Tag: Lok Sabha by-election

  • ಶಿವಮೊಗ್ಗದಲ್ಲಿ ಗೆಲುವಿನ ಅಂತರ ಕಡಿಮೆಯಾಗಿದ್ದಕ್ಕೆ ಕಾರಣ ಕೊಟ್ಟ ಈಶ್ವರಪ್ಪ

    ಶಿವಮೊಗ್ಗದಲ್ಲಿ ಗೆಲುವಿನ ಅಂತರ ಕಡಿಮೆಯಾಗಿದ್ದಕ್ಕೆ ಕಾರಣ ಕೊಟ್ಟ ಈಶ್ವರಪ್ಪ

    ಶಿವಮೊಗ್ಗ: ಲೋಕಸಭಾ ಉಪಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದ್ದರಿಂದ ಬಿವೈ ರಾಘವೇಂದ್ರ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಧಿಕಾರ ಅವರದ್ದೇ ಇದ್ದ ಕಾರಣ ಭಾರೀ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡಲಾಗಿದೆ. ಈ ಗೆಲುವು ಕಾರ್ಯಕರ್ತರ ಗೆಲುವು, ಮತದಾರರ ಗೆಲುವು, ಈ ಗೆಲುವಿನ ಮುಖಾಂತರ ನರೇಂದ್ರ ಮೋದಿ ಮುಂದೆ ಗೆಲುವು ಸಾಧಿಸಬೇಕು ಎಂದು ಬಹಳ ಅಪೇಕ್ಷೆಯಿಂದ ಶಿವಮೊಗ್ಗದ ಜನ ಬೆಂಬಲ ಕೊಟ್ಟಿದ್ದಾರೆ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದರು.

    ಈ ಐದು ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ವಿಶೇಷವಾಗಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಎಲ್ಲಾ ಸಚಿವರ, ಮುಖಂಡರ ದಂಡೇ ಇಲ್ಲಿಗೆ ಬಂದಿತ್ತು. ಇಲ್ಲಿಗೆ ಬಂದು ಬಿಜೆಪಿಯನ್ನು ಸೋಲಿಸಲೇಬೇಕು ಎಂಬ ಎಲ್ಲಾ ಪ್ರಯತ್ನಗಳನ್ನು ನಡೆಸಿದರು. ಹಣ ಬಲ, ಜಾತಿ, ಅಧಿಕಾರ ದುರುಪಯೋಗ ಮಾಡಿಕೊಂಡರು. ಈ ಯಾವುದೇ ಪ್ರಭಾವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿಲ್ಲ ಎಂದರು.

    ಕಾರ್ಯಕರ್ತರ ಪರಿಶ್ರಮ, ಮನೆಗೆ ಮನೆಗೆ ಹೋಗಿ ಅವರು ಮಾಡಿದಂತಹ ಪ್ರಯತ್ನಗಳು ಇದಕ್ಕೆ ಸಿಕ್ಕಂತಹ ಜಯವಿದು. ನರೇಂದ್ರ ಮೋದಿ ಅವರ ವಿಚಾರಕ್ಕೆ ಶಿವಮೊಗ್ಗದಲ್ಲಿ ಮೊದಲಿನಿಂದಲೂ ಬೆಂಬಲ ಕೊಡುತ್ತಿದ್ದೇವೆ. ಬಿಜೆಪಿ ವಿಧಾನ ಸಭೆ ಚುನಾವಣೆಯಲ್ಲೂ ಕೂಡಾ 8 ಕ್ಷೇತ್ರದಲ್ಲಿ 7 ಕ್ಷೇತ್ರವನ್ನು ಗೆಲ್ಲಿಸಿಕೊಟ್ಟಿದೆ. ಮುಂದೆ ಲೋಕಸಭೆಗೂ ಬೆಂಬಲವನ್ನು ನೀಡುತ್ತೇವೆ ಎನ್ನುವುದನ್ನು ಅಂದೇ ತೋರಿಸಿದ್ದಾರೆ. ಶಿವಮೊಗ್ಗದಲ್ಲಿ ಅತಿ ಹೆಚ್ಚು ಯಶಸ್ವಿಯಾಗಿ ಬಿಜೆಪಿ ಗೆಲುವು ಪಡೆದುಕೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜೆಡಿಎಸ್ ಮತ್ತು ಕಾಂಗ್ರೆಸ್‍ನ ವ್ಯಕ್ತಿಗಳು ಹಾವು ಮುಂಗುಸಿಗಳು ಅವರು ಒಟ್ಟಿಗೆ ಸೇರುವುದೇ ಅಪರೂಪ. ಈ ಒಂದು ಚುನಾವಣೆಯಲ್ಲಿ ಸರ್ಕಾರವನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ಬಂದಿದ್ದರು. ಇನ್ನೂ ಮುಂದೆಯಾದರೂ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಸರ್ಕಾರ ಇದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕೆಲಸಗಳನ್ನು ಮಾಡಬೇಕೆಂದು ಮನವಿ ಮಾಡಿಕೊಂಡರು.

    ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಹಿಂದೆದೂ ಕೂಡಾ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಇರಲಿಲ್ಲ ಮತ್ತು ಇಷ್ಟು ಹಣವನ್ನು ಖರ್ಚು ಮಾಡಿರಲಿಲ್ಲ. ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ, ಶಿವಕುಮಾರ್ ಅವರು ಒಟ್ಟಿಗೆ ಎಂದೂ ಒಂದಾಗಿರಲಿಲ್ಲ. ದೇಶಕ್ಕೆ ಒಳ್ಳೆಯದು ಮಾಡಬೇಕು ಎನ್ನುವ ಉದ್ದೇಶ ಏನು ಇಲ್ಲ. ತಮ್ಮ ಅಸ್ಥಿತ್ವವನ್ನು ಉಳಿಸಲು ಒಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 52,148 ಮತಗಳ ಅಂತರದಿಂದ ರಾಘವೇಂದ್ರಗೆ ಗೆಲುವು- ಶಿವಮೊಗ್ಗದಲ್ಲಿ ಯಾರಿಗೆ ಎಷ್ಟು ಮತ?

    52,148 ಮತಗಳ ಅಂತರದಿಂದ ರಾಘವೇಂದ್ರಗೆ ಗೆಲುವು- ಶಿವಮೊಗ್ಗದಲ್ಲಿ ಯಾರಿಗೆ ಎಷ್ಟು ಮತ?

    ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು 52,148 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು 5,43,306 ಮತಗಳನ್ನು ಪಡೆದಿದ್ದರೆ, ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ 4,91,158 ಮತಗಳನ್ನು ಗಳಿಸಿದ್ದರು. ಈ ಪ್ರಬಲ ಸ್ಪರ್ಧಿಯ ನಡುವೆಯೂ ಕಣಕ್ಕೆ ಇಳಿದ್ದ ಜೆಡಿಯು ಮಹಿಮಾ ಪಟೇಲ್ 8,713 ಹಾಗೂ ಪಕ್ಷೇತರ ಶಶಿಕುಮಾರ್ ಗೌಡ 17,189 ವೋಟ್‍ಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 10,687 ಮತದಾರರು ನೋಟಾ ಒತ್ತಿದ್ದಾರೆ.

    ಇತ್ತ ಮತ ಎಣಿಕೆ ಪ್ರಾರಂಭ ಹಂತವಾದ ಅಂಚೆ ಮತಗಳಲ್ಲಿಯೂ ಬಿ.ವೈ.ರಾಘವೇಂದ್ರ ಮುನ್ನಡೆ ಸಾಧಿಸಿದ್ದರು. ಒಟ್ಟು 86 ಅಂಚೆ ಮತಗಳಲ್ಲಿ, ರಾಘವೇಂದ್ರ 23, ಮಧು ಬಂಗಾರಪ್ಪ 17 ಪಡೆದಿದ್ದರು. ಉಳಿದಂತೆ 46 ಮತಗಳು ತಿರಸ್ಕೃತಗೊಂಡಿವೆ.

