ಅತ್ಯಂತ ಕಿರಿಯ ಮಹಿಳಾ ಸಂಸದೆಯಾಗಿ ಒಡಿಶಾದ ಎಂಜಿನಿಯರಿಂಗ್ ಪದವೀಧರೆ ಚಂದ್ರನಿ ಮುರ್ಮು ಅವರು ಆಯ್ಕೆಯಾಗಿದ್ದಾರೆ.

    ಈಗ ತಾನೇ ಬಿಟೆಕ್ ಪದವಿ ಮುಗಿಸಿದ್ದ ಕೆಯೊಂಜ್ಹಾರ್ ಜಿಲ್ಲೆಯ ತಿಕಾರ್ಗುಮು ಗ್ರಾಮದ ಮುರ್ಮು ಅವರು ಕೆಲಸಕ್ಕೆ ಸೇರಲು ಸಿದ್ಧರಾಗಿದ್ದರು. ಆದರೆ ಅದೃಷ್ಟ ಎಂಬುದು ಇಂದು ತನ್ನ 25 ವರ್ಷ ವಯಸ್ಸಿಗೆ ದೇಶದ ಕಿರಿಯ ಮಹಿಳಾ ಸಂಸದೆಯನ್ನಾಗಿ ಮಾಡಿದೆ.

    ಓಡಿಶಾದ ಮುಖ್ಯಮಂತ್ರಿ ಮತ್ತು ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಅವರು ಒಡಿಶಾದ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಸ್ಥಾನಗಳನ್ನು ಮೀಸಲು ಇಟ್ಟಿದ್ದರು. ಇದರಂತೆ ಮುರ್ಮು ಅವರ ಕೆಯೊಂಜ್ಹಾರ್ ಕ್ಷೇತ್ರದ ಬಿಜೆಡಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಇವರು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿ ಅನಂತ್ ನಾಯಕ್ ಅವರನ್ನು 67,822 ಮತಗಳಿಂದ ಸೋಲಿಸಿ ದೇಶದ ಕಿರಿಯ ಮಹಿಳಾ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

    ಚಂದ್ರನಿ ಮುರ್ಮು ಅವರ ತಂದೆ ಸಂಜೀವ್ ಮುರ್ಮು ಅವರು ಸರ್ಕಾರಿ ಉದ್ಯೋಗಿಯಾಗಿದ್ದು ತಾಯಿ ಉರ್ಬಶಿ ಸೋರೆನ್ ಗೃಹಣಿ. ಈ ಗೆಲುವಿನ ಬಗ್ಗೆ ಮಾತನಾಡಿರುವ ಮುರ್ಮ ಅವರು,”ನಾನು ಎಂಜಿನಿಯರಿಂಗ್ ಮುಗಿದ ನಂತರ ಕೆಲಸವನ್ನು ಹುಡುಕುತ್ತಿದ್ದೆ. ನಾನು ರಾಜಕೀಯಕ್ಕೆ ಬರುತ್ತೇನೆ ಸಂಸತ್‍ನ ಸದಸ್ಯೆ ಆಗುತ್ತೇನೆ ಎಂದು ನಾನು ಯಾವತ್ತು ಅಂದುಕೊಂಡಿರಲಿಲ್ಲ. ನಾನು ಅನಿರೀಕ್ಷಿತವಾಗಿ ನಾಮಪತ್ರ ಸಲ್ಲಿಸಿದ್ದೆ ಆದರೆ ಗೆದ್ದಿದ್ದೇನೆ ನನಗೆ ತುಂಬ ಸಂತೋಷವಾಗಿದೆ” ಎಂದು ಹೇಳಿದ್ದಾರೆ.

    ನಾನು ಪ್ರಚಾರಕ್ಕೆ ಹೋದಾಗ ಕೆಲವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ನನ್ನ ರಾಜಕೀಯ ಜೀವನವನ್ನು ಹಾಳು ಮಾಡಲು ಹಲವಾರು ಅಡಚಣೆಗಳನ್ನು ಮಾಡಿದರು. ಈ ಎಲ್ಲಾ ಅಡಚಣೆಗಳನ್ನು ಎದುರಿಸಿ ನಾನು ಇಂದು ಸಂಸದೆಯಾಗಿರುವುದು ನನಗೆ ಖುಷಿಯಾಗಿದೆ ಎಂದು ಹೇಳಿದರು.

    ಹಿಂದೆ 16ನೇ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಹಿಸ್ಸಾರ್ ಕ್ಷೇತ್ರದ ಪ್ರಖ್ಯಾತ ರಾಜಕಾರಣಿ ಓಂ ಪ್ರಕಾಶ್ ಚೌಟಲಾ ಅವರ ಮೊಮ್ಮಗ ದುಷ್ಯಂತ್ ಚೌತಾಲ ಅವರು ಕಿರಿಯ ಸಂಸದರಾಗಿ ಆಯ್ಕೆಯಾಗಿದ್ದರು.

