Tag: Lok Sabha Chief

  • ಕಾಂಗ್ರೆಸ್ ಲೋಕಸಭಾ ನಾಯಕರಾಗಿ ಅಧೀರ್ ರಂಜನ್ ಚೌಧರಿ ಆಯ್ಕೆ

    ಕಾಂಗ್ರೆಸ್ ಲೋಕಸಭಾ ನಾಯಕರಾಗಿ ಅಧೀರ್ ರಂಜನ್ ಚೌಧರಿ ಆಯ್ಕೆ

    ನವದೆಹಲಿ: ಕಾಂಗ್ರೆಸ್‍ನ ಲೋಕಸಭಾ ನಾಯಕರಾಗಿ ಪಶ್ಚಿಮ ಬಂಗಾಳದ ಹಿರಿಯ ಮುಖಂಡ ಅಧೀರ್ ರಂಜನ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ.

    ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯೆಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ.

    ಸಭೆಯಲ್ಲಿ ನಿರ್ಧಾರವಾಗುತ್ತಿದ್ದಂತೆ ಲೋಕಸಭೆಗೆ ಈ ಕುರಿತು ಪತ್ರ ಬರೆಯಲಾಗಿದ್ದು, ಹೆಚ್ಚು ಸ್ಥಾನ ಗಳಿಸಿರುವ ಅತಿ ದೊಡ್ಡ ಪಕ್ಷದ ವಿರೋಧ ಪಕ್ಷದ ನಾಯಕರಾಗಿ ಹಾಗೂ ಪ್ರಮುಖ ಆಯ್ಕೆ ಸಮಿತಿಗಳ ಪ್ರತಿನಿಧಿಯಾಗಿ ಚೌಧರಿ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

    ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಆಹ್ವಾನಿಸಿರುವ ‘ಒಂದೇ ದೇಶ ಒಂದೇ ಚುನಾವಣೆ’ ಎಂಬ ವಿಷಯದ ಕುರಿತು ಚರ್ಚಿಸಲು ಕರೆದಿರುವ ಸಭೆಯ ಬಗ್ಗೆಯು ಕಾಂಗ್ರೆಸ್ ಗಮನಹರಿಸಿದ್ದು, ಕಾಂಗ್ರೆಸ್ ಈ ನಿರ್ಧಾರವನ್ನು ಪ್ರಾಯೋಗಿಕವಾಗಿ, ವ್ಯವಸ್ಥೆಯ ದೃಷ್ಟಿಯಿಂದ ಹಾಗೂ ಕಾನೂನಾತ್ಮಕವಾಗಿ ವಿರೋಧಿಸಿದೆ.

    ಈವರೆಗೆ ಕಾಂಗ್ರೆಸ್‍ನ ಲೋಕಸಭಾ ನಾಯಕರಾಗಿ ಕಾರ್ಯನಿರ್ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರಿಂದ ಲೋಕಸಭಾ ನಾಯಕರ ಆಯ್ಕೆ ಪ್ರಶ್ನೆ ಉದ್ಭವಿಸಿತ್ತು. ಆದರೆ, ಈ ಸ್ಥಾನಕ್ಕೆ ರಾಹುಲ್ ಗಾಂಧಿ ಅವರನ್ನೇ ಆಯ್ಕೆ ಮಾಡಬೇಕೆಂದುಕೊಂಡಿದ್ದರಿಂದ ಇದೂವರೆಗೆ ಮೃದು ಧೋರಣೆ ತಳೆಯಲಾಗಿತ್ತು.

    ಆದರೆ, ರಾಹುಲ್ ಗಾಂಧಿ ಅವರು ಲೋಕಸಭಾ ನಾಯಕನ ಸ್ಥಾನ ವಹಿಸಿಕೊಳ್ಳುವುದಿರಲಿ, ಚುನಾವಣೆಯಲ್ಲಿ ಪಕ್ಷ ಕಳಪೆ ಸಾಧನೆ ಮಾಡಿದ್ದರಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಪಕ್ಷದ ಹಿರಿಯ ನಾಯಕರು ರಾಹುಲ್ ಗಾಂಧಿ ಅವರ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಲೋಕಸಭಾ ಅಧಿವೇಶನ ಪ್ರಾರಂಭವಾದ ಹಿನ್ನೆಲೆ ಅನಿವಾರ್ಯವಾಗಿ ಆಯ್ಕೆ ಮಾಡಲೇಬೇಕಾದ ಸಂದರ್ಭ ಎದುರಾಗಿದ್ದರಿಂದ ಚೌಧರಿ ಅವರನ್ನು ನೇಮಿಸಲಾಗಿದೆ.

    ಅಧಿರ್ ಚೌಧರಿ ಅವರೊಂದಿಗೆ ಕೇರಳ ಮುಖಂಡ ಕೆ.ಸುರೇಶ್, ಪಕ್ಷದ ವಕ್ತಾರ ಮನೀಶ್ ತಿವಾರಿ ಮತ್ತು ತಿರುವನಂತಪುರದ ಶಾಸಕ ಶಶಿ ತರೂರ್ ಲೋಕಸಭಾ ನಾಯಕನ ಸ್ಥಾನದ ರೇಸ್‍ನಲ್ಲಿದ್ದರು. ಚೌಧರಿ ಅವರು 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

    ಇಂದಿನ ಕಾಂಗ್ರೆಸ್ ಸಭೆಯಲ್ಲಿ ಲೋಕಸಭಾ ಸ್ಪೀಕರ್ ಆಗಿ ರಾಜಸ್ಥಾನ ಶಾಸಕ ಓಂ ಬಿರ್ಲಾ ಅವರನ್ನು ಆಯ್ಕೆ ಮಾಡಿರುವ ಕುರಿತು ಸಹ ಚರ್ಚೆ ನಡೆದಿದ್ದು, ಎನ್‍ಡಿಎ ಆಯ್ಕೆಯನ್ನು ವಿರೋಧಿಸುವುದು ಬೇಡ ಎಂದು ನಿರ್ಧರಿಸಲಾಗಿತ್ತು.