    2014ರ ಚುನಾವಣೆಯಲ್ಲಿ ಯಡಿಯೂರಪ್ಪ 3,63,305 ಮತಗಳ ಅಂತರದಿಂದ ಜಯಗಳಿಸಿದ್ದರು. ಯಡಿಯೂರಪ್ಪ 6,06,216 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ಸಿನ ಮಂಜುನಾಥ ಭಂಡಾರಿ 2,42,911 ಮತಗಳನ್ನು ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶ್ರೀರಾಮುಲು ಉದ್ಭವ ಮೂರ್ತಿಯೇ- ಸಿದ್ದರಾಮಯ್ಯ ಪ್ರಶ್ನೆ

    ಶ್ರೀರಾಮುಲು ಉದ್ಭವ ಮೂರ್ತಿಯೇ- ಸಿದ್ದರಾಮಯ್ಯ ಪ್ರಶ್ನೆ

    ಬಳ್ಳಾರಿ: ಶಾಸಕ ಶ್ರೀರಾಮುಲು ಉದ್ಭವ ಮೂರ್ತಿಯೇ? ಅವರು ಬದಾಮಿಯಲ್ಲಿ ಹುಟ್ಟಿದ್ದಾರಾ? ಇಲ್ಲವೇ ಮೊಳಕಾಲ್ಮೂರಿನಲ್ಲಿ ಹುಟ್ಟಿದ್ದಾರಾ ಎಂದು ಪ್ರಶ್ನಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಜಿಲ್ಲೆಯ ಹಂಪಸಾಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ, ಉಗ್ರಪ್ಪ ಅವರು ಹೊರಗಿನವರು ಅಂತಾ ಹೇಳುವುದಕ್ಕೆ ಶ್ರೀರಾಮುಲು ಅವರಿಗೆ ನೈತಿಕತೆಯೇ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಬದಾಮಿ ಹಾಗೂ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹಾಗಾದರೆ ಅವರೇನು ಅಲ್ಲಿ ಹುಟ್ಟಿದ್ದರಾ ಎಂದು ಪ್ರಶ್ನಿಸಿದ್ದಾರೆ.

    ಈ ಉಪಚುನಾವಣೆ ಅನಗತ್ಯವಾಗಿ ಬಂದಿದೆ. ಉಪ ಚುನಾವಣೆ ಬರಲು ಕಾರಣ ಯಾರು ಎಂದು ಪ್ರಶ್ನಿಸಿದ ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಜೆ.ಶಾಂತ ಅವರು ಆಂಧ್ರಪ್ರದೇಶದ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಈ ಎಲ್ಲ ಅಂಶಗಳನ್ನು ಮರೆತು ಉಗ್ರಪ್ಪ ಹೊರಗಿನವರು ಎನ್ನುವುದು ಸರಿಯಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸುವ ಶ್ರೀರಾಮುಲು ಅವರು ಯಾವತ್ತೂ ಪೂರ್ಣ ಅವಧಿ ಮುಗಿಸಲ್ಲ. ಅವರು ಶಾಸಕರಾಗದಿದ್ದರೇ ವಿಧಾನಸಭೆ ನಡೆಯುದಿಲ್ಲವೇ? ಯಾವ ಪುರುಷಾರ್ಥಕ್ಕಾಗಿ ಲೋಕಸಭೆಗೆ ರಾಜೀನಾಮೆ ನೀಡಿ ಶಾಸಕರಾದರು ಎನ್ನುವ ಪ್ರಶ್ನೆಗೆ ಉತ್ತರಿಸಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುನಾವಣೆಯಲ್ಲಿ ಬೆನ್ನು ತೋರಿಸಿ ಹೋಗುವ ಜಾಯಮಾನ ನನ್ನದಲ್ಲ: ಶಾಸಕ ಶ್ರೀರಾಮುಲು