  • ನಾನು ಕಾಂಗ್ರೆಸ್ಸಿನಲ್ಲೇ ಇರಬೇಕೇ – ಕಾರ್ಯಕರ್ತರ ಬಳಿ ಕೌರವ ಪ್ರಶ್ನೆ

    ನಾನು ಕಾಂಗ್ರೆಸ್ಸಿನಲ್ಲೇ ಇರಬೇಕೇ – ಕಾರ್ಯಕರ್ತರ ಬಳಿ ಕೌರವ ಪ್ರಶ್ನೆ

    ಹಾವೇರಿ: ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದಿದ್ದು ಸತತ ಮೂರು ಬಾರಿ ಎಂಎಲ್‍ಎ ಆಗಿ ಅಯ್ಕೆಯಾಗಿರುವ ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್‍ಗೆ ಸಚಿವ ಸ್ಥಾನ ದೊರಕುತ್ತಿಲ್ಲ. ಇದರಿಂದ ಬೇಸರಗೊಂಡಿರುವ ಪಾಟೀಲ್ ಈಗ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಎಲ್ಲ ಕಡೆ ಚರ್ಚೆಯಾಗುತ್ತಿದೆ.

    ಈ ಹಿಂದೆ ಸಚಿವ ಸ್ಥಾನದ ಸಿಗದೇ ಇರುವ ಕಾರಣ ಬಿ.ಸಿ ಪಾಟೀಲ್ ಅವರು ಮೈತ್ರಿ ಸರ್ಕಾರದ ಮೇಲೆ ನೇರವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈಗ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಬಳಿಕ ಮತ್ತೆ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಅವರು ಈಗ ಕಾಂಗ್ರೆಸ್ ಪಕ್ಷದಲ್ಲಿ ಇರಬೇಕಾ? ಬೇಡವೇ ಎಂದು ಕ್ಷೇತ್ರದ ಕಾರ್ಯಕರ್ತರನ್ನು ಮತ್ತು ಕೆಲ ಶಾಸಕರನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.

    ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದಿಂದ ಮೊದಲ ಬಾರಿ ಜೆಡಿಎಸ್‍ನಿಂದ ಶಾಸಕರಾಗಿದ್ದ ಪಾಟೀಲ್, ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಹೀಗೆ ಮೂರು ಬಾರಿ ಎಂಎಲ್‍ಎ ಆಗಿ ಆಯ್ಕೆಯಾಗಿದ್ದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬಿ.ಸಿ ಪಾಟೀಲ್, ಸಚಿವ ಸ್ಥಾನ ನೀಡದ ಮೈತ್ರಿ ಸರ್ಕಾರದ ಮೇಲೆ ಮೊದಲಿನಿಂದಲೂ ಅಸಮಾಧಾನಗೊಂಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ವೀರಶೈವ ಲಿಂಗಾಯತರಿಗೆ ಕಾಂಗ್ರೆಸ್ ಪಕ್ಷ ಭಾರೀ ಅನ್ಯಾಯ ಮಾಡಿದೆ. ವೀರಶೈವ ಲಿಂಗಾಯತರಿಗೆ ಏಕೆ ಮಂತ್ರಿ ಸ್ಥಾನವನ್ನು ನೀಡಿಲ್ಲ ಎಂದು ಬಹಿರಂಗವಾಗಿ ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

    ಮೂರು ದಿನಗಳ ಹಿಂದೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದೆ. ರಾಜ್ಯ ಹಾಗೂ ದೇಶದಲ್ಲಿ ಮೋದಿ ಅಲೆಗೆ ಕಾಂಗ್ರೆಸ್ ಧೂಳೀಪಟವಾಗಿದೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಮತ್ತು ಅತೃಪ್ತ ಶಾಸಕರು ಚುರುಕುಗೊಂಡಿದ್ದಾರೆ. ಮತ್ತೆ ರೆಸಾರ್ಟ್ ರಾಜಕಾರಣ ಪ್ರಾರಂಭವಾಗಿದೆ. ಈ ಸಮಯದಲ್ಲೇ ಬಿ.ಸಿ ಪಾಟೀಲ್ ಲೋಕಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತರನ್ನು ಕಾಂಗ್ರೆಸ್ ಪಕ್ಷದವರು ಕಡೆಗಣಿಸಿದ್ದಾರೆ. ಆದರ ಪ್ರತಿಫಲ ಲೋಕಸಭಾ ಚುನಾವಣೆಯ ಫಲಿತಾಂಶ ಬಿಜೆಪಿ ಕಡೆಗೆ ಬಂದಿದೆ. ಹಾಗಾಗಿ ಕ್ಷೇತ್ರದ ಜನರ ತೀರ್ಮಾನವನ್ನು ಕೇಳುತ್ತಿದ್ದೇನೆ ಅವರು ಏನೂ ತೀರ್ಮಾನ ನೀಡುತ್ತಾರೆ ನೋಡೋಣ ಎಂದು ಹೇಳಿದ್ದರು. ಆದರೆ ಕೆಲವು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಹೋಗಿ ಎಂದು ಹೇಳಿದ್ದರೆ, ಇನ್ನೂ ಕೆಲವು ಕಾರ್ಯಕರ್ತರು ನಮ್ಮ ಸಿದ್ದಾಂತ ಬೇರೆ ಹಾಗಾಗಿ ಬಿಜೆಪಿ ಹೋಗುವುದು ಬೇಡ ಎಂದು ಸಲಹೆ ನೀಡಿದ್ದಾರಂತೆ.