    ಚುನಾವಣೆಯಲ್ಲಿ ಬೆನ್ನು ತೋರಿಸಿ ಹೋಗುವ ಜಾಯಮಾನ ನನ್ನದಲ್ಲ: ಶಾಸಕ ಶ್ರೀರಾಮುಲು

    ಬಳ್ಳಾರಿ: ಚುನಾವಣೆಯಲ್ಲಿ ಬೆನ್ನು ತೋರಿಸಿ ಹೋಗುವ ಜಾಯಮಾನ ನನ್ನದಲ್ಲ. ಬಳ್ಳಾರಿ ಲೋಕಸಭಾ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಸಿದ್ದೇನೆ. ಜೊತೆಗೆ ಕೇಂದ್ರ ಸರ್ಕಾರವೇ ಬಳ್ಳಾರಿಗೆ ಬರಲಿ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

    ನಗರದಲ್ಲಿ ಇಂದು ನಡೆದ ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಿಹಿಸಿ, ವಧುವರರಿಗೆ ಶುಭ ಕೋರಿದರು. ಬಳಿಕ ಮಾತನಾಡಿದ ಶಾಸಕರು, ಬಳ್ಳಾರಿ ಉಪಚುನಾವಣೆಗೆ ರಾಜ್ಯ ಸರ್ಕಾರವೇ ಬರಲಿ, ಅದೇಷ್ಟೇ ಪ್ರಭಾವಿ ಸಚಿವರು ಬಂದರೂ ನಾವೇ ಗೆಲ್ಲುವುದು ಎಂದು ಟಾಂಗ್ ಕೊಟ್ಟಿದ್ದಾರೆ.

    ಲೋಕಸಭಾ ಉಪಚುನಾವಣೆ ಬಳ್ಳಾರಿ ಕ್ಷೇತ್ರವು ಮಹಾಭಾರತ ಯುದ್ಧದ ಕಣದಂತಾಗಿದೆ. ಈ ಯುದ್ಧದಲ್ಲಿ ಬಿಜೆಪಿ ಗೆಲವು ಸಾಧಿಸುವ ಮೂಲಕ ಇತಿಹಾಸವನ್ನು ಮರಕಳಿಸುತ್ತದೆ ಎಂದ ಅವರು, ಬಿಜೆಪಿ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. ಈಗಾಗಲೇ 5 ಜನರ ಪಟ್ಟಿಯನ್ನು ಹೈಕಮಾಂಡ್‍ಗೆ ಕಳುಹಿಸಲಾಗಿದೆ. ಶುಕ್ರವಾರ ಅಭ್ಯರ್ಥಿ ಹೆಸರು ಘೋಷಣೆ ಅಂತಿಮವಾಗಲಿದೆ ಎಂದು ತಿಳಿಸಿದರು.

    ಟಿಕೆಟ್ ಆಕ್ಷಾಂಕಿ ಹಾಗೂ ಮಾಜಿ ಸಂಸದೆ ಶಾಂತಾ ಮಾತನಾಡಿ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧಳಾಗಿದ್ದೇನೆ. ನಾವು ಸೈನಿಕರಿದ್ದಂತೆ ಪಕ್ಷ ಸೂಚಿಸಿದಂತೆ ನಡೆಯುತ್ತೇವೆ. ಚುನಾವಣೆ ಹೋರಾಟಕ್ಕೆ ಸಜ್ಜಾಗುತ್ತೇವೆ. ಯಾರೇ ಅಭ್ಯರ್ಥಿಯಾದರೂ ಸರಿ, ಪ್ರತಿಸ್ಪರ್ಧೆ ನೀಡುತ್ತೇವೆ. ಟಿಕೆಟ್ ಸಿಕ್ಕರೆ ಬಳ್ಳಾರಿಯ ಮಗಳಾಗಿ ಕೆಲಸ ಮಾಡುತ್ತೇನೆ. ಒಂದು ವೇಳೆ ಕೈ ತಪ್ಪಿದರೆ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಳ್ಳಾರಿ ರಾಜಕೀಯದಲ್ಲಿ ಡಿಕೆಶಿ-ಜಾರಕಿಹೊಳಿ ಸಹೋದರರ ಮಧ್ಯೆ ಪೈಪೋಟಿ ಶುರು