    ಈ ಎಲ್ಲಾ ವಿದ್ಯಮಾನಗಳು ನೋಡಿದರೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಹೋದರೆ ಬಿ.ಸಿ ಪಾಟೀಲ್ ಬಿಜೆಪಿಗೆ ಹೋಗುತ್ತಾರೆ ಎನ್ನುವ ಗುಸುಗುಸು ಮಾತುಗಳು ಬಹಳ ಚರ್ಚೆ ಆಗುತ್ತಿವೆ. ಆದರೆ ಬಿಸಿ.ಪಾಟೀಲ್ ಮಾತ್ರ ಕಾದುನೋಡುವ ತಂತ್ರ ಅನುಸರಿಸಿ ಅಡ್ಡಗೋಡೆಯ ಮೇಲೆ ದೀಪ ಇಡುವ ಕೆಲಸ ಮಾಡುತ್ತಿದ್ದಾರೆ.

  • ಚುನಾವಣೆ ಸೋಲಿಗೆ ಶನಿದೋಷ ಕಾರಣ – 50 ಲಕ್ಷದ ನೀಲಮಣಿ ಹರಳು ಧರಿಸಿದ ಅಸ್ನೋಟಿಕರ್

    ಚುನಾವಣೆ ಸೋಲಿಗೆ ಶನಿದೋಷ ಕಾರಣ – 50 ಲಕ್ಷದ ನೀಲಮಣಿ ಹರಳು ಧರಿಸಿದ ಅಸ್ನೋಟಿಕರ್

    ಕಾರವಾರ: ನಾನು ಚುನಾವಣೆಯಲ್ಲಿ ಸೋಲಲು ಶನಿದೋಷ ಕಾರಣ. ಈ ದೋಷವನ್ನು ಪರಿಹಾರ ಮಾಡಿಕೊಳ್ಳಲು 50 ಲಕ್ಷ ರೂ. ಮೌಲ್ಯದ ನೀಲಮಣಿ ಹರಳನ್ನು ತರಿಸಿದ್ದೇನೆ ಎಂದು ಉತ್ತರ ಕನ್ನಡ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹೇಳಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಅಸ್ನೋಟಿಕರ್, ಬಿಜೆಪಿ ಅಭ್ಯರ್ಥಿ ಅನಂತ್‍ಕುಮಾರ್ ಹೆಗಡೆ ಅವರ ವಿರುದ್ಧ 4,79,649 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದರು. ಈ ಸೋಲಿಗೆ ಶನಿದೋಷವೇ ಕಾರಣ ಇದರ ಪರಿಹಾರಕ್ಕೆ ಕಾಶ್ಮೀರದಿಂದ 50 ಲಕ್ಷ ಹಣ ನೀಡಿ ನೀಲಮಣಿ ಹರಳನ್ನು ತರಿಸಿದ್ದೇನೆ ಎಂದು ಹೇಳಿದ್ದಾರೆ.

    ಕಾಶ್ಮೀರದಿಂದ 50 ಲಕ್ಷ ಹಣ ಕೊಟ್ಟು ಅಪರೂಪದ ನೀಲಮಣಿ ಹರಳನ್ನು ತರಿಸಿ ಎಡಗೈನ ಮಧ್ಯ ಬೆರಳಿಗೆ ಹಾಕಿಕೊಂಡಿದ್ದೇನೆ. ಈ ಹರಳನ್ನು ವಾರದಲ್ಲಿ ಒಂದು ಬಾರಿ ದೇವರ ಬಳಿ ಇಟ್ಟು ಹಾಲಿನಲ್ಲಿ ಅಭಿಷೇಕ ಮಾಡಿ ಧರಿಸುತ್ತೇನೆ ಎಂದು ಅನಂದ್ ಅಸ್ನೋಟಿಕರ್ ಹೇಳಿದ್ದಾರೆ.

    ಕೈ ಬೆರಳಿನಲ್ಲಿ ಇರುವ ಎಲ್ಲಾ ಉಂಗುರವನ್ನು ತೆಗೆದು ಲಕ್ಷ ಲಕ್ಷ ಖರ್ಚು ಮಾಡಿ ತಂದ ವಿಶೇಷ ಹರಳಿನ ಉಂಗುರವನ್ನು ಮಾತ್ರ ಧರಿಸಿದ್ದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ.

    ಚುನಾವಣೆ ಸೋತರೆ ರಾಜಕಾರಣಿಗಳು ದೇವರು, ಜ್ಯೋತಿಷ್ಯರ ಮೊರೆ ಹೋಗುವುದು ಸಾಮಾನ್ಯ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕ ಗಾಂಧಿ ಕೂಡ ಗುರುಗಳ ಮೊರೆ ಹೋಗಿದ್ದು ತಮ್ಮ ಯಶಸ್ಸಿಗಾಗಿ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದರು. ಇನ್ನು ರಾಜ್ಯದಲ್ಲೂ ಕೂಡ ರೇವಣ್ಣನವರಿಂದ ಹಿಡಿದು ಹಲವಾರು ರಾಜಕಾರಣಿಗಳು ತಮ್ಮ ಸಂಕಷ್ಟ, ದೋಷ ನಿವಾರಣೆಗೆ ಲಕ್ಷ ಲಕ್ಷ ಖರ್ಚು ಮಾಡಿ ಟೆಂಪಲ್ ರನ್ ಮಾಡಿದ್ದರು.

  • ಜೋಡೆತ್ತು, ಬಿಜೆಪಿ ಬಲದಿಂದ ಸುಮಲತಾ ಅಂಬರೀಶ್ ಗೆದ್ದಾಯ್ತು, ಮುಂದೇನು?

    ಜೋಡೆತ್ತು, ಬಿಜೆಪಿ ಬಲದಿಂದ ಸುಮಲತಾ ಅಂಬರೀಶ್ ಗೆದ್ದಾಯ್ತು, ಮುಂದೇನು?

    ಬೆಂಗಳೂರು: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಂಡ ಬಹುಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಮುಂದೆ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಏನು ಎಂಬುದರ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಬಿಜೆಪಿ ಸೇರ್ಪಡೆಯ ಬಗ್ಗೆ ಚಿಂತಿಸಿಲ್ಲ. ಮುಂದಿನ ದಿನಗಳಲ್ಲಿ ಮಂಡ್ಯ ಜನತೆಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಗೆಲುವಿನ ಬಳಿಕ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಇಂದು ಭೇಟಿಯಾಗಲಿದ್ದಾರೆ. ಕೇವಲ ಧನ್ಯವಾದ ತಿಳಿಸಲು ನಾಯಕರನ್ನು ಭೇಟಿಯಾಗುತ್ತಿದ್ದಾರೆ ಎಂದು ಸುಮಲತಾ ಆಪ್ತ ಮೂಲಗಳು ತಿಳಿಸಿವೆ.

    ಸುಮಲತಾರ ಭೇಟಿಯ ಉದ್ದೇಶವೇನು? ಮುಂದಿನ ದಿನಗಳಲ್ಲಿ ಬಿಜೆಪಿ ಸೇರ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಒಂದು ವೇಳೆ ಪಕ್ಷ ಸೇರ್ಪಡೆಯಾಗದಿದ್ದರೂ ಬಾಹ್ಯ ಬೆಂಬಲ ನೀಡಿ ಸಚಿವ ಸ್ಥಾನ ಪಡೆಯುತ್ತಾರಾ ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಹುಟ್ಟಿಕೊಂಡಿವೆ.

  • ಪಕ್ಷದ ಪರ್ಫಾರಮೆನ್ಸ್ ಕಡಿಮೆ ಆಗಿದ್ದಕ್ಕೆ ರಾಹುಲ್ ಗಾಂಧಿ ಬೇಸರವಾಗಿದ್ದರೆ – ಜಿ. ಪರಮೇಶ್ವರ್

    ಪಕ್ಷದ ಪರ್ಫಾರಮೆನ್ಸ್ ಕಡಿಮೆ ಆಗಿದ್ದಕ್ಕೆ ರಾಹುಲ್ ಗಾಂಧಿ ಬೇಸರವಾಗಿದ್ದರೆ – ಜಿ. ಪರಮೇಶ್ವರ್

    ತುಮಕೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ್ಫಾರಮೆನ್ಸ್ ಕಡಿಮೆ ಆಗಿದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸ್ವಾಭಾವಿಕವಾಗಿ ಬೇಸರವಾಗಿದೆ ಎಂದು ಉಪಮಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಸೀಟ್ ಕಡಿಮೆ ಆಗಿದೆ ಎಂದು ಸ್ವಾಭಾವಿಕವಾಗಿ ರಾಹುಲ್ ಗಾಂಧಿ ಅವರಿಗೆ ಬೇಸರ ಆಗಿರಬಹುದು. ಇವತ್ತು ವರ್ಕಿಂಗ್ ಕಮೀಟಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನಮಗೆ ಗೊತ್ತಿಲ್ಲ ಎಂದು ಹೇಳಿದರು.

    ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಸೋಲಿನ ಹೊಣೆಯನ್ನು ಜೆಡಿಎಸ್ -ಕಾಂಗ್ರೆಸ್ ಎಲ್ಲ ನಾಯಕರು ಹೊರುತ್ತೇವೆ. ನಮ್ಮ ಮೈತ್ರಿ ಸರ್ಕಾರ ಸ್ಥಿರವಾಗಿದೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತಾರೆ. ಅವರ ಬಗ್ಗೆ ನನಗೆ ವಿಶ್ವಾಸವಿದೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಯಾರೋ ಕನಸು ಕಂಡಿರಬೇಕು. ಸಿಎಂ ಕುಮಾರಸ್ವಾಮಿ ರಾಜೀನಾಮೆ ಕೊಡದಂತೆ ನಾವೆಲ್ಲಾ ಮನವರಿಕೆ ಮಾಡಿದ್ದು, ಸರ್ಕಾರ ಸುಭದ್ರವಾಗಿದೆ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ತುಮಕೂರಿನಲ್ಲಿ ರಸ್ತೆಗಳಲ್ಲಿ ಅಂಟಿಸಲಾಗಿರುವ ‘ಪರಮೇಶ್ವರ್ ಹಠಾವೋ ಕಾಂಗ್ರೆಸ್ ಬಚಾವೋ’ ಎಂಬ ಪೋಸ್ಟ್ ಕುರಿತು ಪ್ರತಿಕ್ರಿಯೆ ನೀಡಲು ಡಿಸಿಎಂ ಹಿಂದೇಟು ಹಾಕಿದರು.

  • ವಿನಯ್ ಕುಲಕರ್ಣಿ ಸೋಲಿಗೆ ಗುಂಡೂರಾವ್, ದೇಶಪಾಂಡೆ ಕಾರಣ: ಬೆಂಬಲಿಗರ ಆರೋಪ

    ವಿನಯ್ ಕುಲಕರ್ಣಿ ಸೋಲಿಗೆ ಗುಂಡೂರಾವ್, ದೇಶಪಾಂಡೆ ಕಾರಣ: ಬೆಂಬಲಿಗರ ಆರೋಪ

    ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಸೋಲಿಗೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಹಿರಿಯ ಮುಖಂಡ ಆರ್.ವಿ ದೇಶಪಾಂಡೆ ಕಾರಣ ಎಂದು ಮಾಜಿ ಸಚಿವರ ಬೆಂಬಲಿಗರು ಆರೋಪಿಸಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ವಿರುದ್ಧ 2,05,072 ಮತಗಳ ಅಂತರದಲ್ಲಿ ಸೋತಿದ್ದರು. ಈ ಸೋಲಿಗೆ ದಿನೇಶ್ ಗುಂಡೂರಾವ್, ಆರ್ ವಿ ದೇಶಪಾಂಡೆ ಕಾರಣ ಎಂದು ವಿನಯ್ ಕುಲಕರ್ಣಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ವಿನಯ್ ಕುಲಕರ್ಣಿ ಸಪೋರ್ಟರ್ಸ್ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ, ವಿನಯ್ ಕುಲಕರ್ಣಿ ಸೋಲಿಗೆ ನೇರವಾಗಿ ದಿನೇಶ್ ಗುಂಡೂರಾವ್ ಹಾಗು ಆರ್ ವಿ ದೇಶಪಾಂಡೆ ಕಾರಣ ಏಕೆಂದರೆ ವಿನಯ್ ಕುಲಕರ್ಣಿಯವರ ಹೆಸರು ಬೇಗ ಹೈಕಮಾಂಡ್ ಕಳಿಸದೆ ತಮ್ಮ ಬ್ರಾಹ್ಮಣ ಜಾತಿಯ ವ್ಯಕ್ತಿ ಜೋಶಿ ಗೆಲ್ಲಿಸಲು ಸಹಾಯ ಮಾಡಿದ್ದಾರೆ. ಚುನಾವಣೆಯ ಕೊನೆಯ ಗಳಿಗೆಯಲ್ಲಿ ಟಿಕೆಟ್ ನೀಡಿದ್ದಲ್ಲದೆ ಮುಸ್ಲಿಂ ಧರ್ಮದವರ ಹೆಸರನ್ನು ಮಧ್ಯಕ್ಕೆ ತಂದು ಅವರ ಭಾವನೆಗಳಿಗೆ ದಕ್ಕೆ ತರುವಂತ ಕೆಲಸ ಮಾಡಿದರು. ಕಾಂಗ್ರೆಸ್ ನಾಯಕರು ಪ್ರಹ್ಲಾದ್ ಜೋಶಿ ಗೆಲುವುವಿಗಾಗಿ ಮಾಧ್ಯಮದವರ ಮುಂದೆ ಅವರನ್ನು ಹೊಗಳಿದ್ದರು ಎಂದು ಬರೆದುಕೊಂಡಿದ್ದಾರೆ.

    ಇಂತಹ ನಾಯಕರಿಂದ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ? ಮೊದಲು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿ ಲಿಂಗಾಯತರಿಗೆ ಈ ಸ್ಥಾನವನ್ನು ನೀಡಿ ಪಕ್ಷವನ್ನು ಉಳಿಸಿ ಎಂದು ಫೇಸ್‍ಬುಕ್ ಪೇಜ್‍ನಲ್ಲಿ ಮನವಿ ಮಾಡಿದ್ದಾರೆ.

  • ವಿಶ್ವವೇ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡೋಣ – ಮೋದಿ

    ವಿಶ್ವವೇ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡೋಣ – ಮೋದಿ

    – ದೇಶದ ಜನತೆ ಫಕೀರನ ಜೋಳಿಗೆ ತುಂಬಿದ್ರು
    – ಭಾರತವನ್ನು ಸಮೃದ್ಧ ರಾಷ್ಟ್ರವನ್ನಾಗಿ ನಿರ್ಮಿಸೋಣ

    ನವದೆಹಲಿ: ಮೊದಲ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಕ್ಷೇತ್ರಗಳನ್ನು ಗೆದ್ದಿತ್ತು. ಇಂದು ಅದೇ ಬಿಜೆಪಿ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತಿದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮತದಾನಗೈದ ಎಲ್ಲರಿಗೂ ಧನ್ಯವಾದ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಬಿಜೆಪಿ ಗೆಲುವು ಇತಿಹಾಸವನ್ನು ಬರೆದಿದೆ. ಸ್ವತಂತ್ರ ಭಾರತದ ಮೊದಲ ಬಾರಿಗೆ ರಣ ರಣ ಬಿಸಿಲನ್ನು ಲೆಕ್ಕಿಸದೇ ಮತದಾರರು ಬಂದು ಅತಿ ಹೆಚ್ಚು ಮತದಾನ ಮಾಡಿದ್ದಾರೆ. ಎಲ್ಲ ಅಡೆತಡೆಗಳನ್ನು ಮೀರಿ ಲೋಕತಂತ್ರದ ಹಬ್ಬದಲ್ಲಿ ಕೆಲಸ ಮಾಡಿದ ಚುನಾವಣಾ ಆಯೋಗ, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು.

    ಮಹಾಭಾರತದ ಯುದ್ಧದ ಬಳಿಕ ಶ್ರೀಕೃಷ್ಣನನ್ನು ಕೆಲವರು ನೀವು ಯಾವ ಪಕ್ಷದಲ್ಲಿದ್ದೀರಿ ಎಂದು ಕೇಳಿದ್ದರು. ಇಂದು ಅದೇ ಉತ್ತರವನ್ನು ಭಾರತದ ಜನತೆಯ ಮೂಲಕ ನಾನು ಯಾರ ಪಕ್ಷದಲ್ಲಿಯೂ ಇರಲಿಲ್ಲ. ನಾವು ಹಸ್ತಿನಾಪುರಕ್ಕಾಗಿ ನಿಂತಿದ್ದೆ. ಇಂದು ಕೋಟಿ ಕೋಟಿ ಭಾರತೀಯರು ಶ್ರೀಕೃಷ್ಣನ ರೂಪದಲ್ಲಿ ಭಾರತದ ಅಭಿವೃದ್ಧಿ ಪರ ನಿಂತಿದ್ದರ ಪರಿಣಾಮ ನಾನು ನಿಮ್ಮ ಮುಂದಿದ್ದೇನೆ ಎಂದರು.

    ಚುನಾವಣೆಯಲ್ಲಿ ದೇಶದ ಪ್ರತಿಯೊಬ್ಬ ನಾಗರೀಕರನು ಸ್ಪರ್ಧೆ ಮಾಡಿದ್ದರು. ಹಾಗಾಗಿ ಇದು ಜನತೆಗೆ ಗೆಲುವು. ಬಿಜೆಪಿಯ ಈ ಗೆಲುವನ್ನು ದೇಶದ ಜನರಿಗೆ ಅರ್ಪಿಸಲು ನಾನು ಇಚ್ಛಿಸುತ್ತೇನೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳು ನಮ್ಮ ಕಡೆಯಿಂದ ಶುಭಾಶಯಗಳು. ಗೆದ್ದ ಅಭ್ಯರ್ಥಿಗಳು ಹೆಗಲಿಗೆ ಹೆಗಲು ನೀಡಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡೋಣ. ಪಕ್ಷ ಯಾವುದೇ ಇರಲಿ ದೇಶದ ಅಭಿವೃದ್ಧಿ ನಮ್ಮದಾಗಿರಲಿ ಎಂದು ಹೇಳಿದರು.

    ಕೇಂದ್ರ ಸರ್ಕಾರ ಅಭಿವೃದ್ಧಿಯನ್ನ ಮಂತ್ರವಾಗಿಸಿಕೊಂಡು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡುತ್ತೇವೆ ಎಂದು ನಮ್ಮನ್ನು ಗೆಲ್ಲಿಸಿದ ದೇಶದ ಜನತೆಗೆ ಎಲ್ಲರ ಪರವಾಗಿ ಭರವಸೆ ನೀಡುತ್ತೇನೆ. ದೇಶದ ಸಾಮಾನ್ಯ ನಾಗರೀಕನು ಲೋಕತಂತ್ರದ ಬಾವುಟವನ್ನು ಇಂದು ಎತ್ತಿ ಹಿಡಿದಿರುವುದು ನಮ್ಮ ಮುಂದಿದೆ. ಹಾಗಾಗಿ ಸಾಮಾನ್ಯ ನಾಗರೀಕರನ ಮೂಲಭೂತ ಅವಶ್ಯಕತೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ. 20ನೇ ಶತಮಾನದ ರಾಜಕೀಯ ನಾಯಕರು ತಮ್ಮ ತಂತ್ರಗಳನ್ನು ಬಿಡಬೇಕು. ನಾವೆಲ್ಲ 21ನೇ ಶತಮಾನದಲ್ಲಿ ಇದ್ದೇವೆ. ಜನರು ಮೋದಿ ಮೋದಿ ಎಂದು ಹೇಳುವ ಮೂಲಕ ಪ್ರಾಮಾಣಿಕತೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ವಿಪಕ್ಷ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

    ದೇಶದ ರೈತ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ, ಕಾನೂನು ನಿಯಮಗಳನ್ನು ಪಾಲಿಸುವ ಸೇರಿದಂತೆ ಇದು ಎಲ್ಲರ ಜಯವಾಗಿದೆ. ಮಹಾಮೈತ್ರಿಕೂಟದ ನಾಯಕರು ಜಾತ್ಯಾತೀತ ಹೆಸರಿನ ಮುಖವಾಡ ಧರಿಸಿ ಒಂದಾಗಿದ್ದರು. ಆದ್ರೆ ಜಾತ್ಯಾತೀತ ಮುಖವಾಡ ಧರಿಸಿದ್ದ ಎಲ್ಲರಿಗೂ ದೇಶದ ಜನತೆ ಉತ್ತರ ನೀಡಿದ್ದು, ಇಂದು ಯಾರು ಮಾತನಾಡುತ್ತಿಲ್ಲ ಎಂದು ಟಾಂಗ್ ನೀಡಿದರು.

    ಈ ಚುನಾವಣೆ 21ನೇ ಶತಮಾನ ಸದೃಢ ಸರ್ಕಾರ ರಚಿಸಿ ದೇಶದ ಉಜ್ವಲ ಭವಿಷ್ಯದಲ್ಲಿ ಪಾತ್ರವಾಗಿದೆ. ಕೇಂದ್ರದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದ್ದು, ಇಂದು ಕೇವಲ ಎರಡು ಜಾತಿಗಳು ಮಾತ್ರ ಉಳಿಯಲಿವೆ. ಒಂದು ಬಡತನ ಮತ್ತೊಂದು ಬಡತನ ನಿರ್ಮೂಲನೆ ಮಾಡಲು ಮುಕ್ತ ಮಾಡುವ ವರ್ಗ. ಹಾಗಾಗಿ ಎರಡೂ ವರ್ಗಗಳಲ್ಲಿ ಮುಂದಿನ ಸರ್ಕಾರ ಶಕ್ತಿ ತುಂಬಿಸಬೇಕಿದೆ. 2019-24ರ ಅವಧಿಯಲ್ಲಿ ವಿಶ್ವವೇ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡೋಣ ಎಂದು ಕೇಳಿಕೊಂಡರು.

    ಗಾಂಧಿ-150 ಜನ್ಮದಿನ ಮತ್ತು ಭಾರತದ 75ನೇ ಸ್ವತಂತ್ರ್ಯ ದಿನಾಚರಣೆಯ ಈ ಎರಡೂ ಹಬ್ಬಗಳು 2019-24ರ ಅವಧಿಯಲ್ಲಿ ಬರಲಿವೆ. ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಸಮೃದ್ಧ ರಾಷ್ಟ್ರವನ್ನಾಗಿ ಮಾಡೋಣ. ಸ್ವತಂತ್ರ ಭಾರತ ಸಮೃದ್ಧ ಭಾರತವನ್ನು ಮಾಡೋಣ ಎಂದು ಹೇಳಿದರು.

    ಚುನಾವಣೆಯಲ್ಲಿ ಯಾರು ಏನು ಹೇಳಿದರು ಎನ್ನುವುದು ನಮಗೆ ಬೇಡ. ಎಲ್ಲವೂ ಮುಗಿದು ಹೋಗಿದೆ. ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ದೇಶದ ಅಭಿವೃದ್ಧಿಗಾಗಿ ನಮ್ಮ ಜೊತೆ ಹೆಜ್ಜೆ ಹಾಕುವವರು ಪ್ರಾಮಾಣಿಕವಾಗಿರಬೇಕು. ದೇಶದ ಅಭಿವೃದ್ಧಿಗೆ ದೇಶದ ಜನತೆ ತಮ್ಮ ಮತಗಳ ಮೂಲಕ ಈ ಫಕೀರನ ಜೋಳಿಗೆ ತುಂಬಿಸಿದ್ದಾರೆ ಎಂದು ಮೋದಿ ಹೇಳಿದರು.

  • ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ ಸೋಲು ಗೆಲುವಿನ ನಿರೀಕ್ಷೆ ಕಾವು- ರಾಯಚೂರಿನಲ್ಲಿ ಕೌಂಟಿಂಗ್ ಮಾತ್ರ ಕೂಲ್ ಕೂಲ್

    ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ ಸೋಲು ಗೆಲುವಿನ ನಿರೀಕ್ಷೆ ಕಾವು- ರಾಯಚೂರಿನಲ್ಲಿ ಕೌಂಟಿಂಗ್ ಮಾತ್ರ ಕೂಲ್ ಕೂಲ್

    ರಾಯಚೂರು: ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿಯ ಬಿರು ಬೇಸಿಗೆ ಹಿನ್ನೆಲೆ ಮತ ಎಣಿಕೆ ಕೊಠಡಿಗಳಲ್ಲಿ ವಿಶೇಷವಾಗಿ 40 ಕ್ಕೂ ಹೆಚ್ಚು ಏರ್ ಕೂಲರ್ ಹಾಗು ಎಸಿ ವ್ಯವಸ್ಥೆ ಮಾಡಲಾಗಿದೆ.

    43 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಗರಿಷ್ಠ ತಾಪಮಾನ ದಾಖಲಾಗುತ್ತಿರುವುದರಿಂದ ಮತ ಎಣಿಕೆ ಸಿಬ್ಬಂದಿಗೆ ಸಮಸ್ಯೆಯಾಗದಿರಲಿ ಅಂತ ಏರ್ ಕೂಲರ್ ಗಳ ವ್ಯವಸ್ಥೆ ಮಾಡಲಾಗಿದೆ. ನಗರದ ಎಸ್‍ಆರ್ ಪಿಎಸ್ ಹಾಗೂ ಎಲ್‍ವಿಡಿ ಕಾಲೇಜಿನಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗಾಗಿ 9 ಕೊಠಡಿಗಳನ್ನ ಕಾಯ್ದಿರಿಸಲಾಗಿದೆ.

    ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್ ಗಳನ್ನ ಇಡಲಾಗಿದ್ದು, ಮತ ಎಣಿಕೆಗೆ ಒಟ್ಟು 112 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಅಂದಾಜು 23 ಸುತ್ತು ಮತ ಎಣಿಕೆ ನಡೆಯಲಿದ್ದು, ಅಂಚೆ ಮತಗಳ ಎಣಿಕೆಗಾಗಿ ಪ್ರತ್ಯೇಕ ನಾಲ್ಕು ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕಾರ್ಯಕ್ಕಾಗಿ 352 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಒಟ್ಟು 181 ಮೈಕ್ರೋ ಅಬ್ಸರ್ವರ್ ಗಳನ್ನ ನೇಮಕ ಮಾಡಲಾಗಿದೆ. ಅಲ್ಲದೇ ಮೂರು ಜನ ಅಧಿಕಾರಿಗಳು ಚುನಾವಣಾ ವೀಕ್ಷಕರಿರಲಿದ್ದಾರೆ.

    ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಜಿಲ್ಲಾ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಿಕೊಂಡಿದೆ. ಭದ್ರತೆಗಾಗಿ ಒಟ್ಟು 500 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೂರು ಸಿಆರ್ ಪಿಎಫ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕ್ಷೇತ್ರದ ಒಟ್ಟು 19,27,758 ಮತದಾರರಲ್ಲಿ 11,15,886 ಮತದಾರರು ಮತ ಚಲಾಯಿಸಿದ್ದು, ಶೇಕಡಾ 58.91% ಮತದಾನವಾಗಿದೆ. ಕಣದಲ್ಲಿ ಮೈತ್ರಿ ಪಕ್ಷಗಳ ಬಿವಿ ನಾಯಕ್ ಹಾಗು ಬಿಜೆಪಿಯ ಅಮರೇಶ್ವರ ನಾಯಕ್ ಸೇರಿದಂತೆ ಒಟ್ಟು 5 ಜನ ಅಭ್ಯರ್ಥಿಗಳಿದ್ದಾರೆ.