    ಬಳ್ಳಾರಿ ರಾಜಕೀಯದಲ್ಲಿ ಡಿಕೆಶಿ-ಜಾರಕಿಹೊಳಿ ಸಹೋದರರ ಮಧ್ಯೆ ಪೈಪೋಟಿ ಶುರು

    -ಅಭ್ಯರ್ಥಿ ಆಯ್ಕೆಯಲ್ಲಿ ಪದೇ ಪದೇ ನಾಲ್ವರು ಶಾಸಕರು ಗೈರು

    ಬಳ್ಳಾರಿ: ಲೋಕಸಭಾ ಉಪಚುನಾವಣೆಯ ಬಳ್ಳಾರಿ ಅಭ್ಯರ್ಥಿ ಆಯ್ಕೆಗಾಗಿ ಕಾಂಗ್ರೆಸ್ಸಿನಲ್ಲಿ ಗೊಂದಲ ಉಂಟಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ನಡುವೆ ಮತ್ತೆ ಪೈಪೋಟಿ ನಡೆಯಲಿದೆ.

    ಕಾಂಗ್ರೆಸ್ಸಿನ ಭದ್ರಕೋಟೆ ಬಳ್ಳಾರಿ. ಆದರೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಸಿಗದಿರುವುದು ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇತ್ತ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ವಾಗ್ದಾಳಿ, ಬಳ್ಳಾರಿ ಅಭ್ಯರ್ಥಿಯ ಆಯ್ಕೆ ವಿಚಾರದ ಮೇಲೆ ಪರಿಣಾಮ ಬೀರಿದೆ. ಬಳ್ಳಾರಿ ಶಾಸಕರ ಬೆಂಬಲಕ್ಕೆ ನಿಂತಿದ್ದ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ನಾಲ್ವರು ಶಾಸಕರು ಸ್ವಾಮಿನಿಷ್ಠೆ ತೋರುತ್ತಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕಳೆದ 2 ದಿನಗಳಿಂದ ಅಭ್ಯರ್ಥಿ ಆಯ್ಕೆಗೆ ಸಭೆ ಕರೆದಿದ್ದರೂ, ಶಾಸಕರಾದ ಜೆ.ಎನ್ ಗಣೇಶ, ಪರಮೇಶ್ವರ್ ನಾಯ್ಕ್, ಆನಂದಸಿಂಗ್, ಭೀಮಾನಾಯ್ಕ್ ಗೈರು ಹಾಜರಾಗುತ್ತಿದ್ದಾರೆ. ಒಟ್ಟು ನಾಲ್ಕು ಸಭೆ ಕರೆದರೂ ಅಭ್ಯರ್ಥಿಯ ಆಯ್ಕೆ ವಿಫಲವಾಗಿದೆ. ಇಂದು ಕೂಡ ಸಭೆ ನಡೆಯಲಿದ್ದು, ಅಭ್ಯರ್ಥಿ ಆಯ್ಕೆ ಅಂತಿಮವಾಗುವ ಯಾವುದೇ ಲಕ್ಷಣ ಕಾಣ್ತಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಇತ್ತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರು ಬಳ್ಳಾರಿ ರಾಜಕೀಯದಲ್ಲಿ ಕೈಹಾಕುತ್ತಿದ್ದಾರೆ. ಹೀಗಾಗಿ ತಮ್ಮ ಆಪ್ತ ಶಾಸಕ ನಾಗೇಂದ್ರ ಅವರ ಸಹೋದರರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರಂತೆ. ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ಒಟ್ಟು 6 ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಹಾಗೂ ಒಬ್ಬರು ರಾಜ್ಯಸಭಾ ಸದಸ್ಯರು ಇದ್ದಾರೆ. ಇವರಲ್ಲಿ ನಾಲ್ವರು ಸಭೆಗೆ ಗೈರಾಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಟಿಕೆಟ್‍ಗೆ ಬೆಂಗ್ಳೂರಿಗೆ ದೌಡಾಯಿಸಿದ ಶಿವರಾಮೇಗೌಡ

    ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಟಿಕೆಟ್‍ಗೆ ಬೆಂಗ್ಳೂರಿಗೆ ದೌಡಾಯಿಸಿದ ಶಿವರಾಮೇಗೌಡ

    ಮಂಡ್ಯ: ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಉಪಚುನಾವಣೆ ದಿನಾಂಕ ಪ್ರಕಟಿಸಿದ ಬೆನ್ನಲ್ಲೇ ಮಂಡ್ಯ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ತಾನು ಮಂಡ್ಯ ಲೋಕಸಭೆಯ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂದು ಎಲ್.ಆರ್ ಶಿವರಾಮೇಗೌಡ ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ನನಗೆ ಪಕ್ಷದ ವತಿಯಿಂದ ಉತ್ತಮ ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾನು ಟಿಕೆಟ್ ಕೇಳಿದ್ದೇನೆ ಎಂದು ತಿಳಿಸಿದರು.

    ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ವೇಳೆ ಉಪಚುನಾವಣೆ ನಡೆಸುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಸಮಯದಲ್ಲಿ ಚುನಾವಣೆ ಅಗತ್ಯವಿರಲಿಲ್ಲ. ಇದರಿಂದ ಜನರ ತೆರಿಗೆ ಹಣ ವ್ಯರ್ಥವಾಗುತ್ತದೆ. 6 ತಿಂಗಳ ಹಿಂದೆಯೇ ಚುನಾವಣೆ ನಡೆಯುವ ನಿರೀಕ್ಷೆ ಇತ್ತು. ಆದರೆ ಇಂದು ಚುನಾವಣೆ ಘೋಷಣೆಯಾಗಿದ್ದು ಪಕ್ಷದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಈ ಕುರಿತು ವರಿಷ್ಠರೊಂದಿಗೆ ಮಾತನಾಡಲು ಬೆಂಗಳೂರಿಗೆ ಹೋಗುತ್ತಿದ್ದು, ನಾಳೆ ಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡುತ್ತೇನೆ. ಅವರು ಕಸ ಗುಡಿಸು ಎಂದರೂ ಗುಡಿಸುತ್ತೇನೆ. ಆದರೆ ನನಗೆ ಟಿಕೆಟ್ ಕೊಡುವ ಸಂಪೂರ್ಣ ಭರವಸೆ ಇದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಇದನ್ನು ಓದಿ: ಪಂಚ ‘ವಾರ್’ ರಾಜ್ಯಗಳ ಕದನಕ್ಕೆ ಮುಹೂರ್ತ ಫಿಕ್ಸ್

    ಒಂದೊಮ್ಮೆ ಚುನಾವಣೆಯ ಟಿಕೆಟ್ ಲಭಿಸದೇ ಇದ್ದರೆ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಾನು ಬೆಂಬಲಿಸುತ್ತೇನೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಧಿಕಾರದಲ್ಲಿದ್ದು, ಈ ಚುನಾವಣೆಯಲ್ಲಿ ಪಕ್ಷದ ಗೆಲುವು ಖಚಿತ. ಸದ್ಯ ಸಮ್ಮಿಶ್ರ ಸರ್ಕಾರ ಮೈತ್ರಿ ರಾಜಕಾರಣದಲ್ಲಿ ನಡೆಯುತ್ತಿದ್ದು, ಈಗಾಗಲೇ ಪಕ್ಷದಲ್ಲಿ ಲೋಕಸಭಾ ಚುನಾವಣೆ ಮೈತ್ರಿ ಮಾಡುವ ತೀರ್ಮಾನ ಮಾಡಲಾಗಿದೆ. ಪಕ್ಷದ ವರಿಷ್ಠರು ಯಾವುದೇ ನಿರ್ಣಯ ಕೈಗೊಂಡರೂ ನನ್ನ ಬೆಂಬಲವಿದೆ ಎಂದರು. ಇದನ್ನು ಓದಿ: ಕರ್ನಾಟಕ ಉಪ ಚುನಾವಣಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ

  • ಮಂಡ್ಯ ಲೋಕಸಭಾ ಉಪಚುನಾವಣೆ: ಲಕ್ಷ್ಮಿ ಅಶ್ವಿನ್ ಗೌಡ ಜೆಡಿಎಸ್‍ನಿಂದ ಸ್ಪರ್ಧೆ!

    ಮಂಡ್ಯ ಲೋಕಸಭಾ ಉಪಚುನಾವಣೆ: ಲಕ್ಷ್ಮಿ ಅಶ್ವಿನ್ ಗೌಡ ಜೆಡಿಎಸ್‍ನಿಂದ ಸ್ಪರ್ಧೆ!

    ಮಂಡ್ಯ: ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಲಕ್ಷ್ಮಿ ಅಶ್ವಿನ್‍ಗೌಡ ಸ್ಪರ್ಧಿಸುತ್ತಿದ್ದು, ಅವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಪಕ್ಷದಿಂದ ರಮ್ಯಾ ಸ್ಪರ್ಧಿಸುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಜಿಲ್ಲೆಯ ರಾಜಕೀಯದಲ್ಲಿ ವಿಶೇಷವಾಗಿ ಚರ್ಚೆಯಾಗುತ್ತಿದೆ.

    ಇತ್ತೀಚೆಗಷ್ಟೇ ತಮ್ಮ ಐಆರ್‍ಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಲಕ್ಷ್ಮಿ ಅಶ್ವಿನ್‍ಗೌಡ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಲೋಕಸಭೆ ಉಪಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ನನಗೇ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಲಕ್ಷ್ಮಿ ಅಶ್ವಿನ್‍ಗೌಡ ಈ ಬಗ್ಗೆ ಪಕ್ಷದ ವರಿಷ್ಠರ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ ಅಂತ ಹೇಳಿದ್ದಾರೆ.

    ಇನ್ನು ಕಳೆದೆರೆಡು ಬಾರಿಯಿಂದ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ರಮ್ಯಾ, ಜೆಡಿಎಸ್‍ನಿಂದ ಪುಟ್ಟರಾಜು ಎದುರಾಳಿಗಳಾಗಿದ್ದರು. ಆದರೆ ಪುಟ್ಟರಾಜು ಶಾಸಕರಾಗಿ ಆಯ್ಕೆಯಾಗಿದ್ದು, ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಂಡ್ಯ ಉಪಚುನಾವಣೆ ಮುಖಾಂತರವೇ ರಾಜಕೀಯ ಪ್ರವೇಶಿಸಿದ್ದ ರಮ್ಯಾ ಕಳೆದ ಒಂದೂವರೆ ವರ್ಷದಿಂದ ಮಂಡ್ಯ ಕಡೆ ತಲೆ ಹಾಕಿಲ್ಲ.

    ಅಷ್ಟೇ ಅಲ್ಲದೇ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದ್ದು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದ ರಮ್ಯಾ ಅವರು ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಧೈರ್ಯ ಮಾಡುತ್ತಾರಾ ಎನ್ನುವ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ.

    ಇನ್ನು ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಲೋಕಸಭೆ ಚುನಾವಣೆಯಲ್ಲೂ ಒಮ್ಮತದ ಅಭ್ಯರ್ಥಿ ನಿಲ್ಲಿಸಲಿದ್ದಾರೆ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